ಭಾನುವಾರ, ಫೆಬ್ರವರಿ 9, 2020






ಮೂರನೇ ಆಶ್ವಾಸ ಪದ್ಯಗಳು: ೨೮-೩೨


ಕಂ|| ದಾಡೆಗಳನರೆಯೊಳಿಂಬಿಂ
     ತೀಡುತ್ತುಂ ತೀವ್ರಮಾಗೆ ಬಂಡಿಯ ಬರವಂ|
     ನೋಡುತ್ತಿರ್ದಾ ಬಕನಂ
     ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ|| ೨೮||
(ದಾಡೆಗಳನ್ ಅರೆಯೊಳ್ ಇಂಬಿಂ ತೀಡುತ್ತುಂ, ತೀವ್ರಮಾಗೆ ಬಂಡಿಯ ಬರವಂ ನೋಡುತ್ತಿರ್ದಾ ಬಕನಂ ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ)
ಹರಿತಗೊಳಿಸಲೆಂದು ತನ್ನ ಕೋರೆಹಲ್ಲನ್ನು ಸಾವಕಾಶವಾಗಿ ಬಂಡೆಗೆ ಮಸೆಯುತ್ತಾ, ಅದು ಹರಿತಗೊಂಡಮೇಲೆ, ಬಂಡಿಯು ಬರುವುದನ್ನೇ ಎದುರುನೋಡುತ್ತಿದ್ದ ಬಕನನ್ನು, ಸಾಕಷ್ಟು ದೂರದಿಂದಲೇ ಕಂಡು ಭೀಮನು ಕೆರಳಿದನು.
ಕಂ| ಕಡೆಗಣ್ಣೊಳೆ ರಕ್ಕಸನಂ
     ನಡೆ ನೋಡಿ ಕೊಲಲ್ಕೆ ಸತ್ತ್ವಮಪ್ಪಂತಿರೆ ಮುಂ|
     ಪೊಡೆವೆಂ ಕೂೞಂ ಬೞಿಯಂ
     ಪೊಡೆವೆಂ ರಕ್ಕಸನನೆಂದು ಸಾಹಸಭೀಮಂ|| ೨೯||
(ಕಡೆಗಣ್ಣೊಳೆ ರಕ್ಕಸನಂ ನಡೆ ನೋಡಿ, ‘ಕೊಲಲ್ಕೆ ಸತ್ತ್ವಂ ಅಪ್ಪಂತಿರೆ ಮುಂ ಪೊಡೆವೆಂ ಕೂೞಂ, ಬೞಿಯಂ ಪೊಡೆವೆಂ ರಕ್ಕಸನನ್ ಎಂದು ಸಾಹಸಭೀಮಂ)
ಕಣ್ಣಿನ ತುದಿಯಿಂದಲೇ ರಕ್ಕಸನನ್ನು ಸರಿಯಾಗಿ ನೋಡಿ, ‘ಕೊಲ್ಲಲು ಬೇಕಾದ ಶಕ್ತಿ ತುಂಬಿಕೊಳ್ಳಲೆಂದು ಮೊದಲು ಊಟ ಹೊಡೆಯುತ್ತೇನೆ, ನಂತರ ರಕ್ಕಸನನ್ನು ಹೊಡೆಯುತ್ತೇನೆ’ ಎಂದು ಸಾಹಸಭೀಮನು,
(ಟಿಪ್ಪಣಿ: ಈ ಹಿಂದೆ ಹಿಡಿಂಬನನ್ನು ಕೊಲ್ಲುವ ಸಂದರ್ಭದಲ್ಲಿ ‘ಮಲ್ಲಂತಿಗೆಯನಪ್ಪೊಡಂ ಸಡಲಿಸದೆ’ – ತನ್ನ ಕಾಚವನ್ನು ಸಹ ಸರಿಮಾಡಿಕೊಳ್ಳದೆ - ಎಂಬ ಮಾತು ಬಂದಿದೆ. (ಎರಡನೇ ಆಶ್ವಾಸ ಪದ್ಯ ೧೬ರ ನಂತರದ ಗದ್ಯ). ಹೋರಾಟ ಶುರುವಾಗುವ ಮೊದಲು ಇಬ್ಬರು ಮಲ್ಲರಲ್ಲಿಯೂ ಆತಂಕವಿರುವುದು ಸಹಜ. ಆದರೆ ಇಲ್ಲಿ ಭೀಮನಿಗೆ ಅಂಥ ಯಾವ ಆತಂಕವೂ ಇಲ್ಲ ಎಂಬುದನ್ನು ಕವಿ ಸೂಚಿಸುತ್ತಿದ್ದಾನೆ. ಎದುರಾಳಿಯನ್ನು ಸದೆಬಡಿಯುತ್ತೇನೆ ಎಂಬ ಆತ್ಮವಿಶ್ವಾಸ ಇರುವುದರಿಂದಲೇ ಯುದ್ಧ ಶುರುವಾಗುವ ಗಳಿಗೆಯಲ್ಲೂ ಕಾಚವನ್ನು ಸರಿಮಾಡಿಕೊಳ್ಳದಿರುವುದು, ಊಟ ಮಾಡತೊಡಗುವುದು ಭೀಮನಿಗೆ ಸಾಧ್ಯವಾಗುತ್ತದೆ; ಹೀಗೆ ಹೇಳುವುದರ ಮೂಲಕ ಭೀಮ ಎಂಥ ಶೂರನಾಗಿದ್ದ ಎಂಬುದನ್ನು ಕವಿ ಸೂಚಿಸುತ್ತಿದ್ದಾನೆ.
ಇನ್ನು ಈ ಪದ್ಯದಲ್ಲಿ ‘ಪೊಡೆವೆಂ’ ಶಬ್ದ ಬೇರೆ ಬೇರೆ ಅರ್ಥಗಳಲ್ಲಿ ಎರಡು ಸಲ ಬಳಕೆಯಾಗಿದೆ. ಸಾಮಾನ್ಯ ಬಳಕೆಯಲ್ಲಿ ‘ಊಟ ಮಾಡುತ್ತೇನೆ’ ಎನ್ನುತ್ತೇವೆ. ಇಲ್ಲಿ ಕವಿ ‘ಊಟ ಹೊಡೆಯುತ್ತೇನೆ’ ಎಂದು ಆಡುಭಾಷೆಯ ಪ್ರಯೋಗ ಮಾಡಿದ್ದಾನೆ. ಈ ಪ್ರಯೋಗವು ಹೊಟ್ಟೆ ತುಂಬ ಊಟ ಮಾಡುತ್ತೇನೆ ಎನ್ನುವುದರ ಜೊತೆಗೆ ಅದು ಪುಷ್ಕಳವಾದ ಊಟ ಎಂಬುದನ್ನೂ ಸೂಚಿಸುತ್ತದೆ. ಊಟ ‘ಹೊಡೆ’ಯುವುದಕ್ಕೂ, ರಕ್ಕಸನನ್ನು ‘ಹೊಡೆ’ಯುವುದಕ್ಕೂ ಇರುವ ಅರ್ಥವ್ಯತ್ಯಾಸವನ್ನೂ ಗಮನಿಸಬೇಕು.)
ವ|| ಅಂತು ತನ್ನ ತಂದ ಬಂಡಿಯ ಕೂೞೆಲ್ಲಮಂ ಪತ್ತೆಂಟು ತುತ್ತಿನೊಳೆ ಸಮೆಯೆ ತುತ್ತುವುದಂ ಕಂಡು ರಕ್ಕಸನಿವನ ಪಾಂಗಂ ಮೆಚ್ಚಲಾರೆನೆನ್ನುಮನಿಂತು ಸಮೆಯೆ ತುತ್ತುಗುಮೆಂದು ಬಕಂ ಬಕವೇಷದಿಂ ಪೆಱಗಣ ದೆಸೆಗೆ ಮೆಲ್ಲನೋಸರಿಸಿ ಬಂದು-
(ಅಂತು ತನ್ನ ತಂದ ಬಂಡಿಯ ಕೂೞು ಎಲ್ಲಮಂ ಪತ್ತೆಂಟು ತುತ್ತಿನೊಳೆ ಸಮೆಯೆ ತುತ್ತುವುದಂ ಕಂಡು, ರಕ್ಕಸನ್ ‘ಇವನ ಪಾಂಗಂ ಮೆಚ್ಚಲಾರೆನ್, ಎನ್ನುಮನ್ ಇಂತು ಸಮೆಯೆ ತುತ್ತುಗುಂ’ ಎಂದು ಬಕಂ ಬಕವೇಷದಿಂ ಪೆಱಗಣ ದೆಸೆಗೆ ಮೆಲ್ಲನೆ ಓಸರಿಸಿ ಬಂದು-)
ಹಾಗೆ ತಾನು ತಂದಿದ್ದ ಬಂಡಿ ಭರ್ತಿ ಅನ್ನವನ್ನು ಹತ್ತೆಂಟು ತುತ್ತಿನಲ್ಲಿಯೇ ಮುಗಿಸಿಬಿಡುವವನಂತೆ ಕಬಳಿಸುತ್ತಿದ್ದ ಭೀಮನನ್ನು ಕಂಡು ‘ಇವನ ರೀತಿಯನ್ನು ಮೆಚ್ಚಲಾರೆ! ನೋಡಿದರೆ ನನ್ನನ್ನೂ ಹೀಗೆ ತಿಂದು ಮುಗಿಸುವವನಂತೆ ಕಾಣುತ್ತಾನೆ!’ ಎಂದು ಆ ಬಕಾಸುರನು ಬಕಪಕ್ಷಿಯ ವೇಷದಿಂದ ಮೆಲ್ಲನೆ ಹಿಂದಿನಿಂದ ಸರಿದು ಬಂದು
ಕಂ||ಎರಡುಂ ಕೆಲನುಮನೆರಡುಂ
     ಕರ ಪರಿಘದಿನಡಸಿ ಗುರ್ದಿ ಪೆಱಪಿಂಗುವನಂ|
     ಮುರಿದಡಸಿ ಪಿಡಿದು ಘಟ್ಟಿಸಿ
     ಪಿರಿಯರೆಯೊಳ್ ಪೊಯ್ದನಸಗವೊಯ್ಲಂ ಭೀಮಂ|| ೩೦||
(ಎರಡುಂ ಕೆಲನುಮನ್ ಎರಡುಂ ಕರ ಪರಿಘದಿನ್ ಅಡಸಿ, ಗುರ್ದಿ ಪೆಱಪಿಂಗುವನಂ. ಮುರಿದು ಅಡಸಿ ಪಿಡಿದು ಘಟ್ಟಿಸಿ ಪಿರಿಯರೆಯೊಳ್ ಪೊಯ್ದನ್ ಅಸಗವೊಯ್ಲಂ ಭೀಮಂ)
(ಭೀಮನ) ಎರಡು ಮಗ್ಗುಲುಗಳನ್ನೂ ಗದೆಗಳಂತಿದ್ದ ತನ್ನ ಎರಡು ಕೈಗಳಿಂದ ಹಿಡಿದು ಗುದ್ದಿ (ಬಂದ ದಾರಿಯಲ್ಲಿಯೇ) ಹಿಂದೆ ಹೋಗಲು ಹವಣಿಸುತ್ತಿದ್ದ ಬಕನನ್ನು ಭೀಮನು ಕೂಡಲೇ ಹಿಂತಿರುಗಿ, ಹಿಡಿದುಕೊಂಡು - ಅಗಸನು ಬಟ್ಟೆ ಒಗೆಯುವಂತೆ – ದೊಡ್ಡದೊಂದು ಬಂಡೆಗೆ  ಅಪ್ಪಳಿಸಿದನು.
ವ|| ಅಂತು ಪೊಯ್ದೊಡೆ ಪೊಡೆಸೆಂಡಂ ಪೊಯ್ದಂತೆ ಮೇಗೊಗೆದು ಸೆಣಸೆ-
(ಅಂತು ಪೊಯ್ದೊಡೆ ಪೊಡೆಸೆಂಡಂ ಪೊಯ್ದಂತೆ ಮೇಗೆ ಒಗೆದು ಸೆಣಸೆ)
ಹಾಗೆ ಅಪ್ಪಳಿಸಿದಾಗ ಬಕನು ಪುಟಿಯುವ ಚೆಂಡಿನಂತೆ ಮೇಲೆ ನೆಗೆದು ಬಂದು ಸೆಣೆಸತೊಡಗಿದನು.
ಉ|| ಬಾರಿಯನಿಟ್ಟು ಕೂಡೆ ಪೊೞಲಂ ತವೆ ತಿಂದನನಾರ್ತರಿಲ್ಲಣಂ
     ಬಾರಿಸಲಾರುಮಿನ್ ಜವನ ಬಾರಿಯೊಳಿಕ್ಕುವೆನೆಂದು ಪರ್ವೆ ಭೋ|
     ರ್ಭೋರೆನೆ ಬೀಸೆ ತದ್ವದನ ಗಹ್ವರದಿಂ ಬಿಸುನೆತ್ತರುಣ್ಮೆ ಭೋ
     ರ್ಭೋರೆನೆ ಕೊಂದನಂಕದ ಬಳಾಧಿಕನಂ ಬಕನಂ ವೃಕೋದರಂ|| ೩೧||
(‘ಬಾರಿಯನ್ ಇಟ್ಟು ಕೂಡೆ ಪೊೞಲಂ ತವೆ ತಿಂದನನ್ ಆರ್ತರಿಲ್ಲ ಅಣಂ ಬಾರಿಸಲ್ ಆರುಂ; ಇನ್ ಜವನ ಬಾರಿಯೊಳ್ ಇಕ್ಕುವೆನ್’ ಎಂದು ಪರ್ವೆ ಭೋರ್ಭೋರೆನೆ ಬೀಸೆ, ತದ್ವದನ ಗಹ್ವರದಿಂ ಬಿಸುನೆತ್ತರ್ ಉಣ್ಮೆ   ಭೋರ್ಭೋರೆನೆ ಕೊಂದನ್ ಅಂಕದ ಬಳಾಧಿಕನಂ ಬಕನಂ ವೃಕೋದರಂ)
(ಈ ರಾಕ್ಷಸನು) ‘ಸರದಿಯನ್ನು ವಿಧಿಸಿ, ಇಡೀ ಊರೇ ಖಾಲಿಯಾಗುವಂತೆ ಒಬ್ಬೊಬ್ಬರನ್ನಾಗಿ ತಿಂದು ಮುಗಿಸುತ್ತಿದ್ದರೂ ಸಹ ಅವನನ್ನು ತಡೆಯಲು ಯಾರೂ ಸಮರ್ಥರಾಗಲಿಲ್ಲ! ಇರಲಿ! ಇನ್ನು ಆ ಯಮನ ಸರದಿಯಲ್ಲಿ ಇವನನ್ನು ಹಾಕುತ್ತೇನೆ’ ಎಂದು ಅವನನ್ನು ಎತ್ತಿ ವೇಗವಾಗಿ ಬೀಸತೊಡಗಿದನು. ಆಗ ಆ ರಾಕ್ಷಸನ ಗುಹೆಯಂಥ ಬಾಯಿಯಿಂದ ನೆತ್ತರು ಹೊರಹೊಮ್ಮಿತು; ಮಹಾ ಬಲಶಾಲಿಯಾದ ಬಕಾಸುರನನ್ನು ಭೀಮನು ಹೀಗೆ ಕೊಂದು ಮುಗಿಸಿದನು.
ವ|| ಅಂತು ಕೊಂದು ನೀಲಗಿರಿಯನೆ ಪಿಡಿದೆೞೆವಂತೆ ರಕ್ಕಸನ ಕರಿಯ ಪಿರಿಯೊಡಲನೆೞೆದು ತಂದು ಪೊೞಲ ನಡುವಿಕ್ಕಿದಾಗಳ್ ಪೊೞಲೆಲ್ಲಂ ಚೋದ್ಯಂಬಟ್ಟು ಬದ್ದವಣದ ಪಱೆಗಳಂ ಪೊಯ್ಸಿ ಸಾಹಸಭೀಮನ ಸಾಹಸಮನಳವಲ್ಲದೆ ಪೊಗೞ್ದು ತಮ್ಮಾಳ್ದನುಮನಿಷ್ಟ ದೈವಮುಮಂ ಕೊಂಡಾಡುವಂತಯ್ವರುಮಂ ಕೊಂಡಾಡೆ ಕೆಲವು ದಿವಸಮಿರ್ಪನ್ನೆಗಮೊಂದು ದಿವಸಮಶಿಶಿರಕಿರಣನಪರಜಲನಿಧಿತಟನಿಕಟ ವರ್ತಿಯಾದನಾಗಳೊರ್ವ ಪಾರ್ವಂ ವಿಸ್ತೀರ್ಣಜೀರ್ಣ ಕರ್ಪಟಾವೃತಕಟಿತಟನುಮಾಗಿ ಬಂದು ಕಣ್ಮುಚ್ಚಲೆಡೆವೇಡೆ ತನಗವರ್ ಪಾಸಲ್ಕೊಟ್ಟ ಕೃಷ್ಣಾಜಿನಮಂ ಪಾಸಿ ಪಟ್ಟಿರ್ದನಂ ಧರ್ಮಪುತ್ರನಾವ ನಾಡಿಂ ಬಂದಿರೆಲ್ಲಿಗೆ ಪೋದಪಿರೆಂದೊಡುತ್ತರಾಪಥದ ಹಸ್ತಿನಪುರದಿಂ ಬಂದೆಮೆಂದೊಡಲ್ಲಿ ಪಾಂಡವರ ಪಡೆಮಾತಾವುದು ಧೃತರಾಷ್ಟ್ರ ಸುಯೋಧನರಿರ್ಪಂದಮಾವುದೆಂದು ಬೆಸಗೊಳೆ-
(ಅಂತು ಕೊಂದು, ನೀಲಗಿರಿಯನೆ ಪಿಡಿದು ಎೞೆವಂತೆ ರಕ್ಕಸನ ಕರಿಯ ಪಿರಿಯ ಒಡಲನ್ ಎೞೆದು ತಂದು ಪೊೞಲ ನಡುವೆ ಇಕ್ಕಿದಾಗಳ್, ಪೊೞಲೆಲ್ಲಂ ಚೋದ್ಯಂಬಟ್ಟು ಬದ್ದವಣದ ಪಱೆಗಳಂ ಪೊಯ್ಸಿ, ಸಾಹಸಭೀಮನ ಸಾಹಸಮನ್ ಅಳವಲ್ಲದೆ ಪೊಗೞ್ದು, ತಮ್ಮಾಳ್ದನುಮನ್ ಇಷ್ಟ ದೈವಮುಮಂ ಕೊಂಡಾಡುವಂತೆ ಅಯ್ವರುಮಂ ಕೊಂಡಾಡೆ, ಕೆಲವು ದಿವಸಂ ಇರ್ಪನ್ನೆಗಂ ಒಂದು ದಿವಸಂ ಅಶಿಶಿರಕಿರಣನ್ ಅಪರಜಲನಿಧಿತಟನಿಕಟವರ್ತಿಯಾದನ್; ಆಗಳ್ ಒರ್ವ ಪಾರ್ವಂ ವಿಸ್ತೀರ್ಣಜೀರ್ಣ ಕರ್ಪಟಾವೃತಕಟಿತಟನುಮಾಗಿ ಬಂದು ಕಣ್ಮುಚ್ಚಲ್ ಎಡೆವೇಡೆ, ತನಗೆ ಅವರ್ ಪಾಸಲ್ ಕೊಟ್ಟ ಕೃಷ್ಣಾಜಿನಮಂ ಪಾಸಿ ಪಟ್ಟಿರ್ದನಂ, ಧರ್ಮಪುತ್ರನ್, ‘ಆವ ನಾಡಿಂ ಬಂದಿರಿ? ಎಲ್ಲಿಗೆ ಪೋದಪಿರಿ? ಎಂದೊಡೆ ‘ಉತ್ತರಾಪಥದ ಹಸ್ತಿನಪುರದಿಂ ಬಂದೆಂ’ ಎಂದೊಡೆ, ‘ಅಲ್ಲಿ ಪಾಂಡವರ ಪಡೆಮಾತಾವುದು? ಧೃತರಾಷ್ಟ್ರ ಸುಯೋಧನರಿರ್ಪ ಅಂದಂ ಆವುದು?’ ಎಂದು ಬೆಸಗೊಳೆ-)
ಹಾಗೆ ಕೊಂದು ನೀಲಪರ್ವತವನ್ನೇ ಹಿಡಿದು ಎಳೆತಂದಂತೆ ರಾಕ್ಷಸನ ಕರಿಯ ದೊಡ್ಡ ಶರೀರವನ್ನು ಭೀಮನು ಎಳೆದುತಂದು ಪಟ್ಟಣದ ಮಧ್ಯಭಾಗದಲ್ಲಿ ಇಟ್ಟನು. ಪಟ್ಟಣವೆಲ್ಲ ಆಶ್ಚರ್ಯಪಟ್ಟು ಸಂಭ್ರಮದಿಂದ ತಮಟೆ ಬಾರಿಸಿ ಸಾಹಸಭೀಮನ ಸಾಹಸವನ್ನು ಅಳತೆ ಮೀರಿ ಹೊಗಳಿದರು. ತಮ್ಮನ್ನು ಆಳುವವನನ್ನು, ತಮ್ಮ ಇಷ್ಟದೈವವನ್ನು, ಕೊಂಡಾಡುವಂತೆ ಐದು ಜನರನ್ನೂ ಕೊಂಡಾಡಿದರು. ಹೀಗೆ ಕೆಲವು ದಿನ ಕಳೆದ ಮೇಲೆ ಒಂದು ದಿನ-
ಬೆಂಗದಿರನು (ಸೂರ್ಯನು) ಪಡುಗಡಲ ಅಂಚಿಗೆ ಹತ್ತಿರವಾದನು. ಆಗ ಒಬ್ಬ ಹಾರುವನು ಹರಿದು ಚಿಂದಿಯಾದ ಹಳೆಯ ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಂಡು ಬಂದು, ಮಲಗಿಕೊಳ್ಳಲು ಜಾಗ ಕೊಡುವಂತೆ (ಪಾಂಡವರನ್ನು) ಕೇಳಿ, ತನಗೆ ಅವರು ಹಾಸಲು ಕೊಟ್ಟ ಕೃಷ್ಣಾಜಿನವನ್ನು ಹಾಸಿಕೊಂಡು ಮಲಗಿದ್ದನು. ಆಗ ಧರ್ಮಪುತ್ರನು ಅವನ ಹತ್ತಿರ ‘ಯಾವ ಊರಿಂದ ಬಂದಿರಿ? ಮುಂದೆ ಎಲ್ಲಿಗೆ ಹೊರಟವರು?’ ಎಂದು ಮಾತಾಡಿಸಿದನು. ಹಾರುವನು ‘ಉತ್ತರಾಪಥದ ಹಸ್ತಿನಾಪುರದಿಂದ ಬಂದೆ’ ಎಂದಾಗ ‘ಅಲ್ಲಿ ಪಾಂಡವರ ಸುದ್ದಿ ಏನು? ಧೃತರಾಷ್ಟ್ರ, ಸುಯೋಧನರು ಹೇಗಿದ್ದಾರೆ?’ ಎಂದು ವಿಚಾರಿಸಲು-
ಮ|| ಮನದೊಳ್ ಕೂರದ ಪಾಂಡುರಾಜಸುತರುಂ ಲಾಕ್ಷಾಗೃಹೋಗ್ರಾಗ್ನಿಯಾ
     ನನದೊಳ್ ಮೞ್ಗಿದರೆನ್ನ ಪುಣ್ಯಮಱಿಯರ್ ವೇಮಾಱ(?)ರಿನ್ನಾರೊ ಬೇ|
     ರನೆ ಕಿೞ್ತಿಕ್ಕಿದೆನೀಗಳಾಯ್ತು ಧರೆ ನಿರ್ದಾಯಾದ್ಯಮೆಂದಾ ಸುಯೋ
     ಧನನಾಳುತ್ತಿರೆ ಸಂದ ಹಸ್ತಿನಪುರಂ ಸಂತಂ ಬಸಂತಂ ಕರಂ|| ೩೨||
(‘ಮನದೊಳ್ ಕೂರದ ಪಾಂಡುರಾಜಸುತರುಂ ಲಾಕ್ಷಾಗೃಹ ಉಗ್ರ ಅಗ್ನಿ ಆನನದೊಳ್ ಮೞ್ಗಿದರ್. ಎನ್ನ ಪುಣ್ಯಂ! ಅಱಿಯರ್, ವೇಮಾಱರ್ ಇನ್ನಾರೊ? ಬೇರನೆ ಕಿೞ್ತಿಕ್ಕಿದೆನ್! ಈಗಳಾಯ್ತು ಧರೆ ನಿರ್ದಾಯಾದ್ಯಂ’ ಎಂದು ಆ ಸುಯೋಧನನ್ ಆಳುತ್ತಿರೆ, ಸಂದ ಹಸ್ತಿನಪುರಂ ಸಂತಂ ಬಸಂತಂ ಕರಂ)
(ನಾನು) ‘ಮನದೊಳಗೆ ಇಷ್ಟಪಡದ ಪಾಂಡವರು ಅರಗಿನ ಮನೆ ಹೊತ್ತಿ ಉರಿಯುವಾಗ ಬೆಂಕಿಯ ಬಾಯಿಗೆ ಸಿಕ್ಕಿ ನಾಶವಾದರು; ಅದು ನನ್ನ ಪುಣ್ಯ! ಅಸಾಧ್ಯರು (ಎಂದರೆ ಯಾರನ್ನು ಸೋಲಿಸಲು, ಬಗ್ಗಿಸಲು ಸಾಧ್ಯವಿಲ್ಲವೋ ಅಂಥವರು), ಮೋಸಹೋಗದವರು ಇನ್ನು ಯಾರಿದ್ದಾರೆ? ಬೇರನ್ನೇ ಕಿತ್ತೊಗೆದಿದ್ದೇನೆ! ಈಗ ರಾಜ್ಯಕ್ಕೆ ಪಾಲುದಾರರೇ ಇಲ್ಲ!’ – ಎಂಬ ಭಾವನೆಯಲ್ಲಿ ಸುಯೋಧನನು ರಾಜ್ಯಭಾರ ಮಾಡುತ್ತಿದ್ದಾನೆ. ಪ್ರಸಿದ್ಧವಾದ ಹಸ್ತಿನಾಪುರದಲ್ಲಿ ಸುಖ ಸಂತೋಷಗಳು ನೆಲೆಸಿವೆ.
ವ|| ಅದಲ್ಲದೆಯುಂ ಯಜ್ಞಸೇನನೆಂಬ ಮೊದಲ ಪೆಸರ ಪಾಂಚಾಳದೇಶದರಸಂ ದ್ರುಪದನೆಂಬಂ ದ್ರೋಣನೊಳಾದ ಪರಿಭವಮಂ ನೆನೆದಾತನಂ ಕೊಲ್ವನ್ನನೊರ್ವ ಮಗನುಮಂ ವಿಕ್ರಮಾರ್ಜನಂಗೆ ಪೆಂಡತಿಯಪ್ಪನ್ನಳೊರ್ವ ಮಗಳುಮಂ ಪಡೆದಲ್ಲದಿರೆನೆಂದು ಪೂಣ್ದು ಪೋಗಿ ಪಯೋವ್ರತನೆಂಬ ದಿವ್ಯ ಮುನಿಪತಿಯಿಂ ಪುತ್ರಕಾಮೇಷ್ಟಿಗೆಯ್ಸೆ ಹೋಮಕುಂಡದಲ್ಲಿ ಧಗಧಗಿಸುವ ಜ್ವಾಲಾಮಾಲೆಗಳೊಳ್ ಕಿೞ್ತಬಾಳುಮತ್ತಪರಮುಮಭೇದ್ಯ ಕವಚಮುಂ ಬೆರಸೊಗೆದ ಧೃಷ್ಟದ್ಯುಮ್ನನೆಂಬ ಮಗನುಮಂ ಜ್ವಾಳಾಮಾಳಿನಿಯೊಗೆವಂತೊಗೆದ ಕೃಷ್ಣೆಯೆಂಬ ಮಗಳುಮಂ ಪಡೆದನಾ ಹೋಮಾಗ್ನಿಯೊಳ್ ಪುಟ್ಟಿದೊಂದು ದಿವ್ಯ ಚಾಪಮುಮಯ್ದು ದಿವ್ಯ ಶರಮೊಳವಾ ಬಿಲ್ಲನೇಱಿಸಿ ಆ ಸರಲ್ಗಳಿಂದಾತನ ಮನೆಯ ಮುಂದೆ ನಭದೊಳ್ ನಲಿನಲಿದಾಡುವ ಜಂತ್ರದ ಮೀನನೆಚ್ಚನುಮಾಕೆಗೆ ಗಂಡನಕ್ಕುಮೆಂದಾದೇಶಮಂತಪ್ಪ ಸಾಹಸಪುರುಷಂ ವಿಕ್ರಮಾರ್ಜುನನಲ್ಲದೆ ಪೆಱರಿಲ್ಲೆಂಬರದಱಿಂದಿನ್ನುಂ ಪಾಂಡವರೊಳರೆಂಬ ಮಾತುಗಳಂ ಬುದ್ಧಿಯೊಡೆಯರಾರಾನುಂ ನುಡಿವರ್ ದ್ರುಪದನುಮೀಗಳಾ ಕೂಸಿಂಗೆ ಸಯಂಬರಮಂ ಮಾಡಲೆಂದು ನೆಲದೊಳುಳ್ಳರಸು ಮಕ್ಕಳೆಲ್ಲರ್ಗಂ ಬೞಿಯನಟ್ಟಿದೊಡೆ ದುರ್ಯೋಧನಾದಿಗಳ್ ಮೊದಲಾದನೇಕ ದೇಶಾಧೀಶ್ವರರೆಲ್ಲಂ ಛತ್ರವತಿಯೆಂಬುದು ದ್ರುಪದನ ಪೊೞಲಾ ಪೊೞಲ್ಗೆ ವಂದಿರ್ದರಾ[ನಲ್ಲಿಗೆ ಪೋದಪೆನೆಂದು]* ಪೇೞೆ ತದ್ವೃತ್ತಾಂತಮೆಲ್ಲಮಂ ಕೇಳ್ದು ತಮ್ಮೊಳಾಳೋಚಿಸಿ-
(ಅದಲ್ಲದೆಯುಂ ಯಜ್ಞಸೇನನೆಂಬ ಮೊದಲ ಪೆಸರ ಪಾಂಚಾಳದೇಶದ ಅರಸಂ ದ್ರುಪದನೆಂಬಂ ದ್ರೋಣನೊಳ್ ಆದ ಪರಿಭವಮಂ ನೆನೆದು ‘ಆತನಂ ಕೊಲ್ವನ್ನನ್ ಒರ್ವ ಮಗನುಮಂ, ವಿಕ್ರಮಾರ್ಜನಂಗೆ ಪೆಂಡತಿಯಪ್ಪನ್ನಳ್ ಒರ್ವ ಮಗಳುಮಂ ಪಡೆದಲ್ಲದೆ ಇರೆನ್’ ಎಂದು ಪೂಣ್ದು ಪೋಗಿ, ಪಯೋವ್ರತನ್ ಎಂಬ ದಿವ್ಯ ಮುನಿಪತಿಯಿಂ ಪುತ್ರಕಾಮೇಷ್ಟಿಗೆಯ್ಸೆ, ಹೋಮಕುಂಡದಲ್ಲಿ ಧಗಧಗಿಸುವ ಜ್ವಾಲಾಮಾಲೆಗಳೊಳ್ ಕಿೞ್ತಬಾಳುಂ, ಅತ್ತಪರಮುಂ, ಅಭೇದ್ಯ ಕವಚಮುಂ ಬೆರಸು ಒಗೆದ ಧೃಷ್ಟದ್ಯುಮ್ನನೆಂಬ ಮಗನುಮಂ, ಜ್ವಾಳಾಮಾಳಿನಿಯೊಗೆವಂತೆ ಒಗೆದ ಕೃಷ್ಣೆಯೆಂಬ ಮಗಳುಮಂ ಪಡೆದನ್. ಆ ಹೋಮಾಗ್ನಿಯೊಳ್ ಪುಟ್ಟಿದೊಂದು ದಿವ್ಯ ಚಾಪಮುಂ ಅಯ್ದು ದಿವ್ಯ ಶರಂ ಒಳವು. ಆ ಬಿಲ್ಲನ್ ಏಱಿಸಿ, ಆ ಸರಲ್ಗಳಿಂದ ಆತನ ಮನೆಯ ಮುಂದೆ ನಭದೊಳ್ ನಲಿನಲಿದಾಡುವ ಜಂತ್ರದ ಮೀನನ್ ಎಚ್ಚನುಂ ಆಕೆಗೆ ಗಂಡನಕ್ಕುಂ ಎಂದು ಆದೇಶಂ. ಅಂತಪ್ಪ ಸಾಹಸಪುರುಷಂ ವಿಕ್ರಮಾರ್ಜುನನಲ್ಲದೆ ಪೆಱರಿಲ್ಲ ಎಂಬರ್. ಅದಱಿಂದ ‘ಇನ್ನುಂ ಪಾಂಡವರ್ ಒಳರ್’ ಎಂಬ ಮಾತುಗಳಂ ಬುದ್ಧಿಯೊಡೆಯರ್ ಆರಾನುಂ ನುಡಿವರ್. ದ್ರುಪದನುಂ ಈಗಳ್ ಆ ಕೂಸಿಂಗೆ ಸಯಂಬರಮಂ ಮಾಡಲೆಂದು ನೆಲದೊಳ್ ಉಳ್ಳ ಅರಸು ಮಕ್ಕಳೆಲ್ಲರ್ಗಂ ಬೞಿಯನ್ ಅಟ್ಟಿದೊಡೆ, ದುರ್ಯೋಧನಾದಿಗಳ್ ಮೊದಲಾದ ಅನೇಕ ದೇಶಾಧೀಶ್ವರರೆಲ್ಲಂ, ಛತ್ರವತಿಯೆಂಬುದು ದ್ರುಪದನ ಪೊೞಲ್, ಆ ಪೊೞಲ್ಗೆ ವಂದಿರ್ದರ್. [ಆನ್ ಅಲ್ಲಿಗೆ ಪೋಪೆನ್]’ ಎಂದು ಪೇೞೆ, ತದ್ವೃತ್ತಾಂತಮೆಲ್ಲಮಂ ಕೇಳ್ದು ತಮ್ಮೊಳ್ ಆಳೋಚಿಸಿ-)
ಅದೂ ಅಲ್ಲದೆ, ಮೊದಲು ಯಜ್ಞಸೇನ ಎಂಬ ಹೆಸರಿದ್ದ ಪಾಂಚಾಲ ದೇಶದ ಅರಸನಾದ ದ್ರುಪದ ಎಂಬುವನು ದ್ರೋಣನಿಂದ ತನಗಾದ ಅವಮಾನವನ್ನು ನೆನೆದು, ‘ಅವನನ್ನು ಕೊಲ್ಲುವಂಥ ಒಬ್ಬ ಮಗನನ್ನೂ, ವಿಕ್ರಮಾರ್ಜುನನಿಗೆ ಹೆಂಡತಿಯಾಗಬಲ್ಲ ಒಬ್ಬಳು ಮಗಳನ್ನೂ ಪಡೆಯದೆ ಬಿಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿ, ಪಯೋವ್ರತನೆಂಬ ಮಹಾಮುನಿಯಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಿದನು. ಆಗ ಹೋಮಕುಂಡದಲ್ಲಿ ಧಗಧಗಿಸುವ ಬೆಂಕಿಯ ನಾಲಗೆಗಳಿಂದ, ಸೆಳೆದ ಕತ್ತಿ, ಗುರಾಣಿ, ಒಡೆಯಲಾಗದ ಕವಚಗಳಿಂದ ಕೂಡಿ ಹುಟ್ಟಿದ ಧೃಷ್ಟದ್ಯುಮ್ನನೆಂಬ ಮಗನನ್ನೂ, ಕೊರಳಲ್ಲಿ ಬೆಂಕಿ ಕಟ್ಟಿಕೊಂಡವಳಂತೆ ಹುಟ್ಟಿಬಂದ ಒಬ್ಬ ಮಗಳನ್ನೂ ಪಡೆದನು. ಅದೇ ಹೋಮದ ಬೆಂಕಿಯಲ್ಲಿ ಹುಟ್ಟಿದ ಒಂದು ಬಿಲ್ಲೂ, ಐದು ದಿವ್ಯಬಾಣಗಳೂ ಇವೆ. ಆ ಬಿಲ್ಲನ್ನು ಎತ್ತಿ, ಆ ಬಾಣಗಳಿಂದ, ಆತನ ಮನೆಯ ಮುಂದೆ ಆಗಸದಲ್ಲಿ ಅತ್ತಿತ್ತ ಕುಣಿಯುತ್ತಿರುವ ಯಂತ್ರದ ಮೀನನ್ನು ಹೊಡೆದುರುಳಿಸಿದವನು ಆಕೆಯ ಗಂಡನಾಗುತ್ತಾನೆ ಎಂಬ ನಿಯಮವಿದೆ. ಅಂತಹ ಗಂಡುಗಲಿಯು ವಿಕ್ರಮಾರ್ಜುನನಲ್ಲದೆ ಬೇರೆ ಯಾರೂ ಇಲ್ಲವಂತೆ! ಹಾಗಾಗಿ ‘ಪಾಂಡವರು ಇನ್ನೂ ಬದುಕಿದ್ದಾರೆ’ ಎಂದು ಬುದ್ಧಿಯುಳ್ಳ ಯಾರೂ ಹೇಳುತ್ತಾರೆ! ದ್ರುಪದನು ಈಗ ಆ ಹೆಣ್ಣಿಗೆ ಸ್ವಯಂವರ ಮಾಡಲೆಂದು, ನೆಲದ ಮೇಲಿನ ಎಲ್ಲಾ ಅರಸುಮಕ್ಕಳಿಗೂ ಹೇಳಿ ಕಳಿಸಿದ್ದಾನೆ. ದುರ್ಯೋಧನನೇ ಮೊದಲಾದ ಅನೇಕ ದೇಶಗಳ ಒಡೆಯರು – ಛತ್ರವತಿ ಎಂಬುದು ದ್ರುಪದನ ಊರು – ಆ ಊರಿಗೆ ಬಂದಿದ್ದಾರೆ. ನಾನು ಅಲ್ಲಿಗೆ ಹೊರಟಿದ್ದೇನೆ ಎಂದು ಹೇಳಲು, ಆ ವಿಷಯವೆಲ್ಲವನ್ನೂ ಕೇಳಿ ತಮ್ಮೊಳಗೆ ಆಲೋಚಿಸಿ –
(*ಇಲ್ಲಿ ಪಂಪನ ಮೂಲ ನಿರೂಪಣೆಯಲ್ಲಿಯೇ ಒಂದು ಸಣ್ಣ ದೋಷವಿದೆ. ಧರ್ಮರಾಯನು ವಿಶ್ರಮಿಸುತ್ತಿದ್ದ ಬ್ರಾಹ್ಮಣನ ಹತ್ತಿರ ಬಂದು ‘ಆವ ನಾಡಿಂ ಬಂದಿರಿ? ಎಲ್ಲಿಗೆ ಪೋದಪಿರಿ?’ ಎಂದು ಕೇಳುತ್ತಾನಷ್ಟೆ. ಆಗ ಬ್ರಾಹ್ಮಣನು ‘…. ಹಸ್ತಿನಾಪುರದಿಂ ಬಂದೆನ್’ ಎಂದು ಉತ್ತರಿಸಿ ತನ್ನ ಮಾತು ಮುಂದುವರಿಸಿ, ದ್ರೌಪದಿಯ ಸ್ವಯಂವರವು ದ್ರುಪದನ ಊರಾದ ಛತ್ರವತಿಯಲ್ಲಿ ನಡೆಯಲಿದೆ ಎಂಬಲ್ಲಿಯವರೆಗೆ ಹಲವು ವಿಷಯಗಳನ್ನು ಹೇಳಿ ಮುಗಿಸಿ ಪುನಃ ‘ಆನಲ್ಲಿಂದಂ ಬಂದೆನ್’ ಎನ್ನುತ್ತಾನೆ. ಮೊದಲು ‘ಹಸ್ತಿನಾಪುರದಿಂದ ಬಂದೆ ಎಂದವನು’ ಕೊನೆಯಲ್ಲಿ ‘ಛತ್ರವತಿಯಿಂದ ಬಂದೆ’ ಎಂದು ಹೇಳುವುದು ಅಸಂಗತವಾಗುತ್ತದೆ. ನಿಜವಾಗಿ ಅವನು ‘ಆನ್ ಅಲ್ಲಿಗೆ ಪೋದಪೆನ್’ ಎಂದು ಹೇಳಬೇಕಾಗಿತ್ತು. ಹರಿದ ಚಿಂದಿಯುಟ್ಟ ಬಡಬ್ರಾಹ್ಮಣನಾದ ಅವನು ರಾಜರ ಮನೆಯ ಮದುವೆಗೆ, ಏನಾದರೂ ದಾನ-ಗೀನ ಸಿಕ್ಕೀತೆಂಬ ಆಸೆಯಿಂದ ಹೊರಟಿದ್ದಾನೆ ಎಂಬುದನ್ನೂ ಗಮನಿಸಬೇಕು. ಕಥಾ ನಿರೂಪಣೆಯ ಈ ಹಂತದಲ್ಲಿ ನಮ್ಮ ಮಹಾಕವಿ ಪಂಪನಿಗೆ ಸಣ್ಣ ತೂಕಡಿಕೆ ಬಂತೋ ಏನೋ!) 



ಗುರುವಾರ, ಜನವರಿ 30, 2020






ಆಶ್ವಾಸ ೩ ಪದ್ಯಗಳು ೨೧-೨೭


ಚಿಂ|| ಬರಿಸಿ ಹಿಡಿಂಬೆಯಂ ಕರೆದು ಸಾರೆ ಘಟೋತ್ಕಚನಂ ಮನೋಮುದಂ
     ಬೆರಸೊಸೆದಿರ್ದೆವಿನ್ನೆವರಮಿನ್ನಿರಲಾಗದು ಪೋಪೆವೆಂದೊಡಾ|
     ದರದೊಳೆ ಕೊಟ್ಟ ವಸ್ತುಗಳನೊಂದುಮನೊಲ್ಲದೆ ಕೂರ್ತು ಬುದ್ಧಿವೇ
     ಱ್ದಿರಿಸಿ ಸುಖಪ್ರಯಾಣದೊಳೆ ಪಾಂಡವರೆಯ್ದಿದರೇಕಚಕ್ರಮಂ|| ೨೧||
(ಬರಿಸಿ ಹಿಡಿಂಬೆಯಂ, ಕರೆದು ಸಾರೆ ಘಟೋತ್ಕಚನಂ, ‘ಮನೋಮುದಂ ಬೆರಸು ಒಸೆದು ಇರ್ದೆವು ಇನ್ನೆವರಂ, ಇನ್ನು ಇರಲಾಗದು, ಪೋಪೆವು’ ಎಂದೊಡೆ, ಆದರದೊಳೆ ಕೊಟ್ಟ ವಸ್ತುಗಳನೊಂದುಮನ್ ಒಲ್ಲದೆ, ಕೂರ್ತು ಬುದ್ಧಿ ಪೇೞ್ದು, ಇರಿಸಿ, ಸುಖಪ್ರಯಾಣದೊಳೆ ಪಾಂಡವರ್ ಎಯ್ದಿದರ್ ಏಕಚಕ್ರಮಂ)
(ಪಾಂಡವರು) ಹಿಡಿಂಬೆಯನ್ನು ಕರೆಸಿಕೊಂಡು, ಘಟೋತ್ಕಚನನ್ನು ಹತ್ತಿರ ಕೂರಿಸಿಕೊಂಡು ‘ಸಂತೋಷವಾಗಿ, ಪ್ರೀತಿಯಿಂದ ಇಷ್ಟು ದಿನವೂ ಇಲ್ಲಿದ್ದೆವು; ಇನ್ನು ಇರುವಂತಿಲ್ಲ; ಹೊರಡುತ್ತೇವೆ’ ಎಂದರು. ಅವರು ಕೊಟ್ಟ ವಸ್ತುಗಳೊಂದನ್ನೂ ತೆಗೆದುಕೊಳ್ಳದೆ, ಪ್ರೀತಿಯಿಂದ ಅವರಿಗೆ ಬುದ್ಧಿ ಹೇಳಿ, ಅವರನ್ನು ಅಲ್ಲಿಯೇ ಬಿಟ್ಟು, ಸುಖವಾಗಿ ಏಕಚಕ್ರದ ಕಡೆಗೆ ಪ್ರಯಾಣ ಹೊರಟರು.
ರಗಳೆ
ಅಲ್ಲಿ ಸೊಗಯಿಸುವ ಕೃತಕಗಿರಿಗಳಿಂ|
ಕಲ್ಪತರುಗಳನೆ ಪೋಲ್ವ ಮರಗಳಿಂ||
ಅಲ್ಲಿ ಸುಂದರವಾದ ಕೃತಕಬೆಟ್ಟಗಳಿವೆ; ಕಲ್ಪತರುಗಳನ್ನು ಹೋಲುವ ಮರಗಳಿವೆ.

ನಂದನಂಗಳೊಳ್ ಸುೞಿವ ಬಿರಯಿಯಿಂ|
ಕಂಪು ಕಣ್ಮಲೆಯೆ ಪೂತ ಸುರಯಿಯಿಂ||
ಅಲ್ಲಿನ ಉದ್ಯಾನಗಳಲ್ಲಿ ವಿರಹಿಗಳು ಸುತ್ತಿ ಸುಳಿಯುತ್ತಾರೆ; ಅಲ್ಲಿ ಸುರಗಿಯ ಹೂವಿನ ಪರಿಮಳ ತುಂಬಿ ಮನಸೆಳೆಯುತ್ತದೆ.

ಸುತ್ತಲುಂ ಪರಿವ ಜರಿವೊನಲ್ಗಳಿಂ|
ದೆತ್ತಲುಂ ನಲಿವ ಪೊಸ ನವಿಲ್ಗಳಿಂ||
ಆ ಊರ ಸುತ್ತಲೂ ಝರಿಯ ಹೊನಲುಗಳಿವೆ; ಅಲ್ಲಿ ನವಿಲುಗಳು ಕುಣಿಯುತ್ತವೆ.

ಬೆಳೆದು ಮಗಮಗಿಪ ಗಂಧಶಾಳಿಯಿಂ|
ದಲ್ಲಿ ಸುಱಿವ ಗಿಳಿವಿಂಡಿನೋಳಿಯಿಂ||
ಅಲ್ಲಿ ಗಮಗಮಿಸುವ ಬತ್ತ ಬೆಳೆಯುವ ಗದ್ದೆಗಳಿವೆ; ಆ ಗದ್ದೆಗಳಲ್ಲಿ ಗಿಳಿಗಳು ಹಿಂಡುಹಿಂಡಾಗಿ ಹಾರಾಡುತ್ತವೆ.

ಈಂಟುಜಳಧಿಯೆನಿಪಗೞ ನೀಳ್ಪಿನಿಂ|
ನೆಗೆದು ಸೊಗಯಿಸುವ ಕೋಂಟೆಯೊಳ್ಪಿನಿಂ||
(ಈಂಟು ಜಳಧಿ ಎನಿಪ ಅಗೞ)
ಅಲ್ಲಿ ಕಡಲವಿಸ್ತಾರದ ಕುಡಿನೀರು ತುಂಬಿದ ಕಂದಕಗಳಿವೆ; ಎತ್ತರಕ್ಕೆ ಎದ್ದುನಿಂತ ಚೆಂದದ ಕೋಟೆಗಳಿವೆ.

ವಿವಿಧ ದೇವ ಗೃಹದಾಟಪಾಟದಿಂ|
ಮಱುಗಿ ಬಟ್ಟೆಯರ ನೋೞ್ಪ ನೋಟದಿಂ||
ಅಲ್ಲಿ ಬಗೆಬಗೆಯ ಹಾಡು ಕುಣಿತಗಳ ದೇವಾಲಯಗಳಿವೆ; ದಾರಿಹೋಕರನ್ನು ಕುತೂಹಲದ ಕಣ್ಣುಗಳು ಗಮನಿಸುತ್ತವೆ.

ಪಂಚರತುನದೊಳೆ ನೆರೆದ ಪಸರದಿಂ|
ತೋರಣಂಗಳೊಳೆ ತೊಡರ್ದ ತಿಸರದಿಂ||
ಅಲ್ಲಿ ಪಂಚರತ್ನಗಳನ್ನು ಮಾರುವ ಅಂಗಡಿಗಳಿವೆ; ಆ ಅಂಗಡಿಗಳ ತೋರಣದಲ್ಲಿ ಮೂರೆಳೆಯ ಸರಗಳಿವೆ.

ಧನದರನ್ನರಿವರೆನಿಪ ಪರದರಿಂ|
ದೇವರನ್ನರಿವರೆನಿಪ ಬಿರುದರಿಂ||
(ಧನದರ ಅನ್ನರ್ ಎನಿಪ…. ದೇವರ ಅನ್ನರ್ ಇವರ್ ಎನಿಪ)
ಅಲ್ಲಿ ಕುಬೇರರಂಥ ವ್ಯಾಪಾರಿಗಳಿದ್ದಾರೆ; ದೇವರೇ ಇವರು ಎಂಬಂಥ ಬಿರುದು ಗಳಿಸಿದವರಿದ್ದಾರೆ.

ನೆರೆಯೆ ಸೊಗಯಿಪಾ ಯೇಕಚಕ್ರಮಂ|
ಮೆಚ್ಚಿದಂ ಹರಿಗನಮಿತ ವಿಕ್ರಮಂ|| ೨೨||
ಹೀಗೆ ಸುಂದರವಾಗಿ ಸೊಗಯಿಸುವ ಏಕಚಕ್ರ ನಗರವನ್ನು ಅರ್ಜುನನು – ಅರಿಗನು - ಬಹುವಾಗಿ ಮೆಚ್ಚಿಕೊಂಡನು.
ವ||ಅಂತು ಮೆಚ್ಚಿ ತಮ್ಮುತಯ್ವರುಮಿನ್ನವು ಪೊೞಲ್ಗಳಿಲ್ಲೀ ಪೊೞಲ್ಗೆ ನಾಲ್ಕು ಯುಗದೊಳಂ ವಸುಮತಿ ಪದ್ಮನಗರಮೇಕಚಕ್ರಂ ಬಹುಧಾನ್ಯಮೆಂಬ ನಾಲ್ಕು ಪೆಸರಾದುದೆಂದು ಮನಂಗೊಂಡು ನೋಡುತ್ತುಂ ಬಂದು ಚತುರ್ವೇದಪಾರಗರ ಮನೆಯ ಮುಂದಣ ಚತುಶ್ಶಾಲೆಯೊಳ್ ಬೀಡಂ ಬಿಟ್ಟು ಧರಾಮರ ವೇಷದೊಳೊಂದು ವರುಷಮಿರ್ಪನ್ನೆಗಮೊಂದುದಿವಸಂ-
(ಅಂತು ಮೆಚ್ಚಿ ತಮ್ಮುತಯ್ವರುಂ ‘ಇನ್ನವು ಪೊೞಲ್ಗಳ್ ಇಲ್ಲ. ಈ  ಪೊೞಲ್ಗೆ ನಾಲ್ಕು ಯುಗದೊಳಂ ವಸುಮತಿ,  ಪದ್ಮನಗರಂ, ಏಕಚಕ್ರಂ, ಬಹುಧಾನ್ಯಂ ಎಂಬ ನಾಲ್ಕು ಪೆಸರಾದುದು’ ಎಂದು ಮನಂಗೊಂಡು ನೋಡುತ್ತುಂ ಬಂದು, ಚತುರ್ವೇದಪಾರಗರ ಮನೆಯ ಮುಂದಣ ಚತುಶ್ಶಾಲೆಯೊಳ್ ಬೀಡಂ ಬಿಟ್ಟು, ಧರಾಮರ ವೇಷದೊಳ್ ಒಂದು ವರುಷಂ ಇರ್ಪನ್ನೆಗಂ ಒಂದು ದಿವಸಂ)
ಕಂ|| ತುಂಬಿದ ರಕ್ತತೆಯಿಂ ನಿಜ
     ಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಗೆ|
     ಟ್ಟಂಬೋಲ್ ತೇಜಂ ಮಸುಳ್ವಿನ
     ಮಂಬರಮಂ ಬಿಸುಟನಾಗಳಂಬುಜಮಿತ್ರಂ|| ೨೩||
(ತುಂಬಿದ ರಕ್ತತೆಯಿಂ ನಿಜಬಿಂಬಂ ವಾರುಣಿಯನ್ ಒಸೆದು ಸೇವಿಸೆ ನಾಣ್ಗೆಟ್ಟಂಬೋಲ್ ತೇಜಂ ಮಸುಳ್ವಿನಂ ಅಂಬರಮಂ ಬಿಸುಟನ್ ಆಗಳ್ ಅಂಬುಜಮಿತ್ರಂ)
ಈ ಪದ್ಯದಲ್ಲಿ ಶ್ಲೇಷಾಲಂಕಾರವಿದೆ.
ಅರ್ಥ ೧:
ಸಂಜೆಯ ಹೊತ್ತಿನಲ್ಲಿ ಕೆಂಪಾದ ಸೂರ್ಯನು ಆಕಾಶವನ್ನು ತೊರೆದು ಪಡುಗಡಲಿನಲ್ಲಿ ಮುಳುಗಿ ತನ್ನ ತೇಜಸ್ಸನ್ನು ಕಳೆದುಕೊಂಡನು.
ಅರ್ಥ ೨:
(ಕುಡುಕನೊಬ್ಬ) ಅತಿಯಾಗಿ ಹೆಂಡ ಕುಡಿದು, ನಾಚಿಕೆಗೆಟ್ಟು ತನ್ನ ಬಟ್ಟೆಗಳನ್ನು ಕಳಚಿ ಬಿಸಾಡಿದನು. (ಹೀಗೆ ಮಾಡಿ) ಅವನು ತನ್ನ ಮರ್ಯಾದೆಯನ್ನು ಕಳೆದುಕೊಂಡನು.

ಸಂಜೆಯ ಹೊತ್ತಿನಲ್ಲಿ ಕೆಂಪಾದ ಸೂರ್ಯನು ಆಕಾಶವನ್ನು ತೊರೆದು ಪಡುಗಡಲಿನಲ್ಲಿ ಮುಳುಗಿ ತನ್ನ ತೇಜಸ್ಸನ್ನು ಕಳೆದುಕೊಂಡನು.
(ಟಿಪ್ಪಣಿ: ಈ ಪದ್ಯಕ್ಕೆ ವಿಶೇಷ ಮಹತ್ವವೇನೂ ಕಾಣುವುದಿಲ್ಲ. ಸೂರ್ಯನನ್ನೂ ಕುಡುಕನನ್ನೂ ಶ್ಲೇಷಾಲಂಕಾರದ ಮೂಲಕ ಒಟ್ಟುಮಾಡಿರುವುದರ ಔಚಿತ್ಯವೂ ತಿಳಿಯುವುದಿಲ್ಲ.
‘ಅಂಬುಜಮಿತ್ರ’ ಎಂದರೆ ಸಾಮಾನ್ಯವಾದ ಅರ್ಥ ‘ಸೂರ್ಯ’ ಎಂದೇ. ಆ ಶಬ್ದಕ್ಕೆ ‘ಕುಡುಕ’ ಎಂದೂ ಅರ್ಥ ಮಾಡದಿದ್ದರೆ ಪದ್ಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತೇವೆ. ಆದರೆ ‘ಅಂಬುಜಮಿತ್ರ’ ಶಬ್ದಕ್ಕೆ ‘ಕುಡುಕ’ ಎಂದು ಅರ್ಥ ಮಾಡುವುದು ಹೇಗೆ? ಕವಿ ಬದುಕಿದ್ದ ಕಾಲದಲ್ಲಿ ‘ಕುಡುಕ’ ಎಂಬ ಅರ್ಥದಲ್ಲಿ ‘ಅಂಬುಜಮಿತ್ರ’ವು ಪ್ರಯೋಗದಲ್ಲಿದ್ದಿರಬಹುದೆ? ಮದ್ಯವನ್ನು ಹುಳಿ ಬರಿಸುವುದಕ್ಕಾಗಿಯೋ, ಮತ್ತಾವುದೋ ಉದ್ದೇಶಕ್ಕಾಗಿಯೋ, ಕೆಸರು ಮಣ್ಣಿನಲ್ಲಿ ಹೂತಿಡುವ ವಿಧಾನವು ಕೆಲವು ಕಡೆಗಳಲ್ಲಿ ಬಳಕೆಯಲ್ಲಿದೆಯಂತೆ. ಅದು ಹೌದಾದರೆ, ಆಗ ‘ಅಂಬುಜಮಿತ್ರ’ ಎಂದರೆ ‘ಕುಡುಕ’ ಎಂದು ಅರ್ಥ ಮಾಡಬಹುದು. ‘ಅಂಬುಜ’ ಎಂದರೆ ಕೆಸರಿನಲ್ಲಿ ಹುಟ್ಟಿದ್ದು ಎಂದು ಅರ್ಥವಷ್ಟೆ?)
ವ|| ಆಗಳ್ ಸಂಧ್ಯಾವಂದನೆಗೆ ಧರ್ಮಪುತ್ರಾರ್ಜುನ ನಕುಲ ಸಹದೇವರ್ ಪೋದರನ್ನೆಗಮಿತ್ತ ಬೀಡಿನೊಳಿರ್ದ ಕೊಂತಿಯ ಭೀಮನ ಕರ್ಣೋಪಾಂತದೊಳ್-
(ಆಗಳ್ ಸಂಧ್ಯಾವಂದನೆಗೆ ಧರ್ಮಪುತ್ರ, ಅರ್ಜುನ, ನಕುಲ-ಸಹದೇವರ್ ಪೋದರ್. ಅನ್ನೆಗಂ ಇತ್ತ ಬೀಡಿನೊಳಿರ್ದ ಕೊಂತಿಯ ಭೀಮನ ಕರ್ಣೋಪಾಂತದೊಳ್)
ಆಗ ಸಂಧ್ಯಾವಂದನೆಗಾಗಿ ಧರ್ಮರಾಜ ಅರ್ಜುನ ನಕುಲ ಸಹದೇವರು ಹೋದರು. ಅಷ್ಟರಲ್ಲಿ ಇತ್ತ ಬೀಡಿನಲ್ಲಿದ್ದ ಕುಂತಿ ಮತ್ತು ಭೀಮನ ಕಿವಿಗೆ-

ಕಂ|| ಸಾರೆಯೊಳೞ್ವ ಮಹಾ ದ್ವಿಜ
     ನಾರಿಯ ಮಮತಾವಿಪೂರಿತೋರ್ಜಿತ ರವದಿಂ|
     ಕಾರುಣ್ಯಾಕ್ರಂದನಮನಿ
     ವಾರಿತಮೊರ್ಮೊದಲೆ ಬಂದು ತೀಡಿತ್ತಾಗಳ್|| ೨೪||
(ಸಾರೆಯೊಳ್ ಅೞ್ವ ಮಹಾ ದ್ವಿಜನಾರಿಯ ಮಮತಾವಿಪೂರಿತ ಊರ್ಜಿತ ರವದಿಂ     ಕಾರುಣ್ಯ ಆಕ್ರಂದನಂ, ಅನಿವಾರಿತಂ, ಒರ್ಮೊದಲೆ ಬಂದು ತೀಡಿತ್ತಾಗಳ್)
ಹತ್ತಿರದಲ್ಲಿಯೇ (ಇದ್ದ ಮನೆಯಿಂದ) ಬ್ರಾಹ್ಮಣ ಹೆಂಗಸೊಬ್ಬಳು ಕರುಣೆ ಹುಟ್ಟುವ ಹಾಗೆ ಜೋರಾಗಿ, ಬಿಡದೆ, ಅಳುತ್ತಿರುವ ಶಬ್ದವು ಕೇಳಿಬಂದಿತು.
ವ|| ಅದಂ ಕೇಳ್ದೇನಾನುಮೊಂದು ಕಾರಣಮಾಗಲೆವೇೞ್ಕುಮೀ ಪುಯ್ಯಲನಾರಯ್ದು ಬರ್ಪೆನೆಂದು ಭೀಮನನಿರಿಸಿ ಕೊಂತಿ ತಾನೆ ಪೋಗಿ-
(ಅದಂ ಕೇಳ್ದು, ‘ಏನಾನುಂ ಒಂದು ಕಾರಣಂ ಆಗಲೆವೇೞ್ಕುಂ, ಈ ಪುಯ್ಯಲನ್ ಆರಯ್ದು ಬರ್ಪೆನ್’ ಎಂದು ಭೀಮನನ್ ಇರಿಸಿ ಕೊಂತಿ ತಾನೆ ಪೋಗಿ,)
ಅದನ್ನು ಕೇಳಿ, ‘ಇದಕ್ಕೆ ಏನಾದರೂ ಒಂದು ಕಾರಣವಿರಲೇಬೇಕು. ಯಾಕೆ ಈ ಗೋಳಾಟವೆಂದು ವಿಚಾರಿಸಿಕೊಂಡು ಬರುತ್ತೇನೆ’ ಎಂದು ಭೀಮನನ್ನು ಅಲ್ಲಿಯೇ ಬಿಟ್ಟು ಕುಂತಿಯು ತಾನೇ ಹೋಗಿ-
ಚಂ|| ಅೞೆ ಕುಡಲಾದ ಕೂಸು ನೆಲದೊಳ್ ಪೊರಳುತ್ತಿರೆ ಧರ್ಮಪತ್ನಿ ಬಾ
     ಯೞಿದು ಕೊರಲ್ಗೆ ಪಾಯ್ದು ಪರಿದಾಡುವ ಬಾಲಕನಾದ ಶೋಕದಿಂ|
     ಗೞಗೞ ಕಣ್ಣನೀರ್ ಸುರಿಯೆ ಚಿಂತಿಪ ಪಾರ್ವನ ಶೋಕದೊಂದು ಪೊಂ
     ಪುೞಿಯನೆ ನೋಡಿ ನಾಡೆ ಕರುಣಂ ತನಗಾಗಿರೆ ಕೊಂತಿ ಚಿಂತೆಯಿಂ|| ೨೫||
(ಅೞೆ ಕುಡಲಾದ ಕೂಸು, ನೆಲದೊಳ್ ಪೊರಳುತ್ತಿರೆ ಧರ್ಮಪತ್ನಿ ಬಾಯೞಿದು, ಕೊರಲ್ಗೆ ಪಾಯ್ದು ಪರಿದಾಡುವ ಬಾಲಕನ್ ಆದ ಶೋಕದಿಂ ಗೞಗೞ ಕಣ್ಣನೀರ್ ಸುರಿಯೆ, ಚಿಂತಿಪ ಪಾರ್ವನ ಶೋಕದೊಂದು ಪೊಂಪುೞಿಯನೆ ನೋಡಿ, ನಾಡೆ ಕರುಣಂ ತನಗಾಗಿರೆ, ಕೊಂತಿ ಚಿಂತೆಯಿಂ)
(ಅಲ್ಲಿ ಮದುವೆಯಾಗದ, ಆದರೆ ಮದುವೆಯ ವಯಸ್ಸಿಗೆ ಬಂದ) ಹುಡುಗಿಯೊಬ್ಬಳು ಅಳುತ್ತಿದ್ದಳು; ಹಾರುವನ ಹೆಂಡತಿಯು ನೆಲದಲ್ಲಿ ಹೊರಳುತ್ತಾ, ಬಾಯಿಬಡಿದುಕೊಂಡು ಚೀರಾಡುತ್ತಿದ್ದಳು; ಆಚೀಚೆ ಓಡಾಡುತ್ತಿದ್ದ ತಂದೆಯ ಕೊರಳಿಗೆ ಜೋತುಬಿದ್ದ ಬಾಲಕನು ಕಣ್ಣೀರು ಸುರಿಸುತ್ತಿದ್ದನು; ಬ್ರಾಹ್ಮಣನು ತೀವ್ರವಾಗಿ ದುಃಖಿಸುತ್ತಾ ಚಿಂತಾಕ್ರಾಂತನಾಗಿದ್ದನು. (ಇದೆಲ್ಲವನ್ನೂ ಕಂಡು) ಕುಂತಿಯ ಮನಸ್ಸಿನಲ್ಲಿ ಕರುಣೆಯು ಉಕ್ಕಿ ಬಂತು. ಅವಳು ಚಿಂತೆಯಿಂದ
ವ|| ನಿನಗಿಂತೀ ಪಿರಿದು ಶೋಕಮೆಂತಾದುದೆಂಬುದುಮಾ ಪಾರ್ವಂ ಕೊಂತಿಗಿಂತೆಂದಂ ಬಕನೆಂಬನೊರ್ವಸುರನೀ ಪೊೞಲ ತೆಂಕಣ ಬೆಟ್ಟದೊಳಿರ್ಪನಾತಂಗೆ ನಿಚ್ಚಮೊಂದು ಮನೆಯೊಳೆರಡೆಮ್ಮೆವೋಱಿಯೊಳ್ ಪೂಡಿದ ಪನ್ನಿರ್ಕಂಡುಗದಕ್ಕಿಯ ಕೂೞುಮನದರ್ಕೆ ತಕ್ಕ ಪರಿಕರಮುಮನೊರ್ವ ಮಾನಸಂ ಕೊಂಡು ಪೋಪನಂತಾತಂಬೆರಸದೆಲ್ಲಮಂ ತಿಂದು ತಣಿಯದೆ ಪಲ್ಲಂ ತಿಂಬನದೊಂದು ದಿವಸ ತಪ್ಪಿದೊಡೀ ಪೊೞಲನಿತುಮಂ ತಿಂಬಂ ನಾಳಿನ ಬಾರಿಯೆಮ್ಮ ಮೇಲೆ ಬಂದುದೆಮ್ಮ ಮನೆಯೊಳಾನುಮೆಮ್ಮ ಧರ್ಮಪತ್ನಿಯುಂ ಮಗನುಂ ಮಗಳುಮಿಂತೀ ನಾಲ್ವರೆ ಮಾನಸರೆಮ್ಮ ಪೆಂಡತಿಯನೀವೆನೆಪ್ಪೊಡಾಕೆಯಿಂ ಬೞಿಯಿಮೀ ಕೂಸುಗಳಂ ನಡಪುವರಿಲ್ಲ ಮಗಳನೀವೆನಪ್ಪೊಡೆ ಕೊಡಗೂಸೆಂಬುದು ಪೆಱರೊಡವೆ ಮಗನನೀವೆನಪ್ಪೊಡೆ ಸಂತತಿಚ್ಛೇದಮುಂ ಪಿಂಡಚ್ಛೇದಮುಮಕ್ಕುಮದಱಿಂದೆನ್ನನೆ ಕುಡಲ್ವೇೞ್ಕುಮೆಂಬುದುಂ ಕೊಂತಿಯಿಂತೆಂದಳ್-
 (‘ನಿನಗೆ ಇಂತು ಈ ಪಿರಿದು ಶೋಕಂ ಎಂತಾದುದು?’ ಎಂಬುದುಂ ಆ ಪಾರ್ವಂ ಕೊಂತಿಗೆ ಇಂತೆಂದಂ: ‘ಬಕನೆಂಬನ್ ಒರ್ವ ಅಸುರನ್ ಈ ಪೊೞಲ ತೆಂಕಣ ಬೆಟ್ಟದೊಳ್ ಇರ್ಪನ್. ಆತಂಗೆ ನಿಚ್ಚಂ ಒಂದು ಮನೆಯೊಳ್ ಎರಡು ಎಮ್ಮೆವೋಱಿಯೊಳ್ ಪೂಡಿದ ಪನ್ನಿರ್ಕಂಡುಗದ ಅಕ್ಕಿಯ ಕೂೞುಮನ್ ಅದರ್ಕೆ ತಕ್ಕ ಪರಿಕರಮುಮನ್ ಒರ್ವ ಮಾನಸಂ ಕೊಂಡು ಪೋಪನ್. ಅಂತು ಆತಂ ಬೆರಸು ಅದೆಲ್ಲಮಂ ತಿಂದು ತಣಿಯದೆ ಪಲ್ಲಂ ತಿಂಬನ್. ಅದು ಒಂದು ದಿವಸಂ ತಪ್ಪಿದೊಡೆ ಈ ಪೊೞಲ್ ಅನಿತುಮಂ ತಿಂಬಂ. ನಾಳಿನ ಬಾರಿ ಎಮ್ಮ ಮೇಲೆ ಬಂದುದು. ಎಮ್ಮ ಮನೆಯೊಳ್ ಆನುಂ, ಎಮ್ಮ ಧರ್ಮಪತ್ನಿಯುಂ, ಮಗನುಂ, ಮಗಳುಂ ಇಂತೀ ನಾಲ್ವರೆ ಮಾನಸರ್. ಎಮ್ಮ ಪೆಂಡತಿಯನ್ ಈವೆನ್ ಅಪ್ಪೊಡೆ ಆಕೆಯಿಂ ಬೞಿಯಿಂ ಈ ಕೂಸುಗಳಂ ನಡಪುವರಿಲ್ಲ.  ಮಗಳನ್ ಈವೆನ್ ಅಪ್ಪೊಡೆ ಕೊಡಗೂಸು ಎಂಬುದು ಪೆಱರ ಒಡವೆ. ಮಗನನ್ ಈವೆನ್ ಅಪ್ಪೊಡೆ ಸಂತತಿಚ್ಛೇದಮುಂ ಪಿಂಡಚ್ಛೇದಮುಂ ಅಕ್ಕುಂ. ಅದಱಿಂ ಎನ್ನನೆ ಕುಡಲ್ವೇೞ್ಕುಂ’ ಎಂಬುದುಂ ಕೊಂತಿ ಇಂತೆಂದಳ್)
‘ನಿನಗೆ ಇಂತಹ ಹಿರಿದಾದ ದುಃಖವು ಹೇಗೆ ಉಂಟಾಯಿತು?’ ಎಂದಾಗ ಆ ಹಾರುವನು ಕುಂತಿಗೆ ಹೀಗೆಂದನು: ‘ಈ ಊರಿನ ದಕ್ಷಿಣಕ್ಕಿರುವ ಬೆಟ್ಟದಲ್ಲಿ ಬಕನೆಂಬ ಒಬ್ಬ ರಾಕ್ಷಸನಿದ್ದಾನೆ. ಅವನಿಗೆ ನಿತ್ಯವೂ ಒಂದು ಮನೆಯಿಂದ ಎರಡು ಕೋಣಗಳನ್ನು ಹೂಡಿದ (ಗಾಡಿಯಲ್ಲಿ) ಹನ್ನೆರಡು ಖಂಡುಗ ಅಕ್ಕಿಯ ಅನ್ನವನ್ನೂ ಅದಕ್ಕೆ ತಕ್ಕ ಮೇಲೋಗರಗಳನ್ನೂ ಒಬ್ಬ ಮನುಷ್ಯನು ತೆಗೆದುಕೊಂಡು ಹೋಗುತ್ತಾನೆ. ರಾಕ್ಷಸನು ಆ ಮನುಷ್ಯನೂ ಸೇರಿದಂತೆ ಅದೆಲ್ಲವನ್ನೂ ತಿಂದು, ಸಾಕಾಗದೆ, ಹಲ್ಲು ಕಡಿಯುತ್ತಾನೆ! ಇದು ಒಂದು ದಿವಸ ತಪ್ಪಿದರೂ ಅವನು ಇಡೀ ಊರನ್ನೇ ನುಂಗಿಬಿಡುತ್ತಾನೆ. ನಾಳೆಯ ಸರದಿ ನಮ್ಮ ಮೇಲೆ ಬಂದಿದೆ. ನಮ್ಮ ಮನೆಯಲ್ಲಿ ನಾನು, ನನ್ನ ಧರ್ಮಪತ್ನಿ, ಮಗ, ಮಗಳು ಹೀಗೆ ನಾಲ್ಕೇ ಜನ ಇರುವುದು. ನನ್ನ ಹೆಂಡತಿಯನ್ನು ಕೊಡುವೆನೆಂದರೆ, ಆಕೆ ಹೋದ ಮೇಲೆ ಈ ಮಕ್ಕಳನ್ನು ಸಾಕುವವರಿಲ್ಲ. ಮಗಳನ್ನು ಕೊಡುವೆನೆಂದರೆ ಎಳೆಯ ಹೆಣ್ಣು ಬೇರೊಬ್ಬರ ವಸ್ತು. (ಎಂದರೆ ಮದುವೆಯಾಗಿ ಬೇರೊಬ್ಬರ ಮನೆಗೆ ಹೋಗಬೇಕಾದವಳು.) ಮಗನನ್ನು ಕೊಡುವೆನೆಂದರೆ ನನ್ನ ಸಂತತಿ ತುಂಡಾಗುತ್ತದೆ, ನನಗೆ ಪಿಂಡ ಹಾಕುವವರು ಇಲ್ಲವಾಗುತ್ತದೆ. ಹಾಗಾಗಿ ನಾನೇ ಹೋಗಬೇಕಾಗಿದೆ’ ಎಂದಾಗ ಕುಂತಿಯು ಹೀಗೆಂದಳು:
ಕಂ|| ನಿಮ್ಮೀ ನಾಲ್ವರೊಳೊರ್ವರು
     ಮಿಮ್ಮಿಡುಕಲ್ವೇಡ ಮಕ್ಕಳೊಳರೆನಗಯ್ವರ್|
     ತಮ್ಮೊಳಗೆಸೆವಯ್ವರೊಳಂ
     ನಾಮ್ಮಾಣದೆ ಬಕನ ಬಾರಿಗೊರ್ವನನೀವೆಂ|| ೨೬||
(‘ನಿಮ್ಮೀ ನಾಲ್ವರೊಳ್ ಒರ್ವರುಂ ಇಂ ಮಿಡುಕಲ್ ಬೇಡ, ಮಕ್ಕಳ್ ಒಳರ್ ಎನಗೆ ಅಯ್ವರ್;    ತಮ್ಮೊಳಗೆ ಎಸೆವ ಅಯ್ವರೊಳಂ ನಾಂ ಮಾಣದೆ ಬಕನ ಬಾರಿಗೆ ಒರ್ವನನ್ ಈವೆಂ’)
‘ನೀವು ನಾಲ್ವರಲ್ಲಿ ಯಾರೊಬ್ಬರೂ ಇನ್ನು ಹೆದರದಿರಿ! ನನಗೆ ಐವರು ಮಕ್ಕಳಿದ್ದಾರೆ! ಧೀರರಾದ ಅವರ ಪೈಕಿ ಒಬ್ಬನನ್ನು ನಾನು ಬಕನ ಬಳಿಗೆ ಕಳಿಸಿಕೊಡುತ್ತೇನೆ!’ ಎಂದಳು.
ವ||ಎಂಬುದುಂ ಪಾರ್ವನಿಂತೆನಲ್ವೇಡ ಮಕ್ಕಳೊಳಾದ ಮೋಹಮೆಲ್ಲಾ ಜೀವಕ್ಕಂ ಸಮಾನಮೆಂಬುದುಂ ನೀಮಱೆಯಿರುಸಿರದಿರಿಮದರ್ಕೆ ತಕ್ಕ ಸವಕಟ್ಟಂ ಮಾಡಿಮೆಂದು ಬಂದು ತದ್ವೃತ್ತಾಂತಮೆಲ್ಲಮಂ ಭೀಮಸೇನಂಗಱಿಪಿದೊಡೆ ನಾಳಿನುಣಿಸನೆನಗೆ ದೊರೆಕೊಳಿಸಿ ಬಂದುದು ಕರಮೊಳ್ಳಿತಾಯ್ತೆಂದು ನಗುತಿರ್ಪನ್ನೆಗಂ ಮತ್ತಿನ ನಾಲ್ವರುಂ ಬಂದು ತದ್ವೃತ್ತಾಂತಮೆಲ್ಲಮಂ ಕೇಳ್ದು ನಮಗೀ ಪೊೞಲೊಳೊಂದು ಪರೋಪಕಾರಾರ್ಥಂ ಸಯ್ಪಿನಿಂ ದೊರೆಕೊಂಡುದೆಂದಿರುಳೆಲ್ಲಂ ಬಕನ ಪಡೆಮಾತನೆ ನುಡಿಯುತ್ತಿರ್ಪನ್ನೆಗಂ-
ಎಂಬುದುಂ, ಪಾರ್ವನ್ ‘ಇಂತು ಎನಲ್ವೇಡ! ಮಕ್ಕಳೊಳ್ ಆದ ಮೋಹಂ ಎಲ್ಲಾ ಜೀವಕ್ಕಂ ಸಮಾನಂ’ ಎಂಬುದುಂ, ‘ನೀಮಱೆಯಿರಿ! ಉಸಿರದಿರಿಂ. ಅದರ್ಕೆ ತಕ್ಕ ಸವಕಟ್ಟಂ ಮಾಡಿಂ’ ಎಂದು ಬಂದು ತದ್ವೃತ್ತಾಂತಮೆಲ್ಲಮಂ ಭೀಮಸೇನಂಗೆ ಅಱಿಪಿದೊಡೆ ‘ನಾಳಿನ ಉಣಿಸನ್ ಎನಗೆ ದೊರೆಕೊಳಿಸಿ ಬಂದುದು ಕರಂ ಒಳ್ಳಿತಾಯ್ತು’ ಎಂದು ನಗುತಿರ್ಪನ್ನೆಗಂ, ಮತ್ತಿನ ನಾಲ್ವರುಂ ಬಂದು ತದ್ವೃತ್ತಾಂತಮೆಲ್ಲಮಂ ಕೇಳ್ದು ‘ನಮಗೆ ಈ ಪೊೞಲೊಳ್ ಒಂದು ಪರೋಪಕಾರಾರ್ಥಂ ಸಯ್ಪಿನಿಂ ದೊರೆಕೊಂಡುದು’ ಎಂದು ಇರುಳೆಲ್ಲಂ ಬಕನ ಪಡೆಮಾತನೆ ನುಡಿಯುತ್ತಿರ್ಪನ್ನೆಗಂ-)
ಎಂದಾಗ ಹಾರುವನು ‘ಹೀಗೆನ್ನಬೇಡ! ಮಕ್ಕಳ ಮೋಹವು ಎಲ್ಲ ಜೀವಿಗಳಿಗೂ ಸಮಾನವಾದುದು’ ಎಂದನು. ಕುಂತಿಯು ‘ನಿಮಗೆ ಗೊತ್ತಿಲ್ಲ॒! ಸುಮ್ಮನಿರಿ! (ನೀವು) ನಾಳೆಗೆ ಬೇಕಾದ ಏರ್ಪಾಟುಗಳನ್ನು ಮಾಡಿ’ ಎಂದು ಹೇಳಿ, (ತನ್ನ ಮನೆಗೆ) ಬಂದು ಆ ಸಂಗತಿ ಎಲ್ಲವನ್ನೂ ಭೀಮಸೇನನಿಗೆ ತಿಳಿಸಿದಾಗ ಅವನು ‘ನಾಳಿನ ಊಟವನ್ನು ನನಗೆ ಸಿಗುವಂತೆ ಮಾಡಿಬಂದುದು ತುಂಬಾ ಒಳ್ಳೆಯದಾಯಿತು!’ ಎಂದು ನಗುತ್ತಿದ್ದನು. ಆಗ ಉಳಿದ ನಾಲ್ವರೂ ಬಂದು, ಎಲ್ಲ ಸಂಗತಿಯನ್ನೂ ಕೇಳಿ, ‘ನಮಗೆ ಈ ಊರಿನಲ್ಲಿ ಒಂದು ಪರೋಪಕಾರ ಮಾಡುವ ಅವಕಾಶವು ಪುಣ್ಯದಿಂದ ಸಿಕ್ಕಿತು’ ಎಂದು ರಾತ್ರಿಯೆಲ್ಲವೂ ಬಕನ ಸಮಾಚಾರವನ್ನೇ ಮಾತಾಡುತ್ತಿದ್ದಾಗ-
ಕಂ|| ಓಡೆ ತಮೋಬಳಮಗಿದ
     ಳ್ಳಾಡೆ ನಿಶಾಚರಬಲಂ ರಥಾಂಗಯುಗಂಗಳ್|
     ಕೂಡೆ ಬಗೆ ಕೂಡೆ ನೇಸಱ್
     ಮೂಡಿದುದು ಬಕಂಗೆ ಮಿೞ್ತು ಮೂಡುವ ತೆಱದಿಂ|| ೨೭||
(ಓಡೆ ತಮೋಬಳಂ, ಅಗಿದು ಅಳ್ಳಾಡೆ ನಿಶಾಚರಬಲಂ, ರಥಾಂಗಯುಗಂಗಳ್ ಕೂಡೆ ಬಗೆ ಕೂಡೆ, ನೇಸಱ್ ಮೂಡಿದುದು ಬಕಂಗೆ ಮಿೞ್ತು ಮೂಡುವ ತೆಱದಿಂ)
ಕತ್ತಲೆಯು ಓಡಿ ಹೋಯಿತು. ನಿಶಾಚರರು ಹೆದರಿ ಓಡಿದರು. ಚಕ್ರವಾಕ ಪಕ್ಷಿಗಳು ಜೊತೆಗೂಡುವ ಒಲವು ತೋರಿದವು. ಮೂಡು ದಿಕ್ಕಿನಲ್ಲಿ, ಬಕನಿಗೆ ಸಾವು ಹುಟ್ಟುವ ಹಾಗೆ ಸೂರ್ಯನು ಮೂಡಿದನು.
ವ|| ಆಗಳ್ ಸಾಹಸಭೀಮಂ ತನ್ನ ಸಾಹಸಮಂ ತೋಱಲೆಂದು ಬಂದು ಪಾರ್ವನ ಮನೆಯ ಮುಂದಣ ಬಂಡಿಯ ಕೂೞಂ ಕೆಯ್ಕೊಂಡು ನಿಲ್ವುದುಂ ಪಾರ್ವಂತಿಯುಂ ಪಾರ್ವನುಂ ಪರಸಿ ಸೇಸೆಯನಿಕ್ಕಿ ಕಳಿಪೆ ಪೊೞಲಿಂ ಬಂಡಿಯನಟ್ಟಿಕೊಂಡು ರಕ್ಕಸನಿರ್ದೆಡೆಗೆಯ್ತಂದು-
(ಆಗಳ್ ಸಾಹಸಭೀಮಂ, ತನ್ನ ಸಾಹಸಮಂ ತೋಱಲೆಂದು, ಬಂದು ಪಾರ್ವನ ಮನೆಯ ಮುಂದಣ ಬಂಡಿಯ ಕೂೞಂ ಕೆಯ್ಕೊಂಡು ನಿಲ್ವುದುಂ, ಪಾರ್ವಂತಿಯುಂ ಪಾರ್ವನುಂ ಪರಸಿ ಸೇಸೆಯನಿಕ್ಕಿ ಕಳಿಪೆ, ಪೊೞಲಿಂ ಬಂಡಿಯನ್ ಅಟ್ಟಿಕೊಂಡು ರಕ್ಕಸನ್ ಇರ್ದ ಎಡೆಗೆ ಎಯ್ತಂದು)
ಆಗ ಸಾಹಸಭೀಮನು ತನ್ನ ಸಾಹಸವನ್ನು ತೋರಿಸಲೆಂದು, ಹಾರುವನ ಮನೆಯ ಮುಂದೆ ಸಜ್ಜಾಗಿ ನಿಂತಿದ್ದ ಗಾಡಿಯ ಹತ್ತಿರ ಬಂದು ನಿಂತನು. ಹಾರುವನೂ ಅವನ ಮಡದಿಯೂ ಭೀಮನನ್ನು ಹರಸಿ ಮಂತ್ರಾಕ್ಷತೆ ಹಾಕಿ ಕಳಿಸಿಕೊಟ್ಟರು. ಭೀಮನು ಊರಿನಿಂದ ಬಂಡಿಯನ್ನು ಅಟ್ಟಿಕೊಂಡು ರಾಕ್ಷಸನಿದ್ದಲ್ಲಿಗೆ ಬಂದು-


ಶನಿವಾರ, ನವೆಂಬರ್ 9, 2019




ಪಂಪಭಾರತ ಆಶ್ವಾಸ ೩ ಪದ್ಯಗಳು ೧೨-೨೦

ಎಂದು ನುಡಿಯುತ್ತಿದ್ದಂತೆ ತಾವರೆಯ ಬಂಧುವು ಉದಯಾಚಲ ಪರ್ವತದ ನೆತ್ತಿಯಲ್ಲಿ ಕಾಣಿಸಿಕೊಂಡನು. ಆಗ, ಆ ಕಾಡನ್ನು ಆಳುವ ಹಿಡಿಂಬನೆಂಬುವನು, ಪಾಂಡವರು ಬಂದಿರುವುದನ್ನು ತಿಳಿದು, ತನ್ನ ತಂಗಿ ಹಿಡಿಂಬೆಯನ್ನು ಕರೆದು-
ಕಂ|| ನಿಡಿಯರ್ ಬಲ್ಲಾಯದ ಬ
     ಲ್ಡಡಿಗರ್ ವಂದಿರ್ದರಯ್ವರಾಲದ ಕೆೞಗಿಂ|
     ತೊಡರ್ದರ್ ನಮ್ಮಯ ಭಕ್ಷದೊ
     ಳಡು ಪಣ್ಣಿಡು ಪೋಗು ನೀನುಮಾನುಂ ತಿಂಬಂ|| ೧೨||
(ನಿಡಿಯರ್, ಬಲ್ಲಾಯದ ಬಲ್ಡಡಿಗರ್, ವಂದಿರ್ದರ್ ಅಯ್ವರ್ ಆಲದ ಕೆೞಗೆ, ಇಂ ತೊಡರ್ದರ್, ನಮ್ಮಯ ಭಕ್ಷದೊಳ್ ಅಡು, ಪಣ್ಣಿಡು, ಪೋಗು, ನೀನುಂ ಆನುಂ ತಿಂಬಂ)
ಆಲದ ಮರದ ಕೆಳಗೆ ಐದು ಜನ ಉದ್ದುದ್ದದ ಆಳುಗಳು, ಭಾರೀ ಧಾಂಡಿಗರು ಬಂದಿದ್ದಾರೆ. ಅವರಿನ್ನು (ನಮ್ಮ ಕೈಗೆ) ಸಿಕ್ಕಿಬಿದ್ದ ಹಾಗೆಯೇ. ಹೋಗು. ನಮ್ಮ ಇವತ್ತಿನ ಊಟಕ್ಕೆ ಅವರನ್ನು ಬೇಯಿಸಿ ಅಣಿ ಮಾಡು. ನೀನೂ ನಾನೂ ಸೇರಿ ತಿನ್ನೋಣ.
ವ|| ಎಂಬುದುಮಂತೆಗೆಯ್ವೆನೆಂದು-
(ಎಂಬುದುಂ ‘ಅಂತೆ ಗೆಯ್ವೆನ್’ ಎಂದು)
ಎಂದಾಗ ‘ಹಾಗೆಯೇ ಮಾಡುತ್ತೇನೆ’ ಎಂದು,
ಕಂ|| ಆಗಸದೊಳಗೊಂದು ಮಹೀ
     ಭಾಗದೊಳಿನ್ನೊಂದು ದಾಡೆಯಾಗಿರೆ ಮನದಿಂ|
     ಬೇಗಂ ಬರ್ಪಳ ದಿಟ್ಟಿಗ
     ಳಾಗಳೆ ಪತ್ತಿದುವು ಗೆಂಟಱೊಳ್ ಮಾರುತಿಯಂ|| ೧೩ ||
.(ಆಗಸದೊಳಗೆ ಒಂದು, ಮಹೀಭಾಗದೊಳ್ ಇನ್ನೊಂದು ದಾಡೆಯಾಗಿರೆ, ಮನದಿಂ ಬೇಗಂ ಬರ್ಪಳ ದಿಟ್ಟಿಗಳ್ ಆಗಳೆ ಪತ್ತಿದುವು ಗೆಂಟಱೊಳ್ ಮಾರುತಿಯಂ)
ಆಗಸದಲ್ಲಿ ಒಂದು ದವಡೆ, ನೆಲದಲ್ಲೊಂದು ದವಡೆ ಎಂಬಷ್ಟು ಅಗಲವಾಗಿ ಬಾಯಿ ತೆರೆದುಕೊಂಡು, ಮನೋವೇಗದಲ್ಲಿ ಬರುತ್ತಿದ್ದ ಅವಳ ಕಣ್ಣುಗಳು ದೂರದಿಂದಲೇ ಭೀಮನಿಗೆ ಅಂಟಿಕೊಂಡವು!
ವ|| ಅಂತೊಂದಂಬುವೀಡಿನೆಡೆಯೊಳ್ ಕಾಮನಂಬುವೀಡಿಂಗೊಳಗಾಗಿ ತಾಂ ಕಾಮರೂಪೆಯಪ್ಪುದಱಿಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಕೊಂಡು ತನ್ನತ್ತ ಮೊಗದೆ ಬರ್ಪಳಂ  ಕಂಡು-
 (ಅಂತು ಒಂದು ಅಂಬುವೀಡಿನ ಎಡೆಯೊಳ್ ಕಾಮನ ಅಂಬುವೀಡಿಂಗೆ ಒಳಗಾಗಿ, ತಾಂ ಕಾಮರೂಪೆ ಅಪ್ಪುದಱಿಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಕೊಂಡು, ತನ್ನತ್ತ ಮೊಗದೆ ಬರ್ಪಳಂ  ಕಂಡು)
ಹಾಗೆ, ಒಂದು ಬಾಣವು ಕ್ರಮಿಸುವ ದೂರದಲ್ಲಿ ಕಾಮಬಾಣದ ಪೆಟ್ಟಿಗೆ ಸಿಕ್ಕಿಬಿದ್ದು, ತಾನು ಬಯಸಿದ ರೂಪವನ್ನು ತಳೆಯುವ ಶಕ್ತಿ ಇದ್ದವಳಾದ್ದರಿಂದ, ದೇವಕನ್ಯೆಯ ರೂಪು ತಳೆದು ತನ್ನತ್ತಲೇ ಬರುತ್ತಿರುವ ಅವಳನ್ನು ಕಂಡು-
ಕಂ|| ಖೇಚರಿಯೋ ಭೂಚರಿಯೊ ನಿ
     ಶಾಚರಿಯೋ ರೂಪು ಬಣ್ಣಿಸಲ್ಕಾರ್ಗಮವಾ|
     ಗ್ಗೋಚರಮೀ ಕಾನನಮುಮ
     ಗೋಚರಮಿವಳಿಲ್ಲಿಗೇಕೆ ಬಂದಳೊ ಪೇೞಿಂ||೧೪||
(ಖೇಚರಿಯೋ? ಭೂಚರಿಯೊ? ನಿಶಾಚರಿಯೋ? ರೂಪು ಬಣ್ಣಿಸಲ್ಕೆ ಆರ್ಗಂ ಅವಾಕ್ ಗೋಚರಂ, ಈ  ಕಾನನಮುಂ ಅಗೋಚರಂ, ಇವಳ್ ಇಲ್ಲಿಗೇಕೆ ಬಂದಳೊ ಪೇೞಿಂ!)
ಆಕಾಶದಲ್ಲಿ ಚಲಿಸುವವಳೋ? ನೆಲದ ಮೇಲೆ ತಿರುಗುವವಳೋ? ಕತ್ತಲಲ್ಲಿ ಓಡಾಡುವವಳೋ? (ಯಾರಾದರೇನಂತೆ?) ಇವಳ ರೂಪವನ್ನು ವರ್ಣಿಸುವುದು ಮಾತ್ರ ಯಾರ ನಾಲಗೆಗೂ ಸಾಧ್ಯವಲ್ಲ! ಈ ಕಾಡೋ? ಇದು ಯಾರಿಗೂ ಕಾಣದ ಸ್ಥಳ! ಹಾಗಿರುವಾಗ ಇವಳು ಇಲ್ಲಿಗೇಕೆ ಬಂದಳೋ? ಹೇಳಿರಿ!
ವ|| ಎಂಬನ್ನೆಗಮಾಕೆ ಮದನನ ಕೆಯ್ಯಿಂ ಬರ್ದುಂಕಿದರಲಂಬು ಬರ್ಪಂತೆ ಬಂದು ಭೀಮಸೇನನ ಕೆಲದೊಳ್ ಕುಳ್ಳಿರೆ ನೀನಾರ್ಗೇನೆಂಬೆಯೇಕೆ ಬಂದೆಯೆಂದೊಡಾಕೆಯೆಂದಳೆರಡಱಿಯದೊಲ್ದು ನಿನ್ನೊಳೆರಡಂ ನುಡಿಯಲಾಗದೆನಗೆ ಯೀ ಬನಂ ಹಿಡಿಂಬವನಮೆಂಬುದಿದನಾಳ್ವಂ ಹಿಡಿಂಬನೆಂಬಸುರನೆಮ್ಮಣ್ಣನಾನುಂ ಹಿಡಿಂಬೆಯೆನೆಂಬೆನಾತನ ಬೆಸದಿಂ ನಿಮ್ಮಿನಿಬರುಮಂ-
(ಎಂಬನ್ನೆಗಂ ಆಕೆ ಮದನನ ಕೆಯ್ಯಿಂ ಬರ್ದುಂಕಿದ ಅರಲಂಬು ಬರ್ಪಂತೆ ಬಂದು, ಭೀಮಸೇನನ ಕೆಲದೊಳ್ ಕುಳ್ಳಿರೆ, ‘ನೀನಾರ್ಗೆ? ಏನೆಂಬೆ? ಏಕೆ ಬಂದೆ?’ ಎಂದೊಡೆ ಆಕೆಯೆಂದಳ್ ‘ಎರಡಱಿಯದೆ ಒಲ್ದು ನಿನ್ನೊಳ್ ಎರಡಂ ನುಡಿಯಲಾಗದು ಎನಗೆ, ಯೀ ಬನಂ ಹಿಡಿಂಬವನಂ ಎಂಬುದು, ಇದನ್ ಆಳ್ವಂ ಹಿಡಿಂಬನೆಂಬ ಅಸುರನ್ ಎಮ್ಮಣ್ಣನ್, ಆನುಂ ಹಿಡಿಂಬೆಯೆನ್ ಎಂಬೆನ್. ಆತನ ಬೆಸದಿಂ ನಿಮ್ಮಿನಿಬರುಮಂ-)
ಎಂದುಕೊಳ್ಳುತ್ತಿರುವಂತೆಯೇ, ಅವಳು ಮನ್ಮಥನ ಕೈಯಿಂದ ತಪ್ಪಿಸಿಕೊಂಡ ಹೂ ಬಾಣದಂತೆ ಬಂದು ಭೀಮನ ಪಕ್ಕದಲ್ಲಿಯೇ ಕೂತುಕೊಂಡಳು! ಭೀಮನು ‘ನೀನು ಯಾರು? ನಿನ್ನ ಹೆಸರೇನು? ಏಕೆ ಬಂದೆ?’ ಎಂದು ಅವಳನ್ನು ಕೇಳಿದಾಗ ಅವಳು ‘ಕಪಟವಿಲ್ಲದೆ ನಿನ್ನನ್ನು ಒಲಿದಿದ್ದೇನೆ. ನಿನ್ನಲ್ಲಿ ಸುಳ್ಳು ಹೇಳಲಾರೆ! ಇದು ಹಿಡಿಂಬವನ. ಇದರ ಒಡೆಯ ಹಿಡಿಂಬನೆಂಬ ರಕ್ಕಸ, ನಮ್ಮಣ್ಣ. ನಾನು ಹಿಡಿಂಬೆ. ಅವನ ಅಪ್ಪಣೆಯಂತೆ ನಿಮ್ಮೆಲ್ಲರನ್ನೂ-
ಕಂ|| ಪಿಡಿದಡಸಿ ತಿನಲ್ ಬಂದಿ
     ರ್ದೆಡೆಯೊಳ್ ನಿನಗಾಗಿ ಮದನನೆನ್ನನೆ ತಿನೆ ಕೇಳ್|
     ಪಡೆ ನೋಡಲ್ ಬಂದವರಂ
     ಗುಡಿವೊಱೆಸಿದರೆಂಬುದಾಯ್ತು ನಿನ್ನೆನ್ನೆಡೆಯೊಳ್|| ೧೫||
(ಪಿಡಿದು ಅಡಸಿ ತಿನಲ್ ಬಂದಿರ್ದ ಎಡೆಯೊಳ್, ನಿನಗಾಗಿ ಮದನನ್ ಎನ್ನನೆ ತಿನೆ, ಕೇಳ್ ಪಡೆ ನೋಡಲ್ ಬಂದವರಂ ಗುಡಿವೊಱೆಸಿದರ್ ಎಂಬುದಾಯ್ತು ನಿನ್ನ ಎನ್ನ ಎಡೆಯೊಳ್’)
ಹಿಡಿದು ಬಾಯೊಳಗೆ ತುರುಕಿಕೊಂಡು ತಿಂದು ಮುಗಿಸಲೆಂದು ನಾನು ಇಲ್ಲಿಗೆ ಬಂದವಳು. ಆದರೆ ಈಗ ನಿನ್ನನ್ನು ಕಂಡಮೇಲೆ, ಮನ್ಮಥನು ನನ್ನನ್ನೇ ತಿಂದಂತಾಗಿದೆ! ‘ದಂಡು ನೋಡಲು ಹೋದವನ ಕೈಯಲ್ಲಿ ಬಾವುಟ ಹೊರಿಸಿದರು’ ಎಂದಂತಾಯಿತು ನೋಡು ನಿನ್ನನ್ನು ಕಂಡ ನನ್ನ  ಕಥೆ!
(ಪಡೆ ನೋಡಲ್ ಬಂದವರಂ ಗುಡಿವೊಱೆಸಿದರ್: ‘ಯುದ್ಧ ನಡೆಯುತ್ತದಂತೆ, ಹೇಗಿದೆಯೋ ನೋಡಿ ಬರೋಣ’ ಎಂದು, ಚೆಂದ ನೋಡಲು ಅಲ್ಲಿಗೆ ಹೋದವನನ್ನು ಅಲ್ಲಿದ್ದವರು ಹಿಡಿದುಕೊಂಡರು! ಅಷ್ಟೇ ಅಲ್ಲ ಅವನ ಕೈಯಲ್ಲೇ ಧ್ವಜವನ್ನು ಕೊಟ್ಟು ಸೈನ್ಯದ ಮುಂಭಾಗದಲ್ಲಿ ನಿಲ್ಲಿಸಿ, ಸೈನ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನೇ ಹೊರಿಸಿದರು. ತನ್ನ ಕಥೆಯೂ ಹೀಗೇ ಆಯಿತಲ್ಲ ಎಂದು ಹಿಡಿಂಬೆಯ ಅಂಬೋಣ.)
ವ|| ಎಂದೀ ಮಱಲುಂದಿದರಾರ್ಗೆಂದೊಡೆನ್ನ ತಾಯ್ವಿರುಮೊಡವುಟ್ಟಿದರೆಂದೊಡೆ ಹಿಡಿಂಬಂ ಬಂದವರಂ ತಿಂದೊಡಂ ತಿನ್ಗೆ ನೀನೆನ್ನ ಪೆಗಲನೇಱು ಗಗನತಳಕ್ಕುಯ್ವೆನೆನೆ ಭೀಮಸೇನನಾ ಮಾತಿಂಗೆ ಮುಗುಳ್ನಗೆ ನಕ್ಕು-
(ಎಂದು ‘ಈ ಮಱಲುಂದಿದರ್ ಆರ್ಗೆ? ಎಂದೊಡೆ ‘ಎನ್ನ ತಾಯ್ವಿರುಂ ಒಡವುಟ್ಟಿದರ್’ ಎಂದೊಡೆ ‘ಹಿಡಿಂಬಂ ಬಂದು ಅವರಂ ತಿಂದೊಡಂ ತಿನ್ಗೆ, ನೀನೆನ್ನ ಪೆಗಲನ್ ಏಱು, ಗಗನತಳಕ್ಕೆ ಉಯ್ವೆನ್’ ಎನೆ, ಭೀಮಸೇನನ್ ಆ ಮಾತಿಂಗೆ ಮುಗುಳ್ನಗೆ ನಕ್ಕು)
ಎಂದು ‘ಇದು ಯಾರು? ಇಲ್ಲಿ ಮಲಗಿದವರು?’ ಎಂದು ಕೇಳಿದಳು. ಭೀಮನು ‘ನನ್ನ ತಾಯಿ ಮತ್ತು ಒಡಹುಟ್ಟುಗಳು’ ಎಂದನು. ಹಿಡಿಂಬೆಯು ‘ಹಿಡಿಂಬನು ಬಂದು ಬೇಕಾದರೆ ಅವರನ್ನೆಲ್ಲ ತಿಂದು ಹಾಕಲಿ! ನೀನು ನನ್ನ ಹೆಗಲ ಮೇಲೆ ಕೂತುಕೋ. ಆಕಾಶಕ್ಕೆ ಒಯ್ಯುತ್ತೇನೆ’ ಎಂದಳು. ಭೀಮಸೇನನು ಆ ಮಾತಿಗೆ ಮುಗುಳ್ನಗೆ ನಕ್ಕು
ಚಂ|| ಅೞಿಪಿದೆಯಂತುಮಲ್ಲದೆ ನಿಶಾಚರಿಯೈ ನಿನಗಪ್ಪುದಪ್ಪುದೀ
     ಯೞಿನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋೞ್ಪಮಾತನೊ |
     ಡ್ಡೞಿಯದ ಗಂಡವಾತನೆನುತಂತಿರೆ ತಂಗೆಯ ಮಾಣ್ದುದರ್ಕವಂ
     ಮೊೞಗಿ ಸಿಡಿಲ್ದದೊಂದು ಸಿಡಿಲೇೞ್ಗೆಯಿನೆಯ್ತರೆ ವಂದು ಭೀಮನಂ|| ೧೬||
(ಅೞಿಪಿದೆ, ಅಂತುಂ ಅಲ್ಲದೆ ನಿಶಾಚರಿಯೈ, ನಿನಗೆ ಅಪ್ಪುದಪ್ಪುದು ಈ ಅೞಿನುಡಿ, ಬರ್ಕೆ, ನಿನ್ನ ಪಿರಿಯಣ್ಣನೆ? ಪಣ್ಣನೆ ನೋೞ್ಪಂ ಆತನ ಒಡ್ಡೞಿಯದ ಗಂಡವಾತನ್ ಎನುತೆ ಅಂತೆ ಇರೆ, ತಂಗೆಯ ಮಾಣ್ದುದರ್ಕೆ ಅವಂ  ಮೊೞಗಿ ಸಿಡಿಲ್ದು ಅದೊಂದು ಸಿಡಿಲೇೞ್ಗೆಯಿನ್ ಎಯ್ತರೆ ವಂದು, ಭೀಮನಂ)
‘ನಿನಗೆ ನನ್ನ ಮೇಲೆ ಕಣ್ಣು ಬಿದ್ದಿದೆ! ಅದೂ ಅಲ್ಲದೆ ನೀನು ಕತ್ತಲನಡೆ. ಇಂಥ ಕೆಟ್ಟಮಾತು ನಿನಗೆ ಒಪ್ಪುವಂಥಾದ್ದೇ! ಬರಲಿ! ಯಾರೆಂದಿ? ನಿನ್ನ ಹಿರಿಯಣ್ಣನೆ? ಅವನ ಮುಗಿಯದ ಬಡಾಯಿಯನ್ನೂ ಕೊಂಚ ಕೇಳೋಣ!’ ಎನ್ನುತ್ತಿರುವಂತೆಯೇ ತಂಗಿಯು ತಡಮಾಡಿದಳೆಂಬ ಸಿಟ್ಟಿನಿಂದ ಹಿಡಿಂಬನು ಗರ್ಜಿಸುತ್ತಾ ಸಿಡಿಲಿನಂತೆ ಭೀಮನ ಸಮೀಪಕ್ಕೆ  ಸಿಡಿದು ಬಂದು-
ವ|| ಕಂಡು ಕಣ್ಗಳಿಂ ಕೆಂಡದ ತಂಡಂಗಳುಮುರಿಯ ತಂಡಂಗಳುಂ ಸೂಸೆ ನೀನೊರ್ವಯೆನ್ನೊಳಗೇಂ ಕಾದುವೆ ಈ ಮಱಲುಂದಿದರನೆತ್ತಿನಿಬರುಮನೊರ್ಮೆಯೆ ಪೊಸೆದು ಮುಕ್ಕುವೆನೆನೆ ಸಾಹಸಭೀಮಂ ಮಲ್ಲಂತಿಗೆಯನಪ್ಪೊಡಂ ಸಡಲಿಸದವನನವಯವದೊಳಿಂತೆಂದಂ-
(ಕಂಡು ಕಣ್ಗಳಿಂ ಕೆಂಡದ ತಂಡಂಗಳುಂ ಉರಿಯ ತಂಡಂಗಳುಂ ಸೂಸೆ, ‘ನೀನೊರ್ವ ಎನ್ನೊಳಗೆ ಏಂ ಕಾದುವೆ? ಈ ಮಱಲುಂದಿದರನ್ ಎತ್ತು! ಇನಿಬರುಮನ್ ಒರ್ಮೆಯೆ ಪೊಸೆದು ಮುಕ್ಕುವೆನ್’ ಎನೆ ಸಾಹಸಭೀಮಂ ಮಲ್ಲಂತಿಗೆಯನ್ ಅಪ್ಪೊಡಂ ಸಡಲಿಸದೆ ಅವನನ್ ಅವಯವದೊಳ್ ಇಂತೆಂದಂ)
ಕಂಡು, ಕಣ್ಣುಗಳಿಂದ ಕೆಂಡದ ಉಂಡೆಗಳನ್ನೂ, ಬೆಂಕಿಯ ಜ್ವಾಲೆಗಳನ್ನೂ ಸುರಿಸುತ್ತಾ ‘ನೀನೊಬ್ಬನೇ ನನ್ನ ಜೊತೆ ಏನು ಯುದ್ಧ ಮಾಡೀಯೆ? ಮಲಗಿಕೊಂಡ ಇವರನ್ನೂ ಎಬ್ಬಿಸು! ಎಲ್ಲರನ್ನೂ ಒಟ್ಟಿಗೆ ಮುದ್ದೆ ಮಾಡಿ ಮುಕ್ಕಿಬಿಡುತ್ತೇನೆ’ ಎಂದನು. ಅದನ್ನು ಕೇಳಿದ ಭೀಮನು, ತನ್ನ ಕಾಚವನ್ನು ಸಹ ಬಿಗಿ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಅವನನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಹೀಗೆಂದನು:
ಕಂ|| ಏಂ ಗಾವಿಲನಯೊ ನಿನ್ನಂ
ನುಂಗುವುದರ್ಕಿವರನೆತ್ತವೇೞ್ಕುಮೆ ನೆರಮಂ|
ಸಂಗಳಿಸಲ್ವೇೞ್ಕುಮೆ ಮಾ
ತಂಗವಿರೋಧಿಗೆ ಕುರಂಗ ಸಂಗರ ಧರೆಯೊಳ್|| ೧೭||
(ಏಂ ಗಾವಿಲನಯೊ! ನಿನ್ನಂ ನುಂಗುವುದರ್ಕೆ ಇವರನ್ ಎತ್ತವೇೞ್ಕುಮೆ? ನೆರಮಂ ಸಂಗಳಿಸಲ್ ವೇೞ್ಕುಮೆ? ಮಾತಂಗವಿರೋಧಿಗೆ ಕುರಂಗ ಸಂಗರ ಧರೆಯೊಳ್?)
‘ಎಂಥ ಗಮಾರನೋ ನೀನು! ನಿನ್ನನ್ನು ನುಂಗಲು ಇವರನ್ನೆಲ್ಲ ಎಬ್ಬಿಸಬೇಕೆ? ಜನ ಸೇರಿಸಬೇಕೆ?  ಸಿಂಹಕ್ಕೆ ಎಂದಾದರೂ ಜಿಂಕೆಯೊಂದಿಗೆ ಯುದ್ಧವೆ?’
ವ|| ಎಂಬುದುಂ ಹಿಡಿಂಬನಾಡಂಬರಂಗೆಯ್ದು ತುಂಬುರುಕೊಳ್ಳಿಯಂತಂಬರಂಬರಂ ಸಿಡಿಲ್ದು-
(ಎಂಬುದುಂ ಹಿಡಿಂಬನ್ ಆಡಂಬರಂಗೆಯ್ದು ತುಂಬುರುಕೊಳ್ಳಿಯಂತೆ ಅಂಬರಂಬರಂ ಸಿಡಿಲ್ದು)
ಎನ್ನಲು ಹಿಡಿಂಬನು ಆಡಂಬರದಿಂದ ತೂಬರೆ ಮರದ ಕೊಳ್ಳಿಯಂತೆ ಆಕಾಶದವರೆಗೂ ಹಾರಾಡುತ್ತಾ-
ಚಂ|| ಕಡುಪಿನೆ ಪೊತ್ತು ಪಾಸರೆಯನೆಯ್ತರೆ ಭೀಮನುಮೊತ್ತಿ ಕಿಱ್ತು ಬೇ
     ರೊಡನೆ ಮಹೀಜಮೊಂದನಿಡೆಯುಂ ಬಿಡೆ ಪೊಯ್ಯೆಯುಮಾ ಬನಂ ಪಡ|
     ಲ್ವಡುತಿರೆ ಕಲ್ಲೊಳಂ ಮರದೊಳಂ ಬಡಿದೊಯ್ಯನೆ ಜೋಲ್ದ ದೈತ್ಯನಂ
     ಪಿಡಿದು ಮೃಣಾಳನಾಳಮನೆ ಸೀಳ್ವವೊಲೊರ್ಮೆಯೆ ಸೀಳ್ದು ಬೀಸಿದಂ|| ೧೮||
(ಕಡುಪಿನೆ ಪೊತ್ತು ಪಾಸರೆಯನ್ ಎಯ್ತರೆ, ಭೀಮನುಂ ಒತ್ತಿ ಕಿಱ್ತು ಬೇರೊಡನೆ ಮಹೀಜಂ ಒಂದನ್ ಇಡೆಯುಂ ಬಿಡೆ ಪೊಯ್ಯೆಯುಂ, ಆ ಬನಂ ಪಡಲ್ವಡುತಿರೆ ಕಲ್ಲೊಳಂ ಮರದೊಳಂ, ಬಡಿದು, ಒಯ್ಯನೆ ಜೋಲ್ದ ದೈತ್ಯನಂ ಪಿಡಿದು, ಮೃಣಾಳನಾಳಮನೆ ಸೀಳ್ವವೊಲ್ ಒರ್ಮೆಯೆ ಸೀಳ್ದು ಬೀಸಿದಂ)
ಒಂದು ಹಾಸುಬಂಡೆಯನ್ನು ಎತ್ತಿಕೊಂಡು ರಭಸದಿಂದ ಹತ್ತಿರಕ್ಕೆ ನುಗ್ಗಿ ಬಂದನು. ಭೀಮನೂ ಸಹ ಒಂದು ಮರವನ್ನು ಬೇರು ಸಮೇತ ಕಿತ್ತುಕೊಂಡು ಬೀಸಲು, ಕಲ್ಲು, ಮರಗಳ ಹೊಡೆತದಿಂದ ಆ ಕಾಡು ಚೆಲ್ಲಾಪಿಲ್ಲಿಯಾಯಿತು. ಭೀಮನು ಎಡೆಬಿಡದೆ ಹೊಡೆಯುತ್ತಿದ್ದಂತೆ, ಪೆಟ್ಟು ತಿಂದ ಹಿಡಿಂಬನು ಮೆಲ್ಲನೆ ನೆಲಕ್ಕೆ ಉರುಳಿದನು. ಭೀಮನು ಅವನನ್ನು ಹಿಡಿದು ಕಮಲದ ದಂಟನ್ನು ಸೀಳುವಂತೆ ಸೀಳಿ ಬಿಸಾಡಿದನು.
ವ|| ಆಗಳಾ ಕಳಕಳಕ್ಕೆ ಮಱಲುಂದಿದಯ್ವರುಮೆೞ್ಚತ್ತಿದೇನೆಂದು ಬೆಸಗೊಳೆ ತದ್ವೃತ್ತಾಂತ ಮೆಲ್ಲಮನಱಿಪಿ ಹಿಡಿಂಬೆ ಡಂಬಮಿಲ್ಲದೆ ಭೀಮಸೇನನೊಳಪ್ಪೊಡಂಬಡಂ ನುಡಿಯೆ ಕೊಂತಿಯುಂ ಧರ್ಮಪುತ್ರನುಮೀಕೆ ಸಾಮಾನ್ಯವನಿತೆಯಲ್ಲಿವಳ್ ರಾಕ್ಷಸಸ್ತ್ರೀಯೆಂದು ಭಾವಿಸಲ್ಬೇಡೀಕೆಯಂ ಕೆಯ್ಕೊಳ್ವುದೆ ಕಜ್ಜಮೆಂದಾಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ ಹಿಡಿಂಬೆ ನೀಮಿಲ್ಲಿರಲ್ವೇಡ ಪರ್ವತದ ಮೇಲೆ ಕಱಂಗಿ ಕೞ್ತಲಿಸಿದ ಮರದುಱುಗಲ ನಡುವೆ ಸುಧಾ ಧವಳಿತೋತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಬಿರಪ್ಟೊಡದು ಹಿಡಿಂಬಪುರಮೆಂಬುದೆಮ್ಮ ಪುರಮಲ್ಲಿಗೆ ಪೋಪಂ ಬನ್ನಿಮೆಂದು ಮುಂದಿಟ್ಟೊಡಗೊಂಡು ಪೋಗಿ ಮಹಾವಿಭೂತಿಯಿಂ ಪೊೞಲಂ ಪುಗಿಸಿ ತನ್ನ ಸಂಪತ್ತುಮಂ ಶ್ರೀಯುಮಂ ಮೆರೆದು ಮಜ್ಜನ ಭೋಜನ ತಾಂಬೂಲ ಲೇಪನಂಗಳಿಂ ಪಥಪರಿಶ್ರಮಮೆಲ್ಲಮಂ ಕಳೆದು ಭೀಮಸೇನನುಂ ತಾನುಂ-
(ಆಗಳ್ ಆ ಕಳಕಳಕ್ಕೆ ಮಱಲುಂದಿದ ಅಯ್ವರುಂ ಎೞ್ಚತ್ತು ‘ಇದೇನು?’ ಎಂದು ಬೆಸಗೊಳೆ, ತದ್ವೃತ್ತಾಂತಂ ಎಲ್ಲಮನ್ ಅಱಿಪಿ, ಹಿಡಿಂಬೆ, ಡಂಬಮಿಲ್ಲದೆ ಭೀಮಸೇನನೊಳ್ ಅಪ್ಪ ಒಡಂಬಡಂ ನುಡಿಯೆ, ಕೊಂತಿಯುಂ ಧರ್ಮಪುತ್ರನುಂ, ‘ಈಕೆ ಸಾಮಾನ್ಯವನಿತೆಯಲ್ಲ, ಇವಳ್ ರಾಕ್ಷಸಸ್ತ್ರೀಯೆಂದು ಭಾವಿಸಲ್ ಬೇಡ, ಈಕೆಯಂ ಕೆಯ್ಕೊಳ್ವುದೆ ಕಜ್ಜಂ’ ಎಂದು, ಆಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ, ಹಿಡಿಂಬೆ, ‘ನೀಂ ಇಲ್ಲಿ ಇರಲ್ ವೇಡ, ಪರ್ವತದ ಮೇಲೆ, ಕಱಂಗಿ ಕೞ್ತಲಿಸಿದ ಮರದುಱುಗಲ ನಡುವೆ, ಸುಧಾ ಧವಳಿತ ಉತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಬಿರಿ ಅಪ್ಟೊಡೆ, ಅದು ಹಿಡಿಂಬಪುರಂ ಎಂಬುದು, ಎಮ್ಮ ಪುರಂ ಮಲ್ಲಿಗೆ ಪೋಪಂ ಬನ್ನಿಂ’ ಎಂದು ಮುಂದಿಟ್ಟು ಒಡಗೊಂಡು ಪೋಗಿ, ಮಹಾವಿಭೂತಿಯಿಂ ಪೊೞಲಂ ಪುಗಿಸಿ, ತನ್ನ ಸಂಪತ್ತುಮಂ ಶ್ರೀಯುಮಂ ಮೆರೆದು, ಮಜ್ಜನ ಭೋಜನ ತಾಂಬೂಲ ಲೇಪನಂಗಳಿಂ ಪಥಪರಿಶ್ರಮಂ ಎಲ್ಲಮಂ ಕಳೆದು, ಭೀಮಸೇನನುಂ ತಾನುಂ-)
ಆಗ ಆ ಗಲಾಟೆಗೆ ಮಲಗಿದ್ದ ಐವರೂ ಎಚ್ಚೆತ್ತು ‘ಇದೇನು?’ ಎಂದು ವಿಚಾರಿಸಿದರು! ಹಿಡಿಂಬೆಯು ನಡೆದ ವೃತ್ತಾಂತವೆಲ್ಲವನ್ನೂ ತಿಳಿಸಿ, ತನಗೆ ಭೀಮನ ಮೇಲುಂಟಾದ ಪ್ರೀತಿಯನ್ನು ನಯವಾಗಿ ಹೇಳಿಕೊಂಡಳು. ಆಗ ಕುಂತಿಯೂ, ಧರ್ಮಪುತ್ರನೂ ‘ಈಕೆ ಸಾಮಾನ್ಯ ಹೆಣ್ಣಲ್ಲ; ಇವಳನ್ನು ರಾಕ್ಷಸ ಸ್ತ್ರೀ ಎಂದು ಭಾವಿಸಬೇಡ. ಇವಳನ್ನು ಸ್ವೀಕರಿಸುವುದೇ ಯೋಗ್ಯವಾದ ಕಾರ್ಯ’ ಎಂದು ಭೀಮನನ್ನು ಒಪ್ಪಿಸಿ, ಹಿಡಿಂಬೆಗೂ ಭೀಮನಿಗೂ ಗಾಂಧರ್ವವಿವಾಹವನ್ನು ಮಾಡಿದರು. ನಂತರ ಹಿಡಿಂಬೆಯು ಅವರೆಲ್ಲರನ್ನೂ ಕುರಿತು ‘ನೀವು ಇಲ್ಲಿರುವುದು ಬೇಡ! ಅದೋ ಅಲ್ಲಿ ಬೆಟ್ಟದ ಮೇಲೆ, ದಟ್ಟವಾಗಿ ಕಪ್ಪಾಗಿ ಬೆಳೆದಿರುವ ಕಾಡಿನ ನಡುವೆ, ಸುಣ್ಣದಿಂದ ಬೆಳ್ಳಗೆ ಹೊಳೆಯುವ
ಭವನಗಳು ಕಾಣುತ್ತಿವೆ! ಅದು ಹಿಡಿಂಬಪುರ! ನಮ್ಮೂರು! ಬನ್ನಿ, ನಾವೆಲ್ಲ ಅಲ್ಲಿಗೆ ಹೋಗೋಣ!’ ಎಂದು ಅವರೆಲ್ಲರನ್ನೂ ಮುಂದಿಟ್ಟುಕೊಂಡು ಕರೆದುಕೊಂಡು ಹೋಗಿ ವೈಭವದಿಂದ ತನ್ನ ಊರನ್ನು ಹೊಗಿಸಿದಳು; ಅಲ್ಲಿ ತನ್ನ ಸಂಪತ್ತು, ಶ್ರೀಮಂತಿಕೆಗಳನ್ನು ಅವರಿಗೆ ಪ್ರದರ್ಶಿಸಿ ಸ್ನಾನ, ಊಟ, ಎಲೆಯಡಿಕೆ, ಸುಗಂಧಗಳಿಂದ ಅವರ ದಾರಿಯ ಆಯಾಸವನ್ನು ಕಳೆದಳು.
ಕಂ|| ಎಲ್ಲಿ ಕೊಳನೆಲ್ಲಿ ತಣ್ಬುೞಿ
     ಲೆಲ್ಲಿ ಲತಾಭವನಮೆಲ್ಲಿ ಧಾರಾಗೃಹಮಂ||
     ತಲ್ಲಿಯೆ ತೊಡರ್ದದಲ್ಲಿಯೆ ನಿಂ
     ದಲ್ಲಿಯೆ ರಮಿಯಿಸಿದಳಾಕೆ ಮರುದಾತ್ಮಜನೊಳ್|| ೧೯||
(ಎಲ್ಲಿ ಕೊಳನ್, ಎಲ್ಲಿ ತಣ್ಬುೞಿಲ್, ಎಲ್ಲಿ ಲತಾಭವನಂ, ಎಲ್ಲಿ ಧಾರಾಗೃಹಂ, ಅಂತು ಅಲ್ಲಿಯೆ ತೊಡರ್ದು, ಅಲ್ಲಿಯೆ ನಿಂದು, ಅಲ್ಲಿಯೆ ರಮಿಯಿಸಿದಳ್ ಆಕೆ ಮರುದಾತ್ಮಜನೊಳ್)
ಕೊಳಗಳಲ್ಲಿ, ತಂಪುತೋಪುಗಳಲ್ಲಿ, ಬಳ್ಳಿಮಾಡಗಳಲ್ಲಿ, ತಣ್ಣೀರ ಸ್ನಾನಗೃಹಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಸೇರಿ, ತಂಗಿ, ಹಿಡಿಂಬೆಯು ಭೀಮನೊಂದಿಗೆ ರಮಿಸಿದಳು.
ವ|| ಅಂತು ರಮಿಯಿಸಿ ಪೊೞಲ್ಗೆ ಮಗುೞ್ದು ಬಂದೊಡೆ ಆಕೆಗಂ ಭೀಮಂಗಂ
ಹಾಗೆ ರಮಿಸಿ ಊರಿಗೆ ಹಿಂದಿರುಗಿ ಬಂದ ಮೇಲೆ ಆಕೆಗೂ ಭೀಮನಿಗೂ
ಕಂ|| ಕಾರಿರುಳ ತಿರುಳ ಬಣ್ಣಂ
     ಕೂರಿದುವೆನೆ ತೊಳಪ ದಾಡೆ ಮಿಳಿರ್ವುರಿಗೇಸಂ|
     ಪೇರೊಡಲೆಸೆದಿರೆ ಪುಟ್ಟಿದ
     ನಾರುಮಗುರ್ವಿಸೆ ಮಗಂ ಘಟೋತ್ಕಚನೆಂಬಂ|| ೨೦||
(ಕಾರಿರುಳ ತಿರುಳ ಬಣ್ಣಂ, ಕೂರಿದುವು ಎನೆ ತೊಳಪ ದಾಡೆ, ಮಿಳಿರ್ವ ಉರಿಗೇಸಂ,  ಪೇರೊಡಲ್ ಎಸೆದಿರೆ, ಪುಟ್ಟಿದನ್ ಆರುಂ ಅಗುರ್ವಿಸೆ ಮಗಂ ಘಟೋತ್ಕಚನ್ ಎಂಬಂ)
ಕಪ್ಪುಗತ್ತಲಿನ ತಿರುಳಿನಂಥ ಬಣ್ಣ, ಹೊಳೆಯುವ ಹರಿತವಾದ ಕೋರೆಹಲ್ಲುಗಳು, ಅಲುಗುವ ಜ್ವಾಲೆಯಂಥ ತಲೆಗೂದಲು, ಭಾರೀ ದೇಹ ಇವುಗಳಿಂದ ಕೂಡಿ, ಕಂಡವರಿಗೆ ಹೆದರಿಕೆ ಹುಟ್ಟಿಸುವಂತಿದ್ದ ಘಟೋತ್ಕಚನೆಂಬ ಮಗನು ಹುಟ್ಟಿದನು.
ವ|| ಅಂತು ಪುಟ್ಟುವುದುಮೀಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಮುಂ ಸದ್ಯಃಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದಾಗಳೆ ಷೋಡಶವರ್ಷದ ಕುಮಾರನಾಗಿರೆ ಪಾಂಡಮರುಮಲ್ಲಿ ಮೂಱು ವರುಷಮಿರ್ದು ಕೃಷ್ಣದ್ವೈಪಾಯನೋಪದೇಶದಿಂದೇಕಚಕ್ರಕ್ಕೆ ವೋಪ ಕಜ್ಜಮನಾಳೋಚಿಸಿ-
ಹಾಗೆ ಹುಟ್ಟಿದಾಗ ಈಶ್ವರನಿಯಮದಂತೆ ರಾಕ್ಷಸರಿಗೆ ಕೂಡಲೇ ಬಸಿರಾಗಿ, ಕೂಡಲೇ ಹೆತ್ತು, ಕೂಡಲೇ (ಮಗುವಿಗೆ) ಯೌವನವು ಉಂಟಾಗುವುದರಿಂದ, ಘಟೋತ್ಕಚನು ಕೂಡಲೇ ಹದಿನಾರು ವರ್ಷದ ಕುಮಾರನಾದನು. ಪಾಂಡವರು ಅಲ್ಲಿ ಮೂರು ವರ್ಷ ಕಾಲ ಇದ್ದು, ವ್ಯಾಸರ ಉಪದೇಶದಂತೆ, ಏಕಚಕ್ರ ನಗರಕ್ಕೆ ಹೋಗುವ ಕಾರ್ಯವನ್ನು ಆಲೋಚಿಸಿ-