ಗುರುವಾರ, ಜೂನ್ 28, 2018



ಪಂಪಭಾರತ ಆಶ್ವಾಸ ೧ ಪದ್ಯಗಳು ೭೫-೮೫


ಉ|| ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋ |
     ದಾತ್ತ ಸಮಸ್ತ ಲೋಕಮಱಿದಂತಿರೆ ಪೂಣ್ದೆನಗಾಗದಂಗಜೋ ||
     ತ್ಪತ್ತಿ ಸುಖಕ್ಕೆ ಸೋಲಲೞಿಗುಂ ಪುರುಷವ್ರತಮೀಗಳಬ್ಬೆಯೆಂ |
     ದತ್ತಿಗೆಯೆಂಬ ಮಾತನೆನಗೇನೆನಲಕ್ಕುಮೋ ಪಂಕಜಾನನೇ ||೭೫||
(ಅತ್ತ ಸುರೇಶ್ವರಾವಸಥಂ, ಇತ್ತ ಮಹೀತಳಂ, ಉತ್ತ ಪನ್ನಗೋದಾತ್ತ ಸಮಸ್ತ ಲೋಕಂ ಅಱಿದಂತಿರೆ ಪೂಣ್ದ  ಎನಗೆ, ಆಗದು ಅಂಗಜ ಉತ್ಪತ್ತಿ ಸುಖಕ್ಕೆ ಸೋಲಲ್ ಅೞಿಗುಂ ಪುರುಷವ್ರತಂ ಈಗಳ್ ಅಬ್ಬೆಯೆಂದು  ಅತ್ತಿಗೆಯೆಂಬ ಮಾತನ್ ಎನಗೇನ್ ಎನಲ್ ಅಕ್ಕುಮೋ ಪಂಕಜಾನನೇ?)
ಅತ್ತ ಇಂದ್ರನ ನೆಲೆಯಾದ ಸ್ವರ್ಗಲೋಕ, ಇತ್ತ ಭೂಲೋಕ, ಇನ್ನೊಂದು ಕಡೆ ಪಾತಾಳವೇ ಮುಂತಾದ ಇತರ ಲೋಕಗಳು – ಇವೆಲ್ಲಕ್ಕೂ ಗೊತ್ತಿರುವ ಹಾಗೆ ನಾನು ಪ್ರತಿಜ್ಞೆ ಮಾಡಿದ್ದೇನೆ. ಕಾಮಸುಖಕ್ಕೆ ಸೋಲುವುದು ನನ್ನಿಂದ ಸಾಧ್ಯವಿಲ್ಲ. ಹಾಗೆ ಮಾಡಿದರೆ ನನ್ನ ಪುರುಷವ್ರತವು ಅಳಿದುಹೋಗುತ್ತದೆ. ಯಾವ ಬಾಯಲ್ಲಿ ನಿನ್ನನ್ನು ಅಮ್ಮಾ ಎಂದು ಕರೆದೆನೋ ಅದೇ ಬಾಯಲ್ಲಿ ನಲ್ಲೆ ಎಂದು ಕರೆಯುವುದು ನನಗೆ ಎಂದಾದರೂ ಸಾಧ್ಯವೆ? (ಎಂದು ಹೇಳಿ ಭೀಷ್ಮನು ಅಂಬೆಯನ್ನು ಕೈಹಿಡಿಯಲು ನಿರಾಕರಿಸಿದನು.)
ವ|| ಎಂದು ನುಡಿದ ಗಾಂಗೇಯನ ನುಡಿಯೊಳವಸರಮಂ ಪಸರಮಂ ಪಡೆಯದೆ ತನಗೆ ಕಿಱಿಯಂದುಂಗುರವಿಟ್ಟ ಸಾಲ್ವಲನೆಂಬರಸನಲ್ಲಿಗೆ ಪೋಗಿ ನೀನೆನ್ನಂ ಕೈಕೊಳವೇೞ್ಕುಮೆಂದೊಡಾತ-ನಿಂತೆಂದಂ-
(ಎಂದು ನುಡಿದ ಗಾಂಗೇಯನ ನುಡಿಯೊಳ್ ಅವಸರಮಂ ಪಸರಮಂ ಪಡೆಯದೆ, ತನಗೆ ಕಿಱಿಯಂದು ಉಂಗುರವಿಟ್ಟ ಸಾಲ್ವಲನೆಂಬ ಅರಸನಲ್ಲಿಗೆ ಪೋಗಿ, “ನೀನ್ ಎನ್ನಂ ಕೈಕೊಳವೇೞ್ಕುಂ” ಎಂದೊಡೆ ಆತನ್ ಇಂತೆಂದಂ)
ಭೀಷ್ಮನು ಹೀಗೆ ಹೇಳಿದ್ದರಿಂದ ಅಂಬೆಗೆ ಆತನಲ್ಲಿ ಮಾತನಾಡಲು, ವಾದ ಮಾಡಲು ಯಾವ ಅವಕಾಶವೂ ಸಿಗಲಿಲ್ಲ. ಅವಳು ತಾನಿನ್ನೂ ಸಣ್ಣವಳಿದ್ದಾಗ ತನಗೆ ಉಂಗುರವಿಟ್ಟ ಸಾಲ್ವಲನೆಂಬ ಅರಸನಲ್ಲಿಗೆ ಹೋಗಿ ‘ನೀನು ನನ್ನ ಕೈಹಿಡಿ’ ಎಂದು ಕೇಳಿದಳು. ಆಗ ಸಾಲ್ವನು ಹೀಗೆಂದನು:
ಕಂ|| ಬಂಡಣದೊಳೆನ್ನನೋಡಿಸಿ |
     ಕೊಂಡುಯ್ದಂ ನಿನ್ನನಾ ಸರಿತ್ಸುತನಾನುಂ ||
     ಪೆಂಡತಿಯೆನಾದೆನದಱಿಂ |
     ಪೆಂಡಿರ್ ಪೆಂಡಿರೊಳದೆಂತು ಬೆರಸುವರಬಲೇ ||೭೬||
(“ಬಂಡಣದೊಳ್ ಎನ್ನನ್ ಓಡಿಸಿ, ಕೊಂಡುಯ್ದಂ ನಿನ್ನನ್ ಆ ಸರಿತ್ಸುತನ್, ಆನುಂ ಪೆಂಡತಿಯೆನ್  ಆದೆನ್,  ಅದಱಿಂ, ಪೆಂಡಿರ್ ಪೆಂಡಿರೊಳ್ ಅದೆಂತು ಬೆರಸುವರ್  ಅಬಲೇ”?)
ಸ್ವಯಂವರದ ದಿನ ನಡೆದ ಯುದ್ಧದಲ್ಲಿ ಭೀಷ್ಮನು ನನ್ನನ್ನು ಸೋಲಿಸಿ ನಿನ್ನನ್ನು ಅಪಹರಿಸಿದನು. ಅವನಿಗೆ ಸೋತದ್ದರಿಂದ ನಾನು ಅವನ ಹೆಂಡತಿಯಾದಂತೆಯೇ ಆಯಿತು. ಹೆಣ್ಣಾದ ನಾನು ಹೆಣ್ಣಾದ ನಿನ್ನೊಂದಿಗೆ ಸೇರುವುದು ಹೇಗೆ ತಾನೇ ಸಾಧ್ಯ?
ವ|| ಎಂದು ಸಾಲ್ವಲಂ ತನ್ನ ಪರಿಭವದೊಳಾದ ಸಿಗ್ಗಂ ಸಾಲ್ವಿನಮುಂಟುಮಾಡಿದೊಡಾತನ ಮನಮನೊಡಂಬಡಿಸಲಾರದೆ ಪರಶುರಾಮನಲ್ಲಿಗೆ ಪೋಗಿ ಭೀಷ್ಮನೆನ್ನ ಸ್ವಯಂವರದೊಳ್ ನೆರೆದರಸುಮಕ್ಕಳೆಲ್ಲರುಮನೋಡಿಸಿ ಕೊಂಡು ಬಂದೆನ್ನ[೦] ಮದುವೆಯಂ ನಿಲಲೊಲ್ಲ[ದ]ಟ್ಟಿ ಕಳೆದೊಡೆನ್ನ ದೆವಸಮುಂ ಜವ್ವನಮುಮಡವಿಯೊಳಗೆ ಪೂತ ಪೂವಿನಂತೆ ಕಿಡಲೀಯದಾತನೆನ್ನಂ ಪಾಣಿಗ್ರಹಣಂ ಗೆಯ್ವಂತು ಮಾಡು ಮಾಡಲಾಱದೊಡೆ ಕಿಚ್ಚಂ ದಯೆಗೆಯ್ವುದೆಂದಂಬೆ ಕಣ್ಣ ನೀರಂ ತುಂಬೆ-
 (ಎಂದು ಸಾಲ್ವಲಂ ತನ್ನ ಪರಿಭವದೊಳ್ ಆದ ಸಿಗ್ಗಂ ಸಾಲ್ವಿನಂ ಉಂಟುಮಾಡಿದೊಡೆ, ಆತನ ಮನಮನ್ ಒಡಂಬಡಿಸಲಾರದೆ, ಪರಶುರಾಮನಲ್ಲಿಗೆ ಪೋಗಿ, “ಭೀಷ್ಮನ್ ಎನ್ನ ಸ್ವಯಂವರದೊಳ್ ನೆರೆದ ಅರಸುಮಕ್ಕಳ್ ಎಲ್ಲರುಮನ್ ಓಡಿಸಿ, ಕೊಂಡುಬಂದು ಎನ್ನ೦ ಮದುವೆಯಂ ನಿಲಲ್ ಒಲ್ಲದೆ ಅಟ್ಟಿ ಕಳೆದೊಡೆ, ಎನ್ನ ದೆವಸಮುಂ ಜವ್ವನಮುಂ ಅಡವಿಯೊಳಗೆ ಪೂತ ಪೂವಿನಂತೆ ಕಿಡಲೀಯದೆ, ಆತನ್ ಎನ್ನಂ ಪಾಣಿಗ್ರಹಣಂ ಗೆಯ್ವಂತು ಮಾಡು, ಮಾಡಲಾಱದೊಡೆ ಕಿಚ್ಚಂ ದಯೆಗೆಯ್ವುದು” ಎಂದು ಅಂಬೆ ಕಣ್ಣ ನೀರಂ ತುಂಬೆ)
ಎಂದು ಸಾಲ್ವಲನು ತಾನು ಭೀಷ್ಮನಿಗೆ ಸೋತದ್ದರ ಅವಮಾನವನ್ನು ಅಂಬೆಯ ಮೇಲೆ ತೀರಿಸಿದನು! ಅಂಬೆಯು ಸಾಲ್ವಲನ ಮನಸ್ಸನ್ನು ಒಲಿಸಲಾರದೆ, ಪರಶುರಾಮನಲ್ಲಿಗೆ ಹೋಗಿ ‘ಭೀಷ್ಮನು ನನ್ನ ಸ್ವಯಂವರದ ದಿನ ಅಲ್ಲಿಗೆ ಬಂದು, ಸೇರಿದ್ದ ರಾಜಕುಮಾರರೆಲ್ಲರನ್ನೂ ಓಡಿಸಿ, ನನ್ನನ್ನು ಕರೆದುಕೊಂಡು ಹೋದನು. ಆದರೆ ನಂತರ ನನ್ನನ್ನು ಮದುವೆಯಾಗಲು ಒಪ್ಪದೆ ಕೈಬಿಟ್ಟನು. ನನ್ನ ಆಯಸ್ಸೂ, ಯೌವನವೂ ಕಾಡು ಹೂವಿನಂತೆ ಹಾಳಾಗಿ ಹೋಗುತ್ತಿದೆ. ನೀನು ಅದಕ್ಕೆ ಅವಕಾಶ ಕೊಡದೆ ಭೀಷ್ಮನು ನನ್ನನ್ನು ಮದುವೆಯಾಗುವಂತೆ ಮಾಡು. ಅದು ಸಾಧ್ಯವಿಲ್ಲ ಎನ್ನುವುದಾದರೆ ನನಗೆ ಒಂದಿಷ್ಟು ಬೆಂಕಿಯನ್ನು ದಯಪಾಲಿಸು’ ಎಂದು ಕಣ್ಣೀರು ತುಂಬಿಕೊಂಡು ಹೇಳಿದಾಗ-
ಮ|| ನಯಮಂ ನಂಬುವೊಡೆನ್ನ ಪೇೞ್ವ ಸತಿಯಂ ಕೈಕೊಂಡನಂತಲ್ಲ ದು |
     ರ್ಣಯಮಂ ನಚ್ಚುವೊಡೆನ್ನನುಗ್ರ ರಣದೊಳ್ ಮೇಣ್ ಮೀಱಿ ಮಾರ್ಕೊಂಡನಾ ||
     ಱಯೆ ಕಜ್ಜಂ ಪೆಱತಿಲ್ಲ ಶಂತನುಸುತಂಗೆನ್ನಂ ಕರಂ ನಂಬಿದಂ |
     ಬೆಯೊಳೆನ್ನಂಬೆ[ವ]ಲಂ ವಿವಾಹವಿಧಿಯಂ ಮಾೞ್ಪೆಂ ಪೆಱರ್ ಮಾೞ್ಪರೇ ||೭೭||
(“ನಯಮಂ ನಂಬುವೊಡೆ ಎನ್ನ ಪೇೞ್ವ ಸತಿಯಂ ಕೈಕೊಂಡನ್, ಅಂತಲ್ಲ ದುರ್ಣಯಮಂ ನಚ್ಚುವೊಡೆ ಎನ್ನನ್ ಉಗ್ರ ರಣದೊಳ್ ಮೇಣ್ ಮೀಱಿ ಮಾರ್ಕೊಂಡನ್, ಆಱಯೆ ಕಜ್ಜಂ ಪೆಱತಿಲ್ಲ ಶಂತನುಸುತಂಗೆ, ಎನ್ನಂ ಕರಂ ನಂಬಿದ ಅಂಬೆಯೊಳ್ ಎನ್ನಂಬೆವಲಂ ವಿವಾಹವಿಧಿಯಂ ಮಾೞ್ಪೆಂ, ಪೆಱರ್ ಮಾೞ್ಪರೇ”?)
ಭೀಷ್ಮನು ನೀತಿವಂತನೇ ಹೌದಾದರೆ ನನ್ನ ಮಾತಿಗೆ ಒಪ್ಪಿ ಅಂಬೆಯ ಕೈಹಿಡಿಯುತ್ತಾನೆ. ಅನೀತಿಯನ್ನು ನೆಚ್ಚುವವನಾದರೆ ಯುದ್ಧದಲ್ಲಿ ನನ್ನನ್ನು ಎದುರಿಸಬೇಕಾಗುತ್ತದೆ. ವಿಚಾರಿಸಿ ನೋಡಿದರೆ ಭೀಷ್ಮನಿಗೆ ಬೇರೆ ದಾರಿ ಇಲ್ಲ. ನಾನಂತೂ ನನ್ನನ್ನು ನಂಬಿದ ಅಂಬೆಗೆ ನನ್ನ ಬಾಣದ ಸಾಕ್ಷಿಯಾಗಿ ವಿವಾಹವನ್ನು ಮಾಡುತ್ತೇನೆ. ಬೇರೆಯವರು ಮಾಡುತ್ತಾರೆಯೇ?
(ತಾ. ೨೯-೯-೨೦೧೯ರಂದು ತಿದ್ದಿ ಬರೆದುದು:
“ನಾನಂತೂ ನನ್ನನ್ನು ನಂಬಿದ ಅಂಬೆಗೆ ನನ್ನ ಬಾಣದ ಸಾಕ್ಷಿಯಾಗಿ ವಿವಾಹವನ್ನು ಮಾಡುತ್ತೇನೆ.” ಎಂಬ ವಾಕ್ಯವನ್ನು ಮೇಲೆ ಬರೆದಿದ್ದೇನೆ. ಇದು ‘ಎನ್ನಂ ಕರಂ ನಂಬಿದಂಬೆಯೊಳೆನ್ನಂಬೆ[ವ]ಲಂ ವಿವಾಹವಿಧಿಯಂ ಮಾೞ್ಪೆಂ’ ಎಂಬ ವಾಕ್ಯದ ಅರ್ಥ. ಇದೇ ವಾಕ್ಯಕ್ಕೆ ಡಿ.ಎಲ್.ನರಸಿಂಹಾಚಾರ್‌  ಅವರು “ಎನ್ನ ಅಂಬೆ ವಲಂ – ನನ್ನ ಬಾಣವೇ ನಿಶ್ಚಯವಾಗಿಯೂ” ಎಂದೂ, “ಅಂಬೆಗೆ ಮದುವೆ ಮಾಡಿಸುವ ವಿಷಯಕ್ಕೆ ನನ್ನ ಬಾಣವೇ ಸಾಕು, ಬೇರೇನೂ ಬೇಡ ಎಂದು ತಾತ್ಪರ್ಯ” ಎಂದೂ ಅರ್ಥ ಬರೆದಿದ್ದಾರೆ. ಎನ್. ಅನಂತರಂಗಾಚಾರ್ ಹಾಗೂ   ಡಾ..ಎಲ್. ಬಸವರಾಜು ಇಬ್ಬರೂ ಸುಮಾರಿಗೆ ಇದೇ ಅರ್ಥವನ್ನು ಅನುಮೋದಿಸುತ್ತಾರೆ.
೧. ಇಲ್ಲಿ “ಎನ್ನಂಬೆ[ವ]ಲಂ” ಎಂಬುದಕ್ಕೆ “ಎನ್ನಂಬೆವೊಲಂ” ಎಂಬ ಪಾಠಾಂತರ ಇದೆ.
೨. ‘ಅಂಬೆ’ ಶಬ್ದಕ್ಕೆ ಕ.ಸಾ.ಪ. ನಿಘಂಟಿನಲ್ಲಿ –ಬೇರೆ ಅರ್ಥಗಳ ಜೊತೆಗೆ- ‘ಕರು’ ಎಂಬ ಅರ್ಥವನ್ನೂ ಕೊಟ್ಟಿದೆ. (ದನದ)ಕರು ಎಂಬರ್ಥದಲ್ಲಿ ಅಂಬೆ ಶಬ್ದವು ಈಗಲೂ ಅನೇಕ ಪ್ರದೇಶಗಳಲ್ಲಿ ಬಳಕೆಯಲ್ಲಿದೆ. (ಕೆಲವು ಕಡೆ ‘ಅಂಬೆ ಬೂಚಿ’ ಎಂಬ ಶಬ್ದವಿದೆ). ಈ ಹಿನ್ನೆಲೆಯಲ್ಲಿ ಪರಶುರಾಮನ ಮಾತನ್ನು “ಎನ್ನಂ ಕರಂ ನಂಬಿದಂಬೆಯೊಳನ್ನಂಬೆವೊಲಂ ವಿವಾಹ ವಿಧಿಯಂ ಮಾೞ್ಪೆಂ” ಎಂದು ಓದಿ, “ನನ್ನನ್ನೇ ನಂಬಿದ ಅಂಬೆಗೆ, ನನ್ನ ಮಗುವಿನ (ಇಲ್ಲಿ ಕರು ಎಂದರೆ ಮಗು) ಹಾಗೆ ವಿವಾಹವಿಧಿಯನ್ನು ಮಾಡುತ್ತೇನೆ” ಎಂದು ಅರ್ಥ ಮಾಡುವುದೇ ಸರಿಯಾಗುತ್ತದೆ. ‘ವಿವಾಹವಿಧಿ’ ಎಂಬ ಶಬ್ದವನ್ನೂ ಗಮನಿಸಬೇಕು. ತಾನು ಅಂಬೆಯ ತಂದೆಯ ಸ್ಥಾನದಲ್ಲಿ ನಿಂತು ವಿವಾಹದ ‘ವಿಧಿ’ಗಳನ್ನೂ ನಡೆಸಿಕೊಡುತ್ತೇನೆ ಎಂದು ಅವನ ಹೇಳಿಕೆ.)
ವ|| ಎಂದು ನಾಗಪುರಕ್ಕೆ ವರ್ಪ ಪರಶುರಾಮನ ಬರವಂ ಗಾಂಗೇಯಂ ಕೇಳ್ದಿದಿರ್ವಂದು ಕನಕ ರಜತ ಪಾತ್ರಂಗಳೊಳರ್ಘ್ಯಮಂ ಕೊಟ್ಟು ಪೊಡಮಟ್ಟು-
(ಎಂದು ನಾಗಪುರಕ್ಕೆ ವರ್ಪ ಪರಶುರಾಮನ ಬರವಂ ಗಾಂಗೇಯಂ ಕೇಳ್ದು, ಇದಿರ್ವಂದು, ಕನಕ ರಜತ ಪಾತ್ರಂಗಳೊಳ್ ಅರ್ಘ್ಯಮಂ ಕೊಟ್ಟು, ಪೊಡಮಟ್ಟು)
ಎಂದು ಹಸ್ತಿನಾಪುರದತ್ತ ಬರುತ್ತಿದ್ದ  ಪರಶುರಾಮನ ಬರವನ್ನು ಭೀಷ್ಮನು ಕೇಳಿ ತಿಳಿದು, ಆತನನ್ನು ಎದುರ್ಗೊಂಡು, ಚಿನ್ನ-ಬೆಳ್ಳಿಯ ಪಾತ್ರೆಗಳಲ್ಲಿ ಅರ್ಘ್ಯವನ್ನು ಕೊಟ್ಟು, ಅಡ್ಡಬಿದ್ದು-

ಮ|| ಬೆಸನೇನೆಂದೊಡೆ ಪೇೞ್ವೆನೆನ್ನ ಬೆಸನಂ ಕೈಕೊಳ್ವುದೀ ಕನ್ನೆಯಂ |
     ಪಸುರ್ವಂದರ್ ಪಸೆಯಿಂಬಿವಂ ಸಮೆದು ನೀಂ ಕೈಕೊಳ್ ಕೊಳಲ್ಕಾಗದೆಂ ||
     ಬೆಸೆಕಂ ಚಿತ್ತದೊಳುಳ್ಳೊಡೀಗಳಿವರೆಮ್ಮಾಚಾರ್ಯರೆಂದೋವದೇ |
     ರ್ವೆಸನಂ ಮಾಣದೆ ಕೈದುಗೊಳ್ಳೆರಡರೊಳ್ ಮೆಚ್ಚಿತ್ತೆನೇನೆಂದಪಯ್ ||೭೮||
(“ಬೆಸನೇನ್”? ಎಂದೊಡೆ “ಪೇೞ್ವೆನ್ ಎನ್ನ ಬೆಸನಂ, ಕೈಕೊಳ್ವುದೀ ಕನ್ನೆಯಂ, ಪಸುರ್ವಂದರ್ ಪಸೆ ಎಂಬಿವಂ ಸಮೆದು ನೀಂ ಕೈಕೊಳ್, ಕೊಳಲ್ಕಾಗದು ಎಂಬ ಎಸೆಕಂ ಚಿತ್ತದೊಳ್ ಉಳ್ಳೊಡೆ,  ಈಗಳ್ ಇವರ್ ಎಮ್ಮ ಆಚಾರ್ಯರ್ ಎಂದು ಓವದೆ, ಏರ್ವೆಸನಂ ಮಾಣದೆ, ಕೈದುಗೊಳ್, ಎರಡರೊಳ್ ಮೆಚ್ಚಿತ್ತೆನ್ ಏನೆಂದಪಯ್”?)
‘ಏನಪ್ಪಣೆ?’ ಎಂದು ಕೇಳಿದಾಗ ‘ನನ್ನ ಅಪ್ಪಣೆ ಏನೆನ್ನುತ್ತೀಯೋ? ಹೇಳುತ್ತೇನೆ ಕೇಳು: ಹಸಿರು ಚಪ್ಪರ ಹಾಕಿಸಿ, ಹಸೆಮಣೆಯನ್ನಿಟ್ಟು ಈ ಕನ್ಯೆಯನ್ನು ನೀನು ಕೈಹಿಡಿಯತಕ್ಕದ್ದು. ಅದು ಸಾಧ್ಯವಿಲ್ಲ ಎಂಬುದು ನಿನ್ನ ನಿಶ್ಚಯವಾದರೆ ‘ಇವರು ನಮ್ಮ ಗುರುಗಳು’ ಎಂದು ಮುಲಾಜು ಮಾಡದೆ, ಕಾದುವ ಸ್ವಭಾವವನ್ನು ಬಿಡದೆ ಖಡ್ಗವನ್ನು ಹಿಡಿ. ಎರಡು ಆಯ್ಕೆಗಳನ್ನು ಕೊಟ್ಟಿದ್ದೇನೆ. ಏನೆನ್ನುತ್ತೀಯ?’
ವ|| ಎಂದು ನುಡಿದ ಪರಶುರಾಮನ ನುಡಿಯಂ ಗಾಂಗೇಯಂ ಕೇಳ್ದೆನಗೆ ವೀರಶ್ರೀಯುಂ ಕೀರ್ತಿಶ್ರೀಯುಮಲ್ಲದುೞಿದ ಪೆಂಡಿರ್ ಮೊಱೆಯಲ್ಲ ನೀವಿದನೇಕಾಗ್ರಹಂಗೆಯ್ವಿರೆಂದೊಡೆಂತುಮೆಮ್ಮೊಳ್ ಕಾದಲ್ವೇೞ್ವುದೆಂದು-
(ಎಂದು ನುಡಿದ ಪರಶುರಾಮನ ನುಡಿಯಂ ಗಾಂಗೇಯಂ ಕೇಳ್ದು, ಎನಗೆ ವೀರಶ್ರೀಯುಂ ಕೀರ್ತಿಶ್ರೀಯುಂ ಅಲ್ಲದೆ ಉೞಿದ ಪೆಂಡಿರ್ ಮೊರೆಯಲ್ಲ, ನೀವ್ ಇದನ್ ಏಕೆ ಆಗ್ರಹಂಗೆಯ್ವಿರಿ? ಎಂದೊಡೆ, ಎಂತುಂ ಎಮ್ಮೊಳ್ ಕಾದಲ್ವೇೞ್ವುದು ಎಂದು)
ಎಂದು ಹೇಳಿದ ಪರಶುರಾಮನ ಮಾತನ್ನು ಕೇಳಿ ಭೀಷ್ಮನು ‘ನನಗೆ ವೀರಶ್ರೀ, ಕೀರ್ತಿಶ್ರೀಗಳಲ್ಲದೆ ಬಾಕಿ ಹೆಣ್ಣುಗಳ ಸಂಬಂಧವಿಲ್ಲ. (ಇದು ತಿಳಿದೂ) ನೀವೇಕೆ ಇದನ್ನು ಒತ್ತಾಯ ಮಾಡುತ್ತಿದ್ದೀರಿ?’ ಎಂದನು. ಆಗ ಪರಶುರಾಮನು ‘ಅದೇನಿದ್ದರೂ ನನ್ನ ಜೊತೆ ಯುದ್ಧಕ್ಕೆ ತಯಾರಾಗು’ ಎಂದು ಹಟ ಹಿಡಿದನು.
ಮ|| ಕೆಳರ್ದಂದುಗ್ರ ರಣಾಗ್ರಹ ಪ್ರಣಯದಿಂದಾಗಳ್ ಕುರುಕ್ಷೇತ್ರಮಂ |
     ಕಳವೇೞ್ದಿರ್ವರುಮೈಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರ ಸಂ ||
     ಕುಳದಿಂದೊರ್ವರನೊರ್ವರೆಚ್ಚು ನಿಜ ಪೀಠಾಂಭೋಜದಿಂ ಬ್ರಹ್ಮನು |
     ಚ್ಚಳಿಪನ್ನಂ ಪಿರಿದೊಂದು ಸಂಕಟಮನೀ ತ್ರೈಲೋಕ್ಯದೊಳ್ ಮಾಡಿದರ್ ||೭೯||
(ಕೆಳರ್ದು ಅಂದು ಉಗ್ರ ರಣಾಗ್ರಹ ಪ್ರಣಯದಿಂ, ಆಗಳ್ ಕುರುಕ್ಷೇತ್ರಮಂ ಕಳವೇೞ್ದು, ಇರ್ವರುಂ ಐಂದ್ರ ವಾರುಣದೆ, ವಾಯವ್ಯಾದಿ ದಿವ್ಯಾಸ್ತ್ರ ಸಂಕುಳದಿಂದೆ, ಒರ್ವರನ್ ಒರ್ವರ್ ಎಚ್ಚು, ನಿಜ ಪೀಠಾಂಭೋಜದಿಂ ಬ್ರಹ್ಮನ್ ಉಚ್ಚಳಿಪನ್ನಂ, ಪಿರಿದೊಂದು ಸಂಕಟಮನ್ ಈ ತ್ರೈಲೋಕ್ಯದೊಳ್ ಮಾಡಿದರ್)
ಹೀಗೆ ಇಬ್ಬರೂ ಕೆರಳಿ ನಿಂತು, ರಣಪ್ರಣಯಿಗಳಾಗಿ, ಕುರುಕ್ಷೇತ್ರವನ್ನು ಯುದ್ಧಕಣವನ್ನಾಗಿಸಿಕೊಂಡು, ಕಾದಾಡತೊಡಗಿದರು. ಇಂದ್ರಾಸ್ತ್ರ, ವರುಣಾಸ್ತ್ರ, ವಾಯವ್ಯಾಸ್ತ್ರ ಮುಂತಾದ ದಿವ್ಯಬಾಣಗಳ ರಾಶಿಯನ್ನು ಒಬ್ಬರ ಮೇಲೊಬ್ಬರು ಪ್ರಯೋಗಿಸಿದರು. ಅವರ ಘೋರಯುದ್ಧದ ಪರಿಣಾಮವಾಗಿ ಬ್ರಹ್ಮನೇ ತನ್ನ ಪೀಠದಿಂದ ಹಾರಿಬೀಳುವಂತಾಯಿತು. ಮೂರು ಲೋಕದಲ್ಲಿಯೂ ಸಂಕಟ ತಲೆದೋರಿತು.
ಶಿಖರಿಣಿ|| ಅತರ್ಕ್ಯಂ ವಿಕ್ರಾಂತಂ ಭುಜಬಲಮಸಾಮಾನ್ಯಮಧಿಕಂ |
     ಪ್ರತಾಪಂ ಪೋಗೀತಂಗೆಣೆಯೆ ದಿವಿಜರ್ ವಾಯುಪಥದೊಳ್ ||
     ಶಿತಾಸ್ತ್ರಂಗಳ್ ಪೊಂಕಂಗಿಡಿಸೆ ಸುಗಿದಂ ಭಾರ್ಗವನಿದೇಂ |
     ಪ್ರತಿಜ್ಞಾಗಾಂಗೇಯಂಗದಿರದಿದಿರ್ನಿಲ್ವನ್ನರೊಳರೇ ||೮೦||
(ಅತರ್ಕ್ಯಂ ವಿಕ್ರಾಂತಂ, ಭುಜಬಲಂ ಅಸಾಮಾನ್ಯಂ, ಅಧಿಕಂ ಪ್ರತಾಪಂ, ಪೋಗು! ಈತಂಗೆ ಎಣೆಯೆ ದಿವಿಜರ್? ವಾಯುಪಥದೊಳ್ ಶಿತಾಸ್ತ್ರಂಗಳ್ ಪೊಂಕಂಗಿಡಿಸೆ, ಸುಗಿದಂ ಭಾರ್ಗವನ್, ಇದೇಂ  ಪ್ರತಿಜ್ಞಾಗಾಂಗೇಯಂಗೆ ಅದಿರದೆ ಇದಿರ್ ನಿಲ್ವನ್ನರ್ ಒಳರೇ?)
ಪರಾಕ್ರಮದ ಬಗ್ಗೆ ಮಾತೇ ಇಲ್ಲ! ತೋಳುಗಳ ಶಕ್ತಿ ಅಸಾಧಾರಣವಾದದ್ದು. ಪ್ರತಾಪವು ವಿಶೇಷವಾದದ್ದು. ಹೋಗು ಹೋಗು! ಈ ಭೀಷ್ಮನಿಗೆ ದೇವತೆಗಳು ಸಮಾನರೆ? ಅವನು ಬಿಟ್ಟ ಹರಿತವಾದ ಅಸ್ತ್ರಗಳು ಆಕಾಶದಲ್ಲಿ ತುಂಬಿಹೋದದ್ದನ್ನು ಕಂಡು ಪರಶುರಾಮನು ಅಂಜಿದನು. ಏನಿದು? ಪ್ರತಿಜ್ಞಾಗಾಂಗೇಯನಿಗೆ ಹೆದರದೆ ಎದುರು ನಿಲ್ಲುವವರು ಯಾರಾದರೂ ಇದ್ದಾರೆಯೆ?
ವ|| ಅಂತು ಗಾಂಗೇಯನೊಳ್ ಪರಶುರಾಮಂ ಕಾದಿ ಬಸವೞಿದುಸಿರಲಪ್ಪೊಡಮಾಱದೆ ಮೂರ್ಛೆವೋಗಿರ್ದನಂ ಕಂಡಂಬೆಯೆಂಬ ದಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಮಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ ಕಾರಣಾಂತರದೊಳ್ ಶಿಖಂಡಿಯಾಗಿರ್ದಳಿತ್ತ ಭೀಷ್ಮರ ಬೆಂಬಲದೊಳ್ ವಿಚಿತ್ರವೀರ್ಯನುಮವಾರ್ಯವೀರ್ಯನುಮಾಗಿ ಕೆಲವು ಕಾಲಂ ರಾಜ್ಯ ಲಕ್ಷ್ಮಿಯಂ ತಾಳ್ದಿ ರಾ[ಜಯಕ್ಷ್ಮ] ತಪ್ತಶರೀರನಾತ್ಮಜ ವಿಗತಜೀವಿಯಾಗಿ ಪರಲೋಕಪ್ರಾಪ್ತನಾದೊಡೆ ಗಾಂಗೇಯನುಂ ಸತ್ಯವತಿಯುಮತ್ಯಂತ ಶೋಕಾನಲ ದಹ್ಯಮಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯೆಗಳಂ ಮಾಡಿ ರಾಜ್ಯಂ ನಷ್ಟರಾ[ಜ]ಮಾದುದರ್ಕೆ ಮಮ್ಮಲ ಮಱುಗಿ ಯೋಜನಗಂಧಿ ಸಿಂಧುಪುತ್ರನನಿಂತೆಂದಳ್-
(ಅಂತು ಗಾಂಗೇಯನೊಳ್ ಪರಶುರಾಮಂ ಕಾದಿ, ಬಸವೞಿದು, ಉಸಿರಲ್ ಅಪ್ಪೊಡಂ ಆಱದೆ ಮೂರ್ಛೆವೋಗಿರ್ದನಂ ಕಂಡು, ಅಂಬೆಯೆಂಬ ದಂಡುರುಂಬೆ, “ನಿನಗೆ ವಧಾರ್ಥಮಾಗಿ ಪುಟ್ಟುವೆನ್ ಅಕ್ಕೆ” ಎಂದು, ಕೋಪಾಗ್ನಿಯಿಂದಂ ಅಗ್ನಿಶರೀರೆಯಾಗಿ, ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ, ಕಾರಣಾಂತರದೊಳ್ ಶಿಖಂಡಿಯಾಗಿರ್ದಳ್. ಇತ್ತ ಭೀಷ್ಮರ ಬೆಂಬಲದೊಳ್, ವಿಚಿತ್ರವೀರ್ಯನುಂ ಅವಾರ್ಯವೀರ್ಯನುಂ ಆಗಿ, ಕೆಲವು ಕಾಲಂ ರಾಜ್ಯ ಲಕ್ಷ್ಮಿಯಂ ತಾಳ್ದಿ, ರಾಜಯಕ್ಷ್ಮ ತಪ್ತಶರೀರನ್  ಆತ್ಮಜ ವಿಗತಜೀವಿಯಾಗಿ, ಪರಲೋಕಪ್ರಾಪ್ತನ್ ಆದೊಡೆ, ಗಾಂಗೇಯನುಂ ಸತ್ಯವತಿಯುಂ ಅತ್ಯಂತ ಶೋಕಾನಲ ದಹ್ಯಮಾನ ಮಾನಸರ್ಕಳ್ ಆಗಿ, ಆತಂಗೆ ಪರಲೋಕಕ್ರಿಯೆಗಳಂ ಮಾಡಿ, ರಾಜ್ಯಂ ನಷ್ಟರಾಜಂ ಆದುದರ್ಕೆ ಮಮ್ಮಲ ಮಱುಗಿ, ಯೋಜನಗಂಧಿ ಸಿಂಧುಪುತ್ರನನ್ ಇಂತೆಂದಳ್)
ಹೀಗೆ ಭೀಷ್ಮನೊಂದಿಗೆ ಕಾದಾಡಿ ಪರಶುರಾಮನಿಗೆ ಆಯಾಸದಿಂದ ಉಸಿರು ತೆಗೆಯಲೂ ಕೂಡಲಿಲ್ಲ. ಇದನ್ನು ಕಂಡ ಅಂಬೆಯು ಕೋಪದಿಂದ ಭೀಷ್ಮನನ್ನು ಉದ್ದೇಶಿಸಿ, “ನಿನ್ನನ್ನು ಕೊಲ್ಲಲು ಮತ್ತೆ ಹುಟ್ಟಿ ಬರುತ್ತೇನೆ” ಎಂದು ಹೇಳಿ ತನ್ನ ಶರೀರವನ್ನು ಬೆಂಕಿಗೆ ಅರ್ಪಿಸಿ, ದ್ರುಪದನ ರಾಣಿಗೆ ಮಗನಾಗಿ ಹುಟ್ಟಿ, ಯಾವುದೋ ಕಾರಣದಿಂದ ಶಿಖಂಡಿಯಾಗಿದ್ದಳು. ಇತ್ತ ವಿಚಿತ್ರವೀರ್ಯನು ಭೀಷ್ಮರ ಬೆಂಬಲದಿಂದ ಕೆಲವು ಕಾಲ ರಾಜ್ಯಭಾರ ಮಾಡಿ, ಕ್ಷಯರೋಗ ಬಂದು ಮಕ್ಕಳಿಲ್ಲದೆ ತೀರಿಹೋದನು. ಭೀಷ್ಮ, ಸತ್ಯವತಿಯರಿಬ್ಬರೂ ಆತನ ಸಾವಿನ ದುಃಖದಲ್ಲಿ ಬೆಂದು, ಆತನಿಗೆ ಪರಲೋಕಕ್ರಿಯೆಗಳನ್ನು ಮಾಡಿ ಮುಗಿಸಿದರು. ವಿಚಿತ್ರವೀರ್ಯನ ಸಾವಿನಿಂದ ಹಸ್ತಿನಾಪುರಕ್ಕೆ ಮುಂದೆ ರಾಜರೇ ಇಲ್ಲದಂಥ ಸ್ಥಿತಿ ಬಂದೊದಗಿತು. ಸತ್ಯವತಿಗೆ ಈ ಸಂಕಟವನ್ನು ತಡೆದುಕೊಳ್ಳಲಾಗಲಿಲ್ಲ. ಅವಳು ಭೀಷ್ಮನನ್ನು ಕುರಿತು-
ಮ|| ಮಗನೆಂಬಂತು ಧರಿತ್ರಿ ನಿನ್ನನುಜರಂ ಕೈಕೊಂಡು ಮುಂ ಪೂಣ್ದ ನ |
     ನ್ನಿಗೆ ಬನ್ನಂ ಬರಲೀಯದಾರ್ತೆಸಗಿದೀ ವಿಖ್ಯಾತಿಯುಂ ಕೀರ್ತಿಯುಂ ||
     ಮುಗಿಲಂ ಮುಟ್ಟಿದುದಲ್ತೆ ನಮ್ಮ ಕುಲದೊಳ್ ಮಕ್ಕಳ್ಪೆಱರ್ ನೀನೆ ಜ |
     ಟ್ಟಿಗನೈ ಮುನ್ನಿನೊರಂಟುವೇಡ ಮಗನೇ ಕೈಕೊಳ್ ಧರಾಭಾರಮಂ ||೮೧||
(“ಮಗನ್ ಎಂಬಂತು ಧರಿತ್ರಿ, ನಿನ್ನ ಅನುಜರಂ ಕೈಕೊಂಡು, ಮುಂ ಪೂಣ್ದ ನನ್ನಿಗೆ ಬನ್ನಂ ಬರಲ್ ಈಯದೆ, ಆರ್ತು ಎಸಗಿದೀ ವಿಖ್ಯಾತಿಯುಂ, ಕೀರ್ತಿಯುಂ, ಮುಗಿಲಂ ಮುಟ್ಟಿದುದಲ್ತೆ? ನಮ್ಮ ಕುಲದೊಳ್ ಮಕ್ಕಳ್ ಪೆಱರ್? ನೀನೆ ಜಟ್ಟಿಗನೈ, ಮುನ್ನಿನ ಒರಂಟುವೇಡ ಮಗನೇ, ಕೈಕೊಳ್ ಧರಾಭಾರಮಂ”)
‘ಮಗನೆಂದರೆ ಹೀಗಿರಬೇಕು ಎಂದು ಲೋಕವೆಲ್ಲ ನಿನ್ನನ್ನು ಹೊಗಳುತ್ತಿದೆ. ನಿನ್ನ ತಮ್ಮಂದಿರನ್ನು ಕೈಹಿಡಿದು ನಡೆಸಿದವನು ನೀನು. ಮಾಡಿದ ಸತ್ಯಪ್ರತಿಜ್ಞೆಗೆ ಭಂಗಬಾರದ ಹಾಗೆ ನಡೆದುಕೊಂಡು, ಮುಗಿಲೆತ್ತರದ ಕೀರ್ತಿ, ಪ್ರಸಿದ್ಧಿಗಳಿಗೆ ಪಾತ್ರನಾಗಿದ್ದೀಯೆ. ಆದರೆ ಈಗ, ನಮ್ಮ ಕುಲದಲ್ಲಿ ಮಕ್ಕಳು ಬೇರೆ ಯಾರು ತಾನೇ ಇದ್ದಾರೆ? ಇರುವವನು ವೀರನಾದ ನೀನೊಬ್ಬನೇ. ಮೊದಲಿನ ಒರಟುಹಟವನ್ನು ಕೈಬಿಡು. ರಾಜ್ಯಭಾರವನ್ನು ನಡೆಸಿಕೊಂಡು ಹೋಗು’
ವ|| ಎಂದು ನಿನ್ನನಾನಿನಿತಂ ಕೈಯೊಡ್ಡಿ ಬೇಡಿದೆನೆಂದ ಸತ್ಯವತಿಗಮರಾಪಗಾನಂದನನಿಂತೆಂದಂ-
(ಎಂದು “ನಿನ್ನನ್ ಆನ್ ಇನಿತಂ ಕೈಯೊಡ್ಡಿ ಬೇಡಿದೆನ್” ಎಂದ ಸತ್ಯವತಿಗೆ ಅಮರಾಪಗಾನಂದನನ್ ಇಂತೆಂದಂ)
ಎಂದು ಇಷ್ಟನ್ನು ಮಾತ್ರ ನಿನ್ನನ್ನು ನಾನು ಕೈಯೊಡ್ಡಿ ಬೇಡುತ್ತೇನೆ ಎಂದ ಸತ್ಯವತಿಗೆ ಭೀಷ್ಮನು ಹೀಗೆ ಹೇಳಿದನು:
ಕಂ|| ಕಿಡುಗುಮೆ ರಾಜ್ಯಂ ರಾಜ್ಯದ |
     ತೊಡರ್ಪದೇವಾೞ್ತೆ ನನ್ನಿಯ ನುಡಿಯಂ ||
     ಕಿಡೆ ನೆಗೞೆ ನಾನುಮೆರಡಂ |
     ನುಡಿದೊಡೆ ಹರಿ ಹರ ಹಿರಣ್ಯಗರ್ಭರ್ ನಗರೇ ||೮೨||
(“ಕಿಡುಗುಮೆ ರಾಜ್ಯಂ! ರಾಜ್ಯದ ತೊಡರ್ಪದೇವಾೞ್ತೆ? ನನ್ನಿಯ ನುಡಿಯಂ ಕಿಡೆ ನೆಗೞೆ, ನಾನುಂ ಎರಡಂ ನುಡಿದೊಡೆ, ಹರಿ ಹರ ಹಿರಣ್ಯಗರ್ಭರ್ ನಗರೇ”?)
ರಾಜ್ಯವು ಕೆಡುವಂಥದ್ದೇ! ಅದಕ್ಕೆತೊಡಕು ಬಂದರೆ ನನಗೇನು? ನಾನು ಆಡಿದ ಮಾತಿಗೆ ತಪ್ಪಿ ನಡೆದರೆ, ಸುಳ್ಳಾಡಿದರೆ, ಆ ಹರಿಹರಬ್ರಹ್ಮರು (ನನ್ನನ್ನು ಕಂಡು) ನಗುವುದಿಲ್ಲವೇ?
ಚಂ|| ಹಿಮಕರನಾತ್ಮಶೀತರುಚಿಯಂ ದಿನನಾಯಕನುಷ್ಣದೀಧಿತಿ |
     ಕ್ರಮಮನಗಾಧ ವಾರಿಧಿ[ಯೆ] ಗುಣ್ಪನಿಳಾವಧು  ತನ್ನ ತಿಣ್ಪನು ||
     ತ್ತಮ ಕುಲಶೈಲಮುನ್ನತಿಯನೇಳಿದವಾಗೆ ಬಿಸುೞ್ಪೊಡಂ ಬಿಸು |
     [ೞ್ಕೆಮ] ಬಿಸುಡೆಂ ಮದೀಯ ಪುರುಷ ವ್ರತಮೊಂದುಮನೀಗಳಂಬಿಕೇ ||೮೩||
(“ಹಿಮಕರನ್ ಆತ್ಮಶೀತರುಚಿಯಂ, ದಿನನಾಯಕನ್ ಉಷ್ಣದೀಧಿತಿಕ್ರಮಮನ್, ಅಗಾಧ ವಾರಿಧಿಯೆ ಗುಣ್ಪನ್,  ಇಳಾವಧು  ತನ್ನ ತಿಣ್ಪನ್, ಉತ್ತಮ ಕುಲಶೈಲಂ ಉನ್ನತಿಯನ್ ಏಳಿದವಾಗೆ ಬಿಸುೞ್ಪೊಡಂ ಬಿಸುೞ್ಕೆಮ! ಬಿಸುಡೆಂ ಮದೀಯ ಪುರುಷ ವ್ರತಂ ಒಂದುಮನ್ ಈಗಳ್ ಅಂಬಿಕೇ”)
ಅಮ್ಮಾ! ಚಂದ್ರನು ತನ್ನ ತಂಪಾದ ಕಾಂತಿಯನ್ನು, ಸೂರ್ಯನು ತನ್ನ ಬಿಸಿಕಿರಣಗಳ ಶಕ್ತಿಯನ್ನು, ವಿಶಾಲ ಕಡಲು ತನ್ನ ಆಳವನ್ನು, ಭೂಮಿ ತನ್ನ ಭಾರವನ್ನು, ಕುಲಪರ್ವತಗಳು ತಮ್ಮ ಎತ್ತರವನ್ನು ಬೇಡವೆಂದು ಬಿಸಾಡುವುದಾದರೆ ಬಿಸಾಡಲಿ! ನಾನು ಮಾತ್ರ ಮಾಡಿದ ಯಾವ ಪ್ರತಿಜ್ಞೆಯನ್ನೂ ಮುರಿಯುವುದಿಲ್ಲ.
ವ|| ಎಂದು ತನ್ನ ನುಡಿದ ಪ್ರತಿಜ್ಞೆಯನೇಗೆಯ್ದುಂ ತಪ್ಪಿದನಿಲ್ಲ-
(ಎಂದು ತನ್ನ ನುಡಿದ ಪ್ರತಿಜ್ಞೆಯನ್ ಏಗೆಯ್ದುಂ ತಪ್ಪಿದನ್ ಇಲ್ಲ)
ಎಂದು ತನ್ನ ಪ್ರತಿಜ್ಞೆಯನ್ನು ಏನು ಮಾಡಿದರೂ ತಪ್ಪಲಿಲ್ಲ.
ಕಂ|| ರಂಗತ್ತರಂಗ ವಾರ್ಧಿಚ |
     ಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ ||
     ಗಾಂಗೇಯನುಂ ಪ್ರತಿಜ್ಞಾ |
     ಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ ||೮೪||
(ರಂಗತ್ತರಂಗ ವಾರ್ಧಿಚಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ, ಗಾಂಗೇಯನುಂ, ಪ್ರತಿಜ್ಞಾ ಗಾಂಗೇಯನುಂ, ಒರ್ಮೆ ನುಡಿದುದಂ ತಪ್ಪುವರೇ?)
ಸದಾ ತೊಯ್ದಾಡುವ ಕಡಲಿನ ಅಲೆಗಳು ತಮ್ಮ ಗಡಿಯನ್ನು ದಾಟಿದರೂ ಸಹ (ಪ್ರಳಯವೇ ಆದರೂ ಸಹ) ಗಾಂಗೇಯನಾಗಲಿ, ಪ್ರತಿಜ್ಞಾಗಾಂಗೇಯನೆಂಬ ಬಿರುದು ಪಡೆದ ಅರಿಕೇಸರಿಯಾಗಲಿ ತಾವು ಒಮ್ಮೆ ಆಡಿದ ಮಾತನ್ನು ತಪ್ಪುತ್ತಾರೆಯೇ?
ವ|| ಅಂತಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನೇಗೆಯ್ದುಮೊಡಂಬಡಿಸಲಾಱದೆ ಸತ್ಯವತಿ ತಾನುಮಾತನುಮಾಳೋಚಿಸಿ ನಿಶ್ಚಿತ ಮಂತ್ರರಾಗಿ ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ವುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್ ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದವ್ಯವಚ್ಛಿನ್ನಮಾಗಿ ಬಂದ ಸೋಮವಂಶಮೀಗಳೆಮ್ಮ ಕುಲಸಂತತಿಗಾರುಮಿಲ್ಲದೆಡೆವಱಿದು ಕಿಡುವಂತಾಗಿರ್ದುದದು ಕಾರಣದಿಂ ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳಂಬಿಕೆಗಮಂಬಾಲೆಗಂ ಪುತ್ರರಪ್ಪಂತು ವರಪ್ರಸಾದಮಂ ದಯೆಗೆಯ್ವುದೆನೆ ಅಂತೆಗೆಯ್ವೆನೆಂದು-
(ಅಂತು ಅಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನ್ ಏಗೆಯ್ದುಂ ಒಡಂಬಡಿಸಲಾಱದೆ, ಸತ್ಯವತಿ ತಾನುಂ ಆತನುಂ ಆಳೋಚಿಸಿ, ನಿಶ್ಚಿತ ಮಂತ್ರರಾಗಿ, ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ, ವ್ಯಾಸಮುನೀಂದ್ರನ್ “ಏಗೆಯ್ವುದು? ಏನಂ ತೀರ್ಚುವುದು?” ಎಂದೊಡೆ ಸತ್ಯವತಿ ಇಂತೆಂದಳ್: “ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದು ಅವ್ಯವಚ್ಛಿನ್ನಮಾಗಿ ಬಂದ ಸೋಮವಂಶಂ ಈಗಳ್ ಎಮ್ಮ ಕುಲಸಂತತಿಗೆ ಆರುಂ ಇಲ್ಲದೆ ಎಡೆವಱಿದು ಕಿಡುವಂತೆ ಆಗಿರ್ದುದು. ಅದು ಕಾರಣದಿಂ ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳ್, ಅಂಬಿಕೆಗಂ ಅಂಬಾಲೆಗಂ ಪುತ್ರರ್ ಅಪ್ಪಂತು ವರಪ್ರಸಾದಮಂ ದಯೆಗೆಯ್ವುದು” ಎನೆ ಅಂತೆಗೆಯ್ವೆನ್ ಎಂದು)
ಹೀಗೆ ಯಾವುದಕ್ಕೂ ಜಗ್ಗದೆ ತನ್ನ ಪ್ರತಿಜ್ಞೆಗೆ ಕಟ್ಟುಬಿದ್ದ ಭೀಷ್ಮನನ್ನು ಒಪ್ಪಿಸಲು ಏನು ಮಾಡಿದರೂ ಸತ್ಯವತಿಗೆ ಸಾಧ್ಯವಾಗಲಿಲ್ಲ. ಮುಂದೆ ಅವಳೂ ಭೀಷ್ಮನೂ ಸೇರಿ ಆಲೋಚಿಸಿ, ಮಂತ್ರದ ಮೂಲಕ ಕೃಷ್ಣ ದ್ವೈಪಾಯನರನ್ನು ನೆನೆದು ಬರಿಸಿದರು. ಹಾಗೆ ಬಂದ ವ್ಯಾಸ ಮುನಿಯು ‘ಏನಾಗಬೇಕು? ಯಾವ ಆಸೆಯನ್ನು ಪೂರೈಸಬೇಕು?’ ಎಂದು ಕೇಳಿದನು. ಸತ್ಯವತಿಯು ‘ಹಿರಣ್ಯಗರ್ಭ ಬ್ರಹ್ಮರಿಂದ ಎಳೆ ಕಡಿಯದೆ ಬಂದ ನಮ್ಮ ಚಂದ್ರವಂಶವು ಈಗ ಸಂತತಿಯನ್ನು ಮುಂದುವರಿಸುವವರಿಲ್ಲದೆ, ಇಲ್ಲಿಗೇ ತುಂಡಾಗಿ ಹೋಗುವಂತಾಗಿದೆ. ಆ ಕಾರಣದಿಂದ ನಿಮ್ಮ ತಮ್ಮ ವಿಚಿತ್ರವೀರ್ಯನ ಮಡದಿಯರಾದ ಅಂಬಿಕೆ, ಅಂಬಾಲೆಯರಿಗೆ ಗಂಡು ಮಕ್ಕಳಾಗುವಂತೆ ವರವನ್ನು ಕರುಣಿಸಬೇಕು’ ಎಂದಳು. ಮುನಿಯು ‘ಹಾಗೆಯೇ ಮಾಡುತ್ತೇನೆ’ ಎಂದು -
ಚಂ|| ತ್ರಿದಶ ನರಾಸುರೋರಗ ಗಣ ಪ್ರಭು ನಿಶ್ಚಿತ ತತ್ತ್ವಯೋಗಿ ಯೋ |
     ಗದ ಬಲಮುಣ್ಮಿ ಪೊಣ್ಮಿ ನಿಲೆ ಪುತ್ರ ವರಾರ್ಥಿಗಳಾಗಿ ತನ್ನ ಕ ||
     ಟ್ಟಿದಿರೊಳೆ ನಿಂದರಂ ನಯದೆ ನೋಡೆ ಮುನೀಂದ್ರನ ದಿವ್ಯ ದೃಷ್ಟಿ ಮಂ |
     ತ್ರದೊಳೆ ಪೊದೞ್ದುದಾ ಸತಿಯರಿರ್ವರೊಳಂ ನವ ಗರ್ಭ ವಿಭ್ರಮಂ ||೮೫||
(ತ್ರಿದಶ, ನರ, ಅಸುರ, ಉರಗ ಗಣ ಪ್ರಭು, ನಿಶ್ಚಿತ ತತ್ತ್ವಯೋಗಿ, ಯೋಗದ ಬಲಂ ಉಣ್ಮಿ ಪೊಣ್ಮಿ ನಿಲೆ ಪುತ್ರ ವರಾರ್ಥಿಗಳಾಗಿ ತನ್ನ ಕಟ್ಟಿದಿರೊಳೆ ನಿಂದರಂ ನಯದೆ ನೋಡೆ ಮುನೀಂದ್ರನ ದಿವ್ಯ ದೃಷ್ಟಿ ಮಂತ್ರದೊಳೆ ಪೊದೞ್ದುದು ಆ ಸತಿಯರ್ ಇರ್ವರೊಳಂ ನವ ಗರ್ಭ ವಿಭ್ರಮಂ.)

ವ್ಯಾಸ ಮುನಿಯು ದೇವತೆಗಳು, ರಕ್ಕಸರು, ನರರು, ಹಾವುಗಳು ಇವುಗಳ ಗುಂಪಿಗೆ ಒಡೆಯ. ತತ್ವಗಳನ್ನು ಖಚಿತವಾಗಿ ತಿಳಿದವನು. ಅಂಥ ಮುನಿಯು ಸ್ಥಿರವಾಗಿ ನಿಂತುಕೊಂಡಾಗ ಅವನಲ್ಲಿ ಯೋಗಶಕ್ತಿ ಹುಟ್ಟಿ ಬೆಳೆಯಿತು. ಗಂಡುಮಕ್ಕಳನ್ನು ಪಡೆಯಲೆಂದು ಅಂಬಿಕೆ, ಅಂಬಾಲೆಯರಿಬ್ಬರೂ ಆ ಮುನಿಯ ಹತ್ತಿರದಲ್ಲಿ, ಅವನ ಎದುರಿಗೆ ನಿಂತರು. ಹಾಗೆ ನಿಂತ ಇಬ್ಬರನ್ನೂ ಮುನಿಯು ನಯವಾಗಿ ನೋಡಿದನು. ಆಗ ಅವನ ದೃಷ್ಟಿ ಮಂತ್ರದ ಮೂಲಕವೇ ಅವರಿಬ್ಬರಲ್ಲಿಯೂ ಹೊಸ ಬಸಿರಿನ ಪುಳಕ ಕಾಣಿಸಿಕೊಂಡಿತು.


ಭಾನುವಾರ, ಜೂನ್ 10, 2018

ಪಂಪಭಾರತ ಆಶ್ವಾಸ ೧

ಪದ್ಯಗಳು: ೫೯ರಿಂದ ೭೪





ಕಂ|| ಜಳರುಹನಾಭನ ನಾಭಿಯ |
     ಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋ ||
     ಲ್ಲುಳಿತಾಳಿ ಜಲ[ಜ]ಮಾಯ್ತಾ |
     ಜಳ[ಜ]ದೊಳೊಗೆದಂ ಹಿರಣ್ಯಗರ್ಭ ಬ್ರಹ್ಮಂ ||೫೯||
(ಜಳರುಹನಾಭನ ನಾಭಿಯ ಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋಲ್ಲುಳಿತಾಳಿ ಜಲಜಮಾಯ್ತು, ಆ  ಜಳಜದೊಳ್ ಒಗೆದಂ ಹಿರಣ್ಯಗರ್ಭ ಬ್ರಹ್ಮಂ.)
ಹೊಕ್ಕುಳುಗಮಲನ (ವಿಷ್ಣುವಿನ) ಹೊಕ್ಕುಳಿನಲ್ಲಿದ್ದ ನೀರಿನ ಗುಳ್ಳೆಯಲ್ಲಿ ಸುರಭಿಯ ಪರಿಮಳದಿಂದ ಕೂಡಿದ, ದುಂಬಿಗಳು ಮುತ್ತಿ ಅಲುಗುತ್ತಿರುವ ಕಮಲವು ಉಂಟಾಯಿತು. ಆ ಕಮಲದಲ್ಲಿ ಹಿರಣ್ಯಗರ್ಭ ಬ್ರಹ್ಮನು ಹುಟ್ಟಿದನು.
ಕಂ|| ಕಮಲೋದ್ಭವನಮಳಿನ ಹೃ |
     ತ್ಕಮಲದೊಳೊಗೆದರ್  ಸುರೇಂದ್ರ ಧಾರಕರಾವಾ ||
     [ಗಮಳರ್] ನೆಗೞ್ದಿರ್ದರ್ ಪುಲ |
     ಹ ಮರೀಚ್ಯತ್ರ್ಯಂಗಿರಃ ಪುಳಸ್ತ್ಯ ಕ್ರತುಗಳ್ ||೬೦||
(ಕಮಲೋದ್ಭವನ ಅಮಳಿನ ಹೃತ್ಕಮಲದೊಳ್ ಒಗೆದರ್  ಸುರೇಂದ್ರ ಧಾರಕರಾವಾಗಮಳರ್ ನೆಗೞ್ದು  ಇರ್ದರ್ ಪುಲಹ, ಮರೀಚಿ, ಅತ್ರಿ, ಅಂಗಿರಃ, ಪುಳಸ್ತ್ಯ, ಕ್ರತುಗಳ್.)
ಕಮಲದಲ್ಲಿ ಹುಟ್ಟಿದವನ ಹೃದಯಕಮಲದಿಂದ, ಶ್ರೇಷ್ಠವಾದ ನೀರಿನ ಕಮಂಡಲವನ್ನು ಹಿಡಿದುಕೊಂಡ ಪುಲಹ, ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ ಮತ್ತು ಕ್ರತು ಎಂಬುವವರು ಹುಟ್ಟಿದರು.
(ಇಲ್ಲಿ ‘ಸುರೇಂದ್ರಧಾರಕರ್’ ಎಂಬುದಕ್ಕೆ ಕೊಟ್ಟಿರುವ ‘ಶ್ರೇಷ್ಠವಾದ ನೀರಿನ ಕಮಂಡಲವನ್ನು ಹಿಡಿದುಕೊಂಡ’ ಎಂಬ ಅರ್ಥ ಸಂಶಯಾಸ್ಪದವೆಂದು ಡಿ ಎಲ್ ಎನ್ ಹೇಳುತ್ತಾರೆ.)
ವ|| ಅಂತು ಹಿರಣ್ಯಗರ್ಭ ಬ್ರಹ್ಮ ಮನಸ್ಸಂಭವದೊಳ್ ಪುಟ್ಟಿದಱುವರ್ಮಕ್ಕಳೊಳಗೆ ಮರೀಚಿಯ ಮಗಂ ಕಶ್ಯಪನನೇಕ ಭುವನೋತ್ಪತ್ತಿ ನಾಟಕಕ್ಕೆ ಸೂತ್ರಧಾರನಾದನಾತನ ಮಗನವಾರ್ಯವೀರ್ಯಂ ಸೂರ್ಯನಾತನಿಂದವ್ಯವಚ್ಛಿನ್ನಮಾಗಿ ಬಂದ ವಂಶಂ ಸೂರ್ಯವಂಶಮೆಂಬುದಾಯ್ತು-
(ಅಂತು ಹಿರಣ್ಯಗರ್ಭ ಬ್ರಹ್ಮ ಮನಸ್ಸಂಭವದೊಳ್ ಪುಟ್ಟಿದ ಅಱುವರ್ ಮಕ್ಕಳೊಳಗೆ, ಮರೀಚಿಯ ಮಗಂ ಕಶ್ಯಪನ್ ಅನೇಕ ಭುವನೋತ್ಪತ್ತಿ ನಾಟಕಕ್ಕೆ ಸೂತ್ರಧಾರನ್ ಆದನ್. ಆತನ ಮಗನ್  ಅವಾರ್ಯವೀರ್ಯಂ ಸೂರ್ಯನ್. ಆತನಿಂದ ಅವ್ಯವಚ್ಛಿನ್ನಮಾಗಿ ಬಂದ ವಂಶಂ ಸೂರ್ಯವಂಶಂ ಎಂಬುದಾಯ್ತು.)
ಹಾಗೆ ಹಿರಣ್ಯಗರ್ಭನ ಮನಸ್ಸಿನಿಂದ ಹುಟ್ಟಿದ ಆರು ಮಕ್ಕಳಲ್ಲಿ ಮರೀಚಿಯ ಮಗನಾದ ಕಶ್ಯಪನು ಅನೇಕ ನಾಟಕಗಳಿಗೆ ಸೂತ್ರಧಾರನಾದನು. ಆತನ ಮಗನೇ ಸೂರ್ಯ. ಆ ಸೂರ್ಯನಿಂದ ಎಳೆ ತುಂಡಾಗದೇ ಬಂದ ವಂಶವೇ ಸೂರ್ಯವಂಶ.
ಕಂ|| ಅತ್ರಿಯ ಪಿರಿಯ ಮಗಂ ಭುವ |
     ನತ್ರಯ ಸಂಗೀತ ಕೀರ್ತಿ ಸೋಮಂ ಸಕಲ ||
     ಕ್ಷತ್ರಕುಲ ಪೂಜ್ಯನಮಳ ಚ |
     ರಿತ್ರಂ ಪ್ರೋದ್ದಾಮ ಸೋಮವಂಶಲಲಾಮಂ ||೬೧||
(ಅತ್ರಿಯ ಪಿರಿಯ ಮಗಂ ಭುವನತ್ರಯ ಸಂಗೀತ ಕೀರ್ತಿ ಸೋಮಂ, ಸಕಲ ಕ್ಷತ್ರಕುಲ ಪೂಜ್ಯನ್, ಅಮಳ  ಚರಿತ್ರಂ, ಪ್ರೋದ್ದಾಮ ಸೋಮವಂಶಲಲಾಮಂ.)
ಅತ್ರಿಯ ಹಿರಿಯ ಮಗನಾದ ಸೋಮನ ಕೀರ್ತಿಯನ್ನು ಮೂರುಲೋಕದ ಜನರೂ ಹಾಡಿ ಹೊಗಳುತ್ತಿದ್ದರು. ಅವನ ಕ್ಷತ್ರಿಯ ಕುಲಕ್ಕೆ ಪೂಜ್ಯ. ಅವನ ಚರಿತ್ರೆ ಚೊಕ್ಕಟವಾದದ್ದು. ಅವನು ಸೋಮವಂಶದ ಹಣೆಗೆ ತಿಲಕದಂತೆ ಇದ್ದನು.
ಕಂ|| ಆ ಸೋಮವಂಶಜರ್ ಪಲ |
     ರಾಸುಕರಂ ಬೆರಸು ನೆಗೞ್ದ ಜಸದಿಂ ಜಗಮಂ ||
     ಬಾಸಣಿಸಿ ಪೋದೊಡಧಿಕ ವಿ |
     ಳಾಸಂ ದೌ[ಷ್ಯ]೦ತಿ ಭರತನೆಂಬಂ ನೆಗೞ್ದಂ ||೬೨||
(ಆ ಸೋಮವಂಶಜರ್ ಪಲರ್ ಆಸುಕರಂ ಬೆರಸು ನೆಗೞ್ದ ಜಸದಿಂ ಜಗಮಂ ಬಾಸಣಿಸಿ ಪೋದೊಡೆ ಅಧಿಕ ವಿಳಾಸಂ ದೌಷ್ಯಂತಿ ಭರತನೆಂಬಂ ನೆಗೞ್ದಂ.)
ಆ ಸೋಮವಂಶದಲ್ಲಿ ಹುಟ್ಟಿದ ಹಲವರು ತೀವ್ರವಾಗಿ ಬದುಕಿ, ಯಶಸ್ಸು ಗಳಿಸಿ ಮರೆಯಾಗಿ ಹೋದರು. ಆ ನಂತರ ದುಷ್ಯಂತನ ಮಗನಾದ ಭರತನು ಪ್ರಸಿದ್ಧನಾದನು.
ಕಂ|| ಚಾರು ಚರಿತ್ರಂ ಭರತನ |
     ಪಾರ ಗುಣಂ ತನ್ನ ಪೆಸರೊಳಮರ್ದೆಸೆಯೆ ಯಶೋ ||
     ಭಾರಂ ಕುಲಮುಂ ಕಥೆಯುಂ |
     ಭಾರತಮೆನೆ ನೆಗೞ್ದನಂತು ನೆಗ[ೞ್ವು]ದು ಭೂಪರ್ ||೬೩||
(ಚಾರು ಚರಿತ್ರಂ ಭರತನ್, ಅಪಾರ ಗುಣಂ, ತನ್ನ ಪೆಸರೊಳ್ ಅಮರ್ದು ಎಸೆಯೆ, ಯಶೋಭಾರಂ ಕುಲಮುಂ ಕಥೆಯುಂ ಭಾರತಂ ಎನೆ ನೆಗೞ್ದನ್, ಅಂತು ನೆಗೞ್ವುದು ಭೂಪರ್.)
ಭರತನು ಶುದ್ಧ ಚರಿತ, ಗುಣವಂತ. ಆತನ ಕುಲ, ಕಥೆ ಎರಡೂ ‘ಭಾರತ’ ಎಂದೇ ಪ್ರಸಿದ್ಧವಾದವು. ರಾಜನು ಪ್ರಸಿದ್ಧನಾಗಬೇಕಾದ್ದು ಹಾಗೆಯೇ!
ಕಂ|| ಭರತನನೇಕಾಧ್ವರ ಭರ |
     ನಿರತಂ ಜಸಮುಳಿಯೆ ಕೞಿಯೆ ಭೂಪರ್ ಪಲರಾ ||
     ದರಿಸಿದ ಧರಣೀಭರಮಂ |
     ಧರಿಯಿಸಿದಂ ಪ್ರತಿಮನೆಂಬನಪ್ರತಿಮ ಬಲಂ ||೬೪||
(ಭರತನ್, ಅನೇಕ ಅಧ್ವರ ಭರ ನಿರತಂ, ಜಸಂ ಉಳಿಯೆ ಕೞಿಯೆ, ಭೂಪರ್ ಪಲರ್ ಆದರಿಸಿದ ಧರಣೀಭರಮಂ ಧರಿಯಿಸಿದಂ ಪ್ರತಿಮನ್ ಎಂಬನ್, ಅಪ್ರತಿಮ ಬಲಂ.)
ಅನೇಕ ಯಾಗ ಯಜ್ಞಗಳನ್ನು ಮಾಡಿ ಕೀರ್ತಿವಂತನಾದ ಭರತನು ಮರಣ ಹೊಂದಿದ ನಂತರ, ಹಲವು ರಾಜರು ಮೋಹಿಸಿದ ಈ ಭೂಮಿಗೆ ಪ್ರತಿಮನೆಂಬುವನು ಅರಸನಾದನು.
ಕಂ|| ಅಂತಾ ಪ್ರತಿಮಂಗೆ ಸುತರ್ |
     ಶಂತನು ಬಾಹ್ಲಿಕ ವಿನೂತ ದೇವಾಪಿಗಳೋ ||
     ರಂತೆ ಧರೆ ಪೊಗೞೆ ನೆಗೞ್ದರ |
     ನಂತ ಬಳರ್ ಪರ ಬಳ ಪ್ರಭೇದನ ಶೌರ್ಯರ್ ||೬೫||
(ಅಂತು, ಆ ಪ್ರತಿಮಂಗೆ ಸುತರ್ ಶಂತನು, ಬಾಹ್ಲಿಕ, ವಿನೂತ, ದೇವಾಪಿಗಳ್ ಓರಂತೆ ಧರೆ ಪೊಗೞೆ ನೆಗೞ್ದರ್,  ಅನಂತ ಬಳರ್, ಪರ ಬಳ ಪ್ರಭೇದನ ಶೌರ್ಯರ್.)
ಆ ಪ್ರತಿಮನಿಗೆ ಶಂತನು, ಬಾಹ್ಲಿಕ, ವಿನೂತ, ದೇವಾಪಿಗಳೆಂಬ ನಾಲ್ವರು ಮಕ್ಕಳು. ಬಹು ಬಲಶಾಲಿಗಳಾದ ಅವರು ಶತ್ರು ಸೈನ್ಯವನ್ನು ಸೀಳುವುದರಲ್ಲಿ ನಿಪುಣರು.
ವ|| ಅವರೊಳಗೆ ದೇವಾಪಿ ನವ ಯೌವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದಂ ಪ್ರತಿಮನುಂ ಪ್ರತಾಪ ಪ್ರಸರ ಪ್ರಕಟಪಟುವಾಗಿ ಪಲವು ಕಾಲಮರಸುಗೆಯ್ದು ಸಂಸಾ[ರಾ]ಸಾರತೆಗೆ ಪೇಸಿ ತಪೋವನಕ್ಕಭಿಮುಖನಾಗಲ್ಬಗೆದು –
(ಅವರೊಳಗೆ ದೇವಾಪಿ ನವ ಯೌವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದಂ. ಪ್ರತಿಮನುಂ ಪ್ರತಾಪ ಪ್ರಸರ ಪ್ರಕಟಪಟುವಾಗಿ ಪಲವು ಕಾಲಂ ಅರಸುಗೆಯ್ದು ಸಂಸಾರ ಅಸಾರತೆಗೆ ಪೇಸಿ ತಪೋವನಕ್ಕೆ ಅಭಿಮುಖನ್ ಆಗಲ್ ಬಗೆದು)
ಅವರ ಪೈಕಿ ದೇವಾಪಿಯು ತಾರುಣ್ಯ ಶುರುವಾಗುವ ಹೊತ್ತಿನಲ್ಲೇ ತಪಸ್ಸಿಗೆ ಹೊರಟುಹೋದನು. ಪ್ರತಿಮನು ಹಲವು ಕಾಲ ರಾಜ್ಯಭಾರ ಮಾಡಿ, ನೀರಸವಾದ ಸಂಸಾರಕ್ಕೆ ಹೇಸಿ, ತಪೋವನಕ್ಕೆ ಹೋಗಲು ಆಲೋಚಿಸಿ -
ಕಂ|| ಕಂತು ಶರ ಭವ[ನ]ನಾಪ್ರಿಯ |
     ಕಾಂತಾ ಭ್ರೂವಿಭ್ರಮ ಗ್ರಹಾಗ್ರಹವಶದಿಂ ||
     ಭ್ರಾಂತಿಸದುಪಶಾಂತ ಮನಂ |
     ಶಂತನುಗಿತ್ತಂ ಸಮಸ್ತ ರಾಜ್ಯಶ್ರೀಯಂ ||೬೬||
(ಕಂತು ಶರ ಭವನಂ ಆ ಪ್ರಿಯ ಕಾಂತಾ ಭ್ರೂವಿಭ್ರಮ ಗ್ರಹಾಗ್ರಹವಶದಿಂ ಭ್ರಾಂತಿಸದೆ, ಉಪಶಾಂತ ಮನಂ, ಶಂತನುಗೆ ಇತ್ತಂ ಸಮಸ್ತ ರಾಜ್ಯಶ್ರೀಯಂ.)
ಮನ್ಮಥನ ಬಾಣಗಳನ್ನು ತನ್ನ ದೇಹವೆಂಬ ಬತ್ತಳಿಕೆಯಲ್ಲಿ ಸೇರಿಸಿಕೊಂಡ (ಮನ್ಮಥನ ಬಾಣಗಳನ್ನು ಅರಗಿಸಿಕೊಂಡ) ಶಾಂತಮನಸ್ಕನಾದ ಆ ಪ್ರತಿಮನು, ಕಾಂತೆಯರ ಹುಬ್ಬಿನ ಚಲನೆ ಎಂಬ ಗ್ರಹಕ್ಕೆ ಬಲಿಬೀಳದೆ ರಾಜ್ಯಸಮಸ್ತವನ್ನೂ ಶಂತನುವಿಗೆ ಬಿಟ್ಟುಕೊಟ್ಟನು.
ಕಂ|| ಶಂತನುಗಮಮಳ ಗಂಗಾ |
     ಕಾಂತೆಗಮೆಂಟನೆಯ ವಸು ವಸಿಷ್ಠನ ಶಾಪ ||
     ಭ್ರಾಂತಿಯೊಳೆ ಬಂದು ನಿರ್ಜಿತ |
     ಕಂತುವೆನಲ್ಕಂತು ಪುಟ್ಟಿದಂ ಗಾಂಗೇಯಂ ||೬೭||
(ಶಂತನುಗಂ, ಅಮಳ ಗಂಗಾಕಾಂತೆಗಂ, ಎಂಟನೆಯ ವಸು ವಸಿಷ್ಠನ ಶಾಪ ಭ್ರಾಂತಿಯೊಳೆ ಬಂದು, ನಿರ್ಜಿತ ಕಂತು ಎನಲ್ಕೆ, ಅಂತು ಪುಟ್ಟಿದಂ ಗಾಂಗೇಯಂ.)
ಶಂತನು-ಗಂಗೆಯರಿಗೆ ವಸಿಷ್ಠನ ಶಾಪ ಪಡೆದು ಬಂದು ಎಂಟನೆಯ ವಸುವು ರೂಪಸಂಪನ್ನನಾದ ಗಾಂಗೇಯನೆಂಬ ಮಗನಾಗಿ ಹುಟ್ಟಿದನು.
ವ|| ಅಂತು ಭುವನ ಭವನಕ್ಕೆಲ್ಲಮಾಯಮುಮಳವುಮಱಿವುಮಣ್ಮುಂ ಪುಟ್ಟುವಂತೆ ಪುಟ್ಟಿ ನವಯೌವನಂ ನೆಱೆಯೆ ನೆಱೆಯೆ –
(ಅಂತು ಭುವನ ಭವನಕ್ಕೆಲ್ಲಂ ಆಯಮುಂ, ಅಳವುಂ, ಅಱಿವುಂ, ಅಣ್ಮುಂ ಪುಟ್ಟುವಂತೆ ಪುಟ್ಟಿ, ನವಯೌವನಂ ನೆಱೆಯೆ ನೆಱೆಯೆ)
ಹಾಗೆ, ಗಾಂಗೇಯನು ಲೋಕಕ್ಕೆ ಸಂಪತ್ತು, ಶಕ್ತಿ, ಪರಾಕ್ರಮಗಳು ಹುಟ್ಟುವಂತೆ ಹುಟ್ಟಿ, ನವತಾರುಣ್ಯವು ಪ್ರಾಪ್ತವಾಗಲು -
ಶಾ|| ಸಾಲಪ್ರಾಂಶು ವಿಶಾಲ ಲೋಲನಯನಂ ಪ್ರೋದ್ಯದ್ವೃಷಸ್ಕಂಧನು |
     ನ್ಮೀಲತ್ಪಂಕಜವಕ್ತ್ರನಾಯತ ಸಮಗ್ರೋರಸ್ಥಳಂ ದೀರ್ಘ ಬಾ ||
     ಹಾಲಂಬಂ ಭುಜವೀರ್ಯ ವಿಕ್ರಮಯುತಂ ಗಂಗಾತ್ಮಜನ್ಮಂ ಜಯ |
     ಶ್ರೀಲೋಲಂ ಜಮದಗ್ನಿ ರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ ||೬೮||
(ಸಾಲಪ್ರಾಂಶು, ವಿಶಾಲ ಲೋಲನಯನಂ, ಪ್ರೋದ್ಯತ್ ವೃಷಸ್ಕಂಧನ್, ಉನ್ಮೀಲತ್ ಪಂಕಜವಕ್ತ್ರನ್, ಆಯತ ಸಮಗ್ರ ಉರಸ್ಥಳಂ, ದೀರ್ಘ ಬಾಹಾಲಂಬಂ, ಭುಜವೀರ್ಯ ವಿಕ್ರಮಯುತಂ, ಗಂಗಾತ್ಮಜನ್ಮಂ, ಜಯಶ್ರೀಲೋಲಂ, ಜಮದಗ್ನಿ ರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ.)
ಸಾಲವೃಕ್ಷದಂತೆ ಎತ್ತರ; ಅತ್ತಿತ್ತ ಚಲಿಸುವ ವಿಶಾಲ ಕಣ್ಣುಗಳು; ಗೂಳಿಯಂತೆ ಉಬ್ಬಿದ ಹೆಗಲು; ಅರಳಿದ ಕಮಲದಂಥ ಮುಖ; ವಿಸ್ತಾರವಾದ, ಅಗಲವಾದ ಎದೆ; ಉದ್ದನೆಯ ತೋಳುಗಳು; ತೋಳುಗಳ ಬಲದಿಂದ ಗಳಿಸಿದ ಗೆಲುವು; ಗೆಲುವೆಂಬ ಸಂಪತ್ತಿನಲ್ಲಿ ಆಸಕ್ತಿ – ಹೀಗಿದ್ದ ಭೀಷ್ಮನು ಪರಶುರಾಮ ಮುನಿಯಲ್ಲಿ ಬಿಲ್ವಿದ್ಯೆಯನ್ನು ಕಲಿತನು.
ವ|| ಅಂತು ಕಲ್ತು ಮುನ್ನಮೆ ಚಾಪವಿದ್ಯೆಯೊಳಾರಿಂದಮೀತನೆ ಭಾರ್ಗವನೆನಿಸಿದ ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜ ಕಂಠಿಕಾ ಪರಿಕಲಿತ ಕಂಠಲುಂಠನುಮಾಗಿ ಪ್ರಮಾಣ ನಿಜಭುಜ ದಂಡಿತಾರಾತಿ ಮಂಡಲನುಮಾಗಿ ಗಾಂಗೇಯಂ ಸುಖದೊಳರಸುಗೆಯ್ಯುತ್ತಿರ್ಪನ್ನೆಗಮಿತ್ತ ಗಂಗಾದೇಶದೊಳುಪರಿಚರವಸುವೆಂಬರಸಂ ಮುಕ್ತಾವತಿಯೆಂಬ ತೊಱೆಯೊಳ್ ವಿಶ್ರಮಿಸಿರ್ದೊಡೆ ಕೋಳಾಹಳಮೆಂಬ ಪರ್ವತಕ್ಕೆ ಪುಟ್ಟಿದ ಗಿರಿಜೆಯೆಂಬ ಕನ್ನೆಯನಾತಂ ಕಂಡು ಕಣ್ಬೇಟಂಗೊಂಡು ಮದುವೆಯಂ ನಿಂದೊಂದು ದಿವಸಮಿಂದ್ರನೋಲಗಕ್ಕೆ ಪೋಗಿ ಋತುಕಾಲಪ್ರಾಪ್ತೆಯಾಗಿದ್ದ ನಲ್ಲಳಲ್ಲಿಗೆ ಬರಲ್ ಪಡೆಯದಾಕೆಯಂ ನೆನೆದಿಂದ್ರಿಯ ಕ್ಷರಣೆಯಾದೊಡದನೊಂದು ಕದಳೀಪತ್ರದೊಳ್ ಪುದಿದು ತನ್ನ ನಡಪಿದ ಗಿಳಿಯ ಕೈಯೊಳೋಪಳಲ್ಲಿಗಟ್ಟಿದೊಡದಂ ತರ್ಪರಗಿಳಿಯನೊಂದು ಗಿಡುಗನೆಡೆಗೊಂಡು ಜಗುನೆಯಂ ಪಾಯ್ವಾಗಳುಗಿಬಗಿ ಮಾಡಿದಾಗೞದರ ಕೈಯಿಂ ಬರ್ದುಂಕಿ ತೊಱೆಯೊಳಗೆ ಬಿೞ್ದೊಡದನೊಂದು ಬಾಳೆಮೀನ್ನುಂಗಿ ಗರ್ಭಮಂ ತಾಳ್ದಿದೊಡೊಂದು ದಿವಸಮಾ ಮೀನನೊರ್ವ ಜಾಲಗಾಱಂ ಜಾಲದೊಳ್ ಪಿಡಿದಲ್ಲಿಗರಸಪ್ಪ ದಾಶನಲ್ಲಿಗುಯ್ದು ತೋಱಿದೊಡದಂ ವಿದಾರಿಸಿ ನೋೞ್ಪನ್ನೆಗಂ ಬಾಳೆಯ ಗರ್ಭದೊಳಿರ್ದ ಬಾಳೆಯಂ ಬಾಳನುಮಂ ಕಂಡೆತ್ತಿಕೊಂಡು ಮತ್ಸ್ಯಗಂಧಿಯುಂ ಮತ್ಸ್ಯಗಂಧನುಮೆಂದು ಪೆಸರನಿಟ್ಟು ನಡಪಿ ಯಮುನಾನದೀತೀರದೊಳಿರ್ಪನ್ನೆಗಮಲ್ಲಿಗೊರ್ಮೆ ಬ್ರಹ್ಮರ ಮೊಮ್ಮನಪ್ಪ ವೃದ್ಧ ಪರಾಶರಮುನೀಂದ್ರನುತ್ತರಾಪಥಕ್ಕೆ ಪೋಗುತ್ತುಂ ಬಂದು ತೊಱೆಯ ತಡಿಯೊಳೋಡಮಂ ನಡೆಯಿಸುವ ಮತ್ಸ್ಯಗಂಧಿಯಂ ಕಂಡೆಮ್ಮನೀ ತೊಱೆಯಂ ಪಾಯಿಸೆಂಬುದುಂ ಸಾಸಿರ್ವರೇಱಿದೊಡಲ್ಲದೀಯೋಡಂ ನಡೆಯದೆಂಬುದುಮಾಮನಿಬರ ಬಿಣ್ಪುಮಪ್ಪೆಮೇಱಿಸೆಂದೊಡಂತೆ ಗೆಯ್ವೆನೆಂದೋಡಮೇಱಿಸಿ ನಡೆಯಿಸುವಲ್ಲಿ ದಿವ್ಯಕನ್ನೆಯನೞ್ಕರ್ತು ನೋಡಿ –
(ಅಂತು ಕಲ್ತು, ಮುನ್ನಮೆ ಚಾಪವಿದ್ಯೆಯೊಳ್ ಆರಿಂದಂ ಈತನೆ ಭಾರ್ಗವನ್ ಎನಿಸಿದ ಭಾರ್ಗವಂಗೆ ತಾನೆ ಭಾರ್ಗವನಾಗಿ, ಯುವರಾಜ ಕಂಠಿಕಾ ಪರಿಕಲಿತ ಕಂಠಲುಂಠನುಂ ಆಗಿ, ಪ್ರಮಾಣ ನಿಜಭುಜ ದಂಡಿತ ಅರಾತಿ ಮಂಡಲನುಂ ಆಗಿ, ಗಾಂಗೇಯಂ ಸುಖದೊಳ್ ಅರಸುಗೆಯ್ಯುತ್ತುಂ ಇರ್ಪನ್ನೆಗಂ, ಇತ್ತ ಗಂಗಾದೇಶದೊಳ್, ಉಪರಿಚರವಸು ಎಂಬ ಅರಸಂ ಮುಕ್ತಾವತಿಯೆಂಬ ತೊಱೆಯೊಳ್ ವಿಶ್ರಮಿಸಿರ್ದೊಡೆ, ಕೋಳಾಹಳಂ ಎಂಬ ಪರ್ವತಕ್ಕೆ ಪುಟ್ಟಿದ ಗಿರಿಜೆಯೆಂಬ ಕನ್ನೆಯನ್ ಆತಂ ಕಂಡು, ಕಣ್ ಬೇಟಂಗೊಂಡು, ಮದುವೆಯಂ ನಿಂದು, ಒಂದು ದಿವಸಂ ಇಂದ್ರನ ಓಲಗಕ್ಕೆ ಪೋಗಿ ಋತುಕಾಲ ಪ್ರಾಪ್ತೆಯಾಗಿರ್ದ ನಲ್ಲಳಲ್ಲಿಗೆ ಬರಲ್, ಪಡೆಯದೆ, ಆಕೆಯಂ ನೆನೆದು ಇಂದ್ರಿಯ ಕ್ಷರಣೆಯಾದೊಡೆ, ಅದನ್ ಒಂದು ಕದಳೀಪತ್ರದೊಳ್ ಪುದಿದು, ತನ್ನ ನಡಪಿದ ಗಿಳಿಯ ಕೈಯೊಳ್ ಓಪಳಲ್ಲಿಗೆ ಅಟ್ಟಿದೊಡೆ, ಅದಂ ತರ್ಪ ಅರಗಿಳಿಯನ್ ಒಂದು ಗಿಡುಗನ್ ಎಡೆಗೊಂಡು ಜಗುನೆಯಂ ಪಾಯ್ವಾಗಳ್, ಉಗಿಬಗಿ ಮಾಡಿದಾಗಳ್, ಅದರ ಕೈಯಿಂ ಬರ್ದುಂಕಿ ತೊಱೆಯೊಳಗೆ ಬಿೞ್ದೊಡೆ, ಅದನೊಂದು ಬಾಳೆಮೀನ್ ನುಂಗಿ ಗರ್ಭಮಂ ತಾಳ್ದಿದೊಡೆ, ಒಂದು ದಿವಸಂ, ಆ ಮೀನನ್ ಒರ್ವ ಜಾಲಗಾಱಂ ಜಾಲದೊಳ್ ಪಿಡಿದು, ಅಲ್ಲಿಗೆ ಅರಸಪ್ಪ ದಾಶನಲ್ಲಿಗೆ ಒಯ್ದು ತೋಱಿದೊಡೆ, ಅದಂ ವಿದಾರಿಸಿ ನೋೞ್ಪನ್ನೆಗಂ, ಬಾಳೆಯ ಗರ್ಭದೊಳಿರ್ದ ಬಾಳೆಯಂ ಬಾಳನುಮಂ ಕಂಡು, ಎತ್ತಿಕೊಂಡು, ಮತ್ಸ್ಯಗಂಧಿಯುಂ ಮತ್ಸ್ಯಗಂಧನುಂ ಎಂದು ಪೆಸರನಿಟ್ಟು, ನಡಪಿ, ಯಮುನಾನದೀತೀರದೊಳ್ ಇರ್ಪನ್ನೆಗಂ, ಅಲ್ಲಿಗೆ ಒರ್ಮೆ ಬ್ರಹ್ಮರ ಮೊಮ್ಮನಪ್ಪ ವೃದ್ಧ ಪರಾಶರಮುನೀಂದ್ರನ್ ಉತ್ತರಾಪಥಕ್ಕೆ ಪೋಗುತ್ತುಂ ಬಂದು, ತೊಱೆಯ ತಡಿಯೊಳ್ ಓಡಮಂ ನಡೆಯಿಸುವ ಮತ್ಸ್ಯಗಂಧಿಯಂ ಕಂಡು, “ಎಮ್ಮನ್ ಈ ತೊಱೆಯಂ ಪಾಯಿಸು” ಎಂಬುದುಂ, “ಸಾಸಿರ್ವರ್ ಏಱಿದೊಡಲ್ಲದೆ ಈ ಓಡಂ ನಡೆಯದು” ಎಂಬುದುಂ, “ಆಂ ಅನಿಬರ ಬಿಣ್ಪುಂ ಅಪ್ಪೆಂ ಏಱಿಸು” ಎಂದೊಡೆ, “ಅಂತೆ ಗೆಯ್ವೆನ್” ಎಂದು, ಓಡಂ ಏಱಿಸಿ ನಡೆಯಿಸುವಲ್ಲಿ ದಿವ್ಯಕನ್ನೆಯನ್ ಅೞ್ಕರ್ತು ನೋಡಿ-)
ಹಾಗೆ ಕಲಿತು ಈ ಮೊದಲು ಎಲ್ಲರಿಗಿಂತ ಮಿಗಿಲಾದ ಬಿಲ್ಲುಗಾರ ಎನಿಸಿದ್ದ ಭಾರ್ಗವನನ್ನೇ ಮೀರಿಸಿದ ಬಿಲ್ಲುಗಾರನಾದನು. ತನ್ನ ತೋಳುಗಳೆಂಬ ದಂಡದಿಂದ ವೈರಿಗಳ ಗುಂಪನ್ನು ಶಿಕ್ಷಿಸಿದನು. ಹೀಗೆ ಭೀಷ್ಮನು ಸುಖವಾಗಿ ಅರಸುತನ ನಡೆಸುತ್ತಿದ್ದಾಗ ಇತ್ತ –
ಗಂಗಾದೇಶದಲ್ಲಿ ಉಪರಿಚರವಸು ಎಂಬ ಅರಸನು ಮುಕ್ತಾವತಿ ಎಂಬ ಹೊಳೆಯಲ್ಲಿ ವಿಶ್ರಮಿಸುತ್ತಿದ್ದನು. ಆಗ ಆತನು ಕೋಳಾಹಳವೆಂಬ ಬೆಟ್ಟದ ಮಗಳಾದ ಗಿರಿಜೆ ಎಂಬ ಕನ್ನೆಯನ್ನು ಕಂಡನು. ಅವನಿಗೆ ಆಕೆಯಲ್ಲಿ ಪ್ರೇಮ ಉಂಟಾಗಿ ಆಕೆಯನ್ನು ಮದುವೆಯಾದನು. ಒಂದು ದಿವಸ ಆತನು ಇಂದ್ರನ ಓಲಗಕ್ಕೆ ಹೋಗಿ, ಋತುಕಾಲ ಪ್ರಾಪ್ತೆಯಾಗಿದ್ದ ನಲ್ಲೆಯಲ್ಲಿಗೆ ಬಂದನು. ಆದರೆ ಅವನಿಗೆ ಅವಳು ಸಿಗಲಿಲ್ಲ. ನಲ್ಲೆಯನ್ನೇ ನೆನೆಯುತ್ತ ಆತನಿಗೆ ವೀರ್ಯಸ್ಖಲನವಾಯಿತು. ಅವನು ಅದನ್ನು ಒಂದು ಬಾಳೆ ಎಲೆಯಲ್ಲಿ ಮುಚ್ಚಿ ತಾನು ಸಾಕಿದ ಗಿಳಿಯ ಕೈಯಲ್ಲಿ ತನ್ನ ನಲ್ಲೆಯಲ್ಲಿಗೆ ಕಳಿಸಿದನು. ದಾರಿಯಲ್ಲಿ ಆ ಗಿಳಿಯು ಜಮುನಾ ನದಿಯನ್ನು ದಾಟಬೇಕಾಯಿತು. ಆಗ ಒಂದು ಗಿಡುಗವು ಎದುರಿಗೆ ಸಿಕ್ಕಿ ಗಿಳಿಯನ್ನು ಪರಚಿ ಗಾಯಗೊಳಿಸಿತು. ಈ ಗೊಂದಲದಲ್ಲಿ ಗಿಳಿಯ ವಶದಲ್ಲಿದ್ದ ಬಾಳೆ ಎಲೆಯ ಕಟ್ಟು ಯಮುನೆಯಲ್ಲಿ ಬಿದ್ದುಹೋಯಿತು. ಆ ಕಟ್ಟನ್ನು ಒಂದು ಬಾಳೆ ಮೀನು ನುಂಗಿ ಬಸಿರಾಯಿತು. ಒಂದು ದಿವಸ ಆ ಮೀನನ್ನು ಮೀನುಗಾರನೊಬ್ಬನು ಹಿಡಿದು ಅಲ್ಲಿಗೆ ಅರಸನಾಗಿದ್ದ ದಾಶರಾಜನ ಹತ್ತಿರ ತೆಗೆದುಕೊಂಡು ಹೋದನು. ಅದನ್ನು ಸೀಳಿ ನೋಡಿದಾಗ ಅದರ ಹೊಟ್ಟೆಯಲ್ಲಿ ಎರಡು ಮಕ್ಕಳಿದ್ದವು. ಆ ಮಕ್ಕಳನ್ನು ದಾಶರಾಜನು ಎತ್ತಿಕೊಂಡು ಮತ್ಸ್ಯಗಂಧಿ, ಮತ್ಸ್ಯಗಂಧ ಎಂದು ಹೆಸರುಗಳನ್ನಿಟ್ಟು ಸಾಕಿದನು.
ಹೀಗೆ ಅವರೆಲ್ಲ ಯಮುನಾನದಿಯ ತೀರದಲ್ಲಿದ್ದಾಗ ಒಂದು ದಿನ ಅಲ್ಲಿಗೆ ಬ್ರಹ್ಮನ ಮೊಮ್ಮಗನಾದ ಮುದಿ ಪರಾಶರ ಮುನಿಯು ಬಂದು, ದೋಣಿಯಲ್ಲಿ ಜನರನ್ನು ನದಿ ದಾಟಿಸುತ್ತಿದ್ದ ಮತ್ಸ್ಯಗಂಧಿಯನ್ನು ಕಂಡು ‘ನನ್ನನ್ನು ನದಿ ದಾಟಿಸು’ ಎಂದು ಕೇಳಿದನು. ಅವಳು ‘ಈ ದೋಣಿ ನಡೆಯಬೇಕಾದರೆ ಸಾವಿರ ಜನ ಬೇಕು’ ಎಂದಳು. ಮುನಿಯು ‘ನಾನೊಬ್ಬನೇ ಅಷ್ಟು ಜನರ ಭಾರವಾಗುತ್ತೇನೆ, ನಡೆಯಿಸು’ ಎಂದನು. ಅವಳು ಒಪ್ಪಿ ದೋಣಿಯನ್ನು ನಡೆಸತೊಡಗಿದಳು. ಆಗ ಮುನಿಯು ಸುಂದರಿಯಾದ ಆ ಕನ್ಯೆಯನ್ನು ಇಷ್ಟಪಟ್ಟು ನೋಡಿ-
ಮ|| ಮನದೊಳ್ ಸೋಲ್ತು ಮುನೀಂದ್ರನಾಕೆಯೊಡಲೀ ದುರ್ಗಂಧವೋಪಂತೆ ಯೋ |
     ಜನಗಂಧಿತ್ವಮನಿತ್ತು ಕಾಂಡಪಟದಂತಿರ್ಪನ್ನೆಗಂ ಮಾಡಿ ಮಂ ||
     ಜನಲಂಪೞ್ಕಱನೀಯೆ ಕೂಡುವೆಡೆಯೊಳ್ ಜ್ಞಾನಸ್ವರೂಪಂ ಮಹಾ ||
     ಮುನಿಪಂ ಪುಟ್ಟಿದನಂತು ದಿವ್ಯಮುನಿಗಳ್ಗೇಗೆಯ್ದೊಡಂ ತೀರದೇ ||೬೯||
(ಮನದೊಳ್ ಸೋಲ್ತು ಮುನೀಂದ್ರನ್, ಆಕೆಯ ಒಡಲ ಈ  ದುರ್ಗಂಧವೋಪಂತೆ ಯೋಜನಗಂಧಿತ್ವಮನ್  ಇತ್ತು, ಕಾಂಡಪಟದಂತೆ ಇರ್ಪನ್ನೆಗಂ ಮಾಡಿ ಮಂಜನ್, ಅಲಂಪು ಅೞ್ಕಱನ್ ಈಯೆ ಕೂಡುವೆಡೆಯೊಳ್, ಜ್ಞಾನಸ್ವರೂಪಂ ಮಹಾಮುನಿಪಂ ಪುಟ್ಟಿದನ್, ಅಂತು ದಿವ್ಯಮುನಿಗಳ್ಗೆ ಏಗೆಯ್ದೊಡಂ ತೀರದೇ?)
ಮುನಿಯು ಮನಸ್ಸಿನಲ್ಲಿಯೇ ಆಕೆಗೆ ಸೋತು, ಅವಳ ಮೈಯ ನಾತ ಹೋಗಿ ಪರಿಮಳ ಬರುವಂತೆ ಯೋಜನಗಂಧಿತ್ವವನ್ನು ಅವಳಿಗೆ ಕೊಟ್ಟನು. ಹಾಗೆ ಕೊಟ್ಟು ಸುತ್ತಲೂ ಮಂಜಿನ ತೆರೆಯನ್ನು ನಿರ್ಮಿಸಿ ಸಂತೋಷದಿಂದ ಆಕೆಯನ್ನು ಕೂಡಿದನು. ಆಗ ಆಕೆಯಲ್ಲಿ ಜ್ಞಾನಸ್ವರೂಪನೇ ಆದ ವ್ಯಾಸ ಮಹಾಮುನಿಯು ಹುಟ್ಟಿದನು. ಲೋಕದಲ್ಲಿ ದೊಡ್ಡ ಋಷಿ ಎನಿಸಿಕೊಂಡವರು ಏನು ಮಾಡಿದರೂ ನಡೆಯುತ್ತದೆ ತಾನೆ!
ವ|| ಅಂತು ನೀಲಾಂಬುದ ಶ್ಯಾಮನುಂ ಕನಕ ಪಿಂಗಳ ಜಟಾಬಂಧಕಳಾಪನುಂ ದಂಡ[ಕಪಾಳ] ಹಸ್ತನುಂ ಕೃಷ್ಣಮೃಗ [ತ್ವಕ್ಪ]ರಿಧಾನನುಮಾಗಿ ವ್ಯಾಸಭಟ್ಟಾರಕಂ ಪುಟ್ಟುವುದುಮಾತನನೊಡಗೊಂಡು ಸತ್ಯವತಿಗೆ ಪುನಃ ಕನ್ಯಾಭಾವಮಂ ದಯೆಗೆಯ್ದು ಪರಾಶರಂ ಪೋದನಿತ್ತಲ್-
(ಅಂತು ನೀಲಾಂಬುದ ಶ್ಯಾಮನುಂ, ಕನಕ ಪಿಂಗಳ ಜಟಾಬಂಧಕಳಾಪನುಂ, ದಂಡ[ಕಪಾಳ] ಹಸ್ತನುಂ ಕೃಷ್ಣಮೃಗ ತ್ವಕ್ ಪರಿಧಾನನುಂ ಆಗಿ ವ್ಯಾಸಭಟ್ಟಾರಕಂ ಪುಟ್ಟುವುದುಂ, ಆತನನ್ ಒಡಗೊಂಡು, ಸತ್ಯವತಿಗೆ ಪುನಃ ಕನ್ಯಾಭಾವಮಂ ದಯೆಗೆಯ್ದು, ಪರಾಶರಂ ಪೋದನ್. ಇತ್ತಲ್)
ಹಾಗೆ, ವ್ಯಾಸನು ಹುಟ್ಟಿದಾಗ ಅವನಿಗೆ ಮೋಡದಂಥ ಕಪ್ಪು ಬಣ್ಣ; ಬಂಗಾರಗೆಂಪಿನ ಜಟೆ; ಕೈಯಲ್ಲಿ ದಂಡ ಮತ್ತು ಭಿಕ್ಷಾಪಾತ್ರೆ; ಕೃಷ್ಣಮೃಗದ ಚರ್ಮದ ಉಡುಗೆ. ಪರಾಶರನು ಸತ್ಯವತಿಗೆ ಪುನಃ ಕನ್ಯಾಭಾವವನ್ನು ಕೊಟ್ಟು, ಮಗನಾದ ವ್ಯಾಸನೊಂದಿಗೆ ಅಲ್ಲಿಂದ ಹೊರಟು ಹೋದನು.
ಮ|| ಮೃಗಯಾವ್ಯಾಜದಿನೊರ್ಮೆ ಶಂತನು ತೊೞಲ್ತರ್ಪಂ ಪಳಂಚಲ್ಕೆ ತ |
     ನ್ಮೃಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂಬೊಲ್ ಸೋಲ್ತು ಕಂಡೊಲ್ದು ನ ||
     ಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು ನೀನ್  ಬಾ ಪೋಪಮೆಂದಂಗೆ ಮೆ |
     ಲ್ಲಗೆ ತತ್ಕನ್ಯಕೆ ನಾಣ್ಚಿ ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ ||೭೦||
(ಮೃಗಯಾವ್ಯಾಜದಿನ್ ಒರ್ಮೆ ಶಂತನು ತೊೞಲ್ತರ್ಪಂ, ಪಳಂಚಲ್ಕೆ ತನ್ಮೃಗಶಾಬಾಕ್ಷಿಯ ಕಂಪು ತಟ್ಟಿ, ಮಧುಪಂಬೊಲ್ ಸೋಲ್ತು, ಕಂಡು, ಒಲ್ದು, ನಲ್ಮೆಗೆ ದಿಬ್ಯಂ ಪಿಡಿವಂತೆವೋಲ್ ಪಿಡಿದು, “ನೀನ್  ಬಾ ಪೋಪಂ” ಎಂದಂಗೆ ಮೆಲ್ಲಗೆ ತತ್ಕನ್ಯಕೆ ನಾಣ್ಚಿ, “ಬೇಡುವೊಡೆ ನೀವ್ ಎಮ್ಮ ಅಯ್ಯನಂ ಬೇಡಿರೇ”)
ಒಂದು ದಿನ ಶಂತನು ಮಹಾರಾಜ ಬೇಟೆಯ ನೆವದಲ್ಲಿ ಕಾಡಿನಲ್ಲಿ ಅಲೆಯುತ್ತಿದ್ದ. ಆಗ ಅವನಿಗೆ ಆ ಜಿಂಕೆಗಣ್ಣಿಯ ಮೈಯ ಪರಿಮಳ ಎಲ್ಲಿಂದಲೋ ಬಂದು ಮೂಗಿಗೆ ತಟ್ಟಿತು. ಹೂವಿನ ಪರಿಮಳಕ್ಕೆ ದುಂಬಿ ಸೋಲುವ ಹಾಗೆ ಅವನು ಆ ಪರಿಮಳಕ್ಕೆ ಸೋತ; ಎಲ್ಲಿಂದ ಈ ಪರಿಮಳ ಎಂದು ಹುಡುಕುತ್ತಾ ಹೋಗಿ ಯೋಜನಗಂಧಿಯನ್ನು ಕಂಡ; ಮೋಹಪರವಶನಾದ; ತನ್ನ ಪ್ರೀತಿಯನ್ನು ಒರೆಗೆ ಹಚ್ಚುವಂತೆ ಆಕೆಯನ್ನು ಹಿಡಿದು ‘ಬಾ ನನ್ನ ಜೊತೆ, ಹೋಗೋಣ’ ಎಂದು ಅವಳನ್ನು ಕರೆದ. ಕನ್ನಿಕೆ ನಾಚಿದಳು. ‘ಬೇಕಾದರೆ ನೀವು ಅಪ್ಪನನ್ನು ಕೇಳಿ’ ಎಂದು ತನ್ನ ಒಪ್ಪಿಗೆಯನ್ನು ಪರೋಕ್ಷವಾಗಿ ಸೂಚಿಸಿದಳು!
ವ|| ಎಂಬುದುಂ ಶಂತನು ಪೊೞಲ್ಗೆ ಮಗುೞ್ದು ವಂದವರಯ್ಯನಪ್ಪ ದಾಶರಾಜನಲ್ಲಿಗೆ ಕೂಸಂ ಬೇಡೆ ಪೆರ್ಗಡೆಗಳನಟ್ಟಿದೊಡೆ ಗಾಂಗೇಯಂ ದೊರೆಯ ಪಿರಿಯ ಮಗನುಂ ಕ್ರಮಕ್ರಮಾರ್ಹನುಮಿರ್ದಂತೆನ್ನ ಮಗಳಂ ಕುಡೆವೆಮ್ಮ ಮಗಳ್ಗೆ ಪುಟ್ಟಿದಾತಂ ರಾಜ್ಯಕ್ಕೊಡೆಯನುಂ ಪಿರಿಯ ಮಗನುಂ ಕ್ರಮಕ್ಕರ್ಹನುಮಪ್ಪೊಡೆ ಕುಡುವೆಮೆನೆ ತದ್ವೃತ್ತಾಂತಮಂ ಮಂತ್ರಿಗಳಿಂ ಶಂತನು ಕೇಳ್ದು-
(ಎಂಬುದುಂ, ಶಂತನು ಪೊೞಲ್ಗೆ ಮಗುೞ್ದುವಂದು, ಅವರ ಅಯ್ಯನಪ್ಪ ದಾಶರಾಜನಲ್ಲಿಗೆ ಕೂಸಂ ಬೇಡೆ ಪೆರ್ಗಡೆಗಳನ್ ಅಟ್ಟಿದೊಡೆ, “ಗಾಂಗೇಯಂ ದೊರೆಯ ಪಿರಿಯ ಮಗನುಂ ಕ್ರಮಕ್ರಮಾರ್ಹನುಂ ಇರ್ದಂತೆ ಎನ್ನ ಮಗಳಂ ಕುಡೆವು, ಎಮ್ಮ ಮಗಳ್ಗೆ ಪುಟ್ಟಿದಾತಂ ರಾಜ್ಯಕ್ಕೆ ಒಡೆಯನುಂ ಪಿರಿಯ ಮಗನುಂ ಕ್ರಮಕ್ಕೆ ಅರ್ಹನುಂ ಅಪ್ಪೊಡೆ ಕುಡುವೆಂ” ಎನೆ ತತ್ ವೃತ್ತಾಂತಮಂ ಮಂತ್ರಿಗಳಿಂ ಶಂತನು ಕೇಳ್ದು)
ಯೋಜನಗಂಧಿಯ ಮಾತು ಕೇಳಿದ ಶಂತನು ಊರಿಗೆ ಮರಳಿ ಬಂದು, ಹೆಣ್ಣು ಕೇಳಲು ಹೆಗ್ಗಡೆಗಳನ್ನು ದಾಶರಾಜನಲ್ಲಿಗೆ ಕಳಿಸಿಕೊಟ್ಟನು. ಅವರು ಹೋಗಿ ದಾಶರಾಜನ ಎದುರಿಗೆ ಪ್ರಸ್ತಾಪವನ್ನಿಟ್ಟಾಗ ಅವನು ‘ಈಗ ದೊರೆಗೆ ಹಿರಿಯ ಮಗನಾಗಿ ಭೀಷ್ಮನಿದ್ದಾನೆ. ಕ್ರಮ ಪ್ರಕಾರ ಅವನು ರಾಜ್ಯಕ್ಕೆ ಅಧಿಕಾರಿ. ಹಾಗಿರುವಾಗ ನಾನು ನನ್ನ ಮಗಳನ್ನು ರಾಜನಿಗೆ ಕೊಡಲಾರೆ. ನನ್ನ ಮಗಳಿಗೆ ಹುಟ್ಟಿದ ಮಕ್ಕಳು ಹಿರಿಯರಾಗಿ, ಕ್ರಮಕ್ಕೆ ಅರ್ಹರಾಗಿ, ರಾಜ್ಯಕ್ಕೆ ಒಡೆಯರಾಗುವುದಾದರೆ ಮಾತ್ರ ಮಗಳನ್ನು ಕೊಡುತ್ತೇನೆ’ ಎಂದನು. ಹೆಗ್ಗಡೆಗಳು ಹಿಂದೆ ಬಂದು ಎಲ್ಲ ವಿಷಯವನ್ನೂ ಶಂತನುವಿಗೆ ತಿಳಿಸಿದರು.
ಮ|| ಕ್ರಮಮಂ ವಿಕ್ರಮದಿಂದೆ ತಾಳ್ದುವ ಮಗಂ ಗಾಂಗೇಯನಿರ್ದಂತೆ ನೋ |
     ಡ ಮರುಳ್ ಶಂತನು ತನ್ನದೊಂದು ಸವಿಗಂ ಸೋಲಕ್ಕಮಿತ್ತಂ ನಿಜ ||
     ಕ್ರಮಮಂ ತನ್ನಯ ಬೇಟದಾಕೆಯ ಮಗಂಗೆಂಬೊಂದಪಖ್ಯಾತಿ ಲೋ |
     ಕಮನಾವರ್ತಿಸೆ ಬೞ್ದೊಡೆನ್ನ ಕುಲಮುಂ ತ[ಕ್ಕೂ]ರ್ಮೆಯುಂ ಮಾಸದೇ ||೭೧||
 (“ಕ್ರಮಮಂ ವಿಕ್ರಮದಿಂದೆ ತಾಳ್ದುವ ಮಗಂ ಗಾಂಗೇಯನ್ ಇರ್ದಂತೆ, ನೋಡ, ಮರುಳ್ ಶಂತನು ತನ್ನದೊಂದು ಸವಿಗಂ ಸೋಲಕ್ಕಂ ಇತ್ತಂ ನಿಜಕ್ರಮಮಂ ತನ್ನಯ ಬೇಟದಾಕೆಯ ಮಗಂಗೆ ಎಂಬ ಒಂದು ಅಪಖ್ಯಾತಿ ಲೋಕಮನ್ ಆವರ್ತಿಸೆ ಬೞ್ದೊಡೆ ಎನ್ನ ಕುಲಮುಂ ತಕ್ಕೂರ್ಮೆಯುಂ ಮಾಸದೇ”?)
‘ಹಿಂದಿನಿಂದ ಬಂದ ಕ್ರಮವನ್ನು –ಸಂಪ್ರದಾಯವನ್ನು- ಮುಂದುವರಿಸಿಕೊಂಡು ಹೋಗಲು ಅತ್ಯಂತ ಸಮರ್ಥನಾದ ಮಗ ಭೀಷ್ಮನಿದ್ದಾನೆ. ಹಾಗಿದ್ದರೂ ಈ ಮಳ್ಳ ಶಂತನು ತನ್ನ ತೆವಲಿಗೆ ಸೋತು, ತಾನು ಕೂಡಿದ ಹೆಣ್ಣಿಗಾಗಿ, ಹಿಂದಿನಿಂದಲೂ ಬಂದ ಕ್ರಮವನ್ನೇ ತಪ್ಪಿದನಲ್ಲ! ಎಂಬ ಅಪವಾದ ತನ್ನ ಮೇಲೆ ಬರುತ್ತದೆ. ಆ ಮಾತು ಇಡೀ ಲೋಕವನ್ನು ಸುತ್ತುತ್ತದೆ. ಹಾಗೆ ಆದರೆ ತನ್ನ ಕುಲವೂ, ಅದರ ಹಿರಿಮೆಯೂ ಮಾಸಿ ಹೋಗುವುದಿಲ್ಲವೆ?’ ಎಂಬ ಚಿಂತೆಗೆ ಶಂತನು ಸಿಕ್ಕಿಕೊಂಡನು.
ವ|| ಎಂದು ತನ್ನ ನಾಣ್ಗಾಪನೆ ಬಗೆದತನು ಪರಿತಾಪಿತಶರೀರನುಮಾಗಿ ಶಂತನು ಕರಂಗೆರ್ದೆಗಿಡೆ ತದ್ವೃತ್ತಾಂತಮೆಲ್ಲಮಂ ಗಾಂಗೇಯನಱಿದು-
(ಎಂದು ತನ್ನ ನಾಣ್ಗಾಪನೆ ಬಗೆದು, ಅತನು ಪರಿತಾಪಿತ ಶರೀರನುಂ ಆಗಿ, ಶಂತನು ಕರಂಗಿ ಎರ್ದೆಗಿಡೆ, ತತ್  ವೃತ್ತಾಂತಮೆಲ್ಲಮಂ ಗಾಂಗೇಯನ್ ಅಱಿದು-)
ವ| ಈ ಕಾರಣದಿಂದ ಶಂತನುವು ತನ್ನ ಆಸೆಯನ್ನು ಹೊರಗೆ ಹೇಳಲು ನಾಚಿಕೊಂಡನು. ಆದರೆ ಯೋಜನಗಂಧಿಯ ಮೋಹ ಅವನನ್ನು ಕೊರೆಯುತ್ತಿತ್ತು. ಶಂತನುವು ಹೀಗೆ ದಿನದಿನವೂ ಕೊರಗುತ್ತಿರುವುದರ ಕಾರಣ ಕ್ರಮೇಣ ಭೀಷ್ಮನಿಗೆ ತಿಳಿಯಿತು. ಅವನು -
ಉ|| ಎನ್ನಯ ದೂಸಱಿಂ ನೃಪತಿ ಬೇಡಿದುದಂ ಕುಡಲೊಲ್ಲದಂಗಜೋ |
     ತ್ಪನ್ನ ವಿಮೋಹದಿಂದಳಿದಪಂ ಪತಿ ಸತ್ತೊಡೆ ಸತ್ತ ಪಾಪಮೆ ||
     ನ್ನನ್ನರಕಂಗಳೊಳ್ ತಡೆಯದೞ್ದುಗುಮೇವುದು ರಾಜ್ಯಲಕ್ಷ್ಮಿ ಪೋ |
     ತನ್ನಯ ತಂದೆಯೆಂದುದನೆ ಕೊಟ್ಟು ವಿವಾಹಮನಿಂದೆ ಮಾಡುವೆಂ ||೭೨||
(“ಎನ್ನಯ ದೂಸಱಿಂ ನೃಪತಿ ಬೇಡಿದುದಂ ಕುಡಲ್ ಒಲ್ಲದೆ ಅಂಗಜ ಉತ್ಪನ್ನ ವಿಮೋಹದಿಂದ ಅಳಿದಪಂ, ಪತಿ ಸತ್ತೊಡೆ ಸತ್ತ ಪಾಪಂ ಎನ್ನನ್ ನರಕಂಗಳೊಳ್ ತಡೆಯದೆ ಅೞ್ದುಗುಂ, ಏವುದು ರಾಜ್ಯಲಕ್ಷ್ಮಿ? ಪೋ! ತನ್ನಯ ತಂದೆ ಎಂದುದನೆ ಕೊಟ್ಟು ವಿವಾಹಮನ್ ಇಂದೆ ಮಾಡುವೆಂ”.)
‘ನನ್ನ ಕಾರಣದಿಂದ ತಂದೆಗೆ ದಾಶರಾಜನ ಷರತ್ತುಗಳನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವನು ಕಾಮದಿಂದ ಉಂಟಾದ ಸಂಕಟವನ್ನು ಅನುಭವಿಸಬೇಕಾಗಿದೆ. ಅದೇ ಸಂಕಟದಿಂದ ಅವನು ತೀರಿಕೊಂಡರೆ, ಅದರ ಪಾಪವು ನನ್ನನ್ನು ನರಕದಲ್ಲಿ ಅದ್ದದೆ ಬಿಡುವುದಿಲ್ಲ. ಈ ರಾಜ್ಯಲಕ್ಷ್ಮಿಯಿಂದ ನನಗೆ ಆಗಬೇಕಾದ್ದಾದರೂ ಏನು? ಅದು ಹೋಗಲಿ! ನನ್ನ ತಂದೆಯ ಆಸೆಯನ್ನು ಇಂದೇ ಪೂರೈಸುತ್ತೇನೆ. ಅವನ ವಿವಾಹವನ್ನು ಇಂದೇ ಮಾಡುತ್ತೇನೆ’
ವ|| ಎಂದು ನಿಶ್ಚಯಿಸಿ ಗಾಂಗೇಯಂ ದಾಶರಾಜನಲ್ಲಿಗೆ ವಂದಾತನ ಮನದ ತೊಡರ್ಪಂ ಪಿಂಗೆ ನುಡಿದು-
(ಎಂದು ನಿಶ್ಚಯಿಸಿ, ಗಾಂಗೇಯಂ ದಾಶರಾಜನಲ್ಲಿಗೆ ಬಂದು, ಆತನ ಮನದ ತೊಡರ್ಪಂ ಪಿಂಗೆ ನುಡಿದು)
ಎಂದು ಮನಸ್ಸಿನಲ್ಲಿಯೇ ತೀರ್ಮಾನಿಸಿಕೊಂಡು ದಾಶರಾಜನಲ್ಲಿಗೆ ಹೋಗಿ, ಅವನ ಮನಸ್ಸಿನ ತೊಡಕು ದೂರವಾಗುವಂತೆ -
ಉ|| ನೀಡಿರದೀವುದೀ ನಿಜ ತನೂಜೆಯನೀ ವಧುಗಾದ ಪುತ್ರರೊಳ್ |
     ಕೂಡುಗೆ ರಾಜ್ಯಲಕ್ಷ್ಮಿ ಮೊಱೆಯಲ್ತೆನಗಂತದು ಪೆಂಡಿರೆಂಬರೊಳ್ ||
     ಕೂಡುವನಲ್ಲೆನಿಂದು ಮೊದಲಾಗಿರೆ ನಿಕ್ಕುವಮೆಂದು ರಾಗದಿಂ |
     ಕೂಡಿದನುಯ್ದು ಸತ್ಯವತಿಯಂ ಸತಿಯಂ ಪತಿಯೊಳ್ ನದೀಸುತಂ ||೭೩||
(“ನೀಡಿರದೆ ಈವುದು ಈ ನಿಜ ತನೂಜೆಯನ್, ಈ ವಧುಗೆ ಆದ ಪುತ್ರರೊಳ್ ಕೂಡುಗೆ ರಾಜ್ಯಲಕ್ಷ್ಮಿ, ಮೊಱೆಯಲ್ತು ಎನಗೆ ಅಂತು ಅದು, ಪೆಂಡಿರ್ ಎಂಬರೊಳ್ ಕೂಡುವನ್ ಅಲ್ಲೆನ್ ಇಂದು ಮೊದಲಾಗಿರೆ ನಿಕ್ಕುವಂ” ಎಂದು ರಾಗದಿಂ ಕೂಡಿದನ್  ಒಯ್ದು ಸತ್ಯವತಿಯಂ ಸತಿಯಂ ಪತಿಯೊಳ್ ನದೀಸುತಂ)
‘ತಡ ಮಾಡದೆ ನಿನ್ನ ಮಗಳನ್ನು ನನ್ನ ತಂದೆಗೆ ಮದುವೆ ಮಾಡಿ ಕೊಡು. ಅವಳಲ್ಲಿ ಹುಟ್ಟಿದ ಗಂಡುಮಕ್ಕಳಿಗೇ ರಾಜ್ಯವು ದೊರೆಯಲಿ! ಇನ್ನು ಮುಂದೆ ನನಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ. ಇಂದಿನಿಂದ ನಾನು ಯಾವ ಹೆಣ್ಣನ್ನೂ ಕೂಡುವವನಲ್ಲ. ಇದು ನಿಶ್ಚಯ’ – ಎಂದು ಹೇಳಿ ಸತ್ಯವತಿಯನ್ನು ತನ್ನ ಜೊತೆ ಕರೆದುಕೊಂಡು ಹೋಗಿ ತಂದೆಯೊಂದಿಗೆ ವಿವಾಹ ಮಾಡಿಸಿದನು.
ವ|| ಅಂತು ಶಂತನುವುಂ ಸತ್ಯವತಿಯುಮನ್ಯೋನ್ಯಾಸಕ್ತಚಿತ್ತರಾಗಿ ಕೆಲವು ಕಾಲಮಿರ್ಪನ್ನೆಗಮವರ ಬೇಟದ ಕಂದಲ್ಗಳಂತೆ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳ್ ಪುಟ್ಟಿ ಮಹಾಪ್ರಚಂಡರುಂ ಪ್ರತಾಪಿಗಳುಮಾಗಿ ಬಳೆಯುತ್ತಿರ್ಪನ್ನೆಗಂ ಶಂತನು ಪರಲೋಕ ಪ್ರಾಪ್ತನಾದೊಡೆ ಗಾಂಗೇಯಂ ತದುಚಿತ ಪರಲೋಕ ಕ್ರಿಯೆಗಳಂ ಮಾಡಿ ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ ರಾಜ್ಯಂ ಗೆಯಿಸುತ್ತುಮಿರ್ಪನ್ನೆಗಮೊರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚಿ ಕುರುಕ್ಷೇತ್ರಮಂ ಕಳಂಬೇೞ್ದು ಕಾದಿ ಸತ್ತೊಡೆ ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ-
(ಅಂತು ಶಂತನುವುಂ ಸತ್ಯವತಿಯುಂ ಅನ್ಯೋನ್ಯ ಆಸಕ್ತ ಚಿತ್ತರಾಗಿ ಕೆಲವು ಕಾಲಂ ಇರ್ಪನ್ನೆಗಂ, ಅವರ ಬೇಟದ ಕಂದಲ್ಗಳಂತೆ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳ್ ಪುಟ್ಟಿ ಮಹಾಪ್ರಚಂಡರುಂ ಪ್ರತಾಪಿಗಳುಂ ಆಗಿ ಬಳೆಯುತ್ತ ಇರ್ಪನ್ನೆಗಂ, ಶಂತನು ಪರಲೋಕ ಪ್ರಾಪ್ತನಾದೊಡೆ, ಗಾಂಗೇಯಂ ತದುಚಿತ ಪರಲೋಕ ಕ್ರಿಯೆಗಳಂ ಮಾಡಿ, ಮುನ್ನೆ ತನ್ನ ನುಡಿದ ನುಡಿವಳಿ ಎಂಬ ಪ್ರಾಸಾದಕ್ಕೆ ಅಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ, ರಾಜ್ಯಂ ಗೆಯಿಸುತ್ತುಂ ಇರ್ಪನ್ನೆಗಂ, ಒರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚಿ ಕುರುಕ್ಷೇತ್ರಮಂ ಕಳಂಬೇೞ್ದು ಕಾದಿ ಸತ್ತೊಡೆ, ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ-)
ಹೀಗೆ ಶಂತನು-ಸತ್ಯವತಿಯರು ಒಬ್ಬರೊಂದಿಗೆ ಒಬ್ಬರು ಪ್ರೀತಿಯಿಂದ ಕಾಲ ಕಳೆಯುತ್ತಿದ್ದಾಗ ಅವರ ಬೇಟದ ಫಲವಾಗಿ ಚಿತ್ರಾಂಗದ, ವಿಚಿತ್ರವೀರ್ಯರೆಂಬ ಮಕ್ಕಳು ಹುಟ್ಟಿದರು. ಅವರು ಪ್ರಚಂಡರೂ, ವೀರರೂ ಆಗಿ ಬೆಳೆಯುತ್ತಿರುವಂತೆಯೇ ಶಂತನು ತೀರಿಹೋದನು. ಭೀಷ್ಮನು ಆತನಿಗೆ ಉಚಿತವಾದ ಪರಲೋಕಕ್ರಿಯೆಗಳನ್ನು ನಡೆಸಿದ ನಂತರ ಈ ಹಿಂದೆ ತಾನು ಮಾಡಿದ ಪ್ರತಿಜ್ಞೆ ಎಂಬ ನೆಲಗಟ್ಟಿನ ಮೇಲೆ ಮಂದಿರವನ್ನು ಕಟ್ಟುವಂತೆ ಚಿತ್ರಾಂಗದನಿಗೆ ಪಟ್ಟ ಕಟ್ಟಿ ರಾಜ್ಯವನ್ನು ಮುನ್ನಡೆಸುತ್ತಿದ್ದನು. ಆದರೆ ಚಿತ್ರಾಂಗದನು ಕುರುಕ್ಷೇತ್ರವನ್ನು ಕಣವನ್ನಾಗಿಸಿ ಒಬ್ಬ ಗಂಧರ್ವನ ಜೊತೆ ದ್ವಂದ್ವಯುದ್ಧ ಮಾಡಿ ಸತ್ತುಹೋದನು. ಈಗ ಭೀಷ್ಮನು ವಿಚಿತ್ರವೀರ್ಯನಿಗೆ ಪಟ್ಟ ಕಟ್ಟಿ
ಮ|| ಸಕಳ ಕ್ಷತ್ರಿಯ ಮೋಹದಿಂ ನಿಜ ಭುಜ ಪ್ರಾರಂಭದಿಂ ಪೋಗಿ ತಾ |
     ಗಿ ಕೆಲರ್ ನೊಂದೊಡೆ ಕಾದಿ ರಾಜಸುತರೊಳ್ ತನ್ನಂಕದೊಂದುಗ್ರಸಾ ||
     ಯಕದಿಂ ನಾಯಕರಂ ಪಡಲ್ವಡಿಸುತುಂ ತಾಂ ತಂದನಂದಂಬೆಯಂ |
     ಬಿಕೆಯಂಬಾಲೆಯರೆಂಬ ಬಾಲೆಯ[ರನೇಂ] ಭೀಷ್ಮಂ ಯಶೋಭಾಗಿಯೋ ||೭೪||
(ಸಕಳ ಕ್ಷತ್ರಿಯ ಮೋಹದಿಂ, ನಿಜ ಭುಜ ಪ್ರಾರಂಭದಿಂ ಪೋಗಿ, ತಾಗಿ, ಕೆಲರ್ ನೊಂದೊಡೆ ಕಾದಿ ರಾಜಸುತರೊಳ್, ತನ್ನಂಕದ ,ಒಂದು ಉಗ್ರ ಸಾಯಕದಿಂ ನಾಯಕರಂ ಪಡಲ್ವಡಿಸುತುಂ, ತಾಂ ತಂದನ್  ಅಂದು, ಅಂಬೆ ಅಂಬಿಕೆ ಅಂಬಾಲೆಯರೆಂಬ ಬಾಲೆಯರನ್ ಏಂ ಭೀಷ್ಮಂ ಯಶೋಭಾಗಿಯೋ)
ಕ್ಷತ್ರಿಯರಿಗೆ ಸಹಜವಾದ ಕಾದುವ ಆಸೆಯಿಂದ, ತನ್ನ ತೋಳ್ಬಲವನ್ನು ನಿರೂಪಿಸುವ ಇರಾದೆಯಿಂದ ಭೀಷ್ಮನು ಕಾಶಿರಾಜನ ಮಕ್ಕಳಾದ ಅಂಬೆ, ಅಂಬಿಕೆ, ಅಂಬಾಲೆಯರ ಸ್ವಯಂವರಕ್ಕೆ ಹೋದನು. ಅಲ್ಲಿ ಹಲವು ರಾಜಕುಮಾರರೊಂದಿಗೆ ಕಾದಾಡಿ, ನಾಯಕರೆನ್ನಿಸಿಕೊಂಡವರನ್ನು ಚೆಲ್ಲಾಪಿಲ್ಲಿ ಮಾಡಿ, ಆ ಮೂವರು ಕನ್ಯೆಯರನ್ನೂ ಅಪಹರಿಸಿಕೊಂಡು ಬಂದನು. ಭೀಷ್ಮನೆಂದರೆ ಏನು ಸಾಮಾನ್ಯವೀರನೆ?

ಶನಿವಾರ, ಜೂನ್ 2, 2018


ಪಂಪಭಾರತಂ ಎಂಬ ವಿಕ್ರಮಾರ್ಜುನವಿಜಯಂ

ಆಶ್ವಾಸ ೧ ಪದ್ಯಗಳು ೪೪ರಿಂದ ೫೮



ಕಂ|| ರುಂದ್ರಾಂಬೋಧಿಪರೀತ ಮ |
     ಹೀಂದ್ರರದಾರಿನ್ನರೀ ನರೇಂದ್ರಂ ಸಾಕ್ಷಾ ||
     ದಿಂದ್ರಂ ತಾನೆನೆ ಸಲೆ ನೆಗ |
     ೞ್ದಿಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ ||೪೪||
(ರುಂದ್ರ ಅಂಬೋಧಿಪರೀತ ಮಹೀಂದ್ರರ್ ಅದಾರ್ ಇನ್ನರ್? ಈ ನರೇಂದ್ರಂ ಸಾಕ್ಷಾತ್ ಇಂದ್ರಂ ತಾನ್ ಎನೆ ಸಲೆ ನೆಗೞ್ದು, ಇಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ.)
ಕಡಲಿನವರೆಗೂ ವ್ಯಾಪಿಸಿರುವ ಈ ಭೂಮಿಯಲ್ಲಿ ಅರಿಕೇಸರಿಯಂಥ ರಾಜರು ಬೇರೆ ಯಾರು ತಾನೇ ಇದ್ದಾರೆ? ಅರಿಕೇಸರಿಯು ಸಾಕ್ಷಾತ್ ಇಂದ್ರನೇ ಸರಿ. ಏಕೆಂದರೆ ಅವನು ಪ್ರಖ್ಯಾತನಾದ ಇಂದ್ರರಾಜನ ತೋಳತೊಟ್ಟಿಲಿನಲ್ಲಿ ಬೆಳೆದವನು.
ಇಂದ್ರರಾಜನ ಬಗ್ಗೆ ಡಿ ಎಲ್ ಎನ್ ಅವರ ವಿವರಣೆ ಇದು: ರಾಷ್ಟ್ರಕೂಟ ರಾಜರಲ್ಲಿ ಇಂದ್ರರಾಜನೆಂಬುವನೊಬ್ಬನು; ಅವನ ಆಳಿಕೆಯ ಕಾಲ ಕ್ರಿ.ಶ. ೯೧೨-೯೧೭. ಇವನನ್ನು ಇಮ್ಮಡಿ ಇಂದ್ರ ಎಂದು ಕರೆಯುತ್ತಾರೆ.
ಕಂ|| ಅಮಿತಮತಿ ಗುಣದಿನತಿ ವಿ |
     ಕ್ರಮಗುಣದಿಂ ಶಾಸ್ತ್ರಪಾರಮುಂ ರಿಪುಬಳ [ಪಾ] ||
     ರಮುಮೊಡನೆ ಸಂದುವೆನಿಸಿದ |
     ನಮೇಯ ಬಲಶಾಲಿ ಮನುಜಮಾರ್ತಾಂಡ ನೃಪಂ ||೪೫||
(ಅಮಿತ ಮತಿ ಗುಣದಿನ್, ಅತಿ ವಿಕ್ರಮಗುಣದಿಂ, ಶಾಸ್ತ್ರಪಾರಮುಂ ರಿಪುಬಳಪಾರಮುಂ ಒಡನೆ ಸಂದುವು ಎನಿಸಿದನ್, ಅಮೇಯ ಬಲಶಾಲಿ ಮನುಜಮಾರ್ತಾಂಡ ನೃಪಂ.)
ಅರಿಕೇಸರಿಯು ಅಪಾರ ಬಲವಂತ; ಮನುಜ ಮಾರ್ತಾಂಡ. ಅವನು ತನ್ನ ತೀಕ್ಷ್ಣವಾದ ಬುದ್ಧಿಶಕ್ತಿಯಿಂದ ಶಾಸ್ತ್ರಗಳನ್ನೂ, ಭುಜಬಲದಿಂದ ವೈರಿಬಲವನ್ನೂ ಏಕಕಾಲದಲ್ಲಿ ಗೆದ್ದುಕೊಂಡನು.
ಕಂ|| ಉಡೆವಣಿ [ಪ]ಱಿಯದ ಮುನ್ನಮೆ |
     ತೊಡಗಿ ಚಲಂ ನೆಗೞೆ ರಿಪು ಬಲಂಗಳನೆ ಪಡ ||
     ಲ್ವಡಿಸಿ ಪರಬಲದ ನೆತ್ತರ |
     ಕಡಲೊಳಗಣ ಜಿಗುಣೆ ಬಳೆವ ತೆಱದೊಳೆ ಬಳೆದಂ ||೪೬||
(ಉಡೆವಣಿ ಪಱಿಯದ ಮುನ್ನಮೆ ತೊಡಗಿ, ಚಲಂ ನೆಗೞೆ, ರಿಪು ಬಲಂಗಳನೆ ಪಡಲ್ವಡಿಸಿ, ಪರಬಲದ ನೆತ್ತರ ಕಡಲೊಳಗಣ ಜಿಗುಣೆ ಬಳೆವ ತೆಱದೊಳೆ ಬಳೆದಂ.)
ಅರಿಕೇಸರಿಯು ಇನ್ನೂ ಚಿಕ್ಕ ಹುಡುಗನಾಗಿದ್ದಾಗಲೇ ಛಲದಿಂದ ವೈರಿಗಳೊಂದಿಗೆ ಹೋರಾಡಿ ಅವರನ್ನು ದಿಕ್ಕಾಪಾಲು ಮಾಡಿದವನು. ಅವನು ಬೆಳೆದದ್ದೇ ಶತ್ರುಗಳ ನೆತ್ತರ ಕಡಲೊಳಗಿನ ಜಿಗಣೆಯ ಹಾಗೆ!
ಉಡೆವಣಿ=ಸೊಂಟಕ್ಕೆ ಕಟ್ಟಿರುವ ಅರಳೆಲೆ ಮುಂತಾದ ಒಡವೆ – ಡಿ. ಎಲ್. ಎನ್.
ಕಂ|| ಮೇಲೆೞ್ದ ಬಲಂ ಕೋಟಿಗೆ |
     ಮೇಲಪ್ಪೊಡಮನ್ಯ ವನಿತೆ ನೆಗೞ್ದೂರ್ವಶಿಗಂ ||
     ಮೇಲಪ್ಪೊಡಮಕ್ಕೆಂದುಂ |
     ಸೋಲವು ಕಣ್ ಪರಬಲಾಬ್ಧಿಗಂ ಪರವಧುಗಂ ||೪೭||
(ಮೇಲೆೞ್ದ ಬಲಂ ಕೋಟಿಗೆ ಮೇಲ್ ಅಪ್ಪೊಡಂ, ಅನ್ಯ ವನಿತೆ ನೆಗೞ್ದ ಊರ್ವಶಿಗಂ ಮೇಲ್ ಅಪ್ಪೊಡಂ ಅಕ್ಕೆ, ಎಂದುಂ ಸೋಲವು ಕಣ್ ಪರಬಲ ಅಬ್ಧಿಗಂ ಪರವಧುಗಂ.)
ತನ್ನ ಮೇಲೆ ಕೋಟಿಗೂ ಮೀರಿದ ಸೈನ್ಯ ಧಾಳಿ ಮಾಡಲಿ, ಚೆಲುವಿನಲ್ಲಿ ಊರ್ವಶಿಯನ್ನೂ ಮೀರಿದ ಪರವಧು ಕಣ್ಣಿಗೆ ಬೀಳಲಿ, ಅರಿಕೇಸರಿಯ ಕಣ್ಣು ಆ ಸೈನ್ಯಕ್ಕಾಗಲಿ, ಪರವಧುಗಾಗಲಿ ಸೋಲುವುದಿಲ್ಲ.
ಕಂ|| ಧುರದೊಳ್ ಮೂಱುಂ ಲೋಕಂ |
     ನೆರೆದಿರೆಯುಂ ಕುಡುವ ಪೊ[ೞ್ತ]ಱೊಳ್ ಮೇರುವೆ ಮುಂ ||
     ದಿರೆಯುಂ ಬೀರದ ಬಿಯದಂ |
     ತರಕ್ಕೆ ಕಿಱಿದೆಂದು ಚಿಂತಿಪಂ ಪ್ರಿಯಗಳ್ಳಂ ||೪೮||
(ಧುರದೊಳ್ ಮೂಱುಂ ಲೋಕಂ ನೆರೆದು ಇರೆಯುಂ, ಕುಡುವ ಪೊ[ೞ್ತ]ಱೊಳ್ ಮೇರುವೆ ಮುಂದೆ ಇರೆಯುಂ, ಬೀರದ ಬಿಯದ ಅಂತರಕ್ಕೆ ಕಿಱಿದು ಎಂದು ಚಿಂತಿಪಂ ಪ್ರಿಯಗಳ್ಳಂ.)
‘ಪ್ರಿಯಗಳ್ಳ’ನೆಂಬ ಬಿರುದು ಪಡೆದ ಅರಿಕೇಸರಿಯು ಯುದ್ಧದಲ್ಲಿ ಮೂರುಲೋಕವೇ ಎದುರಾದರೂ ‘ನನ್ನ ಸಾಮರ್ಥ್ಯಕ್ಕೆ ಈ ಸೈನ್ಯವೊಂದು ಲೆಕ್ಕವೆ?’ ಎಂದುಕೊಳ್ಳುತ್ತಾನೆ. ದಾನ ಕೊಡಲು ನಿಂತಾಗ ಮೇರು ಪರ್ವತದಷ್ಟು ಬಂಗಾರವಿದ್ದರೂ ‘ಇದೇನು ಇಷ್ಟು ಕಡಿಮೆ ದಾನ ಮಾಡುವುದೆ?’ ಎಂದುಕೊಳ್ಳುತ್ತಾನೆ.
ಕಂ|| ಸಮನೆನಿಸುವ[ರ್] ಪ್ರಶಸ್ತಿ |
     ಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚ[ಮಹಾ] ಶ |
     ಬ್ದ ಮಹಾಸಾಮಂತರೆನಲ್ |
     ಸಮನೆನಿಪರೆ ಗುಣದೊಳರಿಗನೊಳ್ ಸಾಮಂತರ್ ||೪೯||
(ಸಮನೆನಿಸುವ[ರ್] ಪ್ರಶಸ್ತಿ ಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚ[ಮಹಾ] ಶಬ್ದ ಮಹಾಸಾಮಂತರ್  ಎನಲ್, ಸಮನೆನಿಪರೆ ಗುಣದೊಳ್  ಅರಿಗನೊಳ್ ಸಾಮಂತರ್?)
ಬಿರುದಾವಳಿಗಳನ್ನು ಹೇಳುವ ಕ್ರಮದಲ್ಲಿ, ಶಿಷ್ಟಾಚಾರದ ಪ್ರಕಾರ ಕೊಡುವ ಮರ್ಯಾದೆಯ ವಿಷಯದಲ್ಲಿ ಅರಿಕೇಸರಿಗೆ ಸಮಾನರಾದ ಎಷ್ಟೋ ಸಾಮಂತರು ಇರಬಹುದು. ಆದರೆ, ಗುಣದಲ್ಲಿ ಅರಿಕೇಸರಿಗೆ ಸಮಾನರಾದವರು ಯಾರಾದರೂ ಇದ್ದಾರೆಯೆ?
ಉ|| ಚಾಗದ ಕಂಬಮಂ ನಿಱಿಸಿ ಬೀರದ ಶಾಸನಮಂ ನೆಗೞ್ಚಿ ಕೋ |
     ಳ್ಪೋಗದ ಮಂಡಲಂಗಳನೆ ಕೊಂಡು ಜಗತ್ರಿತಯಂಗಳೊಳ್ ಜಸ ||
     ಕ್ಕಾಗರಮಾದ ಬದ್ದೆಗನಿನಾ ನರಸಿಂಹನಿನತ್ತ ನಾಲ್ವೆರಲ್ |
     ಮೇಗು ಪೊದೞ್ದ ಚಾಗದೊಳಮೊಂದಿದ ಬೀರದೊಳಂ ಗುಣಾರ್ಣವಂ ||೫೦||
(ಚಾಗದ ಕಂಬಮಂ ನಿಱಿಸಿ, ಬೀರದ ಶಾಸನಮಂ ನೆಗೞ್ಚಿ, ಕೋಳ್ಪೋಗದ ಮಂಡಲಂಗಳನೆ ಕೊಂಡು, ಜಗತ್ರಿತಯಂಗಳೊಳ್ ಜಸಕ್ಕೆ ಆಗರಮಾದ ಬದ್ದೆಗನಿನ್, ಆ ನರಸಿಂಹನಿನ್ ಅತ್ತ ನಾಲ್ವೆರಲ್ ಮೇಗು, ಪೊದಳ್ದ ಚಾಗದೊಳಂ ಒಂದಿದ ಬೀರದೊಳಂ ಗುಣಾರ್ಣವಂ.)
ಅರಿಕೇಸರಿಯ ಹಿರಿಯರಾದ ಬದ್ದೆಗ ಮತ್ತು ನರಸಿಂಹರು ತಾವು ನೀಡಿದ ದಾನಗಳ ಕುರಿತಾದ ಕಂಬಗಳನ್ನು ಕೆತ್ತಿಸಿ ನೆಡಿಸಿದರು; ತಮ್ಮ ಶೌರ್ಯದ ಕುರಿತಾಗಿ ಶಾಸನಗಳನ್ನು ಮಾಡಿಸಿದರು; ವಶಪಡಿಸಿಕೊಳ್ಳಲು ಅಸಾಧ್ಯ ಎಂಬಂಥ ರಾಜ್ಯಗಳನ್ನು ವಶಪಡಿಸಿಕೊಂಡರು. ಹೀಗೆ ಅವರು ಮೂರುಲೋಕಗಳಲ್ಲಿಯೂ ಕೀರ್ತಿವಂತರಾಗಿದ್ದರು. ಆದರೆ ಗುಣಾರ್ಣವನಾದ ಅರಿಕೇಸರಿಯು ನೀಡಿದ ದಾನಗಳೂ, ತೋರಿಸಿದ ಶೌರ್ಯವೂ ಅವರುಗಳಿಗಿಂತ ನಾಲ್ಕು ಬೆರಳು ಮೇಲೆ ಎನ್ನುವಂತಿತ್ತು.
ಮ||ಸ್ರ|| ಎನೆ ಸಂದುಂ ವೀರ ವೈರಿ ಕ್ಷಿತಿಪ ಗಜ ಘಟಾಟೋಪ ಕುಂಭಸ್ಥಳೀ ಭೇ |
     ದನನುಗ್ರೋ[ದ್ಘಾ]ಸಿ ಭಾಸ್ವದ್ಭುಜ ಪರಿಘನನಾರೂಢ ಸರ್ವಜ್ಞನಂ ವೈ ||
     ರಿ ನರೇಂದ್ರೋದ್ದಾಮ ದರ್ಪೋದ್ದಳನನನೆ ಕಥಾನಾಯಕಂ ಮಾಡಿ ಸಂದ|
     ರ್ಜುನನೊಳ್ ಪೋಲ್ವೀ ಕಥಾಭಿತ್ತಿಯನನುನಯದಿಂ ಪೇೞಲೆಂದೆತ್ತಿಕೊಂಡೆಂ ||೫೧||
(ಎನೆ ಸಂದುಂ, ವೀರ ವೈರಿ ಕ್ಷಿತಿಪ ಗಜ ಘಟಾಟೋಪ ಕುಂಭಸ್ಥಳೀ ಭೇದನನ್, ಉಗ್ರೋ[ದ್ಘಾ]ಸಿ ಭಾಸ್ವದ್ಭುಜ ಪರಿಘನನ್, ಆರೂಢ ಸರ್ವಜ್ಞನಂ, ವೈರಿ ನರೇಂದ್ರೋದ್ದಾಮ ದರ್ಪೋದ್ದಳನನನೆ ಕಥಾನಾಯಕಂ ಮಾಡಿ, ಸಂದ ಅರ್ಜುನನೊಳ್ ಪೋಲ್ವ ಈ ಕಥಾಭಿತ್ತಿಯನ್ ಅನುನಯದಿಂ ಪೇೞಲೆಂದು  ಎತ್ತಿಕೊಂಡೆಂ.)
ಅರಿಕೇಸರಿಯು ಹೀಗೆ ಪ್ರಸಿದ್ಧನಾದವನು. ಜೊತೆಗೇ ಅವನು ಶತ್ರುರಾಜರ ಆನೆಗಳ ಕುಂಭಸ್ಥಳಗಳನ್ನು ಸೀಳಬಲ್ಲವನು. ಕೈಯಲ್ಲಿ ಭಯಂಕರವಾದ ಕತ್ತಿಯನ್ನು ಹಿಡಿದವನು; ಕಬ್ಬಿಣದ ಒನಕೆಯಂಥ ತೋಳುಗಳನ್ನು ಹೊಂದಿದವನು; ಆರೂಢ ಸರ್ವಜ್ಞ ಎಂಬ ಬಿರುದನ್ನು ಪಡೆದವನು; ವೈರಿರಾಜರ ಅತಿಶಯವಾದ ಸೊಕ್ಕನ್ನು ಭೇದಿಸುವವನು. ಅಂಥ ಅರಿಕೇಸರಿಯನ್ನು ಕಥಾನಾಯಕನನ್ನಾಗಿ ಮಾಡಿ, ಪ್ರಖ್ಯಾತನಾದ ಅರ್ಜುನನೊಂದಿಗೆ ಹೋಲಿಸಿ ಈ ಕಥೆಯನ್ನು  ಹೇಳಬೇಕೆಂದು ಎತ್ತಿಕೊಂಡಿದ್ದೇನೆ.
ವ|| ಅದೆಂತೆನೆ ಸ[ಮುನ್ಮಿಷ]ದ್ವಿವಿಧ ರತ್ನಮಾಲಾ ಪ್ರಭಾಭೀಲಾರುಣ ಜಲಪ್ಲ[ವಾ]ವಿಳ  ವಿಳೋಳವೀಚೀ ರಯ ಪ್ರದಾರಿತ ಕುಳಾಚಲೋದಧಿ ಪರೀತಮಾಗಿರ್ದ ಜಂಬೂದ್ವೀಪದೊಳಗುಂಟು ನಾಡು ಕುರುಜಾಂಗಣ ನಾಮದಿಂ ಅಂತಾ ಕುರುಜಾಂಗಣ ವಿಷಯದೊಳ್
(ಅದು ಎಂತು ಎನೆ ಸಮುನ್ಮಿಷತ್ ವಿವಿಧ ರತ್ನಮಾಲಾ ಪ್ರಭಾಭಿದ್ ಅರುಣ ಜಲಪ್ಲವ ಆವಿಳ ವಿಳೋಳ ವೀಚೀ ರಯ ಪ್ರದಾರಿತ ಕುಳಾಚಲ ಉದಧಿ ಪರೀತಂ ಆಗಿರ್ದ ಜಂಬೂದ್ವಿಪದ ಒಳಗೆ ಉಂಟು ನಾಡು ಕುರುಜಾಂಗಣ ನಾಮದಿಂ ಅಂತು ಆ ಕುರುಜಾಂಗಣ ವಿಷಯದೊಳ್)
ಅದು ಹೇಗೆಂದರೆ, ಜಂಬೂದ್ವೀಪವನ್ನು ಸುತ್ತುವರಿದ ಕಡಲು ಹೇಗಿದೆ ಗೊತ್ತೆ? ಆ ಕಡಲಿನ ತಳದಲ್ಲಿ ಬಗೆಬಗೆಯಾದ ರತ್ನಗಳು ಹೊಳೆಯುತ್ತಿವೆ. ಅವುಗಳಿಂದ ಹೊಮ್ಮಿದ ಕಾಂತಿ ಕಡಲ ನೀರನ್ನು ಕೆಂಪಾಗಿಸಿದೆ. ಆ ನೀರು ಅಲೆಗಳ ವೇಗಕ್ಕೆ ಸೀಳಿ ಹೋಗಿ ನಿಂತಲ್ಲಿ ನಿಲ್ಲದೆ ಕುಲಪರ್ವತಗಳೊಂದಿಗೆ ಹೊಯ್ದಾಡುತ್ತಿದೆ. ಸುತ್ತಲೂ ಇಂಥ ಕಡಲಿರುವ ಜಂಬೂದ್ವೀಪದಲ್ಲಿ ಕುರುಜಾಂಗಣ ಎಂಬ ನಾಡು ಇದೆ. ಆ ಕುರುಜಾಂಗಣವೆಂಬ ನಾಡಿನಲ್ಲಿ-
ಚಂ|| ಜಲಜಲನೊ[ೞ್ಕು]ತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೈ |
     ದಿಲ ಪೊಸವೂ ಪೊದೞ್ದ ಪೊಸ ನೈದಿಲ ಕಂಪನೆ ಬೀಱಿ ಕಾಯ್ತ ಕೆಂ ||
     ಗೊಲೆಯೊಳೆ ಜೋಲ್ವ ಶಾಳಿ [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ ಕೆ |
     ಯ್ವೊಲಗಳಿನೊಪ್ಪಿ ತೋ[ಱಿ] ಸಿರಿ ನೋಡುಗುಮಾ ವಿಷಯಾಂತರಾಳದೊಳ್ ||೫೨||
(ಜಲಜಲನೆ ಒೞ್ಕುತಿರ್ಪ ಪರಿಕಾಲ್, ಪರಿಕಾಲೊಳ್ ಅಳುರ್ಕೆಗೊಂಡ ನೈದಿಲ ಪೊಸವೂ, ಪೊದೞ್ದ ಪೊಸ ನೈದಿಲ ಕಂಪನೆ ಬೀಱಿ ಕಾಯ್ತ ಕೆಂಗೊಲೆಯೊಳೆ ಜೋಲ್ವ ಶಾಳಿ, ನವಶಾಳಿಗೆ ಪಾಯ್ವ ಶುಕಾಳಿ ತೋಱೆ, ಕೆಯ್ವೊಲಗಳಿನ್ ಒಪ್ಪಿ ತೋಱಿ ಸಿರಿ ನೋಡುಗುಂ ಆ ವಿಷಯಾಂತರಾಳದೊಳ್.)
ಜುಳು ಜುಳು ಶಬ್ದ ಮಾಡುತ್ತಾ ನೀರು ತುಂಬಿ ಹರಿಯುತ್ತಿರುವ ಕಾಲುವೆಗಳು, ಆ ಕಾಲುವೆಗಳ ತುಂಬ ಹರಡಿಕೊಂಡಿರುವ ಹೊಸ ನೈದಿಲೆಯ ಹೂಗಳು, ಆ ಹೂಗಳ ಕಂಪನ್ನೇ ತಾವೂ ಬೀರುತ್ತಾ ಜೋತಾಡುತ್ತಿರುವ ಬತ್ತದ ಕೆಂಪು ತೆನೆಗಳು, ಆ ಕೆಂಪುತೆನೆಗಳಿಗೆ ಹಾರಿ ಬಂದು ದಾಳಿ ಇಡುವ ಗಿಣಿಗಳ ಗುಂಪು – ಇಂಥ ಫಲಭರಿತ ಗದ್ದೆಗಳಿಂದ ಕೂಡಿ, ಆ ಸಿರಿವಂತ ದೇಶವು ಮನೋಹರವಾಗಿ ಕಾಣುತ್ತದೆ.
ಚಂ|| ಬೆಳೆದೆಱಗಿರ್ದ ಕೆಯ್ವೊಲನೆ ಕೆಯ್ವೊಲನಂ ಬಳಸಿರ್ದ ಪೂತ ಪೂ |
     ಗೊಳಗಳೆ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾ ||
     ವಳಿಗಳೆ ನಂದನಾವಳಿಗಳಂ ಬಳಸಿರ್ದ ಮದಾಳಿ ಸಂಕುಲಂ |
     ಗಳೆ ವಿಷಯಾಂಗನಾ ಲುಳಿತ ಕುಂತಳದಂತೆವೊಲೊಪ್ಪಿ ತೋಱುಗುಂ ||೫೩||
(ಬೆಳೆದು ಎಱಗಿರ್ದ ಕೆಯ್ವೊಲನೆ, ಕೆಯ್ವೊಲನಂ ಬಳಸಿರ್ದ ಪೂತ ಪೂಗೊಳಗಳೆ, ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾವಳಿಗಳೆ, ನಂದನಾವಳಿಗಳಂ ಬಳಸಿರ್ದ ಮದಾಳಿ ಸಂಕುಲಂಗಳೆ ವಿಷಯಾಂಗನಾ ಲುಳಿತ ಕುಂತಳದಂತೆವೊಲ್ ಒಪ್ಪಿ ತೋಱುಗುಂ.)
ಬೆಳೆದು ಬಾಗಿದ ಭತ್ತದ ಗದ್ದೆಗಳು; ಆ ಗದ್ದೆಗಳನ್ನು ಸುತ್ತುವರಿದ ಹೂ ತುಂಬಿದ ಕೊಳಗಳು; ಆ ಹೂಗೊಳಗಳನ್ನು ಬಳಸಿದ್ದ ಬಗೆಬಗೆಯ ತೋಟಗಳು; ಆ ತೋಟಗಳನ್ನು ಬಳಸಿದ್ದ ದುಂಬಿಗಳ ಸಮೂಹ – ಇವೆಲ್ಲವೂ ಒಟ್ಟಾಗಿ ಆದ ದೃಶ್ಯವು ಆ ದೇಶವೆಂಬ ಹೆಣ್ಣಿನ ಗುಂಗುರುಕೂದಲಿನಂತೆ ತೋರುತ್ತದೆ.
ಚಂ|| ಲಳಿತ ವಿಚಿತ್ರ ಪತ್ರ ಫಲ ಪುಷ್ಪಯುತಾಟವಿ ಸೊರ್ಕಿದಾನೆಯಂ |
     ಬೆಳೆವುದು [ದೇ]ವ ಮಾತೃಕಮೆನಿಪ್ಪ ಪೊಲಂ ನವ ಗಂಧಶಾಳಿಯಂ ||
     ಬೆಳೆವುದು ರಮ್ಯ ನಂದನ ವನಾಳಿ ವಿಯೋಗಿ ಜನಕ್ಕೆ ಬೇಟಮಂ |
     ಬಳೆವುದು ನಾಡ ಕಾಡ ಬೆಳಸಿಂಬೆಳಸಾ ವಿಷಯಾಂತರಾಳದೊಳ್ ||೫೪||
(ಲಳಿತ ವಿಚಿತ್ರ ಪತ್ರ ಫಲ ಪುಷ್ಪಯುತ ಅಟವಿ ಸೊರ್ಕಿದ ಆನೆಯಂ ಬೆಳೆವುದು, [ದೇ]ವ ಮಾತೃಕಂ ಎನಿಪ್ಪ ಪೊಲಂ ನವ ಗಂಧಶಾಳಿಯಂ ಬೆಳೆವುದು, ರಮ್ಯ ನಂದನ ವನಾಳಿ ವಿಯೋಗಿ ಜನಕ್ಕೆ ಬೇಟಮಂ      ಬಳೆವುದು, ನಾಡ ಕಾಡ ಬೆಳಸು ಇಂಬೆಳಸು ಆ ವಿಷಯಾಂತರಾಳದೊಳ್.)
ಆ ಕುರುಜಾಂಗಣದಲ್ಲಿರುವ ಸುಂದರವಾದ, ವಿಚಿತ್ರವಾದ, ಎಲೆ, ಹಣ್ಣು, ಹೂವುಗಳಿಂದ ಕೂಡಿದ ಅಡವಿಯು ಸೊಕ್ಕಿದ ಆನೆಯನ್ನು ಬೆಳೆಯುತ್ತದೆ. ಗದ್ದೆಗಳು ಸಹಜವಾಗಿ ಬೀಳುವ ಮಳೆಯಿಂದಲೇ ಪರಿಮಳಭರಿತ ಬತ್ತವನ್ನು ಬೆಳೆಯುತ್ತವೆ. ಸುಂದರವಾದ ಹೂತೋಟಗಳು ವಿರಹಿಗಳಲ್ಲಿ ಪ್ರಣಯದ ಬಯಕೆಯನ್ನು ಬೆಳೆಯುತ್ತವೆ. ಹೀಗೆ ಆ ನಾಡಿನಲ್ಲಿಯೂ, ಕಾಡಿನಲ್ಲಿಯೂ ಬೆಳೆದದ್ದೆಲ್ಲ ಸುಮಧುರವಾಗಿರುತ್ತದೆ.
ದೇವತೆಗಳು ಸುರಿಸುವ ಮಳೆಯಿಂದಲೇ ಬೆಳೆವ ಭೂಮಿ – ದೇವಮಾತೃಕ –ಡಿ ಎಲ್ ಎನ್
ಕಂ|| ಆವಲರುಂ ಪಣ್ಣುಂ ಬೀ |
     ತೋವವು ಗಡ ಬೀಯವಲ್ಲಿ ಮಲ್ಲಿಗೆಗಳುಮಿ||
     ಮ್ಮಾವುಗಳುಮೆಂದೊಡಿಂಪೆಱ |
     ತಾವುದು ಸಂಸಾರ ಸಾರ ಸರ್ವಸ್ವಫಲಂ ||೫೫||
(ಆವ ಅಲರುಂ ಪಣ್ಣುಂ ಬೀತು ಓವವು ಗಡ, ಬೀಯವಲ್ಲಿ ಮಲ್ಲಿಗೆಗಳುಂ ಇಮ್ಮಾವುಗಳುಂ ಎಂದೊಡೆ, ಇನ್ ಪೆಱತು ಆವುದು ಸಂಸಾರ ಸಾರ ಸರ್ವಸ್ವಫಲಂ?)
ಯಾವುದೇ ಹೂವಾಗಲಿ, ಹಣ್ಣಾಗಲಿ, ಅದರದರ ಋತುವಿನಲ್ಲಿ ಮಾತ್ರ ಆಗುವುದು ಪ್ರಕೃತಿ ನಿಯಮ. ಹಾಗಾಗಿ ಅವು ಎಲ್ಲ ಕಾಲದಲ್ಲಿಯೂ ಜನರಿಗೆ ಸಂತೋಷವನ್ನು ಕೊಡಲಾರವು. ಆದರೆ ಕುರುಜಾಂಗಣದಲ್ಲಿ ಮಲ್ಲಿಗೆ ಹೂವೂ, ಮಾವಿನ ಹಣ್ಣೂ ಎಲ್ಲ ಕಾಲದಲ್ಲಿಯೂ ದೊರೆಯುತ್ತದೆ. ಇದಲ್ಲವೆ ಸಂಸಾರ ಸಾರ ಸರ್ವಸ್ವ ಫಲ?
ಕಂ|| ಮಿಡಿದೊಡೆ ತನಿಗ[ರ್ವು] ರಸಂ |
     ಬಿಡುವುವು ಬಿರಿದೊಂದು ಮುಗುಳ ಕಂಪಿನೊಳೆ ಮೊಗಂ ||
     ಗಿಡುವುವು ತುಂಬಿಗಳೞ್ಕಮೆ |
     ವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್ ||೫೬||
(ಮಿಡಿದೊಡೆ ತನಿಗರ್ವು ರಸಂ ಬಿಡುವುವು, ಬಿರಿದೊಂದು ಮುಗುಳ ಕಂಪಿನೊಳೆ ಮೊಗಂಗಿಡುವುವು ತುಂಬಿಗಳ್, ಅೞ್ಕಮೆವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್.)
ಸುಮ್ಮನೆ ಹಾಗೆ ಮಿಡಿದರೆ ಸಾಕು ಅಲ್ಲಿನ ಕಬ್ಬುಗಳು ರಸವನ್ನು ಸುರಿಸುತ್ತವೆ; ಬಿರಿದ ಒಂದೇ ಒಂದು ಮೊಗ್ಗಿನ ಪರಿಮಳವನ್ನು ಉಂಡು ದುಂಬಿ ತೃಪ್ತಿಯಿಂದ ಮುಖ ತಿರುಗಿಸುತ್ತದೆ; ಒಂದೇ ಒಂದು ಹಣ್ಣಿನ ರಸ ಹೀರುವಷ್ಟರಲ್ಲಿ ಗಿಣಿಗಳಿಗೆ ಅಜೀರ್ಣವಾಗುತ್ತದೆ!
ಕಂ|| ಸುತ್ತಿಱಿದ ರಸದ ತೊಱೆಗಳೆ |
     ಮುತ್ತಿನ ಮಾಣಿಕದ ಪಲವುಮಾಗರಮೆ ಮದೋ ||
     ನ್ಮತ್ತ ಮದಕರಿ ವನಂಗ[ಳೆ] |
     ಸುತ್ತಲುಮಾ ನೆಲದ ಸಿರಿಯನೇನಂ ಪೊಗೞ್ವೆಂ ||೫೭||
(ಸುತ್ತಿಱಿದ ರಸದ ತೊಱೆಗಳೆ, ಮುತ್ತಿನ, ಮಾಣಿಕದ ಪಲವುಂ ಆಗರಮೆ, ಮದೋನ್ಮತ್ತ ಮದಕರಿ ವನಂಗಳೆ ಸುತ್ತಲುಂ, ಆ ನೆಲದ ಸಿರಿಯನ್ ಏನಂ ಪೊಗೞ್ವೆಂ?)
(ಆ ನಾಡಿನಲ್ಲಿ) ಎಲ್ಲಿ ಕಂಡರೂ ಸಿದ್ಧರಸದ ತೊರೆಗಳು ಹರಿಯುತ್ತವೆ. ಮುತ್ತುರತ್ನಗಳಿಂದ ಸಿಂಗಾರಗೊಂಡ ಭವನಗಳಿವೆ. ಮದದಾನೆಗಳಿಂದ ತುಂಬಿರುವ ಕಾಡುಗಳಿವೆ. ಇಂಥ ನಾಡಿನ ಸಂಪತ್ತನ್ನು ಏನೆಂದು ತಾನೇ ವರ್ಣಿಸಲಿ?
ವ|| ಅಂತು ಸೊಗಯಿಸುವ ಕುರುಜಾಂಗಣ ವಿಷಯಕ್ಕೆ ರಾಜದ್ರಾಜಧಾನಿಯಾಗಿ[ರ್ದು] ಹರ ಜಟಾಜೂಟಕ್ಕೆ ಚಂದ್ರಲೇಖೆಯಿರ್ಪಂ[ತೆ] ದಿಕ್ಕರಿಕಟ ತಟಕ್ಕೆ ಮದಲೇಖೆ[ಯಿರ್ಪಂ]ತೆ ಕೈಟಭಾರಾತಿಯ ವಿಶಾಲೋರಸ್ಥಳಕ್ಕೆ ಕೌಸ್ತುಭಮಿರ್ಪಂತೆ ಸೊಗಯಿಸುತಿರ್ದುದು ಹಸ್ತಿನಪುರಮೆಂಬುದು ಪೊೞಲಲ್ಲಿ –
(ಅಂತು ಸೊಗಯಿಸುವ ಕುರುಜಾಂಗಣ ವಿಷಯಕ್ಕೆ ರಾಜದ್ ರಾಜಧಾನಿಯಾಗಿರ್ದು, ಹರ ಜಟಾಜೂಟಕ್ಕೆ ಚಂದ್ರಲೇಖೆ ಇರ್ಪಂತೆ, ದಿಕ್ಕರಿಕಟ ತಟಕ್ಕೆ ಮದಲೇಖೆ ಇರ್ಪಂತೆ, ಕೈಟಭಾರಾತಿಯ ವಿಶಾಲೋರಸ್ಥಳಕ್ಕೆ ಕೌಸ್ತುಭಂ ಇರ್ಪಂತೆ ಸೊಗಯಿಸುತಿರ್ದುದು ಹಸ್ತಿನಪುರಂ ಎಂಬುದು ಪೊೞಲ್,  ಅಲ್ಲಿ-)
ಹೀಗೆ ಸೊಗಸಾಗಿ ಕಾಣುವ ಕುರುಜಾಂಗಣದ ರಾಜಧಾನಿ ಹಸ್ತಿನಾಪುರ. ಅದು ಶಿವನ ಜಟೆಯಲ್ಲಿ ಹೊಳೆಯುವ ಚಂದ್ರಲೇಖೆಯಂತೆ, ದಿಕ್ಕರಿಯ ಗಂಡಸ್ಥಲದಲ್ಲಿರುವ ಮದಲೇಖೆಯಂತೆ, ವಿಷ್ಣುವಿನ ಎದೆಯ ಮೇಲಿರುವ ಕೌಸ್ತುಭದಂತೆ ಮೆರೆಯುತ್ತಿದೆ. ಆ ಹಸ್ತಿನಾಪುರದಲ್ಲಿ -
ರಗಳೆ|| ಅದಱ ಪೊಱವೊಳಲ ವಿಶಾಳ ಕನಕ ಕೃತಕ ಗಿರಿಗಳಿಂ ಫಳ[ಪ್ರಕೀರ್ಣ] ತರುಗಳಿಂ |
     ನನೆಯ ಕೊನೆಯ ತಳಿರ ಮುಗುಳ ವನಲತಾ ನಿಕುಂಜದಿಂ ಪ್ರಸೂನ ರಜದ ಪುಂಜದಿಂ |
     ಗಗನ ತಳಮೆ ಪಱಿದು ಬಿೞ್ದುದೆನಿಪ ಬಹು ತಟಾಕದಿಂ ಕುಕಿಲ್ವ ನಲಿವ ಕೋಕದಿಂ |
     ಸುರಿವ ಸುರಯಿಯರಲ ಮುಗುಳ್ಗೆ ಮೊಗಸಿದಳಿ ಕುಳಂಗಳಿಂ ತೊದ[ಲ್ವ] ಶಿಶುಶುಕಂಗಳಿಂ |
     ತೆಗೆಯೆ ಬೀರ ರವದೆ ಮೇಲೆ ಪರಿವ ಮದಗಜಂಗಳಿಂ ಚಳತ್ತುರಂಗಮಂಗಳಿಂ |
     ಲವಣ ಜಳಧಿ ಬಳಸಿದಂತೆ ಬಳಸಿದಗೞ ನೀಳದಿಂದುಗ್ರ ಕನಕ ಶಾಳದಿಂ |
     ದೊಳಗೆ ಕುಲನಗಂಗಳೆನಿಪ ದೇವಕುಲದ ಭೋಗದಿಂ ಸರಾಗಮಾದ ರಾಗದಿಂ |
     ದಿವಮನೇಳಿಪಂತು ಮಿಳಿರ್ವ ವಿವಿಧ ಕೇತನಂಗಳಿಂ ಸದಾನಿ ಕೇತನಂಗಳಿಂ |
     ಧನದ ಭವನಮೆನಿಪ ಸಿರಿಯ ಬಚ್ಚರಾಪಣಂಗಳಿಂ ಪೊದೞ್ದ [ಕಾವ]ಣಂಗಳಿಂ |
     ವಿಟಜನಕ್ಕೆ ತೊಡರ್ವ ಚಾರಿಯೆನಿಪ ಸೂಳೆಗೇರಿಯಿಂ ವಿದಗ್ಧ ಹೃದಯಹಾರಿಯಿಂ |
     ಕನಕ ಗೋಪುರಂಗಳೊಳಗಣೆರಡು ದೆಸೆಯ ಗುಣಣೆಯಿಂ ವಿಳಾಸಿನಿಯರ ಗಡಣೆಯಿಂ |
     ಸುರತಸುಖದ ಬಳ್ಳವಳ್ಳಿಯೆನಿಪ ಬಳ್ಳಿಮಾಡದಿಂ ಮಹಾವಿನೋದ ನೀಡದಿಂ |
     ಕನಕಶೈಲಮೆನಿಸಿ ನೆಗೞ್ದ ಭೂಮಿಪಾಲ ಭವನದಿಂ ಸಮಸ್ತ ವಸ್ತು ಭುವನದಿಂ ||೫೮||

(ಅದಱ ಪೊಱವೊಳಲ ವಿಶಾಳ ಕನಕ ಕೃತಕ ಗಿರಿಗಳಿಂ, ಫಳಪ್ರಕೀರ್ಣ ತರುಗಳಿಂ |
     ನನೆಯ ಕೊನೆಯ ತಳಿರ ಮುಗುಳ ವನಲತಾ ನಿಕುಂಜದಿಂ, ಪ್ರಸೂನ ರಜದ ಪುಂಜದಿಂ |
     ಗಗನ ತಳಮೆ ಪಱಿದು ಬಿೞ್ದುದು ಎನಿಪ ಬಹು ತಟಾಕದಿಂ, ಕುಕಿಲ್ವ ನಲಿವ ಕೋಕದಿಂ |
     ಸುರಿವ ಸುರಯಿಯ ಅರಲ ಮುಗುಳ್ಗೆ ಮೊಗಸಿದ ಅಳಿ ಕುಳಂಗಳಿಂ, ತೊದಲ್ವ ಶಿಶು ಶುಕಂಗಳಿಂ |
     ತೆಗೆಯೆ ಬೀರ ರವದೆ ಮೇಲೆ ಪರಿವ ಮದಗಜಂಗಳಿಂ ಚಳತ್ತುರಂಗಮಂಗಳಿಂ |
     ಲವಣ ಜಳಧಿ ಬಳಸಿದಂತೆ ಬಳಸಿದ ಅಗೞ ನೀಳದಿಂ, ಉದಗ್ರ ಕನಕ ಶಾಳದಿಂ |
     ಒಳಗೆ ಕುಲನಗಂಗಳ್ ಎನಿಪ ದೇವಕುಲದ ಭೋಗದಿಂ, ಸರಾಗಮಾದ ರಾಗದಿಂ |
     ದಿವಮನ್ ಏಳಿಪಂತು ಮಿಳಿರ್ವ ವಿವಿಧ ಕೇತನಂಗಳಿಂ, ಸದಾನಿ ಕೇತನಂಗಳಿಂ |
     ಧನದ ಭವನಂ ಎನಿಪ ಸಿರಿಯ ಬಚ್ಚರ ಆಪಣಂಗಳಿಂ, ಪೊದೞ್ದ ಕಾವಣಂಗಳಿಂ |
     ವಿಟಜನಕ್ಕೆ ತೊಡರ್ವ ಚಾರಿಯೆನಿಪ ಸೂಳೆಗೇರಿಯಿಂ, ವಿದಗ್ಧ ಹೃದಯಹಾರಿಯಿಂ |
     ಕನಕ ಗೋಪುರಂಗಳ ಒಳಗಣ ಎರಡು ದೆಸೆಯ ಗುಣಣೆಯಿಂ, ವಿಳಾಸಿನಿಯರ ಗಡಣೆಯಿಂ |
     ಸುರತಸುಖದ ಬಳ್ಳವಳ್ಳಿ ಎನಿಪ ಬಳ್ಳಿಮಾಡದಿಂ ಮಹಾವಿನೋದ ನೀಡದಿಂ |

     ಕನಕಶೈಲಂ ಎನಿಸಿ ನೆಗೞ್ದ ಭೂಮಿಪಾಲ ಭವನದಿಂ ಸಮಸ್ತ ವಸ್ತು ಭುವನದಿಂ)
ಹೊರಸುತ್ತಿನಲ್ಲಿ ವಿಶಾಲವಾದ ಕೃತಕ ಬಂಗಾರದ ಬೆಟ್ಟಗಳು; ಹಣ್ಣು ತುಂಬಿದ ಮರಗಳು; ಮೊಗ್ಗು, ಹೂವು, ಚಿಗುರುಗಳಿರುವ ಕಾಡುಬಳ್ಳಿ ಹಬ್ಬಿಸಿದ ಬಳ್ಳಿಮಾಡಗಳು; ಹೂವಿನ ಪರಾಗದ ರಾಶಿ; ಆಕಾಶವೇ ಹರಿದು ಬಿದ್ದಂತೆ ಕಾಣುವ ಹಲವಾರು ಕೊಳಗಳು; ಹಾಡುವ, ಕುಣಿಯುವ ಚಕ್ರವಾಕಗಳು. ರಾಶಿ ರಾಶಿ ಸುರಿದಿರುವ ಸುರಗಿಯ ಮೊಗ್ಗಿಗೆ ಮುತ್ತಿಕೊಂಡ ಜೇನ್ನೊಣಗಳು; ತೊದಲುಲಿಯುವ ಮರಿಗಿಳಿಗಳು; ಕಟ್ಟು ಬಿಚ್ಚಿದರೆ ಜೋರಾಗಿ ಘೀಳಿಡುತ್ತಾ ಮೇಲೇರಿ ಹೋಗುವ ಆನೆಗಳು; ಪುಟಿಯುವ ಕುದುರೆಗಳು; ಕಡಲೇ ಬಳಸಿದೆಯೋ ಎಂಬಂತೆ ವಿಶಾಲವಾದ ಕಂದಕಗಳಿಂದ ಸುತ್ತುವರಿದ ಎತ್ತರವಾದ ಬಂಗಾರದ ಕೋಟೆಗೋಡೆಗಳು; ಅದರೊಳಗೆ ಕುಲಪರ್ವತಗಳಂತಿರುವ ದೇಗುಲಗಳು; ಅಲ್ಲಿಂದ ಕೇಳಿಬರುವ ರಾಗವಾದ ಸಂಗೀತ; ಆಕಾಶವನ್ನು ಅಣಕಿಸುವಂತೆ ಅಲುಗಾಡುವ ಬಗೆಬಗೆಯ ಬಾವುಟಗಳು; ದಾನ ಕೊಡುವವರ ಮನೆಗಳು; ಸಂಪತ್ತು ಮೈವೆತ್ತಂತಿರುವ ಶ್ರೀಮಂತ ವ್ಯಾಪಾರಿಗಳ ಅಂಗಡಿಗಳು; ವಿಶಾಲವಾದ ಚಪ್ಪರಗಳು; ವಿಟಜನರ ಕಾಲಿಗೆ ತೊಡರುವ ಸರಪಳಿಗಳಂತಿರುವ, ಜಾಣರನ್ನೂ ಸೆಳೆಯುವ ಸೂಳೆಗೇರಿಗಳು; ಕನಕಗೋಪುರಗಳ ಒಳಗೆ ಎರಡು ಪಕ್ಕಗಳಲ್ಲಿಯೂ ಇರುವ ನರ್ತನಶಾಲೆಗಳು; ವಿಲಾಸಿ ಸ್ತ್ರೀಯರ ಗುಂಪುಗಳು; ಸಂಭೋಗಸುಖವು ತುಂಬಿ ಹರಿಯುವ ಬಳ್ಳಿಮಾಡಗಳು; ಭಾರೀ ಭೋಗದ ಗೂಡುಗಳು; ಬಂಗಾರದ ಬೆಟ್ಟದಂಥ ಅರಮನೆ; ಲೋಕದ ಎಲ್ಲ ವಸ್ತುಗಳ ಭಂಡಾರ.
ವ|| ಅಂತು ಮೂಱು ಲೋಕದ ಚೆಲ್ವೆಲ್ಲಮಂ ವಿಧಾತ್ರನೊಂದೆಡೆಗೆ ತೆರಳ್ಚಿದಂತೆ ಸಮಸ್ತ ವಸ್ತು ವಿಸ್ತಾರ ಹಾರಮಾಗಿರ್ದ ಹಸ್ತಿನಪುರವೆ ನಿಜ ವಂಶಾವಳಂಬಮಾಗೆ ನೆಗೞ್ದ ಭರತ ಕುಲ ತಿಲಕರ ವಂಶಾವತಾರಮೆಂತಾದುದೆಂದೊಡೆ-
(ಅಂತು ಮೂಱು ಲೋಕದ ಚೆಲ್ವೆಲ್ಲಮಂ ವಿಧಾತ್ರನ್ ಒಂದೆಡೆಗೆ ತೆರಳ್ಚಿದಂತೆ, ಸಮಸ್ತ ವಸ್ತು ವಿಸ್ತಾರ ಹಾರಮಾಗಿರ್ದ ಹಸ್ತಿನಪುರವೆ ನಿಜ ವಂಶಾವಳಂಬಂ ಆಗೆ, ನೆಗೞ್ದ ಭರತ ಕುಲ ತಿಲಕರ ವಂಶಾವತಾರಂ ಎಂತಾದುದು ಎಂದೊಡೆ)
ಹೀಗೆ ಮೂರು ಲೋಕದ ಎಲ್ಲ ಚೆಲುವನ್ನೂ ಬ್ರಹ್ಮನು ಒಂದು ಕಡೆ ರಾಶಿ ಹಾಕಿದ್ದಾನೋ ಎಂಬಂತೆ, ಸಮಸ್ತ ವಸ್ತುಗಳಿಂದ ಸುಂದರವಾಗಿ ಕಾಣುತ್ತಿತ್ತು ಹಸ್ತಿನಾಪುರ. ಆ ಹಸ್ತಿನಾಪುರವು ಭರತ ಕುಲ ತಿಲಕರಿಗೆ ಆಶ್ರಯಸ್ಥಾನ. ಆ ಪ್ರಸಿದ್ಧವಾದ ಭರತ ಕುಲವು ಹೇಗೆ ಇಳಿದು ಬಂತೆಂದರೆ: