ಭಾನುವಾರ, ನವೆಂಬರ್ 15, 2009

ಮಂಗಳೂರು ವಿಶೇಷ ಆರ್ಥಿಕವಲಯಕ್ಕೆ ನೀರೆಲ್ಲಿಂದ?





ಮಂಗಳೂರಿನಲ್ಲಿ ವಿಶೇಷ ಆರ್ಥಿಕವಲಯ ಸ್ಥಾಪನೆಯಾಗುತ್ತಿದೆ. ಈ ವಲಯದಲ್ಲಿ ಹಲವು ಕೈಗಾರಿಕೆಗಳು ಕಾರ್ಯಾರಂಭ ಮಾಡಲಿವೆಯಂತೆ; ಹಲವು ದೇಶೀ - ವಿದೇಶೀ ಕಂಪೆನಿಗಳು ತಳವೂರಲಿವೆಯಂತೆ; ಮಂಗಳೂರಿನ ಯುವಜನತೆಗೆ ಉದ್ಯೋಗ ನೀಡಲು ಈ ಕಂಪೆನಿಗಳು ಸ್ಪರ್ಧೆ ನಡೆಸಲಿವೆಯಂತೆ. ಇನ್ನೇನು ನಮ್ಮೂರಿನ ಯುವಜನತೆ ಯಾವ ಕೊಲ್ಲಿರಾಷ್ಟ್ರಕ್ಕೂ ಹೋಗಬೇಕಿಲ್ಲ, ಯಾವ ಅಮೆರಿಕಕ್ಕೂ ಹೋಗಬೇಕಿಲ್ಲ. ಅಷ್ಟೇಕೆ ಉದ್ಯೋಗ ಹುಡುಕಿ ಬೆಂಗಳೂರಿಗೂ ಹೋಗಬೇಕಿಲ್ಲ. ಕಾಲುಬುಡದಲ್ಲೇ ಕೇಳಿದ ಉದ್ಯೋಗ! ತಿಂಗಳಿಗೆ ಎಪ್ಪತ್ತು ಎಂಬತ್ತು ಸಾವಿರ ಸಂಬಳ ಲೆಕ್ಕಕ್ಕೇ ಅಲ್ಲವಂತೆ. ಅಷ್ಟು ಕೊಟ್ಟರೂ ಕೆಲಸಕ್ಕೆ ಜನ ಸಿಗದೆ ಹೋಗುವ ಕಾಲ ಬಂದರೂ ಆಶ್ಚರ್ಯವಿಲ್ಲವಂತೆ! ಸ್ವರ್ಗ ಧರೆಗಿಳಿಯಲು ಇನ್ನು ಹೆಚ್ಚು ದೂರವಿಲ್ಲ.ಬರೀ ಒಂದೆರಡು ವರ್ಷ ಸಾಕು ಅಷ್ಟೆ.
ಇರಲಿ. ನಮ್ಮವರೇ ಆದ ಭಟ್ಟರುಗಳ, ಪೈಮಾಮರ ಈ ಮಾತುಬಲೂನಿಗೆ ಒಂದು ಸಣ್ಣ ಸೂಜಿ ಚುಚ್ಚೋಣ, ಛಿದ್ರಾನ್ವೇಷಕರೆಂಬ ಬಿರುದಿಗೆ ಹೆದರದೆ!
ಈ ವಲಯಕ್ಕೆ ಬರಲಿರುವುದು ಯಾವ ಕೈಗಾರಿಕೆ, ಯಾವ ಕಂಪೆನಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಎಂ ಎಸ್ ಇ ಝಡ್ ಲಿ. ತನ್ನ ನೀರಿನ ಅಗತ್ಯ ೪೫ ಎಂಜಿಡಿ ಎಂದು ಘೋಷಿಸಿದೆ. ಈ ಲೇಖನಕ್ಕೆ ಕಂಪೆನಿಯ ಈ ಹೇಳಿಕೆಯೇ ಆಧಾರ.
ಒಂದು ಎಂಜಿಡಿ ಅಂದರೆ ದಿನಕ್ಕೆ ಹತ್ತು ಲಕ್ಷ ಗ್ಯಾಲನ್ ಎಂದು ಅರ್ಥ. ಒಂದು ಗ್ಯಾಲನ್ ಎಂದರೆ ಸುಮಾರು ನಾಲ್ಕೂವರೆ ಲೀಟರ್. ಅಂದರೆ ಒಂದು ಎಂಜಿಡಿ ಅಂದರೆ ದಿನಕ್ಕೆ ೪೫ ಲಕ್ಷ ಲೀಟರ್ ಆಯಿತು. ಎಂ ಎಸ್ ಇ ಝಡ್ ಲಿ. ತನಗೆ ಬೇಕಾದ ೪೫ ಎಂಜಿಡಿ ನೀರಿನ ಪೈಕಿ ೧೮ ಎಂಜಿಡಿ ನೀರನ್ನು ಮಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸುವ ಮೂಲಕ, ೧೨ ಎಂಜಿಡಿ ನೀರನ್ನು ತಾನು ಸ್ವಾಧೀನ ಪಡಿಸಿಕೊಂಡ ಭೂಮಿಯ ತಗ್ಗುಪ್ರದೇಶದಲ್ಲಿ ಮಳೆನೀರನ್ನು ಸಂಗ್ರಹಿಸುವ ಮೂಲಕ ಮತ್ತುಳಿದ ೧೫ ಎಂಜಿಡಿ ನೀರನ್ನು ಫಲ್ಗುಣಿ ನದಿಗೆ ಎರಡು ಹಾಗೂ ನೇತ್ರಾವತಿ ನದಿಗೆ ಎರಡು ಅಣೆಕಟ್ಟುಗಳನ್ನು ಹಾಕುವ ಮೂಲಕ ಪಡೆದುಕೊಳ್ಳುವುದಾಗಿ ಹೇಳಿದೆ.
ಕೊಳಚೆ ನೀರನ್ನು ಶುದ್ಧೀಕರಿಸಿ ಬಳಸುವ ಮತ್ತು ಮಳೆನೀರನ್ನು ಸಂಗ್ರಹಿಸಿ ಬಳಸುವ ಕಂಪೆನಿಯ ಯೋಜನೆ ಅತ್ಯಂತ ಆಕರ್ಷಕವಾಗಿದೆ. ಯಾರೂ ಶಹಭಾಸ್ ಎನ್ನುವಂತಿದೆ. ಆದರೂ ಈ ಯೋಜನೆಯನ್ನು ಕೊಂಚ ಹಿಂಜಿ ನೋಡೋಣ.
ಮೊನ್ನೆ ಮೊನ್ನೆಯವರೆಗೆ ಮಂಗಳೂರಿಗೆ ತುಂಬೆಯಿಂದ ಸರಬರಾಜಾಗುತ್ತಿದ್ದದ್ದೇ ಸುಮಾರು ೧೮ ಎಂಜಿಡಿ ನೀರು.(ಮಂಗಳೂರು ಮಹಾನಗರ ಪಾಲಿಕೆಗೆ ನೀರು ಸರಬರಾಜಾಗುವುದು ಬಂಟ್ವಾಳ ತಾಲೂಕಿನ ತುಂಬೆ ಎಂಬಲ್ಲಿ ನೇತ್ರಾವತಿ ನದಿಗೆ ಹಾಕಿರುವ ಕಿಂಡಿ ಅಣೆಕಟ್ಟಿನಿಂದ). ಮಂಗಳೂರಿಗರು ತಮ್ಮದೇ ಸ್ವಂತದ ತೆರೆದ ಬಾವಿಗಳಿಂದ, ಕೊಳವೆ ಬಾವಿಗಳಿಂದ ನೀರು ತೆಗೆದು ಬಳಸುತ್ತಾರೆ ಎನ್ನುವುದು ನಿಜವೇ. ಆದರೂ ಒಂದೊಂದು ಮನೆಯ ಕೊಳಚೆ ನೀರೂ ಅದೇ ಮನೆಯ ಕಾಂಪೌಂಡಿನೊಳಗೇ ವಿಲೇವಾರಿಯಾಗಿಬಿಡುತ್ತದೆ. ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಒಳಚರಂಡಿಗಳನ್ನು ಹೊಸದಾಗಿ ವ್ಯಾಪಕವಾಗಿ ರಚಿಸಲಾಗಿದೆ. ಆದರೆ ಇದರ ಸಂಪರ್ಕಕ್ಕೆ ನಾಗರಿಕರು ಹತ್ತುಸಾವಿರ ರೂ. ಕೊಡಬೇಕಂತೆ. ಹಾಗಾಗಿ ಜನ ಒಳಚರಂಡಿ ಸಂಪರ್ಕ ಪಡೆಯಲು ಮುಂದೆ ಬರುತ್ತಿಲ್ಲವೆಂದೂ, ಹೀಗೇ ಆದರೆ ಒಳಚರಂಡಿ ಸಂಪರ್ಕ ಪಡೆಯುವುದನ್ನು ಕಡ್ಡಾಯ ಮಾಡಬೇಕಾದೀತೆಂದೂ "ಕುಛ್ ಪಾನಾ ತೋ ಕುಛ್ ಖೋನಾ" ಖ್ಯಾತಿಯ ಮೇಯರ್ ರವರು ಹೇಳಿದ್ದಾರಂತೆ. ಪಾಲಿಕೆ ಸದ್ಯದಲ್ಲಿಯೇ ತುಂಬೆಯಿಂದ ಎತ್ತುವ ನೀರಿನ ಪ್ರಮಾಣವನ್ನು ದ್ವಿಗುಣಗೊಳಿಸಲಿದೆ. ಏನಿದ್ದರೂ ಕುಡ್ಸೆಂಪ್ ಯೋಜನೆ ಸಂಪೂರ್ಣವಾಗಿ ಮುಗಿದು, ಊರಿನ ಕೊಳಚೆ ನೀರು ದೊಡ್ಡ ಪ್ರಮಾಣದಲ್ಲಿ ಲಭ್ಯವಾಗಲು ಇನ್ನೂ ಸಾಕಷ್ಟು ಕಾಲ ಬೇಕು. ಇದಕ್ಕಾಗಿ ೨೦೨೬ರವರೆಗೆ ಕಾಯಬೇಕಾದೀತು ಎಂದು ಒಂದು ಅಂದಾಜು.ಸದ್ಯಕ್ಕೆ ಸುಮಾರು ೧೦-೧೨ ಎಂಜಿಡಿ ನೀರು ಮಾತ್ರ ಲಭ್ಯವಾದೀತು. ಎಂದರೆ ಎಂ ಎಸ್ ಇ ಝಡ್ ಲಿ. ಹೇಳುವ ೧೮ ಎಂಜಿಡಿಯಲ್ಲಿ ೬-೮ ಎಂಜಿಡಿ ಖೋತಾ ಆದಂತೆ.
ಕೊಳಚೆ ನೀರನ್ನು ಎಷ್ಟೇ ಶುದ್ಧಗೊಳಿಸಿದರೂ ಅದರ ಗುಣಮಟ್ಟ ಕಡಿಮೆಯೇ. ಈಗ ನೇತ್ರಾವತಿಯ, ಫಲ್ಗುಣಿಯ ನೀರನ್ನು ನಾವೆಲ್ಲ ಹೆಚ್ಚು ಕಡಿಮೆ ನೇರವಾಗಿಯೇ ಕುಡಿಯುತ್ತಿದ್ದೇವೆ. ಆಗಾಗ ಹೊಟ್ಟೆಹುಳಕ್ಕೆ ಮದ್ದು ಬೇಕಾಗುವುದು ಬಿಟ್ಟರೆ ಅಂಥಾ ದೊಡ್ಡ ದೋಷವೇನೂ ಅದರಲ್ಲಿ ಇದ್ದಂತಿಲ್ಲ! ನದಿಯ ನೀರು ಹೆಚ್ಚು ಕಡಿಮೆ ಧರ್ಮಕ್ಕೆ ಸಿಗುವಂಥದ್ದು. (ಎಂಆರ್ ಪಿಎಲ್ ಗೆ ನೀರು ನೇತ್ರಾವತಿ ನದಿಯಿಂದ. ೧೯೯೬ರಲ್ಲಿ ಆದ ಒಪ್ಪಂದದ ಪ್ರಕಾರ ಪ್ರತಿ ೪೫ ಲಕ್ಷ ಲೀ. ನೀರಿಗೆ ಎಂಆರ್ ಪಿಎಲ್ ಕೊಡಬೇಕಾದ ಹಣ ರೂ. ೫೬-೧೬!) ಕೊಳಚೆ ನೀರು ಶುದ್ಧೀಕರಿಸಲು ರಾಸಾಯನಿಕಗಳೂ, ಅಗಾಧ ಪ್ರಮಾಣದ ವಿದ್ಯುತ್ತೂ ಬೇಕು. ಎಷ್ಟು ಕಡಿಮೆ ಎಂದರೂ ಒಂದು ಸಾವಿರ ಲೀಟರ್ ನೀರಿಗೆ ಹತ್ತು ರೂಪಾಯಿಯಾದರೂ ಉತ್ಪಾದನಾ ವೆಚ್ಚ ಬರುತ್ತದೆ.ತನ್ನ ಉತ್ಪನ್ನಗಳ ಉತ್ಪಾದನಾ ವೆಚ್ಚವನ್ನು ನಿಯಂತ್ರಿಸುವ ಸಲುವಾಗಿ ಶುದ್ಧೀಕರಿಸಿದ ನೀರಿನ ಬಳಕೆಯನ್ನು ಸಾಧ್ಯವಿದ್ದಷ್ಟು ಕಡಿಮೆ ಮಾಡಿ, ನದಿಗಳ ನೀರಿನ ಬಳಕೆಯನ್ನು ಜಾಸ್ತಿ ಮಾಡಲು ಎಂ ಎಸ್ ಇ ಝಡ್ ಲಿ. ಎಲ್ಲಾ ಪ್ರಯತ್ನವನ್ನೂ ಮಾಡಿಯೇ ಮಾಡುತ್ತದೆ. ಪರಿಣಾಮವಾಗಿ ನೇತ್ರಾವತಿ ನದಿಯ ನೀರಿಗೆ ಬೇಡಿಕೆ ಹೆಚ್ಚಾಗುತ್ತದೆ. ಫಲ್ಗುಣಿಯಲ್ಲಿ ನೀರಿದ್ದರೆ ಅದರ ಮೇಲೂ ಒತ್ತಡ ಹೆಚ್ಚುತ್ತದೆ.
ಎಂ ಎಸ್ ಇ ಝಡ್ ಲಿ. ಈಗ ನೇತ್ರಾವತಿಗೆ ಕಟ್ಟು ಹಾಕಲು ಹವಣಿಸುತ್ತಿರುವುದು ತುಂಬೆಯಲ್ಲಿರುವ ಮಹಾನಗರಪಾಲಿಕೆಯ ಕಟ್ಟಕ್ಕಿಂತ ಮೊದಲು. ಈಗ ಎಂ ಆರ್ ಪಿ ಎಲ್ ಕಟ್ಟ ಇರುವುದೂ ಪಾಲಿಕೆಯ ಕಟ್ಟಕ್ಕಿಂತ ಮೊದಲು. ಹೀಗೆ ಪಾಲಿಕೆಯ ಕಟ್ಟಕ್ಕಿಂತ ಮೊದಲೇ ಇವುಗಳ ಕಟ್ಟ ಇರುವುದು ಇವುಗಳಿಗೆ ಸಹಜಾನುಕೂಲ, ಆದರೆ ಮಂಗಳೂರಿನ ಕುಡಿಯುವ ನೀರಿಗೆ ಇದು ಒಂದು ಸಮಸ್ಯೆಯೇ, ಇವತ್ತಲ್ಲದಿದ್ದರೆ ನಾಳೆಯಾದರೂ.
ಇನ್ನು ಮಳೆನೀರಿನ ಮೂಲಕ ೧೨ ಎಂಜಿಡಿ ನೀರಿನ ವಿಚಾರ. ಈ ಲೆಕ್ಕದಲ್ಲಿ ಸಂಗ್ರಹಿಸಬೇಕಾದ ನೀರಿನ ಪ್ರಮಾಣ ಎಷ್ಟು? ಎಷ್ಟು ದಿನಗಳಿಗೆ ಬೇಕಾದ ನೀರನ್ನು ಸಂಗ್ರಹಿಸಿಡಬೇಕು? ತುಂಬೆಯಲ್ಲಿ ಪಾಲಿಕೆ ೬೦ ದಿನಗಳ ನೀರು ದಾಸ್ತಾನಿಡಬೇಕೆಂಬ ನಿಯಮವನ್ನಿಟ್ಟುಕೊಂಡಿದೆಯಂತೆ. ಅಲ್ಲಿಗೆ ಇದು ಸಾಕು. ಏಕೆಂದರೆ, ಜಲಾಶಯಕ್ಕೆ ಪ್ರತಿದಿನವೂ ನೀರಿನ ಒಳಹರಿವು ಇರುತ್ತದೆ. ನೇತ್ರಾವತಿಯ ಜಲಾನಯನ ಪ್ರದೇಶ ಪಶ್ಚಿಮಘಟ್ಟಗಳಾದ್ದರಿಂದ, ಅಲ್ಲಿ ಮಾರ್ಚ್ - ಎಪ್ರಿಲ್ ತಿಂಗಳುಗಳಲ್ಲೂ ಮಳೆ ಬಂದು ಆ ನೀರು ತುಂಬೆ ಜಲಾಶಯವನ್ನು ಆಧರಿಸುತ್ತದೆ. ಆದರೆ ಇದೇ ಲೆಕ್ಕವನ್ನು ಎಂ ಎಸ್ ಇ ಝಡ್ ಲಿ. ನ ಮಳೆನೀರು ಸಂಗ್ರಹದ ಜಲಾಶಯಕ್ಕೆ ಅನ್ವಯಿಸುವಂತಿಲ್ಲ. ಏಕೆಂದರೆ ಈ ಸಂಗ್ರಹಕ್ಕೆ ಯಾವ ನದಿಯ ಒಳಹರಿವೂ ಇಲ್ಲ. ಜೊತೆಗೆ ಜಲಾನಯನ ಪ್ರದೇಶವೂ ತುಂಬಾ ಸೀಮಿತವಾದದ್ದು. ಆದ್ದರಿಂದ ಮಳೆಗಾಲವಲ್ಲದ ವರ್ಷದ ಎಂಟು ತಿಂಗಳ ಅವಧಿಗೆ ನೀರು ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯ.
ಎಂಟು ತಿಂಗಳು= ೨೪೦ ದಿನಗಳು
ದಿನಕ್ಕೆ ೧೨ ಎಂಜಿಡಿಯಂತೆ ೨೪೦ ದಿನಗಳಿಗೆ= ೨೮೮೦ ಎಂಜಿಡಿ
=೨೮೮೦x೪೫,೦೦೦೦೦ ಲೀಟರು=೧೨೯೬೦೦೦೦೦೦೦ ಲೀಟರು=೧೨೯೬ ಕೋಟಿ ಲೀಟರು
ಈ ಪ್ರಮಾಣದ ನೀರು ಸಂಗ್ರಹಿಸಲು ಎಷ್ಟು ಜಾಗ ಬೇಕಾದೀತು, ಎಂಥ ಏರ್ಪಾಟು ಬೇಕಾದೀತು ಎಂಬುದು ನನ್ನ ಕಲ್ಪನೆಗೆ ನಿಲುಕುವುದಿಲ್ಲ. ಯಾರಾದರೂ ತಿಳಿದವರು ಹೇಳಬೇಕಷ್ಟೆ. ಏನಿದ್ದರೂ ಇಷ್ಟು ನೀರನ್ನು ಎಂ ಎಸ್ ಇ ಝಡ್ ಲಿ. ಸಂಗ್ರಹಿಸಿ ತೋರಿಸುವವರೆಗೆ ಇದು ಸಾಧ್ಯವೆಂದು ನಾನು ನಂಬಲಾರೆ.
ಒಂದು ವೇಳೆ ಮಳೆನೀರಿನ ಸಂಗ್ರಹದಲ್ಲಿ ಕೊರತೆಯಾದರೆ, ಆ ಕೊರತೆಯನ್ನು ನೇತ್ರಾವತಿ, ಫಲ್ಗುಣಿ ನದಿಗಳು ತುಂಬಿಸಿಕೊಡಬೇಕಾಗಿ ಬರುತ್ತದೆ ಎನ್ನುವುದು ಮಾತ್ರ ಗ್ಯಾರಂಟಿ.
ನೇತ್ರಾವತಿಯ ಮೇಲೆ ಈಗ ಇರುವ ಒತ್ತಡ:
ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿರುವ ಆಣೆಕಟ್ಟಿನಿಂದ ಎಂಆರ್ ಪಿಎಲ್ ನೀರೆತ್ತುತ್ತಿದೆ. ನನ್ನ ಅಂದಾಜಿನ ಪ್ರಕಾರ ಅದು ಈಗ ಎತ್ತುತ್ತಿರುವ ನೀರಿನ ಪ್ರಮಾಣ ದಿನಕ್ಕೆ ಮೂರೂವರೆ ಕೋಟಿ ಲೀಟರ್. ಎಂಆರ್ ಪಿಎಲ್ ನ ಉತ್ಪಾದನಾ ಚಟುವಟಿಕೆ ಇನ್ನೊಂದೆರಡು ವರ್ಷಗಳಲ್ಲಿ ಅಗಾಧವಾಗಿ ಹೆಚ್ಚಲಿದೆ. ಎಂದರೆ ಇನ್ನು ಒಂದೆರಡು ವರ್ಷಗಳಲ್ಲಿ ಅದು ಬಳಸುವ ನೀರಿನ ಪ್ರಮಾಣ ಏಳು ಕೋಟಿ ಲೀಟರ್ ಮುಟ್ಟುವ ಸಾಧ್ಯತೆ ಇದೆ.
ಈಗ ದಿನಕ್ಕೆ ಸುಮಾರು ಎಂಟು ಕೋಟಿ ಲೀಟರ್ ನೀರೆತ್ತುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ಸದ್ಯೋಭವಿಷ್ಯದಲ್ಲಿ ದಿನಕ್ಕೆ ೧೬ ಕೋಟಿ ಲೀಟರ್ ನೀರನ್ನು ತುಂಬೆ ಜಲಾಶಯದಿಂದ ಎತ್ತುವ ಗುರಿ ಹೊಂದಿದೆ. ಮಂಗಳೂರಿನ ಜನರಿಗೆ ದಿನದ ೨೪ ಗಂಟೆಯೂ ನೀರು ನೀಡುವುದಾಗಿ ಮೇಯರ್ ಮತ್ತಿತರರು ಹೇಳಿಕೆಗಳನ್ನು ನೀಡುತ್ತಿದ್ದಾರೆ. "ನೀರು ಅಮೂಲ್ಯ. ಅದನ್ನು ಮಿತವಾಗಿ, ಎಚ್ಚರದಿಂದ ಬಳಸಿ" ಎಂದು ಹೇಳಬೇಕಾದ ಸರಕಾರಿ ಸಂಸ್ಥೆಯೊಂದು ೨೪ ಗಂಟೆಯೂ ನೀರು ನೀಡುವ ಹೇಳಿಕೆ ನೀಡುತ್ತಿರುವುದು ಅದಕ್ಕಿರುವ ಸಾಮಾಜಿಕ ಜವಾಬ್ದಾರಿಗೆ ಸಾಕ್ಷಿಯಾಗಿದೆ. (ನಾಲ್ಕು ಮೀ. ಎತ್ತರ ಇರುವ ತುಂಬೆ ಕಿಂಡಿ ಆಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರು ಸಾಲುವುದಿಲ್ಲ ಎಂಬ ಕಾರಣಕ್ಕೆ ಅದೇ ಆಣೆಕಟ್ಟಿನ ಸಮೀಪವೇ ಏಳು ಮೀ. ಎತ್ತರದ ಇನ್ನೊಂದು ಕಿಂಡಿ ಆಣೆಕಟ್ಟು ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿವೆ. ಇದರಿಂದಾಗಿ ಅಪಾರ ಪ್ರಮಾಣದ ಕೃಷಿಭೂಮಿ ಮುಳುಗಡೆಯಾಗಲಿದೆ. ಅದು ಬೇರೆಯೇ ಆದೊಂದು ಸಮಸ್ಯೆ. ಇದು ಆ ಸಮಸ್ಯೆಯನ್ನು ಚರ್ಚಿಸಲು ಸ್ಥಳವಲ್ಲ.)
ಈಗ ಇರುವ ಪರಿಸ್ಥಿತಿಯಲ್ಲೇ ಎಪ್ರಿಲ್ - ಮೇ ತಿಂಗಳುಗಳಲ್ಲಿ ನೇತ್ರಾವತಿಯ ನೀರು ತುಂಬೆಯಿಂದ ಮುಂದೆ ಹರಿಯುವುದಿಲ್ಲ. ಎಂಆರ್ ಪಿಎಲ್ ಮತ್ತು ಮಂಗಳೂರು ಮಹಾನಗರ ಪಾಲಿಕೆಗಳು ನೀರೆತ್ತುವ ಪ್ರಮಾಣವನ್ನು ಹೆಚ್ಚಿಸಿದರೆ ಫೆಬ್ರವರಿ ತಿಂಗಳಿನಿಂದಲೇ ಸಮುದ್ರಕ್ಕೆ ನೀರು ಸೇರುವುದು ನಿಂತು ಹೋಗಬಹುದು. ನಮ್ಮ ಎಲ್ಲ "ಅಭಿವೃದ್ಧಿಪರ" ಚಿಂತಕರೂ ಸಮುದ್ರಕ್ಕೆ ಸೇರುವ ನೀರು "ವ್ಯರ್ಥ"ವೆಂದೇ ಹೇಳುತ್ತಾರೆ. ಯಾವ ಅಧ್ಯಯನವನ್ನು ಆಧರಿಸಿ ಅವರು ಹೀಗೆ ಹೇಳುತ್ತಾರೆ ಎಂದು ನನಗೆ ತಿಳಿದಿಲ್ಲ. ನದಿಯ ನೀರು ಸಮುದ್ರಕ್ಕೆ ಸೇರುವುದು ಮಳೆಚಕ್ರದ ಒಂದು ಅವಿನಾಭಾಗ. ಅದನ್ನು ತುಂಡು ಮಾಡುವುದು ಅಪಾಯಕಾರಿಯಲ್ಲವೆ? ಹೆಚ್ಚು ಕಡಿಮೆ ಎಲ್ಲ ನದಿಗಳ ನೀರನ್ನೂ ಸಮುದ್ರ ಸೇರದಂತೆ ಮನುಷ್ಯ ತಡೆಯುತ್ತಿದ್ದಾನೆ, ನೇತ್ರಾವತಿ ಆ ದೊಡ್ಡ ಪ್ರಕ್ರಿಯೆಯ ಒಂದು ಭಾಗ ಮಾತ್ರ ಎಂಬುದನ್ನು ನೆನಪಿಡಬೇಕು.
ವಿದ್ಯಮಾನಗಳು ಹೀಗಿರುವಾಗ, ಎಂ ಎಸ್ ಇ ಝಡ್ ಲಿ.ಗೆ ನೇತ್ರಾವತಿಯಿಂದ ನೀರು ತೆಗೆಯಲು ಅನುಮತಿ ಕೊಟ್ಟರೆ ಪರಿಸ್ಥಿತಿ ಖಂಡಿತವಾಗಿ ಹದಗೆಡುತ್ತದೆ. ಕಾವೇರಿ ನದಿ ನೀರಿನ ವಿವಾದವು - ಎಸ್. ಎಂ. ಕೃಷ್ಣರು ಮುಖ್ಯಮಂತ್ರಿಯಾಗಿದ್ದಾಗ - ಸುಪ್ರೀಂ ಕೋರ್ಟಿನ ಅಪ್ಪಣೆಯನ್ನೇ ಉಲ್ಲಂಘಿಸುವ ಹಂತ ಮುಟ್ಟಿತ್ತೆಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಮುಂದೊಂದು ದಿನ ಎಂಆರ್ ಪಿಎಲ್ + ಎಂ ಎಸ್ ಇ ಝಡ್ ಲಿ. ಒಂದು ಕಡೆ ಮಂಗಳೂರು ಮಹಾನಗರ ಪಾಲಿಕೆ ಮತ್ತೊಂದು ಕಡೆ ಆಗಿ ಇವುಗಳ ನಡುವೆ ನೀರಿಗಾಗಿ ಯುದ್ಧವೇ ಸಂಭವಿಸುವ ಪರಿಸ್ಥಿತಿ ಬರಬಹುದು. ಈ ಹಿಂದೆ ಮಂಗಳೂರಿನ ಜನತೆಗೆ ಕುಡಿಯುವ ನೀರಿನ ಕೊರತೆಯಾದಾಗ ಜಿಲ್ಲಾಧಿಕಾರಿಯು ರೈತರು ನದಿಗೆ ಹಾಕಿದ್ದ ಕಟ್ಟಗಳನ್ನು ಒಡೆಸಿ ನೀರು ತೆಗೆದುಕೊಂಡ ಹೋದ ಉದಾಹರಣೆ ಇದೆ. ಪುನಃ ಅಂಥದೇ ಪರಿಸ್ಥಿತಿ ಬಂದರೆ, ಎಂಆರ್ ಪಿಎಲ್ ಮತ್ತು ಎಂ ಎಸ್ ಇ ಝಡ್ ಲಿ.ನ ಆಣೆಕಟ್ಟುಗಳ ಗೇಟು ತೆಗೆಸುವ ಎದೆಗಾರಿಕೆ, ಅಧಿಕಾರ ಮತ್ತು ತಾಖತ್ತು ಜಿಲ್ಲಾಧಿಕಾರಿಗೆ ಇರಬಹುದೇ?
"ಪೃಕೃತಿ ನಮ್ಮ ಅಗತ್ಯಗಳನ್ನು ಪೂರೈಸಬಲ್ಲುದು; ದುರಾಸೆಯನ್ನಲ್ಲ" ಎಂದು ಗಾಂಧೀಜಿ ಹೇಳಿದ್ದಾರೆ. ಕುಡಿಯುವ ನೀರು ನಮ್ಮ ಅಗತ್ಯ. ಅದನ್ನು ನೇತ್ರಾವತಿ ಪೂರೈಸಬಲ್ಲುದು. ವಿಶೇಷ ಆರ್ಥಿಕ ವಲಯ ನಮ್ಮ ದುರಾಸೆ. ಅದನ್ನು ನೇತ್ರಾವತಿ ಪೂರೈಸಲಾರದು.
**********************
ಇನ್ನೂ ಒಂದು ವಿಷಯವನ್ನು ಪ್ರಸ್ತಾವಿಸದೆ ಈ ಲೇಖನವನ್ನು ನಾನು ಮುಗಿಸಲಾರೆ. ಅದೆಂದರೆ ನೇತ್ರಾವತಿ ನದಿ ತಿರುವು ಯೋಜನೆ ಮತ್ತು ನೇತ್ರಾವತಿ ಹೇಮಾವತಿ ಜೋಡಣೆ ಯೋಜನೆಗಳು. ಈ ಯೋಜನೆಗಳು ಕಾರ್ಯಗತಗೊಂಡಲ್ಲಿ ಪರಿಸ್ಠಿತಿ ಇನ್ನೂ ಗಂಭೀರವಾಗಬಹುದು. ನೇತ್ರಾವತಿ ತಿರುವು ಯೋಜನೆಯ ಬಗ್ಗೆ ಹೆಚ್ಚಿನವರು ಕೇಳಿರಬಹುದು. ಇದು ಪಶ್ಚಿಮ ಘಟ್ಟಗಳಿಗೇ ಭಾರೀ ಅಪಾಯ ಮಾಡುವ ಯೋಜನೆ. ನೇತ್ರಾವತಿ ಹೇಮಾವತಿ ಜೋಡಣೆ ಯೋಜನೆಯ ಬಗ್ಗೆ ಕೇಳಿರುವವರು ಕಡಿಮೆ. ನ್ಯಾಷನಲ್ ವಾಟರ್ ಡೆವಲಪ್ ಮೆಂಟ್ ಏಜೆನ್ಸಿ ಎಂಬ ಕೇಂದ್ರ ಸರ್ಕಾರದ ಸಂಸ್ಥೆಯೊಂದು ಈ ಯೋಜನೆಯನ್ನು ರೂಪಿಸಿದೆ.ಈ ಯೋಜನೆಯ ಮೂಲ ಲಕ್ಷಣವೆಂದರೆ ನೇತ್ರಾವತಿಯ ನೀರನ್ನು ಹೇಮಾವತಿಗೆ ಸೇರಿಸುವುದು. ಈ ಸಂಸ್ಥೆಯ ಜಾಲತಾಣದಲ್ಲಿ ಯೋಜನೆಯ ವಿವರಗಳು ಲಭ್ಯವಿವೆ.
ಮಂಗಳೂರಿನ ಕುಡಿಯುವ ನೀರಿನ ಸರಬರಾಜಿನ ಮೇಲೆ ನೇರ ಪರಿಣಾಮ ಮಾಡುವ ಈ ಎಲ್ಲ ಅಂಶಗಳಿಗೆ ಸಂಬಂಧಿಸಿದಂತೆ ಒಂದು ಸಾರ್ವಜನಿಕ ವಿಚಾರ ಸಂಕಿರಣ ಏರ್ಪಡಿಸುವುದು ಅಗತ್ಯ ಎಂದು ತಿಳಿಸಿ ನಾನು ಮಂಗಳೂರಿನ ಮೇಯರ್ ಶ್ರೀ ಶಂಕರಭಟ್ಟರಿಗೆ ಸುಮಾರು ಒಂದೂವರೆ ತಿಂಗಳ ಮೊದಲು ಒಂದು ಪತ್ರ ಬರೆದಿದ್ದೇನೆ. ಆ ಪತ್ರಕ್ಕೆ ಅವರು ಈವರೆಗೂ ಉತ್ತರಿಸಿಲ್ಲ.


5 ಕಾಮೆಂಟ್‌ಗಳು:

Praveen Kavoor ಹೇಳಿದರು...

ಇದು ಭಯಂಕರ ಮಾರಾಯರೇ , ಇದನ್ನು ಸರಿಯಾಗಿ ಓದಿದರೆ ನಿದ್ದೆಯೇ ಬೀಳಲಿಕ್ಕೆ ಇಲ್ಲ . ಇದನ್ನು ತಿಳಿದು ನಮ್ಮ ರಾಜಕಾರಣಿಗಳು ಯೋಜನೆ ಕಾರ್ಯಗತ ಮಾಡುತಿದ್ದಾರೋ? ತಿಳಿಯದೆ ಮಂಗಳೂರನ್ನು ಭಯಂಕರವಾಗಿ !!!! ಪ್ರಾಮಾಣಿಕವಾಗಿ (ದಯವಿಟ್ಟು ಶಬ್ದಕೋಶದಲ್ಲಿ ಸರಿಯಾದ ಅರ್ಥ ಹುಡುಕಬೇಡಿ ) ಉದ್ಧಾರ ಮಾಡ ಹೊರಟಿದ್ದಾರೋ, ಇದರಲ್ಲಿ ನಮ್ಮ ಪಾತ್ರವೆನಬೇಬುದು ಮುಖ್ಯವೇ ಹೊರತು ರಾಜಕಾರಣಿಗಳಿಂದ ಏನನ್ನು ತಿಳಿದೂ ಅಥವಾ ತಿಳಿಯದೆ ಬಯಸಿದರೆ ತಪ್ಪಾಗಿ ಬಿಡುತ್ತದೆ. ಅವರಿಗೆ ಇದನ್ನು ಸರಿಪಡಿಸಲು ಇಚ್ಸಿಸಿದರೂ ಅವರ ಖುರ್ಚಿಯನ್ನು ಕಾಪಾಡುವುದೇ ಪ್ರಾಮುಖ್ಯವಾದ ಕೆಲಸವಾಗಿದೆ, ತಮ್ಮ ಲೇಖನದೊಂದಿಗೆ ಇದನ್ನು ತಡೆಯಲು ಜನರು ಏನು ಪ್ರಯತ್ನ ಮಾಡಬಹುದೆಂದು ತಿಳಿಸಿದಲ್ಲಿಚೆನ್ನಾಗಿತ್ತು -ಪ್ರವೀಣ ಕಾವೂರ್ .

ಪುರುಷೋತ್ತಮ ಬಿಳಿಮಲೆ ಹೇಳಿದರು...

Thanks for the article and we are aware of such developments. We are organizing a day seminar at Delhi on December 6, 2009 to discuss about certain developmental issues of Dakshina Kannada District.We shall create an awareness all over,

ಅನಾಮಧೇಯ ಹೇಳಿದರು...

ಪ್ರಿಯರೇ
ಅಭಿವೃದ್ಧಿಯ ರಾಕ್ಷಸನಿಗೆ ದಶಮುಖ. ನವಮಂಗಳೂರು ಬಂದರ, ಎಂ.ಸಿ.ಎಫ್., ಕೊಂಕಣ ರೈಲು "ಭವತಿ ಭಿಕ್ಷಾಂದೇಹಿ" ಎಂದಾಗ, ಅರಿವು ಮೂಡುವ ಮೊದಲೇ ವಿಮರ್ಶೆಯ ಪರಿಭಾಶೆ ರೂಪುಗೊಳ್ಳುವ ಮೊದಲೇ ನಾವು ಲಕ್ಷ್ಮಣ ರೇಖೆ ದಾಟಿಯಾಗಿದೆ. ನಿತ್ಯ ರಾಮಾಯಣದಲ್ಲಿ ಎಂ.ಆರ್.ಪೀ.ಎಲ್., ಬಿಎಆರ್ಸಿ, ನಾಗಾರ್ಜುನ, ರೈಲ್ವೇ ಅಗಲೀಕರಣ, ವಿಮಾನನಿಲ್ದಾಣ ವಿಸ್ತರಣ, ಹೆದ್ದಾರಿ-ನಗರದಾರಿ ಸುಸ್ಥಿರ, ನೇತ್ರಾವತಿ ತಿರುವು, ನಾಯಿಕೊಡೆಗಳಂತೆ ಮಿನಿ ಜಲವಿದ್ಯುದಾಗಾರ, ಈಗ ಕಲಶಪ್ರಾಯವಾಗಿ ಎಂ.ಎಸ್.ಇ.ಜೆಡ್ ಮುಂತಾದವು "ಭಿಕ್ಷೆ ಕೊಡದಿರೆ ಶಾಪ" ಎನ್ನುವ ಹಂತದಲ್ಲಿವೆ. ಇವು ಕಾಣಿಸುವ ಪುಣ್ಯ ಲೋಕದ ಹುಸಿತನವನ್ನು ಅದರಲ್ಲೂ ಮುಖ್ಯವಾಗಿ ಎಂ.ಎಸ್.ಇ.ಜೆಡ್ಡಿನ ನೀರಿನ ಆವಶ್ಯಕತೆಯನ್ನು ಅವರದೇ ಪ್ರಕಟಣೆಗಳ ಆಧಾರದಲ್ಲೇ ತಣ್ಣಗೆ ವಿಶ್ಲೇಷಿಸಿದ್ದೀರಿ. "ಕಾಯಬೇಕಾದ ರಾಮರು ಬಂಗಾರದ ಜಿಂಕೆಯ ಹಿಂದೆ ಬಿದ್ದಿದ್ದಾರೆ, ಜಾಗೃತರಾಗಿ, ಕಾಪಾಡಿಕೊಳ್ಳಿ ನಿಮ್ಮ ನಿಮ್ಮ ಸೀತೆಯರನ್ನು" ಎಂಬ ನಿಮ್ಮ ಸೊಲ್ಲು ಬುದ್ಧಿಯಿರುವ ಯಾರನ್ನೂ ತಟ್ಟುತ್ತದೆ. ಕೃತಜ್ಞತೆಗಳು.
ಅಶೋಕವರ್ಧನ

Natesh ಹೇಳಿದರು...

ಸರಕಾರದ ಮುದ್ದಿನ ದೈತ್ಯ ಮಗು ಎಂ ಎಸ್ ಇ ಜೆಡ್. ಅದಕ್ಕೆ ನೀರು ನೆಲ ಒದಗಿಸುವುದು ತನ್ನ ಜವಾಬ್ದಾರಿ ಮತ್ತು ಅಷ್ಟು ನೀರು ನೆಲ ದಕ್ಷಿಣ ಕನ್ನಡದಲ್ಲಿ ಧಾರಾಳವಾಗಿ ಲಭ್ಯವಿದೆ ಎಂದು 2005ರಲ್ಲೇ ಎಂ ಎಸ್ ಇ ಜೆಡ್ ಸ್ಥಾಪನೆಗೆ ರಾಜ್ಯ ಸರಕಾರ ಹಸಿರು ದೀಪ ತೋರಿಸಿದೆ. ಎಸ್ ಇ ಜೆಡ್ ಕಾಯ್ದೆ ಕೊಡುವ ಶಕ್ತಿಯಿಂದಾಗಿ ಮತ್ತು ಅದು ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬ ಸರಕಾರೀ ಭ್ರಮೆಯಿಂದಾಗಿ ಜಿಲ್ಲೆಯ ನಾಗರಿಕರೆಲ್ಲರ ಅವಶ್ಯಕತೆಗಳು ಆದ್ಯತೆಗಳ ಪಟ್ಟಿಯ ಕೊನೆಗೆ ಸರಿಯುತ್ತವೆ (ಚುನಾವಣಾ ಸಮಯ ಹೊರತು ಪಡಿಸಿ).
ಕೇಂದ್ರ ಎಸ್ ಇ ಜೆಡ್ ವೆಬ್ ಸೈಟ್ ನಲ್ಲಿ ಲಭ್ಯವಿರುವ ಎಸ್ ಇ ಜೆಡ್ ಕಾಯ್ದೆಯ ತಿದ್ದುಪಡಿಗಳ ಸಂಖ್ಯೆ ಹಾಗೂ ತತ್ಸಂಬಂಧಿ ಪ್ರಕಟಣೆಗಳನ್ನು ನೋಡಿದಾಗ ಎಂ ಎಸ್ ಇ ಜೆ ಡ್ ಆಣೆಕಟ್ಟು ಕಟ್ಟಿದ ಪ್ರದೇಶದಿಂದ ಹಿಡಿದು ಯೋಜನಾ ಪ್ರದೇಶದವರೆಗೆ ಬರುವ ನೀರಿನ ಕೊಳವೆ ಮಾರ್ಗದ ಭೂಮಿ ಕೂಡಾ ಎಂ ಎಸ್ ಇ ಜೆಡ್ ಸ್ವಾಧೀನಕ್ಕೆ ಬರುವಂತಹ ಆದೇಶವೊಂದು ಹೊರ ಬರುವ ದಿನ ದೂರವಿಲ್ಲ. ಹಾಗಾದಾಗ 'ಕುಚ್ ಪಾನಾ, ಕುಚ್ ಕೊನಾ'ಗಳ ಮತ್ತು ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕಾದ ಜಿಲ್ಲಾಧಿಕಾರಿಗಳ ಅಧಿಕಾರ ವ್ಯಾಪ್ತಿಯಿಂದ ಆ ಪ್ರದೇಶ ಹೊರಗುಳಿಯುತ್ತದೆ, ಅವರೂ ನಮ್ಮೊಂದಿಗೆ ನಿಂತು ಎಸ್ ಇ ಜೆಡ್ ಕೋಟೆಯ ಬಾಗಿಲ ಮುಂದೆ ನವ ವೈಸ್ ರಾಯ್ ಗಳ ಭಜನೆ ಮಾಡಬೇಕಾಗುತ್ತದೆ. (ಎಸ್ ಇ ಜೆಡ್ ಕಾಯ್ದೆಯ ಪ್ರಕಾರ ಎಸ್ ಇ ಜೆಡ್ ಗಳು ಸ್ವಾಯತ್ತ ಪ್ರದೇಶಗಳು, ಕೆಂದ್ರ ವಾಣಿಜ್ಯ ಮಂತ್ರಾಲಯದಿಂದ ನಿಯೋಜನೆಗೊಂಡ ಅಭಿವೃದ್ಧಿ ಆಯುಕ್ತರದ್ದು ಇಲ್ಲಿ ಪರಮಾಧಿಕಾರ 'ಕುಚ್ ಪಾನಾ, ಕುಚ್ ಕೊನಾ'ಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಇಲ್ಲಿ ಕವಡೆಯ ಕಿಮ್ಮತ್ತೂ ಇಲ್ಲ)
75000 ಎಕರೆಗಳ, 250 ರಿಂದ 300 ರ ವರೆಗಿನ ಮಧ್ಯಮ ಮತ್ತು ಬೃಹತ್ ರಾಸಾಯನಿಕ ಉದ್ಯಮಗಳ ಪಿ ಸಿ ಪಿ ಐ ಆರ್ (ಇದರಲ್ಲಿ ಹೆಚ್ಚಿನವು ಎಸ್ ಇ ಜೆಡ್ ಗಳೇ ಆಗಿರುತ್ತವೆ ) ಕತ್ತಿ ಇನ್ನೂ ನಮ್ಮ ತಲೆಯ ಮೇಲೆ ತೂಗುತ್ತಿದೆ, ಅದೂ ಈ ಜಿಲ್ಲೆಯ ಮೇಲೆ ಬಿದ್ದರೆ
" ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕುಡಿಯುವ ನಿರೆಲ್ಲಿಂದ" ಎನ್ನುವ ಪ್ರಶ್ನೆ ಕೇಳುವ ತಾಕತ್ತೂ ಬುದ್ದಿವಂತರೆಂಬ ಆರೋಪ ಹೊತ್ತಿರುವ ಈ ಜಿಲ್ಲೆಯ ನಿದ್ರಾ ಪ್ರಿಯ ಜನರಿಗಿರುವುದಿಲ್ಲ. ಹೊಸ ತಂತ್ರಜ್ಞಾನ ಬಳಸಿ ಈ ಉದ್ಯಮಗಳು ಬಳಸಿದ ನೀರನ್ನೇ ಶುದ್ಧೀಕರಿಸಿ ದಕ್ಷಿಣ ಕನ್ನಡಿಗರಿಗೆ ಕುಡಿಯಲು ನೀಡುತ್ತೇವೆ ಎಂಬ ಪಟಾಕಿಯನ್ನು 'ಕುಚ್ ಪಾನಾ, ಕುಚ್ ಕೊನಾ'ಗಳು ಸಿಡಿಸಿದರೂ ಅಚ್ಚರಿಯೇನಿಲ್ಲ

ಅನಾಮಧೇಯ ಹೇಳಿದರು...

ಚಿಂತನೆಯ ಸಾಮರ್ಥ್ಯ ಎಚ್ಚತ್ತುಕೊಳ್ಳಲಿ!

ಆರ್ಥಿಕವಲಯದ ಭಯಂಕರ ಬಾಯಾರಿಕೆಯ ಬಗ್ಗೆ ಕೇಳಿಯೇ ನನ್ನ ಗಂಟಲು ಒಣಗಿ ಹೋಯಿತು.

ಬೇಸಿಗೆಯಲ್ಲಿ ಬತ್ತಿ ಹರಿಯುವ ನೇತ್ರಾವತಿಯು ಹೊಸದಾಗಿ ನಿರ್ಮಾಣ ಆಗುತ್ತಿರುವ ಆರ್ಥಿಕವಲಯದ ಬಾಯಾರಿಕೆಯನ್ನು ಹಿಂಗಿಸ ಬಲ್ಲಳೇ?

ಮಾನ್ಯ ಶ್ರೀ ಸುಂದರ ರಾಯರ ವಿಶ್ಲೇಷಣೆ ಓದಿದ ಮೇಲೆ, ಪ್ರತಿ ಓದುಗನನ್ನೂ " ಮುಂದೇನು ? " ಎಂಬ ಚಿಂತೆ ಕಾಡದೇ ಬಿಟ್ಟೀತೇ?

ಜನ ಸಾಮಾನ್ಯರು "ನಮ್ಮ ಸರಕಾರವು ಸದಾ ನಮ್ಮ ಒಳಿತನ್ನೇ ಮಾಡುತ್ತದೆ!" - ಎಂಬ ಹಳೆಯ ಕಾಲದ ಚಿಂತನೆಯನ್ನು ಈಗ ಬದಲಾಯಿಸಿ ಕೊಳ್ಳಬೇಕಾದ ಕಾಲ ಬಂದಿದೆ ಅಂತ ನನಗೆ ಅನಿಸುತ್ತೆ.

ಸಂವಹನವೇ ಮುಖ್ಯ ಉದ್ಯಮ ಆಗಿರುವ ಈ ಕಾಲದಲ್ಲಿ ಜನಮನದಲ್ಲಿ "ಹೊಸ ಜಾಗೃತಿ" ಮೂಡಿ ಬರಲಿ.

ತಮ್ಮ ಸಂದೇಶ ಜನಸಮೂಹವನ್ನು ತಲುಪಲಿ. ಚಿಂತನೆಯ ಸಾಮರ್ಥ್ಯ ಜನ ಸಾಮಾನ್ಯರಲ್ಲೂ ಇದೆ. ಅದು ಇಂದು ಎಚ್ಚತ್ತುಕೊಳ್ಳಲಿ.

ತಾವು ಉತ್ತಮ ಕೆಲಸವನ್ನು ಮಾಡುತ್ತಾ ಇದ್ದೀರಿ. ತಮಗೆ ಶುಭ ಹಾರೈಸುತ್ತಾ ಇದ್ದೇನೆ.

ವಂದನೆಗಳು.

ಕೇಸರಿ ಪೆಜತ್ತಾಯ