ಶನಿವಾರ, ನವೆಂಬರ್ 9, 2019




ಪಂಪಭಾರತ ಆಶ್ವಾಸ ೩ ಪದ್ಯಗಳು ೧೨-೨೦

ಎಂದು ನುಡಿಯುತ್ತಿದ್ದಂತೆ ತಾವರೆಯ ಬಂಧುವು ಉದಯಾಚಲ ಪರ್ವತದ ನೆತ್ತಿಯಲ್ಲಿ ಕಾಣಿಸಿಕೊಂಡನು. ಆಗ, ಆ ಕಾಡನ್ನು ಆಳುವ ಹಿಡಿಂಬನೆಂಬುವನು, ಪಾಂಡವರು ಬಂದಿರುವುದನ್ನು ತಿಳಿದು, ತನ್ನ ತಂಗಿ ಹಿಡಿಂಬೆಯನ್ನು ಕರೆದು-
ಕಂ|| ನಿಡಿಯರ್ ಬಲ್ಲಾಯದ ಬ
     ಲ್ಡಡಿಗರ್ ವಂದಿರ್ದರಯ್ವರಾಲದ ಕೆೞಗಿಂ|
     ತೊಡರ್ದರ್ ನಮ್ಮಯ ಭಕ್ಷದೊ
     ಳಡು ಪಣ್ಣಿಡು ಪೋಗು ನೀನುಮಾನುಂ ತಿಂಬಂ|| ೧೨||
(ನಿಡಿಯರ್, ಬಲ್ಲಾಯದ ಬಲ್ಡಡಿಗರ್, ವಂದಿರ್ದರ್ ಅಯ್ವರ್ ಆಲದ ಕೆೞಗೆ, ಇಂ ತೊಡರ್ದರ್, ನಮ್ಮಯ ಭಕ್ಷದೊಳ್ ಅಡು, ಪಣ್ಣಿಡು, ಪೋಗು, ನೀನುಂ ಆನುಂ ತಿಂಬಂ)
ಆಲದ ಮರದ ಕೆಳಗೆ ಐದು ಜನ ಉದ್ದುದ್ದದ ಆಳುಗಳು, ಭಾರೀ ಧಾಂಡಿಗರು ಬಂದಿದ್ದಾರೆ. ಅವರಿನ್ನು (ನಮ್ಮ ಕೈಗೆ) ಸಿಕ್ಕಿಬಿದ್ದ ಹಾಗೆಯೇ. ಹೋಗು. ನಮ್ಮ ಇವತ್ತಿನ ಊಟಕ್ಕೆ ಅವರನ್ನು ಬೇಯಿಸಿ ಅಣಿ ಮಾಡು. ನೀನೂ ನಾನೂ ಸೇರಿ ತಿನ್ನೋಣ.
ವ|| ಎಂಬುದುಮಂತೆಗೆಯ್ವೆನೆಂದು-
(ಎಂಬುದುಂ ‘ಅಂತೆ ಗೆಯ್ವೆನ್’ ಎಂದು)
ಎಂದಾಗ ‘ಹಾಗೆಯೇ ಮಾಡುತ್ತೇನೆ’ ಎಂದು,
ಕಂ|| ಆಗಸದೊಳಗೊಂದು ಮಹೀ
     ಭಾಗದೊಳಿನ್ನೊಂದು ದಾಡೆಯಾಗಿರೆ ಮನದಿಂ|
     ಬೇಗಂ ಬರ್ಪಳ ದಿಟ್ಟಿಗ
     ಳಾಗಳೆ ಪತ್ತಿದುವು ಗೆಂಟಱೊಳ್ ಮಾರುತಿಯಂ|| ೧೩ ||
.(ಆಗಸದೊಳಗೆ ಒಂದು, ಮಹೀಭಾಗದೊಳ್ ಇನ್ನೊಂದು ದಾಡೆಯಾಗಿರೆ, ಮನದಿಂ ಬೇಗಂ ಬರ್ಪಳ ದಿಟ್ಟಿಗಳ್ ಆಗಳೆ ಪತ್ತಿದುವು ಗೆಂಟಱೊಳ್ ಮಾರುತಿಯಂ)
ಆಗಸದಲ್ಲಿ ಒಂದು ದವಡೆ, ನೆಲದಲ್ಲೊಂದು ದವಡೆ ಎಂಬಷ್ಟು ಅಗಲವಾಗಿ ಬಾಯಿ ತೆರೆದುಕೊಂಡು, ಮನೋವೇಗದಲ್ಲಿ ಬರುತ್ತಿದ್ದ ಅವಳ ಕಣ್ಣುಗಳು ದೂರದಿಂದಲೇ ಭೀಮನಿಗೆ ಅಂಟಿಕೊಂಡವು!
ವ|| ಅಂತೊಂದಂಬುವೀಡಿನೆಡೆಯೊಳ್ ಕಾಮನಂಬುವೀಡಿಂಗೊಳಗಾಗಿ ತಾಂ ಕಾಮರೂಪೆಯಪ್ಪುದಱಿಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಕೊಂಡು ತನ್ನತ್ತ ಮೊಗದೆ ಬರ್ಪಳಂ  ಕಂಡು-
 (ಅಂತು ಒಂದು ಅಂಬುವೀಡಿನ ಎಡೆಯೊಳ್ ಕಾಮನ ಅಂಬುವೀಡಿಂಗೆ ಒಳಗಾಗಿ, ತಾಂ ಕಾಮರೂಪೆ ಅಪ್ಪುದಱಿಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಕೊಂಡು, ತನ್ನತ್ತ ಮೊಗದೆ ಬರ್ಪಳಂ  ಕಂಡು)
ಹಾಗೆ, ಒಂದು ಬಾಣವು ಕ್ರಮಿಸುವ ದೂರದಲ್ಲಿ ಕಾಮಬಾಣದ ಪೆಟ್ಟಿಗೆ ಸಿಕ್ಕಿಬಿದ್ದು, ತಾನು ಬಯಸಿದ ರೂಪವನ್ನು ತಳೆಯುವ ಶಕ್ತಿ ಇದ್ದವಳಾದ್ದರಿಂದ, ದೇವಕನ್ಯೆಯ ರೂಪು ತಳೆದು ತನ್ನತ್ತಲೇ ಬರುತ್ತಿರುವ ಅವಳನ್ನು ಕಂಡು-
ಕಂ|| ಖೇಚರಿಯೋ ಭೂಚರಿಯೊ ನಿ
     ಶಾಚರಿಯೋ ರೂಪು ಬಣ್ಣಿಸಲ್ಕಾರ್ಗಮವಾ|
     ಗ್ಗೋಚರಮೀ ಕಾನನಮುಮ
     ಗೋಚರಮಿವಳಿಲ್ಲಿಗೇಕೆ ಬಂದಳೊ ಪೇೞಿಂ||೧೪||
(ಖೇಚರಿಯೋ? ಭೂಚರಿಯೊ? ನಿಶಾಚರಿಯೋ? ರೂಪು ಬಣ್ಣಿಸಲ್ಕೆ ಆರ್ಗಂ ಅವಾಕ್ ಗೋಚರಂ, ಈ  ಕಾನನಮುಂ ಅಗೋಚರಂ, ಇವಳ್ ಇಲ್ಲಿಗೇಕೆ ಬಂದಳೊ ಪೇೞಿಂ!)
ಆಕಾಶದಲ್ಲಿ ಚಲಿಸುವವಳೋ? ನೆಲದ ಮೇಲೆ ತಿರುಗುವವಳೋ? ಕತ್ತಲಲ್ಲಿ ಓಡಾಡುವವಳೋ? (ಯಾರಾದರೇನಂತೆ?) ಇವಳ ರೂಪವನ್ನು ವರ್ಣಿಸುವುದು ಮಾತ್ರ ಯಾರ ನಾಲಗೆಗೂ ಸಾಧ್ಯವಲ್ಲ! ಈ ಕಾಡೋ? ಇದು ಯಾರಿಗೂ ಕಾಣದ ಸ್ಥಳ! ಹಾಗಿರುವಾಗ ಇವಳು ಇಲ್ಲಿಗೇಕೆ ಬಂದಳೋ? ಹೇಳಿರಿ!
ವ|| ಎಂಬನ್ನೆಗಮಾಕೆ ಮದನನ ಕೆಯ್ಯಿಂ ಬರ್ದುಂಕಿದರಲಂಬು ಬರ್ಪಂತೆ ಬಂದು ಭೀಮಸೇನನ ಕೆಲದೊಳ್ ಕುಳ್ಳಿರೆ ನೀನಾರ್ಗೇನೆಂಬೆಯೇಕೆ ಬಂದೆಯೆಂದೊಡಾಕೆಯೆಂದಳೆರಡಱಿಯದೊಲ್ದು ನಿನ್ನೊಳೆರಡಂ ನುಡಿಯಲಾಗದೆನಗೆ ಯೀ ಬನಂ ಹಿಡಿಂಬವನಮೆಂಬುದಿದನಾಳ್ವಂ ಹಿಡಿಂಬನೆಂಬಸುರನೆಮ್ಮಣ್ಣನಾನುಂ ಹಿಡಿಂಬೆಯೆನೆಂಬೆನಾತನ ಬೆಸದಿಂ ನಿಮ್ಮಿನಿಬರುಮಂ-
(ಎಂಬನ್ನೆಗಂ ಆಕೆ ಮದನನ ಕೆಯ್ಯಿಂ ಬರ್ದುಂಕಿದ ಅರಲಂಬು ಬರ್ಪಂತೆ ಬಂದು, ಭೀಮಸೇನನ ಕೆಲದೊಳ್ ಕುಳ್ಳಿರೆ, ‘ನೀನಾರ್ಗೆ? ಏನೆಂಬೆ? ಏಕೆ ಬಂದೆ?’ ಎಂದೊಡೆ ಆಕೆಯೆಂದಳ್ ‘ಎರಡಱಿಯದೆ ಒಲ್ದು ನಿನ್ನೊಳ್ ಎರಡಂ ನುಡಿಯಲಾಗದು ಎನಗೆ, ಯೀ ಬನಂ ಹಿಡಿಂಬವನಂ ಎಂಬುದು, ಇದನ್ ಆಳ್ವಂ ಹಿಡಿಂಬನೆಂಬ ಅಸುರನ್ ಎಮ್ಮಣ್ಣನ್, ಆನುಂ ಹಿಡಿಂಬೆಯೆನ್ ಎಂಬೆನ್. ಆತನ ಬೆಸದಿಂ ನಿಮ್ಮಿನಿಬರುಮಂ-)
ಎಂದುಕೊಳ್ಳುತ್ತಿರುವಂತೆಯೇ, ಅವಳು ಮನ್ಮಥನ ಕೈಯಿಂದ ತಪ್ಪಿಸಿಕೊಂಡ ಹೂ ಬಾಣದಂತೆ ಬಂದು ಭೀಮನ ಪಕ್ಕದಲ್ಲಿಯೇ ಕೂತುಕೊಂಡಳು! ಭೀಮನು ‘ನೀನು ಯಾರು? ನಿನ್ನ ಹೆಸರೇನು? ಏಕೆ ಬಂದೆ?’ ಎಂದು ಅವಳನ್ನು ಕೇಳಿದಾಗ ಅವಳು ‘ಕಪಟವಿಲ್ಲದೆ ನಿನ್ನನ್ನು ಒಲಿದಿದ್ದೇನೆ. ನಿನ್ನಲ್ಲಿ ಸುಳ್ಳು ಹೇಳಲಾರೆ! ಇದು ಹಿಡಿಂಬವನ. ಇದರ ಒಡೆಯ ಹಿಡಿಂಬನೆಂಬ ರಕ್ಕಸ, ನಮ್ಮಣ್ಣ. ನಾನು ಹಿಡಿಂಬೆ. ಅವನ ಅಪ್ಪಣೆಯಂತೆ ನಿಮ್ಮೆಲ್ಲರನ್ನೂ-
ಕಂ|| ಪಿಡಿದಡಸಿ ತಿನಲ್ ಬಂದಿ
     ರ್ದೆಡೆಯೊಳ್ ನಿನಗಾಗಿ ಮದನನೆನ್ನನೆ ತಿನೆ ಕೇಳ್|
     ಪಡೆ ನೋಡಲ್ ಬಂದವರಂ
     ಗುಡಿವೊಱೆಸಿದರೆಂಬುದಾಯ್ತು ನಿನ್ನೆನ್ನೆಡೆಯೊಳ್|| ೧೫||
(ಪಿಡಿದು ಅಡಸಿ ತಿನಲ್ ಬಂದಿರ್ದ ಎಡೆಯೊಳ್, ನಿನಗಾಗಿ ಮದನನ್ ಎನ್ನನೆ ತಿನೆ, ಕೇಳ್ ಪಡೆ ನೋಡಲ್ ಬಂದವರಂ ಗುಡಿವೊಱೆಸಿದರ್ ಎಂಬುದಾಯ್ತು ನಿನ್ನ ಎನ್ನ ಎಡೆಯೊಳ್’)
ಹಿಡಿದು ಬಾಯೊಳಗೆ ತುರುಕಿಕೊಂಡು ತಿಂದು ಮುಗಿಸಲೆಂದು ನಾನು ಇಲ್ಲಿಗೆ ಬಂದವಳು. ಆದರೆ ಈಗ ನಿನ್ನನ್ನು ಕಂಡಮೇಲೆ, ಮನ್ಮಥನು ನನ್ನನ್ನೇ ತಿಂದಂತಾಗಿದೆ! ‘ದಂಡು ನೋಡಲು ಹೋದವನ ಕೈಯಲ್ಲಿ ಬಾವುಟ ಹೊರಿಸಿದರು’ ಎಂದಂತಾಯಿತು ನೋಡು ನಿನ್ನನ್ನು ಕಂಡ ನನ್ನ  ಕಥೆ!
(ಪಡೆ ನೋಡಲ್ ಬಂದವರಂ ಗುಡಿವೊಱೆಸಿದರ್: ‘ಯುದ್ಧ ನಡೆಯುತ್ತದಂತೆ, ಹೇಗಿದೆಯೋ ನೋಡಿ ಬರೋಣ’ ಎಂದು, ಚೆಂದ ನೋಡಲು ಅಲ್ಲಿಗೆ ಹೋದವನನ್ನು ಅಲ್ಲಿದ್ದವರು ಹಿಡಿದುಕೊಂಡರು! ಅಷ್ಟೇ ಅಲ್ಲ ಅವನ ಕೈಯಲ್ಲೇ ಧ್ವಜವನ್ನು ಕೊಟ್ಟು ಸೈನ್ಯದ ಮುಂಭಾಗದಲ್ಲಿ ನಿಲ್ಲಿಸಿ, ಸೈನ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನೇ ಹೊರಿಸಿದರು. ತನ್ನ ಕಥೆಯೂ ಹೀಗೇ ಆಯಿತಲ್ಲ ಎಂದು ಹಿಡಿಂಬೆಯ ಅಂಬೋಣ.)
ವ|| ಎಂದೀ ಮಱಲುಂದಿದರಾರ್ಗೆಂದೊಡೆನ್ನ ತಾಯ್ವಿರುಮೊಡವುಟ್ಟಿದರೆಂದೊಡೆ ಹಿಡಿಂಬಂ ಬಂದವರಂ ತಿಂದೊಡಂ ತಿನ್ಗೆ ನೀನೆನ್ನ ಪೆಗಲನೇಱು ಗಗನತಳಕ್ಕುಯ್ವೆನೆನೆ ಭೀಮಸೇನನಾ ಮಾತಿಂಗೆ ಮುಗುಳ್ನಗೆ ನಕ್ಕು-
(ಎಂದು ‘ಈ ಮಱಲುಂದಿದರ್ ಆರ್ಗೆ? ಎಂದೊಡೆ ‘ಎನ್ನ ತಾಯ್ವಿರುಂ ಒಡವುಟ್ಟಿದರ್’ ಎಂದೊಡೆ ‘ಹಿಡಿಂಬಂ ಬಂದು ಅವರಂ ತಿಂದೊಡಂ ತಿನ್ಗೆ, ನೀನೆನ್ನ ಪೆಗಲನ್ ಏಱು, ಗಗನತಳಕ್ಕೆ ಉಯ್ವೆನ್’ ಎನೆ, ಭೀಮಸೇನನ್ ಆ ಮಾತಿಂಗೆ ಮುಗುಳ್ನಗೆ ನಕ್ಕು)
ಎಂದು ‘ಇದು ಯಾರು? ಇಲ್ಲಿ ಮಲಗಿದವರು?’ ಎಂದು ಕೇಳಿದಳು. ಭೀಮನು ‘ನನ್ನ ತಾಯಿ ಮತ್ತು ಒಡಹುಟ್ಟುಗಳು’ ಎಂದನು. ಹಿಡಿಂಬೆಯು ‘ಹಿಡಿಂಬನು ಬಂದು ಬೇಕಾದರೆ ಅವರನ್ನೆಲ್ಲ ತಿಂದು ಹಾಕಲಿ! ನೀನು ನನ್ನ ಹೆಗಲ ಮೇಲೆ ಕೂತುಕೋ. ಆಕಾಶಕ್ಕೆ ಒಯ್ಯುತ್ತೇನೆ’ ಎಂದಳು. ಭೀಮಸೇನನು ಆ ಮಾತಿಗೆ ಮುಗುಳ್ನಗೆ ನಕ್ಕು
ಚಂ|| ಅೞಿಪಿದೆಯಂತುಮಲ್ಲದೆ ನಿಶಾಚರಿಯೈ ನಿನಗಪ್ಪುದಪ್ಪುದೀ
     ಯೞಿನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋೞ್ಪಮಾತನೊ |
     ಡ್ಡೞಿಯದ ಗಂಡವಾತನೆನುತಂತಿರೆ ತಂಗೆಯ ಮಾಣ್ದುದರ್ಕವಂ
     ಮೊೞಗಿ ಸಿಡಿಲ್ದದೊಂದು ಸಿಡಿಲೇೞ್ಗೆಯಿನೆಯ್ತರೆ ವಂದು ಭೀಮನಂ|| ೧೬||
(ಅೞಿಪಿದೆ, ಅಂತುಂ ಅಲ್ಲದೆ ನಿಶಾಚರಿಯೈ, ನಿನಗೆ ಅಪ್ಪುದಪ್ಪುದು ಈ ಅೞಿನುಡಿ, ಬರ್ಕೆ, ನಿನ್ನ ಪಿರಿಯಣ್ಣನೆ? ಪಣ್ಣನೆ ನೋೞ್ಪಂ ಆತನ ಒಡ್ಡೞಿಯದ ಗಂಡವಾತನ್ ಎನುತೆ ಅಂತೆ ಇರೆ, ತಂಗೆಯ ಮಾಣ್ದುದರ್ಕೆ ಅವಂ  ಮೊೞಗಿ ಸಿಡಿಲ್ದು ಅದೊಂದು ಸಿಡಿಲೇೞ್ಗೆಯಿನ್ ಎಯ್ತರೆ ವಂದು, ಭೀಮನಂ)
‘ನಿನಗೆ ನನ್ನ ಮೇಲೆ ಕಣ್ಣು ಬಿದ್ದಿದೆ! ಅದೂ ಅಲ್ಲದೆ ನೀನು ಕತ್ತಲನಡೆ. ಇಂಥ ಕೆಟ್ಟಮಾತು ನಿನಗೆ ಒಪ್ಪುವಂಥಾದ್ದೇ! ಬರಲಿ! ಯಾರೆಂದಿ? ನಿನ್ನ ಹಿರಿಯಣ್ಣನೆ? ಅವನ ಮುಗಿಯದ ಬಡಾಯಿಯನ್ನೂ ಕೊಂಚ ಕೇಳೋಣ!’ ಎನ್ನುತ್ತಿರುವಂತೆಯೇ ತಂಗಿಯು ತಡಮಾಡಿದಳೆಂಬ ಸಿಟ್ಟಿನಿಂದ ಹಿಡಿಂಬನು ಗರ್ಜಿಸುತ್ತಾ ಸಿಡಿಲಿನಂತೆ ಭೀಮನ ಸಮೀಪಕ್ಕೆ  ಸಿಡಿದು ಬಂದು-
ವ|| ಕಂಡು ಕಣ್ಗಳಿಂ ಕೆಂಡದ ತಂಡಂಗಳುಮುರಿಯ ತಂಡಂಗಳುಂ ಸೂಸೆ ನೀನೊರ್ವಯೆನ್ನೊಳಗೇಂ ಕಾದುವೆ ಈ ಮಱಲುಂದಿದರನೆತ್ತಿನಿಬರುಮನೊರ್ಮೆಯೆ ಪೊಸೆದು ಮುಕ್ಕುವೆನೆನೆ ಸಾಹಸಭೀಮಂ ಮಲ್ಲಂತಿಗೆಯನಪ್ಪೊಡಂ ಸಡಲಿಸದವನನವಯವದೊಳಿಂತೆಂದಂ-
(ಕಂಡು ಕಣ್ಗಳಿಂ ಕೆಂಡದ ತಂಡಂಗಳುಂ ಉರಿಯ ತಂಡಂಗಳುಂ ಸೂಸೆ, ‘ನೀನೊರ್ವ ಎನ್ನೊಳಗೆ ಏಂ ಕಾದುವೆ? ಈ ಮಱಲುಂದಿದರನ್ ಎತ್ತು! ಇನಿಬರುಮನ್ ಒರ್ಮೆಯೆ ಪೊಸೆದು ಮುಕ್ಕುವೆನ್’ ಎನೆ ಸಾಹಸಭೀಮಂ ಮಲ್ಲಂತಿಗೆಯನ್ ಅಪ್ಪೊಡಂ ಸಡಲಿಸದೆ ಅವನನ್ ಅವಯವದೊಳ್ ಇಂತೆಂದಂ)
ಕಂಡು, ಕಣ್ಣುಗಳಿಂದ ಕೆಂಡದ ಉಂಡೆಗಳನ್ನೂ, ಬೆಂಕಿಯ ಜ್ವಾಲೆಗಳನ್ನೂ ಸುರಿಸುತ್ತಾ ‘ನೀನೊಬ್ಬನೇ ನನ್ನ ಜೊತೆ ಏನು ಯುದ್ಧ ಮಾಡೀಯೆ? ಮಲಗಿಕೊಂಡ ಇವರನ್ನೂ ಎಬ್ಬಿಸು! ಎಲ್ಲರನ್ನೂ ಒಟ್ಟಿಗೆ ಮುದ್ದೆ ಮಾಡಿ ಮುಕ್ಕಿಬಿಡುತ್ತೇನೆ’ ಎಂದನು. ಅದನ್ನು ಕೇಳಿದ ಭೀಮನು, ತನ್ನ ಕಾಚವನ್ನು ಸಹ ಬಿಗಿ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಅವನನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಹೀಗೆಂದನು:
ಕಂ|| ಏಂ ಗಾವಿಲನಯೊ ನಿನ್ನಂ
ನುಂಗುವುದರ್ಕಿವರನೆತ್ತವೇೞ್ಕುಮೆ ನೆರಮಂ|
ಸಂಗಳಿಸಲ್ವೇೞ್ಕುಮೆ ಮಾ
ತಂಗವಿರೋಧಿಗೆ ಕುರಂಗ ಸಂಗರ ಧರೆಯೊಳ್|| ೧೭||
(ಏಂ ಗಾವಿಲನಯೊ! ನಿನ್ನಂ ನುಂಗುವುದರ್ಕೆ ಇವರನ್ ಎತ್ತವೇೞ್ಕುಮೆ? ನೆರಮಂ ಸಂಗಳಿಸಲ್ ವೇೞ್ಕುಮೆ? ಮಾತಂಗವಿರೋಧಿಗೆ ಕುರಂಗ ಸಂಗರ ಧರೆಯೊಳ್?)
‘ಎಂಥ ಗಮಾರನೋ ನೀನು! ನಿನ್ನನ್ನು ನುಂಗಲು ಇವರನ್ನೆಲ್ಲ ಎಬ್ಬಿಸಬೇಕೆ? ಜನ ಸೇರಿಸಬೇಕೆ?  ಸಿಂಹಕ್ಕೆ ಎಂದಾದರೂ ಜಿಂಕೆಯೊಂದಿಗೆ ಯುದ್ಧವೆ?’
ವ|| ಎಂಬುದುಂ ಹಿಡಿಂಬನಾಡಂಬರಂಗೆಯ್ದು ತುಂಬುರುಕೊಳ್ಳಿಯಂತಂಬರಂಬರಂ ಸಿಡಿಲ್ದು-
(ಎಂಬುದುಂ ಹಿಡಿಂಬನ್ ಆಡಂಬರಂಗೆಯ್ದು ತುಂಬುರುಕೊಳ್ಳಿಯಂತೆ ಅಂಬರಂಬರಂ ಸಿಡಿಲ್ದು)
ಎನ್ನಲು ಹಿಡಿಂಬನು ಆಡಂಬರದಿಂದ ತೂಬರೆ ಮರದ ಕೊಳ್ಳಿಯಂತೆ ಆಕಾಶದವರೆಗೂ ಹಾರಾಡುತ್ತಾ-
ಚಂ|| ಕಡುಪಿನೆ ಪೊತ್ತು ಪಾಸರೆಯನೆಯ್ತರೆ ಭೀಮನುಮೊತ್ತಿ ಕಿಱ್ತು ಬೇ
     ರೊಡನೆ ಮಹೀಜಮೊಂದನಿಡೆಯುಂ ಬಿಡೆ ಪೊಯ್ಯೆಯುಮಾ ಬನಂ ಪಡ|
     ಲ್ವಡುತಿರೆ ಕಲ್ಲೊಳಂ ಮರದೊಳಂ ಬಡಿದೊಯ್ಯನೆ ಜೋಲ್ದ ದೈತ್ಯನಂ
     ಪಿಡಿದು ಮೃಣಾಳನಾಳಮನೆ ಸೀಳ್ವವೊಲೊರ್ಮೆಯೆ ಸೀಳ್ದು ಬೀಸಿದಂ|| ೧೮||
(ಕಡುಪಿನೆ ಪೊತ್ತು ಪಾಸರೆಯನ್ ಎಯ್ತರೆ, ಭೀಮನುಂ ಒತ್ತಿ ಕಿಱ್ತು ಬೇರೊಡನೆ ಮಹೀಜಂ ಒಂದನ್ ಇಡೆಯುಂ ಬಿಡೆ ಪೊಯ್ಯೆಯುಂ, ಆ ಬನಂ ಪಡಲ್ವಡುತಿರೆ ಕಲ್ಲೊಳಂ ಮರದೊಳಂ, ಬಡಿದು, ಒಯ್ಯನೆ ಜೋಲ್ದ ದೈತ್ಯನಂ ಪಿಡಿದು, ಮೃಣಾಳನಾಳಮನೆ ಸೀಳ್ವವೊಲ್ ಒರ್ಮೆಯೆ ಸೀಳ್ದು ಬೀಸಿದಂ)
ಒಂದು ಹಾಸುಬಂಡೆಯನ್ನು ಎತ್ತಿಕೊಂಡು ರಭಸದಿಂದ ಹತ್ತಿರಕ್ಕೆ ನುಗ್ಗಿ ಬಂದನು. ಭೀಮನೂ ಸಹ ಒಂದು ಮರವನ್ನು ಬೇರು ಸಮೇತ ಕಿತ್ತುಕೊಂಡು ಬೀಸಲು, ಕಲ್ಲು, ಮರಗಳ ಹೊಡೆತದಿಂದ ಆ ಕಾಡು ಚೆಲ್ಲಾಪಿಲ್ಲಿಯಾಯಿತು. ಭೀಮನು ಎಡೆಬಿಡದೆ ಹೊಡೆಯುತ್ತಿದ್ದಂತೆ, ಪೆಟ್ಟು ತಿಂದ ಹಿಡಿಂಬನು ಮೆಲ್ಲನೆ ನೆಲಕ್ಕೆ ಉರುಳಿದನು. ಭೀಮನು ಅವನನ್ನು ಹಿಡಿದು ಕಮಲದ ದಂಟನ್ನು ಸೀಳುವಂತೆ ಸೀಳಿ ಬಿಸಾಡಿದನು.
ವ|| ಆಗಳಾ ಕಳಕಳಕ್ಕೆ ಮಱಲುಂದಿದಯ್ವರುಮೆೞ್ಚತ್ತಿದೇನೆಂದು ಬೆಸಗೊಳೆ ತದ್ವೃತ್ತಾಂತ ಮೆಲ್ಲಮನಱಿಪಿ ಹಿಡಿಂಬೆ ಡಂಬಮಿಲ್ಲದೆ ಭೀಮಸೇನನೊಳಪ್ಪೊಡಂಬಡಂ ನುಡಿಯೆ ಕೊಂತಿಯುಂ ಧರ್ಮಪುತ್ರನುಮೀಕೆ ಸಾಮಾನ್ಯವನಿತೆಯಲ್ಲಿವಳ್ ರಾಕ್ಷಸಸ್ತ್ರೀಯೆಂದು ಭಾವಿಸಲ್ಬೇಡೀಕೆಯಂ ಕೆಯ್ಕೊಳ್ವುದೆ ಕಜ್ಜಮೆಂದಾಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ ಹಿಡಿಂಬೆ ನೀಮಿಲ್ಲಿರಲ್ವೇಡ ಪರ್ವತದ ಮೇಲೆ ಕಱಂಗಿ ಕೞ್ತಲಿಸಿದ ಮರದುಱುಗಲ ನಡುವೆ ಸುಧಾ ಧವಳಿತೋತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಬಿರಪ್ಟೊಡದು ಹಿಡಿಂಬಪುರಮೆಂಬುದೆಮ್ಮ ಪುರಮಲ್ಲಿಗೆ ಪೋಪಂ ಬನ್ನಿಮೆಂದು ಮುಂದಿಟ್ಟೊಡಗೊಂಡು ಪೋಗಿ ಮಹಾವಿಭೂತಿಯಿಂ ಪೊೞಲಂ ಪುಗಿಸಿ ತನ್ನ ಸಂಪತ್ತುಮಂ ಶ್ರೀಯುಮಂ ಮೆರೆದು ಮಜ್ಜನ ಭೋಜನ ತಾಂಬೂಲ ಲೇಪನಂಗಳಿಂ ಪಥಪರಿಶ್ರಮಮೆಲ್ಲಮಂ ಕಳೆದು ಭೀಮಸೇನನುಂ ತಾನುಂ-
(ಆಗಳ್ ಆ ಕಳಕಳಕ್ಕೆ ಮಱಲುಂದಿದ ಅಯ್ವರುಂ ಎೞ್ಚತ್ತು ‘ಇದೇನು?’ ಎಂದು ಬೆಸಗೊಳೆ, ತದ್ವೃತ್ತಾಂತಂ ಎಲ್ಲಮನ್ ಅಱಿಪಿ, ಹಿಡಿಂಬೆ, ಡಂಬಮಿಲ್ಲದೆ ಭೀಮಸೇನನೊಳ್ ಅಪ್ಪ ಒಡಂಬಡಂ ನುಡಿಯೆ, ಕೊಂತಿಯುಂ ಧರ್ಮಪುತ್ರನುಂ, ‘ಈಕೆ ಸಾಮಾನ್ಯವನಿತೆಯಲ್ಲ, ಇವಳ್ ರಾಕ್ಷಸಸ್ತ್ರೀಯೆಂದು ಭಾವಿಸಲ್ ಬೇಡ, ಈಕೆಯಂ ಕೆಯ್ಕೊಳ್ವುದೆ ಕಜ್ಜಂ’ ಎಂದು, ಆಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ, ಹಿಡಿಂಬೆ, ‘ನೀಂ ಇಲ್ಲಿ ಇರಲ್ ವೇಡ, ಪರ್ವತದ ಮೇಲೆ, ಕಱಂಗಿ ಕೞ್ತಲಿಸಿದ ಮರದುಱುಗಲ ನಡುವೆ, ಸುಧಾ ಧವಳಿತ ಉತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಬಿರಿ ಅಪ್ಟೊಡೆ, ಅದು ಹಿಡಿಂಬಪುರಂ ಎಂಬುದು, ಎಮ್ಮ ಪುರಂ ಮಲ್ಲಿಗೆ ಪೋಪಂ ಬನ್ನಿಂ’ ಎಂದು ಮುಂದಿಟ್ಟು ಒಡಗೊಂಡು ಪೋಗಿ, ಮಹಾವಿಭೂತಿಯಿಂ ಪೊೞಲಂ ಪುಗಿಸಿ, ತನ್ನ ಸಂಪತ್ತುಮಂ ಶ್ರೀಯುಮಂ ಮೆರೆದು, ಮಜ್ಜನ ಭೋಜನ ತಾಂಬೂಲ ಲೇಪನಂಗಳಿಂ ಪಥಪರಿಶ್ರಮಂ ಎಲ್ಲಮಂ ಕಳೆದು, ಭೀಮಸೇನನುಂ ತಾನುಂ-)
ಆಗ ಆ ಗಲಾಟೆಗೆ ಮಲಗಿದ್ದ ಐವರೂ ಎಚ್ಚೆತ್ತು ‘ಇದೇನು?’ ಎಂದು ವಿಚಾರಿಸಿದರು! ಹಿಡಿಂಬೆಯು ನಡೆದ ವೃತ್ತಾಂತವೆಲ್ಲವನ್ನೂ ತಿಳಿಸಿ, ತನಗೆ ಭೀಮನ ಮೇಲುಂಟಾದ ಪ್ರೀತಿಯನ್ನು ನಯವಾಗಿ ಹೇಳಿಕೊಂಡಳು. ಆಗ ಕುಂತಿಯೂ, ಧರ್ಮಪುತ್ರನೂ ‘ಈಕೆ ಸಾಮಾನ್ಯ ಹೆಣ್ಣಲ್ಲ; ಇವಳನ್ನು ರಾಕ್ಷಸ ಸ್ತ್ರೀ ಎಂದು ಭಾವಿಸಬೇಡ. ಇವಳನ್ನು ಸ್ವೀಕರಿಸುವುದೇ ಯೋಗ್ಯವಾದ ಕಾರ್ಯ’ ಎಂದು ಭೀಮನನ್ನು ಒಪ್ಪಿಸಿ, ಹಿಡಿಂಬೆಗೂ ಭೀಮನಿಗೂ ಗಾಂಧರ್ವವಿವಾಹವನ್ನು ಮಾಡಿದರು. ನಂತರ ಹಿಡಿಂಬೆಯು ಅವರೆಲ್ಲರನ್ನೂ ಕುರಿತು ‘ನೀವು ಇಲ್ಲಿರುವುದು ಬೇಡ! ಅದೋ ಅಲ್ಲಿ ಬೆಟ್ಟದ ಮೇಲೆ, ದಟ್ಟವಾಗಿ ಕಪ್ಪಾಗಿ ಬೆಳೆದಿರುವ ಕಾಡಿನ ನಡುವೆ, ಸುಣ್ಣದಿಂದ ಬೆಳ್ಳಗೆ ಹೊಳೆಯುವ
ಭವನಗಳು ಕಾಣುತ್ತಿವೆ! ಅದು ಹಿಡಿಂಬಪುರ! ನಮ್ಮೂರು! ಬನ್ನಿ, ನಾವೆಲ್ಲ ಅಲ್ಲಿಗೆ ಹೋಗೋಣ!’ ಎಂದು ಅವರೆಲ್ಲರನ್ನೂ ಮುಂದಿಟ್ಟುಕೊಂಡು ಕರೆದುಕೊಂಡು ಹೋಗಿ ವೈಭವದಿಂದ ತನ್ನ ಊರನ್ನು ಹೊಗಿಸಿದಳು; ಅಲ್ಲಿ ತನ್ನ ಸಂಪತ್ತು, ಶ್ರೀಮಂತಿಕೆಗಳನ್ನು ಅವರಿಗೆ ಪ್ರದರ್ಶಿಸಿ ಸ್ನಾನ, ಊಟ, ಎಲೆಯಡಿಕೆ, ಸುಗಂಧಗಳಿಂದ ಅವರ ದಾರಿಯ ಆಯಾಸವನ್ನು ಕಳೆದಳು.
ಕಂ|| ಎಲ್ಲಿ ಕೊಳನೆಲ್ಲಿ ತಣ್ಬುೞಿ
     ಲೆಲ್ಲಿ ಲತಾಭವನಮೆಲ್ಲಿ ಧಾರಾಗೃಹಮಂ||
     ತಲ್ಲಿಯೆ ತೊಡರ್ದದಲ್ಲಿಯೆ ನಿಂ
     ದಲ್ಲಿಯೆ ರಮಿಯಿಸಿದಳಾಕೆ ಮರುದಾತ್ಮಜನೊಳ್|| ೧೯||
(ಎಲ್ಲಿ ಕೊಳನ್, ಎಲ್ಲಿ ತಣ್ಬುೞಿಲ್, ಎಲ್ಲಿ ಲತಾಭವನಂ, ಎಲ್ಲಿ ಧಾರಾಗೃಹಂ, ಅಂತು ಅಲ್ಲಿಯೆ ತೊಡರ್ದು, ಅಲ್ಲಿಯೆ ನಿಂದು, ಅಲ್ಲಿಯೆ ರಮಿಯಿಸಿದಳ್ ಆಕೆ ಮರುದಾತ್ಮಜನೊಳ್)
ಕೊಳಗಳಲ್ಲಿ, ತಂಪುತೋಪುಗಳಲ್ಲಿ, ಬಳ್ಳಿಮಾಡಗಳಲ್ಲಿ, ತಣ್ಣೀರ ಸ್ನಾನಗೃಹಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಸೇರಿ, ತಂಗಿ, ಹಿಡಿಂಬೆಯು ಭೀಮನೊಂದಿಗೆ ರಮಿಸಿದಳು.
ವ|| ಅಂತು ರಮಿಯಿಸಿ ಪೊೞಲ್ಗೆ ಮಗುೞ್ದು ಬಂದೊಡೆ ಆಕೆಗಂ ಭೀಮಂಗಂ
ಹಾಗೆ ರಮಿಸಿ ಊರಿಗೆ ಹಿಂದಿರುಗಿ ಬಂದ ಮೇಲೆ ಆಕೆಗೂ ಭೀಮನಿಗೂ
ಕಂ|| ಕಾರಿರುಳ ತಿರುಳ ಬಣ್ಣಂ
     ಕೂರಿದುವೆನೆ ತೊಳಪ ದಾಡೆ ಮಿಳಿರ್ವುರಿಗೇಸಂ|
     ಪೇರೊಡಲೆಸೆದಿರೆ ಪುಟ್ಟಿದ
     ನಾರುಮಗುರ್ವಿಸೆ ಮಗಂ ಘಟೋತ್ಕಚನೆಂಬಂ|| ೨೦||
(ಕಾರಿರುಳ ತಿರುಳ ಬಣ್ಣಂ, ಕೂರಿದುವು ಎನೆ ತೊಳಪ ದಾಡೆ, ಮಿಳಿರ್ವ ಉರಿಗೇಸಂ,  ಪೇರೊಡಲ್ ಎಸೆದಿರೆ, ಪುಟ್ಟಿದನ್ ಆರುಂ ಅಗುರ್ವಿಸೆ ಮಗಂ ಘಟೋತ್ಕಚನ್ ಎಂಬಂ)
ಕಪ್ಪುಗತ್ತಲಿನ ತಿರುಳಿನಂಥ ಬಣ್ಣ, ಹೊಳೆಯುವ ಹರಿತವಾದ ಕೋರೆಹಲ್ಲುಗಳು, ಅಲುಗುವ ಜ್ವಾಲೆಯಂಥ ತಲೆಗೂದಲು, ಭಾರೀ ದೇಹ ಇವುಗಳಿಂದ ಕೂಡಿ, ಕಂಡವರಿಗೆ ಹೆದರಿಕೆ ಹುಟ್ಟಿಸುವಂತಿದ್ದ ಘಟೋತ್ಕಚನೆಂಬ ಮಗನು ಹುಟ್ಟಿದನು.
ವ|| ಅಂತು ಪುಟ್ಟುವುದುಮೀಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಮುಂ ಸದ್ಯಃಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದಾಗಳೆ ಷೋಡಶವರ್ಷದ ಕುಮಾರನಾಗಿರೆ ಪಾಂಡಮರುಮಲ್ಲಿ ಮೂಱು ವರುಷಮಿರ್ದು ಕೃಷ್ಣದ್ವೈಪಾಯನೋಪದೇಶದಿಂದೇಕಚಕ್ರಕ್ಕೆ ವೋಪ ಕಜ್ಜಮನಾಳೋಚಿಸಿ-
ಹಾಗೆ ಹುಟ್ಟಿದಾಗ ಈಶ್ವರನಿಯಮದಂತೆ ರಾಕ್ಷಸರಿಗೆ ಕೂಡಲೇ ಬಸಿರಾಗಿ, ಕೂಡಲೇ ಹೆತ್ತು, ಕೂಡಲೇ (ಮಗುವಿಗೆ) ಯೌವನವು ಉಂಟಾಗುವುದರಿಂದ, ಘಟೋತ್ಕಚನು ಕೂಡಲೇ ಹದಿನಾರು ವರ್ಷದ ಕುಮಾರನಾದನು. ಪಾಂಡವರು ಅಲ್ಲಿ ಮೂರು ವರ್ಷ ಕಾಲ ಇದ್ದು, ವ್ಯಾಸರ ಉಪದೇಶದಂತೆ, ಏಕಚಕ್ರ ನಗರಕ್ಕೆ ಹೋಗುವ ಕಾರ್ಯವನ್ನು ಆಲೋಚಿಸಿ-

ಕಾಮೆಂಟ್‌ಗಳಿಲ್ಲ: