ಪಂಪಭಾರತ ಆಶ್ವಾಸ ೩ ಪದ್ಯಗಳು ೪೩ರಿಂದ ೫೨
ವ|| ಆಗಿ ಮಱುದಿವಸಂ ನೇಸಱ್ ಮೂಡೆ-
ನಂತರ ಮರುದಿನ ನೇಸರು ಮೂಡಲು
ಕಂ|| ತಂತಮ್ಮ ರಾಜ್ಯ ಚಿಹ್ನಂ
ತಂತಮ್ಮ ಮಹಾ ವಿಭೂತಿ ತಂತಮ್ಮ ಬಲಂ|
ತಂತಮ್ಮೆಸೆವ ವಿಳಾಸಂ
ತಂತಮ್ಮಿರ್ಪೆಡೆಯೊಳೋಳಿಯಿಂ ಕುಳ್ಳಿರ್ದರ್|| ೪೩||
(ತಂತಮ್ಮ ರಾಜ್ಯ ಚಿಹ್ನಂ, ತಂತಮ್ಮ ಮಹಾ ವಿಭೂತಿ, ತಂತಮ್ಮ ಬಲಂ, ತಂತಮ್ಮ ಎಸೆವ ವಿಳಾಸಂ ತಂತಮ್ಮ ಇರ್ಪ ಎಡೆಯೊಳ್ ಓಳಿಯಿಂ ಕುಳ್ಳಿರ್ದರ್)
ತಾವಿದ್ದ ಜಾಗದಲ್ಲಿ ತಮ್ಮ ರಾಜ್ಯಚಿಹ್ನೆ, ತಮ್ಮ ವೈಭವ, ತಮ್ಮ ಬಲ, ತಮ್ಮ ವಿಲಾಸ ಇವೆಲ್ಲವನ್ನೂ ಒಟ್ಟುಗೂಡಿಸಿಕೊಂಡು (ಆ ಎಲ್ಲ ಅರಸರೂ) ಸಾಲಾಗಿ ಕುಳಿತುಕೊಂಡರು.
ವ|| ಆಗಳ್ ದ್ರುಪದಂ ತನ್ನ ಪುರಕ್ಕಂ ಅಂತಃಪುರಕ್ಕಂ ಪರಿವಾರಕ್ಕಂ-
ಆಗ ದ್ರುಪದನು ತನ್ನ ಊರಿಗೂ, ಅಂತಃಪುರಕ್ಕೂ, ಪರಿವಾರಕ್ಕೂ
ಕಂ|| ಸಾಸಿರ ಪೊಂಗೆಯ್ದುಂ ಚಿಃ
ಕಾಸಟಮೆಂದೊಂದು ಲಕ್ಕಗೆಯ್ವುದಿದರ್ಕಂ||
ಮಾಸರಮುಡಲೆಂದಧಿಕವಿ
ಳಾಸದಿನುಡಲಿಕ್ಕಿ ನೆರೆಯೆ ಬಿಯಮಂ ಮೆರೆದಂ|| ೪೪||
(‘ಸಾಸಿರ ಪೊಂಗೆಯ್ದುಂ ಚಿಃ ಕಾಸಟಂ’ ಎಂದು, ‘ಒಂದು ಲಕ್ಕಗೆಯ್ವುದು ಇದರ್ಕಂ, ಮಾಸರಂ ಉಡಲೆಂ’ದು ಅಧಿಕ ವಿಳಾಸದಿನ್ ಉಡಲಿಕ್ಕಿ ನೆರೆಯೆ ಬಿಯಮಂ ಮೆರೆದಂ)
‘ಛೀ! (ನನ್ನ ಮಗಳ ಮದುವೆಗೆ) ಸಾವಿರ ಹೊನ್ನಿಗೆ ಸಿಗುವ ಹತ್ತಿಬಟ್ಟೆಯೆ?’(ಇದು ಬೇಡ!) ಎಂದು, ‘ಇದಕ್ಕೆ ಲಕ್ಷ ಹೊನ್ನು ಬೇಕಾದರೂ ಖರ್ಚಾಗಲಿ! ಎಲ್ಲರೂ ಸುಂದರವಾದದ್ದನ್ನೇ ಉಡಲಿ!’ ಎಂದು ದೊಡ್ಡಸ್ತಿಕೆಯ ಗತ್ತಿನಿಂದ ಧಾರಾಳತನವನ್ನು ಮೆರೆದನು.
(ಟಿಪ್ಪಣಿ: ಈ ಸನ್ನಿವೇಶವು ದ್ರುಪದನ ನೆವದಲ್ಲಿ ರಾಜರ ಮನೋಭಾವವನ್ನು ಹೇಳುತ್ತಿದೆ. ತನ್ನ ದೊಡ್ಡಸ್ತಿಕೆಯನ್ನು
ಬಂದ ರಾಜರ ಎದುರಿಗೆ ಪ್ರದರ್ಶಿಸಲು ಇಲ್ಲಿ ದ್ರುಪದ ಒಂದು ವೇದಿಕೆಯನ್ನು ಸೃಷ್ಟಿಸಿಕೊಂಡಿದ್ದಾನೆ.
ಬಂದವರೆಲ್ಲ ದ್ರೌಪದಿಯನ್ನು ನೋಡುವ ಕುತೂಹಲದಲ್ಲಿದ್ದರೆ, ದ್ರುಪದ ಅವರೆದುರಿಗೆ ತನ್ನ ದೊಡ್ಡಸ್ತಿಕೆಯನ್ನು
ಪ್ರದರ್ಶಿಸಲು ಹೊರಟಿದ್ದಾನೆ! ಪಂಪನ ಅನುಭವಕ್ಕೆ ಬಂದ ರಾಜರ ಇಂಥ ಅಸಂಬದ್ಧ ವರ್ತನೆಗಳೇ ಅವನು ಅವರನ್ನು ಕಟುವಾಗಿ ಟೀಕಿಸಲು
ಕಾರಣವಾಗಿರಬಹುದು.)
ವ|| ಅಂತು ಮೆಱೆದು ಕೂಸಂ ನೆಱೆಯೆ ಕೆಯ್ಗೆಯ್ಸಿಮೆಂದು ಮುನ್ನಂ ಕೆಯ್ಗೆಯ್ಸುತಿರ್ದ ತಱದ ಗುಱುಗೆಯರಪ್ಪಂತಃಪುರ ಪುರಂಧ್ರಿಯರಂ ಕರೆದು ಪೇೞ್ವುದುಮಂತೆಗೆಯ್ವೆಮೆಂದು-
(ಅಂತು ಮೆಱೆದು ‘ಕೂಸಂ ನೆಱೆಯೆ ಕೆಯ್ಗೆಯ್ಸಿಂ’ ಎಂದು ಮುನ್ನಂ ಕೆಯ್ಗೆಯ್ಸುತಿರ್ದ ತಱದ ಗುಱುಗೆಯರಪ್ಪ ಅಂತಃಪುರ ಪುರಂಧ್ರಿಯರಂ ಕರೆದು ಪೇೞ್ವುದುಂ ‘ಅಂತೆಗೆಯ್ವೆಂ’ ಎಂದು)
ಹಾಗೆ ಮೆರೆದು, ‘ಹುಡುಗಿಗೆ ಚೆನ್ನಾಗಿ ಅಲಂಕಾರ ಮಾಡಿ’ ಎಂದು ಅದಾಗಲೇ ಹಾಗೆ ಮಾಡುತ್ತಿದ್ದ ಅಲಂಕಾರಿಯರನ್ನು
ಕರೆದು ಹೇಳಿದಾಗ ಅವರು ‘ಹಾಗೆಯೇ ಆಗಲಿ’ ಎಂದು ಹೇಳಿ-
(ಟಿಪ್ಪಣಿ: ಇಲ್ಲಿ ಪಂಪ ಪುನಃ ರಾಜ ದ್ರುಪದನ ಪೊಳ್ಳುತನವನ್ನು ಎತ್ತಿ ತೋರಿಸುತ್ತಿದ್ದಾನೆ. ಬಂದ ಎಲ್ಲ ರಾಜರ ಎದುರಿಗೆ ʼಇಲ್ಲಿ ಎಲ್ಲವೂ ತನ್ನ ಅಪ್ಪಣೆಯಂತೆ
ನಡೆಯುತ್ತದೆʼ ಎಂದು ಅವನಿಗೆ ನಿರೂಪಿಸಬೇಕಾಗಿದೆ. ಆದರೆ ಅಲಂಕಾರಿಯರು ಒಳಗೆ ಆಗಲೇ ಮದುಮಗಳ ಅಲಂಕಾರವನ್ನು
ಶುರು ಮಾಡಿ ಆಗಿದೆ; ಅದಕ್ಕಾಗಿ ಅವರು ದ್ರುಪದನ ಅಪ್ಪಣೆಯನ್ನೇನೂ ಕಾದು ಕುಳಿತಿಲ್ಲ! ಹೀಗಾಗಿ ಇಲ್ಲಿ
ವಿನಯದಿಂದ ʼಅಂತೆಗೆಯ್ವೆಂʼ ಎನ್ನುತ್ತಿರುವ ಅಲಂಕಾರಿ ಒಳಗೊಳಗೇ ನಗುತ್ತಿದ್ದರೆ ಆಶ್ಚರ್ಯವಿಲ್ಲ!)
ಕಂ|| ಈ ಪೊೞ್ತಿಂಗೀ ರುತುವಿಂ
ಗೀ ಪಸದನಮಿಂತುಟಪ್ಪ ಮೆಯ್ವಣ್ಣಕ್ಕಿಂ|
ತೀ ಪೂವಿನೊಳೀ ತುಡುಗೆಯೊ
ಳೀ ಪುಟ್ಟಿಗೆಯೊಳ್ ಬೆಡಂಗುವಡೆದೆಸೆದಿರ್ಕುಂ|| ೪೫||
(ಈ ಪೊೞ್ತಿಂಗೆ, ಈ ರುತುವಿಂಗೆ ಈ ಪಸದನಂ; ಇಂತುಟಪ್ಪ ಮೆಯ್ವಣ್ಣಕ್ಕೆ ಇಂತು ಈ ಪೂವಿನೊಳ್, ಈ ತುಡುಗೆಯೊಳ್, ಈ ಪುಟ್ಟಿಗೆಯೊಳ್ ಬೆಡಂಗುವಡೆದು ಎಸೆದಿರ್ಕುಂ)
ಈ ಹೊತ್ತಿಗೆ, ಈ ಋತುವಿಗೆ ಈ ಅಲಂಕಾರ; ಇಂತಹ ಮೈಬಣ್ಣಕ್ಕೆ ಈ ಹೂವು, ಈ ಒಡವೆ, ಈ ಸೀರೆ ಬಹಳ ಚೆನ್ನಾಗಿ ಒಪ್ಪುತ್ತದೆ-
ವ|| ಎಂದು ನೆರೆಯ ಪಸದನಂಗೊಳಿಸಿ-
ಎಂದು ಚೆನ್ನಾಗಿ ಅಲಂಕಾರ ಮಾಡಿ-
ಚಂ|| ತುಡಿಸದೆ ಹಾರಮಂ ಮೊಲೆಯ ಬಿಣ್ಪಿನೊಳಂ ನಡು ಬಳ್ಕಿದಪ್ಪುದೀ
ನಡುಗುವುವಲ್ಲವೇ ತೊಡೆ ನಿತಂಬದ ಬಿಣ್ಪಿನೊಳೇವುದಕ್ಕ ಪೋ|
ಬಿಡು ಕಟಿಸೂತ್ರಮಂ ತೊಡೆಯ ಬಿಣ್ಪು ಪದಾಂಬುರುಹಕ್ಕೆ ತಿಣ್ಣಮೇಂ
ತುಡಿಸುವುದಕ್ಕ ನೂಪುರಮನೀ ತೊಡವೇವುದೊ ರೂಪೆ ಸಾಲದೆ|| ೪೬||
(ತುಡಿಸದೆ ಹಾರಮಂ ಮೊಲೆಯ ಬಿಣ್ಪಿನೊಳಂ ನಡು ಬಳ್ಕಿದಪ್ಪುದು!
ಈ ನಡುಗುವುವಲ್ಲವೇ ತೊಡೆ ನಿತಂಬದ ಬಿಣ್ಪಿನೊಳ್! ಏವುದು ಅಕ್ಕ?
ಪೋ ಬಿಡು ಕಟಿಸೂತ್ರಮಂ!
ತೊಡೆಯ ಬಿಣ್ಪು ಪದಾಂಬುರುಹಕ್ಕೆ ತಿಣ್ಣಂ ಏಂ ತುಡಿಸುವುದಕ್ಕ ನೂಪುರಮನ್?
ಈ ತೊಡವು ಏವುದೊ ರೂಪೆ ಸಾಲದೆ?)
‘ನಾನಿನ್ನೂ ಹಾರ ತೊಡಿಸಿ ಆಗಲಿಲ್ಲ! ಮೊಲೆಯ ಭಾರಕ್ಕೇ ಇವಳ ಸೊಂಟ ಬಳುಕುತ್ತಿದೆಯಲ್ಲ! (ಹಾರವನ್ನು ಹೇಗೆ ತೊಡಿಸಲಿ?)
-ಎಂದು ಒಬ್ಬಳು ಅಲಂಕಾರಿ ಹೇಳಿದರೆ,
‘ನಿತಂಬದ ಭಾರಕ್ಕೆ ತೊಡೆ ನಡುಗುತ್ತಿವೆಯಲ್ಲ! ಸೊಂಟಪಟ್ಟಿಯನ್ನು ತೊಡಿಸುವುದೆಂತು? ಏನು ಮಾಡಲಿ ಈಗ?’ ಎಂದು ಮತ್ತೊಬ್ಬಳು ಕೇಳುತ್ತಾಳೆ.
‘ಹೋಗಲಿ ಬಿಡು! ಒಡ್ಯಾಣವನ್ನು ತೊಡಿಸಬೇಡ!’ – ಇದು ಸಮಸ್ಯೆಗೆ ಇನ್ನೊಬ್ಬಳ ಪರಿಹಾರ!
‘ತೊಡೆಗಳ ಭಾರ ಹೊರಲು ಹೆಜ್ಜೆಗಳಿಗೆ ಆಗುತ್ತಿಲ್ಲ! ಇನ್ನು ಗೆಜ್ಜೆಗಳನ್ನು ತೊಡಿಸುವುದು ಹೇಗೆ?ʼ – ಇದು ಇನ್ನೊಬ್ಬಳ ಸಮಸ್ಯೆ!
ಹಾಗಿದ್ದರೆ ಬಿಟ್ಟುಬಿಡಿ! ಅವಳಿಗೆ ಆಭರಣಗಳೇಕೆ? ಅವಳ ರೂಪೇ ಸಾಲದೆ?- ಎಂದು ಮತ್ತೊಬ್ಬಳ ತೀರ್ಮಾನ!
[ಟಿಪ್ಪಣಿ: ಇದು ಪಂಪನ ಕಾಲದ ಮದುವೆಗಳಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಒಂದು ಸರಸ ಸನ್ನಿವೇಶ ಇರಬಹುದು. ಸ್ವಯಂವರಕ್ಕೆ ಅಲಂಕಾರಗೊಳ್ಳುತ್ತಿರುವ ಮದುಮಗಳಲ್ಲಿ ಆತಂಕ, ದುಗುಡಗಳಿರುವುದು ಸಹಜ. ಪರಿಣಾಮವಾಗಿ
ಆಕೆಯಲ್ಲಿ ಸಣ್ಣ ಮೈನಡುಕವೂ ಕಾಣಿಸಿಕೊಳ್ಳಬಹುದು. ಕಾಣಿಸಿಕೊಳ್ಳದಿದ್ದರೂ ಹಾಗೆ ಆರೋಪಿಸಲು ಅಡ್ಡಿ
ಇಲ್ಲವಷ್ಟೆ! ಇಲ್ಲಿ ಮದುಮಗಳನ್ನು ಅಲಂಕರಿಸುತ್ತಿರುವವರು ವಯಸ್ಸಿನಲ್ಲಿ ಅವಳಿಗಿಂತ ಸಾಕಷ್ಟು ದೊಡ್ಡವರು.
ಅವರು ಇಂತಹ ಮಾತುಗಳನ್ನಾಡಿ ಮದುಮಗಳ ಆತಂಕವನ್ನು ಕಡಿಮೆ ಮಾಡಲು ಯತ್ನಿಸುತ್ತಿರಬಹುದು. ಹಾಗೆ ಮಾಡುವಾಗ
ಅದು ಕೇವಲ ಹೆಂಗಸರೇ ಇರುವ ಸ್ಥಳವಾದ್ದರಿಂದ, ಕೊಂಚ ಹಸಿಹಸಿಯಾದ ಮಾತುಗಳನ್ನಾಡಿ ಮದುಮಗಳಿಗೆ ಕಚಗುಳಿ
ಇಡುತ್ತಿರಬಹುದು, ಅವಳನ್ನು ಗೋಳುಹೊಯ್ಯುತ್ತಿರಬಹುದು].
ವ|| ಎಂದೆಂದೋರೊರ್ವರಾಕೆಯ ರೂಪಂ ವಕ್ರೋಕ್ತಿಯೊಳೆ ಪೊಗೞ್ದು ಮಂಗಳವಸದನಮಿಕ್ಕಿಯುಂ ಪೊಸ ಮದವಳಿಗೆಯಪ್ಪುದಱಿಂ ತುಡಿಸಲೆವೇೞ್ಕುಮೆಂದು ನೆರೆಯೆ ಪಸದನಂಗೊಳಿಸೆ-
(ಎಂದೆಂದು ಓರೊರ್ವರ್ ಆಕೆಯ ರೂಪಂ ವಕ್ರೋಕ್ತಿಯೊಳೆ ಪೊಗೞ್ದು, ಮಂಗಳ ಪಸದನಂ ಇಕ್ಕಿಯುಂ, ‘ಪೊಸ ಮದವಳಿಗೆ ಅಪ್ಪುದಱಿಂ ತುಡಿಸಲೆವೇೞ್ಕುಂ’ ಎಂದು ನೆರೆಯೆ ಪಸದನಂಗೊಳಿಸೆ))
ಹೀಗೆ ಮದುಮಗಳನ್ನು ಅಲಂಕರಿಸುವವರೆಲ್ಲ ಪರೋಕ್ಷವಾಗಿ ಅವಳ ರೂಪವನ್ನು ಹೊಗಳಿ, ಅಂತಿಮ ಹಂತದ ಅಲಂಕಾರಗಳಲ್ಲಿ ತೊಡಗಿ, ‘ಹೊಸ ಮದುಮಗಳಾದ್ದರಿಂದ ಒಡವೆಗಳನ್ನು ತೊಡಿಸಲೇಬೇಕು’ ಎಂದು ಅವುಗಳನ್ನು ಒಪ್ಪುವಂತೆ ತೊಡಿಸಿ-
(ಟಿಪ್ಪಣಿ: ಇಲ್ಲಿ ಕವಿ ತುಂಬ ಸೂಚ್ಯವಾಗಿ, ಸಂಗ್ರಹವಾಗಿ ಒಂದು ತಮಾಷೆಯನ್ನು ಹೇಳಿದಂತಿದೆ: ಮದುಮಗಳ ರೂಪವನ್ನು ಪರೋಕ್ಷವಾಗಿ ಹೊಗಳಿ, ‘ಅವಳಿಗೆ ಆಭರಣ ಬೇಕಾಗಿಲ್ಲ, ಅವಳ ರೂಪವೇ ಸಾಕು’ ಎಂದು ಅಲಂಕಾರಿಗಳು ಹೇಳಿ, ನಂತರ ‘ಮಂಗಳ ಪಸದನವಿಕ್ಕಿಯುಂ’ ಎನ್ನುತ್ತಾನೆ ಕವಿ. ಎಂದರೆ, ಮದುಮಗಳಿಗೆ ಯಾವ ಒಡವೆಗಳನ್ನೂ ತೊಡಿಸದೆ, ಅಂತಿಮ ಹಂತದಲ್ಲಿ ಮಾಡಬೇಕಾದ ‘ಮಂಗಳ ಪಸದನ’ ಮಾಡಲು ಅವರು ಮುಂದಾದರು! ಇದು ಮದುಮಗಳನ್ನು ಮಂಗ ಮಾಡುವ ಚೇಷ್ಟೆ! ಮದುಮಗಳಾಗಿ, ಒಡವೆಗಳನ್ನು ತೊಟ್ಟು ಮೆರೆಯುವ ಆಸೆಯಲ್ಲಿದ್ದ ದ್ರೌಪದಿ ಒಂದು ಕ್ಷಣ ಪೆಚ್ಚಾಗುವ ಸನ್ನಿವೇಶ! ಆದರೆ, ಅವರಲ್ಲಿಯೇ ಒಬ್ಬಳು ಈ ಕುಚೋದ್ಯಕ್ಕೆ ಕಡಿವಾಣ ಹಾಕಿ ‘ಹೊಸ ಮದುಮಗಳಲ್ಲವೆ? ಆಭರಣ ತೊಡಿಸಲೇಬೇಕು’ ಎನ್ನುತ್ತಾಳೆ. ನಂತರ ಎಲ್ಲರೂ ಆಕೆಗೆ ಆಭರಣಗಳನ್ನು ತೊಡಿಸಿ ಚೆನ್ನಾಗಿ ಅಲಂಕರಿಸುತ್ತಾರೆ.)
ಕಂ|| ಮಸೆದುದು ಮದನನ ಬಾಳ್ ಕೂ
ರ್ಮಸೆಯಿಟ್ಟುದು ಕಾಮನಂಬು ಬಾಯ್ಗೂಡಿದುದಾ|
ಕುಸುಮಾಸ್ತ್ರನ ಚಕ್ರಮಿದೆಂ
ಬೆಸಕಮನಾಳ್ದತ್ತು ಪಸದನಂ ದ್ರೌಪದಿಯಾ|| ೪೭||
(ಮಸೆದುದು ಮದನನ ಬಾಳ್; ಕೂರ್ ಮಸೆಯಿಟ್ಟುದು ಕಾಮನ ಅಂಬು; ಬಾಯ್ಗೂಡಿದುದು ಆ ಕುಸುಮಾಸ್ತ್ರನ ಚಕ್ರಂ ಇದು ಎಂಬ ಎಸಕಮನ್ ಆಳ್ದತ್ತು ಪಸದನಂ ದ್ರೌಪದಿಯಾ)
ಮದನನ ಕತ್ತಿಯನ್ನು ಮಸೆದಂತಾಯಿತು; ಕಾಮನ ಬಾಣವು ಸಾಣೆಗೊಂಡಿತು; ಹೂಬಾಣನ ಚಕ್ರವು ಬಾಯಿಗೂಡಿತು – ಎಂಬಂತೆ ದ್ರೌಪದಿಯ ಅಲಂಕಾರವು ಹೊಳೆಯಿತು.
(ಟಿಪ್ಪಣಿ: ಕತ್ತಿ ಮಸೆದರೆ ಅದರ ಬಾಯಿ, ಬಾಣಕ್ಕೆ ಸಾಣೆ ಹಿಡಿದರೆ ಅದರ ಚೂಪು ತುದಿ ಹೊಳೆಯುತ್ತವೆ. ಅಂತೆಯೇ ಚಕ್ರದ ಹಲ್ಲುಗಳಿಗೆ ಅರ ಹಾಕಿದರೆ ಅದರ ಹಲ್ಲುಗಳು ಹೊಳೆಯುತ್ತವೆ.
ಆ ಹೊಳಪು ಆ ಆಯುಧಗಳು ಹರಿತಗೊಂಡಿರುವುದನ್ನು ಸೂಚಿಸುತ್ತದೆ. ಹಾಗೆ, ಅಲಂಕಾರಗೊಂಡ ದ್ರೌಪದಿ ಹೊಳೆಹೊಳೆಯುತ್ತ, ಸೇರಿದ ರಾಜರನ್ನು ಘಾಸಿಗೊಳಿಸಲು ಸಿದ್ಧಳಾದಳು ಎಂಬ ಸೂಚನೆ ಇಲ್ಲಿದೆ.)
ವ|| ಅಂತು ನೆರೆಯೆ ಪಸದನಂಗೊಳಿಸಿ ಬಿಡುಮುತ್ತಿನ ಸೇಸೆಯನಿಕ್ಕಿ ತಾಯ್ಗಂ ತಂದೆಗಂ ಪೊಡಮಡಿಸಿ-
ಹಾಗೆ ಚೆನ್ನಾಗಿ ಅಲಂಕರಿಸಿ, ಬಿಡುಮುತ್ತಿನ ಮಂತ್ರಾಕ್ಷತೆಯನ್ನು ಅವಳ ತಲೆಯ ಮೇಲೆ ಹಾಕಿ, ತಾಯಿ-ತಂದೆಯರಿಗೆ ಆಕೆಯಿಂದ ನಮಸ್ಕಾರ ಮಾಡಿಸಿ-
(ಟಿಪ್ಪಣಿ: ದ್ರೌಪದಿ ಬೆಂಕಿಯ ಮಗಳು. ಅವಳಿಗೆ ಹೆತ್ತ ತಾಯಿ ಇಲ್ಲ. ಹಾಗಿದ್ದರೂ ‘ತಾಯ್ಗಂ’ ಎಂದು ಪಂಪ ಹೇಳುತ್ತಿರುವುದು ಕುತೂಹಲಕಾರಿಯಾಗಿದೆ.)
ಕಂ|| ನಿಟ್ಟಿಸೆ ಹೋಮಾನಲನೊಳ್
ಪುಟ್ಟಿದ ನಿನಗಕ್ಕ ಪರಕೆ ಯಾವುದೊ ನಿನ್ನಂ|
ಪುಟ್ಟಿಸಿದ ಬಿದಿ ನೆಗೞ್ತೆಯ
ಜೆಟ್ಟಿಗನೊಳ್ ನೆರಪುಗೀಗಳರಿಕೇಸರಿಯೊಳ್|| ೪೮||
(‘ನಿಟ್ಟಿಸೆ ಹೋಮಾನಲನೊಳ್ ಪುಟ್ಟಿದ ನಿನಗೆ, ಅಕ್ಕ,
ಪರಕೆ ಯಾವುದೊ? ನಿನ್ನಂ ಪುಟ್ಟಿಸಿದ ಬಿದಿ ನೆಗೞ್ತೆಯ ಜೆಟ್ಟಿಗನೊಳ್ ನೆರಪುಗೆ ಈಗಳ್ ಅರಿಕೇಸರಿಯೊಳ್’)
‘ಅಕ್ಕಾ! ಕಂಡಂತೆ ನೀನು ಹೋಮದ ಬೆಂಕಿಯಲ್ಲಿ ಹುಟ್ಟಿದವಳು. (ಆದ್ದರಿಂದ ಅಸಾಮಾನ್ಯಳು.) ನಿನ್ನನ್ನು ನಾವಾದರೂ ಏನೆಂದು ಹರಸುವುದು? ನಿನ್ನನ್ನು ಹುಟ್ಟಿಸಿದ ವಿಧಿ ಆ ಅರಿಕೇಸರಿ (ಅರ್ಜುನ) ಎಂಬ ಹೆಸರಾಂತ ವೀರನ ಜೊತೆಗೆ ನಿನ್ನನ್ನು ಸೇರಿಸಲಿ’ ಎಂದರು.
ವ|| ಎಂದು ಪರಸಿ ಕನತ್ಕನಕ ಖಚಿತಮುಂ ಮೌಕ್ತಿಕಸ್ತಂಭಮುಮಪ್ಪ ಸರ್ವತೋಭದ್ರಮೆಂಬ ಸಿವಿಗೆಯನೇಱಿಸಿ ಚಾಮರದ ಕುಂಚದಡಪದ ಡವಕೆಯ ವಾರ ವಿಳಾಸಿನಿಯರೆರಡುಂ ಕೆಲದೊಳ್ ಸುತ್ತಿಱಿದು ಬಳಸಿ ಬರೆ ತಲೆವರಿದೋಜೆಯ ಪಿಡಿಯನೇಱಿ ಪೆಂಡವಾಸದೊಳ್ವೆಂಡಿರ್ ಬಳಸಿ ಬರೆ ತಳ್ತು ಪಿಡಿದ ಕನಕ ಪದ್ಮದ ಸೀಗುರಿಗಳ ನೆೞಲೆಡೆವಱಿಯದೆ ಬರೆ ದ್ರುಪದನುಂ ಧೃಷ್ಟದ್ಯುಮ್ನನುಂ ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳ್ ನೆರೆಯೆ ಪಣ್ಣಿದ ಮದಾಂಧ ಗಂಧಸಿಂಧುರಂಗಳನೇಱಿ ಬರೆ ಮುಂದೆ ಪರಿವ ಧವಳಚ್ಛತ್ರ ಚಂದ್ರಾದಿತ್ಯ ಪಾಳಿಕೇತನಾದಿ ರಾಜ್ಯ ಚಿಹ್ನಂಗಳುಂ ಮೊೞಗುವ ಮಂಗಳತೂರ್ಯಂಗಳೆಸೆಯೆ ಪೆಱಪೆಱಗೆ ದ್ರೌಪದಿ ಶೃಂಗಾರಸಾಗರಮೆ ಮೇರೆದಪ್ಪಿ ಬರ್ಪಂತೆ ಬರೆ-
(ಎಂದು ಪರಸಿ, ಕನತ್ಕನಕ ಖಚಿತಮುಂ, ಮೌಕ್ತಿಕಸ್ತಂಭಮುಂ ಅಪ್ಪ ಸರ್ವತೋಭದ್ರಮೆಂಬ ಸಿವಿಗೆಯನ್ ಏಱಿಸಿ, ಚಾಮರದ ಕುಂಚದ ಅಡಪದ ಡವಕೆಯ ವಾರ ವಿಳಾಸಿನಿಯರ್ ಎರಡುಂ ಕೆಲದೊಳ್ ಸುತ್ತಿಱಿದು ಬಳಸಿ ಬರೆ, ತಲೆವರಿದೋಜೆಯ ಪಿಡಿಯನ್ ಏಱಿ ಪೆಂಡವಾಸದ ಒಳ್ವೆಂಡಿರ್ ಬಳಸಿ ಬರೆ, ತಳ್ತು ಪಿಡಿದ ಕನಕ ಪದ್ಮದ ಸೀಗುರಿಗಳ ನೆೞಲ್ ಎಡೆವಱಿಯದೆ ಬರೆ ದ್ರುಪದನುಂ ಧೃಷ್ಟದ್ಯುಮ್ನನುಂ ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳ್ ನೆರೆಯೆ ಪಣ್ಣಿದ ಮದಾಂಧ ಗಂಧಸಿಂಧುರಂಗಳನ್ ಏಱಿ ಬರೆ, ಮುಂದೆ ಪರಿವ ಧವಳಚ್ಛತ್ರ ಚಂದ್ರಾದಿತ್ಯ ಪಾಳಿಕೇತನಾದಿ ರಾಜ್ಯ ಚಿಹ್ನಂಗಳುಂ, ಮೊೞಗುವ ಮಂಗಳತೂರ್ಯಂಗಳ್ ಎಸೆಯೆ, ಪೆಱಪೆಱಗನೆ ದ್ರೌಪದಿ ಶೃಂಗಾರಸಾಗರಮೆ ಮೇರೆದಪ್ಪಿ ಬರ್ಪಂತೆ ಬರೆ)
(ನಂತರ ಅರಮನೆಯಿಂದ ಸ್ವಯಂವರ ಶಾಲೆಯ ಕಡೆಗೆ ಮದುಮಗಳ ದಿಬ್ಬಣ ಹೊರಟಿತು). ಮೆರವಣಿಗೆಯ ಎದುರು ಭಾಗದಲ್ಲಿ ಮಂಗಳವಾದ್ಯಗಳನ್ನು ನುಡಿಸುತ್ತಾ ಸಾಗುವ ವಾದ್ಯಗಾರರು; ಅವರ ಹಿಂಭಾಗದಲ್ಲಿ ಬಿಳಿಯ ಕೊಡೆ, ಚಂದ್ರ, ಸೂರ್ಯ ಮುಂತಾದ ರಾಜಚಿಹ್ನೆಗಳಿದ್ದ ಬಾವುಟಗಳನ್ನು ಹಿಡಿದವರು; ಅವರ ಹಿಂದೆ, ಮುತ್ತು ಮಾಣಿಕ್ಯಗಳಿಂದ ಸಿಂಗರಿಸಿದ್ದ ಜೂಲನ್ನು ಹೊತ್ತ ಮದಿಸಿದ ಆನೆಗಳ ಮೇಲೆ ಕುಳಿತ - ತಮಗೆ ಹಿಡಿದ ಚಿನ್ನದ ಕೊಡೆಗಳು ಸಂದುಗಡಿಯದಂತಿದ್ದ - ಅರಸು ದ್ರುಪದ ಹಾಗೂ ಆತನ ಮಗ ಧೃಷ್ಟದ್ಯುಮ್ನ; ಅವರ ನಂತರ ಮುಂದುವರಿದು ಬರುತ್ತಿರುವ ಹೆಣ್ಣಾನೆಗಳ ಮೇಲೆ ಕುಳಿತ ಅಂತಃಪುರದ ಮಹಿಳೆಯರು; ಅವರ ಹಿಂದಿನಿಂದ ಕುಂಚವಿರುವ ಎಲೆಯಡಿಕೆ ಚೀಲವನ್ನು ಹಿಡಿದ, ಪೀಕದಾನಿಯನ್ನು ಹಿಡಿದ ಪರಿವಾರದ ಹೆಂಗಸರು; ಅವರ ಹಿಂದೆ ಹೊಳೆಯುವ ಬಂಗಾರದಿಂದ ನಿರ್ಮಿಸಿದ, ಮುತ್ತಿನ ಕಂಬಗಳಿದ್ದ ಸರ್ವತೋಭದ್ರ(ವಾದ) ಪಲ್ಲಕ್ಕಿಯ ಮೇಲೆ ವಿರಾಜಮಾನಳಾದ, ಗಡಿ ಮೀರಿದ ಶೃಂಗಾರಸಾಗರದಂತಿರುವ ಮದುಮಗಳು ದ್ರೌಪದಿ; ಹೀಗಿತ್ತು ಆ ವೈಭವಯುತವಾದ ದಿಬ್ಬಣದ ಮೆರವಣಿಗೆ.
ಕಂ|| ಪರೆದುಗುವ ಪಂಚ ರತ್ನದ
ಪರಲ್ಗಳುದಿರ್ದೆಸೆಯೆ ಸೌಧದೊಳೆ ಕೆದಱಿದ ಕ|
ಪ್ಪುರವಳ್ಕುಗಳೆಸೆಯೆ ಸಯಂ
ಬರ ಸಾಲೆಯನೆಸೆವ ಲೀಲೆಯಿಂ ಪುಗುತಂದಳ್|| ೪೯||
(ಪರೆದು ಉಗುವ ಪಂಚ ರತ್ನದ ಪರಲ್ಗಳ್ ಉದಿರ್ದು ಎಸೆಯೆ ಸೌಧದೊಳೆ. (ಸೌಧದೊಳೆ) ಕೆದಱಿದ ಕಪ್ಪುರವಳ್ಕುಗಳ್ ಎಸೆಯೆ, ಸಯಂಬರ ಸಾಲೆಯನ್ ಎಸೆವ ಲೀಲೆಯಿಂ ಪುಗುತಂದಳ್)
(ದ್ರೌಪದಿ ಸ್ವಯಂವರ ಶಾಲೆಯ ಎದುರು ಪಲ್ಲಕ್ಕಿಯಿಂದ ಇಳಿದಿದ್ದಾಳೆ). ಆ ಸ್ವಯಂವರ ಶಾಲೆಯ ನೆಲದ ಮೇಲೆ, ಉದುರಿಸಿದ ಪಂಚರತ್ನದ ಹರಳುಗಳು ಹೊಳೆಹೊಳೆಯುತ್ತ ಎಲ್ಲೆಡೆಯೂ ಚೆಲ್ಲಿ ಬಿದ್ದಿದ್ದವು. ಆ ಹರಳುಗಳಿಗೆ ಕರ್ಪೂರದ ಹಳಕುಗಳು ಜೊತೆಗೊಟ್ಟಿದ್ದವು. ಇಂತಹ ಸ್ವಯಂವರ ಶಾಲೆಯನ್ನು ದ್ರೌಪದಿಯು ಹಗುರವಾಗಿ ಪ್ರವೇಶಿಸಿದಳು.
ವ|| ಆಗಳ್-
ಕಂ|| ನುಡಿವುದನೆ ಮರೆದು ಪೆಱತಂ
ನುಡಿಯೆ ಕೆಲರ್ ನೋಡದಂತೆ ನೋಡೆ ಕೆಲರ್ ಪಾ|
ವಡರ್ದವೊಲಿರೆ ಕೆಲರೊಯ್ಯನೆ
ತುಡುಗೆಯನೋಸರಿಸೆ ಕೆಲರುದಗ್ರಾವನಿಪರ್|| ೫೦||
(ನುಡಿವುದನೆ ಮರೆದು ಪೆಱತಂ ನುಡಿಯೆ ಕೆಲರ್, ನೋಡದಂತೆ ನೋಡೆ ಕೆಲರ್, ಪಾವು ಅಡರ್ದವೊಲ್ ಇರೆ ಕೆಲರ್, ಒಯ್ಯನೆ ತುಡುಗೆಯನ್ ಓಸರಿಸೆ ಕೆಲರ್ ಉದಗ್ರ ಅವನಿಪರ್)
ಕೆಲವರು ದ್ರೌಪದಿಯನ್ನು ನೋಡಿದ ಕೂಡಲೇ ತಾವು ಏನು ಮಾತಾಡುತ್ತಿದ್ದೆವು ಎಂಬುದನ್ನೇ ಮರೆತು, ಅದನ್ನು ಅಲ್ಲಿಗೇ ಬಿಟ್ಟು ಬೇರೆಯೇ ವಿಷಯವನ್ನು ಮಾತಾಡತೊಡಗಿದರು! ಕೆಲವರು ಆಕೆಯನ್ನು ನೋಡಿದರೂ ನೋಡದಂತೆ ತಮ್ಮ ತೋರಿಕೆಯ ಗತ್ತನ್ನು ಮೆರೆದರು! ಕೆಲವರು ಮೈಮೇಲೆ ಹಾವು ಬಿದ್ದವರಂತೆ ಗಾಬರಿಗೊಂಡರು. ಮತ್ತೆ ಕೆಲವರು ತಮ್ಮ ಆಭರಣಗಳನ್ನು ಸರಿ ಮಾಡಿಕೊಂಡರು.
ಕಂ|| ಒಡನೆ ನೆರೆದರಸುಮಕ್ಕಳ
ನಿಡುಗಣ್ಗಳ ಬಳಗಮೆಱಗೆ ತನ್ನಯ ಮೆಯ್ಯೊಳ್|
ನಡೆ ಬಳಸಿ ಪಲರುಮಂಬಂ
ತುಡೆ ನಡುವಿರ್ದೊಂದು ಪುಲ್ಲೆಯಿರ್ಪಂತಿರ್ದಳ್|| ೫೧||
(ಒಡನೆ, ನೆರೆದ ಅರಸುಮಕ್ಕಳ ನಿಡುಗಣ್ಗಳ ಬಳಗಂ ಎಱಗೆ ತನ್ನಯ ಮೆಯ್ಯೊಳ್, ನಡೆ ಬಳಸಿ ಪಲರುಂ ಅಂಬಂ ತುಡೆ ನಡುವೆ ಇರ್ದ ಒಂದು ಪುಲ್ಲೆ ಇರ್ಪಂತೆ ಇರ್ದಳ್)
ಕೂಡಲೇ ಅಲ್ಲಿ ಸೇರಿದ ಎಲ್ಲಾ ಭೂಪರ ಕಣ್ಣೋಟಗಳೂ ಒಂದೇ ಸಲಕ್ಕೆ ಅವಳ ಮೈಮೇಲೆ ಎರಗಿದವು; ಹಲವು ಬೇಟೆಗಾರರು ವ್ಯವಸ್ಥಿತವಾಗಿ ಸುತ್ತುವರಿದು ಬಾಣ ಬಿಡುತ್ತಿರುವಾಗ ನಡುವೆ ಸಿಕ್ಕಿಕೊಂಡ ಜಿಂಕೆಯಂತಾಗಿತ್ತು ದ್ರೌಪದಿಯ ಸ್ಥಿತಿ.
ಕ|| ಮೊನೆಯಂಬುಗಳೊಳೆ ಪೂಣ್ದಪ
ನನಿಬರುಮಂ ಕಿಱಿದು ಬೇಗದಿಂ ಹರಿಗನದ|
ರ್ಕೆನಗೆಡೆವೇೞ್ಕುಮೆ ಎಂಬವೊ
ಲನಿಬರುಮಂ ಪೂಣ್ದನತನು ನನೆಯಂಬುಗಳಿಂ|| ೫೨||
(ಮೊನೆಯಂಬುಗಳೊಳೆ ಪೂಣ್ದಪನ್ ಅನಿಬರುಮಂ ಕಿಱಿದು ಬೇಗದಿಂ ಹರಿಗನ್, ಅದರ್ಕೆ ಎನಗೆ ಎಡೆವೇೞ್ಕುಮೆ ಎಂಬವೊಲ್, ಅನಿಬರುಮಂ ಪೂಣ್ದನ್ ಅತನು ನನೆಯಂಬುಗಳಿಂ)
‘ಸದ್ಯದಲ್ಲಿಯೇ
ಅರ್ಜುನನು ಇಲ್ಲಿ ಸೇರಿದ ಎಲ್ಲ ರಾಜರನ್ನೂ ತನ್ನ ಚೂಪಾದ ಬಾಣಗಳ ರಾಶಿಯಲ್ಲಿ ಹೂತು ಹಾಕಲಿದ್ದಾನೆ. ಆದರೆ ನನಗೂ ಒಂದು ಅವಕಾಶ
ಬೇಕಲ್ಲ! ಅವನು ಹಾಗೆ ಮಾಡುವ ಮೊದಲೇ ನಾನು ನನ್ನ ಹೂಬಾಣಗಳಿಂದ
ಈ ರಾಜರನ್ನು ಹೂತು ಹಾಕುತ್ತೇನೆ’ ಎಂಬಂತೆ ಮನ್ಮಥನು ಎಲ್ಲ ರಾಜರ ಮೇಲೂ ತನ್ನ ಹೂಬಾಣಗಳನ್ನು ಪ್ರಯೋಗಿಸಿದನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