ಭಾನುವಾರ, ಅಕ್ಟೋಬರ್ 21, 2012


ಬಂಟ್ವಾಳ, ಮಂಗಳೂರುಗಳ ಪಾಲಿಗೆ

ತಿರುಗಲಿದೆ ನೇತ್ರಾವತಿಯ ದಿಕ್ಕು!


ಗೆಳೆಯ ಅನಂತಾಡಿ ಗೋವಿಂದ ಭಟ್ಟರು ಇಮೈಲಿನಲ್ಲಿ ಏನು ಕಳಿಸಿದರೂ ಜೊತೆಗೆ ಈ ಮಾತು ಇದ್ದೇ ಇರುತ್ತದೆ:

ಕೊನೆಯ ಮರವನ್ನು ಕಡಿದುರುಳಿಸಿ ಆದಮೇಲೆ
ಕೊನೆಯ ನದಿಗೂ ವಿಷವುಣಿಸಿ ಮುಗಿದ ಮೇಲೆ
ಕೊನೆಗುಳಿದ ಒಂದೇ ಮೀನನ್ನು ತಿಂದು ಮುಗಿಸಿದ ಮೇಲೆ
ಆಗ, ಆಗ ನಿಮಗೆ ತಿಳಿಯುತ್ತದೆ: "ಹಣ ತಿನ್ನಲು ಬರುವುದಿಲ್ಲ"!

ನಾವು ಭಾರತೀಯರು ಗಡ್ಡಕ್ಕೆ ಬೆಂಕಿ ತಾಗಿದಾಗಷ್ಟೇ ಬಾವಿ ತೋಡುವ ಪೈಕಿ. ಆದರೂ ನಾನು ಊದುವ ಶಂಖ ಊದುವುದೇ.

ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ಬರುತ್ತದಂತೆ, ಅದು ಹ್ಯಾಗೆ ನದಿಯನ್ನು ಘಟ್ಟ ಹತ್ತಿಸುತ್ತಾರೆ? ಮಳೆಗಾಲದಲ್ಲಿ ಬೇಕಾದಷ್ಟು ಕೊಂಡೊಯ್ಯಲಿ - ಬೇಸಿಗೆಯಲ್ಲಿ ನಮಗೇ ಕುಡಿಯಲು ಇಲ್ಲಿ ನೀರಿಲ್ಲ  ಇತ್ಯಾದಿ ಮಾತುಗಳು, ಅಲ್ಲಲ್ಲಿ ಈ ಬಗ್ಗೆ ಸಭೆಗಳು, ಚರ್ಚೆಗಳು ಆಗುತ್ತಿರುವಂತೆಯೇ ಬಂಟ್ವಾಳ-ಮಂಗಳೂರುಗಳ ಪಾಲಿಗೆ ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ಬಂದಾಗಿದೆ. ಎಂ. ಎಸ್. ಇ. ಜಡ್. ಕಂಪೆನಿ ಎಂಬ ಖಾಸಗಿ ಸಂಸ್ಥೆ ನೆನೆಸಿದ ಹಾಗೇ ಎಲ್ಲ ನಡೆದರೆ, ಮುಂದಿನ ಬೇಸಗೆಯಲ್ಲೇ ನೇತ್ರಾವತಿ ಶಂಬೂರಿನ ಎ ಎಂ ಆರ್ ಅಣೆಕಟ್ಟಿನಿಂದ ಕಂಪೆನಿಯ ಕೈಗಾರಿಕಾನೆಲೆಯ ಕಡೆಗೆ ದಿಕ್ಕು ಬದಲಿಸುತ್ತದೆ. ಅದಕ್ಕೆ ಬೇಕಾದ ಪೈಪು ಹಾಕಿಕೊಡಲು, ದಾರಿ ಬಿಟ್ಟುಕೊಡಲು ಬಂಟ್ವಾಳ ಪುರಸಭೆಯ ಕಂಬಗಳೇ ಬೆಂಬಲವಾಗಿ ನಿಂತಂತಿದೆ. ಮಂಗಳೂರಿನ ಕಾರ್ಪೋರೇಟರುಗಳು, ತುಂಬೆಯಲ್ಲಿ ಅಣೆಕಟ್ಟಿನ ಎತ್ತರ ಏರಿಸಿ, ಇಲ್ಲದ ನೀರನ್ನು ಮಂಗಳೂರಿಗೆ ಒಯ್ಯುವ ಭ್ರಮೆಯಲ್ಲಿದ್ದಾರೆ. ಎ.ಎಂ.ಆರ್. ಅಣೆಕಟ್ಟಿನ ಸಮೀಪ ನಡೆಯುತ್ತಿರುವ ಕಾಮಗಾರಿಯನ್ನು ಕಾಣಲು ಅವರಿಗೆ ಮನಸೇ ಇಲ್ಲ.

ಏನು ನಡೆಯುತ್ತಿದೆ?


ನೀರು ಸಾಗಿಸಲು ಹಾಕಿರುವ್ ಪೈಪ್ ಲೈನ್ ಕಾಮಗಾರಿಗೆ ಸಂಬಂಧಿಸಿ ಕಂಪೆನಿ ಎಂಬ ಪುಂಡುಹೋರಿ ಸರಕಾರ ವಿಧಿಸಿದ ಹಲವಾರು ನಿಬಂಧನೆಯ ಬೇಲಿಗಳನ್ನು ಮುರಿದೊಗೆದು ಮುನ್ನುಗ್ಗಿದೆ. ಈ ಬೇಲಿಗಳನ್ನು ಕಾಯಲೆಂದೇ ಇರುವ ಸರಕಾರಿ ಅಧಿಕಾರಿಗಳು ಕಂಡರೂ ಕಾಣದಂತೆ "ನಮಗೇಕೆ ದೊಡ್ಡವರ ಸಹವಾಸ" ಎಂದು ಸುಮ್ಮನೆ ಕೂತಿದ್ದಾರೆ. ಕೆಲಸ ಮಾಡಿದರೂ, ಮಾಡದಿದ್ದರೂ, ಹೇಗೆ ಮಾಡಿದರೂ ತಿಂಗಳ ಕೊನೆಗೆ ಸಂಬಳ ಗ್ಯಾರಂಟಿ, ಸೆರ್ವೀಸ್ ಮುಗಿದರೆ ಪೆನ್ಷನ್ ಗ್ಯಾರಂಟಿ ಎಂದಾದರೆ, ನಾನೂ ಹಾಗೆಯೇ ಮಾಡುವುದು ಅನ್ನಿ. ಇನ್ನು ಈ ಸರಕಾರಿ ಅಧಿಕಾರಿಗಳನ್ನು ಎಚ್ಚರದಲ್ಲಿಡಬೇಕಾದ ಪ್ರಜಾಪ್ರಭುಗಳಾದ ನಾವು ಟಿವಿ-ಮೂವಿ ನೋಡಿಕೊಂಡು ಕುರ್ಕುರೆ ಮೆಲ್ಲುತ್ತ ಹಾಯಾಗಿದ್ದೇವೆ. ನಾವು ಸಮಸ್ಯೆಗೆ ಪರಿಹಾರ ಹುಡುಕುವುದು ಪೂರ್ತಿಯಾಗಿ ನೀರು ನಿಂತ ಮೇಲೆಯೇ ಆಗಿರಬಹುದೆ?

ಎರಡು ನಿರ್ದಿಷ್ಟ ಪ್ರಕರಣಗಳು:


ನೇತ್ರಾವತಿಯ ನೀರು ತಿರುಗಿಸಲು ಅನುಮತಿ ಕೊಡುವಾಗ ಸರಕಾರ ಕಂಪೆನಿಗೆ ಹತ್ತೊಂಬತ್ತು ನಿಬಂಧನೆಗಳನ್ನು ವಿಧಿಸಿದೆ. ಅವುಗಳ ಪೈಕಿ ಆರನೆಯ ನಿಬಂಧನೆ ಇದು: "ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು". ಕಳೆದ ಎರಡು-ಎರಡೂವರೆ ವರ್ಷಗಳಿಂದ ಈ ನಿಬಂಧನೆಯನ್ನು ಕಂಪೆನಿ ಪಾಲಿಸಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾನು ಹೆಣಗಿದ್ದೇನೆ. ಇತ್ತೀಚೆಗೆ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ.

