ಕಳೆದ ವರ್ಷ ಪ್ರೇಮಕ್ಕ ಮಂಗಳೂರಿನಿಂದ ನಮ್ಮಲ್ಲಿಗೆ ಬಂದಾಗ ಇವಳ ಹತ್ತಿರ "ರಾತ್ರೆ ಬೆಳ್ಗಾತ ಹೊತ್ತಿಗೆ ಗುಡ್ಡೆನೇ ಇಲ್ಲ ಮಾಡಿಬಿಡ್ತ್ರ್ಯ. ಬೆಳ್ಗಾತ ಕಂಡ್ರೆ ಜಾಗೆದು ಗುರ್ತೇ ಸಿಕ್ತಿಲ್ಲೆ, ಹಂಗಾಗಿರ್ತ್" ಅಂದಿದ್ದರು. ಜೆಸಿಬಿಗೆ ಗುಡ್ಡ, ಕಣಿವೆಗಳನ್ನು ಕಂಡರಾಗುವುದಿಲ್ಲ. ಸಾವಿರಾರು ಜೆಸಿಬಿಗಳು ದಕ್ಷಿಣ ಕನ್ನಡವನ್ನು ಬಯಲು ಸೀಮೆ ಮಾಡಲು ಹಗಲೂ ರಾತ್ರಿ ಶ್ರಮಿಸುತ್ತಿವೆ. ಗುಡ್ಡೆ ತಟ್ಟು ಮಾಡುವುದು ಸೈಟು ಮಾಡಿ ಮಾರುವುದು, ಸೈಟು ಕೊಂಡವರು ನೀರಿಗೆಂದು ಬೋರು ಹಾಕುವುದು.
ದಕ್ಷಿಣ ಕನ್ನಡದ ಜೀವ ಇರುವುದೇ ಇಲ್ಲಿನ ಗುಡ್ಡಬೆಟ್ಟಗಳಲ್ಲಿ, ಸುಂದರವಾದ ಕಣಿವೆಗಳಲ್ಲಿ, ಇದನ್ನು ಯಾವ ವಿವೇಚನೆಯೂ ಇಲ್ಲದೆ ತಟ್ಟು ಮಾಡುತ್ತಾ ಹೋಗುತ್ತಿದ್ದೇವೆ ನಾವು.
ನಮ್ಮ ಬಿ.ಸಿ.ರೋಡಿನ ಸುತ್ತಮುತ್ತ ಗುಡ್ಡ ಬೆಟ್ಟಗಳು ಧಾರಾಳ. ನಮ್ಮ ಮನೆಯ ಹಿಂದೆಯೇ ಇರುವ ಬೆದ್ರಗುಡ್ಡೆ ನಮ್ಮಿಬ್ಬರ ಸಂಜೆ ತಿರುಗಾಟದ ಅತ್ಯಂತ ನೆಚ್ಚಿನ ಸ್ಥಳ. ಕೇಪಳ ಮಾತ್ರ ಅಲ್ಲ, ನೇರಳೆ, ಕಾಡುಮಾವು, ಅಬ್ಬಳಕ, ಜೀರ್ಕ ಹೀಗೆ ಹಲವು ಹಣ್ಣುಗಳು. ಉಪ್ಪಿನ ಕಾಯಿಗೆ ಕರಂಡೆ. ಅರಮಾರಲು. ಕೊಡಿಕಟ್ಟಕ್ಕೆ ಇಪ್ಪತ್ತೆಂಟು ಬಗೆಯ ಚಿಗುರು. ಯಾವುದೂ ಬೇಡವೆಂದರೆ ಉಸಿರಾಡಲು ವಾಸನೆ ಗೀಸನೆ ಇಲ್ಲದ ಧಾರಾಳ ಶುದ್ಧ ಗಾಳಿ. ಈಗ ನಾಲ್ಕೈದು ವರ್ಷದ ಹಿಂದಿನವರೆಗೂ ಗುಡ್ಡೆಯ ಕೆಳಭಾಗದಲ್ಲಿ ಅದರ ಪಕ್ಕದಲ್ಲೇ ಒಂದು ಕಾಲುದಾರಿ ಇತ್ತು. ಈಗೀಗ ಅದರ ಗುರುತು ಮಸಕಾಗುತ್ತಿದೆ. ಜನ ಕಾಲ್ನಡಿಗೆಯಲ್ಲಿ ಓಡಾಡುವುದು ಕಡಿಮೆಯಾಗುತ್ತಿದೆ. ನನಗೆ ಇನ್ನೂ ಆಶ್ಚರ್ಯವೆಂದರೆ ಮಳೆಗಾಲ ಕಳೆದಾಗ ಈ ಗುಡ್ಡೆಯಲ್ಲಿ ಧಾರಾಳವಾಗಿ ಬೆಳೆದು ನಿಲ್ಲುವ ಹಸಿರು ಹುಲ್ಲು. ಡಿಸೆಂಬರ್ ಜನವರಿ ಹೊತ್ತಿಗೆ ಒಣಗಿ ನಿಂತ ಈ ಹುಲ್ಲಿಗೆ ಬೆಂಕಿ ಹೊತ್ತಿ ಉರಿಯುತ್ತದೆ. ಯಾರು ಯಾಕೆ ಕೊಡುತ್ತಾರೋ?
ನನ್ನ ಮೂಲ ಊರು ಕೊಪ್ಪವೂ ಗುಡ್ಡ ಬೆಟ್ಟಗಳ ಊರೇ. ಆದರೆ ಅಲ್ಲಿನ ಗುಡ್ಡಗಳಲ್ಲಿ ಮೊಣಕಾಲೆತ್ತರಕ್ಕೆ ಹಸಿ ಹುಲ್ಲು ಬೆಳೆಯುವುದಿಲ್ಲ. ನೆಲದಿಂದ ಹುಲ್ಲು ತಲೆ ಎತ್ತಲು ಪುರುಸೊತ್ತಿಲ್ಲ, ಯಾವುದೋ ದನವೋ ಎಮ್ಮೆಯೋ ಬಂದು ಅದನ್ನು ಮೆಂದಾಯಿತು. ಈಗ ದನಗಳನ್ನು ಗುಡ್ಡೆಗೆ ಎಬ್ಬುವ ಪದ್ಧತಿಯೂ ಕಡಿಮೆಯಾಗುತ್ತಿದೆ. ಏನಿದ್ದರೂ ಮನೆಯಲ್ಲಿ ಕಟ್ಟಿ, ಹಿಂಡಿ ಗಿಂಡಿ ಹಾಕಿ ಸಾಕುವುದು. ಅವುಗಳ ಸೆಗಣಿಗೆ ಹೇಲಿನ ವಾಸನೆ.
ಬೆದ್ರಗುಡ್ಡೆಯ ನವಿಲುಗಳ ಸಂಗೀತ ದಿನನಿತ್ಯ ನಮ್ಮ ಮನೆಗೆ ಕೇಳುತ್ತದೆ. ತಿರುಗಾಡಲು ಸಂಜೆ ಹೋದರೆ ನವಿಲುಗಳು ನೋಡಲು ಸಿಗುತ್ತವೆ. ಒಂದಿಷ್ಟು ಗರಿ ಆರಿಸಿ ತಂದು ಮನೆಯಲ್ಲೂ ಇಟ್ಟುಕೊಂಡಿದ್ದೆವು. ಬೆಳಗ್ಗೆ ನಮ್ಮ ಮನೆಯ ಸ್ಲಾಬಿನ ಮೇಲೆ ಹೋಗಿ ನಿಂತು ದುರ್ಬೀನಿನಲ್ಲಿ ನೋಡಿದರೆ ಗುಡ್ಡದ ಚಿಕ್ಕ ಒಂದು ಮರದಲ್ಲಿ ಒಂದು ನವಿಲು ಊದ್ದಕ್ಕೆ ಗರಿ ಇಳಿಬಿಟ್ಟುಕೊಂಡು ಕೂತಿರುವುದು ಚಿತ್ರ ಬರೆದಂತೆ ಕಾಣುತ್ತಿತ್ತು. ಅದು ಆ ನವಿಲಿನ ಮೆಚ್ಚಿನ ಜಾಗ ಇರಬೇಕು. ನನಗೆ ನಿತ್ಯವೂ ಅದನ್ನು ನೋಡುವುದೇ ಒಂದು ಕೆಲಸವಾಗಿತ್ತು. ಮೊನ್ನೆ ಮೊನ್ನೆ ಹೋದಾಗ ಕಾಡುಕೋಳಿಯೊಂದು ತನ್ನ ಎರಡು ಮರಿಗಳೊಂದಿಗೆ ಮೇಯುತ್ತಿದ್ದುದನ್ನು ಕಂಡೆ. ಕಳೆದ ವರ್ಷ ಪೊದೆಯಿಂದ ಒಂದು ಮೊಲ ಓಡಿದ್ದನ್ನು ನೋಡಿದ ನೆನಪಿದೆ.
ಇನ್ನೂ ಒಂದು ಆಶ್ಚರ್ಯವೆಂದರೆ ಇಷ್ಟು ಚೆಂದದ ಈ ಗುಡ್ಡೆ ಊರಿಗೆ ಇಷ್ಟು ಹತ್ತಿರವೇ ಇದ್ದರೂ ಅಲ್ಲಿಗೆ ತಿರುಗಾಡಲು ಬರುವವರು ಯಾರೂ ಇಲ್ಲ. ಗುಡ್ಡದ ಬೆನ್ನು ಮಲಗಿದ ಬಸವನ ಬೆನ್ನಿನಂತಿದೆ. ಅದರ ಬಾಲದ ಬದಿಯ ತುದಿಯಲ್ಲಿ ಬಂಡೆಗಳಿವೆ. ಆ ಬಂಡೆಯ ಮೇಲೆ ಆದಿತ್ಯವಾರದಂದು ಯಾರಾದರೂ ಹುಡುಗರು ಬಂದು ಕೂರುವುದಿದೆ. ಅವರು ಬಾಟ್ಲಿ ತಂದು ಅಲ್ಲಿ ಕೂರುವುದು ಎಂದು ಇವಳಿಗೆ ಅನುಮಾನ. ಅಲ್ಲಿಂದ ಮುಂದೆ ಅಡ್ಡ ಸಿಗುವ ಒಂದು ಮಣ್ಣಿನ ರಸ್ತೆ ದಾಟಿ ಸ್ವಲ್ಪ ಮುಂದೆ ಹೋದರೆ ಸಣ್ಣ ಸಣ್ಣ ಮರಗಳ ಒಂದು ಗಂಧರ್ವವನವೇ ಇದೆ. ಈ ಸ್ಥಳ ಲಕ್ಷ್ಮೀನಾರಾಯಣ ಆಳ್ವರಿಗೆ ಸೇರಿದ್ದಂತೆ. ಅದಂತೂ ನನ್ನ ಪಾಲಿಗೆ ಯಾವ ಲಾಲ್ ಬಾಗಿಗೂ ಕಡಿಮೆಯಲ್ಲ.
ಈ ಸ್ಥಳದ ಸಮೀಪ ಎರಡು ವರ್ಷದಿಂದ ಕಪ್ಪುಕಲ್ಲು ತೆಗೆಯುತ್ತಿದ್ದಾರೆ. ಯಾರೋ ಹೇಳಿದರು ಹತ್ತು ವರ್ಷಕ್ಕೆ ಗುತ್ತಿಗೆ ಆಗಿದೆ ಅಂತ......
.
ಕಳೆದ ವರ್ಷ ನಮ್ಮ ಈ ಬೆದ್ರಗುಡ್ಡೆಯಲ್ಲಿ ಎ ಎಂ ಆರ್ ಕಂಪೆನಿ ಟವರ್ ಗಳನ್ನು ನಿರ್ಮಿಸಿ ಪವರ್ ಲೈನ್ ಎಳೆದಿದೆ. ಅಡ್ಡ ಬಂದ ಮರಗಳು ನೆಲಕ್ಕುರುಳಿವೆ. ಈಗ ನಮ್ಮ ಮನೆಯ ಸ್ಲಾಬಿನ ಮೇಲೆ ನಿಂತರೆ ಗುಡ್ಡಕ್ಕಿಂತ ಪ್ರಮುಖವಾಗಿ ಎರಡು ಟವರ್ ಗಳೇ ಕಾಣುತ್ತವೆ. ಅಥವಾ ನೋಡುವ ನನ್ನ ದೃಷ್ಟಿಯಲ್ಲೇ ಏನಾದರೂ ಐಬು ಇದೆಯೋ?.
ಬೆದ್ರಗುಡ್ಡೆಯಲ್ಲೂ ಕಪ್ಪು ಕಲ್ಲು ಇದೆ. ಇಡೀ ಗುಡ್ಡ ಖಾಸಗಿ ಒಡೆತನದ್ದು. ಊರಿಗೆ ಹತ್ತಿರದಲ್ಲಿದೆ. ಜೆಸಿಬಿಗಳು ಅಲ್ಲೇ ಸುತ್ತ ಓಡಾಡುತ್ತಿವೆ..ವಾಹನಗಳು ಓಡಾಡುವ ಪೊಳಲಿ ರಸ್ತೆಯ ಬದಿಯಲ್ಲಿ ಜೆಸಿಬಿ ಬೋಣಿ ಮಾಡಿಯಾಗಿದೆ....
ಕೋಟಿ ಕೋಟಿ ವರ್ಷಗಳಿಂದ ಇಲ್ಲಿ ನಿಂತಿರಬಹುದಾದ ಈ ಗುಡ್ಡದ ಆಯಸ್ಸು ಇನ್ನೆಷ್ಟು ತಿಂಗಳು ಅಥವಾ ಇನ್ನೆಷ್ಟು ವರ್ಷ?
*******
ಅಯ್ಯೋ ದೇವರೆ, ನಾನು ಹೇಳಲು ಹೊರಟ ವಿಷಯವೇ ಒಂದು, ಹೇಳಿದ್ದೇ ಒಂದು ಆಗಿಹೋಯಿತು. ಜೆಸಿಬಿಯ ಈ ರಾಪಾಟಿಕೆಯನ್ನು ಬಹಳ ದಿನದಿಂದಲೂ ವಿಷಾದದಿಂದ ನೋಡುತ್ತಲೇ ಇದ್ದೇನೆ. ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯೇ ಇಲ್ಲವೋ ಎಂಬ ರೀತಿಯಲ್ಲಿ ಜೆಸಿಬಿಯಿಂದ ಗುದ್ದಿಸಿ ಮರಗಳನ್ನು ಉರುಳಿಸುವುದು; ಹಾಗೆ ಬಿದ್ದ ಮರಗಳನ್ನು ಎಷ್ಟು ದಿನ ಬೇಕಾದರೂ ಯಾರ ಹೆದರಿಕೆಯೂ ಇಲ್ಲದೆ ಅಲ್ಲಿಯೇ ಬಿಟ್ಟುಬಿಡುವುದು ಕಂಡು ನನಗೆ ಭಾರೀ ಆಶ್ಚರ್ಯ. ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನೊಬ್ಬರು ಆತ್ಮೀಯರನ್ನು ವಿಚಾರಿಸಿದರೆ "ಕರ್ನಾಟಕದಲ್ಲಿ ಒಂದೇ ಒಂದು ಮರವನ್ನೂ ಕಡಿಯುವಂತಿಲ್ಲ. ಕಾನೂನು ತುಂಬಾ ಬಿಗಿಯಾಗಿದೆ" ಎನ್ನುತ್ತಾರೆ. ಇಲ್ಲಿ ನೋಡಿದರೆ ಪ್ರತಿನಿತ್ಯವೂ ಜೆಸಿಬಿ ಮರಗಳನ್ನು ಯಾವ ಎಗ್ಗೂ ಇಲ್ಲದೆ ದೂಡಿ ಬೀಳಿಸಿ ಮುಂದುವರಿಯುತ್ತಿದೆ! (ಕಳಲೆ (ಕಣಿಲೆ)ಯ ವಿಷಯವೂ ಹೀಗೆಯೇ. ನನಗೆ ತಿಳಿದ ಮಟ್ಟಿಗೆ ಕಳಲೆ/ಬಿದಿರು ಕಡಿಯುವುದು ದೊಡ್ಡ ಅಪರಾಧ. ಬಿದಿರು ಕಡಿದರೆಂಬ ಕಾರಣಕ್ಕೆ ಜೈಲಿಗೆ ಹೋದವರನ್ನೂ ನಾನು ಕಂಡಿದ್ದೇನೆ. ಆದರೆ ನಮ್ಮ ಬಿ.ಸಿ.ರೋಡಿನಲ್ಲಿ ನೋಡಿದರೆ ಜೂನ್ ಜುಲೈ ತಿಂಗಳುಗಳಲ್ಲಿ ಕಳಲೆಯನ್ನು ಹಾಡು ಹಗಲೇ ಅಂಗಡಿಗಳಲ್ಲಿ ಮಾರುತ್ತಿರುತ್ತಾರೆ!) ಬಹುಶಃ ಹೀಗಿರಬೇಕು: ಕಾನೂನು ಮರಗಳನ್ನು "ಕಡಿಯುವುದನ್ನು" ನಿಷೇಧಿಸುತ್ತದೆ ಆದರೆ ಜೆಸಿಬಿ ಮರಗಳನ್ನು ಬುಡ ಸಮೇತ ಉರುಳಿಸುವುದು ತಾನೆ, ಹಾಗಾಗಿ ಕಾನೂನು ಅದಕ್ಕೆ ಅನ್ವಯವಾಗುವುದಿಲ್ಲ.
ನನ್ನ ಮಿತಿಯಲ್ಲೇ ಆದರೂ, ಏನು ಮದ್ದು ಮಾಡುವುದು ಇದಕ್ಕೆ? ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಸಾಮಾನ್ಯವಾಗಿ ಹೀಗೆ ಗುಡ್ಡ ಮಟ್ಟ ಮಾಡಿಸುವವರು ಖಾಸಗಿಯವರು. ಅಲ್ಲಿ ಮಧ್ಯೆ ಮೂಗು ತೂರಿಸುವಂತಿಲ್ಲ. ಯಾಕೆಂದರೆ ಇವರ ಪೈಕಿ ಒಬ್ಬ ನನ್ನ ಅಜ್ಜ, ಮತ್ತೊಬ್ಬ ವಿದ್ಯಾಗುರು, ಇನ್ನೊಬ್ಬ ಸೋದರಮಾವ, ಮತ್ತೊಬ್ಬ ಭಾವ. ನನ್ನ ಉದ್ದೇಶ ಎಷ್ಟೇ ಉದಾತ್ತವಾದರೂ, ಹೋರಾಟಕ್ಕಿಳಿಯುವುದು ವ್ಯಾವಹಾರಿಕ ಅಲ್ಲ.
ಓ ಮೊನ್ನೆಯೊಂದು ದಿನ ನೋಡುತ್ತೇನೆ, ಉದಯವಾಣಿಯ ಪುರವಣಿಯೊಂದರಲ್ಲಿ ಸುಬ್ರಮಣ್ಯದಲ್ಲಿ ಜ್ಯೋತಿಷ ಸಮ್ಮೇಳನ ನಡೆಯಲಿದೆಯೆಂದೂ ಅದಕ್ಕಾಗಿ ಆರು ಎಕ್ರೆ ವಿಸ್ತಾರದ ಗುಡ್ಡೆಯನ್ನು ಸಪಾಟು ಮಾಡುವ ಕೆಲಸವನ್ನು ಅದೆಷ್ಟೋ ಸಂಖ್ಯೆಯ ಜೆಸಿಬಿಗಳು ಹಗಲಿರುಳೂ ಮಾಡುತ್ತಿವೆಯೆಂದೂ ವರದಿಯಾಗಿತ್ತು. ಈ ವರದಿಯ ಜೊತೆಗೆ ಜೆಸಿಬಿಯೊಂದು ತನ್ನ ಸೊಂಡಿಲಿನಿಂದ ಮರಗಳನ್ನು ದೂಡಿ ನೆಲಕ್ಕುರುಳಿಸುತ್ತಿರುವ ಫೋಟೋ ಮತ್ತು ಇತರ ಫೋಟೋಗಳೂ ಇದ್ದವು.
ಕೂಡಲೇ ಸುಬ್ರಮಣ್ಯದ ಅರಣ್ಯ ವಲಯಾಧಿಕಾರಿಗಳಿಗೆ -ಮಾಹಿತಿ ಹಕ್ಕಿನ ಆಡಿಯಲ್ಲಿ- ಪತ್ರಿಕೆಯಲ್ಲಿ ಪ್ರಕಟವಾದ ಫೋಟೋಗಳ ಜೆರಾಕ್ಸ್ ಪ್ರತಿಗಳನ್ನೂ ಇಟ್ಟು, "ದೊಡ್ಡ ಸಂಖ್ಯೆಯಲ್ಲಿ ಮರಗಳು ನಾಶವಾದಂತೆ ಕಾಣುತ್ತಿದೆ. ಈ ಬಗ್ಗೆ ನೀವು ಅನುಮತಿ ಕೊಟ್ಟಿದ್ದೀರಾ, ಕೊಟ್ಟಿದ್ದರೆ ಅದರ ಒಂದು ಪ್ರತಿಯನ್ನು ಕಳಿಸಿಕೊಡಿ" ಎಂದು ಬರೆದೆ. ಅಧಿಕಾರಿ ಕೂಡಲೇ, ನಾನು ಕಳಿಸಿದ್ದ ಪೋಸ್ಟಲ್ ಆರ್ಡರನ್ನು ಹಿಂದೆ ಕಳಿಸಿ, ಉತ್ತರಿಸಿದರು: "ನೀವು ಈ ಮಾಹಿತಿಯನ್ನು ಸುಳ್ಯದಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು". ನಾನು ಮರು ಟಪಾಲು ಪುನಃ ನೋಂದಾಯಿತ ಅಂಚೆಯಲ್ಲಿಯೇ ಕಳಿಸಿ ಕಾನೂನು ಏನಿದೆಯೆಂದು ತಿಳಿಸಿದೆ. ಆ ಅಧಿಕಾರಿ ನೊಂದಾಯಿತ ಅಂಚೆಯಲ್ಲಿ ನಾನು ಕಳಿಸಿದ ಪತ್ರವನ್ನು ಸ್ವೀಕರಿಸಿದೆ ತಿರಸ್ಕರಿಸಿಬಿಟ್ಟರು!
ನಾನು ಕೂಡಲೇ ಎಲ್ಲಾ ದಾಖಲೆಗಳನ್ನೂ ಇಟ್ಟು, ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಈ ದೂರಿನಲ್ಲಿ, ನನಗೆ ಖರ್ಚಾಗಿರುವ ಹಣವನ್ನು ಸದ್ರಿ ಅಧಿಕಾರಿಯಿಂದ ಕೊಡಿಸಿಕೊಡಬೇಕೆಂದು ಮನವಿ ಮಾಡಿದ್ದೇನೆ. ಜೊತೆಗೆ ಕಾನೂನನ್ನು ಕಲಿಸಿಕೊಟ್ಟಿರುವುದಕ್ಕಾಗಿ ನನಗೆ ಸೂಕ್ತ ಶುಲ್ಕವನ್ನೂ ಈ ಅಧಿಕಾರಿಯಿಂದ ಕೊಡಿಸಬೇಕೆಂದು ಕೇಳಿಕೊಂಡಿದ್ದೇನೆ. ನೋಡೋಣ ಪ್ರಕರಣ ಏನಾಗುತ್ತದೆ ಎಂದು.
ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಿದ ನನ್ನ ಅಹವಾಲು ಮತ್ತು ದಾಖಲೆಗಳ ಯಥಾಪ್ರತಿಗಳನ್ನು ಸುಬ್ರಮಣ್ಯದ ವಲಯ ಅರಣ್ಯಾಧಿಕಾರಿಗೆ ಸಾಮಾನ್ಯ ಅಂಚೆಯಲ್ಲಿ ಕಳಿಸಿಕೊಟ್ಟಿದ್ದೆ. ಕೂಡಲೇ ಪ್ರತಿಕ್ರಿಯೆ ಬಂದಿದೆ: ಮಾಹಿತಿ ಕೇಳಿ ನಾನು ಸಲ್ಲಿಸಿದ ಅರ್ಜಿಯನ್ನು ಅವರೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಕಳಿಸಿಕೊಟ್ಟಿದ್ದಾರಂತೆ. ಪೋಸ್ಟಲ್ ಆರ್ಡರ್ ಗೆ ಏನು ವ್ಯವಸ್ಥೆ ಮಾಡಿದರೋ ತಿಳಿಯಲಿಲ್ಲ.
ಅರಣ್ಯ ಇಲಾಖೆ ಮರಗಳನ್ನು ಉರುಳಿಸಲು ಅನುಮತಿ ಕೊಟ್ಟಿದೆಯೆ ಎಂಬುದು ಈ ಪ್ರಕರಣದ ಜೀವಾಳವಷ್ಟೆ. ಹಾಗಾಗಿ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮಾಹಿತಿ ಹಕ್ಕಿನಡಿಯಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದೇನೆ. ಪತ್ರ ಅವರಿಗೆ ಮುಟ್ಟಿದೆ. ಉತ್ತರ ಬಂದ ಕೂಡಲೇ ತಿಳಿಸುತ್ತೇನೆ.
ಅಶೋಕವರ್ಧನರ ಪ್ರತಿಕ್ರಿಯೆ:
ನಿಮ್ಮ ಹಿತ್ತಿಲ ಮದ್ದನ್ನು ಮುದ್ದಾಗಿ ತೋರುತ್ತಾ ಸುಬ್ರಹ್ಮಣ್ಯದಲ್ಲಿ ಜೋಯಿಸರುಗಳು ಪರಿಸರ ಭವಿಷ್ಯವನ್ನು ಹಾಳುಗೆಡಹುವ ಸಮಸ್ಯೆಯ ಸುಳಿಯೊಳಗೆ ಓದುಗರನ್ನು ಅನೌಪಚಾರಿಕವಾಗಿಯೇ ಆದರೆ ಖಚಿತವಾಗಿ ಸಿಕ್ಕಿಸಿದ್ದೀರಿ. ರಾಕ್ಷಸ ಸಾಮರ್ಥ್ಯಕ್ಕೂ ರಕ್ಕಸ ಕ್ರಿಯೆಗೂ ಮಧ್ಯೆ ಕಳೆದುಹೋದ ವಿವೇಚನೆಯನ್ನು ಭೂತಗನ್ನಡಿ ಇಟ್ಟು ತೋರಿದ್ದೀರಿ. ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯದ ಅನಾಮಧೇಯ ದೂರವಾಣಿ ಕರೆಯೊಂದು ಇದೇ ಸಮಸ್ಯೆಯ ಕುರಿತು ನನ್ನಲ್ಲಿನ ಪರಿಸರ ಪ್ರೇಮಿಯನ್ನು ಕ್ರಿಯಾಶೀಲವಾಗಿಸಲು ಪ್ರಯತ್ನಿಸಿತ್ತು. ನನಗಾ ಸ್ಥಳೀಯ ಬೇಜವಾಬ್ದಾರೀ ಶ್ರೀಸಾಮಾನ್ಯನ ಮಟ್ಟದಲ್ಲಿ ನಿಂತದ್ದಕ್ಕೆ ಅಸಮಾಧಾನವಿತ್ತು, ಊರಿನೆಲ್ಲಾ ದುಃಖಕ್ಕೆ ಪರಿಹಾರ ಹುಡುಕುವ ತಾಕತ್ತಿನವ ನಾನಲ್ಲ ಎನ್ನುವ ಬಗ್ಗೆ ಅರಿವೂ ಬೇಸರವೂ ಇತ್ತು. ನಿಮ್ಮ ಬರಹಕ್ಕೆ ಭೇಷ್, ಭಲೇ ಎನ್ನುವುದರೊಡನೆ ನಿಮ್ಮ ಕ್ರಿಯೆಯ ಭವಿಷ್ಯವೇನು ಎಂಬ ಕುತೂಹಲದಲ್ಲಿರುತ್ತೇನೆ.ಅಶೋಕವರ್ಧನ