ಬುಧವಾರ, ಡಿಸೆಂಬರ್ 16, 2009

ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು: ಮಾಹಿತಿ ಸಂಗ್ರಹದ ಒದ್ದಾಟ-ಗುದ್ದಾಟ

ಈ ಕುರಿತಾದ ನನ್ನ ಮೊದಲಿನ ಲೇಖನಕ್ಕೆ ಎಂ ಎಸ್ ಇ ಝಡ್ ತಾ. ೬-೧೦-೦೯ರ ಉದಯವಾಣಿಯಲ್ಲಿ ಪ್ರಕಟಿಸಿದ ಜಾಹೀರಾತನ್ನು ಆಧಾರವಾಗಿ ಇಟ್ಟುಕೊಂಡಿದ್ದೆ. ನನ್ನ ವಿಶ್ಲೇಷಣೆಯ ದೋಷಗಳು ನನಗೆ ತಿಳಿಯುವುದಿಲ್ಲ. ಹಾಗಾಗಿ, ಕಂಪೆನಿ ಯಾವ ಅಧ್ಯಯನವನ್ನು ಆಧರಿಸಿ ಈ ಅಂಕಿ ಅಂಶಗಳನ್ನು, ಮಾಹಿತಿಯನ್ನು ಪ್ರಕಟಿಸಿದೆ ಎಂದು ತಿಳಿಯುವ ಕುತೂಹಲದಿಂದ, ಮಾಹಿತಿ ಹಕ್ಕನ್ನು ಬಳಸಿ ಎಂ ಎಸ್ ಇ ಝಡ್ ಗೆ ಅರ್ಜಿ ಹಾಕಿ ಈ ಮೂರು ಮಾಹಿತಿಗಳನ್ನು ಕೇಳಿದ್ದೆ:
೧. ಮಂಗಳೂರು ಮಹಾನಗರ ಪಾಲಿಕೆಯ ಕೊಳಚೆ ನೀರು ಸಂಸ್ಕರಣಾ ಘಟಕಗಳಿಂದ ೧೮ ಎಂಜಿಡಿ ನೀರು ದೊರೆಯುವುದಕ್ಕೆ ಆಧಾರಗಳು, ಈ ತೀರ್ಮಾನಕ್ಕೆ ಬರಲು ನಡೆಸಿದ ಅಧ್ಯಯನದ ಸಂಪೂರ್ಣ ವಿವರ. ಹೀಗೆ ಪಡೆಯುವ ನೀರಿಗೆ ತಗಲಬಹುದಾದ ಖರ್ಚು ಎಷ್ಟು.
೨. ನೈಸರ್ಗಿಕ ಅಣೆಕಟ್ಟುಗಳನ್ನು ನಿರ್ಮಿಸಿ ಮಳೆನೀರು ಸಂಗ್ರಹಿಸಿ ೧೨ ಎಂಜಿಡಿ ನೀರು ಪಡೆಯುವ ಹೇಳಿಕೆಗೆ ಆಧಾರ, ಈ ಬಗ್ಗೆ ನಡೆಸಿರುವ ಅಧ್ಯಯನದ ಸಂಪೂರ್ಣ ವಿವರ (ಸಂಗ್ರಹಾಗಾರದ ಸ್ವರೂಪ, ಅದು ಕೆರೆಯ ರೂಪದಲ್ಲಿರುತ್ತದೆಯೆ ಅಥವಾ ಕಾಂಕ್ರೀಟ್ ಇತ್ಯಾದಿ ಬಳಸಿ ಟ್ಯಾಂಕುಗಳನ್ನು ನಿರ್ಮಿಸಲಾಗುವುದೆ, ಒಟ್ಟು ಎಷ್ಟು ಎಕರೆ ಪ್ರದೇಶದಲ್ಲಿ ಇತ್ಯಾದಿ ವಿವರಗಳು)
೩. ಗುರುಪುರ ಮತ್ತು ನೇತ್ರಾವತಿಗೆ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದೆ? ಹೀಗೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ನೀಡಿರುವ ಅನುಮತಿಯ (ಲೈಸೆನ್ಸ್) ಯಥಾಪ್ರತಿ.
ಈ ಅರ್ಜಿಗೆ ಕಂಪೆನಿ ಅಮೋಘ ಒಂದು ಸಾಲಿನ ಉತ್ತರ ನೀಡಿತು: "ನೀವು ಕೋರಿದ ಮಾಹಿತಿಯಂತೆ ದಿನಾಂಕ ೬-೧೦-೨೦೦೯ರ ಉದಯವಾಣಿಯಲ್ಲಿ ನಾವು ಯಾವುದೇ ಜಾಹೀರಾತನ್ನು ನೀಡಲಿಲ್ಲವೆಂದು ಈ ಮೂಲಕ ತಿಳಿಸಬಯಸುತ್ತೇವೆ". "ಕೆಪ್ಪ ಅಂದರೆ ಕೊಪ್ಪದ ಕಡೆ" ಅಂತ ನಮ್ಮೂರು ಕೊಪ್ಪದ ಕಡೆ ಒಂದು ಗಾದೆ. ಇರಲಿ. ನಾನು ಪ್ರತಿ ಬಾಣ ಬಿಟ್ಟೆ:
"೧. ದಿ. ೬-೧೦-೦೯ರ ಉದಯವಾಣಿ ಪತ್ರಿಕೆಯ ಪ್ರತಿ ನನ್ನಲ್ಲಿದೆ. ಅದರಲ್ಲಿ ನಿಮ್ಮ ಜಾಹೀರಾತೂ ಇದೆ.
೨. ನಿಮ್ಮ ವೆಬ್ ಸೈಟಿನಲ್ಲೂ ನೀವು ನೀರನ್ನು ಎಲ್ಲಿಂದ ಒದಗಿಸಿಕೊಳ್ಳಲಾಗುವುದು ಎಂದು ವಿವರಿಸಿದ್ದೀರಿ. ಅದರ ಪ್ರಿಂಟ್ ಔಟ್ ಸಹ ನನ್ನಲ್ಲಿದೆ.
೩. ನೀರಿನ ಲಭ್ಯತೆಯ ಬಗ್ಗೆ ನೀವು ಮಾಡಿರುವ ಅಧ್ಯಯನ ಇಲ್ಲಿ ಮುಖ್ಯವೇ ಹೊರತು ನೀವು ಜಾಹೀರಾತು ಕೊಟ್ಟಿದ್ದೀರೋ ಇಲ್ಲವೋ ಎನ್ನುವುದು ಅಲ್ಲ.
ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ಮಾಹಿತಿ ಕೊಡತಕ್ಕದ್ದೆಂದು ಮಾಹಿತಿ ಹಕ್ಕು ಕಾಯಿದೆ ಹೇಳುತ್ತದೆ. ಅದರಂತೆ ತಾ. ೧೦-೧೧-೨೦೦೯ರ ನನ್ನ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ನೀವು ನನಗೆ ಕೊಡದಿದ್ದಲ್ಲಿ, ಮಾಹಿತಿ ಹಕ್ಕು ಆಯುಕ್ತರಿಗೆ ದೂರು ಸಲ್ಲಿಸುವುದು ನನಗೆ ಅನಿವಾರ್ಯವಾಗುತ್ತದೆ ಎಂಬುದನ್ನು ಗಮನಿಸಿರಿ."
ಈವರೆಗೆ ಮಾಹಿತಿ ಬಂದಿಲ್ಲ.(ತಾ. ೧೪-೧೨-೨೦೦೯) ಅನಿವಾರ್ಯವಾಗಿ ನಾಳೆ ಮಾಹಿತಿ ಆಯುಕ್ತರಿಗೆ ದೂರು ಸಲ್ಲಿಸುತ್ತೇನೆ. ಏನಾಗುತ್ತದೋ ನೋಡೋಣ.
**********
ನಮಗೆ ಬೇಕಾದ ಮಾಹಿತಿ ಯಾವ ಇಲಾಖೆಯಲ್ಲಿ ದೊರೆಯುತ್ತದೆ ಎಂದು ತಿಳಿದುಕೊಳ್ಳುವುದೇ ಮೊದಲ ದೊಡ್ಡ ಸಮಸ್ಯೆ. ಆದರೆ ಮಾಹಿತಿ ಹಕ್ಕು ಕಾನೂನು ಇದನ್ನು ಸರಳವಾಗಿ ಪರಿಹರಿಸಿದೆ. ಎಂ ಆರ್ ಪಿ ಎಲ್ - ಕರ್ನಾಟಕ ಸರಕಾರಗಳ ನಡುವೆ ನೀರಿನ ಕುರಿತು ಆಗಿರುವ ಒಪ್ಪಂದದಲ್ಲಿ ಎಂ ಆರ್ ಪಿ ಎಲ್ ಗೆ ನೇತ್ರಾವತಿ ನದಿಯಿಂದ ದಿನಕ್ಕೆ ೨.೨೫ ಕೋಟಿ ಲೀಟರ್ ನೀರು ಎತ್ತಲು ಸರಕಾರ ಅನುಮತಿ ನೀಡಿದೆ. ಎಂ ಆರ್ ಪಿ ಎಲ್ ಈ ಮಿತಿಯೊಳಗೇ ನೀರು ಎತ್ತುತ್ತಿದೆಯೇ ಎಂದು ನೋಡಿಕೊಳ್ಳಲು ಒಂದು ಸರಕಾರಿ ಸಮಿತಿ ಇದೆ. ಈ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರು. ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಒಬ್ಬ ಸದಸ್ಯರು. ಇನ್ನೂ ಹಲವು ಸದಸ್ಯರಿದ್ದಾರೆ. ನಾನು ಜಿಲ್ಲಾಧಿಕಾರಿಯವರ ಕಛೇರಿಯ ಮಾಹಿತಿ ಅಧಿಕಾರಿಗೆ ಪತ್ರ ಬರೆದು, "ಈ ಸಮಿತಿ ಕಳೆದ ೫ ವರ್ಷಗಳಲ್ಲಿ ಎಷ್ಟು ಸಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ ಎಂಬ ಮಾಹಿತಿ ಮತ್ತು ತೀರ ಇತ್ತೀಚೆಗೆ ನೀಡಿದ ಭೇಟಿಯ ವರದಿಯ ಯಥಾಪ್ರತಿ"ಗಳನ್ನು ಕೊಡುವಂತೆ ಕೇಳಿದೆ. ಜಿಲ್ಲಾಧಿಕಾರಿ ಕಛೇರಿಯ ಮಾಹಿತಿ ಅಧಿಕಾರಿ ನನಗೆ ಪತ್ರ ಬರೆದು, "ಈ ಮಾಹಿತಿಯು ಸಣ್ಣ ನೀರಾವರಿ ಇಲಾಖೆಗೆ ಸಂಬಂಧ ಪಟ್ಟಿರುವುದರಿಂದ ನಿಮ್ಮ ಅರ್ಜಿಯನ್ನು ಅವರಿಗೆ ಕಳಿಸಿಕೊಟ್ಟಿದೆ" ಎಂದು ತಿಳಿಸಿ ನನ್ನ ಅರ್ಜಿಯನ್ನು ಅವರೇ ಸಣ್ಣ ನೀರಾವರಿ ಇಲಾಖೆಗೆ ಕಳಿಸಿಕೊಟ್ಟರು. ಇದೇ ಕಾನೂನು. ಅರ್ಜಿದಾರ ಕೇಳಿದ ಮಾಹಿತಿ ತನ್ನಲ್ಲಿ ಇಲ್ಲವೆಂದು ಯಾವ ಮಾಹಿತಿ ಅಧಿಕಾರಿಯೂ ಹೇಳುವಂತಿಲ್ಲ. ಆತ ಅರ್ಜಿಯನ್ನು ಮಾಹಿತಿ ಯಾರಲ್ಲಿದೆಯೋ ಅವರಿಗೆ ಕಳಿಸಿಕೊಟ್ಟು, ಹಾಗೆ ಕಳಿಸಿಕೊಟ್ಟಿರುವುದನ್ನು ಅರ್ಜಿದಾರನಿಗೆ ತಿಳಿಸಬೇಕು.
ಸಣ್ಣ ನೀರಾವರಿ ಇಲಾಖೆ ನನಗೆ ಪೂರ್ಣ ಮಾಹಿತಿ ಕೊಡಲಿಲ್ಲ. ಆದರೆ ಕೊಟ್ಟ ಮಾಹಿತಿ ಕುತೂಹಲಕರವಾಗಿದೆ: ಸಮಿತಿ ಸ್ಥಳಕ್ಕೆ ಭೇಟಿ ನೀಡಿದ ದಿನ ಎಷ್ಟು ನೀರು ಎತ್ತಲಾಯಿತೆಂಬುದರ ಲೆಕ್ಖವನ್ನು ಎಂ ಆರ್ ಪಿ ಎಲ್ ಸಮಿತಿಗೆ ಕೊಟ್ಟಿದೆ. ಅದು ನಿಗದಿತ ಮಿತಿಯೊಳಗೇ ಇದೆ. ಆದರೆ ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಯಾವುದೇ ವ್ಯಾಪಾರದಲ್ಲೂ, ವಸ್ತುವನ್ನು ಕೊಡುವವನು ತಾನೇ ಅಳೆದು ಅಥವಾ ತೂಕ ಮಾಡಿ ವಸ್ತುವನ್ನು ಕೊಡುವುದು ರೂಢಿ. ಕರೆಂಟಿನ ಮೀಟರ್ ಇಲಾಖೆಯದು. ದೂರವಾಣಿ ಮೀಟರ್ ಸಹ ಹಾಗೆಯೇ. ಆದರೆ ಎಂ ಆರ್ ಪಿ ಎಲ್ ವಿಷಯದಲ್ಲಿ ಮಾತ್ರ ಇದು ಉಲ್ಟಾ. (ಒಪ್ಪಂದದಲ್ಲಿ ಹೀಗೆ ಹೇಳಿದೆ: MRPL has to make its own arrangement to draw the permitted quantity of 5 MGD of water from the river for providing calibrated gauge or any other mechanical or electronic devise for assessing the quantum of water lifted and permitted to inspect the same by the Deputy Commissioner of D.K.... ಈ ವಾಕ್ಯದಲ್ಲಿ ಕೊಮಾ, ಪೂರ್ಣವಿರಾಮ ಇತ್ಯಾದಿಗಳನ್ನು ಓದುವವರೇ ಸೇರಿಸಿಕೊಳ್ಳಬೇಕು. ಕಾಲಸೂಚಕ ಪ್ರತ್ಯಯಗಳಿಗೂ ಓದುಗರೇ ಜವಾಬ್ದಾರಿ!) ಕಂಪೆನಿಯು ತಾನು ಎತ್ತಿದ ನೀರಿನ ಪ್ರಮಾಣವನ್ನು ತಾನೇ ಅಳೆದು ಸಮಿತಿಗೆ ಲೆಕ್ಖ ಕೊಡುತ್ತದೆ. ಸಮಿತಿ "ಎಲ್ಲ ಸರಿ ಇದೆ" ಎಂದು ತಲೆಯಾಡಿಸುತ್ತದೆ! ಹೇಗೆ ವ್ಯಾಪಾರ? ( ಪೋಲಿಸ್ ಅಧಿಕಾರಿ ಶಂಕರ ಬಿದರಿಯವರಿಗೆ ಒಂದು ವಿಶಿಷ್ಟ ದೇಹಭಾಷೆ ಇದೆ. "ಹೇಗೆ ವ್ಯಾಪಾರ?" ಅಂತ ನಾನು ಕೇಳಿದೆನಲ್ಲ, ಅದನ್ನು ಅವರು ಶಬ್ದಗಳೇ ಇಲ್ಲದೆ, ಮುಖ ಮತ್ತು ಕಣ್ಣುಗಳಲ್ಲೇ ಕೇಳಿ, ಆ ವ್ಯಾಪಾರದ ಪರಮ ಮೂರ್ಖತನವನ್ನು ಹೊರಹಾಕಬಲ್ಲರು. ಆ ಮಾತು ಬರೆದಾಗ ನನಗೆ ಅವರ ನೆನಪಾಯಿತು).
*******************
ನೇತ್ರಾವತಿ ನದಿ ನೀರು ಎತ್ತುವ ಬಗ್ಗೆ ಎಂ ಆರ್ ಪಿ ಎಲ್ ಮತ್ತು ಕರ್ನಾಟಕ ಸರಕಾರದ ನಡುವೆ ಆಗಿರುವ ಒಪ್ಪಂದದ ಕುರಿತು:
ಈ ಒಪ್ಪಂದದ ಪ್ರತಿಯನ್ನು ನಾನು ಮಾಹಿತಿ ಹಕ್ಕಿನಡಿ ಎಂ ಆರ್ ಪಿ ಎಲ್ ನಿಂದ ಪಡೆದುಕೊಂಡಿದ್ದೇನೆ.
೧. ಎಂ ಆರ್ ಪಿ ಎಲ್ ಗೆ ಕರ್ನಾಟಕ ಸರಕಾರ ಕೊಡುವ ನೀರಿಗೆ ದರ ಈಗ ೪೫ ಲಕ್ಷ ಲೀಟರಿಗೆ ರೂ. ೨೮೮-೯೦! ಈ ದರ ಯಾವ ಆಧಾರದಲ್ಲಿ ಯಾರು ನಿಗದಿ ಮಾಡಿದರು ಎಂಬುದು ಆಶ್ಚರ್ಯದ ವಿಷಯ. ಮಾರುಕಟ್ಟೆಯಲ್ಲಿ ದೊರೆಯುವ ಕುಡಿಯುವ ನೀರಿಗೆ ಲೀಟರಿಗೆ ರೂ. ೧೨-೦೦ ಇದೆ. ಅದರ ವಿಷಯ ಬಿಡೋಣ. ಬಂಟ್ವಾಳ ಪಟ್ಟಣ ಪಂಚಾಯತ್ ತಾನು ಸರಬರಾಜು ಮಾಡುವ ಕುಡಿಯುವ ನೀರಿನ ದರ ಒಂದು ಸಾವಿರ ಲೀಟರಿಗೆ ಎರಡು ರೂ. ವಾಣಿಜ್ಯ ಬಳಕೆಗೆ ಒಂದು ಸಾವಿರ ಲೀಟರಿಗೆ ಐದು ರೂ. ಮತ್ತು ಕೈಗಾರಿಕಾ ಬಳಕೆಗೆ ಒಂದು ಸಾವಿರ ಲೀಟರಿಗೆ ಎಂಟು ರೂಪಾಯಿ ಮೂವತ್ತಮೂರು ದರ ವಿಧಿಸುತ್ತದೆ. ಹೀಗಿರುವಾಗ ಇಂಥ ಬಿಸಾಕುದರದಲ್ಲಿ ಸರಕಾರ ಎಂ ಆರ್ ಪಿ ಎಲ್ ಗೆ ನೀರನ್ನು ಕೊಡುತ್ತಿರುವುದರ ಗುಟ್ಟು ಅರ್ಥವಾಗುವುದಿಲ್ಲ. ಈ ದರವನ್ನು ನಿಗದಿ ಮಾಡಿದವರು ಯಾರು ಮತ್ತು ಅದಕ್ಕೆ ಆಧಾರವೇನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತೇನೆ. ಮಾಹಿತಿ ಸಿಕ್ಕಿದರೆ ಮುಂದೆ ತಿಳಿಸುತ್ತೇನೆ.

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಈ ತಾಣಕ್ಕೆ ಅಶೋಕವಧ೵ನ ಕಳಿಸಿದರು. ನಿಮ್ಮ ಲೇಖನ ಕಣ್ಣು ತೆರೆಸುವಂಥದ್ದು. ಹಗಲು ದರೋಡೆಯೆಂದು ಹೆಸರಿಟ್ಟಿದ್ದರೆ ಸಾಥ೵ಕವಾಗುತ್ತಿತ್ತು!
-ವಿವೇಕ ಶಾನಭಾಗ

subbanna ಹೇಳಿದರು...

ರಾಯರೇ ಉತ್ತರ ಬ೦ತಾ,,, MSEZ ನ, ನಮ್ಮ ಸರಕಾರದ, ಇ೦ತಹಾ ಜನ ವಿರೋಧೀ ನೀತಿ ರೀತಿಗಳನ್ನು ಪ್ರತಿಭಟಿಸುವುದು ಬಿಡಿ,ಇವಕ್ಕೆ ಪ್ರತಿಕ್ರಿಯಿಸುವುದೇ ಹೇಗಪ್ಪಾ , ನಮ್ಮ ಕರ್ತವ್ಯ ಏನು, ಇತ್ಯಾದಿ ಗೊ೦ದಲಗಳ ನಡುವೆಯೇ, ನಿಮ್ಮ ಕರ್ತವ್ಯ, ನೀವು ಬಹು ಸಮರ್ಥ
ವಾಗಿ ಮಾಡುತ್ತಿದ್ದೀರಿ. ಶುಭವಾಗಲಿ. ವ೦ದನೆಗಳು. ಜಿ೦ಕೆ ಸುಬ್ಬಣ್ಣ, ಪುತ್ತೂರು.

Unknown ಹೇಳಿದರು...

nimma lekhanagalu vishista mattu samajamukhi aagive... great sir

ಅನಾಮಧೇಯ ಹೇಳಿದರು...

ಸರಕಾರವೇ ನಮ್ಮನ್ನು " ಜಾಗತೀಕರಣ " ಎಂಬ ಕಾರಣಕೊಟ್ಟು ಗುಳೆ ಎಬ್ಬಿಸ ಹೊರಟಾಗ ಪ್ರತಿಭಟನೆ ಮಾಡದೇ ಬೇರೆ ದಾರಿಯೇ ಇಲ್ಲ.
ಮಾನ್ಯ ಸುಂದರ ರಾಯರು ಉಲ್ಲೇಖಿಸಿದ ನಿಜ ಸಂಗತಿಗಳು ಜನ ಸಾಮಾನ್ಯರಿಗೆ ತಿಳಿಯಲಿ.
ನಮ್ಮ ನೆಲ ಜಲ ಸಮ್ಮ ಸಂಸ್ಕೃತಿಯ ಮೂಲ.
ಅದು ನಮ್ಮ ಜನರಿಗೆ ಉಳಿಯಲಿ.
ಶ್ರೀ ಸುಂದರ ರಾಯರಿಗೆ ಶುಭ ಹಾರೈಕೆಗಳು.
ವಂದನೆಗಳು
ಕೇಸರಿ ಪೆಜತ್ತಾಯ

ಅನಾಮಧೇಯ ಹೇಳಿದರು...

Sri sundararayara guddatakke jayavagali.sarkari , khasagi vibhagagalu mahithi hakkige hidishapa hakuvudannu kandiddene. apoorvavagi obboba adhikari thave-" mahithi hakku prakara keli nodi aaga namage helade tappisikolluvantilla" endu tilsiddoo untu.!
mpjoshy.

subbanna ಹೇಳಿದರು...

ಮಾನ್ಯರೇ ಎ೦ಆರ್ ಪಿ ಎಲ್, ನೇತ್ರಾವತಿ ನದಿಗೆ ಅಣೆಕಟ್ಟು, ಅಲ್ಲಿ೦ದ ನೀರು ಸಾಗಾಟಕ್ಕೆ ಪೈಪ್,, ಇತ್ಯಾದಿ ನಿಮ್ಮ
ಬರಹದಲ್ಲೇ ತಿಳಿಸಿದ೦ತೆ, ಸ್ವ೦ತ ಖರ್ಚಿನಲ್ಲಿ ಹಾಕಿಕೊ೦ಡಿದೆ, ಪ್ರಾಯಶಃ ಬಿಸಾಕು ದರಕ್ಕೆ ಇದು ಒ೦ದು ಕಾರಣ. ಈ ವಾಕ್ಯ ನೋಡಿ ಇ೦ತಹಾ ಹಗಲು ದರೋಡೆ / ಮನುಷ್ಯತ್ವದ ಅಪಚಾರವನ್ನು ಒಪ್ಪಿದ್ದೇನೆ / ಸಮರ್ಥಿಸುತ್ತೇನೆ ಎ೦ದು ಭಾವಿಸಬೇಡಿ. ಇದಕ್ಕೆ ಸ್ವಲ್ಪ ಪೂರಕ, ಹಿ೦ದೆ ಎಲ್ಲೋ ( ನಿಮ್ಮ / ಪಡ್ರೆಯವರ ಬರಹದಲ್ಲಿ ಇರಬಹುದು) ಓದಿದ ಮಾಹಿತಿ ನೆನಪಾಗುತ್ತಿದೆ. ಸ್ಥಳೀಯ ಸ೦ಸ್ಥೆಗಳು ಪೌರರಿಗೆ ಸರಬರಾಜು ಮಾಡುವ ನೀರಿಗೆ ವಿಧಿಸುವ ದರ, ನೀರು ಸ೦ಗ್ರಹಣೆ, ಸಾಗಾಟ, ಹ೦ಚುವಿಕೆ, ಇತ್ಯಾದಿ ಖರ್ಚೇ ಹೊರತು, ಅಕ್ಕಿ, ಔಷಧಿ ಅಥವಾ ಸೇವಾ ಶುಲ್ಕಗಳ೦ತೆ, ಬೆಲೆ ಅಥವಾ
ಮೌಲ್ಯ ಅಲ್ಲ. ಜಯವಾಗಲಿ. ಶ್ರೀದೇವಿ ಮತ್ತು ಸುಬ್ಬಣ್ಣ, ಪುತ್ತೂರು.

Dr. Srinivas Kakkilaya Bevinje ಹೇಳಿದರು...

ಮಾನ್ಯರೇ, ನಿಮ್ಮ ಹೋರಾಟಕ್ಕೆ ಜಯವಾಗಿಯೇ ತೀರಬೇಕು. ಯಾವ ಇಲಾಖೆಯಿಂದ ಉತ್ತರ ಕೇಳಬೇಕು ಎನ್ನುವುದನ್ನು ಕೇಳುಗ ಚಿಂತಿಸಬೇಕಿಲ್ಲ, ಯಾವ ಇಲಾಖೆ ಉತ್ತರ ನೀಡಬೇಕೋ ಅಲ್ಲಿಗೆ ನಿಮ್ಮ ಪ್ರಶ್ನೆಯನ್ನು ದಾಟಿಸಿ, ಎಲ್ಲಿಗೆ ದಾಟಿಸಲಾಗಿದೆ ಎಂಬ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುವುದು ಮಾಹಿತಿ ಅಧಿಕಾರಿಯ ಕೆಲಸ. ನೀವು ಪ್ರಶ್ನೆ ಕಳುಹಿಸಿದ ಐದು ದಿನಗಳಲ್ಲಿ ಈ ದಾಟುವಿಕೆಯಾಗಬೇಕು, ಅದಾಗಿ ಮೂವತ್ತು ದಿನಗಳಲ್ಲಿ ಉತ್ತರ ನಿಮ್ಮ ಕೈಸೇರಲೇಬೇಕು. ನೀವು ಕಾದದ್ದಾಗಿದೆ, ಈಗ ದೂರು ನೀಡಿ.
ಸರಕಾರಿ ನೌಕರರು ನಮ್ಮ ಕೆಲಸದವರು, ಅವರಿಗೆ ಸಂಬಳ ಕೊಡುವವರು ನಾವು ಎನ್ನುವ ಪ್ರಜ್ಞೆ ಅವರಲ್ಲಿರಬೇಕು, ನಮಗೂ ಅದು ತಿಳಿದಿರಬೇಕು. ಮಾಹಿತಿ ಹಕ್ಕು ಕಾಯಿದೆಯನ್ನು ಈ ಕೆಲಸಕ್ಕೆ ಬಳಸಿದ ನಿಮಗೆ ಜಯವಾಗಲಿ! ಉತ್ತರ ಸಿಗುವವರೆಗೆ ಹೋರಾಟ ಮುಂದುವರಿಯಲಿ!