ಶನಿವಾರ, ಮೇ 21, 2011

3 ಕೋಟಿ ರೂ. ಖರ್ಚಿನಲ್ಲಿ ಸರಕಾರದ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ

ಒಂದೆರಡು ತಿಂಗಳ ಹಿಂದೆ ಉದಯವಾಣಿ ಓದುತ್ತಿದ್ದಾಗ ಕೊನೆಯ ಪುಟದಲ್ಲಿ ಅರ್ಧ ಪುಟದ ಒಂದು ದೊಡ್ಡ ಜಾಹೀರಾತು ನೋಡಿದೆ. ಅದು ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ "ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ" ಎಂಬ ಸರಕಾರಿ ಸಂಸ್ಥೆಯ ಉದ್ಘಾಟನೆಯ ಆಮಂತ್ರಣ. ಈ ಕೇಂದ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ ಸೇರಿದ್ದು.
ಬೆಂಗಳೂರಿನಲ್ಲಿ ಆಗಾಗ ಮಳೆ ಬಂದು ರಸ್ತೆಗಳಲ್ಲಿ ನೀರು ತುಂಬಿ ಜನರೂ, ವಾಹನಗಳೂ, ಪರದಾಡುವುದನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ಆಕಾಶದಿಂದ ಬೀಳುವ ಈ ಮಳೆನೀರನ್ನು ಉಪಯೋಗಿಸಿಕೊಳ್ಳಲಾರದ ನಮ್ಮ ದಡ್ಡತನಕ್ಕಾಗಿ ನಾನು ಮರುಗಿದ್ದೇನೆ. ಹಾಗಾಗಿ ಈ ಕೇಂದ್ರದ ಬಗ್ಗೆ ನನಗೆ ಕುತೂಹಲ ಬಂತು. ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಿದೆ. ನಾನು ಕೇಳಿದ ಮಾಹಿತಿಗಳೂ, ಅದಕ್ಕೆ ಬಂದ ಉತ್ತರವೂ ಹೀಗಿದೆ:

೧. ಈ ಕೇಂದ್ರ ಹಾಕಿಕೊಂಡಿರುವ ಕಾರ್ಯ ಯೋಜನೆಗಳೇನು?

ನಾಗರೀಕರಲ್ಲಿ ಮಳೆನೀರು ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣ ಬಗ್ಗೆ ಜಾಗೃತಿ ನೀಡುವುದು, ಮಳೆ ನೀರು ಕೊಯ್ಲು ಮಾದರಿಗಳನ್ನು ನಾಗರಿಕರ ವೀಕ್ಷಣೆಗೆ ನಿರ್ಮಿಸಲಾಗಿದೆ. ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾಹಿತಿ ಒದಗಿಸುವುದು.

೨. ಕೇಂದ್ರವು ಪ್ರತಿತಿಂಗಳು ತನ್ನ ಕಾರ್ಯವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುತ್ತದೆಯೇ?
ಮೇಲಧಿಕಾರಿಗಳಿಗೆ ಸಲ್ಲಿಸುತ್ತಿದೆ

೩. ಈ ಕೇಂದ್ರದ ಒಟ್ಟು ಸಿಬ್ಬಂದಿಗಳ ಸಂಖ್ಯೆ, ಅವರ ಹುದ್ದೆ ಮತ್ತು ವೇತನದ ವಿವರ

ಒಬ್ಬ ಕಿರಿಯ ಅಭಿಯಂತರರನ್ನು ನಿಯೋಜಿಸಲಾಗಿದೆ. ರೂ. ೧೧,೦೦೦/- ಮತ್ತು ಇತರೆ ಭತ್ಯೆಗಳು

೪.ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚು

ಸುಮಾರು 3 ಕೋಟಿ ರೂಪಾಯಿಗಳು

೫. ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚನ್ನು ಯಾವ ನಿಧಿಯಿಂದ ಭರಿಸಲಾಗಿದೆ?
ಮಂಡಳಿಯ ನಿಧಿಯಿಂದ ಭರಿಸಲಾಗಿದೆ.

ಈ ಸಂಸ್ಥೆಯ ಬಗ್ಗೆ ಈಗ ನಾನು ಏನೂ ಬರೆಯಲಾರೆ. ಇದನ್ನು ಬೆಂಗಳೂರಿನ ಮತ್ತು ಇತರ ಊರುಗಳ ಜನ ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಮಾಹಿತಿಯನ್ನು ಓದಿದ ಯಾರಿಗಾದರೂ, ಏನಾದರೂ ಹೇಳಬೇಕೆನಿಸಿದರೆ, ಖಂಡಿತಾ ಹೇಳಿ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಯಾವುದೇ ಉದಾತ್ತ ವಿಚಾರಗಳನ್ನು ಸಾರ್ವಜನಿಕ ಹೆಸರಿನಲ್ಲಿ ಸಂಸ್ಥೆ ಮಾಡಿ, ಅಪಾರ ಹಣ ಹಾಳು ಮಾಡಿ, ಕೇವಲ ಅಧಿಕಾರಶಾಹಿ ಮೆರೆಸುವುದನ್ನು ಸರಕಾರೀಕರಣವೆನ್ನಬಹುದು. ಮುಂದುವರಿದಂತೆ ಆ ವಿಷಯಗಳ ಮೂಲ ಆಶಯದ ಬಗೆಗೇ ವಿಚಾರವಂತರಲ್ಲಿ ತಿರಸ್ಕಾರ ಬಂದುಹೋಗುವುದು ಪ್ರಜಾಸತ್ತೆಯ ದುರಂತವೇ ಸರಿ.
ಅಶೋಕವರ್ಧನ