ಸೋಮವಾರ, ಆಗಸ್ಟ್ 6, 2018

ಪಂಪಭಾರತ ಆಶ್ವಾಸ ೧ ಪದ್ಯಗಳು ೧೧೫-೧೨೭
ಖಚರ ಪ್ಲುತ|| ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ |
     ಭಂಗಮಂ ಮಣಿ ಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋ ||
     ತ್ತುಂಗಮಂ ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂ |
     ತಾಂಗಮಂ ನೃಪನೆಯ್ದಿದನುದ್ಯಚ್ಛೃಂಗಮನಾ ಶತಶೃಂಗಮಂ ||೧೧೫||
(ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀಭಂಗಮಂ, ಮಣಿ ಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋತ್ತುಂಗಮಂ, ಮುನಿ ಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರ ಪೂತಾಂಗಮಂ, ನೃಪನ್ ಎಯ್ದಿದನ್ ಉದ್ಯಚ್ಛೃಂಗಮನ್ ಆ ಶತಶೃಂಗಮಂ.)
ಎತ್ತರವಾದ ಆನೆಗಳು ಅಲ್ಲಿರುವ ಆನೆಬೇಲದ ಮರಗಳನ್ನು ತಮ್ಮ ದಂತದಿಂದ ಮುರಿದು ಹಾಕಿವೆ; ಮುತ್ತುರತ್ನಗಳ ಬಹುದೊಡ್ಡ ಬಂಡೆಗಳು ಎದ್ದು ಕಾಣುತ್ತಿವೆ; ಮುನಿಗಳ ಬಾಯಿಂದ ಹೊರಬಿದ್ದ ಪವಿತ್ರ ಮಂತ್ರಗಳಿಂದ ( ಆ ಸ್ಥಳವು) ಪವಿತ್ರವಾಗಿದೆ: ಅಂಥ ಶತಶೃಂಗ ಪರ್ವತಕ್ಕೆ ಪಾಂಡುವು ಬಂದನು.
ವ|| ಆ ಪರ್ವತದ ವಿಪುಳ ವನೋಪಕಂಠಂಗಳೊಳ್ ತಾಪಸ ಕ[ನ್ಯೆ]ಯರ್ ನಡಪಿದೆಳಲತೆಗಳೊಳೆಱಗಿ ತುಱುಗಿ ಸಾಮವೇದ ಧ್ವನಿಯೊಳ್ ಮೊರೆವ ತುಂಬಿಗಳುಮಂ ಪಣ್ತೆಱಗಿದ ತದಾಶ್ರಮದ ತರುಗಳ ಮೇಗಿರ್ದು ಪುಗಿಲ್ ಪುಗಿಲೆಂದಿತ್ತ ಬನ್ನಿಮಿರಿಮೆಂಬ ಪೊಂಬಣ್ಣದ ಕೋಗಿಲೆಗಳುಮಂ ಮುನಿಕುಮಾರರೋದುವ ವೇದವೇದಾಂಗಂಗಳಂ ತಪ್ಪುವಿಡಿದು ಜಡಿದು ಬಗ್ಗಿಸುವ ಪದುಮರಾಗದ ಬಣ್ಣದರಗಿಳಿಗಳುಮಂ ಸುರಭಿಗಳ ತೊರೆದ ಮೊಲೆಗಳನುಣ್ಬವರ ಮಱಿಗಳಂ ಪೋಗೆ ನೂಂಕಿ ಕೂಂಕಿ ಮೊಲೆಗಳನುಣ್ಬ ಕಿಶೋರ ಕೇಸರಿಗಳುಮಂ ತಮ್ಮೊಡನೆ ನಲಿದಾಡುವ ಕಿಶೋರ ಕೇಸರಿಗಳಂ ಪಿಡಿದು ತೆಗೆವ ಕರಿಕಳಂಭಂಗಳುಮನಾಗಳಾ ಪಳುವಂಗಳಿಂದೆ ಪಾಯ್ವ ಪುಲಿಗಳ ಮಱಿಗಳೊಳ್ ಪರಿದಾಡುವ ತರುಣ ಹರಿಣಂಗಳುಮಂ ಮತ್ತಂ ಮುತ್ತ ಕುರುಡ ತವಸಿಗಳ ಕೈಯಂ ಪಿಡಿದುಯ್ದವರ ಗುಹೆಗಳಂ ಪುಗಿಪ ಪೊಱಮಡಿಪ ಚಪಳ ಕಪಿಗಳುಮಂ ಹೋಮಾಗ್ನಿಯನೆಱಂಕೆಯ ಗಾಳಿಯಿಂ ನಂದಲೀಯದುರಿಪುವ ರಾಜಹಂಸೆಗಳುಮಂ ಮುನಿಗಣೇಶ್ವರರೊಡನೆ ದಾಳಿವೂಗೊಯ್ವೊಡನೆವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರ ತಪಃಪ್ರಭಾವಕ್ಕೆ ಚೋದ್ಯಂಬಟ್ಟು-
ಆ ಪರ್ವತದ ವಿಶಾಲವಾದ ತಪ್ಪಲು ಪ್ರದೇಶದಲ್ಲಿ ತಾಪಸ ಕನ್ಯೆಯರು ಬೆಳೆಸಿದ ಎಳೆಯ ಬಳ್ಳಿಗಳಿಗೆ ಗುಂಪುಗುಂಪಾಗಿ ಎರಗಿ, ಸಾಮವೇದದ ಧಾಟಿಯಲ್ಲಿ ಮೊರೆಯುವ ದುಂಬಿಗಳು; ಹಣ್ಣುಗಳ  ಭಾರದಿಂದ ಬಾಗಿದ ಆ ಆಶ್ರಮದ ಮರಗಳ ಮೇಲೆ ಕುಳಿತು “ಇದು ದಾರಿ, ಇತ್ತ ಬನ್ನಿ, ಇಲ್ಲಿ ಇರಿ” ಎಂದು ಕರೆಯುವ ಹೊಂಬಣ್ಣದ ಕೋಗಿಲೆಗಳು; ಮುನಿಕುಮಾರರು ವೇದಪಾಠಗಳನ್ನು ತಪ್ಪಾಗಿ ಓದಿದರೆ, ಅದನ್ನು ಎತ್ತಿ ತೋರಿಸಿ ಗದರಿಸುವ  ಪದ್ಮರಾಗದ ಬಣ್ಣದ ಅರಗಿಳಿಗಳು; ಸುರಭಿಗಳ (ದನಗಳ) ಮೊಲೆಗಳನ್ನುಣ್ಣುವ ಕರುಗಳನ್ನು ಅತ್ತ ದೂಡಿ ತಾವು ಮೊಲೆಯುಣ್ಣುವ ಸಿಂಹದ ಮರಿಗಳು; ತಮ್ಮೊಡನೆ ನಲಿಯುವ ಸಿಂಹದ ಮರಿಗಳನ್ನು ಹಿಡಿದೆತ್ತುವ ಆನೆಗಳು; ಕಾಡಿನ ಕಡೆಯಿಂದ ಬರುವ ಹುಲಿಯ ಮರಿಗಳ ಜೊತೆ ಓಡಾಡುವ ಜಿಂಕೆಯ ಮರಿಗಳು; ಮುದಿತಪಸ್ವಿಗಳ ಕೈಹಿಡಿದು ಅವರನ್ನ ಅವರ ಗುಹೆಗಳತ್ತ ಕರೆದೊಯ್ಯುವ, ಅಲ್ಲಿಂದ ಕರೆತರುವ ತುಂಟ ಮಂಗಗಳು;    ಹೋಮದ ಬೆಂಕಿ ಆರಿಹೋಗದಂತೆ ತಮ್ಮ ರೆಕ್ಕೆಗಳಿಂದ ಗಾಳಿ ಹಾಕುವ ರಾಜಹಂಸಗಳು; ಮುನಿಗಳ ಜೊತೆಗೆ ಹೋಗಿ ದಾಳಿ ಹೂವನ್ನು ಕೊಯ್ಯುವ ಮಂಗಗಳು- ಇವೆಲ್ಲವನ್ನೂ ಕಂಡು ಆ ತಪೋವನದಲ್ಲಿರುವ ತಪಸ್ವಿಗಳ ಪ್ರಭಾವಕ್ಕೆ ಅಚ್ಚರಿಗೊಂಡು-
ಚಂ|| ವಿನಯದಿನಿತ್ತ ಬನ್ನಿಮಿರಿಮೆಂಬವೊಲಿಂಚರದಿಂದಮೊಯ್ಯನೊ |
     ಯ್ಯನೆ ಮಱಿದುಂಬಿಗಳ್ ಮೊಱೆವುವೞ್ಕಱೊಳೊಲ್ದೆಱಪಂತೆ ತಳ್ತ ಪೂ ||
     ವಿನ ಪೊಸ ಗೊಂಚಲಿಂ ಮರನಿದೇನೆಸೆದಿರ್ದುವೊ ಕಲ್ತುವಾಗದೇ |
     ವಿನಯಮನೀ ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರ[ದಾ] ||೧೧೬||
 (ವಿನಯದಿನ್ ‘ಇತ್ತ ಬನ್ನಿಂ ಇರಿಂ’ ಎಂಬವೊಲ್, ಇಂಚರದಿಂದಂ ಒಯ್ಯನೊಯ್ಯನೆ ಮಱಿದುಂಬಿಗಳ್ ಮೊಱೆವುವು, ಅೞ್ಕಱೊಳ್ ಒಲ್ದು ಎಱಪಂತೆ ತಳ್ತ ಪೂವಿನ ಪೊಸ ಗೊಂಚಲಿಂ ಮರನ್ ಇದೇನ್ ಎಸೆದಿರ್ದುವೊ? ಕಲ್ತುವಾಗದೇ ವಿನಯಮನ್ ಈ  ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರದಾ?)
ವಿನಯದಿಂದ “ಹೀಗೆ ಬನ್ನಿ, ಇಲ್ಲಿ ಇರಿ” ಎಂಬ ಹಾಗೆ ಇಂಚರದಿಂದ ಮರಿದುಂಬಿಗಳು ಮೆಲ್ಲನೆ ಮೊರೆಯುತ್ತವೆ. ಹೊತ್ತ ಹೂವಿನ ಭಾರಕ್ಕೆ, ಪ್ರೀತಿಯಿಂದ ಒಲಿದು ಬಾಗಿರುವಂತೆ (ಅಲ್ಲಿನ) ಮರಗಳು ಕಾಣುತ್ತವೆ. ಇದನ್ನು ಕಂಡರೆ ಅಲ್ಲಿ ವಾಸಿಸುವ ತಪಸ್ವಿಗಳಿಂದ ಅಲ್ಲಿನ ಮರಗಳೂ ಸಹ ವಿನಯವನ್ನು ಕಲಿತಂತೆ ಕಾಣುತ್ತದೆ!
ವ|| ಎಂದು ಮೆಚ್ಚುತ್ತುಮೆನಗೆ ನೆಲಸಿರಲೀ ತಪೋವನಮೆ ಪಾವನಮೆಂದು ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ ಕಾಮಾನುರಾಗಮಂ ಬೆರ್ಚಿಸಿ ತದಾಶ್ರಮದೊಳಾಶ್ರಮಕ್ಕೆ ಗುರುವಾಗಿ ಪಾಂಡುರಾಜನಿರ್ಪನ್ನೆಗಮಿತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ಮಕ್ಕಳಂ ಪಡೆವಂತು ಪರಾಶರ ಮುನೀಂದ್ರನೊಳ್ ಬರಂಬಡೆದಳೆಂಬುದಂ ಕುಂತಿ ಕೇಳ್ದು ತಾನುಂ ಪುತ್ರಾರ್ಥಿ[ನಿ]ಯಾಗಲ್ ಬಗೆದು-
(ಎಂದು ಮೆಚ್ಚುತ್ತುಮ್ ಎನಗೆ ನೆಲಸಿರಲ್ ಈ ತಪೋವನಮೆ ಪಾವನಂ ಎಂದು ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ, ಕಾಮಾನುರಾಗಮಂ ಬೆರ್ಚಿಸಿ, ತದಾಶ್ರಮದೊಳ್ ಆಶ್ರಮಕ್ಕೆ ಗುರುವಾಗಿ ಪಾಂಡುರಾಜನ್ ಇರ್ಪನ್ನೆಗಂ; ಇತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ ಮಕ್ಕಳಂ ಪಡೆವಂತು ಪರಾಶರ ಮುನೀಂದ್ರನೊಳ್ ಬರಂಬಡೆದಳ್ ಎಂಬುದಂ ಕುಂತಿ ಕೇಳ್ದು, ತಾನುಂ ಪುತ್ರಾರ್ಥಿನಿಯಾಗಲ್ ಬಗೆದು-)
ಎಂದು ಮೆಚ್ಚುತ್ತ ‘ಈ ಪಾವನ ತಪೋವನವೇ ನನಗೆ ನೆಲೆಸಲು ಸರಿಯಾದ ಸ್ಥಳ’ ಎಂದು ಪಾಂಡುರಾಜನು ನಿಶ್ಚಯಿಸಿಕೊಂಡನು. ಹೀಗೆ ಅಲ್ಲಿನ ಮುನಿಜನರ ಪ್ರೀತಿಯನ್ನು ಹೆಚ್ಚಿಸಿ, ಕಾಮಭಾವವನ್ನು ಬೆದರಿಸಿ, ಆ ಆಶ್ರಮಕ್ಕೆ ಗುರುವಾಗಿ ಪಾಂಡುರಾಜನು ಇದ್ದನು.
ಇತ್ತ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ನೂರು ಮಕ್ಕಳಾಗುವಂತೆ ಪರಾಶರ ಮುನಿಯಿಂದ ವರವನ್ನು ಪಡೆದಳೆಂಬ ವಿಷಯವು ಕುಂತಿಯ ಕಿವಿಗೆ ಬಿತ್ತು. ಅವಳು ತಾನೂ ಸಹ ಮಕ್ಕಳನ್ನು ಪಡೆಯಬೇಕೆಂದು ಬಯಸಿ-
ಚಂ|| ವಿಸಸನದೊಳ್ ವಿರೋಧಿ ನೃಪರಂ ತಱಿದೊಟ್ಟಲುಮರ್ಥಿಗರ್ಥಮಂ |
     ಕಸವಿನ ಲೆಕ್ಕಮೆಂದು ಕುಡಲುಂ ವಿಪುಳಾಯತಿಯಂ ದಿಗಂತದೊಳ್ ||
     ಪಸರಿಸಲುಂ ಕರಂ ನೆಱೆವ ಮಕ್ಕಳನೀಯದೆ ನೋಡೆ ನಾಡೆ ನೋ|
     ಯಿಸಿದಪುದಿಕ್ಷುಪುಷ್ಪದವೊಲೆನ್ನಯ ನಿಷ್ಫಲ ಪುಷ್ಪದರ್ಶನಂ ||೧೧೭||
(ವಿಸಸನದೊಳ್ ವಿರೋಧಿ ನೃಪರಂ ತಱಿದು ಒಟ್ಟಲುಂ, ಅರ್ಥಿಗೆ ಅರ್ಥಮಂ ಕಸವಿನ ಲೆಕ್ಕಮೆಂದು ಕುಡಲುಂ, ವಿಪುಳಾಯತಿಯಂ ದಿಗಂತದೊಳ್ ಪಸರಿಸಲುಂ, ಕರಂ ನೆಱೆವ ಮಕ್ಕಳನ್  ಈಯದೆ, ನೋಡೆ ನಾಡೆ ನೋಯಿಸಿದಪುದು ಇಕ್ಷುಪುಷ್ಪದವೊಲ್ ಎನ್ನಯ ನಿಷ್ಫಲ ಪುಷ್ಪದರ್ಶನಂ.)
ಯುದ್ಧದಲ್ಲಿ ವಿರೋಧಿ ರಾಜರನ್ನು ಕಡಿದು ರಾಶಿ ಹಾಕುವಂಥ, ಕೇಳಿದವರಿಗೆ ದಾನವನ್ನು ಕಸಕ್ಕೆ ಸಮಾನವೆಂಬಂತೆ ಕೊಡುವಂಥ, ತಮ್ಮ ಶೌರ್ಯವನ್ನು ಆಕಾಶದಂಚಿಗೂ ವಿಸ್ತರಿಸಬಲ್ಲಂಥ ಮಕ್ಕಳನ್ನು ಕೊಡದೆ, ಕಬ್ಬಿನ ಹೂವಿನಂತೆ ನನ್ನ ಮುಟ್ಟೂ ಸಹ ಫಲ ಕೊಡದೆ ಸಂಕಟವನ್ನು ಕೊಡುತ್ತಿದೆಯಲ್ಲಾ ಎಂದು ಕುಂತಿಯು ಕೊರಗತೊಡಗಿದಳು.
ವ|| ಎಂದು ಚಿಂತಾಕ್ರಾಂತೆಯಾಗಿರ್ದ ಕುಂತಿಯಂ ಕಂಡು ಪಾಂಡುರಾಜನೇಕಾಂತದೊಳಿಂತೆಂದಂ
(ಎಂದು ಚಿಂತಾಕ್ರಾಂತೆಯಾಗಿರ್ದ ಕುಂತಿಯಂ ಕಂಡು ಪಾಂಡುರಾಜನ್ ಏಕಾಂತದೊಳ್ ಇಂತೆಂದಂ)
ಉ|| ಚಿಂತೆಯಿದೇನೋ ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡಿ |
     ನ್ನಿಂತಿರವೇಡ ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ ನಿಜಾ ||
     ತ್ಯಂತ ಪತಿವ್ರತಾ ಗುಣದಿನರ್ಚಿಸಿ ಮೆಚ್ಚಿಸು ನೀಂ ದಿಗಂತ ವಿ |
     ಶ್ರಾಂತ ಯಶರ್ಕಳಂ ವರ ತನೂಭವರಂ ಪಡೆ ನೀಂ ತಳೋದರೀ ||೧೧೮||
(ಚಿಂತೆಯಿದೇನೋ? ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡೆ ಇನ್ನು ಇಂತು ಇರವೇಡ, ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ ನಿಜಾತ್ಯಂತ ಪತಿವ್ರತಾ ಗುಣದಿನ್ ಅರ್ಚಿಸಿ ಮೆಚ್ಚಿಸು ನೀಂ, ದಿಗಂತ ವಿಶ್ರಾಂತ ಯಶರ್ಕಳಂ ವರ ತನೂಭವರಂ ಪಡೆ ನೀಂ ತಳೋದರೀ.)
‘ಕುಂತೀ, ಏನಿದು ಚಿಂತೆ? ಸಂತತಿ ಇಲ್ಲ, ಮಕ್ಕಳಿಲ್ಲ ಎಂಬುದೇ ಆದರೆ ಇನ್ನು ಹೀಗೆ ಕಾಲ ಕಳೆಯಬೇಡ! ನಿನ್ನ ಆಸೆ ಈಡೇರುವವರೆಗೂ ಶ್ರೇಷ್ಠ ಮುನಿಗಳನ್ನು ಅತ್ಯಂತ ಪತಿವ್ರತೆಯಂತೆ ಉಪಚರಿಸಿ ಮೆಚ್ಚಿಸು! ತೆಳುಹೊಟ್ಟೆಯ ಹೆಣ್ಣೇ, ಹಾಗೆ ಮಾಡಿ ದಿಕ್ಕಿನ ಅಂಚಿನವರೆಗೂ ಕೀರ್ತಿ ಗಳಿಸಬಲ್ಲ ಮಕ್ಕಳನ್ನು ಪಡೆದುಕೋ’
ವ|| ಎಂದೊಡೆ ಕೊಂತಿ ಇಂತೆಂದಳೆನ್ನ ಕನ್ನಿಕೆಯಾ ಕಾಲದೊಳ್ ನಾನೆನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾ ಮುನಿಯರೆಮ್ಮ ಮನೆಗೆ ನಿಚ್ಚಕ್ಕಂ ಬರ್ಪರವರೆನ್ನ ವಿನಯಕ್ಕಂ ಭಕ್ತಿಗಂ ಬೆಸಕೆಯ್ವುದರ್ಕಂ ಮೆಚ್ಚಿ ಮಂತ್ರಾಕ್ಷರಂಗಳನಯ್ದಂ ವರವಿತ್ತರೀಯಯ್ದು ಮಂತ್ರಕಯ್ವರ್ಮಕ್ಕಳಂ ನಿನ್ನ ಬಗೆಗೆ ಬಂದವರನಾಹ್ವಾನಂ ಗೆಯ್ಯಲವರ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೀಗಳೆನ್ನ ಪುಣ್ಯದಿಂ ದೊರೆಕೊಂಡುದೊಳ್ಳಿತ್ತೆಂಬುದುಂ ದಿವ್ಯ ಮುನಿ ವಾಕ್ಯಮಮೋಘ ವಾಕ್ಯಮಕ್ಕಮದರ್ಕೇನುಂ ಚಿಂತಿಸಲ್ವೇಡೆಂದೊಡಂತೆ ಗೆಯ್ವೆನೆಂದು ತೀರ್ಥ ಜಲಂಗಳಂ ಮಿಂದು ದಳಿಂಬವನುಟ್ಟು ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನದೊಳಿರ್ದು-
(ಎಂದೊಡೆ ಕೊಂತಿ ಇಂತೆಂದಳ್: “ಎನ್ನ ಕನ್ನಿಕೆಯಾ ಕಾಲದೊಳ್ ನಾನ್ ಎನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾ ಮುನಿಯರ್ ಎಮ್ಮ ಮನೆಗೆ ನಿಚ್ಚಕ್ಕಂ ಬರ್ಪರ್. ಅವರ್ ಎನ್ನ ವಿನಯಕ್ಕಂ ಭಕ್ತಿಗಂ ಬೆಸಕೆಯ್ವುದರ್ಕಂ ಮೆಚ್ಚಿ, ಮಂತ್ರಾಕ್ಷರಂಗಳನ್ ಅಯ್ದಂ ವರವಿತ್ತರ್. ಈ ಅಯ್ದು ಮಂತ್ರಕೆ ಅಯ್ವರ್ ಮಕ್ಕಳಂ, ನಿನ್ನ ಬಗೆಗೆ ಬಂದವರನ್ ಆಹ್ವಾನಂ ಗೆಯ್ಯಲ್, ಅವರ ಪೋಲ್ವೆಯ ಮಕ್ಕಳಂ ಪಡೆವೆ” ಎಂದು ಬೆಸಸಿದೊಡೆ “ಈಗಳ್ ಎನ್ನ ಪುಣ್ಯದಿಂ ದೊರೆಕೊಂಡುದು, ಒಳ್ಳಿತ್ತು” ಎಂಬುದುಂ “ದಿವ್ಯ ಮುನಿ ವಾಕ್ಯಂ ಅಮೋಘ ವಾಕ್ಯಂ ಅಕ್ಕುಂ ಅದರ್ಕೆ ಏನುಂ ಚಿಂತಿಸಲ್ವೇಡ” ಎಂದೊಡೆ “ಅಂತೆ ಗೆಯ್ವೆನ್” ಎಂದು ತೀರ್ಥ ಜಲಂಗಳಂ ಮಿಂದು ದಳಿಂಬವನ್ ಉಟ್ಟು ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನದೊಳ್ ಇರ್ದು,)
ಎಂದು ಪಾಂಡುರಾಜನು ಹೇಳಿದಾಗ ಕುಂತಿಯು ಹೀಗೆಂದಳು: ‘ನಾನು ಕನ್ನಿಕೆಯಾಗಿದ್ದಾಗ ನನ್ನ ಮಾವ ಕುಂತೀಭೋಜನ ಮನೆಯಲ್ಲಿ ಬೆಳೆಯುತ್ತಿದ್ದೆನಷ್ಟೆ. ಆಗ ದುರ್ವಾಸ ಮುನಿಗಳು ನಿತ್ಯವೂ ಅಲ್ಲಿಗೆ ಬರುತ್ತಿದ್ದರು. ಅವರು  ನನ್ನ ವಿನಯ, ಭಕ್ತಿಗಳಿಗೆ ಮೆಚ್ಚಿ, ಐದು ಮಂತ್ರಾಕ್ಷರಗಳನ್ನು ವರವಾಗಿ ಕೊಟ್ಟು, ಈ ಐದು ಮಂತ್ರಗಳಿಂದ, ನಿನಗೆ ಇಷ್ಟವಾದ ದೇವತೆಗಳನ್ನು ಸ್ಮರಿಸಿ, ಅವರನ್ನು ಹೋಲುವ ಐದು ಮಕ್ಕಳನ್ನು ನೀನು ಪಡೆಯಬಹುದು ಎಂದು ಹೇಳಿದ್ದಾರೆ. ನನ್ನ ಪುಣ್ಯದಿಂದ ಆ ಮಂತ್ರಗಳು ನನಗೆ ಸಿಕ್ಕಿದವು ಎಂದೇ ತಿಳಿಯುತ್ತೇನೆ’ ಎಂದಳು. ಪಾಂಡುರಾಜನು ‘ದಿವ್ಯಮುನಿಯ ವಾಕ್ಯವು ಅಮೋಘವಾದದ್ದು; ಇನ್ನು ನಿನ್ನ ಚಿಂತೆ ಕಳೆಯಿತು’ ಎಂದನು. ಕುಂತಿಯು ತೀರ್ಥ ಜಲಗಳಲ್ಲಿ ಮಿಂದು, ಮಡಿಯುಟ್ಟು, ಮುತ್ತಿನ ತೊಡಿಗೆಗಳನ್ನು ತೊಟ್ಟು, ದರ್ಭೆಯ ಹಾಸಿಗೆಯಲ್ಲಿದ್ದು-
ಉ|| ಜ್ಞಾನದಿನಿರ್ದು ನಿಟ್ಟಿಪೊಡೆ ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂ |
     ತಾನಮನೋದಿಯೋದಿ ಯಮರಾಜನನದ್ಭುತ ತೇಜನಂ ಸರೋ ||
     ಜಾನನೆ ಜಾನದಿಂ ಬರಿಸೆ ಬಂದು ಯಮಂ ಬೆಸನಾವುದಾವುದಾ |
     ತ್ಮಾನುಗತಾರ್ಥಮೆಂದೊಡೆನಗೀವುದು ನಿನ್ನನೆ ಪೋಲ್ವ ಪುತ್ರನಂ ||೧೧೯||
(ಜ್ಞಾನದಿನ್ ಇರ್ದು ನಿಟ್ಟಿಪೊಡೆ, ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂತಾನಮನ್ ಓದಿ ಓದಿ, ಯಮರಾಜನನ್ ಅದ್ಭುತ ತೇಜನಂ ಸರೋಜಾನನೆ ಜಾನದಿಂ ಬರಿಸೆ, ಬಂದು ಯಮಂ, “ಬೆಸನ್ ಆವುದು? ಆವುದು ಆತ್ಮಾನುಗತಾರ್ಥಂ?” ಎಂದೊಡೆ, “ಎನಗೆ ಈವುದು ನಿನ್ನನೆ ಪೋಲ್ವ ಪುತ್ರನಂ”)
ಆ ದಿವ್ಯಮುನಿಯು ಕೊಟ್ಟ ಮಂತ್ರವನ್ನು ಮತ್ತೆ ಮತ್ತೆ ಓದುತ್ತಾ, ಎಚ್ಚರದಿಂದ ನೋಡುತ್ತಾ, ಸುಂದರಿಯಾದ ಕುಂತಿಯು ಧ್ಯಾನದಿಂದ ಯಮರಾಜನನ್ನು ಬರಿಸಿದಳು. ಯಮರಾಜನು ಬಂದು ‘ಯಾಕಾಗಿ ನನ್ನನ್ನು ಕರೆಸಿದಿ? ನಿನ್ನ ಮನಸ್ಸಿನಲ್ಲಿ ಏನಿದೆ?’ ಎಂದು ವಿಚಾರಿಸಿದನು. ಆಗ ಕುಂತಿಯು ‘ನನಗೆ ನಿನ್ನನ್ನೇ ಹೋಲುವ ಮಗನನ್ನು ಕೊಡು’ ಎಂದು ಕೇಳಿದಳು.
ವ|| ಎಂಬುದುಂ ತಥಾಸ್ತುವೆಂದು ತನ್ನಂಶಮನ್ ಆಕೆಯ ಗರ್ಭದೊಳವತರಿಸಿ ಯಮಭಟ್ಟಾರಕನಂತರ್ಧಾನಕ್ಕೆ ಸಂದನನ್ನೆಗಮಾ ಕಾಂತೆಗೆ-
(ಎಂಬುದುಂ, “ತಥಾಸ್ತು”ವೆಂದು ತನ್ನಂಶಮನ್ ಆಕೆಯ ಗರ್ಭದೊಳ್ ಅವತರಿಸಿ ಯಮಭಟ್ಟಾರಕನ್ ಅಂತರ್ಧಾನಕ್ಕೆ ಸಂದನ್. ಅನ್ನೆಗಂ ಆ ಕಾಂತೆಗೆ)
ಯಮ ಭಟ್ಟಾರಕನು ‘ಹಾಗೆಯೇ ಆಗಲಿ’ ಎಂದು ತನ್ನ ಅಂಶವನ್ನು ಆಕೆಯ ಬಸಿರಿನಲ್ಲಿ ಇಳಿಸಿ ಮಾಯವಾದನು. ಆಗ ಆ ಕುಂತಿಗೆ-
ಚಂ|| ಹಿಮ ಧವಳಾತಪತ್ರಮನೆ ಪೋಲೆ ಮುಖೇಂದುವ ಬೆಳ್ಪು ಪೂರ್ಣ ಕುಂ |
     ಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪು ಪತಾಕೆಯೊಂದು ವಿ ||
     ಭ್ರಮಮನೆ ಪೋಲೆ ಪುರ್ವಿನ ಪೊಡರ್ಪೊಳಕೊಂಡುದವಳ್ಗೆ ಗರ್ಭ ಚಿ|
     ಹ್ನಮೆ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ ||೧೨೦||
(ಹಿಮ ಧವಳ ಆತಪತ್ರಮನೆ ಪೋಲೆ ಮುಖೇಂದುವ ಬೆಳ್ಪು, ಪೂರ್ಣ ಕುಂಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪು, ಪತಾಕೆಯೊಂದು ವಿಭ್ರಮಮನೆ ಪೋಲೆ ಪುರ್ವಿನ ಪೊಡರ್ಪು, ಒಳಕೊಂಡುದು ಅವಳ್ಗೆ ಗರ್ಭ ಚಿಹ್ನಮೆ ಗಳ, ಗರ್ಭದ ಅರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ.)
ಚಂದ್ರಮುಖಿಯಾದ ಅವಳ ಮುಖದ ಬಣ್ಣವು ಹಿಮದ ಹಾಗೆ ಬಿಳಿಯದಾದ ಕೊಡೆಯಂತೆ ಕಾಣಿಸಿತು. ಮೊಲೆಗಳ ಗಾತ್ರವು ಪೂರ್ಣಕುಂಭವನ್ನು ಮೀರಿಸಿತು. ಅವಳ ಹುಬ್ಬಿನ ಅಲುಗಾಟವು ಬಾವುಟದ ಅಲುಗಾಟದಂತಿತ್ತು. ಹೀಗೆ ಅವಳ ಬಸಿರಿನ ಲಕ್ಷಣಗಳು ಅವಳ ಹೊಟ್ಟೆಯಲ್ಲಿರುವ ಮಗುವು ಮುಂದೆ ರಾಜನಾಗುತ್ತಾನೆ ಎಂದು ಸೂಚಿಸಿದವು.
ವ|| ಅಂತು ಕೊಂತಿಯ ಗರ್ಭಭಾರಮುಂ, ತಾಪಸಾಶ್ರಮದ ಅನುರಾಗಮುಂ ಒಡನೊಡನೆ ಬಳೆಯೆ, ಬಂಧುಜನದ ಮನೋರಥಗಳುಂ ಒಂಬತ್ತನೆಯ ತಿಂಗಳುಂ ಒಡನೊಡನೆ ನೆಱೆಯೆ-
ಹಾಗೆ ಕುಂತಿಯ ಹೊಟ್ಟೆಯ ಭಾರವೂ, ಆಶ್ರಮವಾಸಿಗಳ ಅನುರಾಗವೂ ಒಟ್ಟೊಟ್ಟಿಗೆ ಹೆಚ್ಚಿದವು. ಬಂಧುಜನರ ಮನಸ್ಸಿನ ಹಂಬಲವೂ, ಒಂಬತ್ತನೆಯೂ ತಿಂಗಳೂ ಒಟ್ಟೊಟ್ಟಿಗೆ ತುಂಬಿದವು.
ಕಂ|| ವನನಿಧಿಯಿಂದಂ ಚಂದ್ರಂ |
     ವಿನತೋದರದಿಂ ಗರುತ್ಮನುದಯಾಚಳದಿಂ ||
     ದಿನಪನೊಗೆವಂತೆ ಪುಟ್ಟಿದ |
     ನನಿವಾರ್ಯ ಸುತೇಜನೆನಿಪನಿನಜನ ತನಯಂ ||೧೨೧||
(ವನನಿಧಿಯಿಂದಂ ಚಂದ್ರಂ, ವಿನತೋದರದಿಂ ಗರುತ್ಮನ್, ಉದಯಾಚಳದಿಂ ದಿನಪನ್ ಒಗೆವಂತೆ ಪುಟ್ಟಿದನ್,  ಅನಿವಾರ್ಯ ಸುತೇಜನ್ ಎನಿಪನ್, ಇನಜನ ತನಯಂ.)
ಕಂ|| ಪುಟ್ಟುವುದುಂ ಧರ್ಮಮುಮೊಡ |
     ವುಟ್ಟಿದುದೀತನೊಳೆ ಧರ್ಮನಂಶದೊಳೀತಂ ||
     ಪುಟ್ಟಿದನೆಂದಾ ಶಿಶುಗೊಸೆ |
     ದಿತ್ತುದು ಮುನಿ ಸಮಿತಿ ಧರ್ಮಸುತನೆನೆ ಪೆಸರಂ ||೧೨೨||
(ಪುಟ್ಟುವುದುಂ, ಧರ್ಮಮುಂ ಒಡವುಟ್ಟಿದುದು ಈತನೊಳೆ, ಧರ್ಮನ ಅಂಶದೊಳ್ ಈತಂ ಪುಟ್ಟಿದನ್ ಎಂದು, ಆ ಶಿಶುಗೆ, ಒಸೆದಿತ್ತುದು ಮುನಿ ಸಮಿತಿ, ಧರ್ಮಸುತನ್ ಎನೆ ಪೆಸರಂ.)
ಕಡಲಿನಿಂದ ಚಂದ್ರನೂ, ವಿನತೆಯ ಬಸಿರಿನಿಂದ ಗರುಡನೂ, ಉದಯ ಪರ್ವತದಿಂದ ಸೂರ್ಯನೂ ತಲೆದೋರುವಂತೆ, ತೇಜಸ್ವಿಯಾದ ಸೂರ್ಯನ ಮೊಮ್ಮಗನು ಹುಟ್ಟಿಬಂದನು. ಅವನು ಹುಟ್ಟಿದ ಕೂಡಲೇ ಧರ್ಮವು ಅವನೊಡನೆ ಹುಟ್ಟಿತು. ಯಮಧರ್ಮರಾಜನ ಅಂಶದಿಂದ ಹುಟ್ಟಿದವನಾದುದರಿಂದ, ಶಿಶುವಿಗೆ ಮುನಿಗಳು ಸೇರಿ ‘ಧರ್ಮಸುತ’ ಎಂದು ಹೆಸರಿಟ್ಟರು.
ವ|| ಅಂತು ಪೆಸರನಿಟ್ಟು ಪರಕೆಯಂ ಕೊಟ್ಟು –
(ಅಂತು ಪೆಸರನ್ ಇಟ್ಟು, ಪರಕೆಯಂ ಕೊಟ್ಟು,)
ಹಾಗೆ ಹೆಸರಿಟ್ಟು, ಆಶೀರ್ವದಿಸಿ,
ಕಂ|| ಸಂತಸದಿನಿರ್ದು ಮಕ್ಕಳ |
     ಸಂತತಿಗೀ ದೊರೆಯರಿನ್ನುಮಾಗದೊಡೆಂತುಂ ||
     ಸಂತಸಮೆನಗಿಲ್ಲೆಂದಾ |
     ಕಾಂತೆ ಸುತಭ್ರಾಂತೆ ಮುನ್ನಿನಂತೆವೊಲಿರ್ದಳ್ ||೧೨೩||
(ಸಂತಸದಿನಿರ್ದು, “ಮಕ್ಕಳ ಸಂತತಿಗೆ ಈ ದೊರೆಯರ್ ಇನ್ನುಂ ಆಗದೊಡೆ ಎಂತುಂ ಸಂತಸಂ ಎನಗೆ ಇಲ್ಲ” ಎಂದು ಆ ಕಾಂತೆ, ಸುತಭ್ರಾಂತೆ ಮುನ್ನಿನಂತೆವೊಲ್ ಇರ್ದಳ್.)
‘ಒಬ್ಬ ಮಗ ಸಾಲದು, ಅಂಥ ಮಕ್ಕಳು ಇನ್ನೂ ಬೇಕು’ ಎಂಬ ಆಸೆಯಿಂದ ಸಂತಸದಲ್ಲಿದ್ದರೂ ಇಲ್ಲದವಳಂತೆ, ಮಕ್ಕಳ ಹುಚ್ಚಿನ ಆ ಕುಂತಿಯು ಮೊದಲಿನಂತೆಯೇ ಮಿಂದು, ಮಡಿಯುಟ್ಟು, ಮುತ್ತಿನ ತೊಡಿಗೆಗಳನ್ನು ತೊಟ್ಟು, ದರ್ಭೆಯ ಹಾಸಿಗೆಯಲ್ಲಿದ್ದು-
ಕಂ|| ಮಂತ್ರಾಕ್ಷರ ನಿಯಮದಿನಭಿ |
     ಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದೇಂ ||
     ಮಂತ್ರಂ ಪೇೞೆನೆ ಕುಡು ರಿಪು |
     ತಂತ್ರಕ್ಷಯಕರನನೆನಗೆ ಹಿತನಂ ಸುತನಂ ||೧೨೪||
(ಮಂತ್ರಾಕ್ಷರ ನಿಯಮದಿನ್ ಅಭಿಮಂತ್ರಿಸಿ ಬರಿಸಿದೊಡೆ, ವಾಯುದೇವಂ ಬಂದು “ಏಂ ಮಂತ್ರಂ ಪೇೞ್” ಎನೆ, “ಕುಡು ರಿಪು ತಂತ್ರಕ್ಷಯಕರನನ್ ಎನಗೆ ಹಿತನಂ ಸುತನಂ”)
ಮಂತ್ರಾಕ್ಷರ ನಿಯಮದಿಂದ ವಾಯುದೇವನನ್ನು ಬರಿಸಿದಳು. ವಾಯುದೇವನು ಬಂದು ‘ಯಾಕೆ ಮಂತ್ರವನ್ನು ಹೇಳಿದಿ?’ ಎಂದು ವಿಚಾರಿಸಿದನು. ಕುಂತಿಯು ‘ನನಗೆ ವೈರಿಗಳ ತಂತ್ರಗಳನ್ನು ನಾಶ ಮಾಡಬಲ್ಲಂಥ ಮಗನನ್ನು  ಕೊಡು’-
ವ|| ಎಂಬುದುಮದೇವಿರಿದಿತ್ತೆನೆಂದು ವಿಯತ್ತಳಕ್ಕೊಗೆದೊಡೆ ಅತನಂಶಮಾಕೆಯ ಗರ್ಭಸರೋವರದೊಳಗೆ ಚಂದ್ರಬಿಂಬದಂತೆ ಸೊಗಯಿಸೆ-
(ಎಂಬುದುಂ “ಅದೇವಿರಿದು? ಇತ್ತೆನ್” ಎಂದು ವಿಯತ್ತಳಕ್ಕೆ ಒಗೆದೊಡೆ, ಅತನ ಅಂಶಂ ಆಕೆಯ ಗರ್ಭಸರೋವರದೊಳಗೆ ಚಂದ್ರಬಿಂಬದಂತೆ ಸೊಗಯಿಸೆ,)
ಎಂದು ಕೇಳಿದಾಗ ‘ಅದು ಯಾವ ದೊಡ್ಡ ವಿಷಯ? ಇಗೋ ಕೊಟ್ಟೆ!’ ಎಂದು ಹೇಳಿ ಮರಳಿ ಆಕಾಶಕ್ಕೆ ನೆಗೆದನು. ಕುಂತಿಯ ಬಸಿರೆಂಬ ಕೆರೆಯಲ್ಲಿ ಆತನ ಅಂಶವು ಚಂದ್ರಬಿಂಬದಂತೆ ಸೊಗಯಿಸಿತು.
ಚಂ|| ತ್ರಿವಳಿಗಳುಂ ವಿರೋಧಿ ನೃಪರುತ್ಸವಮುಂ ಕಿಡೆವಂದುವಾನನೇಂ |
      ದುವ ಕಡುವೆಳ್ಪು ಕೂಸಿನ ನೆಗೞ್ತೆಯ ಬೆಳ್ಪುವೊಲಾಯ್ತು ಮು[ನ್ನೆ]ಬ ||
      ಳ್ಕುವ ನಡು ತೋರ್ಪ ಮೆಯ್ಯನೊಳಕೊಂಡುದು ಪೊಂಗೊಡನಂ ತಮಾಳ ಪ|
      ಲ್ಲವದೊಳೆ ಮುಚ್ಚಿದಂದದೊಳೆ ಚೂಚುಕಮಾಂತುದು ಕರ್ಪನಾಕೆಯಾ ||೧೨೫||
(ತ್ರಿವಳಿಗಳುಂ ವಿರೋಧಿ ನೃಪರ ಉತ್ಸವಮುಂ ಕಿಡೆವಂದುವು, ಆನನೇಂದುವ ಕಡುವೆಳ್ಪು ಕೂಸಿನ ನೆಗೞ್ತೆಯ ಬೆಳ್ಪುವೊಲ್ ಆಯ್ತು, ಮುನ್ನೆ ಬಳ್ಕುವ ನಡು ತೋರ್ಪ ಮೆಯ್ಯನ್ ಒಳಕೊಂಡುದು, ಪೊಂಗೊಡನಂ ತಮಾಳ ಪಲ್ಲವದೊಳೆ ಮುಚ್ಚಿದ ಅಂದದೊಳೆ ಚೂಚುಕಂ ಆಂತುದು ಕರ್ಪನ್ ಆಕೆಯಾ.)
ಬಸುರಿ ಕುಂತಿಯ ತ್ರಿವಳಿಗಳೂ, ವೈರಿರಾಜರ ವೈಭವವೂ ನಾಶವಾದವು; ಅವಳ ಮುಖದ ದಟ್ಟ ಬಿಳುಪು ಹೊಟ್ಟೆಯಲ್ಲಿದ್ದ ಕೂಸಿನ ಕೀರ್ತಿಯಂತೆ ಕಾಣಿಸಿತು; ಮೊದಲೇ ತೆಳುವಾಗಿ ಬಳುಕುತ್ತಿದ್ದ ಅವಳ ಸೊಂಟವು ಈಗ ದಪ್ಪಗಿನ ಮೈಯನ್ನು ಹೊರುವಂತಾಯಿತು; ಚಿನ್ನದ ಕೊಡವನ್ನು ಹೊಂಗೆಯ ಚಿಗುರುಗಳಿಂದ  ಮುಚ್ಚಿದಂತೆ ಅವಳ ಮೊಲೆತೊಟ್ಟುಗಳು ಕಪ್ಪಾದವು.
ಕಂ|| ಆ ಸುದತಿಯ ಮೃದುಪದ ವಿ|
     ನ್ಯಾಸಮುಮಂ ಶೇಷನಾನಲಾರದೆ ಸು[ಯ್ದಂ] ||
     ಬೇಸಱಿನೆಂದೊಡೆ ಗರ್ಭದ |
     ಕೂಸಿನ ಬಳೆದಳವಿಯಳವನಳೆವರುಮೊಳರೇ ||೧೨೬||
(ಆ ಸುದತಿಯ ಮೃದುಪದ ವಿನ್ಯಾಸಮುಮಂ ಶೇಷನ್ ಆನಲಾರದೆ ಸುಯ್ದಂ ಬೇಸಱಿನ್ ಎಂದೊಡೆ ಗರ್ಭದ ಕೂಸಿನ ಬಳೆದ ಅಳವಿಯ ಅಳವನುಂ ಅಳೆವರುಂ ಒಳರೇ?)
ಆ ಚೆಂದಸಾಲು ಹಲ್ಲಿನವಳು ಮೆದುವಾಗಿ ಇರಿಸಿದ ಹೆಜ್ಜೆಯನ್ನು ಸಹ ಶೇಷನು ಹೊರಲಾರದೆ ಬೇಸರದಿಂದ ಏದುಸಿರು ಬಿಟ್ಟನು. ಎಂದ ಮೇಲೆ ಅವಳ ಬಸಿರಿನಲ್ಲಿ ಬೆಳೆಯುತ್ತಿದ್ದ ಕೂಸಿನ ಬೆಳವಣಿಗೆಯ ಪ್ರಮಾಣವನ್ನು ಅಳೆಯುವವರು ಯಾರಾದರೂ ಇದ್ದಾರೆಯೇ?
ವ|| ಅಂತು ಗರ್ಭನಿರ್ಭರ ಪ್ರದೇಶದೊಳರಾತಿಗಳ್ಗಂತ ಕಾಲಂ ದೊರೆಕೊಳ್ವಂತೆ ಪ್ರಸೂತಿ ಕಾಲಂ ದೊರೆಕೊಳೆ-
(ಅಂತು ಗರ್ಭನಿರ್ಭರ ಪ್ರದೇಶದೊಳ್, ಅರಾತಿಗಳ್ಗೆ ಅಂತ ಕಾಲಂ ದೊರೆಕೊಳ್ವಂತೆ ಪ್ರಸೂತಿ ಕಾಲಂ ದೊರೆಕೊಳೆ,)
ಹಾಗೆ ದಿನ ತುಂಬುತ್ತ ಬಂದು, ವೈರಿಗಳಿಗೆ ಕೊನೆಗಾಲ ಬಂದಂತೆ ಹೆರಿಗೆಯ ಹೊತ್ತು ಬಂದಾಗ-
ಕಂ|| ಶುಭ ತಿಥಿ ಶುಭ ನಕ್ಷತ್ರಂ |
     ಶುಭ ವಾರಂ ಶುಭ ಮುಹೂರ್ತಮೆನೆ ಗಣಕನಿಳಾ ||
     ಪ್ರಭುವೊಗೆದನುದಿತ ಕಾಯ |
     ಪ್ರಭೆಯೊಗೆದಿರೆ ದಳಿತ ಶತ್ರು ಗೋತ್ರಂ ಪುತ್ರಂ ||೧೨೭||
(“ಶುಭ ತಿಥಿ, ಶುಭ ನಕ್ಷತ್ರಂ, ಶುಭ ವಾರಂ, ಶುಭ ಮುಹೂರ್ತಂ” ಎನೆ ಗಣಕನ್, ಇಳಾ ಪ್ರಭುವೊಗೆದನ್ ಉದಿತ ಕಾಯ ಪ್ರಭೆಯೊಗೆದಿರೆ ದಳಿತ ಶತ್ರು ಗೋತ್ರಂ ಪುತ್ರಂ.)
ಶತ್ರು ಸಂಹಾರಿಯಾದ ಭೀಮನು ತನ್ನ ಶರೀರದ ಕಾಂತಿಯನ್ನು ಎಲ್ಲೆಡೆಯೂ ಬೀರುತ್ತಾ ತಾಯಿಯ ಬಸಿರಿನಿಂದ ಹೊರಹೊಮ್ಮಿದನು. ಆಗ ಜ್ಯೋತಿಷಿಯು ಅವನು ಹುಟ್ಟಿದ ಗಳಿಗೆಯನ್ನು ಲೆಕ್ಕ ಹಾಕಿ, ಶುಭ ತಿಥಿ, ಶುಭ ನಕ್ಷತ್ರ, ಶುಭ ವಾರ, ಶುಭ ಮುಹೂರ್ತ ಎಂದು ಉದ್ಗರಿಸಿದನು.


ಕಾಮೆಂಟ್‌ಗಳಿಲ್ಲ: