ಸೋಮವಾರ, ಜುಲೈ 23, 2018

ಪಂಪಭಾರತ ಆಶ್ವಾಸ ೧ ಪದ್ಯಗಳು ೧೦೪ರಿಂದ ೧೧೪




ಪಂಪಭಾರತ ಆಶ್ವಾಸ ೧ ಪದ್ಯಗಳು ೧೦೪ರಿಂದ ೧೧೪


ಕಂ|| ಕೂರಿ[ಸೆ] ಗುರುಶುಶ್ರೂಷೆಯೊ |
     ಳಾ ರಾಮನನುಗ್ರ ಪರಶುಪಾಟಿತ ರಿಪು ವಂ ||
     ಶಾರಾಮನನಿಷು ವಿದ್ಯಾ |
     ಪಾರಗನೆನಿಸಿದುದು ಬಲ್ಮೆ ವೈಕರ್ತನನಾ ||೧೦೪||

ತನ್ನ ಉಗ್ರವಾದ ಕೊಡಲಿಯಿಂದ ವೈರಿಗಳ ವಂಶವನ್ನೇ ನಾಶ ಮಾಡಿದ ಪರಶುರಾಮನಿಗೆ ಪ್ರೀತಿ ಹುಟ್ಟುವಂತೆ ಕರ್ಣನು ಆತನ ಸೇವೆ ಮಾಡಿ ಬಿಲ್ವಿದ್ಯೆಯಲ್ಲಿ ಪಾರಂಗತನಾದನು.
(ಕೂರಿಸೆ ಗುರುಶುಶ್ರೂಷೆಯೊಳ್ ಆ ರಾಮನನ್, ಉಗ್ರ ಪರಶುಪಾಟಿತ ರಿಪು ವಂಶಾರಾಮನನ್, ಇಷು ವಿದ್ಯಾ ಪಾರಗನ್ ಎನಿಸಿದುದು ಬಲ್ಮೆ ವೈಕರ್ತನನಾ.)
ವ|| ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮಱೆದೊಱಗಿದಾ ಪ್ರಸ್ತಾವದೊಳಾ ಮುನಿಗೆ ಮುನಿಸಂ ಮಾಡಲೆಂದಿಂದ್ರನುಪಾಯದೊಳಟ್ಟಿದ ವಜ್ರಕೀಟಂಗಳ್ ಕರ್ಣನೆರಡುಂ ತೊಡೆಯುಮನುಳಿಯನೂಱಿ ಕೊಡಂತಿಯೊಳ್ ಬೆಟ್ಟಿದಂತತ್ತಮಿತ್ತಮುರ್ಚಿ ಪೋಗೆಯುಮದನಱಿಯದಂತೆ ಗುರುಗೆ ನಿದ್ರಾಭಿಘಾತಮಕ್ಕುಮೆಂದು ತಲೆಯನುಗುರಿಸುತ್ತುಮಿರೆಯಿರೆ-
(ಅಂತು ಧನುರ್ಧರ ಅಗ್ರಗಣ್ಯನಾಗಿರ್ದು, ಒಂದು ದಿವಸಂ, ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮಱೆದು ಒಱಗಿದಾ ಪ್ರಸ್ತಾವದೊಳ್, ಆ ಮುನಿಗೆ ಮುನಿಸಂ ಮಾಡಲೆಂದು ಇಂದ್ರನ್ ಉಪಾಯದೊಳ್ ಅಟ್ಟಿದ ವಜ್ರಕೀಟಂಗಳ್, ಕರ್ಣನ ಎರಡುಂ ತೊಡೆಯುಮನ್ ಉಳಿಯನ್ ಊಱಿ ಕೊಡಂತಿಯೊಳ್ ಬೆಟ್ಟಿದಂತೆ ಅತ್ತಂ ಇತ್ತಂ ಉರ್ಚಿ ಪೋಗೆಯುಂ, ಅದನ್ ಅಱಿಯದಂತೆ ಗುರುಗೆ ನಿದ್ರಾಭಿಘಾತಂ ಅಕ್ಕುಂ ಎಂದು, ತಲೆಯನ್ ಉಗುರಿಸುತ್ತುಂ ಇರೆಯಿರೆ,)
ಒಂದು ದಿವಸ ಪರಶುರಾಮನು ಬಿಲ್ವಿದ್ಯೆಯಲ್ಲಿ ಮೊದಲಿಗ ಎನ್ನಿಸಿಕೊಂಡಿದ್ದ ಶಿಷ್ಯ ಕರ್ಣನ ತೊಡೆಯ ಮೇಲೆ ತಲೆಯಿಟ್ಟು ಮಲಗಿ ನಿದ್ರೆ ಹೋಗಿದ್ದನು. ಇದೇ ಸಮಯವನ್ನು ಕಾಯುತ್ತಿದ್ದ ಇಂದ್ರನು, ಮುನಿಗೆ ಕರ್ಣನ ಮೇಲೆ ಸಿಟ್ಟು ಬರುವಂತೆ ಮಾಡುವ ಉದ್ದೇಶದಿಂದ ವಜ್ರಕೀಟಗಳನ್ನು ಅಲ್ಲಿಗೆ ಕಳಿಸಿಕೊಟ್ಟನು. ಆ ಕೀಟಗಳು, ಉಳಿಯನ್ನು ಊರಿ ಸುತ್ತಿಗೆಯಿಂದ ಹೊಡೆದರೆ ಆಗುವ ಹಾಗೆ, ಕರ್ಣನ ತೊಡೆಯನ್ನು ಕಚ್ಚಿ ಅತ್ತ ಇತ್ತ ಎರಡು ಭಾಗ ಮಾಡಿದವು. ಕರ್ಣನು ಮಾತ್ರ ಆ ನೋವಿನಿಂದ ಸ್ವಲ್ಪವೂ ವಿಚಲಿತನಾಗದೆ, ಗುರುವಿನ ನಿದ್ದೆಗೆ ಭಂಗ ಬಂದೀತೆಂದು, ತಲೆಯನ್ನು ಉಗುರಿನಿಂದ ಕೆರೆದುಕೊಳ್ಳುತ್ತ ಸುಮ್ಮನೆ ಕುಳಿತಿದ್ದನು.
ಕಂ|| ಅತಿ ವಿಶದ ವಿಶಾಲೋರು |
     ಕ್ಷತದಿಂದೊಱೆದನಿತು ಜಡೆಯುಮಂ ನಾಂದಿ ಮನಃ ||
     ಕ್ಷತದೊಡನೆೞ್ಚರಿಸಿದುದು |
     ತ್ಥಿತಮಾವಂದಸ್ರ ಮಿಶ್ರ ಗಂಧಂ ಮುನಿಯಂ ||೧೦೫||
(ಅತಿ ವಿಶದ ವಿಶಾಲ ಊರುಕ್ಷತದಿಂದ ಒಱೆದು ಅನಿತು ಜಡೆಯುಮಂ ನಾಂದಿ ಮನಃಕ್ಷತದೊಡನೆ ಎೞ್ಚರಿಸಿದುದು ಉತ್ಥಿತಂ ಆ ವಂದ ಅಸ್ರ ಮಿಶ್ರ ಗಂಧಂ ಮುನಿಯಂ.)
ಕರ್ಣನ ವಿಶಾಲವಾದ ತೊಡೆಯಲ್ಲಿ ಆದ ಆ ಗಾಯದಿಂದ ಸುರಿದ ರಕ್ತವು ಮುನಿಯ ಜಡೆಯನ್ನು ಪೂರ್ತಿಯಾಗಿ ತೋಯಿಸಿತು. ನೆತ್ತರಿನಿಂದ ತೊಯ್ದ ಆ ಜಡೆಯಿಂದ ಹೊರಟ ಮಿಶ್ರ ವಾಸನೆಯು ಹೆಚ್ಚಾದಂತೆ ಪರಶುರಾಮನು ಸಂಕಟಪಟ್ಟು ಎಚ್ಚರಗೊಂಡನು.
ವ|| ಅಂತೆೞ್ಚತ್ತು ನೆತ್ತರ ಪೊನಲೊಳ್ ನಾಂದು ನನೆದ ಮೈಯ್ಯುಮಂ ತೊಯ್ದು ತಳ್ಪೊಯ್ದ ಜಡೆಯುಮಂ ಕಂಡೀ ಧೈರ್ಯಂ ಕ್ಷತ್ರಿಯಂಗಲ್ಲದಾಗದು ಪಾರ್ವನೆಂದೆನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಮವಸಾನ ಕಾಲದೊಳ್ ಬೆಸಕೆಯ್ಯದಿರ್ಕೆ ಎಂದು ಶಾಪಮನಿತ್ತನಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳಿರ್ಪನ್ನೆಗಮಿತ್ತಲ್ ಕುಂತಿಗವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ-
(ಅಂತು ಎೞ್ಚತ್ತು, ನೆತ್ತರ ಪೊನಲೊಳ್ ನಾಂದು ನನೆದ ಮೈಯ್ಯುಮಂ, ತೊಯ್ದು ತಳ್ಪೊಯ್ದ ಜಡೆಯುಮಂ ಕಂಡು, ಈ ಧೈರ್ಯಂ ಕ್ಷತ್ರಿಯಂಗಲ್ಲದೆ ಆಗದು, ಪಾರ್ವನೆಂದು ಎನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ, ನಿನಗೆ ಆನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಂ ಅವಸಾನ ಕಾಲದೊಳ್ ಬೆಸಕೆಯ್ಯದಿರ್ಕೆ ಎಂದು ಶಾಪಮನ್ ಇತ್ತನ್. ಅಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳ್ ಇರ್ಪನ್ನೆಗಂ, ಇತ್ತಲ್ ಕುಂತಿಗೆ ಅವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ,)
ಎಚ್ಚರಗೊಂಡು ಮೇಲೆದ್ದ ಪರಶುರಾಮನು ನೆತ್ತರ ಹೊನಲಿನಲ್ಲಿ ಅದ್ದಿ ತೊಯ್ದು ಹೋದ ತನ್ನ ಮೈಯನ್ನೂ, ಜಡೆಯನ್ನೂ ಕಂಡು “ಈ ಧೈರ್ಯವು ಕ್ಷತ್ರಿಯರಿಗಲ್ಲದೆ ಬೇರೆಯವರಿಗೆ ಸಾಧ್ಯವಿಲ್ಲ. ಹಾರುವನೆಂದು ನನ್ನಲ್ಲಿ ಸುಳ್ಳು ಹೇಳಿ, ವಿದ್ಯೆಯನ್ನು ಹೇಳಿಸಿಕೊಂಡದ್ದಕ್ಕೆ ನಿನಗೆ ಬೇರೆ ಶಿಕ್ಷೆ ಇಲ್ಲ. ನಾನು ನಿನಗೆ ಕೊಟ್ಟ ಬ್ರಹ್ಮಾಸ್ತ್ರವೆಂಬ ದಿವ್ಯ ಅಸ್ತ್ರವು ನಿನ್ನ ಕೊನೆಗಾಲದಲ್ಲಿ ಕೆಲಸ ಮಾಡದೆ ಹೋಗಲಿ” ಎಂದು ಶಾಪವನ್ನು ಕೊಟ್ಟನು. ಕರ್ಣನು ಶಾಪವನ್ನುಂಡು, ಅಲ್ಲಿಂದ  ಹಿಂದೆ ಬಂದು ಸೂತನ ಮನೆಯಲ್ಲಿದ್ದನು.
ಇತ್ತ ಕುಂತಿಗೆ ಅವಳ ಮಾವನಾದ ಕುಂತಿಭೋಜನು ಸ್ವಯಂವರವನ್ನು ಏರ್ಪಡಿಸಿದನು-
ಚಂ|| ಸೊಗಯಿಪ ತಮ್ಮ ಜವ್ವನದ ತಮ್ಮ ವಿಭೂತಿಯ ತಮ್ಮ ತಮ್ಮ ಚೆ |
     ಲ್ವುಗಳ ವಿಲಾಸದುರ್ಮೆಗಳೊಳಾವೆವಗಾಗಿಪೆವೆಂದು ಬಂದ ಚೆ ||
     ನ್ನಿಗರುಮನಾಸೆಕಾಱರುಮನೊಲ್ಲದೆ ಚೆಲ್ವಿಡಿದಿರ್ದ ರೂಪು ದೃ |
     ಷ್ಟಿಗೆವರೆ ಪಾಂಡುರಾಜನನೆ ಕುಂತಿ ಮನಂಬುಗೆ ಮಾಲೆ ಸೂಡಿದಳ್ ||
(ಸೊಗಯಿಪ ತಮ್ಮ ಜವ್ವನದ, ತಮ್ಮ ವಿಭೂತಿಯ, ತಮ್ಮ ತಮ್ಮ ಚೆಲ್ವುಗಳ, ವಿಲಾಸದ ಉರ್ಮೆಗಳೊಳ್, ‘ಆವ್ ಎವಗೆ ಆಗಿಪೆವು’ ಎಂದು ಬಂದ ಚೆನ್ನಿಗರುಮನ್, ಆಸೆಕಾಱರುಮನ್ ಒಲ್ಲದೆ ಚೆಲ್ವಿಡಿದಿರ್ದ ರೂಪು ದೃಷ್ಟಿಗೆವರೆ, ಪಾಂಡುರಾಜನನೆ ಕುಂತಿ ಮನಂಬುಗೆ ಮಾಲೆ ಸೂಡಿದಳ್.)
ಸ್ವಯಂವರಕ್ಕೆ ಅನೇಕ ರಾಜಕುಮಾರರು ಬಂದಿದ್ದರು. ಅವರೆಲ್ಲ ತಮ್ಮ ಯೌವನ, ಚೆಲುವು, ಸಂಪತ್ತು, ವಿಲಾಸಗಳನ್ನು ಮೆರೆಸಿ ‘ಕುಂತಿಯನ್ನು ನಾನು ನನ್ನವಳಾಗಿಸಿಕೊಳ್ಳುತ್ತೇನೆ’ ಎಂದು ಮೇಲಾಟ ನಡೆಸಿದ್ದರು. ಆದರೆ ಅಂಥ ಚೆನ್ನಿಗರನ್ನೂ, ಆಸೆಬುರುಕರನ್ನೂ ಒಲ್ಲದೆ, ಕುಂತಿಯು ಅತ್ಯಂತ ಚೆಲುವನಾದ ಪಾಂಡುರಾಜನಿಗೇ ಮನದುಂಬಿ ಮಾಲೆ ಹಾಕಿದಳು.
ವ|| ಅಂತು ಸ್ವಯಂಬರದೊಳ್ ನೆಱೆದರಸುಮಕ್ಕಳೊಳಪ್ಪುಕೆಯ್ದ ಕುಂತಿಯೊಡನೆ ಮದ್ರರಾಜನ ಮಗಳ್ ಶಲ್ಯನೊಡವುಟ್ಟಿದ ಮಾದ್ರಿಯುಮನೊಂದೆ ಪಸೆಯೊಳಿರಿಸಿ ಗಾಂಗೇಯಂ ವಿಧಾತ್ರಂ ಮುಂಡಾಡುವಂತೆ ತಾಂ ಮದುವೆಯಂ ಮಾಡಿ-
(ಅಂತು ಸ್ವಯಂಬರದೊಳ್ ನೆಱೆದ ಅರಸುಮಕ್ಕಳೊಳ್ ಅಪ್ಪುಕೆಯ್ದ ಕುಂತಿಯೊಡನೆ, ಮದ್ರರಾಜನ ಮಗಳ್ ಶಲ್ಯನ ಒಡವುಟ್ಟಿದ ಮಾದ್ರಿಯುಮನ್ ಒಂದೆ ಪಸೆಯೊಳ್ ಇರಿಸಿ, ಗಾಂಗೇಯಂ ವಿಧಾತ್ರಂ ಮುಂಡಾಡುವಂತೆ ತಾಂ ಮದುವೆಯಂ ಮಾಡಿ,)
ಹಾಗೆ ಸ್ವಯಂವರದಲ್ಲಿ ನೆರೆದ ಎಲ್ಲ ಅರಸು ಮಕ್ಕಳ ಪೈಕಿ ಪಾಂಡುರಾಜನಿಗೆ ಸೈ ಎಂದ ಕುಂತಿಯನ್ನಲ್ಲದೆ, ಮದ್ರರಾಜನ ಮಗಳೂ, ಶಲ್ಯನ ಒಡಹುಟ್ಟಿದವಳೂ ಆದ ಮಾದ್ರಿಯನ್ನು ಸಹ ಒಂದೇ ಹಸೆಯಲ್ಲಿರಿಸಿ, ಭೀಷ್ಮನು ಬ್ರಹ್ಮನೂ ಮೆಚ್ಚುವಂತೆ ಮದುವೆ ಮಾಡಿಸಿದನು.
ಚಂ|| ತಳಿರ್ಗಳಸಂ ಮುಕುಂದರವಮೆತ್ತಿದ ಮುತ್ತಿನ ಮಂಟಪಂ ಮನಂ |
     ಗೊಳಿಪ ವಿತಾನಪಂಙ್ತಿ ಪಸುರ್ವಂದಲೊಳೊಲ್ದೆಡೆಯಾಡುವೆಯ್ದೆಯರ್ ||
     ಬಳಸಿದ ವೇದಪಾರಗರ ಸಂದಣಿಯೆಂಬಿವಱಿಂ ವಿವಾಹ ಮಂ |
     ಗಳಮದು ಕುಂತಿಮಾದ್ರಿಗಳೊಳಚ್ಚರಿಯಾದುದು ಪಾಂಡುರಾಜನಾ ||೧೦೭||
(ತಳಿರ್ಗಳಸಂ, ಮುಕುಂದರವಂ, ಎತ್ತಿದ ಮುತ್ತಿನ ಮಂಟಪಂ, ಮನಂಗೊಳಿಪ ವಿತಾನಪಂಙ್ತಿ, ಪಸುರ್ವಂದಲೊಳ್ ಒಲ್ದು ಎಡೆಯಾಡುವ ಎಯ್ದೆಯರ್, ಬಳಸಿದ ವೇದಪಾರಗರ ಸಂದಣಿ ಎಂಬಿವಱಿಂ, ವಿವಾಹ ಮಂಗಳಂ ಅದು ಕುಂತಿಮಾದ್ರಿಗಳೊಳ್, ಅಚ್ಚರಿಯಾದುದು ಪಾಂಡುರಾಜನಾ.)
ಮಾವಿನ ಚಿಗುರಿನಿಂದ ಸಿಂಗಾರಗೊಂಡ ಕಲಶ, ತಮಟೆಯ ರವ, ವಿಸ್ತಾರವಾಗಿ ಕಟ್ಟಿದ ಮುತ್ತಿನ ಮಂಟಪ, ಮನಸೆಳೆಯುವ ಮೇಲ್ಕಟ್ಟುಗಳ ಸಾಲು, ಹಸಿರು ಚಪ್ಪರದ ಕೆಳಗೆ ಅತ್ತಿತ್ತ ಪ್ರೀತಿಯಿಂದ ಓಡಾಡುವ ಮುತ್ತೈದೆಯರು, ವೇದ ತಿಳಿದವರ ಗುಂಪು – ಇವುಗಳಿಂದ ಕೂಡಿ,  ಕುಂತಿ-ಮಾದ್ರಿಯರೊಡನೆ  ನಡೆದ ಪಾಂಡುರಾಜನ ಮದುವೆಯು ನೋಡುವವರಿಗೆ ಅಚ್ಚರಿಯನ್ನುಂಟು ಮಾಡುತ್ತಿತ್ತು.
ಚಂ|| ತುಱುಗೆಮೆ ನೀಳ್ದ ಪುರ್ವು ನಿಡುಗಣ್ ಪೊಱೆಯಲ್ಲದೆ ಬಟ್ಟಿತಪ್ಪ ಬಾ |
     ಯ್ದೆರೆ ತನುರೇಖೆಗೊಂಡ ಕೊರಲೊಡ್ಡಿದ ಪೆರ್ಮೊಲೆ ತೆಳ್ವಸಿಱ್ ಕರಂ ||
     ನೆಱೆದ ನಿತಂಬವಿಂಬುವಡೆದೊಳ್ದೊಡೆ ನಕ್ಕರವದ್ದಿ(?) ತಾನೆ ಪೋ |
     ಕಿಱುದೊಡೆಯೆಂದು ಧಾತ್ರಿ ಪೊಗೞ್ಗುಂ ಪೊಗೞ್ವನ್ನರೆ ಕುಂತಿ ಮಾದ್ರಿಗಳ್ ||೧೦೮||
(ತುಱುಗೆಮೆ, ನೀಳ್ದ ಪುರ್ವು, ನಿಡುಗಣ್, ಪೊಱೆಯಲ್ಲದೆ ಬಟ್ಟಿತಪ್ಪ ಬಾಯ್ದೆರೆ, ತನುರೇಖೆಗೊಂಡ ಕೊರಲ್, ಒಡ್ಡಿದ ಪೆರ್ಮೊಲೆ, ತೆಳ್ವಸಿಱ್, ಕರಂನೆಱೆದ ನಿತಂಬಂ, ಇಂಬುವಡೆದ ಒಳ್ದೊಡೆ ನಕ್ಕರವದ್ದಿ(?) ತಾನೆ ಪೋ ಕಿಱುದೊಡೆಯೆಂದು ಧಾತ್ರಿ ಪೊಗೞ್ಗುಂ, ಪೊಗೞ್ವನ್ನರೆ ಕುಂತಿ ಮಾದ್ರಿಗಳ್.)
ದಟ್ಟ ಕೂದಲಿನ ಕಣ್ಣೆವೆಗಳು, ನೀಳವಾದ ಹುಬ್ಬು ಮತ್ತು ಕಣ್ಣುಗಳು, ಹಗುರವಾದ ದುಂಡುತುಟಿಗಳು, ಸಪುರವಾಗಿ ಗೆರೆ ಕೊರೆದಂತಿರುವ ಕೊರಳು, ಚಾಚಿದ ದೊಡ್ಡ ಮೊಲೆಗಳು, ತೆಳುವಾದ ಹೊಟ್ಟೆ, ತುಂಬು ನಿತಂಬ, ವಿಸ್ತಾರವಾದ ಒಳತೊಡೆಗಳು ಎಂದು ಕುಂತಿ ಮಾದ್ರಿಯರ ರೂಪವನ್ನು ಲೋಕವೇ ಹೊಗಳಿತು. ಆ ಹೊಗಳಿಕೆಗೆ ಅವರು ತಕ್ಕವರೇ ಸರಿ.
ವ|| ಅಂತಾಕೆಗಳಿರ್ವರುಮೆರಡುಂ ಕೆಲದೊಳಿರೆ ಕಲ್ಪಲತೆಗಳೆರಡಱ ನಡುವಣ ಕಲ್ಪವೃಕ್ಷಮಿರ್ಪಂತಿರ್ದ ಪಾಂಡುರಾಜಂಗೆ ಧೃತರಾಷ್ಟ್ರನಂಗಹೀನನೆಂದು ವಿವಾಹದೊಸಗೆಯೊಡನೆ ಪಟ್ಟಬಂಧದೊಸಗೆಯಂ ಮಾಡಿ ನೆಲನನಾಳಿ[ಸೆ]-
(ಅಂತು ಆಕೆಗಳ್ ಇರ್ವರುಂ ಎರಡುಂ ಕೆಲದೊಳ್ ಇರೆ, ಕಲ್ಪಲತೆಗಳ್ ಎರಡಱ ನಡುವಣ ಕಲ್ಪವೃಕ್ಷಂ ಇರ್ಪಂತೆ ಇರ್ದ ಪಾಂಡುರಾಜಂಗೆ, ಧೃತರಾಷ್ಟ್ರನ್ ಅಂಗಹೀನನೆಂದು, ವಿವಾಹದ ಒಸಗೆಯೊಡನೆ ಪಟ್ಟಬಂಧದ ಒಸಗೆಯಂ ಮಾಡಿ ನೆಲನನ್ ಆಳಿಸೆ,)
ಹಾಗೆ ಪಾಂಡುರಾಜನ ಎರಡು ಪಕ್ಕಗಳಲ್ಲಿ ಕುಂತಿ, ಮಾದ್ರಿಯರು ಕಲ್ಪವೃಕ್ಷದ ಪಕ್ಕದಲ್ಲಿರುವ ಕಲ್ಪಲತೆಗಳಂತೆ ಶೋಭಿಸುತ್ತಿದ್ದರು. ಮುಂದೆ, ಧೃತರಾಷ್ಟ್ರನು ಅಂಗಹೀನನಾಗಿದ್ದುದರಿಂದ (ಕುರುಡ) ಭೀಷ್ಮನು ಪಾಂಡುರಾಜನಿಗೆ ಪಟ್ಟ ಕಟ್ಟಿ ರಾಜ್ಯವನ್ನು ಆಳಿಸತೊಡಗಿದನು.
ಉ|| ಮೀಱುವೆವೆಂಬ [ಮಾಂ]ಡಳಿಕರೀಯದ[ರೆಂ]ಬದಟರ್ ವಯಲ್ಗೆ ಮೆ |
     ಯ್ದೋಱುವೆವೆಂಬ ಪೂಣಿಗರಡಂಗಿ [ಕು]ನುಂಗಿ ಸಿಡಿಲ್ದು ಜೋಲ್ದು ಕಾ ||
     ಯ್ಪಾ[ಱೆ] ನಭಕ್ಕೆ ಪಾಱಿದುದು ಗಂಡರ ನೆತ್ತಿಯೊಳೊತ್ತಿ ಬಾಳನಿ |
     ನ್ನೂಱುಗುಮೆಂದೊಡೇಂ ಪಿರಿದೊ ತೇಜದ ದಳ್ಳುರಿ ಪಾಂಡುರಾಜನಾ ||೧೦೯||
(ಮೀಱುವೆವು ಎಂಬ ಮಾಂಡಳಿಕರ್, ಈಯದರ್ ಎಂಬ ಅದಟರ್, ವಯಲ್ಗೆ ಮೆಯ್ದೋಱುವೆವು ಎಂಬ ಪೂಣಿಗರ್, ಅಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾಯ್ಪಾಱೆ ನಭಕ್ಕೆ ಪಾಱಿದುದು, ಗಂಡರ ನೆತ್ತಿಯೊಳ್ ಒತ್ತಿ ಬಾಳನ್ ಇನ್ ಊಱುಗುಂ ಎಂದೊಡೆ, ಏಂ ಪಿರಿದೊ ತೇಜದ ದಳ್ಳುರಿ ಪಾಂಡುರಾಜನಾ!)
‘ನಿನ್ನ ಮಾತು ಕೇಳುವುದಿಲ್ಲ, ಏನು ಮಾಡುತ್ತೀಯೋ ನೋಡುತ್ತೇವೆ’ ಎನ್ನುವ ಸಾಮಂತರು, ‘ನಿನಗೆ ಕಪ್ಪ ಕೊಡುವುದಿಲ್ಲ’ ಎನ್ನುವ ಶೂರರು, ‘ಯುದ್ಧಕ್ಕೆ ತಯಾರು’ ಎನ್ನುವ ಪರಾಕ್ರಮಿಗಳು ಇಂಥ ಎಲ್ಲರ ನೆತ್ತಿಯ ಮೇಲೆ ಪಾಂಡುರಾಜ ತನ್ನ ಕತ್ತಿಯನ್ನು ಊರಿದ. ಆಗ ಅವರೆಲ್ಲ ಅಡಗಿ, ಕುಗ್ಗಿ, ಹೊಟ್ಟಿ, ಸೊಕ್ಕಿಳಿದು ಹೋದರು. ಅವರ ಕೋಪ ತಣ್ಣಗಾಗಿ ಗಾಳಿಗೆ ಹೋಯಿತು! ಅಬ್ಬಾ! ಪಾಂಡುರಾಜನ ಶೌರ್ಯದ ಉರಿಯೆ!
ಮ|| ಬೆಸಕೆಯ್ದತ್ತು ಸಮುದ್ರ ಮುದ್ರಿತ ಧರಾಚಕ್ರಂ ಪ್ರತಾಪಕ್ಕಗು |
     ರ್ವಿಸೆ ಗೋಳುಂಡೆಗೊಳುತ್ತುಮಿರ್ದುದು ದಿಶಾಚಕ್ರಂ ಪೊದೞ್ದಾಜ್ಞೆಗಂ ||
     ಪೆಸರ್ಗಂ ಮುನ್ನಮೆ ಗೂಡುಗೊಂಡುದು ವಿಯಚ್ಚಕ್ರಂ ಸಮಂತೆಂಬಿನಂ |
     ಜಸಮಾಪಾಂಡುರಮಾದುದಾ ನೃಪರೊಳಾರಾ ಪಾಂಡುರಾಜಂಬರಂ ||೧೧೦||
(ಬೆಸಕೆಯ್ದತ್ತು ಸಮುದ್ರ ಮುದ್ರಿತ ಧರಾಚಕ್ರಂ, ಪ್ರತಾಪಕ್ಕೆ ಅಗುರ್ವಿಸೆ ಗೋಳ್ ಉಂಡೆಗೊಳುತ್ತುಂ ಇರ್ದುದು ದಿಶಾಚಕ್ರಂ, ಪೊದೞ್ದ ಆಜ್ಞೆಗಂ ಪೆಸರ್ಗಂ ಮುನ್ನಮೆ ಗೂಡುಗೊಂಡುದು ವಿಯಚ್ಚಕ್ರಂ ಸಮಂತು ಎಂಬಿನಂ, ಜಸಂ ಆಪಾಂಡುರಂ ಆದುದು, ಆ ನೃಪರೊಳ್ ಆರ್ ಆ ಪಾಂಡುರಾಜಂಬರಂ?)
ಕಡಲಿನವರೆಗೂ ಇರುವ ಭೂಮಂಡಲವು ಚೆನ್ನಾಗಿ (ಪಾಂಡುರಾಜನ)ಸೇವೆ ಮಾಡಿತು. ಆತನ ಪ್ರತಾಪಕ್ಕೆ ಹೆದರಿ ದಿಕ್ಕುದಿಕ್ಕುಗಳಲ್ಲಿರುವ ರಾಜರು ಗೋಳಿಡುತ್ತಿದ್ದರು. ಆಗಸದಲ್ಲಿಯೂ ಸಹ ಅವನ ಅಪ್ಪಣೆ, ಕೀರ್ತಿಗಳು ನೆಲೆಗೊಂಡಿದ್ದವು. ಹೀಗೆ ಅವನ ಯಶಸ್ಸು ಪೂರ್ತಿ ಬಿಳಿಯಾಗಿತ್ತು. ರಾಜರುಗಳ ಪೈಕಿ ಯಾರು ತಾನೇ ಪಾಂಡುರಾಜನ ಎತ್ತರಕ್ಕೆ ಏರಬಲ್ಲರು?
ವ|| ಅಂತು ಪಾಂಡುರಾಜನಧಿಕ ತೇಜನುಮವನತ ವೈರಿ ಭೂಭೃತ್ಸಮಾಜನುಮಾಗಿ ನೆಗೞುತ್ತಿರ್ದೊಂದು ದಿವಸಂ ತೋಪಿನ ಬೇಂಟೆಯನಾಡಲೞ್ತಿಯಿಂ ಪೋಗಿ
(ಅಂತು ಪಾಂಡುರಾಜನ್ ಅಧಿಕ ತೇಜನುಂ, ಅವನತ ವೈರಿ ಭೂಭೃತ್ಸಮಾಜನುಂ ಆಗಿ ನೆಗೞುತ್ತಿರ್ದು, ಒಂದು  ದಿವಸಂ ತೋಪಿನ ಬೇಂಟೆಯನ್ ಆಡಲು ಅೞ್ತಿಯಿಂ ಪೋಗಿ,)
ಹೀಗೆ ಪಾಂಡುರಾಜನು ಒಳ್ಳೆಯ ತೇಜಸ್ಸಿನಿಂದ ಕೂಡಿ, ವೈರಿರಾಜರನ್ನು ಸೋಲಿಸಿದವನಾಗಿ, ರಾಜ್ಯವನ್ನಾಳುತ್ತಿದ್ದು, ಒಂದು ದಿವಸ ತೋಪಿನ ಬೇಟೆಯಾಡುವ ಆಸಕ್ತಿಯಿಂದ (ಕಾಡಿಗೆ) ಹೋಗಿ-
ಚಂ|| ಇನಿಯಳನೞ್ತಿಯಿಂದೆ ಮೃಗಿ ಮಾಡಿ ಮನೋಜ ಸುಖಕ್ಕೆ ಸೋಲ್ತಲಂ |
     ಪಿನೆ ನೆರೆಯಲ್ಕೆ ದಿವ್ಯಮುನಿಯುಂ ಮೃಗಮಾಗಿ ಮರಲ್ದು ಕೂಡೆ ಮೆ ||
     ಲ್ಲನೆ ಮೃಗಮೆಂದು ಸಾರ್ದು ನೆಱನಂ ನಡೆ ನೋಡಿ ನರೇಂದ್ರನೆಚ್ಚು ಭೋಂ |
     ಕನೆ ಮೃಗಚಾರಿಯಂ ತನಗೆ ಮಾಣದೆ ತಂದನದೊಂದು ಮಾರಿಯಂ ||೧೧೧||
(ಇನಿಯಳನ್ ಅೞ್ತಿಯಿಂದೆ ಮೃಗಿ ಮಾಡಿ, ಮನೋಜ ಸುಖಕ್ಕೆ ಸೋಲ್ತು, ಅಲಂಪಿನೆ ನೆರೆಯಲ್ಕೆ ದಿವ್ಯಮುನಿಯುಂ ಮೃಗಮಾಗಿ, ಮರಲ್ದು ಕೂಡೆ, ಮೆಲ್ಲನೆ. “ಮೃಗಂ” ಎಂದು ಸಾರ್ದು, ನೆಱನಂ ನಡೆ ನೋಡಿ ನರೇಂದ್ರನ್, ಎಚ್ಚು ಭೋಂಕನೆ ಮೃಗಚಾರಿಯಂ, ತನಗೆ ಮಾಣದೆ ತಂದನ್ ಅದೊಂದು ಮಾರಿಯಂ.)
(ಆ ಕಾಡಿನಲ್ಲಿ) ದಿವ್ಯಮುನಿಯೊಬ್ಬನು ಕಾಮಸುಖಕ್ಕೆ ಸೋತು ತನ್ನ ನಲ್ಲೆಯನ್ನು ಹೆಣ್ಣುಜಿಂಕೆಯಾಗಿಸಿಕೊಂಡು, ತಾನು ಗಂಡುಜಿಂಕೆಯಾಗಿ, ಪ್ರಣಯಭಾವದಿಂದ ಉಬ್ಬಿ, ಆ ಹೆಣ್ಣುಜಿಂಕೆಯನ್ನು ಕೂಡಿ ವಿಹರಿಸುತ್ತಿದ್ದನು. ಪಾಂಡುರಾಜನು ಈ ದೃಶ್ಯವನ್ನು ಕಂಡು ‘ಜಿಂಕೆ’ ಎಂದುಕೊಳ್ಳುತ್ತಾ ಮೆಲ್ಲನೆ, ಸದ್ದು ಮಾಡದೆ ಅವುಗಳ ಹತ್ತಿರ ಹೋಗಿ, ಸರಿಯಾಗಿ ಗುರಿ ಇಟ್ಟು ಬಾಣಬಿಟ್ಟನು. ಅವನು ಹಾಗೆ ಮಾಡಿದುದು ಮನೆಗೆ ಒಂದು ಮಾರಿಯನ್ನೇ ತಂದುಕೊಂಡಂತಾಯಿತು.
ವ|| ಆಗಳ್ ಪ್ರಳಯದುಳ್ಕಮುಳ್ಕುವಂತೆ ತನ್ನೆಚ್ಚಂಬು ಮುನಿಕುಮಾರನ ಕಣ್ಣೊಳಮೆರ್ದೆಯೊಳಮುಳ್ಕೆ ಪೇೞಿಮೆನ್ನನಾವನೆಚ್ಚನೆಂಬ ಮುನಿಯ ಮುನಿದ ಸರಮಂ ಕೇಳ್ದು ಬಿಲ್ಲನಂಬುಮನೀಡಾಡಿ ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ-
(ಆಗಳ್ ಪ್ರಳಯದ ಉಳ್ಕಂ ಉಳ್ಕುವಂತೆ ತನ್ನ ಎಚ್ಚ ಅಂಬು ಮುನಿಕುಮಾರನ ಕಣ್ಣೊಳಂ, ಎರ್ದೆಯೊಳಂ ಉಳ್ಕೆ, “ಪೇೞಿಂ ಎನ್ನನ್ ಆವನ್ ಎಚ್ಚನ್?” ಎಂಬ ಮುನಿಯ ಮುನಿದ ಸರಮಂ ಕೇಳ್ದು, ಬಿಲ್ಲನ್ ಅಂಬುಮನ್ ಈಡಾಡಿ ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ,)
ಆಗ ಪ್ರಳಯಕಾಲದ ಉಲ್ಕೆಯು ಹೊಳೆಯುವಂತೆ ಅವನು ಬಿಟ್ಟ ಬಾಣವು ಮುನಿಕುಮಾರನ ಕಣ್ಣಿನಲ್ಲೂ, ಎದೆಯಲ್ಲೂ ಹೊಳೆಯಿತು. ಮುನಿಯು ಸಿಟ್ಟಿನಿಂದ “ಹೇಳಿ, ಯಾರವನು ನನಗೆ ಬಾಣ ಬಿಟ್ಟವನು?” ಎಂದು ಕೂಗಿಕೊಂಡನು. ಮುನಿಯ ದನಿಯನ್ನು ಕೇಳಿದ ಪಾಂಡುರಾಜನು, ಗಾಬರಿಯಿಂದ ತನ್ನ ಬಿಲ್ಲು ಬಾಣಗಳನ್ನು ಬಿಸಾಡಿ ಮುನಿಯ ಮುಂದೆ ಬಂದು ನಿಂತುಕೊಂಡನು. ಮುನಿಯು ಆತನನ್ನು ನೋಡಿ
ಉ|| ಸನ್ನತದಿಂ ರತಕ್ಕೆಳಸಿ ನಲ್ಲಳೊಳೋತೊಡಗೂಡಿದೆನ್ನನಿಂ |
     ತನ್ನೆಯಮೆಚ್ಚುದರ್ಕೆ ಪೆಱತಿಲ್ಲದು ದಂಡಮೊಱಲ್ದು ನಲ್ಲಳೊಳ್ ||
     ನೀನ್ನಡೆನೋಡಿಯುಂ ಬಯಸಿ ಕೂಡಿಯುಮಾಗಡೆ ಸಾವೆಯಾಗಿ ಪೋ |
     ಗಿನ್ನೆನೆ ರೌದ್ರ ಶಾಪ ಪರಿತಾಪ ವಿಳಾಪದೊಳಾ ಮಹೀಶ್ವರಂ ||೧೧೨||
(“ಸನ್ನತದಿಂ ರತಕ್ಕೆ ಎಳಸಿ, ನಲ್ಲಳೊಳ್ ಓತು ಒಡಗೂಡಿದ ಎನ್ನನ್ ಇಂತು ಅನ್ನೆಯಂ ಎಚ್ಚುದರ್ಕೆ ಪೆಱತು ಇಲ್ಲ ಅದು ದಂಡಂ, ಒಱಲ್ದು ನಲ್ಲಳೊಳ್ ನೀನ್ ನಡೆ ನೋಡಿಯುಂ, ಬಯಸಿ ಕೂಡಿಯುಂ, ಆಗಡೆ ಸಾವೆಯಾಗಿ ಪೋಗು ಇನ್” ಎನೆ ರೌದ್ರ ಶಾಪ ಪರಿತಾಪ ವಿಳಾಪದೊಳ್ ಆ ಮಹೀಶ್ವರಂ,)
“ಭೋಗಸುಖವನ್ನು ಬಯಸಿ, ಮುಂದೆ ಬಾಗಿ, ನಲ್ಲೆಯೊಂದಿಗೆ ಪ್ರೀತಿಯಿಂದ ಸೇರಿದ ನನ್ನ ಮೇಲೆ ನೀನು ಅನ್ಯಾಯವಾಗಿ ಬಾಣ ಬಿಟ್ಟಿದ್ದೀಯೆ! ಆ ತಪ್ಪಿಗೆ ನಿನಗೆ ಶಿಕ್ಷೆ ಬೇರೇನೂ ಇಲ್ಲ! ನಿನ್ನ ನಲ್ಲೆಯನ್ನು ನೀನು ಬಯಸಿ ನೋಡಿದರೆ, ಕಾಮಿಸಿ ಕೂಡಿದರೆ ಆ ಕೂಡಲೇ ನಿನಗೆ ಸಾವು ಬರಲಿ! ಹೊರಟು ಹೋಗು ಇಲ್ಲಿಂದ!” ಎಂದು ಶಪಿಸಿದಾಗ, ಹೆದರಿಕೆ ಹುಟ್ಟಿಸುವ ಆ ಶಾಪದ ಸುಡುಬಿಸಿಗೆ ನೊಂದ ಪಾಂಡುರಾಜನು-
ವ|| ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದಲ್ತು-
(ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಂ ಏಂ  ಪಿರಿದು ಅಲ್ತು,)
“ಕಾಮಸುಖಕ್ಕೆ ತಡೆಯೊಡ್ಡಿದ ನನ್ನ ಬೇಕಾಬಿಟ್ಟಿ ನಡತೆಗೆ ಮುನಿಯು ಕೊಟ್ಟ ಶಾಪ ದೊಡ್ಡದೇನಲ್ಲ”
ಕಂ|| ಎತ್ತ ವನಮೆತ್ತ ಮೃಗಯಾ |
     ವೃತ್ತಕಮೀ ತಪಸಿಯೆತ್ತ ಮೃಗಮೆಂದೆಂ[ತಾ] ||
     ನೆತ್ತೆಚ್ಚೆನಾತ್ಮ ಕರ್ಮಾ |
     ಯತ್ತಂ ಪೆಱತಲ್ತಿದೆಲ್ಲಮಘಟಿತಘಟಿತಂ ||೧೧೩||

(ಎತ್ತ ವನಂ? ಎತ್ತ ಮೃಗಯಾವೃತ್ತಕಂ? ಈ  ತಪಸಿಯೆತ್ತ? ಮೃಗಂ ಎಂದು ಎಂತು ಆನ್ ಎತ್ತ ಎಚ್ಚೆನ್? ಆತ್ಮ ಕರ್ಮಾಯತ್ತಂ ಪೆಱತು ಅಲ್ತು, ಇದೆಲ್ಲಂ ಅಘಟಿತಘಟಿತಂ.)
“ಎಲ್ಲಿಯ ಕಾಡು? ಎಲ್ಲಿಯ ಜಿಂಕೆಯಾಟ? ಎಲ್ಲಿಯ ತಪಸಿ? ಜಿಂಕೆ ಎಂದು ತಿಳಿದು ನಾನು ಹೊಡೆದದ್ದಾದರೂ ಹೇಗೆ? ಒಂದಕ್ಕೊಂದಕ್ಕೆ ಸಂಬಂಧವೇ ಕಾಣುತ್ತಿಲ್ಲವಲ್ಲ? ಇದೆಲ್ಲವೂ ನನ್ನ ಕರ್ಮಫಲವೇ ಆಗಿದೆ.  ನಡೆಯಲಾಗದ್ದು ನಡೆದುಹೋಗಿದೆ.”
ವ|| ಎಂದು ಚಿಂತಿಸುತ್ತುಂ ಪೊೞಲ್ಗೆ ಮಗುೞ್ದುವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ವೃತ್ತಾಂತಮೆಲ್ಲಮಂ ಪೇೞ್ದು ಸಮಸ್ತ ವಸ್ತುಗಳಂ ದೀನಾನಾಥ ಜನಂಗಳ್ಗೆ ಸೂಱೆಗೊಟ್ಟು ನಿಜ ಪರಿವಾರಮಂ ಬರಿಸಿ-
(ಎಂದು ಚಿಂತಿಸುತ್ತುಂ, ಪೊೞಲ್ಗೆ ಮಗುೞ್ದುವಂದು, ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ ವೃತ್ತಾಂತಂ ಎಲ್ಲಮಂ ಪೇೞ್ದು, ಸಮಸ್ತ ವಸ್ತುಗಳಂ ದೀನ ಅನಾಥ ಜನಂಗಳ್ಗೆ ಸೂಱೆಗೊಟ್ಟು, ನಿಜ ಪರಿವಾರಮಂ ಬರಿಸಿ,)
ಎಂದು ಚಿಂತಿಸುತ್ತ ಊರಿಗೆ ಮರಳಿ ಬಂದು ಗಾಂಗೇಯ, ಧೃತರಾಷ್ಟ್ರ, ವಿದುರರಿಗೆ ನಡೆದ ಎಲ್ಲ ಸಂಗತಿಗಳನ್ನೂ ತಿಳಿಸಿ, ತನ್ನ ಎಲ್ಲ ಸಂಪತ್ತನ್ನೂ ಬಡವರಿಗೆ, ದಿಕ್ಕಿಲ್ಲದವರಿಗೆ ದಾನ ಮಾಡಿ, ತನ್ನ ಕುಟುಂಬದವರನ್ನು ಬರಮಾಡಿಕೊಂಡು-
ಉ|| ಸಾರಮನಂಗ ಜಂಗಮ ಲತಾ ಲಲಿತಾಂಗಿಯರಿಂದಮಲ್ತೆ ಸಂ |
     ಸಾರಮಿದೆಂಬುದಿನ್ನೆನಗೆ ತಪ್ಪುದು ತನ್ಮುನಿ ಶಾಪದಿಂದಮಿ ||
     ನ್ನಾರುಮಿದರ್ಕೆ ವಕ್ರಿಸದಿರಿಂ ವನವಾಸದೊಳಿರ್ಪೆನೆಂದು ದು |
     ರ್ವಾರ ಪರಾಕ್ರಮಂ ತಳರೆ ಬಾರಿಸಿ ವಾರಿಸಿ ಕುಂತಿ ಮಾದ್ರಿಯರ್ ||೧೧೪||
(ಸಾರಂ ಅನಂಗ ಜಂಗಮ ಲತಾ ಲಲಿತಾಂಗಿಯರಿಂದಂ ಅಲ್ತೆ ಸಂಸಾರಂ ಇದೆಂಬುದು ಇನ್ನೆನಗೆ ತಪ್ಪುದು ತನ್ಮುನಿ ಶಾಪದಿಂದಂ, ಇನ್ ಆರುಂ ಇದರ್ಕೆ ವಕ್ರಿಸದಿರಿಂ, ವನವಾಸದೊಳ್ ಇರ್ಪೆನ್, ಎಂದು ದುರ್ವಾರ ಪರಾಕ್ರಮಂ ತಳರೆ, ಬಾರಿಸಿ ವಾರಿಸಿ ಕುಂತಿ ಮಾದ್ರಿಯರ್,)
“ಈ ಸಂಸಾರದ ಸಾರವಿರುವುದು ನಡೆದಾಡುವ ಕಾಮದ ಬಳ್ಳಿಗಳಂತೆ ಅತ್ತಿತ್ತ ಸುಳಿಯುವ   ಹೆಣ್ಣುಗಳಲ್ಲಿಯೇ ಅಲ್ಲವೆ? ಮುನಿಯ ಶಾಪದಿಂದಾಗಿ ಇನ್ನು ಮುಂದೆ ಆ ಸಾರದಿಂದಲೇ ನಾನು ದೂರ ಇರಬೇಕಾಗಿದೆ. ಹಾಗಾಗಿ ನಾನಿನ್ನು ಕಾಡಿಗೆ ಹೋಗಿ ಅಲ್ಲಿಯೇ ಇರುತ್ತೇನೆ. ನೀವ್ಯಾರೂ ಇದಕ್ಕೆ ಅಡ್ಡಿ ಮಾಡಬೇಡಿ” ಎಂದು ಹೇಳಿ ಆ ಮಹಾಶೂರನು ಹೊರಡಲು ಸಿದ್ಧನಾದಾಗ “ಬೇಡ, ಬೇಡ” ಎನ್ನುತ್ತ ಕುಂತಿ ಮಾದ್ರಿಯರು-
ವ|| ಬೆನ್ನ ಬೆನ್ನನೆ ಬರೆ ಬಿನ್ನ ಬಿನ್ನನೆ ಪೋಗಿ-
ಅವನ ಬೆನ್ನ ಹಿಂದೆಯೇ ಬರಲು, ಪಾಂಡುವು ಮುಂದೆ ಮುಂದೆ ಹೋಗಿ-

ಶುಕ್ರವಾರ, ಜುಲೈ 13, 2018


ಪಂಪಭಾರತ ಆಶ್ವಾಸ ೧ ಪದ್ಯಗಳು ೮೬-೧೦೩


ವ|| ಅಂತು ದಿವ್ಯ ಸಂಯೋಗದೊಳಿರ್ವರುಂ ಗರ್ಭಮಂ ತಾಳ್ದರ್ ಮತ್ತೊರ್ವ ಮಗನಂ ವರಮಂ ಬೇಡೆಂದಂಬಿಕೆಗೆ ಪೇೞ್ದೊಡಾಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲಲಸಿ ತನ್ನ ಸೂೞಾಯ್ತೆಯಂ ತನ್ನವೊಲೆ ಕಯ್ಗೆಯ್ದು ಬರವಂ ಬೇಡಲಟ್ಟಿದೊಡಾಕೆಗೆ ವರದನಾಗಿ ವ್ಯಾಸಮುನೀಂದ್ರಂ ಸತ್ಯವತಿಗಂ ಭೀಷ್ಮಂಗಮಿಂತೆಂದನೆನ್ನ ವರಪ್ರಸಾದ ಕಾಲದೊಳೆನ್ನಂ ಕಂಡಂಬಿಕೆ ಕಣ್ಣಂ ಮುಚ್ಚಿದಳಪ್ಪುದಱಿಂದಾಕೆಗೆ
ಧೃತರಾಷ್ಟ್ರನೆಂಬ ಮಗನತ್ಯಂತ ಸುಂದರಾಂಗನಾಗಿಯುಂ ಜಾತ್ಯಂಧನಕ್ಕುಮಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಿಂದಾಕೆಗೆ ಪಾಂಡುರೋಗ ಸಂಗತನುಮನೇಕ ಭದ್ರ ಲಕ್ಷಣ ಲಕ್ಷಿತನುಮತ್ಯಂತ ಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕ್ಕುಮಂಬಿಕೆಯ ಸೂೞಾಯ್ತೆಯಪ್ಪಾಕೆ ದರಹಸಿತ ವದನಾರವಿಂದೆಯಾಗಿ ಬರವಂ ಕೈಕೊಂಡಳಪ್ಪುದಱಿಂದಾಕೆಯ ಮಗಂ ವಿದುರನೆಂಬನನಂಗಾಕಾರನುಮಾಚಾರವಂತನುಂ ಬುದ್ಧಿವಂತನುಮಕ್ಕುಮೆಂದು ಪೇೞ್ದು ಮುನಿಪುಂಗವಂ ಪೋದನಿತ್ತಂ-
(ಅಂತು ದಿವ್ಯ ಸಂಯೋಗದೊಳ್ ಇರ್ವರುಂ ಗರ್ಭಮಂ ತಾಳ್ದರ್. ಮತ್ತೊರ್ವ ಮಗನಂ ವರಮಂ ಬೇಡೆಂದು ಅಂಬಿಕೆಗೆ ಪೇೞ್ದೊಡೆ, ಆಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲ್ ಅಲಸಿ, ತನ್ನ ಸೂೞಾಯ್ತೆಯಂ ತನ್ನವೊಲೆ ಕಯ್ಗೆಯ್ದು, ಬರವಂ ಬೇಡಲ್ ಅಟ್ಟಿದೊಡೆ, ಆಕೆಗೆ ವರದನಾಗಿ ವ್ಯಾಸಮುನೀಂದ್ರಂ ಸತ್ಯವತಿಗಂ, ಭೀಷ್ಮಂಗಂ, ಇಂತೆಂದನ್: “ಎನ್ನ ವರಪ್ರಸಾದ ಕಾಲದೊಳ್ ಎನ್ನಂ ಕಂಡು ಅಂಬಿಕೆ ಕಣ್ಣಂ ಮುಚ್ಚಿದೞಪ್ಪುದಱಿಂದ, ಆಕೆಗೆ ಧೃತರಾಷ್ಟ್ರನೆಂಬ ಮಗನ್ ಅತ್ಯಂತ ಸುಂದರಾಂಗನಾಗಿಯುಂ ಜಾತ್ಯಂಧನ್ ಅಕ್ಕುಂ. ಅಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಿಂದ, ಆಕೆಗೆ ಪಾಂಡುರೋಗ ಸಂಗತನುಂ, ಅನೇಕ ಭದ್ರ ಲಕ್ಷಣ ಲಕ್ಷಿತನುಂ, ಅತ್ಯಂತ ಪ್ರತಾಪನುಂ ಆಗಿ, ಪಾಂಡುರಾಜನೆಂಬ ಮಗನ್ ಅಕ್ಕುಂ. ಅಂಬಿಕೆಯ ಸೂೞಾಯ್ತೆಯಪ್ಪಾಕೆ ದರಹಸಿತ ವದನಾರವಿಂದೆಯಾಗಿ ಬರವಂ ಕೈಕೊಂಡಳಪ್ಪುದಱಿಂದ, ಆಕೆಯ ಮಗಂ ವಿದುರನೆಂಬನ್ ಅನಂಗಾಕಾರನುಂ, ಆಚಾರವಂತನುಂ, ಬುದ್ಧಿವಂತನುಂ ಅಕ್ಕುಂ” ಎಂದು ಪೇೞ್ದು ಮುನಿಪುಂಗವಂ ಪೋದನಿತ್ತಂ-)
ವ| ಹೀಗೆ ದಿವ್ಯ ಕೂಡುವಿಕೆಯಿಂದ ಅವರಿಬ್ಬರೂ ಬಸಿರಾದರು. ನಂತರ ಅಂಬಿಕೆಗೆ ಮತ್ತೊಂದು ವರವನ್ನು ಬೇಡುವಂತೆ ಹೇಳಲಾಯಿತು. ಆದರೆ ಆಕೆ ಮತ್ತೆ ವ್ಯಾಸಮುನಿಯ ಹತ್ತಿರ ಹೋಗಲು ಮೈಗಳ್ಳತನ ಮಾಡಿ, ತನ್ನ ಪರಿಚಾರಿಕೆಗೆ ತನ್ನ ಹಾಗೆಯೇ ಕಾಣುವಂತೆ ಸಿಂಗಾರ ಮಾಡಿ ವರವನ್ನು ಪಡೆದು ಬರಲು ವ್ಯಾಸ ಮುನಿಯ ಹತ್ತಿರ ಕಳಿಸಿದಳು. ವ್ಯಾಸಮುನಿಯು ಆ ಪರಿಚಾರಿಕೆಗೆ ಗಂಡುಮಗು ಆಗುವಂತೆ ವರವನ್ನು ಕೊಟ್ಟನು. ನಂತರ ವ್ಯಾಸಮುನಿಯು ಸತ್ಯವತಿ ಹಾಗೂ ಭೀಷ್ಮರನ್ನು ಕುರಿತು ಹೀಗೆಂದನು: ವರ ಕೊಡುವ ಹೊತ್ತಿಗೆ ಅಂಬಿಕೆಯು ನನ್ನನ್ನು ಕಂಡು ಕಣ್ಣು ಮುಚ್ಚಿಕೊಂಡಳು. ಹಾಗಾಗಿ ಅವಳಿಗೆ ಅತ್ಯಂತ ಚೆಲುವನೂ, ಜಾತಿಗುರುಡನೂ ಆದ ಮಗನು ಹುಟ್ಟುತ್ತಾನೆ. ನನ್ನನ್ನು ಕಂಡು ಅಂಬಾಲೆಯ ಮುಖ ಬಿಳಿಚಿದ್ದರಿಂದ ಆಕೆಗೆ ಪಾಂಡುರೋಗವಿರುವ, ಎಲ್ಲ ಲಕ್ಷಣಗಳಿಂದ ಕೂಡಿದ, ವೀರನಾದ ಪಾಂಡುರಾಜನೆಂಬ ಮಗನು ಹುಟ್ಟುತ್ತಾನೆ. ಅಂಬಿಕೆಯ ಪರಿಚಾರಿಕೆಯು ಮುಗುಳ್ನಗುತ್ತ ನನ್ನನ್ನು ಒಪ್ಪಿಕೊಂಡದ್ದರಿಂದ ಆಕೆಯ ಮಗ ವಿದುರನು ಮನ್ಮಥನ ಹಾಗೆ ಸುಂದರನೂ, ಆಚಾರವಂತನೂ, ಬುದ್ಧಿವಂತನೂ ಆಗುತ್ತಾನೆ’. ಇಷ್ಟು ಹೇಳಿ ಮುನಿಯು ಅಲ್ಲಿಂದ ಹೊರಟು ಹೋದನು.
ಪೃಥ್ವಿ|| ವರಂಬಡೆದ ಸಂತಸಂ ಮನದೊಳಾಗಲೊಂದುತ್ತರೋ |
     ತ್ತರಂ ಬಳೆವ ಮಾೞ್ಕೆಯಿಂ ಬಳೆವ ಗರ್ಭಮಂ ತಾಳ್ದಿಯಾ ||
     ದರಂ ಬೆರಸು ಪೆತ್ತರಂದು ಧೃತರಾಷ್ಟ್ರ ವಿಖ್ಯಾತ ಪಾಂ |
     ಡುರಾಜ ವಿದುರರ್ಕಳಂ ಕ್ರಮದೆ ಮೂವರುಂ ಮೂವರಂ ||೮೬||
 (ವರಂಬಡೆದ ಸಂತಸಂ ಮನದೊಳ್ ಆಗಲ್, ಒಂದುತ್ತರೋತ್ತರಂ ಬಳೆವ ಮಾೞ್ಕೆಯಿಂ ಬಳೆವ ಗರ್ಭಮಂ ತಾಳ್ದಿ, ಆದರಂ ಬೆರಸು ಪೆತ್ತರ್, ಅಂದು, ಧೃತರಾಷ್ಟ್ರ ವಿಖ್ಯಾತ ಪಾಂಡುರಾಜ ವಿದುರರ್ಕಳಂ, ಕ್ರಮದೆ ಮೂವರುಂ ಮೂವರಂ.)
ವರವನ್ನು ಪಡೆದ ಆ ಮೂವರ ಮನಸ್ಸಿನಲ್ಲಿಯೂ ಉಲ್ಲಾಸ ಮೂಡಿತು. ಆ ಉಲ್ಲಾಸವು ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಯಿತು. ಅದರೊಂದಿಗೇ ಅವರ ಬಸಿರೂ ಬೆಳೆದು ಆ ಮೂವರೂ (ಅಂಬಿಕೆ, ಅಂಬಾಲೆ, ಪರಿಚಾರಿಕೆ) ಕ್ರಮವಾಗಿ ಧೃತರಾಷ್ಟ್ರ, ಪಾಂಡುರಾಜ ಮತ್ತು ವಿದುರ ಎಂಬ ಮಕ್ಕಳನ್ನು ಹೆತ್ತರು.
ಕಂ|| ಆ ವಿವಿಧ ಲಕ್ಷಣಂಗಳೊ |
     ಳಾವರಿಸಿದ ಕುಲದ ಬಲದ ಚಲದಳವಿಗಳೊಳ್ ||
     ಮೂವರುಮನಾದಿ ಪುರುಷರ್ |
     ಮೂವರುಮೆನಲಲ್ಲದ[ತ್ತ] ಮತ್ತೇನೆಂಬರ್ ||೮೭||
(ಆ ವಿವಿಧ ಲಕ್ಷಣಂಗಳೊಳ್ ಆವರಿಸಿದ ಕುಲದ, ಬಲದ, ಚಲದ ಅಳವಿಗಳೊಳ್,  ಮೂವರುಮನ್ ಆದಿ ಪುರುಷರ್ ಮೂವರುಂ ಎನಲಲ್ಲದೆ, ಅತ್ತ ಮತ್ತೇನೆಂಬರ್?)
ಆ ಮಕ್ಕಳಲ್ಲಿ ಎದ್ದು ಕಾಣಿಸಿದ ರಾಜ ಲಕ್ಷಣಗಳಿಂದ ಕುಲ, ಬಲ, ಛಲಗಳ ಪ್ರಮಾಣದಿಂದ ಅವರನ್ನು ತ್ರಿಮೂರ್ತಿಗಳಾದ ಆದಿಪುರುಷರು (ಬ್ರಹ್ಮ, ವಿಷ್ಣು, ಮಹೇಶ್ವರರು) ಎಂದೇ ಹೇಳುತ್ತಾರೆ. ಹಾಗಲ್ಲದೆ ಮತ್ತೇನು ತಾನೆ ಹೇಳಲು ಸಾಧ್ಯ?
ವ|| ಅಂತವರ್ಗೆ ಜಾತಕರ್ಮ ನಾಮಕರಣಾನ್ನಪ್ರಾಶನ ಚೌಲೋಪನಯನಾದಿ ಷೋಡಶ ಕ್ರಿಯೆಗಳಂ  ಗಾಂಗೇಯಂ ತಾಂ ಮುಂತಿಟ್ಟು  ಮಾಡಿ ಶಸ್ತ್ರ ಶಾಸ್ತ್ರಂಗಳೊಳ್ ಅತಿ ಪರಿಣತರಂ ಮಾಡಿ ಮದುವೆಯಂ ಮಾಡಲೆಂದು ಧೃತರಾಷ್ಟ್ರಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟು-
(ಅಂತವರ್ಗೆ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ, ಉಪನಯನಾದಿ ಷೋಡಶ ಕ್ರಿಯೆಗಳಂ  ಗಾಂಗೇಯಂ ತಾಂ ಮುಂತಿಟ್ಟು  ಮಾಡಿ, ಶಸ್ತ್ರ ಶಾಸ್ತ್ರಂಗಳೊಳ್ ಅತಿ ಪರಿಣತರಂ ಮಾಡಿ, ಮದುವೆಯಂ ಮಾಡಲೆಂದು ಧೃತರಾಷ್ಟ್ರಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯ ಒಡವುಟ್ಟಿದಳಂ ತಂದುಕೊಟ್ಟು,)
ಹಾಗೆ ಅವರಿಗೆಲ್ಲ ಹುಟ್ಟಿನ ಸಂಸ್ಕಾರ, ಹೆಸರಿಡುವುದು, ಅನ್ನ ಉಣಿಸುವುದು, ಕೂದಲು ಕತ್ತರಿಸುವುದು, ಜನಿವಾರ ತೊಡಿಸುವುದು ಮುಂತಾದ ಹದಿನಾರು ವಿಧಿಗಳನ್ನು ಗಾಂಗೇಯನು ತಾನೇ ಮುಂದೆ ನಿಂತು ಮಾಡಿಸಿ, ಶಸ್ತ್ರ ಶಾಸ್ತ್ರಗಳಲ್ಲಿ ಪರಿಣತರನ್ನಾಗಿಸಿದನು. ಅನಂತರ ಧೃತರಾಷ್ಟ್ರನಿಗೆ ಗಾಂಧಾರ ರಾಜನ ಮಗಳೂ, ಶಕುನಿಯ ಒಡಹುಟ್ಟೂ ಆದ ಗಾಂಧಾರಿಯನ್ನು ತಂದು ಮದುವೆ ಮಾಡಿಸಿದನು.
ಕಂ|| ಮತ್ತಿತ್ತ ನೆಗೞ್ತೆಯ ಪುರು |
     ಷೋತ್ತಮನ ಪಿತಾಮಹಂಗೆ ಶೂರಂಗೆ ಮಗಳ್ ||
     ಮತ್ತಗಜಗಮನೆ ಯದು ವಂ |
     ಶೋತ್ತಮೆಯೆನೆ ಕುಂತಿ ಕುಂತಿಭೋಜನ ಮನೆಯೊಳ್ ||೮೮||
(ಮತ್ತಿತ್ತ, ನೆಗೞ್ತೆಯ ಪುರುಷೋತ್ತಮನ ಪಿತಾಮಹಂಗೆ, ಶೂರಂಗೆ, ಮಗಳ್ ಮತ್ತಗಜಗಮನೆ ಯದು ವಂಶೋತ್ತಮೆ ಎನೆ, ಕುಂತಿ ಕುಂತಿಭೋಜನ ಮನೆಯೊಳ್,)
ಕಂ|| ಬಳೆಯುತ್ತಿರ್ಪನ್ನೆಗಮಾ ||
     ನಳಿನಾಸ್ಯೆಯ ಗೆಯ್ದದೊಂದು ಶುಶ್ರೂಷೆ ಮನಂ ||
     ಗೊಳೆ ಕೊಟ್ಟಂ [ದು]ರ್ವಾಸಂ |
     ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ ||೮೯||
(ಬಳೆಯುತ್ತಿರ್ಪನ್ನೆಗಂ, ಆ ನಳಿನಾಸ್ಯೆಯ ಗೆಯ್ದ ಅದೊಂದು ಶುಶ್ರೂಷೆ ಮನಂಗೊಳೆ, ಕೊಟ್ಟಂ ದುರ್ವಾಸಂ ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ.)
ಇತ್ತ ಹೆಸರಾಂತ ಶ್ರೀಕೃಷ್ಣನ ಅಜ್ಜನಾದ ಶೂರನ ಮಗಳು ಕುಂತಿಯು ಕುಂತಿಭೋಜನ ಮನೆಯಲ್ಲಿ ಬೆಳೆಯುತ್ತಿದ್ದಳು.
ಆಗ ಆಕೆಯು ಮಾಡಿದ ಸೇವೆಯಿಂದ ಮನತುಂಬಿ ಬಂದ ದುರ್ವಾಸ ಮುನಿಯು ಆಕೆಗೆ ಐದು ಮಂತ್ರಾಕ್ಷರಗಳನ್ನು ಕೊಟ್ಟನು.
ವ|| ಅಂತು ಕೊಟ್ಟಯ್ದು ಮಂತ್ರಾಕ್ಷರಂಗಳನಾಹ್ವಾನಂಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೊಂದು ದಿವಸಂ ಕೊಂತಿ-
(ಅಂತು ಕೊಟ್ಟು  “ಅಯ್ದು ಮಂತ್ರಾಕ್ಷರಂಗಳನ್ ಆಹ್ವಾನಂಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳಂ ಪಡೆವೆ”ಯೆಂದು ಬೆಸಸಿದೊಡೆ ಒಂದು ದಿವಸಂ ಕೊಂತಿ-)
ಹಾಗೆ ಕೊಟ್ಟು ‘ಈ ಐದು ಮಂತ್ರಾಕ್ಷರಗಳ ಮೂಲಕ (ದೇವತೆಗಳನ್ನು) ಆಹ್ವಾನಿಸಿ ನಿನಗೆ ಇಷ್ಟವಾದವರನ್ನು ಹೋಲುವ ಮಕ್ಕಳನ್ನು ಪಡೆಯುತ್ತೀಯೆ’ ಎಂದು ಮುನಿಯು ಹೇಳಿದನು. ಒಂದು ದಿನ, ತರುಣಿಯಾದ ಕುಂತಿಯು -
ವ|| [ಪು]ಚ್ಚವಣಂ ನೋಡುವೆನೆ
     ನ್ನಿಚ್ಚೆಯೊಳೀ ಮುನಿಯ ವರದ ಮಹಿಮೆಯನೆನುತಂ ||
     ದುಚ್ಚಸ್ತನಿ ಗಂಗೆಗೆ ಶಫ |
     ರೋಚ್ಚಳಿತ ತರತ್ತರಂಗೆಗೊರ್ವಳೆ ಬಂದಳ್ ||೯೦||
(ಪುಚ್ಚವಣಂ ನೋಡುವೆನ್ ಎನ್ನಿಚ್ಚೆಯೊಳ್ ಈ ಮುನಿಯ ವರದ ಮಹಿಮೆಯನ್ ಎನುತ, ಅಂದು ಉಚ್ಚಸ್ತನಿ, ಗಂಗೆಗೆ, ಶಫರೋಚ್ಚಳಿತ ತರತ್ತರಂಗೆಗೆ, ಒರ್ವಳೆ ಬಂದಳ್.)
(ಕುಂತಿಯು)ಮುನಿಯು ಕೊಟ್ಟ ಮಂತ್ರದ ಮಹಿಮೆಯನ್ನು ಪರೀಕ್ಷಿಸಿ ನೋಡುವ ಕುತೂಹಲದಿಂದ, ಮೀನುಗಳು ಚಿಮ್ಮಿ ಮೂಡಿಸಿದ ದೊಡ್ಡ ಅಲೆಗಳಿಂದ ತುಂಬಿ ಹರಿಯುವ ಗಂಗಾನದಿಯ ದಡಕ್ಕೆ ಒಬ್ಬಳೇ ಬಂದಳು.
ಕಂ|| ಬಂದು ಸುರನದಿಯ ನೀರೊಳ್ |
     ಮಿಂದಿನನಂ ನೋಡಿ ನಿನ್ನ ದೊರೆಯನೆ ಮಗನ ||
     ಕ್ಕೆಂದಾಹ್ವಾನಂಗೆಯ್ಯಲೊ |
     ಡಂ ದಲ್ ಧರೆಗಿೞಿದನಂದು ದಶಶತಕಿರಣಂ ||೯೧||
(ಬಂದು, ಸುರನದಿಯ ನೀರೊಳ್ ಮಿಂದು, ಇನನಂ ನೋಡಿ, “ನಿನ್ನ ದೊರೆಯನೆ ಮಗನ್ ಅಕ್ಕೆ” ಎಂದು  ಆಹ್ವಾನಂಗೆಯ್ಯಲ್, ಒಡಂ ದಲ್ ಧರೆಗಿೞಿದನ್ ಅಂದು ದಶಶತಕಿರಣಂ.)
ಬಂದು, ಗಂಗೆಯಲ್ಲಿ ಮಿಂದು, ಸೂರ್ಯನ ಕಡೆಗೆ ನೋಡಿ ‘ನಿನ್ನಂಥವನೇ ಮಗನು ನನಗೂ ಆಗಲಿ’ ಎಂದು ಸಂಕಲ್ಪಿಸಿ ಮಂತ್ರ ಹೇಳಿ ಸೂರ್ಯನನ್ನು ಕರೆದಳು. ಆ ಕೂಡಲೇ ಸಾಸಿರಕಿರಣನು ಭೂಮಿಗಿಳಿದು ಬಂದನು!
ವ|| ಅಂತು ನಭೋಭಾಗದಿಂ ಭೂಮಿಭಾಗಕ್ಕಿೞಿದು ತನ್ನ ಮುಂದೆ ನಿಂದರವಿಂದಬಾಂಧವನಂ ನೋಡಿ ನೋಡಿ-
(ಅಂತು ನಭೋಭಾಗದಿಂ ಭೂಮಿಭಾಗಕ್ಕೆ ಇೞಿದು, ತನ್ನ ಮುಂದೆ ನಿಂದ ಅರವಿಂದಬಾಂಧವನಂ ನೋಡಿ ನೋಡಿ,)
ಹಾಗೆ ಆಗಸದಿಂದ ಕೆಳಗಿಳಿದು ಬಂದು ತನ್ನೆದುರಿಗೆ ನಿಂತ ತಾವರೆಯ ನೆಂಟನನ್ನು ಮತ್ತೆ ಮತ್ತೆ ನೋಡಿ -
ಕಂ|| ಕೊಡಗೂಸುತನದ ಭಯದಿಂ |
     ನಡುಗುವ ಕನ್ನಿಕೆಯ ಬೆಮರ್ ನೀರ್ಗಳ ಪೊನಲೊ ||
     ೞ್ಕುಡಿಯಲೊಡಗೂ[ಡೆ] ಗಂಗೆಯ |
     ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ ||೯೨||
(ಕೊಡಗೂಸುತನದ ಭಯದಿಂ, ನಡುಗುವ ಕನ್ನಿಕೆಯ ಬೆಮರ್ ನೀರ್ಗಳ ಪೊನಲ್,  ಒೞ್ಕುಡಿಯಲ್ ಒಡಗೂಡೆ, ಗಂಗೆಯ ಮಡು ಕರೆಗೆ ಅಣ್ಮಿದುದು, ನಾಣ ಪೆಂಪು ಏಂ ಪಿರಿದೋ!)
ಕನ್ನಿಕೆ ಕುಂತಿಯು ಹೆದರಿ ಗಡಗಡನೆ ನಡುಗಿದಳು. ಅವಳ ಮೈಯಿಂದ ಬೆವರಿನ ಹೊನಲು ಹರಿದಿಳಿಯಿತು. ಆ ಹೊನಲು ಅದಾಗಲೇ ತುಂಬಿ ಹರಿಯುತ್ತಿದ್ದ ಗಂಗೆಯನ್ನು ಸೇರಿ ಗಂಗೆಯ ನೀರು ದಡ ಮೀರತೊಡಗಿತು!  ಕನ್ನಿಕೆಯ ನಾಚಿಕೆಯ ತೀವ್ರತೆ ಎಷ್ಟು ದೊಡ್ಡದೋ!
ವ|| ಆಗಳಾದಿತ್ಯನಾಕೆಯ ಮನದ ಶಂಕೆಯುಮಂ ನಡುಗುವ ಮೆಯ್ಯ ನಡುಕಮುಮಂ ಕಿಡೆನುಡಿದಿಂತೆಂದಂ-
(ಆಗಳ್ ಆದಿತ್ಯನ್ ಆಕೆಯ ಮನದ ಶಂಕೆಯುಮಂ, ನಡುಗುವ ಮೆಯ್ಯ ನಡುಕಮುಮಂ ಕಿಡೆ ನುಡಿದು, ಇಂತೆಂದಂ-)
ಆಗ ಆದಿತ್ಯನು ಅವಳ ಮನಸ್ಸಿನ ಆತಂಕವನ್ನೂ, ಮೈಯ ನಡುಕವನ್ನೂ ಹೋಗಲಾಡಿಸುವಂತೆ:
ಕಂ|| ಬರಿಸಿದ ಕಾರಣಮಾವುದೊ |
     ತರುಣಿ ಮುನೀಶ್ವರನ ಮಂತ್ರಮೇ ದೊರೆಯೆಂದಾ[೦] ||
     ಮರುಳಿಯೆನೆಯಱಿದುಮಱಿಯದೆ |
     ಬರಿಸಿದೆನಿನ್ನೇೞಿಮೆಂದೊಡಾಗದು ಪೋಗಲ್ ||೯೩||
(“ಬರಿಸಿದ ಕಾರಣಂ ಆವುದೊ ತರುಣಿ?” “ಮುನೀಶ್ವರನ ಮಂತ್ರಂ ಏದೊರೆ ಎಂದು! ಆಂ ಮರುಳಿಯೆನ್, ಅಱಿದುಂ ಅಱಿಯದೆ  ಬರಿಸಿದೆನ್,  ಇನ್ನೇೞಿಂ” ಎಂದೊಡೆ “ಆಗದು ಪೋಗಲ್-)
ಕಂ|| ಮುಂ ಬೇಡಿದ ವರಮಂ ಕುಡ |
     ದಂಬುಜಮುಖಿ ಪುತ್ರನೆನ್ನ ದೊರೆಯಂ ನಿನಗ ||
     ಕ್ಕೆಂಬುದುಮೊದವಿದ ಗರ್ಭದೊ |
     ಳಂಬುಜಮಿತ್ರನನೆ ಪೋಲ್ವ ಮಗನೊಗೆತಂದಂ ||೯೪|| 
(-ಮುಂ ಬೇಡಿದ ವರಮಂ ಕುಡದೆ ಅಂಬುಜಮುಖಿ, ಪುತ್ರನ್ ಎನ್ನ ದೊರೆಯಂ ನಿನಗಕ್ಕೆ” ಎಂಬುದುಂ, ಒದವಿದ ಗರ್ಭದೊಳ್ ಅಂಬುಜಮಿತ್ರನನೆ ಪೋಲ್ವ ಮಗನ್ ಒಗೆತಂದಂ.)
“ಎಲೈ ತರುಣೀ, ಯಾಕಾಗಿ ನನ್ನನ್ನು ಬರಿಸಿದೆ?”
“ಮುನಿಯ ಮಂತ್ರ ಎಂತಹುದು ಎಂದು ತಿಳಿಯಲು! ನಾನೊಬ್ಬಳು ಮಳ್ಳಿ! ಗೊತ್ತಿದ್ದೂ ಇಲ್ಲದವಳ ಹಾಗೆ ನಿಮ್ಮನ್ನು ಬರಿಸಿಬಿಟ್ಟೆ! ನೀವಿನ್ನು ಹೊರಡಿ!
“ಇಲ್ಲ! ತರುಣೀ, ನೀನು ಬೇಡಿದ ವರವನ್ನು ಕೊಡದೆ ಹೋಗುವಂತಿಲ್ಲ! ತಾವರೆಯ ಮೊಗದವಳೇ, ನಿನಗೆ ನನ್ನಂತೆಯೇ ಇರುವ ಮಗನಾಗಲಿ!”
ಸೂರ್ಯನು ಹೀಗೆಂದ ಕೂಡಲೇ ಕುಂತಿಯಲ್ಲಿ ಸೂರ್ಯನನ್ನೇ ಹೋಲುವ ಮಗನು ಹುಟ್ಟಿ ಬಂದನು!
ಕಂ|| ಒಡವುಟ್ಟಿದ ಮಣಿಕುಂಡಲ |
     ಮೊಡವುಟ್ಟಿದ ಸಹಜಕವಚಮಮರ್ದಿರೆ ತನ್ನೊಳ್ ||
     ತೊಡರ್ದಿರೆಯುಂ ಬಂದಾಕೆಯ |
     ನಡುಕಮನೊಡರಿಸಿದ[ನಾ]ಗಳಾ ಬಾ[ಲಿಕೆಯಾ] ||೯೫||
(ಒಡವುಟ್ಟಿದ ಮಣಿಕುಂಡಲಂ, ಒಡವುಟ್ಟಿದ ಸಹಜಕವಚಂ ಅಮರ್ದಿರೆ ತನ್ನೊಳ್ ತೊಡರ್ದಿರೆಯುಂ, ಬಂದಾಕೆಯ ನಡುಕಮನ್ ಒಡರಿಸಿದನ್, ಆಗಳಾ ಬಾಲಿಕೆಯಾ.)
ಹೀಗೆ, ಹುಟ್ಟಿನಿಂದಲೇ ಸಹಜವಾದ ಕಿವಿಯೋಲೆಗಳನ್ನೂ, ಕವಚವನ್ನೂ ಪಡೆದಿದ್ದ ಮಗನು ಹುಟ್ಟಿಬಂದು ಆ ಹುಡುಗಿಗೆ ನಡುಕವನ್ನು ಉಂಟುಮಾಡಿದನು.
ವ|| ಅಂತು ನಡನಡ ನಡುಗಿ ಜಲದೇವತೆಗಳಪ್ಪೊಡಂ ಮನಂಗಾಣ್ಬರೆಂದು ನಿಧಾನಮನೀಡಾಡುವಂತೆ ಕೂಸಂ ಗಂಗೆಯೊಳೀಡಾಡಿ ಬಂದಳಿತ್ತ ಗಂಗಾದೇವಿಯುಮಾ ಕೂಸಂ ಮುೞುಗಲೀಯದೆ ತನ್ನ ತೆರೆಗಳೆಂಬ ನಳಿತೋಳ್ಗಳಿನೊಯ್ಯನೊಯ್ಯನೆ ತಳ್ಕೈಸಿ ತರೆ ಗಂಗಾತೀರದೊಳಿರ್ಪ ಸೂತನೆಂಬವಂ ಕಂಡು-
(ಅಂತು ನಡನಡ ನಡುಗಿ, ಜಲದೇವತೆಗಳ್ ಅಪ್ಪೊಡಂ ಮನಂಗಾಣ್ಬರ್ ಎಂದು, ನಿಧಾನಮನ್ ಈಡಾಡುವಂತೆ, ಕೂಸಂ ಗಂಗೆಯೊಳ್ ಈಡಾಡಿ ಬಂದಳ್. ಇತ್ತ ಗಂಗಾದೇವಿಯುಂ, ಆ ಕೂಸಂ ಮುೞುಗಲ್ ಈಯದೆ, ತನ್ನ ತೆರೆಗಳೆಂಬ ನಳಿತೋಳ್ಗಳಿನ್ ಒಯ್ಯನೊಯ್ಯನೆ ತಳ್ಕೈಸಿ ತರೆ, ಗಂಗಾತೀರದೊಳ್ ಇರ್ಪ ಸೂತನೆಂಬವಂ ಕಂಡು,)
ಹೀಗೆ ಕುಂತಿಯು ಗಡಗಡ ನಡುಗಿ, ‘ನೀರದೇವತೆಗಳಿಗಾದರೂ ನನ್ನ ಸಂಕಟವು ಅರ್ಥವಾದೀತು’ ಎಂದು ಹಾರೈಸಿ, ನಿಧಿಯನ್ನು ಬಿಸಾಡುವಂತೆ ಆ ಕೂಸನ್ನು ಗಂಗೆಯಲ್ಲಿ ಬಿಸಾಡಿದಳು. ಇತ್ತ ಗಂಗಾದೇವಿಯು ಆ ಕೂಸನ್ನು ಮುಳುಗಲು ಬಿಡದೆ, ತನ್ನ ತೆರೆಗಳೆಂಬ ಮೆದುತೋಳುಗಳಿಂದ ಹಗುರವಾಗಿ ಅಪ್ಪಿ ಹಿಡಿದು ತರುತ್ತಿರುವಾಗ ಗಂಗೆಯ ದಂಡೆಯಲ್ಲಿದ್ದ ಸೂತನೆಂಬುವನು ಅದನ್ನು ಕಂಡು-
ಉ|| ಬಾಳ ದಿನೇಶ ಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ ಮೇಣ್ ಫಣೀಂ |
     ದ್ರಾಳಯದಿಂದಮುರ್ಚಿದ ಫಣಾಮಣಿ ಮಂಗಳ ರಶ್ಮಿಯೊ ಕರಂ ||
     ಮೇಳಿಸಿದಪ್ಪುದೆನ್ನೆರ್ದೆಯನೆಂದು ಬೊದಿಲ್ಲೆನೆ ಪಾಯ್ದು ನೀರೊಳಾ |
     ಬಾಳನನಾದಮಾದರದೆ ಕಂಡೊಸೆದಂ ನಿಧಿಗಂಡನಂತೆವೋಲ್ ||೯೬||
(ಬಾಳ ದಿನೇಶ ಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ, ಮೇಣ್ ಫಣೀಂದ್ರಾಳಯದಿಂದಂ ಉರ್ಚಿದ ಫಣಾಮಣಿ ಮಂಗಳ ರಶ್ಮಿಯೊ, ಕರಂ ಮೇಳಿಸಿದಪ್ಪುದು ಎನ್ನ ಎರ್ದೆಯನ್ ಎಂದು, ಬೊದಿಲ್ಲೆನೆ ಪಾಯ್ದು ನೀರೊಳ್, ಆ ಬಾಳನನ್ ಆದಂ ಆದರದೆ ಕಂಡು ಒಸೆದಂ, ನಿಧಿಗಂಡನಂತೆವೋಲ್.)
‘ಎಳೆಯ ಸೂರ್ಯನ ನೆರಳು ನೀರಿನಲ್ಲಿ ನೆಲೆಸಿದೆಯೋ, ಹಾವುಗಳ ಲೋಕದಿಂದ ಚಿಮ್ಮಿ ಬಂದ ಹಣೆಮಣಿಯ ಕಿರಣಗಳೋ ಎಂಬಂತೆ ಇದು ನನ್ನ ಹೃದಯದಲ್ಲಿ ಪ್ರೀತಿಯನ್ನು ಹುಟ್ಟಿಸುತ್ತಿದೆ’ ಎಂದುಕೊಂಡು (ಸೂತನು) ಆ ನದಿಗೆ ಬೊದಿಲ್ಲನೆ ಹಾರಿ, ಆ ಮಗುವನ್ನು ತುಂಬಾ ಪ್ರೀತಿಯಿಂದ ಎತ್ತಿಕೊಂಡು ನಿಧಿಯನ್ನು ಕಂಡವನಂತೆ ಸಂತೋಷಪಟ್ಟನು.
ವ|| ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ ಕೂಸನಿಟ್ಟೊಡಾಕೆ ರಾಗಿಸಿ ಸುತನ ಸೂತಕಮಂ ಕೊಂಡಾ[ಡೆ]-
(ಅಂತು ಕಂಡು, ಮನಂಗೊಂಡು, ಎತ್ತಿಕೊಂಡು, ಮನೆಗೆ ತಂದು, ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ ಕೂಸನ್ ಇಟ್ಟೊಡೆ, ಆಕೆ ರಾಗಿಸಿ ಸುತನ ಸೂತಕಮಂ ಕೊಂಡಾಡೆ,)
ಹಾಗೆ ಕಂಡು, ಮನದುಂಬಿ, ಅದನ್ನು ಎತ್ತಿಕೊಂಡು ಮನೆಗೆ ತಂದು ತನ್ನ ನಲ್ಲೆ ರಾಧೆಯ ಮಡಿಲಲ್ಲಿಟ್ಟನು. ಆಗ ರಾಧೆಯು ಪ್ರೀತಿಯಿಂದ ಆ ಮಗುವಿನ ಸೂತಕವನ್ನು ಆಚರಿಸಿದಳು.
ಕಂ|| ಅಗುೞ್ದಿರಲಾ ಕುೞಿಯೊಳ್ ತೊ |
     ಟ್ಟಗೆ ನಿಧಿಗಂಡಂತೆ ವಸುಧೆಗಸದಳಮಾಯ್ತಾ ||
     ಮಗ[ನಂ]ದಮೆಂದು [ಲೋಗರ್] |
     ಬಗೆದಿರೆ ವಸುಷೇಣನೆಂಬ ಪೆಸರಾಯ್ತಾಗಳ್ ||೯೭||
(ಅಗುೞ್ದಿರಲ್ ಆ ಕುೞಿಯೊಳ್ ತೊಟ್ಟಗೆ ನಿಧಿಗಂಡಂತೆ, ವಸುಧೆಗೆ ಅಸದಳಮಾಯ್ತು ಆ  ಮಗನ ಅಂದಂ ಎಂದು ಲೋಗರ್ ಬಗೆದಿರೆ, ವಸುಷೇಣನೆಂಬ ಪೆಸರ್ ಆಯ್ತು ಆಗಳ್.)
ಅಗೆಯುತ್ತಿದ್ದ ಗುಂಡಿಯಲ್ಲಿ ನಿಧಿ ಸಿಕ್ಕುವಂತೆ ಆಕಸ್ಮಿಕವಾಗಿ ಸಿಕ್ಕಿದ, ಲೋಕದಲ್ಲಿ ಬೇರೆಲ್ಲೂ ಇಲ್ಲದಂಥ ಚೆಲುವನಾದ ಆ ಮಗುವಿಗೆ ಜನರು ವಸುಷೇಣ ಎಂದು ಹೆಸರಿಟ್ಟರು.
ಕಂ|| ಅಂತು ವಸುಷೇಣನಾಲೋ |
     ಕಾಂತಂಬರಮಳವಿ ಬಳೆಯೆ ಬಳದೆಸಕಮದೋ ||
     ರಂತೆ ಜನ[೦ಗಳ] ಕರ್ಣೋ |
     ಪಾಂತದೊಳೊಗೆದೆಸೆಯೆ ಕರ್ಣನೆಂಬನುಮಾದಂ ||೯೮||
(ಅಂತು ವಸುಷೇಣನ್ ಆಲೋಕಾಂತಂಬರಂ ಅಳವಿ ಬಳೆಯೆ, ಬಳದೆಸಕಂ ಅದು ಓರಂತೆ ಜನ೦ಗಳ ಕರ್ಣೋಪಾಂತದೊಳ್ ಒಗೆದೆಸೆಯೆ, ಕರ್ಣನೆಂಬನುಂ ಆದಂ.)
ಹೀಗೆ ವಸುಷೇಣನ ಸಾಮರ್ಥ್ಯವು ಲೋಕದಲ್ಲಿ ಬೆಳೆಯುತ್ತ ಹೋಯಿತು. ಅದು ಬೆಳೆದ ರೀತಿಯು ಕಿವಿಯಿಂದ ಕಿವಿಗೆ ಹರಡುತ್ತ ಹೋಯಿತು. ಅದರಿಂದಾಗಿ ವಸುಷೇಣನು ‘ಕರ್ಣ’ ಎಂಬ ಹೆಸರನ್ನು ಪಡೆದನು.
ವ|| ಆಗಿಯಾತಂ ಶಸ್ತ್ರ ಶಾಸ್ತ್ರ ವಿದ್ಯೆಯೊಳತಿ ಪರಿಣತನಾಗಿ ನವಯೌವನಾರಂಭದೊಳ್-
(ಆಗಿ ಆತಂ ಶಸ್ತ್ರ ಶಾಸ್ತ್ರ ವಿದ್ಯೆಯೊಳ್ ಅತಿ ಪರಿಣತನಾಗಿ, ನವಯೌವನಾರಂಭದೊಳ್,)
ಕರ್ಣನೆಂಬ ಹೆಸರು ಪಡೆದ ಅವನು ಶಸ್ತ್ರವಿದ್ಯೆಯಲ್ಲಿಯೂ, ಶಾಸ್ತ್ರಗಳಲ್ಲೂ ಪಾರಂಗತನಾದನು. ಅವನಿಗೆ ಹೊಸ ಹರೆಯ ಬರುತ್ತಿದ್ದಂತೆ-
ಚಂ|| ಪೊಡೆದುದು ಬಿಲ್ಲ ಜೇವೊಡೆಯೆ ಮೀಱುವ ವೈರಿ ನರೇಂದ್ರರಂ ಸಿಡಿ |
     ಲ್ವೊಡೆದವೊಲಟ್ಟಿ ಮುಟ್ಟಿ ಕಡಿದಿಕ್ಕಿದುದಾದೆಡರಂ ನಿರಂತರಂ ||
     ಕಡಿಕಡಿದಿತ್ತ ಪೊನ್ನೆ ಬುಧಮಾಗಧ ವಂದಿ ಜನಕ್ಕೆ ಕೊಟ್ಟ ಕೋ |
     [ಡೆ]ಡರದೆ ಬೇಡಿ[ಮೋ]ಡಿಮಿದು ಚಾಗದ ಬೀರದ ಮಾತು ಕರ್ಣನಾ ||೯೯||
(ಪೊಡೆದುದು ಬಿಲ್ಲ ಜೇವೊಡೆಯೆ ಮೀಱುವ ವೈರಿ ನರೇಂದ್ರರಂ, ಸಿಡಿಲ್ವೊಡೆದವೊಲ್ ಅಟ್ಟಿ, ಮುಟ್ಟಿ, ಕಡಿದು ಇಕ್ಕಿದುದು ಆದ ಎಡರಂ ನಿರಂತರಂ ಕಡಿಕಡಿದು ಇತ್ತ ಪೊನ್ನೆ ಬುಧಮಾಗಧ ವಂದಿ ಜನಕ್ಕೆ ಕೊಟ್ಟ ಕೋಡು, ಎಡರದೆ ಬೇಡಿಂ, ಓಡಿಂ, ಇದು ಚಾಗದ ಬೀರದ ಮಾತು ಕರ್ಣನಾ.)
‘ಕರ್ಣನ ಬಿಲ್ಲ ಟಂಕಾರವೇ ಹೇಳಿದ ಮಾತು ಕೇಳದ ವೈರಿರಾಜರನ್ನು ಹೋಗಿ ಹೊಡೆಯಿತು. ಅವನು ಪಂಡಿತರಿಗೆ, ಹೊಗಳುಭಟರಿಗೆ ಕಡಿಕಡಿದು ಕೊಟ್ಟ ಬಂಗಾರವು ಅವರ ಬಡತನವನ್ನು ಸಿಡಿಲಿನ ಹಾಗೆ ಅಟ್ಟಿ, ಮುಟ್ಟಿ, ಕಡಿದು ಹಾಕಿತು. ಬೇಗ ಹೋಗಿರಿ, ಕರ್ಣನಲ್ಲಿ ಬೇಡಿ ಬಡತನವನ್ನು ಕಳೆದುಕೊಳ್ಳಿರಿ’ – ಎಂಬೀ ಮಾತುಗಳು ಕರ್ಣನ ಶೌರ್ಯದ ಬಗ್ಗೆ, ಅವನ ಕೊಡುಗೈಯ ಬಗ್ಗೆ ಎಲ್ಲೆಡೆಯೂ ಕೇಳಿ ಬರುತ್ತಿದ್ದವು.
ವ|| ಅಂತು ಭುವನ ಭವನಕ್ಕೆಲ್ಲಂ ನೆಗೞ್ದ ಕರ್ಣನ ಪೊಗೞ್ತೆಯಂ ನೆಗೞ್ತೆಯುಮನಿಂದ್ರಂ ಕೇಳ್ದು ಮುಂದೆ ತನ್ನಂಶದೊಳ್ ಪುಟ್ಟುವರ್ಜುನಂಗಮಾತಂಗಂ ದ್ವಂದ್ವಯುದ್ಧಮುಂಟೆಂಬುದಂ ತನ್ನ ದಿವ್ಯಜ್ಞಾನದಿಂದಮಱಿದುವಿಂತಲ್ಲದೀತನಾತನಂ ಗೆಲಲ್ ಬಾರದೆಂದು-
(ಅಂತು ಭುವನ ಭವನಕ್ಕೆಲ್ಲಂ ನೆಗೞ್ದ ಕರ್ಣನ ಪೊಗೞ್ತೆಯಂ ನೆಗೞ್ತೆಯುಮನ್ ಇಂದ್ರಂ ಕೇಳ್ದು, ಮುಂದೆ ತನ್ನಂಶದೊಳ್ ಪುಟ್ಟುವ ಅರ್ಜುನಂಗಂ ಆತಂಗಂ ದ್ವಂದ್ವಯುದ್ಧಂ ಉಂಟು ಎಂಬುದಂ ತನ್ನ ದಿವ್ಯಜ್ಞಾನದಿಂದಂ ಅಱಿದು, ಇಂತಲ್ಲದೆ ಈತನ್ ಆತನಂ ಗೆಲಲ್ ಬಾರದೆಂದು,)
ಹೀಗೆ ಲೋಕಕ್ಕೆಲ್ಲ ಹರಡಿದ ಕರ್ಣನ ಹೊಗಳಿಕೆ, ಪ್ರಸಿದ್ಧಿಗಳು ಇಂದ್ರನ ಕಿವಿಗೆ ಬಿದ್ದವು. ಇಂದ್ರನು, ಮುಂದೆ ತನ್ನ ಅಂಶದಿಂದ ಹುಟ್ಟುವ ಅರ್ಜುನನಿಗೂ ಕರ್ಣನಿಗೂ ದ್ವಂದ್ವಯುದ್ಧವುಂಟೆಂಬುದನ್ನು ದಿವ್ಯಜ್ಞಾನದಿಂದ ಕಂಡುಕೊಂಡನು. ಬಳಿಕ ‘ಹೀಗಲ್ಲದೆ ಅರ್ಜುನನು ಕರ್ಣನನ್ನು ಗೆಲ್ಲುವುದು ಸಾಧ್ಯವಿಲ್ಲ’ ಎಂದು ಆಲೋಚಿಸಿ
ಕಂ|| ಬೇಡಿದೊಡೆ ಬಲದ ಬರಿಯುಮ |
     ನೀಡಾಡುಗುಮುಗಿದು ಕರ್ಣನೆಂದಾಗಳೆ ಕೈ ||
     ಗೂಡಿದ ವಟುವಾಕೃತಿಯೊಳೆ |
     ಬೇಡಿದನಾ ಸಹಜ ಕವಚಮಂ ಕುಂಡಳಮಂ ||೧೦೦||
(‘ಬೇಡಿದೊಡೆ ಬಲದ ಬರಿಯುಮನ್ ಈಡಾಡುಗುಂ ಉಗಿದು ಕರ್ಣನ್’ ಎಂದು, ಆಗಳೆ ಕೈಗೂಡಿದ ವಟುವಾಕೃತಿಯೊಳೆ ಬೇಡಿದನ್, ಆ ಸಹಜ ಕವಚಮಂ ಕುಂಡಳಮಂ.)
‘ಯಾರಾದರೂ ಕೇಳಿದರೆ ಕರ್ಣನು ತನ್ನ ಮೈಯ್ಯ ಬಲಬದಿಯನ್ನೇ ಬೇಕಾದರೂ ಕತ್ತರಿಸಿ ಬಿಸಾಡುತ್ತಾನೆ, ಅದು ಅವನ ಸ್ವಭಾವ’ ಎಂದು ಅರಿತ ಇಂದ್ರನು ಆ ಕೂಡಲೇ ವಟುವಿನ ವೇಷವನ್ನು ಧರಿಸಿ, ಕರ್ಣನಲ್ಲಿಗೆ ಹೋಗಿ ಅವನ ಸಹಜಕವಚವನ್ನೂ, ಕಿವಿಯೋಲೆಗಳನ್ನೂ ದಾನ ಕೊಡೆಂದು ಬೇಡಿದನು.
ಕಂ|| ಬೇಡಿದುದನರಿದುಕೊಳ್ಳೆನೆ |
     ಬೇಡಿದುದಂ ಮುಟ್ಟಲಾಗದೆನಗೆನೆ ನೆಗೞ್ದ |
     ಲ್ಲಾಡದೆ ಕೊಳ್ಳೆಂದರಿದೀ |
     ಡಾಡಿದನಿಂದ್ರಂಗೆ ಕವಚಮಂ ರಾಧೇಯಂ ||೧೦೧||
(“ಬೇಡಿದುದನ್ ಅರಿದುಕೊಳ್” ಎನೆ, “ಬೇಡಿದುದಂ ಮುಟ್ಟಲಾಗದು ಎನಗೆ” ಎನೆ, ನೆಗೞ್ದು ಅಲ್ಲಾಡದೆ “ಕೊಳ್” ಎಂದು, ಅರಿದು ಈಡಾಡಿದನ್ ಇಂದ್ರಂಗೆ ಕವಚಮಂ ರಾಧೇಯಂ.)
“ಬೇಡಿದ್ದನ್ನು ನೀನೇ ಕತ್ತರಿಸಿ ತೆಗೆದುಕೋ” - ಕರ್ಣ
“ನಾನು ಬೇಡಿದ್ದನ್ನು ಮುಟ್ಟಲು ನನ್ನಿಂದಾಗದು” – ಇಂದ್ರ
ಕರ್ಣನು ಅಲ್ಲಾಡದೆ ಗಟ್ಟಿಯಾಗಿ ನಿಂತು, ಕವಚ, ಕಿವಿಯೋಲೆಗಳನ್ನು ತನ್ನ ಮೈಯಿಂದ ಕತ್ತರಿಸಿ ಬೇರ್ಪಡಿಸಿ ‘ತೆಗೆದುಕೋ’ ಎಂದು ಇಂದ್ರನತ್ತ ಬಿಸಾಡಿದನು!
ಕಂ|| ಎಂದುಂ ಪೋಗೆಂದನೆ ಮಾ |
     ಣೆಂದನೆ ಪೆಱತೊಂದನೀವೆನೆಂದನೆ ನೊಂದಃ ||
     ಎಂದನೆ ಸೆರಗಿಲ್ಲದೆ ಪಿಡಿ |
     ಯೆಂದನಿದೇಂ ಕಲಿಯೊ ಚಾಗಿಯೋ ರವಿತನಯಂ ||೧೦೨||
(ಎಂದುಂ ಪೋಗೆಂದನೆ? ಮಾಣೆಂದನೆ? ಪೆಱತೊಂದನ್ ಈವೆನ್ ಎಂದನೆ? ನೊಂದು ಅಃ ಎಂದನೆ? ಸೆರಗಿಲ್ಲದೆ “ಪಿಡಿ”ಯೆಂದನ್, ಇದೇಂ ಕಲಿಯೊ ಚಾಗಿಯೋ ರವಿತನಯಂ!)
ಎಂದಾದರೂ ‘ಹೋಗು’ ಎಂದದ್ದುಂಟೆ? ಕೊಡಲು ತಡ ಮಾಡಿದ್ದುಂಟೆ? ‘ಅದರ ಬದಲಿಗೆ ಇದನ್ನು ಕೊಡುತ್ತೇನೆ’ ಎಂದದ್ದುಂಟೆ? ‘ಅಯ್ಯೋ! ಅದನ್ನು ಕೊಡುವುದೆ?’ ಎಂದು ನೊಂದದ್ದುಂಟೆ? ಇಲ್ಲ! ಎಂದೂ ಇಲ್ಲ! ಏನೂ ಕೇಳಿದರೂ, ಯಾವುದೇ ಹಿಂಜರಿಕೆ ಇಲ್ಲದೆ ‘ತೆಗೆದುಕೋ’ ಎನ್ನುವ ಕರ್ಣ ಎಂತಹ ವೀರ! ಎಂತಹ ತ್ಯಾಗಿ!
ವ|| ಅಂತು ತನ್ನ ಸಹಜಕವಚಮಂ ನೆತ್ತರ್ ಪನ ಪನ ಪರಿಯೆ ತಿದಿಯುಗಿವಂತುಗಿದು ಕೊಟ್ಟೊಡಿಂದ್ರನಾತನ ಕಲಿತನಕೆ ಮೆಚ್ಚಿ-
(ಅಂತು, ತನ್ನ ಸಹಜಕವಚಮಂ, ನೆತ್ತರ್ ಪನ ಪನ ಪರಿಯೆ ತಿದಿಯುಗಿವಂತೆ ಉಗಿದು ಕೊಟ್ಟೊಡೆ, ಇಂದ್ರನ್ ಆತನ ಕಲಿತನಕೆ ಮೆಚ್ಚಿ,)
ಹಾಗೆ ತನ್ನ ಸಹಜಕವಚವನ್ನು ಚರ್ಮದ ಚೀಲವನ್ನು ಸೀಳುವಂತೆ ಸೀಳಿ, ನೆತ್ತರು ಪನಪನ ಹರಿಯುತ್ತಿರುವಂತೆಯೇ ಇಂದ್ರನಿಗೆ ಕೊಟ್ಟನು. ಆಗ ಇಂದ್ರನು ಕರ್ಣನ ಕಲಿತನಕ್ಕೆ ಮೆಚ್ಚಿ -
ಕಂ|| ಸುರ ದನುಜ ಭುಜಗ ವಿದ್ಯಾ |
     ಧರ ನರಸಂಕುಲದೊಳಾರನಾದೊಡಮೇನೋ ||
     ಗರಮುಟ್ಟೆ ಕೊಲ್ಗುಮಿದು ನಿಜ |
     ವಿರೋಧಿಯಂ ಧುರದೊಳೆಂದು ಶಕ್ತಿಯನಿತ್ತಂ ||೧೦೩||
(“ಸುರ ದನುಜ ಭುಜಗ ವಿದ್ಯಾಧರ ನರಸಂಕುಲದೊಳ್, ಆರನ್ ಆದೊಡಂ ಏನೋ, ಗರಮುಟ್ಟೆ ಕೊಲ್ಗುಂ ಇದು ನಿಜವಿರೋಧಿಯಂ ಧುರದೊಳ್” ಎಂದು ಶಕ್ತಿಯನ್ ಇತ್ತಂ.)
‘ದೇವತೆಗಳು, ರಕ್ಕಸರು, ಹಾವುಗಳು, ವಿದ್ಯಾಧರರು, ನರರು ಹೀಗೆ ಯಾರನ್ನು ಬೇಕಾದರೂ ಆಗಲಿ, ಗ್ರಹವು ತಾಗಿದಂತೆ ಕೊಲ್ಲಬಲ್ಲ ಆಯುಧ ಇದು’ ಎಂದು ಹೇಳಿ ಇಂದ್ರನು ಕರ್ಣನಿಗೆ ಶಕ್ತಿಯನ್ನು ನೀಡಿದನು.
ವ|| ಅಂತಿಂದ್ರನಿತ್ತ ಶಕ್ತಿಯಂ ಕೈಕೊಂಡು ನಿಜಭುಜಶಕ್ತಿಯಂ ಪ್ರಕಟಂ ಮಾಡಲೆಂದು ರೇಣುಕಾನಂದನನಲ್ಲಿಗೆ ಪೋಗಿ-
(ಅಂತು ಇಂದ್ರನಿತ್ತ ಶಕ್ತಿಯಂ ಕೈಕೊಂಡು, ನಿಜಭುಜಶಕ್ತಿಯಂ ಪ್ರಕಟಂ ಮಾಡಲೆಂದು, ರೇಣುಕಾನಂದನನಲ್ಲಿಗೆ ಪೋಗಿ,)