ಶನಿವಾರ, ಜುಲೈ 31, 2010

ಎಸ್ ಇ ಝಡ್ ಕಂಪೆನಿಗೆ ಮಳೆನೀರು ಯಾಕೆ ಬೇಡ?


ಎಸ್ ಇ ಝಡ್ ಕಂಪೆನಿಗೆ ಮಳೆನೀರು ಯಾಕೆ ಬೇಡ?
ದಿನಾಂಕ 24-7-2010ರ ಉದಯವಾಣಿಯಲ್ಲಿ ಮಂಗಳೂರು ಎಸ್ ಇ ಝಡ್ ಕಂಪೆನಿಯು ಒಂದು ಜಾಹೀರಾತು ನೀಡಿ ನದಿನೀರು ಸಾಗಣೆಗೆ ಪೈಪುಗಳನ್ನು ಅಳವಡಿಸಲು ಒಂದು ಜಾಗತಿಕ ಟೆಂಡರನ್ನು ಆಹ್ವಾನಿಸಿದೆ. ಈ ಜಾಹೀರಾತಿನಲ್ಲಿ ಯಾವ ನದಿಯಿಂದ, ಯಾವ ಜಾಗದಿಂದ ಇತ್ಯಾದಿ ಯಾವ ವಿವರಗಳೂ ಇಲ್ಲ. ಈ ಕಾಮಗಾರಿಯ ಸಂಪೂರ್ಣ ವಿವರಗಳು ಬೇಕಾದಲ್ಲಿ ನೀವು ಕಂಪೆನಿಗೆ ರೂ. 25,000/- ಹಣ ಕೊಟ್ಟು ಬಿಡ್ಡಿಂಗ್ ಫಾರ್ಮುಗಳನ್ನು ಪಡೆದುಕೊಳ್ಳಬೇಕು!
ನೀರಿಗೇನು ವ್ಯವಸ್ಥೆ?
ಎಸ್ ಇ ಝಡ್ ಕಂಪೆನಿಗೆ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು ದಿನಕ್ಕೆ 6.75 ಕೋಟಿ ಲೀಟರ್ ನೀರೆತ್ತಲು ಸರಕಾರ ಅನುಮತಿ ನೀಡಿದೆ. ಈ ಪೈಕಿ ದಿನಕ್ಕೆ 5.625 ಕೋಟಿ ಲೀಟರು ನೀರನ್ನು ನೇತ್ರಾವತಿ ನದಿಯಿಂದಲೂ, ದಿನಕ್ಕೆ 1.125 ಕೋಟಿ ಲೀಟರು ನೀರನ್ನು ಗುರುಪುರ ನದಿಯಿಂದಲೂ ಅದು ಎತ್ತುವ ಸಾಧ್ಯತೆ ಇದೆ. ಎಂ ಆರ್ ಪಿ ಎಲ್ ಕಂಪೆನಿಗೆ ನೇತ್ರಾವತಿಯಿಂದ ದಿನಕ್ಕೆ 2.25 ಕೋಟಿ ಲೀಟರು ನೀರೆತ್ತಲು ಸರಕಾರ ಅನುಮತಿ ನೀಡಿದೆ. ಎಂದರೆ ಎಸ್ ಇ ಝಡ್ ಕಂಪೆನಿಗೆ ಎಂ ಆರ್ ಪಿ ಎಲ್ ಕಂಪೆನಿಗಿಂತ ಎರಡೂವರೆ ಪಟ್ಟು ಹೆಚ್ಚು ನೀರು ಎತ್ತಲು ಸರಕಾರ ಹೊಸದಾಗಿ ಅನುಮತಿ ನೀಡಿದೆ ಎಂದಾಯಿತು.
ಎ ಎಂ ಆರ್ ಕಂಪೆನಿಯು ಜಲವಿದ್ಯುತ್ ಉತ್ಪಾದನೆ ಮಾಡಲು ಸರಕಾರದಿಂದ ಅನುಮತಿ ಪಡೆದು ಬಂಟ್ವಾಳ ತಾಲೂಕಿನ ಶಂಬೂರಿನಲ್ಲಿ ನೇತ್ರಾವತಿ ನದಿಗೆ ಒಂದು ಅಣೆಕಟ್ಟು ಹಾಕಿದೆಯಷ್ಟೆ. ಈ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರನ್ನು ಎಸ್ ಇ ಝಡ್ ಕಂಪೆನಿ ತನ್ನ ನೆಲೆಗೆ ಸಾಗಿಸಲು ಉದ್ದೇಶಿಸಿದೆ. ಈ ಬಗ್ಗೆ ತಾನು ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆಂದು ಅದು ತಿಳಿಸಿದೆ. ಆದರೆ ಆ ಒಪ್ಪಂದದಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. (ಈ ಮಾಹಿತಿಯನ್ನು ಕೇಳಿ ನಾನು ಎಸ್ ಇ ಝಡ್ ಕಂಪೆನಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಕಂಪೆನಿ ಮಾಹಿತಿಯನ್ನು ನೀಡಲು ನಿರಾಕರಿಸಿತು. ನಾನು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಅಲ್ಲಿ ಕಂಪೆನಿಯು ತಾನು ಹೂಡಿರುವ ಬಂಡವಾಳದಲ್ಲಿ ಸರಕಾರದ ಗಣನೀಯ ಪಾಲು (substantial) ಇಲ್ಲವಾದ್ದರಿಂದ ತನ್ನನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಅಹವಾಲು ಮಂಡಿಸಿದೆ. ಈ ಬಗ್ಗೆ ಮಾಹಿತಿ ಹಕ್ಕು ಆಯೋಗ ವಿಚಾರಣೆ ನಡೆಸುತ್ತಿದ್ದು ತೀರ್ಪು ಇನ್ನೂ ಬರಬೇಕಾಗಿದೆ.)
ಗುರುಪುರ ನದಿಯ ಯಾವ ಸ್ಥಳದಿಂದ ಕಂಪೆನಿಯು ನೀರು ಸಾಗಿಸಲು ಉದ್ದೇಶಿಸಿದೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ. .
ಒಟ್ಟಿನಲ್ಲಿ ಈ ಮೊದಲು ಎಂ ಆರ್ ಪಿ ಎಲ್ ನ ಪೈಪುಗಳನ್ನು ಅಳವಡಿಸಿದಂತೆಯೇ, ಎಂ ಎಸ್ ಇ ಝಡ್ ಕಂಪೆನಿಯ ಪೈಪು ಅಳವಡಿಸುವ ಕಾರ್ಯವು ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಈ ಪೈಪುಗಳು ಯಾವ ಅಳತೆಯವು, ಅದಕ್ಕೆ ಎಷ್ಟು ಜಾಗ ಬೇಕಾಗಬಹುದು ಎಂಬ ವಿಷಯ ಸ್ಪಷ್ಟವಿಲ್ಲ. ಈ ಎಲ್ಲ ವಿಷಯಗಳಲ್ಲಿ ಮಾಹಿತಿ ಬೇಕಾದವರು ಕಂಪೆನಿಯನ್ನು ಅಥವಾ ಅದರ ಕಂಟ್ರಾಕ್ಟುದಾರರನ್ನು ಸಂಪರ್ಕಿಸುವ ಬದಲು ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಅಥವಾ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸುವುದೇ ಉತ್ತಮ ಎಂದು ನನ್ನ ಅಭಿಪ್ರಾಯ.
