ಶನಿವಾರ, ಆಗಸ್ಟ್ 25, 2018

ಪಂಪಭಾರತ ಆಶ್ವಾಸ ೧ ಪದ್ಯಗಳು ೧೨೮ರಿಂದ ೧೪೯




ಕಂ|| ಭೀಮಂ ಭಯಂಕರಂ ಪೆಱ |
     ತೇ ಮಾತೀ ಕೂಸಿನಂದಮೀತನ ಪೆಸರುಂ ||
     ಭೀಮನೆ ಪೋಗೆನೆ ಮುನಿಜನ |
     ಮೀಮಾೞ್ಕೆಯಿನಾಯ್ತು ಶಿಶುಗೆ ಪೆಸರನ್ವರ್ಥಂ ||೧೨೮||
(“ಭೀಮಂ ಭಯಂಕರಂ, ಪೆಱತೇ ಮಾತು? ಈ ಕೂಸಿನಂದಂ ಈತನ ಪೆಸರುಂ ಭೀಮನೆ! ಪೋಗು” ಎನೆ ಮುನಿಜನಂ, ಈ ಮಾೞ್ಕೆಯಿನ್ ಆಯ್ತು ಶಿಶುಗೆ ಪೆಸರ್ ಅನ್ವರ್ಥಂ.)
‘ಇವನ ಸ್ವರೂಪವು ಹೆದರಿಕೆ ಹುಟ್ಟಿಸುವಂತಿದೆ! ಬೇರೇನು ಹೇಳುವುದು? ಈತನ ಹೆಸರು ಭೀಮ ಎಂದಾಗಲಿ’ ಎಂದು ಮುನಿಜನರು ಹೇಳಿದರು. ಹೀಗಾಗಿ ಆ ಶಿಶುವಿಗೆ ಭೀಮ ಎಂದು ಅನ್ವರ್ಥ ನಾಮವಾಯಿತು.
ವ|| ಅಂತು ಭರತಕುಲತಿಲಕರಪ್ಪಿರ್ವರ್ ಮಕ್ಕಳಂ ಪೆತ್ತು ಕೊಂತಿ ಸಂತಸದಂತಮನೆಯ್ದಿರ್ಪುದುಮತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ಕೇಳ್ದು ತನ್ನ ಗರ್ಭಂ ತಡೆದುದರ್ಕೆ ಕಿನಿಸಿ ಕಿಂಕಿರಿವೋಗಿ-
(ಅಂತು ಭರತಕುಲತಿಲಕರಪ್ಪ ಇರ್ವರ್ ಮಕ್ಕಳಂ ಪೆತ್ತು, ಕೊಂತಿ ಸಂತಸದಂತಮನ್ ಎಯ್ದಿರ್ಪುದುಂ, ಅತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ಕೇಳ್ದು, ತನ್ನ ಗರ್ಭಂ ತಡೆದುದರ್ಕೆ ಕಿನಿಸಿ ಕಿಂಕಿರಿವೋಗಿ,)
ಹಾಗೆ ಭರತಕುಲಕ್ಕೆ ತಿಲಕರಂತಿರುವ ಇಬ್ಬರು ಮಕ್ಕಳನ್ನು ಹೆತ್ತು ಕುಂತಿಯು ಸಂತಸದ ತುತ್ತತುದಿಯಲ್ಲಿದ್ದಾಗ, ಅತ್ತ, ಧೃತರಾಷ್ಟ್ರನ ರಾಣಿಯಾದ ಗಾಂಧಾರಿಯು ಈ ಸುದ್ದಿಯನ್ನು ಕೇಳಿ, ತನ್ನ ಹೆರಿಗೆಯು ತಡವಾದುದಕ್ಕೆ ಆತಂಕಗೊಂಡು-
ಕಂ || ಸಂತತಿಗೆ ಪಿರಿಯ ಮಕ್ಕಳ |
     ನಾಂ ತಡೆಯದೆ ಪಡೆವೆನೆಂದೊಡೆನ್ನಿಂ ಮುನ್ನಂ ||
     ಕೊಂತಿಯೆ ಪಡೆದಳ್ ಗರ್ಭದ |
     ಚಿಂತೆಯದಿನ್ನೇವುದೆಂದು ಬಸಿಱಂ ಪೊಸೆದಳ್ ||೧೨೯||
(“ಸಂತತಿಗೆ ಪಿರಿಯ ಮಕ್ಕಳನ್ ಆಂ ತಡೆಯದೆ ಪಡೆವೆನ್ ಎಂದೊಡೆ, ಎನ್ನಿಂ ಮುನ್ನಂ ಕೊಂತಿಯೆ ಪಡೆದಳ್, ಗರ್ಭದ ಚಿಂತೆ ಅದು ಇನ್ನು ಏವುದು?” ಎಂದು ಬಸಿಱಂ ಪೊಸೆದಳ್.)
‘ಸಂತತಿಗೆ ಹಿರಿಯ ಮಕ್ಕಳನ್ನು ನಾನು ಪಡೆಯಬೇಕೆಂದಿದ್ದೆ; ಆದರೆ ಕುಂತಿಯೇ ನನಗಿಂತ ಮೊದಲು ಮಕ್ಕಳನ್ನು ಪಡೆದಿದ್ದಾಳೆ. ಇನ್ನು ಈ ಬಸಿರಿನಿಂದ ನನಗೆ ಆಗಬೇಕಾದ್ದೇನು?’ ಎಂದು ತನ್ನ ಬಸಿರನ್ನು ತಾನೇ ಕಿವುಚಿಕೊಂಡಳು.
ಕಂ|| ಪೊಸೆದೊಡೆ ಪಾಲ್ಗಡಲಂ ಮಗು |
     ೞ್ದಸರುರ್ ಪೊಸೆದಲ್ಲಿ ಕಾಳಕೂಟಾಂಕುರಮಂ ||
     ದಸದಳಮೊಗೆದಂತೊಗೆದುವು |
     ಬಸಿಱಿಂ ನೂಱೊಂದು ಪಿಂಡಮರುಣಾಕೀರ್ಣಂ ||೧೩೦||
(ಪೊಸೆದೊಡೆ ಪಾಲ್ಗಡಲಂ ಮಗುೞ್ದು ಅಸುರರ್, ಪೊಸೆದಲ್ಲಿ ಕಾಳಕೂಟಾಂಕುರಂ ಅಂದು ಅಸದಳಂ ಒಗೆದಂತೆ, ಒಗೆದುವು ಬಸಿಱಿಂ ನೂಱೊಂದು ಪಿಂಡಂ ಅರುಣಾಕೀರ್ಣಂ.)
ಅಂದು ಹಾಲಿನ ಕಡಲನ್ನು ರಕ್ಕಸರು ಸಂತೋಷದಿಂದ ಕಡೆದಾಗ ಅದರಿಂದ ಕಾಳಕೂಟ ವಿಷವು ಹೇಗೆ ಮೊಳಕೆಯೊಡೆಯಿತೋ ಹಾಗೆ ಗಾಂಧಾರಿಯ ಬಸಿರಿನಿಂದ ಕೆಂಪು ರಕ್ತದಿಂದ ಕೂಡಿದ ನೂರೊಂದು ಪಿಂಡಗಳು ಹುಟ್ಟಿ ಬಂದವು.
ವ|| ಅವಂ ಕಂಡು ಕಿನಿಸಿ ಕಿರ್ಚೆೞ್ದಿವಿಲ್ಲವಂ ಪೊಱಗೆ ಬಿಸುಟು ಬನ್ನಿಮೆಂಬುದುಂ ವ್ಯಾಸ ಭಟ್ಟಾರಕಂ ಬಂದು ಗಾಂಧಾರಿಯಂ ಬಗ್ಗಿಸಿ-
(ಅವಂ ಕಂಡು ಕಿನಿಸಿ ಕಿರ್ಚೆೞ್ದು “ಇವೆಲ್ಲವಂ ಪೊಱಗೆ ಬಿಸುಟು ಬನ್ನಿಂ” ಎಂಬುದುಂ, ವ್ಯಾಸ ಭಟ್ಟಾರಕಂ ಬಂದು ಗಾಂಧಾರಿಯಂ ಬಗ್ಗಿಸಿ,)
ಅವುಗಳನ್ನು ಕಂಡು ಕೋಪದಿಂದ ಬೆಂಕಿಯಾಗಿ ‘ಇವೆಲ್ಲವನ್ನೂ ಹೊರಗೆ ಬಿಸಾಡಿ ಬನ್ನಿ’ ಎನ್ನುತ್ತಿರುವಂತೆ ವ್ಯಾಸಭಟ್ಟಾರಕನು ಬಂದು ಗಾಂಧಾರಿಯನ್ನು ಗದರಿಸಿ-
ಚಂ|| ಒದುವುಗೆ ನಿನ್ನ ಸಂತತಿಗೆ ನೂರ್ವರುದಗ್ರ ಸುತರ್ಕಳೊಂದೆ ಗ |
     ರ್ಭದೊಳೆನೆ ಕೆಮ್ಮನಿಂತು ಪೊಸೆದಿಕ್ಕಿದೆ ಪೊಲ್ಲದುಗೆಯ್ದೆಯೆಂದು ಮಾ ||
     ಣದೆ ಮುನಿ ನೂಱು ಪಿಂಡಮುಮನಾಗಳೆ ತೀವಿದ ಕಮ್ಮನಪ್ಪ ತು |
     ಪ್ಪದ ಕೊಡದೊಳ್ ಸಮಂತು ಮಡಗಿಟ್ಟೊಡೆ ಸೃಷ್ಟಿಗೆ ಚೋದ್ಯಮಪ್ಪಿನಂ ||೧೩೧||
(“ಒದುವುಗೆ ನಿನ್ನ ಸಂತತಿಗೆ ನೂರ್ವರ್ ಉದಗ್ರ ಸುತರ್ಕಳ್ ಒಂದೆ ಗರ್ಭದೊಳ್ ಎನೆ, ಕೆಮ್ಮನೆ ಇಂತು ಪೊಸೆದು ಇಕ್ಕಿದೆ, ಪೊಲ್ಲದುಗೆಯ್ದೆ” ಎಂದು, ಮಾಣದೆ, ಮುನಿ ನೂಱು ಪಿಂಡಮುಮನ್ ಆಗಳೆ ತೀವಿದ ಕಮ್ಮನಪ್ಪ ತುಪ್ಪದ ಕೊಡದೊಳ್ ಸಮಂತು ಮಡಗಿಟ್ಟೊಡೆ, ಸೃಷ್ಟಿಗೆ ಚೋದ್ಯಮಪ್ಪಿನಂ.)
“ನಿನ್ನ ಹೊಟ್ಟೆಯಲ್ಲಿ ನೂರ್ವರು ಶ್ರೇಷ್ಠರಾದ ಮಕ್ಕಳು ಹುಟ್ಟಲಿ ಎಂದು ನಾನು ಆಶಿಸಿದ್ದೆ. ಆದರೆ ನೀನು ವ್ಯರ್ಥವಾಗಿ ಹೊಟ್ಟೆಯನ್ನು ಹೊಸೆದುಕೊಂಡೆ; ಕೇಡು ಮಾಡಿದೆ” ಎಂದು, ಅಲ್ಲಿಗೂ ಬಿಡದೆ ಮುನಿಯು ಆ ನೂರು ಪಿಂಡಗಳನ್ನು ತುಪ್ಪ ತುಂಬಿದ ಕೊಡದಲ್ಲಿ ಹಾಕಿ ಸುರಕ್ಷಿತವಾಗಿ ಇರಿಸಿದನು. ಆಗ ಸೃಷ್ಟಿಗೆ ಆಶ್ಚರ್ಯವಾಗುವಂತೆ-
ವ|| ಅಂತು ನೂರ್ವರೊಳೊರ್ವನಗುರ್ಬು ಪರ್ಬಿ ಪರಕಲಿಸೆ ಸಂಪೂರ್ಣವಯಸ್ಕನಾಗಿ ಘೃತ ಘಟ ವಿಘಟನುಮಾಗಿ ಪುಟ್ಟುವುದುಂ-
(ಅಂತು ನೂರ್ವರೊಳ್ ಒರ್ವನ್, ಅಗುರ್ಬು ಪರ್ಬಿ ಪರಕಲಿಸೆ, ಸಂಪೂರ್ಣವಯಸ್ಕನಾಗಿ, ಘೃತ ಘಟ ವಿಘಟನುಂ ಆಗಿ, ಪುಟ್ಟುವುದುಂ,)
ವ| ಆ ನೂರು ಪಿಂಡಗಳ ಪೈಕಿ ಒಬ್ಬನು ಕೊಡವನ್ನೊಡೆದು, ಭಯವು ಎಲ್ಲೆಡೆಗೂ ಹಬ್ಬುವ ಹಾಗೆ, ಪೂರ್ಣವಯಸ್ಕನಾಗಿ ಹುಟ್ಟಿದಾಗ-
ಕಂ|| ಪ್ರತಿಮೆಗಳೞ್ತುವು ಮೊೞಗಿದು |
     [ದ]ತಿ ರಭಸದೆ ಧಾತ್ರಿ ದೆಸೆಗಳುರಿದುವು ಭೂತ ||
     ಪ್ರತತಿಗಳಾಡಿದುವೊಳಱಿದು |
     ವತಿ ರಮ್ಯ ಸ್ಥಾನದೊಳ್  ಶಿವಾ ನಿವಹಂಗಳ್ ||೧೩೨||
(ಪ್ರತಿಮೆಗಳ್ ಅೞ್ತುವು, ಮೊೞಗಿದುದು ಅತಿ ರಭಸದೆ ಧಾತ್ರಿ, ದೆಸೆಗಳ್ ಉರಿದುವು, ಭೂತ ಪ್ರತತಿಗಳ್ ಆಡಿದುವು, ಒಳಱಿದುವು ಅತಿ ರಮ್ಯ ಸ್ಥಾನದೊಳ್  ಶಿವಾ ನಿವಹಂಗಳ್.)
ಅರಮನೆಯಲ್ಲಿದ್ದ ಪ್ರತಿಮೆಗಳು ಅತ್ತವು. ನೆಲವು ರಭಸದಿಂದ ಗುಡುಗಿತು (ಎಂದರೆ ಭೂಕಂಪವಾಯಿತು). ದಿಕ್ಕುಗಳಿಗೆ ಬೆಂಕಿ ಹೊತ್ತಿಕೊಂಡಿತು, ಪಿಶಾಚಿಗಳ ಗುಂಪು ಕುಣಿಯಿತು, ಮನೋಹರವಾದ ಸ್ಥಳಗಳಲ್ಲಿ ನರಿಗಳು ಕೂಗಿದವು.
ವ|| ಅಂತೊಗೆದನೇಕೋತ್ಪಾತಂಗಳಂ ಕಂಡು ಮುಂದಱಿವ ಚದುರ ವಿದುರನಿಂತೆಂದಂ-
(ಅಂತು ಒಗೆದ ಅನೇಕ ಉತ್ಪಾತಂಗಳಂ ಕಂಡು ಮುಂದಱಿವ ಚದುರ ವಿದುರನ್ ಇಂತೆಂದಂ)
ಹಾಗೆ ಉಂಟಾದ ಅನೇಕ ಕೆಟ್ಟ ಶಕುನಗಳನ್ನು ನೋಡಿ, ಮುಂದಾಗುವುದನ್ನು ಅರಿಯಬಲ್ಲ ಚತುರನಾದ ವಿದುರನು ಹೀಗೆಂದನು-
ಕಂ|| ಈತನೆ ನಮ್ಮ ಕುಲಕ್ಕಂ |
     ಕೇತುದಲಾನಱಿವೆನಲ್ಲದಂದೇಕಿನಿತು ||
     ತ್ಪಾತಂ ತೋರ್ಪುವು ಬಿಸುಡುವು |
     ದೀತನ ಪೆಱಗುೞಿದ ಸುತರೆ ಸಂತತಿಗಪ್ಪರ್ ||೧೩೩||
(“ಈತನೆ ನಮ್ಮ ಕುಲಕ್ಕಂ ಕೇತು ದಲ್ ಆನ್ ಅಱಿವೆನ್.  ಅಲ್ಲದಂದು ಏಕಿನಿತು ಉತ್ಪಾತಂ ತೋರ್ಪುವು? ಬಿಸುಡುವುದು ಈತನ ಪೆಱಗೆ! ಉೞಿದ ಸುತರೆ ಸಂತತಿಗಪ್ಪರ್”)
ಈತನೇ ನಮ್ಮ ಕುಲಕ್ಕೆ ಕೇತುವಾಗುತ್ತಾನೆ ಎಂದು ನನಗೆ ಗೊತ್ತಾಗಿದೆ. ಹಾಗಲ್ಲದಿದ್ದರೆ ಯಾಕೆ ಇಂತಹ ಕೆಟ್ಟ ಶಕುನಗಳು ಕಾಣಿಸಿಕೊಳ್ಳಬೇಕು? ಈತನನ್ನು ಹೊರಗೆ ಬಿಸಾಡಿರಿ. ಸಂತತಿಯನ್ನು ಇವನ ನಂತರ ಉಳಿದ ಮಕ್ಕಳೇ ಮುಂದುವರಿಸುತ್ತಾರೆ.
ವ|| ಎಂದೊಡಂ ಪುತ್ರಮೋಹ ಕಾರಣಮಾಗಿ ಧೃತರಾಷ್ಟ್ರನುಂ ಗಾಂಧಾರಿಯುಮೇಗೆಯ್ದುಮೊಡಂಬಡದಿರ್ದೊಡುತ್ಪಾತ ಶಾಂತಿಕ  ಪೌಷ್ಟಿಕ ಕ್ರಿಯೆಗಳಂ ಮಹಾಬ್ರಾಹ್ಮಣರಿಂದಂ ಬಳೆಯಿಸಿ  ಬದ್ದವಣಮಂ ಬಾಜಿಸಿ ಮಂಗಳಮಂ ಪಾಡಿಸಿ ಕೂಸಿಂಗೆ ದುರ್ಯೋಧನನೆಂದು ಪೆಸರನಿಟ್ಟು ಮತ್ತಿನ ಕೂಸುಗಳ್ಗೆಲ್ಲಂ ದುಶ್ಶಾಸನಾದಿಯಾಗಿ ನಾಮಂಗಳನಿಟ್ಟು ಪರಕೆಯಂ ಕೊಟ್ಟು-
(ಎಂದೊಡಂ, ಪುತ್ರಮೋಹ ಕಾರಣಮಾಗಿ ಧೃತರಾಷ್ಟ್ರನುಂ ಗಾಂಧಾರಿಯುಂ ಏಗೆಯ್ದುಂ ಒಡಂಬಡದಿರ್ದೊಡೆ, ಉತ್ಪಾತ ಶಾಂತಿಕ  ಪೌಷ್ಟಿಕ ಕ್ರಿಯೆಗಳಂ ಮಹಾಬ್ರಾಹ್ಮಣರಿಂದಂ ಬಳೆಯಿಸಿ,  ಬದ್ದವಣಮಂ ಬಾಜಿಸಿ, ಮಂಗಳಮಂ ಪಾಡಿಸಿ, ಕೂಸಿಂಗೆ ದುರ್ಯೋಧನನೆಂದು ಪೆಸರನಿಟ್ಟು, ಮತ್ತಿನ ಕೂಸುಗಳ್ಗೆಲ್ಲಂ ದುಶ್ಶಾಸನಾದಿಯಾಗಿ ನಾಮಂಗಳನ್ ಇಟ್ಟು, ಪರಕೆಯಂ ಕೊಟ್ಟು,)
ವಿದುರನು ಹೀಗೆ ಹೇಳಿದರೂ ಸಹ ಮಗನ ಮೇಲಿನ ಮೋಹದಿಂದ ಧೃತರಾಷ್ಟ್ರ-ಗಾಂಧಾರಿಯರು ಆತನನ್ನು ಹೊರಗೆಸೆಯಲು ಒಪ್ಪಲಿಲ್ಲ. ಬದಲಿಗೆ, ಆದ ಅಪಶಕುನಗಳ ಉಪಶಮನಕ್ಕಾಗಿ ಮಹಾಬ್ರಾಹ್ಮಣರಿಂದ ಶಾಂತಿಕ್ರಿಯೆಗಳನ್ನು ಮಾಡಿಸಿದರು; ಮಂಗಳವಾದ್ಯಗಳನ್ನು ನುಡಿಸಲಾಯಿತು. ಮಗುವಿಗೆ ದುರ್ಯೋಧನ ಎಂದು ಹೆಸರಿಟ್ಟು, ಉಳಿದ ಎಲ್ಲ ಕೂಸುಗಳಿಗೂ ದುಶ್ಶಾಸನ ಮುಂತಾಗಿ ಹೆಸರುಗಳನ್ನಿಟ್ಟು ಹರಸಿ ಸುಖವಾಗಿದ್ದರು. ಇತ್ತ-
ಮ|| ಸುಕಮಿರ್ಪನ್ನೆಗಮಿತ್ತ ಕುಂತಿ ಶತಶೃಂಗಾದ್ರೀಂದ್ರದೊಳ್ ದಿವ್ಯ ಬಾ |
     ಲಕನಿನ್ನೊರ್ವನನುಗ್ರ ವೈರಿ ಮದವನ್ಮಾತಂಗ ಕುಂಭಾ[ರ್ದ್ರ] ಮೌ ||
     ಕ್ತಿಕ ಲಗ್ನೋಜ್ವಲ ಬಾಣನಂ ಪ್ರವಿಲಸದ್ಗೀರ್ವಾಣ ದಾತವ್ಯ ಸಾ |
     ಯಕ ಸಂಪೂರ್ಣ ಕಳಾಪ್ರವೀಣನನಿಳಾ ಭಾರ ಕ್ಷಮಾಕ್ಷೂಣನಂ ||೧೩೪||
(ಸುಕಮಿರ್ಪನ್ನೆಗಂ, ಇತ್ತ ಕುಂತಿ ಶತಶೃಂಗಾದ್ರೀಂದ್ರದೊಳ್ ದಿವ್ಯ ಬಾಲಕನ್ ಇನ್ನೊರ್ವನನ್ ಉಗ್ರ ವೈರಿ ಮದವನ್ಮಾತಂಗ ಕುಂಭಾರ್ದ್ರ ಮೌಕ್ತಿಕ ಲಗ್ನೋಜ್ವಲ ಬಾಣನಂ, ಪ್ರವಿಲಸದ್ಗೀರ್ವಾಣ ದಾತವ್ಯ ಸಾಯಕ ಸಂಪೂರ್ಣ ಕಳಾಪ್ರವೀಣನನ್ ಇಳಾ ಭಾರ ಕ್ಷಮಾಕ್ಷೂಣನಂ,)
ಶತಶೃಂಗ ಪರ್ವತದಲ್ಲಿ ಕುಂತಿಯು ಇನ್ನೊಬ್ಬ ಮಗನನ್ನು ಪಡೆಯುವ ತಯಾರಿ ನಡೆಸಿದಳು. ಆ ಮಗನು ದಿವ್ಯ ಹುಡುಗನಾಗಿರಬೇಕು; ಅವನು ಹೊಡೆದ ಬಾಣವು ಸೊಕ್ಕಿದ ಆನೆಗಳಂಥ ವೈರಿಗಳ ಕುಂಭ ಸ್ಥಳಕ್ಕೆ – ಎಂದರೆ  ಹಣೆಗೆ – ತಾಗಿ, ಅವರ ರಕ್ತದಿಂದ ಒದ್ದೆಯಾಗಬೇಕು. ಹಾಗೆ ಒದ್ದೆಯಾದ ಬಾಣಗಳಿಗೆ ಅವರ ಕಿರೀಟದಲ್ಲಿರುವ ಮುತ್ತುಗಳು ಕಳಚಿ ಅಂಟಿಕೊಳ್ಳಬೇಕು. ದೇವತೆಗಳು ಕೊಡುವ ಬಾಣಗಳನ್ನು ಪ್ರಯೋಗಿಸುವುದರಲ್ಲಿ ಅವನು ನಿಪುಣನಾಗಿರಬೇಕು. ಅವನಲ್ಲಿ, ರಾಜ್ಯಭಾರ ಮಾಡುವ ಶಕ್ತಿಯು ಸ್ವಲ್ಪವೂ ಕಡಿಮೆ ಇರಬಾರದು-
ವ|| ಅಂತು ಸರ್ವ ಲಕ್ಷಣ ಸಂಪೂರ್ಣನಪ್ಪ ಮಗನನಮೋಘಂ ಪಡೆವೆನೆಂಬುದ್ಯೋಗಮನೆತ್ತಿಕೊಂಡು ಪಾಂಡುರಾಜನುಂ ತಾನುಂ-
(“ಅಂತು ಸರ್ವ ಲಕ್ಷಣ ಸಂಪೂರ್ಣನಪ್ಪ ಮಗನನ್ ಅಮೋಘಂ ಪಡೆವೆನ್” ಎಂಬ ಉದ್ಯೋಗಮನ್ ಎತ್ತಿಕೊಂಡು, ಪಾಂಡುರಾಜನುಂ ತಾನುಂ,)
ಹೀಗೆ ಎಲ್ಲ ಲಕ್ಷಣಗಳೂ ಇರುವ ಮಗನನ್ನು ಪಡೆಯುವ ಉದ್ಯೋಗವನ್ನು ಕೈಗೆತ್ತಿಕೊಂಡು ಅವಳೂ, ಪಾಂಡುರಾಜನೂ-
ಚಂ|| ಎಱಗಿಯುಮೊರ್ಮೆ ದಿವ್ಯ ಮುನಿಗಾರ್ತುಪವಾಸಮಿರ್ದುಮೊರ್ಮೆ ಕೊ |
     ಯ್ದಱಿಕೆಯ ಪೂಗಳಿಂ ಶಿವನನರ್ಚಿಸಿಯುಂ ಬಿಡದೊರ್ಮೆ ನೋಂತುಮೋ ||
     ದಱಿವರ ಪೇೞ್ದ ನೋಂಪಿಗಳನೊರ್ಮೆ ಪಲರ್ಮೆಯುಮಿಂತು ತಮ್ಮ ಮೆ |
     ಯ್ಮಱೆವಿನಮಿರ್ವರುಂ ನಮೆದರೇನವರ್ಗಾದುದೊ ಪುತ್ರದೋಹಳಂ ||೧೩೫||
(ಎಱಗಿಯುಂ ಒರ್ಮೆ ದಿವ್ಯ ಮುನಿಗೆ, ಆರ್ತು ಉಪವಾಸಮಿರ್ದುಂ ಒರ್ಮೆ, ಕೊಯ್ದ ಅಱಿಕೆಯ ಪೂಗಳಿಂ ಶಿವನನ್ ಅರ್ಚಿಸಿಯುಂ ಬಿಡದೆ ಒರ್ಮೆ, ನೋಂತುಂ ಓದಱಿವರ ಪೇೞ್ದ ನೋಂಪಿಗಳನ್ ಒರ್ಮೆ ಪಲರ್ಮೆಯುಂ, ಇಂತು ತಮ್ಮ ಮೆಯ್ಮಱೆವಿನಂ ಇರ್ವರುಂ ನಮೆದರ್, ಏನವರ್ಗೆ ಆದುದೊ ಪುತ್ರದೋಹಳಂ!)
ಮುನಿಗೆ ನಮಸ್ಕರಿಸಿದರು; ಉಪವಾಸ ಮಾಡಿದರು; ಹೆಸರಾಂತ ಹೂಗಳಿಂದ ಶಿವನಿಗೆ ಬಿಡದೆ ಪೂಜೆ ಸಲ್ಲಿಸಿದರು; ಓದಿ ತಿಳಿದವರು ಹೇಳಿದ ವ್ರತಗಳನ್ನು ಆಚರಿಸಿದರು; ಇವೆಲ್ಲವನ್ನೂ ಮತ್ತೆ ಮತ್ತೆ ಮಾಡಿದರು; ಮಗುವನ್ನು ಪಡೆಯುವ ಬಯಕೆಯಿಂದ ಹೀಗೆ ಇಬ್ಬರೂ ನವೆದರು. ಮಗುವಿನ ಮೇಲೆ ಎಂಥ ತೀವ್ರ ಬಯಕೆ ಅವರದು!
ಚಂ|| ಅಲಸದೆ ಮಾಡಿ ಬೇಸಱದೆ ಸಾಲ್ಗುಮಿದೆನ್ನದೆ ಮೆಯ್ಸೊಗಕ್ಕೆ ಪಂ |
     ಬಲಿಸದೆ ನಿದ್ದೆಗೆಟ್ಟು [ನಿಡು]ಜಾಗರದೊಳ್ ತೊಡರ್ದೇಕ ಪಾದದೊಳ್ ||
     ಬಲಿದುಪವಾಸದೊಳ್ ನಮೆದು ನೋಂಪಿಗಳೊಳ್ ನಿಯಮ ಕ್ರಮಂಗಳಂ |
     ಸಲಿಸಿದರಂತು ನೋನದೆ ಗುಣಾರ್ಣವನಂ ಪಡೆಯಲ್ಕೆ ತೀರ್ಗುಮೇ ||೧೩೬||
(ಅಲಸದೆ, ಮಾಡಿ ಬೇಸಱದೆ, “ಸಾಲ್ಗುಂ ಇದು” ಎನ್ನದೆ, ಮೆಯ್ಸೊಗಕ್ಕೆ ಪಂಬಲಿಸದೆ, ನಿದ್ದೆಗೆಟ್ಟು, ನಿಡುಜಾಗರದೊಳ್ ತೊಡರ್ದು, ಏಕ ಪಾದದೊಳ್ ಬಲಿದು, ಉಪವಾಸದೊಳ್ ನಮೆದು, ನೋಂಪಿಗಳೊಳ್ ನಿಯಮ ಕ್ರಮಂಗಳಂ ಸಲಿಸಿದರ್, ಅಂತು ನೋನದೆ ಗುಣಾರ್ಣವನಂ ಪಡೆಯಲ್ಕೆ ತೀರ್ಗುಮೇ?)
ಸೋಮಾರಿಗಳಾಗಲಿಲ್ಲ; ಬೇಸರಿಸಲಿಲ್ಲ; ‘ಅಯ್ಯೋ ಇಷ್ಟು ಸಾಕು’ ಎನ್ನಲಿಲ್ಲ; ಮೈಯ ಸುಖಗಳಿಗೆ ಆಸೆ ಪಡಲಿಲ್ಲ; ನಿಡುಗಾಲ ನಿದ್ದೆಗೆಟ್ಟರು; ಒಂಟಿ ಕಾಲಿನಲ್ಲಿ ನಿಂತರು; ಉಪವಾಸದಿಂದ ಬಳಲಿದರು; ವ್ರತದ ನಿಯಮ-ಕ್ರಮಗಳನ್ನು ಸಲ್ಲಿಸಿದರು. ಹೀಗೆ ವ್ರತಗಳನ್ನಾಚರಿಸದೆ ಇದ್ದರೆ – ಕಷ್ಟಪಡದೆ ಇದ್ದರೆ – ಗುಣಾರ್ಣವನಂಥ ಮಗನನ್ನು ಪಡೆಯಲು ಸಾಧ್ಯವೆ?
ವ|| ಅಂತೊಂದು ವರ್ಷಂಬರಂ ಭರಂಗೆಯ್ದು ನೋಂತು ಪೂರ್ವಕ್ರಮದೊಳೊಂದು ದಿವಸಮುಪವಾಸಮನಿರ್ದಗಣ್ಯ ಪುಣ್ಯತೀರ್ಥ ಜಲಂಗಳಂ ಮಿಂದು ದಳಿಂಬಮನುಟ್ಟು ದರ್ಭಶಯನದೊಳಿರ್ದು-
(ಅಂತು ಒಂದು ವರ್ಷಂಬರಂ ಭರಂಗೆಯ್ದು ನೋಂತು, ಪೂರ್ವಕ್ರಮದೊಳ್ ಒಂದು ದಿವಸಂ ಉಪವಾಸಮನ್ ಇರ್ದು, ಅಗಣ್ಯ ಪುಣ್ಯತೀರ್ಥ ಜಲಂಗಳಂ ಮಿಂದು, ದಳಿಂಬಮನ್ ಉಟ್ಟು, ದರ್ಭಶಯನದೊಳ್ ಇರ್ದು,)
ಹಾಗೆ ಒಂದು ವರ್ಷದ ವರೆಗೂ ಭರದಿಂದ ವ್ರತಗಳನ್ನು ಆಚರಿಸಿ, ಈ ಮೊದಲು ಮಾಡಿದಂತೆಯೇ ಒಂದು ದಿನ ಪೂರ್ತಿ ಉಪವಾಸ ಮಾಡಿ, ಅನೇಕ ಪುಣ್ಯತೀರ್ಥಗಳ ನೀರಿನಲ್ಲಿ ಮಿಂದು ಮಡಿಯುಟ್ಟು, ದರ್ಭೆಯ ಮೇಲೆ ಮಲಗಿದರು.
ಮ|| ಸುಲಿಪಲ್ ಮಿಂಚಿನ ಗೊಂಚಲುಟ್ಟ ದುಗುಲಂ ಗಂಗಾನದೀ ಫೇನಮು |
     ಜ್ವಲ ಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಮಂ ||
     ಗ ಲತಾ ಲಾಲಿತ ಸಾಂದ್ರ ಚಂದನರಸಂ ಬೆಳ್ದಿಂಗಳೆಂಬೊಂದು ಪಂ |
     ಬಲ ಬಂಬಲ್ಗೆ[ಡೆ]ಯಾಗೆ ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ ||೧೩೭||
(ಸುಲಿಪಲ್ ಮಿಂಚಿನ ಗೊಂಚಲ್, ಉಟ್ಟ ದುಗುಲಂ ಗಂಗಾನದೀ ಫೇನಂ, ಉಜ್ವಲ ಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಂ, ಅಂಗ ಲತಾ ಲಾಲಿತ ಸಾಂದ್ರ ಚಂದನರಸಂ ಬೆಳ್ದಿಂಗಳ್ ಎಂಬೊಂದು ಪಂಬಲ ಬಂಬಲ್ಗೆ ಎಡೆಯಾಗೆ, ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ.)
ಕುಂತಿಯ ಉಜ್ಜಿದ ಹಲ್ಲುಗಳು ಮಿಂಚಿನ ಗೊಂಚಲಿನಂತಿದ್ದವು; ಅವಳುಟ್ಟ ರೇಷ್ಮೆಯ ವಸ್ತ್ರವು ಗಂಗೆಯ ನೊರೆಯಂತೆ ಬಿಳುಪಾಗಿತ್ತು. ತೊಟ್ಟ ಮುತ್ತಿನ ಆಭರಣಗಳು, ಕೊರಳಲ್ಲಿ ಅಲುಗಾಡುತ್ತಿದ್ದ ಮುತ್ತಿನ ಸರೆ, ಅಂಗಗಳಿಗೆ ಹಚ್ಚಿಕೊಂಡ ಮಂದವಾದ ಶ್ರೀಗಂಧದ ರಸ ಇವುಗಳ ಕಾಂತಿ ಬೆಳುದಿಂಗಳಿನಂತಿತ್ತು. ಹೀಗೆ ಬಿಳಿಯ ಬಣ್ಣವೇ ಪ್ರಧಾನವಾಗಿದ್ದ ಅವಳ ಅಲಂಕಾರವು ಅವಳ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತಾ ಮನೋಹರವಾಗಿತ್ತು.
ವ|| ಅಂತೊಂದು ವರ್ಷಂಬರಂ ಕೈಕೊಂಡ ಬೆಳ್ಪಸದನದೊಳ್ ಕೀರ್ತಿ ಶ್ರೀ[ಯಂ] ವಾಕ್ಶ್ರೀಯುಮನನುಕರಿಸಿ ಮಂತ್ರಾಕ್ಷರ ನಿಯಮದೊಳಿಂದ್ರನಂ ಬರಿ[ಸಿ]-
(ಅಂತು ಒಂದು ವರ್ಷಂಬರಂ ಕೈಕೊಂಡ ಬೆಳ್ಪಸದನದೊಳ್, ಕೀರ್ತಿ ಶ್ರೀಯಂ ವಾಕ್ ಶ್ರೀಯುಮನ್ ಅನುಕರಿಸಿ, ಮಂತ್ರಾಕ್ಷರ ನಿಯಮದೊಳ್ ಇಂದ್ರನಂ ಬರಿಸಿ)
ಹೀಗೆ ಒಂದು ವರ್ಷದವರೆಗೂ ಮಾಡಿಕೊಂಡ ಬಿಳಿಯ ಅಲಂಕಾರದ ಮೂಲಕ ಕೀರ್ತಿಶ್ರೀ, ವಾಕ್ಶ್ರೀಯರನ್ನು ಅನುಕರಿಸಿ, ಮಂತ್ರಾಕ್ಷರವನ್ನು ಕ್ರಮವಾಗಿ ಉಚ್ಚರಿಸಿ ಇಂದ್ರನನ್ನು ಬರಮಾಡಿಕೊಂಡಳು.
ಕಂ|| ನೆನೆದ ಮನಂ ಪೆಱಗುಳಿದ |
     ತ್ತೆನೆ ಬೆಳಗುವ ರತ್ನದೀಪ್ತಿ ಸುರಧನು ನೆಗೆದ ||
     ತ್ತೆನೆ ನೈದಿಲ್ಗೊಳನಲರ್ದ |
     ತ್ತೆನೆ ಕಣ್ಗಳ ಬಳಗಮಾಗಳಿಂದ್ರಂ ಬಂದಂ ||೧೩೮||
(ನೆನೆದ ಮನಂ ಪೆಱಗೆ ಉಳಿದತ್ತು ಎನೆ, ಬೆಳಗುವ ರತ್ನದೀಪ್ತಿ ಸುರಧನು ನೆಗೆದತ್ತು ಎನೆ, ನೈದಿಲ್ಗೊಳನ್ ಅಲರ್ದತ್ತು ಎನೆ, ಕಣ್ಗಳ ಬಳಗಂ ಆಗಳ್ ಇಂದ್ರಂ ಬಂದಂ.)
ಕುಂತಿಯ ಬಾಯಿಂದ ಮಂತ್ರವು ಹೊರಬೀಳುವ ಮೊದಲೇ, ರತ್ನಕಾಂತಿಯಿಂದ ಹೊಳೆಯುವ ಕಾಮನ ಬಿಲ್ಲಿನಂತೆ, ನೈದಿಲೆಯ ಕೊಳವೇ ಅರಳಿದಂತೆ, ಸಾವಿರ ಕಣ್ಣಿನ ಇಂದ್ರನು ಕುಂತಿಯ ಎದುರಿಗೆ ಬಂದು ನಿಂತನು.
ಕಂ|| ಬೆಸನೇನೇಗೆಯ್ವುದೊ ನಿನ |
     ಗೊಸೆದೇನಂ ಕುಡುವುದೆಂದೊಡೆಂದಳ್ ಮಕ್ಕಳ್ ||
     ಒಸಗೆಯನೆನಗೀವುದು ನಿ|
     ನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ ||೧೩೯||
(“ಬೆಸನೇನ್ ಎನಗೆ? ಏಗೆಯ್ವುದೊ? ನಿನಗೆ ಒಸೆದು ಏನಂ ಕುಡುವುದು?” ಎಂದೊಡೆ ಎಂದಳ್ “ಮಕ್ಕಳ್  ಒಸಗೆಯನ್ ಎನಗೆ ಈವುದು ನಿನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ”)
‘ಏನು ಕೆಲಸ? ಏನು ಮಾಡಲಿ? ನಿನಗೆ ಒಲಿದು ಏನು ಕೊಡಲಿ?’ ಎಂದು ಇಂದ್ರನು ಕೇಳಿದಾಗ, ‘ನಿನ್ನ ಹಾಗೆ ಅತಿಶಯ ಪರಾಕ್ರಮಿಯಾದ ಮಗುವನ್ನು ಕಂಡು ನಲಿಯುವ ಅವಕಾಶವನ್ನು ನನಗೆ ಕೊಡು’-
ವ|| ಎಂಬುದುಮಾಕೆಯ ಬಗೆದ ಬಗೆಯೊಳೊಂಬಡುವಂತೆ ಕುಲ ಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮನಾದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ ಮದನನ ಸೌಭಾಗ್ಯಮುಮಂ ಕಲ್ಪತರುವಿನುದಾರಶಕ್ತಿಯುಮನೀಶ್ವರನ ಪ್ರಭು ಶಕ್ತಿಯುಮಂ ಜವನ ಬಲ್ಲಾಳ್ತನಮುಮಂ ಸಿಂಹದ ಕಲಿತನಮುಮನವರವರ ದೆಸೆಗಳಿಂ ತೆಗೆದೊಂದು ಮಾಡಿ ಕೊಂತಿಯ ದಿವ್ಯ ಗರ್ಭೋದರಮೆಂಬ ಶುಕ್ತಿ ಪುಟೋದರದೊಳ್ ತನ್ನ ದಿವ್ಯಾಂಶಮೆಂಬ ಮುಕ್ತಾಫಲೋ[ದ] ಬಿಂದುವನಿಂದ್ರಂ ಸಂಕ್ರಮಿಸಿ ನಿಜ ನಿವಾಸಕ್ಕೆ ಪೋದನನ್ನೆಗಮಿತ್ತ ಕೊಂತಿಯುಮಂದಿನ ಬೆಳಗಪ್ಪ ಜಾವದೊಳ್ ಸುಖನಿದ್ರೆಯಾಗಿ-
(ಎಂಬುದುಂ, ಆಕೆಯ ಬಗೆದ ಬಗೆಯೊಳ್ ಒಡಂಬಡುವಂತೆ ಕುಲ ಗಿರಿಗಳ ಬಿಣ್ಪುಮಂ, ಧರಾತಳದ ತಿಣ್ಪುಮನ್, ಆದಿತ್ಯನ ತೇಜದ ಅಗುಂತಿಯುಮಂ, ಚಂದ್ರನ ಕಾಂತಿಯುಮಂ, ಮದನನ ಸೌಭಾಗ್ಯಮುಮಂ, ಕಲ್ಪತರುವಿನ ಉದಾರಶಕ್ತಿಯುಮನ್, ಈಶ್ವರನ ಪ್ರಭು ಶಕ್ತಿಯುಮಂ, ಜವನ ಬಲ್ಲಾಳ್ತನಮುಮಂ, ಸಿಂಹದ ಕಲಿತನಮುಮನ್, ಅವರವರ ದೆಸೆಗಳಿಂ ತೆಗೆದು ಒಂದು ಮಾಡಿ ಕೊಂತಿಯ ದಿವ್ಯ ಗರ್ಭೋದರಮೆಂಬ ಶುಕ್ತಿ ಪುಟೋದರದೊಳ್ ತನ್ನ ದಿವ್ಯಾಂಶಮೆಂಬ ಮುಕ್ತಾಫಲೋದ ಬಿಂದುವನ್ ಇಂದ್ರಂ ಸಂಕ್ರಮಿಸಿ ನಿಜ ನಿವಾಸಕ್ಕೆ ಪೋದನ್. ಅನ್ನೆಗಂ ಇತ್ತ ಕೊಂತಿಯುಂ ಅಂದಿನ ಬೆಳಗಪ್ಪ ಜಾವದೊಳ್ ಸುಖನಿದ್ರೆಯಾಗಿ)
ಎಂದು ಕುಂತಿಯು ಕೇಳಿಕೊಂಡಾಗ ಆಕೆಯ ಮನಸ್ಸಿಗೆ ಒಪ್ಪುವಂತೆ ಕುಲಗಿರಿಗಳ ಭಾರವನ್ನೂ, ಭೂಮಿಯ ತೂಕವನ್ನೂ, ಸೂರ್ಯನ ತೇಜಸ್ಸಿನ ತೀವ್ರತೆಯನ್ನೂ, ಚಂದ್ರನ ಹೊಳಪನ್ನೂ, ಮನ್ಮಥನ ಸೌಭಾಗ್ಯವನ್ನೂ, ಕಲ್ಪತರುವಿನ ಔದಾರ್ಯವನ್ನೂ, ಈಶ್ವರನ ಪ್ರಭುಶಕ್ತಿಯನ್ನೂ, ಯಮನ ಪರಾಕ್ರಮವನ್ನೂ, ಸಿಂಹದ ದಿಟ್ಟತನವನ್ನೂ ಅವರವರ ಕಡೆಯಿಂದ ತೆಗೆದು ಒಂದು ಮಾಡಿ ಕುಂತಿಯ ಬಸಿರೆಂಬ ಮುತ್ತಿನ ಚಿಪ್ಪಿನಲ್ಲಿರಿಸಿ, ತನ್ನ ದಿವ್ಯಾಂಶವೆಂಬ ಮುತ್ತಿನ ಬಿಂದುವನ್ನು ಅದಕ್ಕೆ ಸೇರಿಸಿ ತನ್ನ ಮನೆಗೆ ಹಿಂದಿರುಗಿ ಹೋದನು. ಇತ್ತ ಕುಂತಿಯು ರಾತ್ರಿ ಸುಖವಾಗಿ ನಿದ್ರೆ ಮುಗಿಸಿ, ಬೆಳಗಾಗುವ ಹೊತ್ತಿನಲ್ಲಿ-
ಚಂ|| ಕುಡಿಯುವುದನೇೞುಮಂಬುಧಿಯುಮಂ ಕುಲ ಶೈಲ ಕುಳಂಗಳಂ ತಗು |
     ಳ್ದಡರ್ವುದನೊಂದು ಬಾಳ ರವಿ ತನ್ನಯ ಸೋಗಿಲ ಮೇಗೆ ರಾಗದಿಂ ||
     ಪೊಡರ್ವುದನಂತೆ ದಿಕ್ಕರಿಗಳಂಬುಜ ಪತ್ರ ಪುಟಾಂಬುವಿಂ ಬೆಡಂ |
     ಗಡಸಿರೆ ಮಜ್ಜನಂಬುಗಿಪುದಂ ಸತಿ ಕಂಡೊಸೆದಳ್ ನಿಶಾಂತದೊಳ್ ||೧೪೦||
(ಕುಡಿಯುವುದನ್ ಏೞುಂ ಅಂಬುಧಿಯುಮಂ, ಕುಲ ಶೈಲ ಕುಳಂಗಳಂ ತಗುಳ್ದು ಅಡರ್ವುದನ್, ಒಂದು ಬಾಳ ರವಿ ತನ್ನಯ ಸೋಗಿಲ ಮೇಗೆ ರಾಗದಿಂ ಪೊಡರ್ವುದನ್, ಅಂತೆ ದಿಕ್ಕರಿಗಳ್ ಅಂಬುಜ ಪತ್ರ ಪುಟಾಂಬುವಿಂ ಬೆಡಂಗು ಅಡಸಿರೆ ಮಜ್ಜನಂಬುಗಿಪುದಂ ಸತಿ ಕಂಡು ಒಸೆದಳ್ ನಿಶಾಂತದೊಳ್.)
ಏಳು ಕಡಲುಗಳ ನೀರು ಕುಡಿಯುವುದನ್ನು, ಏಳು ಕುಲಪರ್ವತಗಳನ್ನು ಹತ್ತುವುದನ್ನು, ಎಳೆಯ ಸೂರ್ಯನು ತನ್ನ ಮಡಿಲಿನಲ್ಲಿ ಹೊರಳುವುದನ್ನು, ದಿಕ್ಕರಿಗಳು ಎಳೆಯ ಕಮಲದ ಎಲೆಗಳಿಂದ ಮಾಡಿದ ದೊನ್ನೆಯಲ್ಲಿ ಸ್ನಾನ ಮಾಡಿಸುವುದನ್ನು ಕತ್ತಲು ಮುಗಿಯುವ ಹೊತ್ತಿನಲ್ಲಿ ಕುಂತಿಯು ಕನಸಿನಲ್ಲಿ ಕಂಡು ಸಂತಸಪಟ್ಟಳು.
ವ|| ಅಂತು ಕಂಡು ಮುನಿಕುಮಾರರೋದುವ ವೇದನಿನಾದದಿಂ ವಿಗತ ನಿದ್ರೆಯಾಗಿ ಪಾಂಡುರಾಜಂಗಮಲ್ಲಿಯ ಮುನಿಜನಂಗಳ್ಗಮಱಿಪಿದೊಡವರಾ ಕನಸುಗಳ್ಗೆ ಸಂತೋಷಂಬಟ್ಟು-
(ಅಂತು ಕಂಡು, ಮುನಿಕುಮಾರರ್ ಓದುವ ವೇದನಿನಾದದಿಂ ವಿಗತ ನಿದ್ರೆಯಾಗಿ, ಪಾಂಡುರಾಜಂಗಂ ಅಲ್ಲಿಯ ಮುನಿಜನಂಗಳ್ಗಂ ಅಱಿಪಿದೊಡೆ, ಅವರ್ ಆ ಕನಸುಗಳ್ಗೆ ಸಂತೋಷಂಬಟ್ಟು,)
ವ| ಹಾಗೆ ಕನಸು ಕಂಡು ಮುನಿಕುಮಾರರು ಓದುವ ವೇದದ ಧ್ವನಿಯಿಂದ ನಿದ್ರೆ ತಿಳಿದು, ತನ್ನ ಕನಸನ್ನು ಪಾಂಡುರಾಜನಿಗೂ, ಅಲ್ಲಿಯ ಮುನಿಜನರಿಗೂ ತಿಳಿಸಿದಾಗ, ಅವರೆಲ್ಲ ಸಂತಸಪಟ್ಟು-
ಚಂ|| ಕುಡಿವುದಱಿಂದಮಬ್ಧಿಗಳನಬ್ಧಿ ಪರೀತ ಮಹೀಶನಂ ತಗು |
     ಳ್ದಡರ್ವುದಱಿಂ ಕುಲಾದ್ರಿ ಪರಿವೇಷ್ಟಿತನಂ ತರುಣಾರ್ಕನೞ್ಕಱಿಂ ||
     ಪೊಡರ್ವುದಱಿಂದಮೆಂದುಮುದಿತೋದಿತನಂ ದಿಗಿಭಂಗಳೆಂಟುಮೊ ||
     ಳ್ಪೊಡರಿಸಿ ಮಜ್ಜನಂಬುಗಿಸೆ ಕಂಡುದಱಿಂ ಕಮಲಾಭಿರಾಮನಂ ||೧೪೧||
(ಕುಡಿವುದಱಿಂದಂ ಅಬ್ಧಿಗಳನ್ ಅಬ್ಧಿ ಪರೀತ ಮಹೀಶನಂ, ತಗುಳ್ದು, ಅಡರ್ವುದಱಿಂ ಕುಲಾದ್ರಿ ಪರಿವೇಷ್ಟಿತನಂ, ತರುಣಾರ್ಕನ್ ಅೞ್ಕಱಿಂ ಪೊಡರ್ವುದಱಿಂದಂ ಎಂದುಂ ಉದಿತೋದಿತನಂ, ದಿಗಿಭಂಗಳ್ ಎಂಟುಂ ಒಳ್ಪೊಡರಿಸಿ ಮಜ್ಜನಂಬುಗಿಸೆ ಕಂಡುದಱಿಂ ಕಮಲಾಭಿರಾಮನಂ)
ಏಳು ಕಡಲುಗಳನ್ನು ಕುಡಿಯುವುದು ಕಡಲಿನವರೆಗೂ ಇರುವ ಭೂಮಿಗೆ ರಾಜನಾಗುತ್ತಾನೆ ಎಂಬುದನ್ನು, ಕುಲಪರ್ವತಗಳನ್ನು ಹತ್ತುವುದು ಅವುಗಳಿಂದ ಸುತ್ತುವರಿಯುವುದನ್ನು, ಎಳೆಯ ಸೂರ್ಯನು ಅಕ್ಕರೆಯಿಂದ ಹೊರಳುವುದು ಮೇಲ್ಮುಖವಾದ ಏಳಿಗೆಯನ್ನು, ಎಂಟು ದಿಕ್ಕರಿಗಳು ಮಂಗಲಸ್ನಾನ ಮಾಡಿಸುವುದು ಕಮಲದಂತೆ ಸುಂದರವಾದ ಮುಖವನ್ನು (ಸೂಚಿಸುತ್ತದೆ) - 
(ಕುಡಿಯುವುದನ್ ಏೞುಂ ಅಂಬುಧಿಯುಮಂ, ಕುಲ ಶೈಲ ಕುಳಂಗಳಂ ತಗುಳ್ದು ಅಡರ್ವುದನ್, ಒಂದು ಬಾಳ ರವಿ ತನ್ನಯ ಸೋಗಿಲ ಮೇಗೆ ರಾಗದಿಂ ಪೊಡರ್ವುದನ್, ಅಂತೆ ದಿಕ್ಕರಿಗಳ್ ಅಂಬುಜ ಪತ್ರ ಪುಟಾಂಬುವಿಂ ಬೆಡಂಗು ಅಡಸಿರೆ ಮಜ್ಜನಂಬುಗಿಪುದಂ ಸತಿ ಕಂಡು ಒಸೆದಳ್ ನಿಶಾಂತದೊಳ್.)
ಏಳು ಕಡಲುಗಳ ನೀರು ಕುಡಿಯುವುದನ್ನು, ಏಳು ಕುಲಪರ್ವತಗಳನ್ನು ಹತ್ತುವುದನ್ನು, ಎಳೆಯ ಸೂರ್ಯನು ತನ್ನ ಮಡಿಲಿನಲ್ಲಿ ಹೊರಳುವುದನ್ನು, ದಿಕ್ಕರಿಗಳು ಎಳೆಯ ಕಮಲದ ಎಲೆಗಳಿಂದ ಮಾಡಿದ ದೊನ್ನೆಯಲ್ಲಿ ಸ್ನಾನ ಮಾಡಿಸುವುದನ್ನು ಕತ್ತಲು ಮುಗಿಯುವ ಹೊತ್ತಿನಲ್ಲಿ ಕುಂತಿಯು ಕನಸಿನಲ್ಲಿ ಕಂಡು ಸಂತಸಪಟ್ಟಳು.
ವ|| ಅಂತು ಕಂಡು ಮುನಿಕುಮಾರರೋದುವ ವೇದನಿನಾದದಿಂ ವಿಗತ ನಿದ್ರೆಯಾಗಿ ಪಾಂಡುರಾಜಂಗಮಲ್ಲಿಯ ಮುನಿಜನಂಗಳ್ಗಮಱಿಪಿದೊಡವರಾ ಕನಸುಗಳ್ಗೆ ಸಂತೋಷಂಬಟ್ಟು-
(ಅಂತು ಕಂಡು, ಮುನಿಕುಮಾರರ್ ಓದುವ ವೇದನಿನಾದದಿಂ ವಿಗತ ನಿದ್ರೆಯಾಗಿ, ಪಾಂಡುರಾಜಂಗಂ ಅಲ್ಲಿಯ ಮುನಿಜನಂಗಳ್ಗಂ ಅಱಿಪಿದೊಡೆ, ಅವರ್ ಆ ಕನಸುಗಳ್ಗೆ ಸಂತೋಷಂಬಟ್ಟು,)
ವ| ಹಾಗೆ ಕನಸು ಕಂಡು ಮುನಿಕುಮಾರರು ಓದುವ ವೇದದ ಧ್ವನಿಯಿಂದ ನಿದ್ರೆ ತಿಳಿದು, ತನ್ನ ಕನಸನ್ನು ಪಾಂಡುರಾಜನಿಗೂ, ಅಲ್ಲಿಯ ಮುನಿಜನರಿಗೂ ತಿಳಿಸಿದಾಗ, ಅವರೆಲ್ಲ ಸಂತಸಪಟ್ಟು-

ಉ|| ಉರ್ಚಿದ ಬಾಳೊಳಾತ್ಮ ಮುಖಬಿಂಬಮನೞ್ತಿಯೆ ನೋಡಲುಂ ಮನಂ |
     ಪೆರ್ಚಿ ಧನುರ್ಲತಾಗುಣ ನಿನಾದಮನಾಲಿಸಿ ಕೇಳಲುಂ ಮನಂ ||
     ಬೆರ್ಚದೆ ಸಿಂಹ ಪೋತಕಮನೋವಲುಮಾಕೆಯ ದೋಹಳಂ ಕರಂ |
     ಪೆರ್ಚಿದುದಾ ಗುಣಾರ್ಣವನ ಮುಂದಣ ಬೀರಮನಂ[ದೆ] ತೋರ್ಪವೋಲ್ ||೧೪೨||
(ಉರ್ಚಿದ ಬಾಳೊಳ್ ಆತ್ಮ ಮುಖಬಿಂಬಮನ್ ಅೞ್ತಿಯೆ ನೋಡಲುಂ, ಮನಂಪೆರ್ಚಿ ಧನುರ್ಲತಾ ಗುಣ ನಿನಾದಮನ್ ಆಲಿಸಿ ಕೇಳಲುಂ, ಮನಂ ಬೆರ್ಚದೆ ಸಿಂಹ ಪೋತಕಮನ್ ಓವಲುಂ, ಆಕೆಯ ದೋಹಳಂ ಕರಂ ಪೆರ್ಚಿದುದು ಆ ಗುಣಾರ್ಣವನ ಮುಂದಣ ಬೀರಮನ್ ಅಂದೆ ತೋರ್ಪವೋಲ್.)
ಮುಂದೆ ಹುಟ್ಟಲಿರುವ ಗುಣಾರ್ಣವನ ಶೌರ್ಯವನ್ನು ಬಸಿರಿಯಾದ ಆಕೆಯ ಬಯಕೆಗಳು ಮೊದಲೇ ಸೂಚಿಸಿದವು: ಆಕೆಗೆ ಒರೆಯಿಂದೆಳೆದ ಕತ್ತಿಯಲ್ಲಿ ಮುಖ ನೋಡಿಕೊಳ್ಳುವ, ಬಿಲ್ಬಳ್ಳಿಯ ಠೇಂಕಾರವನ್ನು ಆಲಿಸುವ, ಯಾವುದೇ ಅಂಜಿಕೆಯಿಲ್ಲದೆ ಸಿಂಹದ ಮರಿಯೊಂದಿಗೆ ಪ್ರೀತಿಯಿಂದ ಆಟವಾಡುವ ಬಯಕೆಗಳು ಉಂಟಾದವು.
ವ|| ಮತ್ತಮೇೞುಂ ಸಮುದ್ರಂಗಳ ನೀರನೊಂದು ಮಾಡಿ ಮೀಯಲುಂ ವೇಳಾವನ ಲತಾಗೃಹೋದರ ಪುಳಿನಸ್ಥಳ ಪರಿಸರ ಪ್ರದೇಶದೊಳ್ ತೊೞಲಲುಮೞ್ತಿಯಾಗೆ-
(ಮತ್ತಂ ಏೞುಂ ಸಮುದ್ರಂಗಳ ನೀರನ್ ಒಂದು ಮಾಡಿ ಮೀಯಲುಂ, ವೇಳಾವನ ಲತಾಗೃಹೋದರ ಪುಳಿನಸ್ಥಳ ಪರಿಸರ ಪ್ರದೇಶದೊಳ್ ತೊೞಲಲುಂ ಅೞ್ತಿಯಾಗೆ,)
ಅದೂ ಅಲ್ಲದೆ ಏಳು ಸಮುದ್ರಗಳ ನೀರನ್ನು ಒಂದು ಮಾಡಿ ಮೀಯಲೂ, ಸಮುದ್ರದಂಚಿನ ಕಾಡುಗಳಲ್ಲಿ, ಅಲ್ಲಿಯ ಮರಳಿನಲ್ಲಿ ತಿರುಗಾಡುವ ಬಯಕೆಯಾಯಿತು.
ಕಂ|| ಬಳೆದ ನಿತಂಬದೆ ಕಾಂಚೀ |
     ಕಳಾಪಮಂ ಕಟ್ಟಲಣಮೆ ನೆಱೆಯದಿದೆಂದ ||
     ಗ್ಗಳಿಸಿ ಕುಳಿಕೆಗಳಿನೇಂ ಕ |
     ಣ್ಗೊಳಿಸಿದುದೋ ಸುಭಗೆಯಾದ ಸುದತಿಯ ಗರ್ಭಂ ||೧೪೩||
(ಬಳೆದ ನಿತಂಬದೆ ಕಾಂಚೀ ಕಳಾಪಮಂ ಕಟ್ಟಲ್ ಅಣಮೆ ನೆಱೆಯದು ಇದೆಂದು ಅಗ್ಗಳಿಸಿ, ಕುಳಿಕೆಗಳಿನ್ ಏಂ ಕಣ್ಗೊಳಿಸಿದುದೋ ಸುಭಗೆಯಾದ ಸುದತಿಯ ಗರ್ಭಂ!)
ಅವಳ ಬಸಿರು ಬೆಳೆಯುತ್ತ ಹೋದಂತೆ ಸೊಂಟಕ್ಕೆ ಒಡ್ಯಾಣವನ್ನು ತೊಡಲು ಸಹ ಸಾಧ್ಯವಾಗದಂತಾಯಿತು. ಹಾಗಾಗಿ ಅವಳ ಸೊಂಟವನ್ನು ಕುಣಿಕೆ ಹಾಕಿದ ಹಗ್ಗವು ಅಲಂಕರಿಸಿತು. (ಕುಳಿಕೆ ಎಂದರೆ ಏನು? ಕುಣಿಕೆ ಎಂದರೆ ಹಗ್ಗದಲ್ಲಿ ಜೀರುಗಂಟು ಹಾಕುವುದು, ಸರಗಂಟು ಹಾಕುವುದು ಎಂಬ ಅರ್ಥವನ್ನು ಜಿ.ವೆಂಕಟಸುಬ್ಬಯ್ಯನವರ ನಿಘಂಟು ಕೊಡುತ್ತದೆ. ಹಗ್ಗವನ್ನು ಒಂದು ವಿಶಿಷ್ಟ ಕ್ರಮದಲ್ಲಿ ಗಂಟು ಹಾಕಿ ಅದರ ಎರಡು ತುದಿಗಳ ಪೈಕಿ ಒಂದನ್ನು ಹಿಡಿದು ಎಳೆದಾಗ ಗಂಟು ಬಿಚ್ಚಿಕೊಳ್ಳುವಂತೆ ಮಾಡುವ ವಿಧಾನ ಇದೆ. ಪಂಪ ಇಲ್ಲಿ ಅದನ್ನೇ ಸೂಚಿಸುತ್ತಿರಬಹುದು. ಒಡ್ಯಾಣವನ್ನು ತೊಡಲು ಸಾಧ್ಯವಾಗದ್ದರಿಂದ ಕುಂತಿ ಹಗ್ಗವನ್ನು ಸೊಂಟಕ್ಕೆ ಸರಗಂಟು ಹಾಕಿ ಕಟ್ಟಿಕೊಂಡಳು ಎಂಬ ಅರ್ಥವಿರಬಹುದೆ? ಒಡ್ಯಾಣವು ಏಕಕಾಲಕ್ಕೆ, ಒಂದು ಆಭರಣವೂ ಸೊಂಟಕ್ಕೆ ಸುತ್ತಿದ ಬಟ್ಟೆಯು ಜಾರಿಹೋಗದಂತೆ ಹಿಡಿದುನಿಲ್ಲಿಸುವ ಒಂದು ಸಾಧನವೂ ಆಗಿರಬಹುದೆ?)
ವ|| ಅಂತು ತೆಕ್ಕನೆ ತೀವಿದ ಮೆಯ್ಯೊಳಲರ್ದ ಸಂಪಗೆಯರಲಂತೆ ಬೆಳರ್ತ ಬಣ್ಣಂ ಗುಣಾರ್ಣವಂಗೆ ಮಾಡಿದ ಬಣ್ಣದಂತೆ ಸೊಗಯಿಸಿ ಬಳೆದು-
(ಅಂತು ತೆಕ್ಕನೆ ತೀವಿದ ಮೆಯ್ಯೊಳ್ ಅಲರ್ದ ಸಂಪಗೆಯ ಅರಲಂತೆ, ಬೆಳರ್ತ ಬಣ್ಣಂ ಗುಣಾರ್ಣವಂಗೆ ಮಾಡಿದ ಬಣ್ಣದಂತೆ ಸೊಗಯಿಸಿ ಬಳೆದು,)
ಹಾಗೆ ತುಂಬಿಕೊಂಡ ಅವಳ ಮೈಯು ಅರಳಿದ ಸಂಪಗೆಯ ಬಣ್ಣವನ್ನು ತಳೆಯಿತು. ಆ ಬಣ್ಣವು ಗುಣಾರ್ಣವನಿಗೆ ಮಾಡಿದ ಬಣ್ಣದಂತೆ (ಎಂದರೆ ಬಟ್ಟೆಯಂತೆ?) ಶೋಭಿಸಿತು.
ಕಂ|| ತುಡುಗೆಗಳೊಳ್ ಸರಿಗೆಯುಮಂ |
     ಕಡುವಿಣ್ಣಿತ್ತೆನಿಸಿ ನಡೆದುಮೋರಡಿಯನಣಂ ||
     ನಡೆಯಲುಮಾಱದೆ ಕೆಮ್ಮನೆ |
     ಬಿಡದಾರಯ್ವನಿತುಮಾಗೆ ಬಳೆದುದು ಗರ್ಭಂ ||೧೪೪||
(ತುಡುಗೆಗಳೊಳ್ ಸರಿಗೆಯುಮಂ ಕಡುವಿಣ್ಣಿತ್ತು ಎನಿಸಿ, ನಡೆದುಂ ಓರಡಿಯನ್ ಅಣಂ ನಡೆಯಲುಂ ಆಱದೆ ಕೆಮ್ಮನೆ ಬಿಡದೆ ಆರಯ್ವನಿತುಂ ಆಗೆ, ಬಳೆದುದು ಗರ್ಭಂ.)
ಬಸಿರಿನ ಭಾರದಿಂದಾಗಿ ಸರಿಗೆಯಂತಹ ಚಿಕ್ಕ ಆಭರಣವನ್ನು ಹೊರುವುದು ಸಹ ಅವಳಿಗೆ ಕಷ್ಟವೆನಿಸುತ್ತಿತ್ತು. ಒಂದೇ ಒಂದು ಹೆಜ್ಜೆ ನಡೆದರೆ ಸಾಕು, ಮುಂದೆ ನಡೆಯಲು ಸಾಧ್ಯವೇ ಆಗದೆ ಸುಧಾರಿಸಿಕೊಳ್ಳಬೇಕಾಗಿ ಬರುತ್ತಿತ್ತು.
ವ|| ಅಂತಾ ಬಳೆದ ಗರ್ಭದೊಳ್ ಸಂಪೂರ್ಣ ಪ್ರಸವಸಮಯಂ ದೊರೆಕೊಳೆ ಗ್ರಹಂಗಳೆಲ್ಲಂ ತಂತಮ್ಮುಚ್ಚ ಸ್ಥಾನಂಗಳೊಳಿರ್ದು ಷಡ್ವರ್ಗ ಸಿದ್ಧಿಯನುಂಟುಮಾಡೆ ಶುಭಲಗ್ನೋದಯದೊಳ್-
(ಅಂತು ಆ ಬಳೆದ ಗರ್ಭದೊಳ್ ಸಂಪೂರ್ಣ ಪ್ರಸವಸಮಯಂ ದೊರೆಕೊಳೆ, ಗ್ರಹಂಗಳೆಲ್ಲಂ ತಂತಮ್ಮ ಉಚ್ಚ ಸ್ಥಾನಂಗಳೊಳ್ ಇರ್ದು ಷಡ್ವರ್ಗ ಸಿದ್ಧಿಯನ್ ಉಂಟುಮಾಡೆ, ಶುಭಲಗ್ನೋದಯದೊಳ್,)
ಹಾಗೆ ಬೆಳೆದ ಬಸಿರಿಗೆ ಹೆರಿಗೆಯ ಹೊತ್ತು ಕೂಡಿಬಂದಾಗ, ಗ್ರಹಗಳೆಲ್ಲವೂ ತಮ್ಮ ತಮ್ಮ ಉಚ್ಚ ಸ್ಥಾನದಲ್ಲಿದ್ದು ಷಡ್ವರ್ಗಸಿದ್ಧಿಯನ್ನುಂಟು ಮಾಡುವಂತಿದ್ದು, ಶುಭಲಗ್ನ ಪ್ರಾಪ್ತವಾಗಲು,
ಕಂ|| ಭರತಕುಲ ಗಗನ ದಿನಕರ |
     ನರಾತಿಕುಳಕಮಳಹಿಮಕರಂ ಶಿಶು ತೇಜೋ ||
     ವಿರಚನೆಯುಂ ಕಾಂತಿಯುಮಾ |
     ವರಿಸಿರೆ ಗರ್ಭೋದಯಾದ್ರಿಯಿಂದುಯಿಸಿದಂ ||೧೪೫||
(ಭರತಕುಲ ಗಗನ ದಿನಕರನ್, ಅರಾತಿಕುಳಕಮಳಹಿಮಕರಂ, ಶಿಶು ತೇಜೋ ವಿರಚನೆಯುಂ ಕಾಂತಿಯುಂ ಆವರಿಸಿರೆ, ಗರ್ಭೋದಯಾದ್ರಿಯಿಂದ ಉದಯಿಸಿದಂ.)
ಭರತಕುಲವೆಂಬ ಆಗಸಕ್ಕೆ ಚಂದ್ರನಂತೆ ಇರುವವನೂ, ವೈರಿಕುಲವೆಂಬ ಕಮಲಗಳಿಗೆ ತಂಗದಿರನೂ, ಶಿಶುವಿನ ತೇಜಸ್ಸು, ಕಾಂತಿಗಳಿಂದ ಕೂಡಿದವನೂ ಆದ (ಅರ್ಜುನನು) ಕುಂತಿಯ ಬಸಿರೆಂಬ ಮೂಡಲಬೆಟ್ಟದಿಂದ ಹುಟ್ಟಿಬಂದನು.
ಕಂ|| ಉದಯಿಸುವುದುಮಮೃತಾಂಶುವಿ |
     ನುದಯದೊಳಂಭೋಧಿ ವೇಲೆ ಭೋರ್ಗರೆವವೊಲೊ ||
     ರ್ಮೊದಲೆಸೆದುವು ಘನಪಥದೊಳ್ |
     ತ್ರಿದಶಕರಾಹತಿಯಿನೊಡನೆ ಸುರದುಂದುಭಿಗಳ್ ||೧೪೬||
(ಉದಯಿಸುವುದುಂ, ಅಮೃತಾಂಶುವಿನ ಉದಯದೊಳ್ ಅಂಭೋಧಿ ವೇಲೆ ಭೋರ್ಗರೆವವೊಲ್, ಒರ್ಮೊದಲ್ ಎಸೆದುವು ಘನಪಥದೊಳ್ ತ್ರಿದಶಕರ ಆಹತಿಯಿನ್ ಒಡನೆ ಸುರದುಂದುಭಿಗಳ್.)
ಹುಟ್ಟಿ ಬಂದಾಗ, ಚಂದ್ರನು ಹುಟ್ಟಿದ ಕೂಡಲೇ ಕಡಲಿನ ಅಲೆಗಳು ಭೋರ್ಗರೆಯುವಂತೆ, ಆಗಸದ ಹಾದಿಯಲ್ಲಿ ದೇವತೆಗಳು ದುಂದುಭಿಗಳನ್ನು ಒಮ್ಮೆಲೇ ಬಾರಿಸಿದ ಸದ್ದು ಕೇಳಿಬಂದಿತು.
ವ|| ಅಂತು ಮೊೞಗುವ ಸುರದುಂದುಭಿಗಳುಂ ಪರಸುವ ಜಯಜಯ ಧ್ವನಿಗಳುಂ ಬೆರಸು ದೇವೇಂದ್ರಂ ಬರೆ ದೇವವಿಮಾನಂಗಳೆಲ್ಲಂ ಶತಶೃಂಗಪರ್ವತಮಂ ಮುಸುಱಿಕೊಂಡು-
(ಅಂತು ಮೊೞಗುವ ಸುರದುಂದುಭಿಗಳುಂ, ಪರಸುವ ಜಯಜಯ ಧ್ವನಿಗಳುಂ ಬೆರಸು ದೇವೇಂದ್ರಂ ಬರೆ, ದೇವವಿಮಾನಂಗಳೆಲ್ಲಂ ಶತಶೃಂಗಪರ್ವತಮಂ ಮುಸುಱಿಕೊಂಡು,)
ಹಾಗೆ ಮೊಳಗುವ ದೇವದುಂದುಭಿಗಳೊಂದಿಗೆ, ಹರಸುವ ಜಯಜಯಧ್ವನಿಗಳೊಂದಿಗೆ ದೇವೇಂದ್ರನು ಬಂದಾಗ ದೇವವಿಮಾನಗಳೆಲ್ಲ ಶತಶೃಂಗಪುರವನ್ನು ಮುತ್ತಿಕೊಂಡು
ಕಂ|| ದೇವರ ಪಱೆಗಳ ರವದೊಳ್ |
     ದೇವರ ಸುರಿವರಲ ಸರಿಯ ಬೆಳ್ಸರಿಯೊಳ್ ತ ||
     ದ್ದೇವ ವಿಮಾನಾವಳಿಯೊಳ್ |
     ತೀವಿದುದೊರ್ಮೊದಲೆ ಗಗನದಿಂ ಧರೆ ಮಧ್ಯಂ ||೧೪೭||
(ದೇವರ ಪಱೆಗಳ ರವದೊಳ್, ದೇವರ ಸುರಿವರಲ ಸರಿಯ ಬೆಳ್ಸರಿಯೊಳ್, ತದ್ದೇವ ವಿಮಾನಾವಳಿಯೊಳ್ ತೀವಿದುದೊರ್ಮೊದಲೆ ಗಗನದಿಂ ಧರೆ ಮಧ್ಯಂ.)
ನೆಲ, ಬಾನುಗಳು ದೇವತೆಗಳು ಬಾರಿಸುವ ಭೇರಿಗಳ ಶಬ್ದದಿಂದ, ಸುರಿಸುವ ಹೂಮಳೆಯಿಂದ, ದೇವವಿಮಾನಗಳಿಂದ ತುಂಬಿಹೋದವು.
ವ|| ಅಂತು ಹಿರಣ್ಯಗರ್ಭಬ್ರಹ್ಮಂ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜಾಗಸ್ತ್ಯ ಪುಲಸ್ತ್ಯ ನಾರದ ಪ್ರಮುಖರಪ್ಪ ದಿವ್ಯ ಮುನಿಪತಿಗಳುಮೇಕಾದಶ ರುದ್ರರುಂ ದ್ವಾದಶಾದಿತ್ಯರುಮಷ್ಟವಸುಗಳುಮಶ್ವಿನೀದೇವರುಂ ಮೊದಲಾಗೆ ಮೂವತ್ತಮೂದೇವರುಂ ಇಂದ್ರಂ ಬೆರಸು ವೈಮಾನಿಕ ದೇವರುಂ ನೆರೆದು ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನ್ಮೋತ್ಸವಮಂ ಮಾಡಿ-
(ಅಂತು ಹಿರಣ್ಯಗರ್ಭಬ್ರಹ್ಮಂ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜ ಅಗಸ್ತ್ಯ ಪುಲಸ್ತ್ಯ ನಾರದ ಪ್ರಮುಖರಪ್ಪ ದಿವ್ಯ ಮುನಿಪತಿಗಳುಂ, ಏಕಾದಶ ರುದ್ರರುಂ, ದ್ವಾದಶಾದಿತ್ಯರುಂ, ಅಷ್ಟವಸುಗಳುಂ, ಅಶ್ವಿನೀದೇವರುಂ ಮೊದಲಾಗೆ ಮೂವತ್ತಮೂದೇವರುಂ, ಇಂದ್ರಂ ಬೆರಸು ವೈಮಾನಿಕ ದೇವರುಂ ನೆರೆದು, ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನ್ಮೋತ್ಸವಮಂ ಮಾಡಿ,)
ಹಾಗೆ ಹಿರಣ್ಯಗರ್ಭಬ್ರಹ್ಮನಿಂದ ಮೊದಲ್ಗೊಂಡು ವ್ಯಾಸ, ಕಶ್ಯಪ, ವಸಿಷ್ಠ, ವಾಲ್ಮೀಕಿ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಅಗಸ್ತ್ಯ, ಪುಲಸ್ತ್ಯ, ನಾರದರೇ ಮುಂತಾದ ಪ್ರಮುಖರಾದ ಮುನಿಗಳೂ, ಏಕಾದಶ ರುದ್ರರೂ, ಹನ್ನೆರಡು ಆದಿತ್ಯರೂ, ಅಷ್ಟವಸುಗಳೂ, ಅಶ್ವಿನೀದೇವತೆಗಳೂ ಅಲ್ಲದೆ ಮೂವತ್ತಮೂರು ದೇವರುಗಳೂ, ಇಂದ್ರನೂ, ವೈಮಾನಿಕ ದೇವರೂ ಸೇರಿ, ಪಾಂಡುರಾಜನನ್ನೂ ಕುಂತಿಯನ್ನೂ ಹರಸಿ, ಕುಂತಿಗೆ ಜನ್ಮೋತ್ಸವವನ್ನು ಮಾಡಿ-
ಕಂ|| ನೋಡುವನಾ ಬ್ರಹ್ಮಂ  ಮುಂ |
     ಡಾಡುವನಮರೇಂದ್ರನಿಂದ್ರನಚ್ಚರಸೆಯರೆ ||
     ೞ್ದಾಡುವರೆಂದೊಡೆ ಪೊಗೞ |
     ಲ್ವೇಡ ಗುಣಾರ್ಣವನ ಜನ್ಮದಿನದ ಬೆಡಂಗಂ ||೧೪೮||
(ನೋಡುವನ್ ಆ ಬ್ರಹ್ಮಂ,  ಮುಂಡಾಡುವನ್ ಅಮರೇಂದ್ರನ್, ಇಂದ್ರನ ಅಚ್ಚರಸೆಯರ್ ಎೞ್ದಾಡುವರ್ ಎಂದೊಡೆ, ಪೊಗೞಲ್ವೇಡ ಗುಣಾರ್ಣವನ ಜನ್ಮದಿನದ ಬೆಡಂಗಂ?)
ಬ್ರಹ್ಮನೇ ನೋಡುವವನು, ದೇವತೆಗಳ ರಾಜನಾದ ಇಂದ್ರನೇ ಮುದ್ದಾಡುವವನು, ಇಂದ್ರನ ಅಪ್ಸರೆಯರೇ ಮಗುವನ್ನು ಎತ್ತಿ ಆಡಿಸಲು ಕಿತ್ತಾಡುವವರು – ಇಂತಹ ಗುಣಾರ್ಣವನ ಹುಟ್ಟಿದ ದಿನದ ಸೊಬಗನ್ನು ಹೊಗಳದಿರಲು ಸಾಧ್ಯವೆ?
ವ|| ಅಂತು ಪಿರಿದುಮೊಸಗೆಯಂ ಮಾಡಿ ದೇವಸಭೆಯುಂ ಬ್ರಹ್ಮಸಭೆಯುಮೊಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳೊಳೀತಂ ಸಕಲ ಭುವನ ಸಂಸ್ತೂಯಮಾನಂ ಚಾಲುಕ್ಯವಂಶೋದ್ಭವಂ ಶ್ರೀಮದರಿಕೇಸರಿ ವಿಕ್ರಮಾರ್ಜುನನುದಾತ್ತನಾರಾಯಣಂ ಪ್ರಚಂಡಮಾರ್ತಾಂಡನುದಾರ ಮಹೇಶ್ವರಂ ಕದನತ್ರಿಣೇತ್ರಂ ಮನುಜಮಾಂಧಾತಂ ಪ್ರತಿಜ್ಞಾ ಗಾಂಗೇಯಂ ಶೌಚಾಂಜನೇಯನಕಳಂಕರಾಮಂ ಸಾಹಸ ಭೀಮಂ ಪ್ರತ್ಯಕ್ಷ ಜೀಮೂತವಾಹನಂ ಜಗದೇಕಮಲ್ಲಂ ಪರಸೈನ್ಯಭೈರವಂ ಅತಿರಥ ಮಥನಂ ವೈರಿಗಜಘಟಾವಿಘಟನಂ ವಿದ್ವಿಷ್ಟ ವಿದ್ರಾವಣನರಾತಿ ಕಾಳಾನಳಂ ರಿಪುಕುರಂಗ ಕಂಠೀರವಂ ವಿಕ್ರಾಂತ ತುಂಗಂ ಪರಾಕ್ರಮಧವಳಂ ಸಮರೈಕಮೇರು ಶರಣಾಗತ ಜಲನಿಧಿ ನಿಲಯ ವಿಭೂಷಣಂ ಮನುನಿದಾನನನೂನದಾನಿ ಲೋಕೈಕ ಕಲ್ಪದ್ರುಮಂ ಗಜಗಮ ರಾಜಪುತ್ರನಾರೂಢ ಸರ್ವಜ್ಞಂ ಗಂಧೇಭ ವಿದ್ಯಾಧರಂ ನೃಪ ಪರಮಾತ್ಮಂ ವಿಬುಧ ವನಜವನ ಕಳಹಂಸಂ ಸುರತ ಮಕರಧ್ವಜಂ ಸಹಜಮನೋಜಂ ಆಂಧ್ರಿ ಕುಚ ಕಳಶ ಪಲ್ಲವಂ ಕರ್ಣಾ[ಟೀ] ಕರ್ಣಪೂರಂ ಲಾಟೀ ಲಲಾಮಂ ಕೇರಳೀ ಕೇಳಿ ಕಂದರ್ಪಂ ಸಂಸಾರ ಸಾರೋದಯಂ ಮಱುವಕ್ಕದಲ್ಲೞಂ ನೋಡುತ್ತೆ ಗೆಲ್ವಂ ಪಾಣ್ಬರಂಕುಸಂ ಅಮ್ಮನ ಗಂಧವಾರಣಂ ಪಡೆ ಮೆಚ್ಚೆ ಗಂಡಂ ಪ್ರಿಯಗಳ್ಳಂ ಗುಣನಿಧಿ ಗುಣಾರ್ಣವಂ ಸಾಮಂತಚೂಡಾಮಣಿಯೆಂದಿಂತಿವು ಮೊದಲಾಗೆ ಪಲವುಮಷ್ಟೋತ್ತರಶತನಾಮಂಗಳನಿಟ್ಟು ವಿಶೇಷಾಶೀರ್ವಚನಂಗಳಿಂ ಪರಸಿ-
(ಅಂತು ಪಿರಿದುಂ ಒಸಗೆಯಂ ಮಾಡಿ, ದೇವಸಭೆಯುಂ ಬ್ರಹ್ಮಸಭೆಯುಂ ಒಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳೊಳೀತಂ ಸಕಲ ಭುವನ ಸಂಸ್ತೂಯಮಾನಂ, ಚಾಲುಕ್ಯವಂಶೋದ್ಭವಂ, ಶ್ರೀಮದರಿಕೇಸರಿ ವಿಕ್ರಮಾರ್ಜುನನ್, ಉದಾತ್ತನಾರಾಯಣಂ, ಪ್ರಚಂಡಮಾರ್ತಾಂಡನ್, ಉದಾರ  ಮಹೇಶ್ವರಂ, ಕದನತ್ರಿಣೇತ್ರಂ, ಮನುಜಮಾಂಧಾತಂ, ಪ್ರತಿಜ್ಞಾ ಗಾಂಗೇಯಂ, ಶೌಚಾಂಜನೇಯನ್ ಅಕಳಂಕರಾಮಂ, ಸಾಹಸ ಭೀಮಂ,  ಪ್ರತ್ಯಕ್ಷ ಜೀಮೂತವಾಹನಂ, ಜಗದೇಕಮಲ್ಲಂ, ಪರಸೈನ್ಯಭೈರವಂ, ಅತಿರಥ ಮಥನಂ, ವೈರಿಗಜಘಟಾವಿಘಟನಂ, ವಿದ್ವಿಷ್ಟ ವಿದ್ರಾವಣನ್ ಅರಾತಿ ಕಾಳಾನಳಂ, ರಿಪುಕುರಂಗ ಕಂಠೀರವಂ, ವಿಕ್ರಾಂತ ತುಂಗಂ, ಪರಾಕ್ರಮಧವಳಂ, ಸಮರೈಕಮೇರು, ಶರಣಾಗತ ಜಲನಿಧಿ, ನಿಲಯ ವಿಭೂಷಣಂ, ಮನುನಿದಾನನ್, ಅನೂನದಾನಿ, ಲೋಕೈಕ ಕಲ್ಪದ್ರುಮಂ, ಗಜಗಮ ರಾಜಪುತ್ರನ್, ಆರೂಢ ಸರ್ವಜ್ಞಂ, ಗಂಧೇಭ ವಿದ್ಯಾಧರಂ, ನೃಪ ಪರಮಾತ್ಮಂ, ವಿಬುಧ ವನಜವನ ಕಳಹಂಸಂ, ಸುರತ ಮಕರಧ್ವಜಂ, ಸಹಜಮನೋಜಂ, ಆಂಧ್ರೀ ಕುಚ ಕಳಶ ಪಲ್ಲವಂ, ಕರ್ಣಾಟೀ ಕರ್ಣಪೂರಂ, ಲಾಟೀ ಲಲಾಮಂ, ಕೇರಳೀ ಕೇಳಿ ಕಂದರ್ಪಂ, ಸಂಸಾರ ಸಾರೋದಯಂ, ಮಱುವಕ್ಕದಲ್ಲೞಂ, ನೋಡುತ್ತೆ ಗೆಲ್ವಂ, ಪಾಣ್ಬರಂಕುಸಂ, ಅಮ್ಮನ ಗಂಧವಾರಣಂ, ಪಡೆ ಮೆಚ್ಚೆ ಗಂಡಂ, ಪ್ರಿಯಗಳ್ಳಂ, ಗುಣನಿಧಿ, ಗುಣಾರ್ಣವಂ, ಸಾಮಂತಚೂಡಾಮಣಿ ಎಂದಿಂತಿವು ಮೊದಲಾಗೆ ಪಲವುಂ ಅಷ್ಟೋತ್ತರಶತನಾಮಂಗಳನ್ ಇಟ್ಟು ವಿಶೇಷಾಶೀರ್ವಚನಂಗಳಿಂ ಪರಸಿ,)
ಉ|| ಸಪ್ತ ಸಮುದ್ರ ಮುದ್ರಿತ ಧರಾತಳಮಂ ಬೆಸಕೆಯ್ಸು ಮೀಱಿದು |
     ದ್ದೃಪ್ತ ವಿರೋಧಿ ಸಾಧನಮನಾಹವದೊಳ್ ತಱಿದೊಟ್ಟು ವಿಶ್ವದಿ ||
     [ಗ್ವ್ಯಾಪ್ತ] ಯಶೋವಿಳಾಸಿನಿಗೆ ವಲ್ಲಭನಾಗು ನಿರಂತರಸುಖ |
     ವ್ಯಾಪ್ತಿಗೆ ನೀನೆ ಮೊತ್ತಮೊದಲಾಗರಿಕೇಸರಿ ಲೋಕಮುಳ್ಳಿನಂ ||೧೪೯||
(ಸಪ್ತ ಸಮುದ್ರ ಮುದ್ರಿತ ಧರಾತಳಮಂ ಬೆಸಕೆಯ್ಸು, ಮೀಱಿದ ಉದ್ದೃಪ್ತ ವಿರೋಧಿ ಸಾಧನಮನ್ ಆಹವದೊಳ್ ತಱಿದೊಟ್ಟು,  ವಿಶ್ವದಿಗ್ವ್ಯಾಪ್ತ ಯಶೋವಿಳಾಸಿನಿಗೆ ವಲ್ಲಭನಾಗು,  ನಿರಂತರ ಸುಖವ್ಯಾಪ್ತಿಗೆ ನೀನೆ ಮೊತ್ತಮೊದಲಾಗು, ಅರಿಕೇಸರಿ ಲೋಕಂ ಉಳ್ಳಿನಂ.)
ಏಳು ಕಡಲುಗಳಿಂದ ಅಂಕಿತವಾದ ಈ ಭೂಮಿಯು ನಿನ್ನ ಆಜ್ಞೆಗೆ ತಲೆಬಾಗುವಂತೆ ಮಾಡು; ನಿನ್ನ ಮಾತು ಮೀರುವ ಉದ್ಧಟರನ್ನು ಯುದ್ಧದಲ್ಲಿ ಕೊಂದು ರಾಶಿ ಹಾಕು; ದಿಕ್ಕು ದಿಕ್ಕುಗಳಲ್ಲಿಯೂ ತುಂಬಿದ ನಿನ್ನ ಕೀರ್ತಿಗೆ ಒಡೆಯನಾಗು;
                           ಮೊದಲನೆಯ ಆಶ್ವಾಸ ಮುಗಿಯಿತು.



ಸೋಮವಾರ, ಆಗಸ್ಟ್ 6, 2018

ಪಂಪಭಾರತ ಆಶ್ವಾಸ ೧ ಪದ್ಯಗಳು ೧೧೫-೧೨೭




ಖಚರ ಪ್ಲುತ|| ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ |
     ಭಂಗಮಂ ಮಣಿ ಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋ ||
     ತ್ತುಂಗಮಂ ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂ |
     ತಾಂಗಮಂ ನೃಪನೆಯ್ದಿದನುದ್ಯಚ್ಛೃಂಗಮನಾ ಶತಶೃಂಗಮಂ ||೧೧೫||
(ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀಭಂಗಮಂ, ಮಣಿ ಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋತ್ತುಂಗಮಂ, ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂತಾಂಗಮಂ, ನೃಪನ್ ಎಯ್ದಿದನ್ ಉದ್ಯಚ್ಛೃಂಗಮನ್ ಆ ಶತಶೃಂಗಮಂ.)
ಎತ್ತರವಾದ ಆನೆಗಳು ಅಲ್ಲಿರುವ ಆನೆಬೇಲದ ಮರಗಳನ್ನು ತಮ್ಮ ದಂತದಿಂದ ಮುರಿದು ಹಾಕಿವೆ; ಮುತ್ತುರತ್ನಗಳ ಬಹುದೊಡ್ಡ ಬಂಡೆಗಳು ಎದ್ದು ಕಾಣುತ್ತಿವೆ; ಮುನಿಗಳ ಬಾಯಿಂದ ಹೊರಬಿದ್ದ ಪವಿತ್ರ ಮಂತ್ರಗಳಿಂದ ( ಆ ಸ್ಥಳವು) ಪವಿತ್ರವಾಗಿದೆ: ಅಂಥ ಶತಶೃಂಗ ಪರ್ವತಕ್ಕೆ ಪಾಂಡುವು ಬಂದನು.
ವ|| ಆ ಪರ್ವತದ ವಿಪುಳ ವನೋಪಕಂಠಂಗಳೊಳ್ ತಾಪಸ ಕ[ನ್ಯೆ]ಯರ್ ನಡಪಿದೆಳಲತೆಗಳೊಳೆಱಗಿ ತುಱುಗಿ ಸಾಮವೇದ ಧ್ವನಿಯೊಳ್ ಮೊರೆವ ತುಂಬಿಗಳುಮಂ ಪಣ್ತೆಱಗಿದ ತದಾಶ್ರಮದ ತರುಗಳ ಮೇಗಿರ್ದು ಪುಗಿಲ್ ಪುಗಿಲೆಂದಿತ್ತ ಬನ್ನಿಮಿರಿಮೆಂಬ ಪೊಂಬಣ್ಣದ ಕೋಗಿಲೆಗಳುಮಂ ಮುನಿಕುಮಾರರೋದುವ ವೇದವೇದಾಂಗಂಗಳಂ ತಪ್ಪುವಿಡಿದು ಜಡಿದು ಬಗ್ಗಿಸುವ ಪದುಮರಾಗದ ಬಣ್ಣದರಗಿಳಿಗಳುಮಂ ಸುರಭಿಗಳ ತೊರೆದ ಮೊಲೆಗಳನುಣ್ಬವರ ಮಱಿಗಳಂ ಪೋಗೆ ನೂಂಕಿ ಕೂಂಕಿ ಮೊಲೆಗಳನುಣ್ಬ ಕಿಶೋರ ಕೇಸರಿಗಳುಮಂ ತಮ್ಮೊಡನೆ ನಲಿದಾಡುವ ಕಿಶೋರ ಕೇಸರಿಗಳಂ ಪಿಡಿದು ತೆಗೆವ ಕರಿಕಳಂಭಂಗಳುಮನಾಗಳಾ ಪಳುವಂಗಳಿಂದೆ ಪಾಯ್ವ ಪುಲಿಗಳ ಮಱಿಗಳೊಳ್ ಪರಿದಾಡುವ ತರುಣ ಹರಿಣಂಗಳುಮಂ ಮತ್ತಂ ಮುತ್ತ ಕುರುಡ ತವಸಿಗಳ ಕೈಯಂ ಪಿಡಿದುಯ್ದವರ ಗುಹೆಗಳಂ ಪುಗಿಪ ಪೊಱಮಡಿಪ ಚಪಳ ಕಪಿಗಳುಮಂ ಹೋಮಾಗ್ನಿಯನೆಱಂಕೆಯ ಗಾಳಿಯಿಂ ನಂದಲೀಯದುರಿಪುವ ರಾಜಹಂಸೆಗಳುಮಂ ಮುನಿಗಣೇಶ್ವರರೊಡನೆ ದಾಳಿವೂಗೊಯ್ವೊಡನೆವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರ ತಪಃಪ್ರಭಾವಕ್ಕೆ ಚೋದ್ಯಂಬಟ್ಟು-
ಆ ಪರ್ವತದ ವಿಶಾಲವಾದ ತಪ್ಪಲು ಪ್ರದೇಶದಲ್ಲಿ ತಾಪಸ ಕನ್ಯೆಯರು ಬೆಳೆಸಿದ ಎಳೆಯ ಬಳ್ಳಿಗಳಿಗೆ ಗುಂಪುಗುಂಪಾಗಿ ಎರಗಿ, ಸಾಮವೇದದ ಧಾಟಿಯಲ್ಲಿ ಮೊರೆಯುವ ದುಂಬಿಗಳು; ಹಣ್ಣುಗಳ  ಭಾರದಿಂದ ಬಾಗಿದ ಆ ಆಶ್ರಮದ ಮರಗಳ ಮೇಲೆ ಕುಳಿತು “ಇದು ದಾರಿ, ಇತ್ತ ಬನ್ನಿ, ಇಲ್ಲಿ ಇರಿ” ಎಂದು ಕರೆಯುವ ಹೊಂಬಣ್ಣದ ಕೋಗಿಲೆಗಳು; ಮುನಿಕುಮಾರರು ವೇದಪಾಠಗಳನ್ನು ತಪ್ಪಾಗಿ ಓದಿದರೆ, ಅದನ್ನು ಎತ್ತಿ ತೋರಿಸಿ ಗದರಿಸುವ  ಪದ್ಮರಾಗದ ಬಣ್ಣದ ಅರಗಿಳಿಗಳು; ಸುರಭಿಗಳ (ದನಗಳ) ಮೊಲೆಗಳನ್ನುಣ್ಣುವ ಕರುಗಳನ್ನು ಅತ್ತ ದೂಡಿ ತಾವು ಮೊಲೆಯುಣ್ಣುವ ಸಿಂಹದ ಮರಿಗಳು; ತಮ್ಮೊಡನೆ ನಲಿಯುವ ಸಿಂಹದ ಮರಿಗಳನ್ನು ಹಿಡಿದೆತ್ತುವ ಆನೆಗಳು; ಕಾಡಿನ ಕಡೆಯಿಂದ ಬರುವ ಹುಲಿಯ ಮರಿಗಳ ಜೊತೆ ಓಡಾಡುವ ಜಿಂಕೆಯ ಮರಿಗಳು; ಮುದಿತಪಸ್ವಿಗಳ ಕೈಹಿಡಿದು ಅವರನ್ನ ಅವರ ಗುಹೆಗಳತ್ತ ಕರೆದೊಯ್ಯುವ, ಅಲ್ಲಿಂದ ಕರೆತರುವ ತುಂಟ ಮಂಗಗಳು;    ಹೋಮದ ಬೆಂಕಿ ಆರಿಹೋಗದಂತೆ ತಮ್ಮ ರೆಕ್ಕೆಗಳಿಂದ ಗಾಳಿ ಹಾಕುವ ರಾಜಹಂಸಗಳು; ಮುನಿಗಳ ಜೊತೆಗೆ ಹೋಗಿ ದಾಳಿ ಹೂವನ್ನು ಕೊಯ್ಯುವ ಮಂಗಗಳು- ಇವೆಲ್ಲವನ್ನೂ ಕಂಡು ಆ ತಪೋವನದಲ್ಲಿರುವ ತಪಸ್ವಿಗಳ ಪ್ರಭಾವಕ್ಕೆ ಅಚ್ಚರಿಗೊಂಡು-
ಚಂ|| ವಿನಯದಿನಿತ್ತ ಬನ್ನಿಮಿರಿಮೆಂಬವೊಲಿಂಚರದಿಂದಮೊಯ್ಯನೊ |
     ಯ್ಯನೆ ಮಱಿದುಂಬಿಗಳ್ ಮೊಱೆವುವೞ್ಕಱೊಳೊಲ್ದೆಱಪಂತೆ ತಳ್ತ ಪೂ ||
     ವಿನ ಪೊಸ ಗೊಂಚಲಿಂ ಮರನಿದೇನೆಸೆದಿರ್ದುವೊ ಕಲ್ತುವಾಗದೇ |
     ವಿನಯಮನೀ ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರ[ದಾ] ||೧೧೬||
 (ವಿನಯದಿನ್ ‘ಇತ್ತ ಬನ್ನಿಂ ಇರಿಂ’ ಎಂಬವೊಲ್, ಇಂಚರದಿಂದಂ ಒಯ್ಯನೊಯ್ಯನೆ ಮಱಿದುಂಬಿಗಳ್ ಮೊಱೆವುವು, ಅೞ್ಕಱೊಳ್ ಒಲ್ದು ಎಱಪಂತೆ ತಳ್ತ ಪೂವಿನ ಪೊಸ ಗೊಂಚಲಿಂ ಮರನ್ ಇದೇನ್ ಎಸೆದಿರ್ದುವೊ? ಕಲ್ತುವಾಗದೇ ವಿನಯಮನ್ ಈ  ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರದಾ?)
ವಿನಯದಿಂದ “ಹೀಗೆ ಬನ್ನಿ, ಇಲ್ಲಿ ಇರಿ” ಎಂಬ ಹಾಗೆ ಇಂಚರದಿಂದ ಮರಿದುಂಬಿಗಳು ಮೆಲ್ಲನೆ ಮೊರೆಯುತ್ತವೆ. ಹೊತ್ತ ಹೂವಿನ ಭಾರಕ್ಕೆ, ಪ್ರೀತಿಯಿಂದ ಒಲಿದು ಬಾಗಿರುವಂತೆ (ಅಲ್ಲಿನ) ಮರಗಳು ಕಾಣುತ್ತವೆ. ಇದನ್ನು ಕಂಡರೆ ಅಲ್ಲಿ ವಾಸಿಸುವ ತಪಸ್ವಿಗಳಿಂದ ಅಲ್ಲಿನ ಮರಗಳೂ ಸಹ ವಿನಯವನ್ನು ಕಲಿತಂತೆ ಕಾಣುತ್ತದೆ!
ವ|| ಎಂದು ಮೆಚ್ಚುತ್ತುಮೆನಗೆ ನೆಲಸಿರಲೀ ತಪೋವನಮೆ ಪಾವನಮೆಂದು ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ ಕಾಮಾನುರಾಗಮಂ ಬೆರ್ಚಿಸಿ ತದಾಶ್ರಮದೊಳಾಶ್ರಮಕ್ಕೆ ಗುರುವಾಗಿ ಪಾಂಡುರಾಜನಿರ್ಪನ್ನೆಗಮಿತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ಮಕ್ಕಳಂ ಪಡೆವಂತು ಪರಾಶರ ಮುನೀಂದ್ರನೊಳ್ ಬರಂಬಡೆದಳೆಂಬುದಂ ಕುಂತಿ ಕೇಳ್ದು ತಾನುಂ ಪುತ್ರಾರ್ಥಿ[ನಿ]ಯಾಗಲ್ ಬಗೆದು-
(ಎಂದು ಮೆಚ್ಚುತ್ತುಮ್ ಎನಗೆ ನೆಲಸಿರಲ್ ಈ ತಪೋವನಮೆ ಪಾವನಂ ಎಂದು ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ, ಕಾಮಾನುರಾಗಮಂ ಬೆರ್ಚಿಸಿ, ತದಾಶ್ರಮದೊಳ್ ಆಶ್ರಮಕ್ಕೆ ಗುರುವಾಗಿ ಪಾಂಡುರಾಜನ್ ಇರ್ಪನ್ನೆಗಂ; ಇತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ ಮಕ್ಕಳಂ ಪಡೆವಂತು ಪರಾಶರ ಮುನೀಂದ್ರನೊಳ್ ಬರಂಬಡೆದಳ್ ಎಂಬುದಂ ಕುಂತಿ ಕೇಳ್ದು, ತಾನುಂ ಪುತ್ರಾರ್ಥಿನಿಯಾಗಲ್ ಬಗೆದು-)
ಎಂದು ಮೆಚ್ಚುತ್ತ ‘ಈ ಪಾವನ ತಪೋವನವೇ ನನಗೆ ನೆಲೆಸಲು ಸರಿಯಾದ ಸ್ಥಳ’ ಎಂದು ಪಾಂಡುರಾಜನು ನಿಶ್ಚಯಿಸಿಕೊಂಡನು. ಹೀಗೆ ಅಲ್ಲಿನ ಮುನಿಜನರ ಪ್ರೀತಿಯನ್ನು ಹೆಚ್ಚಿಸಿ, ಕಾಮಭಾವವನ್ನು ಬೆದರಿಸಿ, ಆ ಆಶ್ರಮಕ್ಕೆ ಗುರುವಾಗಿ ಪಾಂಡುರಾಜನು ಇದ್ದನು.
ಇತ್ತ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ನೂರು ಮಕ್ಕಳಾಗುವಂತೆ ಪರಾಶರ ಮುನಿಯಿಂದ ವರವನ್ನು ಪಡೆದಳೆಂಬ ವಿಷಯವು ಕುಂತಿಯ ಕಿವಿಗೆ ಬಿತ್ತು. ಅವಳು ತಾನೂ ಸಹ ಮಕ್ಕಳನ್ನು ಪಡೆಯಬೇಕೆಂದು ಬಯಸಿ-
ಚಂ|| ವಿಸಸನದೊಳ್ ವಿರೋಧಿ ನೃಪರಂ ತಱಿದೊಟ್ಟಲುಮರ್ಥಿಗರ್ಥಮಂ |
     ಕಸವಿನ ಲೆಕ್ಕಮೆಂದು ಕುಡಲುಂ ವಿಪುಳಾಯತಿಯಂ ದಿಗಂತದೊಳ್ ||
     ಪಸರಿಸಲುಂ ಕರಂ ನೆಱೆವ ಮಕ್ಕಳನೀಯದೆ ನೋಡೆ ನಾಡೆ ನೋ|
     ಯಿಸಿದಪುದಿಕ್ಷುಪುಷ್ಪದವೊಲೆನ್ನಯ ನಿಷ್ಫಲ ಪುಷ್ಪದರ್ಶನಂ ||೧೧೭||
(ವಿಸಸನದೊಳ್ ವಿರೋಧಿ ನೃಪರಂ ತಱಿದು ಒಟ್ಟಲುಂ, ಅರ್ಥಿಗೆ ಅರ್ಥಮಂ ಕಸವಿನ ಲೆಕ್ಕಮೆಂದು ಕುಡಲುಂ, ವಿಪುಳಾಯತಿಯಂ ದಿಗಂತದೊಳ್ ಪಸರಿಸಲುಂ, ಕರಂ ನೆಱೆವ ಮಕ್ಕಳನ್  ಈಯದೆ, ನೋಡೆ ನಾಡೆ ನೋಯಿಸಿದಪುದು ಇಕ್ಷುಪುಷ್ಪದವೊಲ್ ಎನ್ನಯ ನಿಷ್ಫಲ ಪುಷ್ಪದರ್ಶನಂ.)
ಯುದ್ಧದಲ್ಲಿ ವಿರೋಧಿ ರಾಜರನ್ನು ಕಡಿದು ರಾಶಿ ಹಾಕುವಂಥ, ಕೇಳಿದವರಿಗೆ ದಾನವನ್ನು ಕಸಕ್ಕೆ ಸಮಾನವೆಂಬಂತೆ ಕೊಡುವಂಥ, ತಮ್ಮ ಶೌರ್ಯವನ್ನು ಆಕಾಶದಂಚಿಗೂ ವಿಸ್ತರಿಸಬಲ್ಲಂಥ ಮಕ್ಕಳನ್ನು ಕೊಡದೆ, ಕಬ್ಬಿನ ಹೂವಿನಂತೆ ನನ್ನ ಮುಟ್ಟೂ ಸಹ ಫಲ ಕೊಡದೆ ಸಂಕಟವನ್ನು ಕೊಡುತ್ತಿದೆಯಲ್ಲಾ ಎಂದು ಕುಂತಿಯು ಕೊರಗತೊಡಗಿದಳು.
ವ|| ಎಂದು ಚಿಂತಾಕ್ರಾಂತೆಯಾಗಿರ್ದ ಕುಂತಿಯಂ ಕಂಡು ಪಾಂಡುರಾಜನೇಕಾಂತದೊಳಿಂತೆಂದಂ
(ಎಂದು ಚಿಂತಾಕ್ರಾಂತೆಯಾಗಿರ್ದ ಕುಂತಿಯಂ ಕಂಡು ಪಾಂಡುರಾಜನ್ ಏಕಾಂತದೊಳ್ ಇಂತೆಂದಂ)
ಉ|| ಚಿಂತೆಯಿದೇನೋ ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡಿ |
     ನ್ನಿಂತಿರವೇಡ ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ ನಿಜಾ ||
     ತ್ಯಂತ ಪತಿವ್ರತಾ ಗುಣದಿನರ್ಚಿಸಿ ಮೆಚ್ಚಿಸು ನೀಂ ದಿಗಂತ ವಿ |
     ಶ್ರಾಂತ ಯಶರ್ಕಳಂ ವರ ತನೂಭವರಂ ಪಡೆ ನೀಂ ತಳೋದರೀ ||೧೧೮||
(ಚಿಂತೆಯಿದೇನೋ? ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡೆ ಇನ್ನು ಇಂತು ಇರವೇಡ, ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ ನಿಜಾತ್ಯಂತ ಪತಿವ್ರತಾ ಗುಣದಿನ್ ಅರ್ಚಿಸಿ ಮೆಚ್ಚಿಸು ನೀಂ, ದಿಗಂತ ವಿಶ್ರಾಂತ ಯಶರ್ಕಳಂ ವರ ತನೂಭವರಂ ಪಡೆ ನೀಂ ತಳೋದರೀ.)
‘ಕುಂತೀ, ಏನಿದು ಚಿಂತೆ? ಸಂತತಿ ಇಲ್ಲ, ಮಕ್ಕಳಿಲ್ಲ ಎಂಬುದೇ ಆದರೆ ಇನ್ನು ಹೀಗೆ ಕಾಲ ಕಳೆಯಬೇಡ! ನಿನ್ನ ಆಸೆ ಈಡೇರುವವರೆಗೂ ಶ್ರೇಷ್ಠ ಮುನಿಗಳನ್ನು ಅತ್ಯಂತ ಪತಿವ್ರತೆಯಂತೆ ಉಪಚರಿಸಿ ಮೆಚ್ಚಿಸು! ತೆಳುಹೊಟ್ಟೆಯ ಹೆಣ್ಣೇ, ಹಾಗೆ ಮಾಡಿ ದಿಕ್ಕಿನ ಅಂಚಿನವರೆಗೂ ಕೀರ್ತಿ ಗಳಿಸಬಲ್ಲ ಮಕ್ಕಳನ್ನು ಪಡೆದುಕೋ’
ವ|| ಎಂದೊಡೆ ಕೊಂತಿ ಇಂತೆಂದಳೆನ್ನ ಕನ್ನಿಕೆಯಾ ಕಾಲದೊಳ್ ನಾನೆನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾ ಮುನಿಯರೆಮ್ಮ ಮನೆಗೆ ನಿಚ್ಚಕ್ಕಂ ಬರ್ಪರವರೆನ್ನ ವಿನಯಕ್ಕಂ ಭಕ್ತಿಗಂ ಬೆಸಕೆಯ್ವುದರ್ಕಂ ಮೆಚ್ಚಿ ಮಂತ್ರಾಕ್ಷರಂಗಳನಯ್ದಂ ವರವಿತ್ತರೀಯಯ್ದು ಮಂತ್ರಕಯ್ವರ್ಮಕ್ಕಳಂ ನಿನ್ನ ಬಗೆಗೆ ಬಂದವರನಾಹ್ವಾನಂ ಗೆಯ್ಯಲವರ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೀಗಳೆನ್ನ ಪುಣ್ಯದಿಂ ದೊರೆಕೊಂಡುದೊಳ್ಳಿತ್ತೆಂಬುದುಂ ದಿವ್ಯ ಮುನಿ ವಾಕ್ಯಮಮೋಘ ವಾಕ್ಯಮಕ್ಕಮದರ್ಕೇನುಂ ಚಿಂತಿಸಲ್ವೇಡೆಂದೊಡಂತೆ ಗೆಯ್ವೆನೆಂದು ತೀರ್ಥ ಜಲಂಗಳಂ ಮಿಂದು ದಳಿಂಬವನುಟ್ಟು ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನದೊಳಿರ್ದು-
(ಎಂದೊಡೆ ಕೊಂತಿ ಇಂತೆಂದಳ್: “ಎನ್ನ ಕನ್ನಿಕೆಯಾ ಕಾಲದೊಳ್ ನಾನ್ ಎನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾ ಮುನಿಯರ್ ಎಮ್ಮ ಮನೆಗೆ ನಿಚ್ಚಕ್ಕಂ ಬರ್ಪರ್. ಅವರ್ ಎನ್ನ ವಿನಯಕ್ಕಂ ಭಕ್ತಿಗಂ ಬೆಸಕೆಯ್ವುದರ್ಕಂ ಮೆಚ್ಚಿ, ಮಂತ್ರಾಕ್ಷರಂಗಳನ್ ಅಯ್ದಂ ವರವಿತ್ತರ್. ಈ ಅಯ್ದು ಮಂತ್ರಕೆ ಅಯ್ವರ್ ಮಕ್ಕಳಂ, ನಿನ್ನ ಬಗೆಗೆ ಬಂದವರನ್ ಆಹ್ವಾನಂ ಗೆಯ್ಯಲ್, ಅವರ ಪೋಲ್ವೆಯ ಮಕ್ಕಳಂ ಪಡೆವೆ” ಎಂದು ಬೆಸಸಿದೊಡೆ “ಈಗಳ್ ಎನ್ನ ಪುಣ್ಯದಿಂ ದೊರೆಕೊಂಡುದು, ಒಳ್ಳಿತ್ತು” ಎಂಬುದುಂ “ದಿವ್ಯ ಮುನಿ ವಾಕ್ಯಂ ಅಮೋಘ ವಾಕ್ಯಂ ಅಕ್ಕುಂ ಅದರ್ಕೆ ಏನುಂ ಚಿಂತಿಸಲ್ವೇಡ” ಎಂದೊಡೆ “ಅಂತೆ ಗೆಯ್ವೆನ್” ಎಂದು ತೀರ್ಥ ಜಲಂಗಳಂ ಮಿಂದು ದಳಿಂಬವನ್ ಉಟ್ಟು ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನದೊಳ್ ಇರ್ದು,)
ಎಂದು ಪಾಂಡುರಾಜನು ಹೇಳಿದಾಗ ಕುಂತಿಯು ಹೀಗೆಂದಳು: ‘ನಾನು ಕನ್ನಿಕೆಯಾಗಿದ್ದಾಗ ನನ್ನ ಮಾವ ಕುಂತೀಭೋಜನ ಮನೆಯಲ್ಲಿ ಬೆಳೆಯುತ್ತಿದ್ದೆನಷ್ಟೆ. ಆಗ ದುರ್ವಾಸ ಮುನಿಗಳು ನಿತ್ಯವೂ ಅಲ್ಲಿಗೆ ಬರುತ್ತಿದ್ದರು. ಅವರು  ನನ್ನ ವಿನಯ, ಭಕ್ತಿಗಳಿಗೆ ಮೆಚ್ಚಿ, ಐದು ಮಂತ್ರಾಕ್ಷರಗಳನ್ನು ವರವಾಗಿ ಕೊಟ್ಟು, ಈ ಐದು ಮಂತ್ರಗಳಿಂದ, ನಿನಗೆ ಇಷ್ಟವಾದ ದೇವತೆಗಳನ್ನು ಸ್ಮರಿಸಿ, ಅವರನ್ನು ಹೋಲುವ ಐದು ಮಕ್ಕಳನ್ನು ನೀನು ಪಡೆಯಬಹುದು ಎಂದು ಹೇಳಿದ್ದಾರೆ. ನನ್ನ ಪುಣ್ಯದಿಂದ ಆ ಮಂತ್ರಗಳು ನನಗೆ ಸಿಕ್ಕಿದವು ಎಂದೇ ತಿಳಿಯುತ್ತೇನೆ’ ಎಂದಳು. ಪಾಂಡುರಾಜನು ‘ದಿವ್ಯಮುನಿಯ ವಾಕ್ಯವು ಅಮೋಘವಾದದ್ದು; ಇನ್ನು ನಿನ್ನ ಚಿಂತೆ ಕಳೆಯಿತು’ ಎಂದನು. ಕುಂತಿಯು ತೀರ್ಥ ಜಲಗಳಲ್ಲಿ ಮಿಂದು, ಮಡಿಯುಟ್ಟು, ಮುತ್ತಿನ ತೊಡಿಗೆಗಳನ್ನು ತೊಟ್ಟು, ದರ್ಭೆಯ ಹಾಸಿಗೆಯಲ್ಲಿದ್ದು-
ಉ|| ಜ್ಞಾನದಿನಿರ್ದು ನಿಟ್ಟಿಪೊಡೆ ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂ |
     ತಾನಮನೋದಿಯೋದಿ ಯಮರಾಜನನದ್ಭುತ ತೇಜನಂ ಸರೋ ||
     ಜಾನನೆ ಜಾನದಿಂ ಬರಿಸೆ ಬಂದು ಯಮಂ ಬೆಸನಾವುದಾವುದಾ |
     ತ್ಮಾನುಗತಾರ್ಥಮೆಂದೊಡೆನಗೀವುದು ನಿನ್ನನೆ ಪೋಲ್ವ ಪುತ್ರನಂ ||೧೧೯||
(ಜ್ಞಾನದಿನ್ ಇರ್ದು ನಿಟ್ಟಿಪೊಡೆ, ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂತಾನಮನ್ ಓದಿ ಓದಿ, ಯಮರಾಜನನ್ ಅದ್ಭುತ ತೇಜನಂ ಸರೋಜಾನನೆ ಜಾನದಿಂ ಬರಿಸೆ, ಬಂದು ಯಮಂ, “ಬೆಸನ್ ಆವುದು? ಆವುದು ಆತ್ಮಾನುಗತಾರ್ಥಂ?” ಎಂದೊಡೆ, “ಎನಗೆ ಈವುದು ನಿನ್ನನೆ ಪೋಲ್ವ ಪುತ್ರನಂ”)
ಆ ದಿವ್ಯಮುನಿಯು ಕೊಟ್ಟ ಮಂತ್ರವನ್ನು ಮತ್ತೆ ಮತ್ತೆ ಓದುತ್ತಾ, ಎಚ್ಚರದಿಂದ ನೋಡುತ್ತಾ, ಸುಂದರಿಯಾದ ಕುಂತಿಯು ಧ್ಯಾನದಿಂದ ಯಮರಾಜನನ್ನು ಬರಿಸಿದಳು. ಯಮರಾಜನು ಬಂದು ‘ಯಾಕಾಗಿ ನನ್ನನ್ನು ಕರೆಸಿದಿ? ನಿನ್ನ ಮನಸ್ಸಿನಲ್ಲಿ ಏನಿದೆ?’ ಎಂದು ವಿಚಾರಿಸಿದನು. ಆಗ ಕುಂತಿಯು ‘ನನಗೆ ನಿನ್ನನ್ನೇ ಹೋಲುವ ಮಗನನ್ನು ಕೊಡು’ ಎಂದು ಕೇಳಿದಳು.
ವ|| ಎಂಬುದುಂ ತಥಾಸ್ತುವೆಂದು ತನ್ನಂಶಮನ್ ಆಕೆಯ ಗರ್ಭದೊಳವತರಿಸಿ ಯಮಭಟ್ಟಾರಕನಂತರ್ಧಾನಕ್ಕೆ ಸಂದನನ್ನೆಗಮಾ ಕಾಂತೆಗೆ-
(ಎಂಬುದುಂ, “ತಥಾಸ್ತು”ವೆಂದು ತನ್ನಂಶಮನ್ ಆಕೆಯ ಗರ್ಭದೊಳ್ ಅವತರಿಸಿ ಯಮಭಟ್ಟಾರಕನ್ ಅಂತರ್ಧಾನಕ್ಕೆ ಸಂದನ್. ಅನ್ನೆಗಂ ಆ ಕಾಂತೆಗೆ)
ಯಮ ಭಟ್ಟಾರಕನು ‘ಹಾಗೆಯೇ ಆಗಲಿ’ ಎಂದು ತನ್ನ ಅಂಶವನ್ನು ಆಕೆಯ ಬಸಿರಿನಲ್ಲಿ ಇಳಿಸಿ ಮಾಯವಾದನು. ಆಗ ಆ ಕುಂತಿಗೆ-
ಚಂ|| ಹಿಮ ಧವಳಾತಪತ್ರಮನೆ ಪೋಲೆ ಮುಖೇಂದುವ ಬೆಳ್ಪು ಪೂರ್ಣ ಕುಂ |
     ಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪು ಪತಾಕೆಯೊಂದು ವಿ ||
     ಭ್ರಮಮನೆ ಪೋಲೆ ಪುರ್ವಿನ ಪೊಡರ್ಪೊಳಕೊಂಡುದವಳ್ಗೆ ಗರ್ಭ ಚಿ|
     ಹ್ನಮೆ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ ||೧೨೦||
(ಹಿಮ ಧವಳ ಆತಪತ್ರಮನೆ ಪೋಲೆ ಮುಖೇಂದುವ ಬೆಳ್ಪು, ಪೂರ್ಣ ಕುಂಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪು, ಪತಾಕೆಯೊಂದು ವಿಭ್ರಮಮನೆ ಪೋಲೆ ಪುರ್ವಿನ ಪೊಡರ್ಪು, ಒಳಕೊಂಡುದು ಅವಳ್ಗೆ ಗರ್ಭ ಚಿಹ್ನಮೆ ಗಳ, ಗರ್ಭದ ಅರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ.)
ಚಂದ್ರಮುಖಿಯಾದ ಅವಳ ಮುಖದ ಬಣ್ಣವು ಹಿಮದ ಹಾಗೆ ಬಿಳಿಯದಾದ ಕೊಡೆಯಂತೆ ಕಾಣಿಸಿತು. ಮೊಲೆಗಳ ಗಾತ್ರವು ಪೂರ್ಣಕುಂಭವನ್ನು ಮೀರಿಸಿತು. ಅವಳ ಹುಬ್ಬಿನ ಅಲುಗಾಟವು ಬಾವುಟದ ಅಲುಗಾಟದಂತಿತ್ತು. ಹೀಗೆ ಅವಳ ಬಸಿರಿನ ಲಕ್ಷಣಗಳು ಅವಳ ಹೊಟ್ಟೆಯಲ್ಲಿರುವ ಮಗುವು ಮುಂದೆ ರಾಜನಾಗುತ್ತಾನೆ ಎಂದು ಸೂಚಿಸಿದವು.
ವ|| ಅಂತು ಕೊಂತಿಯ ಗರ್ಭಭಾರಮುಂ, ತಾಪಸಾಶ್ರಮದ ಅನುರಾಗಮುಂ ಒಡನೊಡನೆ ಬಳೆಯೆ, ಬಂಧುಜನದ ಮನೋರಥಗಳುಂ ಒಂಬತ್ತನೆಯ ತಿಂಗಳುಂ ಒಡನೊಡನೆ ನೆಱೆಯೆ-
ಹಾಗೆ ಕುಂತಿಯ ಹೊಟ್ಟೆಯ ಭಾರವೂ, ಆಶ್ರಮವಾಸಿಗಳ ಅನುರಾಗವೂ ಒಟ್ಟೊಟ್ಟಿಗೆ ಹೆಚ್ಚಿದವು. ಬಂಧುಜನರ ಮನಸ್ಸಿನ ಹಂಬಲವೂ, ಒಂಬತ್ತನೆಯೂ ತಿಂಗಳೂ ಒಟ್ಟೊಟ್ಟಿಗೆ ತುಂಬಿದವು.
ಕಂ|| ವನನಿಧಿಯಿಂದಂ ಚಂದ್ರಂ |
     ವಿನತೋದರದಿಂ ಗರುತ್ಮನುದಯಾಚಳದಿಂ ||
     ದಿನಪನೊಗೆವಂತೆ ಪುಟ್ಟಿದ |
     ನನಿವಾರ್ಯ ಸುತೇಜನೆನಿಪನಿನಜನ ತನಯಂ ||೧೨೧||
(ವನನಿಧಿಯಿಂದಂ ಚಂದ್ರಂ, ವಿನತೋದರದಿಂ ಗರುತ್ಮನ್, ಉದಯಾಚಳದಿಂ ದಿನಪನ್ ಒಗೆವಂತೆ ಪುಟ್ಟಿದನ್,  ಅನಿವಾರ್ಯ ಸುತೇಜನ್ ಎನಿಪನ್, ಇನಜನ ತನಯಂ.)
ಕಂ|| ಪುಟ್ಟುವುದುಂ ಧರ್ಮಮುಮೊಡ |
     ವುಟ್ಟಿದುದೀತನೊಳೆ ಧರ್ಮನಂಶದೊಳೀತಂ ||
     ಪುಟ್ಟಿದನೆಂದಾ ಶಿಶುಗೊಸೆ |
     ದಿತ್ತುದು ಮುನಿ ಸಮಿತಿ ಧರ್ಮಸುತನೆನೆ ಪೆಸರಂ ||೧೨೨||
(ಪುಟ್ಟುವುದುಂ, ಧರ್ಮಮುಂ ಒಡವುಟ್ಟಿದುದು ಈತನೊಳೆ, ಧರ್ಮನ ಅಂಶದೊಳ್ ಈತಂ ಪುಟ್ಟಿದನ್ ಎಂದು, ಆ ಶಿಶುಗೆ, ಒಸೆದಿತ್ತುದು ಮುನಿ ಸಮಿತಿ, ಧರ್ಮಸುತನ್ ಎನೆ ಪೆಸರಂ.)
ಕಡಲಿನಿಂದ ಚಂದ್ರನೂ, ವಿನತೆಯ ಬಸಿರಿನಿಂದ ಗರುಡನೂ, ಉದಯ ಪರ್ವತದಿಂದ ಸೂರ್ಯನೂ ತಲೆದೋರುವಂತೆ, ತೇಜಸ್ವಿಯಾದ ಸೂರ್ಯನ ಮೊಮ್ಮಗನು ಹುಟ್ಟಿಬಂದನು. ಅವನು ಹುಟ್ಟಿದ ಕೂಡಲೇ ಧರ್ಮವು ಅವನೊಡನೆ ಹುಟ್ಟಿತು. ಯಮಧರ್ಮರಾಜನ ಅಂಶದಿಂದ ಹುಟ್ಟಿದವನಾದುದರಿಂದ, ಶಿಶುವಿಗೆ ಮುನಿಗಳು ಸೇರಿ ‘ಧರ್ಮಸುತ’ ಎಂದು ಹೆಸರಿಟ್ಟರು.
ವ|| ಅಂತು ಪೆಸರನಿಟ್ಟು ಪರಕೆಯಂ ಕೊಟ್ಟು –
(ಅಂತು ಪೆಸರನ್ ಇಟ್ಟು, ಪರಕೆಯಂ ಕೊಟ್ಟು,)
ಹಾಗೆ ಹೆಸರಿಟ್ಟು, ಆಶೀರ್ವದಿಸಿ,
ಕಂ|| ಸಂತಸದಿನಿರ್ದು ಮಕ್ಕಳ |
     ಸಂತತಿಗೀ ದೊರೆಯರಿನ್ನುಮಾಗದೊಡೆಂತುಂ ||
     ಸಂತಸಮೆನಗಿಲ್ಲೆಂದಾ |
     ಕಾಂತೆ ಸುತಭ್ರಾಂತೆ ಮುನ್ನಿನಂತೆವೊಲಿರ್ದಳ್ ||೧೨೩||
(ಸಂತಸದಿನಿರ್ದು, “ಮಕ್ಕಳ ಸಂತತಿಗೆ ಈ ದೊರೆಯರ್ ಇನ್ನುಂ ಆಗದೊಡೆ ಎಂತುಂ ಸಂತಸಂ ಎನಗೆ ಇಲ್ಲ” ಎಂದು ಆ ಕಾಂತೆ, ಸುತಭ್ರಾಂತೆ ಮುನ್ನಿನಂತೆವೊಲ್ ಇರ್ದಳ್.)
‘ಒಬ್ಬ ಮಗ ಸಾಲದು, ಅಂಥ ಮಕ್ಕಳು ಇನ್ನೂ ಬೇಕು’ ಎಂಬ ಆಸೆಯಿಂದ ಸಂತಸದಲ್ಲಿದ್ದರೂ ಇಲ್ಲದವಳಂತೆ, ಮಕ್ಕಳ ಹುಚ್ಚಿನ ಆ ಕುಂತಿಯು ಮೊದಲಿನಂತೆಯೇ ಮಿಂದು, ಮಡಿಯುಟ್ಟು, ಮುತ್ತಿನ ತೊಡಿಗೆಗಳನ್ನು ತೊಟ್ಟು, ದರ್ಭೆಯ ಹಾಸಿಗೆಯಲ್ಲಿದ್ದು-
ಕಂ|| ಮಂತ್ರಾಕ್ಷರ ನಿಯಮದಿನಭಿ |
     ಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದೇಂ ||
     ಮಂತ್ರಂ ಪೇೞೆನೆ ಕುಡು ರಿಪು |
     ತಂತ್ರಕ್ಷಯಕರನನೆನಗೆ ಹಿತನಂ ಸುತನಂ ||೧೨೪||
(ಮಂತ್ರಾಕ್ಷರ ನಿಯಮದಿನ್ ಅಭಿಮಂತ್ರಿಸಿ ಬರಿಸಿದೊಡೆ, ವಾಯುದೇವಂ ಬಂದು “ಏಂ ಮಂತ್ರಂ ಪೇೞ್” ಎನೆ, “ಕುಡು ರಿಪು ತಂತ್ರಕ್ಷಯಕರನನ್ ಎನಗೆ ಹಿತನಂ ಸುತನಂ”)
ಮಂತ್ರಾಕ್ಷರ ನಿಯಮದಿಂದ ವಾಯುದೇವನನ್ನು ಬರಿಸಿದಳು. ವಾಯುದೇವನು ಬಂದು ‘ಯಾಕೆ ಮಂತ್ರವನ್ನು ಹೇಳಿದಿ?’ ಎಂದು ವಿಚಾರಿಸಿದನು. ಕುಂತಿಯು ‘ನನಗೆ ವೈರಿಗಳ ತಂತ್ರಗಳನ್ನು ನಾಶ ಮಾಡಬಲ್ಲಂಥ ಮಗನನ್ನು  ಕೊಡು’-
ವ|| ಎಂಬುದುಮದೇವಿರಿದಿತ್ತೆನೆಂದು ವಿಯತ್ತಳಕ್ಕೊಗೆದೊಡೆ ಅತನಂಶಮಾಕೆಯ ಗರ್ಭಸರೋವರದೊಳಗೆ ಚಂದ್ರಬಿಂಬದಂತೆ ಸೊಗಯಿಸೆ-
(ಎಂಬುದುಂ “ಅದೇವಿರಿದು? ಇತ್ತೆನ್” ಎಂದು ವಿಯತ್ತಳಕ್ಕೆ ಒಗೆದೊಡೆ, ಅತನ ಅಂಶಂ ಆಕೆಯ ಗರ್ಭಸರೋವರದೊಳಗೆ ಚಂದ್ರಬಿಂಬದಂತೆ ಸೊಗಯಿಸೆ,)
ಎಂದು ಕೇಳಿದಾಗ ‘ಅದು ಯಾವ ದೊಡ್ಡ ವಿಷಯ? ಇಗೋ ಕೊಟ್ಟೆ!’ ಎಂದು ಹೇಳಿ ಮರಳಿ ಆಕಾಶಕ್ಕೆ ನೆಗೆದನು. ಕುಂತಿಯ ಬಸಿರೆಂಬ ಕೆರೆಯಲ್ಲಿ ಆತನ ಅಂಶವು ಚಂದ್ರಬಿಂಬದಂತೆ ಸೊಗಯಿಸಿತು.
ಚಂ|| ತ್ರಿವಳಿಗಳುಂ ವಿರೋಧಿ ನೃಪರುತ್ಸವಮುಂ ಕಿಡೆವಂದುವಾನನೇಂ |
      ದುವ ಕಡುವೆಳ್ಪು ಕೂಸಿನ ನೆಗೞ್ತೆಯ ಬೆಳ್ಪುವೊಲಾಯ್ತು ಮು[ನ್ನೆ]ಬ ||
      ಳ್ಕುವ ನಡು ತೋರ್ಪ ಮೆಯ್ಯನೊಳಕೊಂಡುದು ಪೊಂಗೊಡನಂ ತಮಾಳ ಪ|
      ಲ್ಲವದೊಳೆ ಮುಚ್ಚಿದಂದದೊಳೆ ಚೂಚುಕಮಾಂತುದು ಕರ್ಪನಾಕೆಯಾ ||೧೨೫||
(ತ್ರಿವಳಿಗಳುಂ ವಿರೋಧಿ ನೃಪರ ಉತ್ಸವಮುಂ ಕಿಡೆವಂದುವು, ಆನನೇಂದುವ ಕಡುವೆಳ್ಪು ಕೂಸಿನ ನೆಗೞ್ತೆಯ ಬೆಳ್ಪುವೊಲ್ ಆಯ್ತು, ಮುನ್ನೆ ಬಳ್ಕುವ ನಡು ತೋರ್ಪ ಮೆಯ್ಯನ್ ಒಳಕೊಂಡುದು, ಪೊಂಗೊಡನಂ ತಮಾಳ ಪಲ್ಲವದೊಳೆ ಮುಚ್ಚಿದ ಅಂದದೊಳೆ ಚೂಚುಕಂ ಆಂತುದು ಕರ್ಪನ್ ಆಕೆಯಾ.)
ಬಸುರಿ ಕುಂತಿಯ ತ್ರಿವಳಿಗಳೂ, ವೈರಿರಾಜರ ವೈಭವವೂ ನಾಶವಾದವು; ಅವಳ ಮುಖದ ದಟ್ಟ ಬಿಳುಪು ಹೊಟ್ಟೆಯಲ್ಲಿದ್ದ ಕೂಸಿನ ಕೀರ್ತಿಯಂತೆ ಕಾಣಿಸಿತು; ಮೊದಲೇ ತೆಳುವಾಗಿ ಬಳುಕುತ್ತಿದ್ದ ಅವಳ ಸೊಂಟವು ಈಗ ದಪ್ಪಗಿನ ಮೈಯನ್ನು ಹೊರುವಂತಾಯಿತು; ಚಿನ್ನದ ಕೊಡವನ್ನು ಹೊಂಗೆಯ ಚಿಗುರುಗಳಿಂದ  ಮುಚ್ಚಿದಂತೆ ಅವಳ ಮೊಲೆತೊಟ್ಟುಗಳು ಕಪ್ಪಾದವು.
ಕಂ|| ಆ ಸುದತಿಯ ಮೃದುಪದ ವಿ|
     ನ್ಯಾಸಮುಮಂ ಶೇಷನಾನಲಾರದೆ ಸು[ಯ್ದಂ] ||
     ಬೇಸಱಿನೆಂದೊಡೆ ಗರ್ಭದ |
     ಕೂಸಿನ ಬಳೆದಳವಿಯಳವನಳೆವರುಮೊಳರೇ ||೧೨೬||
(ಆ ಸುದತಿಯ ಮೃದುಪದ ವಿನ್ಯಾಸಮುಮಂ ಶೇಷನ್ ಆನಲಾರದೆ ಸುಯ್ದಂ ಬೇಸಱಿನ್ ಎಂದೊಡೆ ಗರ್ಭದ ಕೂಸಿನ ಬಳೆದ ಅಳವಿಯ ಅಳವನುಂ ಅಳೆವರುಂ ಒಳರೇ?)
ಆ ಚೆಂದಸಾಲು ಹಲ್ಲಿನವಳು ಮೆದುವಾಗಿ ಇರಿಸಿದ ಹೆಜ್ಜೆಯನ್ನು ಸಹ ಶೇಷನು ಹೊರಲಾರದೆ ಬೇಸರದಿಂದ ಏದುಸಿರು ಬಿಟ್ಟನು. ಎಂದ ಮೇಲೆ ಅವಳ ಬಸಿರಿನಲ್ಲಿ ಬೆಳೆಯುತ್ತಿದ್ದ ಕೂಸಿನ ಬೆಳವಣಿಗೆಯ ಪ್ರಮಾಣವನ್ನು ಅಳೆಯುವವರು ಯಾರಾದರೂ ಇದ್ದಾರೆಯೇ?
ವ|| ಅಂತು ಗರ್ಭನಿರ್ಭರ ಪ್ರದೇಶದೊಳರಾತಿಗಳ್ಗಂತ ಕಾಲಂ ದೊರೆಕೊಳ್ವಂತೆ ಪ್ರಸೂತಿ ಕಾಲಂ ದೊರೆಕೊಳೆ-
(ಅಂತು ಗರ್ಭನಿರ್ಭರ ಪ್ರದೇಶದೊಳ್, ಅರಾತಿಗಳ್ಗೆ ಅಂತ ಕಾಲಂ ದೊರೆಕೊಳ್ವಂತೆ ಪ್ರಸೂತಿ ಕಾಲಂ ದೊರೆಕೊಳೆ,)
ಹಾಗೆ ದಿನ ತುಂಬುತ್ತ ಬಂದು, ವೈರಿಗಳಿಗೆ ಕೊನೆಗಾಲ ಬಂದಂತೆ ಹೆರಿಗೆಯ ಹೊತ್ತು ಬಂದಾಗ-
ಕಂ|| ಶುಭ ತಿಥಿ ಶುಭ ನಕ್ಷತ್ರಂ |
     ಶುಭ ವಾರಂ ಶುಭ ಮುಹೂರ್ತಮೆನೆ ಗಣಕನಿಳಾ ||
     ಪ್ರಭುವೊಗೆದನುದಿತ ಕಾಯ |
     ಪ್ರಭೆಯೊಗೆದಿರೆ ದಳಿತ ಶತ್ರು ಗೋತ್ರಂ ಪುತ್ರಂ ||೧೨೭||
(“ಶುಭ ತಿಥಿ, ಶುಭ ನಕ್ಷತ್ರಂ, ಶುಭ ವಾರಂ, ಶುಭ ಮುಹೂರ್ತಂ” ಎನೆ ಗಣಕನ್, ಇಳಾ ಪ್ರಭುವೊಗೆದನ್ ಉದಿತ ಕಾಯ ಪ್ರಭೆಯೊಗೆದಿರೆ ದಳಿತ ಶತ್ರು ಗೋತ್ರಂ ಪುತ್ರಂ.)
ಶತ್ರು ಸಂಹಾರಿಯಾದ ಭೀಮನು ತನ್ನ ಶರೀರದ ಕಾಂತಿಯನ್ನು ಎಲ್ಲೆಡೆಯೂ ಬೀರುತ್ತಾ ತಾಯಿಯ ಬಸಿರಿನಿಂದ ಹೊರಹೊಮ್ಮಿದನು. ಆಗ ಜ್ಯೋತಿಷಿಯು ಅವನು ಹುಟ್ಟಿದ ಗಳಿಗೆಯನ್ನು ಲೆಕ್ಕ ಹಾಕಿ, ಶುಭ ತಿಥಿ, ಶುಭ ನಕ್ಷತ್ರ, ಶುಭ ವಾರ, ಶುಭ ಮುಹೂರ್ತ ಎಂದು ಉದ್ಗರಿಸಿದನು.