ಶನಿವಾರ, ಮಾರ್ಚ್ 14, 2015

ನಮ್ಮೂರಿನಲ್ಲೊಂದು ಅಡುಗೆ ಅನಿಲ ಬಳಕೆದಾರರ ಸಭೆ

ನಿನ್ನೆ ೧೨/೩/೧೫ರಂದು ನಮ್ಮ ಬಂಟ್ವಾಳದಲ್ಲಿ ಅಡುಗೆ ಅನಿಲದ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಸಭೆ ನಡೆಯಿತು. ಒಂದು ತಿಂಗಳ ಹಿಂದೆ ಇಂಥದೇ ಒಂದು ಸಭೆ ನಡೆದಿತ್ತು. ಇನ್ನು ಮೇಲೆ ಮೂರು ತಿಂಗಳಿಗೊಮ್ಮೆ ನಡೆಯುತ್ತದೆಯಂತೆ. ಇದು ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ನಡೆಯುತ್ತಿರುವ ಕಾರ್ಯಕ್ರಮ ಎಂದು ಸುದ್ದಿ. ಸಂಘಟಿಸಿದ್ದು ತಾಲೂಕು ಕಛೇರಿ. ಭಾಗವಹಿಸಿದ್ದು ಆಹಾರ ಇಲಾಖೆಯ ಉಪನಿರ್ದೇಶಕ ಶರಣ ಬಸಪ್ಪ, ಭಾರತ್ ಪೆಟ್ರೋಲಿಯಂನ ಪ್ರಾದೇಶಿಕ ವ್ಯವಸ್ಥಾಪಕ ದಿನಕರ ತೋನ್ಸೆ, ಭದ್ರಾ ಗ್ಯಾಸ್ ಏಜೆನ್ಸಿ ಪರವಾಗಿ ಮಂಜುನಾಥ್ ಹಾಗೂ ಬಳಕೆದಾರರು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ ಮತ್ತು ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಇವರೂ ಇದ್ದರು.
ಸಾರ್ವಜನಿಕ ಸಭೆ ಮತ್ತು ನನ್ನ  ಆಸಕ್ತಿಯ ಕ್ಷೇತ್ರವಾದ್ದರಿಂದ ನಾನು  ಹೋಗಿದ್ದೆ.

ಉಳಿದ ಸಂದೇಹ

ಸಭೆ ಪ್ರಾರಂಭಕ್ಕೆ ಇನ್ನೂ ಐದು ಹತ್ತು ನಿಮಿಷ ಇರುವಾಗಲೇ ಕೆಲವು ಮಹಿಳೆಯರು ಬಂದು ಎದುರುಗಡೆ ಕುರ್ಚಿಯಲ್ಲಿ ಕೂತಿದ್ದರು. ಉಳಿದಂತೆ ಕೆಲವರು ಅತ್ತಿತ್ತ ತಿರುಗಾಡುತ್ತಿದ್ದರು. ಉ.ನಿ. ಶರಣ ಬಸಪ್ಪನವರು ಅಲ್ಲಿ ಕೂತಿದ್ದ ಮಹಿಳೆಯರ ಕಡೆ ಹೋಗಿ ಲೋಕಾಭಿರಾಮವೆನ್ನುವಂತೆ ಮಾತಾಡಿ ಅವರ ಸಮಸ್ಯೆಗಳನ್ನು ಕೇಳಿದರು. ಆ ಸಮಸ್ಯೆಗಳಿಗೆ ಏನೋ ಪರಿಹಾರ ಹೇಳಿದರು. ಬಹುಶಃ ಅವರೆಲ್ಲ ಬಿಪಿಎಲ್ ಕಾರ್ಡಿನವರು. ಅವರು ಪೈಕಿ ಒಬ್ಬ ಮಹಿಳೆ "ನನ್ನ ಹತ್ತಿರ  ಕಾರ್ಡ್ ಇಲ್ಲ, ನಾನು ಬಾಡಿಗೆ ಮನೆಯಲ್ಲಿರುವುದು. ನನಗೆ ಗ್ಯಾಸ್ ಬೇಕು" ಎಂದರು. "ಹಾಗಾದರೆ ನಿಮಗೆ ಗ್ಯಾಸ್ ಸಿಗುವುದಿಲ್ಲ" ಎಂದರು ಉ.ನಿ. "ಗ್ಯಾಸ್ ಸಿಗಬೇಕಾದರೆ  ಕಾರ್ಡ್ ಬೇಕೇ ಬೇಕು. ಇಲ್ಲದಿದ್ದರೆ ನೀವು ಜಾಸ್ತಿ ರೇಟು ಕೊಟ್ಟು ಗ್ಯಾಸ್ ತೆಗೆದುಕೊಳ್ಳಬೇಕು" ಅಂದರು. ನಾನು ಇದನ್ನು ಗಮನಿಸುತ್ತಿದ್ದೆ. ಸಭೆ ಶುರುವಾಗುವ ಮೊದಲೇ ಇವರು ಇದೇನು ಮಾಡುತ್ತಿದ್ದಾರೆ ಎಂದು ಮನಸ್ಸಿಗೆ ಕಿರಿಕಿರಿಯಾಗುತ್ತಲೇ ಇತ್ತು. ಆ ಮಹಿಳೆ ಮುಖ ಸಪ್ಪಗೆ ಮಾಡಿಕೊಂಡರು. ಉಳಿದವರ ಸಮಸ್ಯೆ ಪರಿಹಾರವಾಗಿತ್ತೇನೋ. ಎಲ್ಲರೂ ಸಭೆ ಶುರುವಾಗುವ ಮೊದಲೇ ಜಾಗ ಖಾಲಿ ಮಾಡಿದರು.
ಸಭೆ ಮುಗಿದ ಮೇಲೆ ಯೋಚಿಸುತ್ತಿದ್ದಾಗ ನನಗೆ ಈ ಮಹಿಳೆಯ ಸಮಸ್ಯೆ ಹೊಳೆಯಿತು. ಈ ವರದಿ ಬರೆಯುತ್ತಿರುವಾಗ ಉ.ನಿ.ರಿಗೆ ಫೋನ್ ಮಾಡಿದೆ.
"ಆ ಮಹಿಳೆ ತನ್ನ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲ ಎಂದರು. ನಾನು ಗ್ಯಾಸ್ ಪಡೆಯಲು ಅದು ಬೇಕು ಎಂದೆ" ಎಂದರು ಅವರು.
 "ಆ ಹೆಂಗಸು ಹೇಳಿದ್ದರ ಅರ್ಥ ತನ್ನ ಹತ್ತಿರ ರೇಶನ್ ಕಾರ್ಡ್ ಇಲ್ಲ ಅಂತ ನಾನು ಭಾವಿಸಿದೆ" ಎಂದೆ ನಾನು.
 "ಇಲ್ಲ ಹಾಗಲ್ಲ. ಅವರು ಬಿಪಿಎಲ್ ಕಾರ್ಡ್ ಇಲ್ಲ ಅಂದರು" ಎಂದರು ಅವರು. 
ನನಗೆ ಈಗಲೂ ಅನುಮಾನ ಉಳಿದಿದೆ. ಸಭೆ ಶುರುವಾದ ಮೇಲೆ ಅವರ ಪ್ರಶ್ನೋತ್ತರ ನಡೆದಿದ್ದರೆ ಆ ಮಹಿಳೆಯ ಸಮಸ್ಯೆ ಸ್ಪಷ್ಟವಾಗುತ್ತಿತ್ತೋ ಏನೋ.
ಅದರ ಮೊದಲೇ ಸಮಸ್ಯಾ ಪರಿಹಾರಕ್ಕೆ ಉ.ನಿ. ಯಾಕೆ ಅವಸರ ಮಾಡಿದರೋ? ನಂತರ ಉ.ನಿ. ಮಾಡಿದ್ದ ಪ್ರಾಸ್ತಾವಿಕ ಭಾಷಣದಲ್ಲಿ ಬಳಕೆದಾರರಿಗೆ ಉಪಯುಕ್ತವಾದ ಅನೇಕ ವಿಷಯಗಳಿದ್ದವು. ಆ ಮಹಿಳೆಯರು ಆ ಎಲ್ಲ ಮಾಹಿತಿಯಿಂದ ವಂಚಿತರಾಗುವಂತಾಯಿತು.

ಉ.ನಿ.ರ ಪ್ರಸ್ತಾವನೆಯ ಒಂದು ಸಣ್ಣ ಆಂಶ:

ಹೊಸ ಸಂಪರ್ಕದೊಂದಿಗೆ ಸ್ಟೌ ಕೊಂಡುಕೊಳ್ಳುವುದು ಕಡ್ಡಾಯವೆ? ಇದು ಅನೇಕ ಬಳಕೆದಾರರು ಕೇಳುವ ಪ್ರಶ್ನೆ: 
ಉ.ನಿ.ರ ಪ್ರಕಾರ ಅಲ್ಲ. ಒಂದು ವೇಳೆ ನಿಮ್ಮ ಬಳಿ ಈಗಾಗಲೇ ಒಂದು ಐ ಎಸ್ ಐ ಚಿಹ್ನೆಯ ಸ್ಟೌ ಇದ್ದರೆ ನೀವು ಅದನ್ನು ಡೀಲರ್ ಹತ್ತಿರ ಪರೀಕ್ಷೆ ಮಾಡಿಸಬೇಕು ಅಷ್ಟೆ. ಅದಕ್ಕೆ ೨೫೦/- ರೂ. ಚಾರ್ಜು ಮಾಡುತ್ತಾರೆ. ಒಂದೇ ಷರತ್ತು ಎಂದರೆ ನಿಮ್ಮ ಹತ್ತಿರ ಈಗಾಗಲೇ ಇರುವ ಸ್ಟೌಗೆ ಬಿಲ್  ಇರಬೇಕು!

ಪ್ರಶ್ನೋತ್ತರದ ವೈಖರಿ

ಈ ಹಿಂದೆ ಒಂದು ಸಭೆ ನಡೆದಿತ್ತೆಂದು ಮೊದಲೇ ಹೇಳಿದೆ. ಆ ಸಭೆ ರೋಟರಿ ಬಾಲಭವನದಲ್ಲಿ ನಡೆದಿತ್ತು. ಅನೇಕ ರೊಟೇರಿಯನ್ ಗಳೂ ಬಂದಿದ್ದರು. ಅಂದಿನ ಸಭೆಯಲ್ಲಿ ಅನೇಕ ಗಣ್ಯಾತಿಗಣ್ಯರು ಭದ್ರಾ ಗ್ಯಾಸ್ ಏಜೆನ್ಸಿಗೆ "ಅತ್ಯುತ್ತಮ ಸೇವೆ"ಯ ಪ್ರಶಸ್ತಿ ಪತ್ರ ನೀಡಿದ್ದರು. ಈ ಸಲ ಸಭೆ ನಡೆದಿದ್ದು ಲಯನ್ಸ್ ಮಂದಿರದಲ್ಲಿ. ಅನೇಕರು ಹಳ್ಳಿ ಪ್ರದೇಶದಿಂದ ಬಂದವರಿದ್ದರು. ಹಾಗಾಗಿ ಸಭೆಯ ಸ್ವರೂಪ ಭಿನ್ನವಾಯಿತು.
(ನಮ್ಮ ಬಿ.ಸಿ.ರೋಡಿನಲ್ಲಿ ಸಾರ್ವಜನಿಕ ಸಭೆ ನಡೆಸಲು - ಅನೇಕ ಊರುಗಳಲ್ಲಿ ಇರುವಂತೆ - ಟೌನ್ ಹಾಲ್ ಇಲ್ಲ ಎಂದು ಹೇಳಲು ನನಗೆ ನಾಚಿಕೆಯಾಗುತ್ತದೆ. ಆದರೂ ಅದು ನಿಜ. ಇತ್ತೀಚೆಗೆ ನಮ್ಮ ಮಾನ್ಯ ಸಚಿವ ರಮಾನಾಥ ರೈಯವರು "ಜನತಾ ದರ್ಶನ"ವೆಂಬ ದೊಡ್ಡ ಕಾರ್ಯಕ್ರಮ ನಡೆಸಿದರು. ಆಗ ಶಾಮಿಯಾನ ವ್ಯವಸ್ಥೆ ಇತ್ತು! ಒಂದು ಸಾರ್ವಜನಿಕ ಸಭಾಭವನ ನಮ್ಮೂರಿಗೆ ಬೇಕೇಬೇಕೆಂದೂ, ಅದನ್ನು ದಿವಂಗತ ಪಂಜೆ ಮಂಗೇಶ ರಾಯರ ಹೆಸರಿನಲ್ಲಿ ಮಾಡಬೇಕೆಂದೂ ನಮ್ಮೂರಿನ  "ಪಂಜೆ ಸ್ಮಾರಕ ಸಮಿತಿ" ಪ್ರಯತ್ನ ಪಡುತ್ತಲೇ ಇದೆ. ಇದಕ್ಕೆ ೩೦ ಸೆಂಟ್ಸ್ ಸ್ಥಳ ಸಹ ಇದೆ. ಇವತ್ತು ಪ್ರಕಟವಾದ ಬಜೆಟ್ಟಿನಲ್ಲಿ ಪಂಜೆ ಮಂಗೇಶರಾವ್ ಸ್ಮಾರಕ ಕಟ್ಟಡಕ್ಕೆ ಹಣ ಮೀಸಲಿಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರಂತೆ. "ನಾನು ಆ ಸ್ಥಳ ಬದಲಾಯಿಸಬೇಕೆಂದಿದ್ದೇನೆ. ಅದಕ್ಕೆ ಹಣ ಇಡುವುದು ಬೇಡ" ಎಂದು ರಮಾನಾಥ ರೈಯವರೇ ಅಡ್ಡಗಾಲು ಹಾಕಿದರೆಂದು ಅನಧಿಕೃತ ಮೂಲಗಳಿಂದ ಬಂದ ಗಾಳಿಸುದ್ದಿ ಬಂಟ್ವಾಳದಲ್ಲಿ ಹರಿದಾಡುತ್ತಿದೆ.)

***************

ಒಂದೆರಡು ಮಾದರಿ ಪ್ರಶ್ನೋತ್ತರಗಳು:

ಒಬ್ಬ ಅಧ್ಯಾಪಕರ ಪ್ರಶ್ನೆ:
ನಮ್ಮ ಶಾಲೆಯ ಬಿಸಿಯೂಟಕ್ಕೆ ಅನಿಲ ಸಾಗಾಣಿಕೆ ಖರ್ಚು ಅಂತ ತಿಂಗಳಿಗೆ ರೂ. ೨೦೦/- ಹೆಚ್ಚು ತೆಗೆದುಕೊಳ್ಳುತ್ತಾರೆ. ಈಗ ಇದು ಮುಖ್ಯೋಪಾಧ್ಯಾಯರ ಕಿಸೆಯಿಂದ ಹೋಗುತ್ತಿದೆ. ಇದು ಸರಿಯೆ?
ಉ.ನಿ.: ನಿಮ್ಮದು ಯಾವ ಶಾಲೆ?
ಅಧ್ಯಾಪಕ: ಇಲ್ಲೇ ಹತ್ತಿರ ಸರ್
ಉ.ನಿ.: ಏನಿವತ್ತು ನಿಮಗೆ ರಜಾನ?
ಅಧ್ಯಾಪಕ: ನನ್ನನ್ನು ಮುಖ್ಯೋಪಾಧ್ಯಾಯರು ಕಳಿಸಿದ್ದು ಸರ್
ಉ.ನಿ.: ಈ ಕಾರ್ಯಕ್ರಮ ಶಾಲೆಯ ಸಮಸ್ಯೆಗೆ ಸಂಬಂಧಪಟ್ಟಿದ್ದಲ್ಲ
(ಗಲಾಟೆ ಶುರು. ಅಧ್ಯಾಪಕರ ಪರ ಅನೇಕರು ಏಕಕಾಲಕ್ಕೆ ದನಿ ಏರಿಸಿ ಮಾತಾಡಿದರು. ಉ.ನಿ. ವಿಷಯಕ್ಕೆ ಬಂದರು!)

ಬಳಕೆದಾರರೊಬ್ಬರು  ಏನೋ ಒಂದು ದೂರು ಹೇಳಿದರು.
ಉ.ನಿ.: ನಿಮ್ಮ ಕನ್ಸ್ಯೂಮರ್ ನಂಬರ್ ಎಷ್ಟು?
ಬ: ನನಗೆ ಗೊತ್ತಿಲ್ಲ
ಉ.ನಿ.: ಯಾಕೆ ಗೊತ್ತಿಲ್ಲ?
ಬ: ಇಲ್ಲ ನೀವು ಹಾಗೆ ಕೇಳಬಾರದು, ಅದು ಸರಿಯಲ್ಲ.
ಉ.ನಿ.: ನಮಗೆ ನಂಬರ್ ಬೇಕಲ್ಲ
ಬ: ಹಾಗಿದ್ದರೆ "ಸಭೆಗೆ ಬರುವವರು ನಂಬರ್ ಹಿಡಿದುಕೊಂಡು ಬರಬೇಕು" ಅಂತ ನೀವು ಪ್ರಕಟಣೆ ಕೊಟ್ಟಿದ್ದೀರಾ?
ಮಾತುಕತೆ ಸರಿದಾರಿಗೆ ಬಂತು.
**********
ವೇದಿಕೆಯಲ್ಲಿದ್ದ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆಯವರು "ವಿತರಕರನ್ನು ಕರೆಸಿ" ಎಂದು ಹೇಳಿದ್ದರಿಂದ ವಿತರಕರು ಬಂದು ಸಭೆಯ ಮುಂದೆ ನಿಂತು ಮಾತಾಡುವುದು ಅನಿವಾರ್ಯವಾಯಿತು. ಕಳೆದ ಸಲದ ಸಭೆಯಲ್ಲಿ ವಿತರಕರು ಮಾತಾಡಿಯೇ ಇರಲಿಲ್ಲ. ಸಭೆ ಮುಗಿದ ಮೇಲೆ ನನ್ನ ಹತ್ತಿರ "ನಾನು ಅಲ್ಲಿ ಮಾತಾಡುವ ಹಾಗಿಲ್ಲ" ಎಂದಿದ್ದರು.
ಪತ್ರಕರ್ತ ಎಸ್. ಜಯರಾಮ್ "ಬಂಟ್ವಾಳಕ್ಕೆ ಇನ್ನೊಂದು ಏಜೆನ್ಸಿ ಬೇಕು. ಈ ಮೊದಲು ಅರ್ಜಿ ಹಾಕಿದ ವರ್ತಕರ ಸಂಘದ ಅರ್ಜಿಯನ್ನು ರಾಜಕೀಯ ಕಾರಣಗಳಿಂದ ತಿರಸ್ಕರಿಸಲಾಗಿತ್ತು" ಎಂದರು.
*********
ಇಂಥ ಸಭೆಗಳನ್ನುತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹೇಗೆ ಬಳಸಿಕೊಳ್ಳಬೇಕೆಂದು ಬಳಕೆದಾರರು ಇನ್ನೂ ಕಲಿಯಬೇಕಾಗಿದೆ. ಸಮಸ್ಯೆ ಹೇಳುವ ಭರದಲ್ಲಿ ಹೆಚ್ಚಿನವರಿಗೆ ಅದಕ್ಕೆ ಪರಿಹಾರ ಏನೆಂದು ಕೇಳುವ, ಪಡೆಯುವ ಪುರುಸೊತ್ತೇ ಇರುವುದಿಲ್ಲ. ಹಾಗಾಗಿ ಸಭೆ ಒಂದರಿಂದ ಇನ್ನೊಂದು ಹೊಸ ಪ್ರಶ್ನೆಗೆ -  ವಾಸ್ತವವಾಗಿ ಅದು ಈಗಾಗಲೇ ಕೇಳಿದ ಪ್ರಶ್ನೆಯೇ ಆಗಿರುತ್ತದೆ - ಹಾರುತ್ತದೆ. ಅಧಿಕಾರಿಗಳಿಗೆ ತಪ್ಪಿಸಿಕೊಳ್ಳಲು ಅತ್ಯುತ್ತಮ ಅವಕಾಶ ಒದಗಿಸುತ್ತದೆ. ಒಟ್ಟಿನಲ್ಲಿ ಅನಿಲ ವಿತರಣೆಯ ಅನೇಕ ಲೋಪದೋಷಗಳು ಸಭೆಯಲ್ಲಿ ಪ್ರಸ್ತಾಪಗೊಂಡರೂ, ಅವುಗಳಿಗೆ ಪರಿಹಾರವೇನೆಂಬುದರ ಬಗ್ಗೆ ಗಮನ ಹರಿಸಿದವರು ಕಡಿಮೆಯೇ.  ಅನೇಕರು ತಮ್ಮ ಸಮಸ್ಯೆ ಮಾತ್ರವಲ್ಲದೆ ಇನ್ನೊಬ್ಬರ ಸಮಸ್ಯೆಯನ್ನೂ ಹೊತ್ತುಕೊಳ್ಳುತ್ತಾರೆ. ಇಂಥ ಕೆಲವರು ಅಂದಿನ ಇಡೀ ಸಭೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಂತೆ ಕಾಣುತ್ತಿತ್ತು. ಮುಂದೆಯೂ ಇಂತಹ ಸಭೆಗಳು ಮತ್ತೆ ಮತ್ತೆ ನಡೆದು, ಯಾರಾದರೊಬ್ಬರು ಸಭೆಯ ಕಲಾಪಗಳನ್ನು ಸರಿಯಾಗಿ ನಿರ್ವಹಿಸಿದರೆ, ಸಭೆ ಹೆಚ್ಚು ಅರ್ಥಪೂರ್ಣವಾಗಬಹುದು. ಸಾರ್ಥಕವಾಗಬಹುದು. ಕೆಲವು ಸಮಯದ ನಂತರ ಅನಗತ್ಯವೂ ಆಗಬಹುದು.
ಕಾಮೆಂಟ್‌ಗಳಿಲ್ಲ: