ಮಂಗಳವಾರ, ಮೇ 21, 2019


ಪಂಪಭಾರತ ಆಶ್ವಾಸ ೨ ಪದ್ಯಗಳು ೭೪-೮೬


ಕಂ|| ದೂರ್ವಾಂಕುರ ವರ್ಣದೊ
     ಳಾದಮೊಡಂಬಟ್ಟ ಕನಕ ಕವಚಂ ರಾಜ|
     ತ್ಕೋದಂಡಮಮರ್ದ ದೊಣೆ
     ಣ್ಗಾದಮೆ ಬರೆ ಬಂದು ಮುಂದೆ ನಿಂದಂ ಹರಿಗಂ|| ೭೪ || 
(ಆ ದೂರ್ವಾಂಕುರ ವರ್ಣದೊಳ್, ಆದಂ ಒಡಂಬಟ್ಟ ಕನಕ ಕವಚಂ, ರಾಜತ್ಕೋದಂಡಂ, ಅಮರ್ದ ದೊಣೆ ಕಣ್ಗೆ ಆದಮೆ ಬರೆ, ಬಂದು ಮುಂದೆ ನಿಂದಂ ಹರಿಗಂ)
ದೂರ್ವೆಯ ಕಾಂಡದ ಬಣ್ಣದ ಅರ್ಜುನನು ತನ್ನ ಶರೀರಕ್ಕೊಪ್ಪುವ ಚಿನ್ನದ ಕವಚ, ಹೊಳೆಯುವ ಬಿಲ್ಲು, ಬೆನ್ನಿಗಂಟಿದ ಬತ್ತಳಿಕೆ ಇವುಗಳಿಂದ ಶೋಭಿಸುತ್ತ ಎಲ್ಲರ ಎದುರಿಗೆ ಬಂದು ನಿಂತನು.
(ದೂರ್ವಾಂಕುರ ಎಂದರೆ ದೂರ್ವೆ ಹುಲ್ಲಿನ ಮೊಳಕೆ. (ಅಂಕುರ = ಮೊಳಕೆ). ಆದರೆ ದೂರ್ವೆ ಹುಲ್ಲು ಚಿಗುರೊಡೆಯುತ್ತದೆಯೇ ಹೊರತು ಮೊಳಕೆಯೊಡೆಯುವುದಿಲ್ಲ. ಆ ಚಿಗುರಿನ ಬಣ್ಣ ಹಸಿರೇ. ಹಾಗಾದರೆ ಕವಿ ಇಲ್ಲಿ ಅರ್ಜುನನ  ಬಣ್ಣ ಯಾವುದೆಂದು ಹೇಳುತ್ತಿದ್ದಾನೆ? ಹಸಿರು ಎಂದು ಹೇಳುವುದಂತೂ ಸಾಧ್ಯವಿಲ್ಲ. ಕವಿ ತನ್ನನ್ನು ತಾನು ‘ಕದಳೀಗರ್ಭಶ್ಯಾಮಂ’ ಎಂದು ವರ್ಣಿಸಿಕೊಂಡಿರುವುದನ್ನು ನೆನಪು ಮಾಡಿಕೊಳ್ಳಬೇಕು. ಕದಳೀಗರ್ಭ ಎಂದರೆ ಬಾಳೆ ಮೂತಿ ಎಂದೇ ಹಲವರು ಅರ್ಥ ಮಾಡುತ್ತಾರೆ. ದೂರ್ವೆ ಹುಲ್ಲಿನ ಕಾಂಡದ ಬಣ್ಣಕ್ಕೂ, ಬಾಳೆ ಮೂತಿಯ ಬಣ್ಣಕ್ಕೂ ತುಂಬಾ ಸಾಮ್ಯವಿದೆ. ಈ ಕಾರಣಕ್ಕೆ ಇಲ್ಲಿ ಕವಿ ದೂರ್ವಾಂಕುರ ಎನ್ನುವಾಗ ದೂರ್ವೆಯ ಕಾಂಡವನ್ನು ಉದ್ದೇಶಿಸಿದ್ದಾನೆ ಎಂದು ತಿಳಿಯಬಹುದು).
ವ|| ಆಗಳ್ ಕುಂಭಸಂಭವನುಲಿವ ಜನದ ಕಳಕಳ ರವಮುಮಂ ಮೊೞಗುವ ಪಱೆಗಳುಮಂ ಬಾರಿಸಿ-
(ಆಗಳ್ ಕುಂಭಸಂಭವನ್ ಉಲಿವ ಜನದ ಕಳಕಳ ರವಮುಮಂ ಮೊೞಗುವ ಪಱೆಗಳುಮಂ ಬಾರಿಸಿ)
ಆಗ ದ್ರೋಣನು ತಮ್ಮತಮ್ಮಲ್ಲಿಯೇ ಮಾತಾಡುತ್ತಿದ್ದ ಜನರ ಕಲಕಲ ಶಬ್ದವನ್ನೂ, ಮೊಳಗುತ್ತಿದ್ದ ಕಹಳೆಗಳ ಶಬ್ದವನ್ನೂ ತಡೆದು ನಿಲ್ಲಿಸಿ- 
ಕಂ|| ಈತಂ ಗುಣಾರ್ಣವಂ ವಿ
     ಖ್ಯಾತ ಯಶಂ ವೈರಿಗಜಘಟಾವಿಘಟನನಿಂ|
     ತೀತನ ಸಾಹಸಮುಪಮಾ
     ತೀತಮಿದಂ ನೋಡಿಮೆಂದು ನೆರವಿಗೆ ನುಡಿದಂ|| ೭೫ ||
(‘ಈತಂ ಗುಣಾರ್ಣವಂ, ವಿಖ್ಯಾತ ಯಶಂ, ವೈರಿಗಜಘಟಾವಿಘಟನನ್ ಇಂತು ಈತನ ಸಾಹಸಂ ಉಪಮಾತೀತಂ ಇದಂ ನೋಡಿಂ’ ಎಂದು ನೆರವಿಗೆ ನುಡಿದಂ)
ಇದೋ ಈತನೇ ಅರ್ಜುನ. ಇವನ ಯಶಸ್ಸು ಎಲ್ಲ ಕಡೆಯೂ ಹಬ್ಬಿದೆ. ಇವನು ಶತ್ರುಗಳ ಆನೆಪಡೆಯನ್ನು ಭೇದಿಸಬಲ್ಲ ಧೀರ. ಇವನ ಸಾಹಸಕ್ಕೆ ಹೋಲಿಕೆಯೇ ಇಲ್ಲ. ಈತನ ವಿದ್ಯಾ ಪ್ರದರ್ಶನವನ್ನು ಎಲ್ಲರೂ ನೋಡಿರಿ’ ಎಂದು ಹೇಳಿದನು.
ವ|| ಪ್ರಸ್ತಾವದೊಳ್
ಆ ಸಮಯದಲ್ಲಿ
ಚಂ|| ಒಡೆಗುಮಜಾಂಡಮಿನ್ನಿನಿಸು ಜೇವೊಡೆದಾಗಳೆ ಬೊಮ್ಮನುಂ ಮನಂ
     ಗಿಡುಗುಮದೇವುದೆಂದು ಮಿಡಿದೊಯ್ಯನೆ ಜೇವೊಡೆದಾಗಳಂಬನಂ|
     ಬೊಡನೊಡನೀಂಬುವೆಂಬನಿತು ಸಂದೆಯಮಪ್ಪಿನಮಸ್ತ್ರ ಜಾಲದಿಂ
     ತಡೆಯದೆ ಪಂಜರಂಬಡೆದನಂದು ವಿಯತ್ತಳದೊಳ್ ಗುಣಾರ್ಣವಂ|| ೭೬ ||
(ಬಿಲ್ಲಿಗೆ ಕಟ್ಟಿದ ಹಗ್ಗವನ್ನು) ಸ್ವಲ್ಪಮಾತ್ರವೇ ಜೇವೊಡೆದರೂ ಸಹ ಅದು ಬ್ರಹ್ಮಾಂಡವನ್ನೂ ಒಡೆಯುವಷ್ಟು ಜೋರಾಗಿ ಶಬ್ದ ಮಾಡುತ್ತದೆ. ಆ ಬಿಲ್ಲು ಏನು ಮಾಡಿಬಿಡುತ್ತದೋ ಎಂದು ಬ್ರಹ್ಮನೂ ಸಹ ಅಧೀರನಾಗುತ್ತಾನೆ. ಬಿಲ್ಲಿನ ಹಗ್ಗವನ್ನು ಮೀಟಿ, ಮೆಲ್ಲನೆ ಜೇವೊಡೆದರೆ ಒಂದು ಬಾಣ ಇನ್ನೊಂದನ್ನು ಹೆರುತ್ತಿದೆಯೋ ಎಂಬ ಸಂದೇಹ ಉಂಟಾಗುವಂತೆ ಅದರಿಂದ ಒಂದರ ಹಿಂದೆ ಒಂದು ಬಾಣಗಳು ಚಿಮ್ಮುತ್ತವೆ. ಇಂತಹ  ಅಸ್ತ್ರ ಜಾಲದಿಂದ ಅರ್ಜುನನು ಆಕಾಶದಲ್ಲಿ ಒಂದು ಮೇಲ್ಕಟ್ಟನ್ನೇ (ಚಪ್ಪರವನ್ನೇ) ನಿರ್ಮಿಸಿದನು.
ವ|| ಮತ್ತಮೈಂದ್ರ ವಾರುಣ ವಾಯವ್ಯಾಗ್ನೇಯ ಪಾರ್ವತಾದಿ ಬಾಣಂಗಳಂ ತುಡೆ-
ಅದಲ್ಲದೆ ವಾರುಣ, ವಾಯವ್ಯ, ಆಗ್ನೇಯ, ಪರ್ವತ ಮುಂತಾದ ಅಸ್ತ್ರಗಳನ್ನು ಪ್ರಯೋಗಿಸಲು 
ಚಂ|| ಕವಿದುವು ಕಾಳ ನೀಳ ಜಳದಾವಳಿ ವಾರಿಗಳ್ ಧರಿತ್ರಿಯಂ
     ಕವಿದುವು ಗಾಳಿಗಳ್ ಪ್ರಳಯಕಾಲಮನಾಗಿಸಲೆಂದೆ ಲೋಕಮಂ|
     ಕವಿದುವು ಮೊಕ್ಕಳಂ ಕವಿದುವುಗ್ರ ಲಯಾಗ್ನಿಗಳಂತೆ ಬೆಟ್ಟುಗಳ್
     ಕವಿದುವಿವೆಂಬನಿತ್ತು ಭಯಮಾಯ್ತು ಗುಣಾರ್ಣವನಸ್ತ್ರಕೌಶಲಂ|| ೭೭ ||
(ಕವಿದುವು ಕಾಳ ನೀಳ ಜಳದ ಆವಳಿ ವಾರಿಗಳ್ ಧರಿತ್ರಿಯಂ ಕವಿದುವು ಗಾಳಿಗಳ್ ಪ್ರಳಯಕಾಲಮನ್ ಆಗಿಸಲೆಂದೆ ಲೋಕಮಂ ಕವಿದುವು ಮೊಕ್ಕಳಂ ಕವಿದುವು ಉಗ್ರ ಲಯಾಗ್ನಿಗಳಂತೆ ಬೆಟ್ಟುಗಳ್ ಕವಿದುವು ಇವೆಂಬ ಅನಿತ್ತು ಭಯಮಾಯ್ತು ಗುಣಾರ್ಣವನ ಅಸ್ತ್ರಕೌಶಲಂ)
ನೀಲಗಪ್ಪು ಮೋಡಗಳು ಸುತ್ತಲೂ ಕವಿದಂತಾಯಿತು; ಕಡಲು ಇಡೀ ಭೂಮಿಯನ್ನು ಆವರಿಸಿದಂತಾಯಿತು; ಲೋಕದಲ್ಲಿ ಪ್ರಳಯವನ್ನೇ ಉಂಟುಮಾಡುವ ಹಾಗೆ ಗಾಳಿ ಬೀಸಿದಂತಾಯಿತು; ಎಲ್ಲೆಡೆಯೂ ಬೆಂಕಿ ಆವರಿಸಿದಂತಾಯಿತು; ಬೆಟ್ಟಗಳು ತುಂಬಿಕೊಂಡಂತಾಯಿತು; ಹೀಗೆ ಅರ್ಜುನನು ತನ್ನ ಶಸ್ತ್ರ ಕೌಶಲವನ್ನು ಪ್ರದರ್ಶಿಸಿದಾಗ ಸೇರಿದ ಎಲ್ಲರಲ್ಲಿಯೂ ಭಯ ಉಂಟಾಯಿತು.
ವ|| ಆಗಳಾ ಪರಾಕ್ರಮಧವಳನ ಶರಪರಿಣತಿಯಂ ಕಂಡು ದುರ್ಯೋಧನನ ಮೊಗಂ ತಲೆನವಿರ ಗಂಟಿಂ ಕಿಱಿದಾಗೆ ದ್ರೋಣ ಭೀಷ್ಮ ಕೃಪ ವಿದುರ ಪ್ರಭೃತಿಗಳ ಮೊಗಮರಲ್ದ ತಾವರೆಯಿಂ ಪಿರಿದಾಗೆ
ಆಗ ಅರ್ಜುನನ ಬಾಣವಿದ್ಯೆಯ ಕೌಶಲವನ್ನು ಕಂಡು ದುರ್ಯೋಧನ ಮುಖವು ಅವನ ತಲೆಗೂದಲ ಗಂಟಿಗಿಂತ ಕಿರಿದಾಯಿತು. ದ್ರೋಣ, ಭೀಷ್ಮ, ಕೃಪ, ವಿದುರರ ಮುಖಗಳು ಅರಳಿದ ತಾವರೆಗಿಂತಲೂ ದೊಡ್ಡದಾದವು.
ಕಂ|| ತೊಳಗುವ ತೇಜಂ ತೊಳತೊಳ
     ತೊಳಗುವ ದಿವ್ಯಾಸ್ತ್ರಮಮರ್ದ ಕೋದಂಡಮಸುಂ|
     ಗೊಳಿಸೆ ಮನಂಗೊಳಿಸೆ ಭಯಂ
     ಗೊಳಿಸೆ ಸಭಾಸದರನುಱದೆ ಕರ್ಣಂ ಬಂದಂ|| ೭೮ ||
(ತೊಳಗುವ ತೇಜಂ ತೊಳತೊಳ ತೊಳಗುವ ದಿವ್ಯಾಸ್ತ್ರಂ, ಅಮರ್ದ ಕೋದಂಡಂ, ಅಸುಂಗೊಳಿಸೆ ಮನಂಗೊಳಿಸೆ ಭಯಂ    ಗೊಳಿಸೆ ಸಭಾಸದರನ್, ಉಱದೆ ಕರ್ಣಂ ಬಂದಂ)
(ಕರ್ಣನ) ಬೆಳಗುವ ತೇಜಸ್ಸು, ಫಳಫಳ ಹೊಳೆಯುವ ದಿವ್ಯಾಸ್ತ್ರಗಳು, ಧರಿಸಿದ ಬಿಲ್ಲು ಇವೆಲ್ಲವೂ ಸಭಾಸದರಲ್ಲಿ ಸಂಚಲನ ಮೂಡಿಸಿದವು; ಅವರನ್ನು ಆಕರ್ಷಿಸಿದವು. ಅದರೊಂದಿಗೇ ಅವುಗಳನ್ನು ಕಂಡು ಅವರಿಗೆ ಭಯವೂ ಆಯಿತು. ಹೀಗೆ ಕರ್ಣನು ಸರಿಯಾಗಿ ವಿಚಾರ ಮಾಡದೆ ಆ ವ್ಯಾಯಾಮರಂಗವನ್ನು ಪ್ರವೇಶಿಸಿದನು.
ವ|| ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು ಶರಧಿಯಿಂ ದಿವ್ಯಾಸ್ತ್ರಂಗಳನುರ್ಚಿಕೊಂಡು-
(ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು, ಶರಧಿಯಿಂ ದಿವ್ಯಾಸ್ತ್ರಂಗಳನ್ ಉರ್ಚಿಕೊಂಡು)
 ಪ್ರವೇಶಿಸಿ, ದ್ರೋಣಾಚಾರ್ಯರಿಗೆ ನಮಸ್ಕರಿಸಿ, ಬತ್ತಳಿಕೆಯಿಂದ ದಿವ್ಯಾಸ್ತ್ರಗಳನ್ನು ಹೊರತೆಗೆದು-
ಕಂ|| ಅರಿಗನ ಬಿಲ್ಬಲ್ಮೆಯೊಳಂ
     ದೆರಡಿಲ್ಲದೆ ಬಗೆದ ಮುಳಿಸುಮೇವಮುಮೆರ್ದೆಯೊಳ್|
     ಬರೆದಿರೆ ತೋಱಿದನಾಯತ
     ಕರ ಪರಿಘಂ ಕರ್ಣನಾತ್ಮ ಶರಪರಿಣತಿಯಂ|| ೭೯ ||
(ಅರಿಗನ ಬಿಲ್ಬಲ್ಮೆಯೊಳ್ ಅಂದು ಎರಡಿಲ್ಲದೆ ಬಗೆದ ಮುಳಿಸುಂ ಏವಮುಂ ಎರ್ದೆಯೊಳ್ ಬರೆದಿರೆ ತೋಱಿದನ್ ಆಯತಕರ ಪರಿಘಂ ಕರ್ಣನ್ ಆತ್ಮ ಶರಪರಿಣತಿಯಂ)
ಯಾವ ದೃಷ್ಟಿಯಿಂದ ನೋಡಿದರೂ ಅರ್ಜುನನಿಗೆ ಕಡಿಮೆಯಾಗದಂಥ ಬಿಲ್ವಿದ್ಯಾಪರಿಣತಿಯನ್ನು - ತನ್ನ ಎದೆಯಲ್ಲಿ ಸಿಟ್ಟು, ಅಸಹನೆಗಳನ್ನು ತುಂಬಿಕೊಂಡೇ – ಪರಿಘದಂತೆ ನೀಳವಾದ ಕೈಗಳಿದ್ದ ಕರ್ಣನು ಅಲ್ಲಿ ಪ್ರದರ್ಶಿಸಿದನು.
ವ|| ಅಂತು ತೋಱಿಯುಮೆರ್ದೆಯ ಮುಳಿಸು ನಾಲಗೆಗೆವರೆ ಸೈರಿಸಲಾಱದೆ ವಿದ್ವಿಷ್ಟ ವಿದ್ರಾವಣನನಿಂತೆಂದಂ
(ಅಂತು ತೋಱಿಯುಂ ಎರ್ದೆಯ ಮುಳಿಸು ನಾಲಗೆಗೆ ಬರೆ ಸೈರಿಸಲಾಱದೆ ವಿದ್ವಿಷ್ಟ ವಿದ್ರಾವಣನನ್ ಇಂತೆಂದಂ)
ಹಾಗೆ ತೋರಿದ ಮೇಲೂ, ಸಹಿಸಿಕೊಳ್ಳಲಾರದೆ, ಹೊಟ್ಟೆಯ ಸಿಟ್ಟು ನಾಲಗೆಗೆ ಬಂದಂತೆ, ಅರ್ಜುನನನ್ನು ಕುರಿತು ಹೀಗೆಂದನು:
ಕಂ|| ಸಂಗತದಿನೀಗಳಿಂತೀ
     ರಂಗಮೆ ರಣರಂಗಮಾಗೆ ಕಾದುವಮಳವಂ|
     ಪೊಂಗದಿರಿದಿರ್ಚದೇಂ ಗಳ
     ರಂಗಂಬೊಕ್ಕಾಡುವಂತೆ ಪೆಂಡಿರೆ ಗಂಡರ್|| ೮೦ ||
(ಸಂಗತದಿನ್ ಈಗಳ್ ಇಂತು ಈ ರಂಗಮೆ ರಣರಂಗಂ ಆಗೆ ಕಾದುವಂ. ಅಳವಂ ಪೊಂಗದಿರ್, ಇದಿರ್ಚು! ಅದೇಂ ಗಳ! ರಂಗಂ ಪೊಕ್ಕು ಆಡುವಂತೆ ಪೆಂಡಿರೆ ಗಂಡರ್?)
ಎಲ್ಲರೂ ಸೇರಿರುವ ಈ ವ್ಯಾಯಾಮರಂಗದಲ್ಲಿ ನಾವಿಬ್ಬರೂ ಈಗಲೇ ಕಾದಾಡೋಣ. ಸುಮ್ಮನೆ ಪರಾಕ್ರಮವನ್ನು ಕೊಚ್ಚಿಕೊಳ್ಳಬೇಡ. ನನ್ನನ್ನು ಎದುರಿಸು. ರಂಗವನ್ನು ಹೊಕ್ಕು ಕುಣಿಯಲು ಗಂಡಸರೇನು ಹೆಣ್ಣುಗಳೆ?
ವ|| ಎಂಬುದುಮತಿರಥಮಥನನಿಂತೆಂದಂ
(ಎಂಬುದುಂ ಅತಿರಥಮಥನನ್ ಇಂತೆಂದಂ)
ಎಂದಾಗ ಅತಿರಥಮಥನನಾದ ಅರ್ಜುನನು ಹೀಗೆಂದನು:
ಕಂ|| ನೆರೆದ ಗುರುಜನಂಗಳ
     ಮಾನಿನಿಯರ ಮುಂದೆ ಕರ್ಣ ಪೊಲ್ಲದು ನುಡಿದೈ|
     ನೀನೆನ್ನೀ ನಿಡುದೋಳ್ಗಳ
     ತೀನಂ ಮೞ್ಗಿಸುವೆಯಪ್ಪೊಡಾನೊಲ್ಲದನೇ|| ೮೧ ||
(ಈ ನೆರೆದ ಗುರುಜನಂಗಳ, ಮಾನಿನಿಯರ ಮುಂದೆ, ಕರ್ಣ, ಪೊಲ್ಲದು ನುಡಿದೈ! ನೀನ್ ಎನ್ನ ಈ ನಿಡುದೋಳ್ಗಳ ತೀನಂ ಮೞ್ಗಿಸುವೆಯಪ್ಪೊಡೆ ಆನ್ ಒಲ್ಲದನೇ?)
ಕರ್ಣ! ಇಲ್ಲಿ ಸೇರಿದ ಗುರುಹಿರಿಯರ, ಹೆಂಗಸರ ಎದುರಿಗೆ ನೀನು ಕೆಟ್ಟ ಮಾತಾಡಿದೆ! ನನ್ನ ಈ ನಿಡುದೋಳುಗಳ ತೀಟೆಯನ್ನು ನೀನು ತೀರಿಸುವುದೇ ಹೌದಾದರೆ, ನಾನು ಬೇಡ ಎನ್ನುತ್ತೇನೆಯೇ?
ವ|| ಎಂಬುದುಂ ದ್ರೋಣನುಂ ಕೃಪನುಮೆಡೆಗೆ ವಂದು ಕರ್ಣನನಿಂತೆಂದರ್-
(ಎಂಬುದುಂ ದ್ರೋಣನುಂ ಕೃಪನುಂ ಎಡೆಗೆ ವಂದು ಕರ್ಣನನ್ ಇಂತೆಂದರ್)
ಎಂದಾಗ ದ್ರೋಣ, ಕೃಪರು ಮಧ್ಯೆ ಪ್ರವೇಶಿಸಿ ಕರ್ಣನಿಗೆ ಹೀಗೆಂದರು: 
ಕಂ|| ಏವದ ಮುಳಿಸಿನ ಕಾರಣ
     ಮಾವುದೊ ನೀಂ ನಿನ್ನ ತಾಯ ತಂದೆಯ ದೆಸೆಯಂ|
     ಭಾವಿಸದೆ ಕರ್ಣ ನುಡಿವಂತಾವುದು
     ಸಮಕಟ್ಟು ನಿನಗಮರಿಕೇಸರಿಗಂ|| ೮೨ ||
(ಏವದ, ಮುಳಿಸಿನ ಕಾರಣಂ ಆವುದೊ? ನೀಂ ನಿನ್ನ ತಾಯ ತಂದೆಯ ದೆಸೆಯಂ ಭಾವಿಸದೆ, ಕರ್ಣ, ನುಡಿವಂತೆ, ಆವುದು ಸಮಕಟ್ಟು ನಿನಗಂ ಅರಿಕೇಸರಿಗಂ?)
ಕರ್ಣ! ನಿನಗೆ ಯಾಕೆ ಈ ಅಸಮಾಧಾನ? ಯಾಕೆ ಈ ಸಿಟ್ಟು? ನಿನ್ನ ತಾಯಿತಂದೆಯರ ಸ್ಥಾನಮಾನ (ಹುಟ್ಟಿದ ಕುಲ?) ಯಾವುದೆಂದು ತಿಳಿಯದೆ ನೀನು ಮಾತಾಡುತ್ತಿದ್ದೀಯೆ! ಅರ್ಜುನನೂ ನೀನೂ ಯಾವುದರಲ್ಲಿ (ಹೇಗೆ) ಸಮಾನರು?
ವ|| ಎಂಬುದುಮಾ ಮಾತಿಂಗೆ ಮಱುವಾತುಗುಡಲಱಿಯದೆ ಪಂದೆಯಂ ಪಾವಡರ್ದಂತುಮ್ಮನೆ ಬೆಮರುತ್ತುಮಿರ್ದ ಕರ್ಣನಂ ದುರ್ಯೋಧನಂ ಕಂಡು ದ್ರೋಣನುಮಂ ಕೃಪನುಮನಿಂತೆಂದಂ-
( ಎಂಬುದುಂ ಆ ಮಾತಿಂಗೆ ಮಱುವಾತು ಕುಡಲ್ ಅಱಿಯದೆ ಪಂದೆಯಂ ಪಾವು ಅಡರ್ದಂತೆ ಉಮ್ಮನೆ ಬೆಮರುತ್ತುಂ ಇರ್ದ ಕರ್ಣನಂ ದುರ್ಯೋಧನಂ ಕಂಡು, ದ್ರೋಣನುಮಂ ಕೃಪನುಮನ್ ಇಂತೆಂದಂ)
ಎಂದಾಗ, ಆ ಮಾತಿಗೆ ಮರುಮಾತು ಕೊಡಲು ತಿಳಿಯದೆ, ಹೇಡಿಯ ಮೇಲೆ ಹಾವು ಬಿದ್ದಂತೆ, ಸುಮ್ಮನೆ ಬೆವರುತ್ತಲಿದ್ದ ಕರ್ಣನನ್ನು ದುರ್ಯೋಧನನು ನೋಡಿ, ದ್ರೋಣ, ಕೃಪರಿಗೆ ಹೀಗೆಂದನು:
ಕಂ|| ಕುಲಮೆಂಬುದುಂಟೆ ಬೀರಮೆ
     ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ ನೀ|
     ಮೊಲಿದೆಲ್ಲಿ ಪುಟ್ಟಿ ಬಳೆದಿರೊ
     ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ|| ೮೩ ||
(ಕುಲಂ ಎಂಬುದು ಉಂಟೆ ಬೀರಮೆ ಕುಲಮಲ್ಲದೆ? ಕುಲಮನ್ ಇಂತು ಪಿಕ್ಕದಿರಿಂ! ನೀಂ ಒಲಿದು ಎಲ್ಲಿ ಪುಟ್ಟಿ ಬಳೆದಿರೊ? ಕುಲಂ ಇರ್ದುದೆ ಕೊಡದೊಳಂ ಶರಸ್ತಂಬದೊಳಂ?)
(ಮನುಷ್ಯರಿಗೆ) ಕುಲ ಎಂಬುದು ಇದೆಯೆ? ಶೌರ್ಯವೇ ಮನುಷ್ಯರ ನಿಜವಾದ ಕುಲವಲ್ಲವೆ? (ನೀವು) ಕರ್ಣನ ಕುಲವನ್ನು ಹೀಗೆ ಕೆದಕಬೇಡಿ! ಅಷ್ಟಕ್ಕೂ, ನೀವು ನಿಮ್ಮ ಕುಲಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ದೊನ್ನೆಯಲ್ಲಿ ಹುಟ್ಟಿದವನಿಗೆ, ಹುಲ್ಲು ಜೊಂಡಿನಲ್ಲಿ ಹುಟ್ಟಿದವನಿಗೆ ಎಲ್ಲಿಯ ಕುಲ?
ವ|| ಎಂದು ನುಡಿದು ಕರ್ಣನನೀಗಳೆ ಕುಲಜನಂ ಮಾಡಿ ತೋರ್ಪೆನೆಂದು ಕೆಯ್ಯಂ ಪಿಡಿದೊಡಗೊಂಡು ಪೋಗಿ ಕನಕಪೀಠದ ಮೇಲೆ ಕುಳ್ಳಿರಿಸಿ ಕನಕಕಳಶದಲ್ ತೀವಿದಗಣ್ಯಪುಣ್ಯ ತೀರ್ಥೋದಕಂಗಳಂ ಚತುರ್ವೇದಪಾರಗರಿಂದಭಿಷೇಕಂಗೆಯ್ಸಿ
(
ಎಂದು ನುಡಿದು,ಕರ್ಣನನ್ ಈಗಳೆ ಕುಲಜನಂ ಮಾಡಿ ತೋರ್ಪೆನ್’ ಎಂದು ಕೆಯ್ಯಂ ಪಿಡಿದು ಒಡಗೊಂಡು ಪೋಗಿ, ಕನಕಪೀಠದ ಮೇಲೆ ಕುಳ್ಳಿರಿಸಿ, ಕನಕಕಳಶದಲ್ ತೀವಿದ ಅಗಣ್ಯಪುಣ್ಯ ತೀರ್ಥೋದಕಂಗಳಂ ಚತುರ್ವೇದ ಪಾರಗರಿಂದ ಅಭಿಷೇಕಂಗೆಯ್ಸಿ)
ಎಂದು, ‘ಕರ್ಣನನ್ನು ಈಗಲೇ ಕುಲಜನಾಗಿ ಮಾಡಿ ತೋರಿಸುತ್ತೇನೆ’ ಎಂದು ಹೇಳಿ, ಕರ್ಣನ ಕೈ ಹಿಡಿದು ಜೊತೆಗೆ ಕರೆದುಕೊಂಡು ಹೋಗಿ ಚಿನ್ನದ ಆಸನದ ಮೇಲೆ ಕುಳ್ಳಿರಿಸಿ, ಬಂಗಾರದ ಕಳಶಗಳಲ್ಲಿ ತುಂಬಿಸಿದ ಪುಣ್ಯ ತೀರ್ಥಗಳನ್ನು ನಾಲ್ಕು ವೇದಗಳನ್ನು ತಿಳಿದ ಪಂಡಿತರಿಂದ ಅಭಿಷೇಕ ಮಾಡಿಸಿ,
ಕಂ|| ಮಂಗಳವಱೆಗಳ್ ಶುಭ ವಚ
ನಂಗಳ್ ಚಮರೀರುಹಂಗಳಾ ಶ್ವೇತಚ್ಛ|
ತ್ರಂಗಳಮರ್ದೆಸೆಯೆ ಕರ್ಣಂ
ಗಂಗಮಹೀತಳ ವಿಭೂತಿಯಂ ನೆಱೆಯಿತ್ತಂ|| ೮೪ ||
(
ಮಂಗಳ ಪಱೆಗಳ್, ಶುಭ ವಚನಂಗಳ್,  ಚಮರೀರುಹಂಗಳ್, ಆ ಶ್ವೇತಚ್ಛತ್ರಂಗಳ್ ಅಮರ್ದು ಎಸೆಯೆ, ಕರ್ಣಂಗೆ ಅಂಗಮಹೀತಳ ವಿಭೂತಿಯಂ ನೆಱೆಯಿತ್ತಂ)
ಮಂಗಳವಾದ್ಯಗಳ ವಾದನ, ಸ್ವಸ್ತಿವಾಚನ, ಚಾಮರಸೇವೆ, ಬಿಳಿಯ ಕೊಡೆ ಇವುಗಳೆಲ್ಲ ಒಟ್ಟು ಸೇರಿ ಶೋಭಿಸುತ್ತಿರಲು, ದುರ್ಯೋಧನನು ಕರ್ಣನಿಗೆ ಅಂಗದೇಶದ ರಾಜ್ಯಾಧಿಪತ್ಯವನ್ನು ವೈಭವಪೂರ್ಣವಾಗಿ ಕೊಟ್ಟನು.
ವ|| ಅಂತಿತ್ತು ನಿತ್ಯದಾನಕ್ಕೆ ದೇವ ಸಬಳದ ಪದಿನೆಂಟು ಕೋಟಿ ಪೊನ್ನುಮನಿತ್ತು ನೀನೆನಗೊಂದನೀಯಲ್ವೇೞ್ಪುದೆಂದು-
(ಅಂತು ಇತ್ತು, ನಿತ್ಯದಾನಕ್ಕೆ ದೇವ ಸಬಳದ ಪದಿನೆಂಟು ಕೋಟಿ ಪೊನ್ನುಮನ್ ಇತ್ತು,ನೀನ್ ಎನಗೆ ಒಂದನ್ ಈಯಲ್ ವೇೞ್ಪುದು’ ಎಂದು-)
ಹಾಗೆ ಕೊಟ್ಟು, ನಿತ್ಯದಾನಕ್ಕೆಂದು ಹದಿನೆಂಟು ಕೋಟಿ ಹೊನ್ನನ್ನು ಕೊಟ್ಟು, ‘ನೀನು ನನಗೆ ಒಂದನ್ನು ಮಾತ್ರ ಕೊಡಬೇಕು’ ಎಂದು -
ಕಂ|| ಪೊಡಮಡುವರ್ ಜೀಯೆಂಬರ್
     ಕುಡು ದಯೆಗೆಯ್ಯೇಂ ಪ್ರಸಾದಮೆಂಬಿವು ಪೆಱರೊಳ್|
     ನಡೆಗೆಮ್ಮ ನಿನ್ನಯೆಡೆಯೊಳ್
     ನಡೆಯಲ್ವೇಡೆನಗೆ ಕೆಳೆಯನೈ ರಾಧೇಯಾ|| ೮೫ ||
(ಪೊಡಮಡುವರ್, ಜೀಯೆಂಬರ್, ಕುಡು, ದಯೆಗೆಯ್ ಏಂ ಪ್ರಸಾದಂ ಎಂಬಿವು ಪೆಱರೊಳ್ ನಡೆಗೆ, ಎಮ್ಮ ನಿನ್ನ ಎಡೆಯೊಳ್ ನಡೆಯಲ್ ಬೇಡ, ಎನಗೆ ಕೆಳೆಯನೈ ರಾಧೇಯಾ)
(ನನ್ನನ್ನು ಕಂಡಾಗ) ‘ನಮಸ್ಕಾರ ಮಾಡುತ್ತಾರೆ, ಜೀಯಾ ಎನ್ನುತ್ತಾರೆ, ಕೊಡು, ದಯಮಾಡು, ಎಂತಹ ಪ್ರಸಾದ! ಎನ್ನುತ್ತಾರೆ. ಆದರೆ ಇವೆಲ್ಲ ಬೇರೆಯವರ ವಿಷಯದಲ್ಲಿ ನಡೆಯಲಿ. ನಮ್ಮ, ನಿನ್ನ ಮಧ್ಯದಲ್ಲಿ ಇಂಥ ವ್ಯವಹಾರ ಬೇಡ. ನಾವಿಬ್ಬರೂ ಗೆಳೆಯರೆಂದು ತಿಳಿ’
ವ|| ಎಂದು ಬೇಡಿಕೊಂಡು ಕರ್ಣನಂ ಮುಂದಿಟ್ಟೊಡಗೊಂಡು ಪೋಗಿ ಧೃತರಾಷ್ಟ್ರಂಗಂ ಗಾಂಧಾರಿಗಂ ಪೊಡಮಡಿಸಿದಾಗಳ್
(
ಎಂದು ಬೇಡಿಕೊಂಡು ಕರ್ಣನಂ ಮುಂದಿಟ್ಟು ಒಡಗೊಂಡು ಪೋಗಿ ಧೃತರಾಷ್ಟ್ರಂಗಂ ಗಾಂಧಾರಿಗಂ ಪೊಡಮಡಿಸಿದಾಗಳ್)
ಉ|| ಇಂತು ಸುಯೋಧನಂ ನಿನಗೆ ಮಾಡಿದ ರಾಜ್ಯವಿಭೂತಿಗುಂತೆ ಮು
     ಯ್ವಾಂತಿರದಿರ್ ಗುಣಾರ್ಣವನಿನಸ್ತಮಯಕ್ಕಿದು ಸಾಲ್ಗುಮೀಗಳೆಂ|
     ಬಂತೆವೊಲಂದು ಮುಂದಱಿದು ತನ್ನ ಮಗಂಗೆ ಸಮಂತು ಬುದ್ಧಿವೇ
     ೞ್ವಂತೆವೊ[ಲತ್ತ]ಲಸ್ತಗಿರಿಯಂ ಮಱೆಗೊಂಡುದು ಸೂರ್ಯಮಂಡಲಂ|| ೮೬ ||                                              (‘ಇಂತು ಸುಯೋಧನಂ ನಿನಗೆ ಮಾಡಿದ ರಾಜ್ಯವಿಭೂತಿಗೆ ಉಂತೆ ಮುಯ್ವಾಂತು ಇರದಿರ್. ಗುಣಾರ್ಣವನಿನ್ ಅಸ್ತಮಯಕ್ಕೆ ಇದು ಸಾಲ್ಗುಂ ಈಗಳ್’ ಎಂಬಂತೆವೊಲ್ ಅಂದು ಮುಂದಱಿದು ತನ್ನ ಮಗಂಗೆ ಸಮಂತು ಬುದ್ಧಿ ಪೇೞ್ವಂತೆವೊಲ್ ಅಸ್ತಗಿರಿಯಂ ಮಱೆಗೊಂಡುದು ಸೂರ್ಯಮಂಡಲಂ)
‘ಸುಯೋಧನನು ನಿನಗೆ ಒಂದು ರಾಜ್ಯವನ್ನೇ ಕೊಟ್ಟ ಕಾರಣಕ್ಕೆ ನೀನು ಉಬ್ಬಬೇಡ, ಗುಣಾರ್ಣವನಿಂದ (ಕೌರವಾದಿಗಳು) ಅಸ್ತರಾಗುವುದಕ್ಕೆ ಇಂದಿನ ಪ್ರಕರಣವೇ ಸಾಕು’ ಎಂದು, ಮುಂದಾಗುವುದನ್ನು ಅರಿತ ಸೂರ್ಯನು ತನ್ನ ಮಗನಿಗೆ ಬುದ್ಧಿ ಹೇಳುತ್ತಿದ್ದಾನೋ ಎಂಬಂತೆ, ಸೂರ್ಯಮಂಡಲವು ಅಸ್ತಗಿರಿಯ ಹಿಂದೆ ಮರೆಯಾಯಿತು.
ವ|| ಆಗಳ್ ದುರ್ಯೋಧನನಂ ಮುಂದಿಟ್ಟೊಡಗೊಂಡು ಧೃತರಾಷ್ಟ್ರ ಕರ್ಣ ಶಲ್ಯ ಶಕುನಿ ಸೈಂಧವ ಪ್ರಭೃತಿಗಳ್ ನೆಲಂ ಮೂರಿವಿಟ್ಟಂತೆ ಸಭಾಕ್ಷೋಭಮಾಗೆ ತಳರ್ದು ನಾನಾವಿಧ ವಾಹನಂಗಳನೇಱಿ ನಿಜನಿವಾಸಂಗಳ್ಗೆ ಪೋದರಿತ್ತ ಧರ್ಮಪುತ್ರನಂ ಮುಂದಿಟ್ಟು ಭೀಮಾರ್ಜುನ ನಕುಲ ಸಹದೇವರುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಭೃತಿಗಳ್ ನಾನಾವಿಧ ವಾಹನಂಗಳನೇಱಿ ಬರೆ ಪುರಜನಂಗಳೆಲ್ಲಮೋರೋರ್ವರನೆ ಪಿಡಿಯಚ್ಚುವಿಡಿದು ನುಡಿಯೆ ಕೆಲರನಾಗತಮನಱಿವ ಬುದ್ಧಿಯೊಡೆಯರಿಂತೆಂಬರ್-
ಆಗ ದುರ್ಯೋಧನನನ್ನು ಮುಂದಿಟ್ಟುಕೊಂಡು, ಅವನೊಂದಿಗೆ ಧೃತರಾಷ್ಟ್ರ, ಕರ್ಣ, ಶಲ್ಯ, ಶಕುನಿ, ಸೈಂಧವ ಮುಂತಾದವರು ನೆಲವೇ ಬಾಯಿಬಿಟ್ಟಂತೆ ಸಭೆಯಲ್ಲಿ ಕ್ಷೋಭೆಯುಂಟು ಮಾಡಿ, ಅಲ್ಲಿಂದ ಹೊರಟು, ನಾನಾವಿಧವಾದ ವಾಹನಗಳನ್ನೇರಿ ತಮ್ಮ ತಮ್ಮ ಮನೆಗಳಿಗೆ ಹೋದರು.
ಇತ್ತ ಧರ್ಮರಾಜನನ್ನು ಮುಂದಿಟ್ಟುಕೊಂಡು ಭೀಮ, ಅರ್ಜುನ, ನಕುಲ, ಸಹದೇವರೂ, ಭೀಷ್ಮ, ದ್ರೋಣ, ಕೃಪ, ವಿದುರರೇ ಮೊದಲಾದವರೂ ಹಲವು ವಿಧದ ವಾಹನಗಳನ್ನು ಏರಿ ಬಂದರು. ಆಗ ಪುರಜನರೆಲ್ಲರೂ ತಮಗೆ ಸರಿ ಕಂಡದ್ದನ್ನು ಪಟ್ಟು ಹಿಡಿದು ತಂತಮ್ಮೊಳಗೆ ವಾದಿಸುತ್ತಿರಲು, ಮುಂದೆ ಬರಲಿರುವುದನ್ನು ತಿಳಿದ ಕೆಲವು ಬುದ್ಧಿವಂತರು ಹೀಗೆಂದರು:
(‘ಪಿಡಿಯಚ್ಚುವಿಡಿ’-
೧. ‘ಹಿಡಿದುಕೊಂಡಿದ್ದ ಲಾಂಛನಗಳಿಗೆ ಅನುಸಾರವಾಗಿ ಮಾತಾಡಲು’ –ಡಿ. ಎಲ್. ನರಸಿಂಹಾಚಾರ್;
೨. ‘ಹಿಡಿದುದನ್ನು ಬಲವಾಗಿ ಹಿಡಿ’, ದೃಢವಾಗಿ ನಂಬು – ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ;
೩. ‘ಪಟ್ಟು ಹಿಡಿ, ಬಲವಾಗಿ ಪ್ರತಿಪಾದಿಸು’ – ಡಾ. ಪಿ.ವಿ. ನಾರಾಯಣ;
೪. ‘ಗುರುತು ಹಿಡಿ’ – ಡಾ. ಎಲ್. ಬಸವರಾಜು.
 ‘ಪುರಜನಂಗಳೆಲ್ಲಂ ಓರೊರ್ವರನೆ ಪಿಡಿಯಚ್ಚುವಿಡಿದು’ ಎಂದು ಪ್ರಸ್ತುತ ಪ್ರಯೋಗ. ಈ ಪುರಜನರು ಪಾಂಡವ – ಕೌರವರ ಯುದ್ಧ ವಿದ್ಯಾಪ್ರದರ್ಶನವನ್ನು ನೋಡಿ ಮರಳುತ್ತಿದ್ದಾರೆ. ಆದ್ದರಿಂದ ಸಹಜವಾಗಿ ಅವರು ಯಾರ ಪ್ರದರ್ಶನ ಚೆನ್ನಾಗಿತ್ತು, ಯಾರು ನಿಜವಾಗಿಯೂ ವೀರರು ಎಂಬುದರ ಬಗ್ಗೆ ಚರ್ಚಿಸುತ್ತಿದ್ದಾರೆ. ಹಾಗೆ ಚರ್ಚಿಸುವಾಗ ಪ್ರತಿಯೊಬ್ಬನೂ ತನ್ನದೇ ಆದ ವಾದವನ್ನು ಮಂಡಿಸುತ್ತಾನೆ, ತನ್ನದೇ ಸರಿ ಎಂದು ಪಟ್ಟು ಹಿಡಿಯುತ್ತಾನೆ. ಮುಂದಿನ ಪದ್ಯದಲ್ಲಿನ ‘ಅವರ್ ಇವರ್ ಅನ್ನರ್ ಇನ್ನರ್ ಎನಬೇಡ, ಅರಿಕೇಸರಿಗೆ ಆಂಪನ್ ಇಲ್ಲ’ ಎಂಬ ಮಾತೂ, ಈ ಚರ್ಚೆಯ ಮುಂದುವರಿಕೆಯೇ ಆಗಿದೆ. ಹಾಗಾಗಿ ‘ಪಿಡಿಯಚ್ಚುವಿಡಿದು’ ಎಂಬುದಕ್ಕೆ ‘ಪಟ್ಟು ಹಿಡಿದು ಪ್ರತಿಪಾದಿಸು’ ಎಂಬ ಅರ್ಥವನ್ನು ಇಲ್ಲಿ ಇಟ್ಟುಕೊಂಡಿದೆ.)

ಕಾಮೆಂಟ್‌ಗಳಿಲ್ಲ: