ದಯವಿಟ್ಟು ಗಮನಿಸಿ: sundararao.in ಜಾಲತಾಣದಲ್ಲಿ ಮುಂದುವರಿಸಿದ್ದೇನೆ.
ಮಂಗಳವಾರ, ಅಕ್ಟೋಬರ್ 13, 2020
ಭಾನುವಾರ, ಆಗಸ್ಟ್ 30, 2020
ಪಂಪಭಾರತ ಆಶ್ವಾಸ ೩ ಪದ್ಯಗಳು ೫೩ರಿಂದ ೬೪
ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಿಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ-
ಆಗ ಪಾಂಡವರು ತಮ್ಮನ್ನು ಬೇರೆಯವರು ಗುರುತಿಸದಂತೆ ಬ್ರಾಹ್ಮಣವೇಷದಲ್ಲಿ ಬ್ರಾಹ್ಮಣರ ಸಭೆಯಲ್ಲಿ ಬಂದು ಇದ್ದರು.
ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ
ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ|
ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ
ವ್ವಳಿಸಿರೆ ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ|| ೫೩ ||
(ಇಳೆಯೊಳ್ ಉದಗ್ರ ವೀರ ಭಟ, ತುಂಗ ಮತಂಗಜ, ವಾಜಿ ರಾಜಿ;
ಚೌಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ;
ವಿಯತ್ತಳದೊಳ್ ಅನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ್
ಅವ್ವಳಿಸಿರೆ,
ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ)
ನೆಲದ ಮೇಲೆ ಶ್ರೇಷ್ಠರಾದ ವೀರ ಯೋಧರು, ಎತ್ತರವಾದ ಆನೆಗಳು, ಕುದುರೆಗಳ ಗುಂಪು; ತೊಟ್ಟಿಯ ಮಹಡಿಗಳಲ್ಲಿ ನೆಲದೊಡೆಯರಾದ ರಾಜರುಗಳ ಸಮೂಹ; ಆಕಾಶದಲ್ಲಿ ಕಿಂಪುರುಷರು, ಕಿನ್ನರರು, ಖೇಚರರು, ಸಿದ್ಧರು ಮುಂತಾದವರ ಗುಂಪು ಇವುಗಳಿಂದ ಕೂಡಿ ಆ ಸ್ವಯಂವರ ಸೌಧವು ಮೂರು ನೆಲೆಗಳಲ್ಲಿ ಮೂರುಲೋಕಗಳು ಒಂದೆಡೆ ಸೇರಿದಂತೆ ಕಾಣಿಸುತ್ತಿತ್ತು.
ವ|| ಆಗಳ್ ವಿದಿತವೃತ್ತಾಂತೆಯಾಗಿ ದ್ರೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ ಚೇಟಿ-
(ಆಗಳ್ ವಿದಿತವೃತ್ತಾಂತೆಯಾಗಿ, ದ್ರೌಪದಿಯ ಕೆಲದೊಳ್ ಇರ್ದ ಸುಂದರ ಮಾಲೆಯೆಂಬ ಚೇಟಿ)
ಆಗ, (ಆಗಮಿಸಿದ್ದ ರಾಜರ ಕುರಿತಂತೆ) ವಿಷಯ ಸಂಗ್ರಹ ಮಾಡಿಕೊಂಡು ದ್ರೌಪದಿಯ ಪಕ್ಕದಲ್ಲಿದ್ದ ಸುಂದರಮಾಲೆ ಎಂಬ ಚೇಟಿಯು-
ಮ|| ಕನಕೋಚ್ಚಾಸನಸಂಸ್ಥಿತಂ ನೃಪನವಂ ಬೆಂಗೀಶನುತ್ತುಂಗ ಪೀ
ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ ಮನಂಗೊಂಡು ನಿ|
ನ್ನನೆ ಕಿೞ್ಗಣ್ಣೊಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ
ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪತ್ರೇಕ್ಷಣೇ || ೫೪||
(ಕನಕ ಉಚ್ಚ ಆಸನ ಸಂಸ್ಥಿತಂ ನೃಪನ್ ಅವಂ ಬೆಂಗೀಶನ್; ಉತ್ತುಂಗ ಪೀನ ನಿಜ ಅಂಸ ಅರ್ಪಿತ ಲಂಬಹಾರನ್ ಅವನ್ ಆ ಪಾಂಡ್ಯಂ; ಮನಂಗೊಂಡು ನಿನ್ನನೆ ಕಿೞ್ಗಣ್ಣೊಳೆ ನೋಡುತ ಇರ್ಪವನ್ ಅವಂ ಚೇರಮ್ಮನ್; ಆದಿತ್ಯ ತೇಜನ್ ಅವಂ ನೋಡು ಕಳಿಂಗದೇಶದ ಅರಸಂ ಪಂಕೇಜ ಪತ್ರೇಕ್ಷಣೇ)
ಬಂಗಾರದ ಎತ್ತರವಾದ ಆ ಆಸನದಲ್ಲಿ ಕುಳಿತಿರುವವನು ವೆಂಗಿದೇಶದ ಅರಸ; ಎತ್ತರವಾಗಿ ಉಬ್ಬಿದ ತನ್ನ ಭುಜಗಳಿಂದ ತೂಗುತ್ತಿರುವ ಹಾರವನ್ನು ಧರಿಸಿರುವವನು ಪಾಂಡ್ಯದೇಶದ ಅರಸ; ನಿನ್ನ ಮೇಲೆ ಮನಸ್ಸಿಟ್ಟು ನಿನ್ನನ್ನೇ ಕೆಳಗಣ್ಣಿನಿಂದ ನೋಡುತ್ತಿರುವವನು ಕೇರಳದೇಶದ ಚೇರಮ ರಾಜ; ಸೂರ್ಯನಂಥ ತೇಜಸ್ವಿಯಾದ ಓ ಅವನು ಕಳಿಂಗದೇಶದ ಅರಸ; ತಾವರೆಗಣ್ಣಿನ ಹೆಣ್ಣೇ ಈ ಎಲ್ಲ ಅರಸರನ್ನೂ ನೋಡು!
ವ|| ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗೆ ಪೊಗಳುತೆ ವರ್ಪವರ ಸರಂಗಳೊಳಂ ಪಾಡುವ ಪಾಠಕಾಱರಿಂಚರಂಗಳೊಳೆಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ-
(ಮತ್ತೆ ಇತ್ತ ಬೀಸುವ ಚಾಮರಂಗಳ ಪೊಳಪಿನೊಳಂ, ಎತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ, ದೆಸೆಗಳೆಲ್ಲಂ ಧವಳಿಸಿದನ್ನವಾಗೆ, ಪೊಗಳುತೆ ವರ್ಪವರ ಸರಂಗಳೊಳಂ, ಪಾಡುವ ಪಾಠಕಾಱರ ಇಂಚರಂಗಳೊಳ್ ಎಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ, ಮಣಿಮಯಪೀಠದ ಮೇಲೆ ಕಾಲನ್ ಅವಷ್ಟಂಭದಿಂ ನೀಡಿ)
ಮತ್ತೆ ಇತ್ತ, ಬೀಸುವ ಚಾಮರಗಳ ಓಲಾಟದಿಂದ, ಬೆಳುಗೊಡೆಗಳು ಸೂಸುವ ಬೆಳಕಿನಿಂದ ಎಲ್ಲ ದಿಕ್ಕುಗಳೂ ಬೆಳಗುತ್ತಿರಲು, ಹೊಗಳುತ್ತಾ ಬರುತ್ತಿರುವವರ ಧ್ವನಿಗಳಿಂದ, ಹಾಡುವ ಹೊಗಳುಭಟರ ಇಂಪಾದ ಸ್ವರಗಳಿಂದ ದಿಕ್ಕುಗಳೆಲ್ಲ ತುಂಬಿ ಹೋಗಿರಲು, ರತ್ನಪೀಠದ ಮೇಲೆ ಠೇಂಕಾರದಿಂದ ಕಾಲು ಚಾಚಿ ಕುಳಿತುಕೊಂಡು-
ಮ|| ಅಲರಂಬಿಂದುಱದೆನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತೆ ನೆ
ಯ್ದಿಲ ಕಾವಂ ತಿರುಪುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ|
ೞ್ಕೆಲದೊಳ್ ಬಂದಿರೆ ನೋಡಿ ಸೋಲ್ತು ನಿನಗಾ ಗೇಯಕ್ಕೆ ಸೋಲ್ತಂತೆವೋಲ್
ತಲೆಯಂ ತೂಗುವವಂ ಸುಯೋಧನನೃಪಂ ನೀನಾತನಂ ನೋಡುಗೇ|| ೫೫||
[ʼಅಲರಂಬು (ಇದು) ಇಂದು ಉಱದೆ ಎನ್ನ ಮೆಲ್ಲೆರ್ದೆಯನ್ ಇಂತು ಉರ್ಚಿತ್ತುʼ ಎಂಬಂತೆ, ನೆಯ್ದಿಲ ಕಾವಂ ತಿರುಪುತ್ತುಂ ಒಂದನ್. ಅನಿಬರ್ ತಮ್ಮಂದಿರುಂ ತನ್ನ ಎರೞ್ಕೆಲದೊಳ್ ಬಂದಿರೆ, ನೋಡಿ ಸೋಲ್ತು ನಿನಗೆ, ಆ ಗೇಯಕ್ಕೆ ಸೋಲ್ತಂತೆವೋಲ್ ತಲೆಯಂ ತೂಗುವವಂ ಸುಯೋಧನನೃಪಂ, ನೀನಾತನಂ ನೋಡುಗೇ]
(ʼಅಲರಂಬು ಇಂದು ಉಱದೆ ಎನ್ನ ಮೆಲ್ಲೆರ್ದೆಯನ್ ಇಂತು ಉರ್ಚಿತ್ತು ಇದುʼ -ಇಲ್ಲಿ ಅನ್ವಯಾನುಸಾರ ಅರ್ಥ ಮಾಡುವಲ್ಲಿ ಕೊಂಚ ಕ್ಲಿಷ್ಟತೆ ಇದೆ. ಕೊನೆಯ ಶಬ್ದವಾದ
ʼಇದುʼವನ್ನು ಮೊದಲ ಶಬ್ದ ʼಅಲರಂಬುʼ ಎಂಬುದರ ನಂತರ ತಂದುಕೊಂಡರೆ ಅರ್ಥವು ಸ್ಪಷ್ಟವಾಗುತ್ತದೆ.)
‘ಈ ಹೂಬಾಣವು (ʼಹೂಬಾಣವಿದುʼ) ಇಂದು ನನ್ನ ಮೃದುಹೃದಯವನ್ನು ಬಿಡದೆ ಹೀಗೆ ಭೇದಿಸಿತು’ ಎನ್ನುವ ಹಾಗೆ ಒಂದು ನೈದಿಲೆಯ ಕಾವನ್ನು ಹಿಡಿದು ತಿರುಗಿಸುತ್ತಾ, ತಮ್ಮಂದಿರೆಲ್ಲರೂ ತನ್ನ ಎರಡು ಕಡೆಗಳಲ್ಲಿ ಬಂದು ನಿಂತಿರಲು, ನಿನ್ನನ್ನು ಕಂಡು ಸೋತಿದ್ದರೂ ಸಹ ಅದನ್ನು ತೋರಿಸಿಕೊಳ್ಳಲು ತಯಾರಿಲ್ಲದೆ, ತನ್ನ ಹೊಗಳುಭಟರ ಗಾಯನಕ್ಕೆ ಮೆಚ್ಚಿದವನಂತೆ ತಲೆಯನ್ನು ತೂಗುತ್ತಿರುವ ಇವನೇ ಸುಯೋಧನ. ನೀನು ಅವನನ್ನು ನೋಡು’.
(ಟಿಪ್ಪಣಿ: ಸುಂದರಮಾಲೆಯ ʼ ನೋಡಿ ಸೋಲ್ತು ನಿನಗೆ, ಆ ಗೇಯಕ್ಕೆ ಸೋಲ್ತಂತೆವೋಲ್ ತಲೆಯಂ ತೂಗುವವಂ ಸುಯೋಧನನೃಪಂʼ ಎಂಬ ಮಾತು ದುರ್ಯೋಧನನ ಸ್ವಭಾವವನ್ನೂ
ದ್ರೌಪದಿಗೆ ತಿಳಿಸುತ್ತಿದೆ. ದುರ್ಯೋಧನನ ಮುಖಭಾವಕ್ಕೂ ಅವನ ಒಳಮನಸ್ಸಿಗೂ ಸಂಬಂಧವಿಲ್ಲ ಎಂಬುದನ್ನು
ಸುಂದರಮಾಲೆಯು ಸೂಚ್ಯವಾಗಿ ದ್ರೌಪದಿಗೆ ತಿಳಿಸುತ್ತಿದ್ದಾಳೆ. ಹೀಗೆ ಅವಳು ದುರ್ಯೋಧನನನ್ನು ಪರಿಚಯ
ಮಾಡಿಕೊಡುವ ಚೇಟಿ ಮಾತ್ರವಾಗದೆ. ಅವನ ಕುರಿತು ಎಚ್ಚರ ವಹಿಸಬೇಕಾದ ಅಗತ್ಯವನ್ನೂ ಪರೋಕ್ಷವಾಗಿ ಹೇಳುವ
ಹಿರಿಯ ಗೆಳತಿಯಾಗಿ ಕಾಣುತ್ತಾಳೆ, ನಿಜವಾದ ಅರ್ಥದಲ್ಲಿ ʼವಿದಿತವೃತ್ತಾಂತೆʼಯಾಗುತ್ತಾಳೆ.)
ವ|| ಮತ್ತಿತ್ತ ಮಿಂಚಂ ತಟ್ಟಿ ಮೆಡಱಿದಂತೆ ಸುತ್ತಿಱಿದ ಕಾಲ್ಗಾಪಿನ ಕಡಿತಲೆಯ ಬಳಸಿದಗಣ್ಯ ಪಣ್ಯಾಂಗನಾಜನದ ನಡುವೆ ಮಣಿಮಯಪೀಠಂಗಳನೇಱಿ-
(ಮತ್ತಿತ್ತ ಮಿಂಚಂ ತಟ್ಟಿ ಮೆಡಱಿದಂತೆ ಸುತ್ತಿಱಿದ ಕಾಲ್ಗಾಪಿನ ಕಡಿತಲೆಯ ಬಳಸಿದ ಅಗಣ್ಯ ಪಣ್ಯಾಂಗನಾಜನದ ನಡುವೆ ಮಣಿಮಯಪೀಠಂಗಳನ್ ಏಱಿ)
.
ಮತ್ತು ಇತ್ತ ಕಡೆ ಮಿಂಚಿನ ಕೋಲುಗಳಿಂದ ಹೆಣೆದ ತಟ್ಟಿಯಂತೆ ಇರುವ ಭಟರು,
ಆಯುಧಧಾರಿಗಳು, ಲೆಕ್ಕವಿಲ್ಲದಷ್ಟು ಪಣ್ಯಾಂಗನೆಯರ ನಡುವೆ ಮಣಿಗಳಿಂದ ಅಲಂಕರಿಸಿದ ಪೀಠಗಳನ್ನು ಏರಿ ಕುಳಿತ-
ಕಂ|| ಆಯತ ಯದುವಂಶ ಕುಲ
ಶ್ರೀಯಂ ತೞ್ಕೈಸಿದದಟರತಿರಥರವರ|
ತ್ಯಾಯತಭುಜಪರಿಘರ್ ನಾ
ರಾಯಣ ಬಲದೇವರೆಂಬರಂಬುಜವದನೇ|| ೫೬||
(ಆಯತ ಯದುವಂಶ ಕುಲಶ್ರೀಯಂ ತೞ್ಕೈಸಿದ ಅದಟರ್ ಅತಿರಥರ್ ಅವರ್ ಅತ್ಯಾಯತ ಭುಜ ಪರಿಘರ್ ನಾರಾಯಣ ಬಲದೇವರ್ ಎಂಬರ್ ಅಂಬುಜವದನೇ)
ವಿಸ್ತಾರವಾದ ಯದುವಂಶವನ್ನು ಆಲಂಗಿಸಿದ ವೀರರೂ, ಅತಿರಥರೂ, ಉದ್ದವಾದ ಕೈಗಳಿರುವವರೂ ಆದ ಅವರೇ ನಾರಾಯಣ, ಬಲದೇವರು.
(ಟಿಪ್ಪಣಿ: ಇಲ್ಲಿ ಸುಂದರಮಾಲೆ ನಾರಾಯಣ-ಬಲದೇವ ಇಬ್ಬರೂ ಪ್ರತ್ಯೇಕ
ವ್ಯಕ್ತಿಗಳಲ್ಲ, ಒಬ್ಬರೇ ಎಂಬಂತೆ ಸಗಟಾಗಿ ಅವರನ್ನು ಪರಿಚಯಿಸುತ್ತಿದ್ದಾಳೆ! ಉಳಿದ ರಾಜರ ಕಡೆ ʼನೋಡುʼ ಎಂದು ಹೇಳಿದರೆ ನಾರಾಯಣ-ಬಲದೇವರಿಗೆ ಆ ಸೌಭಾಗ್ಯವೂ ಇಲ್ಲ! ಬೇರೆ
ರಾಜರನ್ನು ನೋಡುವಾಗ ಅವಳು ʼಪಂಕೇಜ ಪತ್ರೇಕ್ಷಣೆʼ; ನಾರಾಯಣ-ಬಲದೇವರ ವಿಷಯಕ್ಕೆ ಬಂದಾಗ ಅವಳು ʼಅಂಬುಜಮುಖಿʼ!
ಇನ್ನು ಅವರಿಬ್ಬರೂ ತಮ್ಮೊಂದಿಗೆ ಅನೇಕ ಪಣ್ಯಾಂಗನೆಯರನ್ನು ಕರೆತಂದಿದ್ದರು ಎಂದು ಕವಿ ಹೇಳುತ್ತಿರುವುದು ಅವರು ದ್ರೌಪದಿಯನ್ನು
ಮದುವೆಯಾಗುವ ಉದ್ದೇಶದಿಂದ ಅಲ್ಲಿಗೆ ಬಂದಿರಲಿಲ್ಲ ಎಂದು ಸೂಚಿಸುವಂತಿದೆ.)
ವ|| ಎಂದು ಕಿಱಿದಂತರಂ ಪೋಗಿ-
(ಎಂದು ಕಿಱಿದು ಅಂತರಂ ಪೋಗಿ)
ಎಂದು ಸ್ವಲ್ಪದೂರ
ಹೋಗಿ
ಉ|| ಇಂತಿವರಿನ್ನರೀ ದೊರೆಯರೆಂದಱಿವಂತಿರೆ ಪೇೞ್ದುವೇೞ್ದು ರಾ
ಜಾಂತರದಿಂದೆ ರಾಜಸುತೆಯಂ ನಯದಿಂದವಳುಯ್ದಳಂತು ಸ|
ದ್ಭ್ರಾಂತ ಸಮೀರಣೋತ್ಥಿತ ವಿಶಾಲ ವಿಳೋಳ ತರಂಗ ರೇಖೆ ಪ
ದ್ಮಾಂತರದಿಂದಮಿಂಬಱಿದು ಮಾನಸಹಂಸಿಯನುಯ್ವಮಾರ್ಗದಿಂ|| ೫೭||
(ಇಂತು, ಇವರ್ ಇನ್ನರ್, ಈ ದೊರೆಯರ್, ಎಂದು ಅಱಿವಂತಿರೆ ಪೇೞ್ದುವೇೞ್ದು, ರಾಜಾಂತರದಿಂದೆ ರಾಜಸುತೆಯಂ ನಯದಿಂದ ಅವಳ್ ಉಯ್ದಳ್ ಅಂತು ಸದ್ಬ್ರಾಂತ ಸಮೀರಣ ಉತ್ಥಿತ ವಿಶಾಲ ವಿಳೋಳ ತರಂಗ ರೇಖೆ ಪದ್ಮಾಂತರದಿಂದಂ ಇಂಬಱಿದು ಮಾನಸಹಂಸಿಯನ್ ಉಯ್ವ ಮಾರ್ಗದಿಂ)
ಹೀಗೆ ‘ಇವನು ಇಂಥವನು, ಇವನ ಯೋಗ್ಯತೆ ಇಂಥದ್ದು’ ಎಂದು ಒಬ್ಬೊಬ್ಬ ರಾಜನ ಬಗ್ಗೆಯೂ ವಿವರಿಸಿ ಹೇಳಿ, ಸುಂದರಮಾಲೆಯು ದ್ರೌಪದಿಯನ್ನು ನಯವಾಗಿ ಒಬ್ಬರಾದ
ನಂತರ ಮತ್ತೊಬ್ಬ ರಾಜನ ಹತ್ತಿರ ಕರೆದುಕೊಂಡು ಹೋದಳು. ಮಾನಸ ಸರೋವರದಲ್ಲಿ ಗಾಳಿ ಚೆನ್ನಾಗಿ ಬೀಸಿದಾಗ ನೀರಲ್ಲಿ ಏಳುವ
ತರಂಗವು ಹಂಸವನ್ನು ಹೇಗೆ ಹದವರಿತು ಕಮಲದಿಂದ ಕಮಲಕ್ಕೆ ಸಾಗಿಸುತ್ತದೆಯೋ ಹಾಗೆ ಕಾಣಿಸುತ್ತಿತ್ತು
ಈ ದೃಶ್ಯ.
(ಟಿಪ್ಪಣಿ: ಡಿ ಎಲ್
ಎನ್ ಅವರ ’ಪಂಪಭಾರತ ದೀಪಿಕೆ’ಯಲ್ಲಿ ಈ ಪದ್ಯವನ್ನು
’ರಘುವಂಶ 9-26ಕ್ಕೆ ಹೋಲಿಸಿ’ ಎಂದು
ಇದೆ. ಇದು ಅಚ್ಚಿನ ದೋಷ; 6-26 ಎಂದು ಆಗಬೇಕು. ಕಾಳಿದಾಸನ
ಈ ಪದ್ಯದ ಉಪಮೆಯನ್ನೇ ಪಂಪನು ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಬಳಸಿಕೊಂಡಿದ್ದಾನೆ. ಹೀಗೆ
ಬಳಸಿರುವುದು ಕಾಳಿದಾಸ ಕವಿಗೆ ಪಂಪನು ಪರೋಕ್ಷವಾಗಿ ಸಲ್ಲಿಸಿರುವ ಗೌರವ; ಪಂಪನ ಅಭಿರುಚಿಯ
ದಿಕ್ಸೂಚಿ.)
ತಾಮ್ ಸೈವ ವೇತ್ರಗ್ರಹಣೇ ನಿಯುಕ್ತಾ ರಾಜಾಂತರಂ ನನೀಯ
|
ಸಮೀರಣೋತ್ಥೇವ ತರಂಗರೇಖಾ ಪದ್ಮಾಂತರಮ್ ಮಾನಸರಾಜಹಂಸೀಂ
|| 6-26
Because she is
aware of princess indumati's thinking that chatelaine sunanda as
a macebearer for that occasion led the princess to another suitor king as with a ripple when
upheaved by a breeze wafts a she-swan from one lotus to another in mAnasa Lake.
(ರಾಜಕುಮಾರಿ ಇಂದುಮತಿಯ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದ ಚೇಟಿ ಸುನಂದೆಯು ಮಾನಸ
ಸರೋವರದಲ್ಲಿ ಎದ್ದ ತರಂಗವು ಹಂಸವನ್ನು ಒಂದು ಕಮಲದಿಂದ ಇನ್ನೊಂದು ಕಮಲದ ಕಡೆಗೆ ತೇಲಿಸಿಕೊಂಡು ಹೋಗುವಂತೆ
ಮುಂದಿನ ರಾಜನ ಕಡೆಗೆ ಆಕೆಯನ್ನು ಕರೆದುಕೊಂಡು ಹೋದಳು)
ವ|| ಅಂತು ನೆರೆದರಸುಮಕ್ಕಳಾರುಮಂ ಮೆಚ್ಚದೆ ಮಗುೞೆವರೆ ದ್ರುಪದನಿದಱೊಳೆಲ್ಲಮೇನಿಂ ಹೋಮಾಗ್ನಿಸಂಭವಮಪ್ಪ ದಿವ್ಯಚಾಪಮನೇಱಿಸಿಯುಮೀಯಯ್ದು ಶರದೊಳಾಕಾಶದೊಳ್ ನಲಿದು ಪೊಳೆಯುತ್ತಿರ್ಪ ಜಂತ್ರದ ಮೀನನಿಸಲಾರ್ಪೊಡೆ ಬಂದೇಱಿಸಿಯುಮೆಚ್ಚು ಗೆಲ್ಲಂಗೊಂಡೆನ್ನ ಮಗಳಂ ಮದುವೆಯಪ್ಪುದೆಂಬುದುಮಾಮಾಮೆ ಬಿಲ್ಲನೇಱಿಸಿದಪೆವೆಂದನಿಬರಾನುಮರಸುಮಕ್ಕಳ್ ಬಂದು-
(ಅಂತು ನೆರೆದ ಅರಸುಮಕ್ಕಳ್ ಆರುಮಂ ಮೆಚ್ಚದೆ ಮಗುೞೆವರೆ, ದ್ರುಪದನ್, ’ಇದಱೊಳೆಲ್ಲಂ ಏನ್? ಇಂ ಹೋಮಾಗ್ನಿಸಂಭವಂ ಅಪ್ಪ ದಿವ್ಯಚಾಪಮನ್ ಏಱಿಸಿಯುಂ ಈ ಅಯ್ದು ಶರದೊಳ್ ಆಕಾಶದೊಳ್ ನಲಿದು ಪೊಳೆಯುತ್ತಿರ್ಪ ಜಂತ್ರದ ಮೀನನ್ ಇಸಲ್ ಆರ್ಪೊಡೆ, ಬಂದು, ಏಱಿಸಿಯುಂ, ಎಚ್ಚು, ಗೆಲ್ಲಂಗೊಂಡು,
ಎನ್ನ ಮಗಳಂ ಮದುವೆಯಪ್ಪುದು’ ಎಂಬುದುಂ ’ಆಂ, ಆಂ, ಆಮೆ ಬಿಲ್ಲನ್ ಏಱಿಸಿದಪೆವು’ ಎಂದು ಅನಿಬರಾನುಂ ಅರಸುಮಕ್ಕಳ್ ಬಂದು)
ಹಾಗೆ (ದ್ರೌಪದಿಯು) ಸೇರಿದ ಅರಸುಮಕ್ಕಳಲ್ಲಿ
ಯಾರನ್ನೂ ಮೆಚ್ಚದೆ ಹಿಂದೆ ಬರಲು, ದ್ರುಪದನು ’ಇದರಿಂದೇನು? ಇನ್ನು ಹೋಮಾಗ್ನಿಯಲ್ಲಿ ಹುಟ್ಟಿದ
ದಿವ್ಯಚಾಪವನ್ನು ಏರಿಸಿ, ಈ ಐದು ಬಾಣಗಳಲ್ಲಿ, ಆಕಾಶದಲ್ಲಿ ಅಲುಗಾಡುತ್ತ ಹೊಳೆಯುತ್ತಿರುವ ಯಂತ್ರದ
ಮೀನಿಗೆ ಬಾಣ ಬಿಡಬಲ್ಲವರಿದ್ದರೆ, ಬಂದು, ಏರಿಸಿ, ಬಾಣ ಬಿಟ್ಟು, ಗೆದ್ದು, ನನ್ನ ಮಗಳನ್ನು
ಮದುವೆಯಾಗಬಹುದು’ ಎನ್ನಲು ’ನಾವು, ನಾವು, ನಾವು ಬಿಲ್ಲನ್ನು ಏರಿಸುತ್ತೇವೆ’ ಎನ್ನುತ್ತ ಅನೇಕ ಅರಸುಮಕ್ಕಳು ಮೇಲೆ ಬಿದ್ದು
ಬಂದು-
ಉ|| ಏಱಿಪೆವೆಂದವರ್ ನೆಲದಿನೆತ್ತಲುಮಾಱದೆ ಬಿೞ್ದು ನೆತ್ತರಂ
ಕಾಱಿಯುಮೆತ್ತಿ ಕಯ್ಯುಡಿದುಮಾಗಳೆ ಕಾಲುಡಿದುಂ ಬೞಲ್ದು ಪ
ಲ್ಲಾಱೆ ಪೊಡರ್ಪುಗೆಟ್ಟುಸಿರಲಪ್ಪೊಡಮಾಱದೆ ಪೋದೊಡಾಗಳಾ
ನೇಱಿಪೆನೆಂದು ಪೊಚ್ಚಱಿಸಿ ಬಂದು ಸುಯೋಧನನುಗ್ರಚಾಪಮಂ|| ೫೮||
(’ಏಱಿಪೆವು’ ಎಂದವರ್ ನೆಲದಿನ್ ಎತ್ತಲುಂ ಆಱದೆ, ಬಿೞ್ದು ನೆತ್ತರಂ ಕಾಱಿಯುಂ, ಎತ್ತಿ ಕಯ್ಯುಡಿದುಂ ಆಗಳೆ ಕಾಲುಡಿದುಂ, ಬೞಲ್ದು ಪಲ್ಲಾಱೆ, ಪೊಡರ್ಪುಗೆಟ್ಟು ಉಸಿರಲಪ್ಪೊಡಂ ಆಱದೆ ಪೋದೊಡೆ, ಆಗಳ್ ’ಆನ್ ಏಱಿಪೆನ್’ ಎಂದು ಪೊಚ್ಚಱಿಸಿ ಬಂದು ಸುಯೋಧನನ್ ಉಗ್ರಚಾಪಮಂ)
(ಬಿಲ್ಲನ್ನು) ’ಏರಿಸುತ್ತೇವೆ’ ಎಂದು ಬಂದ ಕೆಲವರು
ಅದನ್ನು ಎತ್ತಲೂ ಕೂಡ ಸಾಧ್ಯವಾಗದೆ, ಕೆಳಗೆ ಬಿದ್ದು ರಕ್ತ ಕಾರಿಕೊಂಡರು; ಕೆಲವರು ಎತ್ತಲುಹೋಗಿ ಕೈ ಮುರಿದುಕೊಂಡರು; ಕೆಲವರು
ಕಾಲು ಮುರಿದುಕೊಂಡರು; ಮತ್ತೆ ಕೆಲವರು ಹಲ್ಲು ಒಣಗಿ ಹೋಗಿ ಪೆಚ್ಚಾದರು; ಕೆಲವರಿಗೆ ಉಸಿರಾಡಲೂ
ಸಾಧ್ಯವಾಗಲಿಲ್ಲ. ಆಗ ದುರ್ಯೋಧನನು ’ನಾನು ಏರಿಸುತ್ತೇನೆ’ ಎಂದು ಮುಂದೆ
ಬಂದು ಭಯಂಕರವಾದ ಬಿಲ್ಲನ್ನು-
ವ|| ಮೂಱು ಸೂೞ್ ಬಲವಂದು ಪೊಡಮಟ್ಟು-
ಮೂರು ಬಾರಿ ಸುತ್ತು ಬಂದು, ನಮಸ್ಕರಿಸಿ-
ಕಂ|| ಪಿಡಿದಾರ್ಪ ಭರದಿನೆತ್ತ
ಲ್ಕೊಡರಿಸಿದೊಡೆ ನೆಲದಿನಣಮೆ ತಳರದೆ ಬಿಲ್ ನಿ|
ಲ್ತೊಡೆ ಗುಡು ಗುಡು ಗುಡು ಗೊಳ್ಳೆಂ
ದೊಡನಾರೆ ಸುಯೋಧನಂ ಕರಂ ಸಿಗ್ಗಾದಂ|| ೫೯||
(ಪಿಡಿದು ಆರ್ಪ ಭರದಿನ್ ಎತ್ತಲ್ಕೆ ಒಡರಿಸಿದೊಡೆ, ನೆಲದಿನ್ ಅಣಮೆ ತಳರದೆ ಬಿಲ್ ನಿಲ್ತೊಡೆ, ಗುಡು ಗುಡು ಗುಡು ಗೊಳ್ಳೆಂದು ಒಡನೆ ಆರೆ, ಸುಯೋಧನಂ ಕರಂ ಸಿಗ್ಗಾದಂ)
ಬಿಲ್ಲನ್ನು ಹಿಡಿದು ತನಗೆ ಸಾಧ್ಯವಾದಷ್ಟು ವೇಗದಿಂದ ಒಮ್ಮೆಲೆ ಎತ್ತಲು
ತೊಡಗಿದಾಗ, ಆ ಬಿಲ್ಲು ನೆಲದಿಂದ ಸ್ವಲ್ಪವೂ ಮೇಲೇಳದೆ ನಿಂತುಕೊಂಡಿತು. ಇದನ್ನು ಕಂಡ ಸೇರಿದ
ಜನರೆಲ್ಲರೂ ಗೊಳ್ಳೆಂದು ನಕ್ಕು ಜೋರಾಗಿ ಶಬ್ದ ಮಾಡಿದರು. ಇದರಿಂದ ದುರ್ಯೋಧನನು ತುಂಬಾ ಅವಮಾನಗೊಂಡನು.
ವ|| ಆಗಿ ಪೋಗಿ ಕರ್ಣನ ಮೊಗಮಂ ನೋಡಿದೊಡೆ ಕರ್ಣನಾಳ್ದನ ಸಿಗ್ಗಾದ ಮೊಗಮಂ ಕಂಡು-
(ಆಗಿ, ಪೋಗಿ ಕರ್ಣನ ಮೊಗಮಂ ನೋಡಿದೊಡೆ, ಕರ್ಣನ್ ಆಳ್ದನ ಸಿಗ್ಗಾದ ಮೊಗಮಂ ಕಂಡು)
ಆಗಿ, ಹೋಗಿ ಕರ್ಣನ ಮುಖವನ್ನು ಕಂಡಾಗ ಕರ್ಣನು ಅರಸನ ಅವಮಾನಿತ
ಮುಖವನ್ನು ಕಂಡು
ಕಂ|| ಆನೇಱಿಪೆನೆಂದಾ ಕಾ
ನೀನಂ ಬಂದೆತ್ತಿ ಬಿಲ್ಲನೇಱಿಸಿ ತೆಗೆಯಲ್|
ತಾನಾರ್ತನಿಲ್ಲ ತೆಗೆವಂ
ತಾ ನೃಪತಿಗಳರಿಗನಿದಿರೊಳೇಂ ಪುಟ್ಟಿದರೇ || ೬೦||
(’ಆನ್ ಏಱಿಪೆನ್’ ಎಂದು ಆ ಕಾನೀನಂ ಬಂದು, ಎತ್ತಿ ಬಿಲ್ಲನ್ ಏಱಿಸಿ ತೆಗೆಯಲ್ ತಾನ್ ಆರ್ತನಿಲ್ಲ!
ತೆಗೆವಂತೆ ಆ ನೃಪತಿಗಳ್ ಅರಿಗನ ಇದಿರೊಳ್ ಏಂ ಪುಟ್ಟಿದರೇ?)
’ನಾನು ಏರಿಸುತ್ತೇನೆ’ ಎಂದು ಆ ಕನ್ಯೆಯ ಮಗನು (ಕರ್ಣ) ಬಂದ. ಆದರೆ
ಬಿಲ್ಲನ್ನೆತ್ತಿ ಹೆದೆಯನ್ನು ಏರಿಸಲು ಅವನಿಂದಲೂ ಸಾಧ್ಯವಾಗಲಿಲ್ಲ! ಹಾಗೆ ಸಾಧ್ಯವಾಗಲು, ಆ
ರಾಜರೇನು ಅರಿಗನಿಗೆ ಸಮಾನರಾಗಿ ಹುಟ್ಟಿದವರೆ?
ವ|| ಅಂತಾ ಬಿಲ್ಲಂ ಪಿಡಿದವರೆಲ್ಲಂ ಬಿಲ್ಲುಂಬೆಱಗುಮಾಗಿ ಸಿಗ್ಗಾಗಿ ಪೋಗಿ ತಂತಮ್ಮಿರ್ಪೆಡೆಯೊಳಿರೆ ಪಾಂಚಾಳರಾಜನೀ ನೆರೆದರಸುಮಕ್ಕಳೊಳಾರುಮೀ ಬಿಲ್ಲನೇಱಿಸಲಾರ್ತರಿಲ್ಲಮೀ ಜನವಡೆಯೊಳಾರಾನುಮೀ ಬಿಲ್ಲನೇಱಿಸಲಾರ್ಪೊಡೆ ಬನ್ನಿಮೆಂದು ಸಾಱುವುದುಂ-
(ಅಂತು ಆ ಬಿಲ್ಲಂ ಪಿಡಿದವರೆಲ್ಲಂ ಬಿಲ್ಲುಂಬೆಱಗುಂ ಆಗಿ, ಸಿಗ್ಗಾಗಿ ಪೋಗಿ ತಂತಮ್ಮ ಇರ್ಪೆಡೆಯೊಳ್ ಇರೆ, ಪಾಂಚಾಳರಾಜನ್ ’ಈ ನೆರೆದ ಅರಸುಮಕ್ಕಳೊಳ್ ಆರುಂ ಈ ಬಿಲ್ಲನ್ ಏಱಿಸಲ್ ಆರ್ತರಿಲ್ಲಂ! ಈ ಜನವಡೆಯೊಳ್ ಆರಾನುಂ
ಈ ಬಿಲ್ಲನ್ ಏಱಿಸಲ್ ಆರ್ಪೊಡೆ ಬನ್ನಿಂ’ ಎಂದು ಸಾಱುವುದುಂ)
ಹಾಗೆ ಆ ಬಿಲ್ಲನ್ನು ಎತ್ತಲು ಹೋದವರೆಲ್ಲ ಆಶ್ಚರ್ಯದಿಂದ, ಅವಮಾನದಿಂದ
ತಂತಮ್ಮ ಸ್ಥಾನಕ್ಕೆ ಹಿಂದೆ ಹೋದರು. ಆಗ ದ್ರುಪದನು ’ಇಲ್ಲಿ ಸೇರಿರುವ ಅರಸುಮಕ್ಕಳ ಪೈಕಿ ಯಾರೂ ಸಹ
ಈ ಬಿಲ್ಲನ್ನು ಏರಿಸಲು ಸಮರ್ಥರಾಗಲಿಲ್ಲ! ಇಲ್ಲಿರುವ ಜನರ ಗುಂಪಿನಲ್ಲಿ ಯಾರಾದರೂ ಈ ಬಿಲ್ಲನ್ನು
ಏರಿಸುವ ಸಮರ್ಥರಿದ್ದರೆ ಬನ್ನಿ’ ಎಂದು ಸಾರಿದಾಗ-
ಚಂ|| ಮುಸುಕಿದ ನೀರದಾವಳಿಗಳಂ ಕಿರಣಂಗಳೊಳೊತ್ತಿ ತೇಜಮ
ರ್ವಿಸುವಿನಮಾಗಳೊರ್ಮೊದಲೆ ಮೂಡುವ ಬಾಳ ದಿನೇಶಬಿಂಬದೊಂ|
ದೆಸಕದಿನಾ ದ್ವಿಜನ್ಮಸಭೆಯಂ ಪೊಱಮಟ್ಟೊಡೆ ಮಾಸಿದಂದಮುಂ
ಪಸದನದಂತೆ ಕಣ್ಗೆಸೆದು ತೋಱಿದುದಾ ಕದನತ್ರಿಣೇತ್ರನಾ|| ೬೧||
(ಮುಸುಕಿದ ನೀರದಾವಳಿಗಳಂ ಕಿರಣಂಗಳೊಳ್ ಒತ್ತಿ ತೇಜಂ ಅರ್ವಿಸುವಿನಂ ಆಗಳ್ ಒರ್ಮೊದಲೆ ಮೂಡುವ ಬಾಳ ದಿನೇಶಬಿಂಬದ ಒಂದು ಎಸಕದಿನ್. ಆ ದ್ವಿಜನ್ಮಸಭೆಯಂ ಪೊಱಮಟ್ಟೊಡೆ ಮಾಸಿದ
ಅಂದಮುಂ ಪಸದನದಂತೆ
ಕಣ್ಗೆಸೆದು ತೋಱಿದುದು ಆ ಕದನತ್ರಿಣೇತ್ರನಾ)
ಕವಿದ ಮೋಡಗಳ ಗುಂಪನ್ನು ತನ್ನ ಕಿರಣಗಳಿಂದ ಭೇದಿಸಿ, ತೇಜಸ್ಸನ್ನು ಹೆಚ್ಚಿಸಿಕೊಂಡು ಒಮ್ಮೆಲೆ ಮೂಡಿಬರುವ ಬಾಲಸೂರ್ಯನಂತೆ ಆ ಹಾರುವರ ಸಭೆಯಿಂದ ಹೊರಹೊರಟ ಅರ್ಜುನನ ಮಾಸಿದ ರೂಪವೂ ಸಹ
ಅಲಂಕಾರದಂತೆ ಕಾಣಿಸಿತು.
|
ವ|| ಅಂತು ಪೊಱಮಡುವರಾತಿಕಾಲಾನಲನಂ ಕಂಡು ಕಡ್ಡುವಂದ ದೊಡ್ಡರೆಲ್ಲಂ ಮುಸುಱಿ-
ಹಾಗೆ ಎದ್ದು ಹೊರಟ ಶತ್ರುಗಳ ಪಾಲಿನ ಬೆಂಕಿಯಂಥ ಅರ್ಜುನನನ್ನು ಕಂಡು ಗಡ್ಡ ಹಣ್ಣಾದ ಮುದುಕರೆಲ್ಲ
ಮುತ್ತಿಕೊಂಡು-
ಕಂ|| ಸಂಗತಸತ್ವರ್ ಕುರು ರಾ
ಜಂಗಂ ಕರ್ಣಂಗಮೇಱಿಸಲ್ಕರಿದನಿದಂ|
ತಾಂ ಗಡಮೇಱಿಪನೀ ಪಾ
ರ್ವಂಗಕ್ಕಟ ಮೆಯ್ಯೊಳೊಂದು ಮರುಳುಂಟಕ್ಕುಂ|| ೬೨||
(ಸಂಗತಸತ್ವರ್ ಕುರು ರಾಜಂಗಂ, ಕರ್ಣಂಗಂ ಏಱಿಸಲ್ಕೆ ಅರಿದನ್ ಇದಂ ತಾಂ ಗಡಂ ಏಱಿಪನ್! ಈ ಪಾರ್ವಂಗೆ, ಅಕ್ಕಟ, ಮೆಯ್ಯೊಳೊಂದು ಮರುಳು ಉಂಟಕ್ಕುಂ!)
ಶೂರರಾದ ಕುರುರಾಜ, ಕರ್ಣರಿಗೆ ಏರಿಸಲು ಸಾಧ್ಯವಾಗದ ಈ ಬಿಲ್ಲನ್ನು
ತಾನು ಏರಿಸುತ್ತಾನಂತೆ! ಅಯ್ಯೋ! ಈ ಹಾರುವನ
ಮೈಯಲ್ಲಿ ಯಾವುದೋ ಒಂದು ದೆವ್ವ ಸೇರಿಕೊಂಡಂತಿದೆ!
ವ|| ಎಂದು ಬಾಯ್ಗೆ ವಂದುದನೆ ನುಡಿಯೆ ರಂಗಭೂಮಿಯ ನಡುವೆ ನಿಂದು ದಿವ್ಯಚಾಪಕ್ಕೆ ಪೊಡವಟ್ಟವಯವದಿನೆಡಗೆಯ್ಯೊಳೆತ್ತಿಕೊಂಡು ತನ್ನ ಬಗೆದ ಕಜ್ಜಮಂ ಗೊಲೆಗೊಳಿಸುವಂತಾ ಬಿಲ್ಲ ಗೊಲೆಯನೇಱೆ ನೂಂಕಿ-
(ಎಂದು ಬಾಯ್ಗೆ ವಂದುದನೆ ನುಡಿಯೆ, ರಂಗಭೂಮಿಯ ನಡುವೆ ನಿಂದು, ದಿವ್ಯಚಾಪಕ್ಕೆ ಪೊಡವಟ್ಟು, ಅವಯವದಿನ್ ಎಡಗೆಯ್ಯೊಳ್ ಎತ್ತಿಕೊಂಡು, ತನ್ನ ಬಗೆದ ಕಜ್ಜಮಂ ಗೊಲೆಗೊಳಿಸುವಂತೆ ಆ ಬಿಲ್ಲ ಗೊಲೆಯನೇಱೆ ನೂಂಕಿ-)
ಎಂದು ಬಾಯಿಗೆ ಬಂದಂತೆ ಮಾತಾಡಲು, ಅರ್ಜುನನು ರಂಗಭೂಮಿಯ ನಡುವೆ
ನಿಂತು, ದಿವ್ಯವಾದ ಆ ಬಿಲ್ಲಿಗೆ ವಂದಿಸಿ, ಸುಲಭವಾಗಿ ಅದನ್ನು ಎಡಗೈಯಲ್ಲಿ ಎತ್ತಿಕೊಂಡು, ತಾನು
ಕೈಗೆತ್ತಿಕೊಂಡ ಕಾರ್ಯವನ್ನು ತುದಿ
ಮುಟ್ಟಿಸುವಂತೆ ಆ ಬಿಲ್ಲಿನ ತುದಿಯನ್ನು ಮೇಲಕ್ಕೆ ನೂಕಿ-
ಮ|| ದೆಸೆ ಕಂಪಂಗೊಳೆ ಕೊಂಡು ದಿವ್ಯಶರಮಂ ಕರ್ಣಾದಿಗಳ್ ಕಂಡು ಬೆ
ಕ್ಕಸಮಾಗಿರ್ಪಿನಮೊಂದೆ ಸೂೞೆ ತೆಗೆದಾಕರ್ಣಾಂತಮಂ ತಾಗೆ ನಿ
ಟ್ಟಿಸಲಾರ್ಗಾರ್ಗಿಸಲಕ್ಕುಮೆಂಬೆಸಕದಾ ಮೀನಂ ಸಮಂತೆಚ್ಚು ಮೆ
ಚ್ಚಿಸಿದಂ ದೇವರುಮಂ ಧನುರ್ಧರರುಮಂ ವಿದ್ವಿಷ್ಟವಿದ್ರಾವಣಂ|| ೬೩||
(ದೆಸೆ ಕಂಪಂಗೊಳೆ ಕೊಂಡು ದಿವ್ಯಶರಮಂ, ಕರ್ಣಾದಿಗಳ್ ಕಂಡು ಬೆಕ್ಕಸಂ ಆಗಿರ್ಪಿನಂ, ಒಂದೆ ಸೂೞೆ ತೆಗೆದು ಆಕರ್ಣಾಂತಮಂ ತಾಗೆ, ನಿಟ್ಟಿಸಲ್ ಆರ್ಗೆ, ಆರ್ಗೆ ಇಸಲ್ ಅಕ್ಕುಂ ಎಂಬ ಎಸಕದ
ಆ ಮೀನಂ ಸಮಂತು ಎಚ್ಚು, ಮೆಚ್ಚಿಸಿದಂ ದೇವರುಮಂ ಧನುರ್ಧರರುಮಂ ವಿದ್ವಿಷ್ಟವಿದ್ರಾವಣಂ)
ಅರ್ಜುನನು ದಿಕ್ಕುಗಳು ನಡುಗುವಂತೆ ದಿವ್ಯಶರವನ್ನು
ಕೈಗೆತ್ತಿಕೊಂಡನು. ಇದನ್ನು ಕಂಡು ಕರ್ಣಾದಿಗಳು ಅಚ್ಚರಿಗೊಂಡರು. ವಿದ್ವಿಷ್ಟವಿದ್ರಾವಣನು ಒಂದೇ ಸಲಕ್ಕೆ
ಬಿಲ್ಲನ್ನು ಎತ್ತಿ ಸಿಂಜಿನಿಯನ್ನು ಕಿವಿಯ ತುದಿಯವರೆಗೂ ಎಳೆದು, ʼಯಾರಿಗೆ ಅದನ್ನು ನೋಡಲು ಸಾಧ್ಯ,
ಯಾರಿಗೆ ಅದಕ್ಕೆ ಬಾಣ ಬಿಡಲು ಸಾಧ್ಯʼ ಎಂಬ ಸವಾಲಿನಂತಿದ್ದ ಆ ಮೀನಿಗೆ ಗುರಿಯಿಟ್ಟು ಬಾಣ ಹೊಡೆದು,
ದೇವರನ್ನೂ, ಬಿಲ್ಗಾರರನ್ನೂ ಮೆಚ್ಚಿಸಿದನು.
(ಟಿಪ್ಪಣಿ: ಇಲ್ಲಿ ʼ ಒಂದೆ ಸೂೞೆ ತೆಗೆದು ಆಕರ್ಣಾಂತಮಂ ತಾಗೆʼ ಎನ್ನುವುದನ್ನು
ಅರ್ಥ ಮಾಡುವುದು ಹೇಗೆ? ಮುಖ್ಯವಾಗಿ ʼಆಕರ್ಣಾಂತಮಂ ತಾಗೆʼ ಎನ್ನುವುದನ್ನು ಬಿಡಿಸುವುದು ಹೇಗೆ? ಡಿ.ಎಲ್.
ನರಸಿಂಹಾಚಾರ್ಯರು ʼಆಕರ್ಣಾಂತಮಂ ತಾಗೆʼ ಎಂದು ಬಿಡಿಸಿದರೆ
ಡಾ. ಎಲ್. ಬಸವರಾಜು ಅವರು ʼಆಕರ್ಣಾಂತಂ ಅಂತಾಗೆʼ ಎಂದು ಬಿಡಿಸುತ್ತಾರೆ. ʼಆಕರ್ಣಾಂತಂʼ ಎಂದರೆ ಕಿವಿಯ
ತುದಿಯವರೆಗೂ ಎಂದರ್ಥ; ʼಆಕರ್ಣಾಂತಮಂʼ ಎಂದರೆ? ʼಆ ಕರ್ಣಾಂತಮಂ ತಾಗೆʼ ಎಂದು ಬಿಡಿಸಿದರೆ
ಸರಿಯಾಗಬಹುದೆ?)
ವ|| ಆಗಳಾ ಪಿಡಿದ ಬಿಲ್ಲೆ ಕರ್ಬಿನ ಬಿಲ್ಲಾಗೆಯುಮಂಬುಗಳೆ ಪೂವಿನಂಬುಗಳಾಗೆಯುಮೆಚ್ಚ ಮೀನೆ ಮೀನಕೇತನಂ ಆಗೆಯುಂ, ಸಹಜಮನೋಜನಂ ಮನೋಜನೆಂದೆ ಬಗೆದು-
(ಆಗಳ್ ಆ ಪಿಡಿದ ಬಿಲ್ಲೆ ಕರ್ಬಿನ ಬಿಲ್ಲಾಗೆಯುಂ, ಅಂಬುಗಳೆ ಪೂವಿನ ಅಂಬುಗಳ್ ಆಗೆಯುಂ, ಎಚ್ಚ ಮೀನೆ ಮೀನಕೇತನಂ ಆಗೆಯುಂ, ಸಹಜಮನೋಜನಂ ಮನೋಜನೆಂದೆ ಬಗೆದು)
ಆಗ ದ್ರೌಪದಿಯ ಕಣ್ಣಿಗೆ ಅರ್ಜುನನು ಹಿಡಿದ
ಬಿಲ್ಲು ಮನ್ಮಥನು ಹಿಡಿದ ಕಬ್ಬಿನ ಬಿಲ್ಲಿನಂತೆ; ಬಾಣಗಳು ಮನ್ಮಥನ ಹೂಬಾಣಗಳಂತೆ; ಬಾಣ ಬಿಟ್ಟ ಮೀನು
ಮನ್ಮಥನ ಮೀನಿನ ಬಾವುಟದಂತೆ ಕಾಣಿಸಿತು. ಆಗ ಅವಳು ಅರ್ಜುನನನ್ನು ಮನ್ಮಥನೆಂದೇ ಭಾವಿಸಿ-
ಚಂ|| ನಡೆ ಕಡೆಗಣ್ ಮನಂ ಬಯಸೆ ತಳ್ತಮರ್ದಪ್ಪಲೆ ತೋಳ್ಗಳಾಸೆಯೊಳ್
ತೊಡರ್ದಿರೆ ಪೊಣ್ಮೆ ಘರ್ಮಜಲಮುಣ್ಮೆ ಭಯಂ ಕಿಡೆ ನಾಣ್ ವಿಕಾರದೊಳ್|
ತೊಡರ್ದಿರೆ ಕೆಯ್ತವುಮ್ಮಳಿಪ ಕನ್ನೆಗೆ ಸುಂದರಮಾಲೆ ಮಾಲೆಯಂ
ತಡೆಯದೆ ನೀಡೆ ಮಾಣದೆ ಗುಣಾರ್ಣವನಂ ಸತಿ ಮಾಲೆ ಸೂಡಿದಳ್|| ೬೪||
(ನಡೆ ಕಡೆಗಣ್, ಮನಂ ಬಯಸೆ, ತಳ್ತು ಅಮರ್ದು ಅಪ್ಪಲೆ ತೋಳ್ಗಳ್ ಆಸೆಯೊಳ್ ತೊಡರ್ದಿರೆ, ಪೊಣ್ಮೆ ಘರ್ಮಜಲಂ, ಉಣ್ಮೆ ಭಯಂ, ಕಿಡೆ ನಾಣ್, ವಿಕಾರದೊಳ್ ತೊಡರ್ದಿರೆ ಕೆಯ್ತ, ಉಮ್ಮಳಿಪ ಕನ್ನೆಗೆ ಸುಂದರಮಾಲೆ ಮಾಲೆಯಂ ತಡೆಯದೆ ನೀಡೆ ಮಾಣದೆ ಗುಣಾರ್ಣವನಂ ಸತಿ ಮಾಲೆ ಸೂಡಿದಳ್)
ದ್ರೌಪದಿಯ ಕುಡಿನೋಟ ಅರ್ಜುನನಲ್ಲಿ ನೆಟ್ಟಿತು.
ಮನಸ್ಸು ಅವನನ್ನು ಬಯಸಿತು. ಬಿಗಿಯಾಗಿ ಅಪ್ಪಿಕೊಳ್ಳಲು ತೋಳುಗಳು ಆಸೆಯಿಂದ ಹಾತೊರೆದವು. ಮೈ ಬೆವರಿತು.
ಅಂಜಿಕೆ ಹುಟ್ಟಿತು. ನಾಚಿಕೆ ಇಲ್ಲವಾಯಿತು. ಚರ್ಯೆಗಳು ವಿಕಾರಗೊಂಡವು. ಹೀಗೆ ವ್ಯಾಕುಲಗೊಂಡ ದ್ರೌಪದಿಯ
ಕೈಗೆ ಚೇಟಿಯಾದ ಸುಂದರಮಾಲೆ ತಡಮಾಡದೆ ಮಾಲೆಯನ್ನು ಕೊಟ್ಟಳು. ದ್ರೌಪದಿಯು ಆ ಮಾಲೆಯನ್ನು ಅರ್ಜುನನಿಗೆ
ಹಾಕಿದಳು.