ಮಂಗಳವಾರ, ಜೂನ್ 22, 2010

ಎಸ್ ಇ ಝಡ್ ನೇತ್ರಾವತಿಯನ್ನು ತಿರುಗಿಸಲು ಹೊರಟಿದೆಯೇ?

ಮಂಗಳೂರು ವಿಶೇಷ ಆರ್ಥಿಕ ವಲಯದ ವೆಬ್ ಸೈಟನ್ನು ನಾನು ನಿಯಮಿತವಾಗಿ ನೋಡುವುದಿಲ್ಲ. "ವಿಶೇಷ ಆರ್ಥಿಕ ವಲಯಕ್ಕೆ ನೀರೆಲ್ಲಿಂದ?" ಎಂಬ ಲೇಖನ ಬರೆದಾಗ ನೋಡಿದ್ದೆ. ಅಲ್ಲಿ ಕೊಟ್ಟಿದ್ದ ಕೆಲವು ಅಂಕಿಸಂಖ್ಯೆಗಳನ್ನು ಲೇಖನದಲ್ಲಿ ಬಳಸಿಕೊಂಡಿದ್ದೆ. ಅದೇ ನೆನಪಿನ ಮೇಲೆ ಮೊನ್ನೆ "ನಿಮ್ಮ ಕಾನೂನು ನಿಮಗಿರಲಿ......" ಲೇಖನದಲ್ಲಿ "ಕರ್ನಾಟಕ ಸರಕಾರ ದಿನಕ್ಕೆ ೬.೭೫ ಕೋಟಿ ಲೀಟರ್ ನೀರು ಕೊಡಲು ಒಪ್ಪಿಕೊಂಡಿದೆ" ಎಂದು ಬರೆದೆ. ನಿನ್ನೆ ಅಂದರೆ ೧೭-೦೬-೨೦೧೦ರಂದು ಯಾಕೋ ಕಂಪೆನಿಯ ವೆಬ್ ಸೈಟನ್ನು ಪುನಃ ನೋಡಬೇಕಾಯಿತು. ನೋಡಿದರೆ ನೀರಿನ ಕುರಿತಾದ ಕಂಪೆನಿಯ ಅಂಕಿಸಂಖ್ಯೆಗಳು ಬದಲಾಗಿಬಿಟ್ಟಿವೆ!
೧. ಒಟ್ಟು ಅಗತ್ಯ ೪೫ ಎಂಜಿಡಿ ನೀರು ಎಂಬುದೇನೋ ಮೊದಲಿನಂತೆಯೇ ಇದೆ. ಈ ಪೈಕಿ ೧೫ ಎಂಜಿಡಿ ನೀರನ್ನು ನೇತ್ರಾವತಿ ಮತ್ತು ಗುರುಪುರ ನದಿಗಳಿಂದ ಒದಗಿಸಿಕೊಳ್ಳುತ್ತೇವೆ ಎಂದು ಹಿಂದಿನ ವೆಬ್ ಸೈಟಿನಲ್ಲಿ ಇತ್ತು. ಈಗ ಅದು ೨೫ ಎಂಜಿಡಿ ಆಗಿದೆ! ಎಂದರೆ ಈಗಿನ ಲೆಕ್ಕದ ಪ್ರಕಾರ ಈ ನದಿಗಳಿಂದ ಅದು ಎತ್ತುವ ಒಟ್ಟು ನೀರಿನ ಪ್ರಮಾಣ ದಿನಕ್ಕೆ ೧೧.೨೫ ಕೋಟಿ ಲೀಟರುಗಳು!
೨೦೦೭ರ ಸರ್ಕಾರಿ ಆಜ್ಞೆಯಲ್ಲಿ "೧೫ ಎಂಜಿಡಿ ನೀರು ಎತ್ತಲು ಅನುಮತಿ ನೀಡಲಾಗಿದೆ" ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾದರೆ ಈಗ ಹತ್ತು ಎಂಜಿಡಿ ಜಾಸ್ತಿ ಆದದ್ದು ಹೇಗೆ? ಸರಕಾರ ೨೫ ಎಂಜಿಡಿ ನೀರೆತ್ತಲು ಕಂಪೆನಿಗೆ ಹೊಸದಾಗಿ ಅನುಮತಿ ನೀಡಿದೆಯೆ? ಈ ಬಗ್ಗೆ ಮಾಹಿತಿ ಕೇಳಿ ಸಣ್ಣ ನೀರಾವರಿ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದೇನೆ.
೨, ಇನ್ನೊಂದು ಬದಲಾವಣೆ ಎಂದರೆ ಮಳೆನೀರಿನ ಸಂಗ್ರಹದ ವಿಷಯ ಮಂಗಮಾಯ ಆಗಿರುವುದು! ಈ ಹಿಂದೆ, ೧೨ ಎಂಜಿಡಿ ನೀರನ್ನು ಮಳೆ ನೀರು ಸಂಗ್ರಹದ ಮೂಲಕ ಒದಗಿಸಿಕೊಳ್ಳುವುದಾಗಿ ಕಂಪೆನಿ ಹೇಳಿತ್ತು. "ಸ್ವಾಧೀನ ಪಡಿಸಿಕೊಂಡ ಜಮೀನಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸುವ" ಮಾತನ್ನು ಆಗ ಕಂಪೆನಿ ಆಡಿತ್ತು.ಇದರ ಸಾಧ್ಯತೆಯ ಬಗ್ಗೆ ನನ್ನ ಲೇಖನದಲ್ಲಿ ಅನುಮಾನ ವ್ಯಕ್ತಪಡಿಸಿದ್ದೆ. ಸ್ವಾಧೀನ ಪಡಿಸಿಕೊಂಡ ಎಲ್ಲ ಭೂಮಿಯನ್ನೂ ಈಗ ಒಂದೇ ಲೆಕ್ಕ ತಟ್ಟು ಮಾಡಿದ್ದಾರಂತೆ. ಹಾಗಾಗಿ "ತಗ್ಗು ಪ್ರದೇಶ"ದ ಜೊತೆಗೇ ಮಳೆನೀರು ಸಂಗ್ರಹದ ಯೋಜನೆಯೂ ಮಾಯವಾಗಿರಬೇಕು!
೩. ಈಗಿನ ಲೆಕ್ಕಾಚಾರದ ಪ್ರಕಾರ ನದಿಗಳಿಂದ ೨೫ ಎಂಜಿಡಿ, ಮಂಗಳೂರಿನ ಗಲೀಜು ನೀರು ಸಂಸ್ಕರಿಸಿ ೧೦ ಎಂಜಿಡಿ ಎಂದಿದೆ. ಇನ್ನೂ ಬೇಕಾಗುವ ೧೦ ಎಂಜಿಡಿ ಎಲ್ಲಿಂದ ಬರುತ್ತದೆ ಎನ್ನುವುದಕ್ಕೆ ಯಾವ ವಿವರಣೆಯೂ ಇಲ್ಲ.
ವೆಬ್ ಸೈಟಿನಲ್ಲಿ, ಪತ್ರಿಕೆಯಲ್ಲಿ, ಕಂಪೆನಿಯ ಹೆಸರು ಹಾಕಿ "ಮಳೆ ನೀರು ಸಂಗ್ರಹಿಸುತ್ತೇವೆ" ಎಂದು ಎಲ್ಲರೂ ಓದುವಂತೆ ಪ್ರಕಟಿಸಿದ ಮೇಲೆ, ಅದು ಸಾರ್ವಜನಿಕರಿಗೆ ಕೊಟ್ಟ ವಾಗ್ದಾನವೇ ಆಯಿತು. ಮಳೆನೀರು ಸಂಗ್ರಹ ಮಾಡುತ್ತೇವೆಂದು ಮೊದಲು ಹೇಳಿದವರು, ಈಗ ಆ ಯೋಜನೆಯನ್ನು ಕೈ ಬಿಡುವುದು ಹೇಗೆ ಸಾಧ್ಯ? ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಕಂಪೆನಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ.
ನೇರವಾಗಿ ಕೇಳುವುದೇ ಸರಿ ಎಂದುಕೊಂಡು ಎಸ್ ಇ ಝಡ್ ಕಂಪೆನಿಗೆ ಸಮಸ್ಯೆ ವಿವರಿಸಿ ಸ್ಪಷ್ಟೀಕರಣ ಕೇಳಿ ಒಂದು ಮಿಂಚಂಚೆ ಕಳಿಸಿದೆ. ೨೧ರ ಮಂಗಳವಾರ ಮಧ್ಯಾಹ್ನ ಒಂದು ಫೋನು: "ನಾನು ದಿವಾಕರ್ ಅಂತ ಎಸ್ ಇ ಝಡ್ನಿಂದ ಮಾತಾಡುವುದು. ಇದು ನಮ್ಮ ವೆಬ್ ಸೈಟಿನಲ್ಲಿ ಮೊದಲು ಏನಂತ ಇತ್ತು ಸಾರ್?"
ನಾನು: ಮೊದಲು ಇದ್ದದ್ದು ೧೫ ಎಂಜಿಡಿ ನೇತ್ರಾವತಿ ಮತ್ತು ಗುರುಪುರ ನದಿಗಳಿಂದ, ೧೮ ಎಂಜಿಡಿ ಮಂಗಳೂರು ಎಸ್ ಟಿ ಪಿ ಯಿಂದ ಮತ್ತು ೧೨ ಎಂಜಿಡಿ ಮಳೆ ನೀರು ಸಂಗ್ರಹದಿಂದ ಅಂತ"
ದಿವಾಕರ್: ಓ ಹಾಗಿತ್ತ?
ನಾನು: ನನ್ನ ಹತ್ತಿರ ಅದರ ಪ್ರಿಂಟ್ ಔಟ್ ಇದೆ. ಉದಯವಾಣಿ ಜಾಹೀರಾತಿನಲ್ಲೂ ಹಾಗೇ ಇತ್ತು.
ದಿವಾಕರ್: ಸರಿ, ಹಾಗಾದರೆ ನಾನು ಚೆಕ್ ಮಾಡಿ ನಿಮಗೆ ಪುನಃ ಫೋನ್ ಮಾಡುತ್ತೇನೆ. ಮತ್ತೆ ಇದು ಮೊನ್ನೆ ಮಡಿಕೇರಿಯಲ್ಲಿ ಮಾಹಿತಿ ಹಕ್ಕಿನದು ಇತ್ತಲ್ಲ. ನಾವು ಕಂಪೆನಿಯಿಂದ ಒಂದು ಕಾಗದ ಬರೆದಿದ್ದೆವು ಅಲ್ಲಿಗೆ.
ನಾನು: ನಾನು ಹೋಗಿದ್ದೆ. ನನಗೆ ನಿಮ್ಮ ಕಾಗದ, ವಕೀಲರ ಅಭಿಪ್ರಾಯ ಸಿಕ್ಕಿದೆ. ಅದರ ವಿಷಯ ನಾನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿ
ದಿವಾಕರ್: ನಿಮ್ಮ ಬ್ಲಾಗ್ ಯಾವುದು"
ನಾನು: ಇವೊತ್ತಿನ ಉದಯವಾಣಿ ಆರನೇ ಪುಟದಲ್ಲಿ ಹಾಕಿದ್ದಾರೆ ನೋಡಿ ವಿಳಾಸ
ದಿವಾಕರ್: ಸರಿ ಸರಿ ನೋಡುತ್ತೇನೆ
ಸುಮಾರು ಒಂದೂವರೆ ಗಂಟೆ ಕಳೆದ ಮೇಲೆ ಪುನಃ ಫೋನ್ ಬಂತು: "ನೀವು ಹೇಳಿದ್ದು ಸರಿ. ಅದು ಹಾಗೆಯೇ ಇರಬೇಕು. ವೆಬ್ ಸೈಟಿನಲ್ಲಿ ಸರಿ ಮಾಡುತ್ತೇವೆ
ನಾನು: ಸರಿ ಸರಿ. ನನಗೊಂದು ಮೇಲ್ ಕಳಿಸಿಬಿಡಿ
ದಿವಾಕರ್: ಇಲ್ಲ ಅದು ಕಳಿಸುವುದಿಲ್ಲ....
ನಾನು: ಸರಿ ಹಾಗಾದರೆ.
ದಿವಾಕರ್: ನಿಮ್ಮ ಬ್ಲಾಗ್ ನೋಡಿದೆ. ಲೇಖನ ಚೆನ್ನಾಗಿದೆ.
ನಾನು : ಥ್ಯಾಂಕ್ಸ್!
ಇವೊತ್ತು ಅಂದರೆ ೨೨ರ ಬುಧವಾರ ರಾತ್ರಿ ವೆಬ್ ಸೈಟ್ ನೋಡಿದೆ. ನೀರಿನ ವಿಷಯ ನಾಪತ್ತೆ! ಜೊತೆಗೆ ಕಂಪೆನಿಗೆ ಬೇಕಾಗುವ ವಿದ್ಯುತ್ ಎಷ್ಟು, ಅದಕ್ಕೆ ಏನು ವ್ಯವಸ್ಥೆ ಎಂಬ ಮಾಹಿತಿ ಇತ್ತು, ಅದೂ ನಾಪತ್ತೆ! ಹೇಗಾದರೂ ನನ್ನ ಹತ್ತಿರ ಅದರ ಪ್ರಿಂಟೌಟ್ ಇದೆ.

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Public memory is short - ಸಾರ್ವಜನಿಕಕ್ಕೆ ನೆನಪು ಕಡಿಮೆ, ಎನ್ನುವ ಉಕ್ತಿಯ ಆಧಾರದ ಮೇಲೇ ಈ ‘ಸಾರ್ವಜನಿಕ’ ಎನ್ನಿಸಿಕೊಳ್ಳುವ ಸಂಸ್ಥೆಗಳು ಬದುಕಿ,ಬಂಡವಾಳ ಬೆಳೆಸಿಕೊಳ್ಳುವುದು ನಿಜಕ್ಕೂ ನಾಚಿಗೆಗೇಡು. ಇದನ್ನು ಜನಪರ ಎನ್ನಿಸಿಕೊಳ್ಳುವ ಸರಕಾರಗಳು (ಪಕ್ಷಾತೀತವಾಗಿ) ಬೆಂಬಲಿಸುವುದು, ಬಳಸಿಕೊಳ್ಳುವುದು ಪ್ರಜಾಸತ್ತೆಯ ದುರಂತ. ಇದಕ್ಕೆ ತೀರಾ ಹೊಸ ಮತ್ತು ದೊಡ್ಡ ಬಲಿ ಲೋಕಾಯುಕ್ತ ಸಂತೋಷ ಹೆಗ್ಡೆ (ಈಗಷ್ಟೇ ಅವರ ರಾಜೀನಾಮೆಯ ವಿಚಾರ ತಿಳಿಯಿಯಿತು).

ಸಾರ್ವಜನಿಕ ಸಂಪರ್ಕಾಧಿಕಾರಿಯೇ ಇರಬಹುದಾದ ‘ದಿವಾಕರ್’ ಪ್ರಾಥಮಿಕ ಶಾಲೆಯ ಪಾಠ - "ಕಾಕರಾಜ ನೀನು ಚಂದ, ನಿನ್ನ ಧ್ವನಿಯು ಎಷ್ಟು ಅಂದ" ಇನ್ನೂ ಮರೆತಿಲ್ಲದಿರುವುದು ವಿಷಾದದ ನಗೆ ತರಿಸುತ್ತದೆ.

ವಾಮನ ತ್ರಿವಿಕ್ರಮನಾಗುವ ಪರಿಯನ್ನು ನಾವು ಪುರಾಣಪ್ರಿಯರು ಬಹಳ ಭಕ್ತಿಯಿಂದ, ಸಂತೋಷದಿಂದ ಮನನ ಮಾಡಿಕೊಳ್ಳುವುದುಂಟು; ನನಗೆ ಈಗ ಅನಿಸುತ್ತದೆ ಅದು ದೊಡ್ಡ ತಪ್ಪು. ಪ್ರವೃತ್ತಿಯನ್ನು ಬಿಟ್ಟು, ನೆಲದ ಮಕ್ಕಳನ್ನು ರಾಕ್ಷಸ ಮಾಡಿದ್ದು ಅಲ್ಲೂ ವರ್ತಮಾನದಲ್ಲಿ ಹೊರತುಪಡಿಸಲು ಉಳಿದಿಲ್ಲವೆನ್ನುವಂತೆ ಪ್ರತಿ ‘ಅಭಿವೃದ್ಧಿ’ ಕಾರ್ಯಕ್ರಮದಲ್ಲೂ ಎದ್ದು ಕಾಣುತ್ತದೆ. ಇದನ್ನೇ ನಾನು ಹಿಂದೆ ಎಂ.ಆರ್.ಪಿ.ಎಲ್ ಕುರಿತು ಹೇಳಿದ್ದೆ. ಇದು ಸಣ್ಣದಾಗಿ ಪಾದ ಊರಲು (ವಾಮನ) ಬಹಳ ವಿರೋಧ ಎದುರಿಸಿದರೂ ಕಾಲಾನಂತರ ವಿಸ್ತರಣೆಗೆ (ತ್ರಿವಿಕ್ರಮನಾಗುವ) ಅವಕಾಶ ಪಡೆದಾಗ ಜಯಘೋಷದ ನಡುವೆ ಮನೆಮನೆಯ ಬಾವಿಯಲ್ಲಿ ಎಣ್ಣೆಕಲುಷಿತ ನೀರು ಕುಡಿಯಲಾಗದವರು, ಸ್ವಂತದ ಗದ್ದೆ ತೋಟ ಹಡಿಲು ಬಿಟ್ಟು ಗೇಟು ಕಾಯುವ ‘ಮನೆಗೊಂದು ಕೆಲಸ’ದ ವರಪಡೆದವರು ಸುದ್ದಿ ಮಾಧ್ಯಮಗಳ ಪ್ರಾದೇಶಿಕ ಪುಟದ ಮೂಲೆಯಲ್ಲಿ ಬರೆದಾತನಿಗೆ ಮಾಧ್ಯಮ ಪ್ರಶಸ್ತಿ ಗ್ಯಾರಂಟಿ ಕೊಡುವ ಐಟಂ ಆಗಿಯೂ ಬಂದರೆ ಪುಣ್ಯ! ಇಪ್ಪತ್ತೈದೇ ವರ್ಷದ ಆಯುಷ್ಯ ಹೊತ್ತು ಹುಟ್ಟಿದ ಕೂಸು - ಕುದುರೆಮುಖ ಗಣಿಗಾರಿಕೆ ಯೋಜನೆಯನ್ನು ಚಿರಂಜೀವಿಯಾಗಿಸಲು ಹೆಣಗಿದವರಂತೂ ಅದರ ವಿರೋಧಿಗಳನ್ನು ಪರಿಸರ ವೈರಿಗಳೆಂದೇ ಹೆಸರಿಸಲು ನಾಚಲಿಲ್ಲ. ತುಂಬೆಯಲ್ಲಿ ಮೊದಲ ಅಣೆಕಟ್ಟು ಏಳುವಾಗಿನ ಆಶ್ವಾಸನೆಗಳು (ಕೃಷಿಭೂಮಿಯ ಮುಳುಗಡೆ ಇಲ್ಲ, ಜನರ ಪುನರ್ವಸತಿಯ ಸಮಸ್ಯೆ ಇಲ್ಲ ಇತ್ಯಾದಿ), ಇಂದು ನೇತ್ರಾವತಿಯ ಉದ್ದಕ್ಕೂ ಏಳುತ್ತಿರುವ ಏಳಲಿರುವ ಅಣೆಕಟ್ಟುಗಳ ಮಹಾಪೂರದಲ್ಲಿ ಕೊಚ್ಚಿಯೇ ಹೋಗಿದೆ!

ನಿನ್ನೆಯಷ್ಟೇ ಯಾರೋ ಅಮೆರಿಕಾದ ಸಮಾಜ ಶಾಸ್ತ್ರಜ್ಞ ಹೇಳಿದ ಬಹಳ ಸಂಶೋಧಿತ, ಖಚಿತ ಮಾತು - ಮಾನವಕುಲದ ಆಯುಷ್ಯ ಇನ್ನು ಕೇವಲ ನೂರೇ ವರ್ಷ, ಎನ್ನುವುದು ಎಷ್ಟೇ ಆಶಾವಾದಿಯಾಗಿದ್ದರೂ ಮರೆಯಲಾಗುತ್ತಿಲ್ಲ.
ಅಶೋಕವರ್ಧನ

ಎ ವಿ ಜಿ ವಿಚಾರಲಹರಿ ಹೇಳಿದರು...

ವಿಕ್ರಮಾದಿತ್ಯನಂತೆ (ಸುಂದರರಾರಯರಂತೆ)ಬೇತಾಳವನ್ನು ವಶಪಡಿಸಿಕೊಳ್ಳಲು ಅವಿರತವಾಗಿ ಪ್ರಯತ್ನಿಸುವವರ ಸಂಖ್ಯೆ ಇಲ್ಲವೇ ಇಲ್ಲ ಎನ್ನಬಹುದಾದಷ್ಟು ಕಮ್ಮಿ ಎಂದು. ಏಕೆಂದರೆ ಇದು ಆಧ್ಯಾತ್ಮಿಕ ರಾಷ್ಟ್ರ, ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲಿ ದೂರದರ್ಶನಗಳಲ್ಲಿ ಹೇಳಿಕೆಗಳನ್ನು ಕೊಡುವುದರ ಮೂಲಕ ಹೋರಾಟಮಾಡುವ ಬುದ್ಧಿಜೀವಿಗಳ ರಾಷ್ಟ್ರ. ಹೆಚ್ಚೆಂದರೆ ಒಂದೆರಡು ತಿಂಗಳು ಸದ್ದು ಮಾಡಿ ಸದ್ದಿಲ್ಲದೇ ಸುಮ್ಮನಾಗುವವರ ರಾಷ್ಟ್ರ. ಇದು ಸರ್ಕಾರಕ್ಕೆ ಮತ್ತು ಉದ್ಯಮಪತಿಗಳಿಗೆ ಗೊತ್ತಿರುವುದರಿಂದಲೇ ಈ ಲೇಖನದಲ್ಲಿ ತಿಳಿಸಿದಂಥ ಘಟನೆಗಳು ಜರಗುತ್ತಲೇ ಇರುತ್ತವೆ.

ಅನಾಮಧೇಯ ಹೇಳಿದರು...

ನೀರು ಮಾಯದ ವಿಷಯ ಓದಿದೆ.
ಅಯ್ಯೋ..! ಎಂ.ಎಸ್.ಇ.ಝಡ್ ಮಾಡಿರುವ ದುಷ್ಟ ಕೃತ್ಯಗಳನ್ನು ಬಣ್ಣಿಸಲು ಅವೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಅದು ಬಹುಷ 1000 ನಾಲಗೆಯ ಶೇಷನಿಗೂ ಅಸಾಧ್ಯವಾಗಬಹುದು. ಒಂದೋ ಎರಡೋ...? ಕುಡುಬಿಪದವು, ಗ್ರೆಗರಿ ಪತ್ರಾವೋ... ಜ್ವಲಂತ. ಆದರೂ ಅದು ನ್ಯಾಯದ ಬಾಗಿಲು ತಲುಪಲೇ ಇಲ್ಲ. ತಲುಪಿದರೂ ನ್ಯಾಯದೇವತೆಯ ಅಡಿಯಲ್ಲಿ ಕುಳಿತು ನ್ಯಾಯ ನೀಡಬೇಕಾದವರು ನ್ಯಾಯ ದೇವತೆಯ ಭಕ್ತರೂ ಅಲ್ಲ. ಭಕ್ತರಾಗಿರುತ್ತಿದ್ದರೆ ಅಷ್ಟು ದುರಂತ ಕಂಡ ಭೋಪಾಲ್ ಏನೂ ಇಲ್ಲದಾಗಿ ಹೋಗ್ತಾ ಇಲರ್ಿಲ್ವೇನೋ. ನಮ್ಮ ದುರಂತಕ್ಕೆ ಇವೆಲ್ಲದರ ವಿಚಾರಣೆಗೆ ಮುಂದಾಗಬೇಕಾಗಿದ್ದ ನಿಷ್ಟ ಲೋಕಾಯುಕ್ತಾದಿ ಅಧಿಕಾರಿಗಳ ಕೈ-ಕಾಲುಗಳಿಗೆ ವಜ್ರಸರಪಣಿ ಬೆಸೆದು ಶೃಂಗರಿಸಿದ ಮೂರ್ಖ ಮಂದಿಗಳೇ ನಮ್ಮ 'ರಾಜ'ರಾಗಿರುವಾಗ ನಾವ್ಹೇಗೆ ಆಶಾವಾದಿಗಳಾಗಲು ಸಾಧ್ಯ. ಒಂದೊಂದು ಬಾರಿ 'ಯಾಕಪ್ಪಾ ಬಂತು ಈ ಸ್ವಾತಂತ್ರ್ಯ' ಅನ್ನಿಸಿಬಿಡುತ್ತದೆ. ಬಂದ ಸ್ವಾತಂತ್ರ್ಯವನ್ನು ಪಾಲು ಪಾಲು ಮಾಡಿ ಮತ್ತೆ ಅದೇ ವಿದೇಶಗಳಿಗೆ ಮಾರುವ ಯೋಜನೆಯನ್ನು ಮಾಡಲು ಪ್ರಜಾ 'ಪ್ರಭುಗಳು' ತಯಾರಾಗಿರುವುದು ನಿಜಕ್ಕೂ ಖೇದವುಂಟುಮಾಡುವ ವಿಷಯವಾಗಿದೆ. ಗಾಂಧಿ ಹುಟ್ಟಿದ ನಾಡಲ್ಲೇ ಹಿಟ್ಲರ್ಗಳು ಬೆಳೆಯುತ್ತಿರುವುದು ಕಣ್ಣಾರೆ ಸಿಗುತ್ತಿರುವುದು ವಿಷಾದಮಯ ಸಂಗತಿ
ಏನೇ ಇರಲಿ. ಎಲ್ಲಾ ಮಾಯ ನಾಳೆ ನಾವು ಮಾಯವಾಗಬಾರದು ಎಂದಿದ್ದರೆ ಭಾಷೆ ಸಂಸ್ಕೃತಿ ಎಂದು ಹೇಳೋ 'ಸೋ ಕಾಲ್ಡ್' ಭಾರತೀಯ ರಾಷ್ಟ್ರಭಕ್ತರೂ ಎದ್ದೇಳಬೇಕಾಗಿದೆ. ತುಳುಭೂಮಿ ತುಳುನಾಡು ತುಳುಗ್ರಾಮ ಎಂಬ ದೊಡ್ಡ ಮಂದಿಗಳೂ ಆಲೋಚಿಸಬೇಕಾಗಿದೆ. ಇಲ್ಲವಾದರೆ ತುಳು ಜನರಿಲ್ಲದ ತುಳುನಾಡು. ಭಾರತದೊಳಗೊಂದು ವಿದೇಶ ಸ್ಥಾಪನೆಯಾಗುವುದಂತು ಖಂಡಿತ.
ಇವೆಲ್ಲದರ ಮಧ್ಯೆ ಇರುವೆಯ ಸಾಲಿನ ಕಾಲಿನ ಬಲ ಆನೆಯ ಬಲಕೂ ಮಿಗಿಲಾಗಬಹುದು ಎಂಬ ಕವಿವಾಣಿಯೊಂದೇ ನಮಗೆ ಸ್ಪೂತರ್ಿ.
ಉದಯ

Unknown ಹೇಳಿದರು...

"ನಿಮ್ಮ ಕಾನೂನು ನಿಮಗಿರಲಿ, ನೀರು ಭೂಮಿ ನಮಗಿರಲಿ"
ಒಂದು ಪ್ರತಿಕ್ರಿಯೆ:

೧. ಇಲ್ಲಿಯ ನನ್ನ ಮಿತ್ರ ನ್ಯಾಯವಾದಿ ಹತ್ತಿರ ಕೇಳಿದಾಗ ಅವರು" ಎಸ್.ಇ.ಜೆಡ್" ಗ್ರಾಹಕರ ನ್ಯಾಯಾಲಯಕ್ಕೆ ಒಳಪಡುವುದಿಲ್ಲವೆಂದರು.
೨. ಎ.ಎಂ.ಆರ್. ಎಂದರೆ ಆಟೊಮೇಟೆಡ್ ಪವರ್ ರೀಡಿಂಗ್(ಅಂತರ್ಜಾಲದಲ್ಲಿ ತೆಗೆದು ನೋಡಿದಾಗ)
೩. ಮಂಗಳೂರು ವಿಶೇಷ ಆರ್ಥಿಕ ವಲಯ ಸದರಿ ಎ.ಎಂ.ಆರ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರಿಂದ ಈ ಕಂಪನಿಯನ್ನೂ ಸಹ ಇನ್ನೊಬ್ಬ ಪ್ರತಿವಾದಿಯಾಗಿ ಸೇರಿಸಬಹುದೇ?
೪. ಕರ್ನಾಟಕ ಸರ್ಕಾರದ "ಅಭಿವೃದ್ಧಿ ಆಯುಕ್ತರು" ಎಲ್ಲ ತರಹದ ಪರವಾನಗಿ ಕೊಡುವ ಅಧಿಕಾರವುಳ್ಳವರು. ಆದ್ದರಿಂದ "ಮ೧.ವಿ.ಆ.ವ" ಕ್ಕೆ ಯಾವ ರೀತಿಯಲ್ಲಿ ನೀರಿನ ಪೂರೈಕೆ ಬಗ್ಗೆ ಪರವಾನಗಿ ಕೊಟ್ಟಿದ್ದಾರೆ ಎಂಬುದನ್ನು ತಿಳಿದುಕೊಂಡ ಸಂದರ್ಭ ಒದಗಿಸಿದಲ್ಲಿ ಇದು ಗ್ರಾಹಕ ನ್ಯಾಯಾಲಯದಲ್ಲಿ ಪೂರಕ ಅಂಶವಾಗಬಹುದೇನೋ?
೫. ಮಂಗಳೂರು ಮತ್ತು ಸುತ್ತಮುತ್ತಲಿನಲ್ಲಿಯೇ ನೀರಿನ ಅಭಾವವಿರುವುದು ಸ್ಪಷ್ಟ. ಈ ಸಂದರ್ಭದಲ್ಲಿ ಮಂಗಳೂರು ನಗರ ಪಾಲಿಕೆ ಸಹ "ಮ೧.ವಿ.ಆ.ವ" ಕ್ಕೆ ನೀರು ಸರಬರಾಜು ಮಾಡುಚುದಕ್ಕೆ ಒಪ್ಪಿಕೊಂಡಿದ್ದು ಅದರ ಒಪ್ಪಂದದ ಪ್ರತಿ ಸಹ ಸಿಕ್ಕಿದಲ್ಲಿ, ಅದನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ಈ ಮಂಗಳೂರು ನಗರ ಪಾಲಿಕೆಯನ್ನೂ ಸಹ ಪ್ರತಿವಾದಿಯನ್ನಾಗಿ ಮಾಡಬಹುದು ಎಂದು ನನ್ನ ಅನಿಸಿಕೆ.
೬. ಶುದ್ಧವಾದ ನೀರು, ಗಾಳಿ ಮತ್ತು ಭೂಮಿಯನ್ನು ಅವಲಂಬಿಸಿರುವ ಸಣ್ಣ ಹಾಗೂ ಅತೀ ಸಣ್ಣ ಹಿಡುಚಳಿದಾರರ ಭವಿಷ್ಯವಂತೂ ಡೋಲಾಯಮಾನವಾಗಿದೆ.ಇದರ ಪರಿಣಾಮ:
ಅ)ನೀರನ್ನು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ಉಪಯೋಗಿಸುವುದು.
ಬ) ಮ.ವಿ.ಆ.ವಲಯದಿಂದ ತ್ಯಾಜ್ಯ ವಸ್ಯುಗಳನ್ನು ಬಿಡುವುದು/ಹೊರಸೂಸುವುದು.
ಕ) ಭೂ ಪರಿವರ್ತನೆಯಿಂದ ಅಂತರ್ಜಲದ ಪುನರುದ್ಭವವನ್ನು ಹಾಳುಗೆಡುವುದು.
೭. ಕೋಟ್ಯಾಂತರ ಹಣವುಳ್ಳವರ ಮುಂದೆ ಸಾಮಾನ್ಯ ಜನರ ಹೋರಾಟದ ಸ್ಥಿತಿ "ಮಾನವೀಯ"ವಾಗಿದ್ದರೂ "ಅವಮಾನವೀಯ" ಸ್ಥಿತಿಯಲ್ಲಿದೆಯೇ?
೮. ಈ ಕೆಳಕಂದ ಸಂಸ್ಥೆಗಳು ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಪಟ್ಟಂತೆ ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ನಡೆಸಿವೆ ಆದ್ದರಿಂದ ಇವುಗಳ ಸಹಾಯ/ವಿವೇಚನೆಯನ್ನೂ ಬಳಸಿಕೊಳ್ಳಬಹುದೆಂದು ನನ್ನ ಸ್ವಂತ ಅಭಿಪ್ರಾಯ.
೧. ಪ್ರದೇಶ ಸಂರಕ್ಷಣಾ ವೇದಿಕೆ.
೨. ಹಿಂದೂ ಜಾಗರಣಾ ವೇದಿಕೆ.- ಕನ್ವೀನರ್ ಸತ್ಯಜಿತ್.
೩.ನಾಗರಿಕಾ ಸೇವಾ ಟ್ರುಸ್ಟ್ (ಎನ್.ಎಸ್.ಟಿ) ಗುರುವಾಯನಕೆರೆ.
೪. ಕೃಷಿ ಭೂಮಿ ಸಂರಕ್ಷಣಾ ಸಮಿತಿ.
೫. ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ.
೬ ಸ್ವದೇಶಿ ಜಾಗರಣಾ ಮಂಚ್
೭. ಜಮಾಯತ್ - ಇ- ಇಸ್ಲಾಮಿ ಹಿಂದ್.
೮. ದಲಿತ ಅಭಿವೃದ್ಧಿ ಸಮಿತಿ.
೯. ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಇನ್ನಿತರರು

ಭಾಮತಿ ಹೇಳಿದರು...

idE modala baarige nimma blogige pravEshisidfdEne. blAgige(haage heluvudaadare, antarjaalada yaavudE taanakke) ee tara pratikriye needuttiruvudakkoo idE 'SriGanesha'.

vastunishthavaagi, vaijnanika talahadiya mele ondu yojaneyannu virOdhisuvavaru teera kammi. ee blogina moolaka intaha kelasa aguttide; svagata.

kelavondu chalavaligaararu ello ondu kade muggarisidnte kaanuttade. bandavaalagaara, udyami, adhikaari, 'janajaayaka', samaajada vividha bageya netaararu - ello ondede ola oppanda maadikondiruvarEnO annisibidutte; anEka pratibhatanegloo ee suliyalli siluki mulugibittante torutte........

ee teranaagi naanu hElabaaradEno! looyi fischer bareda gaandhi charitha(anuvaada:ech.vi.saavitramma, kaavyaalaya prakashana) monne taane Odi mugiside.....

nooru varushagalalli ellinda ellige ilidubittide ottare bhaarateeya samaaja!! .... janara nela, neeru, baduku ellavannoo nammavarE vyavasthitavaagi dOchuttiruvudoo ee adhapatanada phalave allave?!......

bhandarkar.

ಅನಾಮಧೇಯ ಹೇಳಿದರು...

ನೇತ್ರಾವತಿಯನ್ನು ಹೀಗೆ ಖಾಲಿ ಮಾಡುವುದು ಖಂಡನೀಯ. ಅಜಕ್ಕಲ್ಳ ಗಿರೀಶ

ಅನಾಮಧೇಯ ಹೇಳಿದರು...

ee kelagiruva link odi
http://www.kendasampige.com/article.php?id=3559