ಗುರುವಾರ, ಅಕ್ಟೋಬರ್ 17, 2019






ಆಶ್ವಾಸ ೩ ಪದ್ಯಗಳು ೧-೧೧


ಕಂ|| ಶ್ರೀಯನರಾತಿಬಳಾಸೃ
     ಕ್ತೋಯಧಿಯೊಳ್ ಪಡೆದ ವೀರನುಱದರಿಗಳನಾ|
     ತ್ಮೀಯಪದಸ್ಫುರಿತ ನಖ
     ಚ್ಛಾಯೆಗಳೊಳ್ ನಿಱಿಸಿ ನಿಂದ ಗಂಡಂ ಹರಿಗಂ ||೧||
(ಶ್ರೀಯನ್ ಅರಾತಿಬಳಾಸೃಕ್ ತೋಯಧಿಯೊಳ್ ಪಡೆದ ವೀರನ್, ಉಱದ ಅರಿಗಳನ್ ಆತ್ಮೀಯ ಪದಸ್ಫುರಿತ ನಖಚ್ಛಾಯೆಗಳೊಳ್ ನಿಱಿಸಿ ನಿಂದ ಗಂಡಂ ಹರಿಗಂ)
ಶತ್ರುಸೈನ್ಯದ ರಕ್ತದ ಕಡಲಿನಲ್ಲಿ ಶ್ರೀಯನ್ನು – ಸಂಪತ್ತನ್ನು – ಪಡೆದವನೂ; ತನ್ನನ್ನು ಒಪ್ಪದ, ತನಗೆ ಬಗ್ಗದ, ತನಗೆ ಸೋಲದ ಶತ್ರುಗಳನ್ನು ತನ್ನ ಕಾಲುಗುರಿನ ಪ್ರಭಾವಳಿಯಲ್ಲಿ ನಿಲ್ಲಿಸಿದ - ಅರ್ಜುನನು - ಅರಿಕೇಸರಿಯು
ವ|| ಆ ಪೊೞಲ ಪೊಱವೊೞಲನೆಯ್ದೆ ವರ್ಪಾಗಳ್-
(ಆ ಪೊೞಲ ಪೊಱವೊೞಲನ್ ಎಯ್ದೆ ವರ್ಪಾಗಳ್)
ಆ ಪುರದ ಹೊರವಲಯದ ಹತ್ತಿರ ಬಂದಾಗ
ಕಂ|| ಕತ್ತುರಿಯ ಸಗಣ ನೀರ್ ಬಿಡು
     ಮುತ್ತಿನ ರಂಗವಲಿ ಮಿಳಿರ್ವ ದುಗುಲದ ಗುಡಿ ಸಂ|
     ಪತ್ತಿನ ಬಿತ್ತರದೆತ್ತಿದ
     ಮುತ್ತಿನ ಮಂಡವಿಗೆ ಪೊೞಲ ಮನೆಗಳೊಳೆಲ್ಲಂ || ೨ ||
(ಕತ್ತುರಿಯ ಸಗಣ ನೀರ್, ಬಿಡುಮುತ್ತಿನ ರಂಗವಲಿ, ಮಿಳಿರ್ವ ದುಗುಲದ ಗುಡಿ, ಸಂಪತ್ತಿನ ಬಿತ್ತರದ ಎತ್ತಿದ ಮುತ್ತಿನ ಮಂಡವಿಗೆ ಪೊೞಲ ಮನೆಗಳೊಳೆಲ್ಲಂ)
ಕಸ್ತೂರಿಯನ್ನು ಕದರಿ ತಯಾರಿಸಿದ ಸೆಗಣಿನೀರಿನಿಂದ ಸಾರಿಸಿದ ಅಂಗಳ; ಬಿಡಿಮುತ್ತುಗಳಿಂದ ರಚಿಸಿದ ರಂಗೋಲಿ; ಅಲುಗಾಡುವ ರೇಷ್ಮೆಯ ಬಾವುಟಗಳು (ಬಂಟಿಂಗ್ಸ್?); (ಅಲ್ಲಿನ ಪುರಜನರ) ವಿಪುಲ ಸಂಪತ್ತನ್ನು ಸೂಚಿಸುವ ಮಂಟಪಗಳು ಊರಿನ ಎಲ್ಲ ಮನೆಗಳಲ್ಲಿಯೂ ಶೋಭಿಸುತ್ತಿದ್ದವು.
ವ|| ಅಂತಾಗಳೊಂದುತ್ತರಂ ಬಳೆಯೆ ಸೊಗಯಿಸುವ ಪೊೞಲೊಳಷ್ಟ ಶೋಭೆಯಂ ಮಾಡಿ ದುರ್ಯೋಧನನ ಸಂಕೇತದೊಳ್ ಮುನ್ನಮೆ ಸಮೆದಿರ್ದ ಪುರೋಚನಂ ಗೋರೋಚನಾ ಸಿದ್ಧಾರ್ಥ ದೂರ್ವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣಕಳಶ ಕಳಮಾವೃತ ಕರಪಲ್ಲವೆಯರಪ್ಪ ಪುರಂಧ್ರಿಯರುಂ ಬದ್ದವಣದ ಪಱೆಗಳುಂ ಬೆರಸಿದಿರ್ವಂದು ಮೆಯ್ಯಿಕ್ಕಿ ಪೊಡಮಟ್ಟು ಪಾಂಡವರುಮಂ ಮುಂದಿಟ್ಟೊಡಗೊಂಡು ಬಂದು ಪೊೞಲಂ ಪುಗಿಸೆ ಪೊಕ್ಕು ಬೀಡನೆಲ್ಲಿ ಬಿಡುವಮೆನೆ ನಿಮ್ಮಯ್ಯಂ ಧೃತರಾಷ್ಟ್ರನ ಬೆಸದಲ್ ಮುನ್ನಮೆ ಮಾಡಮಂ ಸಮೆದಿಟ್ಟೆನಲ್ಲಿಗೆ ಬಿಜಯಂಗೆಯ್ಯಿಮೆನೆ-
(ಅಂತು ಆಗಳ್ ಒಂದು ಉತ್ತರಂ ಬಳೆಯೆ ಸೊಗಯಿಸುವ ಪೊೞಲೊಳ್, ಅಷ್ಟ ಶೋಭೆಯಂ ಮಾಡಿ, ದುರ್ಯೋಧನನ ಸಂಕೇತದೊಳ್ ಮುನ್ನಮೆ ಸಮೆದಿರ್ದ ಪುರೋಚನಂ, ಗೋರೋಚನಾ ಸಿದ್ಧಾರ್ಥ ದೂರ್ವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣಕಳಶ ಕಳಮಾವೃತ ಕರಪಲ್ಲವೆಯರಪ್ಪ ಪುರಂಧ್ರಿಯರುಂ, ಬದ್ದವಣದ ಪಱೆಗಳುಂ ಬೆರಸು ಇದಿರ್ವಂದು, ಮೆಯ್ಯಿಕ್ಕಿ ಪೊಡಮಟ್ಟು, ಪಾಂಡವರುಮಂ ಮುಂದಿಟ್ಟು ಒಡಗೊಂಡು ಬಂದು ಪೊೞಲಂ ಪುಗಿಸೆ, ಪೊಕ್ಕು, ‘ಬೀಡನೆಲ್ಲಿ ಬಿಡುವಂ?’ ಎನೆ ನಿಮ್ಮಯ್ಯಂ ಧೃತರಾಷ್ಟ್ರನ ಬೆಸದಲ್ ಮುನ್ನಮೆ ಮಾಡಮಂ ಸಮೆದಿಟ್ಟೆನ್, ಅಲ್ಲಿಗೆ ಬಿಜಯಂಗೆಯ್ಯಿಂ ಎನೆ-)
ಹಾಗೆ, ಏನೋ ಒಂದು ವಿಶೇಷವನ್ನು ತನ್ನೊಳಗಿಟ್ಟುಕೊಂಡಂತೆ ಶೋಭಿಸುತ್ತಿದ್ದ ಆ ಊರಿನಲ್ಲಿ, ದುರ್ಯೋಧನನ ಸೂಚನೆಯಂತೆ (ಪಾಂಡವರಿಗಾಗಿ) ಮೊದಲೇ ಅಷ್ಟ ಶೋಭೆಯನ್ನು ಮಾಡಿ ಮನೆಯನ್ನು ಕಟ್ಟಿಸಿದ್ದ ಪುರೋಚನನು, ಗೋರೋಚನ, ಅಕ್ಷತೆಕಾಳು, ದೂರ್ವೆಯ ಚಿಗುರು, ಮಾದಲ ಹಣ್ಣು, ಕನ್ನಡಿ, ಪೂರ್ಣಕುಂಭ, ಬತ್ತ ಇವುಗಳನ್ನು ಕೈಯಲ್ಲಿ ಹಿಡಿದ ಸ್ತ್ರೀಯರು ಹಾಗೂ ಮಂಗಳವಾದ್ಯಗಳೊಂದಿಗೆ ಪಾಂಡವರ ಎದುರಿಗೆ ಬಂದು, ಅಡ್ಡಬಿದ್ದು ನಮಸ್ಕರಿಸಿ, ಅವರನ್ನು ಮುಂದಿಟ್ಟು, ಅವರ ಜೊತೆಯಲ್ಲಿಯೇ ಬಂದು ಅವರನ್ನು ಊರೊಳಗೆ ಹೊಗಿಸಿದನು. ಆಗ ‘ಬೀಡನ್ನು ಎಲ್ಲಿ ಬಿಡುವುದು’ ಎಂಬ ಪ್ರಶ್ನೆ ಬಂದಾಗ ‘ನಿಮ್ಮ ತಂದೆ ಧೃತರಾಷ್ಟ್ರನ ಅಪ್ಪಣೆಯಂತೆ ಮೊದಲೇ ಮನೆಯನ್ನು ಕಟ್ಟಿಸಿ ಇಟ್ಟಿದ್ದೇನೆ. ಅಲ್ಲಿಗೆ ದಯಮಾಡಿಸಿ’ ಎಂದು ಪುರೋಚನನು ಹೇಳಿದನು.
ಕಂ|| ಅರಗು ಮೊದಲಾಗೆ ಘೃತ ಸ
     ಜ್ಜರಸಂ ಬೆಲ್ಲಂ ಸಣಂಬಿವೆಂಬಿವಱಿಂ ವಿ|
     ಸ್ತರಿಸಿ ಸಮೆದಿಂದ್ರಭವನಮೆ
     ಧರೆಗವತರಿಸಿರ್ದುದೆನಿಸುವರಗಿನ ಮನೆಯಂ|| ೩ ||
(ಅರಗು ಮೊದಲಾಗೆ ಘೃತ, ಸಜ್ಜರಸಂ, ಬೆಲ್ಲಂ, ಸಣಂಬು ಎಂಬ ಇವಱಿಂ ವಿಸ್ತರಿಸಿ ಸಮೆದ ಇಂದ್ರಭವನಮೆ ಧರೆಗೆ ಅವತರಿಸಿರ್ದುದು ಎನಿಸುವ ಅರಗಿನ ಮನೆಯಂ)
ಅರಗನ್ನು ಮುಖ್ಯವಾಗಿ ಬಳಸಿ ತುಪ್ಪ, ರಾಳ, ಬೆಲ್ಲ, ಸಣಬು ಎಂಬ ವಸ್ತುಗಳನ್ನು ಸೇರಿಸಿ ನಿರ್ಮಿಸಿದ, ನೆಲಕ್ಕಿಳಿದ ಬಂದ ಇಂದ್ರಭವನದಂತಿದ್ದ ಅರಗಿನ ಮನೆಯನ್ನು-
ವ|| ತಾನೆ ಮುಂದಿಟ್ಟೊಡಗೊಂಡು ಬಂದು ಪುಗಿಸೆ ಪಾಂಡವರಯ್ವರುಂ ಕೊಂತಿವೆರಸು ಕಿಱಿದಾನುಂ ಬೇಗಮಿರ್ದು ದಾನ ಸನ್ಮಾನಾದಿಗಳಿಂ ಸಂತಸಂಬಡಿಸಿ ಪುರೋಚನನಂ ಬೀಡಿಂಗೆ ಪೋಗಲ್ವೇೞ್ದು ಧರ್ಮಪುತ್ರನಾ ಮನೆಯಂ ಪರೀಕ್ಷಿಸಿ ನೋಡಲೊಡಮಱಿದು ನಿಜಾನುಜ ಸಹಿತಂ ಕೊಂತಿವೆರಸೇಕಾಂತದೊಳಿಂತೆಂದಂ-
(ತಾನೆ ಮುಂದಿಟ್ಟು ಒಡಗೊಂಡು ಬಂದು ಪುಗಿಸೆ, ಪಾಂಡವರ್ ಅಯ್ವರುಂ ಕೊಂತಿವೆರಸು ಕಿಱಿದಾನುಂ ಬೇಗಮಿರ್ದು, ದಾನ ಸನ್ಮಾನಾದಿಗಳಿಂ ಸಂತಸಂಬಡಿಸಿ, ಪುರೋಚನನಂ ಬೀಡಿಂಗೆ ಪೋಗಲ್ವೇೞ್ದು, ಧರ್ಮಪುತ್ರನ್ ಆ ಮನೆಯಂ ಪರೀಕ್ಷಿಸಿ ನೋಡಲ್, ಒಡಂ ಅಱಿದು, ನಿಜಾನುಜ ಸಹಿತಂ ಕೊಂತಿವೆರಸು ಏಕಾಂತದೊಳ್ ಇಂತೆಂದಂ-)
ತಾನೇ ಮುಂದೆ ನಿಂತು, ಜೊತೆಗೂಡಿ ಬಂದು ಹೊಗಿಸಲು, ಪಾಂಡವರೈವರೂ ಸಹ, ಸ್ವಲ್ಪ ಹೊತ್ತಾದ ಮೇಲೆ ಪುರೋಚನನನ್ನು ದಾನ ಸನ್ಮಾನಾದಿಗಳಿಂದ ಸಂತಸಪಡಿಸಿ ಮನೆಗೆ ಕಳಿಸಿಕೊಟ್ಟರು. ನಂತರ ಧರ್ಮಪುತ್ರನು ಆ ಮನೆಯನ್ನು ಪರೀಕ್ಷಿಸಿ ನೋಡಿ, ಕೂಡಲೇ (ಅದರ ಮರ್ಮವನ್ನು) ಅರ್ಥ ಮಾಡಿಕೊಂಡು ತನ್ನ ತಮ್ಮಂದಿರಿಗೂ ಕುಂತಿಗೂ ಹೀಗೆ ಹೇಳಿದನು:
ಚಂ|| ಇದು ಮನೆಯಂದಮಲ್ತುರಿವ ದಳ್ಳುರಿಯುಗ್ಗಡದಂದಮಾಗಿ ತೋ
     ಱಿದಪುದು ಕಣ್ಗೆ ಸಜ್ಜರಸದೆಣ್ಣೆಯ ತುಪ್ಪದ ಕಂಪಿದೆಲ್ಲಮೆಂ|
     ಬುದೆ ಬಗೆದಲ್ಲಿ ನೋಡುವೊಡಮಿಟ್ಟಗೆ ಕಲ್ಮರನೆಂಬುದಿಲ್ಲ ಕೂ
     ರದನಿದನೊಡ್ಡಿದಂ ಪಗೆಗೆ ಸಂತಸಮಾಗಿರೆ ಮಾರಿ ಸುಯ್ಗುಮೇ|| ೪||
 (ಇದು ಮನೆಯಂದಂ ಅಲ್ತು, ಉರಿವ ದಳ್ಳುರಿಯ ಉಗ್ಗಡದ ಅಂದಮಾಗಿ ತೋಱಿದಪುದು ಕಣ್ಗೆ.  ಸಜ್ಜರಸದ, ಎಣ್ಣೆಯ, ತುಪ್ಪದ ಕಂಪು ಇದೆಲ್ಲಂ ಎಂಬುದೆ ಬಗೆದು ಅಲ್ಲಿ ನೋಡುವೊಡಂ ಇಟ್ಟಗೆ ಕಲ್ ಮರನ್ ಎಂಬುದಿಲ್ಲ. ಕೂರದನ್ ಇದನ್ ಒಡ್ಡಿದಂ, ಪಗೆಗೆ ಸಂತಸಮಾಗಿರೆ ಮಾರಿ ಸುಯ್ಗುಮೇ?)
ಇದು ಮನೆಯ ಹಾಗೆ ಕಾಣುವುದಿಲ್ಲ, ಉರಿಯುವ ಬೆಂಕಿಯ ಭಾರೀ ಜ್ವಾಲೆಗಳಂತೆ ಕಾಣುತ್ತಿದೆ. ಎಲ್ಲಿ ನೋಡಿದರೂ ರಾಳದ, ಎಣ್ಣೆಯ, ತುಪ್ಪದ ಪರಿಮಳವೇ ಮೂಗಿಗೆ ಹೊಡೆಯುತ್ತಿದೆ ಹೊರತು ಇಟ್ಟಿಗೆ, ಕಲ್ಲು, ಮರಗಳು ಕಾಣುತ್ತಿಲ್ಲ. ಇದು ಶತ್ರು ಒಡ್ಡಿರುವ ಬಲೆ. ಶತ್ರುವಿಗೆ ಸಂತೋಷವಾದರೆ ಮಾರಿಗೇಕೆ ದುಃಖ? (ನಾವು ಈ ಮನೆಯಲ್ಲಿ ಉರಿಯುವ ಬೆಂಕಿಗೆ ಸಿಕ್ಕಿ ಸತ್ತರೆ ದುರ್ಯೋಧನನಿಗೆ ಸಂತೋಷವಾಗುತ್ತದೆ. ಮಾರಿಗೇಕೆ ದುಖ? ಅದೂ ನಮ್ಮನ್ನು ಸಂತೋಷದಿಂದಲೇ ತಿನ್ನುತ್ತದೆ).

ವ|| ಅದಲ್ಲದೆಯುಮತ್ಯಾದರಸ್ಸಂಭ್ರಮಮುತ್ಪಾದಯತಿಯೆಂಬುದೀ ಪುರೋಚನನೆಂಬ ಬೂತು ಸುಯೋಧನನ ಬೆಸದಿಂ ನಮಗಿನಿತಾದರಂ ಗೆಯ್ವುದೆಲ್ಲಂ ನಮ್ಮಂ ಮೆಳ್ಪಡಿಸಲೆಂದೆ ಮಾಡಿದಂ ನಾಮಿದನಱಿಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಮೆಂದು ನಿಚ್ಚಂ ಬೇಂಟೆವೋಗೆ ಪುರೋಚನನುಂ ಪೆಱಗಣ ಕಾಪಂ ಕಣ್ಗಾಪಿನಲೆ ಕಾದಿರ್ಪನ್ನೆಗಂ ವಿದುರನ ವಿಶ್ವಾಸ ದಾಸಂ ಕನಕನೆಂಬಂ ಬಂದು ಪಾಂಡವರಂ ಕಂಡೇಕಾಂತದೊಳ್ ವಿದುರನಟ್ಟಿದವಿನ್ನಾಣಂಗಳಂ ಪೇೞ್ದು ನಂಬಿಸಿ ನೀಮೆಂತುಂ ಬಲ್ಲಿರಂತೆ ಪೊಱಮಟ್ಟು ಪೋಗಿಮೆಂದು ಜತುಗೃಹ ಕವಾಟ ಪುಟ ಸಂಧಿಗಳೊಳ್ ಸುರಂಗಮಂ ಗಂಗೆಯೊಳ್ ಮೂಡುವಂತಾಗೆ ಸಮೆದು ಪೇೞ್ದು ಪೋಪುದುಂ ಪಾಂಡವರುಂ ಪುರೋಚನಂ ತಮ್ಮಂ ಮಱುದಿವಸಂ ಛಿದ್ರಿಸುವನೆನಲುಂ ಮುನ್ನಿನ ದಿವಸಮೊಳಗಣ ಪರಿಜನಮೆಲ್ಲಮಂ ಪಾರ್ವರನೂಡುವ ನೆವದೊಳೆ ಪೊಱಮಡಿಸಿ ಸೂರ್ಯಾಸ್ತಮಯದೊಳ್ ಪಾರ್ವರನೂಡಿ ನಿಷಾದಿತಿಯೆಂಬ ಬೇಡಿತಿಗಮಯ್ವರ್ ಮಗಂದಿರ್ಗಮುಣಲಿಕ್ಕಿದೊಡೆ ತಣಿಯುಂಡು ಬೆಂಡುಮರಲ್ದು ಮಱಸುಂದಿದರ್ ಪುರೋಚನನುಮಾ ಮನೆಯೊಳೊಂದೋವರಿಯೊಳ್ ಮಱಕೆಂದಿದನಾ ಪ್ರಸ್ತಾವದೊಳರ್ಧ ರಾತ್ರಿಯಾದಾಗಳ್ ಕೊಂತಿವೆರಸಯ್ವರುಮಂ ಮುನ್ನಮೊಯ್ಯನೊಯ್ಯನೆ ಸುರಂಗದಿಂ ಪೊಱಮಡಿಸಿ ಭೀಮಸೇನಂ ಪುರೋಚನಂ ಮಱಕೆಂದಿರ್ದೋವರಿಯೊಳ್ ಕಿಚ್ಚಂ ಕೊಳಿಸಲೊಡಂ-
(ಅದಲ್ಲದೆಯುಂ ‘ಅತ್ಯಾದರಃ ಸಂಭ್ರಮಮ್ ಉತ್ಪಾದಯತಿ’ ಎಂಬುದು. ಈ ಪುರೋಚನನೆಂಬ ಬೂತು ಸುಯೋಧನನ ಬೆಸದಿಂ ನಮಗೆ ಇನಿತು ಆದರಂ ಗೆಯ್ವುದೆಲ್ಲಂ ನಮ್ಮಂ ಮೆಳ್ಪಡಿಸಲ್ ಎಂದೆ ಮಾಡಿದಂ. ನಾಮ್ ಇದನ್ ಅಱಿಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಂ ಎಂದು ನಿಚ್ಚಂ ಬೇಂಟೆವೋಗೆ, ಪುರೋಚನನುಂ ಪೆಱಗಣ ಕಾಪಂ ಕಣ್ಗಾಪಿನಲೆ ಕಾದಿರ್ಪನ್ನೆಗಂ, ವಿದುರನ ವಿಶ್ವಾಸ ದಾಸಂ ಕನಕನೆಂಬಂ ಬಂದು ಪಾಂಡವರಂ ಕಂಡು ಏಕಾಂತದೊಳ್ ವಿದುರನ್ ಅಟ್ಟಿದ ಅವಿನ್ನಾಣಂಗಳಂ ಪೇೞ್ದು, ನಂಬಿಸಿ, ‘ನೀಮೆಂತುಂ ಬಲ್ಲಿರಿ, ಅಂತೆ ಪೊಱಮಟ್ಟು ಪೋಗಿಂ’ ಎಂದು ಜತುಗೃಹ ಕವಾಟ ಪುಟ ಸಂಧಿಗಳೊಳ್ ಸುರಂಗಮಂ ಗಂಗೆಯೊಳ್ ಮೂಡುವಂತಾಗೆ ಸಮೆದು, ಪೇೞ್ದು, ಪೋಪುದುಂ; ಪಾಂಡವರುಂ, ಪುರೋಚನಂ ತಮ್ಮಂ ಮಱುದಿವಸಂ ಛಿದ್ರಿಸುವನ್ ಎನಲುಂ ಮುನ್ನಿನ ದಿವಸಂ ಒಳಗಣ ಪರಿಜನಮೆಲ್ಲಮಂ ಪಾರ್ವರನ್ ಊಡುವ ನೆವದೊಳೆ ಪೊಱಮಡಿಸಿ ಸೂರ್ಯಾಸ್ತಮಯದೊಳ್ ಪಾರ್ವರನ್ ಊಡಿ ನಿಷಾದಿತಿಯೆಂಬ ಬೇಡಿತಿಗಂ ಅಯ್ವರ್ ಮಗಂದಿರ್ಗಂ ಉಣಲಿಕ್ಕಿದೊಡೆ ತಣಿಯುಂಡು ಬೆಂಡುಮರಲ್ದು ಮಱಸುಂದಿದರ್. ಪುರೋಚನನುಂ ಆ ಮನೆಯೊಳ್ ಒಂದು ಓವರಿಯೊಳ್ ಮಱಕೆಂದಿದನ್. ಆ ಪ್ರಸ್ತಾವದೊಳ್ ಅರ್ಧ ರಾತ್ರಿಯಾದಾಗಳ್ ಕೊಂತಿವೆರಸು ಅಯ್ವರುಮಂ ಮುನ್ನಂ ಒಯ್ಯನೊಯ್ಯನೆ ಸುರಂಗದಿಂ ಪೊಱಮಡಿಸಿ, ಭೀಮಸೇನಂ, ಪುರೋಚನಂ ಮಱಕೆಂದಿರ್ದ ಓವರಿಯೊಳ್ ಕಿಚ್ಚಂ ಕೊಳಿಸಲ್ ಒಡಂ-)
‘ಅದೂ ಅಲ್ಲದೆ ‘ಅತಿಯಾದ ಆದರವು ಹೆದರಿಕೆಯನ್ನು ಹುಟ್ಟಿಸುತ್ತದೆ’ ಎಂದು ಹೇಳಲಾಗಿದೆ. ಈ ಪುರೋಚನನೆಂಬ ದುಷ್ಟನು ಮೋಸ ಮಾಡುವ ಉದ್ದೇಶದಿಂದಲೇ ನಮಗೆ ಹೀಗೆ ಅತಿಯಾದ ಗೌರವ ಕೊಡುತ್ತಿದ್ದಾನೆ. ನಾವು ಇದನ್ನೆಲ್ಲ ತಿಳಿಯದವರ ಹಾಗೆ, ಬೇಟೆಯ ನೆವದಲ್ಲಿ (ಇಲ್ಲಿಂದ ತಪ್ಪಿಸಿಕೊಂಡು ಹೋಗಲು) ದಾರಿಗಳನ್ನು ಹುಡುಕೋಣ’ ಎಂದು ಪ್ರತಿದಿನವೂ ಬೇಟೆಗೆ ಹೋಗುತ್ತಿದ್ದರು. ಪುರೋಚನನು ಅವರು ಹೊರಗಡೆ ಎಲ್ಲಿ ಹೋಗುತ್ತಾರೆ ಎಂಬುದರ ಮೇಲೆ ಕಣ್ಗಾವಲು ಇಟ್ಟೇ ಇದ್ದನು. ಅಷ್ಟರಲ್ಲಿ ವಿದುರನ ಕಳಿಸಿದ ನಂಬಿಕೆಯ ಆಳು ಕನಕನೆಂಬುವನು ಬಂದು, ಪಾಂಡವರನ್ನು ಕಂಡು, ಗುಟ್ಟಿನಲ್ಲಿ ವಿದುರನು ಕಳಿಸಿದ ಗುರುತುಗಳನ್ನು ಹೇಳಿ, ನಂಬಿಸಿ, ‘ನೀವು ತಿಳಿದವರೇ ಇದ್ದೀರಿ. ನಿಮಗೆ ಗೊತ್ತಿರುವಂತೆ ಹೊರಗೆ ಹೊರಟು ಹೋಗಿ’ ಎಂದು ಹೇಳಿ, ಅರಗಿನ ಮನೆಯ ಬಾಗಿಲುಗಳ ಸಂದಿಯಲ್ಲಿ ಗಂಗಾನದಿಯನ್ನು ದಾಟಿ ಹೋಗಲು ಆಗುವಂತೆ ಸುರಂಗವನ್ನು ಕೊರೆದು, ಹೇಳಿ, ಹೊರಟುಹೋದನು. ಪಾಂಡವರು ಮರುದಿನ ತಮ್ಮನ್ನು ಪುರೋಚನನು ಕೊಲ್ಲುತ್ತಾನೆ ಎಂದಾದಾಗ, ಮೊದಲಿನ ದಿನವೇ ಒಳಗಿನ ಸೇವಕರೆಲ್ಲರನ್ನೂ ಹಾರುವರಿಗೆ ಊಟ ಹಾಕುವ ನೆವ ಹೇಳಿ ಹೊರಗೆ ಕಳಿಸಿ, ಸಂಜೆ ಸೂರ್ಯ ಮುಳುಗಿದ ನಂತರ ಹಾರುವರಿಗೆಲ್ಲ ಊಟ ಹಾಕಿದರು. ಆಮೇಲೆ ನಿಷಾದಿತಿ ಎಂಬ ಬೇಡಿತಿಗೂ ಅವಳ ಐವರು ಮಕ್ಕಳಿಗೂ ಊಟ ಹಾಕಿದಾಗ, ಅವರೆಲ್ಲ ಹೊಟ್ಟೆಬಿರಿ ಉಂಡು, ಅಲ್ಲಿಯೇ ಮಲಗಿ ಗಾಢವಾದ ನಿದ್ರೆಗೆ ಜಾರಿದರು. ಪುರೋಚನನು ಸಹ ಆ ಮನೆಯ ಒಂದು ಕೋಣೆಯಲ್ಲಿ ಮಲಗಿಕೊಂಡನು. ಆ ಸಂದರ್ಭದಲ್ಲಿ, ಅರ್ಧರಾತ್ರಿಯ ಹೊತ್ತಿಗೆ, ಭೀಮನು ಕುಂತಿಯನ್ನೂ, ಉಳಿದ ನಾಲ್ವರನ್ನೂ ಮೆಲ್ಲನೆ ಸುರಂಗದ ಮೂಲಕ ಹೊರಗೆ ಹೊರಡಿಸಿ, ಪುರೋಚನನು ಮಲಗಿದ್ದ ಕೋಣೆಗೆ ಬೆಂಕಿ ಇಟ್ಟನು. ಕೂಡಲೇ –
(ಬಡಪಾಯಿಗಳಾದ ನಿಷಾದಿತಿ ಮತ್ತು ಅವಳ ಮಕ್ಕಳನ್ನು, ತಮ್ಮ ಸ್ವಾರ್ಥಕ್ಕಾಗಿ, ಪಾಂಡವರು ಬೆಂಕಿ ಇಟ್ಟು ಕೊಂದು ಹಾಕಿದ ಈ ಅಮಾನವೀಯ  ಪ್ರಸಂಗ ಹೆಚ್ಚು ಚರ್ಚೆಯಾದಂತೆ ಕಾಣುವುದಿಲ್ಲ. ಮುಂದೆ ಏಕಚಕ್ರ ನಗರದಲ್ಲಿ ಬಕಾಸುರನ ಹತ್ತಿರಕ್ಕೆ ತಮ್ಮ ಮನೆಯ ಒಬ್ಬರನ್ನು ಕಳಿಸಬೇಕಾದ ಆಪತ್ತಿಗೆ ಸಿಕ್ಕಿಕೊಂಡ ಬ್ರಾಹ್ಮಣ ಕುಟುಂಬದ ಬಗ್ಗೆ ಅಪಾರ ಕರುಣೆಯನ್ನು ತೋರಿಸುವ ಕುಂತಿ ಮತ್ತು ಪಾಂಡವರು, ನಿಷಾದಿತಿ ಮತ್ತು ಅವಳ ಮಕ್ಕಳನ್ನು ಯಾವ ಕರುಣೆಯೂ ಇಲ್ಲದೆ ಬೆಂಕಿ ಕೊಟ್ಟು ಕೊಲ್ಲುವುದು ಪಾಂಡವರ ವ್ಯಕ್ತಿತ್ವಕ್ಕೊಂದು ಕಪ್ಪುಚುಕ್ಕೆಯಾಗಿ ಕಾಣುತ್ತದೆ.)
ಕಂ|| ಅಡಿಯೊತ್ತದೆ ಕಿಱಿಕಿಱಿದನೆ
     ಸುಡದಿನಿಸರೆಪೊರೆಕನಾಗದೆಯೆ ಸಸಿದಂದೊಂ|
     ದೆಡೆಯೊಳಗೊಟ್ಟಿರ್ದರಳೆಯ
     ನೊಡನಳುರ್ವಂತಳುರ್ದನನಲನರಗಿನ ಮನೆಯಂ|| ೫||
(ಅಡಿಯೊತ್ತದೆ, ಕಿಱಿಕಿಱಿದನೆ ಸುಡದೆ, ಇನಿಸು ಅರೆಪೊರೆಕನಾಗದೆಯೆ, ಸಸಿದು ಅಂದು ಒಂದು ಎಡೆಯೊಳಗೆ ಒಟ್ಟಿರ್ದ ಅರಳೆಯನ್ ಒಡನೆ ಅಳುರ್ವಂತೆ ಅಳುರ್ದನ್ ಅನಲನ್ ಅರಗಿನ ಮನೆಯಂ)
ಕೇವಲ ಬುಡದಲ್ಲಿ ಮಾತ್ರ ಹೊತ್ತಿ ಉರಿಯದೆ, ಸ್ವಲ್ಪಸ್ವಲ್ಪವಾಗಿ ಸುಡದೆ, ಅರ್ಧಂಬರ್ಧ ವ್ಯಾಪಿಸದೆ, ಒಂದು ಜಾಗದಲ್ಲಿ ಹತ್ತಿಯನ್ನು ಬಿಡಿಸಿ ರಾಶಿ ಹಾಕಿ ಬೆಂಕಿ ಕೊಟ್ಟರೆ ಹೇಗೋ ಹಾಗೆ, ಬೆಂಕಿಯು ಅರಗಿನ ಮನೆಯನ್ನು ಒಂದೇ ಸಲಕ್ಕೆ ವ್ಯಾಪಿಸಿತು.
ಕಂ|| ಮೇಲಾದ ಪಾಂಡುಸುತರನು
     ಪಾಲಂಭಂಗೆಯ್ಯುತಿರ್ಪ ದುರ್ಯೋಧನನಂ|
     ಲೀಲೆಯೆ ನುಂಗುವ ಮೃತ್ಯುವ
     ನಾಲಗೆಯೆನೆ ನೆಗೆದುವುರಿಯ ನಾಲಗೆ ಪಲವುಂ|| ೬ ||
(ಮೇಲಾದ ಪಾಂಡುಸುತರನ್ ಉಪಾಲಂಭಂಗೆಯ್ಯುತಿರ್ಪ ದುರ್ಯೋಧನನಂ, ಲೀಲೆಯೆ ನುಂಗುವ ಮೃತ್ಯುವ ನಾಲಗೆಯೆನೆ, ನೆಗೆದುವು ಉರಿಯ ನಾಲಗೆ ಪಲವುಂ)
ಉತ್ತಮರಾದ ಪಾಂಡುಪುತ್ರರನ್ನು ದೂಷಿಸುತ್ತಿರುವ ದುರ್ಯೋಧನನನ್ನು - ಅದೊಂದು ಆಟವೋ ಎಂಬಂತೆ - ನುಂಗುತ್ತಿರುವ ಬೆಂಕಿಯ ನಾಲಗೆಯಂತೆ, ಮೇಲೇಳುತ್ತಿರುವ ಉರಿಯ ನಾಲಗೆಗಳು ಕಾಣಿಸಿಕೊಂಡವು.
ವ|| ಆಗಳ್ ಭೀಮಸೇನಂ ತನ್ನ ತಲೆಯೊಳಂ ಮೆಯ್ಯೊಳಂ ಕರಗಿ ಸುರಿವರಗಿನುರಿಯ ಬಂಬಲ್ಗಳಂ ಪೊಸೆದು ಬಿದಿರ್ದು ಕಳೆದು ಸುರಂಗದೊಳಗಣಿಂದಮೆ ತನ್ನೊಡವುಟ್ಟಿದರ್ ಕೂಡೆ ವಂದನನ್ನೆಗಮಿತ್ತಂ-
(ಆಗಳ್ ಭೀಮಸೇನಂ ತನ್ನ ತಲೆಯೊಳಂ ಮೆಯ್ಯೊಳಂ ಕರಗಿ ಸುರಿವ ಅರಗಿನ ಉರಿಯ ಬಂಬಲ್ಗಳಂ ಪೊಸೆದು, ಬಿದಿರ್ದು ಕಳೆದು, ಸುರಂಗದ ಒಳಗಣಿಂದಮೆ ತನ್ನ ಒಡವುಟ್ಟಿದರ್ ಕೂಡೆ ವಂದನ್. ಅನ್ನೆಗಂ ಇತ್ತಂ)
ಆಗ ಭೀಮಸೇನನು ತನ್ನ ತಲೆಯ ಮೇಲೂ, ಮೈಯ್ಯ ಮೇಲೂ ಉದುರುತ್ತಿದ್ದ ಬೆಂಕಿಯ ಉಂಡೆಗಳನ್ನು ತಿಕ್ಕಿ, ಕೊಡವಿ, ಕಳೆದು ಸುರಂಗದ ಒಳಗಿನಿಂದ ತನ್ನ ಒಡಹುಟ್ಟಿದವರ ಜೊತೆಯಲ್ಲಿ (ಹೊರಗೆ) ಬಂದನು. ಅಷ್ಟರಲ್ಲಿ ಇತ್ತ-
ಕಂ|| ಅರಗಿನ ಮನೆಯೊಳ್ ಪಾಂಡವ
     ರುರಿದೞ್ಗಿದರಕ್ಕಟಯ್ಯೊ ದುರ್ಯೋಧನನೆಂ|
     ಬೆರಲೆಯಿನೆಂದೞುತುಂ ತ
     ತ್ಪುರಜನಮೞಲೊದವೆ ಪರಿದು ನೋಡಿತ್ತಾಗಳ್|| ೭||
(ಅರಗಿನ ಮನೆಯೊಳ್ ಪಾಂಡವರ್ ಉರಿದು ಅೞ್ಗಿದರ್, ಅಕ್ಕಟಾ, ಅಯ್ಯೊ, ದುರ್ಯೋಧನನ್ ಎಂಬ      ಎರಲೆಯಿನ್ ಎಂದು ಅೞುತುಂ ತತ್ಪುರಜನಂ ಅೞಲ್ ಒದವೆ ಪರಿದು ನೋಡಿತ್ತಾಗಳ್)
‘ಅಯ್ಯೋ! ಅಯ್ಯೋ! ದುರ್ಯೋಧನನೆಂಬ ವಿಷಜಂತುವಿನಿಂದ ಅರಗಿನಮನೆಯಲ್ಲಿ ಪಾಂಡವರು ಸುಟ್ಟು ನಾಶವಾದರು’ ಎಂದು ಅಳುತ್ತಾ ಪುರಜನರೆಲ್ಲರೂ ಅಲ್ಲಿಗೆ ಬಂದು ನೋಡಿದರು.
ವ|| ನೋಡಿ ರೂಪಱಿಯಲಾಗದಂತು ಕರಿಮುರಿಕನಾಗಿರ್ದ ಬೇಡಿತಿಯುಮನವಳಯ್ವರ್ ಮಕ್ಕಳುಮಂ ಕೊಂತಿಯುಂ ಪಾಂಡವರುಮಪ್ಪರೇನುಂ ತಪ್ಪಲ್ಲೆಂದು ಪುರಪ್ರಧಾನರ್ಕಳ್ ತದ್ವೃ ತ್ತಾಂತಮೆಲ್ಲಮಂ ಪೇೞ್ದು ಧೃತರಾಷ್ಟ್ರಂಗಂ ಪೇೞಲಟ್ಟಿದೊಡೆ-
(ನೋಡಿ, ರೂಪು ಅಱಿಯಲ್ ಆಗದಂತು ಕರಿಮುರಿಕನಾಗಿರ್ದ ಬೇಡಿತಿಯುಮನ್ ಅವಳ ಅಯ್ವರ್ ಮಕ್ಕಳುಮಂ ‘ಕೊಂತಿಯುಂ ಪಾಂಡವರುಂ ಅಪ್ಪರ್, ಏನುಂ ತಪ್ಪಲ್ಲ’ ಎಂದು ಪುರಪ್ರಧಾನರ್ಕಳ್ ತದ್ವೃತ್ತಾಂತಂ ಎಲ್ಲಮಂ ಪೇೞ್ದು, ಧೃತರಾಷ್ಟ್ರಂಗಂ ಪೇೞಲ್ ಅಟ್ಟಿದೊಡೆ)
ನೋಡಿ, ಗುರುತು ಸಿಗದಂತೆ ಕರಕಲಾಗಿದ್ದ ಬೇಡಿತಿ ಮತ್ತು ಅವಳ ಐದು ಮಕ್ಕಳ ಶವಗಳನ್ನು ಕುಂತಿ ಮತ್ತು ಪಾಂಡವರದೆಂದು ಭಾವಿಸಿ, ಪುರಪ್ರಧಾನರು ಆ ವಿಷಯವನ್ನು ಧೃತರಾಷ್ಟ್ರನಿಗೆ ತಿಳಿಸಲು (ದೂತರನ್ನು) ಕಳಿಸಿಕೊಟ್ಟರು.
ಕಂ|| ಮನದೊಳ್ ತ್ರೈಭುವನಮನಾ
     ಳ್ದನಿತುವರಂ ತನಗೆ ಸಂತಸಂ ಪೆರ್ಚಿಯುಮಂ|
     ದಿನಿಸಂಧನೃಪಂ ತನ್ನಯ
     ಜನದೊಳ್ ಕೆಲನಱಿಯೆ ಕೃತಕ ಶೋಕಂಗೆಯ್ದಂ|| ೮||
(ಮನದೊಳ್ ತ್ರೈಭುವನಮನ್ ಆಳ್ದ ಅನಿತುವರಂ ತನಗೆ ಸಂತಸಂ ಪೆರ್ಚಿಯುಂ, ಅಂದು ಇನಿಸು ಅಂಧನೃಪಂ, ತನ್ನಯ ಜನದೊಳ್ ಕೆಲನಱಿಯೆ ಕೃತಕ ಶೋಕಂಗೆಯ್ದಂ)
ಮನಸ್ಸಿನ ಒಳಗೆ ಮೂರು ಲೋಕವನ್ನೇ ಆಳಿದಷ್ಟು ಸಂತಸವಾದರೂ ಸಹ, ಕುರುಡದೊರೆಯು, ತನ್ನ ಸುತ್ತಲಿರುವವರಿಗೆ ಗೊತ್ತಾಗುವ ಹಾಗೆ ಕಣ್ಣೀರು ಹಾಕಿ ಕೃತಕಶೋಕವನ್ನು ತೋರಿಸಿದನು.
ವ|| ಆಗಳ್ ನದೀತನೂಜ ಭಾರದ್ವಾಜ ಕೃಪರವಿರಳ ಬಾಷ್ಪವಾರಿ ದುರ್ದಿನ ದೀನಾನನರಾಗಿರೆ ವಿದುರಂ ತಾನಱಿದುಮಱಿಯದಂತೆ ಶೋಕಾಕ್ರಾಂತನಾಗಿ ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೋಗಿ ತದರ್ಧ ದಗ್ಧ ಕಳೇವರಂಗಳಂ ಸಂಸ್ಕರಿಸಿ ಜಳದಾನಾದಿಕ್ರಿಯೆಗಳಂ ಮಾಡಿ ಮಗುೞೆ ವಂದನನ್ನೆಗಮಿತ್ತ ಪಾಂಡವರ್ ಸುರಂಗದಿಂ ಪೊಱಮಟ್ಟು ತಾರಾಗಣಂಗಳ್‌ ನಿಂದ ನೆಲೆಯಿಂ ದೆಸೆಯಂ ಪೊೞ್ತುಮನಱಿದು ತೆಂಕಮೊಗದೆ ಪಯಣಂಬೋಗಿ-
(ಆಗಳ್ ನದೀತನೂಜ, ಭಾರದ್ವಾಜ, ಕೃಪರ್ ಅವಿರಳ ಬಾಷ್ಪವಾರಿ ದುರ್ದಿನ ದೀನಾನನರಾಗಿರೆ, ವಿದುರಂ ತಾನ್ ಅಱಿದುಂ ಅಱಿಯದಂತೆ ಶೋಕಾಕ್ರಾಂತನಾಗಿ, ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೋಗಿ, ತದರ್ಧ ದಗ್ಧ ಕಳೇವರಂಗಳಂ ಸಂಸ್ಕರಿಸಿ, ಜಳದಾನಾದಿಕ್ರಿಯೆಗಳಂ ಮಾಡಿ ಮಗುೞೆ ವಂದನ್. ಅನ್ನೆಗಂ ಇತ್ತ ಪಾಂಡವರ್ ಸುರಂಗದಿಂ ಪೊಱಮಟ್ಟು, ತಾರಾಗಣಂಗಳ್‌ ನಿಂದ ನೆಲೆಯಿಂ ದೆಸೆಯಂ, ಪೊೞ್ತುಮನ್ ಅಱಿದು ತೆಂಕಮೊಗದೆ ಪಯಣಂಬೋಗಿ)
ಆಗ ಭೀಷ್ಮ, ದ್ರೋಣ, ಕೃಪರು ಕಣ್ಣೀರು ಸುರಿಸುತ್ತ, ಮೋಡ ಕವಿದ ದಿನದಂತೆ ಬಾಡಿದ ಮುಖ ಹೊತ್ತು ಕೂತರು. ವಿದುರನು ಮಾತ್ರ ತಿಳಿದೂ ತಿಳಿಯದವನಂತೆ, ಶೋಕವನ್ನು ನಟಿಸಿ, ಧೃತರಾಷ್ಟ್ರನ ಅಪ್ಪಣೆಯಂತೆ ವಾರಣಾವತಕ್ಕೆ ಹೋಗಿ, ಆ ಅರ್ಧ ಸುಟ್ಟ ಶವಗಳಿಗೆ ಸಂಸ್ಕಾರ ಮಾಡಿ, ಜಲದಾನವೇ ಮುಂತಾದ ಕ್ರಿಯೆಗಳನ್ನು ಮಾಡಿ ಮರಳಿ ಬಂದನು. ಅಷ್ಟರಲ್ಲಿ ಇತ್ತ ಪಾಂಡವರು ಸುರಂಗದಿಂದ ಹೊರಬಿದ್ದು, ನಕ್ಷತ್ರಗಳು ಇದ್ದ ಸ್ಥಾನದ ಆಧಾರದಿಂದ ದಿಕ್ಕು, ಸಮಯಗಳನ್ನು ತಿಳಿದು ದಕ್ಷಿಣದಿಕ್ಕಿನ ಕಡೆಗೆ ಪಯಣ ಬೆಳೆಸಿ-
ಮ|| ಕಡಕುಂ ಪೆಟ್ಟೆಯುಮೊತ್ತೆ ಮೆಲ್ಲಡಿಗಳಂ ಬಳ್ಕುತ್ತುಮಳ್ಕುತ್ತುಮೋ
     ರಡಿಗೊರ್ಮೊರ್ಮೆ ಕುಳುತ್ತುಮೇೞುತಿರೆ ಕಂಡಿಂತಾಗದಿನ್ನೇೞಿಮೆಂ|
     ದೊಡನಂದಯ್ವರುಮಂ ನಿಜಾಂಸಯುಗದೊಳ್ ಪೊತ್ತೆತ್ತಿ ತಳ್ತೂಳ್ವ ಸೀ
     ಱುಡುವಿಂದದ್ಭುತದಾ ಹಿಡಿಂಬವನಮಂ ಪೊಕ್ಕಂ ಮರುನ್ನಂದನಂ|| ೯||
(ಕಡಕುಂ ಪೆಟ್ಟೆಯುಂ ಒತ್ತೆ ಮೆಲ್ಲಡಿಗಳಂ,  ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ  ಕುಳುತ್ತುಂ ಏೞುತಿರೆ ಕಂಡು, ‘ಇಂತಾಗದು, ಇನ್ನೇೞಿಂ’ ಎಂದು, ಒಡನೆ ಅಂದು ಅಯ್ವರುಮಂ ನಿಜಾಂಸಯುಗದೊಳ್ ಪೊತ್ತು ಎತ್ತಿ, ತಳ್ತು ಊಳ್ವ ಸೀಱುಡುವಿಂದ ಅದ್ಭುತದ ಆ ಹಿಡಿಂಬವನಮಂ ಪೊಕ್ಕಂ ಮರುನ್ನಂದನಂ)
ಕಲ್ಲಿನ ಚೂರುಗಳೂ, ಮಣ್ಣಿನ ಹೆಂಟೆಗಳೂ ಮೆದುವಾದ ಅಂಗಾಲನ್ನು ಚುಚ್ಚುತ್ತಿರಲು, ಪಾಂಡವರು ಬಳುಕುತ್ತ, ಅಳುಕುತ್ತ, ಹೆಜ್ಜೆಗೊಮ್ಮೆ ಕೂತು ಏಳುತ್ತ ನಡೆದು ಬರುತ್ತಿದ್ದರು. ಭೀಮಸೇನನು ಅವರ ಈ ಅವಸ್ಥೆಯನ್ನು ಕಂಡು ‘ಇದು ಸಾಧ್ಯವಿಲ್ಲ, ಇನ್ನು ಏಳಿ’ ಎಂದು ಅವರೆಲ್ಲರನ್ನೂ ಎತ್ತಿ ತನ್ನ ಹೆಗಲ ಮೇಲೆ ಹೊತ್ತುಕೊಂಡು, ಒಟ್ಟಿಗೆ ಏಕಕಾಲಕ್ಕೆ ‘ಜೀರ್’ ಎಂದು ಶಬ್ದ ಹೊರಡಿಸುವ ಜೀರುಂಡೆಗಳಿಂದ ಅದ್ಭುತವೆನಿಸುವ ಹಿಡಿಂಬವನವನ್ನು ಬಂದು ಸೇರಿದನು.
ಚಂ|| ಅದು ಮದದಂತಿ ದಂತ ಮುಸಲ ಪ್ರವಿಭಗ್ನ ಮಹಾಮಹೀರುಹಾ
     ಸ್ಪದಮದು ಸಿಂಹನಾದಜನಿತ ಪ್ರತಿಶಬ್ದ ಮಹಾ ಭಯಾನಕ|
     ಪ್ರದಮದು ನಿರ್ಝರೋಚ್ಚಳಿತ ಶೀಕರ ಶೀತಳ ವಾತ ನರ್ತಿತೋ
     ನ್ಮದ ಶಬರೀ ಜನಾಳಕಮದಾಯತ ವೇತ್ರಲತಾವಿತಾನಕಂ|| ೧೦||
(ಅದು ಮದದಂತಿ ದಂತ ಮುಸಲ ಪ್ರವಿಭಗ್ನ ಮಹಾಮಹೀರುಹ ಆಸ್ಪದಂ, ಅದು ಸಿಂಹನಾದಜನಿತ ಪ್ರತಿಶಬ್ದ ಮಹಾ ಭಯಾನಕಪ್ರದಂ, ಅದು ನಿರ್ಝರ ಉಚ್ಚಳಿತ ಶೀಕರ ಶೀತಳ ವಾತ ನರ್ತಿತ      ಉನ್ಮದ ಶಬರೀ ಜನಾಳಕಂ ಅದು ಆಯತ ವೇತ್ರಲತಾವಿತಾನಕಂ)
(ಆ ಹಿಡಿಂಬವನವು) ಮದಿಸಿದ ಆನೆಗಳ ಒನಕೆಯಂಥ ದಂತಗಳ ಪೆಟ್ಟಿನಿಂದ ಮುರಿದುಬಿದ್ದ ದೊಡ್ಡ ದೊಡ್ಡ ಮರಗಳಿಗೆ ಆಶ್ರಯತಾಣ; ಅಲ್ಲಿ ಸಿಂಹಗಳ ಗರ್ಜನೆಯ ಮಾರ್ದನಿಯು ಹೆದರಿಕೆ ಹುಟ್ಟಿಸುತ್ತದೆ; ಅಲ್ಲಿ ಬೆಟ್ಟದಿಂದ ಧುಮುಕುವ ಜಲಪಾತಗಳಿಂದ ತುಂತುರುಹನಿಗಳು ಮೇಲೆದ್ದು ಬೀಸುವ ಗಾಳಿಯನ್ನು  ತಂಪಾಗಿಸಿ, ಬೇಡ ಹೆಣ್ಣುಗಳ ಗುಂಗುರು ಕೂದಲನ್ನು ಅಲುಗಿಸುತ್ತವೆ; ಬೆತ್ತದ ಬಳ್ಳಿಗಳು ವಿಸ್ತಾರವಾದ ಚಪ್ಪರಗಳನ್ನು ನಿರ್ಮಿಸಿಕೊಂಡು ಆ ಕಾಡನ್ನು ತುಂಬಿಕೊಂಡಿವೆ.
ವ|| ಆ ವನಾಂತರಾಳ ಮಧ್ಯಸ್ಥಿತ ವಿಶಾಳ ವಟ ವಿಟಪಿಯನೆಯ್ತಂದದಱ ಕೆೞಗಯ್ವರುಮನಿೞಿಪಿದೊಡಧ್ವಾನ ಪದ ಪರಿಶ್ರಮ ಶ್ರಾಂತರ್ ನಿದ್ರಾಭರಪರವಶರಾಗಿರೆ ಭೀಮಂ ಜಾವಮಿರ್ದು ತನ್ನೊಡವುಟ್ಟಿದರ್ಗಾದ ಪ್ರವಾಸಾಯಾಸಂಗಳ್ಗಂ ದೆಸೆಗಂ ಮನ್ಯುಮಿಕ್ಕು ಬರೆ ಕಣ್ಣ ನೀರಂ ತುಂಬಿ-
(ಆ ವನಾಂತರಾಳ ಮಧ್ಯಸ್ಥಿತ ವಿಶಾಳ ವಟ ವಿಟಪಿಯನ್ ಎಯ್ತಂದು, ಅದಱ ಕೆೞಗೆ ಅಯ್ವರುಮನ್ ಇೞಿಪಿದೊಡೆ, ಅಧ್ವಾನ ಪದ ಪರಿಶ್ರಮ ಶ್ರಾಂತರ್ ನಿದ್ರಾಭರಪರವಶರಾಗಿರೆ, ಭೀಮಂ ಜಾವಂ ಇರ್ದು, ತನ್ನ ಒಡವುಟ್ಟಿದರ್ಗೆ ಆದ ಪ್ರವಾಸಾಯಾಸಂಗಳ್ಗಂ, ದೆಸೆಗಂ, ಮನ್ಯುಮಿಕ್ಕು ಬರೆ ಕಣ್ಣ ನೀರಂ ತುಂಬಿ)
ಆ ಕಾಡಿನ ಅಂತರಾಳದ ನಡುವಿನಲ್ಲಿರುವ ವಿಶಾಲವಾದ ಆಲದ ಮರದ ಸಮೀಪಕ್ಕೆ ಬಂದು, ಅದರ ಕೆಳಗೆ ಐವರನ್ನೂ ಇಳಿಸಿದಾಗ, ಪ್ರಯಾಣದ ಆಯಾಸದಿಂದ ಬಳಲಿದ್ದ ಅವರೆಲ್ಲರೂ ಗಾಢವಾದ ನಿದ್ರೆಗೆ ಜಾರಿದರು! ಭೀಮನು ಅಲ್ಲಿಯೇ ಅವರಿಗೆ ಕಾವಲಿದ್ದು, ತನ್ನ ಒಡಹುಟ್ಟಿದ ಅವರೆಲ್ಲರಿಗೂ ಉಂಟಾದ ಪ್ರಯಾಣದ ಆಯಾಸಕ್ಕೂ, ದೆಸೆಗೂ ಕಂಠ ಬಿಗಿದು ಬಂದು, ಕಣ್ಣುಗಳಲ್ಲಿ ನೀರು ತುಂಬಿಕೊಂಡು-
ಚಂ|| ಭರತನ ವಂಶದೊಳ್ ನೆಗೞ್ದ ಪಾಂಡುಗೆವುಟ್ಟಿಯುಮೀ ಸಮಸ್ತ ಸಾ
     ಗರ ಪರಿವೇಷ್ಟಿತಾವನಿಗೆ ವಲ್ಲಭನಾಗಿಯುಮೀ ಮಹೋಗ್ರ ಕೇ|
     ಸರಿ ಕರಿಕಂಠ ಗರ್ಜಿತ ಮಹಾಟವಿಯೊಳ್ ಮಱಕೆಂದಿ ನೀಮುಮೀ
     ಮರದಡಿಯೊಳ್ ಶಿವಾಶಿವ ರವಂಗಳಿನೆೞ್ಚಱುವಂತುಟಾದುದೇ|| ೧೧||
(ಭರತನ ವಂಶದೊಳ್ ನೆಗೞ್ದ ಪಾಂಡುಗೆ ಪುಟ್ಟಿಯುಂ, ಈ ಸಮಸ್ತ ಸಾಗರ ಪರಿವೇಷ್ಟಿತ ಅವನಿಗೆ ವಲ್ಲಭನಾಗಿಯುಂ, ಈ ಮಹೋಗ್ರ ಕೇಸರಿ ಕರಿ ಕಂಠ ಗರ್ಜಿತ ಮಹಾಟವಿಯೊಳ್ ಮಱಕೆಂದಿ, ನೀಮುಂ ಈ ಮರದಡಿಯೊಳ್ ಶಿವಾಶಿವ ರವಂಗಳಿನ್ ಎೞ್ಚಱುವಂತುಟು ಆದುದೇ?)
ಭರತನ ವಂಶದಲ್ಲಿ ಪ್ರಸಿದ್ಧನಾದ ಪಾಂಡುವಿಗೆ ಹುಟ್ಟಿಯೂ, ಕಡಲಿನಿಂದ ಸುತ್ತುವರಿದ ಇಡಿಯ ಭೂಮಿಗೆ ಒಡೆಯನಾಗಿಯೂ ಸಹ, ಸಿಂಹಗಳ ಗರ್ಜನೆ, ಆನೆಗಳ ಘೀಂಕಾರಗಳಿಂದ ತುಂಬಿದ ಕಾಡಿನಲ್ಲಿ ಮರದ ಅಡಿಯಲ್ಲಿ ಮಲಗಿ, ನೀವು ಸಹ ನರಿಗಳ ಅಮಂಗಳಕರವಾದ ಕೂಗಿನಿಂದ ಎಚ್ಚರಗೊಳ್ಳುವಂತಾಯಿತೇ?



ಕಾಮೆಂಟ್‌ಗಳಿಲ್ಲ: