ಸೋಮವಾರ, ಮೇ 17, 2010

ಮರಗಳ ಸಂರಕ್ಷಣೆಯ ಕಾನೂನು ಜಾರಿಗೆ ಕೊಡುವ ಪರಿ.......


ಎಪ್ರಿಲ್ ೮ರಂದು "ಅರಣ್ಯ ಇಲಾಖೆ ಅಧಿಕಾರಿಗಳ ಉತ್ತರ ಬಂತು, ಆದರೆ....." ಎಂಬ ಲೇಖನ ಬರೆದಿದ್ದೆ. ಇದು ಪ್ರಕರಣ ಮುಂದುವರಿದ ಬಗೆ:
.
ನನ್ನ ಪತ್ರಕ್ಕೆ ಮಂಗಳೂರಿನ ಉ.ಅ.ಸಂ. ಯವರು ಉತ್ತರ ಬರೆಯಲಿಲ್ಲ. ನೆನಪೋಲೆ ಬರೆದೆ. ಪ್ರಯೋಜನವಾಗಲಿಲ್ಲ. "ಉತ್ತರ ಬರೆಯದಿದ್ದರೆ ನಿಮ್ಮ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವುದು ಅನಿವಾರ್ಯವಾಗುತ್ತದೆ" ಎಂಬ ಎಚ್ಚರಿಕೆ ರವಾನಿಸಿದೆ. ಆದರೂ ಉತ್ತರ ಬರಲಿಲ್ಲ. ಮಂಗಳೂರಿನ ಮಹಾನಗರಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿ ಕಛೇರಿ ಇರುವ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಎಲ್ಲಾ ದಾಖಲೆಗಳ ಸಮೇತ ಒಂದು ದೂರು ನೀಡಿ ಯಥಾಪ್ರತಿಯನ್ನು ಉ.ಅ.ಸಂ.ಯವರಿಗೆ ಕಳಿಸಿದೆ. ಇಷ್ಟು ಹಟ ಮಾಡಿದ ಮೇಲೆ ಮೊನ್ನೆ ೧೩-೫-೨೦೧೦ರಂದು ಉ.ಅ.ಸಂ. ಒಂದು ಉತ್ತರ ಬರೆದಿದ್ದಾರೆ. ನಾನು ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಬರೆದ ಪತ್ರದ ಪರಿಣಾಮ ಈ ಪತ್ರವೋ ಎಂದು ತಿಳಿಯುವಂತಿಲ್ಲ. ಹೇಗಾದರೂ ಇರಲಿ, ಅವರ ಉತ್ತರ ಓದಿ ನೋಡಿ:
"...... -ದ.ಕ.ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ- ಎಂಬ ಕುರಿತು ಮೊದಲನೆಯದಾಗಿ ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ತಾವು ಇಟ್ಟುಕೊಂಡಿರುವ ತಮ್ಮ ಕಾಳಜಿಗೆ ಅಭಿನಂದನೆಗಳು. ದ.ಕ.ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
೧. ಮರಗಳ ರಕ್ಷಣೆಯ ಬಗ್ಗೆ "ಕಾಡು ಉಳಿಸಿ ನಾಡು ಬೆಳೆಸಿ" ಎಂಬ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
೨. ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ.
೩. "ವೃಕ್ಷಲಕ್ಷ" ಕಾರ್ಯಕ್ರಮದಡಿಯಲ್ಲಿ ಹಲವು ಕಡೆಗಳಲ್ಲಿ ಕಾರ್ಯಾಗಾರ, ಗಿಡ ನೆಡುವ ಕಾರ್ಯಕ್ರಮ, ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
೪. ಮರಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಜನರನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಗ್ರಾಮ ಅರಣ್ಯ ಸಮಿತಿಗಳನ್ನು ರಚನೆ ಮಾಡಲಾಗಿದೆ.
೫. ಈ ವಿಭಾಗದಲ್ಲಿ ಕಾರ್ಯಕಾರಿ ಸಿಬ್ಬಂದಿ ಕೊರತೆ ಇದ್ದರೂ, ಅರಣ್ಯ ಅಪರಾಧಗಳನ್ನು ತಡೆಗಟ್ಟುವರೇ ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ.
ಈ ಮೇಲಿನಂತಹ ಹಲವಾರು "ಜಾಗೃತಿ" ಕ್ರಮಗಳನ್ನು ಜನರಲ್ಲಿ ಮೂಡಿಸಿದ್ದರೂ, ಆಗಾಗ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದು ಸಾಗಿಸುವುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಾಗೂ ತಮ್ಮ ಪತ್ರದಲ್ಲಿ ತಿಳಿಸಿದಂತೆ ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.
ಇನ್ನು ಮುಂದೆ ಮರಗಳ ರಕ್ಷಣೆಯ ಬಗ್ಗೆ ಇರುವ ಕಾಯ್ದೆ, ಕಾನೂನುಗಳನ್ನು ಸಾರ್ವಜನಿಕರಿಗೆ ತಿಳಿಸುವ ಬಗ್ಗೆ ಕಾರ್ಯಗಾರಗಳನ್ನು ಏರ್ಪಡಿಸಿದಾಗ ಸದ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವನ್ನು ತಮಗೂ ಕೂಡ ಮಾಡಲಾಗುವುದು ಎಂಬ ವಿಷಯವನ್ನು ತಮ್ಮ ಮಾಹಿತಿಗೆ ನೀಡಲಾಗಿದೆ"
ಪತ್ರಕ್ಕೆ ಕೂಡಲೇ ಹೀಗೆ ಉತ್ತರಿಸಿದ್ದೇನೆ:
ಮರಗಳ ರಕ್ಷಣೆಯ ಕಾನೂನನ್ನು ಜಾರಿಗೆ ಕೊಡುವ ಬಗ್ಗೆ ನೀವು ತೆಗೆದುಕೊಂಡಿರುವ ಹಾಗೂ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ತಿಳಿದು ತುಂಬಾ ಸಂತೋಷವಾಯಿತು. ಅರಣ್ಯ ಸಂರಕ್ಷಣೆಗೆ ನೀವು ನೀಡುತ್ತಿರುವ ಮಹತ್ವವು ಅಭಿನಂದನಾರ್ಹವಾಗಿದೆ.
೧. "ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ" ಎಂದು ನಿಮ್ಮ ಪತ್ರದಲ್ಲಿ ಹೇಳಿದ್ದೀರಿ. ೨೦೦೫-೨೦೦೬ರಲ್ಲಿ ಬಂಟ್ವಾಳ ಅರಣ್ಯವಲಯಕ್ಕೆ ಸಂಬಂಧಪಟ್ಟ ಬಿ. ಮೂಡ ಗ್ರಾಮದಲ್ಲಿ ನೀವು ಹೇಳುವ ಯಾವುದಾದರೂ ಕಾರ್ಯಕ್ರಮದಡಿಯಲ್ಲಿ ಸಸಿಗಳನ್ನು ನೆಡಲಾಗಿತ್ತೆ? ಎಲ್ಲಿ, ಎಷ್ಟು ಸಸಿಗಳನ್ನು ನೆಡಲಾಗಿತ್ತು, ಯಾವ ಜಾತಿಗೆ ಸೇರಿದ ಸಸಿಗಳು ಎಂಬುದರ ಪೂರ್ಣ ವಿವರವನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.
೨. ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ಅರಣ್ಯ ಸಮಿತಿಯು ಅಸ್ತಿತ್ವದಲ್ಲಿದೆಯೆ? ಇದ್ದರೆ ಅದರ ವಿಳಾಸ, ಸದಸ್ಯರ ಹೆಸರು ಇತ್ಯಾದಿ ವಿವರಗಳನ್ನೂ, ಒಂದು ವೇಳೆ ಇಲ್ಲದಿದ್ದರೆ, ಬಿ.ಮೂಡ ಗ್ರಾಮವು ಯಾವ ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನೂ ಅದರ ವಿಳಾಸ ಇತ್ಯಾದಿ ವಿವರಗಳನ್ನೂ ನನಗೆ ನೀಡಬೇಕಾಗಿ ಕೋರುತ್ತೇನೆ.
೩. " ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ." ಎಂದು ನೀವು ಹೇಳಿದ್ದೀರಿ. ದಿನಾಂಕ ೧೬-೩-೨೦೧೦ರ ನನ್ನ ಪತ್ರದಲ್ಲಿ ನಾನು ಪ್ರಸ್ತಾವಿಸಿರುವ ಮರಗಳ ನಾಶವನ್ನು ಕಂಡುಕೊಳ್ಳಲು ಹಗಲು ರಾತ್ರಿ ಗಸ್ತು ತಿರುಗುವ ಅವಶ್ಯಕತೆಯೇ ಇಲ್ಲ. ಈ ರೀತಿಯಲ್ಲಿ ಆಗುತ್ತಿರುವ ಮರಗಳ ನಾಶವು ಹಾಡುಹಗಲೇ, ಎಲ್ಲರ ಎದುರಿನಲ್ಲೇ, ಸಾಕಷ್ಟು ದೂರಕ್ಕೆ ಕೇಳುವಂತೆ ಶಬ್ದ ಮಾಡುವ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಆಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಿ ತಿರುಗಿದರೂ ನೀವು ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ಕಾಣಬಹುದು. ಜಿಲ್ಲೆಯ ನಗರ ಪ್ರದೇಶಗಳೂ ಸೇರಿದಂತೆ ಎಲ್ಲ ಕಡೆಯೂ ಸಹ, ಈ ರೀತಿಯಲ್ಲಿ ಮರಗಳನ್ನು ಬುಡಸಮೇತ ಉರುಳಿಸುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಎಷ್ಟೋ ಸಂದರ್ಭಗಳಲ್ಲಿ ಇದನ್ನು ಕಂಡುಕೊಳ್ಳಲು ನೀವು ನಿಮ್ಮ ವಾಹನದಿಂದ ಕೆಳಗೆ ಇಳಿಯಬೇಕಾಗಿಯೂ ಇಲ್ಲ. ನೀವು ಕುಳಿತಲ್ಲಿಗೇ ಕಾಣುವಷ್ಟು ಸ್ಪಷ್ಟವಾಗಿ ಈ ನಾಶಕ್ರಿಯೆ ನಡೆಯುತ್ತಿದೆ. ಯಾವುದಾದರೊಂದು ಗುಡ್ಡದ ನೆತ್ತಿಗೆ ಹೋಗಿ ನಿಂತು ನೋಡಿದರೆ, ಭೂಭಾಗವು ಅಲ್ಲಲ್ಲಿ ಕೆಂಪಾಗಿರುವುದನ್ನು ನೀವು ಕಾಣಬಹುದು. ಹತ್ತಿರ ಹೋಗಿ ನೋಡಿದರೆ, ಉರುಳಿಸಿದ ಮರಗಳು ಅಥವಾ ಅವುಗಳ ಅವಶೇಷಗಳು ಅಲ್ಲಿಯೇ ಬಿದ್ದಿರುವುದನ್ನೂ ಕಾಣುವ ಸಾಧ್ಯತೆ ಇದೆ.
ಆದ್ದರಿಂದ ಯಂತ್ರಗಳನ್ನು ಬಳಸಿ ಆಗುತ್ತಿರುವ ಮರಗಳ ನಾಶವನ್ನು ತಡೆಹಿಡಿಯುವ ನಿಟ್ಟಿನಲ್ಲಿ ನೀವು ಮರಗಳ ರಕ್ಷಣೆಯ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡಬೇಕಾಗಿ ನಿಮ್ಮನ್ನು ಮತ್ತೊಮ್ಮೆ ಕೋರುತ್ತೇನೆ.
"ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ" ಎಂದು ನೀವು ಹೇಳಿದ್ದೀರಿ. ಆ ಪತ್ರದ ಒಂದು ಪ್ರತಿಯನ್ನು ನನಗೂ ಕಳುಹಿಸಿಕೊಡಬೇಕಾಗಿ ಕೋರುತ್ತೇನೆ.
ಈ ಪತ್ರಕ್ಕೆ ಇನ್ನು ಹದಿನೈದು ದಿನಗಳಲ್ಲಿ ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ."
ಈ ಪ್ರಕರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. ಬ್ಲಾಗಿನಲ್ಲಿ ಪ್ರತಿಕ್ರಿಯೆ ಪ್ರಕಟಿಸುವುದು ಬೇಡ ಎಂದಿದ್ದರೆ, ಇ-ಮೇಲ್ ವಿಳಾಸಕ್ಕೆ ಪ್ರತಿಕ್ರಿಯೆ ಕಳಿಸಿ. (nesara.mudrana@gmail.com) ನನ್ನನ್ನು ಟೀಕಿಸಲು ಯಾವ ಮುಲಾಜೂ, ದಾಕ್ಷಿಣ್ಯವೂ ಬೇಡ.

3 ಕಾಮೆಂಟ್‌ಗಳು:

ಅಶೋಕವರ್ಧನ ಜಿ.ಎನ್. ಹೇಳಿದರು...

'ವೈರಿಯನ್ನು ಹೊಗಳುವುದು’ ಬಹಳ ಹಳೇ ಯುದ್ಧ ತಂತ್ರ(ಕಾಕರಾಜ ನಿನ್ನ ಧ್ವನಿಯು ಎಷ್ಟು ಚಂದ). ಮತ್ತೆ ಸವಕಲು ಸಾಧಾರಣೀಕರಣಗಳು - ವನಮಹೋತ್ಸವ, ಸಮಿತಿ, ಕಮ್ಮಟ, ತೀವ್ರಗೊಳಿಸುವುದು, ಹಗಲೂ ರಾತ್ರಿ ಇತ್ಯಾದಿ. ಹಾಗೆಂದು ಈ ಸಭೆ ಸಮಾರಂಭದ ಖರ್ಚು ಸಾಧಾರಣವಿರುವುದಿಲ್ಲ (ಮುಂದಿನಸಲ ನೀವು ಅದನ್ನೂ ವಿಚಾರಣಾ ಪಟ್ಟಿಯಲ್ಲಿ ಸೇರಿಸಿದರೆ ನಮಗೆ ‘ಸರಕಾರಿ ಕಾಳಜಿ’ಯ ಮೌಲ್ಯಮಾಪನ ತಿಳಿದಂತಾಗುತ್ತಿತ್ತು!)

"ಶಿಶಿಲದಿಂದ ಭೈರಾಪುರದವರೆಗೆ ದಟ್ಟ ಕಾಡಿನಲ್ಲಿ ಬುಲ್ದೋಜರುಗಳನ್ನು ಉಪಯೋಗಿಸಿಯೇ ‘ಹಳ್ಳಿಗರು ಸ್ವಯಂಸೇವೆಯಿಂದ’ ಕಳ್ಳದಾರಿ ಕಡಿಯುತ್ತಿದ್ದಾರೆ, ತಡೆಯಿರಿ" ಎಂಬ ನನ್ನ ದೂರುಪತ್ರ ಈ ಕಛೇರಿಗೂ, ಮೇಲಿನವರಿಗೂ, ಜಿಲ್ಲಾಧಿಕಾರಿಗೂ ಹೋಗಿ ತಿಂಗಳುಗಳೆ ಕಳೆದಿವೆ. ಇದುವರೆಗೆ, ಜಿಲ್ಲಾಧಿಕಾರಿ ಕಛೇರಿಯಿಂದ ‘ಸೂಕ್ತ ಕ್ರಮಕೈಗೊಳ್ಳಲು’ ನನ್ನ ಪತ್ರವನ್ನು ಕೆಳಗಿನ ಅಧಿಕಾರಿಗೆ ದೂಡಿದ ಮಾಹಿತಿ ಪತ್ರ ಮಾತ್ರ ನನಗೆ ಅದೂ ನಿಧಾನಕ್ಕೆ ಸಿಕ್ಕಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನೆನಪಿನೋಲೆ (ರಸೀದಿಯೇನೋ ನನ್ನಲ್ಲಿದೆ) ಹೋದದ್ದೂ ಬಹುಶಃ ‘ಕ್ಯೂನಲ್ಲೇ ಇರಬೇಕು.’ ಹಗಲು ರಾತ್ರಿಯ ಗಸ್ತು, ಸಮಿತಿಗಳ ಕಲಾಪಗಳು,ಸ್ಟಿಕ್ಕರ್ರು ಬ್ಯಾನರ್ರು ಹೋರ್ಡಿಂಗು ವ್ಯವಸ್ಥೆ, ಎಲ್ಲಕ್ಕೂ ಕಿರೀಟಪ್ರಾಯವಾಗಿ ಬರುತ್ತಿರುವ ಜೂನ್ ಐದು - ಪರಿಸರ ದಿನಕ್ಕೆ ‘ಕಟಿಬದ್ಧರಾಗಲು ಕರೆ’ ಬರೆದು ಮುಗಿದ ಮೇಲೆ ನನಗೂ ಅಭಿನಂದನ ಪತ್ರ ಬರುತ್ತದೋ ಏನೋ!
ಅಶೋಕವರ್ಧನ

ಅನಾಮಧೇಯ ಹೇಳಿದರು...

"ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ" - ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ !!!

ಅನಾಮಧೇಯ ಹೇಳಿದರು...

nimma lEkhana avadhiyalli oodide
lancha koDabaaradendu naanU halavu kaDe tingaLu gaTTale kaShta pattu kelasa saadhisiddEne
tumbaa sahane bEku...
lEkhanakkaagi thanks
innomme bamdu nimma ellaa lEKhana ooduve
~mala rao