ಮಂಗಳವಾರ, ಆಗಸ್ಟ್ 6, 2019




ಪಂಪಭಾರತ ಆಶ್ವಾಸ ೨ ಪದ್ಯಗಳು ೮೭-೯೮

ಚಂ|| ಅವರಿವರನ್ನರಿನ್ನರೆನವೇಡರಿಕೇಸರಿಗಾಂಪನಿಲ್ಲ ಮೀ
     ಱುವ ತಲೆದೋರ್ಪ ಗಂಡರಣಮಿಲ್ಲೆಡೆಯೊಳ್ ಗೆಡೆವಚ್ಚುಗೊಂಡು ಪಾಂ|
     ಡವರನಕಾರಣಂ ಕೆಣಕಿದೀ ಪೊಸ ಪೊೞ್ತಱೊಳಾದ ಕಿರ್ಚು ಕೌ
     ರವರ್ಗಿದು ನಾಡೆಯುಂ ತಿಣುಕನಾಗಿಸದೇಂ ಗಳ ಸಯ್ತು ಪೋಕುಮೇ|| ೮೭ ||
(ಅವರ್, ಇವರ್, ಅನ್ನರ್, ಇನ್ನರ್ ಎನವೇಡ, ಅರಿಕೇಸರಿಗೆ ಆಂಪನ್ ಇಲ್ಲ, ಮೀಱುವ ತಲೆದೋರ್ಪ ಗಂಡರ್ ಅಣಂ ಇಲ್ಲ,  ಎಡೆಯೊಳ್ ಗೆಡೆವಚ್ಚುಗೊಂಡು ಪಾಂಡವರನ್ ಅಕಾರಣಂ ಕೆಣಕಿದ ಈ ಪೊಸ ಪೊೞ್ತಱೊಳ್ ಆದ ಕಿರ್ಚು, ಕೌರವರ್ಗೆ ಇದು ನಾಡೆಯುಂ ತಿಣುಕನ್ ಆಗಿಸದೆ ಏಂ ಗಳ ಸಯ್ತು ಪೋಕುಮೇ?)
ಅವರು, ಇವರು, ಅಂಥವರು, ಇಂಥವರು ಎಂದೆಲ್ಲ ಹೇಳಬೇಡ! ಅರಿಕೇಸರಿಯನ್ನು ಎದುರಿಸುವವರು ಯಾರೂ ಇಲ್ಲ! ಅವನನ್ನು ಮೀರುವ, ಅವನೆದುರಿಗೆ ತಲೆ ಎತ್ತಿ ನಿಲ್ಲುವ ವೀರರು ಇಲ್ಲವೇ ಇಲ್ಲ. ಈ ನಡುವೆ, ವಿಶ್ವಾಸ ಕಳೆದುಕೊಂಡು, ಪಾಂಡವರನ್ನು ಕಾರಣವೇ ಇಲ್ಲದೆ ಕೆಣಕಿದ ಈ ಹೊಸ ಹೊತ್ತಿನಲ್ಲಿ (ಸಂದರ್ಭದಲ್ಲಿ) ಉಂಟಾದ ಕಿಚ್ಚು, ಕೌರವರಿಗೆ ತೀವ್ರವಾದ ಕಷ್ಟವನ್ನು ಉಂಟುಮಾಡದೆ, ಏನು ಸುಮ್ಮನೆ ಹೋಗಿಬಿಡುತ್ತದೆಯೆ?
ವ|| ಎಂದೊರ್ವರೊರ್ವರೊಂದೊಂದನೆ ನುಡಿಯತ್ತುಂ ಪೋಗೆ ಬೆಳಗುವ ಕೈದೀವಿಗೆಗಳ್ ಕೞ್ತಲೆಯಂ ತಲೆದೋಱಲೀಯದೆ ಪ್ರಚಂಡ ಮಾರ್ತಾಂಡನ ತೇಜೋಂಕುರಂಗಳ್ ಬೆಳಗುವಂತೆ ಬೆಳಗೆ ಪಾಂಡವರ್ ನಿಜನಿವಾಸಕ್ಕೆ ಪೋದರಾಗಳ್-
(ಎಂದು ಒರ್ವರ್ ಒರ್ವರ್ ಒಂದೊಂದನೆ ನುಡಿಯುತ್ತುಂ ಪೋಗೆ, ಬೆಳಗುವ ಕೈದೀವಿಗೆಗಳ್  ಕೞ್ತಲೆಯಂ ತಲೆದೋಱಲ್  ಈಯದೆ ಪ್ರಚಂಡ ಮಾರ್ತಾಂಡನ ತೇಜೋಂಕುರಂಗಳ್ ಬೆಳಗುವಂತೆ ಬೆಳಗೆ ಪಾಂಡವರ್ ನಿಜನಿವಾಸಕ್ಕೆ ಪೋದರ್. ಆಗಳ್)
ಎಂದು ಒಬ್ಬೊಬ್ಬರು ಒಂದೊಂದು ಮಾತನ್ನಾಡುತ್ತ ಹೋಗುತ್ತಿರಲು, ಎಲ್ಲ ಕಡೆಯೂ ಬೆಳಗಿದ ಕೈದೀವಿಗೆಗಳು ಕತ್ತಲೆಗೆ ಅವಕಾಶವನ್ನೇ ಕೊಡದೆ, ಪ್ರಚಂಡ ಮಾರ್ತಾಂಡನ ತೇಜಸ್ಸಿನ ಮೊಳಕೆಗಳಂತೆ ಬೆಳಗಲು, ಪಾಂಡವರು ತಮ್ಮ ಮನೆಗೆ ಹೋದರು. ಆಗ-
ಕಂ|| ಎಸೆವ ನಿಜವಂಶಮಂ ಪೆ
     ರ್ಚಿಸುವ ಗುಣಾರ್ಣವನೊಳುಂತೆ ಸೆಣಸಲ್ಕೆಂದಿ| 
     ರ್ಪ ಸುಯೋಧನಂಗೆ ಮುಳಿಸಿಂ
     ಕಿಸುಗಣ್ಚಿದ ತೆಱದಿನಮೃತಕರನುದಯಿಸಿದಂ|| ೮೮ ||
(ಎಸೆವ ನಿಜವಂಶಮಂ ಪೆರ್ಚಿಸುವ ಗುಣಾರ್ಣವನೊಳ್ ಉಂತೆ ಸೆಣಸಲ್ಕೆಂದಿರ್ಪ ಸುಯೋಧನಂಗೆ ಮುಳಿಸಿಂ ಕಿಸುಗಣ್ಚಿದ ತೆಱದಿನ್ ಅಮೃತಕರನ್ ಉದಯಿಸಿದಂ)
ಪ್ರಕಾಶಿಸುತ್ತಿರುವ ತನ್ನ ವಂಶದ ಪ್ರಭೆಯನ್ನು ಇನ್ನಷ್ಟು ಹೆಚ್ಚಿಸುವ ಅರ್ಜುನನನ್ನು ಸುಮ್ಮನೆ ಜಗಳಕ್ಕೆಳೆಯುವ ದುರ್ಯೋಧನನ ಮೇಲೆ ಕೋಪದಿಂದ ಕಣ್ಣು ಕೆಂಪು ಮಾಡಿಕೊಂಡವನಂತೆ ಚಂದ್ರನು ಉದಯಿಸಿದನು.
ವ|| ಆಗಳ್ ದುರ್ಯೋಧನಂ ಭೀಮಸೇನನ ಬಲ್ಲಾಳ್ತನದಳವುಮಂ ವಿಕ್ರಮಾರ್ಜುನನ ದಿವ್ಯಾಸ್ತ್ರ ಕೌಶಳಮುಮಂ ಕಂಡು ತನ್ನೆರ್ದೆಯುಂ ಪೊಳ್ಳುಮರನಂ ಕಿರ್ಚಳುರ್ವಂತೊಳಗೊಳಗುಳುರೆ ಸೈರಿಸಲಾಱದೆ ಕರ್ಣನಂ ಕರೆದಾಳೋಚಿಸಿ ತಮ್ಮಯ್ಯನಲ್ಲಿಗೆ ಪೋಗಿ ಪೊಡಮಟ್ಟು ಕಟ್ಟೇಕಾಂತದೊಳಿಂತೆಂದಂ
(
ಆಗಳ್ ದುರ್ಯೋಧನಂ ಭೀಮಸೇನನ ಬಲ್ಲಾಳ್ತನದ ಅಳವುಮಂ, ವಿಕ್ರಮಾರ್ಜುನನ ದಿವ್ಯಾಸ್ತ್ರ ಕೌಶಳಮುಮಂ ಕಂಡು, ತನ್ನ ಎರ್ದೆಯುಂ ಪೊಳ್ಳುಮರನಂ ಕಿರ್ಚು ಅಳುರ್ವಂತೆ ಒಳಗೊಳಗೆ ಅಳುರೆ, ಸೈರಿಸಲಾಱದೆ, ಕರ್ಣನಂ ಕರೆದು ಆಳೋಚಿಸಿ, ತಮ್ಮ ಅಯ್ಯನಲ್ಲಿಗೆ ಪೋಗಿ ಪೊಡಮಟ್ಟು ಕಟ್ಟೇಕಾಂತದೊಳ್ ಇಂತೆಂದಂ)
ಆಗ ದುರ್ಯೋಧನನು ಭೀಮಸೇನನ ಶೌರ್ಯದ ಬಾಹುಳ್ಯವೂ, ವಿಕ್ರಮಾರ್ಜುನನ ದಿವ್ಯಾಸ್ತ್ರಕೌಶಲವೂ - ಪೊಳ್ಳು ಮರವನ್ನು ಒಳಗಿಂದೊಳಗೇ ಬೆಂಕಿ ಸುಡುವಂತೆ - ತನ್ನ ಎದೆಯನ್ನು ಸುಡತೊಡಗಲು, ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ, ಕರ್ಣನನ್ನು ಕರೆದು ಅವನೊಂದಿಗೆ ಸಮಾಲೋಚಿಸಿ, ತನ್ನ ತಂದೆಯ ಹತ್ತಿರ ಹೋಗಿ ಕಟ್ಟೇಕಾಂತದಲ್ಲಿ ಹೀಗೆಂದನು:
ಮ|| ಪಿರಿಯರ್ ನೀಮಿರೆ ಪಾಂಡುರಾಜನೆ ವಲಂ ಮುಂ ಪಟ್ಟಮಂ ಕಟ್ಟೆ ಭೂ
     ಭರಮಂ ತಾಳ್ದಿದನೀಗಳಾತನ ಸುತರ್ ತಾಮಾಗಳೇ ಯೋಗ್ಯರಾ|
     ಗರೆ ಪಟ್ಟಕ್ಕೆ ತಗುಳ್ದು ಪಾಲನೆಱೆವಿರ್ ಪಾವಿಂಗೆ ದಾಯಾದ್ಯರಂ
     ಪಿರಿಯರ್ಮಾಡಿದಿರೆಮ್ಮ ಸಾವುಮುೞಿವುಂ ದೈವೇಚ್ಛೆಯಾಯ್ತಾಗದೇ|| ೮೯ || 
(
ಪಿರಿಯರ್ ನೀಂ ಇರೆ, ಪಾಂಡುರಾಜನೆ ವಲಂ ಮುಂ ಪಟ್ಟಮಂ ಕಟ್ಟೆ ಭೂಭರಮಂ ತಾಳ್ದಿದನ್; ಈಗಳ್ ಆತನ ಸುತರ್ ತಾಂ ಆಗಳೇ ಯೋಗ್ಯರಾಗರೆ ಪಟ್ಟಕ್ಕೆ? ತಗುಳ್ದು ಪಾಲನೆಱೆವಿರ್ ಪಾವಿಂಗೆ! ದಾಯಾದ್ಯರಂ ಪಿರಿಯರ್ ಮಾಡಿದಿರಿ! ಎಮ್ಮ ಸಾವುಂ ಉೞಿವುಂ ದೈವೇಚ್ಛೆಯಾಯ್ತಾಗದೇ?)
(ಹಿಂದೆ) ಹಿರಿಯರಾಗಿ ನೀವಿದ್ದರೂ ಸಹ, ಪಾಂಡುರಾಜನಿಗೆ ಪಟ್ಟಾಭಿಷೇಕ ಮಾಡಿದರು, ಅವನೇ ರಾಜ್ಯಭಾರ ಮಾಡಿದನು. ಈಗ ಅವನ ಮಕ್ಕಳು ಬೆಳೆದು ದೊಡ್ಡವರಾಗಿ ಪಟ್ಟಕ್ಕೆ ಅರ್ಹರಾಗಿದ್ದಾರೆ. (ನೀವು) ಮತ್ತೆ ಮತ್ತೆ ಹಾವಿಗೆ ಹಾಲೆರೆಯುತ್ತಿದ್ದೀರಿ! ಸಮಾನರನ್ನು ಹಿರಿಯರಾಗಿ ಮಾಡುತ್ತಿದ್ದೀರಿ! ನಮ್ಮ ಸಾವು ಬದುಕುಗಳು ದೈವೇಚ್ಛೆಯಾಗಿಹೋಯಿತು! ಅಲ್ಲವೆ?
ವ|| ಅದಲ್ಲದೆಯುಂ
ಚಂ|| ಮಲೆ ತಲೆದೋಱದೆಂದುದನೆ ಕೊಟ್ಟುದು ಡಂಗಮಡಂಗಿ ಬಂದುದೊ
     ಕ್ಕಲಿಗವೆಸರ್ಗೆ ಪೂಣ್ದುದು ಕುಱುಂಬು ತಱುಂಬದೆ ಮಿಕ್ಕ ಶತ್ರು ಮಂ
     ಡಳಿಕರೆ ಮಿತ್ರ ಮಂಡಳಿಕರಾದರನಾಕುಳಮಿಂದು ನಾಳೆ ಮಾ
     ರ್ಮಲೆದರನಿಕ್ಕಿ ನಮ್ಮನೆೞೆದಿಕ್ಕುಗುಮೀ ನೆಲೆಯಿಂ ಗುಣಾರ್ಣವಂ|| ೯೦ ||
(ಮಲೆ ತಲೆದೋಱದೆ ಎಂದುದನೆ ಕೊಟ್ಟುದು; ಡಂಗಂ ಅಡಂಗಿ ಬಂದುದು; ಒಕ್ಕಲಿಗವೆಸರ್ಗೆ ಪೂಣ್ದುದು ಕುಱುಂಬು; ತಱುಂಬದೆ ಮಿಕ್ಕ ಶತ್ರು ಮಂಡಳಿಕರೆ ಮಿತ್ರ ಮಂಡಳಿಕರಾದರ್ ಅನಾಕುಳಂ; ಇಂದು-ನಾಳೆ ಮಾರ್ಮಲೆದರನ್ ಇಕ್ಕಿ ನಮ್ಮನ್ ಎೞೆದು ಇಕ್ಕುಗುಂ ಈ ನೆಲೆಯಿಂ ಗುಣಾರ್ಣವಂ.)
ಗುಡ್ಡಗಾಡು ಜನ ಕೇಳಿದ್ದನ್ನು ಮಾತಿಲ್ಲದೆ ಕೊಟ್ಟು ಶರಣಾದರು; ಪರ್ವತಮಾರ್ಗಗಳಲ್ಲಿದ್ದ ಸುಂಕದ ಕಟ್ಟೆಗಳು ಪಾಂಡವರ ವಶವಾದವು; ಸಣ್ಣ ಪಾಳೆಯಪಟ್ಟುಗಳು ತಾವೆಲ್ಲ ಬೇಸಾಯಗಾರರಾಗಿರಲು (ಎಂದರೆ ಯುದ್ಧ ಮಾಡದಿರಲು) ಒಪ್ಪಿಕೊಂಡರು; ಉಳಿದ ವೈರಿ ಸಾಮಂತರುಗಳು ಮಿತ್ರರಾದರು; ಇಂದೋ ನಾಳೆಯೋ ಆ ಅರ್ಜುನನು ಯಾವುದೇ ಕಷ್ಟವಿಲ್ಲದೆ, ವಿರೋಧಿಸಿದವರನ್ನು ಮೆಟ್ಟಿ, ನಮ್ಮನ್ನು ಈ ನೆಲೆಯಿಂದ ಎಳೆದು ಹಾಕುತ್ತಾನೆ!
(ಡಿ.ಎಲ್.ನರಸಿಂಹಾಚಾರ್ಯರ ಪಾಠವನ್ನು ಅನುಸರಿಸಿ ಅರ್ಥ ಮಾಡಲಾಗಿದೆ-ಲೇ.)
ವ|| ಅಂತು ವಿಕ್ರಮಾರ್ಜುನಂ ಬಿಲ್ಗೊಳಲುಂ ಭೀಮಸೇನಂ ಗದೆಗೊಳಲುಮಾಂಪುದರಿದುಪಾಂಶುವಧದೆ ಕೆಯ್ಗೆ ಮಾಡುವುದುತ್ತಮಪಕ್ಷಮಂತುಮಲ್ಲದೆಯುಂ-
(ಅಂತು ವಿಕ್ರಮಾರ್ಜುನಂ ಬಿಲ್ಗೊಳಲುಂ, ಭೀಮಸೇನಂ ಗದೆಗೊಳಲುಂ, ಆಂಪುದು ಅರಿದು. ಉಪಾಂಶುವಧದೆ ಕೆಯ್ಗೆ ಮಾಡುವುದು ಉತ್ತಮಪಕ್ಷಂ. ಅಂತುಂ ಅಲ್ಲದೆಯುಂ) 
ಹಾಗೆ ವಿಕ್ರಮಾರ್ಜುನನು ಬಿಲ್ಲು ಹಿಡಿದರೆ, ಭೀಮಸೇನನು ಗದೆ ಹಿಡಿದರೆ ಅವರನ್ನು ಎದುರಿಸುವುದು ಯಾರಿಗೂ ಸಾಧ್ಯವಿಲ್ಲ. ಆದ್ದರಿಂದ ಗುಟ್ಟಾಗಿ ಅವರನ್ನು ಕೊಂದು ರಾಜ್ಯವನ್ನು ವಶಪಡಿಸಿಕೊಳ್ಳುವುದೇ ಉತ್ತಮವಾದ ಮಾರ್ಗ. ಅದೂ ಅಲ್ಲದೆ-
ಶ್ಲೋ|| ಸ್ವಾಮ್ಯಾರ್ಥಂ ಸ್ವಾಮ್ಯ ವಿಕ್ರಾಂತಂ ಮರ್ಮಜ್ಞಂ ವ್ಯವಸಾಯಿನಂ
         ಅರ್ಧರಾಜ್ಯಹರಂ ಭೃತ್ಯಂ ಯೋನ ಹನ್ಯಾತ್ಸ ಹನ್ಯತೇ|| 
ತಾನೇ ಸ್ವತಃ ಒಡೆಯನಾಗಲು ಬಯಸುವ, ಒಡೆಯನಾಗಲು ಬೇಕಾದ ಸಾಮರ್ಥ್ಯವಿರುವ, ರಹಸ್ಯಗಳನ್ನು ಅರಿತ, (ತನ್ನ ಉದ್ದೇಶವನ್ನು ಸಾಧಿಸುವ ದಿಕ್ಕಿನಲ್ಲಿ) ಸದಾ ಕಾರ್ಯಶೀಲನಾದ, ಅರ್ಧರಾಜ್ಯವನ್ನು ಅಪಹರಿಸುವ ಸೇವಕನನ್ನು ಯಾರು ಕೊಲ್ಲುವುದಿಲ್ಲವೋ ಅವನು ಸ್ವತಃ ತಾನೇ ಹತನಾಗುತ್ತಾನೆ
ಎಂಬುದರ್ಥಶಾಸ್ತ್ರ ಸದ್ಭಾವಂ
ಉ|| ಮೇಣ್ಕುಲಮಿಲ್ಲೆಯೋ ನಮಗೆ ದಾಯಿಗರಲ್ಲರೊ ಶಸ್ತ್ರವಿದ್ಯೆಯೊಳ್
      ಪೂಣ್ಕೆಗಳಿಲ್ಲೆಯೋ ಧರೆಗೆ ಮುನ್ನವರಯ್ಯನೆ ಮುಖ್ಯನಲ್ಲನೋ|
     ಜಾಣ್ಕಿಱಿದಾಗವೇಡ ಮನದಲ್ ನಿಮಗಯ್ಯ ವಿಧಾತೃಯೋಗದಿಂ
     ಕಣ್ಕುರುಡಾದೊಡೇನೊ ಕುರುಡಾಗಲೆವೇೞ್ಪುದೆ ನಿಮ್ಮ ಬುದ್ಧಿಯುಂ|| ೯೧ ||
(ಮೇಣ್ ಕುಲಂ ಇಲ್ಲೆಯೋ? ನಮಗೆ ದಾಯಿಗರ್ ಅಲ್ಲರೊ? ಶಸ್ತ್ರವಿದ್ಯೆಯೊಳ್ ಪೂಣ್ಕೆಗಳ್ ಇಲ್ಲೆಯೋ? ಧರೆಗೆ ಮುನ್ನ ಅವರ ಅಯ್ಯನೆ ಮುಖ್ಯನಲ್ಲನೋ? ಜಾಣ್ ಕಿಱಿದು ಆಗವೇಡ ಮನದಲ್ ನಿಮಗೆ ಅಯ್ಯ! ವಿಧಾತೃಯೋಗದಿಂ ಕಣ್ ಕುರುಡು ಆದೊಡೆ ಏನೊ? ಕುರುಡು ಆಗಲೆವೇೞ್ಪುದೆ ನಿಮ್ಮ ಬುದ್ಧಿಯುಂ?)
(ಪಾಂಡವರಿಗೆ) ಏನು ಕುಲವಿಲ್ಲವೆ? ಅವರು ನಮ್ಮ ದಾಯಾದಿಗಳಲ್ಲವೆ? ಶಸ್ತ್ರವಿದ್ಯೆಯಲ್ಲಿ ಸಾಧನೆ ಮಾಡಿದವರಲ್ಲವೆ? ರಾಜ್ಯಕ್ಕೆ ಈ ಮೊದಲು ಅವರ ತಂದೆಯೆ ರಾಜನಾಗಿರಲಿಲ್ಲವೆ? ಇವೆಲ್ಲ ಅರ್ಥವಾಗದಷ್ಟು ನಿಮ್ಮ ಮನಸ್ಸು ಕಿರಿದಾಗಬೇಕೆ? ಅಪ್ಪಾ! ಏನೋ ವಿಧಿಬರಹ! ನಿಮ್ಮ ಕಣ್ಣು ಕುರುಡಾಗಿದೆ ನಿಜ; ಆದರೆ ಅದರೊಂದಿಗೆ ನಿಮ್ಮ ಬುದ್ಧಿಯೂ ಕುರುಡಾಗಬೇಕೇ?
ವ|| ಎಂದು ತನ್ನ ಮನದೊಳೊಡಂಬಡೆ ನುಡಿದ ಮಗನ ಮಾತಂ ಧೃತರಾಷ್ಟ್ರಂ ಮನದೆಗೊಂಡು
(
ಎಂದು ತನ್ನ ಮನದೊಳ್ ಒಡಂಬಡೆ ನುಡಿದ ಮಗನ ಮಾತಂ ಧೃತರಾಷ್ಟ್ರಂ ಮನದೆಗೊಂಡು)
ಎಂದು ತನ್ನ ಮನಸ್ಸಿಗೆ ಒಪ್ಪುವ ಹಾಗೆ ನುಡಿದ ಮಗನ ಮಾತನ್ನು ಕೇಳಿ ಧೃತರಾಷ್ಟ್ರನು ಮನದುಂಬಿ-
ಉ|| ಏನೆರ್ದೆಗೊಂಡ ಕಜ್ಜಮನೆ ಪೇೞ್ದೆಯೊ ಚಿಂತಿಸುತಿರ್ಪೆನಾನುಮೇ
     ನಾನುಮುಪಾಯಮಂ ಬಗೆವರಂತವರ್ಗಳ್ ನಿನಗೆಂದೆ ಕಂದ ಪೇೞ್|
     ನೀನಿರೆ ಪಟ್ಟಮುಂ ನೆಲನುಮಪ್ಪುದನೊಲ್ವೆನೆ ವೈರಿಗಳ್ಗೆ ನೀ
     ನೇನುಮದರ್ಕೆ ಚಿಂತಿಸದಿರಿಲ್ಲಿರಲೀವೆನೆ ಪಾಂಡುಪುತ್ರರಂ|| ೯೨ ||
(
ಏನ್ ಎರ್ದೆಗೊಂಡ ಕಜ್ಜಮನೆ ಪೇೞ್ದೆಯೊ! ಚಿಂತಿಸುತಿರ್ಪೆನ್ ಆನುಂ. ಏನಾನುಂ ಉಪಾಯಮಂ ಬಗೆವರ್ ಅಂತು ಅವರ್ಗಳ್ ನಿನಗೆಂದೆ! ಕಂದ ಪೇೞ್ ನೀನಿರೆ ಪಟ್ಟಮುಂ ನೆಲನುಂ ಅಪ್ಪುದನ್ ಒಲ್ವೆನೆ ವೈರಿಗಳ್ಗೆ? ನೀನೇನುಂ ಅದರ್ಕೆ ಚಿಂತಿಸದಿರು! ಇಲ್ಲಿ ಇರಲ್ ಈವೆನೆ ಪಾಂಡುಪುತ್ರರಂ?)
ನನ್ನ ಮನಸ್ಸಿನಲ್ಲಿದ್ದುದನ್ನೇ ನೀನೂ ಹೇಳಿದೆಯಲ್ಲ! ನನಗೂ ಪ್ರತಿದಿನ ಅದೇ ಚಿಂತೆಯಾಗಿದೆ. ನಿನ್ನ ವಿರುದ್ಧವಾಗಿ ಅವರು ಏನಾದರೂ ಸಂಚನ್ನು ಮಾಡಿಯೇ ಮಾಡುತ್ತಾರೆ! ಕಂದಾ! ನೀನಿರುವಾಗ ಪಟ್ಟ, ರಾಜ್ಯಗಳು ವೈರಿಗಳ ಪಾಲಾಗುವುದು ನನಗೆ ಇಷ್ಟವೆ? ನೀನು ಅದರ ಚಿಂತೆಯನ್ನು ಬಿಟ್ಟುಬಿಡು! ಪಾಂಡುಪುತ್ರರನ್ನು ಇಲ್ಲಿಯೇ ಉಳಿಯಲು ನಾನು ಬಿಡುತ್ತೇನೆಯೆ?
ವ|| ಎಂದು ದುರ್ಯೋಧನನಂ ಬೀಡಿಂಗೆ ಪೋಗಲ್ವೇೞ್ದು ಪಾಂಡವರಯ್ವರುಮಂ ಬರಿಸಿ ಧೃತರಾಷ್ಟ್ರಂ ತೊಡೆಯನೇಱಿಸಿಕೊಂಡು ದುರ್ಯೋಧನನಪ್ಪೊಡೆ ಪೊಲ್ಲ ಮಾನಸನಾತನುಂ ನೀಮುಮೊಂದೆಡೆಯೊಳಿರೆ ಕಿಸುಱುಂ ಕಲಹಮುಮೆಂದುಂ ಕುಂದದದುಕಾರಣಂ ಗಂಗಾನದಿಯ ದಕ್ಷಿಣ ತಟದೊಳ್ ವಾರಣಾವತಮೆಂಬುದು ಪೊೞಲ್ ಕುರುಜಾಂಗಣ ವಿಷಯಕ್ಕೆ ತಿಳಕಮಪ್ಪಂತಿರ್ದುದಲ್ಲಿಗೆ ಪೋಗಿ ಸುಖಮಿರಿಮೆಂದೊಡಂತೆಗೆಯ್ವೆಮೆಂದು ಬೀೞ್ಕೊಂಡು ಬೀಡಿಂಗೆವಂದು ಗಾಂಗೇಯ ದ್ರೋಣ ಕೃಪ ವಿದುರರ್ಕಳ್ಗಂ ಕುಂತಿಗಂ ತದ್ವೃತ್ತಾಂತಮನಱಿಪಿದರನ್ನೆಗಮಿತ್ತ ದುರ್ಯೋಧನನವರ ಪೋಗನಱಿದು ಪುರೋಚನನೆಂಬ ತನ್ನ ಮನದನ್ನನಪ್ಪ ಪೆರ್ಗಡೆಯೊಳ್ ಲಾಕ್ಷಾಗೃಹೋಪಾಯಮಂ ಚರ್ಚಿಸಿ ವಾರಣಾವತಮನೊಂದೇ ದಿವಸದೊಳೆಯ್ದುವಂತಾಗೆ ರಥಮಂ ಸಮಕಟ್ಟಿ ನಾಲ್ಕುಲಕ್ಕ ಬಲಮಂ ನೆರಂಬೇೞ್ದು ಕಳಿಪಿದನಾಗಳ್-  
(
ಎಂದು ದುರ್ಯೋಧನನಂ ಬೀಡಿಂಗೆ ಪೋಗಲ್ವೇೞ್ದು, ಪಾಂಡವರ್ ಅಯ್ವರುಮಂ ಬರಿಸಿ ಧೃತರಾಷ್ಟ್ರಂ ತೊಡೆಯನ್ ಏಱಿಸಿಕೊಂಡು,ದುರ್ಯೋಧನನ್ ಅಪ್ಪೊಡೆ ಪೊಲ್ಲ ಮಾನಸನ್. ಆತನುಂ ನೀಮುಂ ಒಂದೆಡೆಯೊಳಿರೆ ಕಿಸುಱುಂ ಕಲಹಮುಂ ಎಂದುಂ ಕುಂದದು. ಅದುಕಾರಣಂ ಗಂಗಾನದಿಯ ದಕ್ಷಿಣ ತಟದೊಳ್ ವಾರಣಾವತಮೆಂಬುದು ಪೊೞಲ್ ಕುರುಜಾಂಗಣ ವಿಷಯಕ್ಕೆ ತಿಳಕಂ ಅಪ್ಪಂತೆ ಇರ್ದುದು, ಅಲ್ಲಿಗೆ ಪೋಗಿ ಸುಖಮಿರಿಂ’ ಎಂದೊಡೆ ‘ಅಂತೆಗೆಯ್ವೆಂ’ ಎಂದು ಬೀೞ್ಕೊಂಡು ಬೀಡಿಂಗೆವಂದು ಗಾಂಗೇಯ ದ್ರೋಣ ಕೃಪ ವಿದುರರ್ಕಳ್ಗಂ ಕುಂತಿಗಂ ತದ್ವೃತ್ತಾಂತಮನ್ ಅಱಿಪಿದರ್. ಅನ್ನೆಗಂ ಇತ್ತ ದುರ್ಯೋಧನನ್ ಅವರ ಪೋಗನ್ ಅಱಿದು ಪುರೋಚನನೆಂಬ ತನ್ನ ಮನದನ್ನನ್ ಅಪ್ಪ ಪೆರ್ಗಡೆಯೊಳ್ ಲಾಕ್ಷಾಗೃಹೋಪಾಯಮಂ ಚರ್ಚಿಸಿ ವಾರಣಾವತಮನ್ ಒಂದೇ ದಿವಸದೊಳ್ ಎಯ್ದುವಂತಾಗೆ ರಥಮಂ ಸಮಕಟ್ಟಿ ನಾಲ್ಕುಲಕ್ಕ ಬಲಮಂ ನೆರಂಬೇೞ್ದು ಕಳಿಪಿದನ್. ಆಗಳ್-

ಎಂದು ದುರ್ಯೋಧನನನ್ನು ಮನೆಗೆ ಹೋಗಲು ಹೇಳಿ, ಧೃತರಾಷ್ಟ್ರನು, ಪಾಂಡವರನ್ನು ಕರೆಸಿಕೊಂಡು, ತೊಡೆಯ ಮೇಲೆ ಕೂರಿಸಿಕೊಂಡು, ‘ದುರ್ಯೋಧನನಾದರೋ ಕೆಟ್ಟ ಮನುಷ್ಯ. ಅವನೂ ನೀವೂ ಒಂದೇ ಕಡೆ ಇದ್ದರೆ ನಿತ್ಯವೂ ಜಗಳ, ಮನಸ್ತಾಪಗಳು ತಪ್ಪಿದ್ದಲ್ಲ. ಆದ್ದರಿಂದ ನೀವು ಗಂಗಾನದಿಯ ದಕ್ಷಿಣ ದಂಡೆಯಲ್ಲಿರುವ, ಹಸ್ತಿನಾಪುರಕ್ಕೆ ತಿಲಕದಂತಿರುವ ವಾರಣಾವತಕ್ಕೆ ಹೋಗಿ ಸುಖವಾಗಿರಿ’ ಎಂದು ಹೇಳಿದನು. ಪಾಂಡವರು ಹಾಗೆಯೇ ಮಾಡುವುದಾಗಿ ಒಪ್ಪಿ, ಧೃತರಾಷ್ಟ್ರನನ್ನು ಬೀಳ್ಕೊಂಡು, ಮನೆಗೆ ಬಂದು ಗಾಂಗೇಯ, ದ್ರೋಣ, ಕೃಪ, ವಿದುರರಿಗೂ ತಾಯಿಯಾದ ಕುಂತಿಗೂ ಈ ವಿಷಯವನ್ನು ತಿಳಿಸಿದರು. ಅಷ್ಟರಲ್ಲಿ ಇತ್ತ ದುರ್ಯೋಧನನು ಪಾಂಡವರು ಹೋಗುವ ಸಮಾಚಾರವನ್ನು ತಿಳಿದು, ಪುರೋಚನನೆಂಬ ತನ್ನ ಆಪ್ತನನ್ನು ಕರೆದು ಅರಗಿನ ಮನೆಯ ವಿಷಯವನ್ನು ಅವನೊಂದಿಗೆ ಚರ್ಚಿಸಿ, ವಾರಣಾವತವನ್ನು ಒಂದೇ ದಿನದಲ್ಲಿ ಸೇರುವ ಹಾಗೆ ರಥವನ್ನು ಏರ್ಪಡಿಸಿ, ಅವನೊಂದಿಗೆ ನಾಲ್ಕು ಲಕ್ಷ ಸೈನ್ಯವನ್ನು ನೆರವಿಗಾಗಿ ಕಳುಹಿಸಿಕೊಟ್ಟನು. ಆಗ-
ಕಂ|| ಉದಿತೋದಿತನೈ ನೀಂ ನಿನ
     ಗುದಯದ ಮೇಲುದಯಮೆಂದು ನೆಗೞ್ದರಿಗಂಗ|
     ಭ್ಯುದಯಮನಱಿಪುವ ತೆಱದಿಂ
     ದುದಯಾಚಳಚುಂಬಿಬಿಂಬನಿನನುದಯಿಸಿದಂ|| ೯೩ ||
(
ಉದಿತೋದಿತನೈ ನೀಂ! ನಿನಗೆ ಉದಯದ ಮೇಲೆ ಉದಯಂ ಎಂದು ನೆಗೞ್ದ ಅರಿಗಂಗೆ ಅಭ್ಯುದಯಮನ್ ಅಱಿಪುವ ತೆಱದಿಂದ ಉದಯಾಚಳ ಚುಂಬಿಬಿಂಬನ್, ಇನನ್, ಉದಯಿಸಿದಂ)
‘ನೀನು ತುಂಬ ಪ್ರಸಿದ್ಧನಾದವನು. ಶಾಸ್ತ್ರವನ್ನು ತಿಳಿದವನು. ನಿನಗೆ ಶ್ರೇಯಸ್ಸಿನ ಮೇಲೆ ಶ್ರೇಯಸ್ಸಾಗಲಿ’ ಎನ್ನುತ್ತ ಅರ್ಜುನನಿಗೆ – ಅರಿಕೇಸರಿಗೆ – ಅಭ್ಯುದಯವನ್ನು ತಿಳಿಸುವಂತೆ, ಉದಯಗಿರಿಗೆ ಮುತ್ತಿಡುತ್ತಿರುವ ಗುಂಡಾದ ಸೂರ್ಯನು ಮೂಡಿಬಂದನು.
ವ|| ಪ್ರಸ್ತಾವದೊಳ್ ಮಂಗಳಪಾಠಕರ ಮಂಗಳವೃತ್ತೋಚ್ಚಾರಣೆಗಳಿಂದಂ ಪಾಂಡವರಯ್ವರುಮುನ್ಮೀಲಿತನಯನರಾಗಿ ನಿತ್ಯನಿಯಮಂಗಳಂ ನಿರ್ವರ್ತಿಸಿ ಮಂಗಳವಸದನಂಗೊಂಡು ಮಹಾಬ್ರಾಹ್ಮಣರ್ ಪರಸುವ ಪರಕೆಗಳುಮನಿಕ್ಕುವ ಸೇಸೆಗಳುಮನಾಂತುಕೊಳುತ್ತುಂ ಪಲವುಂ ತೆಱದ ಪ್ರಯಾಣ ಪಟಹಂಗಳೆಸೆಯೆ ಶುಭ ಲಕ್ಷಣ ಲಕ್ಷಿತಂಗಳಪ್ಪಾಜಾನೇಯ ಕಾಂಭೋಜ ವಾಜಿರಾಜಿಗಳೊಳ್ ಪೂಡಿದ ದಿವ್ಯರಥಂಗಳನೇಱಿ ದಿವ್ಯಬಾಣಾಸನ ಬಾಣಪಾಣಿಗಳಾಗಿ ನಿಜಪರಿಜನಂ ಬೆರಸು ಗಾಂಗೇಯ ದ್ರೋಣ ಕೃಪ ವಿದುರರ್ ಕಳಿಪುತ್ತುಂ ಬರೆ ಪುರಜನಂಗಳೆಲ್ಲಂ ನೆರೆದವರ ಪೋಗಿಂಗೞಲ್ದು ಸೈರಿಸಲಾಱದೆ
(
ಪ್ರಸ್ತಾವದೊಳ್, ಮಂಗಳಪಾಠಕರ ಮಂಗಳವೃತ್ತೋಚ್ಚಾರಣೆಗಳಿಂದಂ ಪಾಂಡವರಯ್ವರುಂ ಉನ್ಮೀಲಿತನಯನರಾಗಿ, ನಿತ್ಯನಿಯಮಂಗಳಂ ನಿರ್ವರ್ತಿಸಿ, ಮಂಗಳವಸದನಂಗೊಂಡು, ಮಹಾಬ್ರಾಹ್ಮಣರ್ ಪರಸುವ ಪರಕೆಗಳುಮನ್, ಇಕ್ಕುವ ಸೇಸೆಗಳುಮನ್ ಆಂತುಕೊಳುತ್ತುಂ, ಪಲವುಂ ತೆಱದ ಪ್ರಯಾಣ ಪಟಹಂಗಳ್ ಎಸೆಯೆ, ಶುಭ ಲಕ್ಷಣ ಲಕ್ಷಿತಂಗಳಪ್ಪ ಆ ಜಾನೇಯ ಕಾಂಭೋಜ ವಾಜಿರಾಜಿಗಳೊಳ್ ಪೂಡಿದ ದಿವ್ಯರಥಂಗಳನ್ ಏಱಿ, ದಿವ್ಯಬಾಣಾಸನ ಬಾಣಪಾಣಿಗಳಾಗಿ, ನಿಜಪರಿಜನಂ ಬೆರಸು, ಗಾಂಗೇಯ ದ್ರೋಣ ಕೃಪ ವಿದುರರ್ ಕಳಿಪುತ್ತುಂ ಬರೆ, ಪುರಜನಂಗಳೆಲ್ಲಂ ನೆರೆದವರ ಪೋಗಿಂಗೆ ಅೞಲ್ದು ಸೈರಿಸಲಾಱದೆ)
ವ| ಆ ಸಮಯದಲ್ಲಿ ಬೆಳಗಿನ ಮಂಗಳವಾಚಕರು ಮಂಗಳವೃತ್ತಗಳನ್ನು ಓದುತ್ತಿರುವಂತೆ ಪಾಂಡವರು ನಿದ್ರೆಯಿಂದೆದ್ದು, ನಿತ್ಯನಿಯಮಗಳನ್ನು ಪೂರೈಸಿ, ಮಂಗಳಕರವಾದ ಅಲಂಕಾರಗಳನ್ನು ಮಾಡಿಕೊಂಡು, ಮಹಾಬ್ರಾಹ್ಮಣರು ಹರಸುವ ಹರಕೆಗಳನ್ನೂ, ಎರಚುವ ಮಂತ್ರಾಕ್ಷತೆಗಳನ್ನೂ ಪಡೆದುಕೊಳ್ಳುತ್ತ, ಹಲವು ತೆರದ ತಮಟೆಯ ನಾದ ಹೊಮ್ಮುತ್ತಿರಲು, ಕಾಂಭೋಜದೇಶದ ಉತ್ತಮ ತಳಿಯ ಕುದುರೆಗಳನ್ನು ಕಟ್ಟಿದ ರಥಗಳನ್ನೇರಿ, ದಿವ್ಯವಾದ ಬಿಲ್ಲು ಬಾಣಗಳನ್ನು ಹಿಡಿದುಕೊಂಡು ಭೀಷ್ಮ, ದ್ರೋಣ, ಕೃಪ, ವಿದುರರು ಕಳಿಸಿಕೊಡಲೆಂದು ಜೊತೆಗೆ ಬರುತ್ತಿರಲು, ಪುರಜನರೆಲ್ಲರೂ ಒಟ್ಟಾಗಿ ಸೇರಿ ಪಾಂಡವರ ಅಗಲಿಕೆಯಿಂದಾದ ವ್ಯಥೆಯನ್ನು ಸೈರಿಸಲಾರದೆ