1. ಕಂಡರೂ ನೋಡದ ಅರಣ್ಯ ಇಲಾಖೆ


ಎಂ ಎಸ್ ಇ ಜಡ್ ಕಂಪೆನಿ ಪೈಪ್ ಲೈನ್ ಅಳವಡಿಸುವ ಮೊದಲು ನಿಮ್ಮ ಇಲಾಖೆಯ ಅನುಮತಿ ಪಡೆದಿದೆಯೇ ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ "ಇಲ್ಲ" ಎಂಬ ಸ್ಪಷ್ಟ ಉತ್ತರವನ್ನೇ ನನಗೆ ನೀಡಿದೆ. 14-10-2010 ರಲ್ಲಿಯೇ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬರೆದ ಪತ್ರದಲ್ಲಿ ಹೀಗೆನ್ನುತ್ತಾರೆ: ".... ಎಂ ಎಸ್ ಇ ಜಡ್ ಕಂಪೆನಿಯು ಯೋಜನೆ ಪ್ರಾರಂಭಿಸುವ ಮುನ್ನ, ಮರಗಳನ್ನು ಕಡಿಯುವ ಕುರಿತು ಅರಣ್ಯ ಇಲಾಖೆಗೆ ತಮ್ಮ ಯೋಜನೆಯ ಪ್ರಸ್ತಾವನೆಯನ್ನು ಎಲ್ಲಾ ದಾಖಲೆಗಳೊಂದಿಗೆ ಈ ಕಛೇರಿಗೆ ಸಲ್ಲಿಸಿದ ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ವರದಿ ಸಲ್ಲಿಸಿದ ನಂತರವೇ ಅವಶ್ಯ ಮತ್ತು ಅನಿವಾರ್ಯತೆಗಳನ್ನು ಪರಾಂಬರಿಸಿ ಮರಗಳನ್ನು ಕಡಿಯಲು ಅನುಮತಿ ನೀಡಲಾಗುತ್ತದೆ".
ಎಂದರೆ, ಕಂಪೆನಿಯೇ ಆಗಲಿ, ಯಾರೇ ಆಗಲಿ ಮರ ಕಡಿಯಬೇಕಾದರೆ ಕಾನೂನು ಪ್ರಕಾರ ಏನೇನು ಮಾಡಬೇಕು ಎಂಬುದನ್ನು ಇಲ್ಲಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಕಂಪೆನಿ ಅಂದಾಜು ಮೂವತ್ತೈದು ಕಿ.ಮೀ. ಉದ್ದಕ್ಕೆ ಪೈಪುಗಳನ್ನು ಹಾಕಬೇಕು. ಅಷ್ಟೂ ಉದ್ದಕ್ಕೆ ಯಾವ ಯಾವ ಮರಗಳಿವೆ, ಅದರ ಮಾಲಕರು ಯಾರು, ಅದಕ್ಕೆ ದಾಖಲೆಗಳು ಎಲ್ಲಿವೆ ಇತ್ಯಾದಿಗಳನ್ನೆಲ್ಲ ಹುಡುಕುತ್ತ ಲೆಕ್ಕ ಹಾಕುತ್ತ ಕೂತರೆ ಅದಕ್ಕೇ ಒಂದೆರಡು ವರ್ಷ ಹೋದೀತು. ಇನ್ನು ಅದನ್ನು ಪರಾಂಬರಿಸಿ ಅರಣ್ಯ ಇಲಾಖೆ ಅನುಮತಿ ನೀಡಲು ಮತ್ತೊಂದು ವರ್ಷವಾದರೂ ಬೇಡವೆ? ಹೀಗೆ ಖಾಲಿ ಒಂದು ಅನುಮತಿಗೆ ವರ್ಷಗಟ್ಟಳೆ ಕಾಯುವುದಕ್ಕೆ ಕಂಪೆನಿ ಏನು ಕತ್ತೆಯೆ? ಹಾಗಾದರೆ ಏನು ಮಾಡುವುದು? ಮಾಡುವುದೇನು? ಜೆಸಿಬಿ ತನ್ನಿ, ಎಲ್ಲಿ ಬೇಕೋ ಅಲ್ಲಿ  ನುಗ್ಗಿಸಿ, ಯಾವ ಮರ ಬೇಕೋ ಅದನ್ನು ಬೀಳಿಸಿ, ಕಾಲುವೆ ತೆಗೆಯಿರಿ, ಪೈಪ್ ಹಾಕಿಕೊಂಡು ಹೋಗಿ! ಮತ್ತೆ ಸರಕಾರ, ಆದೇಶ, ನಿಬಂಧನೆ, ಅರಣ್ಯ ಇಲಾಖೆ? ಅವನ್ನೆಲ್ಲ ಮೂಟೆ ಕಟ್ಟಿ ಹೊಳೆಗೆ ಬಿಸಾಡಿ!
ಈಗ ಆಗಿರುವುದು ಇಷ್ಟೇ! ಕಂಪೆನಿ ಪೈಪ್ ಲೈನ್ ಅಳವಡಿಸುವ ತನ್ನ ಕೆಲಸವನ್ನು ಹೆಚ್ಚು ಕಡಿಮೆ ಮುಗಿಸಿ ಆಗಿದೆ. ಹಾಗೆ ಮಾಡುವಾಗ ಅಡ್ಡ ಬಂದ ನೂರಾರು - ಸಾವಿರಾರು ಮರಗಳು ಧರೆಗುರುಳಿವೆ! ದುರದೃಷ್ಟವಶಾತ್ ಹಾಗೆ ಉರುಳಿದ ಮರಗಳ ಪೈಕಿ ಒಂದಾದರೂ, ಪ್ರತಿ ದಿನ ಎಂಬಂತೆ ಅರಣ್ಯದಲ್ಲಿ ಗಸ್ತು ತಿರುಗುವ ಸಿಬ್ಬಂದಿಗಳಿಗಾಗಲೀ, ಅರಣ್ಯ ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳಿಗಾಗಲೀ ಕಣ್ಣಿಗೇ ಬಿದ್ದಿಲ್ಲ! ಹಾಗೆ ಕಾಣದಂತೆ ಯಾರು ಅವರ ಕಣ್ಣಿನಲ್ಲಿ ಮಂಕುಬೂದಿ ಎರಚಿದರೋ? ಪ್ರತಿತಿಂಗಳೂ ಸಂಬಳ ಪಡೆದೂ, ಇಂಥದ್ದನ್ನು ಕಾಣದೆ ಇರಲು ಇಲಾಖೆಯ ಅಧಿಕಾರಿಗಳಿಗೆ ಮನಸ್ಸಾದರೋ ಹೇಗೆ ಬಂತೋ?






ಕಂಪೆನಿ ಹೀಗೆ ಕೆಡವಿದ ಮರಗಳ ಪೈಕಿ ಕೆಲವೇ ಕೆಲವು ಮರಗಳು ಕಳೆದ ಫೆಬ್ರವರಿ ಮಾರ್ಚ್ ಸಮಯದಲ್ಲಿ ಶನಿಶನಿ ಅಂತ ನನ್ನ ಕಣ್ಣಿಗೆ ಕಂಡವು. ನಾನು ಬಂಟ್ವಾಳದ ಅರಣ್ಯ ಇಲಾಖೆಗೆ ಅವುಗಳ ಫೋಟೋ ಸಮೇತ ಒಂದು ದೂರು ಸಲ್ಲಿಸಿದೆ. ಅಲ್ಲಿಂದ ಹೀಗೆ ಉತ್ತರ ಬಂತು:"ಬಂಟ್ವಾಳ-ಮೂಡಬಿದ್ರೆ ರಸ್ತೆ ಬದಿಯಲ್ಲಿ ಮಂಗಳೂರಿನ ಎಸ್ ಇ ಜಡ್ ವತಿಯಿಂದ ನೀರು ಸರಬರಾಜು ಮಾಡುವ ಪೈಪ್ ಲೈನ್ ಅಳವಡಿಸುವರೇ ರಸ್ತೆ ಬದಿಯ ಮರಗಳನ್ನು ಅನಧಿಕೃತವಾಗಿ ಕಡಿದಿರುವ ಬಗ್ಗೆ ಸದ್ರಿ ಕಂಪೆನಿಯ ಗುತ್ತಿಗೆದಾರರಾದ ಶ್ರೀ ಕೃಷ್ಣನಂದ ಬಿನ್ ಕೆ.ಪಿ.ಸ್ವಾಮಿ ಕೊಯಾ ಕೊ ಕಂಪೆನಿ ಹೈದರಾಬಾದ್ ಆಂದ್ರಪ್ರದೇಶ ಎಂಬುವರ ವಿರುದ್ಧ ಈ ಕಚೇರಿಯಲ್ಲಿ ಅರಣ್ಯ ತಕ್ಷೀರು 1/2012-13ರಂತೆ ತಕ್ಷೀರು ದಾಖಲಿಸಿಕೊಂಡು ಸೊತ್ತುಗಳನ್ನು ಸರಕಾರದ ಪರ ಅಮಾನತು ಪಡಿಸಿದ್ದು, ಸದ್ರಿ ತಕ್ಷೀರಿಗೆ ಸಂಬಂಧಿಸಿ ಸದ್ರಿಯವರಿಂದ ರೂ. 5000/- ನ್ನು ದಂಡನೆಯಾಗಿ ವಸೂಲು ಮಾಡಿ ಸರಕಾರಕ್ಕೆ ಜಮಾ ಮಾಡಲಾಗಿದೆ. ಇನ್ನು ಮುಂದೆ ಸದ್ರಿ ಪೈಪ್ ಲೈನ್ ಕಾಮಗಾರಿ ಮಾಡುವಾಗ ಯಾವುದೇ ಮರಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಲು ಹಾಗೂ ತೀರಾ ಅಗತ್ಯ ಎಂದು ಕಂಡುಬಂದಲ್ಲಿ ಈ ಬಗ್ಗೆ ಸದ್ರಿ ಮರ ಕಡಿಯಲು ಇಲಾಖೆಯಿಂದ ಅನುಮತಿ ಪಡೆದುಕೊಳ್ಳಲು ಸೂಚಿಸಿ, ಎಚ್ಚರಿಕೆ ನೀಡಲಾಗಿದೆ."
ಈ ಪತ್ರದಿಂದ ಒಂದು ಅಂಶವಂತೂ ಸ್ಫಟಿಕ ಸ್ಪಷ್ಟವಾಗುತ್ತದೆ: ಎಂ ಎಸ್ ಇ ಜಡ್ ಕಂಪೆನಿ ಕಾಮಗಾರಿ ಪ್ರಾರಂಭಿಸುವ ಮೊದಲು  ಅರಣ್ಯ ಇಲಾಖೆಯಿಂದ ಅನುಮತಿ ಪಡೆದೇ ಇಲ್ಲ!

2. ಒಂದು ಕೇಳಿದರೆ ಮತ್ತೊಂದು ಕೊಟ್ಟು ನೋಡಿದ ಮಾಲಿನ್ಯ ನಿಯಂತ್ರಣ ಮಂಡಳಿ


ನಿಬಂಧನೆಯ ಪ್ರಕಾರ ಕಂಪೆನಿ ಕಾಮಗಾರಿ ಪ್ರಾರಂಭಿಸುವ ಮೊದಲು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನು ಪಡೆಯಬೇಕು. ಆದರೆ ಇಲ್ಲೂ ಅದೇ ಕತೆ. ಅನುಮತಿ ಪಡೆಯುವುದೆಂದರೆ ಅದಕ್ಕೆ ನೂರೆಂಟು ವಿಧಾನಗಳನ್ನು ಅನುಸರಿಸಬೇಕು. ಮುಖ್ಯವಾಗಿ ಯೋಜನೆ ಎಲ್ಲೆಲ್ಲಿ ಅನುಷ್ಠಾನಗೊಳ್ಳುತ್ತದೋ ಆ ಗ್ರಾಮಗಳ ಜನರ ಸಾರ್ವಜನಿಕ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆಯಬೇಕು. ಸರಪಾಡಿಯಲ್ಲಿ ಶುರುವಾಗಿ ಮಣಿಹಳ್ಳ, ಜಕ್ರಿಬೆಟ್ಟು, ಲೊರೆಟ್ಟೋಪದವು, ಸೊರ್ನಾಡು, ಕುಪ್ಪೆ ಪದವು, ಎಡಪದವು, ಕೈಕಂಬ, ಬಜ್ಪೆ ಹೀಗೆ ಹಲವು ಗ್ರಾಮಗಳ ಮೂಲಕ ಪೈಪ್ ಲೈನ್ ಹಾದುಹೋಗುತ್ತದೆ. ಈ ಎಲ್ಲ ಗ್ರಾಮಗಳ ಜನರನ್ನು ಒಂದು ಕಡೆ ಸೇರಿಸುವುದು, ಸಭೆ ಮಾಡುವುದು ಇವೆಲ್ಲ ಆಗುವ ಹೋಗುವ  ಕೆಲಸವೆ? ಹಾಗಾದರೆ ಉಪಾಯ? ಉಪಾಯ ಏನಿಲ್ಲ! ಅನುಮತಿಗೆ ಗೋಲಿ ಹೊಡೆಯಿರಿ! ಕೇಳುವ ಮಗ ಯಾರಿದ್ದಾನೆ?


ನಾನು ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಪತ್ರ ವ್ಯವಹಾರ ಶುರು ಮಾಡಿದೆ. ಮಂಡಳಿಯ ಮಂಗಳೂರಿನ ಪ್ರಾದೇಶಿಕ ಕಚೇರಿ ಕಂಪೆನಿಯು 1800 ಎಕ್ರೆ ಪ್ರದೇಶದಲ್ಲಿ ನಿರ್ಮಿಸಲಿರುವ ಕೈಗಾರಿಕಾ ಸ್ಥಾವರಕ್ಕೆ  ಕೇಂದ್ರ ಕಚೇರಿ ನೀಡಿರುವ ಅನುಮತಿಯನ್ನು ನನಗೆ ತೋರಿಸಿತು. ನಾನು ಬೆಂಗಳೂರಿನ ಕೇಂದ್ರ ಕಚೇರಿಗೇ ಬರೆದೆ. ಅವರೂ ಅದೇ ಅನುಮತಿಯನ್ನು ನನ್ನೆದುರು ಒಡ್ಡಿದರು. ನಾನು ವಿಷಯವನ್ನು ನಿಖರವಾಗಿ ವಿವರಿಸಿ ಅವರಿಗೆ ಪುನಃ ಪತ್ರ ಬರೆದೆ. ಕೇಂದ್ರ ಕಚೇರಿ ನನ್ನ ಅರ್ಜಿಯನ್ನು ಮಂಗಳೂರಿನ ಪ್ರಾದೇಶಿಕ ಕಚೇರಿಗೇ ತಿರುಗಿಸಿತು! ಮಂಗಳೂರು ಪ್ರಾದೇಶಿಕ ಕಚೇರಿಯವರು ನನಗೆ ಹೀಗೆ ಉತ್ತರಿಸಿದರು: "..... ಸರ್ಕಾರದ ಆದೇಶ ಸಂಖ್ಯೆ ಜಸಂಇ 13 ವಿಬ್ಯಾಇ2006 ಬೆಂಗಳೂರು ದಿನಾಂಕ 17-09-2007 ಕ್ಕೆ ಸಂಬಂಧಿಸಿದ ಯೋಜನೆಗೆ... ಮಾಹಿತಿಯನ್ನು ನೀಡುವಂತೆ ಈ ಕಚೇರಿಗೆ ವರ್ಗಾಯಿಸಿದ್ದು ಹಾಗೂ ತಮ್ಮ ಉಲ್ಲೇಖಿತ ಪತ್ರದಲ್ಲಿ ಕೇಳಿರುವ ಮಂಡಳಿಯ ಅನುಮತಿ ಪತ್ರ ಈ ಕಚೇರಿಯಲ್ಲಿ ಲಭ್ಯವಿರುವುದಿಲ್ಲ"
ಅರ್ಥಾತ್ ಕಂಪೆನಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನೂ ಪಡೆದಿಲ್ಲ!
ಈ ನಡುವೆ ಮಂಗಳೂರಿನ ಪ್ರಾದೇಶಿಕ ಕಚೇರಿಗೆ ನನ್ನ ಅರ್ಜಿಯನ್ನು ವರ್ಗಾಯಿಸಿದ ಕೇಂದ್ರ ಕಚೇರಿ ತನ್ನ ಕೆಲಸ ಮುಗಿಯಿತೆಂದು ಸುಮ್ಮನೆ ಕೂರಬೇಕಾಗಿತ್ತಷ್ಟೆ? ಆಶ್ಚರ್ಯದ ಮಾತೆಂದರೆ ಅದು ಹಾಗೆ ಮಾಡಲಿಲ್ಲ! 16-10-2012 ರಂದು ನನಗೆ ಬರೆದ ಪತ್ರದಲ್ಲಿ ಅದು ಈ ಮಾಹಿತಿಯನ್ನು ನೀಡಿದೆ: "1. ಮಂಡಳಿಯಲ್ಲಿ ನೀಡಿರುವ ಸಮ್ಮತಿ ಪತ್ರದಲ್ಲಿ ನೀರಿನ ಮೂಲಗಳನ್ನು ಮಾತ್ರ ನಮೂದಿಸಿರುತ್ತದೆ ಎಂದು, ಸರ್ಕಾರಿ ಆಜ್ಞೆ 17-09-2007ರಲ್ಲಿ ಪ್ರಸ್ತಾವಿತವಾದ ನೇತ್ರಾವತಿ ಹಾಗೂ ಗುರುಪುರ ನದಿಯಿಂದ ನೀರನ್ನು ಸಂಗ್ರಹಿಸಿ ಬಳಸುವ ಯೋಜನೆಗೆ ಸಮ್ಮತಿಗಾಗಿ ಮಂಡಳಿಗೆ ಪ್ರತ್ಯಕ ಅರ್ಜಿಯನ್ನು ಸಲ್ಲಿಸಿರುವುದಿಲ್ಲ"
ಕಂಪೆನಿಯು ಅರ್ಜಿಯನ್ನೇ ಸಲ್ಲಿಸಿಲ್ಲವೆಂದ ಮೇಲೆ ಮಂಡಳಿಯು ಅನುಮತಿ ನೀಡುವ ಪ್ರಶ್ನೆಯೇ ಇಲ್ಲವಷ್ಟೆ?

ಬರೆಯಬಹುದು ಅಥವಾ ಕಾಯಬಹುದು!


ಲೇಖನದ ಪ್ರಾರಂಭದಲ್ಲಿ ಹೇಳಿರುವ ಸರಕಾರಿ ಆದೇಶದ 19ನೇ (ಹಾಗೂ ಕೊನೆಯ) ನಿಬಂಧನೆ ಹೀಗಿದೆ: "ಸಂಸ್ಥೆಯು ಮೇಲಿನ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ ಅನುಮತಿಯನ್ನು ಹಿಂದಕ್ಕೆ ಪಡೆಯಲಾಗುವುದು".
ಕಂಪೆನಿಯು ನಿಬಂಧನೆಗಳನ್ನು ಉಲ್ಲಂಘಿಸಿರುವುದಕ್ಕೆ ದಾಖಲೆಗಳ ಆಧಾರವನ್ನು ಕೊಟ್ಟು "ಅಧೀನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ(ತಾಂತ್ರಿಕ-೪), ವಿಕಾಸ ಸೌಧ, ಬೆಂಗಳೂರು ಇವರಿಗೆ ನಾನು  ಪತ್ರ ಬರೆದಿದ್ದೇನೆ. ಕಂಪೆನಿಗೆ ನೀರು ಸಾಗಿಸಲು ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಕೋರಿದ್ದೇನೆ. ನನ್ನೊಂದಿಗೆ ಸಹಮತ ಹೊಂದಿದ್ದರೆ ನೀವೂ ಹಾಗೆ ಮಾಡಬಹುದು. ನನ್ನ ಹತ್ತಿರ ಇರುವ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಕೊಡಲು ನಾನು ತಯಾರಿದ್ದೇನೆ. ಅಥವಾ ಕುಡಿಯಲು ನೀರು ಸಿಕ್ಕದ ಹಾಗೆ ಆಗುವವರೆಗೆ ಕಾಯಲೂಬಹುದು.

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಪ್ರಜೆಗಳು ಮಂದ ಬುಧ್ದಿಯವರಾದರೆ ಮಂತ್ರಿಗಳು ದುಷ್ಟಬುಧ್ದಿಯವರಾಗುತ್ತಾರೆ. ನಾವು ಗೀತೆಯನ್ನು ನಂಬಿದವರು ’ಆಗುವದು ಆಗಿಯೇ ತೀರುತ್ತದೆ, ಆಗುವದೆಲ್ಲಾ ಒಳ್ಳೆಯದಕ್ಕೆ, ಮತ್ತೆ ನಾವು ನಿಮಿತ್ತ ಮಾತ್ರರು ಸ್ವಾಮಿ.
ಈಗಲಾದರೂ ಜಾಗ್ರತವಾಗುತ್ತಾರೆ ಎನ್ನುವ ಆಶಾವಾದ ಇನ್ನೂ ಇದೆ.
ನಾರಾಯಣ ಯಾಜಿ

Shyams Art World ಹೇಳಿದರು...

Very dangerous news...
please send these to various news papers

Shyam
Cartoonist

Sathish K S ಹೇಳಿದರು...

Sir, I appreciate your work. Please send those documents to news papers and post your experiences.