ಶನಿವಾರ, ಮಾರ್ಚ್ 21, 2015

ಅನುಮತಿ ಇಲ್ಲದ ಕಟ್ಟಡ: ಪುರಸಭೆಯ ಕ್ರಮ ಏನು?

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಮಂಗಳೂರು ಎಸ್. ಇ. ಜಡ್. ಕಂಪೆನಿಯದೆಂದು ಹೇಳಲಾದ ಬೃಹತ್ ಕಟ್ಟಡವನ್ನು ಅನುಮತಿ ಪುರಸಭೆಯ  ಇಲ್ಲದೆಯೇ ನಿರ್ಮಿಸಲಾಗಿದೆಯೆ? ಹೌದೆಂದು ಕೆಲವು ಪುರಸಭಾ ಸದಸ್ಯರು ಅವರಾಗಿಯೇ ನನ್ನ ಹತ್ತಿರ ಹೇಳಿದ್ದಿದೆ.
"ನೀವು ಪುರಸಭಾ ಸದಸ್ಯರು. ನೀವೇ ಏನಾದರೂ ಮಾಡಬೇಕಲ್ಲ?" ಎನ್ನುವ ನನ್ನ ಪ್ರಶ್ನೆಗೆ ಸಮರ್ಪಕವಾದ ಉತ್ತರ ಈವರೆಗೂ ಸಿಕ್ಕಿಲ್ಲ. ಸುಮಾರು ಎರಡು ವರ್ಷದಿಂದ ಈ ಬಗ್ಗೆ ಸುಮ್ಮನಿದ್ದ ನನಗೆ ಇತ್ತೀಚೆಗೆ "ನೋಡೋಣ, ಇದೇನು ವಿಷಯ" ಎನಿಸಿದ್ದರಿಂದ ಪುರಸಭೆಗೆ ಮಾಹಿತಿ ಹಕ್ಕಿನಡಿ ಒಂದು ಅರ್ಜಿ ಹಾಕಿದೆ. ಆ ಅರ್ಜಿಯಲ್ಲಿ ಕಟ್ಟಡ ಇರುವ ಸ್ಥಳವನ್ನು ಒಂದು ಅಂದಾಜು ನಕ್ಷೆಯ ಮೂಲಕ ಗುರುತಿಸಿ ತೋರಿಸಿದ್ದೆ. ನಾನು ಕೇಳಿದ ಮಾಹಿತಿ ಹೀಗಿತ್ತು:
1. ನಕ್ಷೆಯಲ್ಲಿ ಸೂಚಿಸಿರುವ, ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಪಟ್ಟದ್ದೆಂದು ಹೇಳಲಾದ, ಕಟ್ಟಡದ ನಿರ್ಮಾಣಕ್ಕೆ ಪುರಸಭೆಯ ವತಿಯಿಂದ ನೀಡಿರುವ ಅನುಮತಿಯ ದೃಢೀಕೃತ ಪ್ರತಿ.
2. ಈ ಕಟ್ಟಡಕ್ಕೆ ಕದ ಸಂಖ್ಯೆ ನೀಡಿದ್ದಲ್ಲಿ ಆ ದಾಖಲೆಯ ದೃಢೀಕೃತ ಪ್ರತಿ
ಇದಕ್ಕೆ ಪುರಸಭೆ ಕೊಟ್ಟ ಮಾಹಿತಿ ಹೀಗೆ: 
1. ಕಳೆದ 2 ವರ್ಷಗಳಲ್ಲಿ ಕಡತ ಪರಿಶೀಲಿಸಲಾಗಿ ವಿಶೇಷ ಆರ್ಥಿಕ ವಲಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕಂಡುಬರುವುದಿಲ್ಲ.
2. ಕಳೆದ 2 ವರ್ಷಗಳಲ್ಲಿ ಕಡತ ಪರಿಶೀಲಿಸಲಾಗಿ ಕದ ಸಂಖ್ಯೆ ನೀಡಿರುವುದು ಕಂಡುಬರುವುದಿಲ್ಲ.
ನನಗೆ ಇನ್ನೂ ನಿಖರವಾದ ಮಾಹಿತಿ ಬೇಕಾಗಿತ್ತು. ಹಾಗಾಗಿ ಗೂಗಲ್  ಅರ್ತಿನಿಂದ ಕಟ್ಟಡದ ನಕ್ಷೆಯ ಪ್ರತಿ ಮಾಡಿ ಪುರಸಭೆಗೆ ಕಳಿಸಿ ಹೀಗೆ ಮಾಹಿತಿ ಕೇಳಿದೆ:

"ಈ ನಕ್ಷೆಯಲ್ಲಿ ನಾನು ಗುರುತು ಮಾಡಿರುವ ಕಟ್ಟಡವು ಯಾರಿಗೆ ಸೇರಿದ್ದು ಮತ್ತು ಈ ಕಟ್ಟಡಕ್ಕೆ ಪುರಸಭೆಯಿಂದ ಪರವಾನಿಗೆ ನೀಡಲಾಗಿದೆಯೆ ಎಂಬ ಮಾಹಿತಿ"
ಪುರಸಭೆ ನೀಡಿದ ಮಾಹಿತಿ ಹೀಗಿತ್ತು:
"ಲಗ್ತೀಕರಿಸಿದ ಗೂಗಲ್ ನಕ್ಷೆಯಲ್ಲಿ ಕಾಣಿಸಲಾದ ಕಟ್ಟಡದ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಎಸ್. ಇ. ಝಡ್. ಕಂಪೆನಿ ಹೆಸರಿನಲ್ಲಿ ಕಟ್ಟಡ ನಿರ್ಮಿಸಲು ಪುರಸಭೆಯಿಂದ ಅನುಮತಿ ನೀಡಿರುವುದು ಕಂಡುಬರುವುದಿಲ್ಲ"

ಪುರಸಭೆಯಲ್ಲಿ "ಸಾರ್ವಜನಿಕ ಮಾಹಿತಿ ಅಧಿಕಾರಿ" ಎಂಬ ಪ್ರತ್ಯೇಕ ಅಧಿಕಾರಿ ಇದ್ದಾರೆ. ಮಾಹಿತಿ ಕೋರಿಕೆ ಅರ್ಜಿಗಳು ಇವರ ಹತ್ತಿರ ಹೋಗುತ್ತವೆ ಮತ್ತು ಮಾಹಿತಿಯನ್ನು ಇವರೇ ಕೊಡುತ್ತಾರೆ. ಹಾಗಾಗಿ ನನ್ನ ಪತ್ರದ ವಿಷಯ ಮುಖ್ಯಾಧಿಕಾರಿಯವರ ಗಮನಕ್ಕೆ ಬಂದಿದೆ ಎಂದು ನಾನು ತಿಳಿಯುವಂತಿಲ್ಲ. ಆದರೆ ಬಂದಿಲ್ಲ ಎಂದೂ ಭಾವಿಸುವಂತಿಲ್ಲ. ಏಕೆಂದರೆ ಹಿಂದೊಮ್ಮೆ
 ನಾನು ಪುರಸಭೆಯ ಆಫೀಸಿನ ಒಳ ಹೊಕ್ಕ ಕೆಲವೇ ನಿಮಿಷದಲ್ಲಿ "ಸಂಬಂಧಪಟ್ಟ" ಕೆಲವರು ನನ್ನನ್ನು ಹುಡುಕಿಕೊಂಡು ಬಂದ ಅನುಭವ ನನಗಿದೆ. ಒಂದು ಅರ್ಜಿಯ ವಿಷಯ ಏನು ಅನ್ನುವುದನ್ನು ಅವಲಂಬಿಸಿ, ಅದು ಸಲ್ಲಿಕೆಯಾದ ಕೆಲವೇ ನಿಮಿಷದಲ್ಲಿ ಅದರ ವಿಷಯ ಯಾರಿಗೆ ಮುಟ್ಟಬೇಕೋ ಅವರಿಗೆ ಮುಟ್ಟುವಂಥ ಜಾಲವನ್ನೇ ನಿರ್ಮಿಸಿಕೊಂಡವರಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ.
ಇರಲಿ. ಪುರಸಭೆಯ ವ್ಯಾಪ್ತಿಯಲ್ಲೇ ಇರುವ ಬೃಹತ್ ಕಟ್ಟಡವೊಂದನ್ನು ಪುರಸಭೆಯ ಅನುಮತಿಯೇ ಇಲ್ಲದೆ ನಿರ್ಮಿಸಲಾಗಿದೆಯೇ, ಹೌದಾದರೆ ಪುರಸಭೆ ಈ ವಿಷಯದಲ್ಲಿ ಕೈಗೊಳ್ಳುವ ಕ್ರಮ ಏನು ಎಂಬ ಕುತೂಹಲ ನನಗಿತ್ತು/ಇದೆ. ಹಾಗಾಗಿ ಪುರಸಭಾ ಮುಖ್ಯಾಧಿಕಾರಿಯವರಿಗೆ, ಪುರಸಭೆಯಿಂದ ಬಂದಿರುವ ಮಾಹಿತಿಗಳನ್ನು ಲಗತ್ತಿಸಿ ಹೀಗೆ ಪತ್ರ ಬರೆದು ಕೇಳಿದ್ದೇನೆ: "ಈ ವಿಷಯದಲ್ಲಿ ಏನಾದರೂ ಕ್ರಮ ಕೈಗೊಳ್ಳಲಾಗುವುದೆ?". ಏನು ಉತ್ತರ ಬರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದೇನೆ. ನಿಮಗೂ ಕುತೂಹಲವಿದ್ದರೆ ಸ್ವಲ್ಪ ದಿನ ಕಾಯಿರಿ. ಉತ್ತರ ಬಂದರೆ ತಿಳಿಸುತ್ತೇನೆ.

ಭಾನುವಾರ, ಮಾರ್ಚ್ 15, 2015

ಬಿ.ಸಿ.ರೋಡಿಗೊಂದು ಸಭಾಭವನ:
ಇದ್ದಿದ್ದೂ ಹೋಯ್ತು ಮದ್ದಿನ ಗುಣದಿಂದ!

ಅಡುಗೆ ಅನಿಲದ ಸಭೆಯ ಕುರಿತಾಗಿ ಬರೆಯುವಾಗ ನಮ್ಮೂರಿಗೊಂದು ಸಭಾಭವನ ಇಲ್ಲದಿರುವುದನ್ನೂ ಪ್ರಸ್ತಾವಿಸಿದ್ದೆ. ಈಗ ಇದ್ದಿದ್ದನ್ನೂ ಕಳಕೊಂಡು ಪೆದ್ದಂಬಟ್ಟಗಳಾದ ನಮ್ಮ ಕತೆಯನ್ನು ವ್ಯಥೆಯಿಂದಲೇ ಹೇಳಬೇಕಾಗಿದೆ.

ಹಿಂದಿನ ಒಂದು ಪ್ರಸಂಗ

ಚತುಷ್ಪಥ ರಸ್ತೆ ಆಗುವ ಮೊದಲು ಬಿ.ಸಿ.ರೋಡು ಕೈಕಂಬದಲ್ಲಿ ಮಂಗಳೂರಿಗೆ ಹೋಗುವವರಿಗೆ ಅನುಕೂಲವಾಗುವಂತೆ ಒಂದು ಬಸ್ ತಂಗುದಾಣವಿತ್ತು. ರಸ್ತೆಯ ಕೆಲಸ ಪ್ರಾರಂಭವಾಗುವ ಎರಡು ವರ್ಷಗಳ ಮೊದಲೇ ಈ ಬಸ್ ತಂಗುದಾಣವನ್ನು ಅವಸರವಸರವಾಗಿ  ಕೆಡವಿ ಹಾಕಿದರು. ರಸ್ತೆಯ ಕೆಲಸ ಮುಗಿದು ನಾಲ್ಕೈದು ವರ್ಷಗಳೇ ಆದವು. ಕೆಡವಿ ಹಾಕಿದ ಬಸ್ ತಂಗುದಾಣವನ್ನು  ಮತ್ತೆ ನಿರ್ಮಿಸಲು ಯಾರಿಗೂ ಅವಸರವಿಲ್ಲ.
ನಾನು ಬಂಟ್ವಾಳ ಪುರಸಭೆಗೆ ಒಂದೆರಡು ಪತ್ರ ಬರೆದೆ. "ಅಲ್ಲಿ ತಂಗುದಾಣ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿಯವರು ಜಾಗ ತೋರಿಸಬೇಕು, ಅನುಮತಿ ಕೊಡಬೇಕು" ಇತ್ಯಾದಿ ಸಬೂಬು ಹೇಳಿದರೇ ಶಿವಾಯಿ ಕೆಲಸ ಮಾಡುವ ಆಸಕ್ತಿ ತೋರಿಸಲಿಲ್ಲ. ಈಗಲೂ ನಾನು ನಮ್ಮ ಪುರಸಭಾ ಪ್ರತಿನಿಧಿ ಸದಾಶಿವ ಬಂಗೇರರಿಗೆ ಹೇಳುತ್ತಲೇ ಇದ್ದೇನೆ. ಅವರು "ಖಂಡಿತಾ ಮಾಡುತ್ತೇವೆ" ಅನ್ನುತ್ತಿದ್ದಾರೆ. ಪ್ರಯಾಣಿಕರು ಮಾತ್ರ ಮಳೆ, ಬಿಸಿಲೆನ್ನದೇ ರಸ್ತೆಯುದ್ದದ ಖಾಲಿ ಜಾಗದಲ್ಲಿ ನಿಂತು ಬಸ್ ಕಾಯುತ್ತಾರೆ.... ಬಸ್ಸಿನ ಡ್ರೈವರುಗಳು ನಿಲ್ಲಿಸಲು ನಿರ್ದಿಷ್ಟ ಜಾಗ ಇಲ್ಲದೆ, ಜಾಗ ಇದ್ದಲ್ಲಿ ಬಸ್ ನಿಲ್ಲಿಸುತ್ತಿದ್ದಾರೆ. ಜನ ಬಸ್ ಇದ್ದಲ್ಲಿಗೆ ಓಡಿ ಹೋಗಿ ಬಸ್ ಹತ್ತುತ್ತಾರೆ. ಮಕ್ಕಳನ್ನೂ ಜೊತೆಗೆ ಕರೆದೊಯ್ಯಬೇಕಾದ ತಾಯಂದಿರು, ಓಡಲಾಗದ ಹಳೆಯ ಮುದುಕರು-ತದುಕರು,  ಕುಂಟರು, ಕುರುಡರು ಇಂಥವರ ಕತೆ ಹೇಳಿ ಪ್ರಯೋಜನವಿಲ್ಲ.

ಪ್ರಸಂಗ  2: ಇದ್ದೊಂದು ಸಭಾ ಮಂಟಪವನ್ನೂ ತಿಂದು ಹಾಕಿದ  "ಮಿನಿ ವಿಧಾನಸೌಧ"ದ ಗೌಜಿ: 

ಬಿ.ಸಿ.ರೋಡಿನಲ್ಲಿ ಒಂದು ಮಿನಿ ವಿಧಾನಸೌಧ ಆಗಲಿದೆಯಂತೆ. ಅದು ಆಗುವುದು ಈಗ ತಾಲೂಕು ಆಫೀಸು ಇರುವ ಜಾಗದಲ್ಲೇ. ಹೊಸ ಕಟ್ಟಡ ಆಗಬೇಕೆಂದರೆ ಇರುವ ಕಟ್ಟಡವನ್ನು ಕೆಡವಬೇಕು. ಕೆಡವಿದರೆ ಅಲ್ಲಿ ಹಾಲಿ ಇರುವ ಕಚೇರಿಗಳನ್ನು ಸ್ಥಳಾಂತರಿಸಬೇಕು. ಜಿಲ್ಲಾಡಳಿತ ತಾತ್ಕಾಲಿಕ ವ್ಯವಸ್ಥೆಗಾಗಿ ಅಲ್ಲಿ ಇಲ್ಲಿ ಕಟ್ಟಡಗಳನ್ನು ಹುಡುಕಿರಬೇಕು. ಯೋಗ್ಯವಾದ್ದು ಯಾವುದೂ ಸಿಕ್ಕದೆ, ತತ್ಕಾಲಕ್ಕೆ ಹನ್ನೊಂದು ಲಕ್ಷ ಖರ್ಚಿನಲ್ಲಿ ಒಂದು ಸಾಮಾನ್ಯ ಹೊಸ ಕಟ್ಟಡ ಕಟ್ಟಿ, ಅಲ್ಲಿ ತಾಲೂಕು ಆಫೀಸ್ ನಡೆಸುವುದೆಂದು ತೀರ್ಮಾನಿಸಲಾಗಿದೆ. ಸ್ಥಳಾಂತರದ ತಯಾರಿಗಳು ಭರದಿಂದ ನಡೆಯುತ್ತಿವೆ. ಈ ಗಡಿಬಿಡಿಗೆ ಬಲಿಯಾದದ್ದು ಈಗ ಹೇಳಲಿರುವ ಕಥೆಯ ನಾಯಕನಾದ ಸಭಾ ಮಂಟಪ.
************
ತಾಲೂಕು ಆಫೀಸಿನ ಎದುರಿಗೇ, ಅದರ ಆವರಣ ಗೋಡೆಯ ಹೊರಗೆ, ಅದರದ್ದೇ ಒಂದು ಭಾಗವೇನೋ ಎನ್ನುವಂತೆ ಇತ್ತು/ಇದೆ ಈ ಸಭಾಮಂಟಪ. ಈ ಹಿಂದೆ ಬಂಟ್ವಾಳದ ತಹಶೀಲ್ದಾರರಾಗಿದ್ದ ರಾಜು ಎಂಬುವರ ಕಾಲದಲ್ಲಿ ಅವರದೇ ಆಸಕ್ತಿಯಿಂದ ನಿರ್ಮಾಣಗೊಂಡದ್ದಂತೆ ಇದು. ಆಗಿನ ಕಾಲಕ್ಕೆ ಯಾವ ರಾಜಕೀಯ ಸೋಂಕೂ ಇಲ್ಲದೆ ಪೂರ್ತಿಯಾಗಿ ಅವರದೇ ಜವಾಬ್ದಾರಿಯಲ್ಲಿ ಇದು ನಿರ್ಮಾಣಗೊಂಡಿತಂತೆ. (ಎಷ್ಟು ಹಣ ಸಂಗ್ರಹವಾಗಿತ್ತು, ಎಷ್ಟು ಖರ್ಚಾಗಿತ್ತು ಎಂಬೆಲ್ಲ ಲೆಕ್ಕ ಕೇಳಬೇಡಿ! ಅದೆಲ್ಲ ಹಳೆ ಕಥೆ. ಈಗ ಮಾತಾಡಿ ಸುಖ ಇಲ್ಲ).
ಬಿ.ಸಿ.ರೋಡಿನ ಅತ್ಯಂತ ಮುಖ್ಯ ಸಾರ್ವಜನಿಕ ಸಭೆಗಳೆಲ್ಲ ನಡೆಯುವುದು ಬಾಗಿಲಿಲ್ಲದ  ಈ ಮಂಟಪದಲ್ಲೇ. ಇದರ ಎದುರಿಗೇ ಶಾಮಿಯಾನ ಹಾಕಿ, ಕುರ್ಚಿ ಗಿರ್ಚಿ ಭರ್ಜರಿಯಾಗಿ ಹಾಕಿ, ಸುತ್ತ ಆಫೀಸುಗಳು, ಕೋರ್ಟುಗಳು, ಪೋಲಿಸ್ ಸ್ಟೇಷನ್ ಇತ್ಯಾದಿ ಯಾವುದನ್ನೂ ಲೆಕ್ಕಿಸದೆ  ಮೈಕಿನ ಮೂಲಕ ಆರ್ಭಟಿಸುವುದು ಇಲ್ಲಿ ಸಾಮಾನ್ಯ ದೃಶ್ಯ. ರಸ್ತೆ, ಸಭೆಯ ಪ್ರೇಕ್ಷಕರ ಸ್ಥಳ, ವಾಹನಗಳು ನಿಲ್ಲುವ ಸ್ಥಳ  ಇವುಗಳನ್ನು ಬೇರ್ಪಡಿಸಲು ಯಾವುದೇ ಗುರುತು ಇಲ್ಲದ್ದರಿಂದ ಸಭೆ ನಡೆಸುವವರಿಗೆ ಒಂದು ದೊಡ್ಡ ಅನುಕೂಲವುಂಟು. ಸಭೆಗೆ ಯಾರೂ ಜನ ಬರದಿದ್ದರೂ ಯಾವ್ಯಾವುದೋ ಕಾರಣಕ್ಕೆ ಬಂದವರು ಇದ್ದೇ ಇರುತ್ತಾರೆ!  ಸಾಮಾನ್ಯ ದಿನಗಳಲ್ಲಿ ಕೆಲವು ಅರ್ಜಿ ಬರೆಯುವವರೂ ಬರೆಸುವವರೂ ಈ ಮಂಟಪವನ್ನು  ಬಳಸಿದ್ದು ಕಂಡಿದ್ದೇನೆ. ಇನ್ನು ರಾತ್ರಿ ಹೊತ್ತು ಆ ಕಡೆ ಹೋಗುವ ಸಂದರ್ಭ ನನಗೆ ಬಂದಿಲ್ಲ!
ಅಧಿಕೃತ ಸರಕಾರಿ ಕಾರ್ಯಕ್ರಮಗಳು ನಡೆಯುವಾಗ, ಅದರಲ್ಲಿ ಭಾಗವಹಿಸಲೇ ಬೇಕಾದ ಶಾಲಾಮಕ್ಕಳು ಈ ಮಂಟಪದಲ್ಲಿ ಪಡುವ ಫಜೀತಿಯನ್ನು ಎಷ್ಟೋ ಸಲ ಗೆಳೆಯ, ಅಧ್ಯಾಪಕ ಮಹಾಬಲೇಶ್ವರ ಹೆಬ್ಬಾರರು ಖೇದದಿಂದ ವರ್ಣಿಸುತ್ತಾರೆ. ನೃತ್ಯಕ್ಕೋ  ನಾಟಕಕ್ಕೋ ಮೇಕಪ್ ಮಾಡಿಕೊಂಡು, ಕಾರ್ಯಕ್ರಮದ ಮೊದಲು ಉಂಟಾಗುವ  ಆತಂಕಕ್ಕೆ ಉಚ್ಚೆ ಹೊಯ್ಯಬೇಕಾಗಿ ಬರುವ ಮಕ್ಕಳ ಪಾಡು ಕಂಡವರಿಗೇ ಗೊತ್ತು. ಮಂಟಪ ಕಟ್ಟಿಸಿದ ಪುಣ್ಯಾತ್ಮರಿಗೆ ಅದಕ್ಕೆ ಲಗತ್ತಾಗಿ ಒಂದು ಟಾಯ್ಲೆಟ್ ಕಟ್ಟಿಸಬೇಕೆನ್ನುವುದು ಹೊಳೆಯಲಿಲ್ಲವೋ, ಅದಕ್ಕೆ ಬೇಕಾದ ಅನುಕೂಲ ಇರಲಿಲ್ಲವೋ ಗೊತ್ತಿಲ್ಲ, ಅಂತೂ ಅಲ್ಲಿ ಟಾಯ್ಲೆಟ್ ಇಲ್ಲ.
"ಈ ಮಂಟಪದ ಸ್ವರೂಪವಂತೂ, ಇದರ ಬುಡಕ್ಕೆ ಯಾರನ್ನೋ ಹೂತಿದ್ದಾರೇನೋ ಎಂಬ ಅನುಮಾನ ಹುಟ್ಟಿಸುತ್ತದೆ" ಎನ್ನುವುದೂ ಹೆಬ್ಬಾರರ ತಾರೀಫೇ.
************
ಸಾರ್ವಜನಿಕ ಸಭೆಗಳನ್ನು ನಡೆಸಲು ಇಂಥ ಅಮೋಘ ಏರ್ಪಾಟು ಮಾಡಿಕೊಂಡಿರುವ ನಮ್ಮೂರಿಗೆ ಈಗ ಅದಕ್ಕೂ ಕುತ್ತು ಬಂದಿದೆ ಎಂದರೆ ಏನೆನ್ನೋಣ?
ಮೊನ್ನೆಯೊಂದು ದಿನ ಯಾತಕ್ಕೋ ತಾಲೂಕು ಆಫೀಸಿನ ಕಡೆ ಹೋಗಿದ್ದೆ. ನೋಡಿದರೆ ಈ ಮಂಟಪದ ಎದುರು ಭಾಗಕ್ಕೆ ಗೋಡೆ ಕಟ್ಟುತ್ತಿದ್ದಾರೆ! ಓಹೋ! ಇದು ಮಿನಿ ವಿಧಾನಸೌಧದ್ದೇ ಕಿತಾಪತಿ ಅಂತ ಅರ್ಥವಾಯಿತು. ಇರಲಿ ಅಂತ ಅಲ್ಲಿ ಇಲ್ಲಿ ವಿಚಾರಿಸಿದೆ. ನನ್ನ ಊಹೆ ನಿಜವಾಗಿತ್ತು. ಈಗ ತಾಲೂಕು ಆಫೀಸಿಗೆ ಲಗತ್ತಾಗಿರುವ "ಪಡಸಾಲೆ" ಇಲ್ಲಿಗೆ ವರ್ಗವಾಗುತ್ತದಂತೆ.
"ಆದರೆ ಈ ಮಂಟಪ ಪುರಸಭೆಯ ಒಡೆತನದ್ದಲ್ಲವೆ?" ಎಂದೆ.
"ಹೌದು. ಅವರ ಹತ್ತಿರ ಮಾತಾಡಿ ಆಗಿದೆ" ಎಂಬರ್ಥದ ಉತ್ತರ ಬಂತು.
***********
ನಿನ್ನೆಯಷ್ಟೇ ಪತ್ರಿಕೆಗಳಲ್ಲಿ ಪುತ್ತೂರಿನಲ್ಲಿ ಮಿನಿವಿಧಾನಸೌಧ ಉದ್ಘಾಟನೆಯಾದ ಸುದ್ದಿ ಬಂದಿತ್ತು. ಡಾ. ನಿತ್ಯಾನಂದ ಪೈಗಳಿಗೆ ಫೋನ್ ಮಾಡಿದೆ:
 "ಸರ್, ನಿಮ್ಮೂರಿನ ವಿಧಾನಸೌಧ ಕಟ್ಟಲಿಕ್ಕೆ ಶುರು ಮಾಡಿದ್ದು ಯಾವಾಗ?"
"ಓ ಅದಾ? ಶಕುಂತಳಾ ಶೆಟ್ಟಿ ಬಿಜೆಪಿಯಿಂದ ಗೆದ್ದಾಗ ಅದಕ್ಕೆ ಕಲ್ಲು ಹಾಕಿದ್ದರು. ಅವರು ಕಾಂಗ್ರೆಸ್ಸಿಂದ ಗೆದ್ದು ಒಂದು ಟರ್ಮ್ ಮುಗಿಸಿ ಎರಡನೇ ಟರ್ಮು ಎರಡು ವರ್ಷ ಆಯಿತು. ಅಂದರೆ ಎಷ್ಟು? ಕಡಿಮೆಯಲ್ಲಿ ಏಳು ವರ್ಷ ಆಂತೂ ಆಯಿತು. ಯಾಕೆ ಹೇಳಿ?"
"ಯಾಕಿಲ್ಲ, ನಮ್ಮೂರಲ್ಲೂ ಒಂದು ವಿಧಾನಸೌಧ ಕಟ್ಟುತ್ತಾರಂತೆ. ಎಷ್ಟು ವರ್ಷ ಬೇಕಾದೀತು ಅಂತ ಒಂದು ಅಂದಾಜಿಗೆ ಅಷ್ಟೆ"
*********
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಪ್ರಾರಂಭವಾದದ್ದು ನಮ್ಮ ಉಸ್ತುವಾರಿ ಮಂತ್ರಿಗಳ ಉಮೇದಿನಿಂದ ಅಂತ ಕೇಳಿದ್ದೇನೆ. ಅದು ಶುರುವಾದ್ದು 2002ರಲ್ಲಿ. 2012ರಲ್ಲಿ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ "ಶೇ. 85  ಕಾಮಗಾರಿ ಪೂರ್ಣಗೊಂಡಿದೆ" ಎಂದು ತಿಳಿಸಿದ್ದ ನೆನಪು. ಮೊನ್ನೆ ಮೊನ್ನೆ ಇದೇ ಯೋಜನೆಗೆ ನಲವತ್ತೋ ಐವತ್ತೋ ಕೋಟಿ ಬಿಡುಗಡೆ ಆಗಿದೆ. ಯಾವಾಗ ಮುಗಿಯತ್ತೋ ಯಾರಿಗೆ ಗೊತ್ತು?
ಮುಂದಿನ ಸ್ವಾತಂತ್ರ್ಯೋತ್ಸವದ ಆಚರಣೆಗೆ ಹೊಸ ಸ್ಥಳದ ಏರ್ಪಾಟು ಆಗಬೇಕು. ಈಗಲೇ ಯಾಕೆ ತಲೆಬಿಸಿ? ಇನ್ನೂ ಐದು ತಿಂಗಳಿದೆ, ಅಲ್ಲವೆ?

ಶನಿವಾರ, ಮಾರ್ಚ್ 14, 2015

ನಮ್ಮೂರಿನಲ್ಲೊಂದು ಅಡುಗೆ ಅನಿಲ ಬಳಕೆದಾರರ ಸಭೆ

ನಿನ್ನೆ ೧೨/೩/೧೫ರಂದು ನಮ್ಮ ಬಂಟ್ವಾಳದಲ್ಲಿ ಅಡುಗೆ ಅನಿಲದ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಸಭೆ ನಡೆಯಿತು. ಒಂದು ತಿಂಗಳ ಹಿಂದೆ ಇಂಥದೇ ಒಂದು ಸಭೆ ನಡೆದಿತ್ತು. ಇನ್ನು ಮೇಲೆ ಮೂರು ತಿಂಗಳಿಗೊಮ್ಮೆ ನಡೆಯುತ್ತದೆಯಂತೆ. ಇದು ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ನಡೆಯುತ್ತಿರುವ ಕಾರ್ಯಕ್ರಮ ಎಂದು ಸುದ್ದಿ. ಸಂಘಟಿಸಿದ್ದು ತಾಲೂಕು ಕಛೇರಿ. ಭಾಗವಹಿಸಿದ್ದು ಆಹಾರ ಇಲಾಖೆಯ ಉಪನಿರ್ದೇಶಕ ಶರಣ ಬಸಪ್ಪ, ಭಾರತ್ ಪೆಟ್ರೋಲಿಯಂನ ಪ್ರಾದೇಶಿಕ ವ್ಯವಸ್ಥಾಪಕ ದಿನಕರ ತೋನ್ಸೆ, ಭದ್ರಾ ಗ್ಯಾಸ್ ಏಜೆನ್ಸಿ ಪರವಾಗಿ ಮಂಜುನಾಥ್ ಹಾಗೂ ಬಳಕೆದಾರರು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ ಮತ್ತು ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಇವರೂ ಇದ್ದರು.
ಸಾರ್ವಜನಿಕ ಸಭೆ ಮತ್ತು ನನ್ನ  ಆಸಕ್ತಿಯ ಕ್ಷೇತ್ರವಾದ್ದರಿಂದ ನಾನು  ಹೋಗಿದ್ದೆ.

ಉಳಿದ ಸಂದೇಹ

ಸಭೆ ಪ್ರಾರಂಭಕ್ಕೆ ಇನ್ನೂ ಐದು ಹತ್ತು ನಿಮಿಷ ಇರುವಾಗಲೇ ಕೆಲವು ಮಹಿಳೆಯರು ಬಂದು ಎದುರುಗಡೆ ಕುರ್ಚಿಯಲ್ಲಿ ಕೂತಿದ್ದರು. ಉಳಿದಂತೆ ಕೆಲವರು ಅತ್ತಿತ್ತ ತಿರುಗಾಡುತ್ತಿದ್ದರು. ಉ.ನಿ. ಶರಣ ಬಸಪ್ಪನವರು ಅಲ್ಲಿ ಕೂತಿದ್ದ ಮಹಿಳೆಯರ ಕಡೆ ಹೋಗಿ ಲೋಕಾಭಿರಾಮವೆನ್ನುವಂತೆ ಮಾತಾಡಿ ಅವರ ಸಮಸ್ಯೆಗಳನ್ನು ಕೇಳಿದರು. ಆ ಸಮಸ್ಯೆಗಳಿಗೆ ಏನೋ ಪರಿಹಾರ ಹೇಳಿದರು. ಬಹುಶಃ ಅವರೆಲ್ಲ ಬಿಪಿಎಲ್ ಕಾರ್ಡಿನವರು. ಅವರು ಪೈಕಿ ಒಬ್ಬ ಮಹಿಳೆ "ನನ್ನ ಹತ್ತಿರ  ಕಾರ್ಡ್ ಇಲ್ಲ, ನಾನು ಬಾಡಿಗೆ ಮನೆಯಲ್ಲಿರುವುದು. ನನಗೆ ಗ್ಯಾಸ್ ಬೇಕು" ಎಂದರು. "ಹಾಗಾದರೆ ನಿಮಗೆ ಗ್ಯಾಸ್ ಸಿಗುವುದಿಲ್ಲ" ಎಂದರು ಉ.ನಿ. "ಗ್ಯಾಸ್ ಸಿಗಬೇಕಾದರೆ  ಕಾರ್ಡ್ ಬೇಕೇ ಬೇಕು. ಇಲ್ಲದಿದ್ದರೆ ನೀವು ಜಾಸ್ತಿ ರೇಟು ಕೊಟ್ಟು ಗ್ಯಾಸ್ ತೆಗೆದುಕೊಳ್ಳಬೇಕು" ಅಂದರು. ನಾನು ಇದನ್ನು ಗಮನಿಸುತ್ತಿದ್ದೆ. ಸಭೆ ಶುರುವಾಗುವ ಮೊದಲೇ ಇವರು ಇದೇನು ಮಾಡುತ್ತಿದ್ದಾರೆ ಎಂದು ಮನಸ್ಸಿಗೆ ಕಿರಿಕಿರಿಯಾಗುತ್ತಲೇ ಇತ್ತು. ಆ ಮಹಿಳೆ ಮುಖ ಸಪ್ಪಗೆ ಮಾಡಿಕೊಂಡರು. ಉಳಿದವರ ಸಮಸ್ಯೆ ಪರಿಹಾರವಾಗಿತ್ತೇನೋ. ಎಲ್ಲರೂ ಸಭೆ ಶುರುವಾಗುವ ಮೊದಲೇ ಜಾಗ ಖಾಲಿ ಮಾಡಿದರು.
ಸಭೆ ಮುಗಿದ ಮೇಲೆ ಯೋಚಿಸುತ್ತಿದ್ದಾಗ ನನಗೆ ಈ ಮಹಿಳೆಯ ಸಮಸ್ಯೆ ಹೊಳೆಯಿತು. ಈ ವರದಿ ಬರೆಯುತ್ತಿರುವಾಗ ಉ.ನಿ.ರಿಗೆ ಫೋನ್ ಮಾಡಿದೆ.
"ಆ ಮಹಿಳೆ ತನ್ನ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲ ಎಂದರು. ನಾನು ಗ್ಯಾಸ್ ಪಡೆಯಲು ಅದು ಬೇಕು ಎಂದೆ" ಎಂದರು ಅವರು.
 "ಆ ಹೆಂಗಸು ಹೇಳಿದ್ದರ ಅರ್ಥ ತನ್ನ ಹತ್ತಿರ ರೇಶನ್ ಕಾರ್ಡ್ ಇಲ್ಲ ಅಂತ ನಾನು ಭಾವಿಸಿದೆ" ಎಂದೆ ನಾನು.
 "ಇಲ್ಲ ಹಾಗಲ್ಲ. ಅವರು ಬಿಪಿಎಲ್ ಕಾರ್ಡ್ ಇಲ್ಲ ಅಂದರು" ಎಂದರು ಅವರು. 
ನನಗೆ ಈಗಲೂ ಅನುಮಾನ ಉಳಿದಿದೆ. ಸಭೆ ಶುರುವಾದ ಮೇಲೆ ಅವರ ಪ್ರಶ್ನೋತ್ತರ ನಡೆದಿದ್ದರೆ ಆ ಮಹಿಳೆಯ ಸಮಸ್ಯೆ ಸ್ಪಷ್ಟವಾಗುತ್ತಿತ್ತೋ ಏನೋ.
ಅದರ ಮೊದಲೇ ಸಮಸ್ಯಾ ಪರಿಹಾರಕ್ಕೆ ಉ.ನಿ. ಯಾಕೆ ಅವಸರ ಮಾಡಿದರೋ? ನಂತರ ಉ.ನಿ. ಮಾಡಿದ್ದ ಪ್ರಾಸ್ತಾವಿಕ ಭಾಷಣದಲ್ಲಿ ಬಳಕೆದಾರರಿಗೆ ಉಪಯುಕ್ತವಾದ ಅನೇಕ ವಿಷಯಗಳಿದ್ದವು. ಆ ಮಹಿಳೆಯರು ಆ ಎಲ್ಲ ಮಾಹಿತಿಯಿಂದ ವಂಚಿತರಾಗುವಂತಾಯಿತು.

ಉ.ನಿ.ರ ಪ್ರಸ್ತಾವನೆಯ ಒಂದು ಸಣ್ಣ ಆಂಶ:

ಹೊಸ ಸಂಪರ್ಕದೊಂದಿಗೆ ಸ್ಟೌ ಕೊಂಡುಕೊಳ್ಳುವುದು ಕಡ್ಡಾಯವೆ? ಇದು ಅನೇಕ ಬಳಕೆದಾರರು ಕೇಳುವ ಪ್ರಶ್ನೆ: 
ಉ.ನಿ.ರ ಪ್ರಕಾರ ಅಲ್ಲ. ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಒಂದು ಐ ಎಸ್ ಐ ಚಿಹ್ನೆಯ ಸ್ಟೌ ಇದ್ದರೆ ನೀವು ಅದನ್ನು ಡೀಲರ್ ಹತ್ತಿರ ಪರೀಕ್ಷೆ ಮಾಡಿಸಬೇಕು ಅಷ್ಟೆ. ಅದಕ್ಕೆ ೨೫೦/- ರೂ. ಚಾರ್ಜು ಮಾಡುತ್ತಾರೆ. ಒಂದೇ ಷರತ್ತು ಎಂದರೆ ನಿಮ್ಮ ಹತ್ತಿರ ಈಗಾಗಲೇ ಇರುವ ಸ್ಟೌಗೆ ಬಿಲ್  ಇರಬೇಕು!

ಪ್ರಶ್ನೋತ್ತರದ ವೈಖರಿ

ಈ ಹಿಂದೆ ಒಂದು ಸಭೆ ನಡೆದಿತ್ತೆಂದು ಮೊದಲೇ ಹೇಳಿದೆ. ಆ ಸಭೆ ರೋಟರಿ ಬಾಲಭವನದಲ್ಲಿ ನಡೆದಿತ್ತು. ಅನೇಕ ರೊಟೇರಿಯನ್ ಗಳೂ ಬಂದಿದ್ದರು. ಅಂದಿನ ಸಭೆಯಲ್ಲಿ ಅನೇಕ ಗಣ್ಯಾತಿಗಣ್ಯರು ಭದ್ರಾ ಗ್ಯಾಸ್ ಏಜೆನ್ಸಿಗೆ "ಅತ್ಯುತ್ತಮ ಸೇವೆ"ಯ ಪ್ರಶಸ್ತಿ ಪತ್ರ ನೀಡಿದ್ದರು. ಈ ಸಲ ಸಭೆ ನಡೆದಿದ್ದು ಲಯನ್ಸ್ ಮಂದಿರದಲ್ಲಿ. ಅನೇಕರು ಹಳ್ಳಿ ಪ್ರದೇಶದಿಂದ ಬಂದವರಿದ್ದರು. ಹಾಗಾಗಿ ಸಭೆಯ ಸ್ವರೂಪ ಭಿನ್ನವಾಯಿತು.
(ನಮ್ಮ ಬಿ.ಸಿ.ರೋಡಿನಲ್ಲಿ ಸಾರ್ವಜನಿಕ ಸಭೆ ನಡೆಸಲು - ಅನೇಕ ಊರುಗಳಲ್ಲಿ ಇರುವಂತೆ - ಟೌನ್ ಹಾಲ್ ಇಲ್ಲ ಎಂದು ಹೇಳಲು ನನಗೆ ನಾಚಿಕೆಯಾಗುತ್ತದೆ. ಆದರೂ ಅದು ನಿಜ. ಇತ್ತೀಚೆಗೆ ನಮ್ಮ ಮಾನ್ಯ ಸಚಿವ ರಮಾನಾಥ ರೈಯವರು "ಜನತಾ ದರ್ಶನ"ವೆಂಬ ದೊಡ್ಡ ಕಾರ್ಯಕ್ರಮ ನಡೆಸಿದರು. ಆಗ ಶಾಮಿಯಾನ ವ್ಯವಸ್ಥೆ ಇತ್ತು! ಒಂದು ಸಾರ್ವಜನಿಕ ಸಭಾಭವನ ನಮ್ಮೂರಿಗೆ ಬೇಕೇಬೇಕೆಂದೂ, ಅದನ್ನು ದಿವಂಗತ ಪಂಜೆ ಮಂಗೇಶ ರಾಯರ ಹೆಸರಿನಲ್ಲಿ ಮಾಡಬೇಕೆಂದೂ ನಮ್ಮೂರಿನ  "ಪಂಜೆ ಸ್ಮಾರಕ ಸಮಿತಿ" ಪ್ರಯತ್ನ ಪಡುತ್ತಲೇ ಇದೆ. ಇದಕ್ಕೆ ೩೦ ಸೆಂಟ್ಸ್ ಸ್ಥಳ ಸಹ ಇದೆ. ಇವತ್ತು ಪ್ರಕಟವಾದ ಬಜೆಟ್ಟಿನಲ್ಲಿ ಪಂಜೆ ಮಂಗೇಶರಾವ್ ಸ್ಮಾರಕ ಕಟ್ಟಡಕ್ಕೆ ಹಣ ಮೀಸಲಿಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರಂತೆ. "ನಾನು ಆ ಸ್ಥಳ ಬದಲಾಯಿಸಬೇಕೆಂದಿದ್ದೇನೆ. ಅದಕ್ಕೆ ಹಣ ಇಡುವುದು ಬೇಡ" ಎಂದು ರಮಾನಾಥ ರೈಯವರೇ ಅಡ್ಡಗಾಲು ಹಾಕಿದರೆಂದು ಅನಧಿಕೃತ ಮೂಲಗಳಿಂದ ಬಂದ ಗಾಳಿಸುದ್ದಿ ಬಂಟ್ವಾಳದಲ್ಲಿ ಹರಿದಾಡುತ್ತಿದೆ.)

***************

ಒಂದೆರಡು ಮಾದರಿ ಪ್ರಶ್ನೋತ್ತರಗಳು:

ಒಬ್ಬ ಅಧ್ಯಾಪಕರ ಪ್ರಶ್ನೆ:
ನಮ್ಮ ಶಾಲೆಯ ಬಿಸಿಯೂಟಕ್ಕೆ ಅನಿಲ ಸಾಗಾಣಿಕೆ ಖರ್ಚು ಅಂತ ತಿಂಗಳಿಗೆ ರೂ. ೨೦೦/- ಹೆಚ್ಚು ತೆಗೆದುಕೊಳ್ಳುತ್ತಾರೆ. ಈಗ ಇದು ಮುಖ್ಯೋಪಾಧ್ಯಾಯರ ಕಿಸೆಯಿಂದ ಹೋಗುತ್ತಿದೆ. ಇದು ಸರಿಯೆ?
ಉ.ನಿ.: ನಿಮ್ಮದು ಯಾವ ಶಾಲೆ?
ಅಧ್ಯಾಪಕ: ಇಲ್ಲೇ ಹತ್ತಿರ ಸರ್
ಉ.ನಿ.: ಏನಿವತ್ತು ನಿಮಗೆ ರಜಾನ?
ಅಧ್ಯಾಪಕ: ನನ್ನನ್ನು ಮುಖ್ಯೋಪಾಧ್ಯಾಯರು ಕಳಿಸಿದ್ದು ಸರ್
ಉ.ನಿ.: ಈ ಕಾರ್ಯಕ್ರಮ ಶಾಲೆಯ ಸಮಸ್ಯೆಗೆ ಸಂಬಂಧಪಟ್ಟಿದ್ದಲ್ಲ
(ಗಲಾಟೆ ಶುರು. ಅಧ್ಯಾಪಕರ ಪರ ಅನೇಕರು ಏಕಕಾಲಕ್ಕೆ ದನಿ ಏರಿಸಿ ಮಾತಾಡಿದರು. ಉ.ನಿ. ವಿಷಯಕ್ಕೆ ಬಂದರು!)

ಬಳಕೆದಾರರೊಬ್ಬರು  ಏನೋ ಒಂದು ದೂರು ಹೇಳಿದರು.
ಉ.ನಿ.: ನಿಮ್ಮ ಕನ್ಸ್ಯೂಮರ್ ನಂಬರ್ ಎಷ್ಟು?
ಬ: ನನಗೆ ಗೊತ್ತಿಲ್ಲ
ಉ.ನಿ.: ಯಾಕೆ ಗೊತ್ತಿಲ್ಲ?
ಬ: ಇಲ್ಲ ನೀವು ಹಾಗೆ ಕೇಳಬಾರದು, ಅದು ಸರಿಯಲ್ಲ.
ಉ.ನಿ.: ನಮಗೆ ನಂಬರ್ ಬೇಕಲ್ಲ
ಬ: ಹಾಗಿದ್ದರೆ "ಸಭೆಗೆ ಬರುವವರು ನಂಬರ್ ಹಿಡಿದುಕೊಂಡು ಬರಬೇಕು" ಅಂತ ನೀವು ಪ್ರಕಟಣೆ ಕೊಟ್ಟಿದ್ದೀರಾ?
ಮಾತುಕತೆ ಸರಿದಾರಿಗೆ ಬಂತು.
**********
ವೇದಿಕೆಯಲ್ಲಿದ್ದ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆಯವರು "ವಿತರಕರನ್ನು ಕರೆಸಿ" ಎಂದು ಹೇಳಿದ್ದರಿಂದ ವಿತರಕರು ಬಂದು ಸಭೆಯ ಮುಂದೆ ನಿಂತು ಮಾತಾಡುವುದು ಅನಿವಾರ್ಯವಾಯಿತು. ಕಳೆದ ಸಲದ ಸಭೆಯಲ್ಲಿ ವಿತರಕರು ಮಾತಾಡಿಯೇ ಇರಲಿಲ್ಲ. ಸಭೆ ಮುಗಿದ ಮೇಲೆ ನನ್ನ ಹತ್ತಿರ "ನಾನು ಅಲ್ಲಿ ಮಾತಾಡುವ ಹಾಗಿಲ್ಲ" ಎಂದಿದ್ದರು.
ಪತ್ರಕರ್ತ ಎಸ್. ಜಯರಾಮ್ "ಬಂಟ್ವಾಳಕ್ಕೆ ಇನ್ನೊಂದು ಏಜೆನ್ಸಿ ಬೇಕು. ಈ ಮೊದಲು ಅರ್ಜಿ ಹಾಕಿದ ವರ್ತಕರ ಸಂಘದ ಅರ್ಜಿಯನ್ನು ರಾಜಕೀಯ ಕಾರಣಗಳಿಂದ ತಿರಸ್ಕರಿಸಲಾಗಿತ್ತು" ಎಂದರು.
*********
ಇಂಥ ಸಭೆಗಳನ್ನುತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹೇಗೆ ಬಳಸಿಕೊಳ್ಳಬೇಕೆಂದು ಬಳಕೆದಾರರು ಇನ್ನೂ ಕಲಿಯಬೇಕಾಗಿದೆ. ಸಮಸ್ಯೆ ಹೇಳುವ ಭರದಲ್ಲಿ ಹೆಚ್ಚಿನವರಿಗೆ ಅದಕ್ಕೆ ಪರಿಹಾರ ಏನೆಂದು ಕೇಳುವ, ಪಡೆಯುವ ಪುರುಸೊತ್ತೇ ಇರುವುದಿಲ್ಲ. ಹಾಗಾಗಿ ಸಭೆ ಒಂದರಿಂದ ಇನ್ನೊಂದು ಹೊಸ ಪ್ರಶ್ನೆಗೆ -  ವಾಸ್ತವವಾಗಿ ಅದು ಈಗಾಗಲೇ ಕೇಳಿದ ಪ್ರಶ್ನೆಯೇ ಆಗಿರುತ್ತದೆ - ಹಾರುತ್ತದೆ. ಅಧಿಕಾರಿಗಳಿಗೆ ತಪ್ಪಿಸಿಕೊಳ್ಳಲು ಅತ್ಯುತ್ತಮ ಅವಕಾಶ ಒದಗಿಸುತ್ತದೆ. ಒಟ್ಟಿನಲ್ಲಿ ಅನಿಲ ವಿತರಣೆಯ ಅನೇಕ ಲೋಪದೋಷಗಳು ಸಭೆಯಲ್ಲಿ ಪ್ರಸ್ತಾಪಗೊಂಡರೂ, ಅವುಗಳಿಗೆ ಪರಿಹಾರವೇನೆಂಬುದರ ಬಗ್ಗೆ ಗಮನ ಹರಿಸಿದವರು ಕಡಿಮೆಯೇ.  ಅನೇಕರು ತಮ್ಮ ಸಮಸ್ಯೆ ಮಾತ್ರವಲ್ಲದೆ ಇನ್ನೊಬ್ಬರ ಸಮಸ್ಯೆಯನ್ನೂ ಹೊತ್ತುಕೊಳ್ಳುತ್ತಾರೆ. ಇಂಥ ಕೆಲವರು ಅಂದಿನ ಇಡೀ ಸಭೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಂತೆ ಕಾಣುತ್ತಿತ್ತು. ಮುಂದೆಯೂ ಇಂತಹ ಸಭೆಗಳು ಮತ್ತೆ ಮತ್ತೆ ನಡೆದು, ಯಾರಾದರೊಬ್ಬರು ಸಭೆಯ ಕಲಾಪಗಳನ್ನು ಸರಿಯಾಗಿ ನಿರ್ವಹಿಸಿದರೆ, ಸಭೆ ಹೆಚ್ಚು ಅರ್ಥಪೂರ್ಣವಾಗಬಹುದು. ಸಾರ್ಥಕವಾಗಬಹುದು. ಕೆಲವು ಸಮಯದ ನಂತರ ಅನಗತ್ಯವೂ ಆಗಬಹುದು.




ಮಂಗಳವಾರ, ಮಾರ್ಚ್ 10, 2015

ನೇತ್ರಾವತಿಯ ಮಡಿಲಲ್ಲಿ ಬಂಟ್ವಾಳದ ಜನತೆ
ಕುಡಿಯುವ ನೀರಿಗೆ ಯಾಕೀ ಕೊರತೆ?

ರಸ್ತೆಯಂಚಿನಲ್ಲೊಂದು ಕೊಳವೆ ಬಾವಿ

ಮೊಡಂಕಾಪಿನಲ್ಲಿರುವ ನಮ್ಮ ಮನೆಗೆ ಹೋಗಲು ಬಿ.ಸಿ.ರೋಡು ಪೊಳಲಿ ದ್ವಾರದ ಮೂಲಕ ಹೋಗಬೇಕು. ಇದು ನಾನು ನಿತ್ಯ ತಿರುಗಾಡುವ ದಾರಿ. 2014ರ ಡಿಸೆಂಬರ್ ಮಧ್ಯದ ಒಂದು ದಿನ ಇದ್ದಕ್ಕಿದ್ದಂತೆ ಕಾರ್ಮೆಲ್ ಕಾನ್ವೆಂಟ್ ಹತ್ತಿರ ರಸ್ತೆಯ ಬದಿಯಲ್ಲಿ ಒಂದು ಕೊಳವೆ ಬಾವಿ  ಕಾಣಿಸಿಕೊಂಡಿತು. ಬಾವಿ ತೀರ ರಸ್ತೆಯ ಅಂಚಿನಲ್ಲೇ ಇತ್ತಾದ್ದರಿಂದ ಇದು ಯಾರಪ್ಪ ರಸ್ತೆಗೆ ಇಷ್ಟು ಹತ್ತಿರ ಈ ಕೆಲಸ ಮಾಡಿದವರು ಎಂಬ ಪ್ರಶ್ನೆ ಮನಸ್ಸಿಗೆ ಬಂತು. ವಿಚಾರಿಸಿದೆ. ಅದು ಬಂಟ್ವಾಳ ಪುರಸಭೆಯ ಕಾರುಭಾರು ಎಂದು ತಿಳಿಯಿತು. ನಮ್ಮ ಕೌನ್ಸಿಲರ್ ಶ್ರೀ ಸದಾಶಿವ ಬಂಗೇರರು. ಅವರಿಗೆ ಫೋನ್ ಮಾಡಿದೆ. "ರಾಜುಪಲ್ಕೆ, ದುಗ್ಗನಕೋಡಿ ಮುಂತಾದ ಕಡೆಗೆ ನೀರು ಸರಿಯಾಗಿ ಹೋಗುತ್ತಿಲ್ಲ. ಅದಕ್ಕೇ ಅಲ್ಲಿಗೇ ಬೇರೆ ಬೋರ್ ಮಾಡಿಸಿ ನೀರು ಕೊಡುತ್ತಿದ್ದೇವೆ. ಅದಕ್ಕೇ ಬೇರೆ ಪೈಪ್ ಲೈನ್ ಹಾಕುತ್ತೇವೆ. ಸದ್ಯಕ್ಕೆ ಆ ಪೈಪ್ ಲೈನಿಗೆ  ಇರುವ ಬೋರ್ ವೆಲ್ಲಿನಿಂದಲೇ ನೀರು ಕೊಡುತ್ತೇವೆ. ಒಂದು ಟ್ರಾನ್ಸ್ ಫಾರ್ಮರ್ ಹಾಕಬೇಕು. ಅದಕ್ಕೆ ನಾಲ್ಕು ಲಕ್ಷ ಕಟ್ಟಲಿಕ್ಕಿದೆ. ಅದಾದ ಮೇಲೆ ಹೊಸ ಬೋರ್ ವೆಲ್ಲಿನಿಂದಲೇ ನೀರು ಕೊಡುತ್ತೇವೆ" ಎಂದರು. ಈ ವಿವರಣೆ ಓದುಗರಿಗೆ ಅರ್ಥವಾಗುವುದು ಕಷ್ಟವಾದರೆ,  ಲೋಕೋಪಯೋಗಿ ಇಲಾಖೆಯ ರಸ್ತೆಯ ಅಂಚಿನಲ್ಲೇ ಎಂದರೆ ಸುಮಾರು ನಾಲ್ಕೈದು ಅಡಿ ದೂರದಲ್ಲೇ ಬಂಟ್ವಾಳ ಪುರಸಭೆ ಒಂದು ಹೊಸ ಕೊಳವೆ ಬಾವಿ ತೆಗೆದಿತ್ತು ಎಂದು ತಿಳಿದರೆ ಸಾಕು.

ಉಭಯ ಸಂಕಟ

"ಕುಡಿಯುವ ನೀರು" ಎಂದ ಕೂಡಲೇ ಯಾವ ಕಾನೂನನ್ನು ಬೇಕಾದರೂ ಮುರಿಯಬಹುದು ಎಂಬುದು ಸರಕಾರದಲ್ಲಿ ಪ್ರಚಲಿತ ಪದ್ಧತಿ. "ಎತ್ತಿನ ಹೊಳೆ ಯೋಜನೆ"ಗೂ ಇದೇ ಕಾರಣ ತೋರಿಸಿ ರಾಜ್ಯ ಸರಕಾರವು ಕಾನೂನಿನ ಎಲ್ಲ ಸುರಕ್ಷತಾ ಕ್ರಮಗಳನ್ನೂ ಒಂದೇ ಪೆಟ್ಟಿಗೆ ಲಂಘಿಸಿಬಿಟ್ಟಿದೆ. ಇಲ್ಲೂ ಅಷ್ಟೆ. ಕುಡಿಯುವ ನೀರು ಎಂಬ ಕಾರಣಕ್ಕೆ ಕೊಳವೆ ಬಾವಿ ಎಲ್ಲಿ ಬೇಕಾದರೂ ಕೊರೆಯಬಹುದು ಎಂಬ ಧೋರಣೆ.  ಆದರೆ ಈ ರಸ್ತೆಗೆ ಬೇರೆ ಒಂದು ಸಮಸ್ಯೆ ಇದೆ. ಇನ್ಫೆಂಟ್ ಜೀಸೆಸ್ ಕನ್ನಡ ಮಾಧ್ಯಮ ಶಾಲೆ, ಅವರದೇ ಇಂಗ್ಲಿಷ್ ಮಾಧ್ಯಮ ಶಾಲೆ, ದೀಪಿಕಾ ಪ್ರೌಢಶಾಲೆ, ಕಾರ್ಮೆಲ್ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು, ಕಾರ್ಮೆಲ್ ಪದವಿ ಕಾಲೇಜು,  ಒಂದು ಅಂಗನವಾಡಿ ಹೀಗೆ ಹಲವು ವಿದ್ಯಾಸಂಸ್ಥೆಗಳು ಇಲ್ಲಿ ಹತ್ತಿರ ಹತ್ತಿರ ಬೀಡುಬಿಟ್ಟಿವೆ. ಜೊತೆಗೆ ಒಂದು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯವೂ ಇದೆ. ಪರಿಣಾಮ ಈ ರಸ್ತೆಯಲ್ಲಿ ಶಾಲೆಯ ಮಕ್ಕಳ ತಿರುಗಾಟ ಜಾಸ್ತಿ. ಈಗ ಇರುವ ರಸ್ತೆ ಕಿರಿದಾಗಿದೆ, ಕೆಲವು ಕಡೆಗಳಲ್ಲಂತೂ ಒಂದು ಬಸ್ ಬಂದರೆ ಪಾದಚಾರಿಗಳು ಚರಂಡಿಗಿಳಿಯಬೇಕು ಹಾಗಿದೆ. ರಸ್ತೆ ಯಾವಾಗ ಅಗಲವಾಗುತ್ತದೋ, ಯಾವಾಗ ಈ ನರಕ ಕೊನೆಗೊಳ್ಳುತ್ತದೋ ಎಂದು ನಾವೆಲ್ಲ ಕಾಯುತ್ತಲೇ ಇದ್ದೇವೆ.

ಹೀಗಿರುವಾಗ ರಸ್ತೆಯ ಬದಿಯಲ್ಲೇ ಒಂದು ಬೋರ್ ವೆಲ್ ತೆಗೆದರೆ, ನಾಳೆ ರಸ್ತೆ ಅಗಲ ಮಾಡುವುದು ಹೇಗೆ?  ಹಾಗೆಂದು ಬೋರ್ ವೆಲ್ ತೆಗೆಯದಿದ್ದರೆ ಜನರಿಗೆ ನೀರು ಕೊಡುವುದು ಹೇಗೆ? ಹಾಗೂ ಕಷ್ಟ - ಹೀಗೂ ಕಷ್ಟ ಎಂಬ ಉಭಯಸಂಕಟದ ಪ್ರಶ್ನೆ ಹುಟ್ಟಿಕೊಂಡಿತು. ಆದರೆ, ಪುರಸಭೆಯಂಥ ಒಂದು ಸರ್ಕಾರಿ ಸಂಸ್ಥೆಯೇ ಕಾನೂನು ಮೀರಿ ರಸ್ತೆ ಬದಿಯನ್ನು ಆಕ್ರಮಿಸಿದರೆ, ಖಾಸಗಿಯವರಿಗೆ ರಸ್ತೆಯನ್ನು ಆಕ್ರಮಿಸಿಕೊಳ್ಳಲು, ತಮ್ಮ ಸ್ವಂತ ಆಸ್ತಿ ಎಂಬಂತೆ ಬಳಸಿಕೊಳ್ಳಲು ದಾರಿ ತೋರಿಸಿದಂತಾಗಲಿಲ್ಲವೆ  ಎಂಬ ಮರುಸವಾಲೂ ಬಂತು.

ಒಬ್ಬರಿಗಿಂತ ಇಬ್ಬರು ಲೇಸು!

ಯಾವುದಕ್ಕೂ ಒಬ್ಬನೇ ಬೇಡ, ಇಬ್ಬರಿದ್ದರೆ ಒಳ್ಳೆಯದು ಎಂದುಕೊಂಡೆ. ಇಂಥ ಕೆಲಸಕ್ಕೆಲ್ಲ ನನಗೆ ಜತೆಯಾಗುವವರು ಬಿ.ಸಿ.ರೋಡಿನ ವಕೀಲ ಮಿತ್ರ ದೈಪಲ ಶ್ರೀನಿವಾಸರು. ಕಾನೂನು ಇರುವುದು ಪಾಲಿಸುವುದಕ್ಕೆ ಎನ್ನುವುದು ಅವರ ನಿರಂತರ ಕಾಳಜಿ. ಅವರ ಹತ್ತಿರ ಚರ್ಚಿಸಿ ಇಬ್ಬರದೂ ಹೆಸರಿನಲ್ಲಿ ಪುರಸಭೆಗೂ, ಲೋಕೋಪಯೋಗಿ ಇಲಾಖೆಗೂ ಪತ್ರ ಬರೆದೆವು. ನಮ್ಮ ಪ್ರಶ್ನೆ ಎರಡು:
1. ಈ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯಲು ಲೋಕೋಪಯೋಗಿ ಇಲಾಖೆಯ ಒಪ್ಪಿಗೆ ಬೇಕೇ ಬೇಡವೇ?
2. ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನತೆಗೆ ಬೇಕಾದ ಎಲ್ಲಾ ನೀರನ್ನೂ ನೇತ್ರಾವತಿ ನದಿಯಿಂದಲೇ ಸರಬರಾಜು ಮಾಡುವುದು ಸಾಧ್ಯವಿಲ್ಲವೆ?
ಪತ್ರ ಬರೆದು ಅದಕ್ಕೊಂದು ನೆನಪೋಲೆ ಬರೆದ ಮೇಲೆ ಒಂದೂವರೆ ತಿಂಗಳ ನಂತರ ಪುರಸಭೆಯಿಂದ ಉತ್ತರ ಬಂತು:
"....ಬಿ.ಮೂಡ ಗ್ರಾಮದ ಮೊಡಂಕಾಪು ಎಂಬಲ್ಲಿ ರಾಜುಪಲ್ಕೆ ಪ್ರದೇಶಕ್ಕೆ ನೀರು ಸರಬರಾಜು ಮಾಡಲು 2013-14ನೇ ಸಾಲಿನ ಬರ ಪರಿಹಾರ ಮತ್ತು ಹಣಕಾಸು ಯೋಜನೆಯಡಿ ಕೊಳವೆ ಬಾವಿ ಕೊರೆದು ಪಂಪು ಅಳವಡಿಸಿ ರೈಸಿಂಗ್ ಮೈನ್ ರಚಿಸಲು ಕೆಲಸ ಕೈಗೊಳ್ಳಲಾಗಿದೆ. ರಾಜುಪಲ್ಕೆ ಪ್ರದೇಶಕ್ಕೆ ಪ್ರಸ್ತುತ ಬಂಟುಗುರಿ ಕಿ.ನೀ.ಸ. ಯೋಜನೆಯಿಂದ ನೀರು ಸರಬರಾಜು ಆಗುತ್ತಿದ್ದು, ಬೇಸಿಗೆ ಕಾಲದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ವಿದ್ಯುತ್ ಅಭಾವದಿಂದ ನೀರು ಪೂರೈಸಲು ಕಷ್ಟಕರವಾಗುತ್ತದೆ. ನೀರು ಸರಬರಾಜು ಯೋಜನೆ ಬಗ್ಗೆ ಜಲಮೂಲವನ್ನು ಭೂ ವಿಜ್ಞಾನಿಯವರು ಸರ್ವೆ ಕಾರ್ಯ ನಡೆಸಿ ಗುರುತಿಸಿರುತ್ತಾರೆ. ಕೊಳವೆ ಬಾವಿ ಕೊರೆಯಲು ಲೋಕೋಪಯೋಗಿ ಇಲಾಖೆಯ ಅನುಮತಿ ಅಗತ್ಯವಿಲ್ಲ. ಪ್ರಸ್ತುತ ಬೃಹತ್ ನೀರು ಸರಬರಾಜು ಯೋಜನೆಯ ನೀರು ಪುರಸಭೆಯ ಎಲ್ಲಾ ವಾರ್ಡುಗಳಿಗೆ ಸರಬರಾಜು ಮಾಡಲು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. 2ನೇ ಹಂತದ ಸಮಗ್ರ ನೀರು ಸರಬರಾಜು ಯೋಜನೆ ಅನುಷ್ಠಾನಗೊಂಡಲ್ಲಿ ಪುರಸಭೆಯ ಎಲ್ಲಾ ವಾರ್ಡುಗಳಿಗೆ ನದಿ ನೀರು ಸರಬರಾಜು ಮಾಡಬಹುದು."

ತನ್ನ ನಿರ್ಣಯ ತಾನೇ ಮರೆತ ಬಂಟ್ವಾಳ ಪುರಸಭೆ

ಪುರಸಭೆಯ ಈ ಪತ್ರವನ್ನು ಕೊಂಚ ಪರಿಶೀಲಿಸೋಣ. "ರಾಜುಪಲ್ಕೆ ಪ್ರದೇಶಕ್ಕೆ ಪ್ರಸ್ತುತ ಬಂಟುಗುರಿ ಕಿ.ನೀ.ಸ. ಯೋಜನೆಯಿಂದ ನೀರು ಸರಬರಾಜು ಆಗುತ್ತಿದ್ದು, ಬೇಸಿಗೆ ಕಾಲದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ವಿದ್ಯುತ್ ಅಭಾವದಿಂದ ನೀರು ಪೂರೈಸಲು ಕಷ್ಟಕರವಾಗುತ್ತದೆ" ಎಂದು ಅದರಲ್ಲಿ ಹೇಳಲಾಗಿದೆ. ಕುಡಿಯುವ ನೀರಿಗೆ ಸಮಸ್ಯೆಯಾದರೆ ಪರಿಹಾರ ಏನು? ಪುರಸಭೆಯ ಉತ್ತರ ನೇರ ಮತ್ತು ಸರಳ: "ಬೋರ್ ವೆಲ್ ತೆಗೆಯುವುದು". ಏಕೆಂದರೆ ಕುಡಿಯುವ ನೀರಿನ ವ್ಯವಸ್ಥೆಗೆ ಯಾವಾಗಲೂ ಹಣದ ಕೊರತೆ ಇಲ್ಲ! ಆದರೆ ಹೀಗೆ ಮಾಡುವಾಗ ಬಂಟ್ವಾಳ  ಪುರಸಭೆ ತಾನೇ ಈ ಹಿಂದೆ ಮಾಡಿದ ಒಂದು ನಿರ್ಣಯವನ್ನು ಪೂರ್ಣವಾಗಿ ಮರೆತುಬಿಟ್ಟಿದೆ. ಆ ನಿರ್ಣಯ ಆಗಿರುವುದು 22-02-2012ರಲ್ಲಿ. (ಆಗ ಅಧ್ಯಕ್ಷರಾಗಿದ್ದವರು ಶ್ರೀ ಬಿ. ದಿನೇಶ್ ಭಂಡಾರಿ) ಅದೇನು ಹೇಳುತ್ತದೆ ಗೊತ್ತೆ?
"ನಿರ್ಣಯ ನಂಬ್ರ: 425(1): ......... ಎಸ್. ಇ. ಝೆಡ್ ಲಿ.ನವರು ನೇತ್ರಾವತಿ ನದಿ ನೀರನ್ನು ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಗೆ ಬಳಸಲು ಈಗಾಗಲೇ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಪೈಪ್ ಲೈನನ್ನು ಅಳವಡಿಸಲು ಅನುಮತಿ ನೀಡಲಾಗಿದೆ. ಬಂಟ್ವಾಳ ಪುರಸಭೆಯು ಮೂರು ಗ್ರಾಮಗಳನ್ನು ಹೊಂದಿದ್ದು, ಈ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ನೇತ್ರಾವತಿ ನದಿಯಿಂದ ಪೂರೈಸಲಾಗುತ್ತಿದೆ. ಮುಂದಿನ ಬೇಸಿಗೆ ದಿನಗಳಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವಿತರಿಸಲು ನೀರಿನ ಅಭಾವ ಉಂಟಾದಲ್ಲಿ ಸದ್ರಿ ಎಸ್. ಇ. ಝೆಡ್ ನವರುನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು" (ಅಕ್ಷರ ಒತ್ತು ನನ್ನದು)
ಮೂರು ವರ್ಷದ ಹಿಂದೆಯೇ ಹೀಗೊಂದು ನಿರ್ಣಯ ಮಾಡಿದ್ದರೂ, ಬಂಟ್ವಾಳ ಪುರಸಭೆ ಯಾವ ಕಾರಣಕ್ಕಾಗಿ ಸಾರ್ವಜನಿಕ ಹಣ ಖರ್ಚು ಮಾಡಿ ಬೋರ್ ವೆಲ್ಲುಗಳನ್ನು ತೆಗೆಯುತ್ತಿದೆ? ಯಾಕಾಗಿ ಎಸ್. ಇ. ಝೆಡ್ ಕಂಪೆನಿಯಿಂದ ಷರತ್ತಿನಂತೆ ಬರಬೇಕಾದ ನೀರನ್ನು ಪಡೆದುಕೊಳ್ಳುತ್ತಿಲ್ಲ? ಸಮಸ್ಯೆ ಆಗುತ್ತಿರುವುದು ಪುರಸಭೆಯ ಆಡಳಿತ ವ್ಯವಸ್ಥೆಯ ಲೋಪದಿಂದಲೋ ಅಥವಾ ನೀರು ಮತ್ತು ವಿದ್ಯುತ್ತಿನ ಆಲಭ್ಯತೆಯಿಂದಲೋ?

"ಕಂಡರೂ ಕಾಣಧಂಗೆ" ಕೂತು ನೋಡುತ್ತಿರುವ ಲೋಕೋಪಯೋಗಿ ಇಲಾಖೆ?

ಪುರಸಭೆಗೆ ಒಂದು ನೆನಪೋಲೆ ಸಾಕಾದರೆ, ಸಾಮಾನ್ಯವಾಗಿ ಪತ್ರಗಳಿಗೆ ಕೂಡಲೇ ಉತ್ತರಿಸುವ ಲೋಕೋಪಯೋಗಿ ಇಲಾಖೆಗೆ ಈ ಪತ್ರಕ್ಕೆ ಉತ್ತರಿಸಲು ಎರಡು ನೆನಪೋಲೆ ಬೇಕಾಯಿತು. ಅಂತೂ ಅಲ್ಲಿಂದಲೂ - ಐವತ್ತು ದಿನಗಳ ನಂತರ - ಉತ್ತರ ಬಂತು:
"...ಮೊಡಂಕಾಪುವಿನಲ್ಲಿ ಹೊಸತಾಗಿ ತೆಗೆದಿರುವ ಕೊಳವೆ ಬಾವಿಗೆ ಲೋಕೋಪಯೋಗಿ ಇಲಾಖೆಯ ಅನುಮತಿಯ ಅಗತ್ಯವಿದೆಯೆ ಎಂಬ ಬಗ್ಗೆ ಕೇಳಿರುತ್ತೀರಿ.
ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ಯಾವುದೇ ಜಿಲ್ಲಾ ಮುಖ್ಯ ರಸ್ತೆ ಅಥವಾ ರಾಜ್ಯ ಹೆದ್ದಾರಿಯ ಬದಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಾದಲ್ಲಿ ಸಾಮಾನ್ಯವಾಗಿ ಇಲಾಖೆಯ ಅನುಮತಿಯನ್ನು ಪಡೆಯಬೇಕಾಗಿರುತ್ತದೆ ಎಂದು ಈ ಮೂಲಕ ತಿಳಿಸಬಯಸಿದೆ."
ಪುರಸಭೆಯ ಕಛೇರಿ ಇರುವುದು ಬಂಟ್ವಾಳದಲ್ಲಿ. ಲೋಕೋಪಯೋಗಿ ಇಲಾಖೆಯ ಕಛೇರಿ ಇರುವುದೂ ಅಲ್ಲೇ ಹತ್ತಿರದಲ್ಲಿ. ಅದೂ ಹೋಗಲಿ ಎಂದರೆ ಇದು ಮೊಬೈಲ್ ಯುಗ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅವರಿಗೆ ಪುರಸಭೆಯ ಮುಖ್ಯಾಧಿಕಾರಿಯವರ  ಹತ್ತಿರ ಸರಕಾರದ ಖರ್ಚಿನಲ್ಲಿ ಮಾತಾಡಿ ಸಮಸ್ಯೆಯನ್ನು ಪರಿಹರಿಸುವುದು ಅಷ್ಟು ಕಷ್ಟವೆ? ಅಥವಾ ಈ ಎರಡೂ ಕಚೇರಿಗಳು ಪರಸ್ಪರ ಮಾತು ಬಿಟ್ಟಿವೆಯೆ? "ಸಾಮಾನ್ಯವಾಗಿ" ಅನುಮತಿ ಬೇಕೆನ್ನುವ ಲೋಕೋಪಯೋಗಿ ಇಲಾಖೆ ತಾನಾಗಿಯೇ ಈ ವಿಷಯವನ್ನು ಪುರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಅದಿಲ್ಲವಾದರೆ ಸಾರ್ವಜನಿಕರಿಂದ ಪತ್ರ ಬಂದು, ವಿಷಯ ಗಮನಕ್ಕೆ ಬಂದ ಮೇಲೂ, ಏಳಲು ಕೂಡದವರ ಹಾಗೆ, ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ, ಆರಾಮವಾಗಿ  ಕೂತಲ್ಲೇ ಕೂತುಕೊಂಡು ನಿರ್ಲಿಪ್ತವಾಗಿರುವುದರ ರಹಸ್ಯವೇನು?
"ಕೊಳವೆಬಾವಿ ಕೊರೆಯಲು ಲೋಕೋಪಯೋಗಿ ಇಲಾಖೆಯ ಅನುಮತಿ ಅಗತ್ಯವಿಲ್ಲ" ಎಂದು ಮುಖ್ಯಾಧಿಕಾರಿಯವರು ಹೇಳುವುದಾದರೆ ಅದಕ್ಕೆ ಆಧಾರವಾದ ದಾಖಲೆಯನ್ನು ಅವರು ಸಾರ್ವಜನಿಕರ ಮುಂದಿಡಬೇಕು. "ಸಾಮಾನ್ಯವಾಗಿ" ಎಂಬ ಪದ ಇಟ್ಟು, ಜಾರಿಕೊಳ್ಳಲು ಪ್ರಯತ್ನಿಸುತ್ತಿರುವ ಲೋಕೋಪಯೋಗಿ ಇಲಾಖೆ, ಕೊಳವೆ ಬಾವಿ ತೆಗೆಯಲು ಅನುಮತಿ ಬೇಕೇ ಬೇಡವೇ ಎಂಬುದನ್ನು ಖಚಿತವಾಗಿ ಹೇಳಬೇಕು.