ಬುಧವಾರ, ಅಕ್ಟೋಬರ್ 10, 2018



ಪಂಪಭಾರತ ಆಶ್ವಾಸ ೨ ಪದ್ಯಗಳು: ೧೮ರಿಂದ ೨೯


ಚಂ|| ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ|
     ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ||
     ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ|
     ಬಗೆಯದೆ ಮಿೞ್ತುದೇವತೆಯನೞ್ಕಱಳುರ್ಕೆಯಿನಪ್ಪುವಂತೆವೋಲ್||೧೮|| 
(ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್, ತಡಂ ಆಡೆ ಗಾಡಿ, ದಿಟ್ಟಿಗಳೊಳ್ ಅನಂಗರಾಗರಸಂ ಉಣ್ಮುವಿನಂ ನಡೆ ನೋಡಿ ನೋಡಿ, ತೊಟ್ಟಗೆ ಕೊಳೆ ಮೇಲೆ ಪಾಯ್ದು ಅವಳನ್ ಅಪ್ಪಿದನ್ ಆ ವಿಭು ತನ್ನ ಶಾಪಮಂ ಬಗೆಯದೆ, ಮಿೞ್ತುದೇವತೆಯನ್  ಅೞ್ಕಱ್  ಅಳುರ್ಕೆಯಿನ್ ಅಪ್ಪುವಂತೆವೋಲ್)

ಮಾದ್ರಿಯು ತೊಟ್ಟ ಹೂವಿನ ಹಾರ ಅವಳ ಮೆದುಮೊಲೆಗಳನ್ನು ಅಲಂಕರಿಸಿತ್ತು. ಅವಳ ಆ ಚೆಲುವು ಪಾಂಡುರಾಜನಲ್ಲಿ ಹೊಸ  ಹುರುಪು ಹೊಮ್ಮಿಸಿತ್ತು. ಕಣ್ಣುಗಳಿಂದ ಕಾಮರಸ ಚಿಮ್ಮುವ ಹಾಗೆ ಪಾಂಡುರಾಜ ಅವಳನ್ನೇ ದಿಟ್ಟಿಸಿ ನೋಡಿದ. ಹಾಗೆ  ನೋಡುತ್ತ ನೋಡುತ್ತಲೇ, ಇದ್ದಕ್ಕಿದ್ದಂತೆ, ತನ್ನ ಮೇಲಿದ್ದ ಮುನಿಯ ಶಾಪವನ್ನೂ ಮರೆತು, ಅವಳ ಮೇಲೆ ಹಾಯ್ದು, ಮೃತ್ಯುದೇವತೆಯನ್ನು ಬಹಳ ಪ್ರೀತಿಯಿಂದ ಅಪ್ಪಿಕೊಳ್ಳುವಂತೆ, ಅವಳನ್ನು ಅಪ್ಪಿಕೊಂಡ.

ವ|| ಅಂತಪ್ಪುವುದುಂ ವಿಷಮ ವಿಷವಲ್ಲಿಯನಪ್ಪಿದಂತೆ ತಳ್ತ ನಲ್ಲಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗೆ-
( ಅಂತು ಅಪ್ಪುವುದುಂ, ವಿಷಮ ವಿಷವಲ್ಲಿಯನ್ ಅಪ್ಪಿದಂತೆ, ತಳ್ತ ನಲ್ಲಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗೆ)

ಹಾಗೆ ಅಪ್ಪಿಕೊಂಡದ್ದೇ ತಡ, ಕೇಡುಗೈಯುವ ವಿಷದ ಬಳ್ಳಿಯನ್ನು ಅಪ್ಪಿದಂತಾಗಿ, ಅವನನ್ನು ಹಿಡಿದಿದ್ದ ತಾವರೆಮೆದುವಾದ ಅವಳ ಕೈಗಳೇ ಅವನ ಪಾಲಿನ ಯಮಪಾಶವಾಗಲು,

ಚಂ|| ಬಿಗಿದಮರ್ದಿರ್ದ ತೋಳ್ ಸಡಿಲೆ ಜೋಲೆ ಮೊಗಂ ಮೊಗದಿಂದಮೊಯ್ಯಗೊ|
     ಯ್ಯಗೆ ನಗೆಗಣ್ಗಳಾಲಿ ಮಗುೞ್ದಂತಿರೆ ಮುಚ್ಚಿರೆ ಸುಯ್ಯಡಂಗೆ ಮೆ||
     ಲ್ಲಗೆ ಮಱಸೊಂದಿದಂದದೊಳೆ ಜೋಲ್ದ ನಿಜೇಶನನಾ ಲತಾಂಗಿ ತೊ|
     ಟ್ಟಗೆ ಕೊಳೆ ನೋಡಿ ಕೆಟ್ಟೆನಿನಿಯಂ ಮಱಸೊಂದಿದನೋ ಬೞಲ್ದನೋ||೧೯|| 
(ಬಿಗಿದು ಅಮರ್ದಿರ್ದ ತೋಳ್ ಸಡಿಲೆ, ಜೋಲೆ ಮೊಗಂ ಮೊಗದಿಂದಂ, ಒಯ್ಯಗೊಯ್ಯಗೆ ನಗೆಗಣ್ಗಳ್ ಆಲಿ ಮಗುೞ್ದಂತಿರೆ ಮುಚ್ಚಿರೆ, ಸುಯ್ ಅಡಂಗೆ, ಮೆಲ್ಲಗೆ ಮಱಸೊಂದಿದ ಅಂದದೊಳೆ ಜೋಲ್ದ ನಿಜೇಶನನ್ ಆ ಲತಾಂಗಿ ತೊಟ್ಟಗೆ ಕೊಳೆ ನೋಡಿ, ‘ಕೆಟ್ಟೆನ್ ಇನಿಯಂ ಮಱಸೊಂದಿದನೋ ಬೞಲ್ದನೋ’)
ಅವಳನ್ನು ಬಿಗಿಯಾಗಿ ಅಪ್ಪಿ ಹಿಡಿದಿದ್ದ ಅವನ ತೋಳುಗಳು  ಸಡಿಲಾದವು. ಅವಳ ಮುಖಕ್ಕೆ ತಾಗಿದಂತಿದ್ದ ಅವನ ಮುಖ ಜೋತು ಮೆಲ್ಲನೆ ಕೆಳಜಾರಿತು. ಮೆಲ್ಲಮೆಲ್ಲನೆ ಕಣ್ಣ ಪಾಪೆಗಳು ಒಳಸರಿದಂತಾಗಿ ಕಣ್ಣುಗಳು ಮುಚ್ಚಿಕೊಂಡವು. ಉಸಿರು ಅಡಗಿತು. ಮೆಲ್ಲನೆ ನಿದ್ರೆಗೆ ಜಾರಿದವನಂತೆ ಜೋತುಬಿದ್ದ ಪತಿಯನ್ನು ನೋಡಿ ಮಾದ್ರಿಯು ‘ನಾನು ಕೆಟ್ಟೆ! ನಲ್ಲನು ನಿದ್ರೆ ಹೋದನೋ? ಆಯಾಸಗೊಂಡನೋ?’

ವ|| ಎಂದು ಪಱಿಪಟ್ಟ ಸುಯ್ಯುಮಂ ಕೋಡುವ ಮೆಯ್ಯುಮಂ ಕಂಡು ಪರಲೋಕ ಪ್ರಾಪ್ತನಾದುದನಱಿತು- 
(ಎಂದು ಪಱಿಪಟ್ಟ ಸುಯ್ಯುಮಂ ಕೋಡುವ ಮೆಯ್ಯುಮಂ ಕಂಡು,  ಪರಲೋಕ ಪ್ರಾಪ್ತನ್ ಆದುದನ್ ಅಱಿತು-)

ಎಂದು ತುಂಡಾದ ಉಸಿರನ್ನೂ, ತಣ್ಣಗಾದ ಮೈಯನ್ನೂ ಕಂಡು, ಪತಿಯು ತೀರಿಕೊಂಡಿರುವುದನ್ನು ತಿಳಿದು 

ಕಂ|| ತಾಪಸನ ಶಾಪಮೆಂಬುದು|
     ಪಾಪದ ರೂಪಱಿತುಮಱಿಯದಂತೇಕೆ ಮನಂ||
     ಗಾಪೞಿದು ಬಂದು ಮುಟ್ಟಿದೆ|
     ಯೋಪನೆ ನೀನೆನ್ನ ಪಾಪಕರ್ಮಿಯ ಮೆಯ್ಯಂ||೨೦|| 
(ತಾಪಸನ ಶಾಪ ಎಂಬುದು ಪಾಪದ ರೂಪು, ಅಱಿತುಂ ಅಱಿಯದಂತೆ ಏಕೆ ಮನಂಗಾಪು ಅೞಿದು ಬಂದು ಮುಟ್ಟಿದೆ   ಓಪನೆ ನೀನ್ ಎನ್ನ, ಪಾಪಕರ್ಮಿಯ, ಮೆಯ್ಯಂ)

ತಾಪಸನ ಶಾಪ ಎನ್ನುವುದು (ನೀನು ಮಾಡಿದ) ಪಾಪದ ಮೂರ್ತರೂಪ. ಇದು ಗೊತ್ತಿದ್ದೂ ಇಲ್ಲದವನಂತೆ, ಮನಸಿನ ಎಚ್ಚರವನ್ನು ಕಳೆದುಕೊಂಡು, ನಲ್ಲನೆ, ನೀನು ಏಕೆ ಬಂದು ನನ್ನ, ಪಾಪಕರ್ಮಿಯ, ಮೈಮುಟ್ಟಿದೆ?
    
ಕಂ| ನೀನ್ನಿನ್ನ ಸಾವನದನೆನ|
     ಸುನ್ನೆನೆಯದೆ ನೆರೆವೆನೆಂಬ ಬಗೆಯೊಳ್ ಬಂದೈ||
     ನಿನ್ನೊಡನೆ ವಂದು ದಿವದೊಳ್|
     ನಿನ್ನ ಮನೋರಥಮನರಸ ನೆಱಪದೆ ಮಾಣೆಂ||೨೧|| 
(ನೀನ್ ನಿನ್ನ ಸಾವನ್ ಅದನ್ ಎನಸುಂ ನೆನೆಯದೆ ‘ನೆರೆವೆನ್’ ಎಂಬ ಬಗೆಯೊಳ್ ಬಂದೈ! ನಿನ್ನೊಡನೆ ವಂದು ದಿವದೊಳ್  ನಿನ್ನ ಮನೋರಥಮನ್ ಅರಸ ನೆಱಪದೆ ಮಾಣೆಂ)

ನೀನು ನಿನ್ನ ಸಾವನ್ನು ಸಹ ಲೆಕ್ಕಿಸದೆ, ನನ್ನನ್ನು ಸೇರುವ ಆಸೆಯಿಂದ ಬಂದೆಯಲ್ಲ! ನಿನ್ನೊಡನೆ ಬಂದು ಸ್ವರ್ಗದಲ್ಲಾದರೂ ನಿನ್ನ ಬಯಕೆಯನ್ನು ಪೂರೈಸದೆ ಬಿಡುವವಳಲ್ಲ ನಾನು!
    
ಕಂ|| ಉನ್ನತ ಧವಳಚ್ಛತ್ರ|
     ಚ್ಛನ್ನ ವಿಯತ್ತಳನನಿಂದುಕುಳತಿಳಕನನಿಂ||
     ತನ್ನೆಯದಿಂದೀ ಪೞುವಿನೊ|
     ಳೆನ್ನರಸನನಿಂತು ಬಿದಿಯೆ ತಂದಿಕ್ಕುವುದೇ||೨೨||
(ಉನ್ನತ ಧವಳಚ್ಛತ್ರಚ್ಛನ್ನ ವಿಯತ್ತಳನನ್, ಇಂದುಕುಳತಿಳಕನನ್, ಇಂತು ಅನ್ನೆಯದಿಂದ ಈ ಪೞುವಿನೊಳ್ ಎನ್ನರಸನನ್, ಇಂತು ಬಿದಿಯೆ, ತಂದು ಇಕ್ಕುವುದೇ?)

ವಿಧಿಯೇ! ಆಕಾಶವನ್ನೇ ವ್ಯಾಪಿಸಿದಂಥ ಬಿಳಿಯ ಕೊಡೆ ಇರುವ, ಚಂದ್ರವಂಶದ ತಿಲಕದಂತಿರುವ, ನನ್ನ ಪತಿಯಾಗಿರುವ (ಮಹಾನುಭಾವನಾದ) ಪಾಂಡುರಾಜನನ್ನು ನೀನು ಹೀಗೆ ಅನ್ಯಾಯವಾಗಿ ಈ ಕಾಡಿನಲ್ಲಿ ತಂದುಹಾಕಬಹುದೇ?  

ವ|| ಎಂದು ವನದೇವತೆಗಳ್ಗೆಲ್ಲಂ ಕರುಣಮಾಗೆ ಪಳಯಿಸುವ ಮಾದ್ರಿಯ ಸರಮಂ ಕುಂತಿ ಕೇಳ್ದು ಭೋಂಕನೆರ್ದೆದೆಱೆದು- 
(ಎಂದು ವನದೇವತೆಗಳ್ಗೆಲ್ಲಂ ಕರುಣಂ ಆಗೆ ಪಳಯಿಸುವ ಮಾದ್ರಿಯ ಸರಮಂ ಕುಂತಿ ಕೇಳ್ದು ಭೋಂಕನೆ ಎರ್ದೆದೆಱೆದು)
ಎಂದು ವನದೇವತೆಗಳಿಗೆಲ್ಲ ಕರುಣೆ ಹುಟ್ಟುವಂತೆ ದುಃಖಿಸುತ್ತಿದ್ದ ಮಾದ್ರಿಯ ಸ್ವರವನ್ನು ಕುಂತಿ ಕೇಳಿ, ಎದೆ ಬಿರಿದು-

ಕಂ||ಆ ದೆಸೆಯೊಳ್ ಭೂಭುಜನೋ|
     ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮಂ||
     ತಾ ದೆಸೆಯೊಳ್ ಭೂಪತಿಗೇ|
     ನಾದುದೊ ಪೇೞ್ ಬಿದಿಯೆ ಕೆಟ್ಟೆನೞಿದೆನೆನುತ್ತುಂ||೨೩||
(ಆ ದೆಸೆಯೊಳ್ ಭೂಭುಜನ್, ಓ, ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಂ,  ಅಂತು ಆ ದೆಸೆಯೊಳ್ ಭೂಪತಿಗೆ ಏನಾದುದೊ? ಪೇೞ್ ಬಿದಿಯೆ! ಕೆಟ್ಟೆನ್! ಅೞಿದೆನ್! ಎನುತ್ತುಂ)

ಯಾವ ದಿಕ್ಕಿಗೆ ಪಾಂಡುವು ಹೋದನೋ ಆ ಕಡೆಯಿಂದಲೇ ಮಾದ್ರಿಯ ಅಳು ಜೋರಾಗಿ ಕೇಳುತ್ತಿದೆಯಲ್ಲ! ಪಾಂಡುವಿಗೆ ಏನಾಯಿತೋ ಏನೋ? ವಿಧಿಯೇ ಹೇಳು! (ನಾನು) ಕೆಟ್ಟೆ! ಸತ್ತೆ! 
    
ಕಂ| ಬೞಿಯನೆ ಮಕ್ಕಳ್ ಭೋರ್ಗರೆ|
     ದೞುತುಂ ಪೆಱ ಪೆಱಗನಂತೆ ಪರಿತರೆ ಮುಡಿ ಬಿ||
     ಟ್ಟೆೞಲೆ ನಡುನಡುಗೆ ಕಣ್ಣೀರ್|
     ಗೞಗೞನೊರ್ಮೊದಲೆ ಸುರಿಯೆ ಪರಿತಂದಾಗಳ್||೨೪|| 
(ಬೞಿಯನೆ ಮಕ್ಕಳ್ ಭೋರ್ಗರೆದು ಅೞುತುಂ ಪೆಱ ಪೆಱಗನಂತೆ ಪರಿತರೆ ಮುಡಿ ಬಿಟ್ಟು ಎೞಲೆ ನಡು ನಡುಗೆ ಕಣ್ಣೀರ್ ಗೞಗೞನೆ ಒರ್ಮೊದಲೆ ಸುರಿಯೆ ಪರಿತಂದು ಆಗಳ್)

ಜತೆಯಲ್ಲಿಯೇ ಮಕ್ಕಳೂ ಸಹ ಜೋರಾಗಿ ಅಳುತ್ತಾ ಓಡಿಬರುತ್ತಿರಲು, ತಲೆಗೂದಲು ಬಿಚ್ಚಿ ಜೋತಾಡುತ್ತಿರಲು, ಸೊಂಟ ನಡುಗುತ್ತಿರಲು, ಕಣ್ಣೀರು ಒಂದೇ ಸವನೆ ಸುರಿಯುತ್ತಿರಲು, ಕುಂತಿ ಅಲ್ಲಿಗೆ ಓಡೋಡಿ ಬಂದಾಗ

ವ|| ಅಂತು ತನ್ನ ನಲ್ಲನ ಕಳೇವರಮಂ ತೞ್ಕೈಸಿಕೊಂಡು ತನ್ನ ಸಾವಂ ಪರಿಚ್ಛೇದಿಸಿ ಪಲ್ಲಂ ಸುಲಿಯುತ್ತುಮಿರ್ದ ಮಾದ್ರಿಯಂ ಕಂಡು ಕುಂತಿ ನೆಲದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಪಳಯಿಸಿ- 
(ಅಂತು ತನ್ನ ನಲ್ಲನ ಕಳೇವರಮಂ ತೞ್ಕೈಸಿಕೊಂಡು, ತನ್ನ ಸಾವಂ ಪರಿಚ್ಛೇದಿಸಿ ಪಲ್ಲಂ ಸುಲಿಯುತ್ತುಂ ಇರ್ದ ಮಾದ್ರಿಯಂ ಕಂಡು, ಕುಂತಿ ನೆಲದೊಳ್ ಮೆಯ್ಯನ್ ಈಡಾಡಿ, ನಾಡಾಡಿಯಲ್ಲದೆ ಪಳಯಿಸಿ)
ಹಾಗೆ ತನ್ನ ನಲ್ಲನ ಶವವನ್ನು ತಬ್ಬಿಕೊಂಡು, ಅವನೊಂದಿಗೆ ತಾನು ಸಾಯುವುದನ್ನು ನಿಶ್ಚಯಿಸಿಕೊಂಡು, ಹಲ್ಲು ಕಚ್ಚಿಹಿಡಿದಿದ್ದ ಮಾದ್ರಿಯನ್ನು ಕಂಡು ಕುಂತಿಯು ಅಲ್ಲಿಯೇ ನೆಲದ ಮೇಲೆ ಬಿದ್ದು ಹೊರಳಾಡಿ, ಜೋರಾಗಿ ಅತ್ತು

ಕಂ| ಅಡವಿಯೊಳೆನ್ನುಮನೆನ್ನೀ|
     ನಡಪಿದ ಶಿಶುಗಳುಮನಿರಿಸಿ ನೀಂ ಪೇೞದೆ ಪೋ||
     ದೊಡಮೇನೋ ನಿನ್ನ ಬೞಯನೆ|
     ನಡೆತರ್ಪೆಂ ನಿನ್ನರಸ ಬಿಸುಟೆಂತಿರ್ಪೆಂ||೨೫|| 
(ಅಡವಿಯೊಳ್ ಎನ್ನುಮನ್ ಎನ್ನೀ ನಡಪಿದ ಶಿಶುಗಳುಮನ್ ಇರಿಸಿ, ನೀಂ ಪೇೞದೆ ಪೋದೊಡಂ ಏನೋ? ನಿನ್ನ ಬೞಯನೆ ನಡೆತರ್ಪೆಂ ನಿನ್ ಅರಸ ಬಿಸುಟು ಎಂತಿರ್ಪೆಂ)

ಕಾಡಿನಲ್ಲಿ ನನ್ನನ್ನೂ, ನಾನು ಸಾಕಿದ ಈ ಮಕ್ಕಳನ್ನೂ, ನೀನು ಹೇಳದೆಯೇ ಬಿಟ್ಟು ಹೋದರೆ ತಾನೆ ಏನು? ನಾನು ನಿನ್ನ ಜೊತೆಗೇ ಬರುತ್ತೇನೆ! ನಿನ್ನನ್ನು ಬಿಟ್ಟು ನಾನು ಹೇಗೆ ತಾನೇ ಇರಲಿ?

ವ|| ಎಂದು ನೀನೀ ಕೂಸುಗಳಂ ಕೈಕೊಂಡು ನಡಪು ನಲ್ಲನನೆನಗೊಪ್ಪಿಸಾನಾತನಾದುದನಪ್ಪೆನೆನೆ ಮಾದ್ರಿಯಿಂತೆಂದಳ್- 
(ಎಂದು, ನೀನ್ ಈ ಕೂಸುಗಳಂ ಕೈಕೊಂಡು ನಡಪು, ನಲ್ಲನನ್ ಎನಗೊಪ್ಪಿಸು, ಆನ್ ಆತನ್ ಆದುದನ್ ಅಪ್ಪೆನ್ ಎನೆ ಮಾದ್ರಿಯಿಂತೆಂದಳ್)

ಎಂದು, ‘ನೀನು ಈ ಕೂಸುಗಳನ್ನು ಕೈಹಿಡಿದು ಸಾಕು. ನಲ್ಲನನ್ನು ನನಗೆ ಒಪ್ಪಿಸು. ನಾನು ಆತನಾದಂತೆಯೇ ಆಗುತ್ತೇನೆ’ ಎನ್ನಲು ಮಾದ್ರಿಯು ಹೀಗೆಂದಳು:
ಕಂ|| ಎನಗಿಂದಿನೊಂದು ಸೂೞುಮ|
     ನಿನಿಯಂ ದಯೆಗೆಯ್ದನೆನ್ನ ಸೂೞಂ ನಿನಗಾ||
     ನೆನಿತಾದೊಡಮೀವೆನೆ ಮ|
     ತ್ತನಯರ್ ಕೆಯ್ಯೆಡೆ ಪಲುಂಬದಿರ್ ಪೆಱಪೆಱವಂ||೨೬|| 
(ಎನಗೆ ಇಂದಿನ ಒಂದು ಸೂೞುಮನ್ ಇನಿಯಂ ದಯೆಗೆಯ್ದನ್, ಎನ್ನ ಸೂೞಂ ನಿನಗೆ ಆನ್ ಎನಿತು ಆದೊಡಂ ಈವೆನೆ? ಮತ್ತನಯರ್ ಕೆಯ್ಯೆಡೆ, ಪಲುಂಬದಿರ್ ಪೆಱಪೆಱವಂ)

ಈ ದಿನದ ಒಂದು ಸರದಿಯನ್ನು ಇನಿಯನು ನನಗೆ ಕರುಣಿಸಿದ್ದಾನೆ. ಆ ಸರದಿಯನ್ನು ನಿನಗೆ ಎಂದಾದರೂ ಬಿಟ್ಟು ಕೊಡುತ್ತೇನೆಯೆ? ಇಗೋ! ಈ ನನ್ನ ಮಕ್ಕಳನ್ನು ನಿನ್ನ ಕೈಗೆ ಹಾಕಿದ್ದೇನೆ. ಸುಮ್ಮನೆ ಬೇರೇನನ್ನೋ ಹಲುಬಬೇಡ!

ವ|| ಎಂದು ತಪೋವನದ ಮುನಿಜನಮುಂ ವನದೇವತಾಜನಮುಂ ತನ್ನಣ್ಮಂ ಪೊಗೞೆ ಮಾದ್ರಿ ಪಾಂಡುರಾಜನೊಡನೆ ದಾಹೋತ್ತರದಂತೆ  ಕಿರ್ಚಿಂಗೆ ಕುಲದೊಳಂ ಚಲದೊಳಮಾ[ವ] ಕಂದುಂ ಕುಂದುಮಿಲ್ಲದೆ ತನ್ನೊರೆಗಂ ದೊರೆಗಮಾರುಮಿಲ್ಲೆನಿಸಿದಾಗಳ್ ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರಾ ಕಾಂತೆಯನಿಂತೆಂದು ಸಂತೈಸಿದರ್-
(ಎಂದು ತಪೋವನದ ಮುನಿಜನಮುಂ ವನದೇವತಾಜನಮುಂ ತನ್ನ ಅಣ್ಮಂ ಪೊಗೞೆ, ಮಾದ್ರಿ ಪಾಂಡುರಾಜನೊಡನೆ ದಾಹೋತ್ತರದಂತೆ  ಕಿರ್ಚಿಂಗೆ ಕುಲದೊಳಂ ಚಲದೊಳಂ ಆ[ವ] ಕಂದುಂ ಕುಂದುಂ ಇಲ್ಲದೆ ತನ್ನ ಒರೆಗಂ ದೊರೆಗಂ ಆರುಂ ಇಲ್ಲ ಎನಿಸಿದಾಗಳ್, ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರ್ ಆ ಕಾಂತೆಯನ್ ಇಂತೆಂದು ಸಂತೈಸಿದರ್-) 

ಎಂದು ಆ ತಪೋವನದ ಮುನಿಜನರೂ, ವನದೇವತೆಗಳೂ ತನ್ನ ಸಾಹಸವನ್ನು ಹೊಗಳಲು (ಮಾದ್ರಿಯು ಪಾಂಡುವಿನೊಡನೆ ಸಹಗಮನ ಮಾಡಿದಳು.) ಹೀಗೆ ಕುಲದಲ್ಲಿಯೂ, ಚಲದಲ್ಲಿಯೂ ಯಾವ ಕಂದೂ, ಕುಂದೂ ಇಲ್ಲದ ಮಾದ್ರಿಗೆ ಸಮಾನರೇ ಇಲ್ಲದಂತಾಯಿತು. ಇತ್ತ ತುಂಬಾ ದುಃಖಿತಳಾದ ಕುಂತಿಯನ್ನು ತಪೋವನದ  ತಪಸ್ವಿಗಳಾದ ವೃದ್ಧರು ಹೀಗೆ ಸಂತೈಸಿದರು.

ಚಂ|| ಕೞಿದವರ್ಗೞ್ವುದೞ್ತೊಡವರೇೞ್ವೊಡಮಂತವರಿಂ ಬೞಿಕ್ಕೆ ತಾ|
     ಮುೞಿವೊಡಮೇೞರಂತವರಣಂ ತಮಗಂ ಬರ್ದುಕಿಲ್ಲ ಧರ್ಮಮಂ||
     ಗೞಿಯಿಸಿಕೊಳ್ವುದೊಂದೆ ಚದುರಿಂತುಟು ಸಂಸ್ಕೃತಿ ಧರ್ಮಮೇಕೆ ಬಾ|
     ಯೞಿವುದಿದೇಕೆ ಚಿಂತಿಸುವುದೇಕೆ ಪಲುಂಬುವುದೇಕೆ ನೋವುದೋ||೨೭|| 
(ಕೞಿದವರ್ಗೆ ಅೞ್ವುದು ಅೞ್ತೊಡೆ ಅವರ್ ಏೞ್ವೊಡಂ, ಅಂತು ಅವರಿಂ ಬೞಿಕ್ಕೆ ತಾಂ ಉೞಿವೊಡಂ! ಏೞರ್ ಅಂತು ಅವರ್ ಅಣಂ, ತಮಗಂ ಬರ್ದುಕಿಲ್ಲ! ಧರ್ಮಮಂ ಗೞಿಯಿಸಿಕೊಳ್ವುದೊಂದೆ ಚದುರು! ಇಂತುಟು ಸಂಸ್ಕೃತಿ ಧರ್ಮಂ, ಏಕೆ ಬಾಯೞಿವುದು? ಇದೇಕೆ ಚಿಂತಿಸುವುದು? ಏಕೆ ಪಲುಂಬುವುದು? ಏಕೆ ನೋವುದೋ?)

ಸತ್ತವರು ಮತ್ತೆ ಮೇಲೆದ್ದು ಬರುವುದಾದರೆ ಅವರಿಗಾಗಿ ಅಳಬಹುದು! ಅವರ ಬಳಿಕ ನಾವಾದರೂ ಉಳಿಯುವುದುಂಟೆ? ಸತ್ತವರಂತೂ ಏಳುವುದಿಲ್ಲ! ಅವರಿಗಾಗಿ ಅತ್ತವರಿಗೂ ಮುಂದೆ ಉಳಿವಿಲ್ಲ! (ವಸ್ತುಸ್ಥಿತಿ ಹೀಗಿರುವಾಗ, ಬದುಕಿನಲ್ಲಿ) ಧರ್ಮವನ್ನು ಗಳಿಸಿಕೊಳ್ಳುವುದೊಂದೇ ಬುದ್ಧಿವಂತಿಕೆ!  ಇದೇ ನಿಜವಾದ ಸಂಸ್ಕೃತಿ! ನಡೆಯಬೇಕಾದ ರೀತಿ! (ಅದು ಬಿಟ್ಟು) ಅಳುವುದೇಕೆ? ಚಿಂತಿಸುವುದೇಕೆ?  ಹಲುಬುವುದೇಕೆ? ನೋಯುವುದೇಕೆ?

ವ|| ಅಂತುಮಲ್ಲದೆ- 

ಕಂ|| ಬಿಡದೞಲ್ವ ಬಂಧುಜನದೊ|
     ೞ್ಕುಡಿಯದ ಕಣ್ಣೀರ ಪೂರಮಾ ಪ್ರೇತಮನೋ||
     ಗಡಿಸದೆ ಸುಡುವುದು ಗಡಮಿ|
     ನ್ನುಡುಗುವುದೀ ಶೋಕಮಂ ಸರೋಜದಳಾಕ್ಷೀ||೨೮||
(ಬಿಡದೆ ಅೞಲ್ವ ಬಂಧುಜನದ ಒೞ್ಕುಡಿಯದ ಕಣ್ಣೀರ ಪೂರಂ ಆ ಪ್ರೇತಮನ್ ಓಗಡಿಸದೆ ಸುಡುವುದು ಗಡಂ! ಇನ್ ಉಡುಗುವುದು ಈ ಶೋಕಮಂ ಸರೋಜದಳಾಕ್ಷೀ)

ಬಿಡದೆ ಅಳುವ ನೆಂಟರಿಷ್ಟರ ಕಣ್ಣೀರ ಹೊನಲು (ಸತ್ತವರ) ಪ್ರೇತವನ್ನು ಅಸಹ್ಯಪಡದೆ ಸುಡುವುದಂತೆ! ಹಾಗಾಗಿ ಈಗಲಾದರೂ ನಿನ್ನ ದುಃಖವನ್ನು ಕಡಿಮೆ ಮಾಡಿಕೋ! 

ವ| ನೀನಿಂತು ಶೋಕಾಕ್ರಾಂತೆಯಾಗಿ ಸಂಸಾರಸ್ಥಿತಿಯನಱಿಯದಜ್ಞಾನಿಗಳಂತೆ ವಿಪ್ರಳಾಪಂಗೆಯ್ದೆಯಪ್ಪೊಡೀ ಕೂಸುಗಳ್ ಮನಮಿಕ್ಕಿಯುಮೆರ್ದೆಯಿಕ್ಕಿಯುಂ ಕಿಡುವರೆಂದನೇಕೋಪಶಾಂತವಚನಂಗಳಿಂದಮಾಕೆಯುಬ್ಬೆಗಮನಾಱಿ ನುಡಿದುಮಲ್ಲಿಯ ಮುನಿಜನಮೆಲ್ಲಮಾ ಕೂಸುಗಳುಮಂ ಕುಂತಿಯುಮಂ ಮುಂದಿಟ್ಟೊಡಗೊಂಡು ನಾಗಪುರಕ್ಕೆ ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಮಂಬಾಲೆಗಂ ಪಾಂಡುರಾಜನ ವೃತ್ತಾಂತಮನಱಿಪಿದೊಡಾಗಳ್- 
(ನೀನ್ ಇಂತು ಶೋಕಾಕ್ರಾಂತೆಯಾಗಿ ಸಂಸಾರಸ್ಥಿತಿಯನ್ ಅಱಿಯದ ಅಜ್ಞಾನಿಗಳಂತೆ ವಿಪ್ರಳಾಪಂ ಗೆಯ್ದೆಯಪ್ಪೊಡೆ, ಈ ಕೂಸುಗಳ್ ಮನಮಿಕ್ಕಿಯುಂ ಎರ್ದೆಯಿಕ್ಕಿಯುಂ ಕಿಡುವರ್  ಎಂದು ಅನೇಕ ಉಪಶಾಂತ ವಚನಂಗಳಿಂದಂ ಆಕೆಯ ಉಬ್ಬೆಗಮನ್ ಆಱಿ ನುಡಿದುಂ, ಅಲ್ಲಿಯ ಮುನಿಜನಮೆಲ್ಲಂ ಆ ಕೂಸುಗಳುಮಂ ಕುಂತಿಯುಮಂ ಮುಂದಿಟ್ಟು ಒಡಗೊಂಡು, ನಾಗಪುರಕ್ಕೆ ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಂ ಅಂಬಾಲೆಗಂ ಪಾಂಡುರಾಜನ ವೃತ್ತಾಂತಮನ್ ಅಱಿಪಿದೊಡೆ ಆಗಳ್- )

ನೀನು ಹೀಗೆ ದುಃಖಿತಳಾಗಿ, ಲೌಕಿಕ ಸಂಸಾರದ ನಿಜವನ್ನು ಅರ್ಥ ಮಾಡಿಕೊಳ್ಳದೆ, ಮತ್ತೆ ಮತ್ತೆ ಅಳುತ್ತಿದ್ದರೆ ಈ ಮಕ್ಕಳ ಮನಸ್ಸು ಕುಗ್ಗುತ್ತದೆ, ಅವರು ಧೈರ್ಯಗೆಡುತ್ತಾರೆ – ಎಂದು ಅನೇಕ ಸಮಾಧಾನದ ಮಾತುಗಳಿಂದ ಅವಳ ವ್ಯಸನವು ಕಡಿಮೆಯಾಗುವಂತೆ ತಿಳಿಹೇಳಿದರು. ನಂತರ ಅಲ್ಲಿಯ ಮುನಿಜನರೆಲ್ಲರೂ ಚಿಕ್ಕ ಮಕ್ಕಳನ್ನೂ, ಕುಂತಿಯನ್ನೂ ಮುಂದಿಟ್ಟುಕೊಂಡು, ಅವರೊಂದಿಗೆ ಹಸ್ತಿನಾವತಿಗೆ ಬಂದು ಗಾಂಗೇಯ, ಧೃತರಾಷ್ಟ್ರ, ವಿದುರರಿಗೂ, ಅಂಬಾಲೆಗೂ ಪಾಂಡುರಾಜನ ಸಮಾಚಾರವನ್ನು ಹೇಳಿದಾಗ -

ಕಂ|| ತುಱುಗಿದ ಹಿಮಬಿಂದುಗಳಿಂ|
     ದೆಱಗಿದ ನವ ವನಜವನದವೋಲ್ ಶೋಕದಿನಂ||
     ದೊಱೆವ ನಯನೋದಬಿಂದುವಿ|
     ನೆಱಗಿದುದೊರ್ಮೊದಲೆ ಬಂಧುಮುಖ ವನಜವನಂ||೨೯|| 
(ತುಱುಗಿದ ಹಿಮಬಿಂದುಗಳಿಂದ ಎಱಗಿದ ನವ ವನಜವನದವೋಲ್, ಶೋಕದಿನ್ ಅಂದು ಒಱೆವ ನಯನೋದಬಿಂದುವಿನ್, ಎಱಗಿದುದು ಒರ್ಮೊದಲೆ ಬಂಧುಮುಖ ವನಜವನಂ)

ಹೊಸತಾಗಿ ಅರಳಿ ನಿಂತ ತಾವರೆಯ ವನದ ಮೇಲೆ ದಟ್ಟವಾದ ಮಂಜಿನ ಹನಿಗಳು ಬಿದ್ದಾಗ ಅವು ಹೇಗೆ ಬಗ್ಗುತ್ತವೆಯೋ ಹಾಗೆ, ದುಃಖದಿಂದ ಸುರಿಯುವ ಕಣ್ಣೀರ ಹನಿಗಳಿಂದ (ಪಾಂಡುವಿನ) ಬಂಧುಗಳೆಲ್ಲರ ಮುಖಗಳು ಒಟ್ಟಿಗೆ ಬಗ್ಗಿದವು.