ಚಂ|| ಮನದೊಳಲಂಪು ಪೊಣ್ಮೆ ನುಡಿದುಂ ನಡೆ ನೋಡಿಯುಮಾಟಪಾಟಮುಂ
     ಬಿನದಮುಮಾರುಮಂ ಮಱೆಯಿಸುತ್ತಿರೆ ಬೀದಿಗಳೊಳ್ ವಿಳಾಸದೊ|
     ಡ್ಡೆನಿಸಿ ತೊೞಲ್ವ ಪಾಂಡವರ ಪೋಗಿನೊಳುಂತೆ ಬೆಡಂಗುಗೆಟ್ಟು
     ಸ್ತಿನಪುರಮಿಂದು ರಕ್ಕಸನ ತಿಂದ ಪೊೞಲ್ಗೆಣೆಯಾಗದಿರ್ಕುಮೇ|| ೯೪ ||
 (ಮನದೊಳ್ ಅಲಂಪು ಪೊಣ್ಮೆ ನುಡಿದುಂ, ನಡೆ ನೋಡಿಯುಂ, ಆಟಪಾಟಮುಂ ಬಿನದಮುಂ ಆರುಮಂ ಮಱೆಯಿಸುತ್ತಿರೆ, ಬೀದಿಗಳೊಳ್ ವಿಳಾಸದ ಒಡ್ಡೆನಿಸಿ ತೊೞಲ್ವ ಪಾಂಡವರ ಪೋಗಿನೊಳ್ ಉಂತೆ ಬೆಡಂಗುಗೆಟ್ಟು, ಹಸ್ತಿನಪುರಂ ಇಂದು ರಕ್ಕಸನ ತಿಂದ ಪೊೞಲ್ಗೆ ಎಣೆಯಾಗದೆ ಇರ್ಕುಮೇ)
ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡು ಮಾತಾಡುತ್ತ, ನೋಡಲು ಚೆನ್ನಾಗಿ ಕಾಣಿಸುತ್ತ, ತಮ್ಮ ಆಟಪಾಠಗಳಿಂದ, ವಿನೋದಗಳಿಂದ ಎಲ್ಲರನ್ನೂ ಮೈಮರೆಸುತ್ತ, ಬೀದಿಗಳಲ್ಲಿ ಉತ್ಸಾಹದ ಚಿಲುಮೆಯಂತೆ ತಿರುಗಾಡುವ ಪಾಂಡವರು (ಊರು ಬಿಟ್ಟು) ಹೋಗುತ್ತಿರುವುದರಿಂದ ಹಸ್ತಿನಾಪುರವು ತನ್ನ ಚೈತನ್ಯವನ್ನು ಕಳೆದುಕೊಂಡು, ರಕ್ಕಸನು ತಿಂದುಳಿಸಿದ ಊರಿನ ಹಾಗೆ ಕಾಣುವುದಿಲ್ಲವೇ?
ವ|| ಎಂದು ಕಣ್ಣನೀರಂ ನೆಗಪೆ
ಎಂದು ಕಣ್ಣೀರನ್ನು ತುಂಬಿಕೊಂಡಾಗ
ಚಂ|| ಪರಸುವ ಪೌರವೃದ್ಧರ ಕುಲಾಂಗನೆಯರ್ಕಳ ಸಾಧು ವಾದದೊಳ್ 
     ಬೆರಸಿ ಸಮಂತು ಸೂಸುವ ಜಲಾರ್ದ್ರಲಸದ್ಧವಳಾಕ್ಷತಂಗಳೊಳ್|
     ಬೆರಸಿದ ತಣ್ಪನೆತ್ತಿ ಕವಿದೆತ್ತಿದ ಬಾಸಿಗದೊಂದು ಕಂಪಿನೊಳ್
     ಪೊರೆದು ಮದಾಳಿಗಳ್ವೆರಸು ಬಂದುದದೊಂದನುಕೂಲ ಮಾರುತಂ|| ೯೫ ||
(
ಪರಸುವ ಪೌರವೃದ್ಧರ, ಕುಲಾಂಗನೆಯರ್ಕಳ ಸಾಧು ವಾದದೊಳ್ ಬೆರಸಿ,  ಸಮಂತು ಸೂಸುವ ಜಲಾರ್ದ್ರ ಲಸದ್ಧವಳಾಕ್ಷತಂಗಳೊಳ್ ಬೆರಸಿದ ತಣ್ಪನೆತ್ತಿ, ಕವಿದು ಎತ್ತಿದ ಬಾಸಿಗದ ಒಂದು ಕಂಪಿನೊಳ್ ಪೊರೆದು, ಮದಾಳಿಗಳ್ವೆರಸು ಬಂದುದು ಅದೊಂದು ಅನುಕೂಲ ಮಾರುತಂ)
ಹರಸುತ್ತಿರುವ ಊರಿನ ಹಿರಿಯರ, ಕುಲಾಂಗನೆಯರ ಒಳ್ಳೆಯ ಮಾತುಗಳಿಂದ ಕೂಡಿ, ಅವರು ಎರಚುವ ಒದ್ದೆಯಾಗಿ ಹೊಳೆಯುತ್ತಿರುವ ಬಿಳಿಯ ಮಂತ್ರಾಕ್ಷತೆಯನ್ನು ಎತ್ತಿಕೊಂಡು, ಬಾಸಿಗದ ಸುಗಂಧವನ್ನು ಲೇಪಿಸಿಕೊಂಡು, ಸೊಕ್ಕಿದ ದುಂಬಿಗಳ ಸಮೇತವಾಗಿ ಒಂದು ಹಿತವಾದ ಗಾಳಿ ಬೀಸಿ ಬಂದಿತು
ವ|| ಅಂತು ಪೊೞಲಂ ಪೊಱಮಡೆ ಬೞಿಯನೆ ತಗುಳ್ದು ಬರ್ಪ ತಮ್ಮೊಡನಾಡಿಗಳಪ್ಪ ಮೇಳದ ಸಬ್ಬವದ ನಗೆಯ ತೆಗೞಿನವರನೆಮ್ಮ ಬೞಿಯಟ್ಟಿದಂದು ಬನ್ನಿಮೆಂದು ಪ್ರಿಯಂ ನುಡಿದಿರಿಸಿ ಕಿಱಿದಂತರಂ ಬಂದೊಂದು ತಾವರೆಗೆಱೆಯ ಮೊದಲೊಳ್ ನಿಂದು ಭೀಷ್ಮ ದ್ರೋಣ ಕೃಪ ವಿದುರರ್ಕಳನೆಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಿಮೆನೆ
(
ಅಂತು ಪೊೞಲಂ ಪೊಱಮಡೆ ಬೞಿಯನೆ ತಗುಳ್ದು ಬರ್ಪ ತಮ್ಮ ಒಡನಾಡಿಗಳಪ್ಪ ಮೇಳದ, ಸಬ್ಬವದ, ನಗೆಯ, ತೆಗೞಿನವರನ್ ‘ಎಮ್ಮ ಬೞಿಯಟ್ಟಿದಂದು ಬನ್ನಿಂ’ ಎಂದು ಪ್ರಿಯಂ ನುಡಿದು ಇರಿಸಿ, ಕಿಱಿದು ಅಂತರಂ ಬಂದು ಒಂದು ತಾವರೆಗೆಱೆಯ ಮೊದಲೊಳ್ ನಿಂದು, ಭೀಷ್ಮ ದ್ರೋಣ ಕೃಪ ವಿದುರರ್ಕಳನ್ ‘ಎಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಿಂ’ ಎನೆ)
ಹಾಗೆ ಊರು ಬಿಟ್ಟು ಹೊರಟಾಗ, ಹಿಂದೆಯೇ ಅನುಸರಿಸಿಕೊಂಡು ಬಂದ ತಮ್ಮ ಒಡನಾಡಿಗಳಾದ ಪರಿಚಾರಕರು, ವಿನೋದದವರು, ಹಾಸ್ಯದವರು, ನಿಂದಕರು ಇವರೆಲ್ಲರನ್ನೂ ‘ನಾವು ಹೇಳಿಕಳಿಸಿದಾಗ ಬನ್ನಿ’ ಎಂದು ಒಳ್ಳೆಯ ಮಾತುಗಳಲ್ಲಿ ಹೇಳಿ, ಅವರನ್ನು ಅಲ್ಲಿಯೇ ಬಿಟ್ಟು, ಸ್ವಲ್ಪ ದೂರ ಬಂದು ಒಂದು ತಾವರೆಗೆರೆಯ ಸಮೀಪದಲ್ಲಿ ನಿಂತು ಭೀಷ್ಮ, ದ್ರೋಣ, ಕೃಪ, ವಿದುರರುಗಳಿಗೆ ‘ನಮಗೆ ತಕ್ಕ ಬುದ್ಧಿಮಾತುಗಳನ್ನು ಹೇಳಿ ಮರಳಿರಿ’ ಎನ್ನಲು-
ಕಂ|| ನಡಪಿಯುಮೋದಿಸಿಯುಂ ಬಿ
     ಲ್ವಿಡಿಯಿಸಿಯುಂ ಕೆಚ್ಚುವಿರ್ದ ಕೂರ್ಮೆಗಳೆರ್ದೆಯಂ|
     ನಡೆ ಪಾಂಡುಸುತರಗಲ್ಕೆಗೆ
     ನಿಡುಸುಯ್ದರ್ ದ್ರೋಣ ಭೀಷ್ಮ ಕೃಪ ವಿದುರರ್ಕಳ್|| ೯೬ ||
(
ನಡಪಿಯುಂ, ಓದಿಸಿಯುಂ, ಬಿಲ್ವಿಡಿಯಿಸಿಯುಂ ಕೆಚ್ಚುವಿರ್ದ ಕೂರ್ಮೆಗಳ್ ಎರ್ದೆಯಂ ನಡೆ, ಪಾಂಡುಸುತರ ಅಗಲ್ಕೆಗೆ     ನಿಡುಸುಯ್ದರ್ ದ್ರೋಣ ಭೀಷ್ಮ ಕೃಪ ವಿದುರರ್ಕಳ್)
ಸಾಕಿ ಸಲಹಿ ಅಕ್ಷರ ವಿದ್ಯೆಯನ್ನೂ, ಬಿಲ್ವಿದ್ಯೆಯನ್ನೂ ಕಲಿಸಿ, ಹೃದಯಕ್ಕೆ ಪ್ರೀತಿಯಿಂದ ಅಂಟಿಕೊಂಡಂತಿದ್ದ ಪಾಂಡವರನ್ನು ಅಗಲಬೇಕಾಯಿತಲ್ಲಾ ಎಂದು ಭೀಷ್ಮ, ದ್ರೋಣ, ಕೃಪ, ವಿದುರರು ನಿಟ್ಟುಸಿರು ಬಿಟ್ಟರು.
ವ|| ಆಗಳ್ ವಿದುರಂ ಕೆಲನಱಿಯದಂತುಮವರಱಿವಂತುಂ ಸಾಮಾನ್ಯ ಸ್ಥಿತಿಯೊಳೆ ಬಟ್ಟೆಯ ನಂಜಿನ ಕಿರ್ಚಿನ ದೆಸೆಗೆ ಕರಂ ಪ್ರಯತ್ನಪರರಾಗಿಮೆಂದೊಡಂತೆ ಗೆಯ್ವೆಮೆಂದವರನಿರಲ್ವೇೞ್ದು ಪಯಣಂಬೋಗಿ
(
ಆಗಳ್ ವಿದುರಂ ಕೆಲನ್ ಅಱಿಯದಂತುಂ ಅವರ್ ಅಱಿವಂತುಂ,ಸಾಮಾನ್ಯ ಸ್ಥಿತಿಯೊಳೆ ಬಟ್ಟೆಯ, ನಂಜಿನ, ಕಿರ್ಚಿನ ದೆಸೆಗೆ ಕರಂ ಪ್ರಯತ್ನಪರರಾಗಿಂ’ ಎಂದೊಡೆ ‘ಅಂತೆಗೆಯ್ವೆಂ’ ಎಂದು ಅವರನ್ ಇರಲ್ವೇೞ್ದು ಪಯಣಂಬೋಗಿ)
ಆಗ ವಿದುರನು ಅಕ್ಕಪಕ್ಕದವರಿಗೆ ತಿಳಿಯದಂತೆ, ಪಾಂಡವರು ಮಾತ್ರ ತಿಳಿಯುವಂತೆ ‘ಮಾರ್ಗದ, ವಿಷದ, ಉರಿಯ ವಿಷಯಕ್ಕೆ ವಿಶೇಷವಾಗಿ ಪ್ರಯತ್ನಪರರಾಗಿ (ಗಮನ ವಹಿಸಿ) ಎಂದನು. ಪಾಂಡವರು ‘ಹಾಗೆಯೇ ಮಾಡುತ್ತೇವೆ’ ಎಂದು ಅವರನ್ನು ಅಲ್ಲಿಯೇ ಬಿಟ್ಟು ಪಯಣವನ್ನು ಮಂದುವರಿಸಿ-
ಕಂ|| ಪೊಳಪಿನ ಕಿರಣದ ಗಾಳಿಯ
     ಪೊಳಪನೆ ಸೈರಿಸದ ಕುಸುಮದಳ ಸುಕುಮಾರರ್|
     ತಳರ್ದು ನೆಲೆಯಿಂದಮಾಗಳ್
     ಕೊಳದಿಂ ಪೊಱಮಟ್ಟ ಹಂಸೆಗಳ್ಗೆಣೆಯಾದರ್|| ೯೭ ||
(
ಪೊಳಪಿನ ಕಿರಣದ, ಗಾಳಿಯ ಪೊಳಪನೆ ಸೈರಿಸದ ಕುಸುಮದಳ ಸುಕುಮಾರರ್, ತಳರ್ದು ನೆಲೆಯಿಂದಂ ಆಗಳ್      ಕೊಳದಿಂ ಪೊಱಮಟ್ಟ ಹಂಸೆಗಳ್ಗೆ ಎಣೆಯಾದರ್)
ಬಿರುಬಿಸಿಲಿನ, ಬೀಸುವ ಗಾಳಿಯ ಹೊಡೆತವನ್ನು ಸೈರಿಸಲಾರದೆ, ಹೂವಿನ ಎಸಳುಗಳ ಹಾಗೆ ಕೋಮಲರಾದ ಆ ಹುಡುಗರು ತಾವು ಬೆಳೆದ ಊರಿನಿಂದ ಹೊರಹೊರಟು, ಸರೋವರದಿಂದ ಹೊರಬಿದ್ದ ಹಕ್ಕಿಗಳಂತೆ ಕಂಡರು.
ವ|| ಆಗಿ ತಾವಾದಿಗರ್ಭೇಶ್ವರರಪ್ಪುದಱಿಂ ತಳರ್ದೆಡೆಯೆಡೆಯ ಮರಂಗಳ ತೊಱೆಗಳ ಬಾಡಂಗಳ ಪೆಸರ್ಗಳಂ ಬೆಸಗೊಳುತ್ತುಂ ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನಜನ್ನವಿರಂಗಳುಮನವರ ಪರಕೆಯುಮಂ ಕೆಯ್ಕೊಳುತ್ತುಮವರ್ಗೆ ಬಾಧೆಯಾಗದಂತು ಕಾಪಂ ನಿಯಮಿಸುತ್ತುಂ ಕಾಲೂರ್ಗಳ ಗಂಡರ ಪೆಂಡಿರ ನಡೆಯುಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಗೆ ನಗುತ್ತುಮಲ್ಲಿಗಲ್ಲಿಗೊಡೆದ ಕೆಱೆಗಮೞಿದಾಯತನಕ್ಕಂ ಧನಮನಿತ್ತು ಜೀರ್ಣೋದ್ಧಾರಂಗಳಂ ಮಾಡಿಸುತ್ತುಂ ಬೀಡುದಾಣಂಗಳೊಳಿಕ್ಕಿದ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ವಿಶ್ರಮಿಸುತ್ತುಂ ಬಂದು
(
ಆಗಿ ತಾವು ಆದಿಗರ್ಭೇಶ್ವರರ್ ಅಪ್ಪುದಱಿಂ, ತಳರ್ದು ಎಡೆಯೆಡೆಯ ಮರಂಗಳ, ತೊಱೆಗಳ, ಬಾಡಂಗಳ ಪೆಸರ್ಗಳಂ ಬೆಸಗೊಳುತ್ತುಂ,  ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನಜನ್ನವಿರಂಗಳುಮನ್ ಅವರ ಪರಕೆಯುಮಂ ಕೆಯ್ಕೊಳುತ್ತುಂ, ಅವರ್ಗೆ ಬಾಧೆಯಾಗದಂತು ಕಾಪಂ ನಿಯಮಿಸುತ್ತುಂ, ಕಾಲೂರ್ಗಳ ಗಂಡರ ಪೆಂಡಿರ ನಡೆಯ ಉಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಗೆ ನಗುತ್ತುಂ, ಅಲ್ಲಿಗಲ್ಲಿಗೆ ಒಡೆದ ಕೆಱೆಗಂ, ಅೞಿದ ಆಯತನಕ್ಕಂ ಧನಮನಿತ್ತು ಜೀರ್ಣೋದ್ಧಾರಂಗಳಂ ಮಾಡಿಸುತ್ತುಂ, ಬೀಡುದಾಣಂಗಳೊಳ್ ಇಕ್ಕಿದ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ವಿಶ್ರಮಿಸುತ್ತುಂ ಬಂದು)
ಆಗಿ ತಾವು ಆಗರ್ಭ ಶ್ರೀಮಂತರಾದುದರಿಂದ ಹೊರಟ ದಾರಿಯಲ್ಲಿ ಅಲ್ಲಲ್ಲಿ ಇರುವ ಮರಗಳ, ತೊರೆಗಳ ಗ್ರಾಮಗಳ ಹೆಸರುಗಳನ್ನು ವಿಚಾರಿಸುತ್ತ, ದೊಡ್ಡ ಅಗ್ರಹಾರಗಳ ಮಹಾಜನರು ಕೊಟ್ಟ ಬಂಗಾರದ ಜನಿವಾರಗಳನ್ನೂ, ಅವರ ಹರಕೆಗಳನ್ನೂ ಪಡೆದುಕೊಳ್ಳುತ್ತ, ಅವರಿಗೆ ತೊಂದರೆಗಳು ಬಾರದಂತೆ ಕಾವಲು ನಿಯಮಿಸುತ್ತ, ಹಳ್ಳಿಯ ಗಂಡು-ಹೆಣ್ಣುಗಳ ನಡೆ-ನುಡಿಗೆ, ಅಲಂಕಾರಕ್ಕೆ, ಮಾತಿನ ರೀತಿಗೆ, ತಲೆಗೂದಲು ಗಂಟು ಹಾಕುವ ಚೆಂದಕ್ಕೆ, ಮುಗ್ಧತೆಗೆ ಮುಗುಳ್ನಗೆ ನಗುತ್ತ, ಅಲ್ಲಲ್ಲಿ ಒಡೆದು ಹೋದ ಕೆರೆಗಳನ್ನು, ಅಳಿದು ಹೋದ ದೇವಸ್ಥಾನಗಳನ್ನು ಹಣ ಕೊಟ್ಟು ಜೀರ್ಣೋದ್ಧಾರ ಮಾಡಿಸುತ್ತ, ಬೀಡು ಬಿಡುವ ಸ್ಥಳಗಳಲ್ಲಿ ಹಾಕಿದ ಬಳ್ಳಿಯ ಚಪ್ಪರಗಳ ಕೆಳಗೂ, ಮೊಗ್ಗಿನ ಚಪ್ಪರಗಳ ಕೆಳಗೂ ವಿಶ್ರಮಿಸಿಕೊಳ್ಳುತ್ತ ಬಂದು
ಚಂ|| ಎಡಱಱಿದೀವ ಕಲ್ಪತರುವೆಂದು ವನೀಪಕಕೋಟಿ ಸಂತಸಂ
     ಬಡೆ ಪೊಡೆವೊಂದಕಾಳವಿಳಯಾಶನಿಯೆಂದು ವಿರೋಧಿಗಳ್ ಮನಂ|
     ಗಿಡೆ ಬಿಯಮುಂ ಪರಾಕ್ರಮಮುಮೊಪ್ಪಿರೆ ತನ್ನೊಡವುಟ್ಟಿದರ್ ಸಮಂ
     ತೊಡವರೆ ವಾರಣಾವತಮನೆಯ್ದಿದನಮ್ಮನ ಗಂಧವಾರಣಂ|| ೯೮ ||
(‘
ಎಡಱಱಿದು ಈವ ಕಲ್ಪತರು’ ಎಂದು ವನೀಪಕಕೋಟಿ ಸಂತಸಂಬಡೆ,ಪೊಡೆವೊಂದು ಅಕಾಳವಿಳಯಾಶನಿ’ ಎಂದು ವಿರೋಧಿಗಳ್ ಮನಂಗಿಡೆ, ಬಿಯಮುಂ ಪರಾಕ್ರಮಮುಂ ಒಪ್ಪಿರೆ, ತನ್ನೊಡವುಟ್ಟಿದರ್ ಸಮಂತೊಡವರೆ,  ವಾರಣಾವತಮನ್ ಎಯ್ದಿದನ್ ಅಮ್ಮನ ಗಂಧವಾರಣಂ)
‘ಕಷ್ಟವನ್ನು ಅರ್ಥ ಮಾಡಿಕೊಂಡು ದಾನ ಕೊಡುವ ಕಲ್ಪತರು’ ಎಂದು ಯಾಚಕ ಕೋಟಿಯು ಸಂತೋಷಪಟ್ಟರೆ ‘ಅಕಾಲದಲ್ಲಿ ಬರುವ ಪ್ರಳಯಕಾರಕ ಸಿಡಿಲು’ ಎಂದು ವಿರೋಧಿಗಳು ಹೆದರಿಕೊಳ್ಳುತ್ತಿದ್ದರು; ದಾನ-ಧರ್ಮ, ಪರಾಕ್ರಮಗಳು ಒಪ್ಪುವಂತಿದ್ದವು; ತನ್ನ ಒಡಹುಟ್ಟಿದವರು ಜೊತೆಗಿದ್ದರು. ಹೀಗೆ ‘ಅಮ್ಮನ ಗಂಧವಾರಣ’ ಎಂಬ ಬಿರುದು ಹೊತ್ತ ಅರ್ಜುನನು ವಾರಣಾವತವನ್ನು ತಲುಪಿದನು.
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ
ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ 
ಚತುರ ಕವಿತಾಗುಣಾರ್ಣವ ವಿರಚಿತಮಪ್ಪ
ವಿಕ್ರಮಾರ್ಜುನ ವಿಜಯದೊಳ್  ದ್ವಿತೀಯಾಶ್ವಾಸಂ