ಭಾನುವಾರ, ಜುಲೈ 12, 2020






ಪಂಪಭಾರತ ಆಶ್ವಾಸ 3 ಪದ್ಯಗಳು 33ರಿಂದ 42

ಮ|| ತಲೆಯೊಳ್ ಸೀರೆಯನಿಕ್ಕಿ ಕೆಮ್ಮನೆನಿತಂ ಪೂಣ್ದಿರ್ಪಮುಗ್ರಾರಿ ವಂ
     ಶ ಲತಾವಲ್ಲರಿಗಳ್ಗೆ ದಾವಶಿಖಿವೊಲ್ ಮೆಯ್ದೋಱಿ ತದ್ದ್ರೌಪದೀ|
     ಲಲನಾವ್ಯಾಜದಿನೀಗಳೊಂದೆ ಪೊೞಲೊಳ್ ಸಂದಿರ್ದ ಭಾಸ್ವತ್ಸುಹೃ
     ದ್ಬಲಕಂ ಮಾರ್ವಲಕಂ ಗುಣಾರ್ಣವ ಶರಪ್ರಾಗಲ್ಭ್ಯಮಂ ತೋಱುವಂ|| ೩೩||
(ತಲೆಯೊಳ್ ಸೀರೆಯನ್ ಇಕ್ಕಿ ಕೆಮ್ಮನೆ ಎನಿತಂ ಪೂಣ್ದಿರ್ಪಂ? ಉಗ್ರ ಅರಿ ವಂಶ ಲತಾವಲ್ಲರಿಗಳ್ಗೆ ದಾವಶಿಖಿವೊಲ್ ಮೆಯ್ದೋಱಿ ತತ್ ದ್ರೌಪದೀಲಲನಾವ್ಯಾಜದಿನ್ ಈಗಳ್ ಒಂದೆ ಪೊೞಲೊಳ್ ಸಂದಿರ್ದ ಭಾಸ್ವತ್ ಸುಹೃತ್ ಬಲಕಂ, ಮಾರ್ವಲಕಂ, ಗುಣಾರ್ಣವ ಶರಪ್ರಾಗಲ್ಭ್ಯಮಂ ತೋಱುವಂ’)
ತಲೆಯ ಮೇಲೆ ಬಟ್ಟೆ ಹೊದ್ದುಕೊಂಡು (ಎಂದರೆ ಗುರುತು ಮರೆಸಿಕೊಂಡು) ಇನ್ನೂ ಎಷ್ಟು ದಿನ ಹೀಗೆ ಕಾಲ ಕಳೆಯುವುದು? ಈಗ ಆ ದ್ರೌಪದಿಯ (ಸ್ವಯಂವರದ) ಒಂದು ಕಾರಣ ಸಿಕ್ಕಿದೆ. ಅಲ್ಲಿಗೆ ಹೋಗಿ ನಮ್ಮ ವೈರಿವಂಶವೆಂಬ ಬಳ್ಳಿಯ ಕುಡಿಗಳ ಪಾಲಿನ ಕಾಡ್ಗಿಚ್ಚಾಗೋಣ! ಒಂದೇ ಊರಿನಲ್ಲಿ ಸೇರಿರುವ, ನಮ್ಮ ಮಿತ್ರರಾಜರುಗಳಿಗೂ, ವೈರಿ ರಾಜರುಗಳಿಗೂ ಅರ್ಜುನನ ಬಿಲ್ವಿದ್ಯೆಯ ಪರಿಣತಿಯನ್ನು ತೋರಿಸಿಕೊಡೋಣ!
(ಟಿಪ್ಪಣಿ: ತಲೆಯೊಳ್ ಸೀರೆಯನಿಕ್ಕಿ ಕೆಮ್ಮನೆನಿತಂ ಪೂಣ್ದಿರ್ಪಂ’ ಎಂಬ ಮಾತು ಬ್ರಾಹ್ಮಣರಂತೆ ವೇಷ ಹಾಕಿಕೊಂಡು ಸುಮ್ಮನೆ ಎಷ್ಟು ದಿನ ಅಡಗಿಕೊಂಡಿರುವುದು?’ ಎಂಬ ಅರ್ಥವನ್ನು ಸೂಚಿಸುತ್ತಿರಬಹುದು. ಕ್ಷತ್ರಿಯರು ನಡೆದುಕೊಳ್ಳಬೇಕಾದ್ದು ಹೇಗೆ ಎಂಬುದನ್ನು ಪದ್ಯದ ಮುಂದಿನ ಭಾಗವು ಹೇಳುತ್ತಿದೆ ಎಂಬುದನ್ನು ಗಮನಿಸಬೇಕು).
ವ|| ಎಂದು ನಿಶ್ಚಯಿಸಿ ತಮ್ಮ ಬಗೆದ ಬಗೆಯೊಳ್ ಪರಾಶರಮುನೀಂದ್ರೋಪದೇಶಮೊಡಂಬಡೆ ಪಾಂಡವರೇಕಚಕ್ರದಿಂ ಪೊಱಮಟ್ಟು ಶಕುನಂಗಳೆಲ್ಲಮುತ್ತರೋತ್ತರಂ ತಿರ್ದುವಿನ ಮುತ್ತರಾಭಿಮುಖರಾಗಿ ಪಯಣಂಬೋಗಿ ಕೆಲವಾನುಂ ದಿವಸಕ್ಕೆ ಯಮುನಾ ನದೀತಟನಿಕಟವರ್ತಿಯಪ್ಪಂಗದಪರ್ಣವೆಂಬಡವಿಯೊಳಗನೆ ಬರೆವರೆ ದಿನಕರಬಿಂಬಾಂಬುಜಮಂಬರಸರೋವರದಿಂ ಪತ್ತುವಿಡುವುದುಂ ಕವಿದ ಕೞ್ತಲೆಯಗುರ್ವಾಗೆ ತಮೋಪಶಮನನಿಮಿತ್ತಮುರಿವ ಕೊಳ್ಳಿಯಂ ಪಿಡಿದು ಜಗುನೆಯಂ ಪಾಯ್ವಾಗಳಾ ಬನಮನಾಳ್ವ ಕುಬೇರನಾಯಕನಂಗದಪರ್ಣನೆಂಬ ಗಂಧರ್ವಂ ಜಳಕ್ರೀಡೆಯಾಡುತಿರ್ದನಿಬರಿಂ ಮುಂದೆ ಬರ್ಪ ವಿಕ್ರಮಾರ್ಜುನನ ಪಾದಾಭಿಘಾತದೊಳುಚ್ಚಳಿಸುವ ನೀರ ಸಪ್ಪುಳುಮಂ ಕೇಳ್ದು ಪಿಡಿದ ಕೊಳ್ಳಿಯ ಬೆಳಗುಮಂ ಕಂಡು ಬೆಳಗಂ ಕಂಡ ಪತಂಗದಂತೆ ಮಾಣದೆಯ್ತಂದು-
(ಎಂದು ನಿಶ್ಚಯಿಸಿ, ತಮ್ಮ ಬಗೆದ ಬಗೆಯೊಳ್ ಪರಾಶರಮುನೀಂದ್ರ ಉಪದೇಶಂ ಒಡಂಬಡೆ, ಪಾಂಡವರ್ ಏಕಚಕ್ರದಿಂ ಪೊಱಮಟ್ಟು, ಶಕುನಂಗಳೆಲ್ಲಂ ಉತ್ತರೋತ್ತರಂ ತಿರ್ದುವಿನಂ,  ಉತ್ತರ ಅಭಿಮುಖರಾಗಿ ಪಯಣಂಬೋಗಿ, ಕೆಲವಾನುಂ ದಿವಸಕ್ಕೆ ಯಮುನಾ ನದೀತಟನಿಕಟವರ್ತಿಯಪ್ಪ ಅಂಗದಪರ್ಣವೆಂಬ ಅಡವಿಯ ಒಳಗನೆ ಬರೆವರೆ, ದಿನಕರಬಿಂಬಾಂಬುಜಂ ಅಂಬರಸರೋವರದಿಂ ಪತ್ತುವಿಡುವುದುಂ, ಕವಿದ ಕೞ್ತಲೆಯಗುರ್ವಾಗೆ, ತಮೋಪಶಮನನಿಮಿತ್ತಂ ಉರಿವ ಕೊಳ್ಳಿಯಂ ಪಿಡಿದು ಜಗುನೆಯಂ ಪಾಯ್ವಾಗಳ್, ಆ ಬನಮನ್ ಆಳ್ವ ಕುಬೇರನಾಯಕನ್ ಅಂಗದಪರ್ಣನೆಂಬ ಗಂಧರ್ವಂ ಜಳಕ್ರೀಡೆಯಾಡುತಿರ್ದು ಅನಿಬರಿಂ ಮುಂದೆ ಬರ್ಪ ವಿಕ್ರಮಾರ್ಜುನನ ಪಾದಾಭಿಘಾತದೊಳ್ ಉಚ್ಚಳಿಸುವ ನೀರ ಸಪ್ಪುಳುಮಂ ಕೇಳ್ದು, ಪಿಡಿದ ಕೊಳ್ಳಿಯ ಬೆಳಗುಮಂ ಕಂಡು, ಬೆಳಗಂ ಕಂಡ ಪತಂಗದಂತೆ ಮಾಣದೆಯ್ತಂದು-)
ವ| ಎಂದು ನಿಶ್ಚಯಿಸಿಕೊಂಡರು. ಅವರ ಈ ನಿಶ್ಚಯಕ್ಕೆ ಪರಾಶರ ಮುನಿಗಳೂ ಒಡಂಬಟ್ಟರು. ಶಕುನಗಳೂ ಸಹ ಮುಂದೆ ಒಳ್ಳೆಯದಾಗಲಿದೆ ಎಂದು ಸೂಚಿಸುತ್ತಿದ್ದವು. ಪಾಂಡವರು ಉತ್ತರದಿಕ್ಕಿನತ್ತ ಪ್ರಯಾಣ ಹೊರಟು ಹಲವಾರು ದಿನಗಳ ನಂತರ ಯಮುನಾನದಿಯ ದಡದ ಸಮೀಪದ ಅಂಗದಪರ್ಣವೆಂಬ ಅಡವಿಯ ಹತ್ತಿರ ಬಂದರು. ಅಷ್ಟು ಹೊತ್ತಿಗೆ ಸೂರ್ಯಬಿಂಬವು ಆಗಸದಿಂದ ಕಣ್ಮರೆಯಾಯಿತು. ದಟ್ಟವಾದ ಕತ್ತಲು ಕವಿಯಿತು. ಪಾಂಡವರು ಕತ್ತಲನ್ನು ನಿವಾರಿಸಲೆಂದು ಕೈಯಲ್ಲಿ ಉರಿಯುವ ಕೊಳ್ಳಿಯನ್ನು ಹಿಡಿದು ನದಿಯನ್ನು ದಾಟುತ್ತಿದ್ದರು. ಆಗ ಆ ವನವನ್ನು ಆಳುತ್ತಿದ್ದ ಅಂಗದಪರ್ಣನೆಂಬ ಗಂಧರ್ವನು ಅಲ್ಲಿ ಜಲಕ್ರೀಡೆಯಾಡುತ್ತಿದ್ದನು. ಅವನು ಎಲ್ಲರಿಗಿಂತಲೂ ಮುಂದೆ ಬರುತ್ತಿದ್ದ ಅರ್ಜುನನ ಹೆಜ್ಜೆಯ ಹೊಡೆತಕ್ಕೆ ಉಂಟಾದ ನೀರಿನ ಸಪ್ಪಳವನ್ನು ಕೇಳಿ, ಹಿಡಿದ ಉರಿಯುವ ಕೊಳ್ಳಿಯನ್ನು ಕಂಡು, ಬೆಳಕನ್ನು ಕಂಡ ಹಾತೆಯಂತೆ ಹತ್ತಿರ ಬಂದು-
ಮ|| ಬನಮೆನ್ನಾಳ್ವ ಬನಂ ನಿಶಾಬಲಮಿದಿಂತಸ್ಮದ್ಬಲಂ ಧೂರ್ತನಯ್
     ನಿನಗೀ ಪೊೞ್ತಱೊಳಿತ್ತ ಬರ್ಪದಟನಿಂತಾರಿತ್ತರೆಂದಾಂತೊಡಾ|
     ತನನಾ ಕೊಳ್ಳಿಯೊಳಿಟ್ಟೊಡಂತದು ಲಯಾಂತೋಗ್ರಾಗ್ನಿಯಂತೞ್ವೆ ಬಂ
     ದೆನಸುಂ ಮಾಣದೆ ಬಾಗಿದಂ ಪದಯುಗಕ್ಕಾರೂಢಸರ್ವಜ್ಞನಾ|| ೩೪ ||
(ಬನಂ ಎನ್ನ ಆಳ್ವ ಬನಂ, ನಿಶಾಬಲಂ ಇದು ಇಂತು ಅಸ್ಮದ್ಬಲಂ, ಧೂರ್ತನಯ್! ನಿನಗೆ ಈ  ಪೊೞ್ತಱೊಳ್ ಇತ್ತ ಬರ್ಪ ಅದಟನ್ ಇಂತು ಆರ್ ಇತ್ತರ್? ಎಂದು 
ಆಂತೊಡೆ, ಆತನನ್ ಆ ಕೊಳ್ಳಿಯೊಳ್ ಇಟ್ಟೊಡೆ,  ಅಂತು ಅದು ಲಯಾಂತ ಉಗ್ರ ಅಗ್ನಿಯಂತೆ ಅೞ್ವೆ, ಬಂದು ಎನಸುಂ ಮಾಣದೆ ಬಾಗಿದಂ ಪದಯುಗಕ್ಕೆ ಆರೂಢಸರ್ವಜ್ಞನಾ)
‘ಇದು ನಾನು ಆಳುತ್ತಿರುವ ಕಾಡು; ಈ ಇರುಳ ಸೈನ್ಯವು ನನ್ನದು; ಧೂರ್ತ! ಈ ಹೊತ್ತಿನಲ್ಲಿ ಈ ಕಾಡೊಳಗೆ ನುಗ್ಗಿ ಬರುವ ಧೈರ್ಯವನ್ನು ನಿನಗೆ ಯಾರು ಕೊಟ್ಟರು?’ ಎಂದು ಎದುರಿಸಿ ನಿಂತನು. ಆಗ ಅರ್ಜುನನು ತನ್ನ ಕೈಯಲ್ಲಿದ್ದ ಕೊಳ್ಳಿಯಿಂದಲೇ ಅವನನ್ನು ಹೊಡೆದನು. ಅದು ಪ್ರಳಯಕಾಲದ ಬೆಂಕಿಯಂತೆ ವ್ಯಾಪಿಸಿ ಅವನನ್ನು ಸುಡತೊಡಗಿತು. ಅವನು ಕೂಡಲೇ ಬಂದು ಆರೂಢ ಸರ್ವಜ್ಞನ ಕಾಲಿಗೆ ಎರಗಿದನು.
ವ|| ಅಂತು ತಾಗಿ ಬಾಗಿದಂತಾಗಿ ಗಂಧರ್ವಂ ಕೊಂತಿವೆರಸಱುವರುಮಂ ತನ್ನ ಬೀಡಿಂಗೊಡಗೊಂಡೊಯ್ದತಿ ಪ್ರೀತಿಯಿಂ ಬಿರ್ದನಿಕ್ಕಿ-
(ಅಂತು ತಾಗಿ ಬಾಗಿದಂತೆ ಆಗಿ, ಗಂಧರ್ವಂ ಕೊಂತಿವೆರಸು ಅಱುವರುಮಂ ತನ್ನ ಬೀಡಿಂಗೆ ಒಡಗೊಂಡು ಒಯ್ದು, ಅತಿ ಪ್ರೀತಿಯಿಂ ಬಿರ್ದನಿಕ್ಕಿ-)
ಹಾಗೆ ತಾನೇ ಮೇಲೆ ಬಿದ್ದು ಸೋತಂತಾಗಿ, ಆ ಗಂಧರ್ವನು ಕುಂತಿಯೂ ಸೇರಿದಂತೆ ಆರು ಜನರನ್ನೂ ತನ್ನ ಮನೆಗೆ ಕರೆದೊಯ್ದು ಪ್ರೀತಿಯಿಂದ ಔತಣವನ್ನಿಕ್ಕಿ -
ಕಂ|| ಇದು ನಿನ್ನ ಕೊಟ್ಟ ತಲೆ ನಿನ
     ಗಿದನಿತ್ತಪೆನೆಂದು ನುಡಿಯಲಾಗದು ಮಾರ್ಕೊ|
     ಳ್ಳದಿರೆಂದು ಗಿಳಿಯ ಬಣ್ಣದ
     ಕುದುರೆಯನಯ್ನೂರನಿತ್ತನಂಗದಪರ್ಣಂ|| ೩೫||
(‘ಇದು ನಿನ್ನ ಕೊಟ್ಟ ತಲೆ, ನಿನಗೆ ಇದನ್ ಇತ್ತಪೆನ್ ಎಂದು ನುಡಿಯಲಾಗದು; ಮಾರ್ಕೊಳ್ಳದೆ ಇರು’ ಎಂದು ಗಿಳಿಯ ಬಣ್ಣದ ಕುದುರೆಯನ್ ಅಯ್ನೂರನ್ ಇತ್ತನ್ ಅಂಗದಪರ್ಣಂ)
‘ನನ್ನ ಈ ತಲೆಯನ್ನು ಉಳಿಸಿಕೊಟ್ಟವನು ನೀನು. ಹಾಗಾಗಿ ನಾನು ನಿನಗೆ ಇದನ್ನು ಕೊಡುತ್ತಿದ್ದೇನೆ ಎಂದು ಹೇಳಿಕೊಳ್ಳುವಂತಿಲ್ಲ. ನೀನು ಮರುಮಾತಾಡದೆ ಇದನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿ ಅಂಗದಪರ್ಣನು ಐನೂರು ಗಿಳಿಯ ಬಣ್ಣದ ಕುದುರೆಗಳನ್ನು ಅರ್ಜುನನಿಗೆ ಕೊಟ್ಟನು.
(ಟಿಪ್ಪಣಿ: ಅಂಗದಪರ್ಣನು ಯುದ್ಧದಲ್ಲಿ ಸೋತದ್ದರಿಂದ ಅವನ ಸೊತ್ತೆಲ್ಲವೂ ಅರ್ಜುನನಿಗೆ ಸೇರಿದಂತಾಯಿತು. ಹಾಗಾಗಿ ‘ನಿನಗೆ ಇದನ್ ಇತ್ತಪೆನ್’ ಎಂದು ಹೇಳುವ ಅಧಿಕಾರ ಅವನಿಗೆ ಇಲ್ಲ. ಏಕೆಂದರೆ ಇಷ್ಟರವರೆಗೆ ಯಾವುದು ಅಂಗದಪರ್ಣನಿಗೆ ಸೇರಿತ್ತೋ ಅದೆಲ್ಲವೂ ಈಗ ಅರ್ಜುನನಿಗೆ ಸೇರಿದೆ.)
ವ|| ಇತ್ತೊಡಿವನ್ನೆಗಮೆಮಗಾಗಿರ್ಕೆಂದು ಪ್ರಿಯಂ ನುಡಿದಂಗದಪರ್ಣನನಿರವೇೞ್ದು ಮಾರ್ತಾಂಡೋದಯಮೆ ನಿಜೋದಯಮಾಗೆ ಪಯಣಂಬೋಗಿ-
(ಇತ್ತೊಡೆ ‘ಇವು ಅನ್ನೆಗಂ ಎಮಗಾಗಿ ಇರ್ಕೆ’ ಎಂದು ಪ್ರಿಯಂ ನುಡಿದು, ಅಂಗದಪರ್ಣನನ್ ಇರವೇೞ್ದು, ಮಾರ್ತಾಂಡ ಉದಯಮೆ ನಿಜ ಉದಯಂ ಆಗೆ, ಪಯಣಂಬೋಗಿ)
ಹಾಗೆ ಕೊಟ್ಟಾಗ ‘ನಾವು ಬರುವಷ್ಟರವರೆಗೂ ಇವು ನಮಗಾಗಿ ಇಲ್ಲಿಯೇ ಇರಲಿ’ ಎಂದು ಅಂಗದಪರ್ಣನಿಗೆ ಪ್ರಿಯವಾಗುವಂತೆ ನುಡಿದು, ಅವನನ್ನು ಅಲ್ಲಿಯೇ ಇರಿಸಿ, ಸೂರ್ಯೋದಯದ ಹೊತ್ತಿಗೆ ತಾವೂ ಎದ್ದು ಪಯಣವನ್ನು ಮುಂದುವರಿಸಿ -
ಕಂ|| ಪುಣ್ಯನದೀನದ ನಗ[ರಾ
     ರ]ಣ್ಯ ವಿಭೂಷಣೆಯನೊಲ್ದು ನೋಡುತ್ತುಮಿಳಾ|
     ಪುಣ್ಯ ಸ್ತ್ರೀಯಂ ಸಂಚಿತ
     ಪುಣ್ಯರ್ ಪಾಂಚಾಲದೇಶಮಂ ಪುಗುತಂದರ್|| ೩೬||
ನದಿ, ಬೆಟ್ಟಗುಡ್ಡಗಳು, ನಗರಗಳು, ಅರಣ್ಯ ಇವುಗಳಿಂದ ಸುಶೋಭಿತೆಯಾದ ನೆಲವೆಣ್ಣನ್ನು ಪ್ರೀತಿಯಿಂದ ನೋಡುತ್ತಾ ಆ ಪುಣ್ಯಾತ್ಮರು ಪಾಂಚಾಲದೇಶವನ್ನು ಸಮೀಪಿಸಿದರು.
(ಟಿಪ್ಪಣಿ: ಇಲ್ಲಿ ‘ಪುಣ್ಯ ಸ್ತ್ರೀ’ ಎಂದಿರುವುದನ್ನು ಗಮನಿಸಬೇಕು. ವಚನಕಾರರು ‘ಹೆಂಡತಿ’ ಎಂಬ ಅರ್ಥದಲ್ಲಿ ಈ ಪದವನ್ನು ಬಳಸುತ್ತಾರೆ. ಪಂಪನೂ ಇದೇ ಅರ್ಥದಲ್ಲಿ ಬಳಸಿರುವುದು ಸಾಧ್ಯ. ಸದ್ಯಕ್ಕೆ ರಾಜ್ಯ ಕಳೆದುಕೊಂಡಿರುವ ಪಾಂಡವರಿಗೆ ಅವರು ಸಾಗಿ ಬಂದ ಪ್ರದೇಶವು ‘ನದಿಗಳು, ಬೆಟ್ಟಗಳು, ನಗರಗಳು ಮುಂತಾದ ಆಭರಣಗಳಿಂದ ಅಲಂಕೃತವಾದ ಹೆಣ್ಣಿನಂತೆ, ತಾವು  ಆಳಬೇಕಾದ ಭೂಮಿಯಂತೆ ಕಂಡಿತು ಎಂಬ ಸೂಚನೆ ಇಲ್ಲಿದೆ. ರಾಜರೆಂದರೆ ‘ಭೂಪತಿ’ಗಳು ತಾನೆ?)
