ಮಂಗಳವಾರ, ನವೆಂಬರ್ 13, 2012


ವೇದಿಕೆಯ ಪತ್ರಕ್ಕೆ ಸರ್ಕಾರದ ಸ್ಪಂದನ

ಈ ದಿನ ಅಂದರೆ ೧೩-೧೧-೨೦೧೨ರಂದು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರು ನೇತ್ರಾವತಿ ನದಿ ಸಂರಕ್ಷಣಾ ವೇದಿಕೆಗೆ ಕಳಿಸಿರುವ ಪತ್ರ ಹೀಗಿದೆ:

ಇಂದ: 
ಸರ್ಕಾರದ ಕಾರ್ಯದರ್ಶಿಗಳು
ಜಲಸಂಪನ್ಮೂಲ ಇಲಾಖೆ
ಕರ್ನಾಟಕ ಸರ್ಕಾರ,
ಬೆಂಗಳೂರು-೫೬೦೦೦೧

ಇವರಿಗೆ:

೧. ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ವಿಶೇಷ ಆರ್ಥಿಕ ವಲಯ ಸಂಸ್ಥೆ, ನಂ. ೧೬, ಪ್ರಣವಾ ಪಾರ್ಕ್, ೩ನೇ ಮಹಡಿ, ಇನ್ ಫೆಂಟ್ರಿ ರೋಡ್, ಬೆಂಗಳೂರು-೫೬೦೦೦೧
೨. ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಆನಂದರಾವ್ ವೃತ್ತ, ಬೆಂಗಳೂರು-೫೬೦೦೦೯

ಮಾನ್ಯರೆ
ವಿಷಯ: ಮಂಗಳೂರು ಎಸ್. ಇ. ಜಡ್. ಕಂಪೆನಿಗೆ ನೇತ್ರಾವತಿ ನದಿಯಿಂದ ನೀರೆತ್ತಲು ನೀಡಿರುವ ಅನುಮತಿಯನ್ನು ಹಿಂಪಡೆಯುವ ಬಗ್ಗೆ
ಉಲ್ಲೇಖ: ಶ್ರೀ ಹೆಚ್. ಸುಂದರ ರಾವ್, ಸಂಚಾಲಕ, ನೇತ್ರಾವತಿ ನದಿ ಸಂರಕ್ಷಣಾ ವೇದಿಕೆ, ದಕ್ಷಿಣಕನ್ನಡ ರವರ ಪತ್ರ ದಿನಾಂಕ: ೨೩-೧೦-೨೦೧೨

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದ ಪ್ರತಿಯನ್ನು ಅಡಕದೊಂದಿಗೆ ಲಗತ್ತಿಸಲಾಗಿದೆ. ಸದರಿ ಪತ್ರದಲ್ಲಿನ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ, ತಮ್ಮ ಅಭಿಪ್ರಾಯ/ವರದಿಯನ್ನು ಸರ್ಕಾರಕ್ಕೆ ಎರಡು ದಿನಗಳಲ್ಲಿ ಒದಗಿಸುವಂತೆ ತಮ್ಮನ್ನು ಕೋರಲು ನಿರ್ದೇಶಿತನಾಗಿದ್ದೇನೆ.
ತಮ್ಮ ವಿಶ್ವಾಸಿ

--ಸಹಿ--

(ಕೆ.ಎಸ್. ನಾಗರಾಜ)
ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-೪)
ಜಲ ಸಂಪನ್ಮೂಲ ಇಲಾಖೆ

ಪ್ರತಿಯನ್ನು:
ಶ್ರೀ ಹೆಚ್. ಸುಂದರ ರಾವ್, ನೇಸರ, ಕೆರೆಕೋಡಿ, ಅಂ: ಮೊಡಂಕಾಪು-೫೭೪೨೧೯, ಜೋಡುಮಾರ್ಗ, ದ.ಕ.ಜಿಲ್ಲೆ ಇವರಿಗೆ ಮಾಹಿತಿಗಾಗಿ ಕಳುಹಿಸಿದೆ.


ಭಾನುವಾರ, ಅಕ್ಟೋಬರ್ 21, 2012


ಬಂಟ್ವಾಳ, ಮಂಗಳೂರುಗಳ ಪಾಲಿಗೆ

ತಿರುಗಲಿದೆ ನೇತ್ರಾವತಿಯ ದಿಕ್ಕು!


ಗೆಳೆಯ ಅನಂತಾಡಿ ಗೋವಿಂದ ಭಟ್ಟರು ಇಮೈಲಿನಲ್ಲಿ ಏನು ಕಳಿಸಿದರೂ ಜೊತೆಗೆ ಈ ಮಾತು ಇದ್ದೇ ಇರುತ್ತದೆ:

ಕೊನೆಯ ಮರವನ್ನು ಕಡಿದುರುಳಿಸಿ ಆದಮೇಲೆ
ಕೊನೆಯ ನದಿಗೂ ವಿಷವುಣಿಸಿ ಮುಗಿದ ಮೇಲೆ
ಕೊನೆಗುಳಿದ ಒಂದೇ ಮೀನನ್ನು ತಿಂದು ಮುಗಿಸಿದ ಮೇಲೆ
ಆಗ, ಆಗ ನಿಮಗೆ ತಿಳಿಯುತ್ತದೆ: "ಹಣ ತಿನ್ನಲು ಬರುವುದಿಲ್ಲ"!

ನಾವು ಭಾರತೀಯರು ಗಡ್ಡಕ್ಕೆ ಬೆಂಕಿ ತಾಗಿದಾಗಷ್ಟೇ ಬಾವಿ ತೋಡುವ ಪೈಕಿ. ಆದರೂ ನಾನು ಊದುವ ಶಂಖ ಊದುವುದೇ.

ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ಬರುತ್ತದಂತೆ, ಅದು ಹ್ಯಾಗೆ ನದಿಯನ್ನು ಘಟ್ಟ ಹತ್ತಿಸುತ್ತಾರೆ? ಮಳೆಗಾಲದಲ್ಲಿ ಬೇಕಾದಷ್ಟು ಕೊಂಡೊಯ್ಯಲಿ - ಬೇಸಿಗೆಯಲ್ಲಿ ನಮಗೇ ಕುಡಿಯಲು ಇಲ್ಲಿ ನೀರಿಲ್ಲ  ಇತ್ಯಾದಿ ಮಾತುಗಳು, ಅಲ್ಲಲ್ಲಿ ಈ ಬಗ್ಗೆ ಸಭೆಗಳು, ಚರ್ಚೆಗಳು ಆಗುತ್ತಿರುವಂತೆಯೇ ಬಂಟ್ವಾಳ-ಮಂಗಳೂರುಗಳ ಪಾಲಿಗೆ ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ಬಂದಾಗಿದೆ. ಎಂ. ಎಸ್. ಇ. ಜಡ್. ಕಂಪೆನಿ ಎಂಬ ಖಾಸಗಿ ಸಂಸ್ಥೆ ನೆನೆಸಿದ ಹಾಗೇ ಎಲ್ಲ ನಡೆದರೆ, ಮುಂದಿನ ಬೇಸಗೆಯಲ್ಲೇ ನೇತ್ರಾವತಿ ಶಂಬೂರಿನ ಎ ಎಂ ಆರ್ ಅಣೆಕಟ್ಟಿನಿಂದ ಕಂಪೆನಿಯ ಕೈಗಾರಿಕಾನೆಲೆಯ ಕಡೆಗೆ ದಿಕ್ಕು ಬದಲಿಸುತ್ತದೆ. ಅದಕ್ಕೆ ಬೇಕಾದ ಪೈಪು ಹಾಕಿಕೊಡಲು, ದಾರಿ ಬಿಟ್ಟುಕೊಡಲು ಬಂಟ್ವಾಳ ಪುರಸಭೆಯ ಕಂಬಗಳೇ ಬೆಂಬಲವಾಗಿ ನಿಂತಂತಿದೆ. ಮಂಗಳೂರಿನ ಕಾರ್ಪೋರೇಟರುಗಳು, ತುಂಬೆಯಲ್ಲಿ ಅಣೆಕಟ್ಟಿನ ಎತ್ತರ ಏರಿಸಿ, ಇಲ್ಲದ ನೀರನ್ನು ಮಂಗಳೂರಿಗೆ ಒಯ್ಯುವ ಭ್ರಮೆಯಲ್ಲಿದ್ದಾರೆ. ಎ.ಎಂ.ಆರ್. ಅಣೆಕಟ್ಟಿನ ಸಮೀಪ ನಡೆಯುತ್ತಿರುವ ಕಾಮಗಾರಿಯನ್ನು ಕಾಣಲು ಅವರಿಗೆ ಮನಸೇ ಇಲ್ಲ.

ಏನು ನಡೆಯುತ್ತಿದೆ?


ನೀರು ಸಾಗಿಸಲು ಹಾಕಿರುವ್ ಪೈಪ್ ಲೈನ್ ಕಾಮಗಾರಿಗೆ ಸಂಬಂಧಿಸಿ ಕಂಪೆನಿ ಎಂಬ ಪುಂಡುಹೋರಿ ಸರಕಾರ ವಿಧಿಸಿದ ಹಲವಾರು ನಿಬಂಧನೆಯ ಬೇಲಿಗಳನ್ನು ಮುರಿದೊಗೆದು ಮುನ್ನುಗ್ಗಿದೆ. ಈ ಬೇಲಿಗಳನ್ನು ಕಾಯಲೆಂದೇ ಇರುವ ಸರಕಾರಿ ಅಧಿಕಾರಿಗಳು ಕಂಡರೂ ಕಾಣದಂತೆ "ನಮಗೇಕೆ ದೊಡ್ಡವರ ಸಹವಾಸ" ಎಂದು ಸುಮ್ಮನೆ ಕೂತಿದ್ದಾರೆ. ಕೆಲಸ ಮಾಡಿದರೂ, ಮಾಡದಿದ್ದರೂ, ಹೇಗೆ ಮಾಡಿದರೂ ತಿಂಗಳ ಕೊನೆಗೆ ಸಂಬಳ ಗ್ಯಾರಂಟಿ, ಸೆರ್ವೀಸ್ ಮುಗಿದರೆ ಪೆನ್ಷನ್ ಗ್ಯಾರಂಟಿ ಎಂದಾದರೆ, ನಾನೂ ಹಾಗೆಯೇ ಮಾಡುವುದು ಅನ್ನಿ. ಇನ್ನು ಈ ಸರಕಾರಿ ಅಧಿಕಾರಿಗಳನ್ನು ಎಚ್ಚರದಲ್ಲಿಡಬೇಕಾದ ಪ್ರಜಾಪ್ರಭುಗಳಾದ ನಾವು ಟಿವಿ-ಮೂವಿ ನೋಡಿಕೊಂಡು ಕುರ್ಕುರೆ ಮೆಲ್ಲುತ್ತ ಹಾಯಾಗಿದ್ದೇವೆ. ನಾವು ಸಮಸ್ಯೆಗೆ ಪರಿಹಾರ ಹುಡುಕುವುದು ಪೂರ್ತಿಯಾಗಿ ನೀರು ನಿಂತ ಮೇಲೆಯೇ ಆಗಿರಬಹುದೆ?

ಎರಡು ನಿರ್ದಿಷ್ಟ ಪ್ರಕರಣಗಳು:


ನೇತ್ರಾವತಿಯ ನೀರು ತಿರುಗಿಸಲು ಅನುಮತಿ ಕೊಡುವಾಗ ಸರಕಾರ ಕಂಪೆನಿಗೆ ಹತ್ತೊಂಬತ್ತು ನಿಬಂಧನೆಗಳನ್ನು ವಿಧಿಸಿದೆ. ಅವುಗಳ ಪೈಕಿ ಆರನೆಯ ನಿಬಂಧನೆ ಇದು: "ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು". ಕಳೆದ ಎರಡು-ಎರಡೂವರೆ ವರ್ಷಗಳಿಂದ ಈ ನಿಬಂಧನೆಯನ್ನು ಕಂಪೆನಿ ಪಾಲಿಸಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾನು ಹೆಣಗಿದ್ದೇನೆ. ಇತ್ತೀಚೆಗೆ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ.

1. ಕಂಡರೂ ನೋಡದ ಅರಣ್ಯ ಇಲಾಖೆ


ಎಂ ಎಸ್ ಇ ಜಡ್ ಕಂಪೆನಿ ಪೈಪ್ ಲೈನ್ ಅಳವಡಿಸುವ ಮೊದಲು ನಿಮ್ಮ ಇಲಾಖೆಯ ಅನುಮತಿ ಪಡೆದಿದೆಯೇ ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ "ಇಲ್ಲ" ಎಂಬ ಸ್ಪಷ್ಟ ಉತ್ತರವನ್ನೇ ನನಗೆ ನೀಡಿದೆ. 14-10-2010 ರಲ್ಲಿಯೇ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬರೆದ ಪತ್ರದಲ್ಲಿ ಹೀಗೆನ್ನುತ್ತಾರೆ: ".... ಎಂ ಎಸ್ ಇ ಜಡ್ ಕಂಪೆನಿಯು ಯೋಜನೆ ಪ್ರಾರಂಭಿಸುವ ಮುನ್ನ, ಮರಗಳನ್ನು ಕಡಿಯುವ ಕುರಿತು ಅರಣ್ಯ ಇಲಾಖೆಗೆ ತಮ್ಮ ಯೋಜನೆಯ ಪ್ರಸ್ತಾವನೆಯನ್ನು ಎಲ್ಲಾ ದಾಖಲೆಗಳೊಂದಿಗೆ ಈ ಕಛೇರಿಗೆ ಸಲ್ಲಿಸಿದ ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ವರದಿ ಸಲ್ಲಿಸಿದ ನಂತರವೇ ಅವಶ್ಯ ಮತ್ತು ಅನಿವಾರ್ಯತೆಗಳನ್ನು ಪರಾಂಬರಿಸಿ ಮರಗಳನ್ನು ಕಡಿಯಲು ಅನುಮತಿ ನೀಡಲಾಗುತ್ತದೆ".
ಎಂದರೆ, ಕಂಪೆನಿಯೇ ಆಗಲಿ, ಯಾರೇ ಆಗಲಿ ಮರ ಕಡಿಯಬೇಕಾದರೆ ಕಾನೂನು ಪ್ರಕಾರ ಏನೇನು ಮಾಡಬೇಕು ಎಂಬುದನ್ನು ಇಲ್ಲಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಕಂಪೆನಿ ಅಂದಾಜು ಮೂವತ್ತೈದು ಕಿ.ಮೀ. ಉದ್ದಕ್ಕೆ ಪೈಪುಗಳನ್ನು ಹಾಕಬೇಕು. ಅಷ್ಟೂ ಉದ್ದಕ್ಕೆ ಯಾವ ಯಾವ ಮರಗಳಿವೆ, ಅದರ ಮಾಲಕರು ಯಾರು, ಅದಕ್ಕೆ ದಾಖಲೆಗಳು ಎಲ್ಲಿವೆ ಇತ್ಯಾದಿಗಳನ್ನೆಲ್ಲ ಹುಡುಕುತ್ತ ಲೆಕ್ಕ ಹಾಕುತ್ತ ಕೂತರೆ ಅದಕ್ಕೇ ಒಂದೆರಡು ವರ್ಷ ಹೋದೀತು. ಇನ್ನು ಅದನ್ನು ಪರಾಂಬರಿಸಿ ಅರಣ್ಯ ಇಲಾಖೆ ಅನುಮತಿ ನೀಡಲು ಮತ್ತೊಂದು ವರ್ಷವಾದರೂ ಬೇಡವೆ? ಹೀಗೆ ಖಾಲಿ ಒಂದು ಅನುಮತಿಗೆ ವರ್ಷಗಟ್ಟಳೆ ಕಾಯುವುದಕ್ಕೆ ಕಂಪೆನಿ ಏನು ಕತ್ತೆಯೆ? ಹಾಗಾದರೆ ಏನು ಮಾಡುವುದು? ಮಾಡುವುದೇನು? ಜೆಸಿಬಿ ತನ್ನಿ, ಎಲ್ಲಿ ಬೇಕೋ ಅಲ್ಲಿ  ನುಗ್ಗಿಸಿ, ಯಾವ ಮರ ಬೇಕೋ ಅದನ್ನು ಬೀಳಿಸಿ, ಕಾಲುವೆ ತೆಗೆಯಿರಿ, ಪೈಪ್ ಹಾಕಿಕೊಂಡು ಹೋಗಿ! ಮತ್ತೆ ಸರಕಾರ, ಆದೇಶ, ನಿಬಂಧನೆ, ಅರಣ್ಯ ಇಲಾಖೆ? ಅವನ್ನೆಲ್ಲ ಮೂಟೆ ಕಟ್ಟಿ ಹೊಳೆಗೆ ಬಿಸಾಡಿ!
ಈಗ ಆಗಿರುವುದು ಇಷ್ಟೇ! ಕಂಪೆನಿ ಪೈಪ್ ಲೈನ್ ಅಳವಡಿಸುವ ತನ್ನ ಕೆಲಸವನ್ನು ಹೆಚ್ಚು ಕಡಿಮೆ ಮುಗಿಸಿ ಆಗಿದೆ. ಹಾಗೆ ಮಾಡುವಾಗ ಅಡ್ಡ ಬಂದ ನೂರಾರು - ಸಾವಿರಾರು ಮರಗಳು ಧರೆಗುರುಳಿವೆ! ದುರದೃಷ್ಟವಶಾತ್ ಹಾಗೆ ಉರುಳಿದ ಮರಗಳ ಪೈಕಿ ಒಂದಾದರೂ, ಪ್ರತಿ ದಿನ ಎಂಬಂತೆ ಅರಣ್ಯದಲ್ಲಿ ಗಸ್ತು ತಿರುಗುವ ಸಿಬ್ಬಂದಿಗಳಿಗಾಗಲೀ, ಅರಣ್ಯ ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳಿಗಾಗಲೀ ಕಣ್ಣಿಗೇ ಬಿದ್ದಿಲ್ಲ! ಹಾಗೆ ಕಾಣದಂತೆ ಯಾರು ಅವರ ಕಣ್ಣಿನಲ್ಲಿ ಮಂಕುಬೂದಿ ಎರಚಿದರೋ? ಪ್ರತಿತಿಂಗಳೂ ಸಂಬಳ ಪಡೆದೂ, ಇಂಥದ್ದನ್ನು ಕಾಣದೆ ಇರಲು ಇಲಾಖೆಯ ಅಧಿಕಾರಿಗಳಿಗೆ ಮನಸ್ಸಾದರೋ ಹೇಗೆ ಬಂತೋ?






ಕಂಪೆನಿ ಹೀಗೆ ಕೆಡವಿದ ಮರಗಳ ಪೈಕಿ ಕೆಲವೇ ಕೆಲವು ಮರಗಳು ಕಳೆದ ಫೆಬ್ರವರಿ ಮಾರ್ಚ್ ಸಮಯದಲ್ಲಿ ಶನಿಶನಿ ಅಂತ ನನ್ನ ಕಣ್ಣಿಗೆ ಕಂಡವು. ನಾನು ಬಂಟ್ವಾಳದ ಅರಣ್ಯ ಇಲಾಖೆಗೆ ಅವುಗಳ ಫೋಟೋ ಸಮೇತ ಒಂದು ದೂರು ಸಲ್ಲಿಸಿದೆ. ಅಲ್ಲಿಂದ ಹೀಗೆ ಉತ್ತರ ಬಂತು:"ಬಂಟ್ವಾಳ-ಮೂಡಬಿದ್ರೆ ರಸ್ತೆ ಬದಿಯಲ್ಲಿ ಮಂಗಳೂರಿನ ಎಸ್ ಇ ಜಡ್ ವತಿಯಿಂದ ನೀರು ಸರಬರಾಜು ಮಾಡುವ ಪೈಪ್ ಲೈನ್ ಅಳವಡಿಸುವರೇ ರಸ್ತೆ ಬದಿಯ ಮರಗಳನ್ನು ಅನಧಿಕೃತವಾಗಿ ಕಡಿದಿರುವ ಬಗ್ಗೆ ಸದ್ರಿ ಕಂಪೆನಿಯ ಗುತ್ತಿಗೆದಾರರಾದ ಶ್ರೀ ಕೃಷ್ಣನಂದ ಬಿನ್ ಕೆ.ಪಿ.ಸ್ವಾಮಿ ಕೊಯಾ ಕೊ ಕಂಪೆನಿ ಹೈದರಾಬಾದ್ ಆಂದ್ರಪ್ರದೇಶ ಎಂಬುವರ ವಿರುದ್ಧ ಈ ಕಚೇರಿಯಲ್ಲಿ ಅರಣ್ಯ ತಕ್ಷೀರು 1/2012-13ರಂತೆ ತಕ್ಷೀರು ದಾಖಲಿಸಿಕೊಂಡು ಸೊತ್ತುಗಳನ್ನು ಸರಕಾರದ ಪರ ಅಮಾನತು ಪಡಿಸಿದ್ದು, ಸದ್ರಿ ತಕ್ಷೀರಿಗೆ ಸಂಬಂಧಿಸಿ ಸದ್ರಿಯವರಿಂದ ರೂ. 5000/- ನ್ನು ದಂಡನೆಯಾಗಿ ವಸೂಲು ಮಾಡಿ ಸರಕಾರಕ್ಕೆ ಜಮಾ ಮಾಡಲಾಗಿದೆ. ಇನ್ನು ಮುಂದೆ ಸದ್ರಿ ಪೈಪ್ ಲೈನ್ ಕಾಮಗಾರಿ ಮಾಡುವಾಗ ಯಾವುದೇ ಮರಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಲು ಹಾಗೂ ತೀರಾ ಅಗತ್ಯ ಎಂದು ಕಂಡುಬಂದಲ್ಲಿ ಈ ಬಗ್ಗೆ ಸದ್ರಿ ಮರ ಕಡಿಯಲು ಇಲಾಖೆಯಿಂದ ಅನುಮತಿ ಪಡೆದುಕೊಳ್ಳಲು ಸೂಚಿಸಿ, ಎಚ್ಚರಿಕೆ ನೀಡಲಾಗಿದೆ."
ಈ ಪತ್ರದಿಂದ ಒಂದು ಅಂಶವಂತೂ ಸ್ಫಟಿಕ ಸ್ಪಷ್ಟವಾಗುತ್ತದೆ: ಎಂ ಎಸ್ ಇ ಜಡ್ ಕಂಪೆನಿ ಕಾಮಗಾರಿ ಪ್ರಾರಂಭಿಸುವ ಮೊದಲು  ಅರಣ್ಯ ಇಲಾಖೆಯಿಂದ ಅನುಮತಿ ಪಡೆದೇ ಇಲ್ಲ!

2. ಒಂದು ಕೇಳಿದರೆ ಮತ್ತೊಂದು ಕೊಟ್ಟು ನೋಡಿದ ಮಾಲಿನ್ಯ ನಿಯಂತ್ರಣ ಮಂಡಳಿ


ನಿಬಂಧನೆಯ ಪ್ರಕಾರ ಕಂಪೆನಿ ಕಾಮಗಾರಿ ಪ್ರಾರಂಭಿಸುವ ಮೊದಲು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನು ಪಡೆಯಬೇಕು. ಆದರೆ ಇಲ್ಲೂ ಅದೇ ಕತೆ. ಅನುಮತಿ ಪಡೆಯುವುದೆಂದರೆ ಅದಕ್ಕೆ ನೂರೆಂಟು ವಿಧಾನಗಳನ್ನು ಅನುಸರಿಸಬೇಕು. ಮುಖ್ಯವಾಗಿ ಯೋಜನೆ ಎಲ್ಲೆಲ್ಲಿ ಅನುಷ್ಠಾನಗೊಳ್ಳುತ್ತದೋ ಆ ಗ್ರಾಮಗಳ ಜನರ ಸಾರ್ವಜನಿಕ ಸಭೆ ನಡೆಸಿ, ಅವರ ಅಭಿಪ್ರಾಯ ಪಡೆಯಬೇಕು. ಸರಪಾಡಿಯಲ್ಲಿ ಶುರುವಾಗಿ ಮಣಿಹಳ್ಳ, ಜಕ್ರಿಬೆಟ್ಟು, ಲೊರೆಟ್ಟೋಪದವು, ಸೊರ್ನಾಡು, ಕುಪ್ಪೆ ಪದವು, ಎಡಪದವು, ಕೈಕಂಬ, ಬಜ್ಪೆ ಹೀಗೆ ಹಲವು ಗ್ರಾಮಗಳ ಮೂಲಕ ಪೈಪ್ ಲೈನ್ ಹಾದುಹೋಗುತ್ತದೆ. ಈ ಎಲ್ಲ ಗ್ರಾಮಗಳ ಜನರನ್ನು ಒಂದು ಕಡೆ ಸೇರಿಸುವುದು, ಸಭೆ ಮಾಡುವುದು ಇವೆಲ್ಲ ಆಗುವ ಹೋಗುವ  ಕೆಲಸವೆ? ಹಾಗಾದರೆ ಉಪಾಯ? ಉಪಾಯ ಏನಿಲ್ಲ! ಅನುಮತಿಗೆ ಗೋಲಿ ಹೊಡೆಯಿರಿ! ಕೇಳುವ ಮಗ ಯಾರಿದ್ದಾನೆ?


ನಾನು ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಪತ್ರ ವ್ಯವಹಾರ ಶುರು ಮಾಡಿದೆ. ಮಂಡಳಿಯ ಮಂಗಳೂರಿನ ಪ್ರಾದೇಶಿಕ ಕಚೇರಿ ಕಂಪೆನಿಯು 1800 ಎಕ್ರೆ ಪ್ರದೇಶದಲ್ಲಿ ನಿರ್ಮಿಸಲಿರುವ ಕೈಗಾರಿಕಾ ಸ್ಥಾವರಕ್ಕೆ  ಕೇಂದ್ರ ಕಚೇರಿ ನೀಡಿರುವ ಅನುಮತಿಯನ್ನು ನನಗೆ ತೋರಿಸಿತು. ನಾನು ಬೆಂಗಳೂರಿನ ಕೇಂದ್ರ ಕಚೇರಿಗೇ ಬರೆದೆ. ಅವರೂ ಅದೇ ಅನುಮತಿಯನ್ನು ನನ್ನೆದುರು ಒಡ್ಡಿದರು. ನಾನು ವಿಷಯವನ್ನು ನಿಖರವಾಗಿ ವಿವರಿಸಿ ಅವರಿಗೆ ಪುನಃ ಪತ್ರ ಬರೆದೆ. ಕೇಂದ್ರ ಕಚೇರಿ ನನ್ನ ಅರ್ಜಿಯನ್ನು ಮಂಗಳೂರಿನ ಪ್ರಾದೇಶಿಕ ಕಚೇರಿಗೇ ತಿರುಗಿಸಿತು! ಮಂಗಳೂರು ಪ್ರಾದೇಶಿಕ ಕಚೇರಿಯವರು ನನಗೆ ಹೀಗೆ ಉತ್ತರಿಸಿದರು: "..... ಸರ್ಕಾರದ ಆದೇಶ ಸಂಖ್ಯೆ ಜಸಂಇ 13 ವಿಬ್ಯಾಇ2006 ಬೆಂಗಳೂರು ದಿನಾಂಕ 17-09-2007 ಕ್ಕೆ ಸಂಬಂಧಿಸಿದ ಯೋಜನೆಗೆ... ಮಾಹಿತಿಯನ್ನು ನೀಡುವಂತೆ ಈ ಕಚೇರಿಗೆ ವರ್ಗಾಯಿಸಿದ್ದು ಹಾಗೂ ತಮ್ಮ ಉಲ್ಲೇಖಿತ ಪತ್ರದಲ್ಲಿ ಕೇಳಿರುವ ಮಂಡಳಿಯ ಅನುಮತಿ ಪತ್ರ ಈ ಕಚೇರಿಯಲ್ಲಿ ಲಭ್ಯವಿರುವುದಿಲ್ಲ"
ಅರ್ಥಾತ್ ಕಂಪೆನಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನೂ ಪಡೆದಿಲ್ಲ!
ಈ ನಡುವೆ ಮಂಗಳೂರಿನ ಪ್ರಾದೇಶಿಕ ಕಚೇರಿಗೆ ನನ್ನ ಅರ್ಜಿಯನ್ನು ವರ್ಗಾಯಿಸಿದ ಕೇಂದ್ರ ಕಚೇರಿ ತನ್ನ ಕೆಲಸ ಮುಗಿಯಿತೆಂದು ಸುಮ್ಮನೆ ಕೂರಬೇಕಾಗಿತ್ತಷ್ಟೆ? ಆಶ್ಚರ್ಯದ ಮಾತೆಂದರೆ ಅದು ಹಾಗೆ ಮಾಡಲಿಲ್ಲ! 16-10-2012 ರಂದು ನನಗೆ ಬರೆದ ಪತ್ರದಲ್ಲಿ ಅದು ಈ ಮಾಹಿತಿಯನ್ನು ನೀಡಿದೆ: "1. ಮಂಡಳಿಯಲ್ಲಿ ನೀಡಿರುವ ಸಮ್ಮತಿ ಪತ್ರದಲ್ಲಿ ನೀರಿನ ಮೂಲಗಳನ್ನು ಮಾತ್ರ ನಮೂದಿಸಿರುತ್ತದೆ ಎಂದು, ಸರ್ಕಾರಿ ಆಜ್ಞೆ 17-09-2007ರಲ್ಲಿ ಪ್ರಸ್ತಾವಿತವಾದ ನೇತ್ರಾವತಿ ಹಾಗೂ ಗುರುಪುರ ನದಿಯಿಂದ ನೀರನ್ನು ಸಂಗ್ರಹಿಸಿ ಬಳಸುವ ಯೋಜನೆಗೆ ಸಮ್ಮತಿಗಾಗಿ ಮಂಡಳಿಗೆ ಪ್ರತ್ಯಕ ಅರ್ಜಿಯನ್ನು ಸಲ್ಲಿಸಿರುವುದಿಲ್ಲ"
ಕಂಪೆನಿಯು ಅರ್ಜಿಯನ್ನೇ ಸಲ್ಲಿಸಿಲ್ಲವೆಂದ ಮೇಲೆ ಮಂಡಳಿಯು ಅನುಮತಿ ನೀಡುವ ಪ್ರಶ್ನೆಯೇ ಇಲ್ಲವಷ್ಟೆ?

ಬರೆಯಬಹುದು ಅಥವಾ ಕಾಯಬಹುದು!


ಲೇಖನದ ಪ್ರಾರಂಭದಲ್ಲಿ ಹೇಳಿರುವ ಸರಕಾರಿ ಆದೇಶದ 19ನೇ (ಹಾಗೂ ಕೊನೆಯ) ನಿಬಂಧನೆ ಹೀಗಿದೆ: "ಸಂಸ್ಥೆಯು ಮೇಲಿನ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ ಅನುಮತಿಯನ್ನು ಹಿಂದಕ್ಕೆ ಪಡೆಯಲಾಗುವುದು".
ಕಂಪೆನಿಯು ನಿಬಂಧನೆಗಳನ್ನು ಉಲ್ಲಂಘಿಸಿರುವುದಕ್ಕೆ ದಾಖಲೆಗಳ ಆಧಾರವನ್ನು ಕೊಟ್ಟು "ಅಧೀನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ(ತಾಂತ್ರಿಕ-೪), ವಿಕಾಸ ಸೌಧ, ಬೆಂಗಳೂರು ಇವರಿಗೆ ನಾನು  ಪತ್ರ ಬರೆದಿದ್ದೇನೆ. ಕಂಪೆನಿಗೆ ನೀರು ಸಾಗಿಸಲು ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಕೋರಿದ್ದೇನೆ. ನನ್ನೊಂದಿಗೆ ಸಹಮತ ಹೊಂದಿದ್ದರೆ ನೀವೂ ಹಾಗೆ ಮಾಡಬಹುದು. ನನ್ನ ಹತ್ತಿರ ಇರುವ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಕೊಡಲು ನಾನು ತಯಾರಿದ್ದೇನೆ. ಅಥವಾ ಕುಡಿಯಲು ನೀರು ಸಿಕ್ಕದ ಹಾಗೆ ಆಗುವವರೆಗೆ ಕಾಯಲೂಬಹುದು.

ಭಾನುವಾರ, ಸೆಪ್ಟೆಂಬರ್ 16, 2012

ಮೌನೀಶರ ಜೋಕುಗಳು


ಮಿತ್ರ ಮೌನೀಶ ಮಲ್ಯರು ಮೌನ ಮೋಹನ ಸಿಂಗರ ಹಾಗಲ್ಲ. ಪಟ ಪಟ ಮಾತಾಡುತ್ತಾರೆ. ಸಾವಯವ ಕೃಷಿ ಅವರ ಒಂದು ಆಸಕ್ತಿ. ಇವತ್ತು ಭಾನುವಾರ ಅವರ ತೋಟಕ್ಕೆ ಹೋಗಿದ್ದೆ. ನನ್ನ ಹಾಗೇ ಈ ಮೊದಲು ಬಂದವರು ಯಾರೋ ಕೇಳಿದರಂತೆ:
"ನೀವು ಅಡಿಕೆಯ ಬುಡಕ್ಕೆ ಕಾಳುಮೆಣಸು ನೆಟ್ಟಿದ್ದೀರಿ. ಅಡಿಕೆಗೆ ಕೊಟ್ಟ ಗೊಬ್ಬರವೆಲ್ಲ ಅದೇ ತಿನ್ನುವುದಿಲ್ಲವೆ?"
ಮೌನೀಶರ ಉತ್ತರ: "ನಾವು ಅಡಿಕೆಗೆ ಗೊಬ್ಬರ ಕೊಡುವುದೇ ಇಲ್ಲವಲ್ಲ!"
***
ಮೌನೀಶರಿಗೆ ಹಲಸೆಂದರೆ ಆಯಿತು. ಎಲ್ಲಿಂದಲೋ ಕೆಲವು ಗಮ್ ಲೆಸ್ (ಮೇಣ ಇಲ್ಲದ್ದು) ಹಲಸಿನ ಸಸಿ ತಂದಿದ್ದರಂತೆ. ಹೀಗೇ ಯಾರಿಗೋ ಕೇಳಿದವರಿಗೆ ಒಂದು ಸಸಿ ಕೊಟ್ಟರು. ಧರ್ಮಕ್ಕಲ್ಲ, ದುಡ್ಡಿಗೆ. ತಗೊಂಡವರಿಗೆ ಅನುಮಾನ.  ಕೇಳಿದರು:
"ಹಣ್ಣಾದಾಗ ಮೇಣ ಇದ್ದರೆ ಏನು ಮಾಡುವುದು?"
"ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿದರಾಯಿತು" ಮೌನೀಶರ ಸಲಹೆ.
***
ಅವರ ತೋಟದ ಆಚೆ ಈಚೆ ಕೆಲವು  ಹಣ್ಣಿನ ಮರಗಳಿವೆ. ನೇರಳೆ, ಪೇರಳೆ ಇತ್ಯಾದಿ. ಹಣ್ಣಾಗುವ ಕಾಲಕ್ಕೆ ಆಚೀಚೆಯ ತುಂಟ ಹುಡುಗರು ತೋಟಕ್ಕೆ ಧಾಳಿ ಇಡುತ್ತಾರೆ. ವರ್ಷಕ್ಕೆ ಒಬ್ಬರಿಗೋ ಇಬ್ಬರಿಗೋ ಕೈಗೋ ಕಾಲಿಗೋ ಫ್ರಾಕ್ಚರ್ ಆಗಿ ಬ್ಯಾಂಡೇಜ್ ಬೀಳುವುದು ಸಾಮಾನ್ಯ. ಆದರೆ ಅಂಥವರು ಬ್ಯಾಂಡೇಜ್ ಹಾಕಿಕೊಂಡರೂ ತೋಟಕ್ಕೆ ಬರುವುದು ಬಿಡುವುದಿಲ್ಲ.
"ಬಂದೇನು ಮಾಡುತ್ತಾರೆ?" ನಾನು ಕೇಳಿದೆ.
"ಮರ ಹತ್ತಿದವರಿಗೆ ಡೈರೆಕ್ಷನ್ ಕೊಡುತ್ತಾರೆ!"

ಭಾನುವಾರ, ಸೆಪ್ಟೆಂಬರ್ 9, 2012



ಬೇಲಿ ಹಾರುವ ಹೋರಿಯ ಕತ್ತಿಗೆ ನ್ಯಾಯಾಲಯದ  ಕುಂಟೆ

ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ

ಕೇಸು ಕೋರ್ಟಿಗೆ ಒಯ್ದರು

ಕೋರ್ಟು, ಆಸ್ಪತ್ರೆ, ಪೋಲಿಸ್ ಸ್ಟೇಷನ್ನು, ತಾಲ್ಲೂಕಾಫೀಸು ಇಂಥ ಕಡೆಗೆಲ್ಲ ಹೋಗಲು ಸಿಕ್ಕದ ಹಾಗೆ ನಡೆಸಿಬಿಡು ಅಂತ ನಂಬದ ದೇವರನ್ನು ನಾನು ಆಗಾಗ ಪ್ರಾರ್ಥಿಸುತ್ತೇನೆ. ಯಾಕೆಂದರೆ ಅವೆಲ್ಲ ನಮ್ಮ ಕೈಯಲ್ಲಿಲ್ಲವಲ್ಲ. ನನ್ನ ಪ್ರಾರ್ಥನೆ ಫಲ ಕೊಡಲಿಲ್ಲ. ಮಾಹಿತಿ ಹಕ್ಕಿನಲ್ಲಿ ಮಂಗಳೂರಿನ ಎಸ್ ಇ ಜಡ್ ಕಂಪೆನಿಗೆ ಒಂದು ಅರ್ಜಿ ಹಾಕಿದ್ದೆ. ನಮ್ಮ ಬಂಟ್ವಾಳದ ಸರಪಾಡಿಯ ಹತ್ತಿರ ಎ ಎಂ ಆರ್ ಎಂಬ ಕಿರು ಜಲವಿದ್ಯುತ್ ತಯಾರಿಸುವ ಕಂಪೆನಿ ನೇತ್ರಾವತಿಗೆ ಒಂದು ಕಟ್ಟ ಹಾಕಿದೆ. ಎಸ್ ಇ ಜಡ್ ಕಂಪೆನಿ ಬಜ್ಪೆ ಸಮೀಪದ ತನ್ನ ಕೈಗಾರಿಕಾ ನೆಲೆಗೆ ಈ ಕಟ್ಟದಿಂದಲೇ ನೀರು ಕೊಂಡೊಯ್ಯುತ್ತದೆ ಎಂದು ನನಗೆ ಗೊತ್ತಾಗಿತ್ತು. ಹಾಗಿದ್ದರೆ ಈ ಎರಡು ಕಂಪೆನಿಗಳ ನಡುವೆ ಏನು ಒಪ್ಪಂದ ಆಗಿದೆ ಎಂದು ತಿಳಿದುಕೊಳ್ಳಬೇಕು ತಾನೆ? (ಯಾಕೆ? ಯಾಕೆ ತಿಳಿದುಕೊಳ್ಳಬೇಕು? ನಿಮಗೆ ಏನು ಸಂಬಂಧ? ಎಂದೆಲ್ಲ ಕಂಪೆನಿ ಕೇಳಿತು. ಆದರೆ ನದಿ ನೀರಿಗೆ ದೊಣೆನಾಯಕನ ಅಪ್ಪಣೆಯೆ?) ಅದಕ್ಕೇ ಮಾಹಿತಿ ಹಕ್ಕಿನ ಅನ್ವಯ  ಅರ್ಜಿ  ಹಾಕಿದೆ. ಇದಕ್ಕಿಂತ ಮುಂಚೆ ಕೇಳಿದ ಮಾಹಿತಿಯನ್ನು ಕೊಡುತ್ತಿದ್ದ ಕಂಪೆನಿ ಈಗ ಯಾಕೋ ವರಸೆ ಬದಲಿಸಿತು.ಮಾಹಿತಿ ಕೊಡಲಿಲ್ಲ. ಉಲ್ಟಾ ಮಾತಾಡಿತು. ನಾನೂ ಬಿಡಲಿಲ್ಲ, ಮಾಹಿತಿ ಆಯೋಗಕ್ಕೆ ದೂರು ಕೊಟ್ಟೆ. ವಿಚಾರಣೆ ನಡೆಯಿತು. ಮಾಹಿತಿ ಆಯೋಗ ನಾನು ಕೇಳಿದ ಮಾಹಿತಿ ಕೊಡುವಂತೆ ಕಂಪೆನಿಗೆ ನಿರ್ದೇಶನ ಕೊಟ್ಟಿತು. ಆದರೆ ಕಂಪೆನಿ ನನಗೆ ಮಾಹಿತಿ ಕೊಡಲಿಲ್ಲ, ಬದಲಿಗೆ ಹೈಕೋರ್ಟಿನಲ್ಲಿ ಒಂದು ಪಿಟಿಷನ್ ಜಡಿಯಿತು. ಎದುರು ಪಾರ್ಟಿಯಾಗಿ ಒಂದನೇ ಮಾಹಿತಿ ಆಯೋಗ, ಎರಡನೇ ನಾನು! ಹೀಗೆ ನಾನು ಹೋಗದಿದ್ದರೂ, ನನ್ನ ಹೆಸರು ಹೈಕೋರ್ಟಿಗೆ ಹೋದ ಕತೆ.

ದಾಖಲೆ ಓಕೆ ವಕೀಲರು ಯಾಕೆ?

ಆಯಿತು ಕೇಸು ಕೋರ್ಟಿಗೆ ಹೋದಮೇಲೆ ನನ್ನ ಪರವಾಗಿ ವಾದ ಮಾಡಲು ಯಾರಾದರೊಬ್ಬ ವಕೀಲರನ್ನು ನೇಮಿಸಬೇಕಲ್ಲ? ನಾನು ಶಸ್ತ್ರ ಕೆಳಗಿಟ್ಟೆ. ಬೇಕಾದ್ದಾಗಲಿ, ನಾನಂತೂ ವಕೀಲರನ್ನು ಇಡುವುದಿಲ್ಲ. ಎಷ್ಟು ಮಾಡಲು ನನ್ನಿಂದ ಸಾಧ್ಯವೋ ಅಷ್ಟು ಮಾಡಿದ್ದೇನೆ, ಇನ್ನು ಬೇಕಾದ್ದಾಗಲಿ, ಕೇಸು ಗುಣ ಆಗಲಿ, ಪಡ್ಚ ಆಗಲಿ, ವಕೀಲರನ್ನಿಟ್ಟು ಅವರಿಗೆ ದುಡ್ಡು ಸುರಿಯುವುದು, ಅವರು ಕೇಳಿದ ದಾಖಲೆ ಒಟ್ಟು ಮಾಡಲು ಓಡಾಡುವುದು ಇವೆಲ್ಲ ನನ್ನಿಂದ ಸಾಧ್ಯವೇ ಇಲ್ಲ ಅಂತ ಮನಸ್ಸಿನಲ್ಲಿ ಗಟ್ಟಿ ಮಾಡಿಕೊಂಡೆ. ಈ ನಡುವೆ ಒಂದು ದಿನ ವಿದ್ಯಾ ದಿನಕರ್ ನನ್ನ ಹತ್ತಿರ ಜಗಳಕ್ಕೇ ಬಂದರು. ನೀವು ವಕೀಲರನ್ನು ಇಡುವುದಿಲ್ಲ ಎಂದಾದರೆ, ಇಲ್ಲಿಯವರೆಗೆ ತಂದದ್ದು ಯಾಕೆ, ಲಂಗು ಲೊಟ್ಟೆ ಅಂತೆಲ್ಲ ರೋಪು ಹಾಕಿದರು. ನಾನು ಹಂದಾಡಲಿಲ್ಲ ನನ್ನಿಂದ ಕೂಡಿದಷ್ಟು ನಾನು ಮಾಡುವುದು, ಅದರಿಂದ ಹೆಚ್ಚಿಂದು ನಾನು ಮಾಡಲಾರೆ ಅಂತ ಗಟ್ಟಿ ಕೂತುಬಿಟ್ಟೆ. ಕಡೆಗೆ ಅವರೇ ಬೆಂಗಳೂರಿನಲ್ಲಿ ಯಾರನ್ನೋ ಹಿಡಿದು, ಒಬ್ಬ ವಕೀಲಮ್ಮನನ್ನು ಗೊತ್ತು ಮಾಡಿದರು. ಆದರೆ ಅದು ಪ್ರಯೋಜನವಾಗಲಿಲ್ಲ. ಸ್ವಲ್ಪ ದಿನ ಕಳೆದ ಮೇಲೆ, ಆ ವಕೀಲಮ್ಮ ಕೇಸಿನಿಂದ ಹಿಂದೆ ಸರಿದರು.
ಹೀಗೆ, ಕೋರ್ಟಿನಲ್ಲಿ ನಮ್ಮ ಪರವಾಗಿ ವಾದ ಮಾಡಲು ಆಯೋಗದ ವಕೀಲರು ಮಾತ್ರ ಉಳಿದರು.

ಕ್ಷುದ್ರವಲ್ಲದ್ದು ಗಣನೀಯ!

ಆದರೆ ನನಗೆ ಒಂದು ಧೈರ್ಯ ಇತ್ತು. ಆಯೋಗ ವಿಚಾರಣೆ ಮಾಡಿದಾಗಲೇ ಬೇಕಾದ ದಾಖಲೆಗಳೆಲ್ಲ ಸಂಗ್ರಹವಾಗಿತ್ತು. ಆಯೋಗದವರೇ ಕಂಪೆನಿಗೆ ನೋಟೀಸು ಕೊಟ್ಟು ಅದರ ಮೂರು ವರ್ಷದ ಬ್ಯಾಲೆನ್ಸ್ ಷೀಟ್ ತರಿಸಿದ್ದರು. ನಾನೂ ಕೆಲವು ದಾಖಲೆಗಳನ್ನು ಒದಗಿಸಿದ್ದೆ. (ತೀರ್ಪಿನಲ್ಲಿ ಉಲ್ಲೇಖಗೊಂಡಿರುವ ಮತ್ತೊಂದು ತೀರ್ಪನ್ನು ವಿದ್ಯಾ ಮೇಡಂ ವಕೀಲಮ್ಮನ ಗಮನಕ್ಕೆ ತಂದಿದ್ದರಂತೆ. ಅದು ನನಗೆ ಮೊನ್ನೆಯಷ್ಟೆ ಗೊತ್ತಾಗಿದ್ದು) ಹೀಗೆ ದಾಖಲೆ ಲೆಕ್ಕದಲ್ಲಿ ನಮ್ಮ ಪಕ್ಷ ಬಲವಾಗಿಯೇ ಇತ್ತು. ಮತ್ತು ಇದೇನು ದೊಡ್ಡ ಕುಂಬಳಕಾಯಿ ಕೇಸಲ್ಲ. ಕಂಪೆನಿಯ ವಾದ ಮಾಹಿತಿ ಹಕ್ಕು ೨೦೦೫ ತನಗೆ ಅನ್ವಯವಾಗುವುದಿಲ್ಲ, ಆದ್ದರಿಂದ ತನ್ನನ್ನು ಮಾಹಿತಿಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು. ನಮ್ಮ ವಾದ ಕಂಪೆನಿ ಮಾಹಿತಿಹಕ್ಕಿನ ವ್ಯಾಪ್ತಿಯ ಒಳಗಿದೆ ಎಂದು. ಮಾಹಿತಿ ಹಕ್ಕು ಕಾನೂನಿನ ವಿವರಣೆಯಂತೆ ಯಾವುದಾದರೊಂದು ಸಂಸ್ಥೆ/ಕಂಪೆನಿಯಲ್ಲಿ ಸರಕಾರ ನೇರವಾಗಿ ಅಥವಾ ಪರೋಕ್ಷವಾಗಿ  ಗಣನೀಯ ಪ್ರಮಾಣದ ಹಣ ತೊಡಗಿಸಿದ್ದರೆ, ಅಂಥ ಕಂಪೆನಿ/ಸಂಸ್ಥೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಹಾಗಾದರೆ ಗಣನೀಯ ಎಂದರೆ ಏನು? ಇಂಗ್ಲಿಷಿನಲ್ಲಿ ಸಬ್ ಸ್ಟ್ಯಾನ್ಷಿಯಲ್  ಎಂಬ ಶಬ್ದ ಹಾಕಿದ್ದಾರೆ. ಸಬ್ ಸ್ಟ್ಯಾನ್ಷಿಯಲ್   ಎಂದರೆ? ಶೇ. ೧೦ ಎಂದೋ, ಶೇ. ೫೦ ಎಂದೋ ಹೇಳಿದರೆ ನಿರ್ದಿಷ್ಟವಾಗಿ ಹೇಳಿದಂತಾಗುತ್ತಿತ್ತು, ಆಗ ಸಮಸ್ಯೆ ಇರಲಿಲ್ಲ. ಇಲ್ಲಿ ಹಾಗಲ್ಲ, ಸಬ್ ಸ್ಟ್ಯಾನ್ಷಿಯಲ್   ಎಂದುಬಿಟ್ಟಿದೆ ಕಾನೂನು! ಅದಕ್ಕೆ ವಿವರಣೆ ಹೀಗಂತೆ: ಯಾವುದು ಕ್ಷುದ್ರವಲ್ಲವೋ ಅದು ಗಣನೀಯ! ಟ್ರಿವಿಯಲ್ ಅಲ್ಲದ್ದು ಸಬ್ ಸ್ಟ್ಯಾನ್ಷಿಯಲ್! ಇದು ತೀರ್ಪಿನಲ್ಲೇ ಇದೆ.

ನಮಗೇ ಗುಣವಾಯಿತು!

ನಮ್ಮ ಈ ಕಂಪೆನಿಯಲ್ಲಿ ಕರ್ನಾಟಕ ಸರಕಾರದ್ದು ಶೇ. 23 ಮತ್ತು ಕೇಂದ್ರದ್ದು ಶೇ. 26 ಬಂಡವಾಳ ಇದೆ ಎನ್ನುವುದಕ್ಕೆ ದಾಖಲೆಗಳಿದ್ದವು. ಹಾಗಾಗಿ ವಕೀಲರುಗಳಿಗೆ ತಲೆ ತಲೆ ಕುಟ್ಟಲು (ತರ್ಕವೆಂಬುದು ತಗರ ಹೋರಟೆ-ಅಲ್ಲಮ ಪ್ರಭು) ಇಲ್ಲಿ ಹೆಚ್ಚು ಅವಕಾಶ ಇರಲಿಲ್ಲ. ಕೇಸು ಖಂಡಿತ ನಮಗೆ ಗುಣವಾಗುತ್ತದೆ ಅಂತ ನನಗೆ ವಿಶ್ವಾಸ ಇತ್ತು. ಆದರೆ ಪ್ರಶ್ನೆ ಇದ್ದದ್ದು ಸಮಯದ್ದು. ಕೂಡಲೇ ವಿಚಾರಣೆಗೆ ತೆಗೆದುಕೊಳ್ಳಲು  ನಮ್ಮದೇನು ಯಡಿಯೂರಪ್ಪನವರ ನಿರೀಕ್ಷಣಾ ಜಾಮೀನು ಪ್ರಕರಣವೆ? ವರ್ಷಗಟ್ಟಲೆ ಕೋರ್ಟಿನಲ್ಲಿ ಧೂಳು ಪೇರಿಸಿಕೊಳ್ಳುತ್ತಾ ಬಿದ್ದು ಬಿಟ್ಟರೆ ಏನು ಗತಿ?
ಹಾಳು ಬಡಿದು ಹೋಗಲಿ ಅಂತ ಅದರ ಆಲೋಚನೆ ಬಿಟ್ಟೆ. ಅಂತರ್ಜಾಲದಲ್ಲಿ ಆಗಾಗ ತೆಗೆದು ನೋಡುವುದು, ನೋಡಿದಾಗೆಲ್ಲ ಕೇಸ್ ಪೆಂಡಿಂಗ್ ಅಂತ ಇರುವುದನ್ನು ಕಂಡು ಸುಮ್ಮನಾಗುವುದು ಹೀಗೇ ನಡೆಯುತ್ತಿತ್ತು ಕಳೆದ ಸುಮಾರು ಒಂದೂವರೆ ವರ್ಷದಿಂದ.  ಮೊನ್ನೆ ಒಂದು ದಿನ ನೋಡುತ್ತೇನೆ ಒಂದು ಶಬ್ದ ಬದಲಾಗಿಬಿಟ್ಟಿದೆ: ಕೇಸ್ ಪೆಂಡಿಂಗ್ ಹೋಗಿ ಕೇಸ್ ಡಿಸ್ಪೋಸ್ಡ್ ಆಗಿದೆ! ಶಭಾಷ್!  ಮತ್ತೊಂದು ಚೌಕದಲ್ಲಿ ಕೇಸು ಡಿಸ್ಮಿಸ್ ಆಗಿದೆ ಎಂತಲೂ ಇತ್ತು. ಹಾಗಿದ್ದರೆ ನಮಗೇ ಗುಣ ಅಂತ ಗೊತ್ತಾದರೂ ಸಾಯಂಕಾಲದವರೆಗೂ ಕಾದು ಗೆಳೆಯರೂ ವಕೀಲರೂ ಆದ ಕಜೆ ರಾಮಚಂದ್ರ ಭಟ್ಟರಿಗೆ ಫೋನಿಸಿದೆ. ಅವರ ತಮ್ಮ ನರಸಿಂಹ ಭಟ್ಟರು (ಅವರೂ ವಕೀಲರೇ) ಸಿಕ್ಕಿದರು. ಅಪೀಲು ಮಾಡಿದ್ದು ಯಾರು? ಅಂದರು. ಕಂಪೆನಿ. ಹಾಗಿದ್ದರೆ ಅಪೀಲು ವಜಾ ಆಯಿತು, ನೀವೇ ಗೆದ್ದ ಹಾಗೆ ಎಂದರು. ನ್ಯಾಯಾಧೀಶರು ಬೇಲಿ ಹಾರುವ ಹೋರಿಯ ಕುತ್ತಿಗೆಗೆ ಕುಂಟೆ ಕಟ್ಟಿದ್ದರು. ಮಹಾತ್ಮಾ ಗಾಂಧೀಕೀ ಜೈ!
ಇಷ್ಟಾದರೂ ತೀರ್ಪಿನ ಪ್ರತಿ ಇಲ್ಲದೆ ಏನೂ ಮಾಡುವಂತಿಲ್ಲ. ಅಂತರ್ಜಾಲದಲ್ಲಿ ಹುಡುಕಿದೆ. ಎಷ್ಟು ಪರಡಿದರೂ ಪ್ರಯೋಜನ ಆಗಲಿಲ್ಲ. ಬೆಂಗಳೂರಲ್ಲಿ ನನ್ನ ಬಂಧು ಒಬ್ಬರು ಹೈಕೋರ್ಟ್ ವಕೀಲರಿದ್ದಾರೆ. ಅವರಿಗೆ ಫೋನ್ ಮಾಡಿದೆ. ಅವರು ಎಲ್ಲ ವಿವರಿಸಿ ಹೇಳಿದರು. ಕೇಸಿನ ನಂಬರು ತೆಗೆದುಕೊಂಡು ಅವರೇ ನೋಡಿ ಹೇಳಿದರು. "ತೀರ್ಪಿನ ದೃಢೀಕೃತ ಪ್ರತಿಗೆ ಎರಡೂ ಕಡೆಯ ವಕೀಲರು ಅರ್ಜಿ ಹಾಕಿರುತ್ತಾರೆ. ಅವರು ಅಲ್ಲಿ ಪೂರ್ತಿ ದುಡ್ಡು ಕಟ್ಟಿದ ಮೇಲೆ ತೀರ್ಪು ಇಂಟರ್ನೆಟ್ಟಿನಲ್ಲಿ ಬೀಳುತ್ತದೆ. ಮತ್ತೆ ನೀವು ಓದಬಹುದು" ಮತ್ತೆರಡು ದಿನ ಹೋಯಿತು. ವಿಷಯ ತಿಳಿಸಿ ವಿದ್ಯಾ ಮೇಡಂಗೆ ಮೊದಲೇ ಫೋನ್ ಮಾಡಿದ್ದೆ. ಅವರೂ ವಿಚಾರಿಸಿದ್ದರು. ಇಷ್ಟರಲ್ಲಿ ಆಯೋಗದ ಕಡೆಯ ವಕೀಲರು ದುಡ್ಡು ಕಟ್ಟಿ ತೀರ್ಪಿನ ಪ್ರತಿ ಪಡೆದರು. ಹಾಗಾಗಿ ತೀರ್ಪು ಇಂಟರ್ನೆಟ್ಟಿಗೆ ಬಿತ್ತು. ಸಾರ್ವಜನಿಕ ಆಸ್ತಿಯಾಯಿತು. ನಾನೂ ನೋಡಿದೆ. ನನಗೆ ಗೊತ್ತಿದ್ದ ಒಂದೆರಡು ಪತ್ರಿಕೆಗೆ ಕಳಿಸಿದೆ. ವಿದ್ಯಾ ಮೇಡಂ ಎಲ್ಲಾ ಪತ್ರಿಕೆಗಳಿಗೂ ತೀರ್ಪು ಕಳಿಸಿಕೊಟ್ಟರು. ಮತ್ತೆರಡು ದಿನದಲ್ಲಿ ಪತ್ರಿಕೆಗಳಲ್ಲಿ  ಎಂ ಎಸ್ ಇ ಜಡ್ ಮಾಹಿತಿ ಹಕ್ಕು ವ್ಯಾಪ್ತಿಗೆ ಎಂಬ ಸುದ್ದಿ ಪ್ರಕಟವಾಗತೊಡಗಿತು. ಎಲ್ಲಾ ಮುಖ್ಯ  ಇಂಗ್ಲಿಷ್ ದೈನಿಕಗಳೂ ಸುದ್ದಿಯನ್ನು ಪ್ರಕಟಿಸಿದವು. ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಮಾತ್ರ ಕಡಿಮೆ. ಪ್ರಜಾವಾಣಿ  ವರದಿ ಮಾಡಿತು. ಕರಾವಳಿ ಅಲೆಯಲ್ಲೂ ಪ್ರಕಟವಾಗಿದೆ ಎಂದು ಮಿತ್ರ ವಿಶ್ವನಾಥರು ಹೇಳಿದರು.

ತೀರ್ಪಿನ ಮುಖ್ಯಾಂಶಗಳು

ತೀರ್ಪಿನ ಕೆಲವು ಅಂಶಗಳು ಮಾಹಿತಿ ಹಕ್ಕು ಕಾನೂನಿನ ಕೆಲವು ಅಸ್ಪಷ್ಟ ಅಂಶಗಳನ್ನು ಹೆಚ್ಚು ಸ್ಪಷ್ಟಪಡಿಸಿರುವುದು ಪ್ರಜೆಗಳಿಗೆ ಆಗಿರುವ ದೊಡ್ಡ ಲಾಭ. ಗಣನೀಯ (ಸಬ್ ಸ್ಟ್ಯಾನ್ಷಿಯಲ್) ಎಂಬುದಕ್ಕೆ  ನ್ಯಾಯಾಧೀಶರು ಕೊಟ್ಟಿರುವ ವಿವರಣೆಯನ್ನು ಮೇಲೆ ಹೇಳಿದ್ದೇನೆ. ಇದರೊಂದಿಗೆ ಇನ್ನೊಂದು ಅಂಶವೂ ಇದೆ: ಗಣನೀಯ ಎಂದರೇನು ಎಂಬುದನ್ನು ವಿವರಿಸಿದ ಮುಂದಿನ ಸಾಲಿನಲ್ಲಿಯೇ ನ್ಯಾಯಾಧೀಶರು ಹೀಗೆ ಹೇಳಿದ್ದಾರೆ: "It need not necessarily be by a cash flow but also by any other kind". ಎಂದರೆ ಸರಕಾರ ಯಾವುದೇ ಸಂಸ್ಥೆಯಲ್ಲಿ ಹಣದ ರೂಪದಲ್ಲಿಯೇ ತನ್ನನ್ನು ತೊಡಗಿಸಿಕೊಂಡ ಪ್ರಕರಣದಲ್ಲಿ ಮಾತ್ರ ಅಲ್ಲ, ವಸ್ತುವಿನ ರೂಪದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೂ ಮಾಹಿತಿ ಹಕ್ಕು ಅನ್ವಯವಾಗುತ್ತದೆ ಎಂದಾಯಿತು. ಅಂದರೆ ಈಗ ಸಾಮಾನ್ಯವಾಗಿ ಯಾವ ಕಂಪೆನಿಗಳು ಮಾಹಿತಿ ಹಕ್ಕಿನಲ್ಲಿ ಬರುವುದಿಲ್ಲ ಎಂದು ಭಾವಿಸಲಾಗಿದೆಯೋ ಆ ಕಂಪೆನಿಗಳಿಗೂ ಮಾಹಿತಿ ಹಕ್ಕು ಅನ್ವಯವಾಗುತ್ತದೆ! ಉದಾಹರಣೆಗೆ ಒಂದು ಕಿರು ಜಲವಿದ್ಯುತ್ ತಯಾರಿಕಾ ಕಂಪೆನಿಯನ್ನು ತೆಗೆದುಕೊಂಡರೆ, ಆ ಕಂಪೆನಿ ಸರಕಾರಕ್ಕೆ ಸೇರಿದ ನದಿಗೆ ಅಣೆಕಟ್ಟು ಹಾಕಿರುತ್ತದೆ. ನದಿ ಮತ್ತು ಅಣೆಕಟ್ಟು ಇರುವ ಸ್ಥಳ ಸರಕಾರದ್ದಾದ್ದರಿಂದ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ಅರ್ಥ ಮಾಡುವುದು ಸಾಧ್ಯವಿದೆ. (ಕಿರು ಜಲ ವಿದ್ಯುತ್ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ಸರಕಾರದ ಸಬ್ಸಿಡಿಯನ್ನು ತೆಗೆದುಕೊಳ್ಳುವುದರಿಂದ, ಆ ಕಾರಣಕ್ಕೂ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುವುದು ಸಾಧ್ಯವಿದೆ). ಸರಕಾರದ ಮೂಲಕ ಭೂಮಿಯನ್ನೂ, ತೆರಿಗೆ ರಿಯಾಯತಿಯನ್ನೂ ಪಡೆದುಕೊಂಡ ಇನ್ಫೋಸಿಸ್ ಮುಂತಾದ ಖಾಸಗಿ ಕಂಪೆನಿಗಳೂ ಇದೇ ಕಾರಣಕ್ಕೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತವೆಯೇ ಎಂಬುದನ್ನೂ ಈ ತೀರ್ಪಿನ ಹಿನ್ನೆಲೆಯಲ್ಲಿ ಪರಿಶೀಲಿಸಬಹುದಾಗಿದೆ.

ಭಾನುವಾರ, ಏಪ್ರಿಲ್ 15, 2012

ರಾಜರೆಂಬರುಮೊಳರೆ?

(ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಶಿವಕೋಟ್ಯಾಚಾರ್ಯ ಎಂಬುವವನು ವಡ್ಡಾರಾಧನೆ ಎಂಬ ಕೃತಿ ರಚಿಸಿದ್ದಾನೆ. ಅದರಲ್ಲಿ ಹಲವಾರು ಕಥೆಗಳಿವೆ. ಸುಕುಮಾರಸ್ವಾಮಿಯ ಕಥೆ ಅವುಗಳಲ್ಲಿ ಒಂದು. ಸುಕುಮಾರ ಸ್ವಾಮಿ ದೊಡ್ಡ ಶ್ರೀಮಂತ. ಒಂದು ದಿನ ಅವನು ಎಂದಿನಂತೆ ತನ್ನ ಮನೆಯ ಮಹಡಿಯಲ್ಲಿ ವಿಶ್ರಮಿಸಿದ್ದ. ಆಗ ದೂತನೊಬ್ಬ ಬಂದು ಅವನಿಗೆ ಹೇಳಿದ. "ಸ್ವಾಮೀ ನಿಮ್ಮನ್ನು ನೋಡಲು ಮಹಾರಾಜರು ಬಂದಿದ್ದಾರೆ. ಅವರನ್ನು ನೋಡಲು ನೀವು ಕೆಳಗೆ ಬರಬೇಕು" ಸುಕುಮಾರಸ್ವಾಮಿ ಆಶ್ಚರ್ಯದಿಂದ ಕೇಳಿದನಂತೆ: ರಾಜರು ಅಂತ ಇರುತ್ತಾರೆಯೆ? (ರಾಜರೆಂಬರುಮೊಳರೆ?)
ಎಂ. ಎಸ್. ಇ. ಜಡ್ ನಂತಹ ದೊಡ್ಡ ದೊಡ್ಡ ಕಂಪೆನಿಗಳೂ ಇಂದು ಸುಕುಮಾರಸ್ವಾಮಿಯ ಹಾಗೆ "ಸರ್ಕಾರ ಅಂತ ಇರುತ್ತದೆಯೆ" ಎಂದು ಕೇಳಿದರೆ ಆಶ್ಚರ್ಯವಿಲ್ಲ ಅಲ್ಲವೆ?)
ಖಾಸಗಿ ಮಾಲಿಕತ್ವದ ಎಂ. ಎಸ್. ಇ. ಜಡ್. ಕಂಪೆನಿಗೆ ನೇತ್ರಾವತಿಯಿಂದ ನೀರೆತ್ತಲು ಅನುಮತಿ ನೀಡುವಾಗ ಸರಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಆ ಪೈಕಿ ಒಂದು ಷರತ್ತಿನ ಪ್ರಕಾರ ನೀರೆತ್ತುವ ಕಾಮಗಾರಿ (ಪೈಪ್ ಲೈನ್ ಅಳವಡಿಕೆ ಇತ್ಯಾದಿ ಕಾಮಗಾರಿಗಳು) ಪ್ರಾರಂಭಿಸುವ ಮೊದಲು ಕಂಪೆನಿ ಸಣ್ಣ ನೀರಾವರಿ ಇಲಾಖೆಯ ಸಂಬಂಧಪಟ್ಟ ಕಾರ್ಯಕಾರಿ ಎಂಜಿನಿಯರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕು. ಕಂಪೆನಿ ನೀರೆತ್ತುವ ಕಾಮಗಾರಿ ಪ್ರಾರಂಭಿಸಿ ಏಳೆಂಟು ತಿಂಗಳುಗಳೇ ಕಳೆದುಹೋಗಿವೆ. ೧೫ ಎಂಜಿಡಿ ನೀರೆತ್ತಲು ೩೦ ಎಂಜಿಡಿ ನೀರೆತ್ತುವ ಸಾಮರ್ಥ್ಯದ ಪೈಪುಗಳನ್ನು ಕಿಲೋಮೀಟರುಗಟ್ಟಳೆ ಅಳವಡಿಸಿಯೂ ಆಗಿದೆ. ಸರಪಾಡಿಯ ಹತ್ತಿರ ನೇತ್ರಾವತಿ ನದಿಯ ದಂಡೆಯಲ್ಲಿ ಜಾಕ್ ವೆಲ್ ಕಾಮಗಾರಿಯನ್ನೂ ಪ್ರಾರಂಭಿಸಿ ಆಗಿದೆ. ಆದರೆ ಅದು ಸಣ್ಣ ನೀರಾವರಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆಯೆ?
ಷರತ್ತಿನಲ್ಲಿ ಹೇಳಲಾದ "ಸಂಬಂಧಪಟ್ಟ" ಕಾರ್ಯಕಾರಿ ಎಂಜಿನಿಯರ್ ಎಂದರೆ ಮಂಗಳೂರಿನ ಸಣ್ಣ ನೀರಾವರಿ ವಿಭಾಗದವರೇ ಎಂದು ನನ್ನಷ್ಟಕ್ಕೆ ನಾನು ಭಾವಿಸಿಕೊಂಡೆ. ಅದಕ್ಕೆ ಕಾರಣ ಇತ್ತು. ಹಿಂದೆ ಎಂ ಆರ್ ಪಿ ಎಲ್ ಸಂಸ್ಥೆಗೆ ನೀರು ನೀಡುವ ಬಗ್ಗೆ ಆದ ಒಪ್ಪಂದಕ್ಕೆ ಮಂಗಳೂರಿನ ಕಾರ್ಯಕಾರಿ ಎಂಜಿನಿಯರರೇ ಸರಕಾರದ ಪರವಾಗಿ ಸಹಿ ಮಾಡಿದ್ದರು. ಹಾಗಾಗಿ ನಾನು ಅವರಿಗೆ "ಸರಕಾರಿ ಆದೇಶದಂತೆ, ಮಾಡಿಕೊಂಡಿರುವ ಒಪ್ಪಂದದ ಪ್ರತಿ ಕೊಡುವಂತೆ" ಮಾಹಿತಿ ಹಕ್ಕಿನ ಅನ್ವಯ ಅರ್ಜಿ ಕೊಟ್ಟೆ. "ನಮ್ಮ ವಿಭಾಗಕ್ಕೆ ಈ ವಿಷಯ ಸಂಬಂಧಪಡುವುದಿಲ್ಲವಾದ್ದರಿಂದ ಯಾವುದೇ ಒಪ್ಪಂದವನ್ನೂ ಮಾಡಿಕೊಂಡಿಲ್ಲ" ಎಂದು ಅವರು ಉತ್ತರಿಸಿದರು. ಇಷ್ಟಕ್ಕೆ ಒಂದು ತಿಂಗಳು ಕಳೆಯಿತು. "ಸ್ವಾಮೀ, ನೀವಲ್ಲದಿದ್ದರೆ, ಅದು ಯಾರಿಗೆ ಸಂಬಂಧಪಟ್ಟಿದೆಯೋ ಅವರಿಗೆ ನನ್ನ ಅರ್ಜಿ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ" ಅಂತ ಅವರನ್ನು ಎಜುಕೇಟ್ ಮಾಡಬೇಕಾಯಿತು. ಮಾಡಿದೆ. ಅವರು ನನ್ನ ಅರ್ಜಿಯನ್ನು ಹಾಸನದ ಜಲಮಾಪನ ವಿಭಾಗಕ್ಕೆ ಕಳಿಸಿ, "ನೇತ್ರಾವತಿ ನದಿಯ ಉಸ್ತುವಾರಿ ನಿಮಗೆ ಇರುವುದರಿಂದ ಅರ್ಜಿಯನ್ನು ನಿಮಗೆ ಕಳಿಸಿಕೊಡಲಾಗಿದೆ; ಅರ್ಜಿದಾರರಿಗೆ ಮಾಹಿತಿ ನೀಡಿರಿ" ಎಂದರು. ಆಗಲಪ್ಪ! ಒಂದು ಹೊಸ ವಿಷಯ ಗೊತ್ತಾಯಿತು! ನಮ್ಮ ನೇತ್ರಾವತಿ ನದಿಗೂ ಒಬ್ಬ "ಉಸ್ತುವಾರಿ" ಇದ್ದಾರೆ! ತುಂಬ ಸಂತೋಷವಾಯಿತು. ಅವರು ಕೆಲವು ದಿನ ಕಳೆದು ಉತ್ತರಿಸಿದರು: "ಈ ವಿಭಾಗದಿಂದ ಎಂ. ಎಸ್. ಇ. ಜಡ್. ಕಂಪೆನಿಯೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಂಡಿಲ್ಲ". ಆಫೀಸಿಗೆ ಸಂಬಂಧಿಸಿದ ಕಾನೂನುಗಳನ್ನು ತಿಳಿದುಕೊಳ್ಳುವ ಅಭ್ಯಾಸವನ್ನು ಎಂದೋ ಗುಡ್ಡಕ್ಕೆ ಹೊಡೆದಿರುವ ಇಂಥವರನ್ನು ಎಜುಕೇಟ್ ಮಾಡಲು ಯತ್ನಿಸುವ ನಾನೊಬ್ಬ ದಡ್ಡ ಎಂದು ನನ್ನನ್ನು ನಾನೇ ಬೈದುಕೊಂಡು, ಮಾಹಿತಿ ಹಕ್ಕು ಆಯೋಗಕ್ಕೆ ಒಂದು ದೂರು ಸಲ್ಲಿಸಿದೆ. ಸುಮಾರು ಆರು ತಿಂಗಳ ನಂತರ ಕಳೆದ ಐದನೇ ತಾರೀಖು (೫-೪-೨೦೧೨) ಬೆಂಗಳೂರಿನಲ್ಲಿ ಮಾಹಿತಿ ಹಕ್ಕು ಆಯೋಗದ ಎದುರು ಪ್ರಕರಣ ವಿಚಾರಣೆಗೆ ಬಂತು. ನನ್ನ ಫಿರ್ಯಾದಿಯಲ್ಲಿ ಎದುರು ಪಕ್ಷವಾಗಿ ಮಂಗಳೂರು ಹಾಗೂ ಹಾಸನ ಎರಡೂ ಕಾರ್ಯಕಾರಿ ಎಂಜಿನಿಯರುಗಳನ್ನು ತೋರಿಸಿದ್ದೆ. ಆದರೆ ಆಯೋಗದವರು ಮಂಗಳೂರಿನವರಿಗೆ ಮಾತ್ರ ನೋಟೀಸು ಕೊಟ್ಟಿದ್ದರು. ಹಾಗಾಗಿ ಮಂಗಳೂರಿನ ಸಣ್ಣ ನೀರಾವರಿ ವಿಭಾಗದವರು ಮಾತ್ರ ವಿಚಾರಣೆಗೆ ಹಾಜರಾದರು.

ಬೆಂಗಳೂರಿನಲ್ಲಿ ಈಗ ಮಾಹಿತಿ ಆಯೋಗದ ಕಛೇರಿ ಎರಡು ಕಡೆ ಆಗಿದೆ. ಒಂದು ಮೊದಲಿದ್ದಲ್ಲಿಯೇ: ಬಹು ಮಹಡಿ ಕಟ್ಟಡದಲ್ಲಿ. ಮತ್ತೊಂದು ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿ ಕಟ್ಟಡದಲ್ಲಿ. ನನಗೆ ಹೋಗಬೇಕಾಗಿದ್ದು ಮಿಥಿಕ್ ಸೊಸೈಟಿಗೆ. ಬೆಳಗ್ಗೆ ಹನ್ನೊಂದು ಗಂಟೆಗೆ ವಿಚಾರಣೆ ಶುರು. ನಾನು ಹತ್ತು ಗಂಟೆಯ ಹೊತ್ತಿಗೇ ಅಲ್ಲಿ ಹಾಜರಾದೆ. ಮಾಹಿತಿ ಹಕ್ಕು ಸಂಸ್ಥೆಗೆ ಬಹುಷಃ ಕೇಂದ್ರ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಕಚೇರಿಯನ್ನು ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಸಾಮಾನ್ಯವಾಗಿ ನಮ್ಮ ಸರಕಾರಿ ಕಚೇರಿಗಳಿಗಿರುವ ಒಂದು ಜೋಬದ್ರ ಕಳೆ ಈ ಕಛೇರಿಗೆ ಇಲ್ಲ. ಹೆಚ್ಚು ಗಲಾಟೆ ಇಲ್ಲ. ಆಸನ ವ್ಯವಸ್ಥೆ, ಟಾಯ್ಲೆಟ್ ಇತ್ಯಾದಿಗಳು ಸಾಕಷ್ಟು ಚೆನ್ನಾಗಿವೆ. ಇಡೀ ವಾತಾವರಣ ಸ್ವಚ್ಛವಾಗಿದೆ.
ನಾನು ಹೋದಾಗ ತರುಣನೊಬ್ಬ ಎದುರು ಕೂತಿದ್ದ. ಹೀಗೇ ಮಾತಾಡಿಸಿದಾಗ ಅವನು ಬಂದಿದ್ದೂ ಬಿ.ಸಿ.ರೋಡಿನಿಂದಲೇ ಎಂದು ಗೊತ್ತಾಯಿತು. ಅಕ್ಷರ ದಾಸೋಹವೋ ಯಾವುದೋ ವಿಷಯದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿಯೋ ಅವರ ಪರವಾಗಿಯೋ ಬಂದಿದ್ದ. "ಈಗೆಲ್ಲ ಮಾಹಿತಿ ಹಕ್ಕು ಮಿಸ್ ಯೂಸ್ ಆಗುವುದೇ ಜಾಸ್ತಿ. ಅಲ್ಲಿಂದ ಇಲ್ಲಿಗೆ ಬರಲಿಕ್ಕೆ ಎಷ್ಟು ಖರ್ಚು! ಎಲ್ಲ ವೇಸ್ಟ್" ಎಂದು ಗುರುಗುಟ್ಟಿದ. ಆಮೇಲೂ ಒಂದಿಬ್ಬರು ಸರಕಾರಿ ಅಧಿಕಾರಿಗಳು ಅದೇ ಅಭಿಪ್ರಾಯ ಕೊಟ್ಟದ್ದರಿಂದ, ಸರಕಾರಿ ವಲಯದಲ್ಲಿ ಮಾಹಿತಿ ಹಕ್ಕಿನ ಕುರಿತು ಏನು ಅಭಿಪ್ರಾಯ ಇದೆ ಎನ್ನುವುದಕ್ಕೆ ಇದನ್ನು ಹೇಳಿದೆ. ಮಾಹಿತಿ ಹಕ್ಕು ಅಧಿಕಾರಿಗಳ ಬಾಲ ತಿರುಚಲು ಜನಸಾಮಾನ್ಯರ ಕೈಗೆ ಸಿಕ್ಕ ಅತ್ಯುತ್ತಮ ಅಸ್ತ್ರವಾಗಿಬಿಟ್ಟಿದೆ. ಹಾಗಾಗಿ ಇಷ್ಟು ವರ್ಷ ಪ್ರಶ್ನೆ ಮಾಡುವವರೇ ಇಲ್ಲದೆ, ದರ್ಬಾರು ಮಾಡಿಕೊಂಡೇ ಕಾಲ ಕಳೆದ ಅನೇಕ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಎಂದರೆ ಮುಖ ಗಂಟಾಗುತ್ತದೆ, ಬಿಪಿ ಏರುತ್ತದೆ. ಜನಸಾಮಾನ್ಯರು ಮಾತ್ರ ಮೀಸೆಯೊಳಗೇ ನಗುತ್ತ, ಈ ಅಸ್ತ್ರವನ್ನು ದುರುಪಯೋಗವೋ ಮತ್ತೊಂದೋ ನೋಡದೆ ಅಧಿಕಾರಿಗಳ ಮೇಲೆ ಪ್ರಯೋಗಿಸುತ್ತಲೇ ಇದ್ದಾರೆ. ( ಬಾಲ ತಿರುಚುವುದು: ಮಲಗಿರುವ ದನ, ಎಮ್ಮೆಗಳನ್ನು ಎಬ್ಬಿಸಲು ಪ್ರಯೋಗಿಸುವ ಸುಲಭ ಉಪಾಯ. ಬಾಲ ಹಿಡಿದು ತಿರುಪಿದರೆ ಅವಕ್ಕೆ ಪಾಪ, ಅಸಾಧ್ಯ ನೋವಾಗುತ್ತದೆ. ಕೂಡಲೇ ಎದ್ದು ನಿಲ್ಲುವುದು ಅನಿವಾರ್ಯವಾಗುತ್ತದೆ.)

ನನ್ನ ಅರ್ಜಿಯ ಕುರಿತಂತೆ ಆಯೋಗದ ಎದುರು ವಿಚಾರಣೆಗೆ ಇದ್ದದ್ದು ಅರ್ಜಿದಾರರಿಗೆ ಕೇಳಿದ ಮಾಹಿತಿ ಕೊಡಲಾಗಿದೆಯೇ ಇಲ್ಲವೇ ಎಂಬ ಪ್ರಶ್ನೆ. ಕಾಮಗಾರಿ ಈಗಾಗಲೇ ಶುರುವಾಗಿದೆ ಎಂಬುದಕ್ಕೆ ನನ್ನ ಹತ್ತಿರ ದಾಖಲೆ ಇತ್ತು. ಆ ದಾಖಲೆಯದೇ ಒಂದು ಕಥೆ. ಚುಟುಕಾಗಿ ಹೇಳಿಬಿಡುತ್ತೇನೆ: ಎಸ್. ಇ. ಜಡ್. ಕಂಪೆನಿಯವರು ನೇತ್ರಾವತಿ ನದಿಯ ದಂಡೆಯಲ್ಲಿ ಜಾಕ್ ವೆಲ್ ಕೆಲಸ ಶುರು ಮಾಡಿದಾಗ ನಾವು ಕೆಲವರು ಅಲ್ಲಿ ಹೋಗಿ ನೋಡಿ ಬಂದಿದ್ದೆವು. ನದಿಯ ದಂಡೆಯ ಈ ಜಾಗದಲ್ಲಿ ಮರ ಕಡಿದಿರುವುದನ್ನೇ ಹಿಡಿದು ನಾನು ಅರಣ್ಯ ಇಲಾಖೆಗೆ ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಕೊಟ್ಟಿದ್ದೆ. ಅವರ ಉತ್ತರದಲ್ಲಿ "ಅದು ಸರಕಾರಕ್ಕೆ ಸೇರಿದ ಭೂಮಿ" ಎಂದಿತ್ತು. ನಾನು ಅಲ್ಲಿಗೆ ಬಿಡದೆ ಬಂಟವಾಳದ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದೆ. ಅವರೂ ಸಹ ಆ ಭೂಮಿ ಸರಕಾರದ್ದೇ ಎಂದರು. ಅಲ್ಲಿ ಕಾಮಗಾರಿ ನಡೆಸುತ್ತಿರುವುದು ಎಸ್. ಇ. ಜಡ್. ಕಂಪೆನಿ ಹೌದೆಂದೂ ಹೇಳಿದರು. ಕಾಮಗಾರಿ ಶುರುವಾಗಿರುವುದಕ್ಕೆ ಆಧಾರವಾಗಿ ಮಾಹಿತಿ ಹಕ್ಕು ಆಯೋಗದ ಎದುರು ನಾನು ಅದೇ ದಾಖಲೆಯನ್ನಿಟ್ಟಿದ್ದೆ.

ತಹಸೀಲ್ದಾರರಿಗೆ ಕೊಟ್ಟ ಈ ಅರ್ಜಿಯ ಬಗ್ಗೆ ಒಂದು ಹಂತದಲ್ಲಿ ನಾನು ಮಂಗಳೂರಿನ ಅಸಿಸ್ಟೆಂಟ್ ಕಮಿಷನರ್ ರವರಿಗೆ ಮೇಲ್ಮನವಿ ಸಲ್ಲಿಸಿದ್ದೆ. ದೂರು ವಿಚಾರಣೆಗೆ ಬಂದಾಗ, "ತಹಸೀಲ್ದಾರರಿಗೆ ದಂಡ ವಿಧಿಸಬೇಕು" ಎಂದು ನಾನು ಸಹಾಯಕ ಕಮಿಷನರ್ ಹತ್ತಿರ ವಿನಂತಿಸಿದೆ. ಅದಕ್ಕವರು "ದಂಡ ವಿಧಿಸಿದರೆ ತಹಸೀಲ್ದಾರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಷ್ಟೇ" ಎಂದು ಉತ್ತರಿಸಿದ್ದರು! ಅದಾದ ಕೆಲವೇ ಸಮಯದಲ್ಲಿ ಈ ತಹಸೀಲ್ದಾರರು ಲಂಚ ತೆಗೆದುಕೊಂಡರೆಂಬ ಕಾರಣಕ್ಕೆ ಲೋಕಾಯುಕ್ತ ಪೋಲೀಸರು ಅವರನ್ನು ಬಂಧಿಸಿದರು. ದೇವರು ದೊಡ್ಡವನು. ಈವರೆಗೂ ಯಾವ ದುರದೃಷ್ಟಕರ ಸುದ್ದಿಯೂ ಬಂದಿಲ್ಲ.

ದಾರಿ ತಪ್ಪಿತು, ಕ್ಷಮಿಸಿ. ಮಾಹಿತಿ ಹಕ್ಕು ಆಯುಕ್ತರು ವಿಚಾರಣೆ ನಡೆಸಿ, ನಾನು ಕೇಳಿದ ಮಾಹಿತಿಯನ್ನು ಕೊಡುವಂತೆ ಹಾಸನದ ಜಲಮಾಪನ ವಿಭಾಗಕ್ಕೆ ನಿರ್ದೇಶಿಸುವ ತೀರ್ಪು ಬರೆಸಿದರು.(ಅದರ ಪ್ರತಿ ಇನ್ನೂ ನನ್ನ ಕೈಗೆ ಬಂದಿಲ್ಲ). "ನೀವು ಸರಕಾರಿ ಆಜ್ಞೆಗೆ ಸಹಿ ಹಾಕಿರುವ ಅಧಿಕಾರಿಗೇ ನೇರವಾಗಿ ಅರ್ಜಿ ಸಲ್ಲಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ" ಎಂದು ಮಾಹಿತಿ ಹಕ್ಕು ಆಯುಕ್ತರು ನನಗೆ ಹೇಳಿದರು. ಅದೂ ಸರಿಯೇ. ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಅವರಿಗೆ ಈ ವಿಷಯ ಸಂಬಂಧಪಟ್ಟಿದೆ ಎಂದು ನಾನು ನನ್ನಷ್ಟಕ್ಕೆ ತಿಳಿದದ್ದು ತಪ್ಪಾಯಿತು. ವಾಸ್ತವವಾಗಿ ಅದೂ ಪೂರ್ತಿ ತಪ್ಪಲ್ಲ. ಆ ಜವಾಬ್ದಾರಿ ಮೊದಲು ಮಂಗಳೂರಿನವರಿಗೇ ಇತ್ತಂತೆ. ಇತ್ತೀಚೆಗೆ ಆಡಳಿತದ ಕಾರಣಕ್ಕೋ ಮತ್ತಾವುದೋ ಕಾರಣಕ್ಕೋ ಆ ಜವಾಬ್ದಾರಿಯನ್ನು ಹಾಸನದ ಜಲಮಾಪನ ವಿಭಾಗಕ್ಕೆ ವರ್ಗಾಯಿಸಿದ್ದಾರಂತೆ.

ಈ ನಡುವೆ ನನಗೆ ಸಿಕ್ಕಿದ ಒಂದು ಅನಧಿಕೃತ ಮಾಹಿತಿಯ ಪ್ರಕಾರ, ಅಂಥ ಯಾವುದೇ ಒಪ್ಪಂದವೂ ಈವರೆಗೆ ಆಗಿಲ್ಲವಂತೆ! ನೋಡೋಣ, ಪ್ರಕರಣ ಎಲ್ಲಿಗೆ ಮುಟ್ಟುತ್ತದೆ ಎಂದು.