ಶನಿವಾರ, ಡಿಸೆಂಬರ್ 19, 2009

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ- ಭಾಗ ೨

ಕಾರ್ಪೋರೇಟ್ ಕಂಪೆನಿಗಳು ತಮ್ಮ ಕೆಲಸವನ್ನು ತುಂಬಾ ವ್ಯವಸ್ಥಿತವಾಗಿಯೂ, ನಿಖರವಾಗಿಯೂ ಮಾಡುತ್ತವೆ, ಖಚಿತವಾದ ಪೂರ್ವ ಲೆಕ್ಕಾಚಾರ ಇಲ್ಲದೆ ಯಾವ ವ್ಯವಹಾರಕ್ಕೂ ಮುಂದುವರಿಯುವುದಿಲ್ಲ ಎಂದೆಲ್ಲ ನಾನು ಭಾವಿಸಿದ್ದೆ. ಆದರೆ ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿಯು ನನ್ನ ನಂಬಿಕೆ ಬುಡಭದ್ರವಿಲ್ಲದ್ದು ಎಂದು ಸಾಧಿಸಿ ತೋರಿಸಿದೆ.
ಹಿಂದಿನ ನನ್ನ ಲೇಖನದಲ್ಲಿ ಎಂ ಎಸ್ ಇ ಝಡ್ ವಿರುದ್ಧ ಮಾಹಿತಿ ಹಕ್ಕು ಆಯುಕ್ತರಿಗೆ ದೂರು ಸಲ್ಲಿಸಿದ ವಿಷಯ ಹೇಳಿದ್ದೆ. ತಾ. ೧೭-೧೨-೨೦೦೯ರಂದು ಕಂಪೆನಿ ನಾನು ಕೇಳಿದ ಮೂರು ಮಾಹಿತಿಗಳಲ್ಲಿ ಎರಡನ್ನು ಕೊಟ್ಟು, ಕೊಳಚೆ ನೀರು ಸಂಸ್ಕರಣದ ಕುರಿತ ಮಾಹಿತಿಯನ್ನು ಮಂಗಳೂರು ಮಹಾನಗರಪಾಲಿಕೆಯಿಂದ ಪಡೆಯಲು ನನಗೆ ಸೂಚಿಸಿದೆ. ಇದಕ್ಕೆ ನಾನು ಹೀಗೆ ಉತ್ತರ ಬರೆದಿದ್ದೇನೆ: "ಮಾಹಿತಿ ಹಕ್ಕು ೨೦೦೫ರ ಪ್ರಕಾರ ಒಂದು ವೇಳೆ ಮಾಹಿತಿ ನಿಮ್ಮಲ್ಲಿ ಇಲ್ಲದಿದ್ದರೆ ಅದು ಎಲ್ಲಿ ದೊರೆಯುತ್ತದೆಯೋ ಅಲ್ಲಿಗೆ ನನ್ನ ಅರ್ಜಿಯನ್ನು ಐದು ದಿನಗಳ ಒಳಗೆ ಕಳಿಸಿಕೊಟ್ಟು, ಹಾಗೆ ಮಾಡಿರುವುದನ್ನು ನನಗೆ ತಿಳಿಸುವುದು ನಿಮ್ಮದೇ ಕರ್ತವ್ಯವಾಗಿರುತ್ತದೆ. ಆದ್ದರಿಂದ ನನ್ನ ಅರ್ಜಿಯನ್ನು ನೀವೇ ಮಂಗಳೂರು ಮಹಾನಗರಪಾಲಿಕೆಗೆ ಕಳಿಸಿಕೊಡಬೇಕಾಗಿ ಕೋರುತ್ತೇನೆ.
ನಿದರ್ಶನಕ್ಕಾಗಿ ಜಿಲ್ಲಾಧಿಕಾರಿಯ ಕಚೇರಿಯಿಂದ ನನಗೆ ಬಂದಿರುವ ಪತ್ರದ ಯಥಾಪ್ರತಿಯನ್ನು ಕಳಿಸಿದ್ದೇನೆ".
ಅದಿರಲಿ. ಕಂಪೆನಿಯ ಹತ್ತಿರ ಈ ಮಾಹಿತಿ ಇಲ್ಲವೆಂಬುದು ಈ ಉತ್ತರದಿಂದ ಖಚಿತವಾಯ್ತಷ್ಟೆ. ಕೊಳಚೆ ನೀರು ಘಟಕಗಳಿಂದ ದೊರೆಯುವ ನೀರಿನ ಪ್ರಮಾಣದ ಬಗ್ಗೆ ಯಾರು ಏನೇ ಹೇಳಲಿ, ಜವಾಬ್ದಾರಿಯಿಂದ ವರ್ತಿಸುವ ಯಾವುದೇ ಕಂಪೆನಿ ಅದನ್ನು ಸ್ವತಃ ತಾನು ಅಧ್ಯಯನ ಮಾಡಿ ಖಚಿತ ಪಡಿಸಿಕೊಳ್ಳಲೇ ಬೇಕು. (ಈ ನಡುವೆ ಮಹಾನಗರಪಾಲಿಕೆಗೂ ವಿಶೇಷ ಆರ್ಥಿಕ ವಲಯ ಕಂಪೆನಿಗೂ ಈ ಬಗ್ಗೆ ಒಪ್ಪಂದವೇನಾದರೂ ಆಗಿದೆಯೆ, ಪಾಲಿಕೆ ಆ ನೀರನ್ನು ಕಂಪೆನಿಗೆ ಕೊಡಲು ಒಪ್ಪಿದೆಯೆ ಎಂಬ ಪ್ರಶ್ನೆಯೂ ಇದೆ. ಕೊಳಚೆ ನೀರು ಶುದ್ಧೀಕರಿಸಲು ಸಾಕಷ್ಟು ಖರ್ಚಿದೆ. ಪಾಲಿಕೆಯ ನೀರಿನ ರೇಟು ಕಂಪೆನಿಗೆ ಪೂರೈಸುತ್ತದೆಯೆ ಎಂಬ ಅಂಶವೂ ತೀರ್ಮಾನವಾಗಬೇಕಾಗುತ್ತದೆ. ಪೈಪ್ ಲೈನಿನ ಬಹು ಮುಖ್ಯ ಭಾಗ ಮಂಗಳೂರು ಪೇಟೆಯಲ್ಲಿಯೇ ಹಾದು ಹೋಗಬೇಕಾಗಿ ಬಂದರೆ ಅದನ್ನು ಅಳವಡಿಸಲು ಬೇಕಾದ ಜಮೀನಿನ ಏರ್ಪಾಟು ಖಂಡಿತಾ ಸುಲಭವಲ್ಲ.) ಹಾಗೆ ಖಚಿತಪಡಿಸಿಕೊಳ್ಳದೆ ಹೋದರೆ ಅಗತ್ಯ ಪ್ರಮಾಣದ ನೀರು ಸಿಗುತ್ತದೆ ಎಂದು ಯಾವ ಗ್ಯಾರಂಟಿ? ಮುಂದೆ ಮಳೆನೀರಿನ ಬಗ್ಗೆ ಕಂಪೆನಿ ಕೊಟ್ಟಿರುವ ಉತ್ತರ ನೋಡಿದರೆ, ಕೊಳಚೆ ನೀರನ್ನು ಶುದ್ಧೀಕರಿಸಿ ಒದಗಿಸಿಕೊಳ್ಳುವ ಮಾತು ಕೂಡ ಯಾವ ಅಧ್ಯಯನವನ್ನೂ ಆಧರಿಸದ ಕೇವಲ ಪೊಳ್ಳುಮಾತಾಗಿ ಕಾಣುತ್ತದೆ.
ಮಳೆನೀರು ಸಂಗ್ರಹದ ಕುರಿತಂತೆ ಕಂಪೆನಿಯ ಉತ್ತರ ಹೀಗಿದೆ:
"ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಯ ಕಾಮಗಾರಿಯು ಈಗಷ್ಟೇ ಆರಂಭವಾಗಿದ್ದು, ತತ್ ಕ್ಷಣಕ್ಕೆ ದಿನವಹಿ ೪೫ ಎಂ.ಜಿ.ಡಿ. ನೀರು ಅವಶ್ಯಕತೆ ಇರುವುದಿಲ್ಲ. ಬಹು ಉತ್ಪಾದನಾ ವಿಶೇಷ ಆರ್ಥಿಕ ವಲಯ (Multi Product SEZ) ಸ್ಥಾಪನೆಯಾಗುವ ಸಂದರ್ಭದಲ್ಲಿ ನೀರಿನ ಅವಶ್ಯಕತೆಗೆ ಅನುಗುಣವಾಗಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು".
ಈ ಮಾತಿನ ಅರ್ಥ ಅತ್ಯಂತ ಸ್ಪಷ್ಟ: ಮಳೆ ನೀರು ಸಂಗ್ರಹದ ವಿಷಯದಲ್ಲಿ ಕಂಪೆನಿ ಈವರೆಗೂ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ! ಇದರ ಸಾಧ್ಯಾಸಾಧ್ಯತೆಯ ಬಗ್ಗೆ (ನಾನು ನನ್ನ ಲೇಖನದಲ್ಲಿ ತಲೆ ಕೆಡಿಸಿಕೊಂಡಷ್ಟು ಸಹ) ತಲೆ ಕೆಡಿಸಿಕೊಂಡಿಲ್ಲ. ವಾಸ್ತವವಾಗಿ ತನ್ನ ನೀರಿನ ಅಗತ್ಯ ಎಷ್ಟು ಎಂಬುದೂ ಅದಕ್ಕೆ ಸರಿಯಾಗಿ ತಿಳಿದಿಲ್ಲ. ಹಾಗಿದ್ದರೂ ಅದರ ಜಾಹೀರಾತು ಸ್ಪಷ್ಟವಾಗಿ ಹೇಳುತ್ತದೆ: "ಮಳೆನೀರನ್ನು ಸಂಗ್ರಹಿಸಿ ೧೨ ಎಂಜಿಡಿ ನೀರನ್ನು ಒದಗಿಸಿಕೊಳ್ಳಲಾಗುವುದು" ಎಂದು. ಈ ಮಾತಿನ ಉದ್ದೇಶ ಸಾಮಾನ್ಯ ಜನರನ್ನು ಮಂಗ ಮಾಡುವುದು ಬಿಟ್ಟು ಬೇರೇನು ಇರಲು ಸಾಧ್ಯ? ಜನಸಾಮಾನ್ಯರನ್ನು ಹಾದಿ ತಪ್ಪಿಸುವ ಈ ಜಾಹೀರಾತಿನ ಅಂತಿಮ ಒಳ ಉದ್ದೇಶ ಬೇರೇನೋ ಇರಬಹುದೇ? (ಇಲ್ಲಿ ಜಾಗ ತೆಗೆದುಕೊಂಡು ಕೈಗಾರಿಕೆ ಸ್ಥಾಪಿಸಬಯಸುವ ಯಾವುದೇ ಕಂಪೆನಿಯನ್ನು ಇಂಥ ಜಾಹೀರಾತಿನಿಂದ ಮರುಳು ಮಾಡುವುದು ಖಂಡಿತ ಸಾಧ್ಯವಿಲ್ಲ). ಹಾಗಾಗಿ ಈ ಜಾಹೀರಾತಿನ ಗುರಿ ಜನಸಾಮಾನ್ಯರೇ ಎಂದು ಭಾವಿಸಬೇಕಾಗುತ್ತದೆ.
ನೇತ್ರಾವತಿ ಮತ್ತು ಗುರುಪುರ ನದಿಗಳಿಂದ ನೀರು ಸರಬರಾಜಿನ ಬಗ್ಗೆ:
ಈ ಕುರಿತು ಕರ್ನಾಟಕ ಸರಕಾರವು ಅನುಮತಿ ನೀಡಿರುವುದರ ದಾಖಲೆಯನ್ನು ಕಂಪೆನಿ ನನಗೆ ನೀಡಿದೆ. ಜೊತೆಗೇ ಮತ್ತೊಂದು ಕುತೂಹಲಕರವಾದ ಮಾಹಿತಿಯನ್ನು ನೀಡಿದೆ: "ನೇತ್ರಾವತಿಯ ನೀರಿಗಾಗಿ ಎ. ಎಂ. ಆರ್. ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ಅದು ಹೇಳಿದೆ.
ಎ. ಎಂ. ಆರ್. ಎಂಬುದು ಒಂದು ಖಾಸಗಿ ಕಂಪೆನಿ. ಅದು ಬಂಟ್ವಾಳ ತಾಲೂಕಿನ ಶಂಬೂರಿನ ಹತ್ತಿರ ನೇತ್ರಾವತಿ ನದಿಯಲ್ಲಿ ಒಂದು ಕಿರು ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದೆ. ಅಲ್ಲಿ ಈಗಾಗಲೇ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಿದೆ. ಈ ಬಗ್ಗೆ ಈಗ ಬರೆಯುವುದಿಲ್ಲ. ಅಧ್ಯಯನ ಮಾಡಿ ಮತ್ತೆ ಬರೆಯುತ್ತೇನೆ. ಈ ಒಪ್ಪಂದದ ಪ್ರತಿಯನ್ನು ಕಳಿಸಿಕೊಡುವಂತೆ ಪುನಃ ಮಾಹಿತಿ ಹಕ್ಕಿನಡಿ ಕಂಪೆನಿಗೆ ಅರ್ಜಿ ಸಲ್ಲಿಸಿದ್ದೇನೆ.
ಗುರುಪುರ ನದಿಯಿಂದ ನೀರೆತ್ತುವ ಬಗ್ಗೆ ಕಂಪೆನಿ ಮೌನ ವಹಿಸಿದೆ. ಯಾವ ಮಾಹಿತಿಯನ್ನೂ ಕೊಟ್ಟಿಲ್ಲ.
ಒಟ್ಟಿನ ಮೇಲೆ ಕಂಪೆನಿ ನನಗೆ ನೀಡಿರುವ ಉತ್ತರ ಮತ್ತು ಮಾಹಿತಿಯನ್ನು ಆಧರಿಸಿ ತೀರ್ಮಾನಿಸಬಹುದಾದ್ದು ಇಷ್ಟು: ಕಂಪೆನಿಯ ಕಣ್ಣು ಮುಖ್ಯವಾಗಿ ನೆಟ್ಟಿರುವುದು ನೇತ್ರಾವತಿ ನದಿಯ ನೀರಿನ ಮೇಲೆ ಮಾತ್ರ. ಕೊಳಚೆ ನೀರು ಸಂಸ್ಕರಣೆ, ಮಳೆ ನೀರು ಸಂಗ್ರಹ ಎಂದೆಲ್ಲ ಅದು ಹೇಳುತ್ತಿರುವುದು ಜನಸಾಮಾನ್ಯರಿಗೆ ಅರ್ಥವಾಗದ ಬೇರೆ ಯಾವುದೋ ಉದ್ದೇಶದಿಂದ.
*************
ಮಾಹಿತಿಗಾಗಿ ಅರ್ಜಿ ಸಲ್ಲಿಸುವವರನ್ನು ಸತಾಯಿಸುವ ಇನ್ನೊಂದು ವಿಧಾನವನ್ನು ನಮ್ಮ ಅಧಿಕಾರಿಗಳು ಅನುಸರಿಸುತ್ತಾರೆ. ಅದಕ್ಕೊಂದು ಉದಾಹರಣೆ:
ಸಣ್ಣ ನೀರಾವರಿ ಇಲಾಖೆಯಿಂದ ನಾನು ಕೇಳಿದ ಒಂದು ಮಾಹಿತಿಗೆ ಇಲಾಖೆ "ಮಾಹಿತಿಗಾಗಿ ಒಂದು ರೂಪಾಯಿ ಕಳಿಸಿಕೊಡಿ" ಎಂದು ನನಗೆ ತಿಳಿಸಿತು. ಒಂದು ರೂಪಾಯಿ ಕಳಿಸುವುದರ ಕಷ್ಟ ಅನುಭವಿಸಿದವನಿಗೇ ಗೊತ್ತು. ಮನಿ ಆರ್ಡರನ್ನು ಇಲಾಖೆ ಸ್ವೀಕರಿಸುವುದಿಲ್ಲ. ನಮ್ಮ ಬಿ.ಸಿ.ರೋಡಿನ ಅಂಚೆ ಕಛೇರಿಯಲ್ಲಿ ಒಂದು ರೂಪಾಯಿಯ ಪೋಸ್ಟಲ್ ಆರ್ಡರ್ ಸಿಗುವುದಿಲ್ಲ. ಡಿಡಿ ತೆಗೆಯುವುದೆಂದರೆ ಕಮಿಷನ್ನೇ ಹದಿನೈದೋ ಇಪ್ಪತ್ತೋ ರೂಪಾಯಿ ಆಗುತ್ತದೆ. ಪುನಃ ಅದನ್ನು ನೊಂದಾಯಿತ ಅಂಚೆಯಲ್ಲಿ ಕಳಿಸಲು ಇಪ್ಪತ್ತು ರೂ. ಖರ್ಚು!
ಆ ಅಧಿಕಾರಿ ನನಗೆ ಪತ್ರವನ್ನು ಸಾಧಾರಣ ಅಂಚೆಯಲ್ಲಿ ಕಳಿಸಿದ್ದರು. ಬೆಂಗಳೂರಿನಲ್ಲಿ "ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಇಲಾಖೆ" ಎಂಬುದೊಂದು ಇದೆ. ನಾನು ಆ ಇಲಾಖೆಗೆ ಒಂದು ಪತ್ರ ಬರೆದು ಸಮಸ್ಯೆಯನ್ನು ವಿವರಿಸಿ, ಜೊತೆಗೆ ಹೀಗೆ ಸೇರಿಸಿದೆ. "ಅವರು ಬರೆದ ಪತ್ರದಿಂದ ಸರಕಾರಕ್ಕೆ ಸಿಗುವುದು ಒಂದು ರೂಪಾಯಿ. ಆ ಒಂದು ರೂಪಾಯಿಗಾಗಿ ಅವರು ಸ್ಟ್ಯಾಂಪಿಗೆ ಐದು ರೂ., ಕವರಿಗೆ ಐವತ್ತು ಪೈಸೆ, ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಪ್ರಿಂಟ್ ತೆಗೆದ ಪತ್ರಕ್ಕೆ ಕಡಿಮೆ ಎಂದರೂ ಹದಿನೈದು ರೂಪಾಯಿ, ಉಳಿದ ಕೆಲಸಗಳಿಗೆ ಎರಡು ರೂಪಾಯಿ - ಹೀಗೆ ಒಟ್ಟು ಇಪ್ಪತ್ತೆರಡೂವರೆ ರೂ. ಖರ್ಚು ಮಾಡಿದ್ದಾರೆ. ಇದೇ ತಂತ್ರವನ್ನು ಇನ್ನೂ ಅನೇಕ ಅಧಿಕಾರಿಗಳು ಬಳಸುತ್ತಿರಬಹುದು. ಆದ್ದರಿಂದ ಎಲ್ಲರಿಗೂ ಅನ್ವಯವಾಗುವಂತೆ ಈ ಸಮಸ್ಯೆಗೆ ಒಂದು ಪರಿಹಾರ ಒದಗಿಸುವಂತೆ ಕೋರುತ್ತೇನೆ". (ಅವರಿಂದ ಇನ್ನೂ ಉತ್ತರ ಬಂದಿಲ್ಲ. ಆದರೆ ಬರುವ ಸಾಧ್ಯತೆ ಇದೆ. ಕಾಯೋಣ!)
ಮೇಲಿನ ಪತ್ರದ ಯಥಾಪ್ರತಿಯನ್ನಿಟ್ಟು, ಐದು ರೂಪಾಯಿಯ ಒಂದು ಪೋಸ್ಟಲ್ ಆರ್ಡರ್ ಲಗತ್ತಿಸಿ, ಸಣ್ಣ ನೀರಾವರಿ ಇಲಾಖೆಗೆ ಒಂದು ಪತ್ರವನ್ನು ಸಾಧಾರಣ ಅಂಚೆಯಲ್ಲಿಯೇ ರವಾನಿಸಿದೆ: "ಈ ಪತ್ರದೊಂದಿಗೆ ಐದು ರೂಪಾಯಿಯ ಪೋಸ್ಟಲ್ ಆರ್ಡರನ್ನು ಇಟ್ಟಿದ್ದೇನೆ. ಈ ಪೈಕಿ ಒಂದು ರೂಪಾಯಿಯನ್ನು ಮಾಹಿತಿಗೆ ಮತ್ತು ಉಳಿದ ನಾಲ್ಕು ರೂಪಾಯಿಗಳನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿ/ ಮುಖ್ಯಮಂತ್ರಿಗಳ ಪರಿಹಾರ ನಿಧಿ/ ನೆರೆ ಪರಿಹಾರ ನಿಧಿಗೆ ಜಮಾ ಮಾಡಿಕೊಂಡು ನನಗೆ ಮಾಹಿತಿಯನ್ನು ಕಳಿಸಿಕೊಡಿರಿ"
ಅಧಿಕಾರಿ ಮಾಹಿತಿಯನ್ನು ಕಳಿಸಿಕೊಟ್ಟರು. ಜೊತೆಗೆ ಮಾಹಿತಿಗೆ ಒಂದು ರೂಪಾಯಿಗೆ ರಶೀದಿ, ಪ್ರಕೃತಿ ವಿಕೋಪ ಪರಿಹಾರ ನಿಧಿಗೆ, ಟ್ರೆಶರಿಯಲ್ಲಿ ಚಲನ್ ತುಂಬಿಸಿ ನಾಲ್ಕು ರೂ. ಕಟ್ಟಿದ್ದರ ರಶೀದಿಯ ಯಥಾಪ್ರತಿ ಇವುಗಳೂ ಇದ್ದವು!

ಬುಧವಾರ, ಡಿಸೆಂಬರ್ 16, 2009

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ

ಈ ಕುರಿತಾದ ನನ್ನ ಮೊದಲಿನ ಲೇಖನಕ್ಕೆ ಎಂ ಎಸ್ ಇ ಝಡ್ ತಾ. ೬-೧೦-೦೯ರ ಉದಯವಾಣಿಯಲ್ಲಿ ಪ್ರಕಟಿಸಿದ ಜಾಹೀರಾತನ್ನು ಆಧಾರವಾಗಿ ಇಟ್ಟುಕೊಂಡಿದ್ದೆ. ನನ್ನ ವಿಶ್ಲೇಷಣೆಯ ದೋಷಗಳು ನನಗೆ ತಿಳಿಯುವುದಿಲ್ಲ. ಹಾಗಾಗಿ, ಕಂಪೆನಿ ಯಾವ ಅಧ್ಯಯನವನ್ನು ಆಧರಿಸಿ ಈ ಅಂಕಿ ಅಂಶಗಳನ್ನು, ಮಾಹಿತಿಯನ್ನು ಪ್ರಕಟಿಸಿದೆ ಎಂದು ತಿಳಿಯುವ ಕುತೂಹಲದಿಂದ, ಮಾಹಿತಿ ಹಕ್ಕನ್ನು ಬಳಸಿ ಎಂ ಎಸ್ ಇ ಝಡ್ ಗೆ ಅರ್ಜಿ ಹಾಕಿ ಈ ಮೂರು ಮಾಹಿತಿಗಳನ್ನು ಕೇಳಿದ್ದೆ:
೧. ಮಂಗಳೂರು ಮಹಾನಗರ ಪಾಲಿಕೆಯ ಕೊಳಚೆ ನೀರು ಸಂಸ್ಕರಣಾ ಘಟಕಗಳಿಂದ ೧೮ ಎಂಜಿಡಿ ನೀರು ದೊರೆಯುವುದಕ್ಕೆ ಆಧಾರಗಳು, ಈ ತೀರ್ಮಾನಕ್ಕೆ ಬರಲು ನಡೆಸಿದ ಅಧ್ಯಯನದ ಸಂಪೂರ್ಣ ವಿವರ. ಹೀಗೆ ಪಡೆಯುವ ನೀರಿಗೆ ತಗಲಬಹುದಾದ ಖರ್ಚು ಎಷ್ಟು.
೨. ನೈಸರ್ಗಿಕ ಅಣೆಕಟ್ಟುಗಳನ್ನು ನಿರ್ಮಿಸಿ ಮಳೆನೀರು ಸಂಗ್ರಹಿಸಿ ೧೨ ಎಂಜಿಡಿ ನೀರು ಪಡೆಯುವ ಹೇಳಿಕೆಗೆ ಆಧಾರ, ಈ ಬಗ್ಗೆ ನಡೆಸಿರುವ ಅಧ್ಯಯನದ ಸಂಪೂರ್ಣ ವಿವರ (ಸಂಗ್ರಹಾಗಾರದ ಸ್ವರೂಪ, ಅದು ಕೆರೆಯ ರೂಪದಲ್ಲಿರುತ್ತದೆಯೆ ಅಥವಾ ಕಾಂಕ್ರೀಟ್ ಇತ್ಯಾದಿ ಬಳಸಿ ಟ್ಯಾಂಕುಗಳನ್ನು ನಿರ್ಮಿಸಲಾಗುವುದೆ, ಒಟ್ಟು ಎಷ್ಟು ಎಕರೆ ಪ್ರದೇಶದಲ್ಲಿ ಇತ್ಯಾದಿ ವಿವರಗಳು)
೩. ಗುರುಪುರ ಮತ್ತು ನೇತ್ರಾವತಿಗೆ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದೆ? ಹೀಗೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ನೀಡಿರುವ ಅನುಮತಿಯ (ಲೈಸೆನ್ಸ್) ಯಥಾಪ್ರತಿ.
ಈ ಅರ್ಜಿಗೆ ಕಂಪೆನಿ ಅಮೋಘ ಒಂದು ಸಾಲಿನ ಉತ್ತರ ನೀಡಿತು: "ನೀವು ಕೋರಿದ ಮಾಹಿತಿಯಂತೆ ದಿನಾಂಕ ೬-೧೦-೨೦೦೯ರ ಉದಯವಾಣಿಯಲ್ಲಿ ನಾವು ಯಾವುದೇ ಜಾಹೀರಾತನ್ನು ನೀಡಲಿಲ್ಲವೆಂದು ಈ ಮೂಲಕ ತಿಳಿಸಬಯಸುತ್ತೇವೆ". "ಕೆಪ್ಪ ಅಂದರೆ ಕೊಪ್ಪದ ಕಡೆ" ಅಂತ ನಮ್ಮೂರು ಕೊಪ್ಪದ ಕಡೆ ಒಂದು ಗಾದೆ. ಇರಲಿ. ನಾನು ಪ್ರತಿ ಬಾಣ ಬಿಟ್ಟೆ:
"೧. ದಿ. ೬-೧೦-೦೯ರ ಉದಯವಾಣಿ ಪತ್ರಿಕೆಯ ಪ್ರತಿ ನನ್ನಲ್ಲಿದೆ. ಅದರಲ್ಲಿ ನಿಮ್ಮ ಜಾಹೀರಾತೂ ಇದೆ.
೨. ನಿಮ್ಮ ವೆಬ್ ಸೈಟಿನಲ್ಲೂ ನೀವು ನೀರನ್ನು ಎಲ್ಲಿಂದ ಒದಗಿಸಿಕೊಳ್ಳಲಾಗುವುದು ಎಂದು ವಿವರಿಸಿದ್ದೀರಿ. ಅದರ ಪ್ರಿಂಟ್ ಔಟ್ ಸಹ ನನ್ನಲ್ಲಿದೆ.
೩. ನೀರಿನ ಲಭ್ಯತೆಯ ಬಗ್ಗೆ ನೀವು ಮಾಡಿರುವ ಅಧ್ಯಯನ ಇಲ್ಲಿ ಮುಖ್ಯವೇ ಹೊರತು ನೀವು ಜಾಹೀರಾತು ಕೊಟ್ಟಿದ್ದೀರೋ ಇಲ್ಲವೋ ಎನ್ನುವುದು ಅಲ್ಲ.
ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ಮಾಹಿತಿ ಕೊಡತಕ್ಕದ್ದೆಂದು ಮಾಹಿತಿ ಹಕ್ಕು ಕಾಯಿದೆ ಹೇಳುತ್ತದೆ. ಅದರಂತೆ ತಾ. ೧೦-೧೧-೨೦೦೯ರ ನನ್ನ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ನೀವು ನನಗೆ ಕೊಡದಿದ್ದಲ್ಲಿ, ಮಾಹಿತಿ ಹಕ್ಕು ಆಯುಕ್ತರಿಗೆ ದೂರು ಸಲ್ಲಿಸುವುದು ನನಗೆ ಅನಿವಾರ್ಯವಾಗುತ್ತದೆ ಎಂಬುದನ್ನು ಗಮನಿಸಿರಿ."
ಈವರೆಗೆ ಮಾಹಿತಿ ಬಂದಿಲ್ಲ.(ತಾ. ೧೪-೧೨-೨೦೦೯) ಅನಿವಾರ್ಯವಾಗಿ ನಾಳೆ ಮಾಹಿತಿ ಆಯುಕ್ತರಿಗೆ ದೂರು ಸಲ್ಲಿಸುತ್ತೇನೆ. ಏನಾಗುತ್ತದೋ ನೋಡೋಣ.
**********
ನಮಗೆ ಬೇಕಾದ ಮಾಹಿತಿ ಯಾವ ಇಲಾಖೆಯಲ್ಲಿ ದೊರೆಯುತ್ತದೆ ಎಂದು ತಿಳಿದುಕೊಳ್ಳುವುದೇ ಮೊದಲ ದೊಡ್ಡ ಸಮಸ್ಯೆ. ಆದರೆ ಮಾಹಿತಿ ಹಕ್ಕು ಕಾನೂನು ಇದನ್ನು ಸರಳವಾಗಿ ಪರಿಹರಿಸಿದೆ. ಎಂ ಆರ್ ಪಿ ಎಲ್ - ಕರ್ನಾಟಕ ಸರಕಾರಗಳ ನಡುವೆ ನೀರಿನ ಕುರಿತು ಆಗಿರುವ ಒಪ್ಪಂದದಲ್ಲಿ ಎಂ ಆರ್ ಪಿ ಎಲ್ ಗೆ ನೇತ್ರಾವತಿ ನದಿಯಿಂದ ದಿನಕ್ಕೆ ೨.೨೫ ಕೋಟಿ ಲೀಟರ್ ನೀರು ಎತ್ತಲು ಸರಕಾರ ಅನುಮತಿ ನೀಡಿದೆ. ಎಂ ಆರ್ ಪಿ ಎಲ್ ಈ ಮಿತಿಯೊಳಗೇ ನೀರು ಎತ್ತುತ್ತಿದೆಯೇ ಎಂದು ನೋಡಿಕೊಳ್ಳಲು ಒಂದು ಸರಕಾರಿ ಸಮಿತಿ ಇದೆ. ಈ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರು. ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಒಬ್ಬ ಸದಸ್ಯರು. ಇನ್ನೂ ಹಲವು ಸದಸ್ಯರಿದ್ದಾರೆ. ನಾನು ಜಿಲ್ಲಾಧಿಕಾರಿಯವರ ಕಛೇರಿಯ ಮಾಹಿತಿ ಅಧಿಕಾರಿಗೆ ಪತ್ರ ಬರೆದು, "ಈ ಸಮಿತಿ ಕಳೆದ ೫ ವರ್ಷಗಳಲ್ಲಿ ಎಷ್ಟು ಸಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ ಎಂಬ ಮಾಹಿತಿ ಮತ್ತು ತೀರ ಇತ್ತೀಚೆಗೆ ನೀಡಿದ ಭೇಟಿಯ ವರದಿಯ ಯಥಾಪ್ರತಿ"ಗಳನ್ನು ಕೊಡುವಂತೆ ಕೇಳಿದೆ. ಜಿಲ್ಲಾಧಿಕಾರಿ ಕಛೇರಿಯ ಮಾಹಿತಿ ಅಧಿಕಾರಿ ನನಗೆ ಪತ್ರ ಬರೆದು, "ಈ ಮಾಹಿತಿಯು ಸಣ್ಣ ನೀರಾವರಿ ಇಲಾಖೆಗೆ ಸಂಬಂಧ ಪಟ್ಟಿರುವುದರಿಂದ ನಿಮ್ಮ ಅರ್ಜಿಯನ್ನು ಅವರಿಗೆ ಕಳಿಸಿಕೊಟ್ಟಿದೆ" ಎಂದು ತಿಳಿಸಿ ನನ್ನ ಅರ್ಜಿಯನ್ನು ಅವರೇ ಸಣ್ಣ ನೀರಾವರಿ ಇಲಾಖೆಗೆ ಕಳಿಸಿಕೊಟ್ಟರು. ಇದೇ ಕಾನೂನು. ಅರ್ಜಿದಾರ ಕೇಳಿದ ಮಾಹಿತಿ ತನ್ನಲ್ಲಿ ಇಲ್ಲವೆಂದು ಯಾವ ಮಾಹಿತಿ ಅಧಿಕಾರಿಯೂ ಹೇಳುವಂತಿಲ್ಲ. ಆತ ಅರ್ಜಿಯನ್ನು ಮಾಹಿತಿ ಯಾರಲ್ಲಿದೆಯೋ ಅವರಿಗೆ ಕಳಿಸಿಕೊಟ್ಟು, ಹಾಗೆ ಕಳಿಸಿಕೊಟ್ಟಿರುವುದನ್ನು ಅರ್ಜಿದಾರನಿಗೆ ತಿಳಿಸಬೇಕು.
ಸಣ್ಣ ನೀರಾವರಿ ಇಲಾಖೆ ನನಗೆ ಪೂರ್ಣ ಮಾಹಿತಿ ಕೊಡಲಿಲ್ಲ. ಆದರೆ ಕೊಟ್ಟ ಮಾಹಿತಿ ಕುತೂಹಲಕರವಾಗಿದೆ: ಸಮಿತಿ ಸ್ಥಳಕ್ಕೆ ಭೇಟಿ ನೀಡಿದ ದಿನ ಎಷ್ಟು ನೀರು ಎತ್ತಲಾಯಿತೆಂಬುದರ ಲೆಕ್ಖವನ್ನು ಎಂ ಆರ್ ಪಿ ಎಲ್ ಸಮಿತಿಗೆ ಕೊಟ್ಟಿದೆ. ಅದು ನಿಗದಿತ ಮಿತಿಯೊಳಗೇ ಇದೆ. ಆದರೆ ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಯಾವುದೇ ವ್ಯಾಪಾರದಲ್ಲೂ, ವಸ್ತುವನ್ನು ಕೊಡುವವನು ತಾನೇ ಅಳೆದು ಅಥವಾ ತೂಕ ಮಾಡಿ ವಸ್ತುವನ್ನು ಕೊಡುವುದು ರೂಢಿ. ಕರೆಂಟಿನ ಮೀಟರ್ ಇಲಾಖೆಯದು. ದೂರವಾಣಿ ಮೀಟರ್ ಸಹ ಹಾಗೆಯೇ. ಆದರೆ ಎಂ ಆರ್ ಪಿ ಎಲ್ ವಿಷಯದಲ್ಲಿ ಮಾತ್ರ ಇದು ಉಲ್ಟಾ. (ಒಪ್ಪಂದದಲ್ಲಿ ಹೀಗೆ ಹೇಳಿದೆ: MRPL has to make its own arrangement to draw the permitted quantity of 5 MGD of water from the river for providing calibrated gauge or any other mechanical or electronic devise for assessing the quantum of water lifted and permitted to inspect the same by the Deputy Commissioner of D.K.... ಈ ವಾಕ್ಯದಲ್ಲಿ ಕೊಮಾ, ಪೂರ್ಣವಿರಾಮ ಇತ್ಯಾದಿಗಳನ್ನು ಓದುವವರೇ ಸೇರಿಸಿಕೊಳ್ಳಬೇಕು. ಕಾಲಸೂಚಕ ಪ್ರತ್ಯಯಗಳಿಗೂ ಓದುಗರೇ ಜವಾಬ್ದಾರಿ!) ಕಂಪೆನಿಯು ತಾನು ಎತ್ತಿದ ನೀರಿನ ಪ್ರಮಾಣವನ್ನು ತಾನೇ ಅಳೆದು ಸಮಿತಿಗೆ ಲೆಕ್ಖ ಕೊಡುತ್ತದೆ. ಸಮಿತಿ "ಎಲ್ಲ ಸರಿ ಇದೆ" ಎಂದು ತಲೆಯಾಡಿಸುತ್ತದೆ! ಹೇಗೆ ವ್ಯಾಪಾರ? ( ಪೋಲಿಸ್ ಅಧಿಕಾರಿ ಶಂಕರ ಬಿದರಿಯವರಿಗೆ ಒಂದು ವಿಶಿಷ್ಟ ದೇಹಭಾಷೆ ಇದೆ. "ಹೇಗೆ ವ್ಯಾಪಾರ?" ಅಂತ ನಾನು ಕೇಳಿದೆನಲ್ಲ, ಅದನ್ನು ಅವರು ಶಬ್ದಗಳೇ ಇಲ್ಲದೆ, ಮುಖ ಮತ್ತು ಕಣ್ಣುಗಳಲ್ಲೇ ಕೇಳಿ, ಆ ವ್ಯಾಪಾರದ ಪರಮ ಮೂರ್ಖತನವನ್ನು ಹೊರಹಾಕಬಲ್ಲರು. ಆ ಮಾತು ಬರೆದಾಗ ನನಗೆ ಅವರ ನೆನಪಾಯಿತು).
*******************
ನೇತ್ರಾವತಿ ನದಿ ನೀರು ಎತ್ತುವ ಬಗ್ಗೆ ಎಂ ಆರ್ ಪಿ ಎಲ್ ಮತ್ತು ಕರ್ನಾಟಕ ಸರಕಾರದ ನಡುವೆ ಆಗಿರುವ ಒಪ್ಪಂದದ ಕುರಿತು:
ಈ ಒಪ್ಪಂದದ ಪ್ರತಿಯನ್ನು ನಾನು ಮಾಹಿತಿ ಹಕ್ಕಿನಡಿ ಎಂ ಆರ್ ಪಿ ಎಲ್ ನಿಂದ ಪಡೆದುಕೊಂಡಿದ್ದೇನೆ.
೧. ಎಂ ಆರ್ ಪಿ ಎಲ್ ಗೆ ಕರ್ನಾಟಕ ಸರಕಾರ ಕೊಡುವ ನೀರಿಗೆ ದರ ಈಗ ೪೫ ಲಕ್ಷ ಲೀಟರಿಗೆ ರೂ. ೨೮೮-೯೦! ಈ ದರ ಯಾವ ಆಧಾರದಲ್ಲಿ ಯಾರು ನಿಗದಿ ಮಾಡಿದರು ಎಂಬುದು ಆಶ್ಚರ್ಯದ ವಿಷಯ. ಮಾರುಕಟ್ಟೆಯಲ್ಲಿ ದೊರೆಯುವ ಕುಡಿಯುವ ನೀರಿಗೆ ಲೀಟರಿಗೆ ರೂ. ೧೨-೦೦ ಇದೆ. ಅದರ ವಿಷಯ ಬಿಡೋಣ. ಬಂಟ್ವಾಳ ಪಟ್ಟಣ ಪಂಚಾಯತ್ ತಾನು ಸರಬರಾಜು ಮಾಡುವ ಕುಡಿಯುವ ನೀರಿನ ದರ ಒಂದು ಸಾವಿರ ಲೀಟರಿಗೆ ಎರಡು ರೂ. ವಾಣಿಜ್ಯ ಬಳಕೆಗೆ ಒಂದು ಸಾವಿರ ಲೀಟರಿಗೆ ಐದು ರೂ. ಮತ್ತು ಕೈಗಾರಿಕಾ ಬಳಕೆಗೆ ಒಂದು ಸಾವಿರ ಲೀಟರಿಗೆ ಎಂಟು ರೂಪಾಯಿ ಮೂವತ್ತಮೂರು ದರ ವಿಧಿಸುತ್ತದೆ. ಹೀಗಿರುವಾಗ ಇಂಥ ಬಿಸಾಕುದರದಲ್ಲಿ ಸರಕಾರ ಎಂ ಆರ್ ಪಿ ಎಲ್ ಗೆ ನೀರನ್ನು ಕೊಡುತ್ತಿರುವುದರ ಗುಟ್ಟು ಅರ್ಥವಾಗುವುದಿಲ್ಲ. ಈ ದರವನ್ನು ನಿಗದಿ ಮಾಡಿದವರು ಯಾರು ಮತ್ತು ಅದಕ್ಕೆ ಆಧಾರವೇನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತೇನೆ. ಮಾಹಿತಿ ಸಿಕ್ಕಿದರೆ ಮುಂದೆ ತಿಳಿಸುತ್ತೇನೆ.

ಭಾನುವಾರ, ನವೆಂಬರ್ 15, 2009

ಮಂಗಳೂರು ವಿಶೇಷ ಆರ್ಥಿಕವಲಯಕ್ಕೆ ನೀರೆಲ್ಲಿಂದ?





ಮಂಗಳೂರಿನಲ್ಲಿ ವಿಶೇಷ ಆರ್ಥಿಕವಲಯ ಸ್ಥಾಪನೆಯಾಗುತ್ತಿದೆ. ಈ ವಲಯದಲ್ಲಿ ಹಲವು ಕೈಗಾರಿಕೆಗಳು ಕಾರ್ಯಾರಂಭ ಮಾಡಲಿವೆಯಂತೆ; ಹಲವು ದೇಶೀ - ವಿದೇಶೀ ಕಂಪೆನಿಗಳು ತಳವೂರಲಿವೆಯಂತೆ; ಮಂಗಳೂರಿನ ಯುವಜನತೆಗೆ ಉದ್ಯೋಗ ನೀಡಲು ಈ ಕಂಪೆನಿಗಳು ಸ್ಪರ್ಧೆ ನಡೆಸಲಿವೆಯಂತೆ. ಇನ್ನೇನು ನಮ್ಮೂರಿನ ಯುವಜನತೆ ಯಾವ ಕೊಲ್ಲಿರಾಷ್ಟ್ರಕ್ಕೂ ಹೋಗಬೇಕಿಲ್ಲ, ಯಾವ ಅಮೆರಿಕಕ್ಕೂ ಹೋಗಬೇಕಿಲ್ಲ. ಅಷ್ಟೇಕೆ ಉದ್ಯೋಗ ಹುಡುಕಿ ಬೆಂಗಳೂರಿಗೂ ಹೋಗಬೇಕಿಲ್ಲ. ಕಾಲುಬುಡದಲ್ಲೇ ಕೇಳಿದ ಉದ್ಯೋಗ! ತಿಂಗಳಿಗೆ ಎಪ್ಪತ್ತು ಎಂಬತ್ತು ಸಾವಿರ ಸಂಬಳ ಲೆಕ್ಕಕ್ಕೇ ಅಲ್ಲವಂತೆ. ಅಷ್ಟು ಕೊಟ್ಟರೂ ಕೆಲಸಕ್ಕೆ ಜನ ಸಿಗದೆ ಹೋಗುವ ಕಾಲ ಬಂದರೂ ಆಶ್ಚರ್ಯವಿಲ್ಲವಂತೆ! ಸ್ವರ್ಗ ಧರೆಗಿಳಿಯಲು ಇನ್ನು ಹೆಚ್ಚು ದೂರವಿಲ್ಲ.ಬರೀ ಒಂದೆರಡು ವರ್ಷ ಸಾಕು ಅಷ್ಟೆ.
ಇರಲಿ. ನಮ್ಮವರೇ ಆದ ಭಟ್ಟರುಗಳ, ಪೈಮಾಮರ ಈ ಮಾತುಬಲೂನಿಗೆ ಒಂದು ಸಣ್ಣ ಸೂಜಿ ಚುಚ್ಚೋಣ, ಛಿದ್ರಾನ್ವೇಷಕರೆಂಬ ಬಿರುದಿಗೆ ಹೆದರದೆ!
ಈ ವಲಯಕ್ಕೆ ಬರಲಿರುವುದು ಯಾವ ಕೈಗಾರಿಕೆ, ಯಾವ ಕಂಪೆನಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಎಂ ಎಸ್ ಇ ಝಡ್ ಲಿ. ತನ್ನ ನೀರಿನ ಅಗತ್ಯ ೪೫ ಎಂಜಿಡಿ ಎಂದು ಘೋಷಿಸಿದೆ. ಈ ಲೇಖನಕ್ಕೆ ಕಂಪೆನಿಯ ಈ ಹೇಳಿಕೆಯೇ ಆಧಾರ.
ಒಂದು ಎಂಜಿಡಿ ಅಂದರೆ ದಿನಕ್ಕೆ ಹತ್ತು ಲಕ್ಷ ಗ್ಯಾಲನ್ ಎಂದು ಅರ್ಥ. ಒಂದು ಗ್ಯಾಲನ್ ಎಂದರೆ ಸುಮಾರು ನಾಲ್ಕೂವರೆ ಲೀಟರ್. ಅಂದರೆ ಒಂದು ಎಂಜಿಡಿ ಅಂದರೆ ದಿನಕ್ಕೆ ೪೫ ಲಕ್ಷ ಲೀಟರ್ ಆಯಿತು. ಎಂ ಎಸ್ ಇ ಝಡ್ ಲಿ. ತನಗೆ ಬೇಕಾದ ೪೫ ಎಂಜಿಡಿ ನೀರಿನ ಪೈಕಿ ೧೮ ಎಂಜಿಡಿ ನೀರನ್ನು ಮಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸುವ ಮೂಲಕ, ೧೨ ಎಂಜಿಡಿ ನೀರನ್ನು ತಾನು ಸ್ವಾಧೀನ ಪಡಿಸಿಕೊಂಡ ಭೂಮಿಯ ತಗ್ಗುಪ್ರದೇಶದಲ್ಲಿ ಮಳೆನೀರನ್ನು ಸಂಗ್ರಹಿಸುವ ಮೂಲಕ ಮತ್ತುಳಿದ ೧೫ ಎಂಜಿಡಿ ನೀರನ್ನು ಫಲ್ಗುಣಿ ನದಿಗೆ ಎರಡು ಹಾಗೂ ನೇತ್ರಾವತಿ ನದಿಗೆ ಎರಡು ಅಣೆಕಟ್ಟುಗಳನ್ನು ಹಾಕುವ ಮೂಲಕ ಪಡೆದುಕೊಳ್ಳುವುದಾಗಿ ಹೇಳಿದೆ.
ಕೊಳಚೆ ನೀರನ್ನು ಶುದ್ಧೀಕರಿಸಿ ಬಳಸುವ ಮತ್ತು ಮಳೆನೀರನ್ನು ಸಂಗ್ರಹಿಸಿ ಬಳಸುವ ಕಂಪೆನಿಯ ಯೋಜನೆ ಅತ್ಯಂತ ಆಕರ್ಷಕವಾಗಿದೆ. ಯಾರೂ ಶಹಭಾಸ್ ಎನ್ನುವಂತಿದೆ. ಆದರೂ ಈ ಯೋಜನೆಯನ್ನು ಕೊಂಚ ಹಿಂಜಿ ನೋಡೋಣ.
ಮೊನ್ನೆ ಮೊನ್ನೆಯವರೆಗೆ ಮಂಗಳೂರಿಗೆ ತುಂಬೆಯಿಂದ ಸರಬರಾಜಾಗುತ್ತಿದ್ದದ್ದೇ ಸುಮಾರು ೧೮ ಎಂಜಿಡಿ ನೀರು.(ಮಂಗಳೂರು ಮಹಾನಗರ ಪಾಲಿಕೆಗೆ ನೀರು ಸರಬರಾಜಾಗುವುದು ಬಂಟ್ವಾಳ ತಾಲೂಕಿನ ತುಂಬೆ ಎಂಬಲ್ಲಿ ನೇತ್ರಾವತಿ ನದಿಗೆ ಹಾಕಿರುವ ಕಿಂಡಿ ಅಣೆಕಟ್ಟಿನಿಂದ). ಮಂಗಳೂರಿಗರು ತಮ್ಮದೇ ಸ್ವಂತದ ತೆರೆದ ಬಾವಿಗಳಿಂದ, ಕೊಳವೆ ಬಾವಿಗಳಿಂದ ನೀರು ತೆಗೆದು ಬಳಸುತ್ತಾರೆ ಎನ್ನುವುದು ನಿಜವೇ. ಆದರೂ ಒಂದೊಂದು ಮನೆಯ ಕೊಳಚೆ ನೀರೂ ಅದೇ ಮನೆಯ ಕಾಂಪೌಂಡಿನೊಳಗೇ ವಿಲೇವಾರಿಯಾಗಿಬಿಡುತ್ತದೆ. ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಒಳಚರಂಡಿಗಳನ್ನು ಹೊಸದಾಗಿ ವ್ಯಾಪಕವಾಗಿ ರಚಿಸಲಾಗಿದೆ. ಆದರೆ ಇದರ ಸಂಪರ್ಕಕ್ಕೆ ನಾಗರಿಕರು ಹತ್ತುಸಾವಿರ ರೂ. ಕೊಡಬೇಕಂತೆ. ಹಾಗಾಗಿ ಜನ ಒಳಚರಂಡಿ ಸಂಪರ್ಕ ಪಡೆಯಲು ಮುಂದೆ ಬರುತ್ತಿಲ್ಲವೆಂದೂ, ಹೀಗೇ ಆದರೆ ಒಳಚರಂಡಿ ಸಂಪರ್ಕ ಪಡೆಯುವುದನ್ನು ಕಡ್ಡಾಯ ಮಾಡಬೇಕಾದೀತೆಂದೂ "ಕುಛ್ ಪಾನಾ ತೋ ಕುಛ್ ಖೋನಾ" ಖ್ಯಾತಿಯ ಮೇಯರ್ ರವರು ಹೇಳಿದ್ದಾರಂತೆ. ಪಾಲಿಕೆ ಸದ್ಯದಲ್ಲಿಯೇ ತುಂಬೆಯಿಂದ ಎತ್ತುವ ನೀರಿನ ಪ್ರಮಾಣವನ್ನು ದ್ವಿಗುಣಗೊಳಿಸಲಿದೆ. ಏನಿದ್ದರೂ ಕುಡ್ಸೆಂಪ್ ಯೋಜನೆ ಸಂಪೂರ್ಣವಾಗಿ ಮುಗಿದು, ಊರಿನ ಕೊಳಚೆ ನೀರು ದೊಡ್ಡ ಪ್ರಮಾಣದಲ್ಲಿ ಲಭ್ಯವಾಗಲು ಇನ್ನೂ ಸಾಕಷ್ಟು ಕಾಲ ಬೇಕು. ಇದಕ್ಕಾಗಿ ೨೦೨೬ರವರೆಗೆ ಕಾಯಬೇಕಾದೀತು ಎಂದು ಒಂದು ಅಂದಾಜು.ಸದ್ಯಕ್ಕೆ ಸುಮಾರು ೧೦-೧೨ ಎಂಜಿಡಿ ನೀರು ಮಾತ್ರ ಲಭ್ಯವಾದೀತು. ಎಂದರೆ ಎಂ ಎಸ್ ಇ ಝಡ್ ಲಿ. ಹೇಳುವ ೧೮ ಎಂಜಿಡಿಯಲ್ಲಿ ೬-೮ ಎಂಜಿಡಿ ಖೋತಾ ಆದಂತೆ.
ಕೊಳಚೆ ನೀರನ್ನು ಎಷ್ಟೇ ಶುದ್ಧಗೊಳಿಸಿದರೂ ಅದರ ಗುಣಮಟ್ಟ ಕಡಿಮೆಯೇ. ಈಗ ನೇತ್ರಾವತಿಯ, ಫಲ್ಗುಣಿಯ ನೀರನ್ನು ನಾವೆಲ್ಲ ಹೆಚ್ಚು ಕಡಿಮೆ ನೇರವಾಗಿಯೇ ಕುಡಿಯುತ್ತಿದ್ದೇವೆ. ಆಗಾಗ ಹೊಟ್ಟೆಹುಳಕ್ಕೆ ಮದ್ದು ಬೇಕಾಗುವುದು ಬಿಟ್ಟರೆ ಅಂಥಾ ದೊಡ್ಡ ದೋಷವೇನೂ ಅದರಲ್ಲಿ ಇದ್ದಂತಿಲ್ಲ! ನದಿಯ ನೀರು ಹೆಚ್ಚು ಕಡಿಮೆ ಧರ್ಮಕ್ಕೆ ಸಿಗುವಂಥದ್ದು. (ಎಂಆರ್ ಪಿಎಲ್ ಗೆ ನೀರು ನೇತ್ರಾವತಿ ನದಿಯಿಂದ. ೧೯೯೬ರಲ್ಲಿ ಆದ ಒಪ್ಪಂದದ ಪ್ರಕಾರ ಪ್ರತಿ ೪೫ ಲಕ್ಷ ಲೀ. ನೀರಿಗೆ ಎಂಆರ್ ಪಿಎಲ್ ಕೊಡಬೇಕಾದ ಹಣ ರೂ. ೫೬-೧೬!) ಕೊಳಚೆ ನೀರು ಶುದ್ಧೀಕರಿಸಲು ರಾಸಾಯನಿಕಗಳೂ, ಅಗಾಧ ಪ್ರಮಾಣದ ವಿದ್ಯುತ್ತೂ ಬೇಕು. ಎಷ್ಟು ಕಡಿಮೆ ಎಂದರೂ ಒಂದು ಸಾವಿರ ಲೀಟರ್ ನೀರಿಗೆ ಹತ್ತು ರೂಪಾಯಿಯಾದರೂ ಉತ್ಪಾದನಾ ವೆಚ್ಚ ಬರುತ್ತದೆ.ತನ್ನ ಉತ್ಪನ್ನಗಳ ಉತ್ಪಾದನಾ ವೆಚ್ಚವನ್ನು ನಿಯಂತ್ರಿಸುವ ಸಲುವಾಗಿ ಶುದ್ಧೀಕರಿಸಿದ ನೀರಿನ ಬಳಕೆಯನ್ನು ಸಾಧ್ಯವಿದ್ದಷ್ಟು ಕಡಿಮೆ ಮಾಡಿ, ನದಿಗಳ ನೀರಿನ ಬಳಕೆಯನ್ನು ಜಾಸ್ತಿ ಮಾಡಲು ಎಂ ಎಸ್ ಇ ಝಡ್ ಲಿ. ಎಲ್ಲಾ ಪ್ರಯತ್ನವನ್ನೂ ಮಾಡಿಯೇ ಮಾಡುತ್ತದೆ. ಪರಿಣಾಮವಾಗಿ ನೇತ್ರಾವತಿ ನದಿಯ ನೀರಿಗೆ ಬೇಡಿಕೆ ಹೆಚ್ಚಾಗುತ್ತದೆ. ಫಲ್ಗುಣಿಯಲ್ಲಿ ನೀರಿದ್ದರೆ ಅದರ ಮೇಲೂ ಒತ್ತಡ ಹೆಚ್ಚುತ್ತದೆ.
ಎಂ ಎಸ್ ಇ ಝಡ್ ಲಿ. ಈಗ ನೇತ್ರಾವತಿಗೆ ಕಟ್ಟು ಹಾಕಲು ಹವಣಿಸುತ್ತಿರುವುದು ತುಂಬೆಯಲ್ಲಿರುವ ಮಹಾನಗರಪಾಲಿಕೆಯ ಕಟ್ಟಕ್ಕಿಂತ ಮೊದಲು. ಈಗ ಎಂ ಆರ್ ಪಿ ಎಲ್ ಕಟ್ಟ ಇರುವುದೂ ಪಾಲಿಕೆಯ ಕಟ್ಟಕ್ಕಿಂತ ಮೊದಲು. ಹೀಗೆ ಪಾಲಿಕೆಯ ಕಟ್ಟಕ್ಕಿಂತ ಮೊದಲೇ ಇವುಗಳ ಕಟ್ಟ ಇರುವುದು ಇವುಗಳಿಗೆ ಸಹಜಾನುಕೂಲ, ಆದರೆ ಮಂಗಳೂರಿನ ಕುಡಿಯುವ ನೀರಿಗೆ ಇದು ಒಂದು ಸಮಸ್ಯೆಯೇ, ಇವತ್ತಲ್ಲದಿದ್ದರೆ ನಾಳೆಯಾದರೂ.
ಇನ್ನು ಮಳೆನೀರಿನ ಮೂಲಕ ೧೨ ಎಂಜಿಡಿ ನೀರಿನ ವಿಚಾರ. ಈ ಲೆಕ್ಕದಲ್ಲಿ ಸಂಗ್ರಹಿಸಬೇಕಾದ ನೀರಿನ ಪ್ರಮಾಣ ಎಷ್ಟು? ಎಷ್ಟು ದಿನಗಳಿಗೆ ಬೇಕಾದ ನೀರನ್ನು ಸಂಗ್ರಹಿಸಿಡಬೇಕು? ತುಂಬೆಯಲ್ಲಿ ಪಾಲಿಕೆ ೬೦ ದಿನಗಳ ನೀರು ದಾಸ್ತಾನಿಡಬೇಕೆಂಬ ನಿಯಮವನ್ನಿಟ್ಟುಕೊಂಡಿದೆಯಂತೆ. ಅಲ್ಲಿಗೆ ಇದು ಸಾಕು. ಏಕೆಂದರೆ, ಜಲಾಶಯಕ್ಕೆ ಪ್ರತಿದಿನವೂ ನೀರಿನ ಒಳಹರಿವು ಇರುತ್ತದೆ. ನೇತ್ರಾವತಿಯ ಜಲಾನಯನ ಪ್ರದೇಶ ಪಶ್ಚಿಮಘಟ್ಟಗಳಾದ್ದರಿಂದ, ಅಲ್ಲಿ ಮಾರ್ಚ್ - ಎಪ್ರಿಲ್ ತಿಂಗಳುಗಳಲ್ಲೂ ಮಳೆ ಬಂದು ಆ ನೀರು ತುಂಬೆ ಜಲಾಶಯವನ್ನು ಆಧರಿಸುತ್ತದೆ. ಆದರೆ ಇದೇ ಲೆಕ್ಕವನ್ನು ಎಂ ಎಸ್ ಇ ಝಡ್ ಲಿ. ನ ಮಳೆನೀರು ಸಂಗ್ರಹದ ಜಲಾಶಯಕ್ಕೆ ಅನ್ವಯಿಸುವಂತಿಲ್ಲ. ಏಕೆಂದರೆ ಈ ಸಂಗ್ರಹಕ್ಕೆ ಯಾವ ನದಿಯ ಒಳಹರಿವೂ ಇಲ್ಲ. ಜೊತೆಗೆ ಜಲಾನಯನ ಪ್ರದೇಶವೂ ತುಂಬಾ ಸೀಮಿತವಾದದ್ದು. ಆದ್ದರಿಂದ ಮಳೆಗಾಲವಲ್ಲದ ವರ್ಷದ ಎಂಟು ತಿಂಗಳ ಅವಧಿಗೆ ನೀರು ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯ.
ಎಂಟು ತಿಂಗಳು= ೨೪೦ ದಿನಗಳು
ದಿನಕ್ಕೆ ೧೨ ಎಂಜಿಡಿಯಂತೆ ೨೪೦ ದಿನಗಳಿಗೆ= ೨೮೮೦ ಎಂಜಿಡಿ
=೨೮೮೦x೪೫,೦೦೦೦೦ ಲೀಟರು=೧೨೯೬೦೦೦೦೦೦೦ ಲೀಟರು=೧೨೯೬ ಕೋಟಿ ಲೀಟರು
ಈ ಪ್ರಮಾಣದ ನೀರು ಸಂಗ್ರಹಿಸಲು ಎಷ್ಟು ಜಾಗ ಬೇಕಾದೀತು, ಎಂಥ ಏರ್ಪಾಟು ಬೇಕಾದೀತು ಎಂಬುದು ನನ್ನ ಕಲ್ಪನೆಗೆ ನಿಲುಕುವುದಿಲ್ಲ. ಯಾರಾದರೂ ತಿಳಿದವರು ಹೇಳಬೇಕಷ್ಟೆ. ಏನಿದ್ದರೂ ಇಷ್ಟು ನೀರನ್ನು ಎಂ ಎಸ್ ಇ ಝಡ್ ಲಿ. ಸಂಗ್ರಹಿಸಿ ತೋರಿಸುವವರೆಗೆ ಇದು ಸಾಧ್ಯವೆಂದು ನಾನು ನಂಬಲಾರೆ.
ಒಂದು ವೇಳೆ ಮಳೆನೀರಿನ ಸಂಗ್ರಹದಲ್ಲಿ ಕೊರತೆಯಾದರೆ, ಆ ಕೊರತೆಯನ್ನು ನೇತ್ರಾವತಿ, ಫಲ್ಗುಣಿ ನದಿಗಳು ತುಂಬಿಸಿಕೊಡಬೇಕಾಗಿ ಬರುತ್ತದೆ ಎನ್ನುವುದು ಮಾತ್ರ ಗ್ಯಾರಂಟಿ.
ನೇತ್ರಾವತಿಯ ಮೇಲೆ ಈಗ ಇರುವ ಒತ್ತಡ:
ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿರುವ ಆಣೆಕಟ್ಟಿನಿಂದ ಎಂಆರ್ ಪಿಎಲ್ ನೀರೆತ್ತುತ್ತಿದೆ. ನನ್ನ ಅಂದಾಜಿನ ಪ್ರಕಾರ ಅದು ಈಗ ಎತ್ತುತ್ತಿರುವ ನೀರಿನ ಪ್ರಮಾಣ ದಿನಕ್ಕೆ ಮೂರೂವರೆ ಕೋಟಿ ಲೀಟರ್. ಎಂಆರ್ ಪಿಎಲ್ ನ ಉತ್ಪಾದನಾ ಚಟುವಟಿಕೆ ಇನ್ನೊಂದೆರಡು ವರ್ಷಗಳಲ್ಲಿ ಅಗಾಧವಾಗಿ ಹೆಚ್ಚಲಿದೆ. ಎಂದರೆ ಇನ್ನು ಒಂದೆರಡು ವರ್ಷಗಳಲ್ಲಿ ಅದು ಬಳಸುವ ನೀರಿನ ಪ್ರಮಾಣ ಏಳು ಕೋಟಿ ಲೀಟರ್ ಮುಟ್ಟುವ ಸಾಧ್ಯತೆ ಇದೆ.
ಈಗ ದಿನಕ್ಕೆ ಸುಮಾರು ಎಂಟು ಕೋಟಿ ಲೀಟರ್ ನೀರೆತ್ತುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ಸದ್ಯೋಭವಿಷ್ಯದಲ್ಲಿ ದಿನಕ್ಕೆ ೧೬ ಕೋಟಿ ಲೀಟರ್ ನೀರನ್ನು ತುಂಬೆ ಜಲಾಶಯದಿಂದ ಎತ್ತುವ ಗುರಿ ಹೊಂದಿದೆ. ಮಂಗಳೂರಿನ ಜನರಿಗೆ ದಿನದ ೨೪ ಗಂಟೆಯೂ ನೀರು ನೀಡುವುದಾಗಿ ಮೇಯರ್ ಮತ್ತಿತರರು ಹೇಳಿಕೆಗಳನ್ನು ನೀಡುತ್ತಿದ್ದಾರೆ. "ನೀರು ಅಮೂಲ್ಯ. ಅದನ್ನು ಮಿತವಾಗಿ, ಎಚ್ಚರದಿಂದ ಬಳಸಿ" ಎಂದು ಹೇಳಬೇಕಾದ ಸರಕಾರಿ ಸಂಸ್ಥೆಯೊಂದು ೨೪ ಗಂಟೆಯೂ ನೀರು ನೀಡುವ ಹೇಳಿಕೆ ನೀಡುತ್ತಿರುವುದು ಅದಕ್ಕಿರುವ ಸಾಮಾಜಿಕ ಜವಾಬ್ದಾರಿಗೆ ಸಾಕ್ಷಿಯಾಗಿದೆ. (ನಾಲ್ಕು ಮೀ. ಎತ್ತರ ಇರುವ ತುಂಬೆ ಕಿಂಡಿ ಆಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರು ಸಾಲುವುದಿಲ್ಲ ಎಂಬ ಕಾರಣಕ್ಕೆ ಅದೇ ಆಣೆಕಟ್ಟಿನ ಸಮೀಪವೇ ಏಳು ಮೀ. ಎತ್ತರದ ಇನ್ನೊಂದು ಕಿಂಡಿ ಆಣೆಕಟ್ಟು ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿವೆ. ಇದರಿಂದಾಗಿ ಅಪಾರ ಪ್ರಮಾಣದ ಕೃಷಿಭೂಮಿ ಮುಳುಗಡೆಯಾಗಲಿದೆ. ಅದು ಬೇರೆಯೇ ಆದೊಂದು ಸಮಸ್ಯೆ. ಇದು ಆ ಸಮಸ್ಯೆಯನ್ನು ಚರ್ಚಿಸಲು ಸ್ಥಳವಲ್ಲ.)
ಈಗ ಇರುವ ಪರಿಸ್ಥಿತಿಯಲ್ಲೇ ಎಪ್ರಿಲ್ - ಮೇ ತಿಂಗಳುಗಳಲ್ಲಿ ನೇತ್ರಾವತಿಯ ನೀರು ತುಂಬೆಯಿಂದ ಮುಂದೆ ಹರಿಯುವುದಿಲ್ಲ. ಎಂಆರ್ ಪಿಎಲ್ ಮತ್ತು ಮಂಗಳೂರು ಮಹಾನಗರ ಪಾಲಿಕೆಗಳು ನೀರೆತ್ತುವ ಪ್ರಮಾಣವನ್ನು ಹೆಚ್ಚಿಸಿದರೆ ಫೆಬ್ರವರಿ ತಿಂಗಳಿನಿಂದಲೇ ಸಮುದ್ರಕ್ಕೆ ನೀರು ಸೇರುವುದು ನಿಂತು ಹೋಗಬಹುದು. ನಮ್ಮ ಎಲ್ಲ "ಅಭಿವೃದ್ಧಿಪರ" ಚಿಂತಕರೂ ಸಮುದ್ರಕ್ಕೆ ಸೇರುವ ನೀರು "ವ್ಯರ್ಥ"ವೆಂದೇ ಹೇಳುತ್ತಾರೆ. ಯಾವ ಅಧ್ಯಯನವನ್ನು ಆಧರಿಸಿ ಅವರು ಹೀಗೆ ಹೇಳುತ್ತಾರೆ ಎಂದು ನನಗೆ ತಿಳಿದಿಲ್ಲ. ನದಿಯ ನೀರು ಸಮುದ್ರಕ್ಕೆ ಸೇರುವುದು ಮಳೆಚಕ್ರದ ಒಂದು ಅವಿನಾಭಾಗ. ಅದನ್ನು ತುಂಡು ಮಾಡುವುದು ಅಪಾಯಕಾರಿಯಲ್ಲವೆ? ಹೆಚ್ಚು ಕಡಿಮೆ ಎಲ್ಲ ನದಿಗಳ ನೀರನ್ನೂ ಸಮುದ್ರ ಸೇರದಂತೆ ಮನುಷ್ಯ ತಡೆಯುತ್ತಿದ್ದಾನೆ, ನೇತ್ರಾವತಿ ಆ ದೊಡ್ಡ ಪ್ರಕ್ರಿಯೆಯ ಒಂದು ಭಾಗ ಮಾತ್ರ ಎಂಬುದನ್ನು ನೆನಪಿಡಬೇಕು.
ವಿದ್ಯಮಾನಗಳು ಹೀಗಿರುವಾಗ, ಎಂ ಎಸ್ ಇ ಝಡ್ ಲಿ.ಗೆ ನೇತ್ರಾವತಿಯಿಂದ ನೀರು ತೆಗೆಯಲು ಅನುಮತಿ ಕೊಟ್ಟರೆ ಪರಿಸ್ಥಿತಿ ಖಂಡಿತವಾಗಿ ಹದಗೆಡುತ್ತದೆ. ಕಾವೇರಿ ನದಿ ನೀರಿನ ವಿವಾದವು - ಎಸ್. ಎಂ. ಕೃಷ್ಣರು ಮುಖ್ಯಮಂತ್ರಿಯಾಗಿದ್ದಾಗ - ಸುಪ್ರೀಂ ಕೋರ್ಟಿನ ಅಪ್ಪಣೆಯನ್ನೇ ಉಲ್ಲಂಘಿಸುವ ಹಂತ ಮುಟ್ಟಿತ್ತೆಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಮುಂದೊಂದು ದಿನ ಎಂಆರ್ ಪಿಎಲ್ + ಎಂ ಎಸ್ ಇ ಝಡ್ ಲಿ. ಒಂದು ಕಡೆ ಮಂಗಳೂರು ಮಹಾನಗರ ಪಾಲಿಕೆ ಮತ್ತೊಂದು ಕಡೆ ಆಗಿ ಇವುಗಳ ನಡುವೆ ನೀರಿಗಾಗಿ ಯುದ್ಧವೇ ಸಂಭವಿಸುವ ಪರಿಸ್ಥಿತಿ ಬರಬಹುದು. ಈ ಹಿಂದೆ ಮಂಗಳೂರಿನ ಜನತೆಗೆ ಕುಡಿಯುವ ನೀರಿನ ಕೊರತೆಯಾದಾಗ ಜಿಲ್ಲಾಧಿಕಾರಿಯು ರೈತರು ನದಿಗೆ ಹಾಕಿದ್ದ ಕಟ್ಟಗಳನ್ನು ಒಡೆಸಿ ನೀರು ತೆಗೆದುಕೊಂಡ ಹೋದ ಉದಾಹರಣೆ ಇದೆ. ಪುನಃ ಅಂಥದೇ ಪರಿಸ್ಥಿತಿ ಬಂದರೆ, ಎಂಆರ್ ಪಿಎಲ್ ಮತ್ತು ಎಂ ಎಸ್ ಇ ಝಡ್ ಲಿ.ನ ಆಣೆಕಟ್ಟುಗಳ ಗೇಟು ತೆಗೆಸುವ ಎದೆಗಾರಿಕೆ, ಅಧಿಕಾರ ಮತ್ತು ತಾಖತ್ತು ಜಿಲ್ಲಾಧಿಕಾರಿಗೆ ಇರಬಹುದೇ?
"ಪೃಕೃತಿ ನಮ್ಮ ಅಗತ್ಯಗಳನ್ನು ಪೂರೈಸಬಲ್ಲುದು; ದುರಾಸೆಯನ್ನಲ್ಲ" ಎಂದು ಗಾಂಧೀಜಿ ಹೇಳಿದ್ದಾರೆ. ಕುಡಿಯುವ ನೀರು ನಮ್ಮ ಅಗತ್ಯ. ಅದನ್ನು ನೇತ್ರಾವತಿ ಪೂರೈಸಬಲ್ಲುದು. ವಿಶೇಷ ಆರ್ಥಿಕ ವಲಯ ನಮ್ಮ ದುರಾಸೆ. ಅದನ್ನು ನೇತ್ರಾವತಿ ಪೂರೈಸಲಾರದು.
**********************
ಇನ್ನೂ ಒಂದು ವಿಷಯವನ್ನು ಪ್ರಸ್ತಾವಿಸದೆ ಈ ಲೇಖನವನ್ನು ನಾನು ಮುಗಿಸಲಾರೆ. ಅದೆಂದರೆ ನೇತ್ರಾವತಿ ನದಿ ತಿರುವು ಯೋಜನೆ ಮತ್ತು ನೇತ್ರಾವತಿ ಹೇಮಾವತಿ ಜೋಡಣೆ ಯೋಜನೆಗಳು. ಈ ಯೋಜನೆಗಳು ಕಾರ್ಯಗತಗೊಂಡಲ್ಲಿ ಪರಿಸ್ಠಿತಿ ಇನ್ನೂ ಗಂಭೀರವಾಗಬಹುದು. ನೇತ್ರಾವತಿ ತಿರುವು ಯೋಜನೆಯ ಬಗ್ಗೆ ಹೆಚ್ಚಿನವರು ಕೇಳಿರಬಹುದು. ಇದು ಪಶ್ಚಿಮ ಘಟ್ಟಗಳಿಗೇ ಭಾರೀ ಅಪಾಯ ಮಾಡುವ ಯೋಜನೆ. ನೇತ್ರಾವತಿ ಹೇಮಾವತಿ ಜೋಡಣೆ ಯೋಜನೆಯ ಬಗ್ಗೆ ಕೇಳಿರುವವರು ಕಡಿಮೆ. ನ್ಯಾಷನಲ್ ವಾಟರ್ ಡೆವಲಪ್ ಮೆಂಟ್ ಏಜೆನ್ಸಿ ಎಂಬ ಕೇಂದ್ರ ಸರ್ಕಾರದ ಸಂಸ್ಥೆಯೊಂದು ಈ ಯೋಜನೆಯನ್ನು ರೂಪಿಸಿದೆ.ಈ ಯೋಜನೆಯ ಮೂಲ ಲಕ್ಷಣವೆಂದರೆ ನೇತ್ರಾವತಿಯ ನೀರನ್ನು ಹೇಮಾವತಿಗೆ ಸೇರಿಸುವುದು. ಈ ಸಂಸ್ಥೆಯ ಜಾಲತಾಣದಲ್ಲಿ ಯೋಜನೆಯ ವಿವರಗಳು ಲಭ್ಯವಿವೆ.
ಮಂಗಳೂರಿನ ಕುಡಿಯುವ ನೀರಿನ ಸರಬರಾಜಿನ ಮೇಲೆ ನೇರ ಪರಿಣಾಮ ಮಾಡುವ ಈ ಎಲ್ಲ ಅಂಶಗಳಿಗೆ ಸಂಬಂಧಿಸಿದಂತೆ ಒಂದು ಸಾರ್ವಜನಿಕ ವಿಚಾರ ಸಂಕಿರಣ ಏರ್ಪಡಿಸುವುದು ಅಗತ್ಯ ಎಂದು ತಿಳಿಸಿ ನಾನು ಮಂಗಳೂರಿನ ಮೇಯರ್ ಶ್ರೀ ಶಂಕರಭಟ್ಟರಿಗೆ ಸುಮಾರು ಒಂದೂವರೆ ತಿಂಗಳ ಮೊದಲು ಒಂದು ಪತ್ರ ಬರೆದಿದ್ದೇನೆ. ಆ ಪತ್ರಕ್ಕೆ ಅವರು ಈವರೆಗೂ ಉತ್ತರಿಸಿಲ್ಲ.


ಶುಕ್ರವಾರ, ಆಗಸ್ಟ್ 28, 2009

ಉಪನ್ಯಾಸಕ ವೇಷದ ಏಜೆಂಟರುಗಳು

ಬಳಕೆದಾರರ ವೇದಿಕೆಯ ಕೆಲಸವನ್ನು ನಾನು ಅಲ್ಪ ಸ್ವಲ್ಪ ಮಾಡುತ್ತೇನೆ. ಇತ್ತೀಚೆಗೆ ಗೃಹಿಣಿಯೊಬ್ಬರು ವೇದಿಕೆಗೆ ಬಂದರು. ಆಕೆ ಪರಿಚಯದವರೇ. ಇದಕ್ಕಿಂತ ಮೊದಲೂ ಒಂದು ಸಲ ಮುಕ್ತ ವಿಶ್ವವಿದ್ಯಾನಿಲಯದಿಂದ ಅಂಕಪಟ್ಟಿ ಬಂದಿಲ್ಲ ಎಂಬ ಸಮಸ್ಯೆಯ ಪರಿಹಾರಕ್ಕಾಗಿ ಬಂದಿದ್ದರು. ಇಂದೂ ಬರುವ ಮೊದಲೇ ಫೋನಿಸಿದ್ದರು. ಹಾಗಾಗಿ ಆಕೆ ಬರುತ್ತಿರುವುದು ಯಾಕೆಂದು ನನಗೆ ಸ್ವಲ್ಪ ಮಟ್ಟಿಗೆ ಅಂದಾಜಿತ್ತು.
ಆಕೆ ಎರಡು ಚಿಕ್ಕ ಮಕ್ಕಳ ತಾಯಿ. ಮೊದಲನೆಯ ಹೆಣ್ಣು ಮಗುವಿಗೆ ಈಗ ನಾಲ್ಕು ವರ್ಷ. ಎರಡನೆಯದು ತುಂಬಾ ಚಿಕ್ಕದು.ಆಕೆಯ ಪತಿ ನನಗೆ ಪರಿಚಯದವರೇ. ಅವರಿಗೆ ಪಿತ್ರಾರ್ಜಿತವಾಗಿ ಬಂದ ಜಮೀನು, ಮನೆ ಇದೆ. ಹಾಗೆಯೇ ಬಂದ ಪೌರೋಹಿತ್ಯದ ವೃತ್ತಿಯೂ ಇದೆ. ಅನುಕೂಲವೇ.
ಈ ಸಲ ಆಕೆ ಬಂದದ್ದು ಯಾವುದೇ ಸಮಸ್ಯೆಯ ಪರಿಹಾರಕ್ಕಲ್ಲ. ಬದಲಿಗೆ ಒಂದು ಸಲಹೆ ಕೇಳಲು. ಅವರ ಮನೆಗೆ ಮಂಗಳೂರಿನಿಂದ ಇಬ್ಬರು ಬಂದರಂತೆ. ಅವರು ಪುಸ್ತಕಗಳ ಏಜೆಂಟರು. ಮಕ್ಕಳಿಗಾಗಿ ಅತ್ಯುತ್ತಮ ಗುಣಮಟ್ಟದ ವಿಜ್ಞಾನದ ಪುಸ್ತಕಗಳನ್ನು ಅವರು ಮಾರುತ್ತಾರೆ. ಅವು ಇಂಗ್ಲಿಷ್ ಭಾಷೆಯಲ್ಲಿರುತ್ತವೆ. ಪುಸ್ತಕದಲ್ಲಿ ಮಕ್ಕಳ ಮನಸ್ಸನ್ನು ಆಕರ್ಷಿಸುವ ಚಿತ್ರಗಳಿಗೆ ಪ್ರಾಧಾನ್ಯ. ಅತ್ಯುತ್ತಮ ಗುಣಮಟ್ಟದ ಕಾಗದವನ್ನು ಬಳಸಿರುವುದರಿಂದ ಎಷ್ಟು ವರ್ಷವಾದರೂ ಅವು ಹಾಳಾಗುವುದಿಲ್ಲ, ಅವುಗಳ ಬಣ್ಣ ಮಾಸುವುದಿಲ್ಲ. ಇದು ಸ್ಪರ್ಧೆಯ ಯುಗ. ಮಕ್ಕಳು ಈ ಸ್ಪರ್ಧೆಯಲ್ಲಿ ಗೆದ್ದು ಉಳಿದ ಮಕ್ಕಳನ್ನು ಹಿಂದೆ ಹಾಕಬೇಕಾದರೆ ಈ ಪುಸ್ತಕಗಳನ್ನು ಓದಲೇಬೇಕು. ನಾಲ್ಕರಿಂದ ಐದು ವರ್ಷದ ಮಕ್ಕಳಿಗೆ ಅತ್ಯಂತ ತೀವ್ರವಾದ ಗ್ರಹಣ ಶಕ್ತಿ ಇರುತ್ತದೆ. "ಈ ವಯಸ್ಸಿನಲ್ಲಿ ನಿಮ್ಮ ಮಗಳಿಗೆ ಅದನ್ನು ಕೊಡಿಸಿದರೆ ಅವಳು ಎಂಥ ಸ್ಪರ್ಧೆಯನ್ನೂ ಗೆಲ್ಲುತ್ತಾಳೆ. ನಾವು ಹಾಗೆ ಎಲ್ಲ ಕಡೆಯೂ ಹೋಗಿ ಈ ಪುಸ್ತಕಗಳನ್ನು ಮಾರುವುದಿಲ್ಲ. ಆಯ್ದ ಕೆಲವೇ ಜನರನ್ನು ಹುಡುಕಿ ಅವರಿಗೆ ಮಾತ್ರ ಕೊಡುತ್ತೇವೆ" ಎಂದು ಅವರು ಹೇಳಿದರಂತೆ. ಜೊತೆಗೆ ಬಣ್ಣಬಣ್ಣದ ಪುಸ್ತಕದ ಕೆಟಲಾಗನ್ನೂ ಕೊಟ್ಟರಂತೆ. ಆಕೆ ಅ ಕೆಟಲಾಗನ್ನೂ ಹಿಡಿದುಕೊಂಡು ಬಂದಿದ್ದರು. ಜೊತೆಗೆ ಪುಸ್ತಕಕ್ಕಾಗಿ ಕೊಟ್ಟ ಮುಂಗಡದ ರಶೀದಿಯನ್ನೂ ಸಹ! ಈಗ ಆಕೆಗೆ ಕೆಲವರು "ಪುಸ್ತಕದ ರೇಟು ತುಂಬಾ ಹೆಚ್ಚಾಯಿತು" ಎನ್ನುತ್ತಿದ್ದಾರಂತೆ. ಆಕೆಗೆ ಆನುಮಾನವಾಗಿದೆ: ತಾನು ಕೊಟ್ಟ ರೇಟು ಹೆಚ್ಚಾಯಿತೇ, ಆ ಏಜೆಂಟರು ತನ್ನನ್ನು ಮಂಗ ಮಾಡಿರಬಹುದೇ ಎಂದು. ಪುಸ್ತಕ ಇನ್ನು ಬರಬೇಕಷ್ಟೆ, ಬಂದಾಗಲಿಲ್ಲ.
"ಎಷ್ಟಂತೆ ಪುಸ್ತಕಕ್ಕೆ?" ನಾನು ಕೇಳಿದೆ.
"ನಿಜವಾಗಿ ಒಂದೂವರೆ ಲಕ್ಷ ಅಂತೆ. ಹೆಚ್ಚಾಯಿತು ಎಂದಿದ್ದಕ್ಕೆ ಎಂಬತ್ತೈದು ಸಾವಿರಕ್ಕೆ ಒಪ್ಪಿದರು"
ಎಂಬತ್ತೈದು ಸಾವಿರ! ನಾಲ್ಕು ವರ್ಷದ ಮಗು ಓದುವ ಪುಸ್ತಕಕ್ಕೆ? ಓ ದೇವರೇ! ಏನು ಮಾತಾಡುವುದೆಂದು ನನಗೆ ಹೊಳೆಯಬೇಕಾದರೆ ಸ್ವಲ್ಪ ಹೊತ್ತು ಹೋಯಿತು.
"ನಾನು ಪುಸ್ತಕಗಳನ್ನು ನೋಡಿಲ್ಲ. ನೋಡದೆ ಅದರ ರೇಟು ಹೆಚ್ಚಾಯಿತೋ ಇಲ್ಲವೋ ಎಂದು ಹೇಳುವುದು ನನಗೆ ಕಷ್ಟ. ನೀವು ಎಡ್ವಾನ್ಸ್ ಕೊಟ್ಟದ್ದಕ್ಕೆ ಮೋಸ ಆಗಲಿಕ್ಕಿಲ್ಲ. ಪುಸ್ತಕ ಕೊಟ್ಟಾರು. ಕೊಡದೆ ಇರಲಿಕ್ಕಿಲ್ಲ"
"ಅದಲ್ಲ ನಾನು ಕೇಳುವುದು, ಪುಸ್ತಕದಿಂದ ಅಷ್ಟು ಪ್ರಯೋಜನ ಆಗಬಹುದೋ..."
"ನಾನು ಹೇಗೆ ಹೇಳಲಿ?"
*********************************
ಸುಮಾರು ಒಂಬತ್ತು ವರ್ಷಗಳ ಮೊದಲು ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನ ಉಪನ್ಯಾಸಕ ಶ್ರೀ ಎ.ಪಿ.ರಾಯರು ಈ ಪುಸ್ತಕಗಳ ವಕೀಲಿ ವಹಿಸಿ ನನ್ನಲ್ಲಿಗೆ ಬಂದಿದ್ದರು. ಅವರು ನನ್ನ ಹೆಂಡತಿ ರಮಾದೇವಿಯ ಹತ್ತಿರವೂ ಈ ಪುಸ್ತಕಗಳ ಬಗ್ಗೆ ಮಾತಾಡಿದ್ದರಂತೆ. ಅವಳು "ಅದರಲ್ಲಿರುವ ಎಲ್ಲ ಸಬ್ಜೆಕ್ಟುಗಳನ್ನೂ ಓದುವಷ್ಟು ಪುರುಸೊತ್ತು ನನ್ನ ಮಗನಿಗೆ ಇಲ್ಲ. ಯಾವುದಾದರೂ ಒಂದು ಸಬ್ಜೆಕ್ಟ್ ಓದುವುದಾದರೆ ಈ ಪುಸ್ತಕ ಸಾಕಾಗುವುದಿಲ್ಲ. ಆದ್ದರಿಂದ ಬೇಡ" ಎಂದಿದ್ದಳಂತೆ.
ನಾನು ಎ.ಪಿ.ರಾಯರಿಗೆ ಹೇಳಿದೆ: "ಮೈಸೂರು ವಿಶ್ವವಿದ್ಯಾನಿಲಯದವರು ನಾಲ್ಕಾಣೆ ಮಾಲೆಯಲ್ಲಿ ಬೇಕಾದಷ್ಟು ವಿಜ್ಞಾನದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳನ್ನು ಬರೆದವರು ವಿಶ್ವವಿದ್ಯಾನಿಲಯದ ಪ್ರೊಫೆಸರುಗಳು. ನನ್ನ ಮಟ್ಟಿಗೆ ಆ ಪುಸ್ತಕಗಳು ಸಾಕು. ಈಗ ಇಂಟರ್ ನೆಟ್ ಬೇರೆ ಬಂದಿದೆ. ಏನು ಬೇಕಾದ್ದು ಅದರಲ್ಲಿ ಸಿಕ್ಕುವಾಗ ನನಗಂತೂ ಈ ಪುಸ್ತಕಗಳಿಂದ ಪ್ರಯೋಜನವಿಲ್ಲ. ನನಗೆ ಬೇಡ".
ಈ ಪುಸ್ತಕ ಧಂಧೆಯ ಹಿಂದೆ ಏನಿದೆಯೋ, ಯಾರಿದ್ದಾರೋ ಒಂದೂ ನನಗೆ ತಿಳಿದಿಲ್ಲ. ಆದರೆ ತಮ್ಮ ಮಕ್ಕಳನ್ನು ಯಾವುದಾದರೊಂದು ಒಳದಾರಿಯ ಮೂಲಕ ಬೇರೆಯವರ ಮಕ್ಕಳಿಗಿಂತ ಬುದ್ಧಿವಂತರನ್ನಾಗಿಸುವ ಕೆಲವರ ಒಳ ಮನಸ್ಸಿನ ಆಸೆಯನ್ನು ಇದರ ಏಜೆಂಟರುಗಳು ನಗದು ಮಾಡಿಕೊಳ್ಳುವ ಚಾಲಾಕಿ ನನಗೆ ಆಶ್ಚರ್ಯ ಹುಟ್ಟಿಸಿದೆ. ಬಂಟ್ವಾಳದ ಎಸ್.ವಿ.ಎಸ್.ಕಾಲೇಜಿನ ಇನ್ನೂ ಹಲವು ಉಪನ್ಯಾಸಕರು ಈ ಪುಸ್ತಕದ ಏಜೆನ್ಸಿ ಹಿಡಿದಿದ್ದರೆಂದು ಕೇಳಿದ್ದೇನೆ. ಹೀಗೆ ಏಜೆನ್ಸಿ ಹಿಡಿದವರಲ್ಲಿ ಹೆಚ್ಚಿನವರು ಗಂಡ ಹೆಂಡತಿ ಇಬ್ಬರೂ ತಿಂಗಳ ಸಂಬಳ ಸಂಪಾದಿಸುವವರು. ಮಕ್ಕಳನ್ನು ಒಂದು ಅಥವಾ ಎರಡಕ್ಕೆ ಸೀಮಿತಗೊಳಿಸಿದವರು. ಎಷ್ಟು ಬಂದರೂ ದುಡ್ಡು ಕಹಿಯಾಗುವುದುಂಟೆ? ಇಂಥವರಿಗೆ ಹುದ್ದೆಯ ಕಿರೀಟ ಇರುವುದರಿಂದ ಟೊಪ್ಪಿ ಹಾಕುವ ಕೆಲಸವೂ ಸುಲಭವಾಗುತ್ತದೆ. ( ಉಪನ್ಯಾಸಕ ವೃತ್ತಿಯನ್ನು ತಮ್ಮ ಉಪವೃತ್ತಿಗೆ ಗುಜ್ಜು ಮಾಡಿಕೊಳ್ಳುವ ಇಂಥವರ ಬಗ್ಗೆ ಡಾ.ಬಿ.ಜಿ.ಎಲ್.ಸ್ವಾಮಿಯವರು ತಮ್ಮ "ಮೈಸೂರು ಡೈರಿ" ಪುಸ್ತಕದಲ್ಲಿ ಸೊಗಸಾಗಿ ಬರೆದಿದ್ದಾರೆ). ಪುಸ್ತಕ ಮಾರಿದವರಿಗೆ ಶೇ. ೪೦ರ ವರೆಗೂ ಕಮಿಷನ್ ಇದೆಯಂತೆ: ಪ್ರವಾಸ ಮುಂತಾದ ಬೋನಸ್ಸೂ ಇದೆಯಂತೆ. ಎಸ್.ವಿ.ಎಸ್. ಕಾಲೇಜಿನ ಉಪನ್ಯಾಸಕರೊಬ್ಬರು ಈ ಪ್ರವಾಸದ ಬೋನಸ್ಸನ್ನೂ ಗಿಟ್ಟಿಸಿಕೊಂಡಿದ್ದಾರಂತೆ! ಈ ಉಪನ್ಯಾಸಕ ನಾಮಕ ಖದೀಮ ಏಜೆಂಟರುಗಳು ಯಾರನ್ನಾದರೂ ಮಂಗ ಮಾಡಿ, ಆವರ ದುಡ್ಡು ನುಂಗಿ ಮಿಣ್ಣಗೆ ಮೀಸೆಯಡಿಯಲ್ಲಿಯೇ ನಗುತ್ತಿರುವ ಚಿತ್ರವನ್ನು ನನ್ನ ಮನಸ್ಸು ಯಾವಾಗಲೂ ಕಲ್ಪಿಸಿಕೊಂಡು ವ್ಯಗ್ರಗೊಳ್ಳುತ್ತದೆ. ದುಡ್ಡು ಕೊಟ್ಟು ಪುಸ್ತಕ ಕೊಂಡ ಬಕರಾಗಳನ್ನು ನೆನೆಸಿ ದುಃಖ ಉಕ್ಕಿ ಬರುತ್ತದೆ!
*******************
ಹೋಗಲಿ ಎಂದರೆ ಈ ಪುಸ್ತಕಗಳಿಂದ ಏನಾದರೂ ಪ್ರಯೋಜನವಿದೆಯೆ? ಒಂದನೇ ತರಗತಿಯ ಮಗುವಿಗೆ ಶಾಲೆಯಲ್ಲಿ ಆದರದ್ದೇ ಆದ ಬೇರೆ ಪುಸ್ತಕಗಳಿರುತ್ತವೆ. ಮನೆಗೆ ಬಂದರೆ ಗಂಟೆಗಟ್ಟಲೆ ಹೋಮ್ ವರ್ಕ್ ಇರುತ್ತದೆ. (ನಾನು ಇಂಗ್ಲಿಷ್ ಮೀಡಿಯಂ ಮಕ್ಕಳ ಬಗ್ಗೆ ಹೇಳುತ್ತಿದ್ದೇನೆ. ಈ ಪುಸ್ತಕ ಕೊಂಡುಕೊಳ್ಳುವ ವರ್ಗದ ಜನ ಎಂದಾದರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿಯಾರೆ? ಇಸ್ಸಿ!) ತಂದೆಯೋ ತಾಯಿಯೋ ಆ ಪುಸ್ತಕಗಳನ್ನು ಓದಿ, ಮಗುವಿಗೆ ಹೇಳಿಕೊಡಬೇಕು. ಇದು ಎಂದಾದರೂ ಸಾಧ್ಯವೆ? ಈ ನಡುವೆ ಅಷ್ಟು ದುಬಾರಿಯ ಪುಸ್ತಕ ಕೊಂಡ ಮೇಲೆ, ಅವುಗಳನ್ನು ಸುರಕ್ಷಿತವಾಗಿ ಇಡಬೇಡವೆ? ಆದಕ್ಕೊಂದು ಆಲ್ಮೇರವೋ ಎಂತದೋ ಸುಡುಗಾಡು. ಆಂತಿಮವಾಗಿ, ಕೊಂಡವರಿಗೆ ತಮ್ಮ ಮೂರ್ಖತನದ ಸ್ಮಾರಕವಾಗಿ ಈ ಪುಸ್ತಕಗಳು ಉಳಿದುಕೊಳ್ಳುತ್ತವೆ. ಅಷ್ಟರಮಟ್ಟಿಗೆ ಅವುಗಳನ್ನು ಕೊಂಡದ್ದು ಸಾರ್ಥಕವೇ ಸರಿ. ಈ ಯಾವ ವಿಷಯವೂ ಪುಸ್ತಕದ ಏಜೆಂಟರಿಗೆ ಗೊತ್ತಿಲ್ಲದ್ದಲ್ಲ. ಆದರೆ ಇಷ್ಟು ಸುಲಭದಲ್ಲಿ, ಇನ್ನೊಬ್ಬರಿಗೆ ಮೋಸ ಮಾಡಿದ ಸಂತೋಷವೂ, ದುಡ್ಡೂ ಮತ್ತೆಲ್ಲಿ ಸಿಗಲು ಸಾಧ್ಯ?
******************
ನಾನು ಆ ಗೃಹಿಣಿಗೆ ಹೇಳಿದೆ: "ನೀವು ಹಣ ಖರ್ಚು ಮಾಡಿ ನಿಮ್ಮ ಮಗಳನ್ನು ಬುದ್ಧಿವಂತೆಯಾಗಿಸುವ ಪ್ರಯತ್ನ ಮಾಡುತ್ತಿದ್ದೀರಿ. ಹಣವೂ ಉಳಿಯಬೇಕು, ಮಗಳು ಬುದ್ಧಿವಂತೆಯೂ ಆಗಬೇಕು, ಅಂಥದೊಂದು ಉಪಾಯ ಹೇಳುತ್ತೇನೆ. ನಾವು ಅದೇ ಉಪಾಯ ಮಾಡಿದ್ದೆವು. ನೀವೂ ಮಾಡುವುದಾದರೆ ಮಾಡಿ"
"ಏನು?"
"ನಿಮ್ಮ ಮಕ್ಕಳ ಪಿ.ಯು.ಸಿ. ಮುಗಿಯುವವರೆಗೂ ಮನೆಗೆ ಟಿವಿ ತರಬೇಡಿ. ಹಣವೂ ಉಳಿಯಿತು. ಮಕ್ಕಳಿಗೆ ಓದಲು ಸಮಯವೂ ಸಿಕ್ಕಿತು"
ಎಷ್ಟೇ ದಡ್ಡರಾದರೂ, ಇಂಥ ಅಪ್ರಾಯೋಗಿಕ ಸಲಹೆಯನ್ನು ಒಪ್ಪುವವರುಂಟೆ?
"ಟೀವಿ ದೊಡ್ಡವರಿಗೆ ಬೇಕಲ್ಲ" ಎಂದರು ಆಕೆ ನಿರಾಶೆಯಿಂದ.
***

ಪ್ರಿಯರೇ
ಈ ಪುಸ್ತಕ ವ್ಯಾಪಾರಿಗಳು ಯಾವ ಸಂಕೋಚವಿಲ್ಲದೆ ನನ್ನಂಗಡಿಗೂ ನುಗ್ಗುತ್ತಿರುತ್ತಾರೆ. ನಿಜವಾಗಿ ಹೇಳಬೇಕೆಂದರೆ ಹಾಗೆ ನುಗ್ಗುವವರು ತೀರಾ ಮುಗ್ಧರು, ನಿಜ ಜೀವನದಲ್ಲಿ ಸರಿಯಾದ ಪುಸ್ತಕದಂಗಡಿ ನೋದಿದ್ದಾಗಲೀ ಅದರ ಕುರಿತು ವಿಚಾರಮಾಡಿದ್ದಾಗಲೀ ಇರುವುದೇ ಇಲ್ಲ. ಅವರು ಅವರಿಗೆ ಸಿಕ್ಕ ತರಬೇತಿ ಬಲದಲ್ಲಿ ಎಷ್ಟೋ ಸಲ ನನಗೇ ಸವಾಲು ಹಾಕುವುದೂ ಇರುತ್ತದೆ "ಸಾರ್, ಇದನ್ನು ನಾವು ನಿಮಗೆ ೭೫% ರಿಯಾಯ್ತಿ ದರದಲ್ಲಿ ಕೊಡುತ್ತೇವೆ. ನೀವು ಎಷ್ಟಕ್ಕಾದರೂ ಮಾರಿಕೊಳ್ಳಬಹುದು. . . . . ." ಹೀಗೆ ಇವರು ಮಾರಿಕೊಂಡು ಬರುವ ಪುಸ್ತಕಗಳ ನಿಜ ನೆಲೆ, ಬೆಲೆ ಇವರಿಗೆ ದೇವರಾಣೆ ತಿಳಿದಿರುವುದಿಲ್ಲ. ಬಿಡು ಸಮಯದಲ್ಲಿ ಮನೆಪಾಠ ಹೇಳುವುದರಿಂದ ತೊಡಗಿ ಕುರಿ ನಡೆಸುವ, ಆಟೋ ರಿಕ್ಶಾ ಕೊಂಡು ಚಾಲಕರಿಗೆ ಬಾಡಿಗೆ ಮೇಲೆ ಕೊಡುವ ಹಲವು ಉಪಾಧ್ಯಾಯರುಗಳನ್ನು ನೋಡಿರುವ ನನಗೆ ‘ಪುಸ್ತಕ ವ್ಯಾಪಾರ’ ನಡೆಸುವವರ ಬಗ್ಗೆ ಏನೂ ಆಶ್ಚರ್ಯವಾಗಲಿಲ್ಲ. ಮತ್ತೆ ಈ ಪುಸ್ತಕಗಳ ಹಿನ್ನೆಲೆ ನನಗೆ ಇದುವರೆಗೆ ತಿಳಿದುಕೊಳ್ಳುವುದು ಆಗಲಿಲ್ಲ. ಇನ್ನು ನಿಮ್ಮ ಪರಿಚಿತರು ಡಬ್ಬಲ್ ಧಮಾಕಾ ಅನುಭವಿಸುತ್ತಾರೋ ಎಂಬ ಆತಂಕ ನನಗಿದ್ದೇ ಇದೆ.( ಪುಸ್ತಕದ ಬಗ್ಗೆ ಮರುಳಾದದ್ದಲ್ಲದೆ ಆ ವಿಚಾರದಲ್ಲಿ ಕೊಟ್ಟ ಮುಂಗಡವನ್ನೂ ಕಳೆದುಕೊಳ್ಳುತ್ತಾರೋಂತ) ಬೇರೇನು ಹೇಳಲಿ.
ಇಂತು ವಿಶ್ವಾಸಿಅಶೋಕವರ್ಧನ


ಟೊಪ್ಪಿ ಹಾಕು -ಒಂದು ವಿವರಣೆ
ಟೊಪ್ಪಿ ಹಾಕು ಎಂಬ ಪದಗುಚ್ಛವನ್ನು ನಾವೆಲ್ಲ ಯಾವಾಗಲೂ ಬಳಸುತ್ತೇವೆ. ಆದರೆ ಅದರ ಆರ್ಥದ ಹಿನ್ನೆಲೆ ಸ್ವಾರಸ್ಯವಾದುದು. ನನ್ನ ಆರ್ಥ ವಿವರಣೆ ತಪ್ಪಾದರೆ "ಪಂಡಿತ"ರು ಕ್ಷಮಿಸಬೇಕು.
ಸಣ್ಣವರಿದ್ದಾಗ ನಾವೆಲ್ಲ ಸ್ಕೂಲಿನಲ್ಲಿ ಟೊಪ್ಪಿ ಆಟ ಆಡುತ್ತಿದ್ದೆವು. ಆ ಕಾಲದ ಬಡತನಕ್ಕೆ ತಕ್ಕ ಆಟ ಆದು. ಬ್ಯಾಟು, ಬಾಲು, ಪ್ಯಾಡು ಹೀಗೆ ಯಾವ ದುಬಾರಿ ಸಲಕರಣೆಗಳೂ ಆ ಆಟಕ್ಕೆ ಬೇಕಾಗಿಲ್ಲ. ಆಡುವವರ ಪೈಕಿ ಯಾರಾದರೊಬ್ಬ ಹುಡುಗನ ಒಂದು ಟೊಪ್ಪಿ ಇದ್ದರಾಯಿತು! ಆಂದ ಹಾಗೆ ಆಗ ನಾವೆಲ್ಲ ಟೊಪ್ಪಿ ಹಾಕಿಕೊಂಡೇ ಸ್ಕೂಲಿಗೆ ಹೋಗುತ್ತಿದ್ದೆವು.[ನಾವು ಅಣ್ಣ ತಮ್ಮಂದಿರಿಗೆ ಟೊಪ್ಪಿ ಇನ್ನೂ ಒಂದು ಉಪಕಾರ ಮಾಡುತ್ತಿತ್ತು. ಆಗ ನಮಗೆ ಜುಟ್ಟು (ದ.ಕ.ದವರ ಶೆಂಡಿ) ಇತ್ತು. ಅದನ್ನು ಮುಚ್ಚಿಕೊಳ್ಳಲು ಟೊಪ್ಪಿ ಸಹಕಾರಿಯಾಗಿತ್ತು]. ೧೯೫೫-೧೯೬೦ರ ಕಾಲದ ಮಾತು ಇದು.
ಆಟಕ್ಕೆ ಇಂತಿಷ್ಟೇ ಜನ ಅನ್ನುವ ನಿಯಮವೂ ಇಲ್ಲ. ಒಂದೋ ಎರಡೋ ಹುಡುಗರು ಹೆಚ್ಚಿದ್ದರೂ ಆಯಿತು, ಕಡಿಮೆ ಇದ್ದರೂ ಆಯಿತು. ಇದ್ದಷ್ಟು ಹುಡುಗರು ದುಂಡಗೆ (ವೃತ್ತಾಕಾರದಲ್ಲಿ ಎಂದರ್ಥ; ಸಾಗರದ ಕೆಲವು ಕಡೆ ದುಂಡಗೆ ಎಂಬ ಪದಕ್ಕೆ ಬತ್ತಲೆ ಎಂಬರ್ಥವಿದೆ, ಅದಲ್ಲ!) ಕೂರಬೇಕು. ಯಾರಾದರೊಬ್ಬ ಹುಡುಗ ಒಂದು ಟೊಪ್ಪಿ ಕೈಯಲ್ಲಿ ಹಿಡಿದುಕೊಂಡು ವೃತ್ತದ ಸುತ್ತ ಓಡಲು ಶುರು ಮಾಡುತ್ತಾನೆ. ಅವನು ಟೊಪ್ಪಿ ಯಾರ ಹಿಂದೆ ಬೀಳಿಸುತ್ತಾನೆ ಎಂಬುದನ್ನು ಕೂತವರೆಲ್ಲ ಸರಿಯಾಗಿ ಗಮನಿಸುತ್ತಿರಬೇಕು. ಯಾಕೆಂದರೆ ಯಾರ ಹಿಂದೆ ಟೊಪ್ಪಿ ಬಿದ್ದಿರುತ್ತದೋ ಅವರಿಗೆ ಅವನು ಮತ್ತೊಂದು ಸುತ್ತು ಬರುವಾಗ ಟೊಪ್ಪಿಯಿಂದ ಸಮಾ ಬಾರಿಸುತ್ತಾನೆ! ಟೊಪ್ಪಿ ಯಾರ ಹಿಂದೆ ಬಿದ್ದಿರಬಹುದು ಎಂದು ಲೆಕ್ಕ ಹಾಕುವ ಭರದಲ್ಲಿ ಅದು ನಮ್ಮ ಹಿಂದೆಯೇ ಬಿದ್ದಿರುವುದು ಗೊತ್ತೇ ಅಗುವುದಿಲ್ಲ! ಅದು ಗೊತ್ತಾಗುವುದು ಟೊಪ್ಪಿಯ ರಪ ರಪ ಪೆಟ್ಟು ಬಿದ್ದಾಗಲೇ!
ಹೀಗೆ ಎದುರಾ ಎದುರಾ, ಗೊತ್ತು ಮಾಡಿಯೇ ಮೋಸ ಮಾಡುವುದಕ್ಕೆ "ಟೊಪ್ಪಿ ಹಾಕು" ಎಂಬ ಪದಗುಚ್ಛ ಸಾರ್ಥಕವಾಗಿ ಬಳಕೆಗೆ ಬಂದಿದೆ.

ಭಿನ್ನ ಮತ - ಪರಿಹಾರ
ಎಲ್ಲಿಂದ ಬಂತು ಈ ಭಿನ್ನಮತ ಭೂತ?
ಏನು ಕಾರಣವಿದಕೆ ಏನು ಪರಿಹಾರ?
ಕೇಳಲೆಡ್ಡಿಯು ಕವಡೆ ಹಾಕಿದನು ಭಟ್ಟ
ಸ್ತ್ರೀಮೂಲವೀ ದೋಷ, ಪರಿಹಾರ ಕಷ್ಟ!

ಬುಧವಾರ, ಮೇ 27, 2009

ಮಾದರಿ-ಪಾದರಿ-ವಿಷಯ


ನಿರೇನ್, ಅಶೋಕವರ್ಧನರ ಜೊತೆ ಬಿಸಿಲೆಯ ಕಾಡಿನಲ್ಲಿ ನಡೆಯುತ್ತಿದ್ದೆ. ಕಾಡಿನಲ್ಲಿ ನಡೆಯುವಾಗ ಮೌನವಾಗಿರುವುದು ನಿರೇನ್ ಕ್ರಮ. ಅವರು ಸ್ವಲ್ಪ ಮುಂದಿದ್ದರು.
''ಅಶೋಕರೆ, ಸ್ಯಾಂಪಲ್ ಪದಕ್ಕೆ ಕನ್ನಡದಲ್ಲಿ ಏನು ಹೇಳಬೇಕು?'' ನನ್ನ ಪ್ರಶ್ನೆ.
''ಮಾದರಿ''-ಅಶೋಕರ ಉತ್ತರ.
ನಾನು - ನೀವೂ ಅದೇ ಹೇಳುತ್ತೀರ? ಗಟ್ಟಿಯವರೂ ಅದೇ ಹೇಳಿದರು. ನನಗೆ ಯಾಕೋ ಆ ಪದ ಸಮಾಧಾನವಿಲ್ಲ
ಅಶೋಕ್-ಪದನಿಧಿ ನೋಡಿ.
ಪ್ರಶಾಂತ್ ಮಾಡ್ತರ ಪದನಿಧಿ ಆಗಷ್ಟೆ ಬಿಡುಗಡೆ ಆಗಿತ್ತು. ಅಶೋಕರು (ಎಷ್ಟೆಂದರೂ) ಪುಸ್ತಕ ವ್ಯಾಪಾರಿ.
ನಾನು-ಅದರಲ್ಲಿ ಕೊಡುತ್ತಾರೆ ಅನ್ನುತ್ತೀರ?
ಅಶೋಕ್ - ಕೊಡಬಹುದು
(ಕೆಲವು ಕ್ಷಣ ಮೌನವಾಗಿ ನಡೆದೆವು. ನಂತರ ಮುಂದೆ ನಡೆಯುತ್ತಿದ್ದ ಅಶೋಕ್ ಸಟ್ಟ ತಿರುಗಿ)

''ಏ ಇಲ್ಲ ಇಲ್ಲ ಮಾಡ್ತರು ಆ ಪದ (ಮಾದರಿ) ಮುಟ್ಟುವುದಿಲ್ಲ''
ನಾನು (ಆಶ್ಚರ್ಯದಿಂದ) - ಯಾಕೆ?
ಅಶೋಕ್ - ಯಾಕೆಂದರೆ ಅವರು ಪಾದರಿ!
*********
ಈ ಕತೆಯನ್ನು ದೀರ್ಘಕಾಲದಿಂದ ಕ್ರೈಸ್ತ ಕಾಲೇಜೊಂದರಲ್ಲಿ ಉದ್ಯೋಗಿಯಾಗಿರುವ ನನ್ನೊಬ್ಬ ಮಿತ್ರರಿಗೆ ಹೇಳಿದೆ. ಎಲ್ಲ ಕೇಳಿದ ಮೇಲೆ ಅವರು ನಿರ್ಭಾವುಕರೆಂಬಂತೆ ಮುಖ ಮಾಡಿಕೊಂಡು ಮೆಲ್ಲ ಹೇಳಿದರು:
ಅಶೋಕರಿಗೆ ವಿಷಯ ಗೊತ್ತಿಲ್ಲ!

ಇ-ಮೇಲ್ ನಲ್ಲಿ ಬಂದ ಪ್ರತಿಕ್ರಿಯೆ ೨೮-೦೫-09

ರಾಯರೇ ಭಳಿರೇ.
ಹಾಸ್ಯದೊಳಗೊಂದು ಗಂಭೀರ ಸುಳಿ! ನನಗೆ ಹೇಳುವಂತದ್ದೇನೂ ಇಲ್ಲ, ಅವರವರ ದರುಶನಕೆ ಗುರು ನೀನೊಬ್ಬನೇ ಎಂಬ ಕವಿವಾಣಿಗೆ ಶರಣು, ಶರಣಾರ್ಥಿ.

ಅಶೋಕವರ್ಧನ

ಭಾನುವಾರ, ಏಪ್ರಿಲ್ 5, 2009

ಲಂಚದ ಕೋಟೆಗೊಂದು ಸಣ್ಣ ಪೆಟ್ಟು

ದೂರದ ದೆಹಲಿಯಲ್ಲಿರುವ ವೈಲಾಯ ದಂಪತಿಗಳು ನನ್ನ ಪತ್ನಿಯ ಹತ್ತಿರದ ಬಂಧುಗಳು. ಅವರ ಇಬ್ಬರು ಗಂಡು ಮಕ್ಕಳೂ ಅಮೆರಿಕಾದಲ್ಲಿದ್ದಾರೆ. ಹಾಗಾಗಿ ವೈಲಾಯ ದಂಪತಿಗಳು ಮತ್ತೆ ಮತ್ತೆ ಅಮೆರಿಕಕ್ಕೆ ಹೋಗಿ ಬರುತ್ತಿರುತ್ತಾರೆ.

ಇತ್ತೀಚಿಗೆ ಮುಂಬಯಿಯಲ್ಲಿ ಉಗ್ರರ ದಾಳಿ ನಡೆದ ನಂತರ ಅಂತರರಾಷ್ಟ್ರೀಯ ಪ್ರಯಾಣಿಕರ ದಾಖಲೆಗಳನ್ನು ತಪಾಸಣಾಧಿಕಾರಿಗಳು ತುಂಬಾ ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದ್ದಾರಂತೆ. ವೈಲಾಯರ ಪತ್ನಿ ಬಿ.ಸಿ.ರೋಡಿನವರು. ಅವರ ಜನನ ದಾಖಲೆಯನ್ನು ಪಕ್ಕಾ ಮಾಡಿಕೊಳ್ಳುವ ಉದ್ದೇಶದಿಂದ ವೈಲಾಯರು ನಮಗೆ ಒಂದು ಪತ್ರ ಬರೆದು, "ತಾಲೂಕು ಆಫಿಸಿನಿಂದ ಈ ದಾಖಲೆಯನ್ನು ಪಡೆದು ಕಳಿಸಲು ಸಾಧ್ಯವೇ?' ಎಂದು ಕೇಳಿದರು.

ದೃಢ ಪತ್ರಿಕೆ ಏನೋ ಸಿಕ್ಕಿತು

ನಾನು ಜನವರಿ ೦೯ರ ಯಾವುದೋ ಒಂದು ದಿನ ಬಂಟ್ವಾಳ ತಾಲೂಕು ಆಫೀಸಿಗೆ ಹೋಗಿ ಒಂದು ಅರ್ಜಿ ಸಲ್ಲಿಸಿದೆ. ಜೊತೆಗೆ ಅರ್ಜಿ ಶುಲ್ಕ ಹತ್ತು ರೂ. ಕಟ್ಟಿದೆ. ಯಾವುದೇ ತೊಂದರೆ ಇಲ್ಲದೆ ಒಂದು ವಾರದ ಒಳಗೆ ನನಗೆ ದಾಖಲೆ ಸಿಕ್ಕಿತು. ಆದರೆ ಅದರಲ್ಲಿ ಒಂದು ಸಮಸ್ಯೆ ಇತ್ತು. "ಮಗುವಿನ ಹೆಸರು" ಎಂಬ ಕಾಲಮ್ಮಿನ ಎದುರುಗಡೆ 'ಹೆಣ್ಣು ಮಗು' ಎಂದಿತ್ತು. (ಮಗು ಹುಟ್ಟಿದ ಕೂಡಲೇ ಪಟೇಲರಿಗೆ ಅಥವಾ ಶಾನುಭೋಗರಿಗೆ ತಿಳಿಸುತ್ತಿದ್ದರು . ಹುಟ್ಟಿದ ಕೂಡಲೇ ಹೆಸರಿಡುತ್ತಾರೆಯೇ? ಹಾಗಾಗಿ ಮಗು ಗಂಡೋ ಹೆಣ್ಣೋ ತಿಳಿಸುವುದು, ಹೆಸರು ಮತ್ತೆ ಕೊಡುತ್ತೇವೆ ಎನ್ನುವುದು, ಮತ್ತೆ ಕೊಡಲು ಮರೆತು ಹೋಗುವುದು ಹೀಗೆಲ್ಲ ಆಗಿ, ಒಟ್ಟಿನಲ್ಲಿ ದಾಖಲೆಯಲ್ಲಿ ಉಳಿಯುವುದು "ಹೆಣ್ಣು ಮಗು'' ಎಂದೋ 'ಗಂಡು ಮಗು ' ಎಂದೋ ಮಾತ್ರ. ಹೆಸರಿಲ್ಲ. ಹೆಸರಿಲ್ಲದ ದೃಢಪತ್ರಿಕೆಗೆ ಯಾವ ಬೆಲೆಯೂ ಇಲ್ಲ ಎಂಬುದು ಕೊಡುವವರಿಗೆ ಗೊತ್ತಿಲ್ಲದ ವಿಚಾರವೇನಲ್ಲ.) ನನಗೆ ಮಗುವಿನ ಹೆಸರು ಇರುವ ದೃಢಪತ್ರಿಕೆ ಬೇಕಾಗಿತ್ತು. ಇದಲ್ಲದೇ ಮಗುವಿನ ತಂದೆಯ ಹೆಸರು 'ವೆಂಕಪ್ಪಯ್ಯ' ಎಂದಿರಬೇಕಾದದ್ದು 'ವೆಂಕಪ್ಪ ಎಂದಾಗಿತ್ತು. ನಮೂದುಗಳು ಕನ್ನಡ ಭಾಷೆಯಲ್ಲಿದ್ದವು.ನನಗೆ ಅವು ಇಂಗ್ಲಿಷಿನಲ್ಲಿ ಬೇಕಾಗಿದ್ದವು. ಉಳಿದ ದಾಖಲೆಗಳೊಂದಿಗೆ ತಾಳೆಯಾಗಬೇಕಾದರೆ ಜನನ ಪ್ರಮಾಣಪತ್ರದಲ್ಲೂ ಈ ನಮೂದುಗಳು ನಿಖರವಾಗಿರಬೇಕಾಗಿತ್ತು.
ಹತ್ತಿರ ಹತ್ತಿರ ಬಾ!
ಬಂಟ್ವಾಳದ ತಾಲೂಕು ಕಛೇರಿಯಲ್ಲಿ ಈ ದೃಢಪತ್ರಿಕೆಯನ್ನು ಕೊಡಬೇಕಾದ ಅಧಿಕಾರಿ ಇರುವುದು ವಾರದಲ್ಲಿ ಎರಡು ದಿನ ಮಾತ್ರ. ಮಂಗಳವಾರ ಮತ್ತು ಶುಕ್ರವಾರ. ನಾನು ಶುಕ್ರವಾರ ಪುನಃ ಹೋಗಿ ಅಧಿಕಾರಿಯನ್ನು ಕಂಡು "ಹೀಗಾಯಿತಲ್ಲ, ಏನು ಮಾಡುವುದೀಗ?" ಎಂದೆ. "ಅದೆಲ್ಲ ಸರಿ ಮಾಡಿಕೊಡಬಹುದು. ಜನನ ದಾಖಲೆ ಯಾರದ್ದೋ ಅವರ ಅಣ್ಣನೋ, ತಮ್ಮನೋ ಒಂದು ಅರ್ಜಿ ಕೊಟ್ಟು, ನಂತರ ವಿಚಾರಣೆಗೆ ಬಂದಾಗ ಹೇಳಿಕೆ ಕೊಟ್ಟು ದೃಢೀಕರಿಸಬೇಕು. ನಾವು ಅರ್ಜಿಯನ್ನು ಗ್ರಾಮಲೆಕ್ಕಿಗರಿಗೆ ಕಳಿಸಿ ಅವರಿಂದ ವರದಿ ತರಿಸಿಕೊಂಡು, ದೃಢಪತ್ರಿಕೆ ಕೊಡುತ್ತೇವೆ. ಆದರೆ ನಿಮಗೆ ಬೇಗ ಬೇಕಾದರೆ........" ಮಾತು ನಿಂತಿತು.
ನಾನು ಮುಖದಲ್ಲೊಂದು ಪ್ರಶ್ನೆ ಮೂಡಿಸಿಕೊಂಡು ಅವರ ಕಡೆ ನೋಡಿದೆ.
"ಬನ್ನಿ, ಇಲ್ಲಿ ಹತ್ತಿರ"
ಇಷ್ಟು ಹೊತ್ತೂ ನಾನು ಅವರ ಮೇಜಿನ ಎದುರಿಗೆ ನಿಂತಿದ್ದೆ. ಈಗ ಹತ್ತಿರ ಕರೆಯುತ್ತಿದ್ದಾರೆ! ಒಳ್ಳೆಯ ಅವಕಾಶ! ಬಲದ ಬದಿಯಿಂದ ಎರಡು ಮೇಜುಗಳ ಮಧ್ಯೆ ತೂರಿಕೊಂಡು ಸ್ವಲ್ಪ ಹತ್ತಿರ ಹೋದೆ. ಅವರಿಗೆ ಸಾಕಾಗಲಿಲ್ಲ.
"ಬನ್ನಿ, ಬನ್ನಿ, ಇನ್ನೂ ಹತ್ತಿರ ಬನ್ನಿ"
ನಾನು ಇನ್ನೂ ಸ್ವಲ್ಪ ಹತ್ತಿರ ಜರುಗಿದೆ.
"ನಿಮಗೆ ಅರ್ಜೆಂಟಿದ್ದರೆ ಮಾಡಿಕೊಡಬಹುದು. ನೀವು ಏನಾದರೂ ಸ್ವಲ್ಪ ಕೊಡಬೇಕಾಗುತ್ತದೆ"-ಸಣ್ಣ ದನಿ.
"ಎಷ್ಟು?" - ಅವರ ಶ್ರುತಿಯಲ್ಲೇ ಕೇಳಿದೆ.
"ಎಷ್ಟೆಂದು ಹೇಳಲಿ? ಎರಡು ಮೂರು ತಿದ್ದುಪಡಿ ಆಗಬೇಕಲ್ಲ....... ಒಂದು ಸಾವಿರ ಕೊಡಿ"
ಹತ್ತಿರ ಹೋಗಿದ್ದ ನನಗೆ ಬಿಸಿ ಜೋರು ತಾಗಿತು! ಸ್ವಲ್ಪ ದೂರ ಸರಿದೆ.
"ನೋಡೋಣ. ಅದು ನನ್ನದಲ್ಲ. ಪಾರ್ಟಿ ಡೆಲ್ಲಿಯಲ್ಲಿದ್ದಾರೆ. ನಾನು ಅವರಿಗೆ ಫೋನ್ ಮಾಡಿ ಮತ್ತೆ ಬರುತ್ತೇನೆ" ಎಂದು ಹೊರಡಲು ಅಣಿಯಾದೆ.
"ನಿಮಗೆ ಅರ್ಜೆಂಟಿದ್ದರೆ ಮಾತ್ರ. ಇಲ್ಲದಿದ್ದರೆ ಹಾಗೇ ಆಗುತ್ತದೆ" ಎಂಬ ಸಮಾಧಾನ ಬಂತು. ನಾನು ಏನೂ ಹೇಳದೆ ಹೊರಟು ಬಂದೆ.
ವಿಚಾರಣೆ ನಡೆಯಿತು
ನಾನು ಪುನಃ ಮಂಗಳವಾರ ತಾಲೂಕು ಆಫೀಸಿಗೆ ಹೋದೆ. ಈ ಸಲ ಸೀದ ತಹಸೀಲ್ದಾರರ ಛೇಂಬರಿಗೆ. ಅದೃಷ್ಟವಶಾತ್ ನನಗೆ ತಹಸೀಲ್ದಾರರ ಪರಿಚಯ ಮೊದಲೇ ಇತ್ತು. ನನ್ನ ಹಾಗೇ ಮಾತಾಡಲು ಬಂದ ಇನ್ನೊಬ್ಬರೂ ಅಲ್ಲಿದ್ದರು. "ಏನು?" ಎಂಬ ತಹಸೀಲ್ದಾರರ ಪ್ರಶ್ನೆಗೆ ಉತ್ತರ ಹೇಳಲು ನಾನು ಕೊಂಚ ಅನುಮಾನಿಸಿದೆ."ಪರವಾಗಿಲ್ಲ ಹೇಳಿ" ಅಂದರು ಅವರು. ನಾನು ನಡೆದದ್ದನ್ನೆಲ್ಲ ಹೇಳಿ "ಈಗ ನಾನು ಏನು ಮಾಡಬೇಕು?" ಎಂದೆ. ಅವರು ಬೆಲ್ ಮಾಡಿ ಯಾರನ್ನೋ ಕರೆದು ಆ ಆಧಿಕಾರಿಯನ್ನು ಕರೆಸಿದರು. ಬಂದ ಅಧಿಕಾರಿಗೆ ನಾನು ಅಲ್ಲಿ ಕೂತಿದ್ದುದು ನೋಡಿ ಮುಖಭಾವ ಕೊಂಚ ಬದಲಾಯಿತು.
"ಏನ್ರಿ, ಏನು ಹೇಳಿದಿರಿ ಇವರಿಗೆ?" ತಹಸೀಲ್ದಾರರು ಜಬರಿಸಿ ಕೇಳಿದರು.
ಅಧಿಕಾರಿಯ ಮುಖ ಕಪ್ಪಾಯಿತು. ತಡವರಿಸಿದರು. ನಾನು ಅವರನ್ನೇ ಗಮನಿಸುತ್ತಿದ್ದೆ. ಯಾವ ಪೂರ್ವಸಿದ್ಧತೆಯೂಗಲಿ, ಅಗತ್ಯವಾಗಲಿ ಇಲ್ಲದಿದ್ದರೂ ಬಾಯಿ ತೆಗೆದರೆ ಸುಳ್ಳು ಬಿಟ್ಟು ಬೇರೆ ಏನನ್ನೂ ಹೇಳದ ಮಹಾಫಟಿಂಗರನ್ನು ನಾನು ನಮ್ಮ ಬಿ.ಸಿ.ರೋಡಿನಲ್ಲಿಯೇ ಕಂಡಿದ್ದೇನೆ. ಈ ಮನುಷ್ಯನೂ ಅದೇ ವರ್ಗಕ್ಕೆ ಸೇರಿದ್ದರೆ? "ನಾನು ಇವರ ಹತ್ತಿರ ಹಣ ಕೇಳಿದ್ದೇ ಸುಳ್ಳು" ಎಂದು ಸಾಧಿಸಿಬಿಟ್ಟರೆ? ಅವರು ಹಣ ಕೇಳಿದ್ದಕ್ಕೆ ನನ್ನ ಹತ್ತಿರ ಸಾಕ್ಷಿ ಏನೂ ಇರಲಿಲ್ಲವಲ್ಲ?
ಆದರೆ ಹಾಗೇನೂ ಆಗಲಿಲ್ಲ. ಈ ಆಧಿಕಾರಿ ಬಹುಶಃ ಕೊಡಗಿನ ಕಡೆಯವರು. ಮಿಲಿಟರಿಯವರ ಹಾಗೆ ಒಳ್ಳೇ ಜಬರ್ದಸ್ತಾಗಿದ್ದರು. ಮೀಸೆ ಜೋರಾಗಿ ಬಿಟ್ಟಿದ್ದರು. ಆದರೂ ಮುಖದಲ್ಲಿ ಬೆವರು ಹರಿಯುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಕರ್ಚೀಫಿನಿಂದ ಮುಖ, ಹಣೆ ಒರೆಸಿಕೊಳ್ಳಲು ಶುರು ಮಾಡಿದರು.
"ಏನ್ರಿ, ಏನು ಹೇಳಿದಿರಿ ಇವರಿಗೆ?" ಪುನಃ ತಹಸೀಲ್ದಾರರ ಜೋರು ದನಿ. ಅಧಿಕಾರಿ ತಡವರಿಸಿದರು. ಸ್ಪಷ್ಟ ಉತ್ತರ ಬರಲಿಲ್ಲ.
ತಹಸೀಲ್ದಾರ್: ನಿಮ್ಮ ಆಫೀಸರ್ ಮೊಬೈಲ್ ನಂಬರ್ ಕೊಡ್ರೀ
ಅಧಿಕಾರಿ: ಸರ್.... ಸರ್....
ತಹಸೀಲ್ದಾರ್: ಏನು ಹೇಳಿದಿರಿ ಇವರಿಗೆ?
ಅಧಿಕಾರಿ: ಹಣ ಕೇಳಿದ್ದು ಹೌದು.... ಆದರೆ ಅದು ಬೇಗ ಕೆಲಸ ಆಗಬೇಕಾದರೆ ಮಾತ್ರ.
ನಾನು ಕೂತಲ್ಲಿಯೇ ಒಮ್ಮೆ ಉಸಿರು ಬಿಟ್ಟೆ.
ತಹಸೀಲ್ದಾರ್: ಹೇಗ್ರೀ ಬೇಗ ಮಾಡಿಕೊಡುತ್ತೀರಿ? ಅದಕ್ಕೆ ಪ್ರೊಸೀಜರ್ ಇಲ್ಲವೇನ್ರಿ?
ಅಧಿಕಾರಿ: ಅಲ್ಲ ಸರ್, ಏನಾದ್ರೂ ಮಾತಾಡಿ....
ತಹಸೀಲ್ದಾರ್: ಆಯಿತು, ನಿಮ್ಮ ಆಫೀಸರ್ ಮೊಬೈಲ್ ನಂಬರ್ ಕೊಡಿ ಈಗ
ಸ್ವಲ್ಪ ಕೊಸರಾಡಿ ಅಂತೂ ಅಧಿಕಾರಿ ನಂಬರ್ ಕೊಟ್ಟರು.ತಹಸೀಲ್ದಾರರು ಮೇಲಧಿಕಾರಿಯೊಂದಿಗೆ ಮಾತಿಗೆ ತೊಡಗಿದರು."ಏನು ಸ್ವಾಮಿ, ನಿಮ್ಮ ಆಫೀಸಿನಿಂದ್ ಇಂಥವರನ್ನೆಲ್ಲ ಕಳಿಸುತ್ತೀರಿ. ಇಲ್ಲಿ ಬಂದು ನಮ್ಮ ಮರ್ಯಾದೆ ತೆಗೆಯುತ್ತಾರೆ"
ವಿಷಯ ಕೇಳಿ ಆ ಕಡೆಯಿಂದ "ದೂರು ಕೊಟ್ಟವರೇ ಸುಳ್ಳು ಹೇಳುತ್ತಿರಬಹುದು" ಎಂಬ ಉತ್ತರ ಬಂತಂತೆ!
ಕೋಟೆಯ ರಕ್ಷಣೆಗೆ ಒಬ್ಬೊಬ್ಬರಾಗಿ ಹೊರಬಿದ್ದ ಸೈನಿಕರು
ಸೈನಿಕ-೧
"ಸುಂದರ ರಾಯರೆ, ನೀವು ಒಂದು ಕಂಪ್ಲೇಂಟ್ ಬರೆದು ಕೊಟ್ಟುಬಿಡಿ.ನಿಮ್ಮ ಕೆಲಸ ಆಗುವ ಹಾಗೆ ನಾನು ನೋಡುತ್ತೇನೆ" ಎಂದರು. ನಾನು "ಆಗಲಿ" ಎಂದು ಹೇಳಿ ದೂರು ಬರೆದು ತರಲು ಹೊರಟೆ. ಆಧಿಕಾರಿ "ಸರ್, ಬರವಣಿಗೆಯಲ್ಲಿ ದೂರು ಕೊಡುವುದು ಬೇಡ, ನಾನು ಅವರ ಕೆಲಸ ಮಾಡಿಕೊಡುತ್ತೇನೆ" ಎಂದು ಅಂಗಲಾಚತೊಡಗಿದರು. ಅವರ ಮಾತು ಮುಂದುವರಿದಿದ್ದ ಹಾಗೇ ನಾನು ಹೊರಗೆ ಬಂದೆ. ಸಮೀಪದ ವಂಶ ಕಂಪ್ಯೂಟರ್ಸಿನ ಯಾದವರು ನನ್ನ ಗೆಳೆಯ. ಅಲ್ಲಿಗೆ ಹೋಗಿ ಪೇಪರು, ಪೆನ್ನು ತೆಗೆದುಕೊಂಡು ಒಂದು ದೂರು ಬರೆದು ಸಿದ್ಧ ಮಾಡಿ ತಂದೆ. ಇಷ್ಟೊತ್ತಿಗಾಗಲೇ ಅರ್ಧ ಗಂಟೆ ಕಳೆದಿರಬಹುದು. ನಾನು ತಹಸೀಲ್ದಾರರಿಗೆ ದೂರು ನೀಡಿ ಹೊರಗೆ ಬರುವಾಗ ಅಧಿಕಾರಿ ತನ್ನೊಬ್ಬ ಸ್ನೇಹಿತರೊಂದಿಗೆ ಅಲ್ಲಿಯೇ ಕಾಯುತ್ತಿದ್ದರು. ಅವರ ಸ್ನೇಹಿತರು ಅದೇ ಕಛೇರಿಯಲ್ಲಿ ಚುನಾವಣೆ ವಿಭಾಗದಲ್ಲಿ ಕೆಲಸ ಮಾಡುವವರು. ನನಗೆ ಪರಿಚಿತರೇ. ಅವರು ನನಗೆ "ನಿಮಗೆ ನನ್ನ ಗುರುತು ಇಲ್ಲವೇ? ನೀವು ಸಮಸ್ಯೆ ನನಗೆ ಹೇಳಿದ್ದರೆ ನಿಮ್ಮ ಕೆಲಸ ನಾನು ಮಾಡಿಸಿಕೊಡುತ್ತಿದ್ದೆನಲ್ಲ" ಎಂದು ನನ್ನ ದೂರಿಗೆ ಆಕ್ಷೇಪಣೆ ತೆಗೆದರು.
ನಾನು ಅಧಿಕಾರಿಯನ್ನು ಉದ್ದೇಶಿಸಿ "ಸ್ವಾಮಿ, ನಮ್ಮ ನಮ್ಮ ಮಕ್ಕಳೇ ಉಗ್ರಗಾಮಿಗಳ ಗುಂಡಿಗೆ ಬಲಿಯಾಗುವವರೆಗೂ ನಮಗೆ ಬುದ್ಧಿ ಬರುವುದಿಲ್ಲವೆ? ಇದೆಂಥ ಕೆಲಸ ಮಾಡುತ್ತಿದ್ದೀರಿ ನೀವು?" ಎಂದು ದೊಡ್ಡ ದೊಡ್ದ ಮಾತಾಡತೊಡಗಿದೆ. ಅವರಿಬ್ಬರೂ ನನ್ನ ಮಾತನ್ನು ಕೊಂಚವಾದರೂ ಕಿವಿಯ ಮೇಲೆ ಹಾಕಿಕೊಳ್ಳುವ ಮನಃಸ್ಠಿತಿಯಲ್ಲಿರಲಿಲ್ಲ. ಉಗ್ರಗಾಮಿ, ಕೊಲೆ, ಮಕ್ಕಳು ಮುಂತಾದುವೆಲ್ಲ ಅವರ ಪಾಲಿಗೆ ಸಂಪೂರ್ಣ ಅರ್ಥಹೀನ ಶಬ್ದಗಳಾಗಿದ್ದವು. ನಾನು ಕೊಟ್ಟಿದ್ದ ದೂರನ್ನು ಹೇಗಾದರೂ ಹಿಂದೆ ಪಡೆಯುವಂತೆ ಮಾಡುವುದನ್ನು ಬಿಟ್ಟು ಬೇರೇನೂ ಆವರ ತಲೆಗೆ ಹೋಗುವಂತಿರಲಿಲ್ಲ. "ನಾನು ನಿಮ್ಮ ಕೆಲಸ ಮಾಡಿಕೊಡುತ್ತೇನೆ, ನೀವು ದೂರು ಹಿಂದೆ ತೆಗೆದುಕೊಳ್ಳಿ" ಎಂದು ಅಧಿಕಾರಿ ಮತ್ತೆ ಮತ್ತೆ ನನ್ನನ್ನು ಪೀಡಿಸತೊಡಗಿದರು. ನಾನೆಂದೆ: "ನಾನು ದೂರು ಕೊಟ್ಟಾಗಿದೆ. ಇನ್ನು ಅದನ್ನು ಹಿಂದೆ ಪಡೆಯುವ ಮಾತು ಇಲ್ಲ"
ಇಬ್ಬರೂ ನನಗೆ ಗಟ್ಟಿಯಾಗಿ ಅಂಟಿಕೊಂಡರು. ಕೊನೆಗೆ ನಾನು ಹೇಳಿದೆ:
"ನಾನು ದೂರು ಹಿಂದೆ ಪಡೆಯುವುದು ಸಾಧ್ಯವಿಲ್ಲ. ಬೇಕಾದರೆ ನಿಮ್ಮ ಜೊತೆ ತಹಸೀಲ್ದಾರರ ಹತ್ತಿರ ಬರುತ್ತೇನೆ. ನೀವೇ ಏನಾದರೂ ಮಾತಾಡಿಕೊಳ್ಳಿ"
"ಅಷ್ಟಾದರೂ ಮಾಡಿ" ಎಂದರು ಅಧಿಕಾರಿ. ನಾನು ಅವರ ಜೊತೆ ತಹಸೀಲ್ದಾರರ ಛೇಂಬರಿಗೆ ಹೋದೆ. ಅಧಿಕಾರಿ ಲಿಖಿತ ದೂರು ಬೇಡವೆಂದೂ, ಇನ್ನು ತಾನು ಇಂಥ ಕೆಲಸ ಮಾಡುವುದಿಲ್ಲವೆಂದೂ, ನನ್ನ ಕೆಲಸವನ್ನು ಮಾಡಿ ಕೊಡುವೆನೆಂದೂ ನಾನಾ ಬಗೆಯಾಗಿ ತಹಸೀಲ್ದಾರರ ಎದುರು ಗೋಗರೆದರು. "ಅದೆಲ್ಲ ಮತ್ತೆ ನೋಡೋಣ" ಎಂದು ತಹಸೀಲ್ದಾರರು ಪ್ರಕರಣ ಮುಗಿಸಿದರು. ಅಧಿಕಾರಿ ಅಲ್ಲಿಂದ ಹೊರಗೆ ಹೋದನಂತರ, ನಾನು ತಹಸೀಲ್ದಾರರ ಹತ್ತಿರ "ಅವರಿಗೆ ಶಿಕ್ಷೆಯಾಗಬೇಕೆಂದು ನಾನು ಬಯಸುವುದಿಲ್ಲ" ಎಂದು ಹೇಳಿ ಬಂದೆ.
"ತಹಸೀಲ್ದಾರರಿಗೆ ಪವರ್ಸ್ ಇಲ್ಲ!"-ಸೈನಿಕ-೨
ಅದೇ ದಿನ ಸಂಜೆ ಸುಮಾರು ಏಳರ ಹೊತ್ತಿಗೆ ಎಂದಿನಂತೆ ನನ್ನ ಪ್ರೆಸ್ಸಿನಲ್ಲಿ ಕೂತಿದ್ದೆ. ನನಗೆ ಚೆನ್ನಾಗಿ ಪರಿಚಯವಿರುವ ವಿಲೇಜ್ ಎಕೌಂಟೆಂಟ್ ಒಬ್ಬರು ಪ್ರೆಸ್ಸಿನ ಎದುರು ಬೈಕ್ ನಿಲ್ಲಿಸಿ ಒಳಗೆ ಬಂದರು. ಇವರು ನನ್ನ ನೆರೆಕರೆಯವರೇ. ನನಗೆ ತುಂಬ ವಿಶ್ವಾಸದವರೂ ಹೌದು. ಬಂದವರು.
"ಬೋಪಯ್ಯರು ಸಿಕ್ಕಿದ್ದರು. ಎಲ್ಲ ಹೇಳಿದರು. ಅವರು ತುಂಬ ಒಳ್ಳೆಯ ಜನ" ಎಂದರು.
ನಾನು: ಹೂಂ
ವಿ.ಎ.: ನಮಗೆ ಅದು ಇದು ಅಂತ ಏನೇನೋ ಅಂಕಿ ಅಂಶದ ಕೆಲಸ ಮಾಡಲಿಕ್ಕೆ ಇರುತ್ತದಲ್ಲ. ಕೆಲವೊಮ್ಮೆ ನಮಗೆ ಅದು ತಿಳಿಯುವುದೇ ಇಲ್ಲ. ನಾವು ಅವರಿಗೇ ಅದನ್ನು ಕೊಟ್ಟು ಬಿಡುವುದು, ಎಲ್ಲ ಸರಿ ಮಾಡಿಕೊಡುತ್ತಾರೆ.
ನಾನು: ಹೂಂ
ವಿ.ಎ.: ಅವರು ನಿಜವಾಗಿ ಈ ಆಫೀಸಿನವರಲ್ಲ. ಮಂಗಳೂರಿನಿಂದ ಇಲ್ಲಿಗೆ ಬರುವುದು. ವಾರಕ್ಕೆ ಎರಡು ದಿನ ಮಾತ್ರ.
ನಾನು: ಹೂಂ
ವಿ.ಎ.:ನಿಜವಾಗಿ ನೋಡಿದರೆ ತಹಸೀಲ್ದಾರರಿಗೆ ಅವರಿಗೆ ನೋಟೀಸ್ ಕೊಡುವ ಪವರ್ಸ್ ಇಲ್ಲ. ಆದರೆ ಇವರು ಕೊಡುತ್ತಾರೆ.
ನಾನು: ಹೂಂ
ವಿ.ಎ.: ಅವರಿಗೆ ಅಂತ ಅಲ್ಲ. ದಿನಕ್ಕೆ ಇಬ್ಬರಿಗೆ ಆಫೀಸಿನಲ್ಲಿ ಷೋಕಾಸ್ ನೋಟೀಸ್ ಕೊಡುತ್ತಾರೆ. ಅದನ್ನು ಯಾರೂ ಕೇರ್ ಮಾಡುವುದೇ ಇಲ್ಲ.
ನಾನು: ಹೂಂ
ವಿ.ಎ.:ಕೆಲವರು ನೋಟೀಸಿಗೆ ಉತ್ತರ ಕೊಡುವುದೂ ಇಲ್ಲ
ನಾನು: ಹೂಂ
ವಿ.ಎ.: ಭಾರೀ ಸೆಕೆ ಉಂಟು, ಮಳೆ ಬಂದೀತೋ ಅಂತ...
ಮಾತು ಮುಗಿಸಿ ಅವರು ಹೊರಟು ಹೋದರು. ನಾನು ನನ್ನ ಹತ್ತಿರದ ಸ್ನೇಹಿತರಲ್ಲಿ ಈ ವಿಷಯ ಪ್ರಸ್ತಾವಿಸಿ ಸುಮ್ಮನಾದೆ.
ಪಾಪ! ತಪ್ಪು ನಿಮ್ಮದಲ್ಲ, ತಹಸೀಲ್ದಾರರದು!-ಸೈನಿಕ ೩
ಮತ್ತೆರಡು ದಿನ ಕಳೆದ ಮೇಲೆ ಮಟ ಮಟ ಮಧ್ಯಾಹ್ನದ ಬಿಸಿಲಿನಲ್ಲಿ ಮತ್ತೊಬ್ಬರು ಸಿಕ್ಕಿದರು. "ನಿಮ್ಮ ಪ್ರೆಸ್ಸಿಗೆ ಎರಡೆರಡು ಸಲ ಬಂದೆ. ನೀವು ಸಿಕ್ಕಲೇ ಇಲ್ಲ" -ಪೀಠಿಕೆ. ಇವರು ರೆವಿನ್ಯೂ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು. ನಿವೃತ್ತರಾದ ಮೇಲೂ ಆಫೀಸನ್ನು ಪೂರ್ತಿ ಬಿಡಲು ಮನಸ್ಸಿಲ್ಲದವರು. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಜೀವನಚರಿತ್ರೆಯನ್ನೂ ಪ್ರಕಟಿಸಿದ್ದಾರೆ.ಆವರು ಪ್ರೆಸ್ಸಿಗೆ ಬಂದುಹೋದ ಸುದ್ದಿ ನನಗೆ ಸಿಕ್ಕಿತ್ತು ಸಮ್ಮೇಳನ ಇದ್ದುದರಿಂದ ಆ ವಿಷಯ ಏನಾದರೂ ಮಾತಾಡಲು ಬಂದಿರಬಹುದು ಎಂದುಕೊಂಡಿದ್ದೆ.
"ನೀವು ಒಂದು ಕಂಪ್ಲೇಂಟ್ ಕೊಟ್ಟಿರಂತೆ. ನನಗೆ ವಿಷಯ ಗೊತ್ತಾಯಿತು. -ಸುಂದರರಾಯರು ನನಗೆ ಗೊತ್ತು. ಅವರು ಹಾಗೆಲ್ಲ ಮಾಡುವವರಲ್ಲ.-ಏನು ಮಾಡುವುದಿದ್ದರೂ ನನ್ನನ್ನು ಏನು ಸಾರ್, ಏನು ಮಾಡುವುದು ಈಗ ಎಂದು ಕೇಳದೆ - ನಾನು ವಿಚಾರಿಸುತ್ತೇನೆ ಎಂದು ಹೇಳಿದೆ"
ನಾನು ಮಾತು ಮುಂದುವರಿಸುವ ಆಸಕ್ತಿ ತೋರಿಸಲಿಲ್ಲ.
"ತಹಸೀಲ್ದಾರರೇ ಹೇಳಿದ್ದಂತಲ್ಲ ಕಂಪ್ಲೇಂಟ್ ಕೊಡಲಿಕ್ಕೆ. ಅವರು ಹೇಳಿದ ಮೇಲೆ ನೀವು ಏನು ಮಾಡಲು ಸಾಧ್ಯ?" ಎಂದು ನನ್ನ ಬಗ್ಗೆ ಅನುಕಂಪ ಸೂಚಿಸಿದರು. ನನಗೆ ಮಾತಿನಲ್ಲಿ ಆಸಕ್ತಿ ಇರಲಿಲ್ಲ. "ಮತ್ತೆ ಸಿಗುತ್ತೇನೆ" ಎಂದು ಹೇಳಿ ಅವರಿಂದ ತಪ್ಪಿಸಿಕೊಂಡೆ.
*******
ನಿಧಾನವಾಗಿ ಆಲೋಚನೆ ಮಾಡಿದಾಗ, ಇವರೆಲ್ಲ ಸೇರಿ ತಹಸೀಲ್ದಾರರನ್ನು ಬಲಿಪಶು ಮಾಡುವ ಸಂಚು ಮಾಡುತ್ತಿರಬಹುದು ಎಂದು ಅನುಮಾನವಾಯಿತು. ರಾತ್ರಿ ಸಾಹಿತಿಶ್ರೇಷ್ಠರಿಗೆ ಫೋನಿಸಿದೆ: "ಸ್ವಾಮೀ, ತಹಸೀಲ್ದಾರರು ಹೇಳಿದರು ಎನ್ನುವ ಕಾರಣಕ್ಕೆ ನಾನು ದೂರು ಕೊಟ್ಟದ್ದಲ್ಲ. ನನಗೆ ಬೇಕಾಗಿಯೇ, ನಾನೇ ಬುದ್ಧಿಪೂರ್ವಕ ಕೊಟ್ಟ ದೂರು ಅದು. ಅದರ ಜವಾಬ್ದಾರಿ ಪೂರ್ತಿ ನನ್ನದು." ಆ ಕಡೆಯಿಂದ ಏನೂ ಉತ್ತರ ಬರಲಿಲ್ಲ.
ಇಷ್ಟು ನಡೆದು ಸುಮಾರು ಮೂರು ವಾರ ಕಳೆದ ಮೇಲೆ, ನನ್ನ ಅರ್ಜಿಯ ವಿಚಾರಣೆ ನಡೆದು, ನನಗೆ ಬೇಕಾದ ರೀತಿಯಲ್ಲಿ ದೃಢಪತ್ರಿಕೆ ಸಿಕ್ಕಿತು.
ತಹಸೀಲ್ದಾರರು ಆ ಅಧಿಕಾರಿಯ ಮೇಲೆ ಏನಾದರೂ ಕ್ರಮ ಕೈಗೊಂಡರೋ ಎಂದು ವಿಚಾರಿಸಲು ನಾನು ಹೋಗಲಿಲ್ಲ.

ಈ ಎರಡು ಪ್ರತಿಕ್ರಿಯೆಗಳು ಮೇಲ್ ಮೂಲಕ ಬಂದವು:

ಅಶೋಕವರ್ಧನ-- Athree Book CenterPH: +91-824-2425161 Blog: athree.wordpress.com

ಪ್ರಿಯ ರಾಯರೇ

೧ ಮುದ್ರಾರಾಕ್ಷಸ: ಏಳನೇ ಸಾಲಿನಲ್ಲಿ ಅನಾವಶ್ಯಕ ಹುಟ್ಟಿದ ಹುಟ್ಟಿದ ಸೇರಿಕೊಂಡಿದೆ.೨ ‘ನಮಗೆ ಪತ್ರ ಬರೆದರು’ ಎಂದಿದ್ದೀರಿ. ಈ ನಾವು ಯಾರೆಂದು ನಿಮ್ಮ ವ್ಯಕ್ತಿಪರಿಚಯ ಪುಟ ನೋಡಿದರೆ ಏನೂ ಸಿಕ್ಕುವುದಿಲ್ಲ. ಆತ್ಮಾಶ್ಲಾಘನೆಯಾಗಬೇಕಿಲ್ಲ, ಆದರೆ ಹೆಚ್ಚು ವಿವರಗಳೊಡನೆ ಸ್ವಪರಿಚಯ ಬೇಕೇ ಬೇಕು. ಅಪರಿಚಿತ ಬ್ಲಾಗ್ ಓದುಗರಿಗೆ ಆಗ ನಿಮ್ಮ ಮಾತುಗಳ ಆಳ ಹರಹು ಅರ್ಥವಾಗುತ್ತದೆ.೩ ‘ಕೂಡಲೇ ಕಟ್ಟಿದೆ’ ಎಂದಿದ್ದೀರಿ. ಏನು, ಎಷ್ಟು, ಅಗತ್ಯದ್ದೋ ಅಲ್ಲವೋ ಇತ್ಯಾದಿ ಪ್ರಶ್ನೆಗಳಿಗವಕಾಶವಿಲ್ಲದಂತೆ ವಿವರವಾಗಿ ಬರೆಯಬೇಕಿತ್ತೋಂತ.೪ ಅನುಭವ, ನಿಮ್ಮ ನಿರ್ವಹಣೆ (ನಮಗೆ ಗೊತ್ತಿದ್ದದ್ದೇ) ತುಂಬಾ ಚೆನ್ನಾಗಿದೆ. ಇಂಥವನ್ನು ಇನ್ನಷ್ಟು ಮತ್ತಷ್ಟು ಸಾರ್ವಜನಿಕ ಶಿಕ್ಷಣ ಕ್ರಮದಲ್ಲಿ ಹಂಚಿಕೊಳ್ಳಲು ಬ್ಲಾಗ್ ತೆರೆದದ್ದಕ್ಕೆ ಅಭಿನಂದನೆಗಳು. ಒಂದೇ (ಬಳಕೆದಾರ ಜಾಗೃತಿ) ವಿಷಯದ ಮೇಲೇ ಒಮ್ಮೆಗೇ ಬರೆಯಬೇಡಿ. ನಿಮ್ಮ ವೈವಿಧ್ಯಮಯ ಆಸಕ್ತಿಗಳಿಂದ ಒಂದೊಂದನ್ನೇ ಕೊಡುತ್ತಾ ಬನ್ನಿ - ಕಾದಿರುತ್ತೇನೆ/ವೆ.

ಡಾ.ರಾಮಕೃಷ್ಣ ವೈಲಾಯ, ದ್ವಾರಕ,ನವದೆಹಲಿ. ಮೇ -ಎರಡು,೨೦೦೯.

ಸರಕಾರಿ ಕೆಲಸ ಎಂದರೆ ದಿಲ್ಲಿಯಲ್ಲೂ ಒಂದೇ, ಹಳ್ಳಿಯಲ್ಲೂ ಒಂದೇ.ಕೆಲಸ ವಾಗ ಬೇಕಾದರೆ ಒಂದು ಅರ್ಜಿ ಬೇಕು.ಅರ್ಜಿ ಮುಂದೆ ಸಾಗಲು ಪೇಪರ್ ವೈಟ್ ಬೇಕು.ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯ.ಹೀಗಾಗಿ ಅದೊಂದು ವಿಧಿ,ನಿಯಮ ಎಂಬಂತಾಗಿದೆ.ಆದರೆ ಸುಂದರ ರಾಯರಂತಹ ಧೈರ್ಯವಾದಿ ಸತ್ಯವಾದಿ ಹಾಗು ಸ್ಥಿರವಾದಿ ಗಳು ಈ ವಿಧಿ/ ನಿಯಮಕ್ಕೆ ಅಪವಾದ ದಂತಿದ್ದಾರೆ.ಅಂತಹ ಸ್ವಲ್ಪ ಮಂದಿ ಇರುವುದರಿಂದಲೇ ಸರಕಾರಿ /ಸಾರ್ವಜನಿಕ ಕೆಲಸ ಸ್ವಲ್ಪ ಮಟ್ಟಿಗಾದರೂ ಅಡೆ-ತಡೆ ಇಲ್ಲದೆ ಸಾಗುತ್ತಿದೆ. ನಮಗೆ ನ್ಯೂ ದಿಲ್ಲಿ ಮುನಿಸಿಪಲ್ ಕಾರ್ಪೋರೇಶನ್ ನಿಂದ ನಮ್ಮ ಮಕ್ಕಳ ಜನನ ಪ್ರಮಾಣ ಪತ್ರ ಪಡೆಯಲು ಹೆಚ್ಚೇನು ಕಷ್ಟ ವಾಗಲಿಲ್ಲ.'ಏನಾದರು ಸ್ವಲ್ಪ ಕೊಡಬೇಕಾಗುತ್ತದೆ ' ಎಂಬ ಪ್ರಶ್ನೆ ಬರಲಿಲ್ಲ.ಅನಂತರವೂ ದಿಲ್ಲಿ ಯಲ್ಲಿ ಜನಿಸಿ ಬೇರೆ ಊರು ಗಳಲ್ಲಿ ವಾಸಿಸುತ್ತಿರುವ ನಮ್ಮ ಬಂಧುಗಳ ಮಕ್ಕಳ ಜನನ ಪ್ರಮಾಣ ಪತ್ರ ಪಡೆಯಲೂ ಕಷ್ಟ ವಾಗಲಿಲ್ಲ. ಇದು ೧೦-೧೫ ವರ್ಷಗಳ ಹಿಂದಿನ ಮಾತು. ಸಂಬಂಧ ಪಟ್ಟ ಆಫೀಸಿಗೆ ಮಾತ್ರ ೨-೩ ಸಲ ಹೋಗಿ ಬರಬೇಕಾಯಿತು, ಅಷ್ಟೆ.ಆದರೆ ಈಗ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ.ಅಂತೂ ನಮ್ಮ ಪರಿಚಿತರು ಹೇಳುವಂತೆ ದಿಲ್ಲಿಯಲ್ಲಿ ಕೇಂದ್ರ ಸರಕಾರದಲ್ಲಿ ಕೆಲಸ ಹೆಚ್ಚು ಸಲೀಸಾಗಿ ಸಾಗುತ್ತದಂತೆ. ಆದರೆ ಜನ-ಸಾಮಾನ್ಯನ ಅನಿಸಿಕೆ ಮಾತ್ರ ದಿಲ್ಲಿಯಲ್ಲೂ ಹಳ್ಳಿಯಲ್ಲೂ ಒಂದೇ!-' ಪೇಪರ್ ವೈಟ್ 'ಇಲ್ಲದೆ ಅರ್ಜಿ ಮುಂದೆ ಹೋಗುವುದಿಲ್ಲ. ಈ ಪರಿಸ್ಥಿತಿ ಬದಲಾಗಬೇಕಾದರೆ ಸುಂದರ ರಾಯರಂತಹ ಜನ-ಜಾಗೃತಿ ಬೆಳೆಸುವವರು ಬೇಕು.ಬಳಕೆದಾರರಿಗೆ ಅವರ ಹಕ್ಕು-ಬಾಧ್ಯತೆ ಗಳ ಮನವರಿಕೆ ಮಾಡಿ ಅವರಿಗೆ ಸುಲಭವಾಗಿ ನ್ಯಾಯ ದೊರಕುವಂತೆ ಹೋರಾಡುವವರು ಬೇಕು. ಲಂಚ,ಮರೆ,ಮೋಸ,ಭ್ರಷ್ಟಾಚಾರ ಇಲ್ಲದೆ ಧಕ್ಷತೆ ಯಿಂದ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸುವಂತೆ ವತ್ತಾಯ ಹೇರಬೇಕು. ಎಲ್ಲಕ್ಕಿಂತ ಮುಖ್ಯವಾದ ವಿಷಯ ವೆಂದರೆ ಸಂಬಂಧಿತ ಮೇಲಧಿಕಾರಿಗಳು ಮತ್ತು ನಿರೀಕ್ಷಕ ಅಧಿಕಾರಿಗಳು ಹೊರಗಿನ ಯಾವ ಒತ್ತಡ ವನ್ನೂ ನಿರೀಕ್ಷಿಸದೆ ತಮ್ಮ-ತಮ್ಮ ಅಧಿಕಾರಿ ವಲಯದಲ್ಲಿ ಯಾವ ಕುಂದು -ಕೊರತೆ ಯಿಲ್ಲದೆ ಕೆಲಸ ನಡೆಸುವ ಜವಾಬ್ದಾರಿ ಹೊರಬೇಕು.