ವ||ಅಂತು ತದ್ವಿಷಯವಿಳಾಸಿನಿಗೆ ಪಿಡಿದ ಕನಕಚ್ಛತ್ರದಂತೆ ಸೊಗಯಿಸುವ ಛತ್ರವತೀಪುರದ ಪೊಱವೊೞಲನೆಯ್ತರ್ಪಾಗಳ್-
ಹಾಗೆ, ಆ ದೇಶವೆಂಬ ಸುಂದರಿಗೆ ಹಿಡಿದ ಚಿನ್ನದ ಕೊಡೆಯಂತೆ ಸೊಗಸಾಗಿದ್ದ ಛತ್ರವತೀಪುರದ ಹೊರಭಾಗಕ್ಕೆ ಬಂದಾಗ-
ಉ|| ಪಾಡುವ ತುಂಬಿ ಕೋಡುವ ಪುೞಿಲ್ ನಡಪಾಡುವ ರಾಜಹಂಸೆ ಬಂ
     ದಾಡುವ ತೊಂಡುವೆಣ್ಬುರುಳಿ ತೀಡುವ ತೆಂಬೆರಲೊಲ್ದು ನಲ್ಲರೊಳ್|
     ಕೂಡುವ ನಲ್ಲರಾರೆರ್ದೆಗಮಾರ ಮನಕ್ಕಮನಂಗರಾಗಮಂ
     ಮಾಡೆ ಮನಕ್ಕೆ ಬಂದುವರಿಕೇಸರಿಗಲ್ಲಿಯ ನಂದನಾಳಿಗಳ್|| ೩೭ ||
ಹಾಡುವ ಜೇನ್ನೊಣಗಳು, ತಂಪಾದ ಹೂದೋಟ, ನಡೆದಾಡುವ ರಾಜಹಂಸ, ಬಂದು ಮಾತನಾಡುವ (ಮಾತಾಡಿಸುವ) ಹೆಣ್ಣುಗಿಳಿಗಳು, ತೀಡುವ ತೆಂಕಣಗಾಳಿ, ಒಲಿದವರನ್ನು ಸೇರಿದ ನಲ್ಲರು – ಈ ಎಲ್ಲವೂ ಸಹ ಯಾರ ಹೃದಯದಲ್ಲೂ, ಯಾರ ಮನಸ್ಸಿನಲ್ಲೂ ಕಾಮವನ್ನು ಉದ್ದೀಪಿಸುವಂತೆ ಅಲ್ಲಿಯ ನಂದನವನಗಳು ಸುಂದರವಾಗಿದ್ದವು.
ವ|| ಅಂತು ನೋಡುತ್ತುಂ ಬರೆವರೆ
ಹಾಗೆ ನೋಡುತ್ತಾ ಬರುತ್ತಿರಲು

ಚಂ|| ಮದಗಜಬೃಂಹಿತಧ್ವನಿ ತುರಂಗಮಹೇಷಿತಘೋಷಮಾದಮೊ
     ರ್ಮೊದಲೆ ಪಯೋಧಿಮಂಥನಮಹಾರವಮಂ ಗೆಲೆ ತಳ್ತ ಬಣ್ಣವ|
     ಣ್ಣದ ಗುಡಿ ತೊಂಬೆಗೊಂಚಲೆಲೆಯಿಕ್ಕಿದ ಕಾವಣಮೆಲ್ಲಿಯುಂ ಪೊದ
     ೞ್ದೊದವಿರೆ ಕಣ್ಗೆ ಕಂಡುವಖಿಳಾವನಿಪಾಳರ ಬಿಟ್ಟ ಬೀಡುಗಳ್|| ೩೮||
(ಮದಗಜಬೃಂಹಿತಧ್ವನಿ, ತುರಂಗಮಹೇಷಿತಘೋಷಮ್, ಆದಂ ಒರ್ಮೊದಲೆ ಪಯೋಧಿಮಂಥನಮಹಾರವಮಂ ಗೆಲೆ, ತಳ್ತ ಬಣ್ಣವಣ್ಣದ ಗುಡಿ, ತೊಂಬೆಗೊಂಚಲ್, ಎಲೆಯಿಕ್ಕಿದ ಕಾವಣಂ ಎಲ್ಲಿಯುಂ ಪೊದೞ್ದು ಒದವಿರೆ, ಕಣ್ಗೆ ಕಂಡುವು ಅಖಿಳ ಅವನಿಪಾಳರ ಬಿಟ್ಟ ಬೀಡುಗಳ್)
ಸ್ವಯಂವರಕ್ಕೆ ಬಂದ ರಾಜರುಗಳು ಬೀಡು ಬಿಟ್ಟ ಸ್ಥಳವು ಕಾಣಿಸಿತು. ಆನೆಗಳ ಘೀಂಕಾರ, ಕುದುರೆಗಳ ಕೆನೆತಗಳಿಂದ ತುಂಬಿ ಹೋದ ಆ ಪ್ರದೇಶದಲ್ಲಿ ಉಂಟಾಗುತ್ತಿದ್ದ ಶಬ್ದವು ಹಿಂದೆ  (ಪುರಾಣ ಕಾಲದಲ್ಲಿ) ಕಡಲನ್ನು ಕಡೆದಾಗ ಉಂಟಾದ ಶಬ್ದವನ್ನೂ ಮೀರಿಸುವಂತಿತ್ತು. ಎಲ್ಲಿ ನೋಡಿದರೂ ಬಣ್ಣಬಣ್ಣದ ಬಾವುಟಗಳು, ಹೂಗೊಂಚಲುಗಳು, ಎಲೆಗಳನ್ನು ಹೊದಿಸಿದ ಚಪ್ಪರಗಳು ತುಂಬಿ ಹೋಗಿದ್ದವು.
ವ|| ಅಂತು ನೋಡುತ್ತುಂ ಮೆಚ್ಚುತ್ತುಂ ಬರೆವರೆ-
ಹಾಗೆ ನೋಡುತ್ತಲೂ ಮೆಚ್ಚುತ್ತಲೂ ಬರುತ್ತಿರಲು-
ಉ|| ಈ ತ್ರಿಜಗಂಗಳೊಳ್ ನೆಗೞ್ದ ಪೆಂಡಿರುಮಂ ಗೆಲೆವಂದ ಪದ್ಮಿನೀ
     ಪತ್ರವಿಚಿತ್ರನೇತ್ರೆಗೆ ಸಯಂಬರದೊಳ್ ವರನಪ್ಪೆವಾದೊಡೀ|
     ಧಾತ್ರಿಯನಾಳ್ವೆಮಾಮೆ ವಲಮೆಂದು ತೆರಳ್ದ ಸಮಸ್ತ ರಾಜಕ
     ಚ್ಛತ್ರದಿನಂದು ಛತ್ರವತಿಯೆಂಬಭಿಧಾನಮನಾಳ್ದುದಾ ಪೊೞಲ್|| ೩೯||
(‘ಈ ತ್ರಿಜಗಂಗಳೊಳ್ ನೆಗೞ್ದ ಪೆಂಡಿರುಮಂ ಗೆಲೆವಂದ ಪದ್ಮಿನೀ ಪತ್ರವಿಚಿತ್ರನೇತ್ರೆಗೆ, ಸಯಂಬರದೊಳ್ ವರನ್ ಅಪ್ಪೆವಾದೊಡೆ, ಈ ಧಾತ್ರಿಯನ್ ಆಳ್ವೆಂ ಆಮೆ ವಲಂ’ ಎಂದು ತೆರಳ್ದ ಸಮಸ್ತ ರಾಜಕಚ್ಛತ್ರದಿನ್ ಅಂದು ಛತ್ರವತಿಯೆಂಬ ಅಭಿಧಾನಮನ್ ಆಳ್ದುದು ಆ ಪೊೞಲ್)
‘ಮೂರು ಲೋಕಗಳಲ್ಲಿಯೂ ಪ್ರಸಿದ್ಧರಾದ ಚೆಲುವೆಯರನ್ನು ಗೆಲ್ಲಬಲ್ಲ, ತಾವರೆಯ ಎಸಳಂತೆ ಸುಂದರವಾದ ಕಣ್ಣುಳ್ಳ ದ್ರೌಪದಿಗೆ ಈ ಸ್ವಯಂವರದಲ್ಲಿ ವರನಾದರೆ ಮೂರು ಲೋಕವನ್ನು ಆಳುವವರು ನಾವೇ ಸರಿ’ ಎಂಬ ಆಸೆ ಹೊತ್ತು ಅಲ್ಲಿ ಸೇರಿದ ಸಮಸ್ತ ರಾಜರಿಂದ ಆ ಪಟ್ಟಣವು ‘ಛತ್ರವತಿ’ ಎಂಬ ಹೆಸರನ್ನು ಪಡೆಯಿತು.
ವ|| ಅಂತು ಸೊಗಯಿಸುವ ಪೊೞಲಂ ಪೊಕ್ಕೆಲ್ಲಿಯುಂ ಬೀಡು ಬಿಡಲೆಡೆವಡೆಯದೊಂದು ಭಾರ್ಗವ ಪರ್ಣಶಾಲೆಯೊಳೆಡೆಮಾಡಿಕೊಂಡು ಬ್ರಹ್ಮಲೋಕಮಿರ್ಪಂತಿರ್ದ ಬ್ರಹ್ಮ ಸಭೆಯೊಳಗೆ ದೇವಬ್ರಾಹ್ಮಣರಾಗಿರ್ದರನ್ನೆಗಂ  ದ್ರುಪದನಿತ್ತಲ್-
(ಅಂತು ಸೊಗಯಿಸುವ ಪೊೞಲಂ ಪೊಕ್ಕು, ಎಲ್ಲಿಯುಂ ಬೀಡು ಬಿಡಲ್ ಎಡೆವಡೆಯದೆ, ಒಂದು ಭಾರ್ಗವ ಪರ್ಣಶಾಲೆಯೊಳ್ ಎಡೆ ಮಾಡಿಕೊಂಡು, ಬ್ರಹ್ಮಲೋಕಂ ಇರ್ಪಂತಿರ್ದ ಬ್ರಹ್ಮ ಸಭೆಯೊಳಗೆ ದೇವಬ್ರಾಹ್ಮಣರಾಗಿರ್ದರ್. ಅನ್ನೆಗಂ  ದ್ರುಪದನ್ ಇತ್ತಲ್)
ಹಾಗೆ ಚೆಂದ ಕಾಣುವ ಪಟ್ಟಣದ ಒಳಹೊಕ್ಕು, ಉಳಿದುಕೊಳ್ಳಲು ಎಲ್ಲಿಯೂ ಸ್ಥಳ ದೊರೆಯದೆ, ಒಬ್ಬ ಕುಂಬಾರನ ಎಲೆಮನೆಯಲ್ಲಿ (ಹೇಗೋ) ಜಾಗ ಮಾಡಿಕೊಂಡು ಬ್ರಹ್ಮಲೋಕದಂತಿದ್ದ ಬ್ರಹ್ಮ ಸಭೆಯಲ್ಲಿ ದೇವಬ್ರಾಹ್ಮಣರಾಗಿ ಇದ್ದರು; ಆಗ, ಇತ್ತ ದ್ರುಪದನು-
(ಟಿಪ್ಪಣಿ: ಪಾಂಡವರಿಗೆ ಉಳಿದುಕೊಳ್ಳಲು ಜಾಗ ಸಿಗದೆ ಪರದಾಡಬೇಕಾಯಿತು, ಅಂತೂ ಸಿಕ್ಕಿದ ಸ್ಥಳಕ್ಕೆ ಅವರು ಹೇಗೋ ಹೊಂದಿಕೊಳ್ಳಬೇಕಾಯಿತು ಎಂಬ ಮಾತು ಸ್ವಯಂವರಕ್ಕೆ ಬಂದ ಜನರ ಸಂಖ್ಯೆ ಬಹಳ ದೊಡ್ಡದಿತ್ತೆಂಬುದನ್ನು ಸೂಚಿಸುತ್ತಿದೆ.) 
ಚಂ|| ನೆರೆದ ಸಮಸ್ತ ರಾಜಕಮನಾದರದಿಂದಿರ್ಗೊಂಡನೇಕ ರ
     ತ್ನ ರಚಿತಮಾಗೆ ಮಾಡಿಸಿ ಸಯಂಬರಸಾಲೆಯನೋಳಿಯಿಂ ನರೇ|
     ಶ್ವರರ್ಗಿರಲೆಂದು ಚೌಪಳಿಗೆಗಳ್ ಪಲವಂ ಸಮೆದಲ್ಲಿ ರತ್ನದಿಂ
     ಬೆರಸಿದ ಬಣ್ಣದೊಳ್ ಮೆರೆಯೆ ಕಟ್ಟಿಸಿ ಪುಟ್ಟಿಸಿ ರಂಗಭೂಮಿಯಂ|| ೪೦||
(ನೆರೆದ ಸಮಸ್ತ ರಾಜಕಮನ್ ಆದರದಿಂದ ಇದಿರ್ಗೊಂಡು, ಅನೇಕ ರತ್ನ ರಚಿತಮಾಗೆ ಮಾಡಿಸಿ ಸಯಂಬರಸಾಲೆಯನ್, ನರೇಶ್ವರರ್ಗಿರಲೆಂದು ಚೌಪಳಿಗೆಗಳ್ ಪಲವಂ ಓಳಿಯಿಂ ಸಮೆದು. ಅಲ್ಲಿ ರತ್ನದಿಂ     ಬೆರಸಿದ ಬಣ್ಣದೊಳ್ ಮೆರೆಯೆ ಕಟ್ಟಿಸಿ ಪುಟ್ಟಿಸಿ ರಂಗಭೂಮಿಯಂ)
(ದ್ರುಪದನು) ಸೇರಿದ ಎಲ್ಲ ರಾಜರನ್ನೂ ಆದರದಿಂದ ಎದುರುಗೊಂಡ; ರತ್ನಗಳಿಂದ ಅಲಂಕರಿಸಿದ ಸ್ವಯಂವರ ಶಾಲೆಯನ್ನು ನಿರ್ಮಿಸಿದ; ರಾಜರುಗಳು ಉಳಿದುಕೊಳ್ಳಲು ಸಾಲಾಗಿ ತೊಟ್ಟಿಮನೆಗಳನ್ನು ಕಟ್ಟಿಸಿದ; ಅಲ್ಲಿ ರತ್ನದ ಬಣ್ಣದ ಹೊಳೆಹೊಳೆಯುವ ರಂಗಭೂಮಿಯನ್ನು ರಚಿಸಿದ.
ವ|| ಆ ನೆಲೆಯ ಚೌಪಳಿಗೆಗಳೊಳನೇಕ ಪ್ರಾಸಾದದ ಮೇಲೆ ಚಿತ್ರದ ಪೞವಿಗೆಗಳಂ ತುಱುಗಲುಂ ಬಂಬಲ್ಗಳುಮಾಗೆ ಕಟ್ಟಿಸಿ ಪಚ್ಚೆಯ ಹಾರದ ತೋರಣಂಗಳಂ ದುಗುಲದ ಗುಡಿಗಳಂ ಕಟ್ಟಿಸಿ ಕಂಭಂಗಳೊಳೆಲ್ಲಂ ಸುಯ್ಯಾಣದ ಚಿನ್ನದ ಪೞಿಯ ಸಕಳವಟ್ಟೆಗಳಂ ಸುತ್ತಿಸಿ ಮುತ್ತಿನ ಮಂಡವಿಗೆಗಳನೆಡೆಯಱಿದೆತ್ತಿಸಿ ಪೊನ್ನ ಮಾಂಗಾಯ ಗೊಂಚಲ್ಗಳುಮಂ ಮುತ್ತಿನ ಬುಂಭುಕಂಗಳುಮನೆೞಲೆ ಕಟ್ಟಿಸಿ ಮತ್ತಮಾ ಪ್ರಾಸಾದಂಗಳ ಚೌಪಳಿಗೆಗಳ ಪೊನ್ನ ಪೊಂಗಱಿಗೆ ನೀಳ್ಪುಂ ಬೆಳ್ಪುಮಂ ತಾಳ್ದಿ ಕರ್ಪಿನೊಳುಪಾಶ್ರಯಂಬಡೆದು-
(ಆ ನೆಲೆಯ ಚೌಪಳಿಗೆಗಳೊಳ್ ಅನೇಕ ಪ್ರಾಸಾದದ ಮೇಲೆ ಚಿತ್ರದ ಪೞವಿಗೆಗಳಂ ತುಱುಗಲುಂ ಬಂಬಲ್ಗಳುಂ ಆಗೆ ಕಟ್ಟಿಸಿ, ಪಚ್ಚೆಯ ಹಾರದ ತೋರಣಂಗಳಂ ದುಗುಲದ ಗುಡಿಗಳಂ ಕಟ್ಟಿಸಿ, ಕಂಭಂಗಳೊಳೆಲ್ಲಂ ಸುಯ್ಯಾಣದ ಚಿನ್ನದ ಪೞಿಯ ಸಕಳವಟ್ಟೆಗಳಂ ಸುತ್ತಿಸಿ, ಮುತ್ತಿನ ಮಂಡವಿಗೆಗಳನ್ ಎಡೆಯಱಿದು ಎತ್ತಿಸಿ, ಪೊನ್ನ ಮಾಂಗಾಯ ಗೊಂಚಲ್ಗಳುಮಂ ಮುತ್ತಿನ ಬುಂಭುಕಂಗಳುಮನ್ ಎೞಲೆ ಕಟ್ಟಿಸಿ, ಮತ್ತಂ ಆ ಪ್ರಾಸಾದಂಗಳ ಚೌಪಳಿಗೆಗಳ ಪೊನ್ನ ಪೊಂಗಱಿಗೆ ನೀಳ್ಪುಂ ಬೆಳ್ಪುಮಂ ತಾಳ್ದಿ ಕರ್ಪಿನೊಳ್ ಉಪಾಶ್ರಯಂಬಡೆದು)
ಆ ತೊಟ್ಟಿಮನೆಯ ಉಪ್ಪರಿಗೆಗಳ ಮೇಲೆ ಚಿತ್ರ ಬರೆದ ಬಾವುಟಗಳನ್ನು ಗೊಂಚಲು ಗೊಂಚಲಾಗಿ ಕಟ್ಟಿದ್ದರು; ಹಸಿರು ಹಾರದ ತೋರಣಗಳನ್ನು, ರೇಷ್ಮೆ ಬಟ್ಟೆಯ ಬಾವುಟಗಳನ್ನು ಕಟ್ಟಿದ್ದರು; ಕಂಬಗಳಿಗೆ ಕಸೂತಿ ಹಾಕಿದ ಬಟ್ಟೆಗಳನ್ನು ಸುತ್ತಿದ್ದರು; ಯುಕ್ತ ಜಾಗಗಳಲ್ಲಿ ಮುತ್ತಿನ ಮಂಟಪಗಳನ್ನು ನಿರ್ಮಿಸಿದ್ದರು; ಆ ಮಂಟಪಗಳಲ್ಲಿ ಬಂಗಾರದ ಮಾವಿನ ಕಾಯಿಗಳೂ, ಮುತ್ತಿನ ಕುಚ್ಚುಗಳೂ ತೂಗಾಡುತ್ತಿದ್ದವು.
(ಟಿಪ್ಪಣಿ: ಇಲ್ಲಿ “ಮತ್ತಂ ಆ ಪ್ರಾಸಾದಂಗಳ ಚೌಪಳಿಗೆಗಳ ಪೊನ್ನ ಪೊಂಗಱಿಗೆ ನೀಳ್ಪುಂ ಬೆಳ್ಪುಮಂ ತಾಳ್ದಿ ಕರ್ಪಿನೊಳ್ ಉಪಾಶ್ರಯಂಬಡೆದು” ಈ ವಾಕ್ಯದ ಅರ್ಥ ಸ್ಪಷ್ಟವಾಗುವುದಿಲ್ಲ. ಡಿ ಎಲ್ ಎನ್ ಅವರು ‘ಪೊಂಗಱಿಗೆ’ ಶಬ್ದಕ್ಕೆ ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ, ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ಸಂಪಾದಿಸಿರುವ ‘ಪಂಪಸಂಪುಟ’ದಲ್ಲಿಯೂ ಪ್ರಶ್ನಾರ್ಥಕ ಚಿಹ್ನೆಯೇ ಇದೆ.) 

ಕಂ|| ತುಱುಗಿದ ಪೂಗೊಂಚಲ ಕಾ
     ಯ್ತೆಱಗಿದ ಮಾವುಗಳ ಬೆಳೆದ ಕೌಂಗಿನ ಗೊನೆ ತ|
     ಳ್ತೆಱಗಿರೆ ಮಾಡದೊಳಲ್ಲಿಯೆ
     ತಿಱಿದುಕೊಳಲ್ಕಿಂಬಿನೆಸಕಮೆಸೆದುದುಪವನಂ|| ೪೧||
(ತುಱುಗಿದ ಪೂಗೊಂಚಲ, ಕಾಯ್ತು ಎಱಗಿದ ಮಾವುಗಳ, ಬೆಳೆದ ಕೌಂಗಿನ ಗೊನೆ, ತಳ್ತು ಎಱಗಿರೆ ಮಾಡದೊಳ್, ಅಲ್ಲಿಯೆ ತಿಱಿದುಕೊಳಲ್ಕೆ ಇಂಬಿನ ಎಸಕಂ ಎಸೆದುದು ಉಪವನಂ)
ಒತ್ತೊತ್ತಾಗಿದ್ದ ಹೂಗೊಂಚಲುಗಳು, ಕಾಯಿ ತುಂಬಿ ಬಾಗಿದ ಮಾವಿನ ಮರಗಳು, ಬೆಳೆದ ಗೊನೆಗಳನ್ನು ಹೊತ್ತ ಅಡಿಕೆಯ ಮರಗಳು (ಆ ಚೌಪಳಿಗೆಗಳ ಉಪ್ಪರಿಗೆಗಳಿಗೆ ಬಾಗಿ) ಬೇಕಾದವರು ಕೊಯ್ದುಕೊಳ್ಳಬಹುದಾದಂತೆ ಶೋಭಿಸುತ್ತಿದ್ದವು.
ಕಂ|| ನಾಳೆ ಸಯಂಬರಮೆನೆ ಪಾಂ
     ಚಾಳಮಹೀಪಾಳನಖಿಳ ಭೂಭೃನ್ನಿಕರ|
     ಕ್ಕೋಳಿಯೆ ಸಾಱಿದೊಡವನೀ
     ಪಾಲರ್ ಕೆಯ್ಗೆಯ್ಯಲೆಂದು ಪಱಿವಱಿಯಾದರ್|| ೪೨||
(‘ನಾಳೆ ಸಯಂಬರಂ’ ಎನೆ, ಪಾಂಚಾಳಮಹೀಪಾಳನ್ ಅಖಿಳ ಭೂಭೃನ್ನಿಕರಕ್ಕೆ ಓಳಿಯೆ ಸಾಱಿದೊಡೆ ಅವನೀಪಾಲರ್ ಕೆಯ್ಗೆಯ್ಯಲೆಂದು ಪಱಿವಱಿಯಾದರ್)
(ಹೀಗಿರಲು) ಪಾಂಚಾಲ ರಾಜನು ‘ನಾಳೆ ಸ್ವಯಂವರ’ ಎಂದು ಬಂದ ರಾಜರೆಲ್ಲರಿಗೂ ಕ್ರಮವಾಗಿ ತಿಳಿಸಿದನು. ಆಗ ಅವರೆಲ್ಲರೂ ಸಂಭ್ರಮದಿಂದ (ಗಡಿಬಿಡಿಯಿಂದ) ಸ್ವಯಂವರದ ಸಿದ್ಧತೆಯಲ್ಲಿ ತೊಡಗಿದರು.