ಭಾನುವಾರ, ಫೆಬ್ರವರಿ 9, 2020


ಮೂರನೇ ಆಶ್ವಾಸ ಪದ್ಯಗಳು: ೨೮-೩೨


ಕಂ|| ದಾಡೆಗಳನರೆಯೊಳಿಂಬಿಂ
     ತೀಡುತ್ತುಂ ತೀವ್ರಮಾಗೆ ಬಂಡಿಯ ಬರವಂ|
     ನೋಡುತ್ತಿರ್ದಾ ಬಕನಂ
     ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ|| ೨೮||
(ದಾಡೆಗಳನ್ ಅರೆಯೊಳ್ ಇಂಬಿಂ ತೀಡುತ್ತುಂ, ತೀವ್ರಮಾಗೆ ಬಂಡಿಯ ಬರವಂ ನೋಡುತ್ತಿರ್ದಾ ಬಕನಂ ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ)
ಹರಿತಗೊಳಿಸಲೆಂದು ತನ್ನ ಕೋರೆಹಲ್ಲನ್ನು ಸಾವಕಾಶವಾಗಿ ಬಂಡೆಗೆ ಮಸೆಯುತ್ತಾ, ಅದು ಹರಿತಗೊಂಡಮೇಲೆ, ಬಂಡಿಯು ಬರುವುದನ್ನೇ ಎದುರುನೋಡುತ್ತಿದ್ದ ಬಕನನ್ನು, ಸಾಕಷ್ಟು ದೂರದಿಂದಲೇ ಕಂಡು ಭೀಮನು ಕೆರಳಿದನು.
ಕಂ| ಕಡೆಗಣ್ಣೊಳೆ ರಕ್ಕಸನಂ
     ನಡೆ ನೋಡಿ ಕೊಲಲ್ಕೆ ಸತ್ತ್ವಮಪ್ಪಂತಿರೆ ಮುಂ|
     ಪೊಡೆವೆಂ ಕೂೞಂ ಬೞಿಯಂ
     ಪೊಡೆವೆಂ ರಕ್ಕಸನನೆಂದು ಸಾಹಸಭೀಮಂ|| ೨೯||
(ಕಡೆಗಣ್ಣೊಳೆ ರಕ್ಕಸನಂ ನಡೆ ನೋಡಿ, ‘ಕೊಲಲ್ಕೆ ಸತ್ತ್ವಂ ಅಪ್ಪಂತಿರೆ ಮುಂ ಪೊಡೆವೆಂ ಕೂೞಂ, ಬೞಿಯಂ ಪೊಡೆವೆಂ ರಕ್ಕಸನನ್ ಎಂದು ಸಾಹಸಭೀಮಂ)
ಕಣ್ಣಿನ ತುದಿಯಿಂದಲೇ ರಕ್ಕಸನನ್ನು ಸರಿಯಾಗಿ ನೋಡಿ, ‘ಕೊಲ್ಲಲು ಬೇಕಾದ ಶಕ್ತಿ ತುಂಬಿಕೊಳ್ಳಲೆಂದು ಮೊದಲು ಊಟ ಹೊಡೆಯುತ್ತೇನೆ, ನಂತರ ರಕ್ಕಸನನ್ನು ಹೊಡೆಯುತ್ತೇನೆ’ ಎಂದು ಸಾಹಸಭೀಮನು,
(ಟಿಪ್ಪಣಿ: ಈ ಹಿಂದೆ ಹಿಡಿಂಬನನ್ನು ಕೊಲ್ಲುವ ಸಂದರ್ಭದಲ್ಲಿ ‘ಮಲ್ಲಂತಿಗೆಯನಪ್ಪೊಡಂ ಸಡಲಿಸದೆ’ – ತನ್ನ ಕಾಚವನ್ನು ಸಹ ಸರಿಮಾಡಿಕೊಳ್ಳದೆ - ಎಂಬ ಮಾತು ಬಂದಿದೆ. (ಎರಡನೇ ಆಶ್ವಾಸ ಪದ್ಯ ೧೬ರ ನಂತರದ ಗದ್ಯ). ಹೋರಾಟ ಶುರುವಾಗುವ ಮೊದಲು ಇಬ್ಬರು ಮಲ್ಲರಲ್ಲಿಯೂ ಆತಂಕವಿರುವುದು ಸಹಜ. ಆದರೆ ಇಲ್ಲಿ ಭೀಮನಿಗೆ ಅಂಥ ಯಾವ ಆತಂಕವೂ ಇಲ್ಲ ಎಂಬುದನ್ನು ಕವಿ ಸೂಚಿಸುತ್ತಿದ್ದಾನೆ. ಎದುರಾಳಿಯನ್ನು ಸದೆಬಡಿಯುತ್ತೇನೆ ಎಂಬ ಆತ್ಮವಿಶ್ವಾಸ ಇರುವುದರಿಂದಲೇ ಯುದ್ಧ ಶುರುವಾಗುವ ಗಳಿಗೆಯಲ್ಲೂ ಕಾಚವನ್ನು ಸರಿಮಾಡಿಕೊಳ್ಳದಿರುವುದು, ಊಟ ಮಾಡತೊಡಗುವುದು ಭೀಮನಿಗೆ ಸಾಧ್ಯವಾಗುತ್ತದೆ; ಹೀಗೆ ಹೇಳುವುದರ ಮೂಲಕ ಭೀಮ ಎಂಥ ಶೂರನಾಗಿದ್ದ ಎಂಬುದನ್ನು ಕವಿ ಸೂಚಿಸುತ್ತಿದ್ದಾನೆ.
ಇನ್ನು ಈ ಪದ್ಯದಲ್ಲಿ ‘ಪೊಡೆವೆಂ’ ಶಬ್ದ ಬೇರೆ ಬೇರೆ ಅರ್ಥಗಳಲ್ಲಿ ಎರಡು ಸಲ ಬಳಕೆಯಾಗಿದೆ. ಸಾಮಾನ್ಯ ಬಳಕೆಯಲ್ಲಿ ‘ಊಟ ಮಾಡುತ್ತೇನೆ’ ಎನ್ನುತ್ತೇವೆ. ಇಲ್ಲಿ ಕವಿ ‘ಊಟ ಹೊಡೆಯುತ್ತೇನೆ’ ಎಂದು ಆಡುಭಾಷೆಯ ಪ್ರಯೋಗ ಮಾಡಿದ್ದಾನೆ. ಈ ಪ್ರಯೋಗವು ಹೊಟ್ಟೆ ತುಂಬ ಊಟ ಮಾಡುತ್ತೇನೆ ಎನ್ನುವುದರ ಜೊತೆಗೆ ಅದು ಪುಷ್ಕಳವಾದ ಊಟ ಎಂಬುದನ್ನೂ ಸೂಚಿಸುತ್ತದೆ. ಊಟ ‘ಹೊಡೆ’ಯುವುದಕ್ಕೂ, ರಕ್ಕಸನನ್ನು ‘ಹೊಡೆ’ಯುವುದಕ್ಕೂ ಇರುವ ಅರ್ಥವ್ಯತ್ಯಾಸವನ್ನೂ ಗಮನಿಸಬೇಕು.)
ವ|| ಅಂತು ತನ್ನ ತಂದ ಬಂಡಿಯ ಕೂೞೆಲ್ಲಮಂ ಪತ್ತೆಂಟು ತುತ್ತಿನೊಳೆ ಸಮೆಯೆ ತುತ್ತುವುದಂ ಕಂಡು ರಕ್ಕಸನಿವನ ಪಾಂಗಂ ಮೆಚ್ಚಲಾರೆನೆನ್ನುಮನಿಂತು ಸಮೆಯೆ ತುತ್ತುಗುಮೆಂದು ಬಕಂ ಬಕವೇಷದಿಂ ಪೆಱಗಣ ದೆಸೆಗೆ ಮೆಲ್ಲನೋಸರಿಸಿ ಬಂದು-
(ಅಂತು ತನ್ನ ತಂದ ಬಂಡಿಯ ಕೂೞು ಎಲ್ಲಮಂ ಪತ್ತೆಂಟು ತುತ್ತಿನೊಳೆ ಸಮೆಯೆ ತುತ್ತುವುದಂ ಕಂಡು, ರಕ್ಕಸನ್ ‘ಇವನ ಪಾಂಗಂ ಮೆಚ್ಚಲಾರೆನ್, ಎನ್ನುಮನ್ ಇಂತು ಸಮೆಯೆ ತುತ್ತುಗುಂ’ ಎಂದು ಬಕಂ ಬಕವೇಷದಿಂ ಪೆಱಗಣ ದೆಸೆಗೆ ಮೆಲ್ಲನೆ ಓಸರಿಸಿ ಬಂದು-)
ಹಾಗೆ ತಾನು ತಂದಿದ್ದ ಬಂಡಿ ಭರ್ತಿ ಅನ್ನವನ್ನು ಹತ್ತೆಂಟು ತುತ್ತಿನಲ್ಲಿಯೇ ಮುಗಿಸಿಬಿಡುವವನಂತೆ ಕಬಳಿಸುತ್ತಿದ್ದ ಭೀಮನನ್ನು ಕಂಡು ‘ಇವನ ರೀತಿಯನ್ನು ಮೆಚ್ಚಲಾರೆ! ನೋಡಿದರೆ ನನ್ನನ್ನೂ ಹೀಗೆ ತಿಂದು ಮುಗಿಸುವವನಂತೆ ಕಾಣುತ್ತಾನೆ!’ ಎಂದು ಆ ಬಕಾಸುರನು ಬಕಪಕ್ಷಿಯ ವೇಷದಿಂದ ಮೆಲ್ಲನೆ ಹಿಂದಿನಿಂದ ಸರಿದು ಬಂದು
ಕಂ||ಎರಡುಂ ಕೆಲನುಮನೆರಡುಂ
     ಕರ ಪರಿಘದಿನಡಸಿ ಗುರ್ದಿ ಪೆಱಪಿಂಗುವನಂ|
     ಮುರಿದಡಸಿ ಪಿಡಿದು ಘಟ್ಟಿಸಿ
     ಪಿರಿಯರೆಯೊಳ್ ಪೊಯ್ದನಸಗವೊಯ್ಲಂ ಭೀಮಂ|| ೩೦||
(ಎರಡುಂ ಕೆಲನುಮನ್ ಎರಡುಂ ಕರ ಪರಿಘದಿನ್ ಅಡಸಿ, ಗುರ್ದಿ ಪೆಱಪಿಂಗುವನಂ. ಮುರಿದು ಅಡಸಿ ಪಿಡಿದು ಘಟ್ಟಿಸಿ ಪಿರಿಯರೆಯೊಳ್ ಪೊಯ್ದನ್ ಅಸಗವೊಯ್ಲಂ ಭೀಮಂ)
(ಭೀಮನ) ಎರಡು ಮಗ್ಗುಲುಗಳನ್ನೂ ಗದೆಗಳಂತಿದ್ದ ತನ್ನ ಎರಡು ಕೈಗಳಿಂದ ಹಿಡಿದು ಗುದ್ದಿ (ಬಂದ ದಾರಿಯಲ್ಲಿಯೇ) ಹಿಂದೆ ಹೋಗಲು ಹವಣಿಸುತ್ತಿದ್ದ ಬಕನನ್ನು ಭೀಮನು ಕೂಡಲೇ ಹಿಂತಿರುಗಿ, ಹಿಡಿದುಕೊಂಡು - ಅಗಸನು ಬಟ್ಟೆ ಒಗೆಯುವಂತೆ – ದೊಡ್ಡದೊಂದು ಬಂಡೆಗೆ  ಅಪ್ಪಳಿಸಿದನು.
ವ|| ಅಂತು ಪೊಯ್ದೊಡೆ ಪೊಡೆಸೆಂಡಂ ಪೊಯ್ದಂತೆ ಮೇಗೊಗೆದು ಸೆಣಸೆ-
(ಅಂತು ಪೊಯ್ದೊಡೆ ಪೊಡೆಸೆಂಡಂ ಪೊಯ್ದಂತೆ ಮೇಗೆ ಒಗೆದು ಸೆಣಸೆ)
ಹಾಗೆ ಅಪ್ಪಳಿಸಿದಾಗ ಬಕನು ಪುಟಿಯುವ ಚೆಂಡಿನಂತೆ ಮೇಲೆ ನೆಗೆದು ಬಂದು ಸೆಣೆಸತೊಡಗಿದನು.
ಉ|| ಬಾರಿಯನಿಟ್ಟು ಕೂಡೆ ಪೊೞಲಂ ತವೆ ತಿಂದನನಾರ್ತರಿಲ್ಲಣಂ
     ಬಾರಿಸಲಾರುಮಿನ್ ಜವನ ಬಾರಿಯೊಳಿಕ್ಕುವೆನೆಂದು ಪರ್ವೆ ಭೋ|
     ರ್ಭೋರೆನೆ ಬೀಸೆ ತದ್ವದನ ಗಹ್ವರದಿಂ ಬಿಸುನೆತ್ತರುಣ್ಮೆ ಭೋ
     ರ್ಭೋರೆನೆ ಕೊಂದನಂಕದ ಬಳಾಧಿಕನಂ ಬಕನಂ ವೃಕೋದರಂ|| ೩೧||
(‘ಬಾರಿಯನ್ ಇಟ್ಟು ಕೂಡೆ ಪೊೞಲಂ ತವೆ ತಿಂದನನ್ ಆರ್ತರಿಲ್ಲ ಅಣಂ ಬಾರಿಸಲ್ ಆರುಂ; ಇನ್ ಜವನ ಬಾರಿಯೊಳ್ ಇಕ್ಕುವೆನ್’ ಎಂದು ಪರ್ವೆ ಭೋರ್ಭೋರೆನೆ ಬೀಸೆ, ತದ್ವದನ ಗಹ್ವರದಿಂ ಬಿಸುನೆತ್ತರ್ ಉಣ್ಮೆ   ಭೋರ್ಭೋರೆನೆ ಕೊಂದನ್ ಅಂಕದ ಬಳಾಧಿಕನಂ ಬಕನಂ ವೃಕೋದರಂ)
(ಈ ರಾಕ್ಷಸನು) ‘ಸರದಿಯನ್ನು ವಿಧಿಸಿ, ಇಡೀ ಊರೇ ಖಾಲಿಯಾಗುವಂತೆ ಒಬ್ಬೊಬ್ಬರನ್ನಾಗಿ ತಿಂದು ಮುಗಿಸುತ್ತಿದ್ದರೂ ಸಹ ಅವನನ್ನು ತಡೆಯಲು ಯಾರೂ ಸಮರ್ಥರಾಗಲಿಲ್ಲ! ಇರಲಿ! ಇನ್ನು ಆ ಯಮನ ಸರದಿಯಲ್ಲಿ ಇವನನ್ನು ಹಾಕುತ್ತೇನೆ’ ಎಂದು ಅವನನ್ನು ಎತ್ತಿ ವೇಗವಾಗಿ ಬೀಸತೊಡಗಿದನು. ಆಗ ಆ ರಾಕ್ಷಸನ ಗುಹೆಯಂಥ ಬಾಯಿಯಿಂದ ನೆತ್ತರು ಹೊರಹೊಮ್ಮಿತು; ಮಹಾ ಬಲಶಾಲಿಯಾದ ಬಕಾಸುರನನ್ನು ಭೀಮನು ಹೀಗೆ ಕೊಂದು ಮುಗಿಸಿದನು.
ವ|| ಅಂತು ಕೊಂದು ನೀಲಗಿರಿಯನೆ ಪಿಡಿದೆೞೆವಂತೆ ರಕ್ಕಸನ ಕರಿಯ ಪಿರಿಯೊಡಲನೆೞೆದು ತಂದು ಪೊೞಲ ನಡುವಿಕ್ಕಿದಾಗಳ್ ಪೊೞಲೆಲ್ಲಂ ಚೋದ್ಯಂಬಟ್ಟು ಬದ್ದವಣದ ಪಱೆಗಳಂ ಪೊಯ್ಸಿ ಸಾಹಸಭೀಮನ ಸಾಹಸಮನಳವಲ್ಲದೆ ಪೊಗೞ್ದು ತಮ್ಮಾಳ್ದನುಮನಿಷ್ಟ ದೈವಮುಮಂ ಕೊಂಡಾಡುವಂತಯ್ವರುಮಂ ಕೊಂಡಾಡೆ ಕೆಲವು ದಿವಸಮಿರ್ಪನ್ನೆಗಮೊಂದು ದಿವಸಮಶಿಶಿರಕಿರಣನಪರಜಲನಿಧಿತಟನಿಕಟ ವರ್ತಿಯಾದನಾಗಳೊರ್ವ ಪಾರ್ವಂ ವಿಸ್ತೀರ್ಣಜೀರ್ಣ ಕರ್ಪಟಾವೃತಕಟಿತಟನುಮಾಗಿ ಬಂದು ಕಣ್ಮುಚ್ಚಲೆಡೆವೇಡೆ ತನಗವರ್ ಪಾಸಲ್ಕೊಟ್ಟ ಕೃಷ್ಣಾಜಿನಮಂ ಪಾಸಿ ಪಟ್ಟಿರ್ದನಂ ಧರ್ಮಪುತ್ರನಾವ ನಾಡಿಂ ಬಂದಿರೆಲ್ಲಿಗೆ ಪೋದಪಿರೆಂದೊಡುತ್ತರಾಪಥದ ಹಸ್ತಿನಪುರದಿಂ ಬಂದೆಮೆಂದೊಡಲ್ಲಿ ಪಾಂಡವರ ಪಡೆಮಾತಾವುದು ಧೃತರಾಷ್ಟ್ರ ಸುಯೋಧನರಿರ್ಪಂದಮಾವುದೆಂದು ಬೆಸಗೊಳೆ-
(ಅಂತು ಕೊಂದು, ನೀಲಗಿರಿಯನೆ ಪಿಡಿದು ಎೞೆವಂತೆ ರಕ್ಕಸನ ಕರಿಯ ಪಿರಿಯ ಒಡಲನ್ ಎೞೆದು ತಂದು ಪೊೞಲ ನಡುವೆ ಇಕ್ಕಿದಾಗಳ್, ಪೊೞಲೆಲ್ಲಂ ಚೋದ್ಯಂಬಟ್ಟು ಬದ್ದವಣದ ಪಱೆಗಳಂ ಪೊಯ್ಸಿ, ಸಾಹಸಭೀಮನ ಸಾಹಸಮನ್ ಅಳವಲ್ಲದೆ ಪೊಗೞ್ದು, ತಮ್ಮಾಳ್ದನುಮನ್ ಇಷ್ಟ ದೈವಮುಮಂ ಕೊಂಡಾಡುವಂತೆ ಅಯ್ವರುಮಂ ಕೊಂಡಾಡೆ, ಕೆಲವು ದಿವಸಂ ಇರ್ಪನ್ನೆಗಂ ಒಂದು ದಿವಸಂ ಅಶಿಶಿರಕಿರಣನ್ ಅಪರಜಲನಿಧಿತಟನಿಕಟವರ್ತಿಯಾದನ್; ಆಗಳ್ ಒರ್ವ ಪಾರ್ವಂ ವಿಸ್ತೀರ್ಣಜೀರ್ಣ ಕರ್ಪಟಾವೃತಕಟಿತಟನುಮಾಗಿ ಬಂದು ಕಣ್ಮುಚ್ಚಲ್ ಎಡೆವೇಡೆ, ತನಗೆ ಅವರ್ ಪಾಸಲ್ ಕೊಟ್ಟ ಕೃಷ್ಣಾಜಿನಮಂ ಪಾಸಿ ಪಟ್ಟಿರ್ದನಂ, ಧರ್ಮಪುತ್ರನ್, ‘ಆವ ನಾಡಿಂ ಬಂದಿರಿ? ಎಲ್ಲಿಗೆ ಪೋದಪಿರಿ? ಎಂದೊಡೆ ‘ಉತ್ತರಾಪಥದ ಹಸ್ತಿನಪುರದಿಂ ಬಂದೆಂ’ ಎಂದೊಡೆ, ‘ಅಲ್ಲಿ ಪಾಂಡವರ ಪಡೆಮಾತಾವುದು? ಧೃತರಾಷ್ಟ್ರ ಸುಯೋಧನರಿರ್ಪ ಅಂದಂ ಆವುದು?’ ಎಂದು ಬೆಸಗೊಳೆ-)
ಹಾಗೆ ಕೊಂದು ನೀಲಪರ್ವತವನ್ನೇ ಹಿಡಿದು ಎಳೆತಂದಂತೆ ರಾಕ್ಷಸನ ಕರಿಯ ದೊಡ್ಡ ಶರೀರವನ್ನು ಭೀಮನು ಎಳೆದುತಂದು ಪಟ್ಟಣದ ಮಧ್ಯಭಾಗದಲ್ಲಿ ಇಟ್ಟನು. ಪಟ್ಟಣವೆಲ್ಲ ಆಶ್ಚರ್ಯಪಟ್ಟು ಸಂಭ್ರಮದಿಂದ ತಮಟೆ ಬಾರಿಸಿ ಸಾಹಸಭೀಮನ ಸಾಹಸವನ್ನು ಅಳತೆ ಮೀರಿ ಹೊಗಳಿದರು. ತಮ್ಮನ್ನು ಆಳುವವನನ್ನು, ತಮ್ಮ ಇಷ್ಟದೈವವನ್ನು, ಕೊಂಡಾಡುವಂತೆ ಐದು ಜನರನ್ನೂ ಕೊಂಡಾಡಿದರು. ಹೀಗೆ ಕೆಲವು ದಿನ ಕಳೆದ ಮೇಲೆ ಒಂದು ದಿನ-
ಬೆಂಗದಿರನು (ಸೂರ್ಯನು) ಪಡುಗಡಲ ಅಂಚಿಗೆ ಹತ್ತಿರವಾದನು. ಆಗ ಒಬ್ಬ ಹಾರುವನು ಹರಿದು ಚಿಂದಿಯಾದ ಹಳೆಯ ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಂಡು ಬಂದು, ಮಲಗಿಕೊಳ್ಳಲು ಜಾಗ ಕೊಡುವಂತೆ (ಪಾಂಡವರನ್ನು) ಕೇಳಿ, ತನಗೆ ಅವರು ಹಾಸಲು ಕೊಟ್ಟ ಕೃಷ್ಣಾಜಿನವನ್ನು ಹಾಸಿಕೊಂಡು ಮಲಗಿದ್ದನು. ಆಗ ಧರ್ಮಪುತ್ರನು ಅವನ ಹತ್ತಿರ ‘ಯಾವ ಊರಿಂದ ಬಂದಿರಿ? ಮುಂದೆ ಎಲ್ಲಿಗೆ ಹೊರಟವರು?’ ಎಂದು ಮಾತಾಡಿಸಿದನು. ಹಾರುವನು ‘ಉತ್ತರಾಪಥದ ಹಸ್ತಿನಾಪುರದಿಂದ ಬಂದೆ’ ಎಂದಾಗ ‘ಅಲ್ಲಿ ಪಾಂಡವರ ಸುದ್ದಿ ಏನು? ಧೃತರಾಷ್ಟ್ರ, ಸುಯೋಧನರು ಹೇಗಿದ್ದಾರೆ?’ ಎಂದು ವಿಚಾರಿಸಲು-
ಮ|| ಮನದೊಳ್ ಕೂರದ ಪಾಂಡುರಾಜಸುತರುಂ ಲಾಕ್ಷಾಗೃಹೋಗ್ರಾಗ್ನಿಯಾ
     ನನದೊಳ್ ಮೞ್ಗಿದರೆನ್ನ ಪುಣ್ಯಮಱಿಯರ್ ವೇಮಾಱ(?)ರಿನ್ನಾರೊ ಬೇ|
     ರನೆ ಕಿೞ್ತಿಕ್ಕಿದೆನೀಗಳಾಯ್ತು ಧರೆ ನಿರ್ದಾಯಾದ್ಯಮೆಂದಾ ಸುಯೋ
     ಧನನಾಳುತ್ತಿರೆ ಸಂದ ಹಸ್ತಿನಪುರಂ ಸಂತಂ ಬಸಂತಂ ಕರಂ|| ೩೨||
(‘ಮನದೊಳ್ ಕೂರದ ಪಾಂಡುರಾಜಸುತರುಂ ಲಾಕ್ಷಾಗೃಹ ಉಗ್ರ ಅಗ್ನಿ ಆನನದೊಳ್ ಮೞ್ಗಿದರ್. ಎನ್ನ ಪುಣ್ಯಂ! ಅಱಿಯರ್, ವೇಮಾಱರ್ ಇನ್ನಾರೊ? ಬೇರನೆ ಕಿೞ್ತಿಕ್ಕಿದೆನ್! ಈಗಳಾಯ್ತು ಧರೆ ನಿರ್ದಾಯಾದ್ಯಂ’ ಎಂದು ಆ ಸುಯೋಧನನ್ ಆಳುತ್ತಿರೆ, ಸಂದ ಹಸ್ತಿನಪುರಂ ಸಂತಂ ಬಸಂತಂ ಕರಂ)
(ನಾನು) ‘ಮನದೊಳಗೆ ಇಷ್ಟಪಡದ ಪಾಂಡವರು ಅರಗಿನ ಮನೆ ಹೊತ್ತಿ ಉರಿಯುವಾಗ ಬೆಂಕಿಯ ಬಾಯಿಗೆ ಸಿಕ್ಕಿ ನಾಶವಾದರು; ಅದು ನನ್ನ ಪುಣ್ಯ! ಅಸಾಧ್ಯರು (ಎಂದರೆ ಯಾರನ್ನು ಸೋಲಿಸಲು, ಬಗ್ಗಿಸಲು ಸಾಧ್ಯವಿಲ್ಲವೋ ಅಂಥವರು), ಮೋಸಹೋಗದವರು ಇನ್ನು ಯಾರಿದ್ದಾರೆ? ಬೇರನ್ನೇ ಕಿತ್ತೊಗೆದಿದ್ದೇನೆ! ಈಗ ರಾಜ್ಯಕ್ಕೆ ಪಾಲುದಾರರೇ ಇಲ್ಲ!’ – ಎಂಬ ಭಾವನೆಯಲ್ಲಿ ಸುಯೋಧನನು ರಾಜ್ಯಭಾರ ಮಾಡುತ್ತಿದ್ದಾನೆ. ಪ್ರಸಿದ್ಧವಾದ ಹಸ್ತಿನಾಪುರದಲ್ಲಿ ಸುಖ ಸಂತೋಷಗಳು ನೆಲೆಸಿವೆ.
ವ|| ಅದಲ್ಲದೆಯುಂ ಯಜ್ಞಸೇನನೆಂಬ ಮೊದಲ ಪೆಸರ ಪಾಂಚಾಳದೇಶದರಸಂ ದ್ರುಪದನೆಂಬಂ ದ್ರೋಣನೊಳಾದ ಪರಿಭವಮಂ ನೆನೆದಾತನಂ ಕೊಲ್ವನ್ನನೊರ್ವ ಮಗನುಮಂ ವಿಕ್ರಮಾರ್ಜನಂಗೆ ಪೆಂಡತಿಯಪ್ಪನ್ನಳೊರ್ವ ಮಗಳುಮಂ ಪಡೆದಲ್ಲದಿರೆನೆಂದು ಪೂಣ್ದು ಪೋಗಿ ಪಯೋವ್ರತನೆಂಬ ದಿವ್ಯ ಮುನಿಪತಿಯಿಂ ಪುತ್ರಕಾಮೇಷ್ಟಿಗೆಯ್ಸೆ ಹೋಮಕುಂಡದಲ್ಲಿ ಧಗಧಗಿಸುವ ಜ್ವಾಲಾಮಾಲೆಗಳೊಳ್ ಕಿೞ್ತಬಾಳುಮತ್ತಪರಮುಮಭೇದ್ಯ ಕವಚಮುಂ ಬೆರಸೊಗೆದ ಧೃಷ್ಟದ್ಯುಮ್ನನೆಂಬ ಮಗನುಮಂ ಜ್ವಾಳಾಮಾಳಿನಿಯೊಗೆವಂತೊಗೆದ ಕೃಷ್ಣೆಯೆಂಬ ಮಗಳುಮಂ ಪಡೆದನಾ ಹೋಮಾಗ್ನಿಯೊಳ್ ಪುಟ್ಟಿದೊಂದು ದಿವ್ಯ ಚಾಪಮುಮಯ್ದು ದಿವ್ಯ ಶರಮೊಳವಾ ಬಿಲ್ಲನೇಱಿಸಿ ಆ ಸರಲ್ಗಳಿಂದಾತನ ಮನೆಯ ಮುಂದೆ ನಭದೊಳ್ ನಲಿನಲಿದಾಡುವ ಜಂತ್ರದ ಮೀನನೆಚ್ಚನುಮಾಕೆಗೆ ಗಂಡನಕ್ಕುಮೆಂದಾದೇಶಮಂತಪ್ಪ ಸಾಹಸಪುರುಷಂ ವಿಕ್ರಮಾರ್ಜುನನಲ್ಲದೆ ಪೆಱರಿಲ್ಲೆಂಬರದಱಿಂದಿನ್ನುಂ ಪಾಂಡವರೊಳರೆಂಬ ಮಾತುಗಳಂ ಬುದ್ಧಿಯೊಡೆಯರಾರಾನುಂ ನುಡಿವರ್ ದ್ರುಪದನುಮೀಗಳಾ ಕೂಸಿಂಗೆ ಸಯಂಬರಮಂ ಮಾಡಲೆಂದು ನೆಲದೊಳುಳ್ಳರಸು ಮಕ್ಕಳೆಲ್ಲರ್ಗಂ ಬೞಿಯನಟ್ಟಿದೊಡೆ ದುರ್ಯೋಧನಾದಿಗಳ್ ಮೊದಲಾದನೇಕ ದೇಶಾಧೀಶ್ವರರೆಲ್ಲಂ ಛತ್ರವತಿಯೆಂಬುದು ದ್ರುಪದನ ಪೊೞಲಾ ಪೊೞಲ್ಗೆ ವಂದಿರ್ದರಾ[ನಲ್ಲಿಗೆ ಪೋದಪೆನೆಂದು]* ಪೇೞೆ ತದ್ವೃತ್ತಾಂತಮೆಲ್ಲಮಂ ಕೇಳ್ದು ತಮ್ಮೊಳಾಳೋಚಿಸಿ-
(ಅದಲ್ಲದೆಯುಂ ಯಜ್ಞಸೇನನೆಂಬ ಮೊದಲ ಪೆಸರ ಪಾಂಚಾಳದೇಶದ ಅರಸಂ ದ್ರುಪದನೆಂಬಂ ದ್ರೋಣನೊಳ್ ಆದ ಪರಿಭವಮಂ ನೆನೆದು ‘ಆತನಂ ಕೊಲ್ವನ್ನನ್ ಒರ್ವ ಮಗನುಮಂ, ವಿಕ್ರಮಾರ್ಜನಂಗೆ ಪೆಂಡತಿಯಪ್ಪನ್ನಳ್ ಒರ್ವ ಮಗಳುಮಂ ಪಡೆದಲ್ಲದೆ ಇರೆನ್’ ಎಂದು ಪೂಣ್ದು ಪೋಗಿ, ಪಯೋವ್ರತನ್ ಎಂಬ ದಿವ್ಯ ಮುನಿಪತಿಯಿಂ ಪುತ್ರಕಾಮೇಷ್ಟಿಗೆಯ್ಸೆ, ಹೋಮಕುಂಡದಲ್ಲಿ ಧಗಧಗಿಸುವ ಜ್ವಾಲಾಮಾಲೆಗಳೊಳ್ ಕಿೞ್ತಬಾಳುಂ, ಅತ್ತಪರಮುಂ, ಅಭೇದ್ಯ ಕವಚಮುಂ ಬೆರಸು ಒಗೆದ ಧೃಷ್ಟದ್ಯುಮ್ನನೆಂಬ ಮಗನುಮಂ, ಜ್ವಾಳಾಮಾಳಿನಿಯೊಗೆವಂತೆ ಒಗೆದ ಕೃಷ್ಣೆಯೆಂಬ ಮಗಳುಮಂ ಪಡೆದನ್. ಆ ಹೋಮಾಗ್ನಿಯೊಳ್ ಪುಟ್ಟಿದೊಂದು ದಿವ್ಯ ಚಾಪಮುಂ ಅಯ್ದು ದಿವ್ಯ ಶರಂ ಒಳವು. ಆ ಬಿಲ್ಲನ್ ಏಱಿಸಿ, ಆ ಸರಲ್ಗಳಿಂದ ಆತನ ಮನೆಯ ಮುಂದೆ ನಭದೊಳ್ ನಲಿನಲಿದಾಡುವ ಜಂತ್ರದ ಮೀನನ್ ಎಚ್ಚನುಂ ಆಕೆಗೆ ಗಂಡನಕ್ಕುಂ ಎಂದು ಆದೇಶಂ. ಅಂತಪ್ಪ ಸಾಹಸಪುರುಷಂ ವಿಕ್ರಮಾರ್ಜುನನಲ್ಲದೆ ಪೆಱರಿಲ್ಲ ಎಂಬರ್. ಅದಱಿಂದ ‘ಇನ್ನುಂ ಪಾಂಡವರ್ ಒಳರ್’ ಎಂಬ ಮಾತುಗಳಂ ಬುದ್ಧಿಯೊಡೆಯರ್ ಆರಾನುಂ ನುಡಿವರ್. ದ್ರುಪದನುಂ ಈಗಳ್ ಆ ಕೂಸಿಂಗೆ ಸಯಂಬರಮಂ ಮಾಡಲೆಂದು ನೆಲದೊಳ್ ಉಳ್ಳ ಅರಸು ಮಕ್ಕಳೆಲ್ಲರ್ಗಂ ಬೞಿಯನ್ ಅಟ್ಟಿದೊಡೆ, ದುರ್ಯೋಧನಾದಿಗಳ್ ಮೊದಲಾದ ಅನೇಕ ದೇಶಾಧೀಶ್ವರರೆಲ್ಲಂ, ಛತ್ರವತಿಯೆಂಬುದು ದ್ರುಪದನ ಪೊೞಲ್, ಆ ಪೊೞಲ್ಗೆ ವಂದಿರ್ದರ್. [ಆನ್ ಅಲ್ಲಿಗೆ ಪೋಪೆನ್]’ ಎಂದು ಪೇೞೆ, ತದ್ವೃತ್ತಾಂತಮೆಲ್ಲಮಂ ಕೇಳ್ದು ತಮ್ಮೊಳ್ ಆಳೋಚಿಸಿ-)
ಅದೂ ಅಲ್ಲದೆ, ಮೊದಲು ಯಜ್ಞಸೇನ ಎಂಬ ಹೆಸರಿದ್ದ ಪಾಂಚಾಲ ದೇಶದ ಅರಸನಾದ ದ್ರುಪದ ಎಂಬುವನು ದ್ರೋಣನಿಂದ ತನಗಾದ ಅವಮಾನವನ್ನು ನೆನೆದು, ‘ಅವನನ್ನು ಕೊಲ್ಲುವಂಥ ಒಬ್ಬ ಮಗನನ್ನೂ, ವಿಕ್ರಮಾರ್ಜುನನಿಗೆ ಹೆಂಡತಿಯಾಗಬಲ್ಲ ಒಬ್ಬಳು ಮಗಳನ್ನೂ ಪಡೆಯದೆ ಬಿಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿ, ಪಯೋವ್ರತನೆಂಬ ಮಹಾಮುನಿಯಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಿದನು. ಆಗ ಹೋಮಕುಂಡದಲ್ಲಿ ಧಗಧಗಿಸುವ ಬೆಂಕಿಯ ನಾಲಗೆಗಳಿಂದ, ಸೆಳೆದ ಕತ್ತಿ, ಗುರಾಣಿ, ಒಡೆಯಲಾಗದ ಕವಚಗಳಿಂದ ಕೂಡಿ ಹುಟ್ಟಿದ ಧೃಷ್ಟದ್ಯುಮ್ನನೆಂಬ ಮಗನನ್ನೂ, ಕೊರಳಲ್ಲಿ ಬೆಂಕಿ ಕಟ್ಟಿಕೊಂಡವಳಂತೆ ಹುಟ್ಟಿಬಂದ ಒಬ್ಬ ಮಗಳನ್ನೂ ಪಡೆದನು. ಅದೇ ಹೋಮದ ಬೆಂಕಿಯಲ್ಲಿ ಹುಟ್ಟಿದ ಒಂದು ಬಿಲ್ಲೂ, ಐದು ದಿವ್ಯಬಾಣಗಳೂ ಇವೆ. ಆ ಬಿಲ್ಲನ್ನು ಎತ್ತಿ, ಆ ಬಾಣಗಳಿಂದ, ಆತನ ಮನೆಯ ಮುಂದೆ ಆಗಸದಲ್ಲಿ ಅತ್ತಿತ್ತ ಕುಣಿಯುತ್ತಿರುವ ಯಂತ್ರದ ಮೀನನ್ನು ಹೊಡೆದುರುಳಿಸಿದವನು ಆಕೆಯ ಗಂಡನಾಗುತ್ತಾನೆ ಎಂಬ ನಿಯಮವಿದೆ. ಅಂತಹ ಗಂಡುಗಲಿಯು ವಿಕ್ರಮಾರ್ಜುನನಲ್ಲದೆ ಬೇರೆ ಯಾರೂ ಇಲ್ಲವಂತೆ! ಹಾಗಾಗಿ ‘ಪಾಂಡವರು ಇನ್ನೂ ಬದುಕಿದ್ದಾರೆ’ ಎಂದು ಬುದ್ಧಿಯುಳ್ಳ ಯಾರೂ ಹೇಳುತ್ತಾರೆ! ದ್ರುಪದನು ಈಗ ಆ ಹೆಣ್ಣಿಗೆ ಸ್ವಯಂವರ ಮಾಡಲೆಂದು, ನೆಲದ ಮೇಲಿನ ಎಲ್ಲಾ ಅರಸುಮಕ್ಕಳಿಗೂ ಹೇಳಿ ಕಳಿಸಿದ್ದಾನೆ. ದುರ್ಯೋಧನನೇ ಮೊದಲಾದ ಅನೇಕ ದೇಶಗಳ ಒಡೆಯರು – ಛತ್ರವತಿ ಎಂಬುದು ದ್ರುಪದನ ಊರು – ಆ ಊರಿಗೆ ಬಂದಿದ್ದಾರೆ. ನಾನು ಅಲ್ಲಿಗೆ ಹೊರಟಿದ್ದೇನೆ ಎಂದು ಹೇಳಲು, ಆ ವಿಷಯವೆಲ್ಲವನ್ನೂ ಕೇಳಿ ತಮ್ಮೊಳಗೆ ಆಲೋಚಿಸಿ –
(*ಇಲ್ಲಿ ಪಂಪನ ಮೂಲ ನಿರೂಪಣೆಯಲ್ಲಿಯೇ ಒಂದು ಸಣ್ಣ ದೋಷವಿದೆ. ಧರ್ಮರಾಯನು ವಿಶ್ರಮಿಸುತ್ತಿದ್ದ ಬ್ರಾಹ್ಮಣನ ಹತ್ತಿರ ಬಂದು ‘ಆವ ನಾಡಿಂ ಬಂದಿರಿ? ಎಲ್ಲಿಗೆ ಪೋದಪಿರಿ?’ ಎಂದು ಕೇಳುತ್ತಾನಷ್ಟೆ. ಆಗ ಬ್ರಾಹ್ಮಣನು ‘…. ಹಸ್ತಿನಾಪುರದಿಂ ಬಂದೆನ್’ ಎಂದು ಉತ್ತರಿಸಿ ತನ್ನ ಮಾತು ಮುಂದುವರಿಸಿ, ದ್ರೌಪದಿಯ ಸ್ವಯಂವರವು ದ್ರುಪದನ ಊರಾದ ಛತ್ರವತಿಯಲ್ಲಿ ನಡೆಯಲಿದೆ ಎಂಬಲ್ಲಿಯವರೆಗೆ ಹಲವು ವಿಷಯಗಳನ್ನು ಹೇಳಿ ಮುಗಿಸಿ ಪುನಃ ‘ಆನಲ್ಲಿಂದಂ ಬಂದೆನ್’ ಎನ್ನುತ್ತಾನೆ. ಮೊದಲು ‘ಹಸ್ತಿನಾಪುರದಿಂದ ಬಂದೆ ಎಂದವನು’ ಕೊನೆಯಲ್ಲಿ ‘ಛತ್ರವತಿಯಿಂದ ಬಂದೆ’ ಎಂದು ಹೇಳುವುದು ಅಸಂಗತವಾಗುತ್ತದೆ. ನಿಜವಾಗಿ ಅವನು ‘ಆನ್ ಅಲ್ಲಿಗೆ ಪೋದಪೆನ್’ ಎಂದು ಹೇಳಬೇಕಾಗಿತ್ತು. ಹರಿದ ಚಿಂದಿಯುಟ್ಟ ಬಡಬ್ರಾಹ್ಮಣನಾದ ಅವನು ರಾಜರ ಮನೆಯ ಮದುವೆಗೆ, ಏನಾದರೂ ದಾನ-ಗೀನ ಸಿಕ್ಕೀತೆಂಬ ಆಸೆಯಿಂದ ಹೊರಟಿದ್ದಾನೆ ಎಂಬುದನ್ನೂ ಗಮನಿಸಬೇಕು. ಕಥಾ ನಿರೂಪಣೆಯ ಈ ಹಂತದಲ್ಲಿ ನಮ್ಮ ಮಹಾಕವಿ ಪಂಪನಿಗೆ ಸಣ್ಣ ತೂಕಡಿಕೆ ಬಂತೋ ಏನೋ!)