ಎಂ ಎಸ್ ಇ ಝಡ್ ಕಂಪೆನಿಯು ಒಟ್ಟು ಸುಮಾರು 4000 ಎಕ್ರೆ ಸ್ಥಳದಲ್ಲಿ ಸ್ಥಾಪಿತವಾಗುತ್ತದೆ ಎಂದು ಹೇಳಲಾಗಿದೆ. ಈ ಪೈಕಿ ಈಗ ಕಂಪೆನಿಯು ಸ್ವಾಧೀನ ಪಡಿಸಿಕೊಂಡಿರುವುದು ಹತ್ತಿರ ಹತ್ತಿರ 2000 ಎಕ್ರೆ ಭೂಮಿಯನ್ನು. ಇನ್ನುಳಿದ ಭೂಮಿಯ ಸ್ವಾಧೀನಕ್ಕೆ ಕಂಪೆನಿಯು ತೀವ್ರವಾದ ವಿರೋಧವನ್ನು ಎದುರಿಸುತ್ತಿದೆ. ಪಾರ್ಲಿಮೆಂಟ್ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರೇ ತಾನು ಇನ್ನೂ ಹೆಚ್ಚಿನ ಭೂಸ್ವಾಧೀನವನ್ನು ವಿರೋಧಿಸುತ್ತೇನೆ ಎಂದು ಹಲವಾರು ಬಾರಿ ಹೇಳಿಕೆಗಳನ್ನು ನೀಡಿದ್ದಾರೆ. ತನ್ನ ಕೃಷಿಭೂಮಿಯನ್ನು ಸರಕಾರ ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ಕೃಷಿಕ ಗ್ರೆಗರಿ ಪತ್ರಾವೋ ಅವರು ನಡೆಸಿರುವ ಹೋರಾಟ ಅಖಿಲ ಭಾರತ ಪ್ರಸಿದ್ದಿ ಪಡೆದಿದೆ. ಒಟ್ಟಿನಲ್ಲಿ ಭೂಸ್ವಾಧೀನದ ವಿರುದ್ಧ ದೊಡ್ಡದೊಂದು ಚಳುವಳಿಯೇ ಹುಟ್ಟಿಕೊಂಡಿದ್ದು, ಪೇಜಾವರ ಸ್ವಾಮಿಗಳು, ಕೇಮಾರು ಸ್ವಾಮಿಗಳು, ಕ್ರೈಸ್ತ, ಮುಸ್ಲಿಂ ಧಾರ್ಮಿಕ ನಾಯಕರು ಎಲ್ಲರೂ ಒಟ್ಟಾಗಿ ಭೂಸ್ವಾಧೀನವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪೆನಿಯು ಇನ್ನೂ ಹೆಚ್ಚಿನ ಭೂಸ್ವಾಧೀನ ಮಾಡಿಕೊಳ್ಳುವುದನ್ನು, ಅದು ಆದ ಮೇಲೆ ಮಾತ್ರ ಒಪ್ಪಿಕೊಳ್ಳಬಹುದೇ ಹೊರತು ಆಗುವ ಮೊದಲು ಅಲ್ಲ.
ನೀರಿಗೆ ಅನ್ಯಮೂಲಗಳಿಲ್ಲವೆ?
ತನಗೆ ಬೇಕಾಗಿರುವ ಒಟ್ಟು ನೀರಿನ ಪ್ರಮಾಣ ದಿನಕ್ಕೆ 20.25 ಕೋಟಿ ಲೀಟರುಗಳು; ಈ 8.1 ಕೋಟಿ ಲೀಟರ್ ನೀರನ್ನು ಮಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸುವ ಮೂಲಕ; 5.4 ಕೋಟಿ ಲೀಟರ್ ನೀರನ್ನು ಮಳೆನೀರು ಸಂಗ್ರಹದ ಮೂಲಕ ಮತ್ತು ಉಳಿದ 6.75 ಕೋಟಿ ಲೀಟರ್ ನೀರನ್ನು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಎತ್ತುವ ಮೂಲಕ ಒದಗಿಸಿಕೊಳ್ಳುವುದಾಗಿ ತಾ. 6-10-2009ರ ಉದಯವಾಣಿ ಪತ್ರಿಕೆಯಲ್ಲಿ ನೀಡಿದ ಜಾಹೀರಾತಿನಲ್ಲಿ ಕಂಪೆನಿಯು ಘೋಷಿಸಿದೆ. ಈ ಜಾಹೀರಾತಿನ ಕುರಿತು ನಾನು ಕಂಪೆನಿಯಿಂದ ಹೆಚ್ಚಿನ ಕೆಲವು ಮಾಹಿತಿಗಳನ್ನು - ಮುಖ್ಯವಾಗಿ ಮಳೆ ನೀರು ಸಂಗ್ರಹದ ಬಗ್ಗೆ - ಕೇಳಿದ್ದೆ. ಅದಕ್ಕೆ ಉತ್ತರ ಬರೆಯುವಾಗ ಕಂಪೆನಿಯು ಹೀಗೆ ಹೇಳಿತ್ತು. "ಮಂಗಳೂರು ವಿಶೇಷ ಆರ್ಥಿಕ ವಲಯ ಸ್ಥಾಪನೆಯ ಕಾಮಗಾರಿಯು ಈಗಷ್ಟೇ ಆರಂಭವಾಗಿದ್ದು, ತತ್ ಕ್ಷಣಕ್ಕೆ ದಿನವಹಿ 45 ಎಂಜಿಡಿ (ಎಂದರೆ 20.25 ಕೋಟಿ ಲೀಟರ್) ನೀರಿನ ಅವಶ್ಯಕತೆ ಇರುವುದಿಲ್ಲ. ಬಹು ಉತ್ಪಾದನಾ ವಿಶೇಷ ಆರ್ಥಿಕ ವಲಯ ಸ್ಥಾಪನೆಯಾಗುವ ಸಂದರ್ಭದಲ್ಲಿ ನೀರಿನ ಅವಶ್ಯಕತೆಗೆ ಅನುಗುಣವಾಗಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು"
ಎಂದರೆ ಕಂಪೆನಿಯು ಮಳೆನೀರು ಸಂಗ್ರಹಿಸಿ ಬಳಸುವ ಯೋಜನೆಯನ್ನು ಜಾಹೀರಾತಿಗೆ ಸೀಮಿತಗೊಳಿಸಿದೆ. ಕಾರ್ಯಗತ ಮಾಡುವ ಗಂಭೀರ ಚಿಂತನೆಯನ್ನು ನಡೆಸಿಯೇ ಇಲ್ಲ. ನೇತ್ರಾವತಿ ನದಿಯಲ್ಲಿ ನೀರು ಇರುವುದರಿಂದ ಅದು ನಿಶ್ಚಿಂತೆಯಿಂದ ನೇರವಾಗಿ ಆ ನೀರಿಗೇ ಕೈ ಹಾಕಿದೆ!
ಮಳೆಯ ನೀರು ಶ್ರೇಷ್ಠ - ಅದನ್ನೇ ಸಂಗ್ರಹಿಸಲಿ
ಆದರೆ ಕಂಪೆನಿ ನದಿಯ ನೀರಿಗೆ ಕೈ ಹಾಕುವ ಮೊದಲೇ ತನಗೆ ಬೇಕಾದ ನೀರಿಗಾಗಿ ಮಳೆ ನೀರು ಸಂಗ್ರಹದ ಯೋಜನೆಯನ್ನು ಯಾಕೆ ಕೈಗೆತ್ತಿಕೊಳ್ಳಬಾರದು? ಹಾಗೆ ಮಾಡಲು ಅದಕ್ಕೆ ಏನು ಸಮಸ್ಯೆ ಇದೆ? ನದಿಯಿಂದ ನೀರು ಕೊಂಡು ಹೋಗುವುದೆಂದರೆ, ಪೈಪುಗಳನ್ನು ಅಳವಡಿಸುವ ದಾರಿಯುದ್ದಕ್ಕೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳ ನಾಶ ಮಾಡಲೇ ಬೇಕಾಗುತ್ತದೆ. ಎಷ್ಟೋ ಕಡೆ ಕೃಷಿಭೂಮಿಯನ್ನೂ ಇದಕ್ಕಾಗಿ ಬಲಿಕೊಡಬೇಕಾಗಬಹುದು. ಅಲ್ಲದೆ, ನೀರೆತ್ತಲು ಅಳವಡಿಸುವ ಮೋಟರುಗಳು ಬೃಹತ್ ಪ್ರಮಾಣದಲ್ಲಿ ಅಮೂಲ್ಯವಾದ ವಿದ್ಯುತ್ತನ್ನು ನುಂಗುತ್ತವೆ. ಅದರ ಬದಲಿಗೆ ಕಂಪೆನಿಯೇ ಹೇಳುವಂತೆ, ತತ್ಕಾಲದ ಅಗತ್ಯಕ್ಕೆ ಮಳೆನೀರು ಸಂಗ್ರಹಿಸಿ ದಿನಕ್ಕೆ 5.4 ಕೋಟಿ ಲೀಟರ್ ನೀರನ್ನು ಯಾಕೆ ಪೂರೈಸಿಕೊಳ್ಳಬಾರದು? ವೈಜ್ಞಾನಿಕವಾಗಿ ಸಂಗ್ರಹಿಸಿದರೆ, ಮಳೆ ನೀರು ಪೃಕೃತಿಯಲ್ಲಿ ದೊರೆಯುವ ಅತ್ಯಂತ ಪರಿಶುದ್ಧ ನೀರೆಂಬುದನ್ನೂ ಇಲ್ಲಿ ಪರಿಗಣಿಸಬೇಕು.
ಮಳೆ ನೀರು ಸಂಗ್ರಹದ ಯೋಜನೆಯನ್ನೇ ಮೊದಲು ಕೈಗೆತ್ತಿಕೊಳ್ಳಬೇಕು. ಮುಂದೆ ಭೂಸ್ವಾಧೀನ ಮಾಡಿಕೊಳ್ಳುವುದು ಸಾಧ್ಯವಾದರೆ ಮಾತ್ರ ನದಿಯ ನೀರಿಗೆ ಕೈ ಹಾಕುವ ಬಗ್ಗೆ ಯೋಚಿಸಬಹುದು, ಈ ನಡುವೆ ಮಂಗಳೂರಿನ ಕೊಳಚೆ ನೀರು ಶುದ್ಧೀಕರಣ ಸ್ಥಾವರಗಳ ಕಾಮಗಾರಿಯನ್ನು ಆದಷ್ಟೂ ತ್ವರಿತವಾಗಿ ಮುಗಿಸಬೇಕು ಎಂದು ಸಾರ್ವಜನಿಕರೂ, ಜಿಲ್ಲಾಧಿಕಾರಿಗಳೂ, ಬಂಟ್ವಾಳ ಪುರಸಭೆಯೂ, ಎಲ್ಲಕ್ಕಿಂತ ಮುಖ್ಯವಾಗಿ ಮಂಗಳೂರಿನ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಜವಾಬ್ದಾರಿ ಇರುವ ಮಹಾನಗರ ಪಾಲಿಕೆಯೂ ಕಂಪೆನಿಯ ಮೇಲೆ ಒತ್ತಡ ತರುವ ಅಗತ್ಯವಿದೆ.

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ನೇತ್ರಾವತಿಯ ಜಲಾನಯನ ಪ್ರದೇಶದಲ್ಲಿ ಇನ್ನೂ ಚಿತ್ರದುರ್ಗದ ಬಣ್ಣದಚೊಣ್ಣದವ ಬಕೆಟ್ ಹಿಡಿದು ನಿಂತೇ ಇದ್ದಾನೆ.. ಸ್ವಲ್ಪೇ ಕೆಳಗೆ ಪ್ರತಿ ತೊರೆಗೊಬ್ಬರಂತೆ ಗುಜರಿಯಂಗಡಿಯವರು ನೀರರಾಟೆ ಆಡಲು ಸಜ್ಜಾಗಿದ್ದಾರೆ/ ಆಗುತ್ತಿದ್ದಾರೆ. ಅಲ್ಲಿನ ಪುಣ್ಯಫಲವನ್ನು ರಾಜ್ಯಾದ್ಯಂತ ಪ್ರಸರಿಸುವ ಉತ್ಸಾಹಿಗಳು ಹೊಸಹೊಸ ದಿಕ್ಕುಗಳಲ್ಲಿ ಅಸಡ್ಡಾಳ ಮರಕಳೆದು ಸಾಲು ಕಂಬ ಊರಲು ಪ್ರಥಮಾದ್ಯತೆಯ ಅರ್ಜಿ ಹಿಡಿದು ನಿಂತಿದ್ದಾರೆ. ಹೆದ್ದಾರಿ ಚತುಷ್ಪಥ, ಷಟ್ಪಟ್ಪಥವಾಗುವುದು ಅನಿವಾರ್ಯ. ಕಳ್ಳದಾರಿ ಜನಪರವಾದ್ದರಿಂದ ಸಕ್ರಮವಾಗಲೇಬೇಕು. ರೈಲು ಬ್ರಾಡ್ ಗೇಜ್ ಆದದ್ದು ದ್ವಿಪಥವಾಗಲು, ವಿದ್ಯುದೀಕರಣವಾಗಲು ಹೆಚ್ಚುದಿನ ಬೇಡ. ಪೆಟ್ರೋಲ್ ಕೊಳಾಯಿ ಜಾಡು ದಿನಕ್ಕೊಂದೊಂದು ಹೊಸ ಹಾಡು. ಕಬ್ಬಿಣದುಂಡೆ ಕಟ್ಟುವವರಿಗೆ ಪರಿಸರ ಸ್ನೇಹದ ಪಟ್ಟ, ಅನ್ನದ ತಟ್ಟೆಯಲ್ಲಿ ಯಂತ್ರ ಸ್ಥಾವರಗಳ ಕಿಟ್ಟ, ಕುಡಿನೀರ ಪ್ರತಿ ಭಾವಿಯಲ್ಲೂ ಕಲ್ಲೆಣ್ಣೆ ಕೊಟ್ಟಾ ಶಿವನೇ ವರವ ಕೊಡೂ ನೇತ್ರಾವತಿ ಅಕ್ಷಯವಾಗಲಿ.
ಅಶೋಕವರ್ಧನ

ಭಾಮತಿ ಹೇಳಿದರು...

ಮಳೆ ನೀರು, ಕಿರುಜಲವಿದ್ಯುತ್, ಕಿರುಅನಿಲವಿದ್ಯುತ್, ಸೌರವಿದ್ಯುತ್ - ಇವುಗಌಲ್ಲಿ ಹೂಡಿಕೆ ಮತ್ತು 'ಹೊಡೆಯಲು ಸಿಗುವುದು' ಪ್ರಾಯಃ ಕಡಿಮೆ. ಹಾಗಾಗಿ ಸ್ಥಾಪಿತ ಸ್ವಹಿತಾಸಕ್ತರು ಅನಾಸಕ್ತಿಯೋಗ ಸಾಧಕರಾಗಿದ್ದಾರೆ.

ಅನಾಮಧೇಯ ಹೇಳಿದರು...

ಈಗ ಹೊಸ ತರಲೆ ಮೊನ್ನೆ ಪತ್ರಿಕೆಗಳಲ್ಲಿ ಓದಿದೆ - ‘ಎತ್ತಿನಹಳ್ಳದಿಂದ ನೀರೆತ್ತಿ ಕೋಲಾರ ಹಸುರೀಕರಣ’. ಮತ್ತದೇ ಪಲ್ಲವಿ ‘ಇದು ಪೂರ್ಣ ಪರಿಸರ ಸ್ನೇಹಿ. ವ್ಯರ್ಥವಾಗಿ ಸಮುದ್ರ ಸೇರುವ ನೀರಿನ ಸದುಪಯೋಗ’. ಮಹಾ ಅಧಿಕಪ್ರಸಂಗತ್ವದಲ್ಲಿ ‘ಇದಕ್ಕೆ ಯಾವ ಜನವಿರೋಧವೂ ಇಲ್ಲ’ ಎಂದೂ ಅದೇ ಕೊಳಕು ಬಾಯಿ ಘೋಷಿಸಿದೆ. ಉಳ್ಳಾಲ ಬೆಂಗರೆಯಲ್ಲಿ ಬಾಯಿಕಟ್ಟಿ, ಫರಂಗಿಪೇಟೆ-ತುಂಬೆಯಲ್ಲಿ ಅಡ್ಡಗಟ್ಟಿ ಮೇಲೆ ಹೋದಂತೆ ಯಾವ ಇಲಾಖೆಗೂ ಲೆಕ್ಕಕ್ಕೆ ಸಿಕ್ಕದ ಯೋಜನೆಗಳಲ್ಲಿ ಮುಳುಗಿಹೋದ ನೇತ್ರಾವತಿಯ ಉಪನದಿ ಕುಮಾರಧಾರೆಯ ಉಪನದಿ ಗುಂಡ್ಯಹೊಳೆಯ ಉಪಹೊಳೆಯಾದ ಕೆಂಪೊಳೆಯ ಮೂಲರೂಪವೇ ಎತ್ತಿನಹಳ್ಳ ಎನ್ನುವುದನ್ನು ಸ್ಪಷ್ಟಪಡಿಸದೇ ಮತ್ತೆ ನೇತ್ರಾವತಿಗೇ ಅರ್ಥಾತ್ ಪ್ರಕೃತಿಯ ಸಹಜ ಸ್ಥಿತಿಗೇ ಬಾಯಿಹಾಕುವ ಈ ಮಂದಿಗೆ ಒಂದೇ ಹೆಸರು ಕೆಚ್ಚಲು-ಕಟುಕರು.

ಗುಂಡ್ಯಜಲವಿದ್ಯುತ್ ಯೋಜನೆಯ ಸಣ್ಣಾತಿಸಣ್ಣ ರಿಯಾಯ್ತಿ ಎನ್ನುವಂತೆ ‘ಹೊಂಗಡಳ್ಳ ಬಚಾವ್’ ಎನ್ನುವ ವಾರ್ತೆ ಕೇಳಿದ ಹೊಸದರಲ್ಲಿ, ಸ್ವಲ್ಪ ಸಂತೋಷದಲ್ಲೇ ಮೊನ್ನೆ ಆ ವಲಯದಲ್ಲಿ ಚಾರಣಕ್ಕೆ ಹೋಗಿದ್ದಾಗ ಕಂಡ ದೃಶ್ಯ ಭೀಕರ. ಗೋರ್ಮನೆ ಬೆಟ್ಟ, ಹದಿನಾರು ಬೆಟ್ಟ ಎಂಬ ವಲಯದ ತೊರೆಗಳೆಲ್ಲಾ ರಕ್ತ ಕಾರುತ್ತಿವೆ. ಕಾಡೆಲ್ಲಾ ‘ಅಧಿಕೃತವಾಗಿ’ ಲಾರಿಯೇರಿ (ಕೆಲವೊಮ್ಮೆ ದಿನಕ್ಕೆ ಐವತ್ತು ಲೋಡು ಹೋದದ್ದು ಉಂಟಂತೆ!)ನಾಡು ಸೇರುತ್ತಿವೆ. ಲಾರಿಗಳ ಓಡಾಟದ ಸೌಕರ್ಯಕ್ಕಾಗಿ ಮಾರಿಹಲಗೆಗಳು (ಬುಲ್‍ಡೋಜರ್) ಬೆಟ್ಟದ ಮೈಯಲ್ಲಿ ಮಾಡಿದ ಗಾಯಗಳು ‘ಪರಿಸರಪ್ರೇಮಿ ಕ್ಕೆ.ಐ.ಸಿ.ಒ.ಎಲ್’ ಸಾಧನೆಗೆ ಕಡಿಮೆಯೇನಿಲ್ಲ. ಹೊಂಗಡಳ್ಳದ ಪ್ರಸ್ತಾಪ ಬಿದ್ದುಹೋದರೂ ನಮ್ಮ ದಂಧೆಗೆ ಬಾಧಕವಿಲ್ಲ ಎನ್ನುವವರು ಈಗ ಎತ್ತಿನಹಳ್ಳದ ಎತ್ತರಗಳಿಗೂ ದಂಡೆತ್ತಿ ಹೋಗುವುದನ್ನು ಕಲ್ಪಿಸಿ ನನ್ನ ಆತಂಕ ನೆಲೆಗಾಣದಾಗಿದೆ. ಏನು ಮಾಡೋಣ ರಾಯರೇ????
ಅಶೋಕವರ್ಧನ