ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿಯನ್ನು ಅದರ ನೀರಿನ ವ್ಯವಸ್ಥೆ ಬಗ್ಗೆ ಮಾಹಿತಿ ಕೇಳಿದಾಗ "ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ತಿಳಿಸಿತ್ತು. ಒಪ್ಪಂದದ ಪ್ರತಿಯನ್ನು ಕೇಳಿ ನಾನು ಅರ್ಜಿ ಸಲ್ಲಿಸಿದೆ. ಕಂಪೆನಿ ಅದನ್ನು ಕೊಡಲು ನಿರಾಕರಿಸಿತು. ನಾನು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಮೊನ್ನೆ ೫-೬-೨೦೧೦ರಂದು ಮಡಿಕೇರಿಯಲ್ಲಿ ಮಾಹಿತಿ ಹಕ್ಕು ಆಯೋಗ ಈ ಬಗ್ಗೆ ವಿಚಾರಣೆ ಇಟ್ಟುಕೊಂಡಿತ್ತು. ನಾನು ಹಾಜರಾದೆ. ಕಂಪೆನಿಯ ಪರವಾಗಿ ಯಾರೂ ಬಂದಿರಲಿಲ್ಲ. ಆದರೆ, ಬರಹ ರೂಪದಲ್ಲಿ ಆಯೋಗಕ್ಕೆ ಒಂದು ಅರ್ಜಿ ಸಲ್ಲಿಸಿ ಕಂಪೆನಿಯನ್ನು ಮಾಹಿತಿ ಹಕ್ಕು ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವಂತೆ ವಿನಂತಿಸಿಕೊಂಡಿದ್ದರು. ಆಯೋಗದ ಅಧ್ಯಕ್ಷರು, "ಕಂಪೆನಿ ಸಲ್ಲಿಸಿದ ಅರ್ಜಿ ಹಾಗೂ ವಕೀಲರ ಅಭಿಪ್ರಾಯಗಳ ಯಥಾಪ್ರತಿಗಳು ನಿಮಗೆ ಬೇಕೆ?" ಎಂದು ಕೇಳಿದಾಗ ನಾನು "ದಯವಿಟ್ಟು ಕೊಡಿ" ಎಂದೆ. ಕೂಡಲೇ ಯಥಾಪ್ರತಿ ಮಾಡಿಸಿಕೊಟ್ಟರು, ಉಚಿತವಾಗಿ. ಹೀಗೆ ನಾನು ಹಾಜರಾದದ್ದು ಸಾರ್ಥಕವಾಯಿತು.
ಮಾಹಿತಿ ಆಯೋಗದ ಅಧ್ಯಕ್ಷರು "ಈಗ ನಾನು ಏನು ಮಾಡಲಿ?" ಎಂದು ನನ್ನನ್ನು ಕೇಳಿದರು. ನನ್ನ ತಲೆ ಓಡುವುದು ನಿಧಾನ. (ಅದು ಓಡಿದ್ದನ್ನು ನಾನು ಕಂಡೇ ಇಲ್ಲ ಎನ್ನುವ ಟೀಕಾಚಾರ್ಯರೂ ಇದ್ದಾರು - ಅಂಥವರ ಸಂತತಿ ಬೆಳೆಯಲಿ!). ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ. ಕಡೆಗೆ ಅವರೇ, "ನೋಡೋಣ. ಮೂರು ವರ್ಷದ ಬ್ಯಾಲೆನ್ಸ್ ಶೀಟ್ ಹಾಜರುಪಡಿಸಲು ಆಜ್ಞೆ ಮಾಡುತ್ತೇನೆ. ಅದರ ಆಧಾರದಲ್ಲಿ ತೀರ್ಮಾನಿಸೋಣ" ಎಂದರು. ನಾನು "ಆಗಲಿ" ಎಂದೆ. ಪ್ರಕರಣದ ವಿಚಾರಣೆ ನಡೆಯುವುದು ಇನ್ನು ನಾಲ್ಕು ತಿಂಗಳು ಬಿಟ್ಟು. ಅಲ್ಲಿಯವರೆಗೆ ನನ್ನ ತಲೆ ಓಡಿದಷ್ಟು ಓಡಿಸಲು ನನಗೆ ಪುರುಸೊತ್ತಿದೆ. ತಜ್ಞರ ಸಲಹೆ ಪಡೆಯಲೂ ಅವಕಾಶವಿದೆ.
ಓದುಗರ ಸಲಹೆಗಳಿಗೆ, ಮಾಹಿತಿಗೆ ಸ್ವಾಗತ. ಮಾಹಿತಿ ಹಕ್ಕು ಆಯೋಗಕ್ಕೆ ನಾನು ಸಲ್ಲಿಸಬೇಕೆಂದಿರುವ ಉತ್ತರ ವಕೀಲರ ಅಭಿಪ್ರಾಯಕ್ಕೆ ನಾನು ನೀಡಿರುವ ಪ್ರತಿಕ್ರಿಯೆಯಲ್ಲಿರುವ ಅಂಶಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಇನ್ನೂ ಸೇರಿಸಬಹುದಾದ್ದು ಇದ್ದರೆ, ತಿಳಿಸಿರಿ.
ಎಂ ಎಸ್ ಇ ಝಡ್ ಕಂಪೆನಿ ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆ:
ಕಂಪೆನಿಯ ಹೇಳಿಕೆ ೧: ಮಾಹಿತಿ ಹಕ್ಕು ಕಾಯಿದೆಯು ಪ್ರತಿವಾದಿ ಕಂಪೆನಿಗೆ ಲಗಾವು ಆಗುವುದಿಲ್ಲ. ಮೊದಲು ಇದ್ದ ಕರ್ನಾಟಕದ ಕಾಯಿದೆಯಲ್ಲಿ ಬಳಸಲಾದ ವ್ಯಾಪಕವಾದ ಪರಿಭಾಷೆಯು ಕೇಂದ್ರದ ಕಾಯಿದೆಯಲ್ಲಿ ಇಲ್ಲದಿರುವ ಕಾರಣ, ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತ ಎಂಬ ಕಂಪೆನಿಯು "ಸಾರ್ವಜನಿಕ ಪ್ರಾಧಿಕಾರ" ಆಗಲಾರದು. ಆದ ಕಾರಣ ಪಿರ್ಯಾದಿಯು ರದ್ದಾಗತಕ್ಕದ್ದು.
ನನ್ನ ವಿವರಣೆ: ಈ ಅಂಶವು ವಕೀಲರು ನೀಡಿರುವ ಅಭಿಪ್ರಾಯದಲ್ಲಿ ಇದೆ. ಹಾಗಾಗಿ ಅಲ್ಲಿ ಚರ್ಚಿಸಿದ್ದೇನೆ.
ಕಂಪೆನಿಯ ಹೇಳಿಕೆ ೨: ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತ ಇವರು ಆರಂಭದಿಂದಲೂ ಮಾಹಿತಿಯನ್ನು ಸಾಧ್ಯವಾದ ಮಟ್ಟಿಗೆ ಒದಗಿಸುತ್ತಾ ಬಂದುದು ಬಹುಶಃ ತಪ್ಪು ಕಲ್ಪನೆಗೆ ಅವಕಾಶ ಆಗಿರಬೇಕು. ಪಾರದರ್ಶಕತೆಯ ದೃಷ್ಟಿಯಿಂದ ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತದವರು ಈ ರೀತಿ ವರ್ತಿಸಿದ್ದೇ ಹೊರತು ಮಾಹಿತಿ ಹಕ್ಕು ಕಾಯಿದೆಯು ತಮಗೆ ಲಗಾವಾಗುವುದೆಂಬ ಕಾರಣದಿಂದಲ್ಲ. ನಮ್ಮ ಕಂಪೆನಿಯು ಈ ಕುರಿತಾಗಿ ನುರಿತ ವಕೀಲರಿಂದ ಕಾನೂನಿನ ಅಭಿಪ್ರಾಯವನ್ನು ಪಡೆದಿತ್ತು. ಅದರ ಒಂದು ಪ್ರತಿಯನ್ನು ತಮ್ಮ ಅವಗಾಹನೆಗೆ ಈ ಉದಾಹರಣೆಯ ಜೊತೆಗೆ ಲಗತ್ತಿಸಿದ್ದೇವೆ.
ನನ್ನ ವಿವರಣೆ: ಪಾರದರ್ಶಕತೆಯ ದೃಷ್ಟಿಯಿಂದ ಈ ಮೊದಲು ಮಾಹಿತಿಗಳನ್ನು ಒದಗಿಸಲಾಗಿತ್ತಷ್ಟೆ. ಅದೇ ಉದಾತ್ತ ಧ್ಯೇಯವನ್ನು ಮುಂದುವರಿಸಿಕೊಂಡು ಹೋಗಿದ್ದರೆ, ಕಂಪೆನಿಯ ಬಗ್ಗೆ ಜನಸಾಮಾನ್ಯರಿಗೆ ಗೌರವ-ವಿಶ್ವಾಸಗಳು ಹೆಚ್ಚುತ್ತಿದ್ದವು. ಪ್ರಾರಂಭಿಸಿದ್ದ ಒಂದು ಸತ್ಸಂಪ್ರದಾಯವನ್ನು ಮಧ್ಯದಲ್ಲಿಯೇ ನಿಲ್ಲಿಸಿಬಿಟ್ಟದ್ದರಿಂದ ಕಂಪೆನಿಯ ವ್ಯವಹಾರಗಳಲ್ಲಿ ಮುಚ್ಚಿಟ್ಟುಕೊಳ್ಳುವಂಥದ್ದು ಏನೋ ಇದೆ ಎಂಬ ಅನುಮಾನ ಜನಸಾಮಾನ್ಯರಿಗೆ ಬರುವಂತಾಯಿತು.
ವಕೀಲರು ನೀಡಿರುವ ಕಾನೂನು ಅಭಿಪ್ರಾಯದ ಕುರಿತು ಮುಂದೆ ಪ್ರತಿಕ್ರಿಯೆ ನೀಡಿದ್ದೇನೆ.
ಕಂಪೆನಿಯ ಹೇಳಿಕೆ ೩: ಮಾಹಿತಿಯನ್ನು ಕೋರುವವರು ಅದನ್ನು ಪಡೆಯಲು ಯಾವುದಾದರೂ ಸರಿಯಾದ ಕಾರಣ ಬೇಕು. ಈ ಪ್ರಕರಣವನ್ನು ದಯವಿಟ್ಟು ಗಮನಿಸಿರಿ. ೬-೧೦-೨೦೦೯ರ ಉದಯವಾಣಿ ಪತ್ರಿಕೆಯಲ್ಲಿ ಬಂದ ಜಾಹೀರಾತಿಗೆ ಮತ್ತು ಅರ್ಜಿದಾರರಿಗೆ ಯಾವ ಸಂಬಂಧವೂ ಇಲ್ಲ. ಆ ಜಾಹೀರಾತು ಆರ್ಥಿಕ ವಲಯದ ಪ್ರಗತಿಗೆ ಸಂಬಂಧಿಸಿತ್ತು. ಅದರ ಒಂದು ಜೆರೋಕ್ಸ್ ಪ್ರತಿಯನ್ನು ಲಗತ್ತಿಸಿದ್ದೇವೆ. ಆದರೂ ಅವರು ಬರೆದ ಪತ್ರಕ್ಕೆ ನಾವು ಮಾಹಿತಿಯನ್ನು ನಮ್ಮ ಪತ್ರ ದಿನಾಂಕ ೧೪-೧೨-೨೦೦೯ರ ಪ್ರಕಾರ ಒದಗಿಸಿದೆವು.
ನನ್ನ ವಿವರಣೆ: ಮಾಹಿತಿ ಹಕ್ಕು ಕಾಯಿದೆಯಲ್ಲಿ ಮಾಹಿತಿ ಕೇಳಲು ಯಾವುದೇ ಕಾರಣ ನೀಡಬೇಕಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಕಾರಣ ನೀಡುವುದು ಬೇರೆ, ಕಾರಣ ಇರುವುದು ಬೇರೆ ಎಂದೇ ತಿಳಿಯೋಣ. ಕಂಪೆನಿ ಪತ್ರಿಕೆಯಲ್ಲಿ ಜಾಹೀರಾತು ನೀಡಿರುವುದು ಅದನ್ನು ಸಾರ್ವಜನಿಕರು ಓದಬೇಕೆಂಬ ಉದ್ದೇಶದಿಂದ. ಪ್ರಜಾಪ್ರಭುತ್ವ ಇರುವ ದೇಶದ ಒಬ್ಬ ಪ್ರಜೆಯಾಗಿ, ದೇಶದ ಆರ್ಥಿಕ ವಲಯದ ಪ್ರಗತಿಯು ನನಗೆ ಖಂಡಿತವಾಗಿಯೂ ಸಂಬಂಧಪಡುತ್ತದೆ. ಅದೇ ಕಾರಣಕ್ಕೆ ಈ ಜಾಹೀರಾತು ಸಹ ನನಗೆ ಸಂಬಂಧಪಡುತ್ತದೆ.
ಈ ಜಾಹೀರಾತಿನ ಆಧಾರದಲ್ಲಿ ನಾನು ಕೇಳಿರುವ ಮಾಹಿತಿಯು ಬಂಟ್ವಾಳ ಮತ್ತು ಮಂಗಳೂರಿನ ಜನರ ಕುಡಿಯುವ ನೀರಿಗೆ ಸಂಬಂಧಪಟ್ಟಿದೆ. ಕಂಪೆನಿಯು ನೀಡಿದ ಮಾಹಿತಿಯನ್ನು ವಿಶ್ಲೇಷಿಸಿ, ನಾನು ನನ್ನ ಬ್ಲಾಗಿನಲ್ಲಿ ಲೇಖನವನ್ನೂ ಪ್ರಕಟಿಸಿದ್ದೇನೆ. ಈ ಕುರಿತು ಒಂದು ವಿಚಾರಸಂಕಿರಣ ನಡೆಸಲು ಕೋರಿ ಮಂಗಳೂರಿನ ಮೇಯರ್ ರವರಿಗೆ ಒಂದು ಪತ್ರವನ್ನೂ ಬರೆದಿದ್ದೇನೆ. ವಾಸ್ತವವಾಗಿ ಇದೊಂದು ಸಾರ್ವಜನಿಕ ಹಿತಾಸಕ್ತಿಯ ವಿಷಯ. ಬಂಟ್ವಾಳ ಹಾಗೂ ಮಂಗಳೂರಿನ, ನೇತ್ರಾವತಿ ನದಿ ನೀರನ್ನು ಕುಡಿಯುವ ಎಲ್ಲ ಜನರಿಗೂ ನೇರವಾಗಿ ಸಂಬಂಧಪಡುವ ವಿಷಯ. ಆ ಎಲ್ಲರೂ ಈ ವಿಷಯದಲ್ಲಿ ಆಸಕ್ತಿ ತಳೆಯಬೇಕಾದ ಅಗತ್ಯವಿದೆ. ಬಂಟ್ವಾಳದಲ್ಲಿ ವಾಸಿಸುವ ನನಗೆ ಇದು ಖಂಡಿತವಾಗಿಯೂ ನೇರವಾಗಿ ಸಂಬಂಧಪಡುತ್ತದೆ.
ಇನ್ನೊಂದು ವಿಷಯ: ಯಾವುದೇ ಜಾಹೀರಾತು ಜನರನ್ನು ತಪ್ಪುದಾರಿಗೆ ಎಳೆಯುವಂತಿರಬಾರದು, ಅವರಿಗೆ ತಪ್ಪು ಮಾಹಿತಿಗಳನ್ನು ನೀಡಬಾರದು. ಯಾವುದಾದರೂ ಜಾಹೀರಾತು ಹೀಗೆ ಮಾಡಿದರೆ, ಅಂಥ ಜಾಹೀರಾತುಗಳ ಕುರಿತು Advertising Standarads Council of India ಎಂಬ ಸಂಸ್ಥೆಗೆ ಯಾರು ಬೇಕಾದರೂ ದೂರು ನೀಡಬಹುದು. ಚರ್ಚಿತ ಜಾಹೀರಾತಿನಲ್ಲಿ ಮಳೆ ನೀರು ಸಂಗ್ರಹದ ಕುರಿತಾದ ಮಾತುಗಳು ಯಾವ ಅಧ್ಯಯನವನ್ನೂ ಆಧರಿಸಿದವಲ್ಲ ಎಂಬುದನ್ನು ಕಂಪೆನಿಯೇ ಒಪ್ಪಿಕೊಂಡಿದೆ. ಇವು ಮಳೆ ನೀರು ಸಂಗ್ರಹದ ಹೆಸರಿನಲ್ಲಿ, ಜನಸಾಮಾನ್ಯರಲ್ಲಿ ಕಂಪೆನಿಯ ಕುರಿತು ಸದ್ಬಾವನೆ ಮೂಡಿಸುವ ಬೇರೆಯೇ ಉದ್ದೇಶ ಹೊಂದಿದಂತೆ ಭಾಸವಾಗುತ್ತದೆ. ಇದು ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಲ್ಲವೆ?
ಈ ಮುಂದಿನ ಕಂಪೆನಿಯ ಹೇಳಿಕೆಗಳಿಗೆ ನನ್ನ ಪ್ರತಿಕ್ರಿಯೆ ಏನೂ ಇಲ್ಲ
೪. ಅರ್ಜಿದಾರರ ಪತ್ರದಲ್ಲಿ ೨ನೇ ಪ್ರಶ್ನೆ ಹೀಗಿತ್ತು: ಗುರುಪುರ ಮತ್ತು ನೇತ್ರಾವತಿಯಲ್ಲಿ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದೆ? ಹೀಗೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ನೀಡಿರುವ ಅನುಮತಿಯ (ಲೈಸೆನ್ಸ್) ಯಥಾಪ್ರತಿ.
೫. ಇದಕ್ಕೆ ನಾವು ಕೊಟ್ಟ ಉತ್ತರ ಹೀಗಿತ್ತು. ಈಗಾಗಲೇ ನೇತ್ರಾವತಿ ನದಿಯಿಂದ ನೀರಿನ್ ಪೂರೈಕೆಗಾಗಿ ಎ.ಎಂ.ಆರ್. ಪವರ್ ಪ್ರೋಜೆಕ್ಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯ ಜಲ ಸಂಪನ್ಮೂಲ ವಿಭಾಗದಿಂದ ೨೦೦೭ರಲ್ಲಿ ಅನುಮತಿ ದೊರಕಿದ್ದು ಅದರ ಪ್ರತಿ ಲಗತ್ತಿಸಿದೆ
೬. ನಮ್ಮ ಬಳಿ ಇದ್ದು ಸರಕಾರದ ವತಿಯಿಂದ ದೊರಕಿದ ಅನುಮತಿಯನ್ನು ನಾವು ಅರ್ಜಿದಾರರಿಗೆ ಒದಗಿಸಿದ್ದೆವು. ಆದರೆ, ಎ ಎಂ ಆರ್ ಕಂಪೆನಿಯ ಜೊತೆ ಮಾಡಿದ ಒಪ್ಪಂದವು ಸಾರ್ವಜನಿಕರಿಗೆ ಅದರಲ್ಲೂ ಏನೂ ಸಂಬಂಧವಿಲ್ಲದ ಅರ್ಜಿದಾರರಿಗೆ ಒದಗಿಸುವ ಅಗತ್ಯ ಇಲ್ಲದ್ದರಿಂದ ಮತ್ತು ಆ ದಾಖಲೆಯು ಇನ್ನೊಬ್ಬ ವ್ಯಕ್ತಿಯು ನಮ್ಮ ಬಳಿ ಮಾಡಿದ ಒಪ್ಪಂದಕ್ಕೆ ಸಂಬಂಧಿಸಿದ್ದರಿಂದ ಅದರ ಪ್ರತಿಯನ್ನು ನಾವು ಕೊಡಲಿಲ್ಲ. ದಿನಾಂಕ ೧೮-೦೧-೨೦೧೦ರಂದು ಅರ್ಜಿದಾರರಿಗೆ ಉತ್ತರವನ್ನು ನೀಡಿದ್ದೇವೆ. ಇದು ನಮ್ಮ ಪ್ರಕಾರ ಸರಿಯಾದ ಕ್ರಮವೆಂದು ತಿಳಿಯುತ್ತೇವೆ.
೭. ಈಗಲೂ ಸಹ ಇದೇ ಮೇಲೆ ಬರೆದ ಕಾರಣಕ್ಕಾಗಿ ದಯವಿಟ್ಟು ಅರ್ಜಿಯನ್ನು ವಜಾ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ. ಮಾಹಿತಿ ಹಕ್ಕು ಕಾಯಿದೆಯ ಕಲಂ ೮(ಡಿ) ಮತ್ತು (ಇ) ಎಂಬ್ ಉಪಕಲಂಗಳ ಪ್ರಕಾರ ಸದ್ರಿ ದಾಖಲೆಯನ್ನು (ಮಾಹಿತಿಯನ್ನು) ನೀಡುವುದು ಕಡ್ಡಾಯವಲ್ಲ.
ಮೇಲೆ ಬರೆದ ವಿವರವಾದ ಉತ್ತರವನ್ನು ಪರಿಗಣಿಸಿ ಅರ್ಜಿಯನ್ನು ವಜಾ ಮಾಡಬೇಕಾಗಿ ಪ್ರಾರ್ಥಿಸುತ್ತೇವೆ.
***********************
ಈ ಮುಂದಿನದು ವಕೀಲರ ಅಭಿಪ್ರಾಯ:
M.V. Shanker Bhat, B.A.B.L.,
Advocate
H-3, II Floor, Ramabhavan Complex
Kodialbail, Mangalore.
ED& COO
Mangalore SEZ Ltd.
Muda Building
Urva Stores, Managalore-575006
Sir,
Sub: Opinion on query regarding applicability of Right to Information Act.
Ref: Your company's memorandum, Articles and certificate of incorportion dtd. 24-2-2006
1. The Memorandum dtd. 18-2-2006 as amended up to 18-7-08 relating to Mangalore SEZ Ltd shows that it is a public company limited by shares. It has authorised share capital of One Hundred Crores of Rs. 10/- value per share. Memorandum of Association of the company has been subscribed by ONGC representing MRPL, KIADB, Kanara Chamber of Commerce, and four individuals. In all 76200 shares were subscribed by them. KIADB has subscribed only 5000 shares. MRPL has subscribed 50000 shares. Chamber of Commerce has subscribed 20000 shares. Rest by the four individuals.
2. On the above facts the question is whether your company is Public Authority as defined in Sec.2(h) of the RTI Act. 2005.
3. Your company is not established by or under Constitution, or by law made by Parliament or State Legislature. Your company has not been notified as Public Authority by State or Central Government. Your company is not financed by State or Central Government either directly or indirectly. Even if participation of KIADB, which is an independent Board, is considered as indirect financing by State Government, its holding is very small compared to what has been subscribed as per Menorandum of Association. Therefore it would not be 'substantially financed by State Government'.
4. From the above analysis of facts with reference to the definition found in the Act, I am of the considered opinion that your company will not be covered by the RTI Act, 2005
Yours faithfully
(Sd)
ಕಂಪೆನಿಯು ನೀಡಿದ ಮಾಹಿತಿಯನ್ನು ಆಧರಿಸಿ ವಕೀಲರು ನೀಡಿರುವ ಮೇಲಿನ ಅಭಿಪ್ರಾಯ ಖಂಡಿತವಾಗಿಯೂ ಸರಿಯಾಗಿದೆ. ದುರದೃಷ್ಟವಶಾತ್ ಕಂಪೆನಿಯು ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ವಕೀಲರ ಗಮನಕ್ಕೆ ತಂದಿಲ್ಲ. ತನ್ನ ಕಕ್ಷಿದಾರನು ತನ್ನಿಂದ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಚ್ಚಿಡುತ್ತಿದ್ದಾನೆ ಎಂಬ ಅನುಮಾನ ಬಂದರೆ - ಅದರಲ್ಲೂ ಪ್ರಕರಣವು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದ್ದಾಗ - ಆ ಅನುಮಾನವನ್ನು ಪರಿಹರಿಸಿಕೊಳ್ಳುವುದು ವಕೀಲರ ಕರ್ತವ್ಯದ ಒಂದು ಭಾಗ ಎಂದು ನಾನು ಭಾವಿಸಿದ್ದೇನೆ. ಆ ಅಭಿಪ್ರಾಯ ತಪ್ಪೆ?
ಕಂಪೆನಿಯು ವಕೀಲರ ಗಮನಕ್ಕೆ ತಾರದ ಮಾಹಿತಿಗಳು ಈ ಕೆಳಗಿನಂತಿವೆ:
೧, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಬಗೆಯ ತೆರಿಗೆ ರಿಯಾಯತಿಗಳನ್ನು ವಿಶೇಷ ಆರ್ಥಿಕ ವಲಯಕ್ಕೆ ನೀಡಿವೆ. ಈ ರಿಯಾಯತಿಗಳು ಪ್ರಸ್ತುತ ಕಂಪೆನಿಗೂ ಅನ್ವಯವಾಗುತ್ತವೆ. ಈ ರಿಯಾಯತಿಗಳನ್ನು ನೀಡಲು ಬೇಕಾಗಿ ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಆದಾಯತೆರಿಗೆ ಮತ್ತಿತರ ಕೆಲವು ಕಾನೂನುಗಳಿಗೇ ತಿದ್ದುಪಡಿ ಮಾಡಲಾಗಿದೆ.
೨. ವಿಶೇಷ ಆರ್ಥಿಕ ವಲಯಕ್ಕೆ ಬೇಕಾದ ಒಟ್ಟು ಭೂಮಿ ಸುಮಾರು ೪೦೦೦ ಎಕರೆಗಳು. ಈ ಪೈಕಿ ಸುಮಾರು ೨೦೦೦ ಎಕ್ರೆಯಷ್ಟು ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ರೈತರ ತೀವ್ರ ವಿರೋಧದ ನಡುವೆಯೂ, ಜಮೀನನ್ನು ಸ್ವಾಧೀನಪಡಿಸಿಕೊಂಡು ಕಂಪೆನಿಗೆ ಹಸ್ತಾಂತರಿಸುವಲ್ಲಿ ಕರ್ನಾಟಕ ರಾಜ್ಯ ಸರಕಾರವು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
೩. ಕಂಪೆನಿಗೆ ಪ್ರತಿದಿನ ೬.೭೫ ಕೋಟಿ ಲೀಟರು ನೀರನ್ನು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಎತ್ತಲು ರಾಜ್ಯ ಸರಕಾರವು ಅನುಮತಿ ನೀಡಿದೆ. ಈ ನೀರಿನ ದರ ೪೫ ಲಕ್ಷ ಲೀಟರಿಗೆ ರೂ. ೨೮೮-೯೦. (ಸ್ಥಳೀಯಾಡಳಿತ ಸಂಸ್ಥೆಗಳು ಜನಸಾಮಾನ್ಯರಿಗೆ ಸರಬರಾಜು ಮಾಡುವ ಕುಡಿಯುವ ನೀರಿನ ದರ ೧೦೦೦ ಲೀಟರಿಗೆ ೨-೦೦ ರೂಪಾಯಿ.)
೪. ಕಂಪೆನಿಗೆ ಅಗತ್ಯವಿರುವಷ್ಟು ಪ್ರಮಾಣದ ವಿದ್ಯುತ್ತನ್ನು ಸರಬರಾಜು ಮಾಡಲು ಸಹ ಕರ್ನಾಟಕ ಸರಕಾರವು ಒಪ್ಪಿಕೊಂಡಿದೆ.
೫. ಮಂಗಳೂರು ಮಹಾನಗರ ಪಾಲಿಕೆಯು ಗಲೀಜು ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡುವ ಬಗ್ಗೆ ಎಂ ಎಸ್ ಇ. ಝಡ್ ಕಂಪೆನಿಯೊಂದಿಗೆ ಮೂವತ್ತು ವರ್ಷಗಳ ದೀರ್ಘಾವಧಿಗೆ ಅನ್ವಯಿಸುವ (೩೦:೭೦ ಅನುಪಾತ) ಒಂದು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಕರ್ನಾಟಕ ಸರ್ಕಾರವು ಕಂಪೆನಿಯ ಆಗುಹೋಗುಗಳಲ್ಲಿ ಗಣನೀಯ ಪಾತ್ರ ವಹಿಸಿರುವುದರ ದ್ಯೋತಕವಾಗಿದೆ.
ಈ ಮೇಲಿನ ಅಂಶಗಳನ್ನು ಪರಿಗಣಿಸಿದರೆ ಕಂಪೆನಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಪಾಲು "ಗಣನೀಯ"ವಾಗಿಯೇ ಇದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಮಂಗಳೂರು ಎಸ್ ಇ ಝಡ್ ಕಂಪೆನಿಯನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡುವುದು ನ್ಯಾಯವಲ್ಲ.
ಶುಕ್ರವಾರ, ಜೂನ್ 11, 2010
ನಿಮ್ಮ ಕಾನೂನು ನಿಮಗಿರಲಿ; ನೀರು, ಭೂಮಿ ನಮಗಿರಲಿ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
5 ಕಾಮೆಂಟ್‌ಗಳು:
msez has to come under RTI - it seems to be ignorant of the fact that netravathi water belongs to the common man
ಸಾರ್ವಜನಿಕವಾಗಿ ತಮ್ಮದು ಸರಕಾರಿ ಸಂಸ್ಥೆ, ಖಾಸಗಿ ಅಲ್ಲ ಎಂದು ತುತ್ತೂರಿ ಊದುತ್ತಾ ಅದಕ್ಕೆ ಸಾರ್ವಜನಿಕ ಮನ್ನಣೆಯನ್ನು ಪಡೆಯುವ ಪ್ರಯತ್ನ ಮಾಡುತ್ತಾ ಬಂದವರು ಎಂ ಎಸ್ ಇ ಜೆಡ್ ನ ಮುಖ್ಯ ಕಾರ್ಯಕಾರಿ ಅಧಿಕಾರಿಗಳು. ಈಗ ರಾಜ್ಯ ಮಾಹಿತಿ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಆರ್ ಟಿ ಐ ನ ಉರುಳಿಂದ ನುಣುಚುವ ಪ್ರಯತ್ನ ಮಾಡುತ್ತಿದ್ದಾರೆಯೇ? ಅಥವಾ ಸರಕಾರೀ ಸಂಸ್ಥೆಯೆಂದು ಇಲ್ಲಿಯವರೆಗೂ ಕರಾವಳಿಯ ಜನಕ್ಕೆ ಸುಳ್ಳು ಹೇಳುತ್ತಾ ಬಂದರೆ? (ಹಳೆಯ ಪತ್ರಿಕೆಗಳಲ್ಲಿ ತಮ್ಮದು ಸರಕಾರಿ ಸಂಸ್ಥೆಯೆಂದು ಅವರು ಹೇಳಿಕೊಂಡದ್ದು ನಿಮಗೆ ಸಿಗಬಹುದು)
ONGC MRPL - KIADB, IL&FS ಎಲ್ಲಕ್ಕೂ ಮಾಹಿತಿ ಹಕ್ಕು ಕಾಯ್ದೆ ಅನ್ವಯವಾಗುತ್ತದೆ, ಅವುಗಳದೇ ಸಂತಾನವಾದ MSEZ ಗೆ ಅನ್ವಯವಾಗುವುದಿಲ್ಲ ಎನ್ನುವುದಕ್ಕೆ ಯಾವುದೇ ಸಮಂಜಸ ಕಾರಣಗಳನ್ನೂ ಸಂಬಂಧಿತರು ನೀಡಿಲ್ಲ.
ಸಾರ್ವಜನಿಕರ ಬದುಕಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪಾರದರ್ಷಕವಾಗಿರಬೇಕಾದವರು ಪಾರದರ್ಶಕವಾಗಿ ಇಲ್ಲದೆ ಇದ್ದ ಕಾರಣಕ್ಕೆ ಮಾಹಿತಿ ಹಕ್ಕು ಕಾಯ್ದೆಯನ್ನು ಕೆಂದ್ರ ಸರಕಾರ ತರಬೇಕಾಯಿತು. ಇನ್ನು ಮುಂದಕ್ಕೆ ಪಾರದರ್ಶಕವಾಗಿರುವುದಿಲ್ಲ ಎನ್ನುವುದು MSEZ ನ ನಿರ್ಧಾರವಾದರೆ, ಮಾಹಿತಿ ಹಕ್ಕು ಕಾಯ್ದೆಯನ್ವಯವೇ ಉತ್ತರ ನೀಡುವುದು ಅವರಿಗೆ ಅನಿವಾರ್ಯವಾಗುತ್ತದೆ.
ಈ ದೇಶದ ಪ್ರಜೆಗಳ ದೈನಂದಿನ ಬಳಕೆಗೆಯ ನೀರಿನ ಮೂಲವಾದ ನದಿಯ ನೀರಿನ ಒಪ್ಪಂದಕ್ಕೆ ಸಂಬಂದಪಟ್ಟ ಮಾಹಿತಿಯನ್ನು ಈ ದೇಶದ ಪ್ರಜೆಯೊಬ್ಬ ಕೇಳಿದರೆ ಅದು ಅವನಿಗೆ ಸಂಬಂಧವಿಲ್ಲದ ಪ್ರಶ್ನೆ ಎನ್ನುವವ ಬಹುಷ ಏನೋ ಅವ್ಯವಹಾರ ಮಾಡುತ್ತಿರುವ ಸಾಧ್ಯತೆ ಇದೆ. ನೇರವಾದ ಒಪ್ಪಂದವಾಗಿದ್ದರೆ ಮುಚ್ಚಿಡುವ ಅವಶ್ಯಕತೆ ಏನಿದೆ? (ಸರಕಾರದ ಜೊತೆ ಎ ಎಂ ಆರ್ ಏನು ಒಪ್ಪಂದ ಮಾಡಿಕೊಂಡಿದೆ? ಬರಿ ವಿದ್ಯುತ್ ಉತ್ಪಾದನೆಯೋ ಅಥವಾ ನೀರಿನ ಮಾರಾಟವೂ ಇದೆಯೋ ?)
ಅವರು ಉಲ್ಲೇಖಿಸಿರುವ ಕಲಂ ೮(ಡಿ) ಮತ್ತು (ಇ) ಉಪಕಲಂಗಳು ನಿಮ್ಮ ಅರ್ಜಿಗೆ ಅನ್ವಯವಾಗುವುದಿಲ್ಲ. ನಿಮ್ಮ ಅರ್ಜಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟದ್ದು, ಏನೇನೋ ಅಜ್ಜಿ ಕಥೆಗಳನ್ನು ಹೇಳಿ ಇವರು ನಿಮಗೆ ಮಾಹಿತಿ ನಿರಾಕರಿಸುವಂತಿಲ್ಲ.
ಸರಕಾರದ ಸಂಪೂರ್ಣ ಸ್ವಾಮ್ಯತೆಯ ಕೆ ಐ ಡಿ ಬಿ ಅವರ ೨೩% ಪಾಲುದಾರನಾಗಿರುವಾಗ ,ಅಲ್ಲದೆ ಸರ್ಕಾರಿ ಉದ್ಯೋಗಿಯಾಗಿರುವ ಹಿರಿಯ ಐ ಎ ಎಸ್ ಅಧಿಕಾರಿಯೋರ್ವರು ಈ ಹಿಂದೆ ಇದರ ನಿರ್ವಾಹಕ ನಿರ್ದೇಶಕನಾಗಿದ್ದು ಈಗ ಇದರ ಆಡಳಿತ ಮಂಡಳಿಯ ನಿರ್ದೇಶಕ ಮತ್ತು ಸಂಯೋಜಕರೂ ಆಗಿದ್ದಾರೆ. ಜೊತೆಗೆ ಇವರು ಕರ್ನಾಟಕದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಆರ್ ಟಿ ಐ ಕಾಯ್ದೆ ೨೦೦೫ - 2 h (i ) ಯನ್ವಯ ಖಂಡಿತವಾಗಿಯೂ ಎಂ ಎಸ್ ಇ ಜೆಡ್ ಮಾಹಿತಿ ಹಕ್ಕು ಕಾಯ್ದೆಯ ಪರಿಧಿಯೊಳಗೆ ಬರುತ್ತದೆ. ಆರ್ ಟಿ ಐ ಕಾಯ್ದೆ ೨೦೦೫ - 2 h (a , b , c , d ) ಯೂ ಆ ಕಂಪೆನಿಗೆ ಅನ್ವಯವಾಗಬಹುದು.
ಇಲ್ಲಿನ ಭೂಮಿ ಬರಡು ಎನ್ನುವಲ್ಲಿಂದ ಹಿಡಿದು ಉದ್ಯೋಗ ಸೃಷ್ಟಿಯ ಅಂಕಿ ಅಂಶಗಳವರೆಗೂ ಸುಳ್ಳಿನ ಸರಮಾಲೆಯನ್ನೇ ಹೆಣೆದು, ಜನರನ್ನು ವಂಚಿಸುತ್ತಾ ಈ ಮಣ್ಣಲ್ಲಿ ತಳವೂರಲು ಈಸ್ಟ್ ಇಂಡಿಯಾ ಕಂಪೆನಿಯ ಎಲ್ಲಾ ಟ್ರಿಕ್ ಗಳನ್ನೂ ಬಳಸಿದ ಈ ಸಂಸ್ಥೆಯ ಮುಖ್ಯಸ್ಥರಿಂದ ನೇರ ಸತ್ಯದ ನುಡಿಯೊಂದು ಬರಬೇಕಾದರೆ ಪವಾಡವೇ ನಡಿಯಬೇಕಾಗುತ್ತದೆ.
ಅಭಿನಂದನೆಗಳು ನಿಮ್ಮ ಪ್ರಯತ್ನಕ್ಕೆ.
ಸುಂದರ ರಾಯರಿಗೆ ನಮಸ್ಕಾರ.
ನಿಮ್ಮ ಲೇಖನಗಳನ್ನು ನೀವು ನಿಮ್ಮ ಬ್ಲಾಗ್ ನಲ್ಲಿ ಪ್ರಕಟಿಸುವ ಜೊತೆಗೆ, ಸಂಪದ.ನೆಟ್ (ಅಥವಾ ಇತರ) ಸಮುದಾಯಗಳಲ್ಲಿಯೂ ಪ್ರಕಟಿಸಿದರೆ ಹೆಚ್ಚಿನ ಸಂಚಲನೆಯನ್ನು ಮೂಡಿಸಲು ಸಾಧ್ಯವಾದೀತು.
ವಸಂತ್ ಕಜೆ
dear sundar rao,
the company's argument that an advt does not belong to a common man is absurd. the said company should come under the info act.
the concern for river netravati is everybody's right. please post your article in www.sampada.net as vasanth has suggested.
ಅಶೋಕ ವರ್ಧನನ ಮಿಂಚಂಚೆ ಮುಖೇನ ನಿಮ್ಮ ಬ್ಲಾಗ್ ತಾಣಕ್ಕೆ ಬಂದು ಲೇಖನಗಳನ್ನು ಓದಿದೆ. ಈ ಲೇಖನಗಳು ಕೇವಲ ಅಂತರ್ಜಾಲದಲ್ಲಿ ಅಷ್ಟೇ ಅಲ್ಲದೆ, ಪತ್ರಿಕೆಗಳ ಮೂಲಕ ಹೆಚ್ಚು ಜನರನ್ನು ತಲುಪ ಬೇಕು.
ಕಾಮೆಂಟ್ ಪೋಸ್ಟ್ ಮಾಡಿ