ಗುರುವಾರ, ಏಪ್ರಿಲ್ 22, 2010

ತನ್ನ ಶಕ್ತಿ ಗೊತ್ತಿರಲಿಲ್ಲವಂತೆ ಹನುಮಂತನಿಗೆ!

ಬಂಟ್ವಾಳ ತಾಲೂಕಿನ ಮಂಚಿ ಬಿ.ವಿ. ಕಾರಂತರ ಹುಟ್ಟೂರು. ಈ ತಿಂಗಳ ೯,೧೦,೧೧ರಂದು ಅಲ್ಲಿ ಅವರ ನೆನಪಿಗಾಗಿ ಅವರ ಅಭಿಮಾನಿಗಳೆಲ್ಲ ಸೇರಿ ಹಲವು ಕಾರ್ಯಕ್ರಮಗಳನ್ನು ನಡೆಸಿದರು. ನಾನು ಈ ಕಾರ್ಯಕ್ರಮದ ಬಗ್ಗೆ ಹೇಳಲು ಹೊರಟದ್ದಲ್ಲ. ಆ ದಿನ ಶ್ರೀಮತಿ ವೈದೇಹಿಯವರು ವ್ಯಕ್ತಪಡಿಸಿದ ಒಂದು ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಬೇಕೆನ್ನಿಸಿದ್ದರಿಂದ ಈ ಬರಹ.
ವೈದೇಹಿಯವರು ಆ ದಿನ ಸಂಜೆಯ ತಮ್ಮ ಭಾಷಣದಲ್ಲಿ ಪ್ರಾಸಂಗಿಕವಾಗಿ ಒಂದು ಮಾತು ಹೇಳಿದರು: "ಎಂಜಿನಿಯರ್ ಎಂದರೆ ಮರಗಳನ್ನು ಕಡಿದು ರಸ್ತೆ ನಿರ್ಮಿಸುವವನಲ್ಲ. ಆ ಕೆಲಸವನ್ನು ಯಾವ ಕಂಟ್ರಾಕ್ಟರ್ ಕೂಡ ಮಾಡಬಲ್ಲ. ಎಂಜಿನಿಯರ್ ಆದವನು ಮರಗಳನ್ನು ಉಳಿಸಿಕೊಂಡೇ ರಸ್ತೆ ಮಾಡುವ ಜಾಣ್ಮೆ ಹೊಂದಿರಬೇಕು. ಈಗ ಎಲ್ಲೆಂದರಲ್ಲಿ ರಸ್ತೆ ಮಾಡಲೆಂದು ಮರ ಕಡಿಯುತ್ತಾರೆ. ಯಾರು ಇದನ್ನು ತಡೆಯುವವರು? ನಾವು ಹೇಳಲು ಸಾಧ್ಯವೆ? ನಾವು ಹೇಳಿದರೆ ಕೇಳುತ್ತಾರೆಯೆ?". ಮೊನ್ನೆ ಮೊನ್ನೆ ಒಂದು ಊಟದ ಮನೆಯಲ್ಲಿ ಸಿಕ್ಕಿದ ಅಲ್ಲಿನವರೇ ಆದ ಕಂದೂರು ಐತಾಳರೂ ವೈದೇಹಿಯವರ ಈ ಮಾತುಗಳನ್ನು ತುಂಬ ಮೆಚ್ಚಿಕೊಳ್ಳುತ್ತಾ. "ನಾವು ಹೇಳಿದರೆ ಆದೀತ? ನಮಗೆ ಏನು ಶಕ್ತಿ ಇದೆ?" ಎಂದರು. ನಾನು ಸುಮ್ಮನಿದ್ದೆ.
**********
ಹನುಮಂತನಿಗೆ ತನ್ನ ಶಕ್ತಿ ಗೊತ್ತಿರಲಿಲ್ಲವಂತೆ. ಅದೇ ಅವನ ಸಮಸ್ಯೆ.
**********
ನಾನು ಮಂಗಳೂರಿಗೆ ಹೋಗುವುದು ಅಪರೂಪ. ಕಳೆದ ವರ್ಷದ ಪ್ರಾರಂಭದಲ್ಲಿ ಯಾತಕ್ಕೋ ಹೋಗಿದ್ದೆ. ಕಾರ್ನಾಡು ಸದಾಶಿವರಾವ್ ರಸ್ತೆಯಲ್ಲಿ ನಡೆದು ಹೋಗಬೇಕಾಯಿತು. ನೋಡಿದರೆ ಹಳತೆಲ್ಲ ಪೂರ್ತಿ ಹೋಗಿ, ಹೊಸ ವಿಶಾಲವಾದ ರಸ್ತೆ ಆಗಿದೆ. ಪೂರ್ತಿ ಕಾಂಕ್ರೀಟ್ ರಸ್ತೆ, ಬದಿಯ ಅಂಗಡಿಗಳ ಹೊಸ್ತಿಲವರೆಗೂ ಚಾಚಿಕೊಂಡಿದೆ. ಅರೆ! ಹಿಂದೆ ಹೀಗಿರಲಿಲ್ಲವಲ್ಲ ಎನಿಸಿತು. ನೆನಪು ಮಾಡಿಕೊಂಡೆ. ಹಿಂದೆ ಕಾಲ್ನಡಿಗೆಯಲ್ಲಿ ಹೋಗುವವರಿಗೆ ರಸ್ತೆಯ ಎರಡೂ ಬದಿಗಳಲ್ಲಿ ಅಂದಾಜು ಮೂರಡಿ ಅಗಲದ ಕಾಲುದಾರಿ ಇತ್ತು. ಕೆಲವು ಕಡೆ ಅದರ ಮೇಲೆ ವಾಹನಗಳು ನುಗ್ಗದಂತೆ ಪೈಪಿನ ಬೇಲಿ ಇತ್ತು. ಅದೀಗ ಕಾಣುತ್ತಿಲ್ಲ! ರಸ್ತೆಯ ತೀರ ಬದಿಯಲ್ಲಿ ವಾಹನಗಳು ಒಂದೋ ಪಾರ್ಕಿಂಗ್ ಮಾಡಿವೆ ಇಲ್ಲವೇ ಆಚೆ ಈಚೆ ಓಡುತ್ತಿವೆ. ನಡೆದು ಹೋಗುವವರ ಕತೆ ಕೈಲಾಸ! ಇದ್ದದ್ದರಲ್ಲೇ ದಾರಿ ಮಾಡಿಕೊಂಡು ಹೋಗಬೇಕು!
ಬಿ.ಸಿ.ರೋಡಿಗೆ ಹಿಂದೆ ಬಂದವನೇ ಅಶೋಕವರ್ಧನರಿಗೆ ಫೋನಾಯಿಸಿದೆ: "ಹ್ವಾಯ್! ಕೆ.ಎಸ್. ರಾವ್ ರೋಡಿನಲ್ಲಿ ಮುಂಚೆ ಫುಟ್ ಪಾತ್ ಇರಲಿಲ್ಲವ?" ಅಂತ. ನನ್ನ ನೆನಪನ್ನು ನನಗೆ ಖಚಿತ ಮಾಡಿಕೊಳ್ಳಬೇಕಾಗಿತ್ತು. "ಇತ್ತಲ್ಲ. ಈಗ ಎಲ್ಲ ಹೋಗಿದೆ. ಅದರಿಂದಾಗಿ ಕೆಲವು ಆಕ್ಸಿಡೆಂಟ್ ಗಳೂ ಆಗಿಯಾಯಿತು" ಎಂದರು ಅಶೋಕರು.
ಆಗಲಿ ನೋಡೋಣ ಎಂದುಕೊಂಡು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಒಂದು ಪತ್ರ ಬರೆದೆ: "ಮುಂಚೆ ಈ ರಸ್ತೆಯ ಬದಿಗೆ ಕಾಲುದಾರಿ ಇತ್ತು. ಹೊಸರಸ್ತೆ ಮಾಡುವಾಗ ಕಾಲುದಾರಿ ಇಲ್ಲವಾಗಿದೆ. ಇದು ಪಾದಚಾರಿಗಳಿಗೆ ಅನ್ಯಾಯ. ಕೂಡಲೇ ಕಾಲುದಾರಿ ಮಾಡಿಸಿಕೊಡಬೇಕಾಗಿ ಕೋರುತ್ತೇನೆ"
ನಿರೀಕ್ಷಿಸಿದಂತೆ ಉತ್ತರ ಬರಲಿಲ್ಲ. ಆದರೆ ನನಗೆ ಇದು ಹೊಸತಲ್ಲ. ಮುಂಚೆಯೂ ಪತ್ರಗಳನ್ನು ಬರೆದ ಅನುಭವ ನನಗಿತ್ತು. ಕೆಲವು ದಿನ ಕಾದೆ. ನೆನಪೋಲೆ ಬರೆದೆ. ಉತ್ತರವಿಲ್ಲ. ಮೂರನೆಯ ಪತ್ರ ಬರೆದು "ಈಗಲೂ ನೀವು ಉತ್ತರ ಬರೆಯದಿದ್ದರೆ/ಕ್ರಮ ಕೈಗೊಳ್ಳದಿದ್ದರೆ ಈ ಬಗ್ಗೆ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸುತ್ತೇನೆ" ಎಂದೆ. ಆಗಲೂ ಉತ್ತರವಿಲ್ಲ. ಉಸ್ತುವಾರಿ ಸಚಿವರಿಗೆ (ಶ್ರೀ ಕೃಷ್ಣ ಪಾಲೆಮಾರ್) ಆಯುಕ್ತರಿಗೆ ಬರೆದ ಎಲ್ಲಾ ಪತ್ರಗಳ ಪ್ರತಿಗಳನ್ನಿಟ್ಟು ಒಂದು ದೂರು ಕೊಟ್ಟೆ. ಆಗ ನನ್ನ ಹತ್ತಿರ ಅವರ ವಿಳಾಸ ಇರಲಿಲ್ಲ. ಅದಕ್ಕೇನು? "ಶ್ರೀ ಕೃಷ್ಣ ಪಾಲೆಮಾರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಮಂಗಳೂರು" ಎಂದು ವಿಳಾಸ ಬರೆದು ಅಂಚೆಗೆ ಹಾಕಿದೆ. ಕೆಲವೇ ದಿನಗಳಲ್ಲಿ ಅವರ ಕಡೆಯಿಂದ ಒಂದು ಪತ್ರ ಬಂತು. ಆಯುಕ್ತರಿಗೆ ಒಂದು ಪತ್ರ ಬರೆದು ಅದರ ಪ್ರತಿ ನನಗೆ ಕಳಿಸಿದ್ದರು.".... ಸದ್ರಿಯವರ ಮನವಿಯನ್ನು ಪರಿಶೀಲಿಸಿ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಲು ಕೋರಲಾಗಿದೆ". ಸಚಿವರ ಪತ್ರದ ತಾರೀಕು ೧೩-೦೩-೦೯. ಅಂದಾಜು ೨೫-೦೩-೦೯ರ ಹೊತ್ತಿಗೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರು ಒಂದು "ಹಿಂಬರಹ"ವನ್ನು ನನಗೆ ಕಳಿಸಿಕೊಟ್ಟರು. ಈ ಹಿಂಬರಹದ ತಾರೀಕು ೧೨-೦೩-೦೯. ಎಂದರೆ ಸಚಿವರು ಸೂಚನೆ ಕೊಡುವ ಒಂದು ದಿನದ ಮೊದಲೇ ಹಿಂಬರಹ ತಯಾರಾಗಿತ್ತು! ಕೆಳಗಡೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸಹಿಯ ಕೆಳಗೆ ಮಾತ್ರ ೨೩-೩-೦೯ ಎಂದಿತ್ತು! ಇರಲಿ ಬಿಡಿ. ಅಂತೂ ಉತ್ತರ ಬಂದಿತ್ತು.
ಅವರ ಹಿಂಬರಹದ ಈ ವಾಕ್ಯಗಳನ್ನು ನೋಡಿ: "......ಹಂಪನಕಟ್ಟದಿಂದ ಪ್ರಾರಂಭವಾಗಿ ನವಭಾರತ ವೃತ್ತದವರೆಗಿನ ಕೆ.ಎಸ್.ರಾವ್ ರಸ್ತೆಗಳಿಗೆ ೫೦೦ ಮೀ. ಉದ್ದಕ್ಕೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚತುಷ್ಪಥ ಕಾಂಕ್ರೀಟೀಕರಣ ರಸ್ತೆಯಾಗಿ ೧೪.೫೦ ಮೀ. ಅಗಲದಲ್ಲಿ ನಿರ್ಮಿಸಲಾಗಿದೆ.
ಆದರೆ ಈ ರಸ್ತೆಯ ಅಕ್ಕಪಕ್ಕದಲ್ಲಿ ವಾಣಿಜ್ಯಸಂಸ್ಥೆಗಳ ವ್ಯಾಪಾರೋದ್ಯಮ ಮಳಿಗೆಗಳು ರಸ್ತೆ ಉದ್ದಕ್ಕೆ ಇರುತ್ತವೆ. ಈಗ ಮಾಡಿರುವ ರಸ್ತೆಯ ಎರಡು ಬದಿಗಳಲ್ಲಿ ೧.೦೦ಮೀಟರ್ ಅಗಲದಲ್ಲಿ ಚರಂಡಿ ಸಮೇತ ಫುಟ್ ಪಾತ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ಸ್ಥಳಗಳಲ್ಲಿ ಜಾಗದ ಅಡಚಣೆ ಇದ್ದು ಅದನ್ನು ಸರಿಪಡಿಸಿ ..........ಕೈಗೊಳ್ಳಲಾಗುವುದು. ಅಂದಾಜುಪಟ್ಟಿಯು ಅನುಮೋದನೆಗೊಂಡ ನಂತರ ಹಾಗೂ ಸ್ಥಳದ ಆ ಭಾಗ ಇತ್ಯರ್ಥಗೊಂಡ ನಂತರ ಎರಡು ಬದಿ ಫುಟ್ ಪಾತ್ ನಿರ್ಮಿಸಿ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಪ್ರತ್ಯೇಕ ಪಥ ನಿರ್ಮಿಸಲಾಗುವುದೆಂದು ತಿಳಿಸಿದೆ"
ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ವಿಷಯಗಳಿವೆ. ಒಂದು, ರಸ್ತೆ ನಿರ್ಮಿಸುವಾಗ ಖಾಸಗಿಯವರ ಸಹಭಾಗಿತ್ವ ಇದೆ. ಎಂದರೆ ಅಷ್ಟರಮಟ್ಟಿಗೆ ಪಾಲಿಕೆಯ ಬಾಯಿ ಕಟ್ಟಿದೆ.
ಎರಡು, ರಸ್ತೆ ಸಂಪೂರ್ಣ ರಚನೆ ಆದಮೇಲೆ, ಚರಂಡಿ ಮತ್ತು ಫುಟ್ ಪಾತ್ ರಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ! ಇದು ಎಂಜಿನಿಯರ್ ಆದವರು ಮಾಡುವ ಕೆಲಸವೆ? ಯಾವುದೇ ರಸ್ತೆ ರಚನೆಯಾಗುವುದಿದ್ದರೆ, ಬದಿಯಲ್ಲಿ ಚರಂಡಿ, ಕಾಲುದಾರಿ ಇದನ್ನೆಲ್ಲ ಸೇರಿಸದೆ ಯಾರಾದರೂ ಪ್ಲಾನ್ ತಯಾರಿಸುತ್ತಾರೆಯೆ? ಹಾಗಾದರೆ, ಫುಟ್ ಪಾತ್ ಹೋಗಲಿ ಚರಂಡಿ ಇಲ್ಲದ ರಸ್ತೆ ಇವರು ಮಾಡಿದ್ದು ಹೇಗೆ? ಇದು ಖಾಸಗಿ ಸಹಭಾಗಿತ್ವದ ಫಲ ಇರಬಹುದೆ?
ಇದೆಲ್ಲ ನಡೆದು ಸ್ವಲ್ಪ ದಿನದ ನಂತರ ನಾನು ಆ ಕಡೆ ಹೋದಾಗ ಚರಂಡಿ ಮಾಡಲು ರಸ್ತೆ ಬದಿ ಅಗೆಯುತ್ತಿದ್ದುದನ್ನು ನೋಡಿದ್ದೆ. ಈಗ ಹೋಗದೆ ಸುಮಾರು ಸಮಯ ಆಯಿತು. ಫುಟ್ ಪಾತಿನ ಕಥೆ ಏನಾಗಿದೆ ಎಂದು ಗೊತ್ತಿಲ್ಲ. ಯಾರಾದರೂ ಆ ಕಡೆಯವರು ತಿಳಿಸಿದರೆ ಕೃತಜ್ಞ. ಒಂದು ವೇಳೆ ಫುಟ್ ಪಾತ್ ಆಗದಿದ್ದರೆ, ಮೇಲಿನ ಪತ್ರದ ಆಧಾರದಲ್ಲಿ ಅದಕ್ಕಾಗಿ ಪುನಃ ಪ್ರಯತ್ನಿಸುವುದು ಸಾಧ್ಯ. ಅಂಥ ಪ್ರಯತ್ನವನ್ನು ಯಾರು ಬೇಕಾದರೂ ಮಾಡಬಹುದು.
ಇಲ್ಲಿ ಒಂದು ಮಾತು ನಾನು ಸೇರಿಸಬೇಕು. ನಾನು ಯಾವ ರಾಜಕೀಯ ಪಕ್ಷದ ಕಾರ್ಯಕರ್ತನೂ ಅಲ್ಲ. ಶ್ರೀ ಕೃಷ್ಣ ಪಾಲೆಮಾರ್ ಅವರು ನನ್ನ ಪರಿಚಯದವರೂ ಅಲ್ಲ. (ಇನ್ನೂ ಒಂದು ಪ್ರಕರಣದಲ್ಲಿ ಅವರು ನನ್ನ ಪತ್ರಕ್ಕೆ ಸ್ಪಂದಿಸಿದ್ದಾರೆ). ಪ್ರಕರಣವನ್ನು ನಾನು ಯಾವ ಮಾಧ್ಯಮಕ್ಕೂ ಕೊಂಡುಹೋಗಲಿಲ್ಲ. ಜನ ಸೇರಿಸಿ ಚಳುವಳಿ ಮಾಡುವ ಮಾತಂತೂ ದೂರವೇ ಉಳಿಯಿತಷ್ಟೆ. ಅಂಚೆಗಾಗಿ ಸ್ವಲ್ಪ ಹಣ ಖರ್ಚಾಗಿದೆ ಅಷ್ಟೆ.
ನಮ್ಮ ದೇಶದಲ್ಲಿ ಪ್ರಜೆಗಳ ಅಭಿಪ್ರಾಯಕ್ಕೆ ಖಂಡಿತ ಬೆಲೆ ಇದೆ. ನಾವು ಸರಿಯಾದ ರೀತಿಯಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ಅಗತ್ಯ.

ಶುಕ್ರವಾರ, ಏಪ್ರಿಲ್ 9, 2010

ಅರಣ್ಯ ಇಲಾಖೆಯ ಉತ್ತರ ಬಂತು, ಆದರೆ......

ತಾ. ೧೬-೩-೧೦ರ ನನ್ನ ಪತ್ರಕ್ಕೆ ಮಂಗಳೂರು ಉ.ಅ.ಸಂ.ಯವರು ನನಗೆ ಉತ್ತರಿಸದಿದ್ದರೂ, ತಾ. ೨೦-೩-೧೦ರಂದೇ ಅದನ್ನು ಸುಬ್ರಹ್ಮಣ್ಯ ಉಪವಿಭಾಗದ ಸ.ಅ.ಸಂ.ಯವರಿಗೆ ಕಳಿಸಿಕೊಟ್ಟಿದ್ದಾರೆ. ಎಂದರೆ ನನ್ನ ಪತ್ರ ಅವರಿಗೆ ಮುಟ್ಟಿದ ಒಂದೆರಡು ದಿನಗಳಲ್ಲಿಯೇ ಅದರ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.
ನನ್ನ ನೆನಪೋಲೆ ಹೋದಮೇಲೆ ಅವರು ಸುಳ್ಯದ ಉ.ಸ.ಅ.ಸಂ.ಯವರಿಗೆ ಮತ್ತೊಂದು ಅರೆಸರಕಾರಿ ಪತ್ರ ಬರೆದು ನನಗೆ ಅದರ ಯಥಾಪ್ರತಿಯನ್ನು ಕಳಿಸಿಕೊಟ್ಟಿದ್ದಾರೆ. ಆ ಪತ್ರ ಹೀಗಿದೆ:
........."ಮೇಲಿನ ವಿಷಯಕ್ಕೆ ಸಂಬಂಧಿಸಿ ಉಲ್ಲೇಖ(೧)ರ ಈ ಕಾರ್ಯಾಲಯದ ಪತ್ರದ ಕಡೆಗೆ ನಿಮ್ಮ ಗಮನ ಸೆಳೆಯಲಾಗಿದೆ. ಸದ್ರಿ ಪತ್ರದಲ್ಲಿ ಉಲ್ಲೇಖ(೧)ರ ಅರ್ಜಿಯ ಕುರಿತು ಕೂಡಲೇ ತನಿಖೆ ನಡೆಸಿ ತನಿಖಾವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು.ಆದರೆ, ಸುಮಾರು ೧೫ ದಿನ ಕಳೆದರೂ, ನಿಮ್ಮಿಂದ ವರದಿ ಬಾರದೇ ಇರುವುದು ವಿಷಾದನೀಯ ಸಂಗತಿಯಾಗಿರುತ್ತದೆ. ಈ ಬಗ್ಗೆ ಅರ್ಜಿದಾರರು....ಉತ್ತರಕ್ಕೆ ಇನ್ನೂ ಹತ್ತು ದಿನ ಕಾಯಲು ಸಿದ್ಧನಿರುವುದಾಗಿ ತಿಳಿಸಿರುತ್ತಾರೆ.....ಪತ್ರದ ಕಡೆಗೆ ನಿಮ್ಮ ವೈಯಕ್ತಿಕ ಗಮನ ಹರಿಸಿ ತನಿಖಾವರದಿಯನ್ನು ಮರುಟಪ್ಪಾಲಿನಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಈ ಕುರಿತು ಇನ್ನು ಮುಂದೆ ಪತ್ರವ್ಯವಹಾರಕ್ಕೆ ಆಸ್ಪದ ಕೊಡಬಾರದಾಗಿ ತಿಳಿಸಲಾಗಿದೆ"
ಕ್ರಮದ ವಿಶ್ಲೇಷಣೆ:
ನನ್ನ ಪತ್ರವನ್ನು ಸುಬ್ರಹ್ಮಣ್ಯದ ಪ್ರಕರಣದ ಕುರಿತ ದೂರು ಎಂದು ಪರಿಗಣಿಸುವ ಮೂಲಕ ಮಂಗಳೂರಿನ ಉ.ಅ.ಸಂ.ಯವರು ಸಮಸ್ಯೆಯನ್ನು ತಮ್ಮ ಪಾಲಿಗೆ ಸುಲಭ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ವಿಶಿಷ್ಟವಾದ ರೀತಿಯಲ್ಲಿ ಹೊಣೆಯನ್ನು ಕೆಳ ಅಧಿಕಾರಿಗೆ ವರ್ಗಾಯಿಸಿದ್ದಾರೆ. ಆ ಅಧಿಕಾರಿಗಿಂತ ಕೆಳಗೆ ವಲಯ ಅರಣ್ಯಾಧಿಕಾರಿ ಮತ್ತು ವನಪಾಲಕರು ಇರುವುದರಿಂದ ಜವಾಬ್ದಾರಿ ಅವರಿಗೆ ವರ್ಗಾವಣೆಯಾದರೆ ಆಶ್ಚರ್ಯವಿಲ್ಲ!
ಇಷ್ಟು ನೇರವಾಗಿ, ಸ್ಪಷ್ಟವಾಗಿ ಬರೆದದ್ದು ಸಹ ಉ.ಅ.ಸಂ.ಯವರಿಗೆ ಅರ್ಥವಾಗಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಅನಿವಾರ್ಯವಾಗಿ ಇದನ್ನು ಪುನಃ ಸ್ಪಷ್ಟ ಪಡಿಸಿ ಅವರಿಗೆ ಹೀಗೆ ಪತ್ರ ಬರೆದಿದ್ದೇನೆ.
"..........ನಿಮ್ಮ ಪತ್ರದ ಯಥಾಪ್ರತಿಯನ್ನು ನನಗೆ ಕಳಿಸಿದ್ದೀರಿ. ಧನ್ಯವಾದಗಳು.
ನಿಮ್ಮ ಪತ್ರಕ್ಕೆ ಸಂಬಂಧಿಸಿ ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿ ಕೋರುತ್ತೇನೆ.
೧. ದಿ. ೧೮-೩-೨೦೧೦ರ ನನ್ನ ಪತ್ರದ ವಿಷಯ - ದ. ಕ. ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ - ಎಂಬುದಾಗಿತ್ತು. ಆದರೆ ನೀವು ಕೈಗೊಂಡ ಕ್ರಮ ಅದಕ್ಕೆ ಸಂಬಂಧಪಟ್ಟಿರುವುದಿಲ್ಲ.
೨. ಮರಗಳ ರಕ್ಷಣೆಯ ಕಾನೂನು ಉಲ್ಲಂಘನೆಯಾಗುತ್ತಿರುವುದಕ್ಕೆ ನಿದರ್ಶನವಾಗಿ ಮಾತ್ರ ನಾನು ಸುಬ್ರಹ್ಮಣ್ಯದ ಪ್ರಕರಣವನ್ನು ನಿಮ್ಮ ಗಮನಕ್ಕೆ ತಂದಿದ್ದೆ. ಮರಗಳು ಸಂಪೂರ್ಣ ನಾಶವಾದ ಮೇಲೆ ಅದರ ಬಗ್ಗೆ ತನಿಖೆ ಮಾಡುವುದು, ಕಾನೂನು ಕ್ರಮ ತೆಗೆದುಕೊಳ್ಳುವುದು ಇತ್ಯಾದಿಗಳಲ್ಲಿ ನನಗೆ ಆಸಕ್ತಿ ಇಲ್ಲ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದೂ, ಬಿಡುವುದೂ ಇಲಾಖೆಗೆ ಬಿಟ್ಟ ವಿಷಯ. ನನ್ನ ಆಸಕ್ತಿ ಇರುವುದು ಇನ್ನು ಮುಂದಾದರೂ, ಇರುವ ಮರಗಳನ್ನು ಉಳಿಸಿಕೊಳ್ಳುವ ಬಗ್ಗೆ ಮಾತ್ರ.
೩. ಸುಬ್ರಹ್ಮಣ್ಯದ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸುವುದು ನನ್ನ ಉದ್ದೇಶವಾಗಿದ್ದರೆ, ನಾನು ಅಲ್ಲಿನ ಸ.ಅ.ಸಂ.ಯವರಿಗೆ ಪತ್ರ ಬರೆಯುತ್ತಿದ್ದೆ. ಅವರು ಕ್ರಮ ಕೈಗೊಳ್ಳದಿದ್ದರೆ ಮಾತ್ರ ನಿಮಗೆ ದೂರು ಸಲ್ಲಿಸುತ್ತಿದ್ದೆ.
೪. ನೀವು ಜಿಲ್ಲಾಮಟ್ಟದ ಅಧಿಕಾರಿಯಾಗಿರುವುದರಿಂದ ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳುವಂತೆ ನನ್ನ ಪತ್ರದಲ್ಲಿ ನಿಮ್ಮನ್ನು ಕೋರಿದ್ದೆ.
೫. ಈ ನಿಟ್ಟಿನಲ್ಲಿ, ಮರಗಳ ಸಂರಕ್ಷಣೆಯ ಕಾನೂನು ಇದೆ ಎಂಬ ಅರಿವೇ ಇಲ್ಲದ ಹಾಗೆ, ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಗಳ ನಾಶವನ್ನು ತಡೆಗಟ್ಟಲು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕಾಗಿಯೂ, ಹಾಗೆ ತೆಗೆದುಕೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿಯೂ ಮತ್ತೊಮ್ಮೆ ನಿಮ್ಮನ್ನು ಕೋರುತ್ತೇನೆ."

ಶುಕ್ರವಾರ, ಏಪ್ರಿಲ್ 2, 2010

ತಾ. ೨-೪-೧೦
ಇವೊತ್ತಿನ ಉದಯವಾಣಿಯ ವಾರ್ತೆ:
ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಂಸ್ಕೃತಿ: ಸುಬ್ರಹ್ಮಣ್ಯ ಶ್ರೀ
ಪ್ರಕೃತಿಯಲ್ಲಿ ಭಗವಂತನ ಶಕ್ತಿ ಅಡಗಿದೆ. ಆದುದರಿಂದಾಗಿ ನಮ್ಮ ಹಿರಿಯರು ಪ್ರಕೃತಿಯನ್ನು ಆರಾಧನೆ ಮಾಡುವುದರೊಂದಿಗೆ ಪ್ರಕೃತಿಯ ಸೊಬಗಿನ ನಡುವೆ ಆರಾಧನಾಲಯಗಳನ್ನು ನಿರ್ಮಿಸಿದರು. ನಮ್ಮದು ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಂಸ್ಕೃತಿ ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. (ವಾರ್ತೆಯಲ್ಲಿ ಅವರ ಇನ್ನೂ ಕೆಲವು ಅಭಿಪ್ರಾಯಗಳಿವೆ)
ಇದೇ ವಾರ್ತೆ ಹೀಗೆ ಮುಂದುವರಿದಿದೆ:
.....ವಾಸ್ತು ತಜ್ಞ ಶ್ರೀಕೃಷ್ಣ ಮಹಾಲಿಂಗ ಪ್ರಸಾದ್ ಮುನಿಯಂಗಳ ಮಾತನಾಡಿ ನಮ್ಮ ಪ್ರದೇಶದಲ್ಲಿನ ಬಹುತೇಕ ಶ್ರದ್ಧಾಕೇಂದ್ರಗಳು ಅರಣ್ಯ ವ್ಯಾಪ್ತಿಯಲ್ಲಿರುವುದರಿಂದ ಜೀರ್ಣೋದ್ಧಾರದಂತಹ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗುತ್ತಿರುವುದು ಎಲ್ಲ ಕಡೆ ಕಂಡುಬರುತ್ತಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
*********
ನಾನು ಬರೆದ ಪತ್ರಕ್ಕೆ ಉತ್ತರಿಸಲು ದ.ಕ. ಜಿಲ್ಲಾ ಅರಣ್ಯಾಧಿಕಾರಿಯವರಿಗೆ ಇನ್ನೂ ಪುರುಸೊತ್ತು ಸಿಕ್ಕಿಲ್ಲ ಎಂಬುದು ವಿಷಾದದ ಸಂಗತಿ. ಮೊನ್ನೆ ಅಂದರೆ ೩೧-೩-೧೦ಕ್ಕೆ ಒಂದು ನೆನಪೋಲೆ ಅವರಿಗೆ ಬರೆದಿದ್ದೇನೆ.
*********
ಅನೇಕ ಸ್ನೇಹಿತರು ಬ್ಲಾಗನ್ನು ಓದಿರುವುದಾಗಿ ಹೇಳಿದ್ದಾರೆ. ಆದರೆ ಪ್ರತಿಕ್ರಿಯೆಗಳು ಇಲ್ಲವಾಗಿದೆ. ಅಶೋಕರ ಹತ್ತಿರ ಇದನ್ನು ಹೇಳಿದ್ದಕ್ಕೆ, "ಜನ ಜಡ. ಚುಚ್ತಾ ಇರಬೇಕು" ಎಂದರು. ಇದೊಂದು ಸಣ್ಣ ಮಟ್ಟದ ಚಳುವಳಿ: ಪ್ರಜಾಪ್ರಭುತ್ವದ ಅನುಸಂಧಾನದ ಒಂದು ಸಣ್ಣ ಪ್ರಯತ್ನ. ನೀವೂ ಇದರಲ್ಲಿ ಸೇರಿಕೊಳ್ಳಿ ಎಂದು ನಾನು ಬಾಯಿಬಿಟ್ಟು ಹೇಳುವುದು ಸಭ್ಯತೆಯಲ್ಲ. ಇದು ನಮ್ಮೆಲ್ಲರ ದೇಶ.
ನಾನು ಬರೆಯುತ್ತಿರುವುದು ಓದುಗರಿಗೆ ಮನರಂಜನೆ ನೀಡುವ ಉದ್ದೇಶದಿಂದ ಖಂಡಿತಾ ಅಲ್ಲ.
ಅಶೋಕವರ್ಧನರ ಪ್ರತಿಕ್ರಿಯೆ:
ಇಂದು ಆರಾಧನಾ ಸ್ಥಳಗಳ ವಿಪುಲತೆಯಲ್ಲಿ ಸ್ವಾಮಿಗಳು ಚರಿತ್ರೆಯನ್ನಷ್ಟೇ ಹೇಳಬಲ್ಲರು. ವರ್ತಮಾನದಲ್ಲಿ ಅದನ್ನು ರೂಢಿಸುವ ಧೈರ್ಯವಿದ್ದಿದ್ದರೆ, ತಳ ಇಲ್ಲದ ಮಾನದಲ್ಲಿ (ಸೇರಿನಲ್ಲಿ) ಭವಿಷ್ಯವನ್ನು ಅಳೆಯುವ ಶಾಸ್ತ್ರಕ್ಕೆ ಸುಮಾರು ಆರು ಎಕ್ರೆ ವ್ಯಾಪ್ತಿಯ ಪ್ರಾಕೃತಿಕ ಹಾನಿಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ.
ನನ್ನ ತಿಳುವಳಿಕೆಯಂತೆ ಇಂದು ಆರಾಧನೀಯವಾಗಿರುವ ‘ವಾಸ್ತು’ ಸಂದ ಕಾಲದ ವಿಜ್ಞಾನ, ಸಿವಿಲ್ ಇಂಜಿನಿಯರಿಂಗ್. ಆದರೆ ನಾಗರಿಕತೆಯ ಬೆಳೆವಣಿಗೆಯಲ್ಲಿ ನಮ್ಮ ಪ್ರಾಕೃತಿಕ ತಿಳುವಳಿಕೆಗಳು ಮತ್ತದಕ್ಕೆ ಸಂವಾದಿಯಾಗಿ ಉತ್ಪನ್ನಗಳು ಸಾಕಷ್ಟು ಮುಂದುವರಿದ ಕಾಲದಲ್ಲಿ ವಾಸ್ತುತಜ್ಞರ ಅನುಸರಣೆ ಗಡಿರಕ್ಷಣೆಗೆ ಬಿಲ್ಲು ಭಾಲೆಗಳನ್ನು ಹಿಡಿದು ಹೊರಟಷ್ಟೇ ಅದ್ಭುತ!