ಶನಿವಾರ, ಅಕ್ಟೋಬರ್ 19, 2013

ಎತ್ತಿನಹೊಳೆ ಎಂಬ ನೇತ್ರಾವತಿ ತಿರುವು ಯೋಜನೆ: ಹಿನ್ನೆಲೆ, ಮಳೆಯ ಲೆಕ್ಕಾಚಾರ ಮತ್ತು ಕಾನೂನು



ಬಹಳ ದಿನಗಳಿಂದಲೂ ಎತ್ತಿನಹೊಳೆ ಯೋಜನೆಯ ಕುರಿತು ಒಂದು ಲೇಖನವನ್ನು ಬರೆಯಬೇಕೆಂದು ಯೋಚಿಸುತ್ತಲೇ ಇದ್ದೇನೆ. ದಾಖಲೆಗಳ ಕೊರತೆಯಿಂದಾಗಿ ಬರೆಯುವುದನ್ನು ಮುಂದೆ ಹಾಕುತ್ತಲೇ ಬಂದೆ.  ಆದರೆ ಈಗ, ದಾಖಲೆಗಳ ಸಂಗ್ರಹ ಮುಗಿಯುವ ಕೆಲಸವಲ್ಲ ಎನ್ನಿಸುತ್ತಿದೆ. ಹಾಗಾಗಿ ಇನ್ನೂ  ತಡಮಾಡುವುದು ಬೇಡ,  ಇರುವಷ್ಟು ದಾಖಲೆಗಳನ್ನು ಆಧರಿಸಿ ಬರೆದುಬಿಡುವುದು, ಮುಂದೆ ದಾಖಲೆಗಳು ಸಿಕ್ಕಿದರೆ, ಅವನ್ನು ಸೇರಿಸಬಹುದು ಎಂದುಕೊಂಡು ಬರೆಯುತ್ತಿದ್ದೇನೆ.
ಎತ್ತಿನಹೊಳೆಯಿಂದ ನೀರು ಸಾಗಿಸುವ ಯೋಜನೆಗೆ ಮೂಲಕಾರಣ ಮನುಷ್ಯನ ದುರಾಸೆ ಮತ್ತು ಮೂರ್ಖತನ; ಮೂಲಪ್ರೇರಣೆ ಜಿ.ಎಸ್. ಪರಮಶಿವಯ್ಯನವರ ನೇತ್ರಾವತಿ ತಿರುವು ಯೋಜನೆ.
ಮೂಲಸಮಸ್ಯೆ ಇರುವುದು ನೀರಿನದಷ್ಟೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮೊದಲಾದ ಜಿಲ್ಲೆಗಳಲ್ಲಿ ನೀರಿನ ಬರ ನೀಗಿಸುವುದು ಸರಕಾರದ ಮುಂದಿರುವ ಬಹು ದೊಡ್ಡ ಸವಾಲು. ಈ ಸವಾಲನ್ನು ಉತ್ತರಿಸುವುದಕ್ಕೂ, ಅಲ್ಲಿನ ಜನರ ಓಟಿಗೂ ನಿಕಟ ಸಂಬಂಧ ಏರ್ಪಟ್ಟಿದೆ. ಸಮಸ್ಯೆಯ ಪರಿಹಾರಕ್ಕಾಗಿ ತಾವೇನು ಮಾಡಿದ್ದೇವೆ ಎಂಬುದನ್ನು ಜನರಿಗೆ ವಿವರಿಸಬೇಕಾದ, ಅವರ ಸಿಟ್ಟನ್ನು ಎದುರಿಸಬೇಕಾದ ಇಕ್ಕಟ್ಟಿನ ಸ್ಥಿತಿಗೆ ಅಲ್ಲಿನ ರಾಜಕಾರಣಿಗಳು ಸಿಕ್ಕಿಕೊಂಡಿದ್ದಾರೆ. ಹಾಗಾಗಿ "ಏನಾದರೊಂದನ್ನು" ಮಾಡಿ, ಹಾಗೆ ಮಾಡಿದ್ದನ್ನು ಎದುರಿಟ್ಟು ಜನರ ಸಿಟ್ಟಿನಿಂದ, ಪೆಟ್ಟಿನಿಂದ ತಪ್ಪಿಸಿಕೊಳ್ಳುವುದು ರಾಜಕಾರಣಿಗಳಿಗೆ ಅನಿವಾರ್ಯವಾಗಿದೆ. ನೀರಿಗಾಗಿ ಏನು ಬೇಕಾದರೂ ಮಾಡಲು ಅಲ್ಲಿನ ರಾಜಕಾರಣಿಗಳು ಸಿದ್ಧರಾಗಿರುವುದಕ್ಕೆ, ಜೀವಕ್ಕಿಂತ ಪ್ರಿಯವಾದ ತಮ್ಮ ಹಕ್ಕಿನ ಕುರ್ಚಿಗಳನ್ನು ದಕ್ಷಿಣ ಕನ್ನಡದ ವೀರಪ್ಪ ಮೊಯ್ಲಿಯವರಿಗೆ ಯು.ಟಿ. ಖಾದರರಿಗೆ  ಬಿಟ್ಟುಕೊಟ್ಟಿರುವುದೇ ಸಾಕ್ಷಿ.   ಹಾಗೆ ಮಾಡಿ  ಅವರು "ಎತ್ತಿನಹೊಳೆ" ಎಂಬ ಆಗದಹೋಗದ ಯೋಜನೆಗೆ ಬರಬಹುದಾದ ಪ್ರತಿರೋಧವನ್ನು  ದುರ್ಬಲಗೊಳಿಸಲು ವ್ಯೂಹ ರಚಿಸಿದ್ದಾರೆ, ತಕ್ಕಮಟ್ಟಿಗೆ ಯಶಸ್ಸನ್ನೂ ಗಳಿಸಿದ್ದಾರೆ.
ನನ್ನ ಅನುಭವಕ್ಕೆ ಬಂದಂತೆ ಈ ಪ್ರದೇಶಗಳ ಜನ ನೀರಿನ ಸಮಸ್ಯೆಯಿಂದಾಗಿ ಸಂಪೂರ್ಣ ದಿಕ್ಕೆಟ್ಟಿದ್ದಾರೆ. ಯಾರು ಏನು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವರಿಲ್ಲ. "ನೀವು ಏನು ಬೇಕಾದರೂ ಹೇಳಿ. ಏನು ಬೇಕಾದರೂ ಮಾಡಿ. ನಮಗೆ ನೀರಿಲ್ಲ. ನೀರು ಬೇಕು. ನೀರು ಕೊಡಿ" ಇದು ಅಲ್ಲಿಯ ಜನರ ಹೊಟ್ಟೆ ಸಂಕಟದ ಮಾತಾಗಿ ಹೋಗಿದೆ. ಸೋತವರನ್ನು ಸಮಾಧಾನ ಮಾಡುವುದು ತುಂಬಾ ಕಷ್ಟ. ನೀವು ಹೇಗೆ ಹೇಳಿದರೂ, ಏನು ಹೇಳಿದರೂ, ಅವರು ಅದನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ.
ಆದರೆ ಸಮಸ್ಯೆಯನ್ನು ವಿಶ್ಲೇಷಿಸದೆ, ಅದರ ಕಾರಣಗಳನ್ನು ಗುರುತಿಸದೆ ಪರಿಹಾರ ಹುಡುಕುವುದೆಂತು? 


ಸಮಸ್ಯೆಯ ಪ್ರಾರಂಭ: ತಂತ್ರಜ್ಞಾನದ ದುರಹಂಕಾರ


ಈ ಸಮಸ್ಯೆಯ ಪ್ರಾರಂಭ ಬಿಂದು ಕೊಳವೆ ಬಾವಿಯ ತಂತ್ರಜ್ಞಾನ. ಸುಮಾರು ನಲವತ್ತು - ಐವತ್ತು ವರ್ಷಗಳ ಹಿಂದೆ ಕೊಳವೆ ಬಾವಿಗಳನ್ನು ಕೊರೆದು ನೆಲದಾಳದಿಂದ ನೀರನ್ನು ಮೇಲೆತ್ತುವ ಹೊಸ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಗೆ ಬಂತು. ಒಂದು ಕಡೆ ಕೊಳವೆಬಾವಿಗಳನ್ನು ಕೊರೆಯುವ ಯಂತ್ರಗಳನ್ನು ತಯಾರಿಸುವ ಕಂಪೆನಿಗಳು ಹುಟ್ಟಿಕೊಂಡು ಭರಾಟೆಯಿಂದ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದವು. ಆ ಯಂತ್ರಗಳ ತಯಾರಿಕೆಗಾಗಿ (ಮತ್ತು ಇದೇ ರೀತಿಯಲ್ಲಿ ತಂತ್ರಜ್ಞಾನದ ಮೂಲಕ ಆಗುತ್ತಿದ್ದ ಬಹುಮುಖೀ "ಅಭಿವೃದ್ಧಿ"ಗಾಗಿ) ಕಬ್ಬಿಣ ಇತ್ಯಾದಿ ಲೋಹಗಳ ಅಗತ್ಯ ಬಿತ್ತು. ಸರಿ, ಗಣಿಗಾರಿಕೆ ಬೆಳೆಯಿತು. ಅದಿರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಲಾರಿ, ಟಿಪ್ಪರ್ ಮುಂತಾದ ವಾಹನಗಳನ್ನು ತಯಾರಿಸಬೇಕಾಯಿತು. ಅದಿರಿನ ಅಗತ್ಯ ಹೆಚ್ಚಾಯಿತು. ಗಣಿಗಾರಿಕೆ ಬೆಳೆಯಿತು. ಆ ಕೆಲಸಕ್ಕೂ ಯಂತ್ರಗಳ ಅಗತ್ಯ ಬಿತ್ತು. ಈ ಯಂತ್ರಗಳ ಬಳಕೆಗೆ ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಬೇಕಾಯಿತು. ಸರಿ, ಡೀಸೆಲ್ ಆಮದು ಹೆಚ್ಚಿತು. (ಜೊತೆಗೇ ನಮ್ಮ ಪರಾವಲಂಬನೆ ಹೆಚ್ಚಿತು. ಆದರೆ ಅಭಿವೃದ್ಧಿಯ ಅಮಲಿನಲ್ಲಿ ಇದನ್ನು ಗಮನಿಸಲು ಯಾರೂ ಸಿದ್ಧರಿರಲಿಲ್ಲ. ಏಕೆಂದರೆ ಅದನ್ನು ಅವರು ಅಭಿವೃದ್ಧಿ ಎಂದು ಪರಿಗಣಿಸಿದ್ದರು). ಯಂತ್ರಗಳ, ವಾಹನಗಳ ವಿತರಕರು ಊರೂರಿನಲ್ಲಿ ಹುಟ್ಟಿಕೊಂಡರು. ವ್ಯಾಪಾರ, ವಹಿವಾಟು ಹೆಚ್ಚಿತು. ಉದ್ಯೋಗಗಳ ಸೃಷ್ಟಿಯಾಯಿತು.

ಇತ್ತ ಊರೂರುಗಳಲ್ಲಿ ನೆಲದಾಳದಿಂದ ನೀರೆತ್ತುವ ಕೆಲಸ ಭರಾಟೆಯಿಂದ ಪ್ರಾರಂಭವಾಯಿತು. ಬೆಂಗಳೂರು ಅಗಾಧವಾಗಿ ಬೆಳೆಯುತ್ತಿದ್ದುದರಿಂದ ಸುತ್ತಮುತ್ತಲಿನ ಊರುಗಳಿಗೆ ಅದು ಬಹುದೊಡ್ಡ ಮಾರುಕಟ್ಟೆಯಾಗಿತ್ತು. ಏನು ಬೆಳೆದರೂ, ಎಷ್ಟು ಬೆಳೆದರೂ ಬೆಂಗಳೂರಿನಲ್ಲಿ ಬೇಡಿಕೆ ಇದ್ದೇ ಇತ್ತು. ಬೆಂಗಳೂರಿನ ಸುತ್ತಮುತ್ತಲ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರುಗಳ ಜನ ಬೆಂಗಳೂರಿನ ಬೇಡಿಕೆಗಳನ್ನು ಪೂರೈಸಿ, ದುಡ್ಡು ಸಂಪಾದಿಸುವ ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡರು. ಭೂಮಿಯ ಮಾಲಕರಿಗಂತೂ ಬೆಂಗಳೂರು ಹಲವು ರೂಪದಲ್ಲಿ ವರದಾನವಾಯಿತು. ಹೇಗೂ ಕೊಳವೆ ಬಾವಿಗಳಿಂದ ಧಾರಾಳವಾಗಿ ನೀರು ಸಿಕ್ಕುತ್ತಿದ್ದುದರಿಂದ ನೀರಿಗಾಗಿ ಪಾರಂಪರಿಕವಾಗಿ ಜನರು ಅವಲಂಬಿಸಿದ್ದ ಕೆರೆಗಳು ಕ್ರಮೇಣ ನಿಷ್ಪ್ರಯೋಜಕವಾದವು . ನಗರೀಕರಣ ಹೆಚ್ಚಿದಂತೆ, ಸಾರ್ವಜನಿಕ ಆಸ್ತಿಯಾಗಿದ್ದ ಕೆರೆದಳಗಳನ್ನು ಬಲಾಢ್ಯರು ಅತಿಕ್ರಮಿಸಿಕೊಂಡರು. ಕೆರೆಗಳು ನಿಧಾನವಾಗಿ ನಾಮಾವಶೇಷಗೊಂಡವು. ಕೆರೆಗಳೊಂದಿಗೆ ಬೆಳೆದು ಬಂದಿದ್ದ  ಒಂದು ಸಂಸ್ಕೃತಿಯೇ ನಾಶವಾಗಿಹೋಯಿತು. ಮೊದಲಿನ ಕೆಲವು ವರ್ಷ ಕೊಳವೆ ಬಾವಿಗಳು ಧಾರಾಳ ನೀರು ಕೊಟ್ಟಿದ್ದರಿಂದಾಗಿ, ಆ ನೀರಿಗೆ ಅನುಸಾರವಾದ ಹೊಸ ಜೀವನಶೈಲಿಯನ್ನು ಜನ (ಮುಖ್ಯವಾಗಿ ಶ್ರೀಮಂತರು) ರೂಪಿಸಿಕೊಂಡರು. 
ಮನೆಯ ಒಳಗೂ, ಹೊರಗೆ ಕೃಷಿಭೂಮಿಯಲ್ಲೂ ನೀರಿನ ಬಳಕೆಯಲ್ಲಿ ಒಂದು ಕ್ರಾಂತಿಯೇ ಆಗಿಹೋಯಿತು. ಪಾರಂಪರಿಕವಾಗಿ ಈ ಭಾಗಗಳಲ್ಲಿ ಬೆಳೆಯುತ್ತಿದ್ದ ರಾಗಿ ಇತ್ಯಾದಿ ಕಡಿಮೆ ನೀರು ಬೇಡುವ ಬೆಳೆಗಳು ಮೂಲೆಗೆ ಬಿದ್ದವು. ಅಗಾಧ ನೀರು ಬೇಡುವ ವಾಣಿಜ್ಯಬೆಳೆಗಳು ಅ ಸ್ಥಾನವನ್ನು ಆಕ್ರಮಿಸಿಕೊಂಡವು. ಬೆಂಗಳೂರಿನಲ್ಲಿ ಹೊಸ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದವು.  ಆ ಕಟ್ಟಡಗಳ ಸ್ಲಾಬ್ ಗಳನ್ನು ಹಾಕುವಾಗ ಬುಡದಲ್ಲಿ ಆಧಾರಕ್ಕೆ ಕೊಡಲು ಮರದ ಗೂಟಗಳು ಬೇಕಾದವು. ಬೆಂಗಳೂರಿನ ಸುತ್ತಮುತ್ತಲಿನ ಜಮೀನಿದ್ದ ಜನ ನೀಲಗಿರಿ ಮರಗಳನ್ನು ಬೆಳೆದು ದೇಶದ ಅಭಿವೃದ್ಧಿಗೆ ಊರುಗೋಲಾದರು. ಬೆಂಗಳೂರಿನ ಸುತ್ತಲ ಎಲ್ಲ ಊರುಗಳಲ್ಲೂ  ಜನ  ಬೆಂಗಳೂರಿಗಾಗಿ  ಟೊಮೇಟೋ ಬೆಳೆದರು.  ಇದೆಲ್ಲ ಕೆಲಕಾಲ ಚೆನ್ನಾಗಿಯೇ ನಡೆಯಿತು. ಬಹುಶಃ ರೈತರು ಕೆಲವು ಕಾಲ ಚೆನ್ನಾಗಿಯೇ ದುಡ್ಡು ಮಾಡಿದರು.

ಕೃಷಿ ಮಾತ್ರವಲ್ಲ, ಬೆಳೆಯುತ್ತಿದ್ದ ಬೆಂಗಳೂರಿಗೆ ಕಟ್ಟಡ ಕಟ್ಟಲು ಮೂಲಸಾಮಗ್ರಿಗಳು ಬೇಕಾಗಿದ್ದವು. ಕಪ್ಪುಕಲ್ಲು (ಗ್ರಾನೈಟ್) ಬೆಂಗಳೂರಿನ ಸುತ್ತಮುತ್ತಲಿನ ಅನೇಕ ಊರುಗಳಲ್ಲಿ ಧಾರಾಳವಾಗಿ ದೊರೆಯುತ್ತಿತ್ತು. ನಂದಿಬೆಟ್ಟದ ಇಳಿಜಾರಿನಲ್ಲಿ, ಅಂಥದೇ ಇನ್ನೆಷ್ಟೋ ಬೆಟ್ಟಗಳಲ್ಲಿ ಅಂಥ ಕಪ್ಪು ಕಲ್ಲುಗಳ ಸಂದಿನಿಂದ ಮೆಲ್ಲನೆ ನೀರು ಒಸರಿ, ಕೊನೆಗೆ ಅರ್ಕಾವತಿಯೋ, ಕುಮುದ್ವತಿಯೋ, ಪಾಲಾರೋ, ದಕ್ಷಿಣ ಪಿನಾಕಿನಿಯೋ, ಉತ್ತರ ಪಿನಾಕಿನಿಯೋ ಇನ್ನಾವುದೋ ಹೊಳೆಯೋ ರೂಪುಗೊಳ್ಳುತ್ತಿತ್ತು. ಆದರೆ ನೀರಿಗೆ ಹೇಗೂ ಬೋರ್ ವೆಲ್ ಇದೆ, ಇನ್ನು ನದಿಗಳಿಂದಾಗಬೇಕಾದ್ದೇನು? ಬಂಡೆ, ಬೆಟ್ಟಗಳನ್ನು ಉಳಿಸಿ ಆಗಬೇಕಾದ್ದೇನು? ನದಿಗಳ ಜಲಾನಯನ ಪ್ರದೇಶದಲ್ಲಿ ಕಪ್ಪುಕಲ್ಲಿನ ಗಣಿಗಾರಿಕೆ ಯಾವ ಅಡೆತಡೆಯೂ ಇಲ್ಲದೆ ನಡೆಯಿತು. ಅಧಿಕೃತ ಗಣಿ ಒಂದಾದರೆ ಅನಧಿಕೃತ ಹತ್ತು. ಕೇಳುವವರು ಯಾರು? ಈಗ ಎಲ್ಲಿ ಕೇಳಿದರೂ ಡೈನಮೈಟಿನ ಸದ್ದು, ಲಾರಿಗಳು ಅತ್ತಿತ್ತ ಓಡಾಡುವ ಭರಾಟೆ. ಎಲ್ಲರ ಕೈಯಲ್ಲೂ ಹಣ, ಎಂಥ ಚಿಕ್ಕ ಹಳ್ಳಿಯಲ್ಲೂ ಒಂದು ಬಾರು. (ಇದು ಬೆಂಗಳೂರಿನ ಸುತ್ತಮುತ್ತಲಿಗೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ; ಬಹುಶಃ ಅಖಿಲ ಭಾರತ ವಿದ್ಯಮಾನ. ದ.ಕ.ಜಿಲ್ಲೆಯವರೂ ಇದರಲ್ಲಿ ಹಿಂದೆ ಬಿದ್ದಿಲ್ಲ.)
ಬರೀ ಕಪ್ಪು ಕಲ್ಲು ಸಾಕೆ? ಕಟ್ಟಡ ಕಟ್ಟಲು ಮರಳು ಬೇಡವೆ? ಸರಿ, ಮೊದಮೊದಲಿಗೆ ನದಿಗಳ ಪಾತ್ರದಲ್ಲಿ ಮರಳು ತೆಗೆದರು. ಬೆಂಗಳೂರಿಗೆ ಅದು ಲೆಕ್ಕಕ್ಕೇ ಸಿಗಲಿಲ್ಲ. ಎಷ್ಟು ಮರಳಿದ್ದರೂ, ಇನ್ನೂ ಬೇಕು, ಇನ್ನೂ ಬರಲಿ ಎಂಬ ಮಾತೇ ಎಲ್ಲ ಕಡೆ. ಮರಳಿನ ವ್ಯವಹಾರ ಬೃಹತ್ತಾದ ಒಂದು ಲಾಬಿಯಾಗಿ ಬೆಳೆಯಿತು. ನದಿಯ ಬದಿಯ ಮರಳು ಪೂರ್ತಿ ಖಾಲಿ ಎಂದಾದಾಗ, ಜನ ನದಿಯ ಬದಿಯ ತಮ್ಮ ಸ್ವಂತ ಜಮೀನಿನ ಮಣ್ಣನ್ನು ಕೇರಿ ಅದರಿಂದ ಮರಳು ಹೊರಡಿಸುವ ಹೊಸ "ತಂತ್ರಜ್ಞಾನ"ಕ್ಕೆ ಮೊರೆಹೋದರು. ನದಿಯ ದಂಡೆಗಳು, ನದಿಯ ಬದಿಯ ಜಮೀನುಗಳು ಹೀಗೆ ಬೆಂಗಳೂರಿನ ಸುಂದರ ಕಟ್ಟಡಗಳಾಗಿ ರೂಪುಗೊಳ್ಳುತ್ತಿದ್ದಂತೆ, ಹರಿಯುತ್ತಿದ್ದ ನದಿಗಳು ನಿಧಾನವಾಗಿ ತಮ್ಮ ಹರಿವನ್ನು ನಿಲ್ಲಿಸಿ ಮೌನವಾದವು. ಆದರೆ ಇದನ್ನು ಗುರುತಿಸುವವರು ಯಾರು? ಗುರುತಿಸಿ ಹೇಳುವವರು ಇರಲೇ ಇಲ್ಲವೆಂದಲ್ಲ, ಅವರ ಮಾತು ಅರಣ್ಯರೋದನವಾಯಿತು ಅಷ್ಟೆ.
ಹೀಗೆ ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಊರುಗಳ ಜನ "ಅಭಿವೃದ್ಧಿ"ಗೊಂಡರು. 

ಆದರೆ ಈ ಸಮೃದ್ಧಿಯ ಹಿಂದೆಯೇ ನೀರಿನ ಬರದ ರಾಕ್ಷಸ ನಿಧಾನವಾಗಿ ತನ್ನ ಕೈಯನ್ನು ಚಾಚುತ್ತಿದ್ದ. ಕೊಳವೆ ಬಾವಿಗಳು ಕ್ರಮೇಣ ಮೊದಲಿನಂತೆ ನೀರು ಕೊಡುವುದನ್ನು ನಿಲ್ಲಿಸಿದವು. ನೆಲದ ಹೊಟ್ಟೆಯೊಳಗೆ ಆ ನೀರು ಎಷ್ಟು ಕೋಟಿ ವರ್ಷಗಳಿಂದ ಸಂಗ್ರಹಗೊಂಡಿತ್ತೋ ಯಾರಿಗೆ ಗೊತ್ತು? ಕೇವಲ ಮೂವತ್ತು ನಲವತ್ತು ವರ್ಷಗಳಲ್ಲಿ ನಾವದನ್ನು ನೋಟುಗಳಾಗಿ ಪರಿವರ್ತಿಸಿಕೊಂಡೆವು ಮತ್ತು ಅದನ್ನು "ಅಭಿವೃದ್ಧಿ" ಎಂದು ಕರೆದೆವು! ಪರಿಸ್ಥಿತಿ ಈಗ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ನಾನು ವಿವರಿಸಿ ಹೇಳಬೇಕಿಲ್ಲ. ನಮ್ಮ "ತಂತ್ರಜ್ಞಾನ" ನಮ್ಮನ್ನೀಗ ಅತಂತ್ರರನ್ನಾಗಿಸಿದೆ. ಇನ್ನು ಮುಂದೆ ದಾರಿ ಇಲ್ಲ ಎಂಬಲ್ಲಿಗೆ ನಾವು ತಲುಪಿದ್ದೇವೆ. ಕೆರೆಯ ಕಡೆಗೆ ಹಿಂದೆ ಹೋಗಲು ನಾವು ತಯಾರಿಲ್ಲ. ನಮ್ಮ ನದಿಗಳು ಸತ್ತುಹೋಗಿವೆ. ಕೊಳವೆಬಾವಿ ನಮ್ಮ ಕೈಬಿಟ್ಟಿದೆ.  ನಮ್ಮ ಕೈಯಲ್ಲಿ ಹಣವೇನೋ ಇದೆ. ಸರಕಾರ ನೀರಿಗಾಗಿ ಸಾವಿರ ಸಾವಿರ ಕೋಟಿಗಳನ್ನು ಚೆಲ್ಲಲು ತಯಾರಿದೆ. ಆದರೆ ನೀರೆಲ್ಲಿದೆ?
********************
ಬ್ರಿಟಿಷರ ಕಾಲದಲ್ಲಿ ಅಂದರೆ 1901-03ರ ಅವಧಿಯಲ್ಲಿ ದಕ್ಷಿಣಭಾರತದ ನೀರಾವರಿ ವ್ಯವಸ್ಥೆಯನ್ನು ಅಧ್ಯಯನ ಮಾಡಿ "ದಕ್ಷಿಣಭಾರತದ ನೀರಾವರಿ ವರದಿ" ಯನ್ನು ಪ್ರಕಟಿಸಲಾಗಿದೆಯೆಂದು  ತಿಳಿದವರು ಹೇಳುತ್ತಾರೆ. ಅದರಲ್ಲೆಲ್ಲೋ ಒಂದು ಕಡೆ ಹೇಳಿದ್ದಾರಂತೆ: "ಬೆಂಗಳೂರು, ಕೋಲಾರಗಳಲ್ಲಿ ಮೂರು - ನಾಲ್ಕು ಅಡಿ ಅಗೆದರೆ ಭೂಮಿಯಲ್ಲಿ ನೀರು ಸಿಗುತ್ತದೆ"!
ಹಾಗಿದ್ದರೆ  ಕಳೆದೊಂದು ಶತಮಾನದಲ್ಲಿ ನಾವು ಎಲ್ಲಿಂದ ಎಲ್ಲಿಗೆ ಮುಟ್ಟಿದೆವು!
************************
"ನೀರೆಲ್ಲಿದೆ"? ಎಂಬ ಪ್ರಶ್ನೆಗೆ ಉತ್ತರ ಕೊಡುವ, ಕನ್ನಂಬಾಡಿ ಕಟ್ಟಿದ ವಿಶ್ವೇಶ್ವರಯ್ಯನವರನ್ನೂ ಮೀರಬಯಸುವ, ಶ್ರೀ ಜಿ.ಎಸ್. ಪರಮಶಿವಯ್ಯನವರಂಥ ಎಂಜಿನಿಯರುಗಳು ನಮ್ಮಲ್ಲಿದ್ದಾರೆ. ಅವರು ಮತ್ತು ಅವರಂಥವರು ಪಶ್ಚಿಮಘಟ್ಟಗಳ ನೆತ್ತಿಯ ಮೇಲೆ ಬಿದ್ದು, "ವ್ಯರ್ಥವಾಗಿ ಸಮುದ್ರ ಸೇರುವ" ಸಾವಿರಾರು ಟಿಎಂಸಿ ಮಳೆನೀರನ್ನು ಬಯಲುಸೀಮೆಗೆ ಸಾಗಿಸಲು ಯೋಜನೆಗಳನ್ನು ರೂಪಿಸುತ್ತಾರೆ. ಅಂಥವರು, ರೂಪುಗೊಳ್ಳಲು  ಕೋಟಿ ಕೋಟಿ ವರ್ಷಗಳನ್ನು ತೆಗೆದುಕೊಂಡು ಸುತ್ತು ಹೊಡೆಯುತ್ತಿರುವ ಪರಿಸರದ ಸರ್ವವ್ಯಾಪಿ ಮಹಾಚಕ್ರವನ್ನು ಕೇವಲ ಎಂಟು ಹತ್ತು ವರ್ಷಗಳಲ್ಲಿ  ಜೆಸಿಬಿ, ಕ್ರೇನುಗಳಂಥ ಚಿತ್ರವಿಚಿತ್ರ ಯಂತ್ರಗಳನ್ನು ಬಳಸಿ, ಉಪಗ್ರಹಗಳ ಸಹಾಯದಿಂದ, ಕಂಪ್ಯೂಟರುಗಳ ಸಹಾಯದಿಂದ ಮಾಡಿದ ಸೂಕ್ಷ್ಮಾತಿಸೂಕ್ಷ್ಮ ಲೆಕ್ಕಾಚಾರಗಳನ್ನು ಬಳಸಿ ಹಿಮ್ಮುಖವಾಗಿ ತಿರುಗಿಸುವ ದುಸ್ಸಾಹಸದ ಮಾತಾಡುತ್ತಿದ್ದಾರೆ. ಆದರೆ ಹೀಗೆ ಮಾತಾಡುವಾಗ, ಕೊಳವೆಬಾವಿಯ ತಂತ್ರಜ್ಞಾನ ನಮ್ಮನ್ನು ಮುಚ್ಚಿದ ದಾರಿಯ ತುದಿಗೆ ತಂದು ನಿಲ್ಲಿಸಿರುವುದನ್ನು  ಮರೆಯುತ್ತಾರೆ. ಪಶ್ಚಿಮಘಟ್ಟಗಳ ದಟ್ಟ ಕಾಡುಗಳ ನಡುವಿನ ಯಾವುದೋ ಒಂದು ಅಜ್ಞಾತ ಮೂಲೆಯಲ್ಲಿ ಕಳ ಕಳ ಸದ್ದು ಮಾಡುತ್ತಾ ಹರಿಯುವ ಕಿರುತೊರೆಯ ದಂಡೆಯಲ್ಲಿ, ಮಧ್ಯರಾತ್ರಿಯ ಕಪ್ಪುಕತ್ತಲಿನಲ್ಲಿ, ತಲೆಯಮೇಲೆ ಸುರಿಯುತ್ತಿರುವ ಮುಗಿಯುವುದೇ ಇಲ್ಲವೇನೋ ಎಂಬಂಥ ಮಳೆಯನ್ನು ಆನಂದಿಸುತ್ತಾ ಕುಳಿತು ವಟರ್ ವಟರ್ ಎಂದು ವಟಗುಟ್ಟುವ ಸಣ್ಣದೊಂದು ಕಪ್ಪೆಗೂ, ಇಡೀ ವಿಶ್ವದ ಪರಿಸರ ವ್ಯವಸ್ಥೆಗೂ, ಬಿಡಿಸಲಾಗದ  ನಂಟು ಇದೆಯೆಂದು ಯಾರಾದರೂ ಹೇಳಿದರೆ  ತಂತ್ರಜ್ಞಾನದ ಮತ್ತೇರಿದ ಈ ದುರಹಂಕಾರಿಗಳು ಗಹಗಹಿಸಿ ನಗುತ್ತಾರೆ! ದುರದೃಷ್ಟವಶಾತ್, ಆಧುನಿಕ ತಂತ್ರಜ್ಞಾನ ಸೃಷ್ಟಿಸಿರುವ ಕಣ್ಣು ಕೋರೈಸುವ ಬೆಳಕು ಅವರನ್ನು ಕುರುಡರನ್ನಾಗಿಸಿದೆ. "ಪ್ರಕೃತಿ ನಮ್ಮ ಅಗತ್ಯಗಳನ್ನು ಪೂರೈಸಬಲ್ಲುದು, ದುರಾಸೆಯನ್ನಲ್ಲ" ಎಂಬ ಗಾಂಧೀಜಿಯ ಮಾತುಗಳು ಅಂಥವರಿಗೆ ಕರಟುಪುರಾಣವಾಗಿ ಕೇಳುತ್ತವೆ.
ಹೀಗೆ ನಮ್ಮ ತಂತ್ರಜ್ಞಾನದ ದುರಹಂಕಾರ ಪಾತಾಳದಲ್ಲಿದ್ದ ಅಂತರ್ಜಲ ನಿಧಿಯನ್ನು ಬರಿದುಗೊಳಿಸಿ ಈಗ ಆಕಾಶದಿಂದ ಪಶ್ಚಿಮಘಟ್ಟಗಳ ನೆತ್ತಿಯ ಮೇಲೆ  ಬೀಳುವ ಮಳೆಯೆಂಬ ನಿಧಿಯ ಕಡೆಗೆ ತನ್ನ ಕರಾಳಹಸ್ತವನ್ನು ಚಾಚಿದೆ.

ಎತ್ತಿನಹೊಳೆಯಲ್ಲಿ ನೀರೆಷ್ಟು?


ಕರ್ನಾಟಕ ಸರಕಾರ ನೇತ್ರಾವತಿ ನದಿ ತಿರುವು ಯೋಜನೆಗೆ ಎತ್ತಿನಹೊಳೆ ಯೋಜನೆ ಎಂಬ ಹೆಸರಿನಲ್ಲಿ ಅಡಿಪಾಯ ಹಾಕಿದೆ. "ಕುಡಿಯುವ ನೀರಿನ ಯೋಜನೆ" ಎಂಬ ನೆಪದಲ್ಲಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಕಾನೂನುಗಳಿಂದ ಸುಲಭವಾಗಿ ನುಣುಚಿಕೊಂಡಿರುವ ಈ ಯೋಜನೆಯನ್ನು ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕನೀನಿನಿಗೆ (ಕರ್ನಾಟಕ ನೀರಾವರಿ ನಿಗಮ ನಿಯಮಿತ) ವಹಿಸಲಾಗಿದೆ. (ಕರ್ನಾಟಕದಲ್ಲಿ ಸಾಮಾನ್ಯವಾಗಿ ಕುಡಿಯುವ ನೀರಿನ ಯೋಜನೆಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಗತಗೊಳಿಸುತ್ತದೆ). ಕನೀನಿನಿ ಈ ಯೋಜನೆಯ ಸಾಧ್ಯತಾವರದಿಯನ್ನು ಇ. ಐ. ಟೆಕ್ನಾಲಜೀಸ್ ಎಂಬ ಖಾಸಗಿ ಸಂಸ್ಥೆಯಿಂದ ಮಾಡಿಸಿದೆ.
ನೇತ್ರಾವತಿ ನದಿ ತಿರುಗಿಸುವ ಈ ಯೋಜನೆಗೆ ಕನೀನಿನಿಯ ನಾಮಕರಣ: Diversion of flood water from Sakaleshpura (west) to Kolar/Chikkaballapura (east). ಯೋಜನೆಯ ಪ್ರಕಾರ ನೀರಿನ ಲಭ್ಯತೆ 24.01 ಟಿಎಂಸಿ. ಕನೀನಿನಿ ಈ ಪ್ರಮಾಣವನ್ನು ನಿರ್ಧರಿಸಿರುವುದನ್ನು ಹೀಗೆ ವಿವರಿಸಿದೆ: (ಕನೀನಿನಿಯ DPR-2012)
"The streams considered in the Yettinahole subbasin are not gauged. It is therefore necessary to use indirect methods to arrive at the flows at each of the weirs. Since the main river Nethravati is being gauged at Bantwal since 1971, a reasonable approach is to derive the  required flows from the Bantwal flows pro-rata with respect to catchment area and rainfall. The catchment area of Nethravati at Bantwal is 3181 Sq.Kms. Catchment areas of the streams considered at the respective weirs are shown in Table 4.2. The Nethravathi catchment average annual rainfall is 4658 mm. The average annual rainfall of the region in which the weirs are situated is 6280mm. This latter figure has been arrived at based on rainfall records maintained by private planters. Though the exposure conditions of the private rain gauges are not known, the rainfall average of 6280 mm appears reasonable, considering that the region is situated near the crest of the ghats, where rainfall of similar magnitude has been recorded elsewhere. Thus, if the Nethravati gauged flow at Bantwal for a given period of say 10 days is Qm, the flows for the same period at the three weirs can be calculated by the formula

                                                    Q=C.A./3181 x 6280/4658 x Qm

Where Q is the flows at specified weir and C.A. represents the catchment area of the respective weir."

ಕನೀನಿನಿಯ ಈ ವಿವರಣೆಯನ್ನು ಕೊಂಚ ಪರಿಶೀಲಿಸಿ ನೋಡೋಣ:
1. ಮೊದಲಿಗೆ "The streams considered in the Yettinahole subbasin are not gauged" ಎಂದು ಕನೀನಿನಿ ಹೇಳುತ್ತಿರುವುದು ತಪ್ಪು. 18-06-2012ರಲ್ಲಿ ಅಧೀಕ್ಷಕ ಎಂಜಿನಿಯರ್, ಜಲವಿಜ್ಞಾನ ಘಟಕ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರು ಎತ್ತಿನಹೊಳೆಯಲ್ಲಿ ದೊರೆಯುವ ನೀರಿನ ಪ್ರಮಾಣದ ಅಧ್ಯಯನ ವರದಿಯನ್ನು ಜ. ಅ. ಸಂ.ಯ ಮುಖ್ಯ ಎಂಜಿನಿಯರರಿಗೆ ಸಲ್ಲಿಸುತ್ತಾ "ಎತ್ತಿನಹೊಳೆ ಪ್ರದೇಶದಲ್ಲಿ ಕಾಡುಮನೆ ಹಳ್ಳಕ್ಕೆ ಕಾಡುಮನೆ ಹತ್ತಿರ ಮತ್ತು ಎತ್ತಿನಹೊಳೆಗೆ ಹಾರ್ಲೆ ಎಸ್ಟೇಟ್ ಹತ್ತಿರ ಈ ಸಂಸ್ಥೆಯಡಿಯಲ್ಲಿ 1976-77ರಿಂದ ನದಿ ಮಾಪನವನ್ನು ಮಾಡುತ್ತಿದ್ದು, ಈ ಮಾಪನಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುವುದರಿಂದ ಸಂಬಂಧಿಸಿದ ಅಧೀಕ್ಷಕ ಇಂಜಿನಿಯರ್........ರವರಿಗೆ ಪತ್ರ ಬರೆಯಲಾಗಿದೆ..." ಎನ್ನುತ್ತಾರೆ. ಮಾಪನಗಳು ಸರಿ ಇಲ್ಲದಿದ್ದರೆ ಅದು ತನಿಖೆಯಾಗಬೇಕಾದ ಬೇರೆಯೇ ವಿಷಯ. ಆದರೆ ನದಿಯನ್ನು ಮಾಪನ ಮಾಡಲಾಗುತ್ತಿದೆ ಎಂಬ ವಿಷಯವೇ ಕನೀನಿನಿಗೆ ತಿಳಿಯದಿರುವುದು ಅದರ  ವರದಿಯ ವಿಶ್ವಾಸಾರ್ಹತೆಯ ಬುಡವನ್ನೇ  ಅಲುಗಿಸುತ್ತದೆ.
2. "The average rainfall of the region in which the weirs are situated is 6280mm. This latter figure has been arrived at based on rainfall records maintained by private planters".  
ಕನೀನಿನಿಯ ಈ ಮಳೆಯ ಲೆಕ್ಕಾಚಾರ ಕೇವಲ ಅವೈಜ್ಞಾನಿಕ. ಅಷ್ಟೇ ಅಲ್ಲ, ಅದೊಂದು ತಪ್ಪು ಮಾಹಿತಿ. ಇಡೀ ಯೋಜನೆ ಈ ಮಾಹಿತಿಯ ಮೇಲೆ ನಿಂತಿರುವುದರಿಂದ ಈ ಮಾಹಿತಿಯನ್ನು ಆಧರಿಸಿ ವರದಿಯನ್ನು ತಯಾರಿಸಿರುವುದರ ಉದ್ದೇಶ ಕನೀನಿನಿ, ರಾಜಕಾರಣಿಗಳು ಮತ್ತು ಕಂಟ್ರಾಕ್ಟರುಗಳು  ಸೇರಿ ರಾಜ್ಯದ ಖಜಾನೆಯನ್ನು ಕೊಳ್ಳೆ ಹೊಡೆಯುವುದೇ ಹೊರತು ಬಯಲುಸೀಮೆಯ ಜನರಿಗೆ ನೀರು ಕೊಡುವುದಲ್ಲ ಎಂಬ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ.
ಹಾಗಾದರೆ ಈ "6280" ಎಲ್ಲಿಂದ ಬಂತು? ಖಾಸಗಿ ಪ್ಲಾಂಟರುಗಳ ಮಾಪನಕೇಂದ್ರಗಳಿಂದ ಈ ಮಾಹಿತಿಯನ್ನು ಪಡೆದಿದ್ದೇವೆ ಎಂಬುದು ಕನೀನಿನಿಯ ಹೇಳಿಕೆಯಷ್ಟೆ? ಅಂಥ ಮೂರು ಖಾಸಗಿ ಪ್ಲಾಂಟರುಗಳ ಮಾಪನದ ಅಂಕಿಅಂಶಗಳು ವರದಿಯಲ್ಲಿ ಇವೆ. 
1. ಶ್ರೀ ಡಿ.ಪಿ. ಕಲ್ಲಪ್ಪನವರ ಕೊಟ್ಟನಹಳ್ಳಿ ಖಾಸಗಿ ಮಳೆಮಾಪನ ಕೇಂದ್ರ - 6030 ಮಿಮೀ
2. ಶ್ರೀ ಸಿದ್ದೇಗೌಡರ ಹೊಂಗಡಹಳ್ಳ ಮಳೆಮಾಪನ ಕೇಂದ್ರ  - 6060  ಮಿಮೀ
3. ಕಾಡಮನೆ ಕಾಫಿ ಎಸ್ಟೇಟ್ ಕಂಪೆನಿಯ ಮಳೆಮಾಪನ ಕೇಂದ್ರ. - 6540 ಮಿಮೀ
ಕಾಕತಾಳೀಯವೋ ಎಂಬಂತೆ, ಶ್ರೀ ಜಿ.ಎಸ್. ಪರಮಶಿವಯ್ಯನವರು 2001ರಲ್ಲಿ ಪ್ರಕಟಿಸಿರುವ "Scheme for diversion of Netravathy river water to east" ಎಂಬ ವರದಿಯಲ್ಲೂ ಯಥಾವತ್ತಾಗಿ ಇದೇ ಅಂಕಿಅಂಶಗಳಿವೆ. ಪರಮಶಿವಯ್ಯನವರ ವರದಿಯಲ್ಲಿ ಯಾವ ಅವಧಿಯ ಅಂಕಿಅಂಶಗಳಿವೆಯೋ ಅದೇ ಅವಧಿಯ ಅಂಕಿ ಅಂಶಗಳೇ ಇಲ್ಲೂ ಇವೆ.
ಆದರೆ ಒಂದು ಮುಖ್ಯ ವ್ಯತ್ಯಾಸವಿದೆ: ಪರಮಶಿವಯ್ಯನವರ ವರದಿಯಲ್ಲಿ ಒಟ್ಟು ನಾಲ್ಕು ಖಾಸಗಿ ಮಾಪನ ಕೇಂದ್ರಗಳ ಅಂಕಿ ಅಂಶಗಳಿವೆ. ಕನೀನಿನಿಯ ವರದಿಯಲ್ಲಿ ಮೂರು ಕೇಂದ್ರಗಳ ಅಂಕಿ ಅಂಶ ಮಾತ್ರ ಇದೆ. ಮಾಯವಾಗಿರುವ ಅಂಕಿಅಂಶವೆಂದರೆ ಶ್ರೀ ಪಿ.ಬಿ. ಜಾನ್ ಎಂಬುವರ ಹೆಗ್ಗದ್ದೆ ಎಸ್ಟೇಟಿನ ಖಾಸಗಿ ಮಳೆಮಾಪನ ಕೇಂದ್ರದ್ದು. (ಈ ಮಳೆಮಾಪನಕೇಂದ್ರವೂ ಎತ್ತಿನಹೊಳೆ ಯೋಜನೆಯ ವ್ಯಾಪ್ತಿಯಲ್ಲೇ ಇದೆ). ಹೀಗೆ ಮಾಯವಾಗಲು ಕಾರಣ ಏನಿರಬಹುದು?
ಮೊದಲಿನ ಮೂರು ಮಳೆಮಾಪನ ಕೇಂದ್ರಗಳಲ್ಲಿ ಕ್ರಮವಾಗಿ ವರ್ಷಕ್ಕೆ 6030, 6060 ಮತ್ತು 6540 ಮಿಮೀ. ಮಳೆ ದಾಖಲಾಗಿದ್ದರೆ ನಾಲ್ಕನೇ ಕೇಂದ್ರದಲ್ಲಿ ದಾಖಲಾಗಿರುವುದು 4150 ಮಿಮೀ ಮಳೆ ಮಾತ್ರ.  ಕನೀನಿನಿ ಈ ಕೇಂದ್ರವನ್ನು ಬಿಟ್ಟುಬಿಡಲು ಇದೇ ಕಾರಣ ಇರಲಾರದೆ?
ಇರಲಿ. ಪರಿಗಣಿಸಿರುವ ಮೂರು ಖಾಸಗಿ ಮಳೆಮಾಪನ ಕೇಂದ್ರಗಳ ಸರಾಸರಿ ಮಳೆ 6280 ಎನ್ನುವುದು ಕನೀನಿನಿಯ ಲೆಕ್ಕ. ಸರಾಸರಿ ತೆಗೆಯೋಣ: ಮೂರೂ ಸಂಖ್ಯೆಗಳನ್ನು ಕೂಡಿಸಿದರೆ 18630. ಇದನ್ನು ಮೂರರಿಂದ ಭಾಗಿಸಿದರೆ  6210.  ಹಾಗಿದ್ದರೆ 6280 ಎಲ್ಲಿಂದ ಬಂತು? ಕನೀನಿನಿಯ ಎಂಜಿನಿಯರುಗಳೇ ಹೇಳಬೇಕು.
ಪರಮಶಿವಯ್ಯನವರು ಕೊಟ್ಟಿರುವ ನಾಲ್ಕು ಮಳೆಮಾಪನ ಕೇಂದ್ರಗಳ  ಪೈಕಿ ಒಂದನ್ನು ಬಿಟ್ಟುಬಿಡಲು ಕಾರಣವೇ ಇಲ್ಲ. ಏಕೆಂದರೆ ಆ ಕೇಂದ್ರವೂ ಸಹ ಎತ್ತಿನಹೊಳೆ ಯೋಜನಾವ್ಯಾಪ್ತಿಯಲ್ಲೇ ಬರುತ್ತದೆ. ಹಾಗಾಗಿ ಅದನ್ನು ಸೇರಿಸಿಯೇ ಈ ಭಾಗದ ಮಳೆಯ ಲೆಕ್ಕಾಚಾರ ಹಾಕಬೇಕಾಗುತ್ತದೆ. ಹಾಗೆ ಮಾಡಿದಾಗ ಈ ಪ್ರದೇಶದ ಸರಾಸರಿ ಮಳೆ 5695 ಮಿಮೀಗಳು ಮಾತ್ರ.
ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನಾವಲಯದ ಮುಖ್ಯ ಎಂಜಿನಿಯರರು 18-10-12ರಂದು ಕೇಂದ್ರಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಗೆ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಒಂದು ಪತ್ರ ಬರೆದಿದ್ದಾರೆ. ಅದರ ವಿಷಯ: Clarification on the requirement of Environmental clearance based on EIA notification 2006, and its amendments. ಈ ಪತ್ರದಲ್ಲಿ ಅವರು ಹೀಗೆ ಹೇಳುತ್ತಾರೆ: "The intensity of rainfall in the Western Ghats is very high and it is in the range of above 6500 mm at higher altitudes".  ತಾವೇ ತಯಾರಿಸಿದ ವರದಿಯಲ್ಲಿ ಈ ಭಾಗದ ಮಳೆಯ ಸರಾಸರಿ ಪ್ರಮಾಣ 6280 ಎಂದವರು, ಕೇಂದ್ರ ಸರ್ಕಾರಕ್ಕೆ ಬರೆಯುವಾಗ ಪಶ್ಚಿಮಘಟ್ಟಗಳ ಎತ್ತರಪ್ರದೇಶದಲ್ಲಿ 6500 ಮಿ.ಮೀ.ಗಿಂತಲೂ ಹೆಚ್ಚು ಮಳೆ ಬೀಳುತ್ತದೆ ಎಂದು ಯಾಕೆ ಬರೆದರು? ಈ ವಾಕ್ಯದ ಪ್ರಸ್ತುತತೆ ಏನು? ಎತ್ತಿನಹೊಳೆಯ ಯೋಜನೆಯ ಕುರಿತು ಬರೆದ ಪತ್ರದಲ್ಲಿ ಅದರ ಯೋಜನಾಪ್ರದೇಶದ ಮಳೆಯ ಪ್ರಮಾಣವನ್ನು ಬೇಕಾದರೆ ದಾಖಲಿಸಬಹುದೇ ಹೊರತು, ಇಡೀ ಪಶ್ಚಿಮಘಟ್ಟಗಳ ಎತ್ತರ ಪ್ರದೇಶದ ಮಳೆಯ ಕುರಿತ ಪ್ರಸ್ತಾವ ಯಾಕೆ? ಇಷ್ಟಕ್ಕೂ ಪಶ್ಚಿಮ ಘಟ್ಟಗಳ ಎತ್ತರ ಪ್ರದೇಶಗಳಲ್ಲಿ 6500 ಮಿಮೀ ಮಳೆ ಬೀಳುತ್ತದೆ ಎಂಬ ಬಗ್ಗೆ ದಾಖಲೆಗಳೇನಾದರೂ ಇವೆಯೇ?

ಮಳೆಯ ಪ್ರಮಾಣ: ವಾಸ್ತವ ಏನು?


ಈ ಪ್ರದೇಶದ ಮಳೆಯ ಅಂಕಿ ಅಂಶಗಳಿಗಾಗಿ ಖಾಸಗಿಯವರ ಮಳೆಮಾಪನ ಕೇಂದ್ರಗಳನ್ನು ಕನೀನಿನಿ ಅವಲಂಬಿಸಿರುವುದು ತುಂಬಾ ಕುತೂಹಲಕಾರಿಯಾಗಿದೆ. ಖಾಸಗಿಯವರ ಪೈಕಿ ಇಬ್ಬರ  ಅಂಕಿಅಂಶಗಳು1979-80 ಹಾಗೂ 1990-91ರ ನಡುವಿನ 12 ವರ್ಷಗಳದ್ದಾದರೆ, ಮತ್ತೊಬ್ಬರದ್ದು 1985-86 ಮತ್ತು 1999-2000ದ ನಡುವಿನ 15 ವರ್ಷಗಳ ಅವಧಿಯದು. ಆದರೆ, ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈ ಪ್ರದೇಶದ ಕಳೆದ ಸುಮಾರು 22 ವರ್ಷಗಳ ಮಳೆಮಾಪನದ ಅಂಕಿ ಅಂಶಗಳು ಜಲಸಂಪನ್ಮೂಲ ಇಲಾಖೆಯಲ್ಲಿ ಲಭ್ಯವಿದೆ. ಹಾಗಿದ್ದರೂ ಕನೀನಿನಿ ಯಾಕೆ ಆ ಅಂಕಿ ಅಂಶಗಳನ್ನು ಬಳಸಿಕೊಳ್ಳಲಿಲ್ಲ? ಯಾಕೆ ಖಾಸಗಿ ಮಳೆಮಾಪನ ಕೇಂದ್ರಗಳ ಅಂಕಿಅಂಶಗಳಿಗೆ ಮೊರೆಹೋಯಿತು? ವರದಿಯನ್ನು ತಯಾರಿಸಿದ ಕನೀನಿನಿಯ ಎಂಜಿನಿಯರುಗಳೇ ಇದಕ್ಕೆ ಉತ್ತರ ಹೇಳಬೇಕು. ಕನೀನಿನಿ ಹೇಳುತ್ತಿರುವ ಮಳೆಯ ಪ್ರಮಾಣಕ್ಕೂ, ಸರಕಾರದ ಮಳೆ ಲೆಕ್ಕಕ್ಕೂ ಅಗಾಧ ವ್ಯತ್ಯಾಸ ಇರುವುದರಿಂದ ಮಳೆಯ ವಾಸ್ತವ ಪ್ರಮಾಣ ಎಷ್ಟು ಎಂಬುದನ್ನು ಚರ್ಚಿಸಲೇ ಬೇಕಾಗುತ್ತದೆ.
(ಕನೀನಿನಿ ಖಾಸಗಿಯವರ ಮಳೆಮಾಪನದ ಅಂಕಿಅಂಶಗಳನ್ನು ಯಾಕೆ ಬಳಸಿಕೊಂಡಿತೆಂದು  ಊಹಿಸಲು ಸಾಧ್ಯವಿದೆ: ಮೇಲೆ ಉಲ್ಲೇಖಿಸಿರುವ ಪರಮಶಿವಯ್ಯನವರ ವರದಿಯ ಆರನೇ ಅಧ್ಯಾಯದ ಪ್ರಾರಂಭದಲ್ಲಿ ಎತ್ತಿನಹೊಳೆಯ ಯೋಜನಾಪ್ರದೇಶದ ಮಳೆ ಮಾಹಿತಿ ಕುರಿತು ಹೀಗೆ ಹೇಳಿದ್ದಾರೆ: "There are no Govt. Rain gauge statements in the catchment areas of all the 3 resources of water proposed to be utilised in this Scheme. There is one River gauge readings for Bhadra River at Malleshwara. ಕನೀನಿನಿಯ ವರದಿ ಕುರುಡಾಗಿ ಪರಮಶಿವಯ್ಯನವರನ್ನು ಅನುಸರಿಸಿರುವುದು ಸಾಧ್ಯ) 

ಜಲವಿಜ್ಞಾನ ಘಟಕದ ಭಿನ್ನರಾಗ

ಕನೀನಿನಿ ಎತ್ತಿನಹೊಳೆ ಯೋಜನೆಯ ಕುರಿತಂತೆ ಯೋಜನಾವರದಿಯನ್ನು ತಯಾರಿಸಿ  ಸರಕಾರಕ್ಕೆ ಸಲ್ಲಿಸಿತು. ಸರಕಾರ ಆ ವರದಿಯನ್ನು ಅಧ್ಯಯನ ಮಾಡಿ ವರದಿಯ ಮೇಲೆ ವರದಿ ಕೊಡುವಂತೆ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರರಿಗೆ ಸೂಚಿಸಿತು. ಅವರು ಅದನ್ನು ಸಂಬಂಧಿಸಿದ ಹಲವು ವಿಭಾಗಗಳಿಗೆ ಕಳಿಸಿ, ಆ ವಿಭಾಗಗಳ ವರದಿ ಕೇಳಿದರು. ಅವುಗಳ ಪೈಕಿ ಒಂದು ವಿಭಾಗವೇ ಜಲವಿಜ್ಞಾನ ಘಟಕ. ಈ ವಿಭಾಗವು ಯೋಜನಾಪ್ರದೇಶದಲ್ಲಿ ದೊರೆಯಬಹುದಾದ ನೀರಿನ ಪ್ರಮಾಣವನ್ನು ತನ್ನದೇ ಮಳೆಯ ಅಂಕಿಅಂಶಗಳ ಮೇಲೆ ತನ್ನದೇ ಕ್ರಮದಲ್ಲಿ ಲೆಕ್ಕ ಮಾಡಿ ಪ್ರತ್ಯೇಕವಾದ ಒಂದು ವರದಿಯನ್ನೇ 21-06-2012 ರಂದು ಮುಖ್ಯ ಎಂಜಿನಿಯರರಿಗೆ ಒಪ್ಪಿಸಿತು.
ಈ ವರದಿಯಲ್ಲಿ ಸರಕಾರವು  ಪರಿಗಣಿಸಲೇ ಬೇಕಾದ ಹಲವು ಅಂಶಗಳಿವೆ:
1. ಜಲವಿಜ್ಞಾನ ಘಟಕದ ಅಂಕಿ ಅಂಶಗಳ ಪ್ರಕಾರ ಎತ್ತಿನಹೊಳೆ ಯೋಜನಾಪ್ರದೇಶದಲ್ಲಿ ಬೀಳುವ ಮಳೆಯ ಸರಾಸರಿ ಪ್ರಮಾಣ  ಕೇವಲ 3072 ಮಿ.ಮೀ.! ಲಭ್ಯನೀರಿನ ಪ್ರಮಾಣ ಮಳೆಯನ್ನವಲಂಬಿಸಿದರೆ   ಕೇವಲ 15.019 ಟಿಎಂಸಿ!
2. ಘಟಕವು pro rata ಆಧಾರದಲ್ಲಿಯೂ ಲಭ್ಯನೀರಿನ ಪ್ರಮಾಣವನ್ನು ಲೆಕ್ಕ ಹಾಕಿದೆ. ಕೇಂದ್ರೀಯ ಜಲ ಆಯೋಗದವರು (CWC-Central water commission) ಕಳೆದ 40 ವರ್ಷಗಳಿಂದ ಬಂಟ್ವಾಳದ ಸಮೀಪ ನೇತ್ರಾವತಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಅಳೆಯುತ್ತಿದ್ದಾರೆ. prorata ಆಧಾರದ ಲೆಕ್ಕಾಚಾರ ಇದರ ಅಂಕಿಸಂಖ್ಯೆಗಳನ್ನು ಅವಲಂಬಿಸಿದೆ. ಇದರ ಪ್ರಕಾರ ಲಭ್ಯನೀರಿನ ಪ್ರಮಾಣ: 21.856 ಟಿಎಂಸಿ.
ಈ ಲೆಕ್ಕಾಚಾರವನ್ನು ನೀಡಿದನಂತರ ಜಲವಿಜ್ಞಾನಘಟಕದ ಅಧೀಕ್ಷಕ ಎಂಜಿನಿಯರರು ತನ್ನ ವರದಿಯ ಕೊನೆಯ ಪ್ಯಾರಾವನ್ನು ಹೀಗೆ ಮುಗಿಸುತ್ತಾರೆ: "ಹೀಗೆ ಮೇಲೆ ಲೆಕ್ಕಾಚಾರ ಮಾಡಿದ ಇಳುವರಿಯನ್ನು ಉದ್ದೇಶಿತ ಯೋಜನೆಗೆ ಬಳಸುವ ಮುನ್ನ ಸದರಿ ಯೋಜನೆಗಳ ಮೇಲ್ಭಾಗ ಮತ್ತು ಕೆಳಭಾಗದ ಬಳಕೆ / ಅವಶ್ಯಕತೆಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ."
"ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ" ಯೋಜನೆಯನ್ನು ಕಾರ್ಯಗತ ಮಾಡುವುದಾಗಿ ಮತ್ತೆ ಮತ್ತೆ ಹೇಳಿಕೊಳ್ಳುವ ಕನೀನಿನಿ ಪ್ರವಾಹದ ನೀರು ಎಷ್ಟು ಸಿಕ್ಕರೆ ಅಷ್ಟನ್ನೂ ಬಳಿದು ಸಾಗಿಸಬಹುದೆಂಬ ನಿಲುವನ್ನು ತಳೆದರೆ ಜಲವಿಜ್ಞಾನದ  ಅಧೀಕ್ಷಕ ಎಂಜಿನಿಯರರು ಕೊನೆಯ ಪಕ್ಷ "ಮೇಲ್ಭಾಗ ಮತ್ತು ಕೆಳಭಾಗದ ಬಳಕೆ / ಅವಶ್ಯಕತೆಗಳನ್ನು ಪರಿಗಣಿಸುವುದು ಅಗತ್ಯ" ಎಂಬ ಎಚ್ಚರಿಕೆಯನ್ನಾದರೂ ವಹಿಸುತ್ತಾರೆ. ಈ ಸಲಹೆಯನ್ನು ಸರಕಾರವು ಪರಿಗಣಿಸಿದರೆ, ಎತ್ತಿನಹೊಳೆ ಯೋಜನೆಗೆ ಲಭ್ಯನೀರಿನ ಪ್ರಮಾಣವು ಇನ್ನೂ ಕಡಿಮೆಯಾಗುವ ಎಲ್ಲ ಸಾಧ್ಯತೆಯೂ ಇದೆ.
ತನ್ನ ವರದಿಯಲ್ಲಿ ಅ.ಎಂಜಿನಿಯರರು "ಬಂಟ್ವಾಳ ಪಟ್ಟಣದ ಹತ್ತಿರ ನೇತ್ರಾವತಿ ನದಿ....... ಮಾಪನ ಮಾಹಿತಿಗಳು ಲಭ್ಯವಿದ್ದು ಈ ಮಾಹಿತಿಗಳನ್ನು ಪರಿಗಣಿಸುವುದು ಸೂಕ್ತವೆಂದು ಅಭಿಪ್ರಾಯಪಡಲಾಗಿದೆ" ಎಂದಿದ್ದಾರೆ. ಯೋಜನಾಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಆಧರಿಸಿದ ಲೆಕ್ಕಾಚಾರಕ್ಕಿಂತ, ಬಂಟ್ವಾಳ ಸಮೀಪದ ನೇತ್ರಾವತಿ ನದಿ ಮಾಪನದ ಅಂಕಿಅಂಶಗಳನ್ನಾಧರಿಸಿದ ಲೆಕ್ಕಾಚಾರವೇ ಹೆಚ್ಚು ಅವಲಂಬನಾರ್ಹ ಎಂಬ ತೀರ್ಮಾನಕ್ಕೆ ಬರಲು ಕಾರಣಗಳನ್ನು ಮಾತ್ರ ಅವರು ಕೊಡುವುದಿಲ್ಲ.

ಮಳೆಯ ಪ್ರಮಾಣದ ಗೊಂದಲ: ಕೆಲವು ಅಂಕಿಅಂಶಗಳು

1. ಕನೀನಿನಿಯ ಭದ್ರಾ ಮೇಲ್ದಂಡೆ ಯೋಜನಾವಲಯದ ಮುಖ್ಯ ಎಂಜಿನಿಯರ್ ದೆಹಲಿಗೆ ಬರೆದ ಪತ್ರದಲ್ಲಿ: 6500 ಮಿ.ಮೀ.
2. ಕನೀನಿನಿಯ ಯೋಜನಾ ವರದಿಯಲ್ಲಿ: 6280 ಮಿ.ಮೀ
3. ಕನೀನಿನಿಯ ತಪ್ಪು ಲೆಕ್ಕಾಚಾರವನ್ನು ತಿದ್ದಿದಾಗ: 6210 ಮಿ.ಮೀ
4. ನಾಲ್ಕೂ ಖಾಸಗಿ ಮಳೆಮಾಪನ ಕೇಂದ್ರಗಳನ್ನು ಪರಿಗಣಿಸಿದಾಗ : 5695 ಮಿ.ಮೀ
5. ಜಲಸಂಪನ್ಮೂಲ ಇಲಾಖೆಯ 22 ವರ್ಷಗಳ ಅಂಕಿಅಂಶದ ಸರಾಸರಿ: 3072 ಮಿ.ಮೀ.
6.  http://www.samsamwater.com/climate/ ಎಂಬ ಜಾಲತಾಣದ ಪ್ರಕಾರ ಸುಮಾರು 3000 ಮಿ.ಮೀ. 

ಯೋಜನೆಗೆ ಸಾವಿರಾರು ಕೋಟಿ ರೂ.ಗಳನ್ನು ತೊಡಗಿಸುವ ಮೊದಲು ಈ ಗೊಂದಲವನ್ನು ಪರಿಹರಿಸಿಕೊಳ್ಳುವುದು ಅಗತ್ಯವಲ್ಲವೆ?

ಶಿಷ್ಟಾಚಾರ ಉಲ್ಲಂಘಿಸಿದ ಸರ್ಕಾರದ ಆಡಳಿತಾತ್ಮಕ ಅನುಮತಿ?

ಅತ್ಯಂತ ಆಶ್ಚರ್ಯಕರವಾಗಿ ಈ ಹಂತದಲ್ಲಿ ಒಂದು ಬೆಳವಣಿಗೆ ನಡೆದು ಹೋಗುತ್ತದೆ: ಯೋಜನೆಯ ಕುರಿತಂತೆ ಜಲಸಂಪನ್ಮೂಲ ಇಲಾಖೆಯು ತನ್ನ ಅಧ್ಯಯನವನ್ನು ಇನ್ನೂ ಮುಂದುವರಿಸಿರುವಂತೆಯೇ, ಅದರ ಅಭಿಪ್ರಾಯಕ್ಕೆ ಕಾಯದೆ, ಕೇವಲ ಕನೀನಿನಿಯ ಯೋಜನಾವರದಿಯನ್ನು ಪರಿಗಣಿಸಿ, ತಾ. 13-07-2012ರಲ್ಲಿ ಸರ್ಕಾರವು ಎತ್ತಿನಹೊಳೆ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡುತ್ತದೆ!
ಈ ಸೌಭಾಗ್ಯಕ್ಕೆ ಯೋಜನೆಯ ಬಗ್ಗೆ  ಜಲಸಂಪನ್ಮೂಲ ಇಲಾಖೆಯ ಅಭಿಪ್ರಾಯವನ್ನು ಕೇಳಿದ್ದಾದರೂ ಯಾತಕ್ಕೆ ಎಂಬ ಪ್ರಶ್ನೆಗೆ ಸರಕಾರವೇ ಉತ್ತರಿಸಬೇಕಾಗುತ್ತದೆ.
ಇಲ್ಲಿ ಒಂದು ಸ್ಪಷ್ಟೀಕರಣ ಅಗತ್ಯ. 21-05-2012ರಲ್ಲಿ ಸರಕಾರವು ಜ.ಸಂ.ಇಲಾಖೆಯ ಮುಖ್ಯ ಎಂಜಿನಿಯರರಿಗೆ ಬರೆದ ಪತ್ರದ ವಿಷಯ ಇದು: "ಪಶ್ಚಿಮಾಭಿಮುಖವಾಗಿ ಹರಿಯುವ ಎತ್ತಿನಹೊಳೆ ಯೋಜನೆ ಮೂಲಕ ಎತ್ತಲಾಗುವ 24.01 ಟಿಎಂಸಿ ಪ್ರವಾಹದ ನೀರನ್ನು ಬರಪೀಡಿತ ಪ್ರದೇಶಗಳಿಗೆ ಹಂಚಿಕೆ ಮಾಡುವ ಕುರಿತು". ಈ ವಿಷಯಕ್ಕೆ ಸಂಬಂಧಿಸಿದಂತೆ ತಾ. 07-07-2012ರಲ್ಲಿಯೇ - ಎಂದರೆ ಸರ್ಕಾರ ಯೋಜನೆಗೆ ಆಡಳಿತಾತ್ಮಕ ಅನುಮತಿ ನೀಡುವ ಮೊದಲೇ - ಮುಖ್ಯ ಎಂಜಿನಿಯರರು ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಆದರೆ, ಜ.ಸಂ.ಅ. ಸಂಸ್ಥೆಯ  ಮುಖ್ಯ ಎಂಜಿನಿಯರರು ತಾ. 02-06-2012ರಲ್ಲಿ ಜಲವಿಜ್ಞಾನ ಘಟಕದ ಅಧೀಕ್ಷಕ ಎಂಜಿನಿಯರರಿಗೆ ಬರೆದ ಪತ್ರದ ವಿಷಯ ಮೇಲಿನಂತೆಯೇ ಆಗಿದ್ದರೂ, ಅದರಲ್ಲಿ "ಉಲ್ಲೇಖ: 1. ಸರ್ಕಾರದ ಪತ್ರ ಸಂ: ಜಸಂಇ 44 ವಿಬ್ಯಾಇ 2011, ದಿನಾಂಕ: 18-10-2011" ಎಂದಿದೆ ಮತ್ತು ಪತ್ರದ ಮೊದಲನೇ ವಾಕ್ಯ ಹೀಗಿದೆ: "ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1)ರ ಪತ್ರದಲ್ಲಿ ಮೇಲಿನ ಯೋಜನೆಯ ಬಗ್ಗೆ ಪರಿಶೀಲಿಸಿ, ಅಭಿಪ್ರಾಯವನ್ನು ಸಲ್ಲಿಸುವಂತೆ ಸರ್ಕಾರವು ಸೂಚನೆ ನೀಡಿರುತ್ತದೆ"  (18-10-2011ರ ಪತ್ರದ ಪ್ರತಿ ನನ್ನ ಹತ್ತಿರ ಇಲ್ಲ.-ಲೇ.). ಎಂದರೆ ನೀರಿನ ಹಂಚಿಕೆಯ ಬಗ್ಗೆ ಮಾತ್ರವಲ್ಲ, ಇಡೀ ಯೋಜನೆಯ ಬಗ್ಗೆಯೇ ಸರಕಾರವು ಜಲಸಂಪನ್ಮೂಲ ಇಲಾಖೆಯ ಅಭಿಪ್ರಾಯ ಕೇಳಿತ್ತೆಂಬುದನ್ನು ಗಮನಿಸಬೇಕು.

ಮುಂದುವರಿದ ಜಲಸಂಪನ್ಮೂಲ ಇಲಾಖೆಯ ಅಧ್ಯಯನ

ಇತ್ತ ಜಲಸಂಪನ್ಮೂಲ ಇಲಾಖೆ ತನ್ನ ಕೆಲಸವನ್ನು ಮಾತ್ರ ನಿಲ್ಲಿಸುವುದಿಲ್ಲ. ಸರಕಾರವು ಆಡಳಿತಾತ್ಮಕ ಅನುಮೋದನೆ ನೀಡಿ ಆಗಿದ್ದರೂ,  ತಾ. 27-07-2012ರಲ್ಲಿ ಮುಖ್ಯ ಎಂಜಿನಿಯರರು ಜಲವಿಜ್ಞಾನ ಘಟಕದ ಅಧೀಕ್ಷಕ ಎಂಜಿನಿಯರರ ವರದಿಯ ಲೋಪದೋಷಗಳನ್ನು ಎತ್ತಿತೋರಿಸಿ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದು, (ಆಂತರಿಕ ಟಿಪ್ಪಣಿ) ವರದಿಯನ್ನು ಪರಿಷ್ಕರಿಸಿ ಹೊಸದಾಗಿ ಸಲ್ಲಿಸುವಂತೆ  ಸೂಚಿಸುತ್ತಾರೆ. ಮುಖ್ಯ ಎಂಜಿನಿಯರರ ಈ ಆಂತರಿಕ ಟಿಪ್ಪಣಿಯ ಸಾರಾಂಶವನ್ನು ಮಾತ್ರ ಕೊಟ್ಟರೆ ನನಗೆ ತೃಪ್ತಿ ಇಲ್ಲ. ಹಾಗಾಗಿ ಮೂಲದಾಖಲೆಯ ಎಲ್ಲ ನಾಲ್ಕು ಪುಟಗಳನ್ನು ಮುಂದೆ ಕೊಟ್ಟಿದ್ದೇನೆ:



ದುರದೃಷ್ಟವಶಾತ್ ಜಲವಿಜ್ಞಾನದ ಅಧೀಕ್ಷಕ ಎಂಜಿನಿಯರರು ಮುಖ್ಯ ಎಂಜಿನಿಯರರ ಈ ಯಾವ ತಕರಾರುಗಳಿಗೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ದಿ. 29-08-2012ರಂದು,   ಈ ಹಿಂದಿನ ವರದಿಗೆ ಕೇವಲ ಒಂದು ಪ್ಯಾರಾವನ್ನು ಹೊಸದಾಗಿ ಸೇರಿಸಿ, ತನ್ನ ಕೆಲಸವನ್ನು ಮುಗಿಸುತ್ತಾರೆ. ಆ ಪ್ಯಾರಾ ಹೀಗಿದೆ:
"ಮೇಲೆ ತಿಳಿಸಿದಂತೆ ಪ್ರಸ್ತಾವಿತ ಎತ್ತಿನಹೊಳೆ ಯೋಜನೆಯು C.W.C. ಗೇಜಿಂಗ್ ಕೇಂದ್ರದಿಂದ 85 ಕಿ.ಮೀ. ಮೇಲ್ಭಾಗದಲ್ಲಿರುವುದರಿಂದ ಸಾಮಾನ್ಯವಾಗಿ ಶೇ. 10ರಿಂದ 15%ರಷ್ಟು ಮಳೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಲೆಕ್ಕಾಚಾರ ಮಾಡಿರುವ 21.856 ಟಿಎಂಸಿಗೆ ಶೇ.10ರಿಂದ 15%ರಷ್ಟು ಹೆಚ್ಚುವರಿ ನೀರಿನ ಲಭ್ಯತೆಯನ್ನು ಪರಿಗಣಿಸಬಹುದಾಗಿದೆ."
ಹೀಗೆ ಎತ್ತಿನಹೊಳೆಯ ಲಭ್ಯನೀರಿನ ಪ್ರಮಾಣ ಎನ್ನುವುದು ಸಂಪೂರ್ಣವಾಗಿ ಗೊಂದಲದ ಗೂಡಾಗಿ ಹೋಗಿದೆ. ಹಾಗಾಗಿ ಲಭ್ಯನೀರಿನ ಪ್ರಮಾಣವನ್ನು ನಿಖರವಾಗಿ ಖಚಿತಪಡಿಸಿಕೊಳ್ಳದೆ ಯೋಜನೆಯನ್ನು ಮುಂದುವರಿಸಿದರೆ ಅದು ಕುಡಿಯುವ ನೀರು ಒದಗಿಸುವುದಕ್ಕಿಂತ ಬೇರೆಯೇ ಆದ ಉದ್ದೇಶ ಹೊಂದಿದೆ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ.

ಎತ್ತಿನಹೊಳೆ ಯೋಜನೆ: ಕಾವೇರಿ ಜಲವಿವಾದ ತಜ್ಞರ ಅಭಿಮತ

ಎತ್ತಿನಹೊಳೆಯ ಕುರಿತಂತೆ ಕಾವೇರಿ ಜಲ ವಿವಾದ ತಜ್ಞರ ಅಭಿಪ್ರಾಯವನ್ನು ಅತ್ಯಂತ ನೋವಿನಿಂದ, ವಿಷಾದದಿಂದ ನಾನಿಲ್ಲಿ ಪ್ರಸ್ತಾವಿಸುತ್ತಿದ್ದೇನೆ. ತಜ್ಞರ ಈ ಅಭಿಪ್ರಾಯವು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುತ್ತಿರುವವರಿಗೆ ಅನುಕೂಲಕರವಾಗಿದೆ ಎನ್ನುವುದು ನಿಜ. ಆದರೆ, ನನಗೆ ಇದು ಖಂಡಿತಾ ಸಂತೋಷದ ವಿಷಯವಲ್ಲ. ಕಾವೇರಿ ವಿವಾದವು ಕನ್ನಡಿಗರನ್ನು ಹೇಗೆ ಅಸಹಾಯಕರನ್ನಾಗಿಸಿಬಿಟ್ಟಿದೆ ಎಂಬುದನ್ನು ಯೋಚಿಸಿದಾಗಲೆಲ್ಲ ನನಗೆ ಮೈಪರಚಿಕೊಳ್ಳುವಂತಾಗುತ್ತದೆ. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತಜ್ಞರ ಈ ಅಭಿಪ್ರಾಯವನ್ನು ಪರಿಗಣಿಸುವುದು ಅನಿವಾರ್ಯ ಎಂಬುದರಿಂದ ಮಾತ್ರ ನಾನು ಇಲ್ಲಿ ಇದನ್ನು ಪ್ರಸ್ತಾವಿಸುತ್ತಿದ್ದೇನೆ.  ಸರ್ಕಾರವು ಯೋಜನೆಗೆ ಆಡಳಿತಾತ್ಮಕ ಅನುಮತಿ ನೀಡುವ ಮೊದಲೇ ತಜ್ಞರ ಈ ಅಭಿಪ್ರಾಯವು ಸರಕಾರಕ್ಕೆ ಗೊತ್ತಿತ್ತು ಎಂಬುದನ್ನೂ, ಇದು ಈ ಯೋಜನೆಗೆ ಮಾತ್ರ ಸೀಮಿತವಾಗದೆ, ಪರದೆಯ ಹಿಂದೆ ವೇಷ ಕಟ್ಟಿಕೊಂಡು ರಂಗ ಪ್ರವೇಶಿಸಲು ಕಾಯುತ್ತಿರುವ ಶ್ರೀ ಜಿ.ಎಸ್. ಪರಮಶಿವಯ್ಯನವರ ಅಸಂಖ್ಯ ಯೋಜನೆಗಳಿಗೂ ಅಡ್ಡಗಾಲಿಡುತ್ತಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು..



ಕನೀನಿನಿಯ ಭದ್ರಾ ಮೇಲ್ದಂಡೆ ವಲಯದ ಮುಖ್ಯ ಎಂಜಿನಿಯರರು ಎತ್ತಿನಹೊಳೆ ಯೋಜನೆಯಿಂದ ಲಭ್ಯವಾಗುವ 24.01ಟಿಎಂಸಿ ನೀರಿನ ಹಂಚಿಕೆಯ ಕುರಿತಂತೆ ಒಂದು ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಅದರ ಕೊನೆಯಭಾಗದಲ್ಲಿ : ".....ಸದರಿ ಯೋಜನೆಯಿಂದ ರಾಜ್ಯದ ಪಾಲಾರ್ ಹಾಗೂ ಪೆನ್ನಾರ್ ಕಣಿವೆಗಳಲ್ಲಿ ಬರುವ ಪ್ರದೇಶಗಳಲ್ಲಿ ಒಟ್ಟು 503 ಕೆರೆಗಳಿಗೆ ಶೇ. 60ರಷ್ಟು ನೀರನ್ನು ಅಂತರ್ಜಲ ಮರುಪೂರಣಕ್ಕಾಗಿ ತುಂಬಿಸುವುದು ಹಾಗೂ ಕುಡಿಯುವ ನೀರಿನ ಸಲುವಾಗಿ 18.077 ಟಿಎಂಸಿಯಷ್ಟು ನೀರನ್ನು ಪ್ರದೇಶವಾರು ಹಂಚಿಕೆ ಮಾಡುವ ಕುರಿತು ಪ್ರಸ್ತಾವನೆಯನ್ನು......" ಎಂದು ಹೇಳಲಾಗಿದೆ.
ಕಾನೂನುತಜ್ಞರ ಅಭಿಪ್ರಾಯ ಗೊತ್ತಿದ್ದೂ, ಎತ್ತಿನಹೊಳೆ ಯೋಜನೆಯನ್ನು ಮುಂದುವರಿಸುತ್ತೇವೆ ಎಂದು ಹೇಳುವುದು ಬಹು ದೊಡ್ಡ ದುಸ್ಸಾಹಸವಾಗುತ್ತದೆ.

1892 ರ ಒಪ್ಪಂದ: 

"ಕರ್ನಾಟಕ ಜನಪರ ವೇದಿಕೆ" ಎಂಬ ಸಂಘಟನೆಯು ಕಾವೇರಿ ವಿವಾದದ ಕುರಿತಂತೆ ಕನ್ನಡದಲ್ಲಿ ಒಂದು ಪುಸ್ತಕವನ್ನು ಪ್ರಕಟಿಸಿದೆ. ನನಗೆ ಗೊತ್ತಿರುವ ಮಟ್ಟಿಗೆ ಕನ್ನಡದಲ್ಲಿ ಇದು ಕಾವೇರಿ ವಿವಾದದ ಕುರಿತು ಅನೇಕ ಮಾಹಿತಿಗಳನ್ನೂ, ಅತ್ಯುತ್ತಮ ವಿಶ್ಲೇಷಣೆಯನ್ನೂ ಒಳಗೊಂಡ ಪುಸ್ತಕ. ಈ ಪುಸ್ತಕದಲ್ಲಿ  1892 ರ ಒಪ್ಪಂದವನ್ನು ಹೀಗೆ ವಿವರಿಸಿದ್ದಾರೆ:
" ಈ ಒಪ್ಪಂದವು ಬಹಳ ಮುಖ್ಯವಾಗಿ ಮದ್ರಾಸ್ ಸರ್ಕಾರದ ಅನುಮತಿಯಿಲ್ಲದೆ, ಮೈಸೂರು ಸಂಸ್ಥಾನವು ಕಾವೇರಿ ಮತ್ತು ಅದರ ಸೂಚಿತ ಉಪನದಿಗಳು ಹಾಗೂ ತುಂಗಭದ್ರಾ ನದಿಯ ಸೂಚಿತ ಭಾಗಗಳಲ್ಲಿ ಯಾವುದೇ ಹೊಸ ನೀರಾವರಿ ಕಾಮಗಾರಿಯನ್ನು ಕೈಗೊಳ್ಳಬಾರದು ಎಂದು ಹೇಳುತ್ತದೆ.
ಹಾಗೆಯೇ ಈಗಾಗಲೇ ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿರುವ ನೀರಾವರಿಗೆ ತೊಂದರೆ ಕೊಡದ ಹೊರತು, ಮದ್ರಾಸು ಅನುಮತಿಯನ್ನು ನಿರಾಕರಿಸಬಾರದು ಎಂದೂ ಹೇಳುತ್ತದೆ. ಆದರೆ ಮದ್ರಾಸು ಸರ್ಕಾರ ಇನ್ನು ಮುಂದೆ ಕೈಗೊಳ್ಳಬಹುದಾದ ನೀರಾವರಿ ಯೋಜನೆಗಳ ಬಗ್ಗೆ ಇದು ಯಾವುದೇ ನಿರ್ಬಂಧವನ್ನು ವಿಧಿಸುವುದಿಲ್ಲ ಮತ್ತು ಎರಡೂ ಪ್ರದೇಶಗಳ ನಡುವೆ ನೀರಿನ ಹಂಚಿಕೆಯ ಕುರಿತು ಯಾವುದೇ ಸೂತ್ರವನ್ನು ಮುಂದಿಡುವುದಿಲ್ಲ. ಬದಲಿಗೆ ಮೈಸೂರು ಸಂಸ್ಥಾನದ ಮೇಲೆ ಮಾತ್ರ ಏಕಪಕ್ಷೀಯ ನಿರ್ಬಂಧವನ್ನು ಹೇರಲಾಗಿದೆ. ಈ ಕರಾರಿನ ಹೆಸರೇ ಅದರ ಸ್ವಭಾವವನ್ನು ಸೂಚಿಸುತ್ತದೆ: "Rules defining the limits within which no new irrigation works are to be constructed by Mysore state without previous reference to Madras Government". ಅಂದರೆ "ಮದ್ರಾಸು ಸರ್ಕಾರದ ಪೂರ್ವ ಅನುಮತಿಯಿಲ್ಲದೆ ಮೈಸೂರು ರಾಜ್ಯ ಯಾವುದೇ ಹೊಸ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳಬಾರದೆಂಬ ಮಿತಿಯನ್ನು ವಿಧಿಸುವ ನಿಯಮ". ಇದಕ್ಕೆ ನಮ್ಮ 'ಮಹಾರಾಜ'ರು ಸಹಿ ಮಾಡಿದ್ದರು!"

ನೀರಿನ ಸಮಸ್ಯೆಗೆ ಪರಿಹಾರವೇನು?

ಜಲಸಂಪನ್ಮೂಲ ಇಲಾಖೆಯ ಜಾಲತಾಣದಲ್ಲಿ ಮಾಹಿತಿ ಹಕ್ಕಿನ ಅಡಿ ಕೆಲವು ವಿವರಗಳನ್ನು ಕೊಡಲಾಗಿದೆ. http://waterresources.kar.nic.in/File0001.PDF ಎಂಬ ಫೈಲಿನ ಏಳನೇ ಪುಟದಲ್ಲಿ "ಕರ್ನಾಟಕ ಜಲಸಂಪನ್ಮೂಲ ಪ್ರಾಧಿಕಾರ" ಎಂಬ ಸಂಸ್ಥೆಯೊಂದರ ವಿವರಗಳಿವೆ. ಈ ಸಂಸ್ಥೆಯ ಉದ್ದೇಶ ಇತ್ಯಾದಿಗಳು ಅದರಲ್ಲಿ ಇಲ್ಲ. ಆದರೆ ಆಶ್ಚರ್ಯಕರವೆನ್ನುವಂತೆ ಈ ಸಂಸ್ಥೆಯ ಸದಸ್ಯರ ಪಟ್ಟಿಯಲ್ಲಿ ಶ್ರೀ ಪಡ್ರೆ, ಶ್ರೀಮತಿ ರೋಹಿಣಿ ನಿಲೇಕಣಿ ಮುಂತಾದ ಹೆಸರುಗಳಿವೆ. ಹಾಗಿದ್ದರೆ ಸರಕಾರಕ್ಕೆ ನೀರಿನ ಕ್ಷೇತ್ರದಲ್ಲಿ  ಯಾರು ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ ಎನ್ನುವುದು ತಿಳಿದಿದೆ ಎಂದಂತಾಯಿತು. ಬಯಲುಸೀಮೆಯ ನೀರಿನ ಸಮಸ್ಯೆಯ ಪರಿಹಾರಕ್ಕೆ, ಸ್ವಂತಕ್ಕೆ ಯಾವ ಲಾಭವೂ ಇಲ್ಲದೆ ಕೇವಲ ದೇಶದ ಹಿತದೃಷ್ಟಿಯನ್ನೇ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿರುವ ಇಂಥವರ ಮತ್ತು ಇವರು ಸೂಚಿಸಬಹುದಾದ ಇತರರ  ಸಲಹೆಗಳನ್ನು ಸರಕಾರ ಪಡೆದರೆ, ಈ ಸಮಸ್ಯೆಗೆ ಖಂಡಿತ ಪರಿಹಾರ ಸಿಕ್ಕುತ್ತದೆ. 

ಸೋಮವಾರ, ಅಕ್ಟೋಬರ್ 14, 2013


ನೇತ್ರಾವತಿಯ ನೀರು:

ಕೊಟ್ಟದ್ದು ಸಾಲದು - ಇನ್ನೂ ಕೊಡಿ
-ಮಂಗಳೂರು ಎಸ್ ಇ ಜಡ್ ಕಂಪೆನಿ

ಈಗಾಗಲೇ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ (ನೇತ್ರಾವತಿ 12.5 + ಗುರುಪುರ 2.5) ನೀರೆತ್ತಲು ಅನುಮತಿ ಪಡೆದಿರುವ ಎಂ ಎಸ್ ಇ ಜಡ್ ಕಂಪೆನಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ಮೊದಲೇ ನೇತ್ರಾವತಿ ನದಿಯಿಂದ ಒಟ್ಟು 27 ಎಂಜಿಡಿ ನೀರೆತ್ತಲು ಸರಕಾರದ ಮುಂದೆ ಹೊಸ ಬೇಡಿಕೆ ಮಂಡಿಸಿದೆ.
(1 ಎಂಜಿಡಿ= ದಿನಕ್ಕೆ 45 ಲಕ್ಷ ಲೀಟರು).
ಕಂಪೆನಿ ಈ ಬೇಡಿಕೆಯನ್ನು ಮಂಡಿಸಿರುವುದು 31-08-2012ರಲ್ಲಿ. ಸರ್ಕಾರ ಕಂಪೆನಿಯ ಅರ್ಜಿಯ ಬಗ್ಗೆ ವರದಿ ನೀಡಲು ಸೂಚಿಸಿ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಎಂಜಿನಿಯರರಿಗೆ ಪತ್ರ ಬರೆದಿದೆ. ಅವರು ಮೈಸೂರಿನ ಅಧೀಕ್ಷಕ ಎಂಜಿನಿಯರರಿಗೆ ಅದನ್ನು ಕಳಿಸಿ, ಒಂದಲ್ಲ ಎರಡು ಪತ್ರಗಳನ್ನು ಬರೆದಿದ್ದಾರೆ. ಇಷ್ಟು ವಿದ್ಯಮಾನಗಳು ಸರಕಾರದ ಮಟ್ಟದಲ್ಲಿ ಕೇವಲ ಒಂದೂವರೆ ತಿಂಗಳಿನಲ್ಲಿ ನಡೆದು ಹೋಗಿವೆ. ಈ ಪತ್ರದ ಪ್ರತಿಗಳು ಕಾರ್ಯಪಾಲಕ ಎಂಜಿನಿಯರ್, ಜಲಮಾಪನ ವಿಭಾಗ, ಹಾಸನ ಇವರಿಗೂ 'ಸೂಕ್ತಕ್ರಮ'ಕ್ಕಾಗಿ ಹೋಗಿರುವುದರಿಂದ ಅಂತಿಮವಾಗಿ ಈ ವಿಷಯದಲ್ಲಿ ವರದಿ ಕೊಡಬೇಕಾದವರು ಅವರೇ ಎಂದು ಭಾವಿಸಬಹುದು. ಅಥವಾ ಅವರು ಸ. ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಈ ಕೆಲಸವನ್ನು ವಹಿಸಲೂಬಹುದು.
ಕಾರ್ಯಪಾಲಕ ಎಂಜಿನಿಯರರ ವರದಿ ಈಗಾಗಲೇ ಸರಕಾರದ ಕೈಸೇರಿದೆಯೇ, ಅವರು ವರದಿ ತಯಾರಿಸಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಇಲಾಖೆಯ ವೆಬ್ ಸೈಟಿನಲ್ಲಿ ಸಂಬಂಧಿಸಿದ ಕಡತ "ಚಾಲ್ತಿಯಲ್ಲಿದೆ" ಎಂದಿರುವುದರಿಂದ ಮತ್ತು ಸುಮಾರು ಹದಿನೈದು ದಿನಗಳ ಹಿಂದಿನವರೆಗೂ ಕಡತದಲ್ಲಿ ಅಂಥ ವರದಿ ಇರಲಿಲ್ಲವಾದ್ದರಿಂದ ವರದಿ ಇನ್ನೂ ಒಪ್ಪಿಸಲಾಗಿಲ್ಲ ಎಂದು ಭಾವಿಸಲು ಅವಕಾಶವಿದೆ. ಆದರೆ ಅವರ ವರದಿ ಯಾವಾಗ ಬೇಕಾದರೂ ಸಲ್ಲಿಕೆಯಾಗಬಹುದು ಮತ್ತು ಅದನ್ನು ಆಧರಿಸಿ ಸರಕಾರ ಎಂ ಎಸ್ ಇ ಜಡ್ ಕಂಪೆನಿಗೆ ನೀರು ಕೊಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬಹುದು.
ಎಂ ಎಸ್ ಇ ಜಡ್ ಕಂಪೆನಿ ತನ್ನ ಬೇಡಿಕೆಗೆ ಆಧಾರವಾಗಿ ಸುರತ್ಕಲ್ಲಿನ ಎನ್ ಐ ಟಿ ಕೆಯ ಅಪ್ಲೈಡ್ ಮೆಕ್ಯಾನಿಕ್ಸ್ ಮತ್ತು ಹೈಡ್ರಾಲಿಕ್ಸ್ ವಿಭಾಗದ ಪ್ರೊ. ಎಸ್. ಜಿ. ಮಯ್ಯರು ಮಾಡಿದ ಅಧ್ಯಯನ ವರದಿಯನ್ನು ಲಗತ್ತಿಸಿದೆ. ಈ ವರದಿಯ ಪ್ರಕಾರ ಅಗತ್ಯಪ್ರಮಾಣದ ನೀರು ನೇತ್ರಾವತಿಯ ಅಣೆಕಟ್ಟುಗಳಲ್ಲಿ ಲಭ್ಯವಿದೆ.
ಕಂಪೆನಿಯು ನೇತ್ರಾವತಿ ನದಿಯಿಂದ ನೀರೆತ್ತಲು ಕಾಮಗಾರಿ ಪ್ರಾರಂಭಿಸಿ ಪೈಪುಗಳನ್ನು ಅಳವಡಿಸತೊಡಗಿದಾಗ, 15 ಎಂಜಿಡಿ ನೀರು ಸಾಗಿಸಲು ಅನುಮತಿ ಪಡೆದಿದ್ದರೂ, ಅದರ ಎರಡರಷ್ಟು ಎಂದರೆ 30 ಎಂಜಿಡಿ ನೀರು ಸಾಗಿಸುವ ಸಾಮರ್ಥ್ಯದ ಪೈಪುಗಳನ್ನು ಅಳವಡಿಸಿದ್ದು ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾಗಿ, ಮಂಗಳೂರಿನ ಜನತೆಯಲ್ಲಿ ಆತಂಕ, ಅನುಮಾನಗಳನ್ನು ಸೃಷ್ಟಿಸಿತ್ತು. ಆ  ಅನುಮಾನ ಈಗ ನಿಜವಾಗುವಂತೆ ತೋರುತ್ತಿದೆ.

ಎಂ ಎಸ್ ಇ ಜಡ್ ಕಂಪೆನಿಯ ನೀರಿನ ಬೇಡಿಕೆ ಪೂರೈಕೆಗಳ ವಸ್ತುಸ್ಥಿತಿ:

2007ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಸರಕಾರವು ಎಂ ಎಸ್ ಇ ಜಡ್ ಕಂಪೆನಿಗೆ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಬೇಸಗೆಯ 90 ದಿನಗಳಲ್ಲಿ ಒಟ್ಟು 15 ಎಂಜಿಡಿ ನೀರೆತ್ತಲು ಅನುಮತಿ ನೀಡಿದೆ. ಇದಲ್ಲದೆ ಕಂಪೆನಿಯು ಮಂಗಳೂರು ಮಹಾನಗರಪಾಲಿಕೆಯೊಂದಿಗೆ ಕೊಳಚೆನೀರನ್ನು ಶುದ್ಧೀಕರಿಸಿ ಬಳಸುವ ಕುರಿತಂತೆ ಒಂದು ಒಪ್ಪಂದವನ್ನು ಮಾಡಿಕೊಂಡಿದೆ. 2009ರ ಅಕ್ಟೋಬರ್ ತಿಂಗಳಿನಲ್ಲಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಎಂ ಎಸ್ ಇ ಜಡ್ ಕಂಪೆನಿಯ ಒಂದು ಪರಿಚಯ ಲೇಖನ (ಜಾಹೀರಾತು?)ದಲ್ಲಿ "ಮಂಗಳೂರು ಆರ್ಥಿಕ ವಲಯ ನಿಯಮಿತಕ್ಕೆ ನೀರಿನ ಮೂಲ"ವನ್ನು ಹೀಗೆ ವಿವರಿಸಿದೆ:
* 18 ಎಂಜಿಡಿಯಷ್ಟು ನೀರನ್ನು ಮಂಗಳೂರು ಮ.ನ.ಪಾ. ಕೊಳಚೆ ನೀರು ಸಂಸ್ಕರಣ ಘಟಕಗಳ ಮೂಲಕ ಸಂಸ್ಕರಿಸಿ ಬಳಸುತ್ತದೆ
* 15 ಎಂಜಿಡಿಯಷ್ಟು ನೀರನ್ನು ಗುರುಪುರ ಮತ್ತು ನೇತ್ರಾವತಿಯ ಕಿಂಡಿ ಅಣೆಕಟ್ಟಿನ ಮೂಲಕ ಪಡೆಯುವ ಯೋಜನೆ ಇದೆ
* 12 ಎಂಜಿಡಿಯಷ್ಟು ನೀರನ್ನು ನೈಸರ್ಗಿಕ ಅಣೆಕಟ್ಟುಗಳ ಮೂಲಕ ಮಳೆನೀರು ಕೊಯ್ಲು ಮಾಡಿ ತನ್ನ ಸಂಗ್ರಹಾಗಾರದಲ್ಲಿ ಶೇಖರಿಸಿ ಉಪಯೋಗಿಸುವ ವ್ಯವಸ್ಥೆ ಮಾಡಲಾಗುತ್ತದೆ.
2008ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 1800 ಎಕ್ರೆ ಜಾಗದಲ್ಲಿ ಎಂ ಎಸ್ ಇ ಜಡ್ ಮೊದಲ ಹಂತದ ಸ್ಥಾಪನೆಗೆ ಅನುಮತಿ ನೀಡಿದೆ. ಈ ಅನುಮತಿಯಲ್ಲಿ ಮಂಡಳಿಯು "ಎಂ ಎಸ್ ಇ ಜಡ್ ಮೊದಲ ಹಂತದ ನೀರಿನ ಬಳಕೆಯು 37 ಎಂಜಿಡಿಯನ್ನು ಮೀರತಕ್ಕದ್ದಲ್ಲ" ಎಂದು ವಿಧಿಸಿ ನೀರಿನ ಮೂಲಗಳನ್ನು ಹೀಗೆ ಗುರುತಿಸಿದೆ: ನೇತ್ರಾವತಿ ಮತ್ತು ಗುರುಪುರ ನದಿಗಳು; ಕಾವೂರು, ಬಜಾಲ್ ಮತ್ತು ಸುರತ್ಕಲ್ಲಿನ ಕೊಳಚೆ ನೀರು ಸಂಸ್ಕರಣಾ ಘಟಕಗಳು ಮತ್ತು ಎಂ ಎಸ್ ಇ ಜಡ್ ನ ಆವರಣದೊಳಗಿನ ಸಂಗ್ರಹಾಗಾರಗಳು.
ಕಂಪೆನಿಯ Environmental Impact Assessment ಮಾಡಿರುವ NEERI  ಸಹ ತನ್ನ ವರದಿಯಲ್ಲಿ "ಕಂಪೆನಿಯು ತನ್ನ ಆವರಣದೊಳಗೆ 165 ಎಕ್ರೆ ವಿಸ್ತಾರದ ಒಂದು ಸ್ಥಳವನ್ನು ಗುರುತಿಸಿದೆ. ಇಲ್ಲಿ ಒಡ್ಡುಗಳ ನಿರ್ಮಾಣ ಆಗಬೇಕಾಗಿದೆ" ಎಂದೂ, "ಅದರಲ್ಲಿ ದಿನಕ್ಕೆ 12.45 ದಶಲಕ್ಷ ಗ್ಯಾಲನ್ನಿನಂತೆ 90 ದಿನಗಳಿಗೆ ಅಗತ್ಯವಾದ ನೀರನ್ನು ಸಂಗ್ರಹಿಸಬಹುದಾಗಿದೆ" ಎಂದೂ ತಿಳಿಸಿದೆ. "ನೀರಿ"ಯ ವರದಿಯ ಪ್ರಕಾರವೂ ಕಂಪೆನಿಯ ನೀರಿನ ಮೂಲಗಳು: ಕೊಳಚೆ ನೀರು ಸಂಸ್ಕರಣಾಘಟಕದಿಂದ 18 ಎಂಜಿಡಿ; ನೇತ್ರಾವತಿ ಮತ್ತು ಗುರುಪುರ ನದಿಗಳಿಂದ 15 ಎಂಜಿಡಿ; ಮಳೆನೀರು ಸಂಗ್ರಹಣೆಯಿಂದ 12 ಎಂಜಿಡಿ.
ಹೀಗೆ ನೀರಿನ ಬಳಕೆಯ ಮಿತಿ ಮತ್ತು ನೀರಿನ ಮೂಲಗಳು ಸ್ಪಷ್ಟವಾಗಿದ್ದರೂ 31-08-2012ರಲ್ಲಿ 27 ಎಂಜಿಡಿ ನೀರಿಗಾಗಿ ತನ್ನ ಹೊಸಬೇಡಿಕೆ ಮಂಡಿಸುವಾಗ ಕಂಪೆನಿಯು ತನ್ನ ವರಸೆಯನ್ನು ಬದಲಾಯಿಸಿ ಹೀಗೆ ಹೇಳಿದೆ: "It is kindly requested to approve augmentation of water sourcing from 15 MGD to 27 MGD"......... "The balance requirements will be met from Mangalore City Corporation three sewage treatment plants out of which two plants are under construction".  ಇಲ್ಲಿ ನೇತ್ರಾವತಿ ನದಿಯ ನೀರಿನ ಕುರಿತು ಹೇಳುವಾಗ ಯಾವ್ಯಾವ ಬ್ಯಾರೇಜಿನಿಂದ ಎಷ್ಟೆಷ್ಟು ನೀರು ಎಂದು ನಿರ್ದಿಷ್ಟವಾಗಿ ಹೇಳುವ ಕಂಪೆನಿ, ಎಸ್ ಟಿ ಪಿಗಳಿಂದ ಪಡೆಯುವ ನೀರಿನ ಪ್ರಮಾಣವನ್ನು ಮಾತ್ರ ನಿರ್ದಿಷ್ಟವಾಗಿ ಹೇಳುವುದಿಲ್ಲ. ಇನ್ನೂ ಅಚ್ಚರಿಯ ವಿಷಯವೆಂದರೆ ಅತ್ಯಂತ ಅನುಕೂಲಕರವಾಗಿ ಮಳೆನೀರು ಸಂಗ್ರಹದ ಮೂಲಕ ನೀರೊದಗಿಸಿಕೊಳ್ಳುವ ಐಟಮ್ಮನ್ನು ಮರೆತೇಬಿಟ್ಟಿದೆ!
"ಕಂಪೆನಿಯ ನೀರಿನ ಅಗತ್ಯವು 37 ಎಂಜಿಡಿಯನ್ನು ಮೀರತಕ್ಕದ್ದಲ್ಲ" ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಅನುಮತಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಮೇಲೆ ಹೇಳಿದ ಲೆಕ್ಕಾಚಾರದಂತೆ ಈಗಾಗಲೇ ಇರುವ ಮೂಲಗಳಿಂದ ಕಂಪೆನಿಗೆ 45 ಎಂಜಿಡಿ ನೀರು ಸಿಗುತ್ತಿದೆ. ಎಂದರೆ ಅದರ ಬಳಕೆಯ ಮಿತಿಗಿಂತ 8 ಎಂಜಿಡಿ ನೀರು ಹೆಚ್ಚಾಗಿಯೇ ಸಿಗುತ್ತಿದೆ. ಹಾಗಿದ್ದರೆ ಕಂಪೆನಿ ಮತ್ತೂ 12 ಎಂಜಿಡಿ ನೇತ್ರಾವತಿ ನದಿಯ ನೀರು ಬೇಕೆಂದು ಅರ್ಜಿ ಸಲ್ಲಿಸುತ್ತಿರುವುದರ ಮರ್ಮವೇನು? ಇಷ್ಟು ನೀರೆತ್ತಲು ಮೊದಲೇ ಪೈಪುಗಳನ್ನು ಹಾಕಿ ಅದು ವ್ಯವಸ್ಥೆ ಮಾಡಿಕೊಂಡಿರುವುದು ಏನನ್ನು ಸೂಚಿಸುತ್ತದೆ?

ಕುಡಿಯುವ ನೀರು: ಮಂಗಳೂರು ಎದುರಿಸಬೇಕಾಗಿರುವ ಎರಡು ಮುಖ್ಯ ಸವಾಲುಗಳು:

ನೇತ್ರಾವತಿ ನದಿಯಿಂದ ನೀರೆತ್ತುವ ವಿಷಯದಲ್ಲಿ ಇಲ್ಲಿಯವರೆಗೂ ಮಂಗಳೂರು ಮಹಾನಗರಪಾಲಿಕೆಗೆ ಪ್ರಬಲವಾದ ಯಾವ ಪ್ರತಿಸ್ಪರ್ಧಿಗಳೂ ಇರಲಿಲ್ಲ. ಎಂ ಆರ್ ಪಿ ಎಲ್ ಕಳೆದ ಹಲವು ವರ್ಷಗಳಿಂದ ನೀರೆತ್ತುತ್ತಿದೆಯಾದರೂ ಅದು ಮನಪಾಕ್ಕೆ ದೊಡ್ಡ ಸವಾಲು ಎನ್ನುವಂತಿಲ್ಲ. ಆದರೆ ಎಂ ಎಸ್ ಇ ಜಡ್ ಕಂಪೆನಿ ಮಂಗಳೂರಿನ ಜನತೆಯ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೇ ಸಡ್ಡು ಹೊಡೆಯುವ  ಎಲ್ಲ ಲಕ್ಷಣಗಳೂ ನಿಧಾನವಾಗಿ ತಲೆದೋರುತ್ತಿವೆ.

1. ತುಂಬೆ ಅಣೆಕಟ್ಟಿನ ಸಂಗ್ರಹಣಾಸಾಮರ್ಥ್ಯಕ್ಕೆ ಅಡ್ಡಿ:

ಮಂಗಳೂರಿಗೆ ಕುಡಿಯುವ ನೀರಿನ ಸರಬರಾಜನ್ನು ಹೆಚ್ಚಿಸುವ ದೃಷ್ಟಿಯಿಂದ ತುಂಬೆಯಲ್ಲಿ ಅಣೆಕಟ್ಟಿನ ಎತ್ತರವನ್ನು ಏರಿಸುವ ಕಾಮಗಾರಿ ಈಗ ಕೆಲವು ವರ್ಷಗಳಿಂದಲೂ ನಡೆಯುತ್ತಲೇ ಇದೆಯಷ್ಟೆ. ಇತ್ತ ಸರಕಾರವು ಎಂ ಎಸ್ ಇ ಜಡ್ ಕಂಪೆನಿಗೆ ಬಂಟ್ವಾಳದ ಜಕ್ರಿಬೆಟ್ಟಿನಲ್ಲಿ ಒಂದು ಅಣೆಕಟ್ಟು ಕಟ್ಟಲು ಅನುಮತಿ ನೀಡಿದೆ. ಈ ಅನುಮತಿಗೆ ಸಂಬಂಧಿಸಿದಂತೆ ಅಂದಿನ ಮನಪಾ ಕಮಿಷನರ್ ಆಗಿದ್ದ  ಹರೀಶ ಕುಮಾರ್  18-04-2012ರಲ್ಲಿ  ಜಿಲ್ಲಾಧಿಕಾರಿಯವರಿಗೆ ಹೀಗೆ ಪತ್ರ ಬರೆದಿದ್ದರು:  "ಉದ್ದೇಶಿತ MSEZನವರ ಜಕ್ರಿಬೆಟ್ಟುವಿನ ಕಿಂಡಿ ಅಣೆಕಟ್ಟು ಮಂಗಳೂರಿನ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಾಣವಾಗುತ್ತಿರುವ ಹೊಸ ಅಣೆಕಟ್ಟಿನ ಶೇಖರಣಾ ಸಾಮರ್ಥ್ಯವನ್ನು ಕಡಿಮೆಗೊಳಿಸುವುದರಿಂದ ಮತ್ತು ಸರಕಾರಿ ಆದೇಶದ ಶರ್ತ 8 ರ ಉಲ್ಲಂಘನೆಯಾಗುವುದರಿಂದ ಶರ್ತ 19ರಂತೆ, ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ MSEZನವರಿಗೆ ನೀಡಿರುವ ಅನುಮತಿಯನ್ನು ರದ್ದು ಮಾಡುವಂತೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಜನಸಾಮಾನ್ಯರ ಪರವಾಗಿ ಕೋರಿಕೆ ಸಲ್ಲಿಸಿ ವಿನಂತಿಸಬೇಕಾಗಿ ಕೋರಲಾಗಿದೆ".  ಜಿಲ್ಲಾಧಿಕಾರಿಯವರು ಈ ಪತ್ರದ ಮುಖ್ಯಾಂಶಗಳನ್ನು ಯಥಾವತ್ತಾಗಿ ಉಳಿಸಿಕೊಂಡು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಿಗೆ ಒಂದು ಪತ್ರ ಬರೆದು ಸೂಕ್ತಕ್ರಮಕ್ಕಾಗಿ ಕೋರಿದರು. ಈ ಪತ್ರದ ವಿಷಯ ಇನ್ನೂ ಸರಕಾರದ ಎದುರಿಗೆ ತೀರ್ಮಾನಕ್ಕೆ ಬಾಕಿ ಇದೆ.

2. ಪ್ರಬಲ ಎದುರಾಳಿಯೊಂದಿಗೆ ಹೋರಾಟದ ಅನಿವಾರ್ಯತೆ

2012ರ ಮಾರ್ಚ್ ತಿಂಗಳಿನಲ್ಲಿ ಮಂಗಳೂರಿನಲ್ಲಿ  ಕುಡಿಯುವ ನೀರಿನ ತೀವ್ರ ಅಭಾವ ಉಂಟಾಯಿತು. ಮಾರ್ಚ್ 27ರಂದು ಜಿಲ್ಲಾಧಿಕಾರಿಯವರು, ನೇತ್ರಾವತಿಯಿಂದ ದಿನಕ್ಕೆ 60 ಲಕ್ಷ ಗ್ಯಾಲನ್ ನೀರೆತ್ತುತ್ತಿದ್ದ ಎಂ ಆರ್ ಪಿ ಎಲ್ ಕಂಪೆನಿಗೆ "ತುಂಬೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ದಿನಕ್ಕೆ 25 ಲಕ್ಷ ಗ್ಯಾಲನ್ ನೀರು ಮಾತ್ರ ಎತ್ತತಕ್ಕದ್ದು" ಎಂದು ಆದೇಶಿಸಿದರು. ನೀರಿನ ಈ ಸಮಸ್ಯೆಯ ಕುರಿತು 17-04-2012ರಂದು ಎಂ ಆರ್ ಪಿ ಎಲ್ ಕಂಪೆನಿಯು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ ".....ಅಂತೆಯೇ ಅಂದಿನಿಂದ ಪ್ರತಿನಿತ್ಯವೂ  25 ಲಕ್ಷ ಗ್ಯಾಲನ್ ನೀರನ್ನು ಮಾತ್ರ ಎತ್ತುತ್ತಿದ್ದೆವು.  ಆದರೆ 11ನೇ ತಾರೀಖಿನ ನಂತರ ಕಂಪೆನಿಯು ಸರಪಾಡಿಯಿಂದ ನೀರೆತ್ತುವುದನ್ನು ಪೂರ್ಣವಾಗಿ ನಿಲ್ಲಿಸಿತು. ನೀರಿಲ್ಲದ ಕಾರಣಕ್ಕೆ ಕಂಪೆನಿಯು ತನ್ನ ಘಟಕಗಳನ್ನು ಬಲವಂತವಾಗಿ ಮುಚ್ಚಬೇಕಾಯಿತು" ಎಂದು ಹೇಳಿತು.
ಏಪ್ರಿಲ್ ಕೊನೆಯಹೊತ್ತಿಗೆ ಮಳೆ ಬಂದು ಈ ಸಮಸ್ಯೆ ಪರಿಹಾರವಾಯಿತೆಂಬುದು ನಿಜ. ಆದರೆ ಅದೇ ವಿಷಯಕ್ಕೆ ಸಂಬಂಧಿಸಿ ಎಂ ಆರ್ ಪಿ ಎಲ್ ಕಂಪೆನಿ ಹೈಕೋರ್ಟಿನಲ್ಲಿ ಒಂದು ದಾವೆ ಹೂಡಿದೆ. ಈ ದಾವೆಗೆ ಸಂಬಂಧಿಸಿ ಹೈಕೋರ್ಟ್ ಮಧ್ಯಂತರ ಆದೇಶವೊಂದನ್ನು ಹೊರಡಿಸಿದೆ, ಆದರೆ ವಿಚಾರಣೆ ಪೂರ್ತಿಯಾಗಿ ಮುಗಿದಿಲ್ಲ. ದ.ಕ. ಜಿಲ್ಲಾಡಳಿತ, ಹಾಸನದಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಜಲಮಾಪನ ವಿಭಾಗ ಹಾಗೂ ಬಂಟ್ವಾಳದ ಮೆಸ್ಕಾಂಗಳು  ಹೈಕೋರ್ಟಿಗೆ ಅಲೆಯಬೇಕಾದ ಪರಿಸ್ಥಿತಿ ಹುಟ್ಟಿಕೊಂಡಿದೆ.
ಜೊತೆಗೇ ಪಶ್ಚಿಮಬಂಗಾಳದ ಪಾರ್ಲಿಮೆಂಟ್ ಸದಸ್ಯರೊಬ್ಬರು ಈ ಸಮಸ್ಯೆಯನ್ನು ಪಾರ್ಲಿಮೆಂಟಿನಲ್ಲೂ ಎತ್ತಿದ್ದರಿಂದ  ಕರ್ನಾಟಕ ಸರಕಾರವು ಪಾರ್ಲಿಮೆಂಟಿಗೆ ಈ ಬಗ್ಗೆ ವಿವರಣೆ ಕೊಡಬೇಕಾಗಿ ಬಂತು.
ಎಂ ಆರ್ ಪಿ ಎಲ್  ಎತ್ತುತ್ತಿರುವ ಕೇವಲ 6 ಎಂಜಿಡಿ ನೀರೇ (ಈಗ ಅದು 8.5 ಎಂಜಿಡಿ ನೀರೆತ್ತಲು ಅನುಮತಿ ಪಡೆದಿದೆ)  ಮಂಗಳೂರಿನ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ಪೆಟ್ಟು ಕೊಡುವುದಾದರೆ, ನಾಳೆ ಎಂ ಎಸ್ ಇ ಜಡ್ ಕಂಪೆನಿ 15 ಎಂಜಿಡಿ ಅಥವಾ 27 ಎಂಜಿಡಿ ನೀರೆತ್ತಲು ಪ್ರಾರಂಭಿಸಿದರೆ, ಬಂಟ್ವಾಳದವರು,  ಮಂಗಳೂರಿಗರು ಕುಡಿಯುವ ನೀರಿಗಾಗಿ ಚಿಕ್ಕಬಳ್ಳಾಪುರಕ್ಕೋ ಕೋಲಾರಕ್ಕೋ ಹೋಗಬೇಕಾದ ಪರಿಸ್ಥಿತಿ ಬರಲಾರದೆ?


ಆದರೆ ಜಕ್ರಿಬೆಟ್ಟಿನಲ್ಲಿ ಎಂ ಎಸ್ ಇ ಜಡ್ ಕಂಪೆನಿ ಅಣೆಕಟ್ಟು ನಿರ್ಮಾಣದ ಪೂರ್ವಭಾವಿ ಕಾಮಗಾರಿಗಳನ್ನು ನಡೆಸುತ್ತಲೇ ಇದೆ. ಒಂದುವೇಳೆ ಮನಪಾ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳ ಕೋರಿಕೆ ಹಾಗೂ ಮಂಗಳೂರಿನ ಜನತೆಯ ಕುಡಿಯುವ ನೀರಿನ ಹಕ್ಕನ್ನು ಕಡೆಗಣಿಸಿ ಜಕ್ರಿಬೆಟ್ಟಿನಲ್ಲಿ ಇನ್ನೊಂದು ಅಣೆಕಟ್ಟು ನಿರ್ಮಾಣವಾದರೆ ತುಂಬೆ ಅಣೆಕಟ್ಟಿನ ಸಂಗ್ರಹಣಾಸಾಮರ್ಥ್ಯ ಅಂದಾಜು ಶೇ. 30ರಷ್ಟು ಕಡಿಮೆಯಾಗುವ ಎಲ್ಲ ಸಾಧ್ಯತೆಯೂ ಇದೆ. (ಅಲ್ಲದೆ ತುಂಬೆ ಅಣೆಕಟ್ಟಿನಿಂದಾಗಿ ಮುಳುಗಡೆಯಾಗುವ ಪ್ರದೇಶ ಗಣನೀಯವಾಗಿ ಹೆಚ್ಚುವ ಸಾಧ್ಯತೆಯೂ ಇದೆ.)