ಬುಧವಾರ, ಏಪ್ರಿಲ್ 17, 2019


ಪಂಪಭಾರತ ಆಶ್ವಾಸ ೨ ಪದ್ಯಗಳು ೫೫ರಿಂದ ೭೩


ವ|| ಎಂಬುದುಮಾ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನೇಱಿಸಿಕೊಂಡು ಕುಂಭಸಂಭವಂ ಗಾಂಗೇಯನನಿಂತೆಂದಂ-
(ಎಂಬುದುಂ ಆ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನ್ ಏಱಿಸಿಕೊಂಡು ಕುಂಭಸಂಭವಂ ಗಾಂಗೇಯನನ್ ಇಂತೆಂದಂ) 
ಹಾಗೆಂದಾಗ ಆ ಮಾತಿಗೆ ಮೆಚ್ಚಿ ಜಗದೇಕಮಲ್ಲನಾದ ಅರ್ಜುನನನ್ನು ತೊಡೆಯ ಮೇಲೆ ಕೂರಿಸಿಕೊಂಡು ದ್ರೋಣನು ಭೀಷ್ಮನ ಹತ್ತಿರ ಹೀಗೆ ಹೇಳಿದನು.
ಕಂ|| ಇನಿಬರೊಳಗೀತನೊರ್ವನೆ
     ಧನುರಾಗಮದೆಡೆಗೆ ಕುಶಲನಕ್ಕುಮದರ್ಕೇಂ|
     ಕಿನಿಸದಿರಿಂ ಮುನ್ನಱಿಪಿದೆ
     ನೆನೆ ಭೀಷ್ಮನಲಂಪು ಮಿಗೆ ಮುಗುಳ್ನಗೆ ನಕ್ಕಂ || ೫೫ || 
(‘ಇನಿಬರೊಳಗೆ ಈತನೊರ್ವನೆ ಧನುರಾಗಮದ ಎಡೆಗೆ ಕುಶಲನಕ್ಕುಂ, ಅದರ್ಕೇಂ ಕಿನಿಸದಿರಿಂ, ಮುನ್ನಱಿಪಿದೆನ್’ ಎನೆ, ಭೀಷ್ಮನ್ ಅಲಂಪು ಮಿಗೆ ಮುಗುಳ್ನಗೆ ನಕ್ಕಂ)
‘ಇವರೆಲ್ಲರ ಪೈಕಿ ಇವನೊಬ್ಬನೇ ಧನುರ್ವಿದ್ಯೆಯಲ್ಲಿ ಕುಶಲನಾಗುತ್ತಾನೆ. ನಾನು ಹೀಗೆ ಹೇಳಿದೆನೆಂದು ಬೇಸರಿಸಬೇಡಿ. ಇರುವ ವಿಷಯವನ್ನು ಮೊದಲೇ ಹೇಳಿದ್ದೇನೆ, ಅಷ್ಟೆ’ ಎಂದು ದ್ರೋಣನು ಹೇಳಿದಾಗ, ಆ ಮಾತನ್ನು ಕೇಳಿ ಭೀಷ್ಮನು ಸಂತೋಷದಿಂದ ಮುಖದಲ್ಲಿ ನಗೆಯ ಮೊಗ್ಗರಳಿಸಿದನು.
ವ|| ಅಂತು ದ್ರೋಣಾಚಾರ್ಯನ್ ಆಚಾರ್ಯ ಪದವಿಯಂ ಕೈಕೊಂಡು ಪಾಂಡವ ಕೌರವರ್ಗೆ ಚತುರಂಗ ಧನುರ್ವೇದಮುಮಂ ದಿವ್ಯಾಸ್ತ್ರಂಗಳುಮಂ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳುಮಂ ಗಜ ರಥ ತುರಗ ಪದಾತಿ ಯುದ್ಧಂಗಳುಮನುಪದೇಶಂಗೆಯ್ಯುತ್ತುಮಿರೆಯಿರೆ-
(ಅಂತು ದ್ರೋಣಾಚಾರ್ಯನ್ ಆಚಾರ್ಯ ಪದವಿಯಂ ಕೈಕೊಂಡು ಪಾಂಡವ ಕೌರವರ್ಗೆ ಚತುರಂಗ ಧನುರ್ವೇದಮುಮಂ ದಿವ್ಯಾಸ್ತ್ರಂಗಳುಮಂ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧ ಆಯುಧಂಗಳುಮಂ, ಗಜ ರಥ ತುರಗ ಪದಾತಿ ಯುದ್ಧಂಗಳುಮನ್ ಉಪದೇಶಂಗೆಯ್ಯುತ್ತುಂ ಇರೆ ಇರೆ)
ಹಾಗೆ ದ್ರೋಣಾಚಾರ್ಯನು ಆಚಾರ್ಯ ಪದವಿಯನ್ನು ಸ್ವೀಕರಿಸಿ, ಪಾಂಡವರಿಗೂ ಕೌರವರಿಗೂ ಬಿಲ್ವಿದ್ಯೆಯ ನಾಲ್ಕು ಭಾಗಗಳನ್ನೂ, ದಿವ್ಯಾಸ್ತ್ರಗಳನ್ನೂ,   ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದೆ ಮುಂತಾದ ವಿವಿಧ ಆಯುಧಗಳನ್ನೂ, ಆನೆ ರಥ ಕುದುರೆ ಸೈನಿಕರ ಯುದ್ಧಗಳನ್ನೂ ಕಲಿಸುತ್ತಿದ್ದಾಗ-
ಕಂ|| ಯಾದವ ವಂಶಜರುಂ ನಾ
     ನಾ ದೇಶ ನರೇಂದ್ರರುಂ ಘಟೋದ್ಭವನ ಧನು|
     ರ್ವೇದಮನೆ ಕಲಲ್ ಬಂದಾ
     ಳಾದರ್ ವಿದ್ಯಾಪ್ರಭಾವಮಾ ದೊರೆತೆ ವಲಂ || ೫೬ ||
(ಯಾದವ ವಂಶಜರುಂ ನಾನಾ ದೇಶ ನರೇಂದ್ರರುಂ ಘಟೋದ್ಭವನ ಧನುರ್ವೇದಮನೆ ಕಲಲ್ ಬಂದು ಆಳಾದರ್, ವಿದ್ಯಾಪ್ರಭಾವಂ ಆ ದೊರೆತೆ ವಲಂ?)
ಯಾದವ ವಂಶದವರು, ಬೇರೆ ಬೇರೆ ದೇಶಗಳ ರಾಜರುಗಳು ದ್ರೋಣಾಚಾರ್ಯರಲ್ಲಿ ಬಿಲ್ವಿದ್ಯೆಯನ್ನು ಕಲಿಯಲು ಬಂದು, ಅವರ ಸೇವಕರಾದರು. ವಿದ್ಯೆಯ ಮಹತ್ವವೇ ಅಂಥದ್ದಲ್ಲವೆ?
    
ಕಂ|| ದ್ರೋಣಂ ಗಡಮಿಷುವಿದ್ಯೆಗೆ
     ಜಾಣಂ ಗಡಮೆಂದು ಕೇಳ್ದು ಕೌರವರ್ಗೆಲ್ಲಂ|
     ಪ್ರಾಣಂ ಬರ್ಪಾಕೃತಿಯೊಳೆ
     ಬಾಣಾಸನ ಬಾಣಪಾಣಿ ಕರ್ಣಂ ಬಂದಂ || ೫೭ ||
(‘ದ್ರೋಣಂ ಗಡಂ ಇಷುವಿದ್ಯೆಗೆ ಜಾಣಂ ಗಡಂ’ ಎಂದು ಕೇಳ್ದು ಕೌರವರ್ಗೆಲ್ಲಂ ಪ್ರಾಣಂ ಬರ್ಪ ಆಕೃತಿಯೊಳೆ ಬಾಣಾಸನ ಬಾಣಪಾಣಿ ಕರ್ಣಂ ಬಂದಂ)
‘ದ್ರೋಣನಂತೆ! ಬಿಲ್ವಿದ್ಯೆಯಲ್ಲಿ ಬಹಳ ತಿಳಿದವನಂತೆ!’ ಎಂಬ ಸುದ್ದಿಯನ್ನು ಕೇಳಿ ಕೌರವರೆಲ್ಲರಿಗೂ ಜೀವ ಬರುವ ರೀತಿಯಲ್ಲಿ, ಬಿಲ್ಲು ಬಾಣಗಳನ್ನು ಕೈಯಲ್ಲಿ ಹಿಡಿದ ಕರ್ಣನು ದ್ರೋಣರ ಬಳಿಗೆ ಬಂದನು.
ವ|| ಅಂತು ಬಂದು ವೈರಿಗಜಘಟಾವಿಘಟನನೊಳ್ ವಿಘಟಿಸಿ ಬಿಲ್ಗಲ್ತು
ಹಾಗೆ ಬಂದು ‘ವೈರಿಗಜ ಘಟಾ ವಿಘಟನ’ ಎಂದು ಹೆಸರು ಪಡೆದ ಅರ್ಜುನನೊಂದಿಗೆ ಸ್ಪರ್ಧಿಸಿ ಬಿಲ್ವಿದ್ಯೆಯನ್ನು ಕಲಿತು-
ಕಂ|| ಕೆಳೆಯುಂ ಗುಱಿಯುಂ ಗೊಟ್ಟಿಯು
     ಮಳವಿಗೆ ಪಿಱಿದಾಗೆ ತನಗೆ ದುರ್ಯೋಧನನೊಳ್|
     ಮುಳಿಸುಂ ನೋವುಂ ಕಲುಷಮು
     ಮಳುಂಬಮೆನೆ ತನಗರಾತಿಕಾಳಾನಳನೊಳ್ || ೫೮ ||
(ಕೆಳೆಯುಂ ಗುಱಿಯುಂ ಗೊಟ್ಟಿಯುಂ ಅಳವಿಗೆ ಪಿಱಿದಾಗೆ ತನಗೆ ದುರ್ಯೋಧನನೊಳ್, ಮುಳಿಸುಂ ನೋವುಂ ಕಲುಷಮುಂ ಅಳುಂಬಂ ಎನೆ ತನಗೆ ಅರಾತಿಕಾಳಾನಳನೊಳ್)
ಕರ್ಣನಿಗೆ ದುರ್ಯೋಧನನೊಂದಿಗೆ ಗೆಳೆತನ, ಸಹವಾಸಗಳು ಹೆಚ್ಚಿದವು. ಅವರಿಬ್ಬರಿಗೂ ಸಮಾನ ಉದ್ದೇಶಗಳಿದ್ದವು. ಅದೇ ಹೊತ್ತಿಗೆ ಅರ್ಜುನನೊಂದಿಗೆ ಕರ್ಣನಿಗೆ ಸಿಟ್ಟು, ನೋವು, ಕಹಿಗಳು ಬೆಳೆದವು.
ವ|| ಅಂತು ಕರ್ಣಂ ಗುಣಾರ್ಣವನೊಳ್ ಸೆಣಸಿ ಪಗೆಯನಭ್ಯಾಸಂಗೆಯ್ವಂತೆ ವಿದ್ಯಾಭ್ಯಾಸಂಗೆಯ್ಯೆ
(ಅಂತು ಕರ್ಣಂ ಗುಣಾರ್ಣವನೊಳ್ ಸೆಣಸಿ ಪಗೆಯನ್ ಅಭ್ಯಾಸಂಗೆಯ್ವಂತೆ ವಿದ್ಯಾಭ್ಯಾಸಂಗೆಯ್ಯೆ)
ಹಾಗೆ ಕರ್ಣನು ಅರ್ಜುನನ ಜತೆ ಸೆಣಸಿ ವೈರವನ್ನೇ ಅಭ್ಯಾಸ ಮಾಡುವವನಂತೆ ವಿದ್ಯಾಭ್ಯಾಸ ಮಾಡಲು-
ಕಂ|| ಮನದೊಳೊಗೆದನ್ಯಜನ್ಮದ
     ಮುನಿಸದು ಕಣ್ಣಿಂ ತುಳುಂಕೆ ಸೈರಿಸದವನು|
     ರ್ವಿನ ಕಲಿತನಕ್ಕೆ ದುರ್ಯೋ
     ಧನನುಂ ಭೀಮನೊಳೆ ಸೆಣಸಿ ಗದೆಯಂ ಕಲ್ತಂ || ೫೯ ||
(ಮನದೊಳ್ ಒಗೆದ ಅನ್ಯಜನ್ಮದ ಮುನಿಸದು ಕಣ್ಣಿಂ ತುಳುಂಕೆ ಸೈರಿಸದೆ ಅವನ  ಉರ್ವಿನ ಕಲಿತನಕ್ಕೆ ದುರ್ಯೋಧನನುಂ ಭೀಮನೊಳೆ ಸೆಣಸಿ ಗದೆಯಂ ಕಲ್ತಂ)
ಗದಾವಿದ್ಯೆಯನ್ನು ಕಲಿಯುವಲ್ಲಿ ಭೀಮನಿಗೆ ಎಂಥಾ ಆಸಕ್ತಿ ಇತ್ತೆಂದರೆ, ಅವನ ಕಣ್ಣುಗಳು ತನ್ನ ಮೇಲೆ ಹಿಂದಿನ ಜನ್ಮದ ದ್ವೇಷವನ್ನು ತುಳುಕಿಸುತ್ತಿವೆಯೋ ಎಂಬಂತೆ ದುರ್ಯೋಧನನಿಗೆ ಕಾಣಿಸುತ್ತಿತ್ತು. ಭೀಮನ ಮೇಲಿನ ಅದೇ ಹಟದಿಂದ ದುರ್ಯೋಧನನೂ ಸಹ ಗದಾವಿದ್ಯೆಯನ್ನು ತನ್ನ ಕೈವಶ ಮಾಡಿಕೊಂಡನು.
ವ|| ಅಂತು ಭಾರದ್ವಾಜನಾಗಾಮಿಕ ಸಂಗ್ರಾಮರಂಗಕ್ಕೆ ಪಾತ್ರಂಗಳಂ ಸಮೆಯಿಸುವ ಸೂತ್ರಧಾರನಂತೆ
ಶಸ್ತ್ರವಿದ್ಯಾಭ್ಯಾಸಂಗೆಯ್ಸುತ್ತಿರೆ ದೇಶಾಧೀಶ್ವರರಪ್ಪ ಪಲಂಬರ್ ರಾಜಕುಮಾರರ ನಡುವೆ ತಾರಾಗಣಂಗಳ ನಡುವಣ ಸಕಳ ಕಳಾಧರನಂತೆ ಶಸ್ತ್ರಕಳಾಧರನಾಗಿ ತನ್ನುಮಂ ಗೆಲೆವಂದ ಸಾಮಂತ ಚೂಡಾಮಣಿಯ ಶರಪರಿಣತಿಯನಾರಯಲೆಂದು-
ಅಂತು ಭಾರದ್ವಾಜನ್ ಆಗಾಮಿಕ ಸಂಗ್ರಾಮರಂಗಕ್ಕೆ ಪಾತ್ರಂಗಳಂ ಸಮೆಯಿಸುವ ಸೂತ್ರಧಾರನಂತೆ
ಶಸ್ತ್ರವಿದ್ಯಾಭ್ಯಾಸಂ ಗೆಯ್ಸುತ್ತಿರೆ ದೇಶಾಧೀಶ್ವರರ್ ಅಪ್ಪ ಪಲಂಬರ್ ರಾಜಕುಮಾರರ ನಡುವೆ ತಾರಾಗಣಂಗಳ ನಡುವಣ ಸಕಳ ಕಳಾಧರನಂತೆ ಶಸ್ತ್ರಕಳಾಧರನಾಗಿ ತನ್ನುಮಂ ಗೆಲೆವಂದ ಸಾಮಂತ ಚೂಡಾಮಣಿಯ ಶರಪರಿಣತಿಯನ್ ಆರಯಲೆಂದು)
ಹೀಗೆ ಮುಂದೆ ಸಂಭವಿಸಲಿರುವ ಮಹಾಯುದ್ಧಕ್ಕೆ ಪಾತ್ರಗಳನ್ನು ಅಣಿಗೊಳಿಸುವ ಸೂತ್ರಧಾರನಂತೆ ದ್ರೋಣನು ಶಸ್ತ್ರವಿದ್ಯಾಭ್ಯಾಸ ಮಾಡಿಸುತ್ತಿದ್ದನು. ಆಗ ಹಲವು ದೇಶಗಳ ಅರಸರ ನಡುವೆ, ನಕ್ಷತ್ರಗಳ ನಡುವೆ ಶೋಭಿಸುವ ಕಲೆಗಳಿಂದ ಕೂಡಿದ ಚಂದ್ರನಂತೆ, ತನ್ನನ್ನು ಸಹ ಸೋಲಿಸಬಲ್ಲ, ಶಸ್ತ್ರಕಲಾಪರಿಣತನಾದ ಅರ್ಜುನನ ಪ್ರಾವೀಣ್ಯವನ್ನು ಪರೀಕ್ಷಿಸಬೇಕೆಂದು-
ಕಂ|| ಛಾಯಾಲಕ್ಷ್ಯಮನೊಡ್ಡಿಯು
     ಮಾಯದ ನೀರೊಳಗೆ ತನ್ನನಡಸಿದ ನೆಗೞಂ|
     ಬಾಯೞಿವಿನಮಿಸಿಸಿಯುಮರೆ
     ಹೋಯಜ ಬಾಪ್ಪೆಂದು ಹರಿಗನಂ ಗುರು ಪೊಗೞ್ದಂ || ೬೦ ||
(ಛಾಯಾಲಕ್ಷ್ಯಮನ್ ಒಡ್ಡಿಯುಂ ಆಯದ ನೀರೊಳಗೆ ತನ್ನನ್ ಅಡಸಿದ ನೆಗೞಂ ಬಾಯಿ ಅೞಿವಿನಂ ಇಸಿಸಿಯುಂ ಅರೆ! ಹೋ! ಅಜ! ಬಾಪ್! ಎಂದು ಹರಿಗನಂ ಗುರು ಪೊಗೞ್ದಂ)
ಪ್ರತಿಬಿಂಬದಲ್ಲಿ ಕಾಣುವ ವಸ್ತುವಿಗೆ ಗುರಿ ಇಟ್ಟು ಬಾಣ ಬಿಡುವ ಪರೀಕ್ಷೆಯಲ್ಲಿ, ಗುರುವಾದ ತಾನು ತಕ್ಕ ಪ್ರಮಾಣದ ನೀರಿನಲ್ಲಿದ್ದಾಗ ತನ್ನನ್ನು ಹಿಡಿದುಕೊಂಡ್ ಮೊಸಳೆಯ ಬಾಯನ್ನೇ ಛಿದ್ರಿಸುವ ಪರೀಕ್ಷೆಯನ್ನು ದ್ರೋಣನು ಅರ್ಜುನನಿಗೆ ಒಡ್ಡಿದನು. ಅರ್ಜುನನು ಆ ಗುರಿಗಳನ್ನು ಸಾಧಿಸಿ ತೋರಿಸಿದಾಗ ದ್ರೋಣನು ಅವನನ್ನು ಅರೆ! ಹೋ! ಅಜ! ಬಾಪ್! ಎಂದು ಮುಂತಾಗಿ ಮನಸಾರೆ ಹೊಗಳಿದನು.
ವ|| ಅಂತು ಪೊಗೞ್ದು ತನ್ನ ಪಗೆವನಪ್ಪ ದ್ರುಪದನನೀತನಮೋಘಂ ಗೆಲಲ್ ನೆಱಿಗುಮೆಂದು ನಿಶ್ಚೈಸಿ
(ಅಂತು ಪೊಗೞ್ದುತನ್ನ ಪಗೆವನ್ ಅಪ್ಪ ದ್ರುಪದನನ್ ಈತನ್ ಅಮೋಘಂ ಗೆಲಲ್ ನೆಱಿಗುಂ’ ಎಂದು ನಿಶ್ಚೈಸಿ)
ಚಂ|| ಅಣುಗಿನೊಳೆನ್ನ ಚಟ್ಟರೊಳಗೀತನೆ ಜೆಟ್ಟಿಗನೆಂದು ವಿದ್ದೆಯಂ
     ಗುಣಕಱುಗೊಂಡು ಕೊಟ್ಟೆನಗೆ ಸಂತಸಮಪ್ಪಿನಮೀವ ನಿನ್ನ ದ|
     ಕ್ಷಿಣೆಯದು ಬೇಗಮಾ ದ್ರುಪದನಂ ಗಡ ಕೋಡಗಗಟ್ಟುಗಟ್ಟಿ ತಂ
     ದಣಿಯರಮೊಪ್ಪಿಸಿಂತಿದನೆ ಬೇಡಿದೆನಾಂ ಪರಸೈನ್ಯಭೈರವಾ || ೬೧ ||
(‘ಅಣುಗಿನೊಳ್ ಎನ್ನ ಚಟ್ಟರೊಳಗೆ ಈತನೆ ಜೆಟ್ಟಿಗನೆಂದು ವಿದ್ದೆಯಂ ಗುಣಕಱುಗೊಂಡು ಕೊಟ್ಟ ಎನಗೆ ಸಂತಸಂ ಅಪ್ಪಿನಂ ಈವ ನಿನ್ನ ದಕ್ಷಿಣೆಯದು, ಬೇಗಂ ಆ ದ್ರುಪದನಂ ಗಡ ಕೋಡಗಗಟ್ಟುಗಟ್ಟಿ ತಂದು ಅಣಿಯರಂ ಒಪ್ಪಿಸು, ಇಂತಿದನೆ ಬೇಡಿದೆನ್ ಆಂ ಪರಸೈನ್ಯಭೈರವಾ’)
 ನನ್ನ ಶಿಷ್ಯರ ಪೈಕಿ ನೀನೇ ಎಲ್ಲರಿಗಿಂತ ಬಲಶಾಲಿ ಎಂದು ನಾನು ನಿನಗೆ ಪ್ರೀತಿಯಿಂದ ವಿದ್ಯೆಯನ್ನು ಧಾರೆ ಎರೆದಿದ್ದೇನೆ. ಈಗ ನನಗೆ ಸಂತೋಷವಾಗುವಂಥ ಗುರುದಕ್ಷಿಣೆಯನ್ನು ನೀನು ಕೊಡಬೇಕು: ಬೇಗ ಹೋಗಿ ಆ ದ್ರುಪದನನ್ನು ಕಪಿಯನ್ನು ಕಟ್ಟುವಂತೆ ಕಟ್ಟಿ ತಂದು ನನಗೆ ಒಪ್ಪಿಸಬೇಕು. ಇದೇ ನಾನು ನಿನ್ನಿಂದ ಕೇಳುವ ಗುರುದಕ್ಷಿಣೆ.
ವ|| ಎಂಬುದುಮೀ ಬೆಸನದಾವುದು ಗಹನಮೆಂದು ಪೂಣ್ದು ಪೋಗಿ-
(ಎಂಬುದುಂ ‘ಈ ಬೆಸನ್ ಅದು ಆವುದು ಗಹನಂ?’ ಎಂದು ಪೂಣ್ದು ಪೋಗಿ)
ಎಂದಾಗ, ಅರ್ಜುನನು ‘ಅದು ಯಾವ ದೊಡ್ಡ ಕೆಲಸ?’ ಎಂದು ಪ್ರತಿಜ್ಞೆ ಮಾಡಿ, ಹೋಗಿ- 
ಮ|| ಒಡವಂದಂಕದ ಕೌರವರ್ ದ್ರುಪದನಂಬೇಱಿಂಗೆ ಮೆಯ್ಯೊಡ್ಡದೊ
     ಡ್ಡೊಡೆದೋಡುತ್ತಿರೆ ಸೂಸೆ ಬೀೞ್ವ ತಲೆಗಳ್ ಸೂೞ್ಪಟ್ಟನಾಗಳ್ ಜವಂ|
     ಪಿಡಿದೀಡಾಡುವ ಮಾೞ್ಕೆಯಂತೆ ಪಲರಂ ಕೊಂದಿಕ್ಕಿ ಮೆಯ್ಮುಟ್ಟೆವಂ
     ದೆಡೆಯೊಳ್ ಮಾಣದುರುಳ್ಚಿ ಕಟ್ಟಿ ರಿಪುವಂ ಮುಂದಿಕ್ಕಿದಂ ದ್ರೋಣನಾ || ೬೨ ||
(ಒಡವಂದ ಅಂಕದ ಕೌರವರ್ ದ್ರುಪದನ ಅಂಬೇಱಿಂಗೆ ಮೆಯ್ಯೊಡ್ಡದೆ ಒಡ್ಡು ಒಡೆದು ಓಡುತ್ತಿರೆ, ಸೂಸೆ ಬೀೞ್ವ ತಲೆಗಳ್, ಸೂೞ್ಪಟ್ಟನ್ ಆಗಳ್ ಜವಂ ಪಿಡಿದು ಈಡಾಡುವ ಮಾೞ್ಕೆಯಂತೆ ಪಲರಂ ಕೊಂದಿಕ್ಕಿ ಮೆಯ್ಮುಟ್ಟೆವಂದ ಎಡೆಯೊಳ್ ಮಾಣದೆ ಉರುಳ್ಚಿ ಕಟ್ಟಿ ರಿಪುವಂ ಮುಂದಿಕ್ಕಿದಂ ದ್ರೋಣನಾ)
(ಅರ್ಜುನನ) ಜೊತೆಗೆ ಬಂದ ಕೌರವ ವೀರರು ದ್ರುಪದನ ಬಾಣಯುದ್ಧಕ್ಕೆ ಮೈಯೊಡ್ಡಲಾಗದೆ ಚಲ್ಲಾಪಿಲ್ಲಿಯಾಗಿ ಓಡಿದರು. ಅವರ ತಲೆಗಳು ಅಲ್ಲಲ್ಲಿ ಚದರಿ ಬಿದ್ದವು. ಈಗ ಯುದ್ಧದ ಸರದಿ ಅರ್ಜುನದಾಯಿತು. ಅವನು ಯಮನೇ ಹಿಡಿದು ಎಸೆಯುತ್ತಿದ್ದಾನೆ ಎಂಬಂತೆ ದ್ರುಪದನ ಕಡೆಯ ಹಲವರನ್ನು ಕೊಂದು ಹಾಕಿದನು. ತನ್ನ ಮೈಯ ಸಮೀಪಕ್ಕೆ ಬಂದ ದ್ರುಪದನನ್ನು ಬಿಡದೆ ಹಿಡಿದು ಉರುಳಿಸಿ, ಕಟ್ಟಿ ತಂದು ಗುರುವಿನ ಎದುರಿಗೆ ಹಾಕಿದನು.
ವ|| ಆಗಳಾ ಕುಂಭಸಂಭವಂ ಪರಾಕ್ರಮಧವಳನ ಪರಾಕ್ರಮಕ್ಕೆ ಮೆಚ್ಚಿ ಕದಂಪಂ ಕರ್ಚಿ ದ್ರುಪದನಂ ತನ್ನ ಮಂಚದ ಕಾಲೊಳ್ ಕಟ್ಟವೇೞ್ದು ತಲೆಯ ಮೇಲೆ ಕಾಲನವಷ್ಟಂಭದಿಂ ನೀಡಿ-
(ಆಗಳ್ ಆ ಕುಂಭಸಂಭವಂ ಪರಾಕ್ರಮಧವಳನ ಪರಾಕ್ರಮಕ್ಕೆ ಮೆಚ್ಚಿ, ಕದಂಪಂ ಕರ್ಚಿ, ದ್ರುಪದನಂ ತನ್ನ ಮಂಚದ ಕಾಲೊಳ್ ಕಟ್ಟವೇೞ್ದು ತಲೆಯ ಮೇಲೆ ಕಾಲನ್ ಅವಷ್ಟಂಭದಿಂ ನೀಡಿ)
ಆಗ ಆ ದ್ರೋಣನು ಅರ್ಜುನನ ಪರಾಕ್ರಮಕ್ಕೆ ಮೆಚ್ಚಿ, ಅವನ ಕೆನ್ನೆಗೆ ಮುತ್ತಿಟ್ಟು, ದ್ರುಪದನನ್ನು ತನ್ನ ಮಂಚದ ಕಾಲಿಗೆ ಕಟ್ಟಲು ಹೇಳಿ, ಗರ್ವದಿಂದ ತನ್ನ ಕಾಲನ್ನು ದ್ರುಪದನ ತಲೆಯ ಮೇಲೆ ನೀಡಿ- 
ಕಂ|| ಸಿರಿಮೆಯ್ಯೊಳಗಂದಱಿವಿರೆ
     ನೆರವಿಯೊಳಾರಱಿವರೊರ್ಮೆ ಕಂಡರನಱಿಯ|
     ಲ್ಕರಿದೆಮ್ಮಂ ಬಡ ಪಾರ್ವರ
     ನರಸರೆ ನೀವೀಗಳಱಿವಿರಱಿಯಿರೊ ಪೇೞಿಂ || ೬೩ ||
(ಸಿರಿಮೆಯ್ಯೊಳಗೆ ಅಂದಱಿವಿರೆ, ನೆರವಿಯೊಳ್ ಆರಱಿವರ್ ಒರ್ಮೆ ಕಂಡರನ್? ಅಱಿಯಲ್ಕೆ ಅರಿದು. ಎಮ್ಮಂ, ಬಡ ಪಾರ್ವರನ್, ಅರಸರೆ ನೀವ್ ಈಗಳ್ ಅಱಿವಿರಿ, ಅಱಿಯಿರೊ? ಪೇೞಿಂ!)
ಅಂದು ಶ್ರೀಮಂತಿಕೆಯಲ್ಲಿ ಮೆರೆಯುತ್ತಿದ್ದ ನಿಮಗೆ, ಸಭೆಯಲ್ಲಿ ಕಂಡ ನನ್ನ ಗುರುತು ಸಿಕ್ಕಿರಲಿಲ್ಲ. ಹೌದು! ಎಂದೋ ಒಮ್ಮೆ ಮಾತ್ರ ಕಂಡವರನ್ನು ಗುರುತಿಟ್ಟುಕೊಳ್ಳುವುದು ಯಾರಿಗೆ ತಾನೇ ಸಾಧ್ಯ? ಹೋಗಲಿ! ಅರಸರೆ! ಈ ಬಡಹಾರುವನ ಗುರುತು ಇಂದಾದರೂ ಸಿಕ್ಕಿತೋ ಅಥವಾ ಈಗಲೂ ಸಿಗಲಿಲ್ಲವೋ? ಹೇಳಿ! ಮಾತಾಡಿ!
ವ|| ಎಂದು ಸಾಯೆ ಸರಸಂ ನುಡಿದು ಮತ್ತಮಿಂತೆಂದಂ-
(ಎಂದು ಸಾಯೆ ಸರಸಂ ನುಡಿದು ಮತ್ತಂ ಇಂತೆಂದಂ)
ಎಂದು ಒಳ್ಳೆಯ ಮಾತಿನಲ್ಲೇ ಕೊಂದು, ಮತ್ತೂ ಹೀಗೆಂದನು- 

ಕಂ|| ಆದಿ ಕ್ಷತ್ರಿಯರೇ ನೀ
     ಮಾದಿತ್ಯನನಿಳಿಪ ತೇಜರಿರ್ ಪಾರ್ವನ ಕಾಲ್|
     ಮೋದೆ ನಡುತಲೆಯಲಿರ್ಪುದು
     ಮಾದುದು ನಿಮಗೆಂದು ನುಡಿದು ಕಾಯ್ಪಿನೊಳೊದೆದಂ || ೬೪ ||
(ಆದಿ ಕ್ಷತ್ರಿಯರೇ ನೀಂ ಆದಿತ್ಯನನ್ ಇಳಿಪ ತೇಜರಿರ್! ಪಾರ್ವನ ಕಾಲ್ ಮೋದೆ ನಡುತಲೆಯಲಿ ಇರ್ಪುದುಂ ಆದುದು ನಿಮಗೆ! ಎಂದು ನುಡಿದು ಕಾಯ್ಪಿನೊಳ್ ಒದೆದಂ)
‘ನೀವು ಕ್ಷತ್ರಿಯರಲ್ಲವೆ? (ಈ ಹಿಂದೆ ದ್ರುಪದನು ದ್ರೋಣನನ್ನು ಹಾರುವನೆಂದು ಹೀಗಳೆದಿದ್ದನ್ನು ನೆನಪಿಸಿಕೊಳ್ಳಬಹುದು). ಸೂರ್ಯನಿಗೂ ಮಿಗಿಲಾದ ತೇಜಸ್ವಿಗಳು! ಈಗ ಹಾರುವನ ಕಾಲು, ಒದೆಯಲು ತಯಾರಾಗಿ, ನಿಮ್ಮ ನೆತ್ತಿಯ ಮೇಲೆ ಚಾಚಿಕೊಂಡಿದೆಯಲ್ಲ!’ ಎಂದು ಕೋಪದಿಂದ ಒದೆದನು.
ವ|| ಒದೆದು ನಿನ್ನನಿನಿತು ಪರಿಭವಂಬಡಿಸಿದುದು ಸಾಲ್ಗುಂ ನಿನ್ನಂ ಕೊಲಲಾಗದು ಕೊಂದೊಡೆ ಮೇಲಪ್ಪ ಪಗೆಗಂಜಿ ಕೊಂದಂತಾಗಿರ್ಕುಮೆಂದು ಕಟ್ಟಿದ ಕಟ್ಟುಗಳೆಲ್ಲಮಂ ತಾನೆ ಬಿಟ್ಟು ಕಳೆದು ಪೋಗೆಂಬುದುಂ ದ್ರುಪದಂ ಪರಿಭವಾನಳನಳವಲ್ಲದಳುರೆ ನಿನ್ನಂ ಕೊಲ್ವನ್ನನೊರ್ವ ಮಗನುಮಂ ವಿಕ್ರಮಾರ್ಜುನಂಗೆ ಪೆಂಡತಿಯಪ್ಪನ್ನಳೊರ್ವ ಮಗಳುಮಂ ಪಡೆದಲ್ಲದಿರೆನೆಂದು ಮಹಾ ಪ್ರತಿಜ್ಞಾರೂಢನಾಗಿ ಪೋದನಿತ್ತ ಭಾರದ್ವಾಜಂ ಪಾಂಡವ ಕೌರವರ್ಕಳ ಮೆಯ್ಯೊಳೆ ವಿದ್ದೆಯಂ ನೆಱಿಯೆ ಸಂಕ್ರಮಿಸಿದ ತನ್ನ ವಿದ್ಯಾಮಹಿಮೆಯಂ ಮೆಱಿಯಲ್ಕೆ ಬಾಹ್ಲೀಕ ಭೂರಿಶ್ರವಸ್ಸೋಮದತ್ತ ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಿಂತೆಂದಂ
(ಒದೆದು,  ‘ನಿನ್ನನ್ ಇನಿತು ಪರಿಭವಂಬಡಿಸಿದುದು ಸಾಲ್ಗುಂ; ನಿನ್ನಂ ಕೊಲಲಾಗದು; ಕೊಂದೊಡೆ ಮೇಲಪ್ಪ ಪಗೆಗಂಜಿ ಕೊಂದಂತಾಗಿರ್ಕುಂ’ ಎಂದು ಕಟ್ಟಿದ ಕಟ್ಟುಗಳೆಲ್ಲಮಂ ತಾನೆ ಬಿಟ್ಟು ಕಳೆದುಪೋಗು’ ಎಂಬುದುಂ, ದ್ರುಪದಂ ಪರಿಭವ ಅನಳನ್ ಅಳವಲ್ಲದೆ ಅಳುರೆ ‘ನಿನ್ನಂ ಕೊಲ್ವನ್ನನ್ ಒರ್ವ ಮಗನುಮಂ ವಿಕ್ರಮಾರ್ಜುನಂಗೆ ಪೆಂಡತಿಯಪ್ಪನ್ನಳ್ ಒರ್ವ ಮಗಳುಮಂ ಪಡೆದಲ್ಲದೆ ಇರೆನೆಂದು ಮಹಾ ಪ್ರತಿಜ್ಞಾರೂಢನಾಗಿ ಪೋದನ್. ಇತ್ತ ಭಾರದ್ವಾಜಂ ಪಾಂಡವ ಕೌರವರ್ಕಳ ಮೆಯ್ಯೊಳೆ ವಿದ್ದೆಯಂ ನೆಱಿಯೆ ಸಂಕ್ರಮಿಸಿದ ತನ್ನ ವಿದ್ಯಾಮಹಿಮೆಯಂ ಮೆಱಿಯಲ್ಕೆ ಬಾಹ್ಲೀಕ ಭೂರಿಶ್ರವ ಸೋಮದತ್ತ ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ಇಂತೆಂದಂ)
ಹಾಗೆ ಒದೆದು, ನಂತರ ‘ನಿನ್ನನ್ನು ಇಷ್ಟು ಅವಮಾನ ಮಾಡಿದ್ದು ಸಾಕು; ಕೊಲ್ಲುವುದು ನ್ಯಾಯವಲ್ಲ; ಕೊಂದರೆ ಮುಂದೆ ತೊಂದರೆ ಕೊಟ್ಟಾನೆಂದು ಹೆದರಿ ಕೊಂದಂತೆ ಆಗುತ್ತದೆ’ ಎಂದು ಹೇಳಿ ದ್ರುಪದನ ಕಟ್ಟುಗಳನ್ನು ತಾನೇ ಬಿಚ್ಚಿ ಕಳೆದು ‘ಹೋಗು’ ಎಂದನು. ದ್ರುಪದನು ಅವಮಾನದ ಬೆಂಕಿಯಲ್ಲಿ ಉರಿಯುತ್ತ, ‘ನಿನ್ನನ್ನು ಕೊಲ್ಲುವಂಥ ಒಬ್ಬ ಮಗನನ್ನೂ, ವಿಕ್ರಮಾರ್ಜುನನಿಗೆ ಹೆಂಡತಿಯಾಗುವಂಥ ಒಬ್ಬ ಮಗಳನ್ನೂ ಪಡೆಯದೆ ಇರಲಾರೆ’ ಎಂಬ ಮಹಾಪ್ರತಿಜ್ಞೆಯನ್ನು ಕೈಗೊಂಡು ಹೊರಟುಹೋದನು.
ಇತ್ತ ದ್ರೋಣನು ಪಾಂಡವ ಕೌರವರಿಗೆ ವಿದ್ಯೆಯನ್ನು ಚೆನ್ನಾಗಿ ಕಲಿಸಿದ ತನ್ನ ವಿದ್ಯಾಮಹಿಮೆಯನ್ನು ಮೆರೆಸಲು ಬಾಹ್ಲಿಕ, ಭೂರಿಶ್ರವ, ಸೋಮದತ್ತ, ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಹೀಗೆಂದನು:

ಕಂ|| ನೆಱೆಯೆ ಧನುರ್ವಿದ್ಯೆಯ
     ಣ್ದೆಱೆವಿನೆಗಂ ಕಲ್ತ ನಿಮ್ಮ ಮಕ್ಕಳ ಮೆಯ್ಯೊಳ್|
     ಮೆಱೆದಪ್ಪೆನೆನ್ನ ವಿದ್ದೆಯ
     ನಱಿದೊಯ್ಕನೆ ನೆರೆದು ನೋೞ್ಪುದನಿಬರುಮೀಗಳ್ || ೬೫ ||
(ನೆಱೆಯೆ ಧನುರ್ವಿದ್ಯೆಯ ಕಣ್ದೆಱೆವಿನೆಗಂ ಕಲ್ತ ನಿಮ್ಮ ಮಕ್ಕಳ ಮೆಯ್ಯೊಳ್ ಮೆಱೆದಪ್ಪೆನ್ ಎನ್ನ ವಿದ್ದೆಯನ್, ಅಱಿದು ಒಯ್ಕನೆ ನೆರೆದು ನೋೞ್ಪುದು ಅನಿಬರುಂ ಈಗಳ್)
‘ನಿಮ್ಮ ಮಕ್ಕಳೆಲ್ಲರೂ ಬಿಲ್ವಿದ್ಯೆಯು ತಮಗೆ ಪೂರ್ತಿಯಾಗಿ ಅನುಗ್ರಹವಾಗುವವರೆಗೂ (ಒಲಿಯುವವರೆಗೂ, ಕರಗತವಾಗುವವರೆಗೂ) ಬಿಡದೆ ಕಲಿತಿದ್ದಾರೆ. ಆ ಮಕ್ಕಳ ಮೂಲಕ ನನ್ನ ವಿದ್ಯೆಯ ಮಹಿಮೆಯನ್ನು ನಾನು ಮೆರೆಸುತ್ತೇನೆ. ನೀವೆಲ್ಲರೂ ಒಟ್ಟಾಗಿ ಬಂದು, ಅವರ ವಿದ್ಯೆಯನ್ನು ತಿಳಿದು ನೋಡಿರಿ’
ವ|| ಎಂದೊಡಂತೆಗೆಯ್ವಮೆಂದನಿಬರುಮೊಡಂಬಟ್ಟು ಪೊಱವೊೞಲೊಳುತ್ತರ ದಿಶಾಭಾಗದೊಳ್ ಸಮಚತುರಸ್ರಮಾಗೆ ನೆಲನನಳೆದು ಕಲ್ಲಂ ಪುಲ್ಲುಮಂ ಸೋದಿಸಿ ಶುಭದಿನ ಶುಭಮುಹೂರ್ತದೊಳ್-
(ಎಂದೊಡೆ ‘ಅಂತೆಗೆಯ್ವಂ’ ಎಂದು ಅನಿಬರುಂ ಒಡಂಬಟ್ಟು ಪೊಱವೊೞಲೊಳ್ ಉತ್ತರ ದಿಶಾಭಾಗದೊಳ್ ಸಮಚತುರಸ್ರಮಾಗೆ ನೆಲನನ್ ಅಳೆದು ಕಲ್ಲಂ ಪುಲ್ಲುಮಂ ಸೋದಿಸಿ ಶುಭದಿನ ಶುಭಮುಹೂರ್ತದೊಳ್)
ಎಂದಾಗ ‘ಹಾಗೆಯೇ ಮಾಡುತ್ತೇವೆ’ ಎಂದು ಎಲ್ಲರೂ ಒಪ್ಪಿ, ಊರಿನ ಹೊರಭಾಗದಲ್ಲಿ, ಉತ್ತರ ದಿಕ್ಕಿನಲ್ಲಿ, ಚಚ್ಚೌಕವಾಗಿ ನೆಲವನ್ನು ಅಳೆದು, ಕಲ್ಲು-ಹುಲ್ಲುಗಳನ್ನು ಆರಿಸಿ ತೆಗೆದು, ಒಳ್ಳೆಯ ದಿನ, ಒಳ್ಳೆಯ ಮುಹೂರ್ತದಲ್ಲಿ 
ಕಂ||ಗಟ್ಟಿಸಿ ಸಿಂಧುರದೊಳ್ ನೆಲ
     ಗಟ್ಟಿಸಿ ಚೆಂಬೊನ್ನ ನೆಲೆಯ ಚೌಪಳಿಗೆಗಳೊಳ್|
     ಕಟ್ಟಿಸಿ ಪೞಯಿಗೆಗಳನಳ
     ವಟ್ಟಿರೆ ಬಿಯಮಲ್ಲಿ ಮೊೞಗೆ ಪಲವುಂ ಪಱಿಗಳ್ || ೬೬ ||
(ಗಟ್ಟಿಸಿ ಸಿಂಧುರದೊಳ್, ನೆಲಗಟ್ಟಿಸಿ, ಚೆಂಬೊನ್ನ ನೆಲೆಯ ಚೌಪಳಿಗೆಗಳೊಳ್ ಕಟ್ಟಿಸಿ ಪೞಯಿಗೆಗಳನ್, ಅಳವಟ್ಟಿರೆ ಬಿಯಂ ಅಲ್ಲಿ ಮೊೞಗೆ ಪಲವುಂ ಪಱಿಗಳ್)
ನೆಲಕ್ಕೆ ದಮ್ಮಸು ಮಾಡಿ (ನೆಲವನ್ನು ಸಮತಟ್ಟು ಮಾಡಿ) ಕಾವಿ ಹಾಕಿದರು. ನೆಲಗಟ್ಟು ಕಟ್ಟಿದರು. ತಾಮ್ರದ ಮಾಡುಳ್ಳ ಹಜಾರಗಳನ್ನು ನಿರ್ಮಿಸಿ, ಅವುಗಳ ಮೇಲೆ ಬಾವುಟಗಳನ್ನು ಹಾರಿಸಿದರು. ಅಲ್ಲಿ ವಾದ್ಯಗಳು ಮೊಳಗಿದವು. ಹೀಗೆ ಸಾಕಷ್ಟು ಖರ್ಚು ಮಾಡಿ, ಅದ್ದೂರಿಯಾದ ಏರ್ಪಾಟುಗಳನ್ನು ಮಾಡಿದರು.
ವ|| ಅಂತು ಸಮೆದ ವ್ಯಾಯಾಮ ರಂಗಕ್ಕೆ ಗಾಂಗೇಯ ಧೃತರಾಷ್ಟ್ರ ವಿದುರ ಸೋಮದತ್ತ ಬಾಹ್ಲೀಕ ಭೂರಿಶ್ರವಾದಿ ಕುಲವೃದ್ಧರುಂ ಕುಂತಿ ಗಾಂಧಾರಿಗಳುಂವೆರಸು ಬಂದು ಕುಳ್ಳಿರೆ
ಹಾಗೆ ಸಿದ್ಧಪಡಿಸಿದ ವ್ಯಾಯಾಮರಂಗಕ್ಕೆ ಗಾಂಗೇಯ, ಧೃತರಾಷ್ಟ್ರ, ವಿದುರ, ಸೋಮದತ್ತ, ಬಾಹ್ಲೀಕ, ಭೂರಿಶ್ರವ ಮುಂತಾದ ಕುಲವೃದ್ಧರು ಕುಂತಿ ಗಾಂಧಾರಿಯರೊಂದಿಗೆ ಕೂಡಿಕೊಂಡು ಬಂದು ಕೂತಿದ್ದಾಗ

ಕಂ|| ಅರಸಿಯರನಣುಗರಂ ಬೇ
     ೞ್ಪರುಮಂ ಮೊನೆಗಾಱರಂ ಪ್ರಗೀತರನಿಂಬಾ|
     ಗಿರೆ ಚೌಪಳಿಗೆಗಳೊಳ್ ಕು
     ಳ್ಳಿರಿಸಿದರೊಡನೆಸೆಯೆ ನೆರೆದ ಪುರಜನ ಸಹಿತಂ || ೬೭ ||
(ಅರಸಿಯರನ್, ಅಣುಗರಂ, ಬೇೞ್ಪರುಮಂ, ಮೊನೆಗಾಱರಂ, ಪ್ರಗೀತರನ್ ಇಂಬಾಗಿರೆ ಚೌಪಳಿಗೆಗಳೊಳ್ ಕುಳ್ಳಿರಿಸಿದರ್, ಒಡನೆ ಎಸೆಯೆ ನೆರೆದ ಪುರಜನ ಸಹಿತಂ)
ಅರಸಿಯರನ್ನು, ಮಕ್ಕಳನ್ನು, ನೆಂಟರುಗಳನ್ನು, ಯುದ್ಧಪ್ರವೀಣರನ್ನು, ಸುಪ್ರಸಿದ್ಧರನ್ನು ಹಜಾರಗಳಲ್ಲಿ ಸುಖವಾಗಿ ಕುಳ್ಳಿರಿಸಿದರು. ಊರಿನ ಜನರೂ ಸಹ ಅಲ್ಲಿ ಸೇರಿದ್ದರು.
ವ|| ಆಗಳ್ ಕುಂಭಸಂಭವಂ
ಆಗ ಕುಂಭಸಂಭವನು
ಕಂ|| ಪೊಸ ಮುತ್ತಿನ ತುಡಿಗೆ ಪೊದ
     ೞ್ದೆಸೆಯೆ ದುಕೂಲಾಂಬರಂ ನಿಜಾಂಗದೊಳಂ ಸಂ|
     ದೆಸೆದಿರೆ ಬೆಳ್ಮುಗಿಲಿಂದಂ
     ಮುಸುಕಿದ ನೀಲಾದ್ರಿ ಬರ್ಪ ತೆಱದೊಳ್ ಬಂದಂ || ೬೮ ||
(ಪೊಸ ಮುತ್ತಿನ ತುಡಿಗೆ ಪೊದೞ್ದು ಎಸೆಯೆ, ದುಕೂಲಾಂಬರಂ ನಿಜಾಂಗದೊಳಂ ಸಂದು ಎಸೆದಿರೆ, ಬೆಳ್ಮುಗಿಲಿಂದಂ ಮುಸುಕಿದ ನೀಲಾದ್ರಿ ಬರ್ಪ ತೆಱದೊಳ್ ಬಂದಂ)
ಮೈಮೇಲೆ ಹೊಸಮುತ್ತಿನ ಒಡವೆಗಳನ್ನು ಧರಿಸಿಕೊಂಡು, ರೇಷ್ಮೆಯ ವಸ್ತ್ರವನ್ನು ಒಪ್ಪುವ ಹಾಗೆ ಉಟ್ಟುಕೊಂಡು, ಬಿಳಿಯ ಮೋಡಗಳು ಕವಿದ ನೀಲಗಿರಿಯಂತೆ ದ್ರೋಣನು ಅಲ್ಲಿಗೆ ಬಂದನು.
ವ|| ಅಂತು ಬಂದು ರಂಗಭೂಮಿಯ ನಡುವೆ ನಿಂದು
ಕಂ|| ನೆಗೞ್ದಿರೆ ಪುಣ್ಯಾಹ ಸ್ವರ
     ಮೊಗೆದಿರೆ ಪಟು ಪಟಹ ಕಾಹಳಾ ರವ|
     ವಾಗಳ್ ಪುಗವೇೞ್ದಂ ವಿವಿಧಾಸ್ತ್ರ
     ಪ್ರಗಲ್ಭರಂ ತನ್ನ ಚಟ್ಟರಂ ಕಳಶಭವಂ || ೬೯ ||
(ನೆಗೞ್ದಿರೆ ಪುಣ್ಯಾಹ ಸ್ವರಂ, ಒಗೆದಿರೆ ಪಟು ಪಟಹ ಕಾಹಳಾ ರವವಾಗಳ್ ಪುಗವೇೞ್ದಂ ವಿವಿಧಾಸ್ತ್ರ ಪ್ರಗಲ್ಭರಂ ತನ್ನ ಚಟ್ಟರಂ ಕಳಶಭವಂ)
ಮಂತ್ರಗಳ ನಿನಾದವು ಕೇಳಿ ಬರುತ್ತಿದ್ದಂತೆ ಕಹಳೆ, ಭೇರಿಗಳು ಮೊಳಗಿದವು. ಇವುಗಳ ನಡುವೆ ದ್ರೋಣನು ಅನೇಕ ಅಸ್ತ್ರಗಳ ಪ್ರಯೋಗದಲ್ಲಿ ಪರಿಣತರಾಗಿದ್ದ ತನ್ನ ಶಿಷ್ಯರಿಗೆ ರಂಗಪ್ರವೇಶ ಮಾಡುವಂತೆ ಸೂಚಿಸಿದನು.


ಕಂ|| ಅಂತು ಪುಗವೇೞ್ವುದುಂ ದಿ
     ಗ್ದಂತಿಗಳುಂ ಕುಲನಗಂಗಳುಂ ಗಡಣಂಗೊಂ|
     ಡೆಂತು ಕವಿತರ್ಕುಮಂತೆ ನೆ
     ಲಂ ತಳರ್ವಿನೆಗಂ ಪ್ರಚಂಡ ಕೋದಂಡಧರರ್ || ೭೦ ||
(ಅಂತು ಪುಗವೇೞ್ವುದುಂ, ದಿಗ್ದಂತಿಗಳುಂ ಕುಲನಗಂಗಳುಂ ಗಡಣಂಗೊಂಡು ಎಂತು ಕವಿತರ್ಕುಂ ಅಂತೆ ನೆಲಂ ತಳರ್ವಿನೆಗಂ ಪ್ರಚಂಡ ಕೋದಂಡಧರರ್)
ದ್ರೋಣನು ಪ್ರವೇಶಿಸಲು ಹೇಳಿದ ಕೂಡಲೇ ದಿಕ್ಕರಿಗಳೂ, ಕುಲಗಿರಿಗಳೂ ಗುಂಪಾಗಿ ಬರುವಂತೆ, ನೆಲವೇ ಚಲಿಸುವಂತೆ, ಪ್ರಚಂಡರಾದ ಆ ಬಿಲ್ಲುಗಾರರು
ವ|| ಅಂತು ಧರ್ಮಪುತ್ರನಂ ಮುಂತಿಟ್ಟು ಭೀಮಾರ್ಜುನ ನಕುಲ ಸಹದೇವರುಂ ದುರ್ಯೋಧನನಂ ಮುಂತಿಟ್ಟು ಯುಯುತ್ಸು ದುಶ್ಯಾಸನ ದುಸ್ಸಹ ದುಸ್ಸಳ ಜರಾಸಂಧ ಸತ್ಯಸಂಧ ನಿಸ್ಸಹ ರಾಜಸಂಧ ವಿಂದ ಅನುವಿಂದ ದುರ್ಮತಿ ಸುಬಾಹು ದುಸ್ಪರ್ಶನ ದುರ್ಮರ್ಷಣ ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಸುನಾಭ ಚಿತ್ರ ಉಪಚಿತ್ರ ನಂದ ಉಪನಂದ ಸುಚಿತ್ರಾಂಗದ ಚಿತ್ರಕುಂಡಲ ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹು ಪ್ರತಿಮ ಸುಪ್ರತಿಮ ಸಪ್ರಮಾಥಿ ದುರ್ಧರ್ಷಣ ದುಷ್ಟರಾಜಯ ಮಿತ್ರ ಉಪಮಿತ್ರ ಚೌಳೋಪ ದ್ವಂದ್ವಹಸ್ತ ಪ್ರತೀಪ ಸುಪ್ರತೀಪ ಪ್ರಹಸ್ತ ಪ್ರತಾಪ ಪ್ರಮದ ಸದ್ಬಾಹುಗಳ್ ಮೊದಲಾಗಿ ನೂರ್ವರುಂ ಬಂದು
ಕಂ|| ಗದೆಯೊಳ್ ಬಿಲ್ಲೊಳ್ ಗಜದೊಳ್
     ಕುದುರೆಯೊಳಂ ರಥದೊಳಸ್ತ್ರಕೌಶಲದೆ ಬೆಡಂ|
     ಗೊದವಿರೆ ತೋಱಿದರವರೊ
     ರ್ಮೊದಲೆ ಜನಂ ಪೊಗೞೆ ನೆಗೞೆ ಜಳನಿಧಿ ನಿನದಂ || ೭೧ ||
(ಗದೆಯೊಳ್ ಬಿಲ್ಲೊಳ್ ಗಜದೊಳ್ ಕುದುರೆಯೊಳಂ ರಥದೊಳ್ ಅಸ್ತ್ರಕೌಶಲದೆ ಬೆಡಂಗು ಒದವಿರೆ ತೋಱಿದರ್ ಅವರ್ ಒರ್ಮೊದಲೆ ಜನಂ ಪೊಗೞೆ ನೆಗೞೆ ಜಳನಿಧಿ ನಿನದಂ)
ಗದೆಯಲ್ಲಿ, ಬಿಲ್ಲಿನಲ್ಲಿ, ಆನೆಯಲ್ಲಿ,ಕುದುರೆಯಲ್ಲಿ, ರಥದಲ್ಲಿ, ಅಸ್ತ್ರಕೌಶಲದಲ್ಲಿ ಅವರೆಲ್ಲರೂ (ತಮ್ಮ ತಮ್ಮ ಸಾಮರ್ಥ್ಯವನ್ನು) ಮನಮೋಹಕವಾಗಿ ತೋರಿಸಿದಾಗ ಸೇರಿದ ಜನರೆಲ್ಲ ಒಂದೇ ಸಲಕ್ಕೆ, ಸಮುದ್ರ ಮೊರೆಯುವ ಹಾಗೆ ಶಬ್ದ ಮಾಡಿ ಅವರನ್ನು ಹೊಗಳಿದರು.
ಅಂತವರಿಂ ಬೞಿಯಂ-    ಹಾಗೆ ಅವರ ನಂತರ 
ಕಂ|| ಆದ ಮುಳಿಸಿಂದಮಾಗಳ್
     ಮೋದುವ ಬಗೆ ಬಳೆಯೆ ಪಿಡಿದ ಗದೆಗಳಿನಿಳಿಪಂ|
     ತಾದುದು ಸುಯೋಧನೋಗ್ರ ವೃ
     ಕೋದರರೊರ್ಮೊದಲೆ ಶಿಖರಮುಳ್ಳೆರಡಗಮಂ|| ೭೨ ||


(ಆದ ಮುಳಿಸಿಂದಂ ಆಗಳ್ ಮೋದುವ ಬಗೆ ಬಳೆಯೆ ಪಿಡಿದ ಗದೆಗಳಿನ್ ಇಳಿಪಂತೆ ಆದುದು ಸುಯೋಧನೋಗ್ರ ವೃಕೋದರರ್ ಒರ್ಮೊದಲೆ ಶಿಖರಮುಳ್ಳ ಎರಡು ಅಗಮಂ)
ಒಬ್ಬರೊಬ್ಬರನ್ನು ಹೊಡೆಯುವ ಇಚ್ಛೆ ತೀವ್ರವಾಗುತ್ತಿರಲು ದುರ್ಯೋಧನ, ಭೀಮರು ಗದೆಗಳನ್ನು ಎತ್ತಿ ಹಿಡಿದು ಹೋರಾಟಕ್ಕೆ ನಿಂತರು. ಆ ದೃಶ್ಯವು ಎದ್ದು ನಿಂತ ಎರಡು ಗಿರಿಶಿಖರಗಳನ್ನೂ ಮೀರಿಸುವಂತಿತ್ತು.
ವ|| ಅಂತಿರ್ವರುಮೊರ್ವರೊರ್ವರೊಳ್ ಸೆಣಸಿ ಬಹುಪ್ರಯೋಗ ಗದಾ ಕೌಶಲಮಂ ತೋಱಲೆಂದು-
(ಅಂತು ಇರ್ವರುಂ ಒರ್ವರ್ ಒರ್ವರೊಳ್ ಸೆಣಸಿ ಬಹುಪ್ರಯೋಗ ಗದಾ ಕೌಶಲಮಂ ತೋಱಲೆಂದು-)
ಹಾಗೆ ಇಬ್ಬರೂ ಒಬ್ಬರೊಬ್ಬರ ಜೊತೆ ಸೆಣಸಿ, ಗದಾವಿದ್ಯೆಯ ಹಲವು ಪ್ರಯೋಗಗಳನ್ನು ತೋರಿಸಲೆಂದು
ಕಂ|| ಗೆಡೆವಚ್ಚಿರ್ವರ್ ಮನಗೊಂ
     ಡೊಡನೊಡನೋರಂತು ತಗುಳ್ದು ಝೇಂಕರಿಸಿದೊಡೆ|
     ಲ್ವಡಗಾಗೆ ಮೋದಲೆಂದಿ
     ರ್ದೆಡೆಯೊಳ್ ಗುರು ತನ್ನ ಮಗನನೆಡೆವುಗವೇೞ್ದಂ|| ೭೩ ||
(ಗೆಡೆವಚ್ಚಿರ್ವರ್ ಮನಗೊಂಡು  ಒಡನೊಡನೆ ಓರಂತು ತಗುಳ್ದು ಝೇಂಕರಿಸಿದೊಡೆ ಎಲ್ವಡಗಾಗೆ ಮೋದಲೆಂದು ಇರ್ದ ಎಡೆಯೊಳ್ ಗುರು ತನ್ನ ಮಗನನ್ ಎಡೆವುಗವೇೞ್ದಂ)
ದಾಯಾದಿಗಳಿಬ್ಬರೂ ಜೊತೆಯಾಗಿ (ಒಂದು ಕಡೆ ನಿಂತು) ಹೋರಾಡಿದರು; ಒಂದೇ ಸಮನೆ ಆರ್ಭಟಿಸುತ್ತಾ ಒಬ್ಬರನ್ನೊಬ್ಬರು ಅಟ್ಟಾಡಿಸಿದರು. ಹೀಗೆ ಅವರಿಬ್ಬರ ಕಾದಾಟವು ಜನರ ಮನಸ್ಸನ್ನು ಸೆಳೆಯುವಂತಿತ್ತು. (ಹೋರಾಟ ಮುಂದುವರಿದು) ಒಬ್ಬರನ್ನೊಬ್ಬರು ನಿಜವಾಗಿಯೂ ನಜ್ಜುಗುಜ್ಜು ಮಾಡಲು ಹವಣಿಸುತ್ತಿದ್ದಾರೆಂದು ತಿಳಿದಾಗ ದ್ರೋಣನು ತನ್ನ ಮಗನನ್ನು ಮಧ್ಯೆ ಪ್ರವೇಶಿಸಲು ಹೇಳಿದನು.
[ಗೆಡೆವಚ್ಚು: ಗೆಡೆ=ಸಮಾನ  (ಹಳಗನ್ನಡ ವಿಶೇಷ ಶಬ್ದಕೋಶ - ಡಾ. ಎಲ್. ಬಸವರಾಜು); ಪಚ್ಚು: ಭಾಗ ಮಾಡು. ಭೀಮ ದುರ್ಯೋಧನರಿಬ್ಬರೂ ಸಮಾನ ಭಾಗಕ್ಕೆ ಹಕ್ಕುದಾರರು ಅರ್ಥಾತ್  ದಾಯಾದಿಗಳು]
ವ|| ಅಂತು ಮೇರೆದಪ್ಪಲ್ ಬಗೆದ ಮಹಾಸಮುದ್ರಂಗಳೆರಡಱ ನಡುವೆ ಕುಲಗಿರಿಯಿರ್ಪಂತಿರ್ದಶ್ವತ್ಥಾಮನಂ ಕಂಡಿರ್ವರುಮೆರಡುಂ ದೆಸೆಗೆ ತೊಲಗಿ ನಿಂದಾಗಳ್
(ಅಂತು ಮೇರೆದಪ್ಪಲ್ ಬಗೆದ ಮಹಾಸಮುದ್ರಂಗಳ್ ಎರಡಱ ನಡುವೆ ಕುಲಗಿರಿಯಿರ್ಪಂತೆ ಇರ್ದ ಅಶ್ವತ್ಥಾಮನಂ ಕಂಡು ಇರ್ವರುಂ ಎರಡುಂ ದೆಸೆಗೆ ತೊಲಗಿ ನಿಂದಾಗಳ್)

ಹಾಗೆ, ಮೇರೆ ಮೀರಲು ಸಿದ್ಧವಾದ ಎರಡು ಕಡಲುಗಳ ನಡುವೆ ನಿಂತ ಕುಲಪರ್ವತದಂತೆ ಅಶ್ವತ್ಥಾಮನು ಅವರಿಬ್ಬರ ನಡುವೆ ಬಂದು ನಿಂತಾಗ ಇಬ್ಬರೂ ಆಚೀಚೆಗೆ ಸರಿದು ನಿಂತರು.