ವ|| ಆಗಳ್ ಪುತ್ರ ಸ್ನೇಹದಿಂದತಿ ಪ್ರಳಾಪಂಗೆಯ್ವಂಬಾಲೆಯುಮಂ ಬಂಧುಜನ ನಿರೀಕ್ಷಣದಿಂ ಶೋಕಂ ಮಱುಕಣಿಸೆ ಬಾಯೞಿದು ಪಳಯಿಸುವ ಕುಂತಿಯುಮಂ ಗಾಂಗೇಯ ಧೃತರಾಷ್ಟ್ರ ವಿದುರರ್ಕಳುಮಂ ಸತ್ಯವತೀದೇವಿಯುಮಂ ಸಂತೈಸಿ ಪಾಂಡುರಾಜಂಗೆ ಜಳದಾನಾದಿಕ್ರಿಯೆಗಳಂ ನಿರ್ವರ್ತಿಸಿ ತದನಂತರದೊಳದುವೆ ನಿರ್ವೇಗಮಾಗೆ ವ್ಯಾಸವಚನದೊಳ್ ಸತ್ಯವತಿಯುಮಂಬಿಕೆಯುಮಂಬಾಲೆಯುಂ ಸಂಸಾರವಿಶೀರ್ಣೆಯರಾಗಿ ಮುನಿವನಮನಾಶ್ರಯಿಸಿದರಿತ್ತ ಗಾಂಗೇಯನಯ್ವರ್ ಕೂಸುಗಳುಮಂ ತನ್ನ ತೊಡೆಯೆ ತೊಟ್ಟಲಾಗಿ ನಡುಪುತ್ತುಮಿರೆ ದುರ್ಯೋಧನ ಪ್ರಭೃತಿಗಳ್ ನೂರ್ವರುಂ ಧರ್ಮಪುತ್ರಾದಿಗಳಯ್ವರುಂ ಸಹಪಾಂಸುಕ್ರೀಡಿತರಾಗಿ- 
(ಆಗಳ್ ಪುತ್ರ ಸ್ನೇಹದಿಂದ ಅತಿ ಪ್ರಳಾಪಂಗೆಯ್ವ ಅಂಬಾಲೆಯುಮಂ, ಬಂಧುಜನ ನಿರೀಕ್ಷಣದಿಂ ಶೋಕಂ ಮಱುಕಣಿಸೆ ಬಾಯೞಿದು ಪಳಯಿಸುವ ಕುಂತಿಯುಮಂ, ಗಾಂಗೇಯ ಧೃತರಾಷ್ಟ್ರ ವಿದುರರ್ಕಳುಮಂ, ಸತ್ಯವತೀದೇವಿಯುಮಂ ಸಂತೈಸಿ, ಪಾಂಡುರಾಜಂಗೆ ಜಳದಾನಾದಿಕ್ರಿಯೆಗಳಂ ನಿರ್ವರ್ತಿಸಿ ತದನಂತರದೊಳ್ ಅದುವೆ ನಿರ್ವೇಗಮಾಗೆ ವ್ಯಾಸವಚನದೊಳ್ ಸತ್ಯವತಿಯುಂ ಅಂಬಿಕೆಯುಂ ಅಂಬಾಲೆಯುಂ ಸಂಸಾರವಿಶೀರ್ಣೆಯರಾಗಿ ಮುನಿವನಮನ್ ಆಶ್ರಯಿಸಿದರ್. ಇತ್ತ ಗಾಂಗೇಯನ್ ಅಯ್ವರ್ ಕೂಸುಗಳುಮಂ ತನ್ನ ತೊಡೆಯೆ ತೊಟ್ಟಲಾಗಿ ನಡುಪುತ್ತುಂ ಇರೆ ದುರ್ಯೋಧನ ಪ್ರಭೃತಿಗಳ್ ನೂರ್ವರುಂ ಧರ್ಮಪುತ್ರಾದಿಗಳ್ ಅಯ್ವರುಂ ಸಹಪಾಂಸುಕ್ರೀಡಿತರಾಗಿ- )

ಆಗ, ಮಗನ ಮೇಲಿನ ಮಮತೆಯ ಕಾರಣವಾಗಿ ತೀವ್ರವಾಗಿ ದುಃಖಿಸುತ್ತಿದ್ದ ಅಂಬಾಲೆಯನ್ನೂ, ಬಂಧುಗಳನ್ನು ಕಂಡಕೂಡಲೇ ದುಃಖ ಮರುಕಳಿಸಿ ಬಾಯಿ ತೆಗೆದು ಅಳುತ್ತಿದ್ದ ಕುಂತಿಯನ್ನೂ, ಗಾಂಗೇಯ, ಧೃತರಾಷ್ಟ್ರ, ವಿದುರರನ್ನೂ, ಸತ್ಯವತೀ ದೇವಿಯನ್ನೂ ಸಂತೈಸಿ, ಪಾಂಡುವಿಗೆ ತರ್ಪಣ ಕೊಡುವುದೇ ಮುಂತಾದ ಕ್ರಿಯೆಗಳನ್ನು (ಮುನಿಜನರು) ನಡೆಸಿದರು. ನಂತರ ಅದೇ ಕಾರಣದಿಂದ ವೈರಾಗ್ಯ ಹುಟ್ಟಿ, ವ್ಯಾಸನ ಮಾತಿನಂತೆ ಸತ್ಯವತಿ, ಅಂಬಿಕೆ, ಅಂಬಾಲಿಕೆಯರು ಮುನಿವನವನ್ನು ಸೇರಿದರು. ಇತ್ತ ಭೀಷ್ಮನು ಐವರು ಮಕ್ಕಳನ್ನು ಸಹ ತನ್ನ ತೊಡೆಯನ್ನೇ ತೊಟ್ಟಿಲಾಗಿಸಿ ಸಾಕುತ್ತಿದ್ದನು. ದುರ್ಯೋಧನನೇ ಮೊದಲಾದ ನೂರು ಮಂದಿ ಕೌರವರೂ, ಪಂಚಪಾಂಡವರೂ ಮಣ್ಣಿನಲ್ಲಿ ಒಟ್ಟಿಗೆ ಆಟವಾಡಿ-



ದಿನಾಂಕ ೨೮-೦೭-೨೦೨೦ರಂದು ಮಾಡಿದ ತಿದ್ದುಪಡಿ:
೨೭ನೆಯ ಪದ್ಯದಲ್ಲಿ ಬಂದಿರುವ ʼಇಂತುಟು ಸಂಸ್ಕೃತಿ ಧರ್ಮಂʼ ಎಂಬ ಮಾತಿನ ʼಸಂಸ್ಕೃತಿʼ ಪದದ ಬಗ್ಗೆ: ʼಪಂಪಭಾರತʼದ ಮೈಸೂರು ವಿ.ವಿ.ದ ಪ್ರಕಟಣೆಯಲ್ಲೂ, ಡಿ ಎಲ್‌ ಎನ್‌ ಅವರ ʼಪಂಪಭಾರತ ದೀಪಿಕೆʼಯಲ್ಲೂ, ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿರುವ, ಪ್ರೊ. ಶಿವರಾಮಯ್ಯನವರ ʼಪಂಪಭಾರತʼದಲ್ಲೂ ʼಸಂಸ್ಕೃತಿʼ ಎಂದು ಇದೆ. ಆದರೆ ಹಂಪಿ ಕನ್ನಡ ವಿ.ವಿ.ದ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಸಂಪಾದಿಸಿರುವ ʼಪಂಪಭಾರತʼದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಎನ್.‌ ಅನಂತರಂಗಾಚಾರ್‌ ಅವರ ʼಪಂಪಭಾರತಂʼನಲ್ಲಿ ʼಸಂಸೃತಿʼ ಎಂಬ ಪದ ಇದೆ. ಡಾ. ಪಿ.ವಿ.ನಾರಾಯಣ ಅವರ ಪಂಪನ ಕೃತಿಗಳ ಶಬ್ದಕೋಶ ʼಪಂಪನ ನುಡಿಗಣಿʼಯಲ್ಲಿ ʼಸಂಸೃತಿʼ ಪದಕ್ಕೆ ʼಸಂಸಾರʼ ಎಂದು ಅರ್ಥ ಕೊಟ್ಟಿದ್ದಾರೆ. ಇಡೀ ಪದ್ಯದ ಆಶಯವನ್ನು ಪರಿಗಣಿಸಿದರೆ ʼಸಂಸೃತಿʼ ಎಂಬ ಪದವೇ ಇಲ್ಲಿ ಹೆಚ್ಚು ಸೂಕ್ತವೆಂದು ಹೇಳಬಹುದು. ಹೀಗಾಗಿ ʼಇಂತುಟು ಸಂ‍ಸೃತಿ ಧರ್ಮಂʼ ಎಂದರೆ ʼಇದು ಸಂಸಾರದ ರೀತಿʼ ಎಂದು ಅರ್ಥ ಮಾಡಬಹುದು.


ಭಾನುವಾರ, ಸೆಪ್ಟೆಂಬರ್ 23, 2018


ಪಂಪಭಾರತಂ
ಆಶ್ವಾಸ ೨ ಪದ್ಯಗಳು ೧ರಿಂದ ೧೭


ಕಂ|| ಶ್ರೀಗಗಲುರಮಂ ಕೀರ್ತಿ |
     ಶ್ರೀಗೆ ದಿಗಂತಮುಮನಹಿತರಂ ಗೆಲ್ವ ಜಯ ||
     ಶ್ರೀಗೆ ಭುಜಶಿಖರಮಂ ನೆಲೆ |
     ಯಾಗಿಸಿ ನೀಂ ನೆಲಸು ನೇಸಱುಳ್ಳಿನಮರಿಗಾ ||೧||
(ಶ್ರೀಗೆ ಅಗಲು ಉರಮಂ, ಕೀರ್ತಿಶ್ರೀಗೆ ದಿಗಂತಮುಮನ್, ಅಹಿತರಂ ಗೆಲ್ವ ಜಯಶ್ರೀಗೆ ಭುಜಶಿಖರಮಂ ನೆಲೆಯಾಗಿಸಿ, ನೀಂ ನೆಲಸು ನೇಸಱ್ ಉಳ್ಳಿನಂ ಅರಿಗಾ)
ಅರಿಗಾ, ನೀನು ಲಕ್ಷ್ಮಿಗೆ ನಿನ್ನ ಹರವಾದ ಎದೆಯನ್ನು, ಕೀರ್ತಿಲಕ್ಷ್ಮಿಗೆ ದಿಗಂತವನ್ನು, ವೈರಿಗಳನ್ನು ಗೆಲ್ಲುವ ಜಯಲಕ್ಷ್ಮಿಗೆ ಎತ್ತರದ ಹೆಗಲನ್ನು ನೆಲೆಯಾಗಿಸಿ, ಸೂರ್ಯನಿರುವವರೆಗೂ ಈ ಲೋಕದಲ್ಲಿ ನೆಲೆಸಿರು..
ಕಂ|| ಎಂಬ ಪರಕೆಗಳ ರವದೊಳ್ |
     ತುಂ[ಬೆ] ನಭೋವಿವರಮಮರ ಮುನಿಜನಮಮರೇಂ ||
     ದ್ರಂ ಬೆರಸು ತಳರ್ದುದಾದುದ |
     ಳುಂಬಂ ಮನದೊಸಗೆ ಕುಂತಿಗಂ ತತ್ಪತಿಗಂ||೨|| 
(ಎಂಬ ಪರಕೆಗಳ ರವದೊಳ್ ತುಂಬೆ ನಭೋವಿವರಂ, ಅಮರ ಮುನಿಜನಂ ಅಮರೇಂದ್ರಂ ಬೆರಸು ತಳರ್ದುದು, ಆದುದು ಅಳುಂಬಂ ಮನದ ಒಸಗೆ ಕುಂತಿಗಂ ತತ್ಪತಿಗಂ)
ಎಂಬ ಹರಕೆಗಳಿಂದ ಆಕಾಶದ ಅವಕಾಶವು ತುಂಬಿಕೊಂಡಿರುವಂತೆಯೇ, ಮುನಿಗಳು, ದೇವತೆಗಳು ದೇವೇಂದ್ರನೊಂದಿಗೆ ಅಲ್ಲಿಂದ ಹೊರಟು ಹೋದರು. ಇತ್ತ ಕುಂತಿಗೂ, ಪಾಂಡುರಾಜನಿಗೂ ಮನಸ್ಸು ಸಂತೋಷದಿಂದ ತುಂಬಿತ್ತು.
ವ|| ಅಂತು ಗುಣಾರ್ಣವನ ಪುಟ್ಟಿದೊಸಗೆಯೊಳೊಸಗೆ ಮರುಳ್ಗೊಂಡು ಕುಂತಿಯುಂ ಪಾಂಡುರಾಜನುಮಿರೆ ಮಾದ್ರಿ ತನಗೆ ಮಕ್ಕಳಿಲ್ಲದುದರ್ಕೆ ವಿರಕ್ತೆಯಾಗಿ ಪೊಸೆದು ಬಿಸುಟ ರಕ್ತಾಶೋಕಪಲ್ಲವದಂತೆ ಕರಂ ಕೊರಗಿ ಚಿಂತಿಸುತಿರ್ದೊಡಾಕೆಯ ಬಿನ್ನನಾದ ಮೊಗದಂದಮಂ ಕಂಡು ಕುಂತಿ ಕರುಣಿಸಿ ಪುತ್ರೋತ್ಪತ್ತಿ ನಿಮಿತ್ತಂಗಳಪ್ಪ ಮಂತ್ರಾಕ್ಷರಂಗಳನುಪದೇಶಂಗೆಯ್ದೊಡಾಕೆಯುಂ ತದುಕ್ತಕ್ರಿಯೆಯೊಳಂ ನಿಯಮನಿಯಮಿತೆಯಾಗಿ- 
(ಅಂತು ಗುಣಾರ್ಣವನ ಪುಟ್ಟಿದ ಒಸಗೆಯೊಳ್ ಒಸಗೆ ಮರುಳ್ಗೊಂಡು ಕುಂತಿಯುಂ ಪಾಂಡುರಾಜನುಂ ಇರೆ, ಮಾದ್ರಿ ತನಗೆ ಮಕ್ಕಳಿಲ್ಲದುದರ್ಕೆ ವಿರಕ್ತೆಯಾಗಿ, ಪೊಸೆದು ಬಿಸುಟ ರಕ್ತಾಶೋಕಪಲ್ಲವದಂತೆ ಕರಂ ಕೊರಗಿ ಚಿಂತಿಸುತಿರ್ದೊಡೆ, ಆಕೆಯ ಬಿನ್ನನಾದ ಮೊಗದ ಅಂದಮಂ ಕಂಡು, ಕುಂತಿ ಕರುಣಿಸಿ, ಪುತ್ರೋತ್ಪತ್ತಿ ನಿಮಿತ್ತಂಗಳ್ ಅಪ್ಪ ಮಂತ್ರಾಕ್ಷರಂಗಳನ್ ಉಪದೇಶಂಗೆಯ್ದೊಡೆ, ಆಕೆಯುಂ ತದುಕ್ತಕ್ರಿಯೆಯೊಳಂ ನಿಯಮನಿಯಮಿತೆಯಾಗಿ-)
ಹೀಗೆ ಗುಣಾರ್ಣವನ ಹುಟ್ಟಿನಿಂದ ಕುಂತಿ, ಪಾಂಡುರಾಜರು ಅತ್ಯಂತ ಸಂಭ್ರಮದಲ್ಲಿದ್ದರು. ಆದರೆ ಮಾದ್ರಿಯು ಮಾತ್ರ ತನಗೆ ಮಕ್ಕಳಿಲ್ಲದುದರಿಂದ, ಹೊಸಕಿ ಬಿಸಾಡಿದ ಕೆಂಪು ಅಶೋಕದ ಚಿಗುರಿನಂತೆ ತುಂಬಾ ಕೊರಗಿನಲ್ಲಿದ್ದಳು. ಮಾದ್ರಿಯು ಹೀಗೆ ಮುಖ ಬಾಡಿಸಿಕೊಂಡಿರುವುದನ್ನು ಕಂಡ ಕುಂತಿಯು ಕರುಣೆಯಿಂದ, ಮಕ್ಕಳ ಹುಟ್ಟಿಗೆ ಸಾಧನವಾದ ಮಂತ್ರವನ್ನು ಆಕೆಗೆ ಉಪದೇಶ ಮಾಡಿದಳು. ಮಾದ್ರಿಯು ಆ ಮಂತ್ರಗಳಿಗೆ ಅನುಗುಣವಾದ ಆಚರಣೆಗಳನ್ನು ಮಾಡಿ ನಿಯಮಗಳನ್ನು ಪಾಲಿಸಿ
ಕಂ|| ಆಹ್ವಾನಂಗೆಯ್ದಶ್ವಿನಿ |
     ದೇವರನವರಿತ್ತ ವರದೊಳವರಂಶಮೆ ಸಂ||
     ಭಾವಿಸೆ ಗರ್ಭದೊಳಮಳರ |
     ನಾ ವನಜದಳಾಕ್ಷಿ ಪಡೆದು ಸಂತತಿವೆತ್ತಳ್ ||೩|| 
(ಆಹ್ವಾನಂಗೆಯ್ದು ಅಶ್ವಿನಿ ದೇವರನ್, ಅವರಿತ್ತ ವರದೊಳ್ ಅವರಂಶಮೆ ಸಂಭಾವಿಸೆ ಗರ್ಭದೊಳ್,  ಅಮಳರನ್ ಆ  ವನಜದಳಾಕ್ಷಿ ಪಡೆದು ಸಂತತಿವೆತ್ತಳ್)
ಅಶ್ವಿನಿ ದೇವತೆಗಳನ್ನು ಆಹ್ವಾನಿಸಿ, ಅವರ ಕೊಟ್ಟ ವರದಿಂದ ಅವರ ಅಂಶದ ಅವಳಿ ಮಕ್ಕಳನ್ನು ಪಡೆದು ಮಾದ್ರಿಯು ತಾಯಿ ಎನಿಸಿಕೊಂಡಳು.
ವ|| ಆಗಳಾ ಪಾಂಡುರಾಜನಾ ಕೂಸುಗಳ್ಗೆ ಜಾತಕರ್ಮಮಂ ಮುನಿಗಳಿಂ ಬಳೆಯಿಸಿ ನಕುಲ ಸಹದೇವರೆಂದವರ್ಗಮಳ್ವೆಸರನಿಟ್ಟು ಪುತ್ರ ಸಂಪೂರ್ಣ ಮನೋರಥನಾಗಿರ್ಪಿನಮಯ್ವರ್ ಕೂಸುಗಳುಮೇೞ್ಗೆವಾಡಿವದ ಚಂದ್ರನಂತುತ್ತರಾಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ ಭರತ ಕುಲಕ್ಕೆ ವಿಶದ ಯಶೋಂಕುರಂಗಳುಂ ಬಂಧುಜನಕ್ಕೆ ಪುಣ್ಯಾಂಕುರಂಗಳುಂ ವಂದಿಜನಕ್ಕೆ ಕಲ್ಪವೃಕ್ಷಾಂಕುರಂಗಳುಮರಾತಿಜನಕ್ಕೆ ಕಾಳಕೂಟಾಂಕುರಂಗಳುಮಂ ಪೋಲ್ತು ಪಂಚಾಂಗ ಮಂತ್ರ[ಂ] ಸ್ವರೂಪದೊಳ್ ಮೂರ್ತಿಮಂ[ತ]ಂಗಳಾದಂತೆ ಸೊಗಯಿಸಿ ಬಳೆಯೆ-
(ಆಗಳ್, ಆ ಪಾಂಡುರಾಜನ್, ಆ ಕೂಸುಗಳ್ಗೆ ಜಾತಕರ್ಮಮಂ ಮುನಿಗಳಿಂ ಬಳೆಯಿಸಿ, ನಕುಲ ಸಹದೇವರೆಂದು ಅವರ್ಗೆ ಅಮಳ್ ಪೆಸರನ್ ಇಟ್ಟು, ಪುತ್ರ ಸಂಪೂರ್ಣ ಮನೋರಥನಾಗಿ ಇರ್ಪಿನಂ, ಅಯ್ವರ್ ಕೂಸುಗಳುಂ ಏೞ್ಗೆವಾಡಿವದ ಚಂದ್ರನಂತೆ ಉತ್ತರ ಅಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ, ಭರತ ಕುಲಕ್ಕೆ ವಿಶದ ಯಶೋಂಕುರಂಗಳುಂ ಬಂಧುಜನಕ್ಕೆ ಪುಣ್ಯ ಅಂಕುರಂಗಳುಂ, ವಂದಿಜನಕ್ಕೆ ಕಲ್ಪವೃಕ್ಷ ಅಂಕುರಂಗಳುಂ, ಅರಾತಿಜನಕ್ಕೆ ಕಾಳಕೂಟ ಅಂಕುರಂಗಳುಮಂ ಪೋಲ್ತು, ಪಂಚಾಂಗ ಮಂತ್ರಂ ಸ್ವರೂಪದೊಳ್ ಮೂರ್ತಿಮಂತಂಗಳ್  ಆದಂತೆ ಸೊಗಯಿಸಿ ಬಳೆಯೆ)
ಆಗ ಆ ಪಾಂಡುರಾಜನು ಆ ಮಕ್ಕಳಿಗೆ ಜಾತಕರ್ಮಗಳನ್ನು ಮುನಿಗಳಿಂದ ಮಾಡಿಸಿ, ಅವರಿಗೆ ನಕುಲ-ಸಹದೇವರೆಂದು ಅವಳಿ ಹೆಸರಿಟ್ಟು, ಮಕ್ಕಳ ಆಸೆಯನ್ನು ಪೂರೈಸಿಕೊಂಡನು. ಆ ಐದು ಮಕ್ಕಳೂ ಶುಕ್ಲ ಪಕ್ಷದ ಚಂದ್ರನಂತೆ ಬೆಳೆಯತೊಡಗಿದರು. ಅವರ ಏಳಿಗೆಯು ಭರತಕುಲಕ್ಕೆ ಯಶಸ್ಸಿನ ಮೊಳಕೆಗಳಂತೆ, ಬಂಧುಜನಕ್ಕೆ ಪುಣ್ಯದ ಮೊಳಕೆಗಳಂತೆ, ಹೊಗಳುಭಟರಿಗೆ ಕಲ್ಪವೃಕ್ಷದ ಮೊಳಕೆಗಳಂತೆ, ವೈರಿಗಳಿಗೆ ಕಾಳಕೂಟ ವಿಷದ ಮೊಳಕೆಗಳಂತೆ ಕಾಣಿಸಿದವು. ಹೀಗೆ ಆ ಮಕ್ಕಳೆಲ್ಲ ಪಂಚಾಂಗ ಮಂತ್ರವೇ ಮೂರ್ತರೂಪ ಪಡೆದಂತೆ ಬೆಳೆಯತೊಡಗಿದರು.
ಕಂ|| ತೊಡರ್ದಮರ್ದ ಬಾಳವಣ್ಣದ |
     ತುಡುಗೆ ಪಳಂಚಲೆವ ಪಂಚ ಜಡೆ ನೊಸಲೊಳೊಡಂ ||
     ಬಡುವರಳೆಲೆಯಿವಱಿಂ ಚೆ |
     ಲ್ವಿಡಿದಿರ್ದುದು ಬಾಳಕೇಳಿ ಧರ್ಮಾತ್ಮಜನಾ||  ||
(ತೊಡರ್ದು ಅಮರ್ದ ಬಾಳವಣ್ಣದ ತುಡುಗೆ, ಪಳಂಚಲೆವ ಪಂಚ ಜಡೆ, ನೊಸಲೊಳ್ ಒಡಂಬಡುವ ಅರಳೆಲೆ ಇವಱಿಂ ಚೆಲ್ವಿಡಿದಿರ್ದುದು ಬಾಳಕೇಳಿ ಧರ್ಮಾತ್ಮಜನಾ)
ಮೈಗೊಪ್ಪುವ ಕತ್ತಿಯ ಬಣ್ಣದ – ನೀಲಿಯ – ಉಡುಪು, ಬೆನ್ನಿಗೆ ತಾಗುವ ಐದು ಜಡೆಗಳು, ಹಣೆಯಲ್ಲಿ ಒಪ್ಪುವ ಅರಳೆಲೆ ಇವುಗಳಿಂದ ಧರ್ಮರಾಜನ ಮಗುವಿನಾಟವು ಸೊಗಸುತ್ತಿತ್ತು.

ವ|| ಅಂತಾತಂ ಬಳೆಯೆವಳೆಯೆ
ಕಂ|| ನಡೆವ ತಳರ್ನಡೆಯೊಳ್ ಪುಡಿ|
     ವುಡಿಯಾದುವು ಶಿಲೆಗಳೊಡೆದು ಕರಿಗಳ್ ಭೀಮಂ||
     ಪಿಡಿದಡರ್ದೊಡೆ ಬಾಯ್ವಿಟ್ಟೆ|
     ಲ್ವಡಗಾದುವು ಮುದ್ದದಂತು ಸೊಗಯಿಸವೇಡಾ||೫||
(ನಡೆವ ತಳರ್ ನಡೆಯೊಳ್ ಪುಡಿ ಪುಡಿಯಾದುವು ಶಿಲೆಗಳ್ ಒಡೆದು, ಕರಿಗಳ್ ಭೀಮಂ ಪಿಡಿದು ಅಡರ್ದೊಡೆ ಬಾಯ್ವಿಟ್ಟು     ಎಲುವು ಅಡಗು ಆದುವು, ಮುದ್ದದಂತು ಸೊಗಯಿಸವೇಡಾ?)
ಭೀಮನು ತಪ್ಪುಹೆಜ್ಜೆ ಹಾಕುತ್ತ ನಡೆದಾಡುವಾಗ ಅವನ ಕಾಲ ಕೆಳಗೆ ಸಿಕ್ಕಿದ ಶಿಲೆಗಳು ಪುಡಿಪುಡಿಯಾದವು. ಅವನು ಆನೆಗಳನ್ನು ಹಿಡಿದು ಅವುಗಳ ಮೇಲೆ ಹತ್ತಿದಾಗ ಅವು ಜಜ್ಜಿ ಹೋಗಿ, ಎಲುಬು ಮಾಂಸಗಳ ರಾಶಿಯಾದುವು. ಮಗುವಿನ ಮುದ್ದು ಇರಬೇಕಾದ್ದು ಹೀಗಲ್ಲವೆ?
ಕಂ|| ಮುನಿವನಮನೆ ಬಿಸುಟುವು ಮುಂ|
     ಮುನಿಯರ ಸೋಂಕಿಲೊಳೆ ಬಳೆದ ಸಿಂಗಂಗಳ್ ಮು||
     ದ್ದಿನೊಳಡರ್ವ ಪಿಡಿವ ಗುರ್ದುವ|
     ಮನೆಗೆೞೆವನಿತರ್ಕಮಲಸಿ ಮರುದಾತ್ಮಜನಾ||೬|| 
(ಮುನಿವನಮನೆ ಬಿಸುಟುವು ಮುಂ ಮುನಿಯರ ಸೋಂಕಿಲೊಳೆ ಬಳೆದ ಸಿಂಗಂಗಳ್, ಮುದ್ದಿನೊಳ್ ಅಡರ್ವ, ಪಿಡಿವ, ಗುರ್ದುವ,  ಮನೆಗೆ ಎೞೆವ ಅನಿತರ್ಕಂ ಅಲಸಿ, ಮರುದಾತ್ಮಜನಾ)
ಈ ಮೊದಲು ಮುನಿಗಳ ಮಡಿಲಿನಲ್ಲಿ ಬೆಳೆದ ಸಿಂಹಗಳ ಮೇಲೆ ಭೀಮನು ಮುದ್ದಿನಿಂದ ಹತ್ತಿ, ಅವುಗಳನ್ನು ಹಿಡಿದು, ಗುದ್ದಿ, ಮನೆಗೆ ಎಳೆದು ತಂದು ಕೊಟ್ಟ ಕಾಟಕ್ಕೆ ಆ ಸಿಂಹಗಳು ಆಶ್ರಮವನ್ನೇ ಬಿಟ್ಟು ಹೋದವು.
ವ|| ಅಂತಾತಂ ಬಳೆಯೆ
ಅವನು ಹಾಗೆ ಬೆಳೆಯುತ್ತಿರಲು
ಕಂ|| ಬೇಡಿದುದಂ ಬೇಡುವ ಪುಡಿ|
     ಯಾಡುವ ತೊದಳೊದವೆ ನುಡಿವ ನಗಿಸುವ ಬಾಲ||
     ಕ್ರೀಡೆ ಮುರಾರಿಯ ಬಾಲ|
     ಕ್ರೀಡೆಯನನುಕರಿಪುದಾದುದರಿಕೇಸರಿಯಾ||೭|| 
(ಬೇಡಿದುದಂ ಬೇಡುವ, ಪುಡಿಯಾಡುವ, ತೊದಳೊದವೆ ನುಡಿವ, ನಗಿಸುವ, ಬಾಲಕ್ರೀಡೆ ಮುರಾರಿಯ ಬಾಲ ಕ್ರೀಡೆಯನ್ ಅನುಕರಿಪುದಾದುದು ಅರಿಕೇಸರಿಯಾ)
ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುವ, ಮಣ್ಣಿನಲ್ಲಿ ಆಡುವ, ತೊದಲು ಮಾತಾಡಿ ಎಲ್ಲರನ್ನೂ ನಗಿಸುವ ಅರಿಕೇಸರಿಯ ಮಕ್ಕಳಾಟವು ಆ ಶ್ರೀಕೃಷ್ಣನ ಮಕ್ಕಳಾಟವನ್ನೇ ಹೋಲುತ್ತಿತ್ತು.
ಕಂ|| ಪರೆದಡರ್ದ ಧೂಳಿ ಕಿಱುನಗೆ|
     ವೆರಸಿದ ತೊದಳೊದವೆ ನುಡಿವ ನುಡಿ ನಗೆಮೊಗದೊಳ್||
     ಪರಕಲಿಸಿದ ಕಾಡಿಗೆವೆರ|
     ಸರಿಕೇಸರಿ ತಾಯ ಮನಮನಿೞ್ಕುಳಿಗೊಂಡಂ||೮||
(ಪರೆದು ಅಡರ್ದ ಧೂಳಿ, ಕಿಱುನಗೆವೆರಸಿದ, ತೊದಳ್ ಒದವೆ ನುಡಿವ, ನುಡಿ, ನಗೆಮೊಗದೊಳ್ ಪರಕಲಿಸಿದ ಕಾಡಿಗೆವೆರಸು, ಅರಿಕೇಸರಿ ತಾಯ ಮನಮನ್ ಇೞ್ಕುಳಿಗೊಂಡಂ)
ಕೆದರಿ ಮೈಗಂಟಿದ ಧೂಳು, ನಗುನಗುತ್ತಾ ಆಡುವ ತೊದಲು ಮಾತು, ನಗುವ ಮುಖದ ತುಂಬ ಹರಡಿದ ಕಣ್ಣ ಕಾಡಿಗೆ ಇವುಗಳಿಂದ ಅವನು ತಾಯಿಯ ಮನಸ್ಸಿಗೆ ಸಂತೋಷ ಕೊಟ್ಟನು.
ಕಂ|| ಒಗೆತರ್ಪ ಪಲ್ಗಳಾ ನಗೆ|
     ಮೊಗದ ಸರಸ್ವತಿಯನಾಗಳರ್ಚಿಸಿದ ಪೊದ||
     ಳ್ದಗಲದ ಚೆಲ್ವಿನ ಮೊಲ್ಲೆಯ|
     ಮುಗುಳ್ಗಳನಿಳಿಸಿರೆ ಗುಣಾರ್ಣವಂ ಸೊಗಯಿಸಿದಂ||೯|| 
(ಒಗೆತರ್ಪ ಪಲ್ಗಳ್, ಆ ನಗೆಮೊಗದ ಸರಸ್ವತಿಯನ್ ಆಗಳ್ ಅರ್ಚಿಸಿದ, ಪೊದಳ್ದ ಅಗಲದ, ಚೆಲ್ವಿನ, ಮೊಲ್ಲೆಯ ಮುಗುಳ್ಗಳನ್ ಇಳಿಸಿರೆ ಗುಣಾರ್ಣವಂ ಸೊಗಯಿಸಿದಂ)
ಆಗಷ್ಟೇ ಹುಟ್ಟುತ್ತಿದ್ದ ಗುಣಾರ್ಣವನ ಹಲ್ಲುಗಳು, ನಗೆಮೊಗದ ಸರಸ್ವತಿಯನ್ನು ಪೂಜಿಸಿದ ಅಗಲವಾದ, ಚೆಲುವಾದ ಮೊಲ್ಲೆಯ ಮೊಗ್ಗುಗಳಿಗಿಂತ ಸುಂದರವಾಗಿ ತೋರುತ್ತಿದ್ದವು.
ಕಂ|| ಕರಿಕಳಭಂಗಳ ಶಿಶು ಕೇ|
     ಸರಿಗಳ ಬೞಿಯಂ ತಗುಳ್ದು ಬಡವುಗಳನವಂ||
     ತಿರಿಪಿ ಪಿಡಿಯುತ್ತುಮರಿಗಂ|
     ಪರಿದಾಡುವ ಸಮವಯ[ಸ್ಕರೊ]ಳ್ ಸೊಗಯಿಸಿದಂ||೧೦|| 
(ಕರಿಕಳಭಂಗಳ, ಶಿಶು ಕೇಸರಿಗಳ, ಬೞಿಯಂ ತಗುಳ್ದು, ಬಡವುಗಳನ್ ಅವಂ ತಿರಿಪಿ ಪಿಡಿಯುತ್ತುಂ, ಅರಿಗಂ ಪರಿದಾಡುವ ಸಮವಯಸ್ಕರೊಳ್ ಸೊಗಯಿಸಿದಂ)
ಆನೆಯ ಮರಿಗಳನ್ನು, ಸಿಂಹದ ಮರಿಗಳನ್ನು ಅಟ್ಟಿಸಿಕೊಂಡು ಹೋಗಿ, ಆ ಬಡಪಾಯಿಗಳನ್ನು ಹಿಡಿದು ತಿರುಪುತ್ತ ಅರಿಗನು ಅತ್ತಿತ್ತ ಓಡಾಡುವ ತನ್ನ ಓರಗೆಯ ಮಕ್ಕಳೊಂದಿಗೆ ಮೆರೆದನು.
ಕಂ|| ದೆಯ್ವಬಲಂ ಸೊಗಸಿಕೆ ಮುಂ|
     ಗೆಯ್ವ ಬಲಂ ಬಾಳಕಾಲದೊಳ್ ತೊಡರ್ದ ಪೊಡ||
     ರ್ದಯ್ವರ ಬಾಲಕ್ರಿಯೆಯುಂ|
     ಮುಯ್ವಂ ನೋಡಿಸಿತು ತಾಯುಮಂ ತಂದೆಯುಮಂ||೧೧|| 
(ದೆಯ್ವಬಲಂ, ಸೊಗಸಿಕೆ, ಮುಂ ಗೆಯ್ವ ಬಲಂ, ಬಾಳಕಾಲದೊಳ್ ತೊಡರ್ದ, ಪೊಡರ್ದ, ಅಯ್ವರ ಬಾಲಕ್ರಿಯೆಯುಂ ಮುಯ್ವಂ ನೋಡಿಸಿತು ತಾಯುಮಂ ತಂದೆಯುಮಂ)
ದೈವಬಲ, ಚೆಲುವು, ವಯಸ್ಸಿಗೆ ಮೀರಿದ ಸಾಮರ್ಥ್ಯ ಹೀಗೆ ಅವರುಗಳ ಮಕ್ಕಳಾಟವು ತಾಯಿತಂದೆಯರಿಗೆ ತಮ್ಮ ಹೆಗಲನ್ನು ತಾವೇ ಮುಟ್ಟಿಕೊಳ್ಳುವಂತೆ (ಹೆಮ್ಮೆ ಪಡುವಂತೆ) ಮಾಡಿತು.
ವ|| ಅಂತಾ ಕೂಸುಗಳ್ ನಿಜ ಜನನೀಜನಕರ ಮನಮನಿೞ್ಕುಳಿಗೊಳಿಸಿಯುಮರಾತಿ ಜನಂಗಳ ಮನಮನಸುಂಗೊಳಿಸಿಯುಂ ಬಳೆಯೆ ಬಳೆಯೆ-
(ಅಂತು ಆ  ಕೂಸುಗಳ್ ನಿಜ ಜನನೀಜನಕರ ಮನಮನ್ ಇೞ್ಕುಳಿಗೊಳಿಸಿಯುಂ, ಅರಾತಿ ಜನಂಗಳ ಮನಮನ್ ಅಸುಂಗೊಳಿಸಿಯುಂ ಬಳೆಯೆ ಬಳೆಯೆ) 
ಹಾಗೆ, ಮಕ್ಕಳು ಆ ತಂದೆತಾಯಿಗಳ ಮನಸ್ಸನ್ನು ಸಂತಸಗೊಳಿಸಿ, ವೈರಿಗಳ ಚೇತನವನ್ನು ಅಡಗಿಸಿ ಬೆಳೆಯುತ್ತಿರುವಾಗ-
ಚಂ|| ಅಲರ್ದದಿರ್ಮುತ್ತೆ ಪೂತ ಪೊಸಮಲ್ಲಿಗೆ ಕಂಪನವುಂಕುತಿರ್ಪ ತೆಂ|
     ಬೆಲರು[ಮಿದ]ಂ ಗೆಲಲ್ಬಗೆವ ತುಂಬಿ ಗಳಧ್ವನಿಯಿಂ ಕುಕಿಲ್ವ ಕೋ||
     ಗಿಲೆ ನನೆದೋಱಿ ನುಣ್ಪೆಸೆವ ಮಾಮರನೊರ್ಮೊದಲಲ್ಲದುಣ್ಮುವು|
     ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್||೧೨|| 
(ಅಲರ್ದ ಅದಿರ್ಮುತ್ತೆ ಪೂತ ಪೊಸಮಲ್ಲಿಗೆ ಕಂಪನವುಂಕುತಿರ್ಪ ತೆಂಬೆಲರುಂ, ಇದಂ ಗೆಲಲ್ ಬಗೆವ ತುಂಬಿ, ಗಳಧ್ವನಿಯಿಂ ಕುಕಿಲ್ವ ಕೋಗಿಲೆ, ನನೆದೋಱಿ ನುಣ್ಪೆಸೆವ ಮಾಮರನ್, ಒರ್ಮೊದಲ್ ಅಲ್ಲದೆ ಉಣ್ಮುವ ಉಯ್ಯಲ ಪೊಸಗಾವರಂ ಪುಗಿಲೊಳ್ ಏನ್ ಎಸೆದತ್ತೊ ಬಸಂತಮಾಸದೊಳ್!)
ಆಗತಾನೇ ಅರಳಿದ ಅದಿರ್ಮುತ್ತೆ, ಮಲ್ಲಿಗೆ ಹೂಗಳ ಮೇಲೆ ರಭಸದಿಂದ ಬೀಸಿ ಅವುಗಳ ಪರಿಮಳವನ್ನು ಕಸಿದುಕೊಳ್ಳುವ ತೆಂಕಣಗಾಳಿ, ಆ ತೆಂಕಣಗಾಳಿಗೆ ನಾನೇನು ಕಡಿಮೆ ಎನ್ನುವಂತೆ ಅವೇ ಹೂಗಳಿಂದ ಮಕರಂದವನ್ನು ಕಸಿಯುವ ದುಂಬಿಗಳು, ಮಧುರಧ್ವನಿಯಲ್ಲಿ ಕೂಗುವ ಕೋಗಿಲೆ, ನುಣುಪಾಗಿ ತೋರುವ ಹೂ ತಳೆದ ಮಾವಿನ ಮರ, ಮತ್ತೆ ಮತ್ತೆ ಕೇಳಿಬರುವ ಉಯ್ಯಾಲೆಯಾಡುವವರ ಗಲಾಟೆ ಇವುಗಳಿಂದ ವಸಂತ ಋತುವಿನ ಆಗಮನವು ಶೋಭಿಸುತ್ತಿತ್ತು.
ವ|| ಆಗಳಾ ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ ಬಳ್ವಳ ಬಳೆದ ಮಿಳಿರ್ವಶೋಕೆಯ ತಳಿರ್ಗಳುಮಾತನ ಬರವಿಂಗೆ ತೋರಣಂಗಟ್ಟಿದಂತೆ ಬಂದ ಮಾಮರಂಗಳನಡರ್ದು ತೊಡರ್ದೆಳಗೊಂಬುಗಳ್ವಿಡಿದು ಮರದಿಂ ಮರಕ್ಕೆ ದಾಂಗುಡಿವಿಡುವ ಮಾಧವೀಲತೆಗಳುಮಾತನ ಬರವಿಂಗೆ ನೆಱೆಯೆ ಸೊಗಯಿಸೆ ಕೆಯ್ಗೆಯ್ವ ನಲ್ಲಳಂತೆ ನನೆಯ ಬಿರಿಮುಗುಳ್ಗಳ ತುಱುಗಲೊಳೆಱಗಿ ತುಱುಗಿದ ಕಲ್ಪಲತೆಗಳುಮಾತನ ಬರವಿಂಗೆ ಬದ್ದವಣಂ ಬಾಜಿಪಂತೆ ಭೋರ್ಗರೆದು ಮೊರೆವ ತುಂಬಿಗಳುಮಾತನ ಬರವಿಂಗೆ ರಂಗವಲಿಯಿಕ್ಕಿದಂತೆ ಪುಳಿನಸ್ಥಳಂಗಳೊಳುದಿರ್ದ ಕೞಿವೂಗಳುಮಾತನ ಬರವಿಂಗೆ ವನವನಿತೆ ಮೆಚ್ಚಿ ನೆಱೆಯೆ ಕೆಯ್ಗೆಯ್ದಂತೆ ನಿಱಿನಿಱಿಗೊಂಡು ಸೊಗಯಿಸುವ ನಿಱಿಗನ ನಿಱಿದಳಿರ ಗೊಂಚಲ್ಗಳುಮಾತನ ಮೇಲ್ವಾಯೆ ರಾಗಿಸಿ ರೋಮಾಂಕುರಮೊಗೆದಂತೊಗೆದ ಕಳಿಕಾಂಕುರಂಗಳುಮಾತನಂಗಸಂಗದೊಳ್ ಕಾಮರಸಮುಗುವಂತುಗುವ ಸೊನೆಯ ಸೋನೆಗಳುಮನೊಳಕೊಂಡು ತದಾಶ್ರಮದ ನಂದನವನಂಗ[ಳ್ಜನಂಗಳನನಂಗಂಗೆ ತೊೞ್ತುವೆಸಂಗೆಯ್ಸಿದುವು
 (ಆಗಳ್ ಆ ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ ಬಳ್ವಳ ಬಳೆದ ಮಿಳಿರ್ವ ಅಶೋಕೆಯ ತಳಿರ್ಗಳುಂ, ಆತನ ಬರವಿಂಗೆ ತೋರಣಂಗಟ್ಟಿದಂತೆ, ಬಂದ ಮಾಮರಂಗಳನ್ ಅಡರ್ದು, ತೊಡರ್ದು, ಎಳಗೊಂಬುಗಳ ಪಿಡಿದು, ಮರದಿಂ ಮರಕ್ಕೆ ದಾಂಗುಡಿವಿಡುವ ಮಾಧವೀಲತೆಗಳುಂ, ಆತನ ಬರವಿಂಗೆ ನೆಱೆಯೆ ಸೊಗಯಿಸೆ ಕೆಯ್ಗೆಯ್ವ ನಲ್ಲಳಂತೆ, ನನೆಯ ಬಿರಿಮುಗುಳ್ಗಳ ತುಱುಗಲೊಳ್ ಎಱಗಿ ತುಱುಗಿದ ಕಲ್ಪಲತೆಗಳುಂ, ಆತನ ಬರವಿಂಗೆ ಬದ್ದವಣಂ ಬಾಜಿಪಂತೆ ಭೋರ್ಗರೆದು ಮೊರೆವ ತುಂಬಿಗಳುಂ, ಆತನ ಬರವಿಂಗೆ ರಂಗವಲಿಯಿಕ್ಕಿದಂತೆ ಪುಳಿನಸ್ಥಳಂಗಳೊಳ್ ಉದಿರ್ದ ಕೞಿವೂಗಳುಂ, ಆತನ ಬರವಿಂಗೆ ವನವನಿತೆ ಮೆಚ್ಚಿ, ನೆಱೆಯೆ ಕೆಯ್ಗೆಯ್ದಂತೆ, ನಿಱಿನಿಱಿಗೊಂಡು ಸೊಗಯಿಸುವ ನಿಱಿಗನ ನಿಱಿದಳಿರ ಗೊಂಚಲ್ಗಳುಂ, ಆತನ ಮೇಲ್ವಾಯೆ ರಾಗಿಸಿ ರೋಮಾಂಕುರಂ ಒಗೆದಂತೆ ಒಗೆದ ಕಳಿಕಾಂಕುರಂಗಳುಂ, ಆತನ ಅಂಗಸಂಗದೊಳ್ ಕಾಮರಸಂ ಉಗುವಂತೆ ಉಗುವ ಸೊನೆಯ ಸೋನೆಗಳುಮನ್ ಒಳಕೊಂಡು ತದಾಶ್ರಮದ ನಂದನವನಂಗಳ್  ಜನಂಗಳನ್ ಅನಂಗಂಗೆ ತೊೞ್ತುವೆಸಂಗೆಯ್ಸಿದುವು)
ಆಗ ಆ ನಂದನದಲ್ಲಿ ಅಶೋಕಮರದ ಕೋಮಲ ಚಿಗುರುಗಳು ವಸಂತ ರಾಜನನ್ನು ಸ್ವಾಗತಿಸಲು ಕಟ್ಟಿದ ಬಾವುಟದಂತೆ ಅಲುಗುತ್ತಿದ್ದವು. ಮಾಧವೀಲತೆಗಳು ಮಾವಿನಮರಗಳನ್ನು ಹಿಡಿದು, ಹತ್ತಿ, ಅವುಗಳ ಎಳೆಯ ಕೊಂಬೆಗಳನ್ನು ಹಿಡಿದು ಮರದಿಂದ ಮರಕ್ಕೆ ದಾಟಿ ಆತನ ಸ್ವಾಗತಕ್ಕೆ ತೋರಣವನ್ನು ಕಟ್ಟಿದಂತೆ ಕಾಣುತ್ತಿದ್ದವು. ನಲ್ಲನನ್ನು ಎದುರ್ಗೊಳ್ಳುವ ನಲ್ಲೆಯು ಆತನ ಕಣ್ಣಿಗೆ ಚೆನ್ನಾಗಿ ಕಾಣಬೇಕೆಂದು ಸಿಂಗರಿಸಿಕೊಳ್ಳುವಂತೆ, ಕಲ್ಪಲತೆಗಳು ಮೊಗ್ಗುಗಳನ್ನು, ಅರಿಬಿರಿದ ಮುಗಳುಗಳನ್ನು ರಾಶಿರಾಶಿಯಾಗಿ ತಳೆದಿದ್ದವು. ಆತನು ಬರುವ ಹೊತ್ತಿಗೆ ಭೇರಿಯನ್ನು ಬಾರಿಸುವಂತೆ ದುಂಬಿಗಳು ಝೇಂಕರಿಸುತ್ತಿದ್ದವು. ಹರಡಿಕೊಂಡ ಮರಳಿನಲ್ಲಿ ಬಿದ್ದ ಗಳಿತ ಹೂವುಗಳು ಆತನ ಬರವಿಗೆ ರಂಗೋಲೆ ಇಟ್ಟಂತೆ ಕಾಣುತ್ತಿದ್ದವು. ಆತನನ್ನು ಮೆಚ್ಚಿಸಲೆಂಬಂತೆ ಕಾಡೆಂಬ ಹೆಣ್ಣು ತನ್ನನ್ನು ಚೆನ್ನಾಗಿ ಅಲಂಕರಿಸಿಕೊಂಡಂತೆ ಮಾವಿನ ಮರದಲ್ಲಿ ಚಿಗುರಿನ ಗೊಂಚಲುಗಳು ತೂಗುತ್ತಿದ್ದವು. ಆತನು ಬಂದು ತಮ್ಮ ಮೇಲೆ ಎರಗಿದ್ದರಿಂದ ರೋಮಾಂಚನಗೊಂಡಂತೆ ಗಿಡಮರಗಳು ಚಿಗುರೊಡೆದವು. ಆತನ ಅಂಗಸಂಗದಿಂದೊಸರಿದ ಕಾಮರಸವೋ ಎಂಬಂತೆ ಮರಗಳು ಸೊನೆಯನ್ನು ಸುರಿಸುತ್ತಿದ್ದವು. ಹೀಗೆ ಆ ನಂದನವನಗಳು ಜನರನ್ನು ಮನ್ಮಥನ ತೊತ್ತುಗಳನ್ನಾಗಿಸಿದವು!

ಚಂ|| ಬಿರಯಿಯ ಮಿೞ್ತು[ವೆ]ಂ ಮಿದಿದೊಡಲ್ಲದಣಂ ಮುಳಿಸಾಱದೆಂದು ಪ|
     ಲ್ಮೊರೆದಪನಿಲ್ಲಿ ಮನ್ಮಥನಿದಂ ಪುಗಲಿಂಗಡಿಮೆಂದು ಬೇಟಕಾ||
     ಱರನಿರದೂಱಿ ಸಾಱಿ ಜಡಿವಂತೆಸೆಗುಂ ಸಹಕಾರ ಕೋಮಳಾಂ|
     ಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ ನಂದನಂಗಳೊಳ್ ||೧೩|| 
(ಬಿರಯಿಯ ಮಿೞ್ತುವೆಂ, ಮಿದಿದೊಡಲ್ಲದೆ ಅಣಂ ಮುಳಿಸು ಆಱದು ಎಂದು ಪಲ್ ಮೊರೆದಪನ್ ಇಲ್ಲಿ ಮನ್ಮಥನ್, ಇದಂ ಪುಗಲ್ ಇಂ ಗಡಿಂ, ಎಂದು ಬೇಟಕಾಱರನ್ ಇರದೆ ಊಱಿ ಸಾಱಿ ಜಡಿವಂತೆ ಎಸೆಗುಂ, ಸಹಕಾರ ಕೋಮಳಾಂಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ ನಂದನಂಗಳೊಳ್)
‘ನಾನು ವಿರಹಿಗಳ ಪಾಲಿನ ಮೃತ್ಯು! ಅವರನ್ನು ಹಿಡಿದು ಹಿಂಸಿಸದಿದ್ದರೆ ನನ್ನ ಸಿಟ್ಟು ಸ್ವಲ್ಪವೂ ಆರುವುದಿಲ್ಲ ಎಂದು ಇಲ್ಲಿ ಮನ್ಮಥನು ಹಲ್ಲು ಮಸೆಯುತ್ತಿದ್ದಾನೆ! ಆದ್ದರಿಂದ ವಿರಹಿಗಳ್ಯಾರೂ ಈ ನಂದನಕ್ಕೆ ಬರಬೇಡಿ’ ಎಂದು ಕೂಗಿ ಹೇಳಿ, ಪ್ರೇಮಿಗಳನ್ನು ಎಚ್ಚರಿಸುವಂತೆ, ಮಾವಿನ ಚಿಗುರುಂಡು ಸೊಕ್ಕಿದ ಕೋಗಿಲೆಗಳ ಕೂಗು ಆ ನಂದನಗಳಲ್ಲಿ ಕೇಳುತ್ತಿತ್ತು.
ಚಂ|| ಕವಿವ ಮದಾಳಿಯಿಂ ಮಸುಳನಾಗಿ ಪಯೋಜರಜಂಗಳೊಳ್ ಕವಿ|
     ಲ್ಗವಿಲನುಮಾಗಿ ಬಂದ ಮಲಯಾನಿಲನೂದೆ ತೆರಳ್ವ ಚೂತ ಪ||
     ಲ್ಲವದ ತೆರಳ್ಕೆ ತದ್ವನ ವಿಳಾಸಿನಿಯುಟ್ಟ ದುಕೂಲದೊಂದು ಪ|
     ಲ್ಲವದ ತೆರಳ್ಕೆಯಂತೆಸೆಯೆ ಕಣ್ಗೆಸೆದಿರ್ದುವು ನಂದನಾಳಿಗಳ್||೧೪|| 
(ಕವಿವ ಮದಾಳಿಯಿಂ ಮಸುಳನಾಗಿ, ಪಯೋಜರಜಂಗಳೊಳ್ ಕವಿಲ್ ಕವಿಲನುಂ ಆಗಿ ಬಂದ ಮಲಯಾನಿಲನ್ ಊದೆ, ತೆರಳ್ವ ಚೂತ ಪಲ್ಲವದ ತೆರಳ್ಕೆ, ತದ್ವನ ವಿಳಾಸಿನಿಯುಟ್ಟ ದುಕೂಲದ ಒಂದು ಪಲ್ಲವದ ತೆರಳ್ಕೆಯಂತೆ ಎಸೆಯೆ ಕಣ್ಗೆ ಎಸೆದಿರ್ದುವು ನಂದನಾಳಿಗಳ್)
ಆ ನಂದನದಲ್ಲಿ ಎಲ್ಲ ಕಡೆಯೂ ಕವಿದ ಸೊಕ್ಕೇರಿದ ದುಂಬಿಗಳಿಂದಾಗಿ ಅಲ್ಲಿ ಬೀಸುವ ಮಲಯಾನಿಲನೂ ಮಾಸಿದ್ದಾನೆ. ತಾವರೆಯ ಪರಾಗಗಳಿಂದಾಗಿ ಅವನ ಬಣ್ಣ ಕೆಂಪುಕೆಂಪಾಗಿದೆ. (ಹೀಗೆ ಬುದ್ಧಿ ಮಾಸಿದ, ಪರಾಗದ ನಶೆಯಿಂದ  ಮುಖ ಕೆಂಪೇರಿಸಿಕೊಂಡ) ಮಲಯಾನಿಲ ಆ ವನವಿಳಾಸಿನಿಯ ದುಕೂಲದ ಸೆರಗಿನಂತೆ ಶೋಭಿಸುವ ಮಾವಿನ ಚಿಗುರನ್ನು ಊದಿ ಅಲುಗಿಸುತ್ತಿದ್ದಾನೆ! ಅವಳನ್ನು ಕೆಣಕುತ್ತಿದ್ದಾನೆ! ಹೀಗೆ ಆ ನಂದನವನವು ಶೋಭಿಸುತ್ತಿದೆ.
ಉ|| ಪೋಗದೆ ಪಾಡುತಿರ್ಪಳಿಯೆ ಬೃಂಹಿತಮಾಗಿರೆ ಚಂದ್ರಕಾಂತಿ ಕಾ|
     ಯ್ಪಾಗಿರೆ ಬೀಸುವೊಂದೆಲರೆ ಬೀಸುವುದಾಗಿರೆ ಕಾಯ್ಗಳಿಂದಮಿಂ||
     ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ|
     ಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ||೧೫|| 
(ಪೋಗದೆ ಪಾಡುತಿರ್ಪ ಅಳಿಯೆ ಬೃಂಹಿತಂ ಆಗಿರೆ ಚಂದ್ರಕಾಂತಿ ಕಾಯ್ಪು ಆಗಿರೆ ಬೀಸುವೊಂದು ಎಲರೆ ಬೀಸುವುದಾಗಿರೆ ಕಾಯ್ಗಳಿಂದಂ ಇಂಬಾಗಿರೆ ಸೋರ್ವ ಸೋನೆ ಮದಮಾಗಿರೆ, ಮಾವಿನ ಬಂದ ಕೋಡೆ ಕೋಡಾಗಿರೆ, ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ)
ದುಂಬಿಗಳು ಬೇರೆಲ್ಲಿಯೂ ಹೋಗದೆ ಆ ನಂದನದಲ್ಲಿಯೇ ಉಳಿದು ಝೇಂಕರಿಸುತ್ತಿವೆ. ಅವುಗಳ ಆ ಝೇಂಕಾರ ವಸಂತ ಋತುವೆಂಬ ಆನೆಯ ಘೀಂಕಾರದಂತಿದೆ. ಆ ನಂದನದ ಬೆಳ್ದಿಂಗಳು ಆನೆಯ ಕೋಪದಂತಿದೆ. ಅಲ್ಲಿ ಬೀಸುವ ಗಾಳಿ ಆನೆಯ ರಭಸವಾದ ನಡಿಗೆಯಂತಿದೆ. ಮಾವಿನ ಕಾಯಿಗಳಿಂದ ಸೊಗಸಾಗಿ ಸೋರುವ ಸೊನೆ ಆನೆಯ ಮದಜಲದಂತಿದೆ. ಮಾವಿನ ಮರದ ಕೊಂಬೆಗಳು ಆನೆಯ ದಂತಗಳಂತಿವೆ. ಹೀಗೆ ಆ ನಂದನದಲ್ಲಿ ವಸಂತ ಋತು ಆನೆಯ ರೂಪು ತಳೆದು ವಿಯೋಗಿಗಳ ಮೇಲೆ ಹರಿಹಾಯ್ದಿದೆ.

|| ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ ಕ್ರೀಡಾನುಶೀಲೆಯುಮಪ್ಪುದಱಿಂ ವನಕ್ರೀಡಾನಿಮಿತ್ತದಿಂ ಪೋಗಿ
(ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ, ಕ್ರೀಡಾನುಶೀಲೆಯುಂ ಅಪ್ಪುದಱಿಂ, ವನಕ್ರೀಡಾನಿಮಿತ್ತದಿಂ ಪೋಗಿ-) 
ಹಾಗೆ ಬಂದ ವಸಂತದಲ್ಲಿ ಸೊಕ್ಕಿನವಳೂ, ಆಟದ ಖಯಾಲಿಯವಳೂ ಆದ ಮಾದ್ರಿ ಕಾಡು ತಿರುಗಲೆಂದು ಹೋಗಿ-

ಚಂ|| ವನಕುಸುಮಂಗಳಂ ಬಗೆಗೆವಂದುವನೞ್ತಿಯೊಳಾಯ್ದು ಕೊಯ್ದು ಮೆ|
     ಲ್ಲನೆ ವಕುಳಾಳವಾಳ ತಳದೊಳ್ ಸುರಿದಂಬುಜಸೂತ್ರದಿಂದೆ ಮ||
     ತ್ತನಿತಱೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇ|
     ೞ್ಪನಿತನೆ ಮಾಡಿ ತೊಟ್ಟು ಕರಮೊಪ್ಪಿದಳಾಕೆ ಬಸಂತ ಕಾಂತೆವೋಲ್||೧೬|| 
(ವನಕುಸುಮಂಗಳಂ ಬಗೆಗೆ ಬಂದುವನ್ ಅೞ್ತಿಯೊಳ್ ಆಯ್ದು, ಕೊಯ್ದು, ಮೆಲ್ಲನೆ ವಕುಳ ಆಳವಾಳ ತಳದೊಳ್ ಸುರಿದು ಅಂಬುಜಸೂತ್ರದಿಂದೆ, ಮತ್ತೆ ಅನಿತಱೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಂ ಎಂದು ಬೇೞ್ಪ ಅನಿತನೆ ಮಾಡಿ, ತೊಟ್ಟು, ಕರಂ ಒಪ್ಪಿದಳ್ ಆಕೆ, ಬಸಂತ ಕಾಂತೆವೋಲ್)
(ಮಾದ್ರಿ) ತನಗೆ ಇಷ್ಟವಾದ ಕಾಡು ಹೂಗಳನ್ನು