ಕಳೆದ ವರ್ಷದ (2010) ಕರ್ನಾಟಕ ಸರ್ಕಾರದ ಬಜೆಟ್ಟಿನಲ್ಲಿ ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರನ್ನು ತಿರುಗಿಸುವ ಯೋಜನೆಯ ಪ್ರಸ್ತಾವವಿತ್ತು. ಈವರೆಗೂ ನೇತ್ರಾವತಿಯನ್ನು ತಿರುಗಿಸುವ ಮಾತಾಡುತ್ತಿದ್ದವರು ಈಗ ಎತ್ತಿನಹೊಳೆ ತಿರುಗಿಸುವ ಬಗ್ಗೆ ಮಾತಾಡಲು ಶುರು ಮಾಡಿದ್ದರು. ಬಜೆಟ್ಟಿನಲ್ಲಿ ಹುಡುಕಿ ನೋಡಿದಾಗ ಅಲ್ಲಿ ಹೀಗಿತ್ತು:
"107) ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. ಎ. ಮೂಲಕ ಈಗಾಗಲೇ ಪೂರ್ಣಗೊಂಡಿದೆ. ಪರಿಸರಕ್ಕೆ ಹಾನಿಯಾಗದಂತೆ ಹಂತ ಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಇದಕ್ಕಾಗಿ ಎತ್ತಿನಹೊಳೆ ನಾಲೆಯಿಂದ ನೀರನ್ನು ಪಡೆಯಲಾಗುವುದು. ಈ ಯೋಜನೆಯನ್ನು ಪರಿಣಿತ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡಲು ಈ ವರ್ಷದಲ್ಲಿ ಪ್ರಾರಂಭಿಕವಾಗಿ ಇನ್ನೂರು ಕೋಟಿ ರೂ.ಗಳನ್ನು ನೀಡಲಾಗಿದೆ."
ಈ ಯೋಜನೆಯ ಮಾಹಿತಿ ಕೇಳಿ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮಕ್ಕೆ ಅರ್ಜಿ ಹಾಕಿದೆ. ಬೆಂಗಳೂರಿನವರು ಅದನ್ನು ಚಿತ್ರದುರ್ಗದ ಕನೀನಿನಿಗೆ ಕಳಿಸಿದರು. ಅಂತೂ ನನಗೆ ಶಿರಾದ ಕನೀನಿನಿಯವರಿಂದ ಮಾಹಿತಿ ಶುಲ್ಕ ಕಳಿಸಲು ಪತ್ರ ಬಂತು. ಅಲ್ಲಿಂದ ಬಂದ ಮಾಹಿತಿಯಲ್ಲಿ ವಿವರಣೆಯೊಂದಿಗೆ ಕೋಷ್ಟಕಗಳು, ನಕ್ಷೆಗಳು ಎಲ್ಲವೂ ಇವೆ. ಈ ಸಾಧ್ಯತಾ ವರದಿಯನ್ನು ತಯಾರಿಸಿದವರು ಬೆಂಗಳೂರಿನ ಇ ಐ ಟೆಕ್ನಾಲಜೀಸ್ ಪ್ರೈವೇಟ್ ಲಿ. ಎಂಬ ಸಂಸ್ಥೆ. ಮುಂದೆ ವರದಿಯ ಪ್ರಸ್ತುತವಾದ ಭಾಗವನ್ನು ಮಾತ್ರ ಅನುವಾದಿಸಿ ಕೊಟ್ಟಿದ್ದೇನೆ:
ಪಶ್ಚಿಮದ ಸಕಲೇಶಪುರದಿಂದ ಪೂರ್ವದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೆರೆನೀರನ್ನು ತಿರುಗಿಸುವ ಯೋಜನೆ
ಕರ್ನಾಟಕವು ವಿಸ್ತಾರದಲ್ಲಿ ದೇಶದ ಎಂಟನೇ ರಾಜ್ಯ. ಅದರ ವಿಸ್ತಾರ 1,91,976 ಚ.ಕಿ.ಮೀ.ಗಳು. (ಒಂದು ಚದರ ಕಿಲೋ ಮೀಟರ್ ಎಂದರೆ ಸುಮಾರು 247 ಎಕ್ರೆ-ಅನು.) 2001ರ ಜನಗಣತಿಯಂತೆ ರಾಜ್ಯದ ಜನಸಂಖ್ಯೆ ಐದು ಕೋಟಿ ಇಪ್ಪತ್ತೆಂಟು ಲಕ್ಷ. (2011ರ ಜನಗಣತಿಯಂತೆ ಇದು ಆರು ಕೋಟಿ ಹನ್ನೊಂದು ಲಕ್ಷ-ಅನು.) ರಾಜ್ಯದ ಮುಖ್ಯ ನದಿಗಳು ವರ್ಷಪೂರ್ತಿ ಹರಿಯುವ ಕೃಷ್ಣಾ, ತುಂಗಾ, ಭದ್ರಾ, ಕಾವೇರಿ ಹಾಗೂ ಹದಿಮೂರು ಪಶ್ಚಿಮ ವಾಹಿನಿ ನದಿಗಳು. (ಪಶ್ಚಿಮವಾಹಿನಿಗಳೆಂದರೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಇಳಿದು, ಅರಬೀ ಸಮುದ್ರ ಸೇರುವ ನದಿಗಳು. ಉದಾ: ನೇತ್ರಾವತಿ, ಶರಾವತಿ, ಅಘನಾಶಿನಿ ಮುಂತಾದವು-ಅನು.) ರಾಜ್ಯದ ಪೂರ್ವ ಹಾಗೂ ಮಧ್ಯಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಅತಿ ಕಡಿಮೆ ಎಂದರೆ ವರ್ಷಕ್ಕೆ 400 ಮಿ.ಮೀ.ಗಳಾದರೆ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇದು ವರ್ಷಕ್ಕೆ 6500 ಮಿ.ಮೀ.ವರೆಗೂ ಇದೆ. ಈ ಮಳೆಯ ಪ್ರಮಾಣ ಸಹ ನಂಬಿಕೆಗೆ ಅರ್ಹವಾದದ್ದಲ್ಲ. ಅನೇಕ ಜಿಲ್ಲೆಗಳು, ತಾಲೂಕುಗಳು ಕೇವಲ ಮಳೆನೆರಳಿನ ಪ್ರದೇಶಗಳಾಗಿವೆ. ಇಂಥ ಕಡೆ ನೀರಿನ ತೀವ್ರ ಅಭಾವವಿದೆ. ಈ ಭಾಗಗಳಿಗೆ, ಕೃಷಿಗೆ ಬಿಡಿ, ಕುಡಿಯಲು ನೀರಿನ ವ್ಯವಸ್ಥೆ ಮಾಡುವುದೂ ಒಂದು ದೊಡ್ಡ ಸವಾಲೇ ಸರಿ.
ಕೈಗಾರಿಕೀಕರಣ ಮತ್ತು ನಗರೀಕರಣಗಳು ನೀರಿನ ಬೇಡಿಕೆಯ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಮಾಡುತ್ತವೆ. ಇದರಿಂದಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಕೇವಲ ನದಿಗಳ ನೀರನ್ನು ಅವಲಂಬಿಸಿಕೊಂಡು ಬದುಕುವುದು ಈ ಭಾಗದ ಜನರಿಗೆ ಕ್ರಮೇಣ ಅಸಾಧ್ಯವಾಯಿತು, ಅವರು ಅನಿವಾರ್ಯವಾಗಿ ಅಂತರ್ಜಲದ ಬಳಕೆಯ ಕಡೆಗೆ ತಿರುಗಿದರು. ಅಗಾಧಪ್ರಮಾಣದಲ್ಲಿ ಅಂತರ್ಜಲಕ್ಕೆ ಕನ್ನ ಹಾಕಿದ್ದರಿಂದಾಗಿ ಹೆಚ್ಚಿನ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯಿತು. ನೀರಿನ ಗುಣಮಟ್ಟವೂ ಸಹ ಕಡಿಮೆಯಾಯಿತು.
ಈ ದೃಷ್ಟಿಯಿಂದ, ದಕ್ಷಿಣ ಕರ್ನಾಟಕದಲ್ಲಿ ಅತ್ಯಂತ ಹಾನಿಗೊಳಗಾದ ಪ್ರದೇಶಗಳೆಂದರೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು. ಕರ್ನಾಟಕ ಸರ್ಕಾರವು ಈ ಎರಡು ಜಿಲ್ಲೆಗಳ ನೀರಿನ ಅಗತ್ಯವನ್ನು ಪೂರೈಸಲು ಸೂಕ್ತವೂ, ಸುಸ್ಥಿರವೂ ಆದ ನೀರಿನ ಮೂಲವನ್ನು ಗುರುತಿಸುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ನಿರ್ದೇಶನ ನೀಡಿತು.
ಕರ್ನಾಟಕ ನೀರಾವರಿ ನಿಗಮವು ಇ ಐ ಟೆಕ್ನಾಲಜೀಸ್ ಲಿ., ಬೆಂಗಳೂರು ಇವರಿಗೆ, ಈ ಬಗ್ಗೆ ಒಂದು ಸಾಧ್ಯತಾ ಅಧ್ಯಯನ ಮಾಡಿ, ನೀರಿನ ಮೂಲವನ್ನು ಗುರುತಿಸುವ, ಯೋಜನೆಗೆ ಒಂದು ಪೂರ್ವಭಾವಿ ಚೌಕಟ್ಟನ್ನು ಒದಗಿಸುವ, ಹೆಚ್ಚಿನ ಅಧ್ಯಯನದ ಖರ್ಚನ್ನು ಅಂದಾಜು ಮಾಡುವ ಮುಂತಾದ ಕೆಲಸಗಳನ್ನು ವಹಿಸಿಕೊಟ್ಟಿತು.
1. ಸ್ಥಳ:ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಕರ್ನಾಟಕದ ದಕ್ಷಿಣಪೂರ್ವ ಭಾಗದಲ್ಲಿವೆ. ಇವು ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಗಡಿಗಳನ್ನು ಹಂಚಿಕೊಂಡಿವೆ. ಈ ಎರಡೂ ಜಿಲ್ಲೆಗಳು ಕಾವೇರಿ, ಪಾಲಾರ್ ಹಾಗೂ ಪೆನ್ನಾರ್ ನದಿಗಳ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿವೆ. ಈ ಜಿಲ್ಲೆಗಳಿಗೆ ಕಾವೇರಿ ನದಿಯಿಂದ ನೀರು ಪೂರೈಸುವ ಯಾವ ಯೋಜನೆಯೂ ಇಲ್ಲ. ಏಕೆಂದರೆ ಕಾವೇರಿಯ ನೀರು ನೀರಾವರಿ ಹಾಗೂ ದಿನದಿನವೂ ಬೆಳೆಯುತ್ತಿರುವ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಮೀಸಲಾಗಿದೆ.
ಸಮಸ್ಯೆಯ ಪರಿಹಾರಕ್ಕೆ ಅನೇಕ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿಯೇ ಇರುವ, ನಂಬಲರ್ಹವೂ, ಸುಸ್ಥಿರವೂ ಆದ ನೀರಿನ ಮೂಲವೆಂದರೆ ಪಶ್ಚಿಮ ವಾಹಿನಿ ನದಿಗಳು. ಆದ್ದರಿಂದ ಅಲ್ಲಿಂದ ನೀರನ್ನು ಸಾಗಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ.
2. ಪಶ್ಚಿಮ ವಾಹಿನಿ ನದಿಗಳು:ಕರ್ನಾಟಕದ ಎಲ್ಲ ನದಿಗಳಿಂದ ದೊರೆಯುವ ವಾರ್ಷಿಕ ನೀರಿನ ಪ್ರಮಾಣ 3440 ಟಿಎಂಸಿ (ಟಿಎಂಸಿ ಎನ್ನುವುದನ್ನು ಯಾವಾಗಲೂ ಟಿಎಂಸಿ ಅಡಿ ಅಥವಾ ಟಿಎಂಸಿ ಮೀಟರುಗಳಲ್ಲಿ ಹೇಳಬೇಕು. ಒಂದು ಟಿಎಂಸಿ ಅಡಿ ಎಂದರೆ ಸಾವಿರ ದಶಲಕ್ಷ ಘನ ಅಡಿ ನೀರು ಎಂದರ್ಥ. ಒಂದು ಘನ ಅಡಿ ಎಂದರೆ 28 ಲೀಟರ್ ನೀರು. ಇಲ್ಲಿ ಟಿಎಂಸಿ ಅಡಿ ಎಂದು ಇಟ್ಟುಕೊಳ್ಳಲಾಗಿದೆ.-ಅನು.) ಈ ಪೈಕಿ ಪಶ್ಚಿಮವಾಹಿನಿ ನದಿಗಳದೇ ಸಿಂಹಪಾಲು: 2000 ಟಿಎಂಸಿ ಅಡಿ. ಕಿರಿದಾದ ಸಮುದ್ರತೀರದಲ್ಲಿ ಈ ನದಿಗಳು ಹರಿಯುವುದರಿಂದ, ಇದರ ಹೆಚ್ಚಿನ ಭಾಗ ಯಾವುದೇ ಉಪಯೋಗವಿಲ್ಲದೆ ಸಮುದ್ರವನ್ನು ಸೇರುತ್ತಿದೆ.
ಪಶ್ಚಿಮ ಘಟ್ಟಗಳ ಎತ್ತರವು ಒಡ್ಡುವ ಸವಾಲಿನಿಂದಾಗಿ, ಈ ನೀರನ್ನು ಉಪಯುಕ್ತವಾಗುವಂತೆ ಬಳಸಿಕೊಳ್ಳುವುದು ತಾಂತ್ರಿಕವಾಗಿಯಾಗಲಿ, ಆರ್ಥಿಕವಾಗಿಯಾಗಲಿ ಸಾಧ್ಯವಲ್ಲ. ಹೀಗಾಗಿ ಇಲ್ಲಿ ಪಶ್ಚಿಮ ಘಟ್ಟಗಳ ಎತ್ತರ ಪ್ರದೇಶದಿಂದ ಕೇವಲ ಶೇ. 0.54 ಭಾಗ ನೀರನ್ನು ಮಾತ್ರ ಪೂರ್ವಕ್ಕೆ ತಿರುಗಿಸಲು ಯೋಜಿಸಲಾಗಿದೆ.
ಪಶ್ಚಿಮದಿಂದ ಪೂರ್ವಕ್ಕೆ ನೀರನ್ನು ಸಾಗಿಸುವ ಈ ಯೋಜನೆಯು ಅತ್ಯಂತ ವಿಶಿಷ್ವವಾದುದು. ಏಕೆಂದರೆ, ಅತ್ಯಂತ ಕಡಿಮೆ ಅವಧಿಯಲ್ಲಿ, ಬಹು ದೊಡ್ದ ಪ್ರಮಾಣದ ನೀರನ್ನು ಅತಿ ಎತ್ತರಕ್ಕೆ ಪಂಪ್ ಮಾಡುವ ಮೂಲಕ ಅಥವಾ ದೀರ್ಘ ಸುರಂಗಗಳ ಮೂಲಕ ಸಾಗಿಸಲು ಇಲ್ಲಿ ಉದ್ದೇಶಿಸಿದೆ.
ಈ ಯೋಜನೆಯಿಂದ ನೀರು ಪಡೆಯಲಿರುವ ಪ್ರದೇಶಗಳು ಅತ್ಯಂತ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿವೆ. ಕೂಡಲೇ ನೀರಿನ ಸರಬರಾಜಿಗೆ ವ್ಯವಸ್ಥೆ ಮಾಡದಿದ್ದರೆ, ಈ ಪ್ರದೇಶಗಳು ಬರದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇತ್ತ ಪಶ್ಚಿಮ ಘಟ್ಟಗಳು ಅತ್ಯಂತ ಮುಖ್ಯವೂ, ಪರಿಸರದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವೂ ಆದ ಪ್ರದೇಶಗಳಾಗಿವೆ. ಅಲ್ಲಿಂದ ಸಂಪೂರ್ಣ ನೀರನ್ನು ತಿರುಗಿಸಿದಲ್ಲಿ ಪರಿಸರದ ಸಮತೋಲನ ತಪ್ಪಬಹುದಾಗಿದೆ. ಪ್ರಸಕ್ತ ಯೋಜನೆಯನ್ನು ಪಶ್ಚಿಮ ಘಟ್ಟಗಳಲ್ಲಿ ದೊರೆಯುವ ನೀರಿನ ಪ್ರಮಾಣದ ಕೇವಲ ಶೇ.0.54 ರಷ್ಟನ್ನು ಮಾತ್ರ, ಯಾವ ನೆಚ್ಚಬಹುದಾದ ನೀರಿನ ಮೂಲವೂ ಇಲ್ಲದ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಬಳಸಿಕೊಳ್ಳಲು ಅತ್ಯಂತ ಎಚ್ಚರಿಕೆಯಿಂದ ರೂಪಿಸಲಾಗಿದೆ. ಟ್ರಿಬ್ಯುನಲ್ ಹಾಗೂ ಇತರ ಅಡ್ಡಿಗಳಿರುವುದರಿಂದ, ಈ ಪ್ರದೇಶಕ್ಕೆ ಹತ್ತಿರದ ಇತರ ಯಾವುದೇ ನದಿಗಳ ನೀರನ್ನು ತರುವುದು ಸಾಧ್ಯವೇ ಇಲ್ಲ ಎಂಬುದನ್ನು ಗಮನಿಸಬೇಕು. ಇದೂ ಅಲ್ಲದೆ ಈ ಪ್ರದೇಶಗಳ ಅಂತರ್ಜಲ ಮಟ್ಟವು ಸಂಪೂರ್ಣವಾಗಿ ಪಾತಾಳಕ್ಕಿಳಿದಿದೆ.
ಆದ್ದರಿಂದ ಪಶ್ಚಿಮ ಘಟ್ಟಗಳ ಒಟ್ಟು ಇಳುವರಿಯ ಶೇ. 0.54 ಭಾಗ ನೀರನ್ನು ಬಳಸಿಕೊಳ್ಳುವ ಈ ಯೋಜನೆ, ಕರ್ನಾಟಕ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿದ್ದು, ಇದಕ್ಕೆ ಯಾವುದೇ ಟ್ರಿಬ್ಯುನಲ್ ಇತ್ಯಾದಿ ಅಡ್ಡಿಗಳಿಲ್ಲದ್ದರಿಂದ, ಇದನ್ನು ತಾಂತ್ರಿಕವಾಗಿ ಸಾಧ್ಯವಿರುವ ಯೋಜನೆ ಎಂದು ಪರಿಗಣಿಸಲಾಗಿದೆ.
ಯೋಜನೆಯ ವಿಶ್ಲೇಷಣೆ:ಸಾಧ್ಯತಾವರದಿಯ ಕೆಲವು ಅಂಶಗಳನ್ನು ಹೀಗೆ ವಿಶ್ಲೇಷಿಸಬಹುದು:
"ಹೀಗಾಗಿ ಕೇವಲ ನದಿಗಳ ನೀರನ್ನು ಅವಲಂಬಿಸಿಕೊಂಡು ಬದುಕುವುದು ಈ ಭಾಗದ ಜನರಿಗೆ ಕ್ರಮೇಣ ಅಸಾಧ್ಯವಾಯಿತು, ಅವರು ಅನಿವಾರ್ಯವಾಗಿ ಅಂತರ್ಜಲದ ಬಳಕೆಯ ಕಡೆಗೆ ತಿರುಗಿದರು".
ಈ ಭಾಗದಲ್ಲಿ ನದಿಗಳೇ ಇಲ್ಲ ಎಂದು ಹೇಳುವಂತಿಲ್ಲ. ಚಿಕ್ಕಬಳ್ಳಾಪುರ ನಂದಿಬೆಟ್ಟಕ್ಕೆ ಹತ್ತಿರದಲ್ಲಿದೆ. ಅಲ್ಲಿ ಹುಟ್ಟುವ ಅರ್ಕಾವತಿ ಚಿಕ್ಕಬಳ್ಳಾಪುರದ ಮೂಲಕವೇ ಹರಿಯುತ್ತದೆ. ಕೋಲಾರದಲ್ಲಿಯೂ ಪಾಲಾರ್, ಪೆನ್ನಾರ್ ಇತ್ಯಾದಿ ನದಿಗಳಿವೆ. ಆದರೆ, ಈ ಜಿಲ್ಲೆಗಳ ಜನರು ಹಿಂದಿನ ಕಾಲದಿಂದಲೂ ನೀರಿಗಾಗಿ ಮುಖ್ಯವಾಗಿ ಆಶ್ರಯಿಸಿದ್ದು ನದಿಗಳಿಗಿಂತ ಮುಖ್ಯವಾಗಿ ಕೆರೆಗಳನ್ನು. ಕೋಲಾರ ಜಿಲ್ಲೆಯಂತೂ ಕೆರೆಗಳಿಗೆ ಪ್ರಸಿದ್ಧವಾಗಿದೆ. ಹೀಗಿದ್ದೂ ಸಹ ಕೆರೆಗಳ ಸುದ್ದಿಯನ್ನೇ ತೆಗೆಯದೆ, ನೀರಿನ ಸಮಸ್ಯೆಯ ಮೂಲವನ್ನು ಗುರುತಿಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಈ ಜಿಲ್ಲೆಗಳ ಕೆರೆಗಳ ಕಥೆ ಏನಾಗಿದೆ? 1970 ರ ನಂತರದ ದಶಕಗಳಲ್ಲಿ ಬೋರ್ ವೆಲ್ ಗಳ ಸಂಖ್ಯೆ ಕೋಲಾರ ಜಿಲ್ಲೆಯಲ್ಲಂತೂ ಅಗಾಧವಾಗಿ ಹೆಚ್ಚಿದೆ. ಚಿಕ್ಕಬಳ್ಳಾಪುರದಲ್ಲಿಯೂ ಇದೇ ಸ್ಥಿತಿ ಎಂದುಕೊಂಡಿದ್ದೇನೆ. ಕೆರೆಗಳನ್ನೂ, ಅವುಗಳ ನಿರ್ವಹಣಾ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇ ಸಮಸ್ಯೆಗೆ ಕಾರಣವಿರಬಹುದೆ? ಈ ನಿಟ್ಟಿನಲ್ಲಿ ಅಧ್ಯಯನ ಮಾಡಿದಲ್ಲಿ ಸಮಸ್ಯೆಗೆ ಬೇರೆಯೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು.
"ಕೈಗಾರಿಕೀಕರಣ ಮತ್ತು ನಗರೀಕರಣಗಳು ನೀರಿನ ಬೇಡಿಕೆಯ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಮಾಡುತ್ತವೆ. ಇದರಿಂದಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ".
ವರದಿಯು ನೀರಿನ ಸಮಸ್ಯೆಯ ಮೂಲವನ್ನು ಅತ್ಯಂತ ನಿಖರವಾಗಿ ಗುರುತಿಸಿದೆ. ದುರದೃಷ್ಟವಶಾತ್ ಅದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಲು ಅದು ತಯಾರಿಲ್ಲ. ಕೈಗಾರಿಕೀಕರಣ ಹಾಗೂ ನಗರೀಕರಣಗಳೇ ನೀರಿನ ಸಮಸ್ಯೆಯ ಮೂಲ ಎನ್ನುವುದಾದರೆ, ಒಂದು ಕಡೆ ನೀರನ್ನೂ ಮತ್ತೊಂದು ಕಡೆ ಕೈಗಾರಿಕೀಕರಣ ಹಾಗೂ ನಗರೀಕರಣವನ್ನೂ ಇಟ್ಟು, ಈ ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ. ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗೆ ಸಕಲೇಶಪುರದಲ್ಲಿ ಪರಿಹಾರ ಹುಡುಕುವುದು, ಹುಲಿ ತನ್ನ ಗಾಯಕ್ಕೆ ಮದ್ದು ಮಾಡಿಕೊಂಡ ಹಾಗೆಯೇ.
ಸಮಸ್ಯೆಯ ಪರಿಹಾರಕ್ಕೆ ಅನೇಕ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ:
ಯಾವ ಯಾವ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ ಎಂದು ತಿಳಿಸಲಾಗಿಲ್ಲ. ವರದಿ ತಯಾರಿಸುವಾಗ, ಅಧ್ಯಯನ ಮಾಡಿದ ಎಲ್ಲ ಸಾಧ್ಯತೆಗಳನ್ನೂ ನಮೂದಿಸಿ ಅವುಗಳ ಪೈಕಿ ಯಾವುದಾದರೊಂದನ್ನು ಆರಿಸಿಕೊಂಡದ್ದಕ್ಕೆ ಮತ್ತು ಉಳಿದವನ್ನು ಕೈ ಬಿಟ್ಟಿದ್ದಕ್ಕೆ ಸಕಾರಣ ವಿವರಣೆ ನೀಡುವುದು ಅಗತ್ಯ. ಹಾಗೆ ಮಾಡದಿದ್ದರೆ ವರದಿ ಅಪೂರ್ಣವಾದಂತೆ.
"ಅಲ್ಲಿಂದ ಸಂಪೂರ್ಣ ನೀರನ್ನು ತಿರುಗಿಸಿದಲ್ಲಿ ಪರಿಸರದ ಸಮತೋಲನ ತಪ್ಪಬಹುದಾಗಿದೆ."
ಸಾಧ್ಯತಾವರದಿ ತಯಾರಿಸಿದವರು ಪಶ್ಚಿಮ ಘಟ್ಟದ ಬಗ್ಗೆ ಆದಷ್ಟೂ ಎಚ್ಚರಿಕೆ ವಹಿಸಿದ್ದಾರೆ. ಆದರೆ ಕರ್ನಾಟಕ ಸರ್ಕಾರ ತನ್ನ ಬಜೆಟ್ಟಿನಲ್ಲಿ ಹೇಳಿರುವುದನ್ನು ನೋಡಿ: "ಪರಿಸರಕ್ಕೆ ಹಾನಿಯಾಗದಂತೆ ಹಂತ ಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು." "ಮೊದಲ ಹಂತದಲ್ಲಿ ಇದಕ್ಕಾಗಿ ಎತ್ತಿನಹೊಳೆ ನಾಲೆಯಿಂದ ನೀರನ್ನು ಪಡೆಯಲಾಗುವುದು. ಈ ಯೋಜನೆಯನ್ನು ಪರಿಣಿತ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡಲು ಈ ವರ್ಷದಲ್ಲಿ ಪ್ರಾರಂಭಿಕವಾಗಿ ಇನ್ನೂರು ಕೋಟಿ ರೂ.ಗಳನ್ನು ನೀಡಲಾಗಿದೆ."
*****************
ಮೊನ್ನೆ - ಆಶೋಕವರ್ಧನ್, ನಿರೇನ್ ಜೈನ್, ನಾನು ಮುಂತಾಗಿ ಹತ್ತು ಜನ - ಈ ಯೋಜನಾಸ್ಥಳಕ್ಕೆ ಹೋಗಿ ಬಂದೆವು.
ಸಕಲೇಶಪುರದಿಂದ ಗುಂಡ್ಯಕ್ಕೆ ಬರುವ ರಸ್ತೆಯಲ್ಲಿ ಮಾರೇನಹಳ್ಳಿ ಸಿಕ್ಕುತ್ತದೆ. ಇಲ್ಲಿ ಬಲಕ್ಕೆ ಒಂದು ರಸ್ತೆ ತಿರುಗುತ್ತದೆ. ಅದರಲ್ಲಿ ಹೋದರೆ, ಅಲ್ಸರ್ಮನೆ, ಗುಡಾಣಕೆರೆ, ಕಾಡಮನೆ ಎಸ್ಟೇಟ್ ಮುಂತಾದ ಪ್ರದೇಶಗಳಿಗೆ ಹೋಗಬಹುದು. ( ಈ ಪ್ರವಾಸದ ಬಗ್ಗೆ ಅಶೋಕವರ್ಧನರು ತಮ್ಮ ಎಂದಿನ "ನಾರೀಕೇಳ ಶೈಲಿ"ಯಲ್ಲಿ ಲೇಖನ ಬರೆಯುತ್ತಾರೆ ಎಂದು ಹಾರೈಸುತ್ತೇನೆ!). ಎತ್ತಿನ ಹೊಳೆಯೂ, ಅದರ ಎರಡು ಚಿಕ್ಕ ಉಪನದಿಗಳೂ ಸುಮಾರಿಗೆ ಇದೇ ಪ್ರದೇಶದಲ್ಲಿ ಹುಟ್ಟಿ ಹರಿಯುತ್ತವೆ.(ಇವೇ ಮುಂದೆ ಒಟ್ಟಾಗಿ ಕೆಂಪುಹೊಳೆ, ಗುಂಡ್ಯ ಹೊಳೆ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಇದು ಕುಮಾರಧಾರೆಯ ಉಪನದಿ. ಧರ್ಮಸ್ಥಳದ ಮೂಲಕ ಹರಿಯುವ ನೇತ್ರಾವತಿಯ ಉಪನದಿಯಲ್ಲ. ನೇತ್ರಾವತಿಗೆ ಇದು ಸೇರುವುದು ಉಪ್ಪಿನಂಗಡಿಯಲ್ಲಿ.) ಒಟ್ಟು ಮೂರು ಅಣೆಕಟ್ಟುಗಳನ್ನು ನಿರ್ಮಿಸಿ ಎತ್ತಿನಹೊಳೆಯಿಂದ ನೀರೆತ್ತುವ ಯೋಜನೆ ಕಾರ್ಯಗತ ಮಾಡುವ ಉದ್ದೇಶ ಇರುವುದು ಈ ಪ್ರದೇಶದಲ್ಲಿಯೇ.
ಅಲ್ಲೆಲ್ಲ ತಿರುಗಾಡಲು ನಮ್ಮ ಜೊತೆ ಬಂದಿದ್ದ ಸ್ಥಳೀಯರಾದ ಹೇಮಂತಕುಮಾರ್ ಹೇಳಿದರು: "ಆ ಕಡೆ ನಮ್ಮ ತೋಟ ಇದೆ. ನಾನು ಅಲ್ಲಿ ಹೋಗುವುದನ್ನೇ ಬಿಟ್ಟಿದ್ದೇನೆ. ಆನೆ ಬರ್ತಾವೆ ಮಾರಾಯ್ರೆ. ಹೆದ್ರಿಕೆ ಆಗ್ತದೆ."
(ಆನೆ ಮರಕ್ಕೆ ಬೆನ್ನು ತಿಕ್ಕಿದ್ದರ ಗುರುತು.-ಅಶೋಕವರ್ಧನರ ಫೋಟೋ.)
ಅಂದರೆ ಈ ಪ್ರದೇಶದಲ್ಲಿ ಯೋಜನೆ ಕಾರ್ಯಗತವಾದರೆ ಅಲ್ಲಿರುವ ಆನೆಗಳು ಬೇರೆ ಜಾಗ ನೋಡಿಕೊಳ್ಳಬೇಕು. "ತೊಂದರೆ ಇಲ್ಲಪ್ಪ, ಹತ್ತಿರವೇ ಸಕಲೇಶಪುರ ಇದೆ, ಅಲ್ಲಿಗೆ ಬಂದು ಇರ್ತಾವೆ. ಮೊನ್ನೆ ಮೈಸೂರಿಗೆ ಬಂದಿದ್ದವಲ್ಲ ಹಾಗೇ" ಅಂದಾರು ನಮ್ಮ ಯೋಜನಾಕರ್ತರು. ಆದರೆ ಸಕಲೇಶಪುರದ ಜನ ಇದಕ್ಕೆ ಒಪ್ಪಿಗೆ ಕೊಡುತ್ತಾರೋ ಗೊತ್ತಿಲ್ಲ!
******************
"ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. ಎ. ಮೂಲಕ ಈಗಾಗಲೇ ಪೂರ್ಣಗೊಂಡಿದೆ" ಎಂದು ಬಜೆಟ್ಟಿನಲ್ಲಿ ಹೇಳಿದೆಯಷ್ಟೆ. ಈ ಮಾಹಿತಿಯನ್ನು ನೀಡುವಂತೆ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗೆ ಅರ್ಜಿ ಕೊಟ್ಟಿದ್ದೆ. ಅಲ್ಲಿಂದ ಬಂದ ಉತ್ತರ ಹೀಗಿದೆ:
"ಮೆ. ಎನ್. ಆರ್.ಎಸ್.ಸಿ. (ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್) ಸಂಸ್ಥೆಗೆ ಸರ್ವೆ ಸಮೀಕ್ಷೆ ಮತ್ತು ವಿವರವಾದ ಯೋಜನಾ ವರದಿಯ ತಯಾರಿಕೆ ಕಾರ್ಯವನ್ನು ಕೈಗೊಳ್ಳಲು ವಹಿಸಿಕೊಡಲಾಗಿತ್ತು. ಆದರೆ ಮೆ. ಎನ್. ಆರ್. ಎಸ್. ಸಿ.ರವರು ALTM ಸರ್ವೆ ಮಾಡಿ ಅದರ ಕಚ್ಚಾ ಮಾಹಿತಿಯನ್ನು ಸಲ್ಲಿಸಿದ್ದು, ವಿವರವಾದ ಯೋಜನಾವರದಿಯನ್ನು (DPR) ತಯಾರು ಮಾಡಲು ಸಾಧ್ಯವಿಲ್ಲವೆಂದು ತಿಳಿಸಿರುವುದರಿಂದ DPR ನ್ನು ಬೇರೆ ಸಂಸ್ಥೆಯಿಂದ ತಯಾರಿಸಲು ಕ್ರಮ ಜರುಗಿಸಲಾಗುತ್ತಿದೆ.
ಸದರಿ ಯೋಜನೆಯ ಮಾಲಾ ಕಾಲುವೆಗಳಿಗೆ ಸಂಬಂಧಿಸಿದಂತೆ ಮೆ: ಎನ್. ಆರ್. ಎಸ್. ಸಿ. ಸಂಸ್ಥೆ, ಹೈದ್ರಾಬಾದ್ ಇವರು ALTM ಸರ್ವೆ ಕೈಗೊಂಡು ಸರ್ವೆಯ ಕಚ್ಚಾ ಮಾಹಿತಿಯನ್ನು ಕೆಲವೊಂದು ಸಾಫ್ಟ್ ವೇರಿನಲ್ಲಿ ಮಾತ್ರ ವೀಕ್ಷಿಸಬಹುದಾದಂತಹ ರೂಪದ (Format ನಲ್ಲಿ) ತಾಂತ್ರಿಕ ಮಾಹಿತಿಯನ್ನು ನೀಡಿರುತ್ತಾರೆ. ಈ ಮಾಹಿತಿಯನ್ನು ಸಂಸ್ಕರಿಸಿ ಸದರಿ ಯೋಜನೆಯ ವಿವರವಾದ ಯೋಜನಾವರದಿಯನ್ನು ತಯಾರಿಸಲು ಹಾಗೂ ಸೇವಾ ಕಾಲುವೆಯ ಸರ್ವೆ ಕಾರ್ಯವನ್ನು ಕೈಗೊಳ್ಳಲು ಕ್ರಮ ಜರುಗಿಸಲಾಗುತ್ತಿದೆ. ಮೆ: ಎನ್. ಆರ್. ಎಸ್. ಸಿ. ಸಂಸ್ಥೆಯವರು ಯೋಜನೆಯ ಯಾವುದೇ ಸಂಪೂರ್ಣ ವರದಿಯನ್ನು ನೀಡಿರುವುದಿಲ್ಲ"
ಇದರ ಅರ್ಥ ಸ್ಪಷ್ಟ: ಶ್ರೀ ಪರಮಶಿವಯ್ಯನವರ ವರದಿಯನ್ನು ಆಧರಿಸಿದ ಯೋಜನೆ ಸರಕಾರಿ ವೇಗದಲ್ಲಿಯೇ ಆದರೂ ಮುಂದುವರಿಯುತ್ತಿದೆ. ಒಂದಲ್ಲ ಒಂದು ದಿನ ಅದು ಪಶ್ಚಿಮ ಘಟ್ಟಗಳ ಮೇಲೆ ಎರಗುವುದು ನಿಶ್ಚಿತ.
*****************
ಬಯಲುಸೀಮೆಯ ನೀರಿನ ಸಮಸ್ಯೆಗೆ ಪರಿಹಾರ ಏನು? "ಕಣಜ" (www.kanaja.in)ದಲ್ಲಿ ಪ್ರಕಟವಾಗಿರುವ ಶ್ರಿ ಮಲ್ಲಿಕಾರ್ಜುನ ಹೊಸಪಾಳ್ಯ ಇವರ ಲೇಖನವನ್ನು ಯಥಾವತ್ತಾಗಿ ಇಲ್ಲಿ ಕೊಟ್ಟಿದ್ದೇನೆ. "ಕಣಜ" ಹಾಗೂ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ ಇವರಿಗೆ ನಾನು ಆಭಾರಿ.
"ಜಲ ಜೀವನಿ" : ಸಾವಿರಾರು ಎಕರೆ ಒಣಭೂಮಿಗೆ ಆಸರೆಯಾದ ಕಿರು ಜಲಾನಯನ ಯೋಜನೆ:
ನಂದಿಹಳ್ಳಿಯ ರಂಗನಾಥ್ ತಮ್ಮ ಹೊಲದಲ್ಲಿದ್ದ ಸುಮಾರು 70 ಹುಣಸೆ ಮರಗಳನ್ನು ಕಡಿಸಿ ಹಾಕುವ ಯೋಚನೆ ಮಾಡುತ್ತಿದ್ದರು. ಎರಡು ವರ್ಷದ ಹಿಂದೆ ಇವರ ಹೊಲದಲ್ಲಿ 150 ಹುಣಸೆ ಮರಗಳಿದ್ದವು. ಎಲ್ಲಾ ಅವರ ತಂದೆಯ ಕಾಲದಲ್ಲಿ ನೆಟ್ಟವು. ಮುಂಚೆ ಉತ್ತಮ ಇಳುವರಿ ನೀಡುತ್ತಿದ್ದ ಅವು ಸ್ವಲ್ಪ ವರ್ಷಗಳಿಂದೀಚೆಗೆ ಮಂಕಾಗಿ ಎಲೆಗಳೆಲ್ಲಾ ಉದುರಿ ಬೋಳು-ಬೋಳಾಗಿ ನಿಂತಿದ್ದವು. ಫಸಲೇ ಬಿಡುತ್ತಿರಲಿಲ್ಲ, ಹಾಗಾಗಿ ರಂಗನಾಥ್ 2004 ರಲ್ಲಿ 70 ಗಿಡಗಳನ್ನು ಕಡಿಸಿ ಮಾರಿದ್ದರು. ಉಳಿದ ಗಿಡಗಳನ್ನು ಈ ವರ್ಷ ಮಾರಿ ಕೈತೊಳೆದುಕೊಳ್ಳಬೇಕೆಂಬುದು ಅವರ ಯೋಚನೆಯಾಗಿತ್ತು. ಅವರೊಬ್ಬರೇ ಅಲ್ಲದೆ ಅವರ ಗ್ರಾಮದ ಬಹುತೇಕ ರೈತರು ಇದೇ ಹಾದಿಯಲ್ಲಿದ್ದರು. ನಾಲ್ಕೈದು ವರ್ಷಗಳ ಹಿಂದೆ ಉತ್ತಮ ಇಳುವರಿ ನೀಡುತ್ತಿದ್ದ ಹುಣಸೆ ಮರಗಳು ಕ್ರಮೇಣ ಬರಲಾಗಿಹೋಗಿದ್ದವು. ಇದಕ್ಕೆ ಕಾರಣ ಮಳೆಯ ಪ್ರಮಾಣದ ಗಣನೀಯ ಕುಸಿತ. ಬತ್ತಿದ ಅಂತರ್ಜಲ, ಒಣಗಿದ ಕೊಳವೆ ಬಾವಿಗಳು, ಫಲವತ್ತಾದ ಮೇಲ್ಮಣ್ಣು ಸವಕಳಿಯಿಂದ ಬರಡಾದ ಭೂಮಿ. ಬರಕ್ಕೆ ತಡೆದುಕೊಳ್ಳುವ ಗುಣವುಳ್ಳ ಹುಣಸೆಯೇ ಒಣಗುವ ಹಂತಕ್ಕೆ ತಲುಪಿತೆಂದರೆ ಇನ್ನು ಅಡಿಕೆ, ತೆಂಗು ಮತ್ತು ಇತರ ಫಸಲುಗಳ ಸ್ಥಿತಿಯನ್ನು ಊಹಿಸಬಹುದು.
ಇವೆಲ್ಲವುಗಳ ಒಟ್ಟಾರೆ ಪರಿಣಾಮವಾಗಿ ಕೃಷಿ ಉತ್ಪಾದಕತೆಯಲ್ಲಿಯೂ ಇಳಿತ, ಜೀವನ ನಿರ್ವಹಣೆಗೆ ಕಂಟಕ. ಈ ನಷ್ಟವನ್ನು ತುಂಬಿಕೊಳ್ಳಲು ರೈತರು ಹುಣಸೆ ಗಿಡಗಳನ್ನು ಮಾರಿ ಜೀವನ ನಿರ್ವಹಿಸುವ ಮಟ್ಟಕ್ಕೆ ಹೋಗಿದ್ದರು. ಇದು 2005ನೇ ಇಸವಿಯ ಮುಕ್ತಾಯ ಮತ್ತು 2006ನೇ ಇಸವಿಯ ಆರಂಭ ಕಾಲದಲ್ಲಿದ್ದ ಪರಿಸ್ತಿತಿ. ರಂಗನಾಥ್ ತಮ್ಮ ಹುಣಸೆ ಮರಗಳನ್ನು ಕಡಿಯುವ ಯೋಚನೆ ಮಾಡುತ್ತಿದ್ದುದು ಇದೇ ಅವಧಿಯಲ್ಲಿ.
ಆದರೆ 2007ರ ಮುಕ್ತಾಯ ಮತ್ತು 2008 ರ ಆರಂಭ ಕಾಲಕ್ಕೆ ನಂದಿಹಳ್ಳಿಯ ಚಿತ್ರಣ ಸಂಪೂರ್ಣ ಬದಲು. ಈಗ ಅಲ್ಲಿ ಹುಣಸೆ ಮರಗಳು ಕೊಂಬೆ-ರೆಂಬೆಗಳಲ್ಲೆಲ್ಲಾ ಕಾಯಿ ತೂಗುತ್ತಾ ನಿಂತಿವೆ. ಸಂಪೂರ್ಣ ನಿಂತೇ ಹೋಗಿದ್ದ ಎಷ್ಟೋ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ಅಂತರ್ಜಲ ಮೇಲೇರಿದೆ. ಆಹಾರ ಬೆಳೆ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿ ಮಟ್ಟ ಹೆಚ್ಚಾಗಿದೆ.
ನಂದಿಹಳ್ಳಿಯ ರಂಗನಾಥ್ ಮತ್ತು ಅನೇಕ ರೈತರು ಹುಣಸೆ ಮರಗಳನ್ನು ಕಡಿದು ಮಾರಾಟ ಮಾಡಿದ್ದಕ್ಕಾಗಿ ಈಗ ಪೇಚಾಡುತ್ತಿದ್ದಾರೆ.
ಈ ಬದಲಾವಣೆಗೆ ಕಾರಣವಾದದ್ದು ಬರ್ಡ್-ಕೆ ಸಂಸ್ಥೆಯ "ಜಲ ಜೀವನಿ" ಯೋಜನೆ. ಕೇವಲ ಎರಡೂವರೆ ವರ್ಷದಲ್ಲಿ 11 ಹಳ್ಳಿಗಳ ಸಾವಿರಾರು ಕುಟುಂಬಗಳಲ್ಲಿ ಆತ್ಮ ವಿಶಾಸವನ್ನು ಮರಳಿಸಿದ ವಿಶಿಷ್ಟ ಯೋಜನೆ ಇದು. ಯೋಜನೆ ಅಡಿಯಲ್ಲಿ ಇಂದು ಎರಡೂವರೆ ಸಾವಿರ ಹೆಕ್ಟೇರ್ ಗೂ ಅಧಿಕ ಭೂಮಿಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯಾಗಿದೆ.
ಯೋಜನಾ ಪ್ರದೇಶ
ದಕ್ಷಿಣ ಕರ್ನಾಟಕ ವ್ಯಾಪ್ತಿಯ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹಾಲ್ದೊಡ್ಡೇರಿ ಕೆರೆ ಕಿರು ಜಲಾನಯನ ಪ್ರದೇಶವು ಬಹುತೇಕ ಒಣ ಭೂಮಿ. ಸದಾ ಬರಕ್ಕೆ ಎದೆಯೊಡ್ಡುವ ಪ್ರದೇಶ. ನಿಶ್ಚಿತ ಮಳೆ ಭರವಸೆ ಇಲ್ಲ. ವಾರ್ಷಿಕ ಸರಾಸರಿ ಮಳೆ ಕೇವಲ 443.8 ಮಿ.ಮೀ. ತುಮಕೂರು ಜಿಲ್ಲಾ ಕೇಂದ್ರದಿಂದ ಅಂದಾಜು 100 ಕಿ.ಮೀ. ದೂರದಲ್ಲಿದೆ. ಈ ಜಲಾನಯನ ಪ್ರದೇಶವು 2869.5 ಹೆಕ್ಟೇರ್ ವ್ಯಾಪ್ತಿಯಿದ್ದು 11 ಹಳ್ಳಿಗಳನ್ನೊಳಗೊಂಡಿದೆ. ಅವುಗಳೆಂದರೆ; ಗಿಡದಾಗಲಹಳ್ಳಿ, ಬೊರಾಗುಂಟೆ, ವೀರಣ್ಣನಹಳ್ಳಿ, ಕೆ.ಟಿ.ಹಳ್ಳಿ, ಸೀಬಿನಯನಪಾಳ್ಯ,(ಎಲ್ಲವೂ ಮಧುಗಿರಿ ತಾಲ್ಲೂಕು) ಕಬ್ಬಿಗೆರೆ, ಚಿಕ್ಕಣ್ಣನಹಳ್ಳಿ, ಅಜ್ಜೇನಹಳ್ಳಿ, ಮರಾಠಿಗರಪಾಳ್ಯ, (ಎಲ್ಲವೂ ಕೊರಟಗೆರೆ ತಾಲ್ಲೂಕು )ನಂದಿಹಳ್ಳಿ ಮತ್ತು ಬಿಸಾಡಿಹಳ್ಳಿ.(ತುಮಕೂರು ತಾಲ್ಲೂಕು.)
ಯೋಜನಾ ಪ್ರದೇಶದ ಆಯ್ಕೆಗೆ ಕಾರಣಗಳು.
ಬರ್ಡ್-ಕೆ ಸಂಸ್ಥೆಯು ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಇಲ್ಲಿದ್ದಂತಹ ಮಣ್ಣು ಮತ್ತು ನೀರಿನ ಸಮಸ್ಯೆಗಳು. ಅವುಗಳಲ್ಲಿ ಪ್ರಮುಖವಾದವುಗಳನ್ನು ನೋಡುವುದಾರೆ,
1. ವಿಪರೀತ ಮಣ್ಣಿನ ಸವಕಳಿ: ಈ ಪ್ರದೇಶದಲ್ಲಿ ವಿಪರೀತ ಮಣ್ಣು ಸವಕಳಿ ಸಮಸ್ಯೆಯಿಂದಾಗಿ ಮಣ್ಣಿನ ರಚನೆ ಹಾಳಾಗಿ ಅದರ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ ಕುಂಠಿತವಾಗಿತ್ತು. ಕೃಷಿಗೊಳಪಡುವ ಭೂಮಿಯು 60 ರಿಂದ 90 ಸೆಂಟಿಮೀಟರ್ ಆಳವಿದ್ದು ಮರಳು ಮಿಶ್ರಿತ ಕೆಂಪು ಮಣ್ಣಾಗಿದೆ. ಬಹುತೇಕ ಮಣ್ಣು ದ್ವಿತೀಯ ಮತ್ತು ತೃತೀಯ ದರ್ಜೆಯದಾಗಿರುವುದರಿಂದ ಇದರ ಸುಧಾರಣೆಗಾಗಿ ಹಲವಾರು ರೀತಿಯ ಉಪಚಾರಗಳ ಅವಶ್ಯಕತೆ ಇತ್ತು. ಮಣ್ಣು ಈ ರೀತಿ ಸಡಿಲವಾಗಿದ್ದುದರಿಂದ ಸಹಜವಾಗಿಯೇ ಸವಕಳಿಗೆ ತುತ್ತಾಗುತ್ತಿತ್ತು. ಜಲಾನಯನದ ಮೇಲ್ಬಾಗದಲ್ಲಿ ಮಣ್ಣು ಹಿಡಿದಿಡುವ ಗಿಡ-ಮರ, ಅಥವಾ ಹುಲ್ಲುಗಾವಲುಗಳು ಇಲ್ಲದಿರುವುದರಿಂದ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು.
2. ಸಾರವಿಲ್ಲದ ಮಣ್ಣು: ಫಲವತ್ತಾದ ಮೇಲ್ಮಣ್ಣು ವರ್ಷಗಟ್ಟಲೆ ಸವೆದು ಹೋಗಿ ಉಳಿದಂತಹ ಮಣ್ಣು ಹೆಚ್ಚು-ಕಡಿಮೆ ನಿರ್ಜೀವ ಹಂತ ತಲುಪಿತ್ತು. ಈ ಮಣ್ಣಿನಲ್ಲಿ ಯಾವ ಬೆಳೆ ಇಟ್ಟರೂ ಸರಿಯಾದ ಇಳುವರಿ ಬರುತ್ತಿರಲಿಲ್ಲ. ಅಲ್ಲದೆ ವಿಪರೀತ ರಾಸಾಯನಿಕಗಳ ಬಳಕೆ, ನೀರಾವರಿ ಸೌಲಭ್ಯಗಳ ಕೊರತೆ, ಅಸಮರ್ಪಕ ಬೆಳೆ ಪದ್ಧತಿಗಳೂ ಸಹ ಮಣ್ಣಿನ ಉತ್ಪಾದಕತೆ ಕುಂಠಿತವಾಗಲು ಕಾರಣಗಳಾಗಿದ್ದವು.
3. ನೀರಿನ ಕೊರತೆ: ಮತ್ತೊಂದು ಮುಖ್ಯ ಸಮಸ್ಯೆ ನೀರಿನ ಅಲಭ್ಯತೆ. ಕೃಷಿಗೆ ಮತ್ತು ಕುಡಿಯುವ ನೀರಿಗಾಗಿ ಜನರ ಪರದಾಟ ಹೇಳತೀರದಾಗಿತ್ತು. ಎಷ್ಟೋ ಕೊಳವೆ ಬಾವಿಗಳು ಒಣಗಿಹೋಗಿದ್ದರೆ, ಉಳಿದವು ಅಲ್ಪ-ಸ್ವಲ್ಪ ನೀರು ಹರಿಸುತ್ತಾ ಕುಟುಕು ಜೀವ ಉಳಿಸಿಕೊಂಡಿದ್ದವು. ಸದಾ ರಿಪೇರಿಗೆ ಬರುತ್ತಿದ್ದ ಅವುಗಳನ್ನು ನಿರ್ವಹಿಸುವುದೇ ರೈತರಿಗೆ ಕಷ್ಟವಾಗಿತ್ತು. ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರಿಗೆ ಕೊಳವೆ ಬಾವಿ ನೀರೇ ಅಸರೆ, ಆದರೆ ಅವುಗಳ ಸೂಕ್ತ ನಿರ್ವಹಣೆ ಇಲ್ಲದೆ ಸುರಕ್ಷಿತತೆ ಮತ್ತು ನೈರ್ಮಲ್ಯತೆಯೇ ಇಲ್ಲವಾಗಿತ್ತು.
4. ಕೃಷಿ ಕ್ಷೇತ್ರದ ಅವಗಣನೆ: ಮಣ್ಣಿನ ಸವಕಳಿಯಿಂದ ಕೃಷಿ ಉತ್ಪಾದಕತೆ ಒಂದೆಡೆ ಕಡಿಮೆಯಾಗಿದ್ದರೆ ಮತ್ತೊಂದೆಡೆ ಏಕ ಬೆಳೆ ಪದ್ಧತಿ ಅನುಸರಣೆ, ಕೀಟ-ರೋಗಗಳ ಹಾವಳಿ, ನೂತನ ತಾಂತ್ರಿಕತೆಗಳ ಬಗ್ಗೆ ಅಜ್ಞಾನ. ಮುಂತಾದವುಗಳಿಂದ ಕೃಷಿ ದುಬಾರಿಯಾಗಿತ್ತು. ಲಾಭಕ್ಕಿಂತ ಖರ್ಚೇ ಹೆಚ್ಚಾಗಿ ರೈತರು ಬೇಸಾಯದಿಂದ ವಿಮುಖರಾಗುವ ಮನಸ್ತಿತಿಯಲ್ಲಿದ್ದರು.
ಇವುಗಳಲ್ಲದೆ, ಬಡತನ, ಅಪೌಷ್ಠಿಕತೆ, ಜನರ ಸಾಮಾಜಿಕ-ಆರ್ಥಿಕ ಹಿನ್ನಡೆ, ನಿರುದ್ಯೋಗ, ಅರೆ ಉದ್ಯೋಗ ಮುಂತಾದ ಅನೇಕ ಸಮಸ್ಯೆಗಳು ಇಲ್ಲಿದ್ದುದರಿಂದ ಬರ್ಡ್-ಕೆ ಸಂಸ್ಥೆಯು "ಜಲ ಜೀವನಿ" ಯೋಜನೆಯನ್ನು ಹಮ್ಮಿಕೊಂಡಿತು.
ಮೇಲ್ಕಂಡ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೊಪಿಸಿ ರೈತರಲ್ಲಿ ಆತ್ಮ ವಿಶ್ವಾಸ ವೃದ್ಧಿಸಲು ಸಂಸ್ಥೆಯು ಹಲವಾರು ಚಟುವಟಿಕೆಗಳ ಮೂಲಕ ಕಾರ್ಯೋನ್ಮುಖವಾಯಿತು. ಈ ಚಟುವಟಿಕೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು.
1. ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ
2. ಸಮುದಾಯದ ಸಾಮಾಜಿಕ, ಆರ್ಥಿಕ ಮಟ್ಟದ ಅಭಿವೃದ್ಧಿ, ತರಬೇತಿ ಮತ್ತು ಸಂಘಟನೆ.ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ಮುಖ್ಯವಾಗಿ ಜಲ ಸಂಪನ್ಮೂಲಗಳನ್ನು ವೃದ್ಧಿಸಲು ಆದ್ಯತೆ ನೀಡಲಾಗಿದೆ. ಸ್ಥಳೀಯ ಪರಿಸ್ಥಿತಿಗೆ ಹೊಂದಿಕೆಯಾಗುವ ವಿಧಾನಗಳ ಅಳವಡಿಕೆ ಗಮನಿಸಬೇಕಾದ ಅಂಶ. ಪ್ರತಿಯೊಂದು ವಿಧಾನವೂ ಏಕಕಾಲಕ್ಕೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುವಂತಹವು. ಕೆಲವು ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ.
1. ಹರಿವ ನೀರನ್ನು ಕಟ್ಟಿಹಾಕುವ ಉದಿ-ಬದುಗಳು: ಮೊದಲೇ ಹೇಳಿದಂತೆ ಹಾಲ್ದೊಡ್ಡೇರಿ ಜಲಾನಯನ ಪ್ರದೇಶವು ಏರು-ತಗ್ಗುಗಳಿಂದ ಕೂಡಿದ್ದು ಬಹುತೇಕ ಎರಡು ಮತ್ತು ಮೂರನೇ ದರ್ಜೆಯ ಮಣ್ಣುಳ್ಳದ್ದಾಗಿದೆ. ವಿಪರ್ಯಾಸವೆಂದರೆ, ಬೇಸಾಯಕ್ಕೊಳಪಡುವ ಭೂಮಿಗೆ ಅತ್ಯಗತ್ಯವಾಗಿ ಬೇಕಾದ ಉದಿ-ಬದುಗಳೇ ಇಲ್ಲ. ಈ ಅಂಶವನ್ನು ಮನಗಂಡ ಸಂಸ್ಥೆ ಪ್ರತಿ ಹೆಕ್ಟೇರ್ ಗೆ 75 ಕ್ಯುಬಿಕ್ ಮೀಟರ್ ನಷ್ಟು ಉದಿ-ಬದು ಹಾಕಲು ತೀರ್ಮಾನಿಸಿತು. ಇಷ್ಟು ಅಳತೆಯಲ್ಲಿ ಪ್ರತಿ ಸಲ 1500 ಲೀಟರ್ ನೀರು ಸಂಗ್ರಹ ಸಾಧ್ಯ. ಮಣ್ಣು ಸವಕಳಿ ತಡೆಗೆ ಇದಕ್ಕಿಂತ ಉತ್ತಮ ವಿಧಾನ ಬೇರೊಂದಿಲ್ಲ ಎಂಬುದು ಕಬ್ಬಿಗೆರೆಯ ಹನುಮಂತಪ್ಪನವರ ಅನುಭವ. ಬದುಗಳ ಮೇಲೆ ಹೆಮಟ ಹುಲ್ಲನ್ನು ಬೆಳೆಯಲು ಯೋಜನೆಯಿಂದ ಉತ್ತೇಜನ ನೀಡಿರುವುದಲ್ಲದೆ ಬೀಜಗಳನ್ನೂ ಸಹ ಪೂರೈಸಲಾಗಿದೆ, ಇದರಿಂದ ಬದುಗಳು ಭದ್ರಗೊಳ್ಳುವುದಲ್ಲದೆ ರೈತರಿಗೆ ಉತ್ತಮ ಮೇವು ಲಭ್ಯವಾಗುತ್ತದೆ. ಅಲ್ಲದೆ ಈ ಬದುಗಳ ಮೇಲೆ ವಿವಿಧ ರೀತಿಯ ಕಾಡುಗಿಡಗಳನ್ನು ಬೆಳೆಸಲಾಗುತ್ತಿದೆ. ಯೋಜನೆಯು ಸಮುದಾಯ ಸಹಭಾಗಿತ್ವ ತತ್ವವನ್ನಾಧರಿಸಿದ್ದು ಈ ಉದಿ-ಬದು ಚಟುವಟಿಕೆಗೆ ಆಯಾ ಜಮೀನಿನ ಮಾಲೀಕರು ಶೇ 50 ರಷ್ಟು ವಂತಿಕೆ ಭರಿಸಬೇಕು, ಈ ನಿಯಮಕ್ಕೆ ಎಲ್ಲಾ ಹಳ್ಳಿಗಳ ರೈತರೂ ಅಕ್ಷರಶಃ ಒಪ್ಪಿರುವುದಲ್ಲದೆ ತಾವೇ ಖುದ್ದಾಗಿ ನಿಂತು ತಮ್ಮ-ತಮ್ಮ ಹೊಲಗಳಿಗೆ ಉದಿ-ಬದು ಹಾಕಿಸಿಕೊಂಡಿದ್ದಾರೆ.
2. ಇಂಗು ಹೊಂಡಗಳು: ಜಲಾನಯನ ಪ್ರದೇಶದಲ್ಲಿ ಪ್ರತಿ 2-3 ಹೆಕ್ಟೇರ್ ಗೆ ಒಂದರಂತೆ ಸರಣಿಯೋಪಾದಿಯಲ್ಲಿ ಇಂಗು ಹೊಂಡಗಳನ್ನು ತೆಗೆಯಲಾಗಿದೆ. ಉದಿ-ಬದುಗಳ ಮೂಲಕ ಪ್ರತಿಯೊಂದು ಗುಂಡಿಗೂ ಸಂಪರ್ಕವೇರ್ಪಡುವಂತೆ ಮಾಡಲಾಗಿರುವುದು ವಿಶೇಷ. ಉದಿ-ಬದುಗಳನ್ನು ತುಂಬಿ ಹೆಚ್ಚಾದ ನೀರು ಸಾಗಿ ಬಂದು ಈ ಹೊಂಡಗಳಲ್ಲಿ ಶೇಖರಗೊಳ್ಳುತ್ತದೆ. "30 ಅಡಿ ಅಗಲ, 30 ಅಡಿ ಉದ್ದ ಮತ್ತು 10 ಅಡಿ ಆಳದ ಗುಂಡಿಯೊಂದು ಪ್ರತಿಬಾರಿ ತುಂಬಿದಾಗ ಒಂದೂವರೆ ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ" ಎನ್ನುತ್ತಾರೆ ಯೋಜನೆಯ ಹಿರಿಯ ವಲಯ ಕಾರ್ಯಕ್ರಮ ಅಧಿಕಾರಿ ಧನಂಜಯ ಟಿ.ಎಸ್.
ಪ್ರಸ್ತುತ ಯೋಜನಾ ಪ್ರದೇಶದಲ್ಲಿ 200 ಇಂಗು ಹೊಂಡಗಳಿದ್ದು ನೀರು ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ಸಲ್ಲಿಸಿವೆ. ಈ ಹೊಂಡಗಳಲ್ಲಿ ದೀರ್ಘಕಾಲ ನೀರು ಸಂಗ್ರಹವಾಗಿ ನಿಧಾನವಾಗಿ ನೆಲದಲ್ಲಿ ಇಂಗುತ್ತದೆ. ಈ ಸಂಗ್ರಹಿತ ನೀರನ್ನು ರೈತರು ತರಕಾರಿ, ಹೂವಿನ ತೋಟಗಳಿಗೆ ಕೈನೀರು ಹಾಕಲು ಬಳಸುತ್ತಿದ್ದಾರೆ.
3. ಹೂಳು ತೆಗೆಯುವುದು: ಈ ಜಲಾನಯನ ಪ್ರದೇಶದಲ್ಲಿ 17 ಚೆಕ್ ಡ್ಯಾಮ್ ಗಳು, 16 ಗೋಕಟ್ಟೆಗಳು ಮತ್ತು ಒಂದೆರಡು ಇತರ ನೀರಿನ ಕುಂಟೆಗಳಿರುವುದನ್ನು ಯೋಜನೆಯು ಗುರುತಿಸಿತು. ಇವು ಬಹಳ ವರ್ಷಗಳ ಹಿಂದೆ ಜನರ ಸಹಭಾಗಿತ್ವ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಮುಖಾಂತರ ನಿರ್ಮಾಣವಾಗಿದ್ದು, ಪ್ರಸ್ತುತ ಹೂಳು ತುಂಬಿ ಹಾಳಾಗಿದ್ದವು. ಅವುಗಳ ನೀರು ಹಿಡಿದಿಡುವ ಸಾಮರ್ಥ್ಯ ಕುಂಠಿತಗೊಂಡಿತ್ತು. ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ವೃದ್ಧಿಸಲು, ಆ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ರಚನೆಗಳ ಹೂಳೆತ್ತುವಿಕೆಗೆ ಜನರ ಮನವೊಲಿಸಲಾಯಿತು. ಬಹುತೇಕ ಸರ್ಕಾರೀ ಜಮೀನಿನಲ್ಲಿದ್ದ ಇವುಗಳಲ್ಲಿ ಬೃಹತ್ ಪ್ರಮಾಣದ ಹೂಳು ಶೇಖರವಾಗಿತ್ತು. ಅತ್ಯಂತ ಫಲವತ್ತಾಗಿದ್ದ ಈ ಮಣ್ಣನ್ನು ತಮ್ಮ ಹೊಲಗಳಿಗೆ ಸಾಗಿಸಲು ರೈತರು ಉತ್ಸಾಹದಿಂದಲೇ ಮುಂದೆ ಬಂದರು. ಹೂಳು ತೆಗೆದ ಪರಿಣಾಮ ಅಪಾರ ಪ್ರಮಾಣದ ನೀರು ಈ ರಚನೆಗಳಲ್ಲಿ ಶೇಖರಣೆಗೊಂಡು ಸುತ್ತ-ಮುತ್ತಲ ವಿಶಾಲ ಭೂಮಿಗೆ ತಂಪೆರೆಯುತ್ತಿವೆ ಹಾಗೂ ಕೊಳವೆಬಾವಿಗಳಿಗೆ ನೀರಿನ ಸೆಲೆಯಾಗಿವೆ.
ಗೋಕಟ್ಟೆ ಮತ್ತು ಚೆಕ್ ಡ್ಯಾಮ್ ಗಳ ಆಸು-ಪಾಸಿನಲ್ಲಿದ್ದ ಮರವಳಿಗೆ- ಅದರಲ್ಲಿಯೂ ಹುಣಸೆ ಮರಗಳಿಗೆ ಇದರಿಂದ ಮರುಜನ್ಮ ಬಂದಂತಾಗಿದೆ ಎನ್ನುತ್ತಾರೆ ಇಲ್ಲಿನ ರೈತರು. ನಂದಿಹಳ್ಳಿಯ ರಂಗನಾಥ್ ತಮ್ಮ ಜಮೀನಿನಲ್ಲಿ ಫಲಭರಿತ ಹುಣಸೆಮರವನ್ನು ತೋರಿಸಿ ಅದರ ಪಕ್ಕದಲ್ಲಿದ್ದ ಚೆಕ್ ಡ್ಯಾಮ್ ನಲ್ಲಿ ಹೂಳು ತೆಗೆದದ್ದರಿಂದ ನೀರು ನಿಂತ ಪರಿಣಾಮ ಇದು ಎನ್ನುತ್ತಾರೆ.
೪. ಸಮುದಾಯ ಕೊಳವೆ ಬಾವಿ ಮರುಪೂರಣ: ಇದೊಂದು ವಿಶಿಷ್ಟ ಪ್ರಯತ್ನ. ಇದೇ ಯೋಜನಾ ವ್ಯಾಪ್ತಿಯಲ್ಲಿ ಹಿಂದೆ "ಬೆರಿ"(ಹಸಿರು ಶಕ್ತಿ ) ಯೋಜನೆಯಡಿಯಲ್ಲಿ ಸಮುದಾಯ ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. ಉದ್ದೇಶ 5-6 ಬಡ ರೈತರಿಗೆ ಒಂದೇ ಕೊಳವೆ ಬಾವಿಯ ನೀರನ್ನು ಸರದಿಯಂತೆ ಒದಗಿಸುವುದು. ಆ ಕೊಳವೆಬಾವಿಗಳಿಗೆ ಮರುಪೂರಣ ಮಾಡುವ ಮೂಲಕ ಅವುಗಳ ಕಾರ್ಯ ಕ್ಷಮತೆಯನ್ನು ನಿರಂತರವಾಗಿಸುವುದು ಈ ಚಟುವಟಿಕೆಯ ಉದ್ದೇಶ. ಅಂದಾಜು 18 ಸಮುದಾಯ ಕೊಳವೆಬಾವಿಗಳಿಗೆ ಮರುಪೂರಣ ಮಾಡುವ ವ್ಯವಸ್ತೆಯಾಗಿದೆ. ಪ್ರತಿಯೊಂದು ಸಮುದಾಯ ಕೊಳವೆ ಬಾವಿಯ ಕೇಸಿಂಗ್ ಪೈಪಿನ ಸುತ್ತ 11 ಅಡಿ ಉದ್ದ 11 ಅಡಿ ಅಗಲ ಮತ್ತು 10 ಅಡಿ ಆಳದ ಗುಂಡಿ ತೆಗೆದು, ಪದರ-ಪದರವಾಗಿ ದಪ್ಪ ಜಲ್ಲಿ ,ಸಣ್ಣ ಜಲ್ಲಿಯನ್ನು ಹಾಕುತ್ತಾ ಬಂದು ಕೊನೆಯಲ್ಲಿ ಜಾಲರಿಯನ್ನು ಹಾಸಿ ಅದರ ಮೇಲೆ ಒಂದು ಪದರ ಮರಳು ಹಾಕಲಾಗುತ್ತದೆ. ಸುತ್ತಲೂ ಸಿಮೆಂಟಿನ ಕಟ್ಟೆ ಮಾಡಿ ಮಳೆ ಬಂದಾಗ ಅಕ್ಕ-ಪಕ್ಕದ ನೀರು ಆ ಕಟ್ಟೆಗೆ ಹಾಯುವಂತೆ ದಾರಿ ಕಲ್ಪಿಸಲಾಗುತ್ತದೆ. ಮಳೆ ನೀರು ಈ ಮೂಲಕ ನೆಲದಲ್ಲಿ ಹಿಂಗಿ ಕೊಳವೆ ಬಾವಿಗೆ ನೀರಿನ ಮೂಲವಾಗುತ್ತದೆ. ಕಬ್ಬಿಗೆರೆ ಮರಾಠಿಪಾಳ್ಯದ ಸಮುದಾಯ ಕೊಳವೆಬಾವಿಗೆ 6 ಜನ ಫಲಾನುಭವಿಗಳಿದ್ದು ತಲಾ ಅರ್ಧ ಎಕರೆ ಜಮೀನಿಗೆ ನೀರು ಪಡೆಯುತ್ತಿದ್ದಾರೆ.
ಈ ಚಟುವಟಿಕೆಗಳಿಗೆ ಪೂರಕವಾಗಿ ಇಳಿಜಾರುಗಳಲ್ಲಿ ಹೆಚ್ಚಿನ ಕೊರಕಲನ್ನು ತಡೆಯಲು ತಡೆಗೋಡೆಗಳ ನಿರ್ಮಾಣ, ಮಣ್ಣು ಹಿಡಿದಿಡಲು ಕತ್ತಾಳೆ ತಡೆಗಳ ನೆಡುವಿಕೆ, ಉದಿ-ಬದುಗಳಲ್ಲಿ ತುಂಬಿ ಹೆಚ್ಚಾದ ನೀರು ಸರಾಗವಾಗಿ ಹರಿಯಲು ಕಲ್ಲಿನ ಕೊಡಿಗಳ ನಿರ್ಮಾಣ, ತೆರೆದ ಬಾವಿಗಳಿಗೆ ಹಳ್ಳದ ನೀರಿನ ಸಂಪರ್ಕ ಕಲ್ಪಿಸಿ ಮರುಪೂರಣ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿತಗೊಳಿಸಲು ಸಾವಯವ ಪ್ರಾತ್ಯಕ್ಷಿಕೆಗಳು, ಇದಕ್ಕೆ ಪೂರಕವಾಗಿ ಎರೆಹುಳು ತೊಟ್ಟಿಗಳ ನಿರ್ಮಾಣಕ್ಕೆ ಉತ್ತೇಜನ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಗ್ರ ಮಣ್ಣು-ನೀರು ಸಂರಕ್ಷಣೆ ಮಾಡಲಾಗಿದೆ. ಪ್ರತಿಯೊಂದು ಚಟುವಟಿಕೆಯೂ ಸಹ ಪರಸ್ಪರ ಪೂರಕವಾಗಿವೆ. ಅದೇ ರೀತಿ ಅವುಗಳನ್ನು ಸಂಯೋಜಿಸಲಾಗಿದೆ.
ಈ ಎಲ್ಲಾ ಚಟುವಟಿಕೆಗಳು ಸಕಾಲದಲ್ಲಿ ಅನುಷ್ಠಾನಗೊಂಡು ನಿರೀಕ್ಷಿತ ಫಲಿತಾಂಶ ಬರಲು ಸಮುದಾಯ ಸಹಕಾರ ಅತ್ಯಂತ ಮುಖ್ಯ. ಅವರ ಮನವೊಲಿಸಿ, ಸಂಘಟನೆ ಮಾಡಲು ಸಂಸ್ಥೆಯು ನಿರಂತರ ಸಂಪರ್ಕ, ಪ್ರತಿಯೊಬ್ಬ ರೈತರ ಜೊತೆ ವೈಯಕ್ತಿಕ ಸಂಬಂಧ, ಗುಂಪು ಸಭೆಗಳು, ಶೈಕ್ಷಣಿಕ ಪ್ರವಾಸ ಮುಂತಾದ ಅನೇಕ ಮಾರ್ಗಗಳನ್ನು ಅನುಸರಿಸಿದೆ.
ಕಣ್ಣ ಮುಂದಿರುವ ಪರಿಣಾಮಗಳು: ಇಷ್ಟೆಲ್ಲಾ ಚಟುವಟಿಕೆಗಳ ಅನುಷ್ಠಾನ, ಸಮುದಾಯದ ಕೈಜೋಡಿಸುವಿಕೆಯಿಂದ ಉಂಟಾಗಿರುವ ಪರಿಣಾಮ ಅದ್ಭುತ. ಅದು ಯೋಜನಾ ಪ್ರದೇಶದಲ್ಲಿ ಕಾಣುವ ಹಸಿರು, ಫಲಭರಿತ ಹುಣಸೆ ಮರಗಳು, ಮೇಲೇರಿರುವ ನೀರಿನ ಮಟ್ಟ ಮತ್ತು ರೈತಾಪಿಗಳ ವಿಶ್ವಾಸಭರಿತ ಮಾತಿನಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಕೆಲವು ಅಂಶಗಳನ್ನು ನೋಡುವುದಾದರೆ;
1. ಕೊಳವೆಬಾವಿಗಳಿಗೆ ಮರುಜೀವ: ಯೋಜನೆ ಆರಂಭಕ್ಕೆ ಮುನ್ನ ಇಲ್ಲಿ ಅಂತರ್ಜಲ ಮಟ್ಟ 350 ರಿಂದ 400 ಅಡಿಗಳಿಗಿಳಿದಿತ್ತು, ಈಗ 200 ಅಡಿ ಅಳದಲ್ಲಿಯೇ ನೀರು ಲಭ್ಯವಾಗುತ್ತಿದೆ. ಚಿಕ್ಕಣ್ಣನಹಳ್ಳಿಯಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ಕೊಳವೆ ಬಾವಿಯೊಂದು ಯೋಜನಾ ಅನುಷ್ಠಾನದ ನಂತರ ಮತ್ತೆ ನೀರು ಹರಿಸುತ್ತಿದೆ. ನಂದಿಹಳ್ಳಿಯ ಯಂಜೇರಪ್ಪನವರು 1996ರಲ್ಲಿ ತೆಗೆಸಿದ ಕೊಳವೆ ಬಾವಿ ಆರಂಭದಲ್ಲಿ 2.5 ಇಂಚು ನೀರು ಕೊಡುತ್ತಿತ್ತು. ಕ್ರಮೇಣ ಕಡಿಮೆಯಾಗುತ್ತಾ ಬಂದು 2005 ರಲ್ಲಿ ಕೇವಲ ಅರ್ಧ ಇಂಚಿಗಿಳಿಯಿತು. ಜಲ ಜೀವನಿ ಯೋಜನೆಯಡಿಯಲ್ಲಿ ಇವರು ತಮ್ಮ 10 ಎಕರೆ ಭೂಮಿಯಲ್ಲಿ ಉದಿ-ಬದು ಹಾಕಿಸಿ, 2 ಇಂಗು ಹೊಂಡಗಳನ್ನು ತೆಗೆಸಿದ ಪರಿಣಾಮ ಈಗ ಮತ್ತೆ 2.5 ಇಂಚು ನೀರು ಲಭ್ಯವಾಗುತ್ತಿದೆ. ಇದರಿಂದ ಉತ್ತೇಜನಗೊಂಡ ಯಂಜೇರಪ್ಪ ಮತ್ತೆರಡು ಇಂಗು ಹೊಂಡ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ನಂದಿಹಳ್ಳಿ ಗ್ರಾಮದ ರಂಗನಾಥ್ ರವರದೂ ಸಹ ಇದೇ ರೀತಿಯ ಅನುಭವ. ಇವರ 2 ಕೊಳವೆಬಾವಿಗಳಲ್ಲಿ ನೀರು ಬಿಟ್ಟೂ-ಬಿಟ್ಟೂ ಬರುತ್ತಿದ್ದುದು ಜಲ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಂಡ ನಂತರ ಉತ್ತಮ ನೀರು ಕೊಡುತ್ತಿವೆ.
"ನಮ್ಮೂರಿನ ಪ್ರತಿಯೊಬ್ಬರೂ ಉದಿ-ಬದು ಹಾಕಿ, ಇಂಗು ಹೊಂಡ ತೆಗೆದು, ಗೋಕಟ್ಟೆಗಳಲ್ಲಿ ಹೂಳು ತೆಗೆದದ್ದರಿಂದ ನಮ್ಮೂರ ಹೊಲಗಳಿಂದ ಒಂದು ಹನಿ ನೀರು ಪಕ್ಕದ ಕೆರೆಗೆ ಹೋಗಿಲ್ಲ, ಹಾಗಾಗಿ ಆ ಕೆರೆ ಈ ಸಲ ತುಂಬಲೇ ಇಲ್ಲ" ಎಂದು ಬಾಯ್ತುಂಬಾ ನಗುತ್ತಾರೆ ಇದೇ ಗ್ರಾಮದ ಪುಟ್ಟರಂಗಯ್ಯ.
2. ಫಸಲಿನ ಇಳುವರಿ ಹೆಚ್ಚಳ: ಇದು ಮತ್ತೊಂದು ಗಮನಿಸಬೇಕಾದ ಪರಿಣಾಮ. ಆಹಾರ ಬೆಳೆಗಳಾದ ರಾಗಿ, ಭತ್ತ ಹಾಗೂ ಉಳಿದ ಬೆಳೆಗಳಲ್ಲಿ ಇಳುವರಿ ಹೆಚ್ಚಾಗಿದೆ. ಉದಾಹರಣೆಗೆ ರಾಗಿಯಲ್ಲಿ 7-8 ಚೀಲ ಇದ್ದ ಇಳುವರಿ ಸರಾಸರಿ 2 ಚೀಲಗಳಷ್ಟು ಹೆಚ್ಚಾಗಿದೆ. ಈಗಾಗಲೇ ಪ್ರಸ್ತಾಪಿಸಿರುವಂತೆ ಹುಣಸೆ ಮರಗಳ ಇಳುವರಿ ಸಹ ಹೆಚ್ಚಿದೆ. ಸಿದ್ದಮ್ಮ ಎಂಬುವರ 3 ಹುಣಸೆ ಮರಗಳು ಪೂರಾ ಒಣಗಿದಂತಾಗಿದ್ದವು ಯೋಜನೆ ನಂತರ ಯಥಾಸ್ತಿತಿ ಇಳುವರಿ ನೀಡುತ್ತಿವೆ. ನಂದಿಹಳ್ಳಿಯ ರಂಗನಾಥ್ ರವರು ಹೇಳುವಂತೆ "ಮುಂಚೆ 7-8 ಕ್ವಿಂಟಾಲ್ ಇಳುವರಿ ನೀಡುತ್ತಿದ್ದ ಮರಗಳಲ್ಲಿ ಕಳೆದ ವರ್ಷ (2007) 10-12 ಕ್ವಿಂಟಾಲ್ ಇಳುವರಿ ಬಂದಿತ್ತು, ಈ ವರ್ಷ (2008) 15-16 ಕ್ವಿಂಟಾಲ್ ಇಳುವರಿ ನಿರೀಕ್ಷಿಸುತ್ತಿದ್ದೇವೆ."
3. ಕೈತುಂಬಾ ಕೆಲಸ: ಯೋಜನೆಯಲ್ಲಿ ಬಹುತೇಕ ಚಟುವಟಿಕೆಗಳು ಮಾನವಶ್ರಮವನ್ನು ಆಧರಿಸಿರುವುದರಿಂದ ಸತತವಾಗಿ ಕೆಲಸದ ಅವಕಾಶ ಲಭಿಸಿದೆ. ಕೇವಲ ಆರು ತಿಂಗಳು ಕೃಷಿ ಕೆಲಸ ನಿರ್ವಹಿಸಿ ಆ ನಂತರ ಕೆಲಸವಿಲ್ಲದೆ ಇರುತ್ತಿದ್ದ ರೈತ ಕುಟುಂಬಗಳಿಗೆ ಆ ಅವಧಿಯಲ್ಲಿ ಕೆಲಸ ಲಭ್ಯವಾಗಿದೆ, ಜೊತೆಗೆ ಕೃಷಿ ಕಾರ್ಮಿಕರಿಗಂತೂ ವರ್ಷವಿಡೀ ಕೆಲಸ ಸಿಕ್ಕಿದೆ. ಇದು ಎಲ್ಲ ವರ್ಗದವರ ಆರ್ಥಿಕ ಪರಿಸ್ತಿತಿ ಉತ್ತಮಗೊಳ್ಳಲು ಸಹಾಯಕವಾಗಿದೆ. ಉದಿ-ಬದು ಹಾಕುವ ಚಟುವಟಿಕೆ ಎಲ್ಲರಿಗೂ ಹೆಚ್ಚು ಕಾಲ ಕೆಲಸ ಒದಗಿಸಿದ್ದು, ಕಲ್ಲುಕೋಡಿ, ಗಲ್ಲಿಪ್ಲಗ್, ಎರೆಹುಳು ತೊಟ್ಟಿ ನಿರ್ಮಾಣ, ಕೊಳವೆ ಬಾವಿ ಮರುಪೂರಣದಂತಹ ಚಟುವಟಿಕೆಗಳು ವಿಶೇಷವಾಗಿ ಬೋವಿಗಳಿಗೆ ಮತ್ತು ಗಾರೆ ಕೆಲಸದವರಿಗೆ ಕೆಲಸ ಒದಗಿಸಿವೆ.
4. ಶಾಲಾ ಮಕ್ಕಳಿಗೆ ನೀರ ಅರಿವು: ಯೋಜನಾ ವ್ಯಾಪ್ತಿಯಲ್ಲಿ ಬರುವ ಕಬ್ಬಿಗೆರೆಯ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಈಗ ನೀರ ನೆಮ್ಮದಿ. ವರ್ಷ ಪೂರ್ತಿ ಮಳೆ ನೀರು ಕುಡಿಯುವ ಅವಕಾಶವನ್ನು ಜಲ ಜೀವನಿ ಯೋಜನೆ ಕಲ್ಪಿಸಿದೆ. 135 ವಿದ್ಯಾರ್ಥಿಗಳು ಮತ್ತು 16 ಬೋಧಕ ಮತು ಬೋಧಕೇತರ ಸಿಬ್ಬಂದಿಗಳಿರುವ ಶಾಲೆಗೆ 10 ಸಾವಿರ ಲೀಟರ್ ಸಾಮರ್ಥ್ಯದ ಎರಡು ಮಳೆ ನೀರು ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿದ್ದು, ಇದರ ಉಸ್ತುವಾರಿಯನ್ನು ಮಕ್ಕಳಿಗೇ ವಹಿಸಲಾಗಿದೆ. ಶಾಲೆಯ ಸುತ್ತ-ಮುತ್ತ ಉದಿ-ಬದು, ಗಲ್ಲಿ ಪ್ಲಗ್ ಮುಂತಾದ ನೀರು ಸಂರಕ್ಷಣಾ ರಚನೆಗಳನ್ನು ನಿರ್ಮಿಸಿ ಮಕ್ಕಳಿಗೆ ನೀರ ಪಾಠ ಹೇಳಿಕೊಡಲಾಗುತ್ತಿದೆ. ಅಲ್ಲದೆ ಶಾಲೆಯ ಆವರಣದಲ್ಲಿ ಔಷಧಿ ತೋಟ ಮತ್ತು ತರಕಾರಿ ತೋಟಗಳನ್ನೂ ಬೆಳೆಸಲಾಗುತ್ತಿದೆ. ಮಕ್ಕಳಿಗೆ ಕಂಪ್ಯೂಟರ್ ಜ್ಞಾನದ ಅವಶ್ಯಕತೆಯನ್ನು ಮನಗಂಡು ಅದರ ವ್ಯವಸ್ಥೆಯನ್ನೂ ಯೋಜನಾ ವತಿಯಿಂದ ಸಹ ಮಾಡಲಾಗಿದೆ. ಈಗ ಕಬ್ಬಿಗೆರೆ ಶಾಲೆ ಉಳಿದ ಶಾಲೆಗಳಿಗೆ ಮಾದರಿ. ಈ ಎಲ್ಲಾ ಚಟುವಟಿಕೆಗಳಿಗೆ ಶಾಲಾ ಸಿಬ್ಬಂದಿಗಳ ನೆರವು ಮತ್ತು ಒತ್ತಾಸೆಗಳೂ ಸಹ ಉತ್ತಮವಾಗಿವೆ ಎನ್ನುತ್ತಾರೆ ಯೋಜನೆಯ ಅಧಿಕಾರಿ ಫಕೀರ ಸ್ವಾಮಿ.
ಒಟ್ಟಾರೆ ಹೇಳಬೇಕೆಂದರೆ "ಜಲಜೀವನಿಯು" ಕಿರು ಜಲಾನಯನ ಯೋಜನೆಗಳಿಗೊಂದು ಉತ್ತಮ ಮಾದರಿ. ಕಾರ್ಯಕ್ರಮಗಳ ಆಯ್ಕೆ, ಅವುಗಳ ವ್ಯವಸ್ತಿತ ಸಂಯೋಜನೆ ಹಾಗೂ ಸಕಾಲದಲ್ಲಿ ಅನುಷ್ಠಾನಗೊಳಿಸಿರುವ ರೀತಿ ಅನುಕರಣ ಯೋಗ್ಯ. ಬರ್ಡ್-ಕೆ ಸಂಸ್ಥೆಯ ಹಿಂದಿನ ಅನುಭವ ಮತು ಬದ್ಧತೆ ಕ್ಷಿಪ್ರ ಗತಿಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಅಪಾರ ನೆರವಾಗಿದೆ. ಹಾಲ್ದೋಡ್ಡೇರಿ ಜಲಾನಯನ ಪ್ರದೇಶದಲ್ಲಿ ಪೈಲಟ್ ಯೋಜನೆಯಾಗಿ ಜಾರಿಗೊಂಡು ಯಶಸ್ವಿಯಾದ ಇದನ್ನು ಈ ವರ್ಷದಿಂದ (2008) ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಲ್ಲಿ ಅಳವಡಿಸಲು ಸಿದ್ಧತೆಗಳು ನಡೆದಿವೆ.
"ಜಲಜೀವನಿ"ಎಂಬ ಹೆಸರೂ ಸಹ ಅರ್ಥಪೂರ್ಣವಾದುದು. ಎಲ್ಲರ ಜೀವನಕ್ಕೆ ಜಲವೇ ಅತ್ಯಂತ ಮೂಲಭೂತ ಅಂಶವಾಗಿರುವುದರಿಂದ ಅದನ್ನು ಕಾಪಾಡುವುದು ಮತ್ತು ಅಭಿವೃದ್ಧಿಪಡಿಸುವ ಯೋಜನೆಯ ಆಶಯಗಳೆಲ್ಲವೂ ಹೆಸರಿನಲ್ಲೇ ಅಡಗಿದೆ.