ಭಾನುವಾರ, ಏಪ್ರಿಲ್ 15, 2012

ರಾಜರೆಂಬರುಮೊಳರೆ?

(ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಶಿವಕೋಟ್ಯಾಚಾರ್ಯ ಎಂಬುವವನು ವಡ್ಡಾರಾಧನೆ ಎಂಬ ಕೃತಿ ರಚಿಸಿದ್ದಾನೆ. ಅದರಲ್ಲಿ ಹಲವಾರು ಕಥೆಗಳಿವೆ. ಸುಕುಮಾರಸ್ವಾಮಿಯ ಕಥೆ ಅವುಗಳಲ್ಲಿ ಒಂದು. ಸುಕುಮಾರ ಸ್ವಾಮಿ ದೊಡ್ಡ ಶ್ರೀಮಂತ. ಒಂದು ದಿನ ಅವನು ಎಂದಿನಂತೆ ತನ್ನ ಮನೆಯ ಮಹಡಿಯಲ್ಲಿ ವಿಶ್ರಮಿಸಿದ್ದ. ಆಗ ದೂತನೊಬ್ಬ ಬಂದು ಅವನಿಗೆ ಹೇಳಿದ. "ಸ್ವಾಮೀ ನಿಮ್ಮನ್ನು ನೋಡಲು ಮಹಾರಾಜರು ಬಂದಿದ್ದಾರೆ. ಅವರನ್ನು ನೋಡಲು ನೀವು ಕೆಳಗೆ ಬರಬೇಕು" ಸುಕುಮಾರಸ್ವಾಮಿ ಆಶ್ಚರ್ಯದಿಂದ ಕೇಳಿದನಂತೆ: ರಾಜರು ಅಂತ ಇರುತ್ತಾರೆಯೆ? (ರಾಜರೆಂಬರುಮೊಳರೆ?)
ಎಂ. ಎಸ್. ಇ. ಜಡ್ ನಂತಹ ದೊಡ್ಡ ದೊಡ್ಡ ಕಂಪೆನಿಗಳೂ ಇಂದು ಸುಕುಮಾರಸ್ವಾಮಿಯ ಹಾಗೆ "ಸರ್ಕಾರ ಅಂತ ಇರುತ್ತದೆಯೆ" ಎಂದು ಕೇಳಿದರೆ ಆಶ್ಚರ್ಯವಿಲ್ಲ ಅಲ್ಲವೆ?)
ಖಾಸಗಿ ಮಾಲಿಕತ್ವದ ಎಂ. ಎಸ್. ಇ. ಜಡ್. ಕಂಪೆನಿಗೆ ನೇತ್ರಾವತಿಯಿಂದ ನೀರೆತ್ತಲು ಅನುಮತಿ ನೀಡುವಾಗ ಸರಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಆ ಪೈಕಿ ಒಂದು ಷರತ್ತಿನ ಪ್ರಕಾರ ನೀರೆತ್ತುವ ಕಾಮಗಾರಿ (ಪೈಪ್ ಲೈನ್ ಅಳವಡಿಕೆ ಇತ್ಯಾದಿ ಕಾಮಗಾರಿಗಳು) ಪ್ರಾರಂಭಿಸುವ ಮೊದಲು ಕಂಪೆನಿ ಸಣ್ಣ ನೀರಾವರಿ ಇಲಾಖೆಯ ಸಂಬಂಧಪಟ್ಟ ಕಾರ್ಯಕಾರಿ ಎಂಜಿನಿಯರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕು. ಕಂಪೆನಿ ನೀರೆತ್ತುವ ಕಾಮಗಾರಿ ಪ್ರಾರಂಭಿಸಿ ಏಳೆಂಟು ತಿಂಗಳುಗಳೇ ಕಳೆದುಹೋಗಿವೆ. ೧೫ ಎಂಜಿಡಿ ನೀರೆತ್ತಲು ೩೦ ಎಂಜಿಡಿ ನೀರೆತ್ತುವ ಸಾಮರ್ಥ್ಯದ ಪೈಪುಗಳನ್ನು ಕಿಲೋಮೀಟರುಗಟ್ಟಳೆ ಅಳವಡಿಸಿಯೂ ಆಗಿದೆ. ಸರಪಾಡಿಯ ಹತ್ತಿರ ನೇತ್ರಾವತಿ ನದಿಯ ದಂಡೆಯಲ್ಲಿ ಜಾಕ್ ವೆಲ್ ಕಾಮಗಾರಿಯನ್ನೂ ಪ್ರಾರಂಭಿಸಿ ಆಗಿದೆ. ಆದರೆ ಅದು ಸಣ್ಣ ನೀರಾವರಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆಯೆ?
ಷರತ್ತಿನಲ್ಲಿ ಹೇಳಲಾದ "ಸಂಬಂಧಪಟ್ಟ" ಕಾರ್ಯಕಾರಿ ಎಂಜಿನಿಯರ್ ಎಂದರೆ ಮಂಗಳೂರಿನ ಸಣ್ಣ ನೀರಾವರಿ ವಿಭಾಗದವರೇ ಎಂದು ನನ್ನಷ್ಟಕ್ಕೆ ನಾನು ಭಾವಿಸಿಕೊಂಡೆ. ಅದಕ್ಕೆ ಕಾರಣ ಇತ್ತು. ಹಿಂದೆ ಎಂ ಆರ್ ಪಿ ಎಲ್ ಸಂಸ್ಥೆಗೆ ನೀರು ನೀಡುವ ಬಗ್ಗೆ ಆದ ಒಪ್ಪಂದಕ್ಕೆ ಮಂಗಳೂರಿನ ಕಾರ್ಯಕಾರಿ ಎಂಜಿನಿಯರರೇ ಸರಕಾರದ ಪರವಾಗಿ ಸಹಿ ಮಾಡಿದ್ದರು. ಹಾಗಾಗಿ ನಾನು ಅವರಿಗೆ "ಸರಕಾರಿ ಆದೇಶದಂತೆ, ಮಾಡಿಕೊಂಡಿರುವ ಒಪ್ಪಂದದ ಪ್ರತಿ ಕೊಡುವಂತೆ" ಮಾಹಿತಿ ಹಕ್ಕಿನ ಅನ್ವಯ ಅರ್ಜಿ ಕೊಟ್ಟೆ. "ನಮ್ಮ ವಿಭಾಗಕ್ಕೆ ಈ ವಿಷಯ ಸಂಬಂಧಪಡುವುದಿಲ್ಲವಾದ್ದರಿಂದ ಯಾವುದೇ ಒಪ್ಪಂದವನ್ನೂ ಮಾಡಿಕೊಂಡಿಲ್ಲ" ಎಂದು ಅವರು ಉತ್ತರಿಸಿದರು. ಇಷ್ಟಕ್ಕೆ ಒಂದು ತಿಂಗಳು ಕಳೆಯಿತು. "ಸ್ವಾಮೀ, ನೀವಲ್ಲದಿದ್ದರೆ, ಅದು ಯಾರಿಗೆ ಸಂಬಂಧಪಟ್ಟಿದೆಯೋ ಅವರಿಗೆ ನನ್ನ ಅರ್ಜಿ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ" ಅಂತ ಅವರನ್ನು ಎಜುಕೇಟ್ ಮಾಡಬೇಕಾಯಿತು. ಮಾಡಿದೆ. ಅವರು ನನ್ನ ಅರ್ಜಿಯನ್ನು ಹಾಸನದ ಜಲಮಾಪನ ವಿಭಾಗಕ್ಕೆ ಕಳಿಸಿ, "ನೇತ್ರಾವತಿ ನದಿಯ ಉಸ್ತುವಾರಿ ನಿಮಗೆ ಇರುವುದರಿಂದ ಅರ್ಜಿಯನ್ನು ನಿಮಗೆ ಕಳಿಸಿಕೊಡಲಾಗಿದೆ; ಅರ್ಜಿದಾರರಿಗೆ ಮಾಹಿತಿ ನೀಡಿರಿ" ಎಂದರು. ಆಗಲಪ್ಪ! ಒಂದು ಹೊಸ ವಿಷಯ ಗೊತ್ತಾಯಿತು! ನಮ್ಮ ನೇತ್ರಾವತಿ ನದಿಗೂ ಒಬ್ಬ "ಉಸ್ತುವಾರಿ" ಇದ್ದಾರೆ! ತುಂಬ ಸಂತೋಷವಾಯಿತು. ಅವರು ಕೆಲವು ದಿನ ಕಳೆದು ಉತ್ತರಿಸಿದರು: "ಈ ವಿಭಾಗದಿಂದ ಎಂ. ಎಸ್. ಇ. ಜಡ್. ಕಂಪೆನಿಯೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಂಡಿಲ್ಲ". ಆಫೀಸಿಗೆ ಸಂಬಂಧಿಸಿದ ಕಾನೂನುಗಳನ್ನು ತಿಳಿದುಕೊಳ್ಳುವ ಅಭ್ಯಾಸವನ್ನು ಎಂದೋ ಗುಡ್ಡಕ್ಕೆ ಹೊಡೆದಿರುವ ಇಂಥವರನ್ನು ಎಜುಕೇಟ್ ಮಾಡಲು ಯತ್ನಿಸುವ ನಾನೊಬ್ಬ ದಡ್ಡ ಎಂದು ನನ್ನನ್ನು ನಾನೇ ಬೈದುಕೊಂಡು, ಮಾಹಿತಿ ಹಕ್ಕು ಆಯೋಗಕ್ಕೆ ಒಂದು ದೂರು ಸಲ್ಲಿಸಿದೆ. ಸುಮಾರು ಆರು ತಿಂಗಳ ನಂತರ ಕಳೆದ ಐದನೇ ತಾರೀಖು (೫-೪-೨೦೧೨) ಬೆಂಗಳೂರಿನಲ್ಲಿ ಮಾಹಿತಿ ಹಕ್ಕು ಆಯೋಗದ ಎದುರು ಪ್ರಕರಣ ವಿಚಾರಣೆಗೆ ಬಂತು. ನನ್ನ ಫಿರ್ಯಾದಿಯಲ್ಲಿ ಎದುರು ಪಕ್ಷವಾಗಿ ಮಂಗಳೂರು ಹಾಗೂ ಹಾಸನ ಎರಡೂ ಕಾರ್ಯಕಾರಿ ಎಂಜಿನಿಯರುಗಳನ್ನು ತೋರಿಸಿದ್ದೆ. ಆದರೆ ಆಯೋಗದವರು ಮಂಗಳೂರಿನವರಿಗೆ ಮಾತ್ರ ನೋಟೀಸು ಕೊಟ್ಟಿದ್ದರು. ಹಾಗಾಗಿ ಮಂಗಳೂರಿನ ಸಣ್ಣ ನೀರಾವರಿ ವಿಭಾಗದವರು ಮಾತ್ರ ವಿಚಾರಣೆಗೆ ಹಾಜರಾದರು.

ಬೆಂಗಳೂರಿನಲ್ಲಿ ಈಗ ಮಾಹಿತಿ ಆಯೋಗದ ಕಛೇರಿ ಎರಡು ಕಡೆ ಆಗಿದೆ. ಒಂದು ಮೊದಲಿದ್ದಲ್ಲಿಯೇ: ಬಹು ಮಹಡಿ ಕಟ್ಟಡದಲ್ಲಿ. ಮತ್ತೊಂದು ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿ ಕಟ್ಟಡದಲ್ಲಿ. ನನಗೆ ಹೋಗಬೇಕಾಗಿದ್ದು ಮಿಥಿಕ್ ಸೊಸೈಟಿಗೆ. ಬೆಳಗ್ಗೆ ಹನ್ನೊಂದು ಗಂಟೆಗೆ ವಿಚಾರಣೆ ಶುರು. ನಾನು ಹತ್ತು ಗಂಟೆಯ ಹೊತ್ತಿಗೇ ಅಲ್ಲಿ ಹಾಜರಾದೆ. ಮಾಹಿತಿ ಹಕ್ಕು ಸಂಸ್ಥೆಗೆ ಬಹುಷಃ ಕೇಂದ್ರ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಕಚೇರಿಯನ್ನು ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಸಾಮಾನ್ಯವಾಗಿ ನಮ್ಮ ಸರಕಾರಿ ಕಚೇರಿಗಳಿಗಿರುವ ಒಂದು ಜೋಬದ್ರ ಕಳೆ ಈ ಕಛೇರಿಗೆ ಇಲ್ಲ. ಹೆಚ್ಚು ಗಲಾಟೆ ಇಲ್ಲ. ಆಸನ ವ್ಯವಸ್ಥೆ, ಟಾಯ್ಲೆಟ್ ಇತ್ಯಾದಿಗಳು ಸಾಕಷ್ಟು ಚೆನ್ನಾಗಿವೆ. ಇಡೀ ವಾತಾವರಣ ಸ್ವಚ್ಛವಾಗಿದೆ.
ನಾನು ಹೋದಾಗ ತರುಣನೊಬ್ಬ ಎದುರು ಕೂತಿದ್ದ. ಹೀಗೇ ಮಾತಾಡಿಸಿದಾಗ ಅವನು ಬಂದಿದ್ದೂ ಬಿ.ಸಿ.ರೋಡಿನಿಂದಲೇ ಎಂದು ಗೊತ್ತಾಯಿತು. ಅಕ್ಷರ ದಾಸೋಹವೋ ಯಾವುದೋ ವಿಷಯದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿಯೋ ಅವರ ಪರವಾಗಿಯೋ ಬಂದಿದ್ದ. "ಈಗೆಲ್ಲ ಮಾಹಿತಿ ಹಕ್ಕು ಮಿಸ್ ಯೂಸ್ ಆಗುವುದೇ ಜಾಸ್ತಿ. ಅಲ್ಲಿಂದ ಇಲ್ಲಿಗೆ ಬರಲಿಕ್ಕೆ ಎಷ್ಟು ಖರ್ಚು! ಎಲ್ಲ ವೇಸ್ಟ್" ಎಂದು ಗುರುಗುಟ್ಟಿದ. ಆಮೇಲೂ ಒಂದಿಬ್ಬರು ಸರಕಾರಿ ಅಧಿಕಾರಿಗಳು ಅದೇ ಅಭಿಪ್ರಾಯ ಕೊಟ್ಟದ್ದರಿಂದ, ಸರಕಾರಿ ವಲಯದಲ್ಲಿ ಮಾಹಿತಿ ಹಕ್ಕಿನ ಕುರಿತು ಏನು ಅಭಿಪ್ರಾಯ ಇದೆ ಎನ್ನುವುದಕ್ಕೆ ಇದನ್ನು ಹೇಳಿದೆ. ಮಾಹಿತಿ ಹಕ್ಕು ಅಧಿಕಾರಿಗಳ ಬಾಲ ತಿರುಚಲು ಜನಸಾಮಾನ್ಯರ ಕೈಗೆ ಸಿಕ್ಕ ಅತ್ಯುತ್ತಮ ಅಸ್ತ್ರವಾಗಿಬಿಟ್ಟಿದೆ. ಹಾಗಾಗಿ ಇಷ್ಟು ವರ್ಷ ಪ್ರಶ್ನೆ ಮಾಡುವವರೇ ಇಲ್ಲದೆ, ದರ್ಬಾರು ಮಾಡಿಕೊಂಡೇ ಕಾಲ ಕಳೆದ ಅನೇಕ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಎಂದರೆ ಮುಖ ಗಂಟಾಗುತ್ತದೆ, ಬಿಪಿ ಏರುತ್ತದೆ. ಜನಸಾಮಾನ್ಯರು ಮಾತ್ರ ಮೀಸೆಯೊಳಗೇ ನಗುತ್ತ, ಈ ಅಸ್ತ್ರವನ್ನು ದುರುಪಯೋಗವೋ ಮತ್ತೊಂದೋ ನೋಡದೆ ಅಧಿಕಾರಿಗಳ ಮೇಲೆ ಪ್ರಯೋಗಿಸುತ್ತಲೇ ಇದ್ದಾರೆ. ( ಬಾಲ ತಿರುಚುವುದು: ಮಲಗಿರುವ ದನ, ಎಮ್ಮೆಗಳನ್ನು ಎಬ್ಬಿಸಲು ಪ್ರಯೋಗಿಸುವ ಸುಲಭ ಉಪಾಯ. ಬಾಲ ಹಿಡಿದು ತಿರುಪಿದರೆ ಅವಕ್ಕೆ ಪಾಪ, ಅಸಾಧ್ಯ ನೋವಾಗುತ್ತದೆ. ಕೂಡಲೇ ಎದ್ದು ನಿಲ್ಲುವುದು ಅನಿವಾರ್ಯವಾಗುತ್ತದೆ.)

ನನ್ನ ಅರ್ಜಿಯ ಕುರಿತಂತೆ ಆಯೋಗದ ಎದುರು ವಿಚಾರಣೆಗೆ ಇದ್ದದ್ದು ಅರ್ಜಿದಾರರಿಗೆ ಕೇಳಿದ ಮಾಹಿತಿ ಕೊಡಲಾಗಿದೆಯೇ ಇಲ್ಲವೇ ಎಂಬ ಪ್ರಶ್ನೆ. ಕಾಮಗಾರಿ ಈಗಾಗಲೇ ಶುರುವಾಗಿದೆ ಎಂಬುದಕ್ಕೆ ನನ್ನ ಹತ್ತಿರ ದಾಖಲೆ ಇತ್ತು. ಆ ದಾಖಲೆಯದೇ ಒಂದು ಕಥೆ. ಚುಟುಕಾಗಿ ಹೇಳಿಬಿಡುತ್ತೇನೆ: ಎಸ್. ಇ. ಜಡ್. ಕಂಪೆನಿಯವರು ನೇತ್ರಾವತಿ ನದಿಯ ದಂಡೆಯಲ್ಲಿ ಜಾಕ್ ವೆಲ್ ಕೆಲಸ ಶುರು ಮಾಡಿದಾಗ ನಾವು ಕೆಲವರು ಅಲ್ಲಿ ಹೋಗಿ ನೋಡಿ ಬಂದಿದ್ದೆವು. ನದಿಯ ದಂಡೆಯ ಈ ಜಾಗದಲ್ಲಿ ಮರ ಕಡಿದಿರುವುದನ್ನೇ ಹಿಡಿದು ನಾನು ಅರಣ್ಯ ಇಲಾಖೆಗೆ ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಕೊಟ್ಟಿದ್ದೆ. ಅವರ ಉತ್ತರದಲ್ಲಿ "ಅದು ಸರಕಾರಕ್ಕೆ ಸೇರಿದ ಭೂಮಿ" ಎಂದಿತ್ತು. ನಾನು ಅಲ್ಲಿಗೆ ಬಿಡದೆ ಬಂಟವಾಳದ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದೆ. ಅವರೂ ಸಹ ಆ ಭೂಮಿ ಸರಕಾರದ್ದೇ ಎಂದರು. ಅಲ್ಲಿ ಕಾಮಗಾರಿ ನಡೆಸುತ್ತಿರುವುದು ಎಸ್. ಇ. ಜಡ್. ಕಂಪೆನಿ ಹೌದೆಂದೂ ಹೇಳಿದರು. ಕಾಮಗಾರಿ ಶುರುವಾಗಿರುವುದಕ್ಕೆ ಆಧಾರವಾಗಿ ಮಾಹಿತಿ ಹಕ್ಕು ಆಯೋಗದ ಎದುರು ನಾನು ಅದೇ ದಾಖಲೆಯನ್ನಿಟ್ಟಿದ್ದೆ.

ತಹಸೀಲ್ದಾರರಿಗೆ ಕೊಟ್ಟ ಈ ಅರ್ಜಿಯ ಬಗ್ಗೆ ಒಂದು ಹಂತದಲ್ಲಿ ನಾನು ಮಂಗಳೂರಿನ ಅಸಿಸ್ಟೆಂಟ್ ಕಮಿಷನರ್ ರವರಿಗೆ ಮೇಲ್ಮನವಿ ಸಲ್ಲಿಸಿದ್ದೆ. ದೂರು ವಿಚಾರಣೆಗೆ ಬಂದಾಗ, "ತಹಸೀಲ್ದಾರರಿಗೆ ದಂಡ ವಿಧಿಸಬೇಕು" ಎಂದು ನಾನು ಸಹಾಯಕ ಕಮಿಷನರ್ ಹತ್ತಿರ ವಿನಂತಿಸಿದೆ. ಅದಕ್ಕವರು "ದಂಡ ವಿಧಿಸಿದರೆ ತಹಸೀಲ್ದಾರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಷ್ಟೇ" ಎಂದು ಉತ್ತರಿಸಿದ್ದರು! ಅದಾದ ಕೆಲವೇ ಸಮಯದಲ್ಲಿ ಈ ತಹಸೀಲ್ದಾರರು ಲಂಚ ತೆಗೆದುಕೊಂಡರೆಂಬ ಕಾರಣಕ್ಕೆ ಲೋಕಾಯುಕ್ತ ಪೋಲೀಸರು ಅವರನ್ನು ಬಂಧಿಸಿದರು. ದೇವರು ದೊಡ್ಡವನು. ಈವರೆಗೂ ಯಾವ ದುರದೃಷ್ಟಕರ ಸುದ್ದಿಯೂ ಬಂದಿಲ್ಲ.

ದಾರಿ ತಪ್ಪಿತು, ಕ್ಷಮಿಸಿ. ಮಾಹಿತಿ ಹಕ್ಕು ಆಯುಕ್ತರು ವಿಚಾರಣೆ ನಡೆಸಿ, ನಾನು ಕೇಳಿದ ಮಾಹಿತಿಯನ್ನು ಕೊಡುವಂತೆ ಹಾಸನದ ಜಲಮಾಪನ ವಿಭಾಗಕ್ಕೆ ನಿರ್ದೇಶಿಸುವ ತೀರ್ಪು ಬರೆಸಿದರು.(ಅದರ ಪ್ರತಿ ಇನ್ನೂ ನನ್ನ ಕೈಗೆ ಬಂದಿಲ್ಲ). "ನೀವು ಸರಕಾರಿ ಆಜ್ಞೆಗೆ ಸಹಿ ಹಾಕಿರುವ ಅಧಿಕಾರಿಗೇ ನೇರವಾಗಿ ಅರ್ಜಿ ಸಲ್ಲಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ" ಎಂದು ಮಾಹಿತಿ ಹಕ್ಕು ಆಯುಕ್ತರು ನನಗೆ ಹೇಳಿದರು. ಅದೂ ಸರಿಯೇ. ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಅವರಿಗೆ ಈ ವಿಷಯ ಸಂಬಂಧಪಟ್ಟಿದೆ ಎಂದು ನಾನು ನನ್ನಷ್ಟಕ್ಕೆ ತಿಳಿದದ್ದು ತಪ್ಪಾಯಿತು. ವಾಸ್ತವವಾಗಿ ಅದೂ ಪೂರ್ತಿ ತಪ್ಪಲ್ಲ. ಆ ಜವಾಬ್ದಾರಿ ಮೊದಲು ಮಂಗಳೂರಿನವರಿಗೇ ಇತ್ತಂತೆ. ಇತ್ತೀಚೆಗೆ ಆಡಳಿತದ ಕಾರಣಕ್ಕೋ ಮತ್ತಾವುದೋ ಕಾರಣಕ್ಕೋ ಆ ಜವಾಬ್ದಾರಿಯನ್ನು ಹಾಸನದ ಜಲಮಾಪನ ವಿಭಾಗಕ್ಕೆ ವರ್ಗಾಯಿಸಿದ್ದಾರಂತೆ.

ಈ ನಡುವೆ ನನಗೆ ಸಿಕ್ಕಿದ ಒಂದು ಅನಧಿಕೃತ ಮಾಹಿತಿಯ ಪ್ರಕಾರ, ಅಂಥ ಯಾವುದೇ ಒಪ್ಪಂದವೂ ಈವರೆಗೆ ಆಗಿಲ್ಲವಂತೆ! ನೋಡೋಣ, ಪ್ರಕರಣ ಎಲ್ಲಿಗೆ ಮುಟ್ಟುತ್ತದೆ ಎಂದು.