ಸೋಮವಾರ, ಅಕ್ಟೋಬರ್ 14, 2013


ನೇತ್ರಾವತಿಯ ನೀರು:

ಕೊಟ್ಟದ್ದು ಸಾಲದು - ಇನ್ನೂ ಕೊಡಿ
-ಮಂಗಳೂರು ಎಸ್ ಇ ಜಡ್ ಕಂಪೆನಿ

ಈಗಾಗಲೇ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ (ನೇತ್ರಾವತಿ 12.5 + ಗುರುಪುರ 2.5) ನೀರೆತ್ತಲು ಅನುಮತಿ ಪಡೆದಿರುವ ಎಂ ಎಸ್ ಇ ಜಡ್ ಕಂಪೆನಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ಮೊದಲೇ ನೇತ್ರಾವತಿ ನದಿಯಿಂದ ಒಟ್ಟು 27 ಎಂಜಿಡಿ ನೀರೆತ್ತಲು ಸರಕಾರದ ಮುಂದೆ ಹೊಸ ಬೇಡಿಕೆ ಮಂಡಿಸಿದೆ.
(1 ಎಂಜಿಡಿ= ದಿನಕ್ಕೆ 45 ಲಕ್ಷ ಲೀಟರು).
ಕಂಪೆನಿ ಈ ಬೇಡಿಕೆಯನ್ನು ಮಂಡಿಸಿರುವುದು 31-08-2012ರಲ್ಲಿ. ಸರ್ಕಾರ ಕಂಪೆನಿಯ ಅರ್ಜಿಯ ಬಗ್ಗೆ ವರದಿ ನೀಡಲು ಸೂಚಿಸಿ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಎಂಜಿನಿಯರರಿಗೆ ಪತ್ರ ಬರೆದಿದೆ. ಅವರು ಮೈಸೂರಿನ ಅಧೀಕ್ಷಕ ಎಂಜಿನಿಯರರಿಗೆ ಅದನ್ನು ಕಳಿಸಿ, ಒಂದಲ್ಲ ಎರಡು ಪತ್ರಗಳನ್ನು ಬರೆದಿದ್ದಾರೆ. ಇಷ್ಟು ವಿದ್ಯಮಾನಗಳು ಸರಕಾರದ ಮಟ್ಟದಲ್ಲಿ ಕೇವಲ ಒಂದೂವರೆ ತಿಂಗಳಿನಲ್ಲಿ ನಡೆದು ಹೋಗಿವೆ. ಈ ಪತ್ರದ ಪ್ರತಿಗಳು ಕಾರ್ಯಪಾಲಕ ಎಂಜಿನಿಯರ್, ಜಲಮಾಪನ ವಿಭಾಗ, ಹಾಸನ ಇವರಿಗೂ 'ಸೂಕ್ತಕ್ರಮ'ಕ್ಕಾಗಿ ಹೋಗಿರುವುದರಿಂದ ಅಂತಿಮವಾಗಿ ಈ ವಿಷಯದಲ್ಲಿ ವರದಿ ಕೊಡಬೇಕಾದವರು ಅವರೇ ಎಂದು ಭಾವಿಸಬಹುದು. ಅಥವಾ ಅವರು ಸ. ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಈ ಕೆಲಸವನ್ನು ವಹಿಸಲೂಬಹುದು.
ಕಾರ್ಯಪಾಲಕ ಎಂಜಿನಿಯರರ ವರದಿ ಈಗಾಗಲೇ ಸರಕಾರದ ಕೈಸೇರಿದೆಯೇ, ಅವರು ವರದಿ ತಯಾರಿಸಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಇಲಾಖೆಯ ವೆಬ್ ಸೈಟಿನಲ್ಲಿ ಸಂಬಂಧಿಸಿದ ಕಡತ "ಚಾಲ್ತಿಯಲ್ಲಿದೆ" ಎಂದಿರುವುದರಿಂದ ಮತ್ತು ಸುಮಾರು ಹದಿನೈದು ದಿನಗಳ ಹಿಂದಿನವರೆಗೂ ಕಡತದಲ್ಲಿ ಅಂಥ ವರದಿ ಇರಲಿಲ್ಲವಾದ್ದರಿಂದ ವರದಿ ಇನ್ನೂ ಒಪ್ಪಿಸಲಾಗಿಲ್ಲ ಎಂದು ಭಾವಿಸಲು ಅವಕಾಶವಿದೆ. ಆದರೆ ಅವರ ವರದಿ ಯಾವಾಗ ಬೇಕಾದರೂ ಸಲ್ಲಿಕೆಯಾಗಬಹುದು ಮತ್ತು ಅದನ್ನು ಆಧರಿಸಿ ಸರಕಾರ ಎಂ ಎಸ್ ಇ ಜಡ್ ಕಂಪೆನಿಗೆ ನೀರು ಕೊಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬಹುದು.
ಎಂ ಎಸ್ ಇ ಜಡ್ ಕಂಪೆನಿ ತನ್ನ ಬೇಡಿಕೆಗೆ ಆಧಾರವಾಗಿ ಸುರತ್ಕಲ್ಲಿನ ಎನ್ ಐ ಟಿ ಕೆಯ ಅಪ್ಲೈಡ್ ಮೆಕ್ಯಾನಿಕ್ಸ್ ಮತ್ತು ಹೈಡ್ರಾಲಿಕ್ಸ್ ವಿಭಾಗದ ಪ್ರೊ. ಎಸ್. ಜಿ. ಮಯ್ಯರು ಮಾಡಿದ ಅಧ್ಯಯನ ವರದಿಯನ್ನು ಲಗತ್ತಿಸಿದೆ. ಈ ವರದಿಯ ಪ್ರಕಾರ ಅಗತ್ಯಪ್ರಮಾಣದ ನೀರು ನೇತ್ರಾವತಿಯ ಅಣೆಕಟ್ಟುಗಳಲ್ಲಿ ಲಭ್ಯವಿದೆ.
ಕಂಪೆನಿಯು ನೇತ್ರಾವತಿ ನದಿಯಿಂದ ನೀರೆತ್ತಲು ಕಾಮಗಾರಿ ಪ್ರಾರಂಭಿಸಿ ಪೈಪುಗಳನ್ನು ಅಳವಡಿಸತೊಡಗಿದಾಗ, 15 ಎಂಜಿಡಿ ನೀರು ಸಾಗಿಸಲು ಅನುಮತಿ ಪಡೆದಿದ್ದರೂ, ಅದರ ಎರಡರಷ್ಟು ಎಂದರೆ 30 ಎಂಜಿಡಿ ನೀರು ಸಾಗಿಸುವ ಸಾಮರ್ಥ್ಯದ ಪೈಪುಗಳನ್ನು ಅಳವಡಿಸಿದ್ದು ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾಗಿ, ಮಂಗಳೂರಿನ ಜನತೆಯಲ್ಲಿ ಆತಂಕ, ಅನುಮಾನಗಳನ್ನು ಸೃಷ್ಟಿಸಿತ್ತು. ಆ  ಅನುಮಾನ ಈಗ ನಿಜವಾಗುವಂತೆ ತೋರುತ್ತಿದೆ.

ಎಂ ಎಸ್ ಇ ಜಡ್ ಕಂಪೆನಿಯ ನೀರಿನ ಬೇಡಿಕೆ ಪೂರೈಕೆಗಳ ವಸ್ತುಸ್ಥಿತಿ:

2007ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಸರಕಾರವು ಎಂ ಎಸ್ ಇ ಜಡ್ ಕಂಪೆನಿಗೆ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಬೇಸಗೆಯ 90 ದಿನಗಳಲ್ಲಿ ಒಟ್ಟು 15 ಎಂಜಿಡಿ ನೀರೆತ್ತಲು ಅನುಮತಿ ನೀಡಿದೆ. ಇದಲ್ಲದೆ ಕಂಪೆನಿಯು ಮಂಗಳೂರು ಮಹಾನಗರಪಾಲಿಕೆಯೊಂದಿಗೆ ಕೊಳಚೆನೀರನ್ನು ಶುದ್ಧೀಕರಿಸಿ ಬಳಸುವ ಕುರಿತಂತೆ ಒಂದು ಒಪ್ಪಂದವನ್ನು ಮಾಡಿಕೊಂಡಿದೆ. 2009ರ ಅಕ್ಟೋಬರ್ ತಿಂಗಳಿನಲ್ಲಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಎಂ ಎಸ್ ಇ ಜಡ್ ಕಂಪೆನಿಯ ಒಂದು ಪರಿಚಯ ಲೇಖನ (ಜಾಹೀರಾತು?)ದಲ್ಲಿ "ಮಂಗಳೂರು ಆರ್ಥಿಕ ವಲಯ ನಿಯಮಿತಕ್ಕೆ ನೀರಿನ ಮೂಲ"ವನ್ನು ಹೀಗೆ ವಿವರಿಸಿದೆ:
* 18 ಎಂಜಿಡಿಯಷ್ಟು ನೀರನ್ನು ಮಂಗಳೂರು ಮ.ನ.ಪಾ. ಕೊಳಚೆ ನೀರು ಸಂಸ್ಕರಣ ಘಟಕಗಳ ಮೂಲಕ ಸಂಸ್ಕರಿಸಿ ಬಳಸುತ್ತದೆ
* 15 ಎಂಜಿಡಿಯಷ್ಟು ನೀರನ್ನು ಗುರುಪುರ ಮತ್ತು ನೇತ್ರಾವತಿಯ ಕಿಂಡಿ ಅಣೆಕಟ್ಟಿನ ಮೂಲಕ ಪಡೆಯುವ ಯೋಜನೆ ಇದೆ
* 12 ಎಂಜಿಡಿಯಷ್ಟು ನೀರನ್ನು ನೈಸರ್ಗಿಕ ಅಣೆಕಟ್ಟುಗಳ ಮೂಲಕ ಮಳೆನೀರು ಕೊಯ್ಲು ಮಾಡಿ ತನ್ನ ಸಂಗ್ರಹಾಗಾರದಲ್ಲಿ ಶೇಖರಿಸಿ ಉಪಯೋಗಿಸುವ ವ್ಯವಸ್ಥೆ ಮಾಡಲಾಗುತ್ತದೆ.
2008ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 1800 ಎಕ್ರೆ ಜಾಗದಲ್ಲಿ ಎಂ ಎಸ್ ಇ ಜಡ್ ಮೊದಲ ಹಂತದ ಸ್ಥಾಪನೆಗೆ ಅನುಮತಿ ನೀಡಿದೆ. ಈ ಅನುಮತಿಯಲ್ಲಿ ಮಂಡಳಿಯು "ಎಂ ಎಸ್ ಇ ಜಡ್ ಮೊದಲ ಹಂತದ ನೀರಿನ ಬಳಕೆಯು 37 ಎಂಜಿಡಿಯನ್ನು ಮೀರತಕ್ಕದ್ದಲ್ಲ" ಎಂದು ವಿಧಿಸಿ ನೀರಿನ ಮೂಲಗಳನ್ನು ಹೀಗೆ ಗುರುತಿಸಿದೆ: ನೇತ್ರಾವತಿ ಮತ್ತು ಗುರುಪುರ ನದಿಗಳು; ಕಾವೂರು, ಬಜಾಲ್ ಮತ್ತು ಸುರತ್ಕಲ್ಲಿನ ಕೊಳಚೆ ನೀರು ಸಂಸ್ಕರಣಾ ಘಟಕಗಳು ಮತ್ತು ಎಂ ಎಸ್ ಇ ಜಡ್ ನ ಆವರಣದೊಳಗಿನ ಸಂಗ್ರಹಾಗಾರಗಳು.
ಕಂಪೆನಿಯ Environmental Impact Assessment ಮಾಡಿರುವ NEERI  ಸಹ ತನ್ನ ವರದಿಯಲ್ಲಿ "ಕಂಪೆನಿಯು ತನ್ನ ಆವರಣದೊಳಗೆ 165 ಎಕ್ರೆ ವಿಸ್ತಾರದ ಒಂದು ಸ್ಥಳವನ್ನು ಗುರುತಿಸಿದೆ. ಇಲ್ಲಿ ಒಡ್ಡುಗಳ ನಿರ್ಮಾಣ ಆಗಬೇಕಾಗಿದೆ" ಎಂದೂ, "ಅದರಲ್ಲಿ ದಿನಕ್ಕೆ 12.45 ದಶಲಕ್ಷ ಗ್ಯಾಲನ್ನಿನಂತೆ 90 ದಿನಗಳಿಗೆ ಅಗತ್ಯವಾದ ನೀರನ್ನು ಸಂಗ್ರಹಿಸಬಹುದಾಗಿದೆ" ಎಂದೂ ತಿಳಿಸಿದೆ. "ನೀರಿ"ಯ ವರದಿಯ ಪ್ರಕಾರವೂ ಕಂಪೆನಿಯ ನೀರಿನ ಮೂಲಗಳು: ಕೊಳಚೆ ನೀರು ಸಂಸ್ಕರಣಾಘಟಕದಿಂದ 18 ಎಂಜಿಡಿ; ನೇತ್ರಾವತಿ ಮತ್ತು ಗುರುಪುರ ನದಿಗಳಿಂದ 15 ಎಂಜಿಡಿ; ಮಳೆನೀರು ಸಂಗ್ರಹಣೆಯಿಂದ 12 ಎಂಜಿಡಿ.
ಹೀಗೆ ನೀರಿನ ಬಳಕೆಯ ಮಿತಿ ಮತ್ತು ನೀರಿನ ಮೂಲಗಳು ಸ್ಪಷ್ಟವಾಗಿದ್ದರೂ 31-08-2012ರಲ್ಲಿ 27 ಎಂಜಿಡಿ ನೀರಿಗಾಗಿ ತನ್ನ ಹೊಸಬೇಡಿಕೆ ಮಂಡಿಸುವಾಗ ಕಂಪೆನಿಯು ತನ್ನ ವರಸೆಯನ್ನು ಬದಲಾಯಿಸಿ ಹೀಗೆ ಹೇಳಿದೆ: "It is kindly requested to approve augmentation of water sourcing from 15 MGD to 27 MGD"......... "The balance requirements will be met from Mangalore City Corporation three sewage treatment plants out of which two plants are under construction".  ಇಲ್ಲಿ ನೇತ್ರಾವತಿ ನದಿಯ ನೀರಿನ ಕುರಿತು ಹೇಳುವಾಗ ಯಾವ್ಯಾವ ಬ್ಯಾರೇಜಿನಿಂದ ಎಷ್ಟೆಷ್ಟು ನೀರು ಎಂದು ನಿರ್ದಿಷ್ಟವಾಗಿ ಹೇಳುವ ಕಂಪೆನಿ, ಎಸ್ ಟಿ ಪಿಗಳಿಂದ ಪಡೆಯುವ ನೀರಿನ ಪ್ರಮಾಣವನ್ನು ಮಾತ್ರ ನಿರ್ದಿಷ್ಟವಾಗಿ ಹೇಳುವುದಿಲ್ಲ. ಇನ್ನೂ ಅಚ್ಚರಿಯ ವಿಷಯವೆಂದರೆ ಅತ್ಯಂತ ಅನುಕೂಲಕರವಾಗಿ ಮಳೆನೀರು ಸಂಗ್ರಹದ ಮೂಲಕ ನೀರೊದಗಿಸಿಕೊಳ್ಳುವ ಐಟಮ್ಮನ್ನು ಮರೆತೇಬಿಟ್ಟಿದೆ!
"ಕಂಪೆನಿಯ ನೀರಿನ ಅಗತ್ಯವು 37 ಎಂಜಿಡಿಯನ್ನು ಮೀರತಕ್ಕದ್ದಲ್ಲ" ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಅನುಮತಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಮೇಲೆ ಹೇಳಿದ ಲೆಕ್ಕಾಚಾರದಂತೆ ಈಗಾಗಲೇ ಇರುವ ಮೂಲಗಳಿಂದ ಕಂಪೆನಿಗೆ 45 ಎಂಜಿಡಿ ನೀರು ಸಿಗುತ್ತಿದೆ. ಎಂದರೆ ಅದರ ಬಳಕೆಯ ಮಿತಿಗಿಂತ 8 ಎಂಜಿಡಿ ನೀರು ಹೆಚ್ಚಾಗಿಯೇ ಸಿಗುತ್ತಿದೆ. ಹಾಗಿದ್ದರೆ ಕಂಪೆನಿ ಮತ್ತೂ 12 ಎಂಜಿಡಿ ನೇತ್ರಾವತಿ ನದಿಯ ನೀರು ಬೇಕೆಂದು ಅರ್ಜಿ ಸಲ್ಲಿಸುತ್ತಿರುವುದರ ಮರ್ಮವೇನು? ಇಷ್ಟು ನೀರೆತ್ತಲು ಮೊದಲೇ ಪೈಪುಗಳನ್ನು ಹಾಕಿ ಅದು ವ್ಯವಸ್ಥೆ ಮಾಡಿಕೊಂಡಿರುವುದು ಏನನ್ನು ಸೂಚಿಸುತ್ತದೆ?

ಕುಡಿಯುವ ನೀರು: ಮಂಗಳೂರು ಎದುರಿಸಬೇಕಾಗಿರುವ ಎರಡು ಮುಖ್ಯ ಸವಾಲುಗಳು:

ನೇತ್ರಾವತಿ ನದಿಯಿಂದ ನೀರೆತ್ತುವ ವಿಷಯದಲ್ಲಿ ಇಲ್ಲಿಯವರೆಗೂ ಮಂಗಳೂರು ಮಹಾನಗರಪಾಲಿಕೆಗೆ ಪ್ರಬಲವಾದ ಯಾವ ಪ್ರತಿಸ್ಪರ್ಧಿಗಳೂ ಇರಲಿಲ್ಲ. ಎಂ ಆರ್ ಪಿ ಎಲ್ ಕಳೆದ ಹಲವು ವರ್ಷಗಳಿಂದ ನೀರೆತ್ತುತ್ತಿದೆಯಾದರೂ ಅದು ಮನಪಾಕ್ಕೆ ದೊಡ್ಡ ಸವಾಲು ಎನ್ನುವಂತಿಲ್ಲ. ಆದರೆ ಎಂ ಎಸ್ ಇ ಜಡ್ ಕಂಪೆನಿ ಮಂಗಳೂರಿನ ಜನತೆಯ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೇ ಸಡ್ಡು ಹೊಡೆಯುವ  ಎಲ್ಲ ಲಕ್ಷಣಗಳೂ ನಿಧಾನವಾಗಿ ತಲೆದೋರುತ್ತಿವೆ.

1. ತುಂಬೆ ಅಣೆಕಟ್ಟಿನ ಸಂಗ್ರಹಣಾಸಾಮರ್ಥ್ಯಕ್ಕೆ ಅಡ್ಡಿ:

ಮಂಗಳೂರಿಗೆ ಕುಡಿಯುವ ನೀರಿನ ಸರಬರಾಜನ್ನು ಹೆಚ್ಚಿಸುವ ದೃಷ್ಟಿಯಿಂದ ತುಂಬೆಯಲ್ಲಿ ಅಣೆಕಟ್ಟಿನ ಎತ್ತರವನ್ನು ಏರಿಸುವ ಕಾಮಗಾರಿ ಈಗ ಕೆಲವು ವರ್ಷಗಳಿಂದಲೂ ನಡೆಯುತ್ತಲೇ ಇದೆಯಷ್ಟೆ. ಇತ್ತ ಸರಕಾರವು ಎಂ ಎಸ್ ಇ ಜಡ್ ಕಂಪೆನಿಗೆ ಬಂಟ್ವಾಳದ ಜಕ್ರಿಬೆಟ್ಟಿನಲ್ಲಿ ಒಂದು ಅಣೆಕಟ್ಟು ಕಟ್ಟಲು ಅನುಮತಿ ನೀಡಿದೆ. ಈ ಅನುಮತಿಗೆ ಸಂಬಂಧಿಸಿದಂತೆ ಅಂದಿನ ಮನಪಾ ಕಮಿಷನರ್ ಆಗಿದ್ದ  ಹರೀಶ ಕುಮಾರ್  18-04-2012ರಲ್ಲಿ  ಜಿಲ್ಲಾಧಿಕಾರಿಯವರಿಗೆ ಹೀಗೆ ಪತ್ರ ಬರೆದಿದ್ದರು:  "ಉದ್ದೇಶಿತ MSEZನವರ ಜಕ್ರಿಬೆಟ್ಟುವಿನ ಕಿಂಡಿ ಅಣೆಕಟ್ಟು ಮಂಗಳೂರಿನ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಾಣವಾಗುತ್ತಿರುವ ಹೊಸ ಅಣೆಕಟ್ಟಿನ ಶೇಖರಣಾ ಸಾಮರ್ಥ್ಯವನ್ನು ಕಡಿಮೆಗೊಳಿಸುವುದರಿಂದ ಮತ್ತು ಸರಕಾರಿ ಆದೇಶದ ಶರ್ತ 8 ರ ಉಲ್ಲಂಘನೆಯಾಗುವುದರಿಂದ ಶರ್ತ 19ರಂತೆ, ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ MSEZನವರಿಗೆ ನೀಡಿರುವ ಅನುಮತಿಯನ್ನು ರದ್ದು ಮಾಡುವಂತೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಜನಸಾಮಾನ್ಯರ ಪರವಾಗಿ ಕೋರಿಕೆ ಸಲ್ಲಿಸಿ ವಿನಂತಿಸಬೇಕಾಗಿ ಕೋರಲಾಗಿದೆ".  ಜಿಲ್ಲಾಧಿಕಾರಿಯವರು ಈ ಪತ್ರದ ಮುಖ್ಯಾಂಶಗಳನ್ನು ಯಥಾವತ್ತಾಗಿ ಉಳಿಸಿಕೊಂಡು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಿಗೆ ಒಂದು ಪತ್ರ ಬರೆದು ಸೂಕ್ತಕ್ರಮಕ್ಕಾಗಿ ಕೋರಿದರು. ಈ ಪತ್ರದ ವಿಷಯ ಇನ್ನೂ ಸರಕಾರದ ಎದುರಿಗೆ ತೀರ್ಮಾನಕ್ಕೆ ಬಾಕಿ ಇದೆ.

2. ಪ್ರಬಲ ಎದುರಾಳಿಯೊಂದಿಗೆ ಹೋರಾಟದ ಅನಿವಾರ್ಯತೆ

2012ರ ಮಾರ್ಚ್ ತಿಂಗಳಿನಲ್ಲಿ ಮಂಗಳೂರಿನಲ್ಲಿ  ಕುಡಿಯುವ ನೀರಿನ ತೀವ್ರ ಅಭಾವ ಉಂಟಾಯಿತು. ಮಾರ್ಚ್ 27ರಂದು ಜಿಲ್ಲಾಧಿಕಾರಿಯವರು, ನೇತ್ರಾವತಿಯಿಂದ ದಿನಕ್ಕೆ 60 ಲಕ್ಷ ಗ್ಯಾಲನ್ ನೀರೆತ್ತುತ್ತಿದ್ದ ಎಂ ಆರ್ ಪಿ ಎಲ್ ಕಂಪೆನಿಗೆ "ತುಂಬೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ದಿನಕ್ಕೆ 25 ಲಕ್ಷ ಗ್ಯಾಲನ್ ನೀರು ಮಾತ್ರ ಎತ್ತತಕ್ಕದ್ದು" ಎಂದು ಆದೇಶಿಸಿದರು. ನೀರಿನ ಈ ಸಮಸ್ಯೆಯ ಕುರಿತು 17-04-2012ರಂದು ಎಂ ಆರ್ ಪಿ ಎಲ್ ಕಂಪೆನಿಯು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ ".....ಅಂತೆಯೇ ಅಂದಿನಿಂದ ಪ್ರತಿನಿತ್ಯವೂ  25 ಲಕ್ಷ ಗ್ಯಾಲನ್ ನೀರನ್ನು ಮಾತ್ರ ಎತ್ತುತ್ತಿದ್ದೆವು.  ಆದರೆ 11ನೇ ತಾರೀಖಿನ ನಂತರ ಕಂಪೆನಿಯು ಸರಪಾಡಿಯಿಂದ ನೀರೆತ್ತುವುದನ್ನು ಪೂರ್ಣವಾಗಿ ನಿಲ್ಲಿಸಿತು. ನೀರಿಲ್ಲದ ಕಾರಣಕ್ಕೆ ಕಂಪೆನಿಯು ತನ್ನ ಘಟಕಗಳನ್ನು ಬಲವಂತವಾಗಿ ಮುಚ್ಚಬೇಕಾಯಿತು" ಎಂದು ಹೇಳಿತು.
ಏಪ್ರಿಲ್ ಕೊನೆಯಹೊತ್ತಿಗೆ ಮಳೆ ಬಂದು ಈ ಸಮಸ್ಯೆ ಪರಿಹಾರವಾಯಿತೆಂಬುದು ನಿಜ. ಆದರೆ ಅದೇ ವಿಷಯಕ್ಕೆ ಸಂಬಂಧಿಸಿ ಎಂ ಆರ್ ಪಿ ಎಲ್ ಕಂಪೆನಿ ಹೈಕೋರ್ಟಿನಲ್ಲಿ ಒಂದು ದಾವೆ ಹೂಡಿದೆ. ಈ ದಾವೆಗೆ ಸಂಬಂಧಿಸಿ ಹೈಕೋರ್ಟ್ ಮಧ್ಯಂತರ ಆದೇಶವೊಂದನ್ನು ಹೊರಡಿಸಿದೆ, ಆದರೆ ವಿಚಾರಣೆ ಪೂರ್ತಿಯಾಗಿ ಮುಗಿದಿಲ್ಲ. ದ.ಕ. ಜಿಲ್ಲಾಡಳಿತ, ಹಾಸನದಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಜಲಮಾಪನ ವಿಭಾಗ ಹಾಗೂ ಬಂಟ್ವಾಳದ ಮೆಸ್ಕಾಂಗಳು  ಹೈಕೋರ್ಟಿಗೆ ಅಲೆಯಬೇಕಾದ ಪರಿಸ್ಥಿತಿ ಹುಟ್ಟಿಕೊಂಡಿದೆ.
ಜೊತೆಗೇ ಪಶ್ಚಿಮಬಂಗಾಳದ ಪಾರ್ಲಿಮೆಂಟ್ ಸದಸ್ಯರೊಬ್ಬರು ಈ ಸಮಸ್ಯೆಯನ್ನು ಪಾರ್ಲಿಮೆಂಟಿನಲ್ಲೂ ಎತ್ತಿದ್ದರಿಂದ  ಕರ್ನಾಟಕ ಸರಕಾರವು ಪಾರ್ಲಿಮೆಂಟಿಗೆ ಈ ಬಗ್ಗೆ ವಿವರಣೆ ಕೊಡಬೇಕಾಗಿ ಬಂತು.
ಎಂ ಆರ್ ಪಿ ಎಲ್  ಎತ್ತುತ್ತಿರುವ ಕೇವಲ 6 ಎಂಜಿಡಿ ನೀರೇ (ಈಗ ಅದು 8.5 ಎಂಜಿಡಿ ನೀರೆತ್ತಲು ಅನುಮತಿ ಪಡೆದಿದೆ)  ಮಂಗಳೂರಿನ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ಪೆಟ್ಟು ಕೊಡುವುದಾದರೆ, ನಾಳೆ ಎಂ ಎಸ್ ಇ ಜಡ್ ಕಂಪೆನಿ 15 ಎಂಜಿಡಿ ಅಥವಾ 27 ಎಂಜಿಡಿ ನೀರೆತ್ತಲು ಪ್ರಾರಂಭಿಸಿದರೆ, ಬಂಟ್ವಾಳದವರು,  ಮಂಗಳೂರಿಗರು ಕುಡಿಯುವ ನೀರಿಗಾಗಿ ಚಿಕ್ಕಬಳ್ಳಾಪುರಕ್ಕೋ ಕೋಲಾರಕ್ಕೋ ಹೋಗಬೇಕಾದ ಪರಿಸ್ಥಿತಿ ಬರಲಾರದೆ?


ಆದರೆ ಜಕ್ರಿಬೆಟ್ಟಿನಲ್ಲಿ ಎಂ ಎಸ್ ಇ ಜಡ್ ಕಂಪೆನಿ ಅಣೆಕಟ್ಟು ನಿರ್ಮಾಣದ ಪೂರ್ವಭಾವಿ ಕಾಮಗಾರಿಗಳನ್ನು ನಡೆಸುತ್ತಲೇ ಇದೆ. ಒಂದುವೇಳೆ ಮನಪಾ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳ ಕೋರಿಕೆ ಹಾಗೂ ಮಂಗಳೂರಿನ ಜನತೆಯ ಕುಡಿಯುವ ನೀರಿನ ಹಕ್ಕನ್ನು ಕಡೆಗಣಿಸಿ ಜಕ್ರಿಬೆಟ್ಟಿನಲ್ಲಿ ಇನ್ನೊಂದು ಅಣೆಕಟ್ಟು ನಿರ್ಮಾಣವಾದರೆ ತುಂಬೆ ಅಣೆಕಟ್ಟಿನ ಸಂಗ್ರಹಣಾಸಾಮರ್ಥ್ಯ ಅಂದಾಜು ಶೇ. 30ರಷ್ಟು ಕಡಿಮೆಯಾಗುವ ಎಲ್ಲ ಸಾಧ್ಯತೆಯೂ ಇದೆ. (ಅಲ್ಲದೆ ತುಂಬೆ ಅಣೆಕಟ್ಟಿನಿಂದಾಗಿ ಮುಳುಗಡೆಯಾಗುವ ಪ್ರದೇಶ ಗಣನೀಯವಾಗಿ ಹೆಚ್ಚುವ ಸಾಧ್ಯತೆಯೂ ಇದೆ.)


ಕಾಮೆಂಟ್‌ಗಳಿಲ್ಲ: