ಗುರುವಾರ, ಸೆಪ್ಟೆಂಬರ್ 9, 2010

ಎಸ್ ಇ ಝಡ್ ಪೈಪ್ ಲೈನ್: ಪರೋಕ್ಷ ಉದ್ಯೋಗ ಪರದೇಶಿಗಳಿಗೆ?

ಅಭಿವೃದ್ಧಿ:ಕಾಲ ಮೇಲೆ ಕಲ್ಲು
ಕಳೆದ ಜುಲೈ ತಿಂಗಳ 24ನೇ ತಾರೀಖಿನಂದು ಮಂಗಳೂರು ಎಸ್ ಇ ಝಡ್ ಕಂಪೆನಿ ಉದಯವಾಣಿಯಲ್ಲಿ "ನೇತ್ರಾವತಿ ನದಿಯಿಂದ ನೀರು ಸಾಗಿಸುವ ಕಾಮಗಾರಿ"ಗೆ ಒಂದು ಟೆಂಡರ್ ಕರೆದಿದೆ. ಈ ಟೆಂಡರಿನ ಒಂದು ಪ್ರಮುಖ ಲಕ್ಷಣ "Bidding is open to all contractors / firms, both Indian and foreign firms......". ಎಂದರೆ ಭಾರತದ ಅಥವಾ ವಿದೇಶದ ಯಾವುದೇ ಗುತ್ತಿಗೆದಾರರು ಈ ಕಾಮಗಾರಿಯನ್ನು ನಿರ್ವಹಿಸಲು ಅರ್ಜಿ ಸಲ್ಲಿಸಬಹುದು. ಅಭಿವೃದ್ಧಿಯ ದ್ಯೋತಕವಾಗಿರುವ ಈ ಮತ್ತು ಇಂತಹ ಕಂಪೆನಿಗಳ ಪರವಾಗಿ ಮಾತಾಡುವವರು ಪ್ರಮುಖವಾಗಿ ಮುಂದಿಡುವ ವಾದ "ಅವು ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿ ಮಾಡುತ್ತವೆ" ಎನ್ನುವುದು. ಈಗ ಪೈಪ್ ಲೈನ್ ಕೂರಿಸುವ "ಪರೋಕ್ಷ ಉದ್ಯೋಗಸೃಷ್ಟಿ" ಆಗಿದೆ. ಆದರೆ ಯಾರಿಗೆ? ತಾಂತ್ರಿಕವಾಗಿ ಭಾರತಕ್ಕಿಂತ ಎಷ್ಟೋ ಮುಂದಿರುವ ಚೀನಾ, ಜಪಾನ್, ಕೊರಿಯಾ ಮುಂತಾದ ದೇಶಗಳ ಯಾವುದೇ ಕಂಪೆನಿ ಭಾರತದ ಕಂಪೆನಿಗಳಿಗಿಂತ ಕಡಿಮೆ ದರದಲ್ಲಿ ಈ ಕಾಮಗಾರಿ ನಿರ್ವಹಿಸಲು ಮುಂದೆ ಬರುವ ಸಾಧ್ಯತೆ ಇಲ್ಲದೆ ಇಲ್ಲ. ಆಗ ಸಹಜವಾಗಿ ಕಾಮಗಾರಿ ಅಂತಹ ಕಂಪೆನಿಯ ಪಾಲಾಗುತ್ತದೆ. ಹಾಗಾದರೆ "ಉದ್ಯೋಗ ಸೃಷ್ಟಿ" ಆದದ್ದು ಯಾರಿಗೆ? ಕಾಲುವೆ ತೋಡಿ ಪೈಪು ಕೂರಿಸಿ ಕೊಡಬಲ್ಲ ತಾಂತ್ರಿಕತೆ, ಆರ್ಥಿಕ ಬಲ ಹೊಂದಿರುವ ಭಾರತೀಯ ಕಂಪೆನಿಗಳು ಇಲ್ಲವೆ? ಈ ಮೊದಲು ನೇತ್ರಾವತಿ ನದಿಯಿಂದ ಮಂಗಳೂರು ಮಹಾನಗರಪಾಲಿಕೆ ಹಾಗೂ ಎಂ ಆರ್ ಪಿ ಎಲ್ ಕಂಪೆನಿಗಳು ಪೈಪ್ ಲೈನ್ ಹಾಕಿಲ್ಲವೆ? ಆ ಪೈಪುಗಳಲ್ಲಿ ನೀರು ಹರಿಯುತ್ತಿಲ್ಲವೆ? ಟೆಂಡರಿಗೆ ಅರ್ಜಿ ಸಲ್ಲಿಸಲು ವಿದೇಶೀ ಕಂಪೆನಿಗಳಿಗೆ ಅವಕಾಶ ಕೊಟ್ಟರೆ, ಅಭಿವೃದ್ಧಿಯ ಫಲವನ್ನು ನಾವಾಗಿ ಪರದೇಶಿಗಳಿಗೆ ಬಿಟ್ಟುಕೊಟ್ಟಂತಾಗಲಿಲ್ಲವೆ? ಇಂತಹ ಉದ್ಯೋಗಸೃಷ್ಟಿಯಿಂದ ದ.ಕ. ಅಥವಾ ಕರ್ನಾಟಕದವರನ್ನು ಬಿಡಿ, ಭಾರತೀಯರಿಗೆ ಆಗುವ ಪ್ರಯೋಜನವಾದರೂ ಏನು? ಕಾಮಗಾರಿಯ ಹೆಸರಿನಲ್ಲಿ ಯಾವ್ಯಾವ ಪರದೇಶಿಗಳು ನಮ್ಮ ದೇಶದ ಮೂಲೆ ಮೂಲೆಗೆ ಪ್ರವೇಶಿಸಿ, ದೇಶದ ಆಯಕಟ್ಟಿನ ಪ್ರದೇಶಗಳ ನಿಕಟ ಪರಿಚಯ ಮಾಡಿಕೊಳ್ಳಲು ನಾವು ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೆ? ಇದು ದೇಶದ ಭದ್ರತೆಯ ದೃಷ್ಟಿಯಿಂದ ಸಾಧುವೆ? ಸೂಕ್ತವೆ? ಹಾಗಾದರೆ ಕಾಲ ಮೇಲೆ ಕಲ್ಲು ಹಾಕಿಕೊಳ್ಳುವ ಇಂತಹ ಕೆಲಸವನ್ನೇ ಅಭಿವೃದ್ಧಿ ಎಂದು ಕರೆಯಲಾಗುತ್ತಿದೆಯೆ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ.
ಷರತ್ತುಗಳಿವೆ, ಪಾಲಿಸುವವರೆಲ್ಲಿ?
ನೇತ್ರಾವತಿ ನದಿಯಿಂದ ನೀರೆತ್ತಲು ಅನುಮತಿ ಕೊಡುವಾಗ ಜಲ ಸಂಪನ್ಮೂಲ ಇಲಾಖೆಯು ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಒಟ್ಟು 19 ಷರತ್ತುಗಳನ್ನು ವಿಧಿಸಿದೆ. ಈ ಪೈಕಿ 6ನೆಯ ಷರತ್ತು ಇದು: "ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು". ಕಂಪೆನಿ ಅನುಮತಿಯನ್ನೇನಾದರೂ ಪಡೆದಿದೆಯೇ ಎಂಬುದನ್ನು ತಿಳಿಯುವ ಕುತೂಹಲದಿಂದ ನಾನು ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ದ.ಕ. ಜಿಲ್ಲಾಧಿಕಾರಿಯವರಿಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿಗಳನ್ನು ಸಲ್ಲಿಸಿದೆ.
ಲೋಕೋಪಯೋಗಿ ಇಲಾಖೆ ಯಾವುದೇ ತಕರಾರಿಲ್ಲದೆ ಕೂಡಲೇ ಸಾಕಷ್ಟು ವಿವರವಾದ ಮಾಹಿತಿ ನೀಡಿತು. ( ಈ ಮಾಹಿತಿಯ ಮುಖ್ಯಭಾಗವನ್ನು "ವಂಶ" ಪತ್ರಿಕೆ ಕಳೆದ ಸಂಚಿಕೆಯಲ್ಲಿ ಪ್ರಕಟಿಸಿದೆ). ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳಲ್ಲಿ ಯಾವ ಯಾವ ರಸ್ತೆಗಳ ಬದಿಯಲ್ಲಿ ಪೈಪ್ ಲೈನ್ ಗಳನ್ನು ಅಳವಡಿಸಲಾಗುವುದು, ಈ ಬಗ್ಗೆ ಕಂಪೆನಿಗೆ ವಿಧಿಸಲಾಗಿರುವ ಷರತ್ತುಗಳೇನು ಮುಂತಾದ ಮಾಹಿತಿಯಲ್ಲದೆ, ಕಂಪೆನಿ ಇಲಾಖೆಗೆ ನೀಡಬೇಕಾದ ಹಣ ಎಷ್ಟು ಎಂಬ ಮಾಹಿತಿಯನ್ನೂ ಇಲಾಖೆ ನನಗೆ ನೀಡಿತು.

ಜಿಲ್ಲಾಧಿಕಾರಿಗಳ ಕಛೇರಿ ನನ್ನ ಅರ್ಜಿಯನ್ನು-ಮಾಹಿತಿ ನೀಡುವಂತೆ ಸೂಚಿಸಿ-ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಕಳಿಸಿಕೊಟ್ಟಿತು! ಮಂಗಳೂರು ಎಸ್ ಇ ಝಡ್ ಕಂಪೆನಿ "ನಾವು RTI ವ್ಯಾಪ್ತಿಯಲ್ಲಿ ಬರುವುದಿಲ್ಲ" ಎಂಬ ಒಂದು ಸಾಲಿನ ಉತ್ತರ ನೀಡಿ ಕೈ ತೊಳೆದುಕೊಂಡಿತು. ನಾನು ಜಿಲ್ಲಾಧಿಕಾರಿಯವರಿಗೆ ಪುನಃ ಪತ್ರ ಬರೆದು "ಮಾಹಿತಿ ನೇರವಾಗಿ ನಿಮ್ಮ ಕಛೇರಿಗೆ ಸಂಬಂಧಪಟ್ಟಿದೆ. ಆದ್ದರಿಂದ ನೀವೇ ಅದನ್ನು ಕೊಡಬೇಕು" ಎಂದು ಕೇಳಿದ್ದೇನೆ. ಅವರ ಉತ್ತರಕ್ಕೆ ಕಾಯುತ್ತಿದ್ದೇನೆ. ಉತ್ತರ ಬರುತ್ತದೆ ಎಂಬ ವಿಶ್ವಾಸವಿದೆ.
ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಹೀಗೆ ಉತ್ತರಿಸಿದ್ದೇನೆ: "ನಿಮಗೆ ಗೊತ್ತಿರುವಂತೆ ಪ್ರಕರಣ ಮಾಹಿತಿ ಹಕ್ಕು ಆಯೋಗದ ಎದುರಿಗೆ ತೀರ್ಪಿಗೆ ಬಾಕಿ ಇದೆ. ಆದ್ದರಿಂದ "ನಾವು RTI ವ್ಯಾಪ್ತಿಯಲ್ಲಿ ಬರುವುದಿಲ್ಲ" ಎಂದು ಹೇಳುವ ಅಧಿಕಾರ ನಿಮಗೆ ಇಲ್ಲ. ಆ ಅಧಿಕಾರ ಇರುವುದು ಮಾಹಿತಿ ಹಕ್ಕು ಆಯೋಗಕ್ಕೆ"

ಸ್ವಾರಸ್ಯ ಇರುವುದು ಅರಣ್ಯ ಇಲಾಖೆಗೆ ಸಲ್ಲಿಸಿದ ಅರ್ಜಿ ವಿಚಾರದಲ್ಲಿ. ನಾನು ಅರ್ಜಿ ಸಲ್ಲಿಸಿದ್ದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ. ಅವರು ಅದನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ವರ್ಗಾಯಿಸಿ, ಮಾಹಿತಿ ನೀಡುವಂತೆ ಸೂಚಿಸಿದರು. ಸ.ಅ.ಸಂ. ರವರು "ಈ ಬಗ್ಗೆ ಯಾವುದೇ ಮಾಹಿತಿಯು ಅರಣ್ಯ ಇಲಾಖೆಯಲ್ಲಿ ಲಭ್ಯವಿರುವುದಿಲ್ಲ" ಎಂಬ ಒಂದು ಸಾಲಿನ ಉತ್ತರ (ಮಾಹಿತಿ?) ನೀಡಿದರು! ನಾನು ಪಟ್ಟು ಬಿಡಲಿಲ್ಲ. "ನಾನು ಕೇಳಿರುವುದು ಅರಣ್ಯಕ್ಕೆ ಸಂಬಂಧಪಟ್ಟ ಮಾಹಿತಿ. ಅದನ್ನು ನಿಮ್ಮನ್ನಲ್ಲದೆ ಬೇರಾರನ್ನೂ ನಾನು ಕೇಳುವಂತಿಲ್ಲ. ಆದ್ದರಿಂದ ನೀವೇ ಅದನ್ನು ಕೊಡಬೇಕಾಗುತ್ತದೆ" ಎಂದು ಹೇಳಿ ಪೂರಕ ಮಾಹಿತಿಯಾಗಿ, ನನಗೆ ಈ ಬಗ್ಗೆ ಗೊತ್ತಿರುವ ಎಲ್ಲ ವಿಷಯವನ್ನೂ ತಿಳಿಸಿ, ಮಾಹಿತಿ ನೀಡುವಂತೆ ಪುನಃ ಪತ್ರ ಬರೆದೆ. ಸುಮಾರು ಒಂದು ತಿಂಗಳ ನಂತರ ಸ.ಅ.ಸಂ. ರವರ ಉತ್ತರ ಬಂತು: "ಮೇಲಿನ ವಿಷಯಕ್ಕೆ ಸಂಬಂಧಿಸಿ ದಿನಾಂಕ 7-8-2010ರಂದು ನೀಡಿದ ಉತ್ತರವು ಸಮಂಜಸವಾಗಿದೆ. ಹೆಚ್ಚಿನ ಮಾಹಿತಿಗಳಿಗೆ ಮಂಗಳೂರು ಎಸ್ ಇ ಝಡ್ ಕಂಪೆನಿಯನ್ನು ಸಂಪರ್ಕಿಸಬಹುದಾಗಿದೆ". ಮೊದಲ ಪತ್ರಕ್ಕೆ ಒಂದು ಸಾಲಿನ ಉತ್ತರವಾದರೆ, ಎರಡನೆಯದಕ್ಕೆ ಎರಡು ಸಾಲಿನ ಉತ್ತರ! ಹೇಗಾದರೂ ಮಾಡಿ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸುವ ವಿಶಿಷ್ಟ ಅಧಿಕಾರಶಾಹಿ ಮನೋಭಾವ! ನಾನು ಬೇರೆ ದಾರಿ ಇಲ್ಲದೆ, ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿ ಬೇಕಾದ ದಾಖಲೆಗಳನ್ನೂ, ಅರ್ಜಿಯನ್ನೂ ಸಿದ್ದಪಡಿಸಿದೆ. ಆದರೆ ಅದನ್ನು ಮಾಹಿತಿ ಹಕ್ಕು ಆಯೋಗಕ್ಕೆ ಕಳಿಸುವ ಮುಂಚೆಯೇ ಉ.ಅ.ಸಂ.ರವರಿಂದ ಒಂದು ಪತ್ರ ಬಂತು: ".....ತಾವು ತಿಳಿಸಿರುವ ಮಾಹಿತಿಗಳಿಗೆ ಧನ್ಯವಾದಗಳು. ಸದ್ರಿ ಮಾಹಿತಿಯನ್ನು ಆಧರಿಸಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ತಮ್ಮ ಪತ್ರವನ್ನು ವಲಯ ಅರಣ್ಯ ಅಧಿಕಾರಿ, ಮಂಗಳೂರು ಮತ್ತು ಬಂಟ್ವಾಳ ಇವರಿಗೆ ಕಳುಹಿಸಲಾಗಿದೆ. ಹೆಚ್ಚಿನ ಮಾಹಿತಿಗಳಿಗೆ ತಾವು ಅವರನ್ನು ನೇರವಾಗಿ ಸಂಪರ್ಕಿಸಬಹುದು". ಕೇವಲ ಕುತೂಹಲಕ್ಕಾಗಿ ಸ.ಅ.ಸಂ.ರವರ ಎರಡು ಸಾಲಿನ ಪತ್ರವನ್ನೂ, ಉ.ಅ.ಸಂ.ರವರ ಪತ್ರವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದೆ. ಎರಡು ಪತ್ರಗಳಿಗೂ ಸಹಿ ಇರುವುದು ಒಬ್ಬರದ್ದೇ: ಸ.ಅ.ಸಂ.ರವರದ್ದು. 31-8-2010ರ ಪತ್ರದಲ್ಲಿ ಉ.ಅ.ಸಂ.ರವರ ಪರವಾಗಿ ಅವರು ಸಹಿ ಹಾಕಿದ್ದರೆ, 1-9-2010ರ ಪತ್ರದಲ್ಲಿ ತಾನು ಬರೆದ ಪತ್ರಕ್ಕೆ ತಾನೇ ಸಹಿ ಹಾಕಿದ್ದಾರೆ!
ಈ ನಡುವೆ ಮಂಗಳೂರು ಮತ್ತು ಬಂಟ್ವಾಳದ ವಲಯ ಅಧಿಕಾರಿಗಳು ನಾನು ನೀಡಿದ ಮಾಹಿತಿಯ ಆಧಾರದಲ್ಲಿ ಸ್ಥಳ ತನಿಖೆ ನಡೆಸಬೇಕೆಂದು ಉ.ಅ.ಸಂ.ರವರು ಹೇಗೆ ನಿರೀಕ್ಷಿಸುತ್ತಾರೋ ನನಗೆ ಅರ್ಥವಾಗುವುದಿಲ್ಲ. ಇಲಾಖೆಗೆ ಮಾಹಿತಿ ನೀಡಲು ನಾನು ಯಾವ ಪೋತಪ್ಪ ನಾಯಕ? ನನಗೆ ತಿಳಿದ ಮಟ್ಟಿಗೆ ಉ.ಅ.ಸಂ. ಅಥವಾ ಸ.ಅ.ಸಂ.ರವರು ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಬರೆದು, ಕಂಪೆನಿಯ ಪೈಪ್ ಲೈನ್ ಹೋಗುವ ದಾರಿಯ ನಕಾಶೆಯನ್ನು ಪಡೆದು, ಅದನ್ನು ವಲಯ ಅರಣ್ಯ ಅಧಿಕಾರಿಗಳಿಗೆ ಕೊಟ್ಟರೆ ಮಾತ್ರ ವಲಯ ಅರಣ್ಯ ಅಧಿಕಾರಿಗಳು ಸಮರ್ಪಕವಾಗಿ ಸ್ಥಳ ತನಿಖೆ ನಡೆಸಲು ಸಾಧ್ಯ. ಹಾಗಲ್ಲದೆ ನಾನು ಕೊಟ್ಟ ಅರೆಬರೆ ಮಾಹಿತಿಯಿಂದ ಎಂಥ ಸ್ಥಳ ತನಿಖೆ? ಎಂಥ ವರದಿ?
ಉ.ಅ.ಸಂ.ರವರಿಗೆ ಪತ್ರ ಬರೆಯುವಾಗ ನನ್ನಿಂದ ಒಂದು ಲೋಪವಾಗಿತ್ತು. ಜಲಸಂಪನ್ಮೂಲ ಇಲಾಖೆ ವಿಧಿಸಿರುವ ಷರತ್ತಿನ ಬಗ್ಗೆ ನಾನು ಅವರಿಗೆ ಮಾಹಿತಿ ನೀಡಿರಲಿಲ್ಲ. ಇದೀಗ ಆ ಮಾಹಿತಿಯನ್ನು ನೀಡಿ, ಸ್ಥಳ ತನಿಖೆಗೆ ವಲಯ ಅರಣ್ಯಾಧಿಕಾರಿಗಳಿಗೆ ನಕಾಶೆ ಅಗತ್ಯವಿರುವುದನ್ನು ತಿಳಿಸಿ ಮತ್ತೊಂದು ಪತ್ರ ಬರೆದಿದ್ದೇನೆ. ಏನಾಗುತ್ತದೋ ನೋಡೋಣ.
ಹಾದಿಗುಂಟ ಊರುಗಳಿಗೆ ಕುಡಿಯುವ ನೀರು?
ಜಲಸಂಪನ್ಮೂಲ ಇಲಾಖೆ ವಿಧಿಸಿರುವ 16ನೆಯ ಷರತ್ತು ಇದು: "ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೇಲೆ ಸಂಗ್ರಹಿಸಿ ಕೊಂಡೊಯ್ಯುವ ನೀರಿನಿಂದ ಸಂಸ್ಥೆಯು ಹಾದಿಗುಂಟ ಬರುವ ಪಟ್ಟಣಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ವ್ಯವಸ್ಥೆ ಮಾಡತಕ್ಕದ್ದು." (ಇಲ್ಲಿ "ಕುಮಾರಧಾರಾ" ಎಂದಿರುವುದು ತಪ್ಪು; "ಗುರುಪುರ ನದಿ" ಎಂದಿರಬೇಕಾಗಿತ್ತು. ಷರತ್ತುಗಳಿರಲಿ, ಲಕ್ಷಾಂತರ ರೂಪಾಯಿ ವ್ಯವಹಾರದ, ಸ್ಟಾಂಪ್ ಪೇಪರ್ ಮೇಲೆ ಬರೆಯುವ ಅಗ್ರಿಮೆಂಟುಗಳಲ್ಲೂ ಇಂತಹ ದೋಷಗಳು ಸರಕಾರಿ ಅಧಿಕಾರಿಗಳಿಗೆ ಲೆಕ್ಕದ್ದೇ ಅಲ್ಲ. ಈ ಮಾತಿಗೆ ನನ್ನಲ್ಲಿ ಆಧಾರವಿದೆ).
ಲೋಕೋಪಯೋಗಿ ಇಲಾಖೆ ನನಗೆ ನೀಡಿದ ಮಾಹಿತಿಯಲ್ಲಿ ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ ಯಾವ ಯಾವ ಭಾಗದಲ್ಲಿ ಪೈಪ್ ಲೈನ್ ಹಾದು ಹೋಗುತ್ತದೆ ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಈ ಮಾಹಿತಿಗಳನ್ನು ನೀಡಿ ನಾನು ಬಂಟ್ವಾಳದ ಶಾಸಕರಾದ ಶ್ರೀ ಬಿ. ರಮಾನಾಥ ರೈಯವರಿಗೂ, ಲೋಕಸಭಾ ಸದಸ್ಯ ಶ್ರೀ ನಳಿನ್ ಕುಮಾರ್ ಕಟೀಲು ಅವರಿಗೂ ಪತ್ರಗಳನ್ನು ಬರೆದೆ. ರೈಗಳನ್ನು ಭೇಟಿ ಮಾಡಿ, ವಿಷಯ ವಿವರಿಸಿ ಹೇಳಿದೆ. ಅವರು ಕೂಡಲೇ ಶ್ರೀ ಐ ಎಸ್ ಎನ್ ಪ್ರಸಾದರಿಗೆ ಫೋನ್ ಮಾಡಿದರು. ಪ್ರಸಾದ್ ಯಾವುದೋ ಮೀಟಿಂಗಿನಲ್ಲಿದ್ದರಂತೆ, ಸಿಕ್ಕಲಿಲ್ಲ. ರೈಗಳು ಜಿಲ್ಲಾಧಿಕಾರಿಗೆ ಫೋನ್ ಮಾಡಿ, ವಿಷಯ ತಿಳಿಸಿ, ಎಸ್ ಇ ಝಡ್ ಅಧಿಕಾರಿಗಳನ್ನು ಕರೆಸಿ ಒಂದು ಮೀಟಿಂಗ್ ಮಾಡುವಂತೆ ಸೂಚಿಸಿದರು. ಜೊತೆಗೇ, ಜಿಲ್ಲಾಧಿಕಾರಿಯವರಿಗೆ ಒಂದು ಪತ್ರವನ್ನೂ ಬರೆಯುವಂತೆ ತಮ್ಮ ಸಹಾಯಕರಿಗೆ ಸೂಚಿಸಿದರು. ಆ ಪತ್ರದ ಯಥಾಪ್ರತಿಯನ್ನು ನನಗೂ ಕಳಿಸಿದ್ದಾರೆ. ಅದನ್ನಿಟ್ಟು ನಾನು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಬೇಕಾಗಿದೆ. ಬರೆಯುತ್ತೇನೆ.
ಇತ್ತ ನಳಿನ್ ಕುಮಾರ್ ಕಟೀಲ್ ಅವರಿಂದ ಇನ್ನೂ ಉತ್ತರ ಬಂದಿಲ್ಲ. ಬಂದೀತೆಂಬ ನಿರೀಕ್ಷೆಯಲ್ಲಿದ್ದೇನೆ.
ದಿನಕ್ಕೆ ಆರೂಕಾಲು ಕೋಟಿ ಲೀಟರ್ ನೀರು ಎಸ್ ಇ ಝಡ್ ಕಡೆಗೆ ತಿರುಗಿದರೆ, ಬೆಳೆಯುತ್ತಿರುವ ಮಂಗಳೂರಿಗೆ ಏಪ್ರಿಲ್, ಮೇ ತಿಂಗಳುಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆಗಳು ಹೆಚ್ಚು. ಆದರೆ, ಕೊನೆಯ ಪಕ್ಷ ಎಸ್ ಇ ಝಡ್ ಪೈಪ್ ಲೈನ್ ಹಾದು ಹೋಗುವ ಊರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾದರೆ, ಅದನ್ನು ಒಂದು ಪ್ರಯೋಜನ ಎಂದು ಪರಿಗಣಿಸಬಹುದು. ಈ ಊರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲು ಅಲ್ಲಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳು ಪ್ರಯತ್ನ ಮಾಡಬೇಕು, ತಮ್ಮ ಹಕ್ಕಿನ ಪ್ರಯೋಜನ ಪಡೆದುಕೊಳ್ಳಬೇಕು ಅಷ್ಟೆ.