ಭಾನುವಾರ, ಮೇ 13, 2018

ಪಂಪಭಾರತಂ ಆಶ್ವಾಸ ೧ ಪದ್ಯಗಳು ೧೫-೪೩





ಕಂ|| ಶ್ರೀಮಚ್ಚುಳಕ್ಯ ವಂಶ |
     ವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂ ||
     ಡೀ ಮಹಿಯೊಳಾತ್ಮ ವಂಶ ಶಿ |
     ಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದಂ ||೧೫||
(ಶ್ರೀಮತ್ ಚಳುಕ್ಯ ವಂಶ ವ್ಯೋಮ ಅಮೃತ ಕಿರಣನ್ ಎನಿಪ ಕಾಂತಿಯನ್ ಒಳಕೊಂಡು, ಈ ಮಹಿಯೊಳ್ ಆತ್ಮ ಶಿಖಾಮಣಿ ಜಸಂ ಎಸೆಯೆ ಯುದ್ಧಮಲ್ಲಂ ನೆಗೞ್ದಂ.)
ಇಲ್ಲಿಂದ ಮುಂದಕ್ಕೆ ಅರಿಕೇಸರಿಯ ವಂಶವೃತ್ತಾಂತ:
ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನಂತೆ, ಆ ವಂಶದ ಶಿಖಾಮಣಿಯಂತೆ, ಈ ಭೂಮಿಯಲ್ಲಿ ಯುದ್ಧಮಲ್ಲನು ತನ್ನ ಯಶಸ್ಸಿನ ಮೂಲಕ ಪ್ರಕಾಶಿಸುತ್ತಿದ್ದನು.
ಕಂ|| ಆತಂ ನಿಜ ಭುಜವಿಜಯ |
    ಖ್ಯಾತಿಯನಾಳ್ದಾಳ್ದನಧಿಕಬಲನವನಿಪತಿ ||
    ವ್ರಾತ ಮಣಿಮಕುಟ ಕಿರಣ |
    ದ್ಯೋತಿತಪಾದಂ ಸಪಾದ ಲಕ್ಷ ಕ್ಷಿತಿಯಂ ||೧೬||
(ಆತಂ ನಿಜ ಭುಜ ವಿಜಯ ಖ್ಯಾತಿಯನ್ ಆಳ್ದು, ಆಳ್ದನ್ ಅಧಿಕಬಲನ್ ಅವನಿಪತಿ ವ್ರಾತ ಮಣಿಮಕುಟ ಕಿರಣ ದ್ಯೋತಿತ ಪಾದಂ, ಸಪಾದ ಲಕ್ಷ ಕ್ಷಿತಿಯಂ.)
ಆತನು ತನ್ನ ಬಾಹುಬಲದಿಂದ ಖ್ಯಾತಿಯನ್ನು ಗಳಿಸಿದ್ದವನು. ಶಕ್ತಿಶಾಲಿಯಾಗಿದ್ದ ಅವನ ಪಾದಗಳನ್ನು ಅನೇಕ ರಾಜರ ಕಿರೀಟಗಳಿಂದ ಹೊಮ್ಮಿದ ಕಿರಣಗಳು ಬೆಳಗುತ್ತಿದ್ದವು.
ಕಂ|| ಏನಂ ಪೇೞ್ವುದೋ ಸಿರಿಯು |
     ದ್ದಾನಿಯನೆಣ್ಣೆಯೊಳೆ ತೀವಿ ದೀರ್ಘಿಕೆಗಳನಂ ||
     ತಾ ನೃಪತಿ ನಿಚ್ಚಲಯ್ನೂ |
     ಱಾನೆಯನವಗಾಹಮಿರಿಸುವಂ ಬೋದನದೊಳ್ ||೧೭||
(ಏನಂ ಪೇೞ್ವುದೋ ಸಿರಿಯ ಉದ್ದಾನಿಯನ್? ಎಣ್ಣೆಯೊಳೆ ತೀವಿ ದೀರ್ಘಿಕೆಗಳನ್, ಅಂತು ಆ ನೃಪತಿ ನಿಚ್ಚಲ್ ಅಯ್ನೂಱು ಆನೆಯನ್ ಅವಗಾಹಂ ಇರಿಸುವಂ ಬೋದನದೊಳ್.) 
ಅವನ ಶ್ರೀಮಂತಿಕೆಯನ್ನು ಏನೆಂದು ಹೇಳುವುದು? ತನ್ನ ರಾಜಧಾನಿಯಾದ ಬೋದನದಲ್ಲಿ ಅವನು ಪ್ರತಿನಿತ್ಯವೂ ಐನೂರು ಆನೆಗಳನ್ನು ಎಣ್ಣೆ ತುಂಬಿದ ಬಾವಿಗಳಲ್ಲಿ ಮುಳುಗಿಸಿ ಮಜ್ಜನ ಮಾಡಿಸುತ್ತಾನೆ.
ಕಂ|| ಶ್ರೀಪತಿಗೆ ಯುದ್ಧಮಲ್ಲ ಮ |
     ಹೀಪತಿಗೆ ನೆಗೞ್ತೆ ಪುಟ್ಟೆ ಪುಟ್ಟಿದನಖಿಳ ||
     ಕ್ಷ್ಮಾಪಾಲ ಮೌಳಿ ಮಣಿ ಕಿರ |
     ಣಾಪಾಳಿತ ನಖ ಮಯೂಖ ರಂಜಿತ ಚರಣಂ ||೧೮||
ಕಂ|| ಅರಿಕೇಸರಿಯೆಂಬ ಸುಂ |
     ದರಾಂಗನತ್ಯಂತ ವಸ್ತುವಂ ಮದಕರಿಯಂ ||
     ಹರಿಯಂ ಪಡೆವಡೆಗುರ್ಚಿದ |
     ಕರವಾಳನೆ ತೋಱಿ ನೃಪತಿ ಗೆಲ್ಲಂಗೊಂಡಂ ||೧೯||

(ಶ್ರೀಪತಿಗೆ, ಯುದ್ಧಮಲ್ಲ ಮಹೀಪತಿಗೆ, ನೆಗೞ್ತೆ ಪುಟ್ಟೆ ಪುಟ್ಟಿದನ್, ಅಖಿಳ ಕ್ಷ್ಮಾಪಾಲ ಮೌಳಿ ಮಣಿ ಕಿರಣಾ ಪಾಳಿತ ನಖ ಮಯೂಖ ರಂಜಿತ ಚರಣಂ-)
 (ಅರಿಕೇಸರಿ ಎಂಬ ಸುಂದರಾಂಗನ್ ಅತ್ಯಂತ ವಸ್ತುವಂ, ಮದಕರಿಯಂ, ಹರಿಯಂ, ಪಡೆವಡೆಗೆ ಉರ್ಚಿದ ಕರವಾಳನೆ ತೋಱಿ ನೃಪತಿ ಗೆಲ್ಲಂಗೊಂಡಂ.)
ಇಲ್ಲಿ ೧೮ನೇ ಕಂದಪದ್ಯವು ೧೯ನೇ ಕಂದಪದ್ಯದಲ್ಲಿ ಮುಂದುವರಿದಿದೆ.
ಶ್ರೀಮಂತನಾದ ಆ ಯುದ್ಧಮಲ್ಲ ರಾಜನಿಗೆ ಕೀರ್ತಿಯೇ ಹುಟ್ಟಿಬಂದಂತೆ ಅರಿಕೇಸರಿ ಎಂಬ ಮಗನು ಹುಟ್ಟಿದನು. ಆ ಅರಿಕೇಸರಿಯ ಕಾಲ್ಬೆರಳಿನ ಉಗುರುಗಳು ಎಲ್ಲಾ ರಾಜರುಗಳ ಕಿರೀಟಮಣಿಗಳಿಂದ ಹೊಮ್ಮುವ ಕಾಂತಿಯಿಂದ ಬೆಳಗುತ್ತಿದ್ದವು. ಅವನು ಅತ್ಯಂತ ಸುಂದರಾಂಗನಾಗಿದ್ದನು. ತನ್ನನ್ನು ಎದುರಿಸಿದ ರಾಜರ ಸೈನ್ಯಕ್ಕೆ ಹಿರಿದ ಕತ್ತಿಯನ್ನು ತೋರಿಸಿ ಅವರಿಂದ ಅನೇಕ ಬೆಲೆಬಾಳುವ ವಸ್ತುಗಳನ್ನು, ಆನೆ, ಕುದುರೆಗಳನ್ನು ಗೆದ್ದುಕೊಂಡನು.
ಕಂ|| ನಿರುಪಮ ದೇವನ ರಾಜ್ಯದೊ |
     ಳರಿಕೇಸರಿ ವೆಂಗಿ ವಿಷಯಮಂ ತ್ರಿ[ಕಳಿಂಗಂ] ||
     ಬೆರಸೊತ್ತಿಕೊಂಡು ಗರ್ವದೆ |
     ಬರೆಯಿಸಿದಂ ಪೆಸರನಖಿಳ ದಿಗ್ಭಿತ್ತಿಗಳೊಳ್ ||೨೦||
(ನಿರುಪಮ ದೇವನ ರಾಜ್ಯದೊಳ್ ಅರಿಕೇಸರಿ ವೆಂಗಿವಿಷಯಮಂ ತ್ರಿಕಳಿಂಗಂ ಬೆರಸು ಒತ್ತಿಕೊಂಡು, ಗರ್ವದೆ ಬರೆಯಿಸಿದಂ ಪೆಸರನ್ ಅಖಿಳ ದಿಗ್ಭಿತ್ತಿಗಳೊಳ್.)
ಇಲ್ಲಿ ಒಂದು ಐತಿಹಾಸಿಕ ವಿಷಯ ಹಾಗೂ ಘಟನೆಯ ಪ್ರಸ್ತಾಪ ಇದೆ. ಡಿ ಎಲ್ ಎನ್ ಅವರ ಪ್ರಕಾರ ನಿರುಪಮ ದೇವನು ಒಬ್ಬ ರಾಷ್ಟ್ರಕೂಟ ರಾಜ. ಅರಿಕೇಸರಿಯು ಆ ರಾಜನಿಗಾಗಿ ವೆಂಗಿಮಂಡಲ ಎಂಬ ದೇಶವನ್ನೂ, ಮೂರು ಕಳಿಂಗಗಳನ್ನೂ ಗೆದ್ದು ತನ್ನ ಹೆಸರನ್ನು ಗರ್ವದಿಂದ ಎಲ್ಲಾ ದಿಕ್ಕುಗಳಲ್ಲಿಯೂ ಬರೆಸಿದನು.
ಕಂ|| ಕ್ಷತ್ರಂ ತೇಜೋಗುಣಮಾ |
     ಕ್ಷತ್ರಿಯರೊಳ್ ನೆಲಸಿ ನಿಂದುದಾ ನೆಗೞ್ದಾದಿ ||
     ಕ್ಷತ್ರಿಯರೊಳಮಿಲ್ಲೆನಿಸಿದು |
     ದೀ ತ್ರಿಜಗದೊಳೆಸಗಿದೆಸಕಮರಿಕೇಸರಿಯಾ ||೨೧||
(ಕ್ಷತ್ರಂ ತೇಜೋಗುಣಂ ಆ ಕ್ಷತ್ರಿಯರೊಳ್ ನೆಲಸಿ ನಿಂದುದು, ಆ ನೆಗೞ್ದ ಆದಿ ಕ್ಷತ್ರಿಯರೊಳಂ ಇಲ್ಲ ಎನಿಸಿದುದು ಈ ತ್ರಿಜಗದೊಳ್ ಎಸಗಿದ ಎಸಕಂ ಅರಿಕೇಸರಿಯಾ.)
ಕ್ಷತ್ರಿಯರಲ್ಲಿ ಶೌರ್ಯ, ತೇಜಸ್ಸುಗಳು ನೆಲೆಸಿರುವುದು ಸಾಮಾನ್ಯ. ಆದರೆ ಅರಿಕೇಸರಿಯು ಮಾಡಿದ ಕೆಲಸಗಳು ಮೂರು ಲೋಕಗಳಲ್ಲಿಯೂ ಹಿಂದಿನ ಪ್ರಖ್ಯಾತ ರಾಜರುಗಳು ಮಾಡಿದ ಕೆಲಸಗಳನ್ನು ಮೀರಿಸುವಂತಿದ್ದವು.
ಕಂ|| ಅರಿಕೇಸರಿಗಾತ್ಮಜರರಿ |
     ನರಪ ಶಿರೋದಳನ ಪರಿಣತೋಗ್ರಾಸಿ ಭಯಂ ||
     ಕರರಾಯಿರ್ವರೊಳಾರ್ |
     ದೊರೆಯೆನೆ ನರಸಿಂಹ ಭದ್ರದೇವರ್ ನೆಗೞ್ದರ್ ||೨೨||
(ಅರಿಕೇಸರಿಗೆ ಆತ್ಮಜರ್ ಅರಿ ನರಪ ಶಿರೋದಳನ ಪರಿಣತ ಉಗ್ರ ಅಸಿ ಭಯಂಕರರ್, ಆ ಇರ್ವರೊಳ್ ಆರ್ ದೊರೆ ಎನೆ ನರಸಿಂಹ, ಭದ್ರದೇವರ್ ನೆಗೞ್ದರ್.)
ಅರಿಕೇಸರಿಗೆ ನರಸಿಂಹ, ಭದ್ರದೇವ ಎಂಬ ಇಬ್ಬರು ಮಕ್ಕಳು. ಆ ಇಬ್ಬರೂ ಸಹ ತಮ್ಮ ಬಲಿಷ್ಠವಾದ ಕೈಗಳಲ್ಲಿ ಹಿಡಿದ ಕತ್ತಿಗಳಿಂದ ವೈರಿರಾಜರ ತಲೆಗಳನ್ನು ಸೀಳುವುದರಲ್ಲಿ ಸಮರ್ಥರು. ಅಂಥ ಆ ಇಬ್ಬರಿಗೆ ಸಮಾನರಾದವರು ಈ ಲೋಕದಲ್ಲಿ ಯಾರಾದರೂ ಇದ್ದಾರೆಯೆ?
ಕಂ|| ಅವರೊಳ್ ನರಸಿಂಗಂಗತಿ |
     ಧವಳಯಶಂ [ಯುದ್ಧ]ಮಲ್ಲನಗ್ರಸುತಂ ತ ||
     ದ್ಭುವನ ಪ್ರದೀಪನಾಗಿ |
     ರ್ದವಾರ್ಯ ವೀರ್ಯಂಗೆ ಬದ್ದೆಗಂ ಪಿರಿಯ ಮಗಂ ||೨೩||
(ಅವರೊಳ್ ನರಸಿಂಗಂಗೆ ಅತಿ ಧವಳ ಯಶಂ ಯುದ್ಧಮಲ್ಲನ್ ಅಗ್ರಸುತಂ ತತ್ ಭುವನ ಪ್ರದೀಪನ್ ಆಗಿರ್ದ ಅವಾರ್ಯವೀರ್ಯಂಗೆ ಬದ್ದೆಗಂ ಪಿರಿಯ ಮಗಂ-)
ಅವರಲ್ಲಿ ನರಸಿಂಹನಿಗೆ ನಿರ್ಮಲ ಯಶಸ್ಸಿನಿಂದ ಕೂಡಿದ ಇಮ್ಮಡಿ ಯುದ್ಧಮಲ್ಲನು ಹಿರಿಯ ಮಗ. ಲೋಕಕ್ಕೆಲ್ಲ ಜ್ಯೋತಿಯಾಗಿದ್ದ ಅಪ್ರತಿಮ ಪ್ರತಾಪಿ ಯುದ್ಧಮಲ್ಲನಿಗೆ ಬದ್ದೆಗ ಅಂದರೆ ಭದ್ರದೇವನು ಹಿರಿಯ ಮಗನು.
ಕಂ|| ಪುಟ್ಟಿದೊಡಾತನೊಳಱಿವೊಡ |
     ವುಟ್ಟಿದುದಱಿವಿಂಗೆ ಪೆಂಪು ಪೆಂಪಿನೊಳಾಯಂ ||
     ಕಟ್ಟಾಯದೊಳಳವಳವಿನೊ |
     ಳೊಟ್ಟಜೆ ಪುಟ್ಟಿದುದು ಪೋಲ್ವರಾರ್ ಬದ್ದೆಗನಂ ||೨೪||
(ಪುಟ್ಟಿದೊಡೆ ಆತನೊಳ್ ಅಱಿವು ಒಡವುಟ್ಟಿದುದು, ಅಱಿವಿಂಗೆ ಪೆಂಪು, ಪೆಂಪಿನೊಳ್ ಆಯಂ, ಕಟ್ಟಾಯದೊಳ್ ಅಳವು, ಅಳವಿನೊಳ್ ಒಟ್ಟಜೆ ಪುಟ್ಟಿದುದು ಪೋಲ್ವರಾರ್ ಬದ್ದೆಗನಂ)
ಹೀಗೆ ಹುಟ್ಟಿದ ಭದ್ರದೇವನಿಗೆ ಜೊತೆಯಲ್ಲಿಯೇ ಜ್ಞಾನವೂ, ಜ್ಞಾನದೊಂದಿಗೆ ಹಿರಿಮೆ, ಹಿರಿಮೆಯೊಂದಿಗೆ ದ್ರವ್ಯಾದಿ ಲಾಭಗಳು, ಅವುಗಳೊಂದಿಗೆ ಪರಾಕ್ರಮಾತಿಶಯಗಳೂ ಹುಟ್ಟಿದವು. ಹೀಗಿರುವ ಭದ್ರದೇವನನ್ನು ಹೋಲುವವರು ಯಾರಿದ್ದಾರೆ?
ಕಂ|| ಬಲ್ವರಿಕೆಯೊಳರಿ ನೃಪರ ಪ |
     ಡಲ್ವಡೆ ತಳ್ತಿಱಿದು ರಣದೊಳಾ ವಿಕ್ರಮಮಂ ||
     ಸೊಲ್ವಿನಮಾವರ್ಜಿಸಿದಂ |
     ನಾಲ್ವತ್ತೆರಡಱಿಕೆಗಾಳೆಗಂಗಳೊಳೀತಂ ||೨೫||
(ಬಲ್ವರಿಕೆಯೊಳ್ ಅರಿ ನೃಪರ ಪಡಲ್ವಡೆ ತಳ್ತಿಱಿದು, ರಣದೊಳ್ ಆ ವಿಕ್ರಮಮಂ ಸೊಲ್ವಿನಮ್ ಆವರ್ಜಿಸಿದಂ ನಾಲ್ವತ್ತೆರಡು ಅಱಿಕೆಗಾಳೆಗಂಗಳೊಳ್ ಈತಂ.)
ಈ ಭದ್ರದೇವನು ಬಲವಾದ ದಾಳಿಯನ್ನು ಸಂಘಟಿಸಿ ಶತ್ರುರಾಜರು ಚದುರಿ ಓಡುವಂತೆ ಹೋರಾಡಿ ನಲ್ವತ್ತೆರಡು ಸುಪ್ರಸಿದ್ಧವಾದ ಕಾಳಗಗಳಲ್ಲಿ ಯುದ್ಧ ಮಾಡಿ ಜಯ ಗಳಿಸಿ ತನ್ನ ಪ್ರತಾಪವನ್ನು ಮೆರೆದನು. ಎಲ್ಲೆಲ್ಲಿಯೂ ಅವನ ಯುದ್ಧದ ಮಾತೇ ಮಾತು.
ಚಂ|| ವನಧಿ ಪರೀತ ಭೂತಳದೊಳೀತನೆ ಸೋಲದ ಗಂಡನೆಂಬ ಪೆಂ |
     ಪಿನ ಪೆಸರಂ ನಿಮಿರ್ಚಿದುದುಮಲ್ಲದೆ ವಿಕ್ರಮದಿಂದೆ ನಿಂದಗು ||
     ರ್ವೆನಲಿಱಿದಾಂತರಂ ಮೊಸಳೆಯಂ ಪಿಡಿವಂತಿರೆ ನೀರೊಳೊತ್ತಿ ಭೀ |
     ಮನನತಿ ಗರ್ವದಿಂ ಪಿಡಿಯೆ ಮೆಯ್ಗಲಿ ಬದ್ದೆಗನನ್ನನಾವನೋ ||೨೬||
(‘ವನಧಿ ಪರೀತ ಭೂತಳದೊಳ್ ಈತನೆ ಸೋಲದ ಗಂಡನ್’ ಎಂಬ ಪೆಂಪಿನ ಪೆಸರಂ ನಿಮಿರ್ಚಿದುದುಂ ಅಲ್ಲದೆ, ವಿಕ್ರಮದಿಂದೆ ನಿಂದು ಅಗುರ್ವೆನಲ್ ಇಱಿದು ಆಂತರಂ, ಮೊಸಳೆಯಂ ಪಿಡಿವಂತಿರೆ ನೀರೊಳ್ ಒತ್ತಿ, ಭೀಮನನತಿ ಗರ್ವದಿಂ ಪಿಡಿಯೆ ಮೆಯ್ಗಲಿ ಬದ್ದೆಗನನ್ನನ್ ಆವನೋ?)
ತನ್ನೊಂದಿಗೆ ಯುದ್ಧಕ್ಕೆ ನಿಂತವರನ್ನು ಭಯಂಕರವೆನಿಸುವಂತೆ ಇರಿದವನು ಈತ. ಹಾಗಾಗಿ ‘ಕಡಲಿನವರೆಗೆ ಇರುವ ಭೂಪ್ರದೇಶದಲ್ಲಿ ತನಗೆ ಸಮಾನರಾದ ವೀರರು ಯಾರೂ ಇಲ್ಲ’ ಎಂಬ ಕೀರ್ತಿಯನ್ನು ಹಬ್ಬಿಸಿಕೊಂಡಿದ್ದಾನೆ.   ಭೀಮನನ್ನು ‘ನೀರೊಳಗೆ ಮೊಸಳೆಯನ್ನು ಹಿಡಿಯುವಂತೆ’ ಗರ್ವದಿಂದ ಹಿಡಿದ ಈ ಬದ್ದೆಗನಂಥ ವೀರರು ಬೇರೆ ಯಾರಾದರೂ ಇದ್ದಾರೆಯೆ?
ಮ || ಮುಗಿಲಂ ಮುಟ್ಟಿದ ಪೆಂಪು ಪೆಂಪನೊಳಕೊಂಡುದ್ಯೋಗಮುದ್ಯೋಗದೊಳ್ |
     ನೆಗೞ್ದಾಜ್ಞಾಫಲಮಾಜ್ಞೆಯೊಳ್ ತೊಡರ್ದಗುರ್ವೊಂದೊಂದಗುರ್ವಿಂದಗು ||
     ರ್ವುಗೊಳುತ್ತಿರ್ಪರಿಮಂಡಳಂ ಜಸಕಡರ್ಪಪ್ಪನ್ನೆಗಂ ಸಂದನೀ |
     ಜಗದೊಳ್ ಬದ್ದೆಗನನ್ನನಾವನಿೞಿಕುಂ ಭ್ರೂಕೋಟಿಯಿಂ ಕೋಟಿಯಂ ||೨೭||
(ಮುಗಿಲಂ ಮುಟ್ಟಿದ ಪೆಂಪು, ಪೆಂಪನ್ ಒಳಕೊಂಡ ಉದ್ಯೋಗಂ, ಉದ್ಯೋಗದೊಳ್ ನೆಗೞ್ದ ಆಜ್ಞಾಫಲಂ, ಆಜ್ಞೆಯೊಳ್ ತೊಡರ್ದ ಅಗುರ್ವು, ಒಂದೊಂದು ಅಗುರ್ವಿಂದ ಅಗುರ್ವುಗೊಳುತ್ತ ಇರ್ಪ ಅರಿಮಂಡಳಂ,
ಜಸಕೆ ಅಡರ್ಪಪ್ಪನ್ನೆಗಂ ಸಂದನೀ ಜಗದೊಳ್, ಬದ್ದೆಗನನ್ನನ್ ಆವನ್? ಇೞಿಕುಂ ಭ್ರೂಕೋಟಿಯಿಂ ಕೋಟಿಯಂ.)
ಬದ್ದೆಗನ ದೊಡ್ಡಸ್ತಿಕೆ ಆಕಾಶದೆತ್ತರದ್ದು. ಆ ದೊಡ್ಡಸ್ತಿಕೆಗೆ ತಕ್ಕನಾದ ಕಾರ್ಯಗಳನ್ನೇ ಅವನು ಕೈಗೆತ್ತಿಕೊಳ್ಳುತ್ತಿದ್ದನು. ಆ ಕಾರ್ಯಗಳನ್ನು ಪೂರೈಸಲು ಬೇಕಾದ ಕಟ್ಟುನಿಟ್ಟಿನ ಆಜ್ಞೆಗಳನ್ನು ಹೊರಡಿಸುತ್ತಿದ್ದನು. ಅಂಥ ಅವನ ಆಜ್ಞೆಗಳು ಕಾರ್ಯಗತಗೊಳ್ಳುವುದು ನಿಶ್ಚಿತ ಎಂದು ಶತ್ರುಗಳಿಗೆ ಗೊತ್ತಿರುತ್ತಿತ್ತು. ಹಾಗಾಗಿ ಶತ್ರುಗಳ ಗುಂಪಿನಲ್ಲಿ ಹೆದರಿಕೆ ಹುಟ್ಟುತ್ತಿತ್ತು. ಹೀಗೆ ಕೀರ್ತಿಗೆ ಪಾತ್ರನಾದ ಬದ್ದೆಗನಂಥವರು ಬೇರೆ ಯಾರು ತಾನೇ ಇದ್ದಾರೆ? ಅವನ ಹುಬ್ಬಿನ ಸನ್ನೆಗೆ ಕೋಟಿ ಸಂಖ್ಯೆಯ ಸೈನ್ಯದಲ್ಲಿ ನಡುಕ ಹುಟ್ಟಿಸುವ ಶಕ್ತಿ ಇದೆ.
ಕಂ|| ಮೇರು[ವ] ಪೊನ್ ಕಲ್ಪಾಂಘ್ರಿ ಪ |
     ದಾರವೆ ರಸದೊಱವು ಪರುಸವೇದಿಯ ಕಣಿ ಭಂ ||
     ಡಾರದೊಳುಂಟೆನೆ ಕುಡುವನಿ |
     ವಾರಿತ ದಾನಕ್ಕೆ ಪೋಲ್ವರಾರ್ ಬದ್ದೆಗನಂ ||೨೮||
(ಮೇರು[ವ] ಪೊನ್, ಕಲ್ಪಾಂಘ್ರಿ ಪದಾರವೆ, ರಸದೊಱವು, ಪರುಸವೇದಿಯ ಕಣಿ, ಭಂಡಾರದೊಳ್ ಉಂಟೆನೆ ಕುಡುವನಿವಾರಿತ ದಾನಕ್ಕೆ ಪೋಲ್ವರಾರ್ ಬದ್ದೆಗನಂ?)

(೨೯ನೇ ಪದ್ಯವನ್ನು ಬಿಟ್ಟಿದೆ).

ಕಂ|| ಆ ಬದ್ದೆಗಂಗೆ ವೈರಿ ತ |
     ಮೋಬಳ ದಶಶತಕರಂ ವಿರಾಜಿತ ವಿಜಯ ||
     ಶ್ರೀಬಾಹು [ಯುದ್ಧ]ಮಲ್ಲನಿ |
     ಳಾ ಬಹು ವಿಧ [ರ]ಕ್ಷಣ ಪ್ರವೀಣ ಕೃಪಾಣಂ ||೩೦||
ಕಂ|| ಆತ್ಮಭವನಾ ನರಾಧಿಪ |
     ನಾತ್ಮಜನಾ ನಹುಷ ಪೃಥು ಭಗೀರಥ ನಳ ಮಾ ||
     ಹಾತ್ಮರನಿೞಿಸಿ ನೆಗೞ್ದ ಮ |
     ಹಾತ್ಮಂ ನರಸಿಂಹನಱಿವಿನೊಳ್ ಪರಮಾತ್ಮಂ ||೩೧||
(ಆ ಬದ್ದೆಗಂಗೆ, ವೈರಿ ತಮೋಬಳ ದಶಶತಕರಂ, ವಿರಾಜಿತ ವಿಜಯಶ್ರೀಬಾಹು, ಯುದ್ಧಮಲ್ಲನ್, ಇಳಾ ಬಹುವಿಧ ರಕ್ಷಣ ಪ್ರವೀಣ ಕೃಪಾಣಂ
ಆತ್ಮಭವನ್; ಆ ನರಾಧಿಪನ ಆತ್ಮಜನ್ ಆ ನಹುಷ, ಪೃಥು, ಭಗೀರಥ, ನಳ ಮಾಹಾತ್ಮರನ್ ಇೞಿಸಿ ನೆಗೞ್ದ ಮಹಾತ್ಮಂ ನರಸಿಂಹನ್, ಅಱಿವಿನೊಳ್ ಪರಮಾತ್ಮಂ.)
ಆ ಬದ್ದೆಗನ ಮಗ ಯುದ್ಧಮಲ್ಲ. ವೈರಿಗಳೆಂಬ ಕತ್ತಲೆಯ ಪಾಲಿನ ಸೂರ್ಯ; ಅವನ ತೋಳುಗಳನ್ನು ಜಯಲಕ್ಷ್ಮಿ ಅಲಂಕರಿಸಿದ್ದಾಳೆ; ಅವನು ತನ್ನ ರಾಜ್ಯವನ್ನು ಬಹುವಿಧವಾಗಿ ರಕ್ಷಿಸಿಕೊಳ್ಳುವುದರಲ್ಲಿ ನಿಪುಣ.
ಯುದ್ಧಮಲ್ಲನ ಮಗ ನರಸಿಂಹ. ಅವನು ಹಿಂದಿನ ಪ್ರಖ್ಯಾತ ರಾಜರುಗಳಾದ ನಹುಷ, ಪೃಥು, ಭಗೀರಥ, ನಳ ಮುಂತಾದವರನ್ನೂ ಮೀರಿಸಿದವನು. ಅರಿವಿನಲ್ಲಿ ಅವನು ಪರಮಾತ್ಮ.
ಕಂ|| ಮಾಂಕರಿಸದಱಿವು ಗುರು ವಚ |
     ನಾಂಕುಶಮಂ ಪಾೞಿಯೆಡೆಗೆ ಪೊಣರ್ದರಿಬಲಮಂ ||
     ಕಿಂಕೊಳೆ ಮಾೞ್ಪೆಡೆಗಣಮೆ ನಿ |
     ರಂಕುಶಮೆನಿಸಿದುದು ಮುನಿಸು ಭದ್ರಾಂಕುಶ[ನಾ] ||೩೨||
(ಮಾಂಕರಿಸದು ಅಱಿವು ಗುರು ವಚನ ಅಂಕುಶಮಂ ಪಾೞಿಯೆಡೆಗೆ, ಪೊಣರ್ದು ಅರಿಬಲಮಂ ಕಿಂಕೊಳೆ ಮಾೞ್ಪೆಡೆಗೆ ಅಣಮೆ ನಿರಂಕುಶಂ  ಎನಿಸಿದುದು ಮುನಿಸು ಭದ್ರಾಂಕುಶನಾ.)
ಧರ್ಮ, ಪರಂಪರೆಗಳಿಗೆ ಸಂಬಂಧಿಸಿದಂತೆ ಹಿರಿಯರ ಮಾತನ್ನು ಅವನು ಎಂದೂ ಉಪೇಕ್ಷೆ ಮಾಡುತ್ತಿರಲಿಲ್ಲ. ಆದರೆ ಶತ್ರುಗಳೊಂದಿಗೆ ಕಾದಾಡಿ ಅವರನ್ನು ಸಂಹರಿಸುವ ವಿಷಯದಲ್ಲಿ ಅವನ ಕೋಪವು ಯಾರ ಅಂಕೆಗೂ ಸಿಕ್ಕುತ್ತಿರಲಿಲ್ಲ.
ಕಂ|| ತಱಿಸಂದು ಲಾೞರೊಳ್ ತ |
     ಳ್ತಿಱಿದೇಱಂ ಪೇೞೆ ಕೇಳ್ದು ಮಂಡಲಮಿನ್ನುಂ ||
     ತಿಱುನೀರಿಕ್ಕುವುದೆನಿಸಿದ |
     ತಱಿಸಲವಿನ ಚಲದ ಬಲದ ಕಲಿ ನರಸಿಂಹಂ ||೩೩||
(ತಱಿಸಂದು ಲಾೞರೊಳ್ ತಳ್ತು ಇಱಿದ ಏಱಂ ಪೇೞೆ ಕೇಳ್ದು ಮಂಡಲಂ ಇನ್ನುಂ ತಿಱು ನೀರಿಕ್ಕುವುದು ಎನಿಸಿದ ತಱಿಸಲವಿನ ಚಲದ ಬಲದ ಕಲಿ ನರಸಿಂಹಂ.)
ನರಸಿಂಹನು ಛಲದಿಂದ ಲಾಟ ದೇಶದವರೊಂದಿಗೆ ಯುದ್ಧ ಮಾಡಿದವನು. ಆ ಯುದ್ಧವನ್ನು ನೆನಪಿಸಿದರೆ ಇಂದಿಗೂ ಸಹ ಅಲ್ಲಿನ ಜನ ತರ್ಪಣವನ್ನು ಕೊಡುತ್ತಾರೆ! ನರಸಿಂಹನು ಅಂತಹ ಚಲ, ಬಲಗಳ ವೀರ.
ಕಂ|| ಸಿಂಗಂ ಮಸಗಿದವೋಲ್ ನರ |
     ಸಿಂಗಂ ತಳ್ತಿಱಿಯೆ ನೆಗೆದ ನೆತ್ತರ್ ನಭದೊಳ್ ||
     ಕೆಂಗುಡಿ ಕವಿದಂತಾದುದಿ |
     ದೇಂ ಗರ್ವದ ಪೆಂಪೊ ಸಕಲ ಲೋಕಾಶ್ರಯನಾ ||೩೪||
(ಸಿಂಗಂ ಮಸಗಿದವೋಲ್ ನರಸಿಂಗಂ ತಳ್ತು ಇಱಿಯೆ, ನೆಗೆದ ನೆತ್ತರ್ ನಭದೊಳ್ ಕೆಂಗುಡಿ ಕವಿದಂತೆ ಆದುದು, ಇದೇಂ ಗರ್ವದ ಪೆಂಪೊ ಸಕಲ ಲೋಕಾಶ್ರಯನಾ.)
ಸಿಂಹದಂತೆ ಕೆರಳಿ ನರಸಿಂಹನು ವೈರಿಯನ್ನು ಇರಿದನೆಂದರೆ ಚಿಮ್ಮುವ ರಕ್ತವು ಆಕಾಶದಲ್ಲಿ ಹಾರುವ ಕೆಂಬಣ್ಣದ ಬಾವುಟದಂತೆ ಕಾಣಿಸುತ್ತಿತ್ತು. ಲೋಕಕ್ಕೇ ಆಶ್ರಯನಾದ ಅವನ ಹಿರಿಮೆಯನ್ನು ಏನೆಂದು ಹೇಳುವುದು?
ಕಂ|| ಏೞುಂ ಮಾಳಮುಮಂ ಪಾ |
     ಱೇಳೆ ತಗುಳ್ದಿಱಿದು ನರಗನುರಿಪಿದೊಡೆ ಕರಿಂ ||
     ಕೇೞಿಸಿದಾತನ ತೇಜದ |
     ಬೀೞಲನನುಕರಿಪುವಾದುವೊಗೆದುರಿವುರಿಗಳ್ ||೩೫||
(ಏೞುಂ ಮಾಳಮುಮಂ ಪಾಱೇಳೆ ತಗುಳ್ದು ಇಱಿದು ನರಗನ್ ಉರಿಪಿದೊಡೆ ಕರಿಂಕೇೞಿಸಿದ ಆತನ ತೇಜದ ಬೀೞಲನ್ ಅನುಕರಿಪುವು ಆದುವು ಒಗೆದ ಉರಿ ಉರಿಗಳ್.)
ನರಸಿಂಹನು ಏಳು ಮಾಳವಗಳನ್ನು ಬೆನ್ನಟ್ಟಿ ಆ ದೇಶಗಳಿಗೆ ಬೆಂಕಿ ಕೊಟ್ಟು ಸುಟ್ಟು ಹಾಕಿದನು. ಸುಟ್ಟು ಕರಕಲಾದ ಮಾಳವ ದೇಶಗಳಿಂದ ಎದ್ದ ಜ್ವಾಲೆಗಳು ಅವನ ಯಶಸ್ಸಿನ ಬೀಳಲುಗಳಂತೆ ಕಾಣುತ್ತಿದ್ದವು.
ಕಂ|| ವಿಜಯಾರಂಭ ಪುರಸ್ಸರ |
     ವಿಜಯ ಗಜಂಗಳನೆ ಪಿಡಿದು ಘೂರ್ಜರ ರಾಜ ||
     ಧ್ವಜಿನಿಯನಿಱಿದೋಡಿಸಿ ಭುಜ |
     ವಿಜಯದೆ ವಿಜಯನುಮನಿೞಿಸಿದಂ ನರಸಿಂಹಂ ||೩೬||
(ವಿಜಯಾರಂಭ ಪುರಸ್ಸರ ವಿಜಯ ಗಜಂಗಳನೆ ಪಿಡಿದು ಘೂರ್ಜರ ರಾಜಧ್ವಜಿನಿಯನ್ ಇಱಿದು ಓಡಿಸಿ ಭುಜ ವಿಜಯದೆ ವಿಜಯನುಮನ್ ಇೞಿಸಿದಂ ನರಸಿಂಹಂ.)
ಗೆಲ್ಲುವ ಉದ್ದೇಶದಿಂದ ಸೈನ್ಯದ ಎದುರುಭಾಗದಲ್ಲಿಯೇ ನಿಲ್ಲಿಸಿದ ಆನೆಗಳನ್ನು ಹಿಂಬಾಲಿಸಿಕೊಂಡು ಹೋಗಿ, ಘೂರ್ಜರ ರಾಜನ ಸೈನ್ಯವನ್ನು ಇರಿದು ಓಡಿಸಿ, ನರಸಿಂಹನು ತೋಳಬಲದಲ್ಲಿ ಅರ್ಜುನನನ್ನೂ ಮೀರಿಸಿದನು.
ಕಂ|| ಸಿಡಿಲವೊಲೆಱಗುವ ನರಗನ |
     ಪಡೆಗಗಿದುಮ್ಮಳದಿನುಂಡೆಡೆಯೊಳುಣ್ಣದೆಯುಂ ||
     ಕೆಡೆದೆಡೆಯೊಳ್ [ಕೆ]ಡೆಯದೆ ನಿಂ |
     ದೆಡೆಯೊಳ್ ನಿಲ್ಲದೆಯುಮೋಡಿದಂ ಮಹಿಪಾಲಂ ||೩೭||
(ಸಿಡಿಲವೋಲ್ ಎಱಗುವ ನರಗನ ಪಡೆಗೆ ಅಗಿದು ಉಮ್ಮಳದಿನ್ ಉಂಡ ಎಡೆಯೊಳ್ ಉಣ್ಣದೆಯುಂ, ಕೆಡೆದ ಎಡೆಯೊಳ್ ಕೆಡೆಯದೆಯುಂ, ನಿಂದ ಎಡೆಯೊಳ್ ನಿಲ್ಲದೆಯುಂ ಓಡಿದಂ ಮಹಿಪಾಲಂ.)
ಮಹಿಪಾಲನೆಂಬ ರಾಜನು ನರಸಿಂಹನಿಗೆ ಹೆದರಿ ಓಡಿಹೋದದ್ದರ ವರ್ಣನೆ ಈ ಪದ್ಯ. ನರಸಿಂಹನ ಸೈನ್ಯವು ಅವನ ಮೇಲೆ ಎರಗಿದಾಗ ಆತನು ಉಂಡ ಜಾಗದಲ್ಲಿ ಮತ್ತೆ ಉಣದೆ, ಮಲಗಿದಲ್ಲಿ ಮತ್ತೆ ಮಲಗದೆ ನಿಂತಲ್ಲಿ ಮತ್ತೆ ನಿಲ್ಲದೆ ಓಡಿದನಂತೆ!
ಕಂ|| ಗಂಗಾವಾರ್ಧಿಯೊಳಾತ್ಮ ತು |
     ರಂಗಮುಮಂ ಮಿಸಿಸಿ ನೆಗಳ್ದ ಕಾಳಪ್ರಿಯನೊಳ್ ||
     ಸಂಗತಗುಣನಸಿ ಲತೆಯನ |
     ಸುಂಗೊಳೆ ಭುಜ ವಿಜಯ ಗರ್ವದಿಂ ಸ್ಥಾಪಿಸಿದಂ ||೩೮||
(ಗಂಗಾವಾರ್ಧಿಯೊಳ್ ಆತ್ಮ ತುರಂಗಮುಮಂ ಮಿಸಿಸಿ ನೆಗಳ್ದ ಕಾಳಪ್ರಿಯನೊಳ್ ಸಂಗತ ಗುಣನ್ ಅಸಿ ಲತೆಯನ್ ಅಸುಂಗೊಳೆ ಭುಜ ವಿಜಯ ಗರ್ವದಿಂ ಸ್ಥಾಪಿಸಿದಂ.)
ನರಸಿಂಹನು ಗಂಗೆಯ ನೀರಿನಲ್ಲಿ ತನ್ನ ಕುದುರೆಯನ್ನು ಮೀಯಿಸಿದನು. ಪ್ರಖ್ಯಾತವಾದ ಮಹಾಕಾಲೇಶ್ವರನ ದೇವಸ್ಥಾನದಲ್ಲಿ, ವೈರಿಗಳ ಪ್ರಾಣಹರಣ ಮಾಡಲೆಂದು ತನ್ನ ಹರಿತವಾದ ಖಡ್ಗವನ್ನು ಸ್ಥಾಪಿಸಿದನು.
ಕಂ|| ಆ ನರಸಿಂಹ ಮಹೀಶ ಮ |
     ನೋನಯನ ಪ್ರಿಯೆ ವಿಳೋಳ ನೀಳಾಳಕೆ ಚಂ ||
     ದ್ರಾನನೆ ಜಾಕವ್ವೆ ದಲಾ |
     ಜಾನಕಿಗಗ್ಗಳಮೆ ಕುಲದೊಳಂ ಶೀಲದೊಳಂ ||೩೯||
(ಆ ನರಸಿಂಹ ಮಹೀಶ ಮನೋನಯನ ಪ್ರಿಯೆ, ವಿಳೋಳ ನೀಳಾಳಕೆ, ಚಂದ್ರಾನನೆ ಜಾಕವ್ವೆ ದಲ್, ಆ  ಜಾನಕಿಗೆ ಅಗ್ಗಳಮೆ ಕುಲದೊಳಂ ಶೀಲದೊಳಂ.)
ಆ ನರಸಿಂಹನ ಮನಸ್ಸಿಗೂ, ಕಣ್ಣಿಗೂ ಪ್ರಿಯಳಾದವಳು ಆತನ ಮಡದಿ ಜಾಕವ್ವೆ. ಅತ್ತಿತ್ತ ಓಲಾಡುವ ಚೆಲುವಾದ ಮುಂಗುರುಳುಗಳಿಂದಲೂ, ಚಂದ್ರನಂತಹ ಮುಖದಿಂದಲೂ ಶೋಭಿಸುವ ಅವಳು ಕುಲಶೀಲಗಳಲ್ಲಿ ಸೀತೆಗಿಂತಲೂ ಶ್ರೇಷ್ಠಳಾದವಳು.
ಕಂ|| ಪೊಸತಲರ್ದ ಬಿಳಿಯ ತಾವರೆ |
     ಯೆಸೞ್ಗಳ ನಡುವಿರ್ಪ ಸಿರಿಯುಮಾಕೆಯ ಕೆಲದೊಳ್ ||
     ನಸು ಮಸುಳ್ದು ತೋರ್ಪಳೆನೆ ಪೋ |
     ಲಿಸುವೊಡೆ ಜಾಕವ್ವೆಗುಳಿದ ಪೆಂಡಿರ್ ದೊರೆಯೇ ||೪೦||
(ಪೊಸತು ಅಲರ್ದ ಬಿಳಿಯ ತಾವರೆ ಎಸೞ್ಗಳ ನಡುವೆ ಇರ್ಪ ಸಿರಿಯುಮ್ ಆಕೆಯ ಕೆಲದೊಳ್ ನಸು ಮಸುಳ್ದು ತೋರ್ಪಳ್ ಎನೆ, ಪೋಲಿಸುವೊಡೆ ಜಾಕವ್ವೆಗೆ ಉಳಿದ ಪೆಂಡಿರ್ ದೊರೆಯೇ?)
ಆಗಷ್ಟೇ ಹೊಸತಾಗಿ ಅರಳಿದ ತಾವರೆಯ ದಳಗಳ ನಡುವೆ ಇರುವ ಲಕ್ಷ್ಮಿಯೂ ಸಹ ಆ ಜಾಕವ್ವೆಯ ಪಕ್ಕದಲ್ಲಿ ಕೊಂಚ ಮಬ್ಬಾಗಿ ಕಾಣುತ್ತಾಳೆ! ಎಂದಮೇಲೆ ಉಳಿದ ಹೆಣ್ಣುಗಳು ಆ ಜಾಕವ್ವೆಗೆ ಸಮಾನರಾಗುವುದು ಎಂದಾದರೂ ಸಾಧ್ಯವೇ?
ಕಂ|| ಆ ಜಾಕವ್ವೆಗಮಾ ವಸು |
     ಧಾ ಜಯ ಸದ್ವಲ್ಲಭಂಗಮತಿ ವಿಶದ ಯಶೋ ||
     ರಾಜಿತನೆನಿಪರಿಕೇಸರಿ |
     ರಾಜಂ ತೇಜೋಗ್ನಿಮಗ್ನ ರಿಪು ನೃಪಶಲಭಂ ||೪೧||
ಕಂ|| ಮಗನಾದನಾಗಿ ಚಾಗದ |
     ನೆಗೞ್ತೆಯೊಳ್ ಬೀರದೇೞ್ಗೆಯೊಳ್ ನೆಗೞೆ ಮಗಂ ||
     ಮಗನೆನೆ ಪುಟ್ಟಲೊಡಂ ಕೋ |
     ೞ್ಮೊಗಗೊಂಡುದು ಭುವನ ಭವನಮರಿಕೇಸರಿಯೊಳ್ ||೪೨||
(ಆ ಜಾಕವ್ವೆಗಂ ಆ ವಸುಧಾ ಜಯ ಸದ್ವಲ್ಲಭಂಗಂ ಅತಿ ವಿಶದ ಯಶೋರಾಜಿತನ್ ಎನಿಪ ಅರಿಕೇಸರಿ ರಾಜಂ ತೇಜೋಗ್ನಿಮಗ್ನ ರಿಪು ನೃಪಶಲಭಂ-
ಮಗನ್ ಆದನಾಗಿ, ಚಾಗದ ನೆಗೞ್ತೆಯೊಳ್ ಬೀರದ ಏೞ್ಗೆಯೊಳ್ ನೆಗೞೆ, ಮಗಂ ಮಗನ್ ಎನೆ ಪುಟ್ಟಲೊಡಂ ಕೋೞ್ಮೊಗಗೊಂಡುದು ಭುವನ ಭವನಂ ಅರಿಕೇಸರಿಯೊಳ್.)
ಆ ಜಾಕವ್ವೆಗೂ, ಭೂಮಿಯನ್ನು ಗೆದ್ದು ಅದರ ಒಡೆಯನಾಗಿ ಕೀರ್ತಿಯನ್ನು ಸಂಪಾದಿಸಿದ ನರಸಿಂಹನಿಗೂ, ವೈರಿಗಳೆಂಬ ಪತಂಗಗಳನ್ನು ತನ್ನ ತೇಜಸ್ಸಿನ ಬೆಂಕಿಯತ್ತ ಸೆಳೆದುಕೊಳ್ಳುವ ಅರಿಕೇಸರಿಯು ಮಗನಾಗಿ ಹುಟ್ಟಿದನು. ಆತನು ತನ್ನ ತ್ಯಾಗ ಹಾಗೂ ಶೌರ್ಯಗಳಿಂದಾಗಿ ಕೀರ್ತಿವಂತನಾದನು. ಲೋಕವು ಅವನನ್ನು ‘ಮಗನೆಂದರ ಮಗ’ ಎಂದು ಕೊಂಡಾಡಿತು. ಆತನು ಹುಟ್ಟಿದ್ದರಿಂದಾಗಿ ಲೋಕಕ್ಕೆ ಕೋಡು ಮೂಡಿತು.
ತರಳ|| ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚುನೀರ್ದಳಿದಾಗಳಾ |
     ಮದಗಜಾಂಕುಶದಿಂದೆ ಪೆರ್ಚಿಸಿ ನಾಭಿಯಂ ಮದ ದಂತಿ ದಂ ||
     ತದೊಳೆ ಕಟ್ಟಿದ ತೊಟ್ಟಿಲಂ ನಯದಿಂದಮೇಱಿ[ಸೆ] ಬಾಳ ಕಾ |
     ಲದೊಳೆ ತೊಟ್ಟಿಲಿಗಂ ಗಜಪ್ರಿಯನಪ್ಪುದಂ ಸಲೆ ತೋಱಿದಂ ||೪೩||
ಆಗತಾನೇ ಹುಟ್ಟಿದ ಮಗುವಿನ ಮೇಲೆ ತಣ್ಣೀರನ್ನು ಚಿಮುಕಿಸುವುದು ಲೋಕರೂಢಿ. ಆದರೆ ಅರಿಕೇಸರಿಯು ಹುಟ್ಟಿದಾಗ ಅವನ ಮೇಲೆ ಚಿಮುಕಿಸಿದ್ದು ಆನೆಯ ಮದಜಲವನ್ನು, ತಣ್ಣೀರನ್ನಲ್ಲ. ಆತನ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದ್ದು ಆನೆಗಳನ್ನು ಪಳಗಿಸುವ ಅಂಕುಶದಿಂದ. ಆತನನ್ನು ಹಾಕಿದ್ದು ಸೊಕ್ಕಿದಾನೆಗಳ ದಂತದಿಂದ ತಯಾರಾದ ತೊಟ್ಟಿಲಿಗೆ. ಹೀಗೆ ಅರಿಕೇಸರಿಯು ತೊಟ್ಟಿಲಕೂಸಾಗಿರುವಾಗಲೇ ಮುಂದೆ ಗಜಪ್ರಿಯನಾಗುವ ಎಲ್ಲ ಲಕ್ಷಣಗಳನ್ನೂ ತೋರಿಸಿದನು.



1 ಕಾಮೆಂಟ್‌:

Unknown ಹೇಳಿದರು...

ಧನ್ಯವಾದಗಳು ಸರ್ ರಾಧೇಶ ತೋಳ್ಪಾಡಿ ಮಾಡುವ ನಮಸ್ಕಾರಗಳು.ಪಂಪನ ಮನಸು ವ್ಯಕ್ತವಾಗಿದೆ.ವಿವರಣೆ ಲವಲವಿಕೆಯಿಂದ ಕೂಡಿದೆ.