ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ "ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ" ಎಂಬ ಸುದ್ದಿಗಳು ಪ್ರಕಟವಾದವು. "ವಂಶ" ಪತ್ರಿಕೆಯ ಮಿತ್ರರನ್ನು "ನಮ ಒರ ಪೋದು ತೂದು ಬರ್ಕನ?" (ನಾವು ಹೋಗಿ ನೋಡಿ ಬರೋಣವೆ?) ಎಂದು ಕೇಳಿದೆ.
ಮಳೆಗಾಲವಾದರೂ ನಾವು ಹೋದಾಗ ಬಿಸಿಲಿತ್ತು. ಸರಪಾಡಿಯಲ್ಲಿ ಎಂ ಆರ್ ಪಿ ಎಲ್ ನ ಪಂಪ್ ಹೌಸೋ ಏನೋ ಒಂದಿದೆ. ಅದಕ್ಕಿಂತ ಮೊದಲೇ ಬಲಕ್ಕೆ ಹೊಸರಸ್ತೆ ಕಡಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.
ಹಸಿ ಹಸಿ ಮಣ್ಣಿನ ರಸ್ತೆ. ಜೆಸಿಬಿ ಉಪಯೋಗಿಸಿ ರಸ್ತೆ ಮಾಡಿದ್ದರೆಂಬುದು ಯಾರಿಗೂ ಗೊತ್ತಾಗುವಂತಿತ್ತು. ಅದರಲ್ಲಿ ಸ್ವಲ್ಪ ದೂರ ನಡೆದ ಮೇಲೆ ತೆರೆದುಕೊಂಡಿದ್ದು ವಿಶಾಲವಾದ ಪ್ರದೇಶದಲ್ಲಿ ಶೇಖರಗೊಂಡಿದ್ದ ನೀರಿನ ದೃಶ್ಯ.
ಮುಂದೆ ಎ ಎಂ ಆರ್ ಕಂಪೆನಿಯ ಅಣೆಕಟ್ಟು ಕಾಣುತ್ತಿತ್ತು. ನಮ್ಮೆದುರಿಗೆ ಕಾಣುತ್ತಿದ್ದುದು ಅದೇ ಅಣೆಕಟ್ಟಿನಲ್ಲಿ ಸಂಗ್ರಹಿಸಿದ್ದ ನೀರಿನ ರಾಶಿ. ನಾವು ಮುಟ್ಟಿದ್ದು ಒಂದು ಜೆಸಿಬಿ ನಿಂತಿದ್ದ ಸ್ಥಳವನ್ನು. ಸುತ್ತ ಅನೇಕ ಮರಗಳು ಬೇರು ಮೇಲಾಗಿ ಸೊಪ್ಪು ಒಣಗಿ ಉದುರಿ ಕಳಚಿಕೊಂಡು ಬೆತ್ತಲೆ ಅಸ್ತಿಪಂಜರಗಳಂತೆ ವಿಕಾರವಾಗಿ ಆಚೀಚೆ ಉರುಳಿಕೊಂಡಿದ್ದವು. ಕಪ್ಪು ಕಲ್ಲುಗಳನ್ನು ಒಡೆದು ತೆಗೆದಿರುವುದು (ಬಹುಶಃ ಡೈನಮೈಟ್ ಬಳಸಿ) ಸ್ಪಷ್ಟವಾಗಿಯೇ ಕಾಣುತ್ತಿತ್ತು. ಸ್ವಲ್ಪ ದೂರಕ್ಕೆ ಆಳವಾದ ಹೊಂಡದಲ್ಲಿ ಭೂಮಿಯ ಹೊಟ್ಟೆ ಬಗೆದು ಏನೋ ಕಾಮಗಾರಿ ನಡೆಸಿರುವುದೂ ಕಾಣುತ್ತಿತ್ತು. ಒಟ್ಟಿನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಯಾವುದೋ ದೊಡ್ಡ ಕಾಮಗಾರಿಯ ಮುನ್ಸೂಚನೆಯಾಗಿ ಕಂಡವು. ಸಾಧ್ಯವಿದ್ದಷ್ಟು ಫೋಟೋಗಳನ್ನು ತೆಗೆದುಕೊಂಡು ನಾವು ಹಿಂದೆ ಬಂದೆವು.
ಹಿನ್ನೆಲೆ:
2007 ರಲ್ಲಿಯೇ ಕರ್ನಾಟಕ ಸರ್ಕಾರ ಎಮ್ ಎಸ್ ಇ ಜಡ್ ಕಂಪೆನಿಗೆ "ನೇತ್ರಾವತಿ ಹಾಗೂ ಗುರುಪುರ ನದಿಗಳ ಮೇಲೆ ಗುರುತಿಸಲಾಗಿರುವ ಸ್ಥಳಗಳಲ್ಲಿ 4 ಬ್ಯಾರೇಜ್ ಗಳನ್ನು ನಿರ್ಮಿಸುವ ಮೂಲಕ ಸೂಕ್ತವಾಗಿ ನೀರನ್ನು ಸಂಗ್ರಹಿಸಿ ದಿನಂಪ್ರತಿ 15 ಎಂಜಿಡಿ ನೀರನ್ನು ಬಳಸಲು" 19 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಸರಕಾರ ನೀಡಿರುವ ಈ ಅನುಮತಿಯ ಆಧಾರದಲ್ಲಿಯೇ ಈಗ ಕಂಪೆನಿಯು ಕಾಮಗಾರಿಯನ್ನು ಪ್ರಾರಂಭಿಸಿದೆ ಎಂಬುದು ಸ್ಪಷ್ಟ. ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ, ಕಾಮಗಾರಿ ಪ್ರಾರಂಭಿಸುವ ಮುನ್ನ ಸರಕಾರ ವಿಧಿಸಿರುವ ಷರತ್ತುಗಳನ್ನು ಕಂಪೆನಿ ಪಾಲಿಸಿದೆಯೇ ಇಲ್ಲವೇ, ಒಂದು ವೇಳೆ ಇಲ್ಲದಿದ್ದರೆ, ಈ ಷರತ್ತುಗಳು ಅನುಷ್ಠಾನವಾಗುವಂತೆ ಮಾಡಬೇಕಾದ ಜವಾಬ್ದಾರಿ ಯಾರದ್ದು, ಅವರು ಏನು ಮಾಡುತ್ತಿದ್ದಾರೆ ಎನ್ನುವುದು.
ಅನುಷ್ಠಾನದ ದುರಂತ ಕತೆ
ಸರಕಾರ ಷರತ್ತುಗಳನ್ನೇನೋ ವಿಧಿಸಿದೆ. ಅದನ್ನು ಕಂಪೆನಿ ಪಾಲಿಸಬೇಕು, ಪಾಲಿಸುತ್ತದೆ ಎನ್ನುವುದು ಸಾಮಾನ್ಯ ತಿಳುವಳಿಕೆ. ಒಂದು ವೇಳೆ ಪಾಲಿಸದಿದ್ದರೆ? ಪಾಲಿಸದಿದ್ದರೆ, ಅಂತಿಮವಾಗಿ ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರಜೆಗಳದ್ದೇ. ಏಕೆಂದರೆ ಅಂತಿಮವಾಗಿ ಪೆಟ್ಟು ತಿನ್ನುವವರು ಅವರೇ. ಆದರೂ, ಸರಕಾರ ಎಂಬ ಒಂದು ವ್ಯವಸ್ಥೆ ಇದೆ, ಅಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಅಧಿಕಾರಿಗಳನ್ನು ಸಂಬಳ ಕೊಟ್ಟು ನೇಮಿಸಲಾಗಿದೆ ಎಂಬುದರಿಂದ ಈ ಅಧಿಕಾರಿಗಳು ಹೇಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಲೇಬೇಕು.
2010 ರ ಸೆಪ್ಟೆಂಬರಿನಲ್ಲಿಯೋ ಏನೋ ಪತ್ರಿಕೆಗಳಲ್ಲಿ ಎಮ್ ಎಸ್ ಇ ಜಡ್ ನೇತ್ರಾವತಿಯಿಂದ ಕಂಪೆನಿಗೆ ನೀರು ಸಾಗಿಸಲು ಪೈಪ್ ಲೈನ್ ಅಳವಡಿಸುವ ಕಾಮಗಾರಿಗಾಗಿ ಟೆಂಡರು ಕರೆದಿತ್ತು. ಟೆಂಡರು ಕರೆಯುವುದೆಂದರೆ ಪೂರ್ವಭಾವಿ ತಯಾರಿಗಳು ಮುಗಿದಿವೆ ಎಂದೇ ಅರ್ಥ. ಸರಕಾರ ವಿಧಿಸಿದ 19 ಷರತ್ತುಗಳಲ್ಲಿ ಮುಖ್ಯವಾಗಿ ಮೂರು ಷರತ್ತುಗಳನ್ನು ನೋಡೋಣ:
1. ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು
2. ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೇಲೆ ಸಂಗ್ರಹಿಸಿ ಕೊಂಡೊಯ್ಯುವ ನೀರಿನಿಂದ ಸಂಸ್ಥೆಯು ಹಾದಿಗುಂಟ ಬರುವ ಪಟ್ಟಣಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ವ್ಯವಸ್ಥೆ ಮಾಡತಕ್ಕದ್ದು. (ಇಲ್ಲಿ ಕುಮಾರಧಾರಾ ಅಲ್ಲ, ಗುರುಪುರ ನದಿ ಎಂದಾಗಬೇಕು)
3. ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು.
ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ: ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು
ಮಂಗಳೂರು ವಿ. ಆ. ವ. ಕಂಪೆನಿ ತನ್ನನ್ನು ಮಾಹಿತಿ ಹಕ್ಕು ವ್ಯಾಪ್ತಿಯಿಂದ ಹೊರಗಿಡಬೇಕೆಂದು ಹೈಕೋರ್ಟಿನಲ್ಲಿ ರಿಟ್ ಸಲ್ಲಿಸಿ ತತ್ಕಾಲಕ್ಕೆ ತನ್ನ ವ್ಯವಹಾರಗಳನ್ನು ನಿಗೂಢವಾಗಿ ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಇದರಿಂದಾಗಿ ಮಾಹಿತಿಯನ್ನು ಅರಣ್ಯ ಇಲಾಖೆಯಿಂದ ಪಡೆಯುವುದು ನನಗೆ ಅನಿವಾರ್ಯವಾಯಿತು.ನಾನು ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಪ್ರಾರಂಭಿಸಿದೆ. ಏನು ಬರೆದರೂ, ಹೇಗೆ ಬರೆದರೂ ಅವರದ್ದು ಒಂದೇ ಹಟ: "ಕಂಪೆನಿ ಇಲ್ಲಿಯವರೆಗೂ ನಮ್ಮಿಂದ ಅನುಮತಿ ಕೇಳಿಲ್ಲ. ಅದು ಕೇಳಲಿ, ಆಗ ಅದನ್ನು ನಾವು ಪರಿಶೀಲಿಸುತ್ತೇವೆ". ಇಂಥ ಹೋರಾಟಗಳಲ್ಲಿ ನನಗಿಂತಲೂ ಆಳವಾಗಿ ತೊಡಗಿಕೊಂಡಿರುವ ಮಿತ್ರರೊಬ್ಬರ ಹತ್ತಿರ ಏನು ಮಾಡಬಹುದೆಂದು ಚರ್ಚಿಸಿದೆ. ಅವರೆಂದರು: "ಇಲಾಖೆಯಲ್ಲಿ ನಾನಿದ್ದರೆ ನಾನೂ ನಿಮಗೆ ಹಾಗೇ ಉತ್ತರಿಸುತ್ತಿದ್ದೆ". (ಸುಬ್ರಹ್ಮಣ್ಯದ ಪ್ರಕರಣದಲ್ಲಿ ನಾನು ಹೋರಾಟವನ್ನು ಅರ್ಧಕ್ಕೆ ಬಿಟ್ಟೆನೆಂದು ಅವರಿಗೆ ಅನ್ನಿಸಿರಬೇಕು. ಕೋರ್ಟಿಗೆ ಹೋಗಿ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಯಾಗುವವರೆಗೂ ಬಿಡಬಾರದು ಎಂಬುದು ಅವರ ದೃಷ್ಟಿಕೋನ. ನನಗೆ ಕೋರ್ಟಿನ ವ್ಯವಹಾರದ ಬಗ್ಗೆ ಭಯಂಕರ ಜಿಗುಪ್ಸೆ; ಅಷ್ಟೇ ಅಲ್ಲ, ವಕೀಲರಿಗೆ ಸುರಿಯಲು ನನ್ನ ಹತ್ತಿರ ಹಣವೂ ಇಲ್ಲ. ಇತ್ತ ಮರಗಳೇ ನಾಶವಾದ ಮೇಲೆ ಯಾರಿಗೆ ಶಿಕ್ಷೆಯಾಗಿ ಏನು ಪ್ರಯೋಜನ?) ನನಗೆ ಆ ಕ್ಷಣಕ್ಕೆ ಹೋರಾಟದ ಉತ್ಸಾಹ ಉಡುಗಿತು. ಕ್ರಮೇಣ, "ನನ್ನ ದಾರಿ ನನಗೆ" ಎಂದು ಮನಸ್ಸು ಗಟ್ಟಿ ಮಾಡಿಕೊಂಡೆ. ನನ್ನ ಪರಿಚಯದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಹತ್ತಿರ ಸಮಸ್ಯೆಯನ್ನು ಹೇಳಿ ಪ್ರಶ್ನೆ ಇಟ್ಟೆ: "ಇಂಥ ಪ್ರಕರಣಗಳಲ್ಲಿ ನಾನು ಕೊಟ್ಟ ಮಾಹಿತಿಯ ಆಧಾರದಲ್ಲಿ ಇಲಾಖೆ ಸ್ವಯಂಪ್ರೇರಿತವಾಗಿ ಮುಂದುವರಿಯುವುದು ಸಾಧ್ಯವಿಲ್ಲವೆ?" "ಸಾಧ್ಯ" ಎಂದರು ಅವರು. ಮನಸ್ಸಿಗೆ ಧೈರ್ಯವಾಯಿತು.
ಆರಣ್ಯ ಇಲಾಖೆಗೆ ಕೊಟ್ಟ ದೂರಿನ ಪರಿಣಾಮ: ಎತ್ತಿನ ಜ್ವರಕ್ಕೆ ಎಮ್ಮೆಗೆ ಬರೆ!
ಇಲಾಖೆಯೊಂದಿಗೆ ನನ್ನ ತಕರಾರು ಮುಂದುವರಿಯುತ್ತಿದ್ದಂತೆ, ಪತ್ರಿಕೆಗಳಲ್ಲಿ "ಎಂ ಎಸ್ ಇ ಜಡ್ ಕಂಪೆನಿಯ ಪೈಪ್ ಲೈನ್ ಕಾಮಗಾರಿ ಪ್ರಾರಂಭವಾಗಿದೆ" ಎಂಬ ಸುದ್ದಿ ಪ್ರಕಟವಾಯಿತು. ಮೊದಲೇ ವಿವರಿಸಿದಂತೆ ಸ್ಥಳಕ್ಕೆ ಹೋಗಿ ನೋಡಿಬಂದು ಬಂಟ್ವಾಳದ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದೆ. ಜೊತೆಗೆ ಪತ್ರಿಕಾವರದಿಯನ್ನೂ ಇಟ್ಟಿದ್ದೆ. ಅವರಿಂದ ಉತ್ತರ ಬಂತು:".... ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಸರಕಾರಿ ಜಾಗದಿಂದ ಅನುಮತಿ ಇಲ್ಲದೆ ಸಣ್ಣಪುಟ್ಟ ಗಿಡಮರಗಳನ್ನು ಕಡಿದಿರುವ ಬಗ್ಗೆ ಶ್ರೀ ಸೀತಾರಾಮ ಶೆಟ್ಟಿ..... ಇವರ ವಿರುದ್ಧ..... ತಕ್ಷೀರು ದಾಖಲಿಸಲಾಗಿದೆ"
ಕಾಮಗಾರಿ ನಡೆಸುತ್ತಿರುವುದು ಮಂ ವಿ ಆ ವ ಕಂಪೆನಿ ಎಂಬುದಕ್ಕೆ ನಾನು ಸಾಕ್ಷಿ ಒದಗಿಸಿದ್ದರೂ, ತಕ್ಷೀರು ಬಿದ್ದದ್ದು ಸೀತಾರಾಮ ಶೆಟ್ಟರ ಮೇಲೆ. ಇರಲಿ. ಅದನ್ನು ಮುಂದೆ ನೋಡೋಣ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು "ಸಣ್ಣ ಪುಟ್ಟ ಗಿಡಮರಗಳ್ನ್ನು ಕಡಿಯಲಾಗಿದೆ" ಎಂದು ಸ್ವತಃ ಅರಣ್ಯಾಧಿಕಾರಿಯೇ ಹೇಳುತ್ತಿರುವುದು! ಯಾವ ಆಧಾರದಲ್ಲಿ ಅವರಿದನ್ನು ಹೇಳುತ್ತಿದ್ದಾರೆ? ಆ ಸ್ಥಳದಲ್ಲಿ ದೊಡ್ದ ಮರಗಳಿದ್ದು ಅವುಗಳನ್ನು ಯಾರಾದರೂ ಅಲ್ಲಿಂದ ಸಾಗಿಸಿರಬಾರದು ಯಾಕೆ? ಈ ಬಗ್ಗೆ ತನಿಖೆಯನ್ನು ಯಾರು ಮಾಡಿದ್ದಾರೆ? ಯಾರ ಮೇಲೆ ತಕ್ಷೀರು ದಾಖಲಿಸಿದ್ದಾರೋ ಅವರು "ಸಣ್ಣ ಪುಟ್ಟ ಗಿಡಮರಗಳನ್ನು ಕಡಿದಿದ್ದಾರೆ" ಎಂದು ಹೇಳುವ ಮೂಲಕ ಅವರು ಅಂಥಾ ದೊಡ್ಡ ಅಪರಾಧವನ್ನೇನೂ ಮಾಡಿಲ್ಲ ಎಂದು ಸೂಚಿಸಿ, ತಮ್ಮನ್ನೂ, ಯಾರಮೇಲೆ ತಕ್ಷೀರು ದಾಖಲಾಗಿದೆಯೋ ಅವರನ್ನೂ ಏಕಕಾಲದಲ್ಲಿ ರಕ್ಷಿಸಿಕೊಳ್ಳುವ ಉಪಾಯವಾಗಿ ಇದು ಕಾಣುವುದಿಲ್ಲವೆ?.
ಇನ್ನು "ಕಡಿಯಲಾಗಿದೆ" ಎಂದರೇನರ್ಥ? ನಾವು ತೆಗೆದ ಫೋಟೋಗಳು ಸ್ಪಷ್ಟವಾಗಿ ತೋರಿಸುತ್ತಿವೆ ಅಲ್ಲಿ ಜೆಸಿಬಿ ಬಳಸಿ ಮರಗಳನ್ನು ಬೇರು ಸಮೇತ ಮಗುಚಲಾಗಿದೆ ಎಂಬುದನ್ನು. ಅಲ್ಲಿ ಜೆಸಿಬಿ ಕಾರ್ಯಾಚರಿಸುತ್ತಿರುವುದನ್ನು ಮುಚ್ಚಿ ಹಾಕಲು "ಕಡಿಯಲಾಗಿದೆ" ಎಂಬ ಶಬ್ದವನ್ನು ಅಧಿಕಾರಿ ಬಳಸುತ್ತಿದ್ದಾರೆಯೆ? ಏಕೆಂದರೆ ಕಡಿಯಲಾಗಿದೆ ಎಂದರೆ ಯಾವ ರಗಳೆಯೂ ಇಲ್ಲ. ಜೆಸಿಬಿ ಬಳಸಿ ಉರುಳಿಸಲಾಗಿದೆ ಎಂದರೆ ಜೆಸಿಬಿ ಯಾರದ್ದು, ಅದು ಸ್ಥಳದಲ್ಲಿ ಇತ್ತೆ, ಅದನ್ನು ಯಾಕೆ ಜಪ್ತು ಮಾಡಲಿಲ್ಲ ಇತ್ಯಾದಿ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡಬೇಕಾಗುತ್ತದೆ. ಕಡಿಯಲಾಗಿದೆ ಎಂದು ಬಿಟ್ಟರೆ ಆ ರಗಳೆಯೇ ಇಲ್ಲ ತಾನೆ?
ಇನ್ನು "ತಕ್ಷೀರಿ"ನ ಕತೆ ಏನು? ತಕ್ಷೀರು ಹಾಕಿಸಿಕೊಂಡ ಶ್ರೀ ಸೀತಾರಾಮ ಶೆಟ್ಟರನ್ನು ನಾನು ಮಾತಾಡಿಸಿದೆ. ಅವರು ಕೃಷಿಕರು, ಜೊತೆಗೆ ಕಾಂಗ್ರೆಸ್ ಪಕ್ಷದವರು. ರಾಜಕೀಯದಲ್ಲಿ ನುರಿತವರು. ಅವರ ಮನೆ ಅಲ್ಲೇ ಹತ್ತಿರ ಇದೆಯಂತೆ. "ತಕ್ಷೀರಿ"ಗೆ ಅವರ ವಿವರಣೆ ಹೀಗೆ: "ಅಲ್ಲಿ ಮರಗಳನ್ನು ಕಡಿದಿದ್ದೇನೆ ಎಂದು ನನಗೆ ದಂಡ ಹಾಕುತ್ತಾರೆ. (ನಾನು ಒಂದು ಮರವನ್ನೂ ಕಡಿಯಲಿಲ್ಲ.) ಅಷ್ಟನ್ನು ನಾನು ಕಟ್ಟಬೇಕು. ನಂತರ ಫೈಲು ಮೇಲೆ ಡಿ ಎಫ್ ಓಗೆ ಹೋಗುತ್ತದೆ. ಅಲ್ಲಿ ಅವರು "ದಂಡ ಹಾಕಿದ್ದು ಕಡಿಮೆಯಾಯಿತು" ಅಂತ ಹೇಳಿ ಸ್ವಲ್ಪ ಜಾಸ್ತಿ ದಂಡ ಹಾಕುತ್ತಾರೆ. ಅಷ್ಟು ದಂಡ ಕಟ್ಟಿದರಾಯಿತು". ಇಷ್ಟಾದರೆ ತಕ್ಷೀರಿನ ಕತೆ ಮುಗಿಯಿತು! ಉರುಳಿದ ಮರಗಳ ಕತೆ ಏನು? ಬದಲಿಗೆ ಬೇರೆ ಸಸಿಗಳನ್ನು ಎಲ್ಲಿಯಾದರೂ ನೆಡುತ್ತಾರೆಯೆ? ಯಾರು ಕೇಳುವವರು? ( ಈ ಪ್ರಕರಣದಲ್ಲಿ ನಾನು ಕೇಳಿದ್ದೇನೆ. ನೋಡೋಣ ಏನು ಉತ್ತರ ಬರುತ್ತದೋ ಅಂತ)
ಕಾಣದ ಕೈಯ ಕಾರುಭಾರು?
ಪತ್ರಿಕಾವರದಿ ಅಲ್ಲಿ ಕಾಮಗಾರಿ ನಡೆಸುತ್ತಿರುವುದು ಎಂ ಎಸ್ ಇ ಜಡ್ ಕಂಪೆನಿ ಎಂದು ಸ್ಪಷ್ಟವಾಗಿಯೇ ಹೇಳಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿ ಸ್ವಲ್ಪ ಸ್ಥಳ ಪರಿಶೀಲನೆ ಮಾಡಿದ್ದರೆ, ಮರ ಉರುಳಿಸಿರುವುದಲ್ಲದೆ, ಬಂಡೆಗಳನ್ನು (ಬಹುಶಃ ಡೈನಮೈಟ್ ಬಳಸಿ) ಒಡೆದಿರುವುದು, ಯಂತ್ರಗಳ ಮೂಲಕ ಹೊಳೆಯ ಬದಿಯಲ್ಲಿ ಗುಂಡಿ ತೆಗೆಯುತ್ತಿರುವುದು ಇದೆಲ್ಲ ಕಂಡೇ ಕಾಣುತ್ತಿತ್ತು.
ಸೀತಾರಾಮ ಶೆಟ್ಟರಂಥ ರೈತರೊಬ್ಬರು ನಡೆಸಿರುವ ಕಾರುಭಾರು ಇದಲ್ಲ ಎಂದು ಯಾರಿಗೂ ಅರ್ಥವಾಗುವಂತಿತ್ತು. ನಮ್ಮ ಅರಣ್ಯ ಅಧಿಕಾರಿಗಳಿಗೆ, ಪಾಪ, ಇದ್ಯಾವುದೂ ಕಾಣಲೇ ಇಲ್ಲ! ಯಾವ ಶಕ್ತಿ ಇದೆಲ್ಲ ಕಾಣದಂತೆ ಅವರ ಕಣ್ಣು ಕಟ್ಟಿತೋ? ಇದನ್ನೆಲ್ಲ ನೋಡದಂತೆ ಅವರನ್ನು ತಡೆಹಿಡಿಯಿತೋ? ಸೀತಾರಾಮ ಶೆಟ್ಟರ ಮೇಲೆ ತಕ್ಷೀರು ಬಿತ್ತೇ ಬಿತ್ತು.
ವೃಕ್ಷವನು ಕಡಿದವನು ಭಿಕ್ಷೆಯನು ಬೇಡುವನು
ಇದೊಂದು ಅರಣ್ಯ ಇಲಾಖೆಯ ನುಡಿಮುತ್ತು. ಎಂ ಎಸ್ ಇ ಜಡ್ ಕಂಪೆನಿ ತನ್ನ ಪೈಪ್ ಲೈನ್ ಕಾಮಗಾರಿಗಾಗಿ ಮರಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದೂ, ಮರಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದೂ ನಾನು ಸಾಕಷ್ಟು ಮೊದಲೇ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ದೆ. ಸಾಕಷ್ಟು ಪತ್ರಗಳನ್ನು ಬರೆದಿದ್ದೆ. ಕಂಪೆನಿ ಕರೆದಿದ್ದ ಟೆಂಡರಿನ ಪ್ರತಿ, ಅದು ಪೈಪುಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿರುವುದರ ದಾಖಲೆ ಇದೆಲ್ಲವನ್ನೂ ಅವರ ಗಮನಕ್ಕೆ ತಂದಿದ್ದೆ. ಇಷ್ಟು ಮಾಡಿದ್ದಕ್ಕೆ ಇಲಾಖೆ ನನ್ನನ್ನು ಅಭಿನಂದಿಸಲು ಮರೆಯಲಿಲ್ಲ. ಆದರೆ ಮಾಡಬೇಕಾದ ಕೆಲಸ ಮಾತ್ರ ಮಾಡಲಿಲ್ಲ. ದೇಶದ ದುರದೃಷ್ಟ, ಅಧಿಕಾರಿಗಳಿಗೆ ಮರಗಳ ರಕ್ಷಣೆಗಿಂತ ಇಲಾಖೆಯ ಪ್ರತಿಷ್ಠೆಯ ರಕ್ಷಣೆ ಹೆಚ್ಚು ಮುಖ್ಯವಾಯಿತು. ಹೀಗಾಗಿ ಬೊಳ್ಳಾಜೆಯ ಹಲವು ಮರಗಳು ಅಕಾಲ ಮರಣಕ್ಕೀಡಾದವು. ಅರಣ್ಯ ಅಧಿಕಾರಿಗಳ ಪ್ರತಿಷ್ಠಾಪೂಜಕ ನಿಲುವೇ ಈ ಮರಗಳ ಸಾವಿಗೆ ನೇರ ಕಾರಣ ಹೊರತು ಬೇರೇನೂ ಅಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಭಿಕ್ಷೆ ಬೇಡಬೇಕಾದವರು ಯಾರು ಎಂದು ಅವರೇ ತೀರ್ಮಾನಿಸಲಿ.ಇನ್ನು ಮುಂದೆ ಕಂಪೆನಿ ನಾಶ ಮಾಡಲಿರುವ ಮರಗಳನ್ನಾದರೂ ಉಳಿಸಲು ಕ್ರಮ ಕೈಗೊಂಡು ತಮ್ಮ ನುಡಿಮುತ್ತಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲಿ
ಸಣ್ಣ ನೀರಾವರಿ ವಿಭಾಗ ಎಂಬ ಚಂಡಿ ಕಂಬಳಿ
ಅರಣ್ಯ ಇಲಾಖೆಯ ಕತೆ ಹೀಗಾದರೆ ಸಣ್ಣ ನೀರಾವರಿಯದು ಇನ್ನೊಂದೇ ಕತೆ. ಪೈಪ್ ಲೈನ್ ಕಾಮಗಾರಿಯ ಕುರಿತಂತೆ ಬಹು ಮುಖ್ಯ ಜವಾಬ್ದಾರಿ ಇರುವುದು ಇದೇ ಇಲಾಖೆಗೆ. ಏಕೆಂದರೆ ಸರಕಾರಿ ಆದೇಶ ಸ್ಪಷ್ಟವಾಗಿ ಹೇಳುತ್ತದೆ: "ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು"
ನಾನು ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಅಭಿಯಂತರರಿಗೆ ("ಅಭಿಯಂತರ" ಎಂದು ಬರೆಯುವಾಗೆಲ್ಲ ನನಗೆ "ಬೆಂತರ" ಶಬ್ದ ನೆನಪಾಗುತ್ತದೆ. ಬೆಂತರ ಎಂದರೆ ಭೂತ. ನಿಜವಾಗಿ ಅಭಿಯಂತ ಎಂದಿರಬೇಕಾದ್ದನ್ನು ನಮ್ಮ ಅಧಿಕಾರಿಗಳು ಅಭಿಯಂತರ ಮಾಡಿಕೊಂಡಿದ್ದಾರೆ! ನನ್ನ ಅಭ್ಯಂತರ ಇಲ್ಲ ಅನ್ನಿ.) ಮಾಹಿತಿ ಹಕ್ಕಿನಲ್ಲಿ ಅರ್ಜಿ ಕೊಟ್ಟೆ: "ಸರಕಾರಿ ಆದೇಶ ಹೀಗೆ ಹೇಳುತ್ತಿದೆ; ನೀವು ಎಂ ಎಸ್ ಇ ಜಡ್ ನೊಂದಿಗೆ ಏನಾದರೂ ಒಪ್ಪಂದ ಮಾಡಿಕೊಂಡಿದ್ದೀರಾ? ಮುಚ್ಚಳಿಕೆ ಬರೆಸಿಕೊಂಡಿದ್ದೀರಾ? ಏಕೆಂದರೆ ಕಾಮಗಾರಿ ಪ್ರಾರಂಭವಾಗಿಬಿಟ್ಟಿದೆ" ಅಲ್ಲಿಂದ ಉತ್ತರ ಬಂತು: "... ಮಂಗಳೂರು ಎಸ್ ಇ ಜಡ್ ಕಂಪೆನಿಯೊಂದಿಗೆ ಈ ವಿಭಾಗದಿಂದ ಯಾವುದೇ ಕರಾರನ್ನು ಕೈಗೊಂಡಿರುವುದಿಲ್ಲ. ಹಾಗೂ ಇದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬಾರದಿರುವ ಕಾರಣ ಈ ವಿಷಯದಲ್ಲಿ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ"
ನಿಮ್ಮ ಹೆಚ್ಚಿನ ಪತ್ರಗಳಿಗೆ ಇಲಾಖೆಯಿಂದ ಇಂಥ ಉತ್ತರ ಬರದಿದ್ದರೆ ಅದು ಸರಕಾರಿ ಇಲಾಖೆಯೇ ಅಲ್ಲ! "ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನೀವು ಅಲ್ಲಿ ಹೋಗಿ, ಇಲ್ಲಿ ಕೇಳಿ" ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿಗಳೇ ನಮ್ಮ ಎಲ್ಲ ಸರಕಾರಿ ಕಚೇರಿಗಳಲ್ಲಿ ತುಂಬಿ ಹೋಗಿದ್ದಾರೆ. ಇದನ್ನು ತಿಳಿದೇ ಮಾಹಿತಿ ಹಕ್ಕು 2005 ಕಾನೂನು "ಅರ್ಜಿಯು ನಿಮಗೆ ಸಂಬಂಧಪಡದೆ ಇದ್ದಲ್ಲಿ ಅದು ಯಾರಿಗೆ ಸಂಬಂಧಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ" ಎಂದು ವಿಧಿಸಿ ಇಂಥ ಅಧಿಕಾರಿಗಳ ಹೆಡೆಮುರಿ ಕಟ್ಟಿದೆ. ಆದರೆ ಹೆಚ್ಚಿನ ಅಧಿಕಾರಿಗಳಿಗೆ, ಅವರು ಯಾವ ಮಟ್ಟದ ಅಧಿಕಾರಿಯೇ ಆಗಿರಲಿ, ಈ ನಿಯಮದ ಅರಿವೇ ಇಲ್ಲ.
ಸಣ್ಣ ನೀರಾವರಿ ವಿಭಾಗಕ್ಕೆ ಸರಕಾರದ ಅದೇಶವನ್ನು ಉದ್ಧರಿಸಿ ಪುನಃ ಬರೆದೆ: "ನಿಮಗೆ ಸಂಬಂಧಪಡದಿದ್ದರೆ ಯಾರಿಗೆ ಸಂಬಂಧ ಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ. ನೀವು ಹಾಗೆ ಮಾಡದಿದ್ದಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಕೊಡುವುದು ನನಗೆ ಅನಿವಾರ್ಯವಾಗುತ್ತದೆ. ನಿಮ್ಮ ಉತ್ತರಕ್ಕಾಗಿ ಇನ್ನೂ ಹತ್ತು ದಿನಗಳು ಕಾಯುತ್ತೇನೆ" ಎಂದು.
ಈ ಲೇಖನ ಬರೆಯುತ್ತಿದ್ದಂತೆ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಎಂಜಿನಿಯರರ ಉತ್ತರ ಬಂದಿದೆ. ಅವರು ನನ್ನ ಅರ್ಜಿಯನ್ನು ಹಾಸನದ ಜಲಮಾಪನ ವಿಭಾಗದ ಕಾರ್ಯಕಾರಿ ಎಂಜಿನಿಯರರಿಗೆ ಕಳಿಸಿಕೊಟ್ಟಿದ್ದಾರೆ. ಜೊತೆಗೆ ನನಗೆ ಹೀಗೆ ಸಲಹೆ ನೀಡಿದ್ದಾರೆ: "... ಈ ಕಛೇರಿಗೆ ವಿಷಯವು ಯಾವ ಕಛೇರಿಗೆ ಸಂಬಂಧಿಸಿದ್ದಾಗಿದೆ ಎಂಬುದು ನಿಖರವಾಗಿ ತಿಳಿದಿರದ ಕಾರಣ ಜಲಸಂಪನ್ಮೂಲ ಇಲಾಖೆಯೊಡನೆ ಸಂಪರ್ಕಿಸುವಂತೆ ಕೋರಿದೆ".
"ನಮಗೆ ಗೊತ್ತಿಲ್ಲ, ನಮ್ಮನ್ನು ಕೇಳಬೇಡಿ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಓ ಅಗೋ ಅವರನ್ನು ಕೇಳಿನೋಡಿ" ಇಂಥ ಉತ್ತರಗಳು ನಮ್ಮ ಅಧಿಕಾರಿಗಳಿಗೆ ರಕ್ತಗತವಾಗಿ ಹೋಗಿರುವುದಕ್ಕೆ ಮತ್ತೊಂದು ಉದಾಹರಣೆ ಇದು. ಗೊತ್ತಿಲ್ಲ ಸರಿ. ತಿಳಿದುಕೊಳ್ಳಲು ಸಾಧ್ಯವಿಲ್ಲವೆ? ಮಂಗಳೂರಿನ ಕಾರ್ಯಕಾರಿ ಎಂಜಿನಿಯರರ ಕಛೇರಿಯಲ್ಲಿ ಫೋನ್ ಸೌಲಭ್ಯ ಇಲ್ಲವೆ? (ಈಗಂತೂ ಸರಕಾರವೇ ತನ್ನ ಹಲವು ಅಧಿಕಾರಿಗಳಿಗೆ ಮೊಬೈಲ್ ಫೋನ್ ಸೌಲಭ್ಯ ಒದಗಿಸಿರುವುದಾಗಿ ಕೇಳಿದ್ದೇನೆ). ತಮ್ಮದೇ ಇಲಾಖೆಯಲ್ಲಿ ಯಾರನ್ನು ವಿಚಾರಿಸಿದರೆ ಈ ವಿಷಯ ತಿಳಿಯಬಹುದು ಎಂಬುದೂ ಅವರಿಗೆ ಗೊತ್ತಿಲ್ಲವೆ? ಕೆಲಸ ಮಾಡದೆ ಇರುವುದಕ್ಕೆ ಕಾರಣ ಹುಡುಕುವ ವಿಷಯದಲ್ಲಿ ಗೌರವ ಡಾಕ್ಟರೇಟ್ ಇದ್ದರೆ ಅದನ್ನು ಮೊದಾಲು ಇಂಥವರಿಗೆ ಕೊಡಬಹುದೆಂದು ಕಾಣುತ್ತದೆ.
ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ನನಗೆ ಸಲಹೆ ಕೊಡುತ್ತಿದ್ದಾರಷ್ಟೆ? ಯಾವ ಜಲಸಂಪನ್ಮೂಲ ಇಲಾಖೆ? ಅದರ ವಿಳಾಸ ಏನು? ಸಂಪರ್ಕಿಸಬೇಕಾದ ಅಧಿಕಾರಿ ಯಾರು? "ಜಲ ಸಂಪನ್ಮೂಲ ಇಲಾಖೆ" ಎಂದು ವಿಳಾಸ ಬರೆದು ಅಂಚೆಗೆ ಹಾಕಿದರೆ ಅಂಚೆಯವರು ಅದನ್ನು ಯಾರಿಗೆ ತಲುಪಿಸಬೇಕು? ಇಷ್ಟಕ್ಕೂ ಅವರು ಹೇಳುತ್ತಿರುವ ಜಲಸಂಪನ್ಮೂಲ ಇಲಾಖೆಯನ್ನು ಅವರೇ ಸಂಪರ್ಕಿಸಿ ನನಗೆ ಮಾಹಿತಿ ಯಾಕೆ ಕೊಡಬಾರದು?
ಅದಿರಲಿ. ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸಬೇಕೆಂಬ ವಿಷಯ ನನಗೆ ಮೊದಲೇ ಗೊತ್ತಿತ್ತು. ಕಳೆದ ಜೂನ್ ತಿಂಗಳಿನಲ್ಲಿಯೇ, ಈ ವಿಷಯದಲ್ಲಿ ಮಾಹಿತಿ ಕೋರಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಿಗೆ ಅರ್ಜಿ ಹಾಕಿದ್ದೆ. ಅವರ ಪರವಾಗಿ ಬೇರೊಬ್ಬರು ಅಧಿಕಾರಿ ಹೀಗೆ ಉತ್ತರ ಬರೆದರು: ".......ತಾವು ಅಪೇಕ್ಷಿಸಿರುವ.... ಮಾಹಿತಿಯನ್ನು ಮಂಗಳೂರು ವಿಶೇಷ ಅರ್ಥಿಕ ವಲಯ ಸಂಸ್ಥೆಯಿಂದಲೇ ನೇರವಾಗಿ ಪಡೆದುಕೊಳ್ಳಬಹುದೆಂದು ಈ ಮೂಲಕ ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ". ಇವರು ಕರ್ನಾಟಕ ಸರಕಾರದ ಇಲಾಖಾ ಕಾರ್ಯದರ್ಶಿ. ಬಹುಶಃ ಐ.ಎ.ಎಸ್. ಮಾಡಿರುವವರು. ಇವರಿಗೆ ಮಾಹಿತಿ ಹಕ್ಕಿನ ಪಾಠ ನನ್ನಂಥವರು ಮಾಡಬೇಕಾಗಿದೆ. ಏನು ಮಾಡುವುದು?
"ಸಾರ್ವಜನಿಕ ಸೇವಕ"ರಾದ ಈ ಆಧುನಿಕ ಮಹಾರಾಜರುಗಳೊಂದಿಗೆ ವ್ಯವಹರಿಸುವುದು ಕಷ್ಟ, ಕಡುಕಷ್ಟ.
ಸೆರೆ ಬಿಟ್ಟಲ್ಲಿ ಉಳಿ ಇಳಿಸುವ ಚಾಣಕ್ಯ: ಎಂ ಎಸ್ ಇ ಜಡ್ ಕಂಪೆನಿ
ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ ನೀರೆತ್ತಲು ಸರ್ಕಾರ ಕಂಪೆನಿಗೆ ಅನುಮತಿ ನೀಡಿದ್ದು 2007ರಲ್ಲಿ. ಆಗ ಕಂಪೆನಿ ನಾಲ್ಕು ಸಾವಿರ ಎಕ್ರೆ ಜಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಯೋಜನೆ ಇತ್ತು. ಇದೀಗ ಪರಿಸ್ಥಿತಿ ಬದಲಾಗಿದೆ. ಸರಕಾರ 1998 ಎಕ್ರೆ ಜಮೀನನ್ನು ಡಿನೋಟಿಫೈ ಮಾಡಿದೆ. ಹೀಗಾಗಿ ಈಗ ಎರಡುಸಾವಿರ ಚಿಲ್ಲರೆ ಎಕ್ರೆಯಲ್ಲಿ ಮಾತ್ರ ಕಂಪೆನಿಯ ಉದ್ಯಮಗಳು ಸ್ಥಾಪನೆಗೊಳ್ಳಬೇಕು. ಜಮೀನು ನಾಲ್ಕು ಸಾವಿರ ಎಕ್ರೆ ಎಂದಿದ್ದ ಕಾಲದಲ್ಲಿ ಕಂಪೆನಿ ತನ್ನ ನೀರಿನ ವ್ಯವಸ್ಥೆಯ ಚಿತ್ರಣವನ್ನು ಹೀಗೆ ನೀಡಿತ್ತು:
ಒಟ್ಟು ಅಗತ್ಯ: 45 ಎಂಜಿಡಿ;
ಪೂರೈಕೆ:
ಮಂಗಳೂರು ಕೊಳಚೆ ನೀರು ಶುದ್ಧೀಕರಣದಿಂದ 18 ಎಂಜಿಡಿ,
ಮಳೆನೀರು ಸಂಗ್ರಹದಿಂದ 12 ಎಂಜಿಡಿ
ನೇತ್ರಾವತಿ, ಗುರುಪುರ ನದಿಗಳಿಂದ 15 ಎಂಜಿಡಿ.
ಬದಲಾದ ಸನ್ನಿವೇಶದಲ್ಲಿ ಇದರ ಅರ್ಧ ನೀರು ಹೇಗೂ ಸಾಕಷ್ಟೆ. ಎಂದರೆ 22.5 ಎಂಜಿಡಿ. ಇಷ್ಟು ನೀರನ್ನು ಕೊಳಚೆನೀರು ಶುದ್ಧೀಕರಣದಿಂದ ಮತ್ತು ಮಳೆನೀರು ಸಂಗ್ರಹದಿಂದ ಧಾರಾಳವಾಗಿ ಒದಗಿಸಿಕೊಳ್ಳಬಹುದು. ಹಾಗಾಗಿ ನಿಜವಾಗಿ ನೇತ್ರಾವತಿಯಿಂದ ನೀರೆತ್ತುವ ಅಗತ್ಯವೇ ಕಂಪೆನಿಗೆ ಇಲ್ಲ. ಹೀಗಿದ್ದರೂ ಕಂಪೆನಿ ತನ್ನ ಕೈಗಾರಿಕಾ ನೆಲೆಯಿಂದ ಸುಮಾರು 35 ಕಿ.ಮೀ. ದೂರಕ್ಕೆ 1400 ಮಿ.ಮೀ. ವ್ಯಾಸದ ಪೈಪ್ ಲೈನ್ ಅಳವಡಿಸುವ ಕೋಟಿಗಟ್ಟಲೆ ರೂಪಾಯಿ ಕಾಮಗಾರಿಯನ್ನು ಪ್ರಾರಂಭಿಸಿಬಿಟ್ಟಿದೆ. ಈ ವೃಥಾ ಖರ್ಚಿನ ಕೆಲಸವನ್ನು ಕಂಪೆನಿ ಯಾಕಾದರೂ ಕೈಗೊಂಡಿರಬಹುದು?
ಕಾರಣಗಳನ್ನು ಊಹಿಸಲು ಸಾಧ್ಯವಿದೆ. ನಮ್ಮ ನೇತ್ರಾವತಿ ನದಿಯ ನೀರು - ಗಾದೆಯೇ ಇದೆಯಲ್ಲ, ಹೊಳೆನೀರಿಗೆ ದೊಣೆ ನಾಯಕನ ಅಪ್ಪಣೆಯೆ? ಅಂತ - ಅಕ್ಷರಶಃ ಹೇಳುವವರು ಕೇಳುವವರೇ ಇಲ್ಲದ ವಸ್ತುವಾಗಿಬಿಟ್ಟಿದೆ. ಸಾಪೇಕ್ಷವಾಗಿ ಉತ್ತಮ ಗುಣಮಟ್ಟದ್ದು ಎಂದೇ ಹೇಳಬಹುದಾದ ನೇತ್ರಾವತಿ ನೀರಿನ ವಿಷಯದಲ್ಲಿ ಸರಕಾರ "ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ" ಎಂಬಂತೆ ನಡೆದುಕೊಳ್ಳುತ್ತಿರುವುದು ಕಂಪೆನಿಯ ಪಾಲಿಗೆ ದೊಡ್ಡ ವರದಾನವಾಗಿದೆ. ಒಂದು ಸಲ ಹೇಗಾದರೂ ಮಾಡಿ ನದಿಯಿಂದ ಪೈಪ್ ಲೈನಿಗೆ ನೀರು ಹತ್ತಿಸಿದರಾಯಿತು; ನಂತರ ನೇತ್ರಾವತಿಯನ್ನು ಮುಡಿ ಹಿಡಿದು ತನ್ನ ಅರಮನೆಗೆ ಎಳೆದುಕೊಂಡು ಹೋಗಬಹುದು, ರಕ್ಷಣೆಗೆ ಬರುವವರು ಯಾರೂ ಇಲ್ಲ ಎಂದು ಕಂಪೆನಿಗೆ ಗೊತ್ತಿದೆ. ನಿರಂತರವಾಗಿ ಧಂಡಿಯಾಗಿ ಉತ್ತಮ ಗುಣಮಟ್ಟದ ನೀರು ಅತ್ಯಂತ ಕಡಿಮೆ ದರಕ್ಕೆ ಸಿಗುವುದಾದರೆ ಯಾರಿಗೆ ಬೇಡ? ಆಫೀಸರುಗಳ ಮನೆಯಲ್ಲಿ ನಾಲ್ಕು ನಾಲ್ಕು ಬಚ್ಚಲು ಮನೆಗಳನ್ನು ಕಟ್ಟಿಸಬಹುದು, ಒಂದೊಂದರಲ್ಲೂ ಟಬ್ ಅಳವಡಿಸಬಹುದು, ಕ್ಯಾಂಪಸ್ಸಿಗೆ ಬಂದವರ ಕಣ್ಣು ತಂಪಾಗುವಂತೆ ಅಲ್ಲಲ್ಲಿ ಸರೋವರಗಳನ್ನೇ ನಿರ್ಮಿಸಬಹುದು, ನಿರಂತರ ನೀರು ಚಿಮ್ಮುವ ಕಾರಂಜಿಗಳನ್ನು ನಿರ್ಮಿಸಿ, ರಾತ್ರಿವೇಳೆ ಅವುಗಳಿಗೆ ದೀಪಾಲಂಕಾರ ಮಾಡಬಹುದು - ಅಲ್ಲವೆ?
ಯಾಕೆ ಹೇಳುತ್ತಿದ್ದೇನೆಂದರೆ, ಒಮ್ಮೆ ನೀರು ಹೋಗಲು ಶುರುವಾಯಿತೆಂದರೆ ಕತ್ತಿ, ಕುಂಬಳಕಾಯಿ ಎರಡನ್ನೂ ಕಂಪೆನಿಯ ಕೈಯಲ್ಲೇ ಕೊಟ್ಟುಬಿಡುತ್ತದೆ ಸರಕಾರ. ಕಂಪೆನಿ ಎತ್ತುವ ನೀರಿಗೆ ಮೀಟರ್ ಹಾಕುವುದು ಸರಕಾರವಲ್ಲ, ಕಂಪೆನಿಯೇ! ಎಲ್ಲಾದರೂ ಕೇಳಿದ್ದೀರಾ ಇಂಥ ಅವಿವೇಕವನ್ನು? ಅಂಗಡಿಗೆ ಹೋದರೆ ತಕ್ಕಡಿ ವ್ಯಾಪಾರಸ್ಥನದು; ಕರೆಂಟಿನ ಮೀಟರ್ ಮೆಸ್ಕಾಮಿನದು; ದೂರವಾಣಿ ಮೀಟರ್ ಇಲಾಖೆಯದು. ಕರ್ನಾಟಕ ಸರ್ಕಾರ ಮಾತ್ರ ನೀರಿನ ಮೀಟರನ್ನು ಹಾಕಲು, ನೋಡಿಕೊಳ್ಳಲು ಕಂಪೆನಿಗೇ ವಹಿಸಿಬಿಡುತ್ತದೆ. ನಂತರ ಕಂಪೆನಿ ಕೊಟ್ಟದ್ದೇ ಲೆಕ್ಕ, ಕಟ್ಟಿದ್ದೇ ದುಡ್ಡು!
"ಸರಕಾರ ಇಂತಿಷ್ಟೇ ನೀರು ಎತ್ತಬೇಕೆಂದು ವಿಧಿಸಿದೆ, ಅದಕ್ಕಿಂತ ಜಾಸ್ತಿ ನೀರು ನಾವು ಎತ್ತುವಂತೆಯೇ ಇಲ್ಲ, ನೀರಿನ ಮೀಟರನ್ನು ಸರಕಾರಿ ಅಧಿಕಾರಿಗಳು ಆಗಿಂದಾಗ್ಗೆ ತನಿಖೆ ಮಾಡುತ್ತಾರೆ, ನೀವು ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ" ಎಂದು ಕಂಪೆನಿ ನನ್ನ ಮಾತನ್ನು ತಳ್ಳಿಹಾಕಬಹುದು. ಹಾಗಿದ್ದರೆ ಎಷ್ಟು ನೀರೆತ್ತಲು ಸರಕಾರ ಅನುಮತಿ ಕೊಟ್ಟಿದೆಯೋ ಅಷ್ಟೇ ಸಾಮರ್ಥ್ಯದ ಪೈಪ್ ಲೈನ್ ಹಾಕಬಹುದಲ್ಲ? ನೇತ್ರಾವತಿಯಿಂದ ಅನುಮತಿ ಇರುವುದು ನಿಜವಾಗಿ 12.5 ಎಂಜಿಡಿ ಮಾತ್ರ. ಹಾಗಿರುವಾಗ ಪೈಪ್ ಲೈನ್ ಸಹ ಅಷ್ಟೇ ಸಾಮರ್ಥ್ಯದ್ದಿರಬೇಕಲ್ಲವೆ? ಕಂಪೆನಿ ಹಾಕುತ್ತಿರುವ ಪೈಪ್ ಲೈನ್ ಸಾಮರ್ಥ್ಯ ಎಷ್ಟು?
ಈ ಪ್ರಶ್ನೆ ನಿಜವಾಗಿ ನನ್ನ ತಲೆಗೆ ಹೋಗಿರಲಿಲ್ಲ. ಬೇರೆ ಯಾವುದೋ ಒಂದು ದಾಖಲೆಗಾಗಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದೆ. ಅವರು ಆ ದಾಖಲೆಯನ್ನು ಕೊಡುವಾಗ ಜೊತೆಗೆ ಇನ್ನೊಂದು ದಾಖಲೆಯನ್ನು ಲಗತ್ತಿಸಿದ್ದರು. ಆ ಇನ್ನೊಂದು ದಾಖಲೆ ಇಲಾಖೆ ಕಂಪೆನಿಗೆ ಮೂಲರಪಟ್ನದಲ್ಲಿ ಪೈಪ್ ಲೈನನ್ನು ಗುರುಪುರ ನದಿ ದಾಟಿಸಲು ಕೊಟ್ಟ ಅನುಮತಿಯಾಗಿತ್ತು. ಅದರಲ್ಲಿ ಸ್ಪಷ್ಟವಾಗಿ ಹೇಳಿತ್ತು: ಕಂಪೆನಿಗೆ 30 ಎಂಜಿಡಿ ಸಾಮರ್ಥ್ಯದ ಪೈಪ್ ಲೈನ್ ಅಳವಡಿಸಲು ಅನುಮತಿ ನೀಡಲಾಗಿದೆ ಎಂದು!
ನಾನು ಕೂಡಲೇ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕೇಳಿದೆ: ಇದು ಹೇಗೆ ಸಾಧ್ಯ? ಎಂದು. ಅವರ ಉತ್ತರ ಎಂದಿನ ಸರಕಾರಿ ಶೈಲಿಯಲ್ಲಿ: ತಾಂತ್ರಿಕ ಇಲಾಖೆಯ ಶಿಫಾರಸಿನಂತೆ ನಾವು ಮಾಡಿದ್ದೇವೆ (ಎಂದರೆ "ನಾವು ಜವಾಬ್ದಾರರಲ್ಲ"). ತಾಂತ್ರಿಕ ಇಲಾಖೆಗೆ ಬರೆದೆ. ಸುಮಾರು ಒಂದು ತಿಂಗಳಾದರೂ ಉತ್ತರ ಕೊಡಲಿಲ್ಲ. ಮೊನ್ನೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದ್ದೇನೆ. ಏನು ಹೇಳುತ್ತಾರೋ ನೋಡೋಣ.
ಅದಿರಲಿ, ಕಂಪೆನಿ ಎಷ್ಟು ಪ್ರಮಾಣದ ನೀರಿಗೆ ಹೊಂಚು ಹಾಕುತ್ತಿದೆ ಎಂಬುದಂತೂ ಇದರಿಂದ ಸ್ಪಷ್ಟ ತಾನೆ? ಮಂಗಳೂರಿನ ಜನರಿಗೆ ಕುಡಿಯುವ ನೀರು ಕೊಡುವ ಮಹಾ ನಗರ ಪಾಲಿಕೆ ಈ ವಿಷಯದಲ್ಲಿ ಮೊದಲು ಆಸಕ್ತಿ ತೆಗೆದುಕೊಳ್ಳಬೇಕಿತ್ತು. ಎಂ ಎಸ್ ಇ ಜಡ್ ಕಂಪೆನಿಯ ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಆದರೆ, ಅದು ಹೊಸದೊಂದು ಅಣೆಕಟ್ಟು ನಿರ್ಮಿಸಿ ಮಂಗಳೂರಿಗರಿಗೆ ನೀರು ಕೊಡುವ ಉತ್ಸಾಹದಲ್ಲಿ, ತನ್ನ ನೀರಿನ ಮೂಲಕ್ಕೇ ಕನ್ನ ಬೀಳುತ್ತಿರುವುದನ್ನು ಕಾಣುತ್ತಿಲ್ಲ. ಈಗಲಾದರೂ ಏನಾದರೋ ಮಾಡುತ್ತದೋ ನೋಡೋಣ.
ಮಂಗಳೂರಿನ, ನೇತ್ರಾವತಿ ನೀರು ಕುಡಿಯುತ್ತಿರವ ಜನ ಈ ವಿದ್ಯಮಾನಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆಂದು ಆಶಿಸುತ್ತೇನೆ.