ಶನಿವಾರ, ಜನವರಿ 26, 2019




ಪಂಪಭಾರತ ಆಶ್ವಾಸ ೨ ಪದ್ಯಗಳು ೩೦ರಿಂದ ೪೦
ಕಂ|| ಒಡನಾಡಿಯುಮೊಡನೋದಿಯು|
     ಮೊಡವಳೆದುಂ ಗುಳ್ಳೆಗೊಟ್ಟಿ ಬಟ್ಟುಳಿಸೆಂಡುಂ||
     ಪೊಡೆಸೆಂಡೆಂಬಿವನಾಡು|
     ತ್ತೊಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್||೩೦|| 
(ಒಡನೆ ಆಡಿಯುಂ, ಒಡನೆ ಓದಿಯುಂ, ಒಡನೆ ಬಳೆದುಂ, ಗುಳ್ಳೆಗೊಟ್ಟಿ, ಬಟ್ಟು, ಉಳಿಸೆಂಡುಂ, ಪೊಡೆಸೆಂಡುಂ ಎಂಬಿವನ್ ಆಡುತ್ತ ಒಡನೆ ಬಳೆದರ್ ತಮ್ಮೊಳ್ ಎಳಸೆ ತಂತಂ ಗೆಡೆಗಳ್)
ಒಟ್ಟಾಗಿ ಆಡುತ್ತ, ಓದುತ್ತ, ಬೆಳೆಯುತ್ತ, ಗುಳ್ಳೆಗೊಟ್ಟಿ, ಬಟ್ಟು, ಉಳಿಸೆಂಡು, ಪೊಡೆಸೆಂಡು ಎಂಬಂಥ ಮಕ್ಕಳಾಡುವ ಆಟಗಳನ್ನು ಆಡುತ್ತ ಅವರೆಲ್ಲ ತಮ್ಮೊಳಗೆ ಸ್ನೇಹದಿಂದ ಒಟ್ಟಿಗೆ ಬೆಳೆಯುತ್ತಿದ್ದರು.
ವ|| ಅಂತಾ ಕೂಸುಗಳ್ ಕೂಸಾಟವಾಡುತ್ತಿರ್ದೊಂದು ದಿವಸಂ ಮರಗೆರಸಿಯಾಡಲೆಂದು ಮುಂದೆ ತಮ್ಮ ಪಗೆ ಪರ್ವುವಂತೆ ಪನ್ನಿರ್ಮತ್ತರ್ ಪರ್ವಿದಾಲದ ಮರದ ಮೊದಲ್ಗೆ ವಂದು ಭೀಮನಂ ಮಱೆಮಾಡಿ ಕೋಲನೀಡಾಡಿ ಪಲವು ಸೂೞ್ ಕಾಡಿ-
(ಅಂತು ಆ ಕೂಸುಗಳ್ ಕೂಸಾಟವಾಡುತ್ತಿರ್ದು, ಒಂದು ದಿವಸಂ ಮರಗೆರಸಿಯಾಡಲೆಂದು, ಮುಂದೆ ತಮ್ಮ ಪಗೆ ಪರ್ವುವಂತೆ ಪನ್ನಿರ್ಮತ್ತರ್ ಪರ್ವಿದ ಆಲದ ಮರದ ಮೊದಲ್ಗೆ ವಂದು, ಭೀಮನಂ ಮಱೆಮಾಡಿ, ಕೋಲನೀಡಾಡಿ, ಪಲವು ಸೂೞ್ ಕಾಡಿ) 
ಹೀಗೆ ಅವರೆಲ್ಲ ಆಟವಾಡುತ್ತ ಒಂದು ದಿವಸ ಮರಕೋತಿ(?) ಆಡಲೆಂದು, ಮುಂದೆ ತಮ್ಮೊಳಗಿನ ಹಗೆ ಬೃಹತ್ತಾಗಿ ಬೆಳೆಯುವಂತೆ ಬೆಳೆದಿದ್ದ ಹನ್ನೆರಡು ಮತ್ತರ ವಿಸ್ತೀರ್ಣದ ಆಲದ ಮರದ ಬುಡಕ್ಕೆ ಬಂದು, ಭೀಮನನ್ನು ಮರೆಯಾಗಿಸಿ, ಕೋಲನ್ನು ಎಸೆದು, (ಭೀಮನನ್ನು) ಮತ್ತೆ ಮತ್ತೆ ಸತಾಯಿಸಿ,
ಕಂ|| ಪರಿದನಿಬರುಮೊಡನಡರ್ದಿರೆ|
     ಮರನಂ ಮುಟ್ಟಲ್ಕೆ ಪಡೆಯದನಿಬರ್ಗಂ ಕಿಂ||
     ಕಿರಿವೋಗಿ ಭೀಮಸೇನಂ||
     ಮರನಂ ಪಿಡಿದಲ್ಗೆ ಪಣ್ವೊಲನಿಬರುಮುದಿರ್ದರ್||೩೧|| 
(ಪರಿದು ಅನಿಬರುಂ ಒಡನೆ ಅಡರ್ದಿರೆ ಮರನಂ, ಮುಟ್ಟಲ್ಕೆ ಪಡೆಯದೆ ಅನಿಬರ್ಗಂ, ಕಿಂಕಿರಿವೋಗಿ ಭೀಮಸೇನಂ ಮರನಂ ಪಿಡಿದು ಅಲ್ಗೆ, ಪಣ್ವೊಲ್ ಅನಿಬರುಂ ಉದಿರ್ದರ್)
-ಓಡಿಹೋಗಿ ಎಲ್ಲರೂ ಮರವನ್ನು ಹತ್ತಿದರು. ಭೀಮನಿಗೆ ಮರ ಹತ್ತಲು ಆಗದೆ, ಅಷ್ಟೂ ಜನರನ್ನು ಮುಟ್ಟಲಾಗದೆ ಮನಸ್ಸಿಗೆ ತುಂಬ ಕಿರಿಕಿರಿಯಾಯಿತು. ಆಗ ಅವನು ಆ ಮರವನ್ನೇ ಹಿಡಿದು ಅಲುಗಿಸಿಬಿಟ್ಟನು. ಮರದ ಮೇಲಿದ್ದವರೆಲ್ಲ ಹಣ್ಣುಗಳ ಹಾಗೆ ತೊಪತೊಪನೆ ಕೆಳಗೆ ಬಿದ್ದರು.
ವ|| ಅಂತು ಬಿೞ್ದು ಸುಲಿದ ಮೊೞಕಾಲ್ಗಳುಂ ಕೞಲ್ದ ಪಲ್ಗಳುಮೆಲ್ವಡಗಾದ ಮೆಯ್ಗಳುಮುಡಿದ ಕೆಯ್ಗಳುಮಾಗಿ ಬೆರಸೞುತ್ತುಂ ಬಂದು ಗಾಂಗೇಯ ಧೃತರಾಷ್ಟ್ರರ್ಗೆ ಕಾರಣಂಬೇೞ್ದೊಡವರಿಂದಿತ್ತ ಭೀಮನೊಡನಾಡದಿರಿಮೆಂದು ಮುದುಗಣ್ಗಳ್ ಬಾರಿಸೆ ತಮ್ಮ ನೊಂದ ಸಿಗ್ಗಿಂಗನಿಬರುಮೊಂದಾಗಿ ಪೋಗಿ ಪೊಱವೊೞಲ ಮರದ ಕೆಳಗೆ ಮಱಸೊಂದಿದ ಭೀಮನನಡಸಿ ಪಿಡಿದು ನೂರ್ವರುಂ ಗಂಟಲಂ ಮೆಟ್ಟಿ
(ಅಂತು ಬಿೞ್ದು, ಸುಲಿದ ಮೊೞಕಾಲ್ಗಳುಂ, ಕೞಲ್ದ ಪಲ್ಗಳುಂ, ಎಲ್ವಡಗಾದ ಮೆಯ್ಗಳುಂ, ಉಡಿದ ಕೆಯ್ಗಳುಂ ಆಗಿ ಬೆರಸು, ಅೞುತ್ತುಂ ಬಂದು, ಗಾಂಗೇಯ ಧೃತರಾಷ್ಟ್ರರ್ಗೆ ಕಾರಣಂ ಪೇೞ್ದೊಡೆ, ಅವರ್ “ಇಂದಿತ್ತ ಭೀಮನೊಡನೆ ಆಡದಿರಿಂ” ಎಂದು ಮುದುಗಣ್ಗಳ್ ಬಾರಿಸೆ, ತಮ್ಮ ನೊಂದ ಸಿಗ್ಗಿಂಗೆ ಅನಿಬರುಂ ಒಂದಾಗಿ ಪೋಗಿ, ಪೊಱವೊೞಲ ಮರದ ಕೆಳಗೆ ಮಱಸೊಂದಿದ ಭೀಮನನ್ ಅಡಸಿ ಪಿಡಿದು, ನೂರ್ವರುಂ ಗಂಟಲಂ ಮೆಟ್ಟಿ)
ಹಾಗೆ ಬಿದ್ದವರ ಮೊಣಕಾಲ ಗಂಟುಗಳು ತರಚಿದವು. ಹಲ್ಲುಗಳು ಸಡಿಲವಾದವು. ಮೈಯ ಎಲುಬು, ಮಾಂಸಗಳು ಜಜ್ಜಿ ಹೋದವು. ಕೈಗಳು ಮುರಿದವು. ಆಗ ಅವರೆಲ್ಲರೂ ಅದೇ ಸ್ಥಿತಿಯಲ್ಲಿ ಗಾಂಗೇಯ, ಧೃತರಾಷ್ಟ್ರರಲ್ಲಿಗೆ ಬಂದು (ಭೀಮನ ಮೇಲೆ) ದೂರು ಹೇಳಿದರು. ಆ ಮುದುಕರು “ಇನ್ನು ಮುಂದೆ ನೀವು ಆ ಭೀಮನ ಜೊತೆ ಆಡಲೇಬೇಡಿ” ಎಂದು ಅವರನ್ನು ನಿವಾರಿಸಿಬಿಟ್ಟರು. ಆದರೆ ಅವಮಾನಿತರಾಗಿದ್ದ ಅವರೆಲ್ಲ  ಒಟ್ಟಾಗಿ ಹೋಗಿ, ಊರ ಹೊರಗೆ ಮರದ ಕೆಳಗೆ ಮಲಗಿ ನಿದ್ರಿಸುತ್ತಿದ್ದ ಭೀಮನನ್ನು ಹಿಡಿದು, ಅವನ ಗಂಟಲು ಮೆಟ್ಟಿ-
ಕಂ|| ಪಾವುಗಳಂ ಕೊಳಿಸಿ ಮಹಾ|
     ಗ್ರಾವಮನುಱದಡಸಿ ಕಟ್ಟಿ ಕೊರಲೊಳ್ ಗಂಗಾ||
     ದೇವಿಯ ಮಡುವಿನೊಳೞ್ದಿದ|
     ರಾವರಿಸದೆ ತಮ್ಮ ಕುಲಮನಡಿಗೞ್ದುವವೋಲ್||೩೨||
(ಪಾವುಗಳಂ ಕೊಳಿಸಿ, ಮಹಾಗ್ರಾವಮನ್ ಉಱದೆ ಅಡಸಿ ಕಟ್ಟಿ ಕೊರಲೊಳ್, ಗಂಗಾದೇವಿಯ ಮಡುವಿನೊಳ್ ಅೞ್ದಿದರ್, ಆವರಿಸದೆ ತಮ್ಮ ಕುಲಮನ್ ಅಡಿಗೆ ಅೞ್ದುವವೋಲ್)
ಹಾವುಗಳಿಂದ ಕಚ್ಚಿಸಿ, ದೊಡ್ಡದೊಂದು ಬಂಡೆಯನ್ನು ಅವನ ಕುತ್ತಿಗೆಗೆ ಬಿಗಿಯಾಗಿ ಕಟ್ಟಿ, ಯಾವುದೇ ವಿಚಾರ ಮಾಡದೆ ಗಂಗಾನದಿಯಲ್ಲಿ – ತಮ್ಮ ಕುಲವನ್ನೇ ಅದ್ದುವಂತೆ – ಅವನನ್ನು ಅದ್ದಿದರು.
ವ|| ಅಂತೞ್ದುವುದುಂ ಗಂಗಾದೇವಿಯ ವರಪ್ರಸಾದದೊಳ್ ವಿಷಮ ವಿಷಧರಂಗಳ್ ಪರಿಯೆ ಕೊರಲೊಳ್ ತೊಡರ್ದ ಶಿಲೆಯಂ ಪಱಿದೀಡಾಡಿ ಗಂಗೆಯ ನೀರಂ ತೋಳೊಳ್ ತುಳುಂಕಿ ಮಗುೞ್ದು ಬಂದಂಗೆ ವಿಷದ ಲಡ್ಡುಗೆಯನಿಕ್ಕಿಯುಮೆನಿತಾನುಮುಪ ದ್ರವಂಗಳೊಳ್ ತೊಡರಿಕ್ಕಿಯುಂ ಗೆಲಲಾಱದೆ ಮನಮಿಕ್ಕಿಯುಮೆರ್ದೆಯಿಕ್ಕಿಯುಮಿರ್ದರಂತಯ್ವರ್ ಕೂಸುಗಳ್ಗಂ ಗಾಂಗೇಯಂ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಸುಖಮಿರ್ಪನ್ನೆಗಮಿತ್ತ ಗಂಗಾದ್ವಾರದೊಳ್ ಮಾಯಾಪುರಮೆಂಬ ಋಷ್ಯಾಶ್ರಮದೊಳ್ ಗೌತಮನೆಂಬಂ ಬ್ರಹ್ಮಋಷಿ ತಪಂ ಗೆಯ್ಯುತಿರ್ಪಿನಮಾ ಋಷಿಗೆ ಬಿಲ್ಲುಮಂಬುಂವೆರಸೊರ್ವ ಮಗಂ ಪುಟ್ಟಿದನಾತಂಗೆ ಶರದ್ವತನೆಂದು ಪೆಸರನಿಟ್ಟು ನಡಪೆ ಬಳೆದು ತಪಂಗೆಯ್ವಾತನಲ್ಲಿಗೆ ಜಲಕ್ರೀಡಾ ನಿಮಿತ್ತದಿಂದಿಂದ್ರನಚ್ಚರಸೆ ಜಲಚರೆಯೆಂಬವಳ್ ಬಂದೊಡಾಕೆಯಂ ಕಂಡು ಕಾಮಾಸಕ್ತಚಿತ್ತನಾಗಿ ಕೂಡಿ
(ಅಂತು ಅೞ್ದುವುದುಂ, ಗಂಗಾದೇವಿಯ ವರಪ್ರಸಾದದೊಳ್ ವಿಷಮ ವಿಷಧರಂಗಳ್ ಪರಿಯೆ, ಕೊರಲೊಳ್ ತೊಡರ್ದ ಶಿಲೆಯಂ ಪಱಿದು ಈಡಾಡಿ, ಗಂಗೆಯ ನೀರಂ ತೋಳೊಳ್ ತುಳುಂಕಿ ಮಗುೞ್ದು ಬಂದಂಗೆ, ವಿಷದ ಲಡ್ಡುಗೆಯನ್  ಇಕ್ಕಿಯುಂ, ಎನಿತಾನುಂ ಉಪದ್ರವಂಗಳೊಳ್ ತೊಡರ್ ಇಕ್ಕಿಯುಂ ಗೆಲಲಾಱದೆ, ಮನಮಿಕ್ಕಿಯುಂ ಎರ್ದೆಯಿಕ್ಕಿಯುಂ ಇರ್ದರ್. ಅಂತು ಅಯ್ವರ್ ಕೂಸುಗಳ್ಗಂ ಗಾಂಗೇಯಂ ಚೌಲ, ಉಪನಯನಾದಿ ಕ್ರಿಯೆಗಳಂ ಮಾಡಿ ಸುಖಂ ಇರ್ಪನ್ನೆಗಂ ಇತ್ತ ಗಂಗಾದ್ವಾರದೊಳ್ ಮಾಯಾಪುರಂ ಎಂಬ ಋಷ್ಯಾಶ್ರಮದೊಳ್ ಗೌತಮನೆಂಬಂ ಬ್ರಹ್ಮಋಷಿ ತಪಂ ಗೆಯ್ಯುತಿರ್ಪಿನಂ ಆ ಋಷಿಗೆ ಬಿಲ್ಲುಂ ಅಂಬುಂವೆರಸು ಒರ್ವ ಮಗಂ ಪುಟ್ಟಿದನ್. ಆತಂಗೆ ಶರದ್ವತನೆಂದು ಪೆಸರನ್ ಇಟ್ಟು ನಡಪೆ, ಬಳೆದು ತಪಂಗೆಯ್ವಾತನಲ್ಲಿಗೆ ಜಲಕ್ರೀಡಾ ನಿಮಿತ್ತದಿಂದ ಇಂದ್ರನ ಅಚ್ಚರಸೆ ಜಲಚರೆಯೆಂಬವಳ್ ಬಂದೊಡೆ ಆಕೆಯಂ ಕಂಡು ಕಾಮಾಸಕ್ತಚಿತ್ತನಾಗಿ ಕೂಡಿ)
ಹಾಗೆ ಅದ್ದಿದಾಗ ಗಂಗಾದೇವಿಯ ವರಪ್ರಸಾದದಿಂದ ಹಾವುಗಳು ಹರಿದುಹೋದವು. ಕೊರಳಲ್ಲಿ ಕಟ್ಟಿದ ಬಂಡೆಯನ್ನು ಬಿಚ್ಚಿ ಒಗೆದು, ಗಂಗೆಯ ನೀರನ್ನು ಕೈಯಲ್ಲಿ ತುಳುಕಿಸುತ್ತ ಅಲ್ಲಿಂದ ಮೇಲೆದ್ದು ಬಂದನು. ಹಾಗೆ ಎದ್ದು ಬಂದವನನ್ನು ಕೊಲ್ಲಲೆಂದು ಅವರು ವಿಷದ ಲಡ್ಡುವನ್ನು ತಿನ್ನಿಸುವುದೇ ಮುಂತಾಗಿ ಹಲವು ಪ್ರಯತ್ನಗಳನ್ನು ಮಾಡಿ ನೋಡಿದರು. ಆದರೆ ಏನು ಮಾಡಿದರೂ ಅವನನ್ನು ಕೊಲ್ಲಲಾಗದೆ, ಮನಸ್ಸು ಕುಗ್ಗಿ ಧೈರ್ಯಗೆಟ್ಟರು.
ಇತ್ತ ಭೀಷ್ಮನು ಆ ಐವರು ಮಕ್ಕಳಿಗೂ ಚೌಲ, ಉಪನಯನಾದಿ ಕ್ರಿಯೆಗಳನ್ನು ಮಾಡಿ ಮುಗಿಸಿ, ಸುಖವಾಗಿದ್ದನು.
ಆಗ ಗಂಗಾದ್ವಾರದ ಮಾಯಾಪುರವೆಂಬ ಋಷ್ಯಾಶ್ರಮದಲ್ಲಿ ಗೌತಮನೆಂಬ ಬ್ರಹ್ಮಋಷಿಯು ತಪಸ್ಸು ಮಾಡುತ್ತಿದ್ದನು. ಆ ಮುನಿಗೆ ಬಿಲ್ಲು ಬಾಣಗಳಿಂದ ಕೂಡಿದ ಒಬ್ಬ ಮಗನು ಹುಟ್ಟಿದನು. ಅವನು ಮಗನಿಗೆ ಶರದ್ವತನೆಂದು ಹೆಸರಿಟ್ಟು ಸಾಕಿದನು. ದೊಡ್ಡವನಾದಂತೆ ಶರದ್ವತನು ತಪಸ್ಸಿನಲ್ಲಿ ನಿರತನಾದನು. ಆಗ ಅಲ್ಲಿಗೆ ಇಂದ್ರನ ಅಪ್ಸರೆಯಾದ ಜಲಚರೆ ಎನ್ನುವವಳು ಬಂದಳು. ಶರದ್ವತನು ಅವಳನ್ನು ಕಂಡು, ಕಾಮಾಸಕ್ತನಾಗಿ ಅವಳನ್ನು ಕೂಡಿದನು.
ಕಂ|| ಒಗೆದ ಶರಸ್ತಂಬದೊಳಿ|
     ರ್ಬಗಿಯಾಗಿ ಮನೋಜ ರಾಗರಸಮುಗುತರೆ ತೊ||
     ಟ್ಟಗೆ ಬಿಸುಟು ಬಿಲ್ಲನಂಬುಮ|
     ನಗಲ್ದನಾಶ್ರಮದಿನುದಿತ ಲಜ್ಜಾವಶದಿಂ||೩೩||
(ಒಗೆದ ಶರಸ್ತಂಬದೊಳ್ ಇರ್ಬಗಿಯಾಗಿ ಮನೋಜ ರಾಗರಸಂ ಉಗುತರೆ, ತೊಟ್ಟಗೆ ಬಿಸುಟು ಬಿಲ್ಲನ್ ಅಂಬುಮನ್, ಅಗಲ್ದನ್ ಆಶ್ರಮದಿನ್ ಉದಿತ ಲಜ್ಜಾವಶದಿಂ)
ಆಗ, ಜೊಂಡು ಹುಲ್ಲಿನ ಮೇಲೆ ಸುರಿದು ಎರಡು ಭಾಗವಾದ ಮನೋಜ ರಾಗರಸವನ್ನು ಕಂಡು ಮುನಿಯು ನಾಚಿಕೊಂಡು ತನ್ನ ಬಿಲ್ಲು ಬಾಣಗಳನ್ನು ಅಲ್ಲಿಯೇ ಬಿಸುಟು ಆಶ್ರಮದಿಂದ ಹೊರಟುಹೋದನು.
ವ|| ಅನ್ನೆಗಮಾ ತಪೋವನಕ್ಕೆ ಬೇಂಟೆಯಾಡಲ್ಬಂದ ಶಂತನುವಿನೊಡನೆಯವರಾ ಶರಸ್ತಂಬದೊಳ್ ಪರಿಕಲಿಸಿರ್ದ ಮುನೀಂದ್ರನಿಂದ್ರಿಯದೊಳೊಗೆದ ಪೆಣ್ಗೂಸುಮಂ ಗಂಡುಗೂಸುಮನವಱ ಕೆಲದೊಳಿರ್ದ ದಿವ್ಯ ಶರಾಸನ ಶರಂಗಳುಮಂ ಕಂಡು ಕೊಂಡುಪೋಗಿ ಶಂತನುಗೆ ತೋಱಿದೊಡಾತನುಮಾ ಶಿಶುದ್ವಯಮಂ ನಿಜ ಗಜಪುರಕ್ಕುಯ್ದು ಕೃಪೆಯಿಂ ನಡಪಿದನಪ್ಪುದಱಿಂ ಕೃಪನುಂ ಕೃಪೆಯುಮೆಂದು ಪೆಸರನಿಟ್ಟು ನಡಪುತ್ತಿರ್ಪನ್ನೆಗಮವರಯ್ಯಂ ಶರದ್ವತನಲ್ಲಿಗೆ ಬಂದು ಕಿಱಿಯಾತಂಗೆ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಧನುರ್ವಿದ್ಯೋಪದೇಶಂಗೆಯ್ಯೆ ಸರ್ವವಿದ್ಯಾವಿಶಾರದನಾದನಾ ಕೃಪಾಚಾರ್ಯರ ಪಕ್ಕದೊಳ್ ಕೂಸುಗಳಂ ವಿದ್ಯಾಭ್ಯಾಸಂಗೆಯ್ಸೆ
(ಅನ್ನೆಗಂ ಆ ತಪೋವನಕ್ಕೆ ಬೇಂಟೆಯಾಡಲ್ ಬಂದ ಶಂತನುವಿನ ಒಡನೆಯವರ್, ಆ ಶರಸ್ತಂಬದೊಳ್ ಪರಿಕಲಿಸಿರ್ದ ಮುನೀಂದ್ರನ ಇಂದ್ರಿಯದೊಳ್ ಒಗೆದ ಪೆಣ್ಗೂಸುಮಂ, ಗಂಡುಗೂಸುಮನ್, ಅವಱ ಕೆಲದೊಳ್ ಇರ್ದ ದಿವ್ಯ ಶರಾಸನ ಶರಂಗಳುಮಂ ಕಂಡು, ಕೊಂಡುಪೋಗಿ ಶಂತನುಗೆ ತೋಱಿದೊಡೆ, ಆತನುಂ ಆ ಶಿಶುದ್ವಯಮಂ ನಿಜ ಗಜಪುರಕ್ಕೆ ಉಯ್ದು ಕೃಪೆಯಿಂ ನಡಪಿದನ್ ಅಪ್ಪುದಱಿಂ, ಕೃಪನುಂ ಕೃಪೆಯುಂ ಎಂದು ಪೆಸರನ್ ಇಟ್ಟು ನಡಪುತ್ತಿರ್ಪನ್ನೆಗಂ, ಅವರಯ್ಯಂ ಶರದ್ವತನ್ ಅಲ್ಲಿಗೆ ಬಂದು, ಕಿಱಿಯಾತಂಗೆ ಚೌಲ ಉಪನಯನಾದಿ ಕ್ರಿಯೆಗಳಂ ಮಾಡಿ, ಧನುರ್ವಿದ್ಯಾ ಉಪದೇಶಂಗೆಯ್ಯೆ ಸರ್ವವಿದ್ಯಾವಿಶಾರದನ್ ಆದನ್. ಆ ಕೃಪಾಚಾರ್ಯರ ಪಕ್ಕದೊಳ್ ಕೂಸುಗಳಂ ವಿದ್ಯಾಭ್ಯಾಸಂಗೆಯ್ಸೆ )
ಅದೇ ಸಮಯದಲ್ಲಿ ಆ ತಪೋವನಕ್ಕೆ ಬೇಟೆಯಾಡಲು ಬಂದ ಶಂತನುವಿನ ಜತೆಯವರು, ಆ ಜೊಂಡುಹುಲ್ಲಿನ ಮೇಲೆ ಚದುರಿ ಬಿದ್ದ ಮುನೀಂದ್ರನ ವೀರ್ಯದಿಂದ ಹುಟ್ಟಿದ ಹೆಣ್ಣು ಹಾಗೂ ಗಂಡು ಕೂಸುಗಳನ್ನೂ, ಅಲ್ಲಿಯೇ ಪಕ್ಕದಲ್ಲಿದ್ದ ದಿವ್ಯವಾದ ಬಿಲ್ಲು ಬಾಣಗಳನ್ನೂ ಕಂಡು, ತೆಗೆದುಕೊಂಡು ಹೋಗಿ ಶಂತನುವಿಗೆ ತೋರಿಸಿದರು. ಶಂತನುವು ಆ ಎರಡು ಮಕ್ಕಳನ್ನೂ ಹಸ್ತಿನಾವತಿಗೆ ಒಯ್ದು, ಕೃಪೆಯಿಂದ ಸಾಕಿದ್ದರಿಂದ, ಕೃಪೆ, ಕೃಪ ಎಂದು ಆ ಮಕ್ಕಳಿಗೆ ಹೆಸರಾಯಿತು. ಹೀಗಿರುವಾಗ, ಅವರ ತಂದೆಯಾದ ಶರದ್ವತನು ಅಲ್ಲಿಗೆ ಬಂದು, ಕಿರಿಯನಾದ ಕೃಪನಿಗೆ ಚೌಲ, ಉಪನಯನಾದಿ ಕ್ರಿಯೆಗಳನ್ನು ಮಾಡಿ, ಬಿಲ್ವಿದ್ಯೆಯನ್ನು ಉಪದೇಶ ಮಾಡಲು, ಕೃಪನು ಎಲ್ಲ ವಿದ್ಯೆಗಳಲ್ಲೂ ಪಾರಂಗತನಾದನು. ಭೀಷ್ಮನು  ಆ ಕೃಪಾಚಾರ್ಯರ ಹತ್ತಿರ ಮಕ್ಕಳೆಲ್ಲರಿಗೂ ವಿದ್ಯಾಭ್ಯಾಸ ಮಾಡಿಸಲು-
ಚಂ|| ಬರೆಯದೆ ಬಂದ ಸುದ್ದಗೆ[ಯೆ] ಸೂತ್ರಮನೊಂದೆ ಮುಹೂರ್ತಮಾತ್ರದಿಂ|
     ಬರಿಸಿದುದುಂತು ಸೂತ್ರಿಸಿದ ಸೂತ್ರ[ದ] ವೃತ್ತಿ ನಿಜಾತ್ಮವೃತ್ತಿವೋಲ್||
     ಪರಿಣಮಿಸಿತ್ತು ಮತ್ತುೞಿದ ವಿದ್ಯೆಗಳೋಜರೆ ಚಟ್ಟರೆಂಬಿನಂ|
     ನೆರೆದುವು ತನ್ನೊಳಾರ್ ಗಳ ಗುಣಾರ್ಣವನಂತು ಕುಶಾಗ್ರಬುದ್ಧಿಗಳ್||೩೪|| 
(ಬರೆಯದೆ ಬಂದ ಸುದ್ದಗೆಯೆ ಸೂತ್ರಮನ್ ಒಂದೆ ಮುಹೂರ್ತಮಾತ್ರದಿಂ ಬರಿಸಿದುದು, ಅಂತು ಸೂತ್ರಿಸಿದ ಸೂತ್ರದ ವೃತ್ತಿ ನಿಜ ಆತ್ಮವೃತ್ತಿವೋಲ್ ಪರಿಣಮಿಸಿತ್ತು,  ಮತ್ತುೞಿದ ವಿದ್ಯೆಗಳ್ ಓಜರೆ ಚಟ್ಟರ್ ಎಂಬಿನಂ ನೆರೆದುವು ತನ್ನೊಳ್, ಆರ್ ಗಳ ಗುಣಾರ್ಣವನಂತು ಕುಶಾಗ್ರಬುದ್ಧಿಗಳ್?)
(ದರ್ಭೆಯಂತೆ ಹರಿತವಾದ ಬುದ್ಧಿಯ ಗುಣಾರ್ಣವನು) ಅಕ್ಷರಗಳನ್ನು ಬರೆಯದೆ (ತಿದ್ದದೆ) ಕಲಿತನು. ಹಾಗೆ ಕಲಿತ ಅಕ್ಷರಗಳನ್ನು ಕ್ಷಣಮಾತ್ರದಲ್ಲಿ ಸೂತ್ರಗಳು ಹಿಂಬಾಲಿಸಿದವು. ಆ ಸೂತ್ರಗಳ ವೃತ್ತಿಗಳು ಸ್ವಭಾವ ಸಹಜ ಎಂಬಂತೆ ಅವನಿಗೆ ಕರಗತವಾದವು. ಇನ್ನುಳಿದ ವಿದ್ಯೆಗಳಂತೂ ಗುರುಗಳೇ ಶಿಷ್ಯನಿಂದ ಕಲಿಯಬೇಕು ಎಂಬ ಹಾಗೆ ಅವನಿಗೆ ಸಿದ್ಧಿಸಿದವು. ಗುಣಾರ್ಣವನಿಗೆ ಬುದ್ಧಿಯಲ್ಲಿ ಸಮಾನರು ಯಾರಿದ್ದಾರೆ?)
ವ| ಅಂತು ಪಂಚಾಂಗ ವ್ಯಾಕರಣದ ವೃತ್ತಿಭೇದಮಪ್ಪ ಛಂದೋವೃತ್ತಿಯೊಳಂ ಶಬ್ದಾಲಂಕಾರ ನಿಷ್ಠಿತಮಪ್ಪಲಂಕಾರದೊಳಂ ವ್ಯಾಸ ವಾಲ್ಮೀಕಿ ಕಶ್ಯಪಪ್ರಭೃತಿ ವಿರಚಿತಂಗಳಪ್ಪ ಮಹಾಕಾವ್ಯಂಗಳೊಳಂ ನಾಂದೀಪ್ರರೋಚ[ನಾ]ಪ್ರಸ್ತಾವ[ನೇ]ತಿವೃ[ತ್ತ] ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ ಪದಿನೆಂಟು ಧರ್ಮಶಾಸ್ತ್ರಂಗಳೊಳಂ ನಾಲ್ಕು ವೇದದೊಳಮಾಱಂಗದೊಳಮಯ್ದು ತೆಱದ ಮಂತ್ರಂಗಳೊಳ[ಮಾ]ಱುಂ ದರ್ಶನದೊಳಂ ಪ್ರತ್ಯಕ್ಷಾನುಮಾನ ಪ್ರಮಾಣಂಗಳೊಳಂ ಭರತಪ್ರಣೀತ ನೃತ್ಯಶಾಸ್ತ್ರದೊಳಂ ನಾರದಾದಿ ಪ್ರಣೀತ ಗಾಂಧರ್ವವಿದ್ಯಾವಿಶೇಷಂಗಳೊಳಂ ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳ ಕಶ್ಯಪ ಸುಪತಿ ಶ್ರೀಹರ್ಷಾದಿ ಪುರಾಣಪುರುಷವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ ಚಿತ್ರಕರ್ಮ ಪತ್ರಚ್ಛೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ ದಾರುಕರ್ಮ ವಾಸ್ತುವಿದ್ಯಾ ಪೂರ್ವಯಂತ್ರ ಪ್ರಯೋಗ ವಿ[ಷಾ]ಪಹರಣ ಸರಭೇದ ರತಿತಂತ್ರೇಂದ್ರಜಾಲ ವಿವಿಧ ವಿದ್ಯೆಗಳೊಳಮನೇಕಾಕ್ಷರ ಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳಮತಿ ಪ್ರವೀಣನುಮಾರೂಢಸರ್ವಜ್ಞ ಮಹೇಂದ್ರ ಜಾಣ[ನು]ಮಾಗಿ-
(ಅಂತು ಪಂಚಾಂಗ ವ್ಯಾಕರಣದ ವೃತ್ತಿಭೇದಂ ಅಪ್ಪ ಛಂದೋವೃತ್ತಿಯೊಳಂ, ಶಬ್ದಾಲಂಕಾರ ನಿಷ್ಠಿತಂ ಅಪ್ಪ ಅಲಂಕಾರದೊಳಂ, ವ್ಯಾಸ ವಾಲ್ಮೀಕಿ ಕಶ್ಯಪ ಪ್ರಭೃತಿ ವಿರಚಿತಂಗಳಪ್ಪ ಮಹಾಕಾವ್ಯಂಗಳೊಳಂ, ನಾಂದೀ ಪ್ರರೋಚನಾ ಪ್ರಸ್ತಾವನಾ ಇತಿವೃತ್ತ ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ, ಪದಿನೆಂಟು ಧರ್ಮಶಾಸ್ತ್ರಂಗಳೊಳಂ, ನಾಲ್ಕು ವೇದದೊಳಂ, ಆಱಂಗದೊಳಂ, ಅಯ್ದು ತೆಱದ ಮಂತ್ರಂಗಳೊಳಂ, ಆಱುಂ ದರ್ಶನದೊಳಂ,  ಪ್ರತ್ಯಕ್ಷ ಅನುಮಾನ ಪ್ರಮಾಣಂಗಳೊಳಂ, ಭರತಪ್ರಣೀತ ನೃತ್ಯಶಾಸ್ತ್ರದೊಳಂ, ನಾರದಾದಿ ಪ್ರಣೀತ ಗಾಂಧರ್ವವಿದ್ಯಾವಿಶೇಷಂಗಳೊಳಂ,  ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳ ಕಶ್ಯಪ ಸುಪತಿ ಶ್ರೀಹರ್ಷಾದಿ ಪುರಾಣಪುರುಷವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ, ಚಿತ್ರಕರ್ಮ ಪತ್ರಚ್ಛೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ, ದಾರುಕರ್ಮ ವಾಸ್ತುವಿದ್ಯಾ ಪೂರ್ವಯಂತ್ರ ಪ್ರಯೋಗ ವಿಷಾಪಹರಣ ಸರಭೇದ ರತಿತಂತ್ರ ಇಂದ್ರಜಾಲ ವಿವಿಧ ವಿದ್ಯೆಗಳೊಳಂ, ಅನೇಕ ಅಕ್ಷರ ಸ್ವರೂಪಂಗಳೊಳಂ, ಚಾಪ ಚಕ್ರ ಪರಶು ಕೃಪಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳಂ ಅತಿ ಪ್ರವೀಣನುಂ. ಆರೂಢಸರ್ವಜ್ಞ ಮಹೇಂದ್ರ ಜಾಣ[ನು]ಮಾಗಿ
ವ| ಹಾಗೆ ಐದು ಅಂಗಗಳುಳ್ಳ ವ್ಯಾಕರಣದ ವೃತ್ತಿಭೇದವಾಗಿರುವ ಛಂದಸ್ಸಿನಲ್ಲಿಯೂ, ಶಬ್ದಾಲಂಕಾರದಿಂದ ಕೂಡಿದ ಅಲಂಕಾರ ಶಾಸ್ತ್ರದಲ್ಲಿಯೂ, ವ್ಯಾಸ, ವಾಲ್ಮೀಕಿ, ಕಶ್ಯಪರಂಥ ಮಹಾನುಭಾವರು ರಚಿಸಿದ ಮಹಾಕಾವ್ಯಗಳಲ್ಲಿಯೂ, ನಾಂದಿ, ಪ್ರರೋಚನ, ಪ್ರಸ್ತಾವನಾ, ಇತಿವೃತ್ತ, ಸಂಧಿಪ್ರವೇಶ, ವಿಷ್ಕಂಭ, ಕಪೋತಿಕಾ, ವ್ಯಾಳಿಕಾ ಮೊದಲಾದ ಲಕ್ಷಣಗಳಿಂದ ಕೂಡಿದ ನಾಟಕಗಳಲ್ಲಿಯೂ, ಹದಿನೆಂಟು ಧರ್ಮಶಾಸ್ತ್ರಗಳಲ್ಲಿಯೂ, ನಾಲ್ಕು ವೇದಗಳಲ್ಲಿಯೂ, ಆರು ವೇದಾಂಗಗಳಲ್ಲಿಯೂ, ಐದು ರೀತಿಯ ಮಂತ್ರಗಳಲ್ಲಿಯೂ, ಆರು ದರ್ಶನಗಳಲ್ಲಿಯೂ, ಪ್ರತ್ಯಕ್ಷ, ಅನುಮಾನ, ಪ್ರಮಾಣಗಳೆಂಬ ತರ್ಕ ವಿದ್ಯೆಯಲ್ಲಿಯೂ, ಭರತ ಮುನಿಯಿಂದ ರಚಿತವಾದ ನಾಟ್ಯಶಾಸ್ತ್ರದಲ್ಲಿಯೂ, ಸಂಗೀತವಿದ್ಯೆಯಲ್ಲಿಯೂ, ಹಸ್ತಿಶಾಸ್ತ್ರವನ್ನು ತಿಳಿದವರಾದ ರಾಜಪುತ್ರ, ಗೌತಮ, ವಾದ್ವಾಕಿ, ಪಾಳಕಾಪ್ಯ, ಸುಪತಿ, ಶ್ರೀಹರ್ಷರೇ ಮೊದಲಾದವರು ರಚಿಸಿದ ಹಸ್ತಿಶಾಸ್ತ್ರದಲ್ಲಿಯೂ, ಚಿತ್ರಕರ್ಮ, ಗ್ರಹಗಣಿತ, ರತ್ನಪರೀಕ್ಷೆಗಳಲ್ಲಿಯೂ, ಮರಗೆಲಸ, ಮನೆ – ಕಟ್ಟಡಗಳನ್ನು ಕಟ್ಟುವ ವಿದ್ಯೆಯಲ್ಲಿಯೂ, ಶಕುನ ಶಾಸ್ತ್ರ, ರತಿತಂತ್ರ, ಇಂದ್ರಜಾಲ ಮುಂತಾದ ವಿದ್ಯೆಗಳಲ್ಲಿಯೂ, ಅನೇಕ ಲಿಪಿಗಳ ಸ್ವರೂಪ ಜ್ಞಾನದಲ್ಲಿಯೂ, ಚಾಪ, ಚಕ್ರ, ಪರಶು, ಕೃಪಾಣ, ಶಕ್ತಿ, ತೋಮರ, ಮುಸಲ, ಮುಸುಂಡಿ, ಭಿಂಡಿವಾಳ, ಮುದ್ಗರ, ಗದೆ ಮೊದಲಾದ ವಿವಿಧ ಆಯುಧಗಳ ಪ್ರಯೋಗದಲ್ಲಿಯೂ ಪ್ರವೀಣನಾಗಿ
ಕಂ|| ಉಳ್ಳೋದುಗಳೊಳಗೆನಿತಱಿ
     ವುಳ್ಳರ್ಗಂ ತಿಳಿಪಲರಿಯದೆನಿಪೆಡೆಗಳುಮಂ|
     ತೆಳ್ಳಗಿರೆ ತಿಳಿಪುಗುಂ ಬೆಸ
     ಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ಕಮುಮಂ ||೩೫|| 
(ಉಳ್ಳ ಓದುಗಳೊಳಗೆ ಎನಿತು ಅಱಿವು ಉಳ್ಳರ್ಗಂ ತಿಳಿಪಲ್ ಅರಿಯದು ಎನಿಪ ಎಡೆಗಳುಮಂ, ತೆಳ್ಳಗಿರೆ ತಿಳಿಪುಗುಂ, ಬೆಸಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ಕಮುಮಂ)
ಇರುವ ವಿದ್ಯೆಗಳನ್ನೆಲ್ಲ ಆಳವಾಗಿ ತಿಳಿದವರು ಕೂಡ ವಿವರಿಸಲು ಸಾಧ್ಯವಾಗದಂಥ ಕ್ಲಿಷ್ಟ ಭಾಗಗಳನ್ನು ಸಹ ತಿಳಿಯಾಗಿ ತಿಳಿಸಬಲ್ಲವನಾದ ಅರ್ಜುನನ ಲೆಕ್ಕ-ಪೊಕ್ಕಗಳನ್ನು ಕೇಳಯ್ಯ!

ವ|| ಎಂದು ಲೋಕಮೆಲ್ಲಂ ಪೊಗೞೆ ನೆಗೞ್ದ ಪೊಗೞ್ತೆಗಂ ನೆಗೞ್ತೆಗಂ ತಾನೆ ಗುಱಿಯಾಗಿ
ಎಂದು ಲೋಕವೆಲ್ಲವೂ ಹೊಗಳಲು, ಅಂತಹ ಹೊಗಳಿಕೆಗೂ, ಖ್ಯಾತಿಗೂ ತಾನೇ ಗುರಿಯಾಗಿ
ಕಂ|| ಮಾನಸದೊಳ್ ಹಂಸೆಯವೋಲ್
     ಮಾನಸ ವಾಗ್ವನಿತೆ ತನ್ನ ಮಾನಸದೊಳಿವಂ|
     ಮಾನಸನೆಂದಗಲದೆ ನಿಲೆ
     ಮಾನಸನಾದಂ ಸರಸ್ವತೀ ಕಳಹಂಸಂ|| ೩೬ || 
(ಮಾನಸದೊಳ್ ಹಂಸೆಯವೋಲ್ ಮಾನಸ ವಾಗ್ವನಿತೆ ತನ್ನ ಮಾನಸದೊಳ್ ‘ಇವಂ ಮಾನಸನ್’ ಎಂದು ಅಗಲದೆ ನಿಲೆ,
ಮಾನಸನ್ ಆದಂ ಸರಸ್ವತೀ ಕಳಹಂಸಂ)
ಮಾನಸ ಸರೋವರದಲ್ಲಿ ಹಂಸವು ನೆಲಸಿದಂತೆ, ಮಾತಿನ ರೂಪದ ಸರಸ್ವತಿಯು ಅರ್ಜುನನ ಮನಸಿನಲ್ಲಿ ‘ಇವನು ನನ್ನ ಮಗ’ ಎಂದು ಅಗಲದೆ ನೆಲಸಿದಳು. ಹೀಗೆ ಮನಸ್ಸಿನಲ್ಲಿ ಸರಸ್ವತಿಯನ್ನು ಹೊತ್ತದ್ದರಿಂದ ಅರ್ಜುನನು ಸರಸ್ವತಿಗೆ ವಾಹನವಾದನು.
ವ|| ಅಂತಯ್ವರುಂ ಸಮಸ್ತ ಶಸ್ತ್ರ ಶಾಸ್ತ್ರ ಪ್ರಯೋಗ ಪ್ರವೀಣರಾಗೆ ಧರ್ಮಪುತ್ರಂ ಧರ್ಮಶಾಸ್ತ್ರಂಗಳೊಳಂ ಶ್ರುತಿಸ್ಮೃತಿಗಳೊಳಂ ಪ್ರವೀಣನಾದಂ ಭೀಮಸೇನಂ ವ್ಯಾಕರಣದೊಳಾರಿಂದಮಗ್ಗಳಂ ಕುಶಲನಾದಂ ನಕುಲಂ ಕುಂತಶಸ್ತ್ರದೊಳತಿ ಪ್ರವೀಣನುಮಾಗಿ ಅಶ್ವವಿದ್ಯೆಯೊಳಾರಿಂದಂ ಪಿರಿಯನಾದಂ ಸಹದೇವಂ ಜ್ಯೋತಿರ್ಜ್ಞಾನದೊಳತಿ ಪರಿಣತನಾದಂ 
(ಅಂತು ಅಯ್ವರುಂ ಸಮಸ್ತ ಶಸ್ತ್ರ ಶಾಸ್ತ್ರ ಪ್ರಯೋಗ ಪ್ರವೀಣರಾಗೆ, ಧರ್ಮಪುತ್ರಂ ಧರ್ಮಶಾಸ್ತ್ರಂಗಳೊಳಂ ಶ್ರುತಿಸ್ಮೃತಿಗಳೊಳಂ ಪ್ರವೀಣನಾದಂ,  ಭೀಮಸೇನಂ ವ್ಯಾಕರಣದೊಳ್ ಆರಿಂದಂ ಅಗ್ಗಳಂ ಕುಶಲನಾದಂ, ನಕುಲಂ ಕುಂತಶಸ್ತ್ರದೊಳ್ ಅತಿ ಪ್ರವೀಣನುಂ ಆಗಿ ಅಶ್ವವಿದ್ಯೆಯೊಳ್ ಆರಿಂದಂ ಪಿರಿಯನಾದಂ, ಸಹದೇವಂ ಜ್ಯೋತಿರ್ಜ್ಞಾನದೊಳ್ ಅತಿ ಪರಿಣತನಾದಂ) 
ಹಾಗೆ ಐವರೂ ಕೂಡ ಎಲ್ಲಾ ಶಸ್ತ್ರ, ಶಾಸ್ತ್ರಗಳಲ್ಲಿ ಪ್ರವೀಣರಾದರು. ಧರ್ಮಪುತ್ರನು ಧರ್ಮಶಾಸ್ತ್ರಗಳಲ್ಲಿಯೂ, ಶ್ರುತಿಸ್ಮೃತಿಗಳಲ್ಲಿಯೂ ಪ್ರವೀಣನಾದನು. ಭೀಮಸೇನನು ವ್ಯಾಕರಣದಲ್ಲಿ ಎಲ್ಲರಿಗಿಂತಲೂ ಕುಶಲನಾದನು. ನಕುಲನು ಕುಂತ ಶಸ್ತ್ರದಲ್ಲಿಯೂ, ಅಶ್ವವಿದ್ಯೆಯಲ್ಲಿಯೂ ಎಲ್ಲರಿಗಿಂತ ಮಿಗಿಲಾದನು. ಸಹದೇವನು ಜ್ಯೋತಿರ್ಜ್ಞಾನದಲ್ಲಿ ತುಂಬಾ ಪರಿಣತನಾದನು.
ಚಂ|| ಬಳೆದುವು ತೋಳ್ಗಳೆಕ್ಕೆಯಿನಮಳ್ ಬಳೆವಂತಿರೆ ಮುಯ್ವುಗಳ್ ಕುಳಾ
     ಚಳ ಶಿಖರಂಗಳಂ ಮಸುಳೆವಂದುವು ಪರ್ವಿದ ವಕ್ಷಮೀ ಕ್ಷಮಾ|
     ತುಳ ಕುಳಲಕ್ಷ್ಮಿಗಾಯ್ತು ಕುಳಮಂದಿರಮೆಂದು ಮಹೀತಳಂ ಮನಂ
     ಗೊಳೆ ನೆಱೆದತ್ತುದಾತ್ತ ನವಯೌವನಮೊರ್ಮೆಯೆ ಧರ್ಮಪುತ್ರನಾ|| ೩೭ ||
ಧರ್ಮಪುತ್ರನ ಎರಡು ತೋಳುಗಳು ಅವಳಿ ಮಕ್ಕಳು ಬೆಳೆಯುವಂತೆ ಒಟ್ಟಿಗೆ ಬೆಳೆದುವು. ಭುಜಗಳು ಕುಲಪರ್ವತ ಶಿಖರಗಳನ್ನು ಮಬ್ಬಾಗಿಸಿದವು. ಅಗಲವಾದ ಎದೆಯು ಎಣೆಯಿಲ್ಲದ ಭೂಮಿಯೆಂಬ ಸಂಪತ್ತಿಗೆ ಪೂರ್ವಾರ್ಜಿತ ಮನೆಯಂತಾಯಿತು ಎಂದು ಭೂಮಂಡಲವೇ ಮನಗಂಡಿತು. ಹೀಗೆ ಧರ್ಮರಾಯನಿಗೆ ಒಮ್ಮೆಲೇ ಯೌವನವು ಪ್ರಾಪ್ತಿಸಿತು.
ವ|| ಅಂತು ಸೊಗಯಿಸುವ ರೂಪಿನೊಳ್ ಪೊನ್ನ ಬಣ್ಣದಂತಪ್ಪ ತನ್ನ ಮೆಯ್ಯ ಬಣ್ಣಮಳವಲ್ಲದೊಪ್ಪೆ
ಹಾಗೆ ಸೊಗಯಿಸುವ ರೂಪದಲ್ಲಿ ಬಂಗಾರದ ಬಣ್ಣದಂತಿದ್ದ ತನ್ನ ಮೈಬಣ್ಣವು ತುಂಬಾ ಚೆಲುವಾಗಿರಲು-

ಚಂ|| ಕುಳಗಿರಿಯಂ ಸರೋಜನಿಲಯಂ ಮನುಜಾಕೃತಿಯಾಗೆ ಮಾಡಿದಂ
     ತೊಳನೆನಿಪಂತುಟಪ್ಪ ಪೊಸ ಬಣ್ಣದೊಳೊಂದಿದ ಪಾರಿಜಾತಮ|
     ಗ್ಗಳಮೆಸೆದೊಪ್ಪುವಂತೆ ತಳಿರಿಂ ಮುಗುಳಿಂ ನವಯೌವನಂ ಮನಂ
     ಗೊಳೆ ಕರಮೊಪ್ಪಿದಂ ದಶ ಸಹಸ್ರ ಮದೇಭ ಬಳಂ ವೃಕೋದರಂ|| ೩೮ || 
ಬ್ರಹ್ಮನು ಕುಲಗಿರಿಗೆ ಮನುಷ್ಯ ರೂಪವನ್ನು ಕೊಟ್ಟಿದ್ದಾನೋ ಎನ್ನುವಂತೆ, ಹೊಸ ಬಣ್ಣ ತಳೆದ ಪಾರಿಜಾತದ ಮರವು ಚಿಗುರು, ಮೊಗ್ಗುಗಳಿಂದ ಶೋಭಿಸುವಂತೆ, ಹೊಸ ತಾರುಣ್ಯ ಪಡೆದ, ಹತ್ತು ಸಾವಿರ ಆನೆ ಬಲದ ಭೀಮನು ಶೋಭಿಸಿದನು.
ವ|| ಅಂತೊಪ್ಪುವ ಗಂಡಗಾಡಿಯೊಳಿಂದ್ರನೀಲದಂತಪ್ಪ ಬಣ್ಣಂ ಕಣ್ಗೆವರೆ
ಹಾಗೆ ಒಪ್ಪುವ ಗಂಡುಚೆಲುವಿನಲ್ಲಿ ಇಂದ್ರನೀಲದ ಬಣ್ಣದಿಂದ ಕಂಗೊಳಿಸುತ್ತಿದ್ದ -

ಚಂ|| ಶರದದ ಚಂದ್ರನಂ ವಿಮಲ ಚಂದ್ರಿಕೆ ಬಾಳದಿನೇಶನಂ ತಮೋ
     ಹರಕಿರಣಂ ಕಿಶೋರ ಹರಿಯಂ ನವಕೇಸರ ರಾಜಿ ಮಿಕ್ಕ ದಿ|
     ಕ್ಕರಿಯನನೂನ ದಾನ ಪರಿಶೋಭೆ ಮನಂಗೊಳೆ ಪೊರ್ದುವಂತೆ ಸುಂ
     ದರ ನವಯೌವನಂ ನೆಱೆಯೆ ಪೊರ್ದೆ ಗುಣಾರ್ಣವನೊಪ್ಪಿ ತೋಱಿದಂ|| ೩೯ ||
ಶರತ್ಕಾಲದ ಚಂದ್ರನನ್ನು ನಿರ್ಮಲವಾದ ಬೆಳದಿಂಗಳು, ಎಳೆಯ ಸೂರ್ಯನನ್ನು ಕತ್ತಲು ಹರಿಸುವ ಕಿರಣಗಳು, ಸಿಂಹದ ಮರಿಯನ್ನು ಅದರ ಕೊರಳಗೂದಲು, ಸೊಕ್ಕಿನ ದಿಗ್ದಂತಿಯನ್ನು ಅದರ ಮದೋದಕ ಹೇಗೆ ಸಹಜವಾಗಿ ಸೇರಿಕೊಂಡಿರುತ್ತದೆಯೋ ಹಾಗೆ ಸುಂದರವಾದ ನವಯೌವನವು ಸೇರಿಕೊಂಡಾಗ ಅರ್ಜುನನು ಸೊಗಸಾಗಿ ಕಂಡನು.
ವ|| ಅಂತು ನವಯೌವನಂ ನೆಱೆಯೆ ನೆಱೆಯೆ ನಿಱಿನಿಱಿಗೊಂಡ ಗುಣಾರ್ಣವನ ತಲೆ ನವಿರ್ಗಳ್ ಲಾವಣ್ಯರಸಮನಿಡಿದಿಡಿದು ತೀವಿದ ಕಮಲಾಸನನ ಬೆರಲಚ್ಚುಗಳನ್ನವಾದುವು ಮೂಱುಂ ಲೋಕದ ಮೂಱು ಪಟ್ಟಮನಾಳಲ್ಕೆ ತಕ್ಕ ಲಕ್ಷಣ ಸಂಪೂರ್ಣಮಪ್ಪ ಸಹಜಮನೋಜನ ಲಲಾಟಂ ಪಟ್ಟಂಗಟ್ಟಿದ ನೊಸಲ್ಗೆ ಲಕ್ಷಣಮನಱಸಲ್ವೇಡೆಂಬಂತಾದುದು ಕರ್ಬಿನ ಬಿಲ್ಲ ಕೊಂಕಿನಂತೆ ಕೊಂಕಿಯುಂ ಪರವನಿತೆಯರೆರ್ದೆಗೆ ಕೊಂಕಿಲ್ಲದೆಯುಂ ಸೊಗಯಿಸುವ ಸುರತ ಮಕರಧ್ವಜನ ಪುರ್ವುಗಳ್ ಕಾಮದೇವನ ವಿಜಯ ವೈಜಯಂತಿಗಳಂತಾದುವು ನೀಳ್ಪಂ ಬೆಳ್ಪುಮಂ ತಾಳ್ದಿ ಪರವನಿತೆಯರ ದೆಸೆಗೆ ಕಿಸುಗಣ್ಣಿದಂತೆ ಕಿಸು ಸೆರೆವರಿದು ಸೊಗಯಿಸುವ ಶೌಚಾಂಜನೇಯನ ಕಣ್ಗಳೆಂಬಲರಂಬುಗಳ್ ಗಣಿಕಾಜನಂಗಳೆರ್ದೆಯಂ ನಟ್ಟು ಕೆಂಕಮಾದಂತಾದುವು ರಿಪುಜನದ ಪೆರ್ಚಿಂಗಂ ಪರಾಂಗನಾಜನದ ಮೆಚ್ಚಿಂಗಂ ಮೂಗಿಱಿವಂತೆ ಸೊಗಯಿಸುವ ಗಂಧೇಭ ವಿದ್ಯಾಧರನ ಮೂಗು ತನ್ನ ಸುಯ್ಯ ಕಂಪನಲ್ಲದೆ ಪೆಱರ ಕಂಪನಾಸೆವಡದಂತಾದುದು ಪೊಸ ಜವ್ವನದ ಮುಂಬಣ್ಣದಂತೆ ಕರ್ಪಂ ಕೈಕೊಂಡು ಕತ್ತುರಿಯಲ್ ಬರೆದಂತಪ್ಪ ವಿಕ್ರಾಂತ ತುಂಗನ ಮೀಸೆಗಳಾತನ ತೀವ್ರ ಪ್ರತಾಪಾನಳ ಧೂಮಲೇಖೆ ಯಂತಾದುವು ಪುಳಿಯೊಳಲೆದ ಪವಳದ ಬಟ್ಟಿನಂತೆ ಸೊಗಯಿಸುವ ಸಂಸಾರಸಾರೋದಯನ ಬಿಂಬಾಧರಮನಂಗರಾಗರಸದುರುಳಿಯಂತಾದುದು ರಸದಾಡಿಮದ ಬಿತ್ತುಮಂ ಪೊಸ ಮುತ್ತುಮಂ ಮುಕ್ಕುಳಿಸಿದಂತಪ್ಪ ವಿಬುಧವನಜವನ ಕಳಹಂಸನ ದಂತಪಙ್ತಿಗಳಮೃತಕಿರಣನ ಕಾಂತಿಗಳನಿಳಿಸುವಂತಾದುವು ಮಡಿದು ತಂದಿಟ್ಟ ಪೊಸನೆಯ್ದಿಲ ಕಾವನಾವಗಂ ಗೆಲ್ದ ರತ್ನಕುಂಡಲಂಗಳ ಪೊಳಪನೊಳಕೊಂಡಂತೆ ನಸುನೇಲ್ವ ಕರ್ಣಾಟೀ ಕರ್ಣಪೂರನ ಪಾಲೆಗಳುಂ ಸರಸ್ವತಿಯಾಡುವ ಲೀಲಾಂದೋಳದಂತಾದುವು ಬಳ್ವಳ ಬೆಳೆದೆಳಗೌಂಗಿನಂತೆ ಲೋಕದ ಚೆಲ್ವೆಲ್ಲಮನೊಳಕೊಂಡು ರೇಖೆಗೊಂಡ ಲಾಟೀ ಲಲಾಮನ ಪರಿಣದ್ಧ ಕಂಧರಂ ಯುವರಾಜ ಕಂಠಿಕಾಭರಣಮಂ ಕಟ್ಟುವುದರ್ಕೆ ನೋಂತು ತನ್ನ ಚೆಲ್ವನಲ್ಲದೆ ಪೆಱರ ಚೆಲ್ವನಾಸೆವಡದಂತಾದುದು ಕುಲದ ಚಲದ ಮೈಮೆಯೊಳ್ ತನ್ನನೆ ನೋಡಿದ ಸಂತೋಷದೊಳುತ್ಸಾಹಮಾದಂತೆ ಸೊಗಯಿಸುವ ಸಮರೈಕಮೇರುವಿನ ಭುಜಶಿಖರಂಗಳ್ ಕುಲಶಿಖಿರಿ ಶಿಖರಂಗಳಂತಾದುವು ವ್ಯಾಳ ಗಜಂಗಳುಮನಂಕದ ಬರ್ದೆಯರುಮನುಗಿಬಗಿಮಾಡಿದ ಸಂತೋಷದೊಳ್ ಬಳ್ವಳ ಬಳೆದ ವಿಕ್ರಾಂತತುಂಗನ ನಿಡುದೋಳ್ಗಳ್ ಗಣಿಕಾಜನಕ್ಕೆ ಕಾಮಪಾಶಂಗಳುಮರಾತಿಜನಕ್ಕೆ ಯಮಪಾಶಂಗಳುಮಾದುವು ರಕ್ತಾಶೋಕಪಲ್ಲವದಂತೆ ತೊಳತೊಳಗುವಾಂಧ್ರೀಕುಚಕಲಶ ಪಲ್ಲವನ ಕರತಳಪಲ್ಲವಂಗಳ್ ಸಮದ ಗಜಕುಂಭಸ್ಥಳಾಸ್ಫಾಳನ ಕರ್ಕಶಂಗಳಾದುವು ಪೊಡರ್ವ ಪಗೆವರನುಱದೆ ಕೊಂಡ ಸಂತೋಷದೊಳಂ ಶ್ರೀಯನೊಳಕೊಂಡ ಸಂತೋಷದೊಳಂ ತೆಕ್ಕನೆ ತೀವಿದ ಕೇರಳೀ ಕೇಳಿ ಕಂದರ್ಪನಗಲುರಂ ಲಕ್ಷ್ಮಿಗೆ ಕುಲಭವನಮುಂ ನಿವಾಸಭವನಮುಮಾದುದು ಪೊಡರ್ವ ಮಂಡಳಿಕರ ಮನದಂತೆ ಕರಮಸಿದಾದ ಪರಾಕ್ರಮಧವಳನ ಮಧ್ಯಪ್ರದೇಶಂ ನಾರಾಯಣಂ ತನ್ನಾಳ್ದಂ ಮಾಡಿ ತಾನಾಳ್ಮಾಡಿಯುಂ ತಾನಳ್ಳಾಡೆಯುಂ ಬರ್ದೆಯರ ಮನವನಳ್ಳಾಡಿಸುವಂತಾದುದು ಗಂಭೀರಗುಣದೊಳಮಾವರ್ತನ ಸಿದ್ಧಿಯೊಳಂ ಜಳನಿಧಿಯನೆ ಪೋಲ್ವ ಶರಣಾಗತ ಜಳನಿಧಿಯ ನಿಮ್ನನಾಭಿ ಚೆಲ್ವಿಂಗೆ ತಾನೆ ನಾಭಿಯಾದುದು ಸಿಂಹಕಟಿತಟಮನಿಳಿಸುವ ರಿಪುಕುರಂಗ ಕಂಠೀರವನ ಕಟಿತಟಮೊಲ್ದು ನೋಡುವ ಗಾಡಿಕಾರ್ತಿಯರ ಕಣ್ಗೆ ಕಾಮನಡ್ಡಣದಂತೆ ದೊಡ್ಡಿತ್ತಾಗಿ ಮೀಱುವುದ್ವೃತ್ತತೆಯನೀಲ್ದುಕೊಂಡಂತುದ್ವೃತ್ತಂಗಳಾದುವು ಉದಾತ್ತನಾರಾಯಣನೂರುಯುಗ್ಮಂಗಳ್ ಮಾನಿನಿಯರ ಮನೋಗಜಂಗಳಂ ಕಟ್ಟಲ್ಕಾಲಾನ ಸ್ತಂಭಂಗಳಾದುವು ಅಂತಪೂರ್ವಂಗಳಾಗಿ ತೊಳಗುವ ಕಿಱುದೊಡೆಗಳುಡುವಡರ್ದನ್ನಮಾರೂಢ ಸರ್ವಜ್ಞನ ದೊಡ್ಡ ಮಾರ್ಗಂಗಳೆಳವಾೞೆಯ ದಿಂಡಿನೊಳ್ ಸಾಣೆಗಟ್ಟಿದಂತಾದುವು ಗೂಢಗುಲ್ಫಪಾರ್ಷ್ಣಿಗಳನೊಳಕೊಂಡ ಮನುಜಮಾಂಧಾತನ ಪೊಱ ಅಡಿಗಳ್ ವಿರೋಧಿ ಭೂಪಾಳರನಡಿಗೆಱಗಿಸಿದ ಸಂತೋಷದೊಳುನ್ನತಂಗಳಾದಂತೆ ಕೂರ್ಮೋನ್ನತಂಗಳಾದುವು ನೊಸಲಂ ಸುಟ್ಟಿ ತೋರ್ಪನ್ನವಪ್ಪುಂಗುಟಂಗಳೊಳ್ ಮಿಂಚಂ ಕೀಲಿಸಿದಂತೆ ತೊಳಗಿ ಪೊಳೆವ ಪ್ರಚಂಡ ಮಾರ್ತಾಂಡನ ಪಾದನಖಂಗಳ್ ಗಂಡರ ಪೆಂಡಿರಂಜಿದಳ್ಕಿದ ಮೊಗಮಂ ನೋಡಲ್ಕೆ ಕನ್ನಡಿಗಳನ್ನವಾದುವು ಪೊಸತಲರ್ದ ಕೆಂದಾವರೆಯ ಕೆಂಪುಮಂ ಮೆಲ್ಪುಮನಿೞ್ಕುಳಿಗೊಂಡು ತೊಳಗುವರಿಕೇಸರಿಯ ಪಾದತಳಂಗಳಡಿಗೆಱಗಿದರಿನರಪಾಲರ ಮಕುಟಮಾಣಿಕ್ಯ ಮರೀಚಿಜಾಲ ಬಾಳಾತಪಂಗಳನಲೆದು ಕೆಂಕಮಾದಂತಾದುವು ಪೊಸವೆಸಱಗೆಯ ಬಣ್ಣದಂತೆ ಸೊಗಯಿಸುವ ಸಾಮಂತಚೂಡಾಮಣಿಯ ಮೆಯ್ಯ ಬಣ್ಣಂ ವಿಧಾತ್ರನೆಂಬ ಚಿತ್ತಾರಿಯ ವರ್ಣಕ್ರಮಂಗೆಯ್ದ ಕದಳೀಗರ್ಭಶ್ಯಾಮಮೆಂಬ ಬಣ್ಣದಂತಾದುದು
(ಅಂತು ನವಯೌವನಂ ನೆಱೆಯೆ ನೆಱೆಯೆ, ನಿಱಿನಿಱಿಗೊಂಡ ಗುಣಾರ್ಣವನ ತಲೆ ನವಿರ್ಗಳ್ ಲಾವಣ್ಯರಸಮನ್ ಇಡಿದು ಇಡಿದು ತೀವಿದ ಕಮಲಾಸನನ ಬೆರಲಚ್ಚುಗಳನ್ನವಾದುವು; ಮೂಱುಂ ಲೋಕದ ಮೂಱು ಪಟ್ಟಮನ್ ಆಳಲ್ಕೆ ತಕ್ಕ ಲಕ್ಷಣ ಸಂಪೂರ್ಣಂ ಅಪ್ಪ ಸಹಜಮನೋಜನ ಲಲಾಟಂ ಪಟ್ಟಂಗಟ್ಟಿದ ನೊಸಲ್ಗೆ ಲಕ್ಷಣಮನ್ ಅಱಸಲ್ ಬೇಡ ಎಂಬಂತಾದುದು; ಕರ್ಬಿನ ಬಿಲ್ಲ ಕೊಂಕಿನಂತೆ ಕೊಂಕಿಯುಂ, ಪರವನಿತೆಯರ ಎರ್ದೆಗೆ ಕೊಂಕಿಲ್ಲದೆಯುಂ ಸೊಗಯಿಸುವ ಸುರತ ಮಕರಧ್ವಜನ ಪುರ್ವುಗಳ್ ಕಾಮದೇವನ ವಿಜಯ ವೈಜಯಂತಿಗಳಂತಾದುವು; ನೀಳ್ಪಂ ಬೆಳ್ಪುಮಂ ತಾಳ್ದಿ ಪರವನಿತೆಯರ ದೆಸೆಗೆ ಕಿಸುಗಣ್ಚಿದಂತೆ ಕಿಸು ಸೆರೆವರಿದು ಸೊಗಯಿಸುವ ಶೌಚಾಂಜನೇಯನ ಕಣ್ಗಳೆಂಬ ಅರಲಂಬುಗಳ್ ಗಣಿಕಾಜನಂಗಳ ಎರ್ದೆಯಂ ನಟ್ಟು ಕೆಂಕಮಾದಂತೆ ಆದುವು; ರಿಪುಜನದ ಪೆರ್ಚಿಂಗಂ ಪರಾಂಗನಾಜನದ ಮೆಚ್ಚಿಂಗಂ ಮೂಗಿಱಿವಂತೆ ಸೊಗಯಿಸುವ ಗಂಧೇಭ ವಿದ್ಯಾಧರನ ಮೂಗು ತನ್ನ ಸುಯ್ಯ ಕಂಪನಲ್ಲದೆ ಪೆಱರ ಕಂಪನ್ ಆಸೆವಡದಂತಾದುದು; ಪೊಸ ಜವ್ವನದ ಮುಂಬಣ್ಣದಂತೆ ಕರ್ಪಂ ಕೈಕೊಂಡು ಕತ್ತುರಿಯಲ್ ಬರೆದಂತಪ್ಪ ವಿಕ್ರಾಂತ ತುಂಗನ ಮೀಸೆಗಳ್ ಆತನ ತೀವ್ರ ಪ್ರತಾಪಾನಳ ಧೂಮಲೇಖೆಯಂತಾದುವು; ಪುಳಿಯೊಳಲೆದ ಪವಳದ ಬಟ್ಟಿನಂತೆ ಸೊಗಯಿಸುವ ಸಂಸಾರಸಾರೋದಯನ ಬಿಂಬಾಧರಂ ಅನಂಗ ರಾಗರಸದ ಉರುಳಿಯಂತೆ ಆದುದು; ರಸದಾಡಿಮದ ಬಿತ್ತುಮಂ ಪೊಸ ಮುತ್ತುಮಂ ಮುಕ್ಕುಳಿಸಿದಂತಪ್ಪ ವಿಬುಧವನಜವನ ಕಳಹಂಸನ ದಂತಪಙ್ತಿಗಳ್ ಅಮೃತಕಿರಣನ ಕಾಂತಿಗಳನ್ ಇಳಿಸುವಂತಾದುವು; ಮಡಿದು ತಂದಿಟ್ಟ ಪೊಸನೆಯ್ದಿಲ ಕಾವನ್ ಆವಗಂ ಗೆಲ್ದ ರತ್ನಕುಂಡಲಂಗಳ ಪೊಳಪನ್ ಒಳಕೊಂಡಂತೆ ನಸುನೇಲ್ವ ಕರ್ಣಾಟೀ ಕರ್ಣಪೂರನ ಪಾಲೆಗಳುಂ ಸರಸ್ವತಿಯಾಡುವ ಲೀಲಾಂದೋಳದಂತಾದುವು; ಬಳ್ವಳ ಬಳೆದ ಎಳಗೌಂಗಿನಂತೆ ಲೋಕದ ಚೆಲ್ವೆಲ್ಲವನ್ ಒಳಕೊಂಡು ರೇಖೆಗೊಂಡ ಲಾಟೀ ಲಲಾಮನ ಪರಿಣದ್ಧ ಕಂಧರಂ ಯುವರಾಜ ಕಂಠಿಕಾಭರಣಮಂ ಕಟ್ಟುವುದರ್ಕೆ ನೋಂತು ತನ್ನ ಚೆಲ್ವನಲ್ಲದೆ ಪೆಱರ ಚೆಲ್ವನ್ ಆಸೆವಡದಂತೆ ಆದುದು;  ಕುಲದ ಚಲದ ಮೈಮೆಯೊಳ್ ತನ್ನನೆ ನೋಡಿದ ಸಂತೋಷದೊಳ್ ಉತ್ಸಾಹಮಾದಂತೆ ಸೊಗಯಿಸುವ ಸಮರೈಕಮೇರುವಿನ ಭುಜಶಿಖರಂಗಳ್ ಕುಲಶಿಖಿರಿ ಶಿಖರಂಗಳಂತೆ ಆದುವು; ವ್ಯಾಳಗಜಂಗಳುಮನ್ ಅಂಕದ ಬರ್ದೆಯರುಮನ್ ಉಗಿಬಗಿಮಾಡಿದ ಸಂತೋಷದೊಳ್ ಬಳ್ವಳ ಬಳೆದ ವಿಕ್ರಾಂತತುಂಗನ ನಿಡುದೋಳ್ಗಳ್ ಗಣಿಕಾಜನಕ್ಕೆ ಕಾಮಪಾಶಂಗಳುಂ ಅರಾತಿಜನಕ್ಕೆ ಯಮಪಾಶಂಗಳುಂ ಆದುವು; ರಕ್ತಾಶೋಕಪಲ್ಲವದಂತೆ ತೊಳತೊಳಗುವ ಆಂಧ್ರೀಕುಚಕಲಶ ಪಲ್ಲವನ ಕರತಳಪಲ್ಲವಂಗಳ್ ಸಮದ ಗಜಕುಂಭಸ್ಥಳಾಸ್ಫಾಳನ ಕರ್ಕಶಂಗಳಾದುವು; ಪೊಡರ್ವ ಪಗೆವರನ್ ಉಱದೆ ಕೊಂಡ ಸಂತೋಷದೊಳಂ ಶ್ರೀಯನೊಳಕೊಂಡ ಸಂತೋಷದೊಳಂ ತೆಕ್ಕನೆ ತೀವಿದ ಕೇರಳೀ ಕೇಳಿ ಕಂದರ್ಪನ ಅಗಲುರಂ ಲಕ್ಷ್ಮಿಗೆ ಕುಲಭವನಮುಂ ನಿವಾಸಭವನಮುಂ ಆದುದು; ಪೊಡರ್ವ ಮಂಡಳಿಕರ ಮನದಂತೆ ಕರಮಸಿದಾದ ಪರಾಕ್ರಮಧವಳನ ಮಧ್ಯಪ್ರದೇಶಂ ನಾರಾಯಣಂ ತನ್ನಾಳ್ದಂ ಮಾಡಿ ತಾನಾಳ್ಮಾಡಿಯುಂ ತಾನಳ್ಳಾಡೆಯುಂ ಬರ್ದೆಯರ ಮನವನ್ ಅಳ್ಳಾಡಿಸುವಂತಾದುದು; ಗಂಭೀರಗುಣದೊಳಂ ಆವರ್ತನ ಸಿದ್ಧಿಯೊಳಂ ಜಳನಿಧಿಯನೆ ಪೋಲ್ವ ಶರಣಾಗತ ಜಳನಿಧಿಯ ನಿಮ್ನನಾಭಿ ಚೆಲ್ವಿಂಗೆ ತಾನೆ ನಾಭಿಯಾದುದು; ಸಿಂಹಕಟಿತಟಮನ್ ಇಳಿಸುವ ರಿಪುಕುರಂಗ ಕಂಠೀರವನ ಕಟಿತಟಂ ಒಲ್ದು ನೋಡುವ ಗಾಡಿಕಾರ್ತಿಯರ ಕಣ್ಗೆ ಕಾಮನಡ್ಡಣದಂತೆ ದೊಡ್ಡಿತ್ತಾಗಿ ಮೀಱುವ ಉದ್ವೃತ್ತತೆಯನ್ ಈಲ್ದುಕೊಂಡಂತೆ ಉದ್ವೃತ್ತಂಗಳಾದುವು; ಉದಾತ್ತನಾರಾಯಣನ ಊರುಯುಗ್ಮಂಗಳ್ ಮಾನಿನಿಯರ ಮನೋಗಜಂಗಳಂ ಕಟ್ಟಲ್ಕೆ ಆಲಾನ ಸ್ತಂಭಂಗಳಾದುವು; ಅಂತು ಅಪೂರ್ವಂಗಳಾಗಿ ತೊಳಗುವ ಕಿಱುದೊಡೆಗಳ್ ಉಡು ಅಡರ್ದನ್ನಂ ಆರೂಢ ಸರ್ವಜ್ಞನ ದೊಡ್ಡ ಮಾರ್ಗಂಗಳ್ ಎಳವಾೞೆಯ ದಿಂಡಿನೊಳ್ ಸಾಣೆಗಟ್ಟಿದಂತಾದುವು; ಗೂಢಗುಲ್ಫಪಾರ್ಷ್ಣಿಗಳನ್ ಒಳಕೊಂಡ ಮನುಜಮಾಂಧಾತನ ಪೊಱ ಅಡಿಗಳ್ ವಿರೋಧಿ ಭೂಪಾಳರನ್ ಅಡಿಗೆ ಎಱಗಿಸಿದ ಸಂತೋಷದೊಳ್ ಉನ್ನತಂಗಳ್ ಆದಂತೆ ಕೂರ್ಮೋನ್ನತಂಗಳಾದುವು; ನೊಸಲಂ ಸುಟ್ಟಿ ತೋರ್ಪನ್ನವಪ್ಪ ಉಂಗುಟಂಗಳೊಳ್ ಮಿಂಚಂ ಕೀಲಿಸಿದಂತೆ ತೊಳಗಿ ಪೊಳೆವ ಪ್ರಚಂಡ ಮಾರ್ತಾಂಡನ ಪಾದನಖಂಗಳ್ ಗಂಡರ ಪೆಂಡಿರ ಅಂಜಿದ ಅಳ್ಕಿದ ಮೊಗಮಂ ನೋಡಲ್ಕೆ ಕನ್ನಡಿಗಳನ್ನವಾದುವು; ಪೊಸತು ಅಲರ್ದ ಕೆಂದಾವರೆಯ ಕೆಂಪುಮಂ ಮೆಲ್ಪುಮನ್ ಇೞ್ಕುಳಿಗೊಂಡು ತೊಳಗುವ ಅರಿಕೇಸರಿಯ ಪಾದತಳಂಗಳ್ ಅಡಿಗೆಱಗಿದ ಅರಿ ನರಪಾಲರ ಮಕುಟಮಾಣಿಕ್ಯ ಮರೀಚಿಜಾಲ ಬಾಳಾತಪಂಗಳನ್ ಅಲೆದು ಕೆಂಕಮಾದಂತಾದುವು; ಪೊಸವೆಸಱ ಅಗೆಯ ಬಣ್ಣದಂತೆ ಸೊಗಯಿಸುವ ಸಾಮಂತಚೂಡಾಮಣಿಯ ಮೆಯ್ಯ ಬಣ್ಣಂ ವಿಧಾತ್ರನೆಂಬ ಚಿತ್ತಾರಿಯ ವರ್ಣಕ್ರಮಂಗೆಯ್ದ ಕದಳೀಗರ್ಭಶ್ಯಾಮಮೆಂಬ ಬಣ್ಣದಂತಾದುದು)
ಹಾಗೆ ಹೊಸ ತಾರುಣ್ಯ ತುಂಬಿ ಬರಲು ಗುಣಾರ್ಣವನ ತಲೆಗೂದಲುಗಳು ಬ್ರಹ್ಮನು ಅವನ್ನು ತಟ್ಟಿ ತಟ್ಟಿ ಲಾವಣ್ಯರಸವನ್ನು ತುಂಬಿಸಿದ್ದರಿಂದಾಗಿ ಮೂಡಿದ ಬೆರಳಚ್ಚುಗಳಂತೆ ಆದವು; ಒಂದೇ ಏಕೆ, ಮೂರು ಲೋಕದ ಮೂರು ರಾಜ್ಯಪಟ್ಟಗಳನ್ನು ಬೇಕಾದರೂ ನಿರ್ವಹಿಸಲು ಬೇಕಾದಷ್ಟು ಲಕ್ಷಣಗಳು ಸಹಜಮನೋಜನ ಹಣೆಯಲ್ಲಿದ್ದವು; ಯಾರೂ ಪಟ್ಟಗಟ್ಟುವ ಹಣೆಯ ಲಕ್ಷಣವನ್ನು ಬೇರೆ ಕಡೆ ಹುಡುಕಬೇಕಾಗಿಲ್ಲ, ಅದು ಇಲ್ಲಿಯೇ ಇದೆ ಎಂದು ಅವನ ಹಣೆ ಸಾರಿ ಹೇಳುತ್ತಿತ್ತು; ಆ ಸುರತ ಮಕರಧ್ವಜನ ಹುಬ್ಬುಗಳು ಕಬ್ಬಿನ ಹಾಗೆ ಡೊಂಕಾಗಿದ್ದರೂ ಸಹ ಪರವನಿತೆಯರಿಗೆ ಅಲ್ಲಿ ಯಾವ ಕೊಂಕೂ ಕಾಣದೆ, ಅವು ಕಾಮನ ಗೆಲುವಿನ ಬಾವುಟಗಳಂತೆ ಸೊಗಯಿಸುತ್ತಿದ್ದವು; ನೀಳವೂ ಶುದ್ಧವೂ ಆಗಿದ್ದ ಆ ಶೌಚಾಂಜನೇಯನ ಕಣ್ಣುಗಳು ಪರವನಿತೆಯರ ಕಡೆಗೆ ನೋಡುವಾಗ ಬಂದ ನಸುಕೋಪದಿಂದ ಎಂಬಂತೆ, ಹೂಬಾಣಗಳಂತೆ ಗಣಿಕೆಯರ ಮನಸ್ಸಿಗೆ ನಾಟಿದ್ದರಿಂದ ಎಂಬಂತೆ,  ಕೆಂಪಾಗಿ ಕಂಡವು; ವೈರಿಗಳು ಹೆಚ್ಚಿಕೊಂಡಿದ್ದಕ್ಕೆ, ಬೇರೆ ಹೆಣ್ಣುಗಳು ಮೆಚ್ಚಿಕೊಂಡದ್ದಕ್ಕೆ ಜುಗುಪ್ಸೆಪಡುವಂತೆ ಶೋಭಿಸುವ ಗಂಧೇಭ ವಿದ್ಯಾಧರನ ಮೂಗು ತನ್ನ ಉಸಿರಿನ ಕಂಪನ್ನಲ್ಲದೆ ಬೇರೆಯವರ ಕಂಪನ್ನು ಆಸೆಪಡದಂತೆ ಆಯಿತು; ಆಗತಾನೇ ಮೂಡಿಬರುತ್ತಿದ್ದ ತಾರುಣ್ಯವನ್ನು ಮೊದಲೇ ಸೂಚಿಸುವಂತೆ ಕಪ್ಪಾಗಿ ಕಸ್ತೂರಿಯಲ್ಲಿ ಬರೆದಂತಿದ್ದ ವಿಕ್ರಾಂತ ತುಂಗನ ಮೀಸೆಗಳು ಆತನ ಪ್ರತಾಪವೆಂಬ ಬೆಂಕಿಯು ಹೊಮ್ಮಿಸುತ್ತಿದ್ದ ಹೊಗೆಯಂತಿದ್ದವು; ಹುಳಿಯಲ್ಲಿ ತೊಳೆದ ಹವಳದ ಗುಂಡಿನಂತೆ (ಮಣಿಯಂತೆ) ಸೊಗಸಾಗಿ ಕಾಣುತ್ತಿದ್ದ ಸಂಸಾರ ಸಾರೋದಯನ ತೊಂಡೆಹಣ್ಣಿನಂಥ ತುಟಿಗಳು ಕಾಮರಸದ ಉಂಡೆಯಂತೆ ಶೋಭಿಸಿದವು; ರಸದಾಳಿಂಬೆಯ ಬೀಜವನ್ನೂ, ಹೊಸ ಮುತ್ತನ್ನೂ ತಿರಸ್ಕರಿಸುವಂಥ ವಿಬುಧವನಜವನಕಳಹಂಸನ ಹಲ್ಲಿನ ಸಾಲು ಚಂದ್ರನ ಕಾಂತಿಯನ್ನೂ ಕಡೆಗಣಿಸುವಂತಿತ್ತು; ಕೊಯ್ದು ತಂದಿಟ್ಟ ಹೊಸ ನೈದಿಲೆಯ ದಂಟಿಗಿಂತಲೂ ಮೆದುವಾದ, ರತ್ನಕುಂಡಲಗಳ ಹೊಳಪಿನಿಂದ ಕೂಡಿ ಸ್ವಲ್ಪವೇ ಅಲುಗಾಡುವ ಕರ್ಣಾಟೀ ಕರ್ಣಪೂರನ ಕಿವಿಯ ಹಾಲೆಗಳು ಸರಸ್ವತಿಯು ಆಡುವ ಉಯ್ಯಾಲೆಯಂತಿದ್ದವು; ಸೊಕ್ಕಿ ಬೆಳೆದ ಅಡಕೆಯ ಸಸಿಯಂತೆ ಲೋಕದ ಎಲ್ಲ ಚೆಲುವನ್ನು ಒಳಗೊಂಡು ರೂಪುಗೊಂಡ ಲಾಟೀಲಲಾಮನ ಸುಪುಷ್ಟವಾದ ಕೊರಳು ಯುವರಾಜ ಸೂಚಕವಾದ ಹಾರವನ್ನು ಧರಿಸಲು ವ್ರತ ಹಿಡಿದು ತನ್ನ ಚೆಲುವನ್ನು ಬಿಟ್ಟು ಬೇರೆಯವರ ಚೆಲುವನ್ನು ಆಸೆಪಡದಂತೆ ಆಯಿತು; ಕುಲದ, ಛಲದ ಪ್ರಭಾವದಿಂದಾಗಿ ಇತರರು ತನ್ನ ಕಡೆಯೇ ನೋಡಿದ್ದರಿಂದ ಉತ್ಸಾಹಗೊಂಡಂತೆ ಸೊಗಯಿಸುವ ಸಮರೈಕಮೇರುವಿನ ಭುಜಶಿಖರಗಳು ಕುಲಪರ್ವತಗಳ ಶಿಖರಗಳಂತಾದವು; ಪಳಗದ ಆನೆಗಳನ್ನೂ, ಪ್ರೌಢ ಸ್ತ್ರೀಯರನ್ನೂ ಹೆದರಿಸಿದ ಸಂತೋಷದಿಂದ ಪುಷ್ಟವಾಗಿ ಬೆಳೆದ ವಿಕ್ರಾಂತ ತುಂಗನ ಉದ್ದವಾದ ತೋಳುಗಳು ಗಣಿಕೆಯರಿಗೆ ಕಾಮಪಾಶಗಳೂ, ವೈರಿಗಳಿಗೆ ಯಮಪಾಶಗಳೂ ಆದವು; ಕೆಂಬಣ್ಣದ ಅಶೋಕದ ಚಿಗುರಿನಂತೆ ಫಳ ಫಳ ಹೊಳೆಯುತ್ತಿದ್ದ ಆಂಧ್ರೀಕುಚಕಲಶಪಲ್ಲವನ ಮೃದುವಾದ ಅಂಗೈಗಳು ಮದಿಸಿದ ಆನೆಗಳ ಕುಂಭಸ್ಥಳಗಳನ್ನು ತಟ್ಟಿ ತಟ್ಟಿ ಒರಟಾದವು; ಮಲೆತ ವೈರಿಗಳನ್ನು ಮಣಿಸಿದ ಸಂತೋಷದಿಂದಲೂ, ಅವರ ಸಂಪತ್ತನ್ನು ಸೂರೆಗೊಂಡ ಸಂತೋಷದಿಂದಲೂ ತುಂಬಿಬಂದ ಕೇರಳೀಕೇಳಿಕಂದರ್ಪನ ಅಗಲವಾದ ಎದೆಯು ಲಕ್ಷ್ಮಿಗೆ ತವರುಮನೆಯೂ ವಾಸದಮನೆಯೂ ಆಯಿತು; …….. …….. ಗಂಭೀರವಾಗಿರುವಂತೆ ಕಾಣಿಸಿಕೊಂಡರೂ ತನ್ನೊಳಗೆ ಸುಳಿಗಳನ್ನು ಹೊಂದಿದ ಸಮುದ್ರದಂತಿರುವ ಶರಣಾಗತ ಜಲನಿಧಿಯ ಆಳವಾದ ಹೊಕ್ಕುಳು ಚೆಲುವಿಗೆ ಕೇಂದ್ರವಾಯಿತು; ಸಿಂಹದ ಸೊಂಟದ ಬುಡವನ್ನೂ ಮೀರಿಸಿದಂತಿದ್ದ ರಿಪುಕುರಂಗ ಕಂಠೀರವನ ಪೃಷ್ಠಗಳು ಮೋಹಿನಿಯರ ಕಣ್ಣಿಗೆ ಕಾಮದ ಗುರಾಣಿಯಂತಿದ್ದು ದಪ್ಪವಾಗಿ, ಗುಂಡಾಗಿದ್ದವು;  ಉದಾತ್ತ ನಾರಾಯಣನ ಎರಡು ತೊಡೆಗಳು ಮಾನಿನಿಯರ ಮನಸ್ಸೆಂಬ ಆನೆಗಳನ್ನು ಕಟ್ಟಿಹಾಕುವ ಕಂಬಗಳಂತೆ ಆದವು; ಆರೂಢ ಸರ್ವಜ್ಞನ ಕಿರುತೊಡೆಗಳಲ್ಲಿದ್ದ ತೊಡೆಜಡ್ಡುಗಳು ಉಡ ಹತ್ತಿದಂತೆಯೂ, ಬಾಳೆಯ ದಿಂಡಿನ ಮೇಲೆ ಆಯುಧವನ್ನು ಮಸೆದರೆ ಆಗುವಂತೆಯೂ ಕಪ್ಪಾಗಿ ಕಾಣುತ್ತಿದ್ದವು.  ಮನುಜ ಮಾಂಧಾತನ ಹೆಜ್ಜೆಯ ಮೇಲುಭಾಗವು ವಿರೋಧಿರಾಜರನ್ನು ಕಾಲಿಗೆರಗಿಸಿಕೊಂಡ ಸಂತೋಷದಿಂದ ಆಮೆಯ ಬೆನ್ನಿನ ಹಾಗೆ ಉಬ್ಬಿಕೊಂಡಿತ್ತು; ಆ ಪ್ರಚಂಡ ಮಾರ್ತಾಂಡನ ಕಾಲ್ಬೆರಳುಗಳು ಹಣೆಯ ಕಡೆಗೆ ಬೆರಳು ಮಾಡಿ ತೋರಿಸುವಂತಿದ್ದವು; ಆ ಕಾಲ್ಬೆರಳಿನ ತುದಿಗೆ ಮಿಂಚಿನ ತುಂಡನ್ನು ಕೂರಿಸಿದಂತಿದ್ದ ಕಾಲುಗುರುಗಳು ಶೂರರ ಪತ್ನಿಯರು ಅಂಜಿ, ಅಳುಕಿ ತಮ್ಮ ಮುಖವನ್ನು ನೋಡಿಕೊಳ್ಳುವ ಕನ್ನಡಿಗಳಂತಾದವು; ಹೊಸತಾಗಿ ಅರಳಿದ ಕೆಂದಾವರೆಯ ಕೆಂಪನ್ನೂ, ಮಿದುವನ್ನೂ ಹೀರಿಕೊಂಡು ಬೆಳಗುವಂತಿದ್ದ ಅರಿಕೇಸರಿಯ ಅಂಗಾಲುಗಳು, ಕಾಲಿಗೆರಗಿದ ವೈರಿರಾಜರ ಕಿರೀಟದಲ್ಲಿದ್ದ ಮಾಣಿಕ್ಯಗಳ ಎಳೆಬಿಸಿಲಿನಂಥ ಕಾಂತಿಯಿಂದ ಕೆಂಪಾದವು; ಹೊಸತಾದ ಹೆಸರುಕಾಳಿನ ಮೊಳಕೆಯ ಬಣ್ಣದಂತೆ ಶೋಭಿಸುವ ಸಾಮಂತಚೂಡಾಮಣಿಯ ಮೈಬಣ್ಣವು ಬ್ರಹ್ಮನೆಂಬ ಚಿತ್ರಕಲಾವಿದನು ಸಂಯೋಜಿಸಿದ ಬಣ್ಣಗಳಿಂದ ಮೂಡಿದ, ಬಾಳೆಯ ಮೋತೆಯಂತೆ ಕೆಂಗಪ್ಪಾದ, ಬಣ್ಣದಂತೆ ಕಂಡಿತು.  

ಚಂ|| ಮನದೊಳೊಱಲ್ದು ಜೋಲ್ದಳಿಪಿ ನೋಡಲೊಡಂ ಸೆಱೆಗೆಯ್ದು ಕಣ್ಣುಮಂ
     ಮನಮುಮನಂಗಜನ್ಮನರಲಂಬುಗಳಿಂದೆ ಮರುಳ್ಚಿ ಬಂದ ಮಾ|
     ವಿನ ಬನದೊಳ್ ತೆರಳ್ಚಿ ಪೊಳೆವಿಂದುಮರೀಚಿಗಳಿಂದುರುಳ್ಚಿ ಪೂ
     ವಿನ ಪಸೆಯೊಳ್ ಪೊರಳ್ಚಿದನಳುರ್ಕೆಯ ಬರ್ದೆಯರಂ ಗುಣಾರ್ಣವಂ ||೪೦||
ಎಂಥ ಗಟ್ಟಿಗಿತ್ತಿಯರಿಗೂ ಕೂಡ ಗುಣಾರ್ಣವನ ಚೆಲುವನ್ನು ನೋಡದಿರಲು ಸಾಧ್ಯವಾಗುತ್ತಿರಲಿಲ್ಲ. ಹಾಗೆ ತಡೆಯಲಾರದೆ ಅವರು ಅವನ ಕಡೆಗೆ ಪ್ರೀತಿಯಿಂದ, ಆಸೆಪಟ್ಟು ನೋಡಿದ ಕೂಡಲೇ ಮನ್ಮಥನು ಅವರ ಮನಸ್ಸು, ಕಣ್ಣುಗಳನ್ನು ಹಿಡಿದು ಹಾಕಿ, ಅವರನ್ನು ಹೂಬಾಣಗಳಿಂದ ಮರುಳುಗೊಳಿಸಿ, ಫಲಿಸಿದ ಮಾವಿನ ಮರದ ಉದ್ಯಾನಗಳಲ್ಲಿ ಅಲೆದಾಡಿಸಿ, ಬೆಳದಿಂಗಳಿನಲ್ಲಿ ಉರುಳಾಡಿಸಿ ಹೂವಿನ ಹಾಸಿಗೆಯಲ್ಲಿ ಹೊರಳಾಡುವಂತೆ ಮಾಡುತ್ತಿದ್ದನು!