ಶನಿವಾರ, ಡಿಸೆಂಬರ್ 19, 2009

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ- ಭಾಗ ೨

ಕಾರ್ಪೋರೇಟ್ ಕಂಪೆನಿಗಳು ತಮ್ಮ ಕೆಲಸವನ್ನು ತುಂಬಾ ವ್ಯವಸ್ಥಿತವಾಗಿಯೂ, ನಿಖರವಾಗಿಯೂ ಮಾಡುತ್ತವೆ, ಖಚಿತವಾದ ಪೂರ್ವ ಲೆಕ್ಕಾಚಾರ ಇಲ್ಲದೆ ಯಾವ ವ್ಯವಹಾರಕ್ಕೂ ಮುಂದುವರಿಯುವುದಿಲ್ಲ ಎಂದೆಲ್ಲ ನಾನು ಭಾವಿಸಿದ್ದೆ. ಆದರೆ ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿಯು ನನ್ನ ನಂಬಿಕೆ ಬುಡಭದ್ರವಿಲ್ಲದ್ದು ಎಂದು ಸಾಧಿಸಿ ತೋರಿಸಿದೆ.
ಹಿಂದಿನ ನನ್ನ ಲೇಖನದಲ್ಲಿ ಎಂ ಎಸ್ ಇ ಝಡ್ ವಿರುದ್ಧ ಮಾಹಿತಿ ಹಕ್ಕು ಆಯುಕ್ತರಿಗೆ ದೂರು ಸಲ್ಲಿಸಿದ ವಿಷಯ ಹೇಳಿದ್ದೆ. ತಾ. ೧೭-೧೨-೨೦೦೯ರಂದು ಕಂಪೆನಿ ನಾನು ಕೇಳಿದ ಮೂರು ಮಾಹಿತಿಗಳಲ್ಲಿ ಎರಡನ್ನು ಕೊಟ್ಟು, ಕೊಳಚೆ ನೀರು ಸಂಸ್ಕರಣದ ಕುರಿತ ಮಾಹಿತಿಯನ್ನು ಮಂಗಳೂರು ಮಹಾನಗರಪಾಲಿಕೆಯಿಂದ ಪಡೆಯಲು ನನಗೆ ಸೂಚಿಸಿದೆ. ಇದಕ್ಕೆ ನಾನು ಹೀಗೆ ಉತ್ತರ ಬರೆದಿದ್ದೇನೆ: "ಮಾಹಿತಿ ಹಕ್ಕು ೨೦೦೫ರ ಪ್ರಕಾರ ಒಂದು ವೇಳೆ ಮಾಹಿತಿ ನಿಮ್ಮಲ್ಲಿ ಇಲ್ಲದಿದ್ದರೆ ಅದು ಎಲ್ಲಿ ದೊರೆಯುತ್ತದೆಯೋ ಅಲ್ಲಿಗೆ ನನ್ನ ಅರ್ಜಿಯನ್ನು ಐದು ದಿನಗಳ ಒಳಗೆ ಕಳಿಸಿಕೊಟ್ಟು, ಹಾಗೆ ಮಾಡಿರುವುದನ್ನು ನನಗೆ ತಿಳಿಸುವುದು ನಿಮ್ಮದೇ ಕರ್ತವ್ಯವಾಗಿರುತ್ತದೆ. ಆದ್ದರಿಂದ ನನ್ನ ಅರ್ಜಿಯನ್ನು ನೀವೇ ಮಂಗಳೂರು ಮಹಾನಗರಪಾಲಿಕೆಗೆ ಕಳಿಸಿಕೊಡಬೇಕಾಗಿ ಕೋರುತ್ತೇನೆ.
ನಿದರ್ಶನಕ್ಕಾಗಿ ಜಿಲ್ಲಾಧಿಕಾರಿಯ ಕಚೇರಿಯಿಂದ ನನಗೆ ಬಂದಿರುವ ಪತ್ರದ ಯಥಾಪ್ರತಿಯನ್ನು ಕಳಿಸಿದ್ದೇನೆ".
ಅದಿರಲಿ. ಕಂಪೆನಿಯ ಹತ್ತಿರ ಈ ಮಾಹಿತಿ ಇಲ್ಲವೆಂಬುದು ಈ ಉತ್ತರದಿಂದ ಖಚಿತವಾಯ್ತಷ್ಟೆ. ಕೊಳಚೆ ನೀರು ಘಟಕಗಳಿಂದ ದೊರೆಯುವ ನೀರಿನ ಪ್ರಮಾಣದ ಬಗ್ಗೆ ಯಾರು ಏನೇ ಹೇಳಲಿ, ಜವಾಬ್ದಾರಿಯಿಂದ ವರ್ತಿಸುವ ಯಾವುದೇ ಕಂಪೆನಿ ಅದನ್ನು ಸ್ವತಃ ತಾನು ಅಧ್ಯಯನ ಮಾಡಿ ಖಚಿತ ಪಡಿಸಿಕೊಳ್ಳಲೇ ಬೇಕು. (ಈ ನಡುವೆ ಮಹಾನಗರಪಾಲಿಕೆಗೂ ವಿಶೇಷ ಆರ್ಥಿಕ ವಲಯ ಕಂಪೆನಿಗೂ ಈ ಬಗ್ಗೆ ಒಪ್ಪಂದವೇನಾದರೂ ಆಗಿದೆಯೆ, ಪಾಲಿಕೆ ಆ ನೀರನ್ನು ಕಂಪೆನಿಗೆ ಕೊಡಲು ಒಪ್ಪಿದೆಯೆ ಎಂಬ ಪ್ರಶ್ನೆಯೂ ಇದೆ. ಕೊಳಚೆ ನೀರು ಶುದ್ಧೀಕರಿಸಲು ಸಾಕಷ್ಟು ಖರ್ಚಿದೆ. ಪಾಲಿಕೆಯ ನೀರಿನ ರೇಟು ಕಂಪೆನಿಗೆ ಪೂರೈಸುತ್ತದೆಯೆ ಎಂಬ ಅಂಶವೂ ತೀರ್ಮಾನವಾಗಬೇಕಾಗುತ್ತದೆ. ಪೈಪ್ ಲೈನಿನ ಬಹು ಮುಖ್ಯ ಭಾಗ ಮಂಗಳೂರು ಪೇಟೆಯಲ್ಲಿಯೇ ಹಾದು ಹೋಗಬೇಕಾಗಿ ಬಂದರೆ ಅದನ್ನು ಅಳವಡಿಸಲು ಬೇಕಾದ ಜಮೀನಿನ ಏರ್ಪಾಟು ಖಂಡಿತಾ ಸುಲಭವಲ್ಲ.) ಹಾಗೆ ಖಚಿತಪಡಿಸಿಕೊಳ್ಳದೆ ಹೋದರೆ ಅಗತ್ಯ ಪ್ರಮಾಣದ ನೀರು ಸಿಗುತ್ತದೆ ಎಂದು ಯಾವ ಗ್ಯಾರಂಟಿ? ಮುಂದೆ ಮಳೆನೀರಿನ ಬಗ್ಗೆ ಕಂಪೆನಿ ಕೊಟ್ಟಿರುವ ಉತ್ತರ ನೋಡಿದರೆ, ಕೊಳಚೆ ನೀರನ್ನು ಶುದ್ಧೀಕರಿಸಿ ಒದಗಿಸಿಕೊಳ್ಳುವ ಮಾತು ಕೂಡ ಯಾವ ಅಧ್ಯಯನವನ್ನೂ ಆಧರಿಸದ ಕೇವಲ ಪೊಳ್ಳುಮಾತಾಗಿ ಕಾಣುತ್ತದೆ.
ಮಳೆನೀರು ಸಂಗ್ರಹದ ಕುರಿತಂತೆ ಕಂಪೆನಿಯ ಉತ್ತರ ಹೀಗಿದೆ:
"ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಯ ಕಾಮಗಾರಿಯು ಈಗಷ್ಟೇ ಆರಂಭವಾಗಿದ್ದು, ತತ್ ಕ್ಷಣಕ್ಕೆ ದಿನವಹಿ ೪೫ ಎಂ.ಜಿ.ಡಿ. ನೀರು ಅವಶ್ಯಕತೆ ಇರುವುದಿಲ್ಲ. ಬಹು ಉತ್ಪಾದನಾ ವಿಶೇಷ ಆರ್ಥಿಕ ವಲಯ (Multi Product SEZ) ಸ್ಥಾಪನೆಯಾಗುವ ಸಂದರ್ಭದಲ್ಲಿ ನೀರಿನ ಅವಶ್ಯಕತೆಗೆ ಅನುಗುಣವಾಗಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು".
ಈ ಮಾತಿನ ಅರ್ಥ ಅತ್ಯಂತ ಸ್ಪಷ್ಟ: ಮಳೆ ನೀರು ಸಂಗ್ರಹದ ವಿಷಯದಲ್ಲಿ ಕಂಪೆನಿ ಈವರೆಗೂ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ! ಇದರ ಸಾಧ್ಯಾಸಾಧ್ಯತೆಯ ಬಗ್ಗೆ (ನಾನು ನನ್ನ ಲೇಖನದಲ್ಲಿ ತಲೆ ಕೆಡಿಸಿಕೊಂಡಷ್ಟು ಸಹ) ತಲೆ ಕೆಡಿಸಿಕೊಂಡಿಲ್ಲ. ವಾಸ್ತವವಾಗಿ ತನ್ನ ನೀರಿನ ಅಗತ್ಯ ಎಷ್ಟು ಎಂಬುದೂ ಅದಕ್ಕೆ ಸರಿಯಾಗಿ ತಿಳಿದಿಲ್ಲ. ಹಾಗಿದ್ದರೂ ಅದರ ಜಾಹೀರಾತು ಸ್ಪಷ್ಟವಾಗಿ ಹೇಳುತ್ತದೆ: "ಮಳೆನೀರನ್ನು ಸಂಗ್ರಹಿಸಿ ೧೨ ಎಂಜಿಡಿ ನೀರನ್ನು ಒದಗಿಸಿಕೊಳ್ಳಲಾಗುವುದು" ಎಂದು. ಈ ಮಾತಿನ ಉದ್ದೇಶ ಸಾಮಾನ್ಯ ಜನರನ್ನು ಮಂಗ ಮಾಡುವುದು ಬಿಟ್ಟು ಬೇರೇನು ಇರಲು ಸಾಧ್ಯ? ಜನಸಾಮಾನ್ಯರನ್ನು ಹಾದಿ ತಪ್ಪಿಸುವ ಈ ಜಾಹೀರಾತಿನ ಅಂತಿಮ ಒಳ ಉದ್ದೇಶ ಬೇರೇನೋ ಇರಬಹುದೇ? (ಇಲ್ಲಿ ಜಾಗ ತೆಗೆದುಕೊಂಡು ಕೈಗಾರಿಕೆ ಸ್ಥಾಪಿಸಬಯಸುವ ಯಾವುದೇ ಕಂಪೆನಿಯನ್ನು ಇಂಥ ಜಾಹೀರಾತಿನಿಂದ ಮರುಳು ಮಾಡುವುದು ಖಂಡಿತ ಸಾಧ್ಯವಿಲ್ಲ). ಹಾಗಾಗಿ ಈ ಜಾಹೀರಾತಿನ ಗುರಿ ಜನಸಾಮಾನ್ಯರೇ ಎಂದು ಭಾವಿಸಬೇಕಾಗುತ್ತದೆ.
ನೇತ್ರಾವತಿ ಮತ್ತು ಗುರುಪುರ ನದಿಗಳಿಂದ ನೀರು ಸರಬರಾಜಿನ ಬಗ್ಗೆ:
ಈ ಕುರಿತು ಕರ್ನಾಟಕ ಸರಕಾರವು ಅನುಮತಿ ನೀಡಿರುವುದರ ದಾಖಲೆಯನ್ನು ಕಂಪೆನಿ ನನಗೆ ನೀಡಿದೆ. ಜೊತೆಗೇ ಮತ್ತೊಂದು ಕುತೂಹಲಕರವಾದ ಮಾಹಿತಿಯನ್ನು ನೀಡಿದೆ: "ನೇತ್ರಾವತಿಯ ನೀರಿಗಾಗಿ ಎ. ಎಂ. ಆರ್. ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ಅದು ಹೇಳಿದೆ.
ಎ. ಎಂ. ಆರ್. ಎಂಬುದು ಒಂದು ಖಾಸಗಿ ಕಂಪೆನಿ. ಅದು ಬಂಟ್ವಾಳ ತಾಲೂಕಿನ ಶಂಬೂರಿನ ಹತ್ತಿರ ನೇತ್ರಾವತಿ ನದಿಯಲ್ಲಿ ಒಂದು ಕಿರು ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದೆ. ಅಲ್ಲಿ ಈಗಾಗಲೇ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಿದೆ. ಈ ಬಗ್ಗೆ ಈಗ ಬರೆಯುವುದಿಲ್ಲ. ಅಧ್ಯಯನ ಮಾಡಿ ಮತ್ತೆ ಬರೆಯುತ್ತೇನೆ. ಈ ಒಪ್ಪಂದದ ಪ್ರತಿಯನ್ನು ಕಳಿಸಿಕೊಡುವಂತೆ ಪುನಃ ಮಾಹಿತಿ ಹಕ್ಕಿನಡಿ ಕಂಪೆನಿಗೆ ಅರ್ಜಿ ಸಲ್ಲಿಸಿದ್ದೇನೆ.
ಗುರುಪುರ ನದಿಯಿಂದ ನೀರೆತ್ತುವ ಬಗ್ಗೆ ಕಂಪೆನಿ ಮೌನ ವಹಿಸಿದೆ. ಯಾವ ಮಾಹಿತಿಯನ್ನೂ ಕೊಟ್ಟಿಲ್ಲ.
ಒಟ್ಟಿನ ಮೇಲೆ ಕಂಪೆನಿ ನನಗೆ ನೀಡಿರುವ ಉತ್ತರ ಮತ್ತು ಮಾಹಿತಿಯನ್ನು ಆಧರಿಸಿ ತೀರ್ಮಾನಿಸಬಹುದಾದ್ದು ಇಷ್ಟು: ಕಂಪೆನಿಯ ಕಣ್ಣು ಮುಖ್ಯವಾಗಿ ನೆಟ್ಟಿರುವುದು ನೇತ್ರಾವತಿ ನದಿಯ ನೀರಿನ ಮೇಲೆ ಮಾತ್ರ. ಕೊಳಚೆ ನೀರು ಸಂಸ್ಕರಣೆ, ಮಳೆ ನೀರು ಸಂಗ್ರಹ ಎಂದೆಲ್ಲ ಅದು ಹೇಳುತ್ತಿರುವುದು ಜನಸಾಮಾನ್ಯರಿಗೆ ಅರ್ಥವಾಗದ ಬೇರೆ ಯಾವುದೋ ಉದ್ದೇಶದಿಂದ.
*************
ಮಾಹಿತಿಗಾಗಿ ಅರ್ಜಿ ಸಲ್ಲಿಸುವವರನ್ನು ಸತಾಯಿಸುವ ಇನ್ನೊಂದು ವಿಧಾನವನ್ನು ನಮ್ಮ ಅಧಿಕಾರಿಗಳು ಅನುಸರಿಸುತ್ತಾರೆ. ಅದಕ್ಕೊಂದು ಉದಾಹರಣೆ:
ಸಣ್ಣ ನೀರಾವರಿ ಇಲಾಖೆಯಿಂದ ನಾನು ಕೇಳಿದ ಒಂದು ಮಾಹಿತಿಗೆ ಇಲಾಖೆ "ಮಾಹಿತಿಗಾಗಿ ಒಂದು ರೂಪಾಯಿ ಕಳಿಸಿಕೊಡಿ" ಎಂದು ನನಗೆ ತಿಳಿಸಿತು. ಒಂದು ರೂಪಾಯಿ ಕಳಿಸುವುದರ ಕಷ್ಟ ಅನುಭವಿಸಿದವನಿಗೇ ಗೊತ್ತು. ಮನಿ ಆರ್ಡರನ್ನು ಇಲಾಖೆ ಸ್ವೀಕರಿಸುವುದಿಲ್ಲ. ನಮ್ಮ ಬಿ.ಸಿ.ರೋಡಿನ ಅಂಚೆ ಕಛೇರಿಯಲ್ಲಿ ಒಂದು ರೂಪಾಯಿಯ ಪೋಸ್ಟಲ್ ಆರ್ಡರ್ ಸಿಗುವುದಿಲ್ಲ. ಡಿಡಿ ತೆಗೆಯುವುದೆಂದರೆ ಕಮಿಷನ್ನೇ ಹದಿನೈದೋ ಇಪ್ಪತ್ತೋ ರೂಪಾಯಿ ಆಗುತ್ತದೆ. ಪುನಃ ಅದನ್ನು ನೊಂದಾಯಿತ ಅಂಚೆಯಲ್ಲಿ ಕಳಿಸಲು ಇಪ್ಪತ್ತು ರೂ. ಖರ್ಚು!
ಆ ಅಧಿಕಾರಿ ನನಗೆ ಪತ್ರವನ್ನು ಸಾಧಾರಣ ಅಂಚೆಯಲ್ಲಿ ಕಳಿಸಿದ್ದರು. ಬೆಂಗಳೂರಿನಲ್ಲಿ "ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಇಲಾಖೆ" ಎಂಬುದೊಂದು ಇದೆ. ನಾನು ಆ ಇಲಾಖೆಗೆ ಒಂದು ಪತ್ರ ಬರೆದು ಸಮಸ್ಯೆಯನ್ನು ವಿವರಿಸಿ, ಜೊತೆಗೆ ಹೀಗೆ ಸೇರಿಸಿದೆ. "ಅವರು ಬರೆದ ಪತ್ರದಿಂದ ಸರಕಾರಕ್ಕೆ ಸಿಗುವುದು ಒಂದು ರೂಪಾಯಿ. ಆ ಒಂದು ರೂಪಾಯಿಗಾಗಿ ಅವರು ಸ್ಟ್ಯಾಂಪಿಗೆ ಐದು ರೂ., ಕವರಿಗೆ ಐವತ್ತು ಪೈಸೆ, ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಪ್ರಿಂಟ್ ತೆಗೆದ ಪತ್ರಕ್ಕೆ ಕಡಿಮೆ ಎಂದರೂ ಹದಿನೈದು ರೂಪಾಯಿ, ಉಳಿದ ಕೆಲಸಗಳಿಗೆ ಎರಡು ರೂಪಾಯಿ - ಹೀಗೆ ಒಟ್ಟು ಇಪ್ಪತ್ತೆರಡೂವರೆ ರೂ. ಖರ್ಚು ಮಾಡಿದ್ದಾರೆ. ಇದೇ ತಂತ್ರವನ್ನು ಇನ್ನೂ ಅನೇಕ ಅಧಿಕಾರಿಗಳು ಬಳಸುತ್ತಿರಬಹುದು. ಆದ್ದರಿಂದ ಎಲ್ಲರಿಗೂ ಅನ್ವಯವಾಗುವಂತೆ ಈ ಸಮಸ್ಯೆಗೆ ಒಂದು ಪರಿಹಾರ ಒದಗಿಸುವಂತೆ ಕೋರುತ್ತೇನೆ". (ಅವರಿಂದ ಇನ್ನೂ ಉತ್ತರ ಬಂದಿಲ್ಲ. ಆದರೆ ಬರುವ ಸಾಧ್ಯತೆ ಇದೆ. ಕಾಯೋಣ!)
ಮೇಲಿನ ಪತ್ರದ ಯಥಾಪ್ರತಿಯನ್ನಿಟ್ಟು, ಐದು ರೂಪಾಯಿಯ ಒಂದು ಪೋಸ್ಟಲ್ ಆರ್ಡರ್ ಲಗತ್ತಿಸಿ, ಸಣ್ಣ ನೀರಾವರಿ ಇಲಾಖೆಗೆ ಒಂದು ಪತ್ರವನ್ನು ಸಾಧಾರಣ ಅಂಚೆಯಲ್ಲಿಯೇ ರವಾನಿಸಿದೆ: "ಈ ಪತ್ರದೊಂದಿಗೆ ಐದು ರೂಪಾಯಿಯ ಪೋಸ್ಟಲ್ ಆರ್ಡರನ್ನು ಇಟ್ಟಿದ್ದೇನೆ. ಈ ಪೈಕಿ ಒಂದು ರೂಪಾಯಿಯನ್ನು ಮಾಹಿತಿಗೆ ಮತ್ತು ಉಳಿದ ನಾಲ್ಕು ರೂಪಾಯಿಗಳನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿ/ ಮುಖ್ಯಮಂತ್ರಿಗಳ ಪರಿಹಾರ ನಿಧಿ/ ನೆರೆ ಪರಿಹಾರ ನಿಧಿಗೆ ಜಮಾ ಮಾಡಿಕೊಂಡು ನನಗೆ ಮಾಹಿತಿಯನ್ನು ಕಳಿಸಿಕೊಡಿರಿ"
ಅಧಿಕಾರಿ ಮಾಹಿತಿಯನ್ನು ಕಳಿಸಿಕೊಟ್ಟರು. ಜೊತೆಗೆ ಮಾಹಿತಿಗೆ ಒಂದು ರೂಪಾಯಿಗೆ ರಶೀದಿ, ಪ್ರಕೃತಿ ವಿಕೋಪ ಪರಿಹಾರ ನಿಧಿಗೆ, ಟ್ರೆಶರಿಯಲ್ಲಿ ಚಲನ್ ತುಂಬಿಸಿ ನಾಲ್ಕು ರೂ. ಕಟ್ಟಿದ್ದರ ರಶೀದಿಯ ಯಥಾಪ್ರತಿ ಇವುಗಳೂ ಇದ್ದವು!

1 ಕಾಮೆಂಟ್‌:

ಅನಾಮಧೇಯ ಹೇಳಿದರು...

I want just what is sez? this sezs are destorying indian agriculture and indian enviornment. we are loosing our custom and tradition because of this sez.