ಬುಧವಾರ, ನವೆಂಬರ್ 3, 2010

ಕೆಂಪುಕಲ್ಲೆಂಬ ಮೈಸೂರುಪಾಕು!


ಕಂಚಿನಡ್ಕಪದವು ಇರುವುದು ಸಜಿಪನಡು ಸಜಿಪಪಡುಗಳ ನಡುವೆ. ಈ ಎರಡೂ ಸಣ್ಣ ಊರುಗಳಿರುವುದು ಬಂಟ್ವಾಳ ತಾಲೂಕಿನಲ್ಲಿ; ಬಿ.ಸಿ.ರೋಡಿನಿಂದ ಮೆಲ್ಕಾರಿಗಾಗಿ ಕೊಣಾಜೆಗೆ ಹೋಗುವ ದಾರಿಯಲ್ಲಿ. ಬಂಟ್ವಾಳ ಪುರಸಭೆಯ ತ್ಯಾಜ್ಯ ಘಟಕ ಕಂಚಿನಡ್ಕಪದವಿನಲ್ಲಿ ನಿರ್ಮಾಣವಾಗುತ್ತಿದೆ. ಗಲೀಜು ಅಲ್ಲಿ ಸಂಗ್ರಹವಾದಮೇಲೆ ಗಬ್ಬು ವಾಸನೆ ಹೊಡೆಯುವುದು ಇದ್ದೇ ಇದೆಯಷ್ಟೆ. ಆದರೆ ಈ ತ್ಯಾಜ್ಯಘಟಕದ ವ್ಯವಹಾರ ಕಸ ತಂದು ಇಲ್ಲಿ ಸುರಿಯುವ ಮೊದಲೇ, ಘಟಕದ ನಿರ್ಮಾಣ ಹಂತದಲ್ಲಿಯೇ, ಗಬ್ಬು ವಾಸನೆ ಹೊರಡಿಸುತ್ತಿದೆ ಎಂದು ನಮ್ಮ ಬಿ.ಸಿ.ರೋಡಿನ ವಂಶ ಪತ್ರಿಕೆ ವರದಿ ಮಾಡಿತ್ತು. ಹಾಗಾಗಿ ಈ ಪವಾಡವನ್ನು ಕಣ್ಣಾರೆ ಕಂಡುಬಿಡೋಣ ಎಂದು ಮೊನ್ನೆ ಭಾನುವಾರ (31-10-2010) ನಾನು ವಂಶದ ಪತ್ರಕರ್ತರೊಂದಿಗೆ ಅಲ್ಲಿಗೆ ಹೋದೆ. ಗೆಳೆಯ ಕೃಷ್ಣಗಟ್ಟಿಯವರೂ ಜೊತೆಗಿದ್ದರು.
ಬಂಟ್ವಾಳ ತಾಲೂಕಿನಲ್ಲಿ ಇಂತಹ ಹಲವು ಪದವುಗಳಿವೆ. ವಿಸ್ತಾರವಾದ ಖಾಲಿ ಬಯಲು ಪ್ರದೇಶ. ಸ್ವಲ್ಪಮಟ್ಟಿಗೆ ಹುಲ್ಲು, ಸಣ್ಣ ಸಣ್ಣ ಸಸ್ಯಗಳು ಮಾತ್ರ ಬೆಳೆಯುವ ಜಮ್ಮಿಟಿಗೆ ಅಥವಾ ಕೆಂಪುಕಲ್ಲಿನ ರಚನೆಗಳು. ಬೆಂಜನಪದವು ಇಂತಹದೇ ಇನ್ನೊಂದು ಪ್ರದೇಶ. ಸಜಿಪನಡುವಿನಲ್ಲಿ ಎಡಕ್ಕೆ ತಿರುಗಿ ಕೆಂಪುಕಲ್ಲು ಸಾಗಿಸುವ ಲಾರಿಗಳು ಓಡಿಯಾಡಿ ಎರಡು-ಮೂರು ಅಡಿ ಆಳದ ಗುಂಡಿಗಳಾಗಿರುವ ರಸ್ತೆಯಲ್ಲಿ ಅಂದಾಜು ಮೂರು ಕಿ.ಮೀ. ಹೋದರೆ ಕಂಚಿನಡ್ಕಪದವು. ಅಲ್ಲಲ್ಲಿ ಒನ್ನೊಂದು ಮನೆಗಳು. ಜನವಸತಿ ಕಡಿಮೆ. ಕೆಂಪುಕಲ್ಲಿನ ಹಲವು ಕೋರೆಗಳು. ನಾವು ಹೋದದ್ದು ಭಾನುವಾರವಾದ್ದರಿಂದ ಕೆಲಸ ನಡೆಯುತ್ತಿರಲಿಲ್ಲ. ಘಟಕದ ದಾರಿಯಲ್ಲಿ ಒಂದು ಜಲ್ಲಿ ಕ್ರಷರ್ ಸಹ ಇದೆ.ಅಡ್ಡಾದಿಡ್ಡಿಯಾಗಿ ಹರಡಿಕೊಂಡಿರುವ ಕೆಂಪುಮಣ್ಣಿನ ರಾಶಿ ತುಂಬಿದ ಕೋರೆಗಳನ್ನು ಬಿಟ್ಟರೆ ಉಳಿದಂತೆ ಧಾರಾಳ ಶುದ್ಧಗಾಳಿ ಬೀಸುವ, ಪೃಕೃತಿಸಹಜವಾಗಿ ನಿರ್ಮಲವಾಗಿರುವ, ಮನೋಹರ ಭೂಪ್ರದೇಶ.
ಜನ ಇಲ್ಲವೇ ಇಲ್ಲ ಎಂದಲ್ಲ. ನಾವು ಐದು ಜನ ಅಲ್ಲಿಗೆ ಹೋದಮೇಲೆ ಸಹಜ ಕುತೂಹಲದಿಂದ ಜನ ಸೇರಿದರು. ಪತ್ರಕರ್ತ ಮಿತ್ರರು ಅವರೊಂದಿಗೆ ಮಾತನಾಡಿ ವಿಷಯ ಸಂಗ್ರಹಿಸುತ್ತಿದ್ದರು. ಅಲ್ಲಿಗೆ ಬಂದ ಒಂದಿಬ್ಬರು ಸ್ಥಳೀಯ ಲೀಡರುಗಳು "ನೀವು ಯಾರನ್ನು ಕೇಳಿ ಇಲ್ಲಿ ಬಂದಿರಿ? ಯಾರನ್ನು ಕೇಳಿ ಫೋಟೋ ತೆಗೆದಿರಿ? ಅಬ್ಬಾಸರನ್ನು ಕರೆದುಕೊಂಡು ಬರಬೇಕಿತ್ತು. ರೈಗಳನ್ನು (ಎಂದರೆ ಬಂಟ್ವಾಳ ಶಾಸಕ ರಮಾನಾಥ ರೈ) ಕರೆದುಕೊಂಡು ಬರಬೇಕಿತ್ತು" ಎಂದೆಲ್ಲ ತಕರಾರು ತೆಗೆದರು. ಪತ್ರಕರ್ತರೂ ಬುದ್ಧಿವಂತರೇ. ಬ್ಯಾರಿ ಭಾಷೆ, ತುಳು ಎರಡನ್ನೂ ಸರಾಗ ಮಾತಾಡಬಲ್ಲವರು. ಕ್ರಮೇಣ ವಾತಾವರಣ ತಿಳಿಯಾಯಿತು.
ಘಟಕದ ಕೆಲಸ ಶುರುವಾಗಿದೆ. ಸುತ್ತ ಪಾಗಾರ ಹಾಕುವ ಕೆಲಸ ನಡೆಯುತ್ತಿದೆ. ಹಾಗಾಗಿ ಎಂಟೂವರೆ ಎಕ್ರೆ ವಿಸ್ತಾರದ ಘಟಕ ಕಣ್ಣಳತೆಗೆ ಸಿಗುತ್ತದೆ. ನಾನು ಹೋದ ಮೂಲ ಉದ್ದೇಶ ತ್ಯಾಜ್ಯ ತುಂಬುವ ಮೊದಲೇ ಗಬ್ಬುವಾಸನೆ ಹೊರಡುತ್ತಿರುವ ಆರೋಪ ನಿಜವೇ ಸುಳ್ಳೇ ಎಂದು ತಿಳಿಯಲು. ನಮ್ಮಲ್ಲಿ ಬಗೆಬಗೆಯದನ್ನು ತಿಂದು ಜೀರ್ಣಿಸಿಕೊಳ್ಳುವ ಜನ ಇದ್ದಾರಷ್ಟೆ. ಮೇವು ತಿನ್ನುವವರು, ಮಣ್ಣು(ಭೂಮಿ) ತಿನ್ನುವವರು, ಸಿಮೆಂಟ್, ಹೊಯ್ಗೆ, ಕಬ್ಬಿಣ ಇತ್ಯಾದಿ ತಿನ್ನುವವರು, ಮರ ತಿನ್ನುವವರು, ಪುಸ್ತಕ ತಿನ್ನುವವರು ಹೀಗೆ ವೈವಿಧ್ಯಮಯ ಆಹಾರಪದ್ಧತಿ ಇರುವ ಪುಣ್ಯಭೂಮಿ ನಮ್ಮದು. ನಾವೊಂದು ಕಡಿಮೆಯಾಗುವುದು ಯಾಕೆ ಅಂತ ನಮ್ಮೂರ ಕೆಲವರು ಕಲ್ಲು (ಕೆಂಪುಕಲ್ಲು) ತಿನ್ನುತ್ತಿದ್ದಾರೆ ಎಂಬುದು ನಮ್ಮಲ್ಲಿ ಕೆಲವರ ಅನುಮಾನ. ಅಂಥದನ್ನೆಲ್ಲ ತಿನ್ನುವವರಿಗೆ ಇಂದಲ್ಲ ನಾಳೆ ಹೊಟ್ಟೆ ನೋವು ಬರಲಾರದೆ? ಯಾಕೆ ಅನ್ನ ತಿನ್ನಬಾರದು? ಕಲ್ಲು, ಮಣ್ಣು ಯಾಕೆ ತಿನ್ನಬೇಕು? ನನಗೆ ಅರ್ಥವಾಗುವುದಿಲ್ಲ.
ನೋಡಿದರೆ ಪೂರ್ತಿ ಎಂಟೂವರೆ ಎಕ್ರೆ ಜಾಗ ಹರಪ್ಪ ಮೊಹೆಂಜೋದಾರೋದ ಹಾಗೆ ಕಾಣುತ್ತದೆ. ಎಲ್ಲ ಕಡೆ ಅಗೆದ ಕೆಂಪು ಮಣ್ಣಿನ ರಾಶಿ. ಕೆಂಪು ಕಲ್ಲು ಕಡಿದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ, ಉಳಿದಿರುವ ಭಾಗದಲ್ಲಿ ಕೆಂಪುಕಲ್ಲಿನ ಚೌಕಾಕಾರದ ಅಚ್ಚುಗಳು. ಎಡೆ ಎಡೆಯಲ್ಲಿ ವಾಹನಗಳು ಓಡಾಡಬಹುದಾದ ದಾರಿಗಳು. ಯಾರೋ ಈ ಜಾಗದಲ್ಲಿ ಕೆಂಪುಕಲ್ಲು ಕಡಿದಿದ್ದಾರೆ, ಸಾಗಿಸಿದ್ದಾರೆ ಎನ್ನುವುದು ಎಂಥ ದಡ್ಡನಿಗೂ ಸ್ಪಷ್ಟವಾಗುವ ಸನ್ನಿವೇಶ, ದೃಶ್ಯ. ಪತ್ರಕರ್ತ ಮಿತ್ರರು ಸುಮಾರು ಫೋಟೋ ತೆಗೆದರು. ಆ ಪೈಕಿ ಒಂದೆರಡನ್ನು ಇಲ್ಲಿಯೂ ಕೊಟ್ಟಿದ್ದೇನೆ.
ಈ ಘಟಕದ ನಿರ್ಮಾಣಕ್ಕೆ ಸರಕಾರ 62 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದೆಯಂತೆ. ಈ ಯೋಜನೆಯನ್ನು ಯಾರು ತಯಾರಿಸಿದರು, ಸ್ಥಳ ಪರಿಶೀಲನೆ ಯಾರು ಮಾಡಿದರು, ಹಾಗೆ ಪರಿಶೀಲನೆ ಮಾಡಿದವರು ಇಲ್ಲಿ ಕೆಂಪುಕಲ್ಲಿನ ನಿಕ್ಷೇಪವಿದೆ ಎಂದು ತಮ್ಮ ವರದಿಯಲ್ಲಿ ಕಾಣಿಸಿದ್ದಾರೆಯೆ? ಯಾರಾದರೂ ಈ ಕೆಂಪುಕಲ್ಲಿನ ಮೌಲ್ಯನಿರ್ಣಯ ಮಾಡಿದ್ದಾರೆಯೆ? ಇಲ್ಲಿ ಕೋರೆ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆಯೆ? ಕೆಂಪುಕಲ್ಲುಗಳನ್ನು ಈ ಜಾಗದಿಂದ ಈಗ ತೆಗೆದು ಸಾಗಿಸುತ್ತಿರುವವರು ಯಾರು? ಅದರ ಹಣ ಯಾರಿಗೆ ಹೋಗುತ್ತಿದೆ? ಈ ವಿದ್ಯಮಾನಗಳು ಬಂಟ್ವಾಳ ಪುರಸಭೆಯ ಗಮನಕ್ಕೆ ಬಂದಿದೆಯೆ? ಮುಂತಾದ ಅನೇಕ ಪ್ರಶ್ನೆಗಳು ಇಲ್ಲಿ ಹುಟ್ಟುತ್ತವೆ.ಅಲ್ಲಿ ಬೀಸುತ್ತಿರುವ ಶುದ್ಧ ಗಾಳಿಯನ್ನು ಮಲಿನಗೊಳಿಸುತ್ತಿವೆ.
ನನಗೆ ಇಲ್ಲಿ ಇದ್ದ, ಇರುವ, ಕೆಂಪುಕಲ್ಲಿನ ಮೌಲ್ಯ ನಿರ್ಣಯ ಮಾಡುವಷ್ಟು ಪರಿಣತಿ ಇಲ್ಲ. ಆದರೆ, ಅದು ಯೋಜನೆಯ ಮೊತ್ತವಾದ 62 ಲಕ್ಷವನ್ನು ಮೀರಿಸಬಹುದು ಎಂಬ ಅನುಮಾನವಿದೆ. ವಂಶ ಪತ್ರಿಕೆ ಪ್ರಕರಣವನ್ನು ಎರಡು ಸಂಚಿಕೆಗಳಲ್ಲಿ ವರದಿ ಮಾಡಿದೆ. ನೋಡೋಣ ಏನಾಗುತ್ತದೆಂದು.
[ಈ ಮೊದಲು ನೇತ್ರಾವತಿ ನದಿಯಲ್ಲಿ (ನದಿಯಲ್ಲಿ ಎಂದರೆ ನದಿಯ ದಂಡೆಯಲ್ಲಿ ಅಲ್ಲ. ನದಿಯ ಪಾತ್ರದಲ್ಲಿ, ನದಿ ಹರಿಯುವ ದಾರಿಯಲ್ಲಿ) ಜಲವಿದ್ಯುತ್ ಯೋಜನೆ ಕಾರ್ಯಗತಗೊಳಿಸುವಾಗಲೂ ಡೈನಮೈಟ್ ಬಳಸಿ ಒಡೆದು ತೆಗೆದ ಕಲ್ಲನ್ನು ಕಂಪೆನಿ ಮಾರಿ ಹಣ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅದು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ ಯೋಜನೆಗಳಿಗೆ ಅನುಮತಿ ನೀಡುವಾಗ ಅಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳ ಲೆಕ್ಕವನ್ನು ನಮ್ಮ ಅಧಿಕಾರಿಗಳೂ, ಎಂಜಿನಿಯರುಗಳೂ ಬುದ್ಧಿವಂತಿಕೆಯಿಂದ ಮರೆತುಬಿಡುತ್ತಿದ್ದಾರೆ ಎಂಬ ಅನುಮಾನ ನನಗಿದೆ. ಪಶ್ಚಿಮ ಘಟ್ಟಗಳ ಉದ್ದಕ್ಕೂ ಹತ್ತು ಮೂವತ್ತು ಕಿರು ಜಲವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರಕಾರ ಅನುಮತಿ ನೀಡಿದೆ. ಈ ಎಲ್ಲ ಕಡೆಯಲ್ಲೂ ಗ್ರಾನೈಟ್ ಶಿಲೆ ಸಾಕಷ್ಟು ಪ್ರಮಾಣದಲ್ಲಿ ದೊರೆಯಲೇಬೇಕು. ಅನುಮತಿ ನೀಡುವಾಗ ಅಧಿಕಾರಿಗಳು ಈ ಅಂಶವನ್ನು ಲೆಕ್ಕ ಹಿಡಿದಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಲು ನಿಶ್ಚಯಿಸಿದ್ದೇನೆ.]
********************
ತ್ಯಾಜ್ಯವಸ್ತುಗಳನ್ನು ಹೀಗೆ ಒಂದುಕಡೆ ತಂದು ಸುರಿಯುವುದರಿಂದ ಅಲ್ಲೊಂದು ನರಕ ಸೃಷ್ಟಿಯಾಗುತ್ತದೆ. ಸುತ್ತಮುತ್ತ ಮನುಷ್ಯರು ಬದುಕಲು ಸಾಧ್ಯವೇ ಇಲ್ಲದಂಥ ವಾತಾವರಣ ನಿರ್ಮಾಣವಾಗುತ್ತದೆ. ಈ ಜನರ ಕೂಗು ಕೇಳುವವರಾರು? ಹಾಗೆಂದು ಅಂಥವರ ಕೂಗನ್ನು ಮನ್ನಿಸಿದರೆ ಕಸ ಸುರಿಯುವುದೆಲ್ಲಿ? ಈ ಕಗ್ಗಂಟನ್ನು ಬಿಡಿಸಲು ನಾನು ಹೊರಡುವುದಿಲ್ಲ. ನನ್ನ ಬುದ್ಧಿಗೆ ಕಾಣುವ ಒಂದೇ ಪರಿಹಾರವೆಂದರೆ, ಅವರವರ ಮನೆಯ, ಅಂಗಡಿಯ, ಕಾರ್ಖಾನೆಯ ಕಸದ ವಿಲೇವಾರಿ ಅವರವರದೇ ಜವಾಬ್ದಾರಿಯಾಗಬೇಕು. ಯಾರೂ ತಾವು ಸೃಷ್ಟಿಸಿದ ಕಸವನ್ನು ಸಾರ್ವಜನಿಕ ಸ್ಥಳಕ್ಕೆ ತಂದು ಹಾಕಲು ಅವಕಾಶ ಇರಬಾರದು. ಕಸ ಸೃಷ್ಟಿಯಾಗದಂತೆ ಮಾಡುವುದೇ ಕಸ ವಿಲೇವಾರಿಯ ಅತ್ಯುತ್ತಮ ವಿಧಾನ. ಆದರೆ ಕಸ ಸೃಷ್ಟಿ ಮಾಡದಿದ್ದರೆ ಆಧುನಿಕ ನಾಗರಿಕತೆ ಉಸಿರು ಕಟ್ಟಿ ಸತ್ತೇ ಹೋಗುತ್ತದೆ. ಕಸ ಹೀಗೆ ಸೃಷ್ಟಿ ಮಾಡುತ್ತ ಹೋದರೂ ಮುಂದೊಂದು ದಿನ ಅದೇ ಪರಿಣಾಮ ಆದೀತು. ಆದರೆ ಅದು ಮುಂದೊಂದು ದಿನವಷ್ಟೆ? ಇವತ್ತಲ್ಲವಲ್ಲ? ಆಗ ನೋಡಿಕೊಂಡರಾಯಿತು!

3 ಕಾಮೆಂಟ್‌ಗಳು:

Govinda Nelyaru ಹೇಳಿದರು...

ಯೋಜನಾ ವೆಚ್ಚದ ಒಂದು ಬಾಗ ಅಲ್ಲಿರುವ ನೈಸರ್ಗಿಕ ಸಂಪತ್ತು ತುಂಬಿಕೊಡಬಹುದು. ಆದರೆ ನೀವು ಸ್ಪಷ್ಟ ಪಡಿಸಿದಂತೆ ಅದು ಸಮಾಜಕ್ಕೆ ಪ್ರಯೋಜನವಾಗುವುದೇ ಇಲ್ಲ.

ನಮ್ಮಲ್ಲಿ ನಾವು ಸೃಷ್ಟಿಸುವ ಕೊಳಚೆ ಬಗೆಗೆ ಜವಾಬ್ದಾರಿ ಇಲ್ಲ. We are responsible for trickle down effect of our actions ಅನ್ನುವ ಬದಲು ಬಿಸಾಕು ಸಂಸ್ಕೃತಿ ಅನುಕರಣೀಯ ಅನ್ನುತ್ತಿರುವ ಸಮಾಜ ನಮ್ಮದು. ಜನರಲ್ಲಿ ಜಾಗೃತಿ ಉಂಟಾದರೆ ಹಲವು ವಸ್ತುಗಳು ಕೊಳಚೆ ಸೇರುವುದರ ಬದಲು ಪುನರ್ಬಳಕೆ ಸಾದ್ಯ.

ಹರೀಶ ಮಾಂಬಾಡಿ ಹೇಳಿದರು...

Bhasmasurana kateyaytu...

ಅನಾಮಧೇಯ ಹೇಳಿದರು...

http://rukminimala.wordpress.com/2010/10/27/%E0%B2%95%E0%B2%B8-%E0%B2%B9%E0%B2%BE%E0%B2%95%E0%B3%81%E0%B2%B5-mula-nirmula%E0%B2%B5%E0%B2%BE%E0%B2%97%E0%B2%AC%E0%B3%87%E0%B2%95%E0%B3%81/#comments
ಕಸ ವಿಲೇವಾರಿಯ ಬಗ್ಗೆ ಈಗಾಗಲೇ ರುಕ್ಮಿಣಿಮಾಲಾ ತನ್ನ ಬ್ಲಾಗಿನಲ್ಲಿ ಬರೆದುಕೊಂಡದ್ದು ಮತ್ತು ಅದಕ್ಕೆ ಪೂರಕವಾಗಿ ನಡೆದಿರುವ ಚರ್ಚೆ ಅವಶ್ಯ ನೋಡಿ.
ಅಶೋಕವರ್ಧನ