ಶನಿವಾರ, ಮೇ 21, 2011

3 ಕೋಟಿ ರೂ. ಖರ್ಚಿನಲ್ಲಿ ಸರಕಾರದ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ

ಒಂದೆರಡು ತಿಂಗಳ ಹಿಂದೆ ಉದಯವಾಣಿ ಓದುತ್ತಿದ್ದಾಗ ಕೊನೆಯ ಪುಟದಲ್ಲಿ ಅರ್ಧ ಪುಟದ ಒಂದು ದೊಡ್ಡ ಜಾಹೀರಾತು ನೋಡಿದೆ. ಅದು ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ "ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ" ಎಂಬ ಸರಕಾರಿ ಸಂಸ್ಥೆಯ ಉದ್ಘಾಟನೆಯ ಆಮಂತ್ರಣ. ಈ ಕೇಂದ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ ಸೇರಿದ್ದು.
ಬೆಂಗಳೂರಿನಲ್ಲಿ ಆಗಾಗ ಮಳೆ ಬಂದು ರಸ್ತೆಗಳಲ್ಲಿ ನೀರು ತುಂಬಿ ಜನರೂ, ವಾಹನಗಳೂ, ಪರದಾಡುವುದನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ಆಕಾಶದಿಂದ ಬೀಳುವ ಈ ಮಳೆನೀರನ್ನು ಉಪಯೋಗಿಸಿಕೊಳ್ಳಲಾರದ ನಮ್ಮ ದಡ್ಡತನಕ್ಕಾಗಿ ನಾನು ಮರುಗಿದ್ದೇನೆ. ಹಾಗಾಗಿ ಈ ಕೇಂದ್ರದ ಬಗ್ಗೆ ನನಗೆ ಕುತೂಹಲ ಬಂತು. ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಿದೆ. ನಾನು ಕೇಳಿದ ಮಾಹಿತಿಗಳೂ, ಅದಕ್ಕೆ ಬಂದ ಉತ್ತರವೂ ಹೀಗಿದೆ:

೧. ಈ ಕೇಂದ್ರ ಹಾಕಿಕೊಂಡಿರುವ ಕಾರ್ಯ ಯೋಜನೆಗಳೇನು?

ನಾಗರೀಕರಲ್ಲಿ ಮಳೆನೀರು ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣ ಬಗ್ಗೆ ಜಾಗೃತಿ ನೀಡುವುದು, ಮಳೆ ನೀರು ಕೊಯ್ಲು ಮಾದರಿಗಳನ್ನು ನಾಗರಿಕರ ವೀಕ್ಷಣೆಗೆ ನಿರ್ಮಿಸಲಾಗಿದೆ. ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾಹಿತಿ ಒದಗಿಸುವುದು.

೨. ಕೇಂದ್ರವು ಪ್ರತಿತಿಂಗಳು ತನ್ನ ಕಾರ್ಯವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುತ್ತದೆಯೇ?
ಮೇಲಧಿಕಾರಿಗಳಿಗೆ ಸಲ್ಲಿಸುತ್ತಿದೆ

೩. ಈ ಕೇಂದ್ರದ ಒಟ್ಟು ಸಿಬ್ಬಂದಿಗಳ ಸಂಖ್ಯೆ, ಅವರ ಹುದ್ದೆ ಮತ್ತು ವೇತನದ ವಿವರ

ಒಬ್ಬ ಕಿರಿಯ ಅಭಿಯಂತರರನ್ನು ನಿಯೋಜಿಸಲಾಗಿದೆ. ರೂ. ೧೧,೦೦೦/- ಮತ್ತು ಇತರೆ ಭತ್ಯೆಗಳು

೪.ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚು

ಸುಮಾರು 3 ಕೋಟಿ ರೂಪಾಯಿಗಳು

೫. ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚನ್ನು ಯಾವ ನಿಧಿಯಿಂದ ಭರಿಸಲಾಗಿದೆ?
ಮಂಡಳಿಯ ನಿಧಿಯಿಂದ ಭರಿಸಲಾಗಿದೆ.

ಈ ಸಂಸ್ಥೆಯ ಬಗ್ಗೆ ಈಗ ನಾನು ಏನೂ ಬರೆಯಲಾರೆ. ಇದನ್ನು ಬೆಂಗಳೂರಿನ ಮತ್ತು ಇತರ ಊರುಗಳ ಜನ ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಮಾಹಿತಿಯನ್ನು ಓದಿದ ಯಾರಿಗಾದರೂ, ಏನಾದರೂ ಹೇಳಬೇಕೆನಿಸಿದರೆ, ಖಂಡಿತಾ ಹೇಳಿ.

ಮೈಕಿನ ಸಮಸ್ಯೆ: ನಾನು ಹೀಗೆ ಮಾಡಿದ್ದೇನೆ

(ನೀನಾಸಂ ಉಡುಪಿಯಲ್ಲಿ ಆಡಿದ ನಾಟಕ "ನೀರ ನಿಲುತಾಣ"ದ ಕುರಿತ ಚರ್ಚೆಯಲ್ಲಿ ಶ್ರೀ ನರೇಂದ್ರ ಪೈಗಳು "ನಾವು ಇವತ್ತು ಎಂಥೆಂಥ ಶಬ್ದಮಾಲಿನ್ಯವನ್ನು, ಸಾಮಾಜಿಕ ಪ್ರಜ್ಞೆಯೇ ಇಲ್ಲದೆ ಜಗತ್ತಿನಲ್ಲಿ ತಾವೊಬ್ಬರೇ ಬದುಕುತ್ತಿದ್ದೇವೋ ಎಂಬಂತೆ ಬದುಕಿ ಇತರರಿಗೆ ಅನಗತ್ಯ ಕಿರಿಕಿರಿ ಕೊಡುತ್ತಿರುವವರನ್ನೆಲ್ಲ ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರು ಇಂಥ ಒಂದು ಪ್ರಯೋಗವನ್ನು ಯಾಕೆ ಸಹಿಸದವರಾಗುತ್ತೇವೊ ಎಂಬ ಹಿನ್ನೆಲೆಯಲ್ಲಷ್ಟೇ ನನ್ನ ಮಾತು." ಎಂದು ಹೇಳಿದ್ದರು. ಇದು ಅದಕ್ಕೆ ಉತ್ತರವಾಗಿ ಬರೆದದ್ದು. "ಅವಧಿ"ಯಲ್ಲಿ ಪ್ರಕಟವಾಗದ್ದರಿಂದ ಇಲ್ಲಿ ಹಾಕುತ್ತಿದ್ದೇನೆ.)
ನರೇಂದ್ರ ಪೈಗಳು ಹೇಳುವಂತೆ ನಮ್ಮಲ್ಲಿ ಹೆಚ್ಚಿನವರು ಏನೆಲ್ಲ ಕಿರಿಕಿರಿಯನ್ನು ತುಟಿಪಿಟಕ್ಕೆನ್ನದೆ ಸಹಿಸಿಕೊಂಡೇ ಬದುಕುತ್ತಿದ್ದೇವೆ. ಆದರೆ, ನಾನು ಮೈಕಿನ ಈ ಕಿರಿಕಿರಿಯಿಂದ ಸ್ವಲ್ಪ ಮಟ್ಟಿಗಾದರೂ ತಪ್ಪಿಸಿಕೊಳ್ಳಲು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಹಾಗಾಗಿ ನಾಟಕದ ಪ್ರಯೋಗವನ್ನು ಮಾತ್ರ ಅಲ್ಲ, ಮೈಕನ್ನು ಸಹ "ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರ ಪೈಕಿ" ಅಲ್ಲ.
ಮೈಕಿನ (ಇಂಥದೇ ಬೇರೆ ಬೇರೆ ಸಮಸ್ಯೆಗಳಿವೆ. ಇರಲಿ.) ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರು ಮೈಕ್ ಹಾಕುತ್ತಾರೋ ಅವರೊಂದಿಗೆ ಜಗಳಕ್ಕಿಳಿಯಬೇಕು. ಜಗಳ ಯಾರಿಗೆ ಬೇಕು? ನಾವೆಲ್ಲ ಸಭ್ಯರು, ಸಜ್ಜನರು. ನಮ್ಮಿಂದ ಅದು ಸಾಧ್ಯವಿಲ್ಲ. ಅದೂ ಅಲ್ಲದೆ, ಹಾಗೆ ಮಾಡಿದರೆ ಮೈಕಿನ ಗಲಾಟೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವ ಸಂಭವವೇ ಜಾಸ್ತಿ. ಪೋಲಿಸ್ ಸ್ಟೇಷನ್ನಿಗೆ ಹೋಗಿ ದೂರು ಕೊಡಬೇಕು. ಇದು ಇನ್ನೂ ದೊಡ್ಡ ರಗಳೆ. ನಮ್ಮ ದೇಶದಲ್ಲಿ ಇದೂ ಸಾಧ್ಯವಿಲ್ಲ. ಮತ್ತೆ? ಫ್ಯಾನಿನ ವೇಗ ಹೆಚ್ಚಿಸಿ, ಸಾಧ್ಯವಾದಷ್ಟೂ ಜೋರಾಗಿ ಶಬ್ದ ಆಗುವಂತೆ ಮಾಡಿ, ಮೈಕ್ ಶಬ್ದ ಬರುವ ಕಡೆಯ ಕಿಟಿಕಿ ಬಾಗಿಲು ಹಾಕಿ, ಮೈಕ್ ಹಾಕಿದವರಿಗೆ ಸಹಸ್ರನಾಮ ಅರ್ಚನೆ ಮಾಡುತ್ತಾ ಮಲಗಿಬಿಡಿ! ಮತ್ತೆ? ಮತ್ತೆ ಬೇರೆ ಯಾರಾದರೂ ನಿಮ್ಮ ಕಷ್ಟ ಕೇಳುವವರು ಸಿಕ್ಕಿದರೆ ನಿಮ್ಮ ತಲೆನೋವು ಅವರಿಗೆ ದಾಟಿಸಿ. ಅಲ್ಲಿಗೆ ಸಮಸ್ಯೆ ಪರಿಹಾರವಾಯಿತು! ಮಗನೋ ಮಗಳೋ ಎರಡನೇ ಪಿಯುಸಿ ಪರೀಕ್ಷೆ ಕಟ್ಟಿದ್ದರೆ ಏನು ಮಾಡುತ್ತೀರಿ? ಕೂತಲ್ಲಿಯೇ ರಕ್ತದೊತ್ತಡ ಹೆಚ್ಚಿಸಿಕೊಳ್ಳಿ!
ಏನು ಮಾಡುವುದು? ಏನು ಪರಿಹಾರ? ಕೆಲವು ವರ್ಷಗಳ ಕೆಳಗೆ ನಾನು ನಮ್ಮ ತಾಲೂಕಿನ ಹಳ್ಳಿಯೊಂದರಲ್ಲಿ ಅದೆಷ್ಟೋ ದಿನಗಳ ಅಖಂಡ ಭಜನೆ ಮಾಡಿಸುವ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯೊಬ್ಬರನ್ನು ಕೇಳಿದೆ:"ನೀವು ಭಜನೆಗೆ ಮೈಕ್ ಯಾಕೆ ಹಾಕುತ್ತೀರಿ?" (ಹೀಗೆ ಪ್ರಶ್ನೆ ಕೇಳುವುದು ತುಂಬ ಅಪಾಯಕಾರಿ. ನಾನು ಮೊದಲೇ ಬೇರೆ ಪೀಠಿಕೆ ಹಾಕಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ). ಅವರು ನನಗೆ ಭಜನೆಯ ಮಹತ್ವವನ್ನೂ, "ಭಜನೆಯಿದ್ದಲ್ಲಿ ವಿಭಜನೆ ಇಲ್ಲ" ಎಂಬ ತತ್ವವನ್ನೂ ವಿವರಿಸಿ ಹೇಳಿದರು. ನಾನು ಎಲ್ಲವನ್ನೂ ಸಮಾಧಾನದಿಂದ ಕೇಳಿ, "ಅದೆಲ್ಲ ಸರಿಯೇ. ಆದರೆ ಮೈಕ್ ಯಾಕೆ? ಅದಿಲ್ಲದೇ ಭಜನೆ ಮಾಡಬಹುದಲ್ಲ?" ಎಂದೆ. ಆಗ ಅವರು " ಓ ಅದಾ? ಅದು ನೋಡಿ, ಮೈಕ್ ಇಲ್ಲದಿದ್ದರೆ ಭಜನೆ ಮಾಡುವವರಿಗೆ ಉಮೇದೇ ಬರುವುದಿಲ್ಲ" ಎಂದರು. ನನಗೆ ಶಬ್ದಮಾಲಿನ್ಯದ ವಿಷಯದಲ್ಲಿ ಒಂದು ಭಾಷಣ ಮಾಡುವ ಜವಾಬ್ದಾರಿ ಇದ್ದುದರಿಂದ, ನಾನು ಇನ್ನೂ ಹಲವರನ್ನು ಈ ಪ್ರಶ್ನೆ ಕೇಳಿದೆ. ಯಾರೂ ಸಮರ್ಪಕ ಉತ್ತರ ಕೊಡುವುದಿಲ್ಲ. ಆದರೆ, ಈ ಪ್ರಶ್ನೆ ಕೇಳಿದರೆ ಎಲ್ಲರಿಗೂ ಸಿಟ್ಟು ಬರುತ್ತದೆ..
ಹಲವು ವರ್ಷಗಳ ಕೆಳಗೆ, ಉಡುಪಿಯಲ್ಲಿ ಕ.ಸಾ.ಪ. ಒಂದು ಸಮ್ಮೇಳನ ನಡೆಸಿದಾಗ ಅದಕ್ಕೆ ಪ್ರತಿ ಎಂಬಂತೆ ಅಲ್ಲಿಯೇ ಮತ್ತೊಂದು ಸಮ್ಮೇಳನವೂ ನಡೆಯಿತು. ನಾನು ಅದಕ್ಕೆ ಹೋಗಿದ್ದೆ. ಜಿ. ರಾಜಶೇಖರ ಈ ಪ್ರತಿ ಸಮ್ಮೇಳನದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮ್ಮೇಳನ ಮುಗಿಸಿ ಬಂದ ನಾನು ಅದರ ಕುರಿತಂತೆ ಅವರಿಗೊಂದು ಪತ್ರ ಬರೆದಿದ್ದೆ. ಅದರಲ್ಲಿ, ಊರಿಗೆಲ್ಲ ಕೇಳುವಂತೆ ಮೈಕ್ ಹಾಕಿದ ಕ್ರಮದ ಬಗ್ಗೆ ಆಕ್ಷೇಪಿಸಿದ್ದೆ. ಅವರು ನಾನು ಎತ್ತಿದ ಹಲವು ಸಂದೇಹಗಳಿಗೆ ಉತ್ತರ ಕೊಟ್ಟರು. ಮೈಕಿನ ಬಗ್ಗೆ ಮೌನ ವಹಿಸಿದರು. ಎಂಥೆಂಥ ಸೂಕ್ಷ್ಮವಾಗಿ ಆಲೋಚಿಸಬಲ್ಲವರೂ ಸಹ ಮೈಕ್ ಬಳಕೆಯ ಬಗ್ಗೆ ಹೇಗೆ ಒಂದು ನಿರ್ಲಿಪ್ತಿ ಬೆಳಸಿಕೊಂಡು ಬಿಟ್ಟಿರುತ್ತಾರೆ ಎಂಬುದಕ್ಕೆ ಇದನ್ನು ಹೇಳಿದೆ ಅಷ್ಟೆ.
ಬಂಟ್ವಾಳದಲ್ಲಿ ವಂಶ ಎಂಬ ಪತ್ರಿಕೆ ಇದೆ. ಈ ಪತ್ರಿಕೆಯ ಸಂಪಾದಕ ವರ್ಗದವರೊಂದಿಗೆ ನಾನೂ ಸೇರಿಕೊಂಡು ನಮ್ಮೂರಿನ ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ಸಂದರ್ಶನಕ್ಕಾಗಿ ಹೋಗಿದ್ದೆವು. ಪೋಲೀಸಿನವರ ಪ್ರಕಾರ, ಮೈಕು ಒಂದು ಸಮಸ್ಯೆಯೇ ಅಲ್ಲ. ಅದನ್ನು ಬಳಸುವವರೆಲ್ಲ ಸರಿಯಾದ ಲೈಸೆನ್ಸ್ ಪಡೆದೇ ಬಳಸುತ್ತಿದ್ದಾರೆ! ಸಮಸ್ಯೆಯೇ ಅಲ್ಲದ ಮೇಲೆ ಪರಿಹಾರದ ಮಾತೆಲ್ಲಿ ಬಂತು?
ಮಾಹಿತಿ ಹಕ್ಕು ಬಂದನಂತರ ಅದರ ಮೂಲಕ ಈ ಸಮಸ್ಯೆಗೆ ಏನಾದರೂ ಮದ್ದರೆಯಲು ಸಾಧ್ಯವೇ ಎಂದು ಯೋಚಿಸಿದೆ. ದಾರಿ ಕಾಣಲಿಲ್ಲ. ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಯವರಿಗೆ ಹೀಗೊಂದು ಪತ್ರ ಬರೆದೆ:

ವಿಷಯ: ಧ್ವನಿವರ್ಧಕ ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ಬಗ್ಗೆ
ಧ್ವನಿವರ್ಧಕಗಳು ಉಂಟು ಮಾಡುವ ಶಬ್ದಮಾಲಿನ್ಯದಿಂದ ಅನೇಕ ನಾಗರಿಕರಿಗೆ ಕಿರಿಕಿರಿಯಾಗುತ್ತಿದ್ದರೂ ಸಹ ಸೂಕ್ತ ಮಾಹಿತಿಯ ಕೊರತೆಯಿಂದ ಅಂಥವರು ಅಸಹಾಯಕರಾಗಿದ್ದಾರೆ. ಆದ್ದರಿಂದ ಇನ್ನು ಮುಂದೆ ಧ್ವನಿವರ್ಧಕ ಬಳಸಲು ಅನುಮತಿ ನೀಡುವಾಗ, ಅನುಮತಿ ಪಡೆದವರು ಈ ಕೆಳಗಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ನೀಡುವಂತೆ ಅವರಿಗೆ ಸೂಚಿಸಬೇಕಾಗಿ ಕೋರುತ್ತೇನೆ.
೧. ಧ್ವನಿವರ್ಧಕ ಬಳಸಲು ಅನುಮತಿ ಪಡೆದವರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ
೨. ಬಳಸುವ ಧ್ವನಿವರ್ಧಕಗಳ ಸಂಖ್ಯೆ ಮತ್ತು ಅವುಗಳನ್ನು ಬಳಸುವ ಸ್ಥಳ
೩. ಧ್ವನಿವರ್ಧಕಗಳನ್ನು ಬಳಸುವ ಅವಧಿ (ಯಾವ ತಾರೀಕಿನಿಂದ ಯಾವ ತಾರೀಕಿನವರೆಗೆ ಮತ್ತು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ)
೪. ಅನುಮತಿಯ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ದೂರು ನೀಡಬಹುದಾದ ಅಧಿಕಾರಿಯ ಪದನಾಮ ಮತ್ತು ಮೊಬೈಲ್ ಸಂಖ್ಯೆ/ಸ್ಥಿರ ದೂರವಾಣಿ ಸಂಖ್ಯೆ
(ಯಾವುದೇ ಕಾರ್ಯಕ್ರಮ ಮಾಡುವವರು ತಮ್ಮ ಕಾರ್ಯಕ್ರಮದ ಬಗ್ಗೆ ಕರಪತ್ರ ಅಥವಾ ಆಮಂತ್ರಣವನ್ನು ಮುದ್ರಿಸುತ್ತಾರೆ. ಅದರಲ್ಲಿಯೇ ಈ ಮಾಹಿತಿಗಳನ್ನು ಮುದ್ರಿಸತಕ್ಕದ್ದೆಂದು ಅವರಿಗೆ ಸೂಚಿಸಬಹುದು. ಜೊತೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಈ ಮಾಹಿತಿಯನ್ನು ಪ್ರದರ್ಶಿಸಲು ಸೂಚಿಸಬಹುದು.)
ಮೇಲ್ಕಂಡ ಕ್ರಮವನ್ನು ಕೈಗೊಂಡಲ್ಲಿ ಸಾರ್ವಜನಿಕರು ತಮಗೆ ಧ್ವನಿವರ್ಧಕದ ಬಳಕೆಯಿಂದ ಕಿರಿಕಿರಿಯಾದರೆ ಕೂಡಲೇ ದೂರು ಸಲ್ಲಿಸಲು ಅನುಕೂಲವಾಗುತ್ತದೆ ಎಂದು ನನ್ನ ಅಭಿಪ್ರಾಯ.
ಈ ಪತ್ರಕ್ಕೆ ತಮ್ಮಿಂದ ಸಕಾರಾತ್ಮಕ ಉತ್ತರವನ್ನು ನಿರೀಕ್ಷಿಸುತ್ತೇನೆ.

ಜಿಲ್ಲಾಧಿಕಾರಿಗಳು "ಸೂಕ್ತ ಹಿಂಬರಹ ನೀಡುವುದು" ಎಂದು ಟಿಪ್ಪಣಿ ಹಾಕಿ, ಪತ್ರವನ್ನು ಎಸ್ ಪಿಯವರ ಆಫೀಸಿಗೆ ಕಳಿಸಿದ್ದಾರೆ.ಅಲ್ಲಿಂದ ಉತ್ತರ ಬಂದಿಲ್ಲ. ಒಂದು ನೆನಪೋಲೆ ಬರೆದಿದ್ದೇನೆ. ಆದರೂ ಉತ್ತರ ಬಂದಿಲ್ಲ. ಇನ್ನೊಂದು ನೆನಪೋಲೆ ಬರೆಯುವ ಸಮಯ ಆಗಿದೆ. ಬರೆಯುತ್ತೇನೆ. ಈ ಹಂತದಲ್ಲಿ ಮಾಹಿತಿ ಹಕ್ಕನ್ನು ಬಳಸಿಕೊಳ್ಳುವುದನ್ನೂ ಪರಿಶೀಲಿಸಬಹುದು.
ಓದುಗರಿಂದ ಕೂಡಲೇ ಬರುವ ಪ್ರತಿಕ್ರಿಯೆ "ಹೀಗೆ ಪತ್ರ ಬರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ" ಎಂಬುದು. ಅಂಥವರಿಗೆ ನನ್ನ ಪ್ರಶ್ನೆ: "ಬರೆದು ನೋಡಿದ್ದೀರಾ?" ಏನೂ ಮಾಡದಿರುವುದಕ್ಕಿಂತ ಹೀಗೆ ಮಾಡುವುದು ಉತ್ತಮ ಅಲ್ಲವೆ? ಇದು ಪ್ರಜಾಪ್ರಭುತ್ವ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಅಣ್ಣಾ ಹಜಾರೆಯಂಥವರಿಂದ ನಮಗೊಂದು ನೈತಿಕ ಬೆಂಬಲಕ್ಕಿಂತ ಹೆಚ್ಚೇನೂ ಸಿಗುವುದು ಸಾಧ್ಯವಿಲ್ಲ.