ಭಾನುವಾರ, ಏಪ್ರಿಲ್ 24, 2011

ನೇತ್ರಾವತಿ ತಿರುವು: ಡಾ. ಮಧು ಸೀತಪ್ಪನವರೊಂದಿಗೆ ಸಂವಾದ


ಪ್ರಿಯ ಮಧು ಸೀತಪ್ಪನವರಿಗೆ ನಮಸ್ಕಾರ.
ದೂರದ ಬ್ರಿಟನ್ನಿನಲ್ಲಿದ್ದೂ ತಾಯಿನಾಡಿನ ಸಮಸ್ಯೆಗಳ ಬಗ್ಗೆ ನೀವು ತೋರಿಸುತ್ತಿರುವ ಆಸಕ್ತಿಗಾಗಿ ಅಭಿನಂದನೆಗಳು.
ನಾನು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನಿಮ್ಮ ಲೇಖನವನ್ನು ಓದಿರಲಿಲ್ಲ. ಇತ್ತೀಚೆಗೆ ಅಕಸ್ಮಾತ್ತಾಗಿ ನಿಮ್ಮ ಬ್ಲಾಗನ್ನು ನೋಡಿದೆ. ನೇತ್ರಾವತಿ ತಿರುವು ಯೋಜನೆಯ ಕುರಿತು ನಾನು ಮೊದಲಿಂದಲೂ ಆಸಕ್ತಿ ತಳೆದವನು. ಹಾಗಾಗಿ ನಿಮ್ಮ ಲೇಖನಗಳನ್ನು ಕುತೂಹಲದಿಂದ ಓದಿದೆ. ಓದಿದ ನಂತರ ನನ್ನ ಕೆಲವು ವಿಚಾರಗಳನ್ನು ಮಂಡಿಸಿದ್ದೇನೆ. ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ.
"ಪ್ರಪಂಚದ ಮುಂದಿನ ಮಹಾಯುದ್ಧ ನೀರಿಗಾಗಿ ನಡೆಯಲಿದೆ" ಎಂದು ಯಾರೋ ಹೇಳಿದ್ದಾರಂತೆ. ನೀರು ದಿನದಿಂದ ದಿನಕ್ಕೆ ಅಮೂಲ್ಯವಾಗುತ್ತ ಹೋಗುತ್ತಿದೆ. ನಮ್ಮ ಚರ್ಚೆಯ ಮೂಲದಲ್ಲಿರುವುದೂ ನೀರೇ. ನೀರಿಲ್ಲದ ಬಯಲುಸೀಮೆಯ ಜನರ, ಅದರಲ್ಲೂ ಹೆಂಗಸರ ಕಷ್ಟ ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಆದರೆ ಬಯಲು ಸೀಮೆಯ ಜನರ ಸಮಸ್ಯೆಗೆ ಪಶ್ಚಿಮ ಘಟ್ಟಗಳಿಂದ ನೀರು ಒಯ್ಯುವುದು ಪರಿಹಾರ ಅಲ್ಲ. ಅದು ಆಯಾ ಸ್ಥಳದಲ್ಲಿಯೇ ಪರಿಹಾರ ಮಾಡಿಕೊಳ್ಳಬೇಕಾದ ಸಮಸ್ಯೆ.
ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಮುಖ್ಯವಾಗಿ ಜನರ ಸಹಭಾಗಿತ್ವ ಬೇಕು. ಭಾರತಕ್ಕೆ ಅದರ ದೊಡ್ಡ ಪರಂಪರೆಯೇ ಇದೆ. ಬಹಳ ಹಿಂದಿನಿಂದಲೂ ಬಯಲು ಸೀಮೆಯಲ್ಲಿ ಕೆರೆಗಳೇ ನೀರಿನ ಮೂಲಗಳಾಗಿದ್ದವು. ಆದರೆ "ಅಭಿವೃದ್ಧಿ" ಆದ ಹಾಗೆ ವಿದ್ಯುತ್ ಬಂತು. ಬೋರ್ ವೆಲ್ ತೆಗೆಯುವುದು ಸಾಧ್ಯವಾಯಿತು. ಕೆರೆಗಳನ್ನು, ಅದರೊಂದಿಗೆ ಬೆಳೆದು ಬಂದಿದ್ದ ನೀರು ಹಂಚಿಕೆಯ ವ್ಯವಸ್ಥೆಯನ್ನು ನಾವು ಕೈಬಿಟ್ಟೆವು. ಈಗ "ಇದ್ದಿದ್ದಿಲ್ಲ ಪೆದ್ದಂಭಟ್ಟ" ಎಂಬಂತಾಗಿದೆ ನಮ್ಮ ಸ್ಥಿತಿ.
ಸರಕಾರವೇನೋ ಕೆರೆಗಳ ಪುನರುಜ್ಜೀವನ ಎಂಬ ಹೆಸರಿನಲ್ಲಿ ಹಣವನ್ನು "ನೀರಿನಂತೆ" (ಈಗ ಹಾಗೆ ಹೇಳುವ ಹಾಗಿಲ್ಲ ಅಲ್ಲವೆ?) ಚೆಲ್ಲುತ್ತಿದೆ. ಆದರೆ, ಎಲ್ಲಿಯವರೆಗೆ ಜನರ ಸಾಮೂಹಿಕ ಸಹಭಾಗಿತ್ವ ಇಲ್ಲವೋ, "ನಮ್ಮ ಊರ ಕೆರೆಗೆ ನಾವೇ ಜವಾಬ್ದಾರರು" ಎಂಬ ಭಾವನೆ ಪುನಃ ಬರುವುದಿಲ್ಲವೋ, ಎಲ್ಲಿಯವರೆಗೆ ನಾವು ಪ್ರತಿಯೊಂದಕ್ಕೂ ಸರಕಾರದ ಕಡೆಗೆ ನೋಡುತ್ತಿರುತ್ತೇವೋ ಅಲ್ಲಿಯವರೆಗೂ ಸಮಸ್ಯೆಗೆ ಪರಿಹಾರವಿಲ್ಲ.
ಬಹುಶಃ ವಿನಾಯಕರೂ ಇದನ್ನು ಹೇಳಿರಬೇಕು. ನನ್ನ ನಿಲುವೂ ಅದೇ: ಜನಸಂಖ್ಯೆಯ ನಿಯಂತ್ರಣ, ಕೆರೆಗಳ ಪುನರುಜ್ಜೀವನ, ಜನರ ಸಹಭಾಗಿತ್ವ, ಮಳೆನೀರು ಕೊಯ್ಲು, ನೀರು ನಿರ್ವಹಣೆ, ಕಾಡುಗಳನ್ನು ಮತ್ತೆ ಬೆಳೆಸುವುದು ಮುಂತಾದ ವಿಧಾನಗಳಿಂದಲೇ ಬಯಲುಸೀಮೆಯ ನೀರಿನ ಸಮಸ್ಯೆ ಪರಿಹಾರವಾಗಬೇಕು. ಅದನ್ನು ಸಾಧಿಸಲು ಸಾಧ್ಯ. ರಾಳೇಗಾಂವ್ ಸಿದ್ದಿಯಲ್ಲಿ ಅಣ್ಣಾ ಹಜಾರೆ ಅದನ್ನು ಸಾಧಿಸಿ ತೋರಿಸಿದ್ದಾರೆ ಎಂದುಕೊಂಡಿದ್ದೇನೆ. ನೀರಿನ ಕುರಿತಾದ ಶ್ರೀ ಪಡ್ರೆಯವರ ಪುಸ್ತಕಗಳನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಇಲ್ಲವಾದರೆ ದಯವಿಟ್ಟು ಓದಿ ನೋಡಿ.
ಇನ್ನು ಪಶ್ಚಿಮಘಟ್ಟಗಳಿಂದ ನೀರು ಒಯ್ಯುವುದರ ಪರವಾಗಿ ನಿಮ್ಮ ಲೇಖನದಲ್ಲಿರುವ ಹಲವು ಅಂಶಗಳಿಗೆ ಉತ್ತರಿಸಲು ಇಲ್ಲಿ ಪ್ರಯತ್ನಿಸಿದ್ದೇನೆ. ವಾದ ನನ್ನ ಉದ್ದೇಶವಲ್ಲ. ಪಶ್ಚಿಮ ಘಟ್ಟವೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ. ಅದರ ಹೊಟ್ಟೆ ಕೊಯ್ಯುವ ಕೆಲಸ ನಾವು ಮಾಡುವುದು ಬೇಡ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುತ್ತಮುತ್ತಲಿರುವ ಇರುವ ಇಪ್ಪತ್ತೆರಡು ನದಿಗಳ ನೀರು ಅರಬ್ಬೀ ಸಮುದ್ರಕ್ಕೆ ಸೇರುತ್ತದೆ (೩೦೧೬ ಟಿ‌ಎಂಸಿ). ಅಂದರೆ ನೇತ್ರಾವತಿ ನದಿಯಿಂದ ಮಾತ್ರ ಅರಬ್ಬೀ ಸಮುದ್ರ ಜೀವಿಸಿಲ್ಲ. ಮುಂಗಾರು ಮಳೆಯ ಸಂದರ್ಭದಲ್ಲಿ ಈ ಜೀವನದಿಯಿಂದ ಪ್ರತಿದಿನ ೪೧೫ ಟಿ‌ಎಂಸಿಯಷ್ಟು ನೀರು ಸಮುದ್ರದ ಪಾಲಾದರೆ, ಉಳಿದ ೨೧ ನದಿಗಳು ಮತ್ತು ಅನೇಕ ಹಳ್ಳಗಳಿಂದ ೨೪೦೦ ಟಿ‌ಎಂಸಿಯಷ್ಟು ಸಿಹಿ ನೀರು ಸಮುದ್ರದಲ್ಲಿ ಕರಗುತ್ತದೆ. ಈ ಅಂಕಿ ಅಂಶಗಳನ್ನು ಏಕೆ ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇನೆ ಎಂದರೆ, ವಿನಾಯಕ ಭಟ್ಟರು ತಮ್ಮ ಲೇಖನದಲ್ಲಿ ಈ ಯೋಜನೆಯಿಂದ ಸಮುದ್ರದ ಉಪ್ಪಿನಾಂಶ ಹೆಚ್ಚಾಗುತ್ತದೆ ಹಾಗೂ ನೇತ್ರಾವತಿ ನದಿಗೆ ಸಮುದ್ರದ ನೀರು ನುಗ್ಗುವುದರಿಂದ ನದಿಯ ಉಪ್ಪಿನಾಂಶವು ಹೆಚ್ಚಾಗುತ್ತದೆ ಎಂದಿದ್ದಾರೆ. ಈ ಯೋಜನೆಗೆ ನೇತ್ರಾವತಿ ನದಿಯಿಂದ ಕೇವಲ ೪೦ ಟಿ.ಎಂ.ಸಿ ನೀರನ್ನು ಮಾತ್ರ ಬಳಸುತ್ತೇವೆ. ಅಂದರೆ ನೇತ್ರಾವತಿಯ ಮಳೆಗಾಲದ ೪೧೫ ಟಿ.ಎಂ.ಸಿ.ಯಲ್ಲಿ ಕೇವಲ ಶೇ.೧೦ರಷ್ಟು ನೀರು ಕಡಿಮೆಯಾಗುವುದರಿಂದ ನದಿಯ ನೀರಿನ ಲವಣಾಂಶಗಳಾಗಲಿ ಅಥವಾ ಉಪ್ಪಿನಾಂಶವಾಗಲಿ ಅಥವಾ ಸಿಹಿ ನೀರಿನ ಜೀವರಾಶಿಯ ಆಹಾರಕ್ಕಾಗಲಿ ತೊಂದರೆಯಾಗುತ್ತದೆನ್ನುವುದು ಹಾಸ್ಯಾಸ್ಪದ. ಮತ್ತೊಂದು ಅವರ ಪ್ರಶ್ನೆಯೆಂದರೆ, ಸಮುದ್ರಕ್ಕೆ ಸೇರುವ ನದಿ ನೀರು ಕಡಿಮೆಯಾದರೆ ಸಮುದ್ರದ ಉಪ್ಪಿನಾಂಶ ಹೆಚ್ಚಾಗುವ ಆತಂಕ. ನೇತ್ರಾವತಿ ನದಿ ಸಮುದ್ರ ಸೇರುವ ಆಜು ಬಾಜಿನಲ್ಲಿ ಸುಮಾರು ೨೦೦೦ ಟಿ.ಎಂ.ಸಿ.ಯಷ್ಟು ನೀರು ಉಳಿದ ೨೧ ನದಿಗಳಿಂದ ಹಾಗು ಅನೇಕ ಹಳ್ಳಗಳಿಂದ ಮಳೆಗಾಲದಲ್ಲಿ ಸೇರುತ್ತದೆ. ಇದಲ್ಲದೆ ಸಮುದ್ರದ ಸಾವಿರಾರು ಚದರ ಕಿ.ಮಿ.ಗಳ ಮೇಲೆ ೪೫೦೦ ಮಿ.ಮಿ.ಗಿಂತ ಹೆಚ್ಚು ಮಳೆ ಬೀಳುವುದರಿಂದ ಸಾವಿರಾರು ಟಿ.ಎಂ.ಸಿ.ಯಷ್ಟು ಸಿಹಿ ನೀರು ಸಮುದ್ರಕ್ಕೆ ಸೇರುತ್ತಿರುವಾಗ ಸಮುದ್ರದ ಉಪ್ಪಿನಾಂಶ ಹೆಚ್ಚಾಗಿ ಮೀನುಗಾರರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸುವವರಿಗೆ ಏನೆನ್ನಬೇಕೊ ನನಗೆ ತಿಳಿಯುತ್ತಿಲ್ಲ. ಏಕೆಂದರೆ ಅರಬ್ಬೀ ಸಮುದ್ರದಂತಹ ಅಕ್ಷಯಪಾತ್ರೆಗೆ ಅಸಂಖ್ಯಾತ ನದಿಗಳ ನೀರು, ಆಕಾಶದಿಂದ ಬೀಳುವ ಮಳೆಯೆ ನೀರು ಬಂದು ಸೇರುತ್ತಲೇ ಇರುತ್ತದೆ.

ಪರಮಶಿವಯ್ಯನವರ ದೃಷ್ಟಿ ನೇತ್ರಾವತಿಯನ್ನು ತಿರುಗಿಸುವುದಕ್ಕೆ ಸೀಮಿತವಾಗಿಲ್ಲ. ಅವರ ವರದಿಯ ಒಂದನೇ ಅಧ್ಯಾಯದ ೧.೦೭ನೇ ಅಂಶ ಹೀಗಿದೆ: ".....conceiving this water for beneficial use, lies the INGENUITY of the Engineers, and marks as the first step in harnessing further waters of west flowing rivers."
೧.೦೮ರಲ್ಲಿ ಹೀಗಿದೆ:"..... It also paves way for utilising more water of west flowing rivers to drought affected areas" .
ಅಧ್ಯಾಯ ೩ರ ೩.೦೫ರಲ್ಲಿ ಹೀಗಿದೆ: "All the waters of East flowing Rivers have been harnessed (some projects are under construction) and it is time to plan for harvesting these west flowing river waters for beneficial use."
ಅಧ್ಯಾಯ ೨೦ರ ೨೦.೦೪ರಲ್ಲಿ ಹೀಗಿದೆ:
It is expected that west flowing waters can be diverted to East by installing Riversible turbines. When this new concept becomes feasible this can be adopted in our country, when there will be huge quantity of water available to our state.
ಇನ್ನು ನದಿಗಳ ಸಿಹಿನೀರು ಸಮುದ್ರವನ್ನು ಸೇರುವುದನ್ನು ತಡೆಯುವುದರಿಂದ ಆಗುವ ಪರಿಣಾಮಗಳೇನು ಎಂಬುದನ್ನು ತಜ್ನರು ಅಧ್ಯಯನ ಮಾಡಿ ವರದಿ ಕೊಡಬೇಕು. ಅದು ಜನಸಾಮಾನ್ಯರು ಉತ್ತರಿಸಬಹುದಾದ ಪ್ರಶ್ನೆಯಲ್ಲ.
ಮಂಗಳೂರಿನ ಸಮುದ್ರಕ್ಕೆ ಈಗಾಗಲೇ ಎಂ ಆರ್ ಪಿ ಎಲ್ ಮತ್ತಿತರ ಕಂಪೆನಿಗಳು ತಮ್ಮ ತ್ಯಾಜ್ಯವನ್ನು ಸುರಿಯುತ್ತಿವೆ. ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿ ಇನ್ನು ಸ್ವಲ್ಪ ಸಮಯದಲ್ಲೇ ತನ್ನ ತ್ಯಾಜ್ಯಗಳನ್ನು ಸಮುದ್ರಕ್ಕೆ ಬಿಡಲು ಪ್ರಾರಂಭಿಸುತ್ತದೆ. ದಿನದಿಂದ ದಿನಕ್ಕೆ ಆಧುನಿಕ ತಾಂತ್ರಿಕತೆಯಿಂದಾಗಿ ಹೆಚ್ಚು ಹೆಚ್ಚು ಅಪಾಯಕಾರಿ ತ್ಯಾಜ್ಯಗಳು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ನದಿಗಳ ಮೂಲಕ ಸಮುದ್ರವನ್ನು ಸೇರುತ್ತಿದೆ. ಮೀನುಗಾರಿಕೆ ಮಾಡುವ ಡೀಸೆಲ್ ಚಾಲಿತ ದೋಣಿಗಳಿಂದಾಗಿಯೂ ಸಮುದ್ರದ ನೀರು ಮಲಿನಗೊಳ್ಳುತ್ತಿದೆ. ಇದರೊಂದಿಗೆ, ಸೇರಬೇಕಾದ ಸಿಹಿನೀರು ಸೇರದೆ ಹೋದರೆ ಏನಾದೀತು ಎಂಬುದನ್ನು ಅಧ್ಯಯನ ಮಾಡಿಯೇ ಹೇಳಬೇಕಾಗುತ್ತದೆ. ಮೇಲ್ನೋಟಕ್ಕೆ ಕಾಣುವಂತೆ, ಮೀನುಗಾರಿಕೆ ನಿಧಾನವಾಗಿಯಾದರೂ ಅಪಾಯಕ್ಕೆ ಸಿಕ್ಕಿಕೊಳ್ಳುತ್ತಿದೆ.


ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳ ತುದಿಯ ನೇತ್ರಾವತಿ ನದಿಯ ಒಟ್ಟು ಜಲಾಯನ ಪ್ರದೇಶದ ಶೇ.೧೦ರಷ್ಟು ಪ್ರದೇಶದಲ್ಲಿ ಮಾತ್ರ ಮಳೆ ಕೊಯ್ಲು ಮಾಡಲಾಗುತ್ತದೆ.

ಶೇ. ೧೦ ಎನ್ನುವುದು ಪ್ರಾರಂಭ ಮಾತ್ರ. ಮುಂದೆ ಅದು ಹೆಚ್ಚುತ್ತ ಹೋಗುತ್ತದೆ.

೧೯೧೩ರಲ್ಲಿ ನೇತ್ರಾವತಿ ನದಿ ಬತ್ತಿತ್ತು ಎಂದು ಮಾತ್ರ ತಿಳಿಸಲಾಗಿದೆ. ಆದರೆ ವಿನಾಯಕ್ ಅವರು ಎರಡು ಮುಖ್ಯ ಪ್ರವಾಹಗಳ (೧೯೨೪, ೧೯೭೪) ಬಗ್ಗೆ ತಿಳಿಸೇ ಇಲ್ಲ. ಆ ಎರಡು ಸಂದರ್ಭದಲ್ಲಿ ಬಂಟ್ವಾಳವು ಸಂಪೂರ್ಣ ಮುಳುಗಿ ಅಲ್ಲಿದ್ದ ನಿವಾಸಿಗಳು ಗುಳೆ ಎದ್ದು ಹೋಗಿದ್ದರು. ಅಷ್ಟಲ್ಲದೆ ಈ ನದಿಯಿಂದ ಅನೇಕ ಸಲ ತೀರದ ಪ್ರದೇಶಗಳು ಪ್ರವಾಹ ಪೀಡೆಯಿಂದ ಬಳಲಿದೆ.

ನಾನು ಸುಮಾರು ಮೂವತ್ತು ವರ್ಷದಿಂದ ಬಂಟ್ವಾಳದಲ್ಲಿದ್ದೇನೆ. ಬಂಟ್ವಾಳದವರಿಗೆ ನೆರೆ ಖಂಡಿತವಾಗಿಯೂ ಒಂದು ಸಮಸ್ಯೆಯಲ್ಲ.
(ಈ ನಡುವೆ ವಿನಾಯಕರದ್ದಾಗಲಿ, ಮೋಹನ ಹೆಗಡೆಯವರದ್ದಾಗಲಿ ಪ್ರತಿಕ್ರಿಯೆ ನನಗೆ ಓದಲು ಸಿಗಲಿಲ್ಲ. ಅದನ್ನು ಒದಗಿಸಬಹುದೆ?)


ಅರಣ್ಯ ನಾಶದ ಮುಖ್ಯ ಕಾರಣಗಳೆಂದರೆ ಜಮೀನಿನ ಒತ್ತುವರಿ ಮತ್ತು ಮರಗಳ ಕಳ್ಳ ಸಾಗಾಣಿಕೆ. ಇದಲ್ಲದೆ ಕೊಂಕಣ ರೈಲು ಯೋಜನೆಯ ಅನುಷ್ಠಾನದಲ್ಲಿ ೨೦೦೦ ಹೆಕ್ಟೆರುಗಳಿಗಿಂತ ಹೆಚ್ಚು ಅರಣ್ಯ ನಾಶವಾದದ್ದಲ್ಲದೆ, ೪೦ ಸುರಂಗಗಳ ಕೊರೆಯುವಿಕೆಯಿಂದ ಹಲವಾರು ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿವೆ. ಇದಲ್ಲದೆ ಸಕಲೇಶಪುರದಿಂದ- ಮಂಗಳೂರಿನವರೆಗೆ ಕೈಗೆತ್ತಿಕೊಳ್ಳುವ ಡಬಲ್ ರೋಡ್ ರಚನೆಯಿಂದಲೂ ಸಹ ಅರಣ್ಯ ನಾಶವಾಗುವುದಲ್ಲದೆ, ಭೂ ಕುಸಿತ ಸಂಭವಿಸುವ ಸಾಧ್ಯತೆಗಿಳಿವೆ. ಹಾಗೆಂದು ಅಭಿವೃದ್ಧಿಯ ವಿಚಾರದಲ್ಲಾಗಲಿ ಅಥವಾ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ತ್ಯಾಗ ಬಲಿದಾನಗಳನ್ನು ಮಾಡಬೇಕಾಗುತ್ತದೆ. ಯಾವುದೇ ಒಂದು ಮರವನ್ನು ಕಡಿದರೆ ಅದರ ಬದಲಿಗೆ ಮತ್ತೊಂದು ಗಿಡ ನೆಡಬೇಕೆಂದು ಒ‌ಔ‌ಇ‌ಈ ತಿಳಿಸಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರ ಲಿಖಿತ ಭರವಸೆಯ ವಿನಃ ಕೇಂದ್ರ ಅರಣ್ಯ ಇಲಾಖೆ ಇಂತಹ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ.

ಹಿಂದೆ ನಾಶವಾಗಿದೆ ಹೌದು. ಅದು ಇನ್ನು ಮುಂದೆ ಕಾಡನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಬೇಕು, ಕಡಿಯುವುದಕ್ಕೆ ಸಮರ್ಥನೆಯಾಗಬಾರದು.

ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ. ನೂತನ ಮಾದರಿಯ ತಂತ್ರ ಜ್ಞಾನದಿಂದ ಕೊಳವೆಗಳನ್ನು ಅಳವಡಿಸುವುದರಿಂದ ಯಾವುದೇ ರೀತಿಯ ಬೃಹತ್ ಯತ್ರೋಪಕರಣಗಳ ಬಳಕೆಯ ಅವಶ್ಯಕತೆ ಇರುವುದಿಲ್ಲ. ನನ್ನ ಲೇಖನದಲ್ಲಿ ಈ ಪೈಪ್ ಅಳವಡಿಕೆಗೆ ಬೇಕಾಗುವ ಸ್ಥಳ ೭೩೦ ಹೆಕ್ಟೇರ್ ಎಂದು ಬರೆದಿದ್ದೆ. ಕ್ಷಮಿಸಿ ಅದು ಕಣ್ ತಪ್ಪಿನಿಂದ ಆದದ್ದು- ೧೮೦ ಹೆಕ್ಟೇರ್‌ನಷ್ಟು ಮಾತ್ರ ಬೇಕಾಗುತ್ತದೆ (ಪೂರಕ ದಾಖಲೆಗಳು ನನ್ನ ಬಳಿ ಇವೆ). ಬೇಕಾಗುವ ಕಾಲುವೆಯ ಉದ್ದ ಮತ್ತು ಅಗಲವನ್ನು ಲೆಕ್ಕಹಾಕಿದರೆ ೧೮೦ ಹೆಕ್ಟೇರ್‌ಗಳಷ್ಟು ಪ್ರದೇಶ ಮಾತ್ರ ಬೇಕಾಗುತ್ತದೆ. ಈ ೧೮೦ ಹೆಕ್ಟೇರ್‌ಗಳಲ್ಲಿ ಅರಣ್ಯ ಪ್ರದೇಶವಲ್ಲದೆ, ಕಾಫಿ ಹಾಗು ರಬ್ಬರ್ ಎಸ್ಟೇಟ್‌ಗಳು, ಸ್ಕ್ರಬ್ ಏರಿಯಾ ಮತ್ತು ಹಳ್ಳ, ಮಾರ್ಜಿನ್‌ಗಳು ಸೇರಿವೆ.

ಯೋಜನೆಯ ಸ್ವರೂಪದ ಸ್ಪಷ್ಟ ಕಲ್ಪನೆ ಇಲ್ಲದೆ ಈ ಬಗ್ಗೆ ಏನೂ ಹೇಳುವುದು ಕಷ್ಟ. ಕಿ.ಮೀ.ಗೆ ಏಳು ಇಂಚು ಇಳಿಜಾರು ಇರುವ ಕಾಲುವೆಗಳ ಮೂಲಕ ನೀರು ಸಂಗ್ರಹಿಸುವುದಾಗಿ ಪರಮೇಶ್ವರಯ್ಯನವರು ಹೇಳಿದ್ದಾರೆ. ಕೊಳವೆಗಳ ವಿಷಯ ಅವರು ಎಲ್ಲೂ ಮಾತಾಡಿದ್ದು ಕಾಣಲಿಲ್ಲ. ಮೇಲಿಂದ ಇಳಿದು ಬಂದ ನೀರು ಸಂಗ್ರಹ ಆಗಬೇಕಾದರೆ ತೆರೆದ ಕಾಲುವೆ ಬೇಕು; ಈ ಕಾಲುವೆಗಳಲ್ಲಿ ನೀರು ಇಂಗಬಾರದು. ಎಂದರೆ ಅವುಗಳನ್ನು ಕಾಂಕ್ರೀಟಿನಲ್ಲಿ ನಿರ್ಮಾಣ ಮಾಡಬೇಕು. ಕಾಲುವೆಯ ಪ್ರಾರಂಭದ ಗಾತ್ರವನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ಹೋಗುತ್ತ ಹೋಗುತ್ತ ಸಂಗ್ರಹವಾಗುವ ನೀರಿನ ಪ್ರಮಾಣ ಹೆಚ್ಚುತ್ತ ಹೋಗುವುದರಿಂದ, ಕಾಲುವೆಯ ಗಾತ್ರವನ್ನೂ ಅದಕ್ಕೆ ತಕ್ಕಂತೆ ಹೆಚ್ಚಿಸುತ್ತ ಹೋಗಬೇಕಾದೀತು. ಇದೆಲ್ಲ ತಾಂತ್ರಿಕ ವಿಷಯಗಳು. "ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ." ಎಂದು ಪರಮಶಿವಯ್ಯನವರು ಎಲ್ಲಿ ಹೇಳಿದ್ದಾರೆ ಎಂದು ತಿಳಿಸಬಹುದೆ?

ಬೆಳೆಯುತ್ತಿರುವ ನಗರವಾದ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿರುವುದರಿಂದ ದಿನವೊಂದಕ್ಕೆ ೫೦೦ ಮಿಲಿಯನ್ ಗ್ಯಾಲನ್‌ಗಳಷ್ಟು ನೀರು ಬೇಕೆಂದು ಹೇಳಿದ್ದಾರೆ! ಇದು ಸತ್ಯಕ್ಕೆ ದೂರವಾದುದು.

ಹೌದು. ೫೦೦ ಎಂಜಿಡಿ ಎಂದು ಯಾರಾದರೂ ಹೇಳಿದ್ದರೆ ಅದು ಸರಿಯಲ್ಲ.
ಇಡೀ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿಲ್ಲ. ಈಗ ಮಂಗಳೂರು ವಿಶೇಷ ಅರ್ಥಿಕ ವಲಯ ಕಂಪೆನಿ ಎಂಬ ಕಂಪೆನಿ ಅಸ್ತಿತ್ವಕ್ಕೆ ಬಂದಿದೆ. ಈ ಕಂಪೆನಿಗೆ ಸುಮಾರು ೪೦೦೦ ಎಕ್ರೆ ಭೂಮಿ ಬೇಕಾಗಿದ್ದು, ಈಗ ಸುಮಾರು ೨೦೦೦ ಎಕ್ರೆಯಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಈ ಕಂಪೆನಿಯ ಒಟ್ಟು ನೀರಿನ ಅವಶ್ಯಕತೆ ೪೫ ಎಂಜಿಡಿ. ಈ ಪೈಕಿ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು ೧೫ ಎಂಜಿಡಿ ನೀರೆತ್ತಲು ಸರಕಾರ ಅನುಮತಿ ನೀಡಿದೆ. ಈ ೧೫ರ ಪೈಕಿ ೧೨.೫ ಎಂಜಿಡಿ ನೀರನ್ನು ಕಂಪೆನಿ ನೇತ್ರಾವತಿ ನದಿಯಿಂದ ಎತ್ತಲು ಉದ್ದೇಶಿಸಿದೆ. ಈ ಬಗ್ಗ ಪೈಪ್ ಲೈನ್ ಅಳವಡಿಸಲು ಈಗಾಗಲೇ ಟೆಂಡರು ಕರೆಯಲಾಗಿದೆ.
ನೇತ್ರಾವತಿ ನದಿಯ ನೀರು ಬಳಸುವ ಮುಖ್ಯ ಊರುಗಳೆಂದರೆ, ಕುಕ್ಕೆ ಸುಬ್ರಹ್ಮಣ್ಯ (ಕುಮಾರಧಾರೆ), ಧರ್ಮಸ್ಥಳ, ಉಪ್ಪಿನಂಗಡಿ, ಪುತ್ತೂರು, ಬಂಟ್ವಾಳ ಮತ್ತು ಮಂಗಳೂರು. ನದಿಯ ಉದ್ದಕ್ಕೂ ಅಸಂಖ್ಯಾತ ಸಣ್ಣ ಊರುಗಳಿವೆ. ಈ ಊರುಗಳೂ ನೀರಿಗಾಗಿ ನೇತ್ರಾವತಿಯನ್ನು ಆಶ್ರಯಿಸಿವೆ. ಅಸಂಖ್ಯಾತ ಪಂಪ್ ಸೆಟ್ ಗಳನ್ನು ನದಿಗೆ ಅಳವಡಿಸಲಾಗಿದೆ. (ನೇತ್ರಾವತಿ ಎಂದರೆ ಕುಮಾರಧಾರೆ ಮತ್ತು ನೇತ್ರಾವತಿ ನದಿಗಳ ಸಂಗಮ. ಸುಬ್ರಹ್ಮಣ್ಯದ ಕಡೆಯಿಂದ ಬರುವ ಕುಮಾರಧಾರೆ ಮತ್ತು ಧರ್ಮಸ್ಥಳದ ಕಡೆಯಿಂದ ಬರುವ ನೇತ್ರಾವತಿಗಳು ಉಪ್ಪಿನಂಗಡಿಯಲ್ಲಿ ಸಂಗಮವಾಗಿ ಮುಂದೆ ನೇತ್ರಾವತಿ ಎಂಬ ಹೆಸರಿನಲ್ಲಿ ಮಂಗಳೂರಿನವರೆಗೂ ಹರಿಯುತ್ತದೆ.)
ನೇತ್ರಾವತಿಗೆ ಈಗ ಮುಖ್ಯವಾಗಿ ಐದು ಅಣೆಕಟ್ಟುಗಳಿವೆ: ಮೊದಲನೆಯದು ಕುಮಾರಧಾರೆ ನದಿಗೆ ಪುತ್ತೂರಿನ ಸಮೀಪ ಕಟ್ಟಿರುವ ಅಣೆಕಟ್ಟು. ಇದರಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಎರಡನೆಯದು ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ. ಇದು ಕಿರು ಜಲವಿದ್ಯುತ್ ಯೋಜನೆ. ಮೂರನೆಯದು ಎಂ ಆರ್ ಪಿ ಎಲ್ ಕಂಪೆನಿಯ ಅಣೆಕಟ್ಟು. ಈ ಅಣೆಕಟ್ಟಿನಿಂದ ಒಟ್ಟು ೬ ಎಂಜಿಡಿ ನೀರು ಎತ್ತಲಾಗುತ್ತಿದೆ. ನಾಲ್ಕನೆಯದು ಎ ಎಂ ಆರ್ ಪವರ್ ಪ್ರಾಜೆಕ್ಟ್ ನ ಅಣೆಕಟ್ಟು. ಇದು ಕಿರು ಜಲವಿದ್ಯುತ್ ಯೋಜನೆ. ಐದನೆಯದು ಮಂಗಳೂರು ಮಹಾನಗರ ಪಾಲಿಕೆಯದು. ಇದರಿಂದ ಕಳೆದ ವರ್ಷದ ವರೆಗೂ ೧೮ ಎಂಜಿಡಿ ನೀರೆತ್ತಲಾಗುತ್ತಿತ್ತು. ಈ ವರ್ಷದಿಂದ ೩೬ ಎಂಜಿಡಿ ನೀರೆತ್ತಲು ಸಿದ್ಧತೆಗಳು ನಡೆಯುತ್ತಿವೆ.
ಆರನೆಯದಾಗಿ ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿ ೧೨.೫ ಎಂಜಿಡಿ ನೀರೆತ್ತಲು ಸಿದ್ಧತೆಗಳನ್ನು ನಡೆಸುತ್ತಿದೆ
ಪರಮಶಿವಯ್ಯನವರ ಯೋಜನೆ ಮಳೆಯ ನೀರನ್ನು ಮಾತ್ರ ತಿರುಗಿಸುವ ಉದ್ದೇಶ ಹೊಂದಿರುವುದರಿಂದ, ಮೇಲುನೋಟಕ್ಕೆ ಅದರಿಂದ ಯಾವ ತೊಂದರೆಯೂ ಆಗುವಂತೆ ಕಾಣುವುದಿಲ್ಲ. ಆದರೆ ಸಮಸ್ಯೆ ಇಷ್ಟು ಸರಳ ಅಲ್ಲ.
ನೇತ್ರಾವತಿಯ ಜೀವ ಇರುವುದು ಪಶ್ಚಿಮ ಘಟ್ಟದ ಕಾಡುಗಳಲ್ಲಿ. ಅಲ್ಲಿ ಕಾಡು ಇದ್ದರೆ ಮಾತ್ರ ನೇತ್ರಾವತಿ ಮಾತ್ರವಲ್ಲ, ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಎಲ್ಲ ನದಿಗಳಲ್ಲೂ ನೀರಿರುವುದು ಸಾಧ್ಯ. ಅಲ್ಲಿ ಕಾಡು, ಗುಡ್ಡಗಳನ್ನು ನಾಶ ಮಾಡುವುದೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಕೊಯ್ದ ಹಾಗೆಯೇ.
ಕರ್ನಾಟಕ ಸರಕಾರ ಈಗ ಸುಮಾರು ೨೭ ಕಿರುಜಲವಿದ್ಯುತ್ ಯೋಜನೆಗಳಿಗೆ ಈ ಪ್ರದೇಶದಲ್ಲಿ ಅನುಮತಿ ಕೊಟ್ಟಿದೆ. ಇವುಗಳಲ್ಲಿ ಕೆಲವು ಈಗಾಗಲೇ ಕಾರ್ಯಾರಂಭ ಮಾದಿವೆ. (ತೀರ ಇತ್ತೀಚೆಗೆ ಇನ್ನು ಮುಂದೆ ಕಿರು ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ಕೊಡುವುದಕ್ಕೆ ಹೈಕೋರ್ಟು ತಡೆಯಾಜ್ನೆ ನೀಡಿದೆ) ಈ ಯೋಜನೆಗಳಲ್ಲಿ ಹಲವು, ನೇರವಾಗಿ ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲೇ ಇವೆ. ಇವುಗಳ ಉತ್ಪಾದನಾ ಘಟಕಗಳಿಗಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕಾಡು ನಾಶ ಆಗುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಅವು ಉತ್ಪಾದಿಸುವ ವಿದ್ಯುತ್ತನ್ನು ಪೇಟೆಗೆ ಸಾಗಿಸಲು ವಿದ್ಯುತ್ ಲೈನುಗಳನ್ನು ಎಳೆಯುವಾಗ ಅಪಾರ ಪ್ರಮಾಣದ ಕಾಡು ನಾಶವಾಗುತ್ತದೆ. ಮಾತ್ರವಲ್ಲ, ಸದ್ಯಕ್ಕೆ ದುರ್ಗಮವಾಗಿರುವ ಈ ಪ್ರದೇಶಕ್ಕೆ ಎಲ್ಲ ರೀತಿಯ ಖದೀಮರುಗಳಿಗೂ ಪ್ರವೇಶ ಅತ್ಯಂತ ಸುಲಭವಾಗುತ್ತದೆ. ವಾಸ್ತವವಾಗಿ ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳಲು ಮಾಡಬೇಕಾದ ಮೊದಲ ಕೆಲಸವೆಂದರೆ ಅಲ್ಲಿಗೆ ಮನುಷ್ಯಪ್ರವೇಶವನ್ನು ಸಾಧ್ಯವಾದಷ್ಟೂ ತಡೆಯುವುದು. ಆದರೆ, ಈ ಕಿರು ಜಲವಿದ್ಯುತ್ ಯೋಜನೆಗಳಿಂದಾಗಿ ಪಶ್ಚಿಮಘಟ್ಟಗಳು ತಮ್ಮ ಸ್ವರೂಪವನ್ನೇ ಕಳೆದುಕೊಳ್ಳಲಿವೆ. ಇದರೊಂದಿಗೆ ನೇತ್ರಾವತಿ ತಿರುವು ಯೋಜನೆ ಜಾರಿಗೆ ಬಂದರಂತೂ, ಅಷ್ಟು ಭಾಗ ಪಶ್ಚಿಮ ಘಟ್ಟಗಳು ಸಂಪೂರ್ಣ ವಿರೂಪಗೊಳ್ಳಲಿವೆ. ಈ ತಪ್ಪನ್ನು, ಮುಂದೆ , ಬೇಕೆಂದರೂ ಸರಿಪಡಿಸಿಕೊಳ್ಳುವುದು ಸಾಧ್ಯವಿಲ್ಲ.


ಎರಡೂ ಜಿಲ್ಲೆಗಳಲ್ಲಿ ಸರಾಸರಿ ೭೪೫ ಮಿ.ಮೀ. ವಾರ್ಷಿಕ ಮಳೆಯಾಗುತ್ತದೆ. ಮಳೆ ಕೊಯ್ಲಿನಿಂದ ಸುಮಾರು ೮.೪೨ ಟಿ.ಎಮ್.ಸಿ ನೀರನ್ನು ಶೇಖರಿಸಬಹುದಾಗಿದೆ. ಎರಡೂ ಜಿಲ್ಲೆಗಳಿಗೆ ಒಟ್ಟು ೬೦ ಟಿ.ಎಂ.ಸಿ. ನೀರು ಬೇಕಾಗುತ್ತದೆ. ಅಂದರೆ ನಮಗೆ ಸುಮಾರು ೫೦ ಟಿ,ಎಂ.ಸಿ.ಗಳಷ್ಟು ನೀರು ಪ್ರತಿ ವರ್ಷ ಕೊರತೆ ಇದೆ.

ನೀವು ಯಾವ ಎರಡು ಜಿಲ್ಲೆಗಳನ್ನು ಹೇಳುತ್ತಿದ್ದೀರೆಂದು ನನಗೆ ತಿಳಿಯಲಿಲ್ಲ. ಆ ಪೈಕಿ ಒಂದು ಕೋಲಾರ ಎಂದು ಭಾವಿಸುತ್ತೇನೆ. ಅಲ್ಲಿ ಯಾರಾದರೂ, ವೈಯಕ್ತಿಕ ನೆಲೆಯಲ್ಲಾದರೂ ಮಳೆನೀರು ಸಂಗ್ರಹ ಮಾಡಿ ಬಳಸುತ್ತಿರುವ ಉದಾಹರಣೆಗಳು ನಿಮಗೆ ತಿಳಿದಿದೆಯೆ? ಅವರ ಅಭಿಪ್ರಾಯವೇನು? ಅಂಥವರ ವಿಳಾಸ ಸಿಕ್ಕಿದರೆ, ಅಲ್ಲಿಗೆ ಹೋಗಿ ನೋಡಿಬರುವ ಆಸೆ ನನಗಿದೆ. ದಯವಿಟ್ಟು ಗೊತ್ತಿದ್ದರೆ ತಿಳಿಸಿ.

ಕರಾವಳಿಯ ಜಾರ್ಜ್ ಫರ್ನಾಂಡಿಸ್ ರ್‍ಯೆಲ್ವೆ ಮಂತ್ರಿಯಾಗಿದ್ದಾಗ ಕೊಂಕಣ ರ್‍ಯೆಲ್ವೆ ಪ್ರಾಜೆಕ್ಟ್ ಜಾರಿಯಾಯ್ತು. ಇದರಲ್ಲಿ ಸುಮಾರು ೪೦೦೦ ಹೆಕ್ಟೆರುಗಳಷ್ಟು ಅರಣ್ಯ ನಾಶವಾದರೂ ಕರಾವಳಿಯ ಯಾವುದೇ ಪರಿಸರವಾದಿಗಳು ಚಕಾರವೆತ್ತಲಿಲ್ಲ.

ಇದು ವಾದದ ಮಾತು. ಪರಿಸರವಾದಿಗಳು ಅದನ್ನೂ ವಿರೋಧಿಸಿರಬಹುದು. ಇರಲಿ.
ಕೊಂಕಣ ರೈಲ್ವೆ ಹೋಗುವುದು ಉದ್ದಕ್ಕೂ ಸಮುದ್ರದ ಬದಿಯಲ್ಲಿ. ಬಹುಶಃ ಎಲ್ಲಿಯೂ ಅದರ ಹಳಿಗಳು ಸಮುದ್ರದಿಂದ ಒಂದು ಕಿ.ಮೀ. ಗಿಂತ ಹೆಚ್ಚು ದೂರದಲ್ಲಿಲ್ಲ. ಈ ಪ್ರದೇಶದಲ್ಲಿ ಇದ್ದಿರಬಹುದಾದ ಕಾಡಿಗೂ, ಪಶ್ಚಿಮಘಟ್ಟದ ಹೃದಯಭಾಗದಲ್ಲಿ ಇರುವ ಕಾಡಿಗೂ ಹೋಲಿಕೆ ಇಲ್ಲ.
"ಅಲ್ಲಿ ಕಡಿದಿದ್ದೇವೆ ಇಲ್ಲಿ ಯಾಕೆ ಕಡಿಯಬಾರದು?" ಎನ್ನುವುದಕ್ಕಿಂತ "ಅಲ್ಲಿ ಕಡಿದಿದ್ದೇವೆ, ಇಲ್ಲಾದರೂ ಉಳಿಸಿಕೊಳ್ಳೋಣ" ಎನ್ನುವುದು ನಮ್ಮ ದೃಷ್ಟಿಕೋನವಾಗಬೇಕು ಅಲ್ಲವೆ?


ಆದರೆ ಪರಮಶಿವಯ್ಯನವರ ವರದಿಯಂತೆ ನೇತ್ರಾವತಿ ನದಿಯ ಜಲಾನಯನದ ಪ್ರದೇಶದಲ್ಲಿ ಮಳೆ ಕೊಯ್ಲು ಮಾಡಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ೪೦೦೦ದಿಂದ ೬೦೦೦ ಮಿ.ಮೀ. ಮಳೆಯಾಗುವ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಪೂರ್ವಕ್ಕೆ ಹರಿಸಿ, ಹೇಮಾವತಿಯಲ್ಲಿರುವ ಹೆಚ್ಚುವರಿ ನೀರಿಗೆ ಬೆರೆಸಿ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕೊಡಲಾಗುತ್ತದೆ.

ಪರಮಶಿವಯ್ಯನವರ ವರದಿಯ ಮೂರನೆಯ ಅಧ್ಯಾಯದ ೩.೦೯ರ ಕೊನೆಯಲ್ಲಿ ಹೀಗಿದೆ: "The total yield of water at Pani Mangalore site is 446.62 TMC and total utilisation by these two projects is 142.46 TMC only"
೫ನೇ ಅಧ್ಯಾಯದ ೫.೦೦ರಲ್ಲಿ ಹೀಗೆ ಹೇಳಿದೆ: "Total quantity of water available for this project 90.73"
"ಹೇಮಾವತಿಯ ನೀರಿನೊಂದಿಗೆ ಬೆರಸುವ" ವಿಷಯವನ್ನು ಪರಮಶಿವಯ್ಯನವರು ಪ್ರಸ್ತಾವಿಸಿಲ್ಲ. ೫ನೇ ಅಧ್ಯಾಯದ b vii ನಲ್ಲಿ ಹೀಗಿದೆ:
Main canal crosses Hemavathy River from right to left bank of the river
The main canal is continued further from E to F for a length of 16 Kms in contour with bed slope of seven inches per Km and crosses the Hemavathy river by means of a aqueduct. The bed level of the canal on the left Bank at pont F is 900 Mtrs The F.R. of Hemavathy reservoir is 891 Mtrs (2922 ft.) thus this canal will be about 9 Mtrs above the FRL of the Reservoir. "


ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಅಣೆಕಟ್ಟನ್ನು ಕಟ್ಟುವುದಿಲ್ಲ

ಅಧ್ಯಾಯ ೧ ರ ೧.೦೫: Any scheme for utilisation of heavy quantity of water, involves submersion of large areas of fertile lands, besides Rehabilitation of number of villages/Towns. But the project is entirely different and makes use of existing Tanks for storage"
ಅಧ್ಯಾಯ ೩ರ ೩.೧೧: "As the configuration does not permit large scale storage reservoirs it is envisaged to Construct 27 small reservoirs to hold the yield available from the respective C.A. of hallas ......."
ಅಧ್ಯಾಯ ೫ ರ ೫.೦೨ i): "...Total capacity of 27 reservoirs is about 39.365 TMC, some extra storage capacity is kept to store flash flood waters, since extra submersion area is negligible."
ಈ ಯೋಜನೆಯನ್ನು ರೂಪಿಸುವಾಗ ಪರಮಶಿವಯ್ಯನವರಿಗೆ ಹತ್ತಿರ ಹತ್ತಿರ ಎಂಬತ್ತು ವರ್ಷ ಆಗಿರಬೇಕು. ಅವರ ವರದಿಯಲ್ಲಿ ಎಷ್ಟೋ ಸಲ ಅವರು ಹೇಳಿದ್ದನ್ನೇ ಹೇಳುತ್ತಾರೆ. ಅವರು ಹಿರಿಯರು ಎಂಬುದರಿಂದ, ಅವರ ವಯಸ್ಸಿಗೆ ಗೌರವ ಕೊಟ್ಟು ಅದನ್ನು ಸಹಿಸಿಕೊಳ್ಳಬಹುದು. ಆದರೆ ಮೇಲಿನ ಅವರ ಮಾತುಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? "But the project is entirely different and makes use of existing Tanks for storage" ಎಂಬ ಅವರ ಮಾತು ಅಪ್ಪಟ ಸುಳ್ಳಲ್ಲವೆ?
/

ಪಶ್ಚಿಮ ಘಟ್ಟಗಳನ್ನು ಸೀಳುವ ಅವಶ್ಯಕತೆಯಿಲ್ಲ.

ಅಧ್ಯಾಯ ೫ ರ ೫.೦೧ a (ಎರಡನೇ ಪ್ಯಾರಾ):
"It is proposed to start the Garland canal from Gadikal Gudda at the peak line of western ghat with C.B.L. of 930 mtrs and reach 150th K.M. with a canal bed slope of seven inches per Km with sufficient canal capacity to intercept and convey all the Run-off water of normal rain-falling on the catchment area between western ghat peak line and the canal alignment......"
ಗುಡ್ಡದ ಮಧ್ಯಭಾಗದಲ್ಲಿ ಕಾಲುವೆ ತೆಗೆಯುವುದೆಂದರೆ ಗುಡ್ಡವನ್ನು ಸೀಳುವುದು ಎಂದೇ ಅರ್ಥವಲ್ಲವೆ?
ಒಂದು ಕಿ.ಮೀ.ಗೆ ಏಳು ಇಂಚು ಇಳಿಜಾರು ಇರುವ ಕಾಲುವೆ ಎನ್ನುತ್ತಾರೆ. ಅದರ ಅಗಲ ಆಳಗಳನ್ನು ಹೇಳಿಲ್ಲ. (ಮುಂದೆ ೮೨೦೦ಕ್ಯೂಸೆಕ್ಸ್ ನೀರನ್ನು ಸಾಗಿಸಬಲ್ಲ ಕಾಲುವೆ, ಹಾಗಾಗಿ ಇದರಲ್ಲಿ ಜಲಸಾರಿಗೆ ಸಾಧ್ಯ ಎಂದಿದ್ದಾರೆ). ಗಡಿಕಲ್ ಗುಡ್ಡ ಸಮುದ್ರ ಮಟ್ಟದಿಂದ ೧೨೦೦ ಮೀಟರ್ ಎತ್ತರ ಇದೆಯೆಂದು ಭಾವಿಸೋಣ. ೯೩೦ನೇ ಮೀಟರಿನಲ್ಲಿ ಕಾಲುವೆ ಮಾಡಿದರೆ, ಮೇಲಿನ ೨೭೦ ಮೀಟರ್ ಎತ್ತರದಿಂದ ನೀರು ಇಳಿದು ಬಂದು ಕಾಲುವೆಯಲ್ಲಿ ಸಂಗ್ರಹವಾಗಿ ಮುಂದೆ ಹರಿಯಬೇಕು. ಎಂದರೆ ಕಾಲುವೆಯ ಮೇಲುಭಾಗ ೨೭೦ ಮೀಟರ್ ಇಳಿಜಾರಾದ ಗುಡ್ಡ ಮತ್ತು ಕೆಳಭಾಗ ೯೦೦ ಮೀಟರ್ ಇಳಿಜಾರಾದ ಗುಡ್ಡ. ಮಳೆಗಾಲದಲ್ಲಿ ಮೇಲಿಂದ ಗುಡ್ಡ ಜರಿದರೆ ಕಾಲುವೆ ಕಟ್ಟಿಕೊಳ್ಳುತ್ತದೆ. ಕೆಳಗಿಂದ ಜರಿದರೆ, ಕಾಲುವೆ ಹಿಸಿದು ನೀರು ಕೆಳಗೆ ಹರಿಯುತ್ತದೆ. ಗುಡ್ಡ ಜರಿಯದ ಹಾಗೆ ಮಾಡುವ ತಾಂತ್ರಿಕತೆ ಇದೆಯೆ? (ಘಾಟಿ ರಸ್ತೆಗಳಲ್ಲಿ ೩೦-೪೦ ಅಡಿ ಎತ್ತರದ ದರೆಗೆ ಕಲ್ಲು ಕಟ್ಟುವುದನ್ನು ಕಂಡಿದ್ದೇನೆ. ಆದರೆ ಅಂಥಲ್ಲೂ, ಕಲ್ಲಿನ ಸಮೇತ ಜರಿದು ಬೀಳುವುದು ಮಾಮೂಲು.)
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತಿದೆ. ಪಶ್ಚಿಮ ಘಟ್ಟಗಳ ಪರ್ವತಗಳು, ನೆಲದ ಮೇಲೆ ಕವುಚಿಹಾಕಿದ ತೆಂಗಿನಕಾಯಿಯ ಕರಟಗಳಲ್ಲ. ಹತ್ತಿರ ಹೋಗಿ ನೋಡಿದರೆ ಮಾತ್ರ ಅಲ್ಲಿ ಪರಮಶಿವಯ್ಯನವರು ಹೇಳುವ ಬೃಹತ್ ಕಾಲುವೆಗಳನ್ನು ತೋಡಿದರೆ ಪಶ್ಚಿಮಘಟ್ಟಕ್ಕೆ ಆಗುವ ಹಾನಿಯ ಕಲ್ಪನೆ ಬರಬಹುದು. ಅಥವಾ ಆಗಲೂ ಬರುವುದು ಕಷ್ಟ.
ಪರಮಶಿವಯ್ಯನವರು ಹೇಳುತ್ತಿರುವ ಭಾಗದ ಪಶ್ಚಿಮ ಘಟ್ಟಗಳ ಸ್ವರೂಪ ಸಾಮಾನ್ಯವಾಗಿ ಹೀಗಿದೆ. ಗುಡ್ಡದ ತಳದಿಂದ ಪ್ರಾರಂಭಿಸಿ ಸುಮಾರು ಮುಕ್ಕಾಲು ಭಾಗದ ಎತ್ತರದವರೆಗೆ ಬೇರೆ ಬೇರೆ ಸ್ವರೂಪದ ಅರಣ್ಯ. ನಂತರ ಉಳಿದ ಕಾಲುಭಾಗದಲ್ಲಿ, ಎಂದರೆ ಗುಡ್ಡದ ನೆತ್ತಿಯ ಭಾಗದಲ್ಲಿ, ಆಳೆತ್ತರದ ಹುಲ್ಲು. ಈ ಹುಲ್ಲು ಆನೆಗಳ ಆಹಾರ. ಹಾಗಾಗಿಯೇ ಈ ಪ್ರದೇಶದಲ್ಲಿ ಆನೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಇತ್ತ ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಹೋಗುವ ರೈಲುದಾರಿ ಆನೆಗಳ ತಿರುಗಾಟಕ್ಕೆ ಅಡ್ಡಿಯಾಗಿ ನಿಂತಿದೆ. ಶಿರಾಡಿ ಘಾಟಿಯ ಹೆದ್ದಾರಿಯಲ್ಲಿ ಆನೆಗಳ ಸಂಚಾರ ಅಸಾಧ್ಯವಲ್ಲವಾದರೂ, ವಾಹನಗಳ ದಟ್ಟಣೆಯಿಂದಾಗಿ ಅವುಗಳು ಸ್ವಚ್ಛಂದವಾಗಿ ತಿರುಗಾಡುವಂತಿಲ್ಲ. ಇನ್ನು ಅವುಗಳ ಆಹಾರವಾದ ಹುಲ್ಲಿರುವ ಪ್ರದೇಶಕ್ಕೇ ಪರಮಶಿವಯ್ಯನವರ ಕಾಲುವೆ ಅಡ್ಡ ಬಂತೆಂದರೆ, ಬಹುಶಃ ಕೋಟಿ ಕೋಟಿ ವರ್ಷಗಳಿಂದ ಈ ಭಾಗವನ್ನು ತಮ್ಮ ಮನೆಯಾಗಿ ಮಾಡಿಕೊಂಡಿರುವ ಆ ಬಡಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳಲು ಎಲ್ಲಿಗೆ ಹೋಗಬೇಕು? ಅವು ಊರು ನುಗ್ಗದೆ ಬೇರೆ ದಾರಿ ಇದೆಯೆ?


ಮಳೆಯಾಗುವ ದಿನಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ.

ಇದನ್ನು ಅಂಕಿ ಅಂಶಗಳ ಮೂಲಕ ನಿರೂಪಿಸಬಹುದೆ?

ಪರಮಶಿವಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದರೆ ಅವರಿಗಿರುವ ಆತಂಕ ದೂರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಈಗ ಸುಮಾರು ಐದು ವರ್ಷಗಳ ಕೆಳಗೆ ನಾವು ಪರಮಶಿವಯ್ಯನವರನ್ನು ಮಂಗಳೂರಿಗೆ ಕರೆಸಿ, ಅವರ ಯೋಜನೆಯನ್ನು ವಿವರಿಸಲು ಅವರಿಗೆ ಅವಕಾಶ ಮಾಡಿಕೊಟ್ಟೆವು. ಅಷ್ಟು ದೂರದಿಂದ ಮಂಗಳೂರಿಗೆ ಬಂದ ಅವರು-ಸಾವಿರಾರು ಕೋಟಿ ರೂಪಾಯಿ ಖರ್ಚಿನ ಯೋಜನೆಯನ್ನು ರೂಪಿಸಿದವರು-ಸುಮಾರು ಇಪ್ಪತ್ತು ನಿಮಿಷ ಯೋಜನೆಯ ಬಗ್ಗೆ ಮಾತಾಡಿದರು. ಸಂಘಟಕರಾಗಿ ನಾವು ಅವರಿಗೆ ಸಮಯವನ್ನೇನೂ ನಿಗದಿಪಡಿಸಿರಲಿಲ್ಲ. ಅವರು ತಮ್ಮ ಯೋಜನೆಯನ್ನು ವಿವರಿಸಲು ಬೋರ್ಡು, ಸೀಮೆಸುಣ್ಣ ಆಗಲಿ, ಪವರ್ ಪಾಯಿಂಟ್ ಆಗಲಿ ಬಳಸಲಿಲ್ಲ. ಭಾಷಣದ ನಂತರ ಬಂದ ಹೆಚ್ಚಿನ ಪ್ರಶ್ನೆಗಳಿಗೆ ಯೋಜನೆಯನ್ನು ಹೈದರಾಬಾದಿನ ಯಾವುದೋ ಸಂಸ್ಥೆಗೆ ಕಳಿಸಲಾಗಿದೆ, ಅಲ್ಲಿಂದ ವರದಿ ಬಂದ ಮೇಲೆ ಎಲ್ಲ ಸ್ಪಷ್ಟವಾಗುತ್ತದೆ ಎಂಬ ಉತ್ತರವನ್ನೇ ಮತ್ತೆ ಮತ್ತೆ ಕೊಟ್ಟರು. ಹಾಗಾಗಿ ಅವರ ಹತ್ತಿರ ಚರ್ಚಿಸಿ ನಮಗೆ ಯಾವ ಪ್ರಯೋಜನವೂ ಆಗಲಿಲ್ಲ.

ಬುಧವಾರ, ಏಪ್ರಿಲ್ 20, 2011

ಅಂತೂ ಬಂತು ಅಂತರ್ಜಲ ವಿಧೇಯಕ - ೨೦೧೧

ಜನ ಬೇಕಾಬಿಟ್ಟಿಯಾಗಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆದು ಮುಗಿಸುವವರೆಗೂ ಕಾದು, ಹೆಚ್ಚುಕಡಿಮೆ ಎಲ್ಲ ಮುಗಿದ ಮೇಲೆ, ಈಗ ಕರ್ನಾಟಕ ಸರಕಾರವು, ಕೊಳವೆ ಬಾವಿಗಳನ್ನು ಬೇಕಾಬಿಟ್ಟಿಯಾಗಿ ಕೊರೆಯುವುದನ್ನು ನಿಯಂತ್ರಿಸುವ ಉದ್ದೇಶದಿಂದ, ಒಂದು ವಿಧೇಯಕವನ್ನು ವಿಧಾನಮಂಡಲದ ಎರಡೂ ಸದನಗಳಲ್ಲಿಟ್ಟು ಅಂಗೀಕಾರ ಪಡೆದಿದೆ. ಪಕ್ಷಾಂತರವೋ, ಅದಿರು ತಿಂದವರು ಯಾರು ಎಂಬುದರ ಕಚ್ಚಾಟವೋ ಇಂಥದೇ ಯಾವುದೋ ಒಂದು ಪ್ರಕರಣ ವಿಧಾನಮಂಡಲದ ಕಾರ್ಯ ಕಲಾಪಗಳನ್ನೇ ತಿಂದು ಹಾಕುತ್ತಿದ್ದ ದಿನಗಳಲ್ಲಿ, ಈ ವಿಧೇಯಕ ಒಂದು ಸಂದಿಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಪಾಸಾಗಿಬಿಟ್ಟಿದೆ. ಕರ್ನಾಟಕದ ಯಾವುದೇ ಶಾಸಕನಿಗೂ, ಈ ವಿಧೇಯಕದ ವಿವರಗಳಿರಲಿ, ಇದು ಪಾಸಾಗಿರುವ ವಿಷಯ ಗೊತ್ತಿರುವುದು ಸಹ ಅನುಮಾನ. ಇನ್ನು ಜನಸಾಮಾನ್ಯರ ಪಾಡೇನು?
ಸುಮಾರು ಹತ್ತು ತಿಂಗಳ ಹಿಂದೆ ಯಾವುದೋ ಕಾರಣಕ್ಕೆ ಗಣಿ ಮತ್ತು ಭೂವಿಜ್ನಾನ ಇಲಾಖೆಯ ಜಾಲತಾಣಕ್ಕೆ ಹೋದಾಗ "ಅಂತರ್ಜಲ ವಿಧೇಯಕ ೨೦೦೯ರ ಕುರಿತಂತೆ ಸಾರ್ವಜನಿಕರು ಮೇ ೨೦೧೦ರ ಅಂತ್ಯದ ವರೆಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶವಿದೆ" ಎಂಬ ವಾಕ್ಯ ಓಡುತ್ತಿರುವುದು ಕಂಡೆ. ಕುತೂಹಲಕ್ಕೆ ವಿಧೇಯಕವನ್ನು ಓದಿದೆ.
ಬ್ರಿಟಿಷರನ್ನು ಬಿಡಲೊಲ್ಲರು ಅವರ ಮಾನಸಪುತ್ರರು
ಹೊಸ ವಿಧೇಯಕವೆಂದರೆ ಹೊಸ ಕಾನೂನೇ. ನಮ್ಮ ಹೆಚ್ಚಿನ ಕಾನೂನುಗಳು ಬ್ರಿಟಿಷರ ಕಾಲದವು. ಸಹಜವಾಗಿ ಅವು ಆಳುವ ಅಧಿಕಾರಿಗಳ ಪರವಾಗಿ ಇವೆ. ಇಂದು ಪ್ರಜಾಪ್ರಭುತ್ವ ಬಂದಿದೆ. ಆಳರಸರು ಹೋಗಿದ್ದಾರೆ, ಇಂದಿನ ಸರಕಾರಿ ಅಧಿಕಾರಿಗಳು "ಸಾರ್ವಜನಿಕ ಸೇವಕರು" ಎಂದು ಕರೆಸಿಕೊಳ್ಳುತ್ತಿದ್ದಾರೆ. ಎಂದ ಮೇಲೆ ಇಂದು ನಾವು ರೂಪಿಸುವ ಕಾನೂನುಗಳು ಅಧಿಕಾರಿಗಳ ಅನುಕೂಲಕ್ಕಿಂತ ಹೆಚ್ಚಾಗಿ ಪ್ರಜೆಗಳ ಅನುಕೂಲಕ್ಕಾಗಿ ಇರಬೇಕು. ದುರದೃಷ್ಟವಶಾತ್, ಸಾರ್ವಜನಿಕ ಸೇವಕರೆನ್ನಿಸಿಕೊಳ್ಳುವ ಸರಕಾರಿ ಅಧಿಕಾರಿಗಳೇ ನಮ್ಮ ಹೊಸ ಕಾನೂನುಗಳನ್ನು ರೂಪಿಸುತ್ತಾರೆ. ಸಹಜವಾಗಿ ಅದು ಅವರ ಪರವಾಗಿ ಇರುತ್ತದೆ. (ಮಾಹಿತಿ ಹಕ್ಕು ೨೦೦೫ ಇದಕ್ಕೊಂದು ಅಪವಾದ. ಆದರೆ ಅದನ್ನು ಸಾಧ್ಯವಿದ್ದಷ್ಟೂ ತಮಗೆ ಅನುಕೂಲವಾಗುವಂತೆ ಬದಲಿಸಿಕೊಳ್ಳಲು ಬಾಬೂಜಿಗಳು ಪ್ರಯತ್ನಿಸುತ್ತಲೇ ಇದ್ದಾರೆ). ನಂತರ ಅದನ್ನು ಚರ್ಚೆಗಾಗಿ ವಿಧಾನಮಂಡಲದಲ್ಲಿ ಇಟ್ಟರೂ, ಯಾವ್ಯಾವುದೋ ಹಗರಣಗಳಲ್ಲಿ ಮುಳುಗಿಹೋದ ನಮ್ಮ ಶಾಸಕರಿಗೆ, ಈ ಕಾನೂನುಗಳನ್ನು ವಿವರವಾಗಿ ಓದಿ, ಚರ್ಚೆ ಮಾಡಿ, ಅಗತ್ಯವಿದ್ದಲ್ಲಿ ಜನಪರವಾದ ಬದಲಾವಣೆಗಳನ್ನು ಸೂಚಿಸುವ ವ್ಯವಧಾನವಾದರೂ ಎಲ್ಲಿಂದ? ಅಸಲಿಗೆ ನಮ್ಮ ಶಾಸಕರಿಗಾದರೂ ನಿಜವಾದ ಜನಪರ ನಿಲುವುಗಳು ಇವೆಯೇ? ಇಂಥ ಕೆಲಸಕ್ಕಾಗಿಯೇ ಸಂಬಳ ಪಡೆಯುವ ಈ ಶಾಸಕರುಗಳು ತಮ್ಮ ಕರ್ತವ್ಯ ನಿರ್ವಹಿಸದೆ ಜನವಂಚನೆ ಮಾಡುತ್ತ ಕಾಲ ಕಳೆಯುತ್ತಿರುವುದು ಅಧಿಕಾರಿ ವರ್ಗಕ್ಕೆ ಬಯಸದೆ ಬಂದ ಭಾಗ್ಯವಾಗಿದೆ. ಇನ್ನು ಜನಸಾಮಾನ್ಯರನ್ನು ಬಿಡಿ, ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವವರೂ ಇಂಥದ್ದರಲ್ಲೆಲ್ಲ ಆಸಕ್ತಿ ವಹಿಸುವುದನ್ನು ನಮ್ಮ ಸಂದರ್ಭದಲ್ಲಿ ಊಹಿಸುವುದೂ ಸಾಧ್ಯವಿಲ್ಲ.
ಕೊಟ್ಟ ಕುದುರೆಯನೇರಲರಿಯದೆ...
ಏನೇ ಇದ್ದರೂ, ಸರಕಾರ ವಿಧೇಯಕಗಳನ್ನು ಜಾರಿಗೆ ಕೊಡುವಾಗ, ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳುವ ಶಾಸ್ತ್ರವನ್ನಂತೂ ಮಾದಿಯೇ ಮಾಡುತ್ತದೆ. ಎಷ್ಟು ಕಡಿಮೆ ಜನ ತಮ್ಮ ಅಭಿಪ್ರಾಯ ಕೊಡುತ್ತಾರೋ, ಅಧಿಕಾರಿಗಳಿಗೆ ಅಷ್ಟು ತಲೆನೋವು ಕಡಿಮೆ. ಹಾಗಾಗಿ ಅವರು ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸುವ ಶಾಸ್ತ್ರ ಮಾತ್ರ ಮಾಡುತ್ತಾರೆ. ಕುತೂಹಲಕ್ಕಾಗಿ "ಈ ವಿಧೇಯಕದ ಬಗ್ಗೆ ಎಷ್ಟು ಸಾರ್ವಜನಿಕರು ಮತ್ತು ಎಷ್ಟು ಸಂಘಸಂಸ್ಠೆಗಳು ತಮ್ಮ ಅಭಿಪ್ರಾಯವನ್ನು ನೀಡಿವೆ?" ಎಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದೆ. "೧೧ ಸಾರ್ವಜನಿಕರು ಮತ್ತು ಮೂರು ಸಂಘ ಸಂಸ್ಥೆಗಳು ಅಭಿಪ್ರಾಯ ನೀಡಿವೆ" ಎಂಬ ಉತ್ತರ ಬಂತು. ಸಾಕೆ? ಐದು ಕೋಟಿಗೆ ಹನ್ನೊಂದು!

ಲೋಕಪಾಲ ಮಸೂದೆ ಸಾಲದು, ಜನಲೋಕಪಾಲ ಮಸೂದೆ ಬೇಕು ಎಂದು ಅಣ್ಣಾ ಹಜಾರೆಯವರು ಉಪವಾಸ ಕೂತಾಗ ಅವರಿಗೆ ಅಭೂತಪೂರ್ವ ಬೆಂಬಲ ದೊರೆಯಿತು. ಭ್ರಷ್ಟಾಚಾರದ ಕುರಿತು ಜನ ರೋಸಿಹೋಗಿದ್ದಾರೆ ಎಂಬುದಕ್ಕೆ ಇದೊಂದು ಜೀವಂತ ಸಾಕ್ಷಿ ಎಂದು ಟಿವಿಗಳೂ, ಪತ್ರಿಕೆಗಳೂ ಎಷ್ಟು ಸಾಧ್ಯವೋ ಅಷ್ಟು ತಾರಸ್ಥಾಯಿಯಲ್ಲಿ ಬೊಬ್ಬೆ ಹೊಡೆದವು. ಆದರೆ, ಯಾವುದೇ ವಿಧೇಯಕ ತರುವ ಮೊದಲು, ಅದರಲ್ಲಿ ಬದಲಾವಣೆಗಳನ್ನು ಮಾಡಲು ಸರಕಾರ ಈಗಾಗಲೇ ಕೊಡುತ್ತಿರುವ ಅವಕಾಶವನ್ನು ನಾವು ಉಪಯೋಗಿಸುತ್ತಿದ್ದೇವೆಯೇ? ಜನಸಾಮಾನ್ಯರನ್ನು ಬಿಡಿ, ಹಜಾರೆಯವರನ್ನು ಬೆಂಬಲಿಸಿ ಮಾಧ್ಯಮಗಳಲ್ಲಿ ಮಿಂಚಿದ ನಮ್ಮ ವಿವಿಧರಂಗದ ನಾಯಕಮಣಿಗಳು ಪ್ರಜಾಪ್ರಭುತ್ವವನ್ನು ಅನುಸಂಧಾನ ಮಾಡಿದ ಉದಾಹರಣೆಗಳು ಎಷ್ಟಿವೆ? ಎಷ್ಟು ಮಂದಿ ಬುದ್ಧಿಜೀವಿಗಳು ಸರಕಾರದ ಆಗುಹೋಗುಗಳ ಕುರಿತು ತಮ್ಮ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸುತ್ತಾರೆ? ಎಷ್ಟು ಜನ ಲೇಖಕರು ಸಾರ್ವಜನಿಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಸರಕಾರಕ್ಕೆ ತಿಳಿಸುತ್ತಾರೆ? ಎಷ್ಟು ಮಂದಿ ವಿದ್ಯಾವಂತರಿಗೆ ಮಾಹಿತಿ ಹಕ್ಕಿನ ಕುರಿತು ತಿಳುವಳಿಕೆ ಇದೆ? ಎಷ್ಟು ಜನ ಅದನ್ನು ಸಾರ್ವಜನಿಕ ಹಿತಕ್ಕಾಗಿ ಬಳಸುತ್ತಿದ್ದಾರೆ? ಎಷ್ಟು ಊರುಗಳಲ್ಲಿ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಜನ ಸೇರಿ ಚರ್ಚಿಸುವ ಸಂಪ್ರದಾಯವಿದೆ?
ಶಿವರಾಮ ಕಾರಂತರು ಒಂದು ಕಡೆ ಹೇಳಿರುವುದು ನೆನಪಾಗುತ್ತದೆ: "ನಮ್ಮನ್ನು ದೇವರೇ ಹುಟ್ಟಿಸಿದ್ದಾನೆ ಎನ್ನುವುದಾದರೆ, ಸಾಕಷ್ಟು ಬುದ್ದಿಯನ್ನು ಕೊಟ್ಟೇ ಹುಟ್ಟಿಸಿದ್ದಾನೆ ಎಂದು ತಿಳಿಯಬೇಕು. ಕೊಟ್ಟದ್ದನ್ನು ಉಪಯೋಗಿಸಿಕೊಳ್ಳದೆ ಇನ್ನೂ ಕೊಡು ಮತ್ತೂ ಕೊಡು ಎನ್ನುವುದರಲ್ಲಿ ಏನರ್ಥವಿದೆ?"
ಸುಲಭದಲ್ಲಿ ಸಿಕ್ಕಿದ ಮಾಹಿತಿ
ಇರಲಿ. ಕಾನೂನಿನ ಬಡಿಗೆ ತೋರಿಸಿ ಭ್ರಷ್ಟಾಚಾರವನ್ನು ಊರ ಹೊರಗೆ ಓಡಿಸಿಬಿಡಬಹುದೆಂದು ನಾನು ನಂಬುವುದಿಲ್ಲ. ಆದರೂ ಜನಲೋಕಪಾಲ ಮಸೂದೆ ಬಂದರೆ ನನಗೆ ಖಂಡಿತವಾಗಿಯೂ ಸಂತೋಷವಿದೆ. ಇತ್ತ ವಿಧೇಯಕದ ಕರಡನ್ನು ಓದಿದ ಮೇಲೆ, ಉಳಿದಿದ್ದ ಹತ್ತೋ ಹದಿನೈದೋ ದಿವಸದ ಅವಧಿಯಲ್ಲಿ ನನಗೆ ಕಂಡ ಹಲವು ಬದಲಾವಣೆಗಳನ್ನು ಸೂಚಿಸಿ, ಒಂದು ಪತ್ರವನ್ನು ಜೊತೆಗಿಟ್ಟು ಕಳಿಸಿಕೊಟ್ಟೆ. ತಲುಪಿದ್ದಕ್ಕೆ ಉತ್ತರವೇನೂ ಬರಲಿಲ್ಲ. ನಾನೂ ಅಲ್ಲಿಗೇ ಮರೆತಿದ್ದೆ.
ಮೊನ್ನೆ ಟಿವಿಯಲ್ಲಿ ಸಣ್ಣದೊಂದು ಸುದ್ದಿ ತೇಲಿ ಬಂತು: ಅಂತರ್ಜಲ ವಿಧೇಯಕ ಮಂಡನೆಯಾಗಿದೆ. ಇಲಾಖೆಗೆ ಬರೆದಾಗ ಮಾರ್ಚ್ ತಿಂಗಳಿನಲ್ಲಿಯೇ ಮಂಡನೆಯಾಗಿದೆ ಎಂದು ಖಚಿತವಾಯಿತು. ಅದರ ಪ್ರತಿ ಬೇಕು ಎಂದು ಕೇಳಿದ್ದಕ್ಕೆ ವಿಧಾನಸೌಧಕ್ಕೆ ಬರೆಯುವಂತೆ ಸಲಹೆ ಸಿಕ್ಕಿತು! ಶಾಸಕರ ಮೂಲಕ ಪಡೆಯುವುದು ಸುಲಭವಾಗಬಹುದು ಎನಿಸಿದ್ದರಿಂದ ಅವರ ಕಚೇರಿಗೆ ಹೋದೆ. ಅವರ ಪಿಎ ಚಂದ್ರಶೇಖರ ಪಾತೂರು ಇದ್ದರು. "ಗೆಜೆಟ್ಟಿನಲ್ಲಿ ಬಂದಿರಬಹುದು. ಗೆಜೆಟ್ ಶಾಸಕರ ಮನೆಗೆ ಬಂದಿರುತ್ತದೆ. ನಾನು ನೋಡಿ ಹೇಳುತ್ತೇನೆ ನಿಮಗೆ" ಎಂದರು. ನಾನು ಮನೆಗೆ ಬಂದವನು ಇಂಟರ್ ನೆಟ್ ನಲ್ಲಿ ಹುಡುಕಿದೆ. ಸುಲಭದಲ್ಲಿ ಸಿಕ್ಕಿತು.
ಕಲ್ಲನಾಗರ ಕಂಡರೆ ಹಾಲನೆರೆ ಎಂಬರು, ನಿಜದ ನಾಗರ ಕಂಡರೆ ಕೊಲ್ಲೆಂಬರಯ್ಯಾ...!
ಪುಣ್ಯಾತ್ಮ ಬಸವಣ್ಣ ಎಂಥ ಮಾತು ಆಡಿಬಿಟ್ಟಿದ್ದಾರೆ ನೋಡಿ! ಸ್ವಲ್ಪ ವಿಷಯಾಂತರವೆನಿಸಿದರೂ ಒಂದು ಮಾತು ಇಲ್ಲಿ ಹೇಳಲೇಬೇಕು. ಈಗ ನಮ್ಮ ಶಾಸಕ ರಮಾನಾಥ ರೈಗಳು ತುಂಬಾ ಬಿಜಿ. ನಾಡಿದ್ದು ೨೩ಕ್ಕೆ ಅವರಲ್ಲಿ ನಾಗಮಂಡಲೋತ್ಸವ. ಭಾರೀ ಗೌಜಿ. ಊರ ತುಂಬ ಅದರದ್ದೇ ದೊಡ್ಡ ದೊಡ್ಡ ಬ್ಯಾನರುಗಳು. ಕರ್ನಾಟಕದ ವಿಷಯ ನಾನು ಹೇಳಲಾರೆ, ಆದರೆ ದ.ಕ. ಜಿಲ್ಲೆಯಲ್ಲಂತೂ ಜೆಸಿಬಿಗಳು, ಹಗಲು ರಾತ್ರೆಯ ವ್ಯತ್ಯಾಸವಿಲ್ಲದೆ ಸರ್ಪಯಜ್ನಕ್ಕೆ ತೊಡಗಿವೆ. ಮೊಟ್ಟೆ, ಮರಿ, ಬೆಳೆದ ಸರ್ಪ, ಮುದಿಸರ್ಪ, ನಾಗರ, ಕೇರೆ, ಕಂದೊಡಿ, ಪೆರ್ಮರಿ ಯಾವ ವ್ಯತ್ಯಾಸವನ್ನೂ ನೋಡದೆ ಜೆಸಿಬಿಗಳು ಆಧುನಿಕ ಖಾಂಡವವನ ದಹನವನ್ನೇ ನಡೆಸಿವೆ. ಈ ಅಸಹಾಯಕ ಪ್ರಾಣಿಗಳನ್ನು ರಕ್ಷಿಸಲು ಇರುವ ವನ್ಯಜೀವಿ ಕಾನೂನು, ಜೆಸಿಬಿಗಳ ಚಕ್ರದಡಿ ಸಿಕ್ಕಿ ವಿಲವಿಲನೆ ಒದ್ದಾಡುತ್ತಿದೆ. ಆ ಕಾನೂನನ್ನು ಜಾರಿಗೆ ಕೊಡಬೇಕಾದ ಅರಣ್ಯ ಇಲಾಖೆಯವರು ನಿದ್ರೆಯನ್ನು ನಟಿಸುತ್ತಿದ್ದಾರೆ. ನಮ್ಮ ಶಾಸಕರು ಈ ಕಾನೂನಿಗೆ ಮರುಜೀವ ಕೊಟ್ಟು ಸರ್ಪಜಾತಿ ಉಳಿಯುವಂತೆ ಮಾಡಿದರೆ ಅವರು ನಾಗಮಂಡಲ ಮಾಡಿಸಿದ್ದರ ಫಲ ಪೂರ್ತಿಯಾಗಿ ಪ್ರಾಪ್ತಿ ಆದೀತು. ಅಲ್ಲದಿದ್ದರೆ, ಕಲ್ಲನಾಗರ ಕಂಡರೆ.....
ಸ್ವೀಕೃತವಾದ ಒಂದೇ ಒಂದು ಸಲಹೆ
ವಿಧೇಯಕದಲ್ಲಿ ಬಳಸಿದ ಕನ್ನಡ ಭಾಷೆಯ ಬಗೆಗೆ ನನಗೆ ಏನೂ ಸಮಾಧಾನವಿರಲಿಲ್ಲ. ಅದು ತುಂಬ ಕೆಟ್ಟದಾಗಿತ್ತು. ತಪ್ಪುಗಳೂ ಅಸಂಖ್ಯವಾಗಿದ್ದವು.. ನನ್ನ ಪತ್ರದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದ್ದೆ. ಬೇರೆ ಅನೇಕರೂ ಇದನ್ನು ಹೇಳಿರಬಹುದು. ಒಟ್ಟಿನಲ್ಲಿ ಮೊದಲಿನ ಕನ್ನಡದ ಕರಡು ಈಗ ನಾಪತ್ತೆಯಾಗಿತ್ತು. ಅದರ ಸ್ಥಳದಲ್ಲಿ ಬೇರೆಯೇ ಆದ ಕರಡು ತಯಾರಿಸಿ ಮಂಡಿಸಲಾಗಿತ್ತು. ನನ್ನ ಅಭಿಪ್ರಾಯಕ್ಕೂ ಕೊಂಚ ಬೆಲೆ ಬಂತೆಂದು ಬೆನ್ನು ತಟ್ಟಿಕೊಂಡೆ. ಏನಿದ್ದರೂ ಕರಡು ಮೊದಲು ತಯಾರಾಗುವುದು ಇಂಗ್ಲಿಷಿನಲ್ಲಿ. ನಂತರ ಅದನ್ನು ಕನ್ನಡಕ್ಕೆ ಅನುವಾದ ಮಾಡುವುದು. ಮೂಲವನ್ನೇ ಕನ್ನಡದಲ್ಲಿ ತಯಾರಿಸಿ, ನಂತರ ಅದನ್ನು ಇಂಗ್ಲಿಷಿಗೆ ಅನುವಾದ ಮಾದುವಷ್ಟು ಸ್ವಂತಿಕೆ, ಆತ್ಮವಿಶ್ವಾಸಗಳು ನಮಗೆ ಇನ್ನೂ ಸಾಧಿಸಿಲ್ಲ. ಅದರೆ, ಈ ಹೊಸ ಅನುವಾದ ಮೊದಲಿನದ್ದಕ್ಕಿಂತ ಖಂಡಿತ ಚೆನ್ನಾಗಿದೆ.ವಾಕ್ಯಗಳು ಸುಸಂಗತವಾಗಿವೆ, ಅರ್ಥ ಹೆಚ್ಚು ನಿರ್ದಿಷ್ಟವಾಗಿದೆ.
ಗೋರ್ಕಲ್ಲ ಮೇಲೆ ಸುರಿದ ಮಳೆ?
ಈ ಸಲಹೆ ಬಿಟ್ಟರೆ ನಾನು ಕೊಟ್ಟ ಒಂದೇ ಒಂದು ಸಲಹೆಯೂ ಸ್ವೀಕಾರಗೊಂಡಿಲ್ಲ. ಸಲಹೆ ಬಿಡಿ, ಇಂಗ್ಲಿಷಿನ public servant ಎಂಬ ಪದವನ್ನು ಮೊದಲಿನ ಕರಡಿನಲ್ಲಿ "ಸರಕಾರಿ ನೌಕರರು" ಎಂದು ಅನುವಾದಿಸಲಾಗಿತ್ತು. ನಾನು ಅದನ್ನು "ಸಾರ್ವಜನಿಕ ಸೇವಕರು" ಎಂದು ಬದಲಿಸಲು ಸೂಚಿಸಿದೆ. ಹೊಸ ಕರಡಿನಲ್ಲಿ ಅದನ್ನು "ಸಾರ್ವಜನಿಕ ನೌಕರರು" ಎಂದು ಅನುವಾದಿಸಲಾಗಿದೆ! ಇಂಥ ಅನುವಾದದ ಹಿಂದೆ ತಮ್ಮನ್ನು ತಾವು ಸೇವಕರು ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಒಂದು ಮನೋಭಾವ ಕೆಲಸ ಮಾಡುತ್ತಿದೆ ಅನ್ನಿಸುವುದಿಲ್ಲವೆ?
"ಲೋಕಪಾಲ್ ಬೇಡ, ಜನಲೋಕಪಾಲ್ ಬೇಕು" ಎನ್ನುವಾಗ ಅದರ ಹಿಂದಿರುವುದು ವಿಧೇಯಕ ಜನರ ಕೈಗೆ ಅಧಿಕಾರವನ್ನು ಕೊಡುವಂತಿರಬೇಕು ಎನ್ನುವ ಕಾಳಜಿ ತಾನೆ? ಸುಮ್ಮನೆ ಮಾದರಿಗಾಗಿ ವಿಧೇಯಕದ ಒಂದು ಸಣ್ಣ ಭಾಗ ಏನು ಹೇಳುತ್ತದೆ ಎಂಬುದನ್ನೂ, ನಾನು ಸೂಚಿಸಿದ ಬದಲಾವಣೆ ಏನು ಎಂಬುದನ್ನೂ ನೋಡಿ:

ವಿಧೇಯಕದಲ್ಲಿ ಇರುವುದು:

(೪) ಪ್ರಾಧಿಕಾರವು (೧)ನೇ ಉಪ ಪ್ರಕರಣದ (ಎಚ್) ಖಂಡದ ಅಡಿಯಲ್ಲಿ ಯಾವುದೇ ಯಂತ್ರೋಪಕರಣವನ್ನು ಅಥವಾ ಸಾಧನವನ್ನು ವಶಪಡಿಸಿಕೊಂಡರೆ, ಅದು ಆದಷ್ಟು ಬೇಗನೆ ಈ ಅಪರಾಧದ ವಿಚಾರಣೆ ನಡೆಸಲು ಅಧಿಕಾರ ವ್ಯಾಪ್ತಿಯುಳ್ಳ ಮ್ಯಾಜಿಸ್ಟ್ರೇಟರಿಗೆ ಹಾಗೆ ವಶಪಡಿಸಿಕೊಂಡದ್ದಕ್ಕೆ ಮಾಹಿತಿ ನೀಡತಕ್ಕದ್ದು ಮತ್ತು ಅದರ ಅಭಿರಕ್ಷೆಗಾಗಿ ಅವರ ಅದೇಶವನ್ನು ಪಡೆಯತಕ್ಕದ್ದು

ನಾನು ಸೂಚಿಸಿದ್ದು:

(೪) ಪ್ರಾಧಿಕಾರವು (೧)ನೇ ಉಪ ಪ್ರಕರಣದ (ಎಚ್) ಖಂಡದ ಮೇರೆಗೆ ಯಂತ್ರೋಪಕರಣಗಳನ್ನು ಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ, ಇಪ್ಪತ್ತನಾಲ್ಕು ಗಂಟೆಗಳ ಅವಧಿಯೊಳಗೆ ಅಪರಾಧದ ವಿಚಾರಣೆ ಮಾಡಲು ಅಧಿಕಾರ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟರಿಗೆ ಮಾಹಿತಿ ನೀಡತಕ್ಕದ್ದು ಮತ್ತು ಸ್ವಾಧೀನ ಪ್ರಕ್ರಿಯೆಗೆ ಅವರ ಆಜ್ನೆಯನ್ನು ಪಡೆಯತಕ್ಕದ್ದು. ಸ್ವಾಧೀನಪಡಿಸಿಕೊಂಡ ಯಂತ್ರಗಳ ವಿವರವಾದ ಪಟ್ಟಿಯನ್ನು ತಯಾರಿಸಿ ಅದರಲ್ಲಿ ಸ್ಥಳದ ಮಾಲಕ ಅಥವಾ ಹಾಜರಿರುವ ಇತರ ವ್ಯಕ್ತಿ ಹಾಗೂ ನೆರೆಹೊರೆಯ ಕನಿಷ್ಟ ಮೂವರು ಗೃಹಸ್ಥರ ಸಹಿ ಪಡೆದು, ಅದರ ಒಂದು ಪ್ರತಿಯನ್ನು ಸ್ಥಳದ ಮಾಲಕ ಅಥವಾ ಹಾಜರಿರುವ ವ್ಯಕ್ತಿಗೆ ನೀಡತಕ್ಕದ್ದು.

ಈಗ ವಿಧೇಯಕದಲ್ಲಿ ಇರುವುದನ್ನು ಗಮನಿಸಿ: "ಆದಷ್ಟು ಬೇಗನೆ" ಎಂದರೆ ಏನು? ವ್ಯಾವಹಾರಿಕವಾಗಿ, ಅದು, ಯಂತ್ರೋಪಕರಣಗಳನ್ನು ವಶಪಡಿಸಿಕೊಂಡ ನಂತರ ಅಧಿಕಾರಿಗಳು ತಮಗೆ ಅನುಕೂಲವಾದ ಸಮಯದಲ್ಲಿ ಮ್ಯಾಜಿಸ್ಟ್ರೇಟರ ಹತ್ತಿರ ಹೋದರೆ ಸಾಕು ಎಂದು ಹೇಳುತ್ತಿದೆ ತಾನೆ? "ಸೇವಕ"ರಾದ ಅವರು ಮಾಡಬೇಕಾದ ಕೆಲಸಕ್ಕೆ ಒಂದು ಅವಧಿಯನ್ನು ಯಾಕೆ ನಿರ್ದಿಷ್ಟ ಪಡಿಸಬಾರದು?
ತಾವು ಯಾವ ಯಾವ ಯಂತ್ರಗಳನ್ನು ವಶಪಡಿಸಿಕೊಂಡಿದ್ದೇವೆ ಎಂಬುದರ ಪಟ್ಟಿ ತಯಾರಿಸಿ ಅದರ ಪ್ರತಿಯನ್ನು ಸ್ಥಳದ ಮಾಲಕನಿಗೆ ಕೊಡಲು ಅಧಿಕಾರಿಗಳಿಗೆ ಅಡ್ಡಿ ಏನು? ಅಷ್ಟು ಕೆಲಸ ಮಾಡುವುದು, ಎಂದರೆ ಯಂತ್ರೋಪಕರಣಗಳು ಯಾವುವು ಎಂದು ಪರಿಶೀಲಿಸಿ ಅವುಗಳನ್ನು ಬರೆದು ಪಟ್ಟಿ ಮಾಡುವ ಕೆಲಸವನ್ನು ಅಧಿಕಾರಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ ಅಲ್ಲವೆ? ಅಂಥದೊಂದು ಪಟ್ಟಿ ಇಲ್ಲದಿದ್ದರೆ, ಅಧಿಕಾರಿಗಳು ವಶಪಡಿಸಿಕೊಂಡ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ಯಾಕೆ ಅವಕಾಶ ಇರಬೇಕು? ಮುಂದೊಂದು ದಿನ ಯಂತ್ರೋಪಕರಣಗಳನ್ನು ಹಿಂದಿರುಗಿಸತಕ್ಕದ್ದು ಎಂದು ನ್ಯಾಯಾಲಯದಲ್ಲಿ ಆಜ್ನೆಯಾದರೆ, ಅಧಿಕಾರಿಗಳು ಯಾವ ಆಧಾರದಲ್ಲಿ ಯಂತ್ರೋಪಕರಣಗಳನ್ನು ಹಿಂತಿರುಗಿಸುತ್ತಾರೆ? ಐದೋ ಹತ್ತೋ ವರ್ಷದ ಹಿಂದೆ ಏನೇನು ವಶಪಡಿಸಿಕೊಳ್ಳಲಾಗಿತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಹಿಂದಿರುಗಿಸುತ್ತಾರೆಯೆ?
"ಹಾಗೇನಿಲ್ಲ. ಕ್ರಮಪ್ರಕಾರ ಒಂದು ಪಟ್ಟಿ ಮಾಡಲೇ ಬೇಕು. ಮಾಡಿಯೇ ಮಾಡುತ್ತೇವೆ" ಎಂಬುದು ಇದಕ್ಕೆ ಅಧಿಕಾರಿಗಳು ಕೊಡುವ ಉತ್ತರ ಎಂದು ಊಹಿಸುತ್ತೇನೆ. ಹಾಗಾದರೆ ಅದನ್ನು ವಿಧೇಯಕದಲ್ಲಿ ಸೇರಿಸಿಬಿಡಿ! ಅದಕ್ಕೇನು ಸಮಸ್ಯೆ?

ಇನ್ನೊಂದು ಉದಾಹರಣೆ:

ವಿಧೇಯಕದಲ್ಲಿ ಇರುವುದು:
(೪) (೨)ನೇ ಉಪ-ಪ್ರಕರಣದಲ್ಲಿ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ತಾನು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ನಂತರ ಪ್ರಾಧಿಕಾರವು ಅರ್ಜಿದಾರನಲ್ಲಿ ಅಂತರ್ಜಲವನ್ನು ತೆಗೆಯಲು ಬೇಕಾದ ಸಾಧನಗಳಿವೆ ಮತ್ತು ಬಾವಿಯನ್ನು ಕೊರೆಯುವ ಅಥವಾ ತೋಡುವ ಕಾರ್ಯಕ್ಕೆ ಬೇಕಾದ ಜ್ನಾನವಿದೆ ಎಂದು ತನಗೆ ಮನದಟ್ಟಾದರೆ, ನಿಯಮಿಸಲಾದಂಥ ಷರತ್ತಿಗೊಳಪಟ್ಟು, ಅಂಥ ಅವಧಿಗೆ ಅಂಥ ನಮೂನೆಯಲ್ಲಿ ನೋಂದಣಿ ಪ್ರಮಾಣ ಪತ್ರವನ್ನು ಮಂಜೂರು ಮಾಡಬಹುದು

ನಾನು ಸೂಚಿಸಿದ ಬದಲಾವಣೆ:
ಮೇಲಿನ ಪ್ಯಾರಾಕ್ಕೆ ಈ ಮುಂದಿನಂತೆ ಸೇರ್ಪಡೆ:
ಅರ್ಜಿದಾರನು ಅರ್ಜಿ ಸಲ್ಲಿಸಿದ ಮೂವತ್ತು ದಿನಗಳ ಒಳಗೆ ಪ್ರಾಧಿಕಾರವು ಆತನಿಗೆ ದೃಡಪತ್ರಿಕೆಯನ್ನು ನೀಡತಕ್ಕದ್ದು ಅಥವಾ ಸಕಾರಣವಾಗಿ ನಿರಾಕರಿಸತಕ್ಕದ್ದು. ಈ ಅವಧಿಯೊಳಗೆ ದೃಢಪತ್ರಿಕೆಯನ್ನು ನೀಡದಿದ್ದರೆ ಅಥವಾ ಸಕಾರಣವಾಗಿ ನಿರಾಕರಿಸದಿದ್ದರೆ, ನಂತರ ಹದಿನೈದು ದಿನಗಳ ಒಳಗೆ ಪ್ರಾಧಿಕಾರವು ದೃಡಪತ್ರಿಕೆಯನ್ನು ಅರ್ಜಿದಾರನಿಗೆ, ಮೂವತ್ತು ದಿನಗಳ ಒಳಗೆ ನೀಡದೆ ಇರಲು ಕಾರಣಗಳೊಂದಿಗೆ, ಉಚಿತವಾಗಿ ನೀಡತಕ್ಕದ್ದು. ಪ್ರಾಧಿಕಾರಕ್ಕೆ ಬರಬೇಕಾದ ಶುಲ್ಕವನ್ನು ಸಂಬಂಧಪಟ್ಟ ಅಧಿಕಾರಿಗಳಿಂದಲೇ ಪ್ರಾಧಿಕಾರವು ವಸೂಲು ಮಾಡತಕ್ಕದ್ದು.

ಇಂತಹ ಹಲವು ಬದಲಾವಣೆಗಳನ್ನು ನಾನು ಸೂಚಿಸಿದ್ದೆ. ನನ್ನ ಒಂದೇ ಒಂದು ಸಲಹೆ ಸಹ ಸ್ವೀಕೃತವಾಗಿಲ್ಲ.
ಇನ್ನು, ಈ ವಿಧೇಯಕದ ಕರಡನ್ನು ತಯಾರಿಸಿದವರು ಯಾರು, ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಪರಿಗಣಿಸಲು ಯಾವ ಕ್ರಮವನ್ನು ಅನುಸರಿಸಲಾಗುವುದು ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮುಂದುವರಿಸಬೇಕೆಂದಿದೆ. ನೋಡೋಣ.

ಶುಕ್ರವಾರ, ಏಪ್ರಿಲ್ 8, 2011

ಎಂಡೋಸಲ್ಫಾನ್: ಸದ್ದಿಲ್ಲದೆ ಬಿದ್ದ ಅಣುಬಾಂಬ್


ಸುಮಾರು ಒಂದು ತಿಂಗಳ ಹಿಂದೆ ಡಾ ರವೀಂದ್ರನಾಥ ಶಾನುಭಾಗರಿಂದ ಒಂದು ಮೈಲ್ ಬಂತು: ಅದು ಎಂಡೋ ಸಲ್ಫಾನ್ ಬಹಿಷ್ಕರಿಸುವ ವಿಷಯದಲ್ಲಿ. ನಾನು ಉತ್ತರಿಸಿದೆ: "ಕುಡಿಯುವ ನೀರಿಗೆ, ತಿನ್ನುವ ಅನ್ನಕ್ಕೆ ಅಪಾಯ ಬಂದರೂ ಜನ ಎದ್ದು ಪ್ರತಿಭಟಿಸುತ್ತಾರೆಂದು ನನಗೆ ಅನ್ನಿಸುವುದಿಲ್ಲ. ಆದರೂ, ನಾವು ಮಾಡಬೇಕಾದ್ದನ್ನು ಮಾಡಲೇಬೇಕು. ಖಂಡಿತ ಮಾಡೋಣ" ಕಳೆದ ತಿಂಗಳಿನಲ್ಲಿ ಕರ್ನಾಟಕ ಸರಕಾರ ಎಂಡೋಸಲ್ಫಾನನ್ನು ಎರಡು ತಿಂಗಳ ಮಟ್ಟಿಗೆ ನಿಷೇಧಿಸಿತು.. ಹೀಗೆ ಮಾಡಲು ಮೂಲ ಕಾರಣ ಬೆಳ್ತಂಗಡಿಯ ವಿಶ್ವನಾಥ ಗೌಡ ಮತ್ತು ಪುತ್ತೂರಿನ ಸಂಜೀವ ಎಂಬ ಸಾಮಾಜಿಕ ಕಾರ್ಯಕರ್ತರ ಸತತ ಪ್ರಯತ್ನ. ( ವಿಶ್ವನಾಥ ಗೌಡರು ಸ್ವತಃ ಎಂಡೋಸಲ್ಫಾನಿನ ಬಲಿ. ಅವರಿಗೆ ಒಂದು ಕಣ್ಣಿನಲ್ಲಿ ಶೇ. ೧೦ ದೃಷ್ಟಿ ಇದೆ. ಮತ್ತೊಂದರಲ್ಲಿ ದೃಷ್ಟಿ ಇಲ್ಲ.) ಅವರು ಹೇಗಾದರೂ ಮಾಡಿ, ಶೋಭಾ ಕರಂದ್ಲಾಜೆಯವರನ್ನು, ಕೊಕ್ಕಡ, ಶಿಶಿಲಗಳಿಗೆ ಸ್ವತಃ ಬಂದು ಸಮಸ್ಯೆಯನ್ನು ಪರಿಶೀಲಿಸುವಂತೆ ಮನ ಒಲಿಸಿದರು. ಶೋಭಾ ಕರಂದ್ಲಾಜೆಯವರು ಬಂದು ನೋಡಿದಾಗ ಅವರಿಗೆ ದುರಂತದ ಸಂಪೂರ್ಣ ಅರಿವಾಯಿತು. ಮುಂದೆ ಕೆಲವೇ ದಿನದಲ್ಲಿ ಎಂಡೋ ಸಲ್ಫಾನ್ ಕರ್ನಾಟಕದಲ್ಲಿ ಎರಡು ತಿಂಗಳ ಮಟ್ಟಿಗೆ ನಿಷೇಧ ಆಯಿತು. ಈಗ ಸರಕಾರದ ಈ ಆಜ್ನೆಯನ್ನು ಪ್ರಶ್ನಿಸಿ ಎಂಡೋಸಲ್ಫಾನ್ ತಯಾರಿಸುವ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲೇರಿವೆ, ನಿಷೇಧಿಸಿದ್ದಕ್ಕೆ ಸರಿಯಾದ ಆಧಾರವನ್ನು ಕೋರ್ಟಿಗೆ ಕೊಟ್ಟು ಎಂಡೋಸಲ್ಫಾನ್ ಖಾಯಮ್ಮಾಗಿ ನಿಷೇಧವಾಗುವಂತೆ ನೋಡಿಕೊಳ್ಳುವ ಹೊಣೆ ಕರ್ನಾಟಕ ಸರಕಾರದ ಮೇಲೆ ಇದೆ. ಎಂಡೋಸಲ್ಫಾನಿನಿಂದ ಪೀಡಿತರಾದವರು ಎಷ್ಟು ಜನ ನಮ್ಮ ನಡುವೆ ಇದ್ದಾರೆಂಬುದರ ಲೆಕ್ಕ ಕೋರ್ಟಿಗೆ ಕೊಡಬೇಕು. ಅವರೆಲ್ಲ ಹೀಗಾಗಲು ಕಾರಣ ಎಂಡೋಸಲ್ಫಾನೇ ಎಂಬುದನ್ನು ವೈಜ್ನಾನಿಕವಾಗಿ ಕೋರ್ಟಿನ ಎದುರು ಸಾಬೀತು ಮಾಡಬೇಕು.ಈ ಹೊಣೆಯನ್ನು ನಿಭಾಯಿಸುವಲ್ಲಿ ಸಾರ್ವಜನಿಕರೂ ಸರಕಾರಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ. ಶಾಸಕರುಗಳು ಪಕ್ಷಭೇದ ಮರೆತು, ಸರಕಾರಕ್ಕೆ ಬೆಂಬಲ ನೀಡಬೇಕಾಗಿದೆ.
ಏನಿದು ಎಂಡೋ ಸಲ್ಫಾನ್?
ಸಾಮಾನ್ಯವಾಗಿ ಜನರ ಅಭಿಪ್ರಾಯವೆಂದರೆ ಅದೊಂದು ಕೀಟಗಳನ್ನು ನಾಶಪಡಿಸುವ ಔಷಧಿ. ಯಾವುದೇ ಕೀಟನಾಶಕ ಕೀಟಗಳನ್ನು ಮಾತ್ರ ನಾಶ ಮಾಡಲು ಶಕ್ತವಾಗಿರಬೇಕು ಹೊರತು ಅದನ್ನು ಸೇವಿಸಿದ ಇತರ ದೊಡ್ಡ ಪ್ರಾಣಿಗಳ ಮೇಲೆ, ಮನುಷ್ಯರ ಮೇಲೆ ದುಷ್ಪರಿಣಾಮ ಉಂಟು ಮಾಡುವಂತಿರಬಾರದು. ಆದರೆ ಎಂಡೋ ಸಲ್ಫಾನನ್ನು ಸತತವಾಗಿ ಸೇವಿಸಿದರೆ, ಅದು ಮನುಷ್ಯರ ಮೇಲೂ, ಪ್ರಾಣಿಗಳ ಮೇಲೂ ಅತ್ಯಂತ ಘೋರ ಪರಿಣಾಮಗಳನ್ನುಂಟು ಮಾಡುತ್ತದೆ ಎಂಬುದು ಈಗ ವೈಜ್ನಾನಿಕವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಅದನ್ನು ಸುಮಾರು 1960ರ ಸುಮಾರಿಗೆ ಉತ್ಪಾದಿಸಲು ಪ್ರಾರಂಭಿಸಿದ ಅಮೆರಿಕಾ ಸೇರಿ ಜಗತ್ತಿನ 73 ದೇಶಗಳು ಅದರ ತಯಾರಿಕೆ ಹಾಗೂ ಬಳಕೆಯನ್ನು ಬಹಿಷ್ಕರಿಸಿವೆ. ಆದರೆ ಭಾರತದಲ್ಲಿ ಅದರ ತಯಾರಿಕೆ ಹಾಗೂ ಬಳಕೆ ಎರಡನ್ನೂ ಇಲ್ಲಿಯವರೆಗೂ ನಿಷೇಧಿಸಲಾಗಿಲ್ಲ. ಈಗಲೂ ನಮ್ಮ ರೈತರು ಅತ್ಯಂತ ವ್ಯಾಪಕವಾಗಿ ಎಂಡೋಸಲ್ಫಾನನ್ನು ಬಳಸುತ್ತಿದ್ದಾರೆ.
ಎಂಡೋ ಸಲ್ಫಾನ್ ಮತ್ತು ಬಂಟ್ವಾಳ ತಾಲೂಕು
ಕೇರಳದಲ್ಲಿ ಮಾತ್ರ ಎಂಡೋಸಲ್ಫಾನ್ ಬಳಸುತ್ತಾರೆಂದೂ, ಕರ್ನಾಟಕದಲ್ಲಿ ಅದು ಇಲ್ಲವೆಂದೂ ನಾನು ನನ್ನಷ್ಟಕ್ಕೆ ಭಾವಿಸಿಕೊಂಡಿದ್ದೆ. ವಿಶ್ವನಾಥ ಗೌಡರೂ, ಸಂಜೀವರೂ ಸೇರಿ ಕರ್ನಾಟಕದ ಪುತ್ತೂರು, ಬೆಳ್ತಂಗಡಿಗಳಲ್ಲಿ ಎಂಡೋಸಲ್ಫಾನನ್ನು ಗೇರು ತೋಟಗಳಿಗೆ ಧಾರಾಳವಾಗಿ ಸಿಂಪಡಿಸಲಾಗಿದೆ, ಅದರ ಪರಿಣಾಮವಾಗಿಯೇ ಸಾವಿರಾರು ಜನರು ಘೋರವಾದ ಕಾಹಿಲೆಗಳಿಂದ ನರಳುತ್ತಿದ್ದಾರೆ ಎಂಬ ಸತ್ಯ ಸಂಗತಿಯನ್ನು ಬಯಲಿಗೆಳೆದರು. ಆಗ ನಾನು ಅದು ಬಂಟ್ವಾಳ ತಾಲೂಕಿನಲ್ಲಿ ಇಲ್ಲವೆಂದು ನಿಶ್ಚಿಂತೆಯಿಂದಿದ್ದೆ! ಆದರೆ ಸಂಜೀವರು ಮಾಹಿತಿ ಹಕ್ಕಿನ ಮೂಲಕ ಗೇರು ಅಭಿವೃದ್ಧಿ ನಿಗಮದಿಂದ ಪಡೆದ ಮಾಹಿತಿಗಳು ಬೇರೆಯೇ ಸತ್ಯವನ್ನು ಹೇಳುತ್ತಿದ್ದವು: ಬಂಟ್ವಾಳ ತಾಲೂಕಿನ ಅಳಿಕೆ, ವಿಟ್ಲ ಮುಡ್ನೂರು ಹಾಗೂ ಕೇಪು ಗ್ರಾಮಗಳಲ್ಲೂ ಗೇರು ಅಭಿವೃದ್ಧಿ ನಿಗಮದವರು ಎಂಡೋಸಲ್ಫಾನ್ ಸಿಂಪಡಿಸಿದ್ದ ವಿಷಯವನ್ನು ಅಧಿಕೃತ ದಾಖಲೆಗಳ ಮೂಲಕವೇ ಸಂಜೀವರು ನನ್ನೆದುರಿಗೆ ಒಡ್ಡಿದರು. ಈ ವಿಷಯ ತಿಳಿದಾಗ ನಾನು ಕೂತಲ್ಲಿಂದ ಏಳದೆ ವಿಧಿಯೇ ಇರಲಿಲ್ಲ. ಎದ್ದೆ. ಕಣ್ಣು ಬಿಟ್ಟು ಕೊಂಚ ಅತ್ತ ಇತ್ತ ಹುಡುಕಾಡಿದೆ. ನನಗೆ ಕಂಡ ಸತ್ಯ ಘೋರವಾಗಿತ್ತು. ವಿಶ್ವನಾಥ ಗೌಡರು, ಸಂಜೀವರು ಮತ್ತು ಶಾನುಭಾಗರು ನನ್ನ ದಿವ್ಯ ಸೋಮಾರಿತನಕ್ಕೆ ಚಾಟಿ ಏಟು ಕೊಟ್ಟು ಎಬ್ಬಿಸಿದ ಹೊರತು ಏಳಲು, ಕಣ್ಣು ಬಿಡಲು ಸಿದ್ಧನಾಗದ ನನ್ನ ಬಗ್ಗೆ ನನಗೆ ನಾಚಿಕೆಯಾಯಿತು.
ಎಂಡೋಸಲ್ಫಾನ್ ಪೀಡಿತರಿಗಾಗಿ ಶೋಧ
ಕೇಪು, ವಿಟ್ಲಮುಡ್ನೂರು, ಅಳಿಕೆ ಈ ಗ್ರಾಮಗಳಲ್ಲಿ ನನ್ನ ಗುರುತಿನವರು ಯಾರು ಎಂದು ನೆನಪು ಮಾಡಿಕೊಂಡೆ. ತಕ್ಷಣಕ್ಕೆ ಯಾರೂ ನೆನಪಾಗಲಿಲ್ಲ. ಕೊನೆಗೆ ಅನಂತಾಡಿ ಗೋವಿಂದ ಭಟ್ಟರಿಗೆ ಮೇಲ್ ಕಳಿಸಿದೆ. ಅವರು ಕೇಪುವಿನ ನಾರಾಯಣ ಮೂರ್ತಿಯವರ ನಂಬರ್ ಕೊಟ್ಟರು. ನಾರಾಯಣ ಮೂರ್ತಿ ತಮ್ಮ ಸುತ್ತಮುತ್ತ ಅಂಥವರು ಯಾರನ್ನೂ ಕಂಡು ಗೊತ್ತಿಲ್ಲವೆಂದೂ, ವಿ.ಕೆ. ಶರ್ಮರನ್ನು ವಿಚಾರಿಸಿದರೆ ಏನಾದರೂ ಮಾಹಿತಿ ದೊರೆಯಬಹುದೆಂದೂ ಹೇಳಿದರು. ವಿ.ಕೆ. ಶರ್ಮರಿಗೆ ಫೋನ್ ಮಾಡಿದೆ. ಅವರು ಈ ಮುಂಚೆ ಮುಳಿಯದ (ಮುಚ್ಚಿರಪದವು) ಶಾಲೆಯಲ್ಲಿ ಅಧ್ಯಾಪಕರಾಗಿದ್ದವರು. ಅವರೂ ಸಹ ಅಂಥ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿಲ್ಲವೆಂದೂ, ಆದರೆ ಎಂಟು ಹತ್ತು ವರ್ಷಗಳ ಕೆಳಗೆ ನಡೆಯಲು ಕೂಡದ ಒಬ್ಬ ಹುಡುಗ ಶಾಲೆಗೆ ಬರುತ್ತಿದ್ದನೆಂದೂ, ಈಚೆಗೆ ಅವನ ಸಮಾಚಾರ ಗೊತ್ತಿಲ್ಲವೆಂದೂ, ವಿಚಾರಿಸಿ ಹೇಳುವುದಾಗಿಯೂ ತಿಳಿಸಿದರು. ಮಾರನೆಯ ದಿನ ವಿಚಾರಿಸಿದಾಗ ಅಂಥ ಒಬ್ಬ ಹುಡುಗ ಇರುವುದು ಹೌದೆಂದೂ, ಬಂದರೆ ಅವನ ಮನೆಗೆ ಕರೆದುಕೊಂಡು ಹೋಗುವುದಾಗಿಯೂ ಶರ್ಮರು ಹೇಳಿದರು. ಮರುದಿನ ಕೃಷ್ಣ ಗಟ್ಟಿಯವರೂ, ನಾನೂ ಮುಳಿಯಕ್ಕೆ ಹೋದೆವು. ಶಾಲೆಗೆ ಅಂದಾಜು ೩೦೦ ಮೀ. ದೂರದಲ್ಲಿ ಸುಮಾಲಿನಿಯವರ ಮನೆ. ನಾವು ಅಲ್ಲಿಗೆ ಹೋದೆವು. ಚಾವಡಿಯಲ್ಲೇ ಒಂದು ಕುರ್ಚಿಯಲ್ಲಿ ಕೂತಿದ್ದ ಅವರ ಮಗ ಆಕಾಶ್. ಆಕಾಶನನ್ನು ನೋಡಿದರೆ ಅವನು ಆಂಗ್ರಿ ಯಂಗ್ ಮ್ಯಾನ್ ನ ಹಾಗೆ ಕಾಣುತ್ತಾನೆ. ಹಾಗೆ ಇರಲು ಅವನಿಗೆ ಎಲ್ಲ ಕಾರಣವೂ ಇದೆ. ಯಾರೋ ಮಾಡಿದ ತಪ್ಪಿಗಾಗಿ ಆಕಾಶ್ ಇಂದು ಕೂತಲ್ಲೇ ಬದುಕು ಕಳೆಯಬೇಕಾಗಿದೆ. ಜನರ ಅನುಕಂಪವನ್ನು ಸಹಿಸಿಕೊಳ್ಳಬೇಕಾಗಿದೆ. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ರೋಷನ್ ಫೆರಾವೋನ ಮನೆ ಇದೆ. ರೋಷನ್ ಗೆ ಈಗ ಅಂದಾಜು ಹದಿನಾರು ವರ್ಷ. ನಾವು ಹೋದಾಗ ಅವನು ಮನೆಯಲ್ಲಿರಲಿಲ್ಲ, ಶಾಲೆಗೆ ಹೋಗಿದ್ದ. ಆದರೆ ಶಾಲೆಯಲ್ಲಿ ಅವನು ಅವನ ತಮ್ಮನಿಗಿಂತ ಹಿಂದೆ ಬಿದ್ದಿದ್ದಾನೆ. ಕ್ಯಾನ್ಸರ್ ಅವನ ವಿದ್ಯಾಭ್ಯಾಸದ ಎರಡು ವರ್ಷಗಳನ್ನೇ ತಿಂದು ಹಾಕಿದೆ. ಅವನ ಮನೆಯಲ್ಲಿರುವುದು ತಂದೆ ಮಾತ್ರ. ರೋಷನ್ ನ ಚಿಕಿತ್ಸೆಗಾಗಿ ಅವನ ತಂದೆ ತಾಯಿ ಈವರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಅವನ ಚಿಕಿತ್ಸೆಯ ಖರ್ಚು ತೂಗಿಸಲೆಂದೇ ಅವನ ತಾಯಿ ಗಲ್ಫಿಗೆ ಹೋಗಿ ದುಡಿಯುತ್ತಿದ್ದಾರೆ. ಆಕಾಶನ ತಾಯಿ ಸುಮಾಲಿನಿ ನಮಗೆ ಮೂಡಾಯಿಬೆಟ್ಟಿನ ದೇವಕಿಯವರ ಮಗನೂ ಮಲಗಿದಲ್ಲೇ ಎಂಬ ಸುಳಿವು ನೀಡಿದರು. ಆದರೆ ಆ ದಿನ ನಮಗೆ ಅಲ್ಲಿಗೆ ಹೋಗುವುದು ಸಾಧ್ಯವಾಗಲಿಲ್ಲ. ಈ ನಡುವೆ ನಾನು ಮಾಣಿಮೂಲೆ ಗೋವಿಂದ ಭಟ್ಟರನ್ನು ಸಂಪರ್ಕಿಸಿದೆ. ಅವರದೂ ಅದೇ ಮಾತು: "ಈ ಸುತ್ತಿನಲ್ಲೆಲ್ಲೂ ಅಂಥವರು ಕಾಣಲಿಲ್ಲ".ನಾನೆಂದೆ: "ಅಂಥವರು ಸುಲಭದಲ್ಲಿ ಕಾಣಲು ಸಿಗುವುದಿಲ್ಲ. ಏಕೆಂದರೆ ಅವರು ಯಾರಿಗೂ ಕಾಣದ ಹಾಗೆ ಮನೆಯಲ್ಲೇ ಇರುತ್ತಾರೆ". ಗೋವಿಂದ ಭಟ್ಟರಿಗೆ ರವೀಂದ್ರನಾಥ ಶಾನುಭಾಗರ ಪರಿಚಯ ಚೆನ್ನಾಗಿತ್ತು. ಅವರು ಆಸಕ್ತಿ ವಹಿಸಿದರು. ಹೀಗೆ ಅಳಿಕೆಯ ಪಂಚಾಯತ್ ಅಧ್ಯಕ್ಷ ಕಾನ ಈಶ್ವರ ಭಟ್ಟರು, ಗೋವಿಂದ ಭಟ್ಟರು, ಕೃಷ್ಣ ಗಟ್ಟಿ ಮತ್ತು ನಾನು ಒಂದು ದಿನ ಅಳಿಕೆಯಲ್ಲಿ ಸಮೀಕ್ಷೆ ಶುರು ಮಾಡಿದೆವು. ಅಡ್ಯನಡ್ಕ ದಾಟಿ ಕೇರಳದ ಕಡೆಗೆ ಮುಂದೆ ಹೋದರೆ ಅಳಿಕೆಗೆ ತಿರುಗುವ ರಸ್ತೆ ಸಿಗುತ್ತದೆ. ಇದು ಪಡಿಬಾಗಿಲು. ಇಲ್ಲಿ ರಸ್ತೆಯ ಎಡಕ್ಕೆ ಕೆಳಗಿಳಿದು ಹೋದರೆ ಆನಂದ ಆಚಾರರ ಮನೆ ಇದೆ. ಅವರ ಮಗ ಉಮೇಶ ಫಕ್ಕನೆ ನೋಡಲು ಎಲ್ಲರ ಹಾಗೇ ಕಾಣುತ್ತಾನೆ. ಆದರೆ ಅವನು ಎಲ್ಲರಂತಿಲ್ಲ. ಅವನಿಗೀಗ ಹನ್ನೆರಡು ವರ್ಷ. ಅವನು ನನ್ನನ್ನು ನೋಡಿದ್ದು ಅಂದೇ ಮೊದಲು. ಆದರೂ ನಾನು ಕೂತಲ್ಲಿಗೆ ಬಂದು ನನ್ನ ಕಿಸೆಗೇ ಕೈ ಹಾಕಿದ. ಶಾಲೆಗೆ ಹೋಗುತ್ತಾನಾದರೂ. ಓದುವುದು ಅವನಿಗೆ ತುಂಬ ಕಷ್ಟವಾಗುತ್ತದೆ ಎನ್ನುತ್ತಾರೆ ಅವನ ತಾಯಿ.. ನಾವು ಮೂಡಾಯಿಬೆಟ್ಟಿನ ದೇವಕಿಯವರ ಮನೆಗೆ ಹೋದೆವು. ದೇವಕಿ ಈ ಮೊದಲು ತಾಲೂಕು ಪಂಚಾಯತ್ ಸದಸ್ಯರಾಗಿದ್ದವರಂತೆ.ತುಂಬ ಚುರುಕಿನವರು. ನಾವು ಹೋದಾಗ ಬತ್ತ ಹೊತ್ತು ತರುವ ಕೆಲಸದಲ್ಲಿದ್ದರು. ಅವರ ಮಗ ರಾಜೇಂದ್ರ ಪ್ರಸಾದ ಚಾವಡಿಯಲ್ಲಿ ಒಂದು ಮಂಚದ ಮೇಲೆ ಮಲಗಿದ್ದ. ಅವನಿಗೀಗ ಸುಮಾರು ೩೦ ವರ್ಷ."ಇವನು ಹುಟ್ಟಿದಾಗಿಂದಲೂ ಹೀಗೇ ಮಲಗಿದ್ದಾನೆ. ಟಿವಿ ನೋಡಿ ಎಲ್ಲಾ ಭಾಷೆ ಕಲಿತಿದ್ದಾನೆ. ಇತ್ತೀಚೆಗೆ ಅವನನ್ನು ಎತ್ತಿ ಆಚೆ ಈಚೆ ಮಾಡುವುದು ನಮಗೆ ತುಂಬ ಕಷ್ಟವಾಗುತ್ತಿದೆ" ಎಂದರು ದೇವಕಿ. ಅವರ ಮಾತಿನಲ್ಲಿ ಕಷ್ಟ, ದುಃಖಗಳ ಛಾಯೆ ಇರಲಿಲ್ಲ. ದುಃಖ ಪಡುವ ಶಕ್ತಿ ಅವರಲ್ಲಿ ಉಳಿದ ಹಾಗೆ ಕಾಣಲಿಲ್ಲ.ಆದರೆ ದೇವಕಿ, ಅಂಥ ಮಗನನ್ನು ಮನೆಯಲ್ಲಿಟ್ಟುಕೊಂಡೇ ಸಮಾಜದಲ್ಲಿ ತೊಡಗಿಕೊಂಡವರು. ಇಂಥದೇ ಸಮಸ್ಯೆ ಇರುವವರ ಒಂದು ಪಟ್ಟಿಯೇ ಅವರ ಹತ್ತಿರ ಇತ್ತು! ಅದುವರೆಗೂ ಕಣ್ಣಿಗೆ ಮರೆಯಾಗಿದ್ದ ಎಂಡೋಸಲ್ಫಾನ್ ದುರಂತ ಸ್ವಲ್ಪ ಸ್ವಲ್ಪವಾಗಿ ತನ್ನ ಘೋರಸ್ವರೂಪವನ್ನು ನಮ್ಮೆದುರು ಬಿಚ್ಚತೊಡಗಿತು. ದೇವಕಿಯವರು ಕೊಟ್ಟ ಪಟ್ಟಿಯ ಆಧಾರದ ಮೇಲೆ ನಾವು ಹುಡುಕುತ್ತ ಹೋದೆವು.ನಾಲ್ಕು ವರ್ಷದ ಯಶವಂತನಿಗೆ ತಲೆ ತುಂಬ ದೊಡ್ಡದಾಗಿದೆ. ನೀರು ತುಂಬಿದೆ ಎನ್ನುತ್ತಾರಂತೆ ವೈದ್ಯರು.... ಮೂವತ್ತೆರಡರ ಹರಿಪ್ರಸಾದ ಶೆಟ್ಟಿ ಆಚೆ ಈಚೆ ತೆವಳಿಯೇ ಚಲಿಸಬೇಕು.... ಇಪ್ಪತ್ತೆರಡರ ಅಬ್ದುಲ್ ನಝೀರ್ ಮತ್ತು ಇಪ್ಪತ್ನಾಲ್ಕರ ಅವನ ಅಕ್ಕ ಜೋಹರಾ ಇಬ್ಬರಿಗೂ ಬುದ್ಧಿ ಮಾಂದ್ಯ......ಇನ್ನೂ ಆರು ವರ್ಷದ ಮುಹ್ಸೀನ್ ಬಾತಿಶ್ ಗೆ ಬುದ್ಧಿ ಮಂದ.... ೨೬ ವರ್ಷದ ಮಹಮ್ಮದ್ ಆಶ್ರಫ್ ಸಹ ಆಚೆ ಈಚೆ ತೆವಳಿಕೊಂಡೇ ಹೋಗಬೇಕು.... ರಾಮಣ್ಣಗೌಡರ ಪತ್ನಿ ಕುಸುಮಾಗೆ ಕ್ಯಾನ್ಸರ್.... ಮರುದಿನ ಮತ್ತೆ ಗೋವಿಂದ ಭಟ್ಟರನ್ನು ಸಂಪರ್ಕಿಸಿದೆ. ನಿಮಗೆ ಬಿಲ್ಲಂಪದವು ನಾರಾಯಣ ಭಟ್ಟರನ್ನು ಜೊತೆ ಮಾಡಿಕೊಡುತ್ತೇನೆ ಅಂದರು ಅವರು. ಹೀಗೆ ನಾರಾಯಣ ಭಟ್ಟರೂ ನಾನೂ ಮತ್ತೊಂದು ದಿನ ಕುದ್ದುಪದವಿನ ಸುತ್ತಮುತ್ತ ತಿರುಗಿದೆವು: ನಾರಾಯಣ ಭಟ್ಟರು ಸ್ಥಳೀಕರು. ನಾವು ಹೆಚ್ಚು ದೂರ ಹೋಗಬೇಕಾಗಿರಲಿಲ್ಲ. ಎಲ್ಲ ಅಲ್ಲೇ ಇದ್ದಾರೆ. ಇನ್ನೂ ೫೨ರ, ಒಳ್ಳೆಯ ದೇಹ ಸೌಷ್ಟವ ಇರುವ ಬಾಲಕೃಷ್ಣ ಶೆಟ್ಟರು ಕಣ್ಣು ಕಳೆದುಕೊಂಡಿದ್ದಾರೆ... ಅವರ ತಮ್ಮ ನಲವತ್ತರ ಆಸುಪಾಸಿನ ಸತೀಶ ಶೆಟ್ಟರಿಗೆ ಒಂದು ಕೈ, ಒಂದು ಕಾಲು ಬಲಹೀನವಾಗಿದೆ...(ಬಿಲ್ಲಂಪದವು ನಾರಾಯಣ ಭಟ್ಟರ ಮನೆಯಲ್ಲಿ ಹಿಂದಿನಿಂದಲೂ ಒಂದು ನೋವಿನ ಎಣ್ಣೆ ಉಚಿತವಾಗಿ ಕೊಡುವ ಸಂಪ್ರದಾಯ ಇದೆಯಂತೆ. ಆ ಎಣ್ಣೆ ಹಚ್ಚಿದರೆ ನೋವು ಸ್ವಲ್ಪ ಕಡಿಮೆಯಾಗುತ್ತದೆ ಎಂದರು ಸತೀಶ ಶೆಟ್ಟರು. "ಬಲೆ, ಇತ್ತೆ ರೆಡಿ ಉಂಡು, ಕೊರ್ಕ" ಎಂದರು ನಾರಾಯಣ ಭಟ್ಟರು.) ರೈಹಾನಳಿಗೆ ನಡೆಯುವುದೇ ಕಷ್ಟ..... ಸುಲೈಮಾನ್ ರಿಗೆ ಶ್ವಾಸಕೋಶದ ಸಮಸ್ಯೆ.....ಕ್ವಾಟರ್ಸಿನ ಅಡ್ರುರವರ ಮಗಳು ಬೇಬಿಗೆ ನಡೆಯಲು ಆಗುವುದಿಲ್ಲ.... ಎಲ್ಲಕ್ಕಿಂತ ನನಗೆ ಕಷ್ಟವಾದದ್ದು ಅಬೂಬಕ್ಕರ್ ರ ಮನೆಯಲ್ಲಿ. ಅವರ ಮನೆಯಲ್ಲಿ ಒಂದಲ್ಲ ಎರಡಲ್ಲ ಮೂರು ಮಕ್ಕಳಿದ್ದಾರೆ ಇಂಥವರು. ಹಿರಿಯವಳಿಗೆ ಸುಮಾರು ಇಪ್ಪತ್ತು. ಎರಡನೆಯವಳು ಸುಮಾರು ಹದಿನಾರು. ಮೂರನೆಯವ ಸುಮಾರು ಹತ್ತು. ಬುದ್ದಿಮಾಂದ್ಯರು. "ಒಂದು, ಎರಡು ಎಲ್ಲಿ ಮಾಡಬೇಕು ಅಂತ ಅವರಿಗೆ ತಿಳುವಳಿಕೆ ಇಲ್ಲ" ಎಂದರು ಆ ಮಕ್ಕಳ ತಾಯಿ. ದೇವರೇ...... ಪತಿ ಪತ್ನಿ ಡಾಕ್ಟರ ಹತ್ತಿರ ಹೋಗಿ ಪರೀಕ್ಷೆ ಮಾಡಿಸಿ, ಅದೇನೋ ಅಮೆರಿಕದವರೆಗೂ ಹೋಯಿತಂತೆ, ಅಂತೂ ಈಗ ಅವರಿಗೆ ಮತ್ತೆ ಎರಡು ಮಕ್ಕಳಾಗಿವೆ. ಇಬ್ಬರೂ ಆರೋಗ್ಯವಾಗಿದ್ದಾರೆ. ಬಂಟ್ವಾಳ ತಾಲೂಕಿನ ಇನ್ನೂ ಹಲವು ಭಾಗಗಳಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಆಗಿದೆ ಎಂದು ಹಲವರು ಹೇಳುವುದು ಕೇಳಿದ್ದೇನೆ. ಮುಖ್ಯವಾಗಿ ವೀರಕಂಬ ಮತ್ತು ಅಜ್ಜಿಬೆಟ್ಟು ಗ್ರಾಮಗಳಲ್ಲಿ ಸಿಂಪಡಣೆ ಆಗಿದೆ ಎಂದು ಹೇಳುತ್ತಾರೆ. ಸಿಂಪಡಣೆ ಆಗಿರುವುದು ಹೌದಾದರೆ, ಅಲ್ಲಿಯೂ ಇಂತಹ ಪ್ರಕರಣಗಳಿರುವ ಸಾಧ್ಯತೆ ಇದೆ. ಇರಲಿ. ಇದನ್ನಿನ್ನು ಮುಂದುವರಿಸುವುದಿಲ್ಲ. ಅನಾರೋಗ್ಯದ ಎಲ್ಲ ಪ್ರಕರಣಗಳನ್ನೂ ಎಂಡೋಸಲ್ಫಾನ್ ತಲೆಗೇ ಕಟ್ಟಿ, "ಸತ್ತ ಎಲ್ಲ ಹುಲಿಗಳನ್ನೂ ಉಲ್ಲಾಸ ಕಾರಂತರ ಖಾತೆಗೆ ಹಾಕುವುದು" ನನ್ನ ಉದ್ದೇಶವಲ್ಲ. ಮುಂದೊಂದು ದಿನ ಈ ಎಲ್ಲರನ್ನೂ ವೈದ್ಯರು ಪರೀಕ್ಷೆ ಮಾಡಬೇಕು. ಅವರ ಕಾಹಿಲೆಗೆ ಕಾರಣವನ್ನೂ ವೈದ್ಯರೇ ಹೇಳಬೇಕು. ಹಾಗೆ ವೈದ್ಯರು ಹೇಳಿದರೆ ಮಾತ್ರ ನ್ಯಾಯಾಲಯ ಒಪ್ಪುತ್ತದೆ ಹೊರತು ಅನ್ಯಥಾ ಅಲ್ಲ. ನನಗೆ ಕಾಣುವಂತೆ ಎಂಡೋಸಲ್ಫಾನಿನ ಬಹು ದೊಡ್ಡ ಅಪಾಯವೆಂದರೆ ಅದು ಮನುಷ್ಯರ ವಂಶವಾಹಿಯನ್ನು ವಿರೂಪಗೊಳಿಸುವುದು. ಮಕ್ಕಳು ಅಂಗವಿಕಲರಾಗುವುದು, ಬುದ್ಧಿಮಾಂದ್ಯತೆ ಮುಂತಾದ್ದಕ್ಕೆ ವಂಶವಾಹಿ ವಿರೂಪಗೊಳ್ಳುವುದೇ ಕಾರಣ. ನಾಗಾಸಾಕಿ, ಹಿರೋಶಿಮಾಗಳಲ್ಲಿ ಅಣುಬಾಂಬು ಬಿದ್ದಾಗ, ಚೆರ್ನೋಬಿಲ್ ಅಣುದುರಂತ ಸಂಭವಿಸಿದಾಗ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರ ವಂಶವಾಹಿಗಳು ವಿರೂಪಗೊಂಡಿದ್ದರೆ, ಮಕ್ಕಳಾಗದಂತೆ ಎಚ್ಚರಿಕೆ ವಹಿಸಲು ಅವರಿಗೆ ಸೂಚಿಸಲಾಯಿತಂತೆ. ಅದೇ ರೀತಿಯ ಎಚ್ಚರಿಕೆಯನ್ನು ಕರ್ನಾಟಕ ಸರ್ಕಾರವೂ ತೆಗೆದುಕೊಳ್ಳಬೇಕು; ಜನರ ವಂಶವಾಹಿಯನ್ನು ಉಚಿತವಾಗಿ ಪರೀಕ್ಷೆಗೊಳಪಡಿಸಿ, ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳು ಹುಟ್ಟದಂತೆ ಎಚ್ಚರಿಕೆ ವಹಿಸಬೇಕು ಎನ್ನುವುದು ಡಾ. ರವೀಂದ್ರನಾಥ ಶಾನುಭಾಗರ ಅಭಿಪ್ರಾಯ. ಕರ್ನಾಟಕ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ, ಅಖಿಲ ಭಾರತದ ಮಟ್ಟದಲ್ಲೂ ಎಂಡೋಸಲ್ಫಾನನ್ನು ನಿಷೇಧಿಸಬೇಕೆಂಬ ದೊಡ್ಡ ಆಂದೋಲನವೇ ನಡೆಯುತ್ತಿದೆ. ಈ ಆಂದೋಲನವನ್ನು ಬೆಂಬಲಿಸಬೇಕೆನ್ನುವವರು ಕೇಂದ್ರ ಪರಿಸರ ಮಂತ್ರಿ ಜಯರಾಮ ರಮೇಶ್ ಅವರಿಗೆ Sri Jayaram Ramesh, Minister of Environment and Forest, Paryavaran Bhavan, CGO Complex, Lodhi Road, New Delhi - 110003 ಈ ವಿಳಾಸಕ್ಕೆ ತಮ್ಮ ಅಭಿಪ್ರಾಯ ತಿಳಿಸಿ ಪತ್ರ ಬರೆಯಬಹುದು ಅಥವಾ http://www.petitiononline.com/endoban/petition.html ಎಂಬ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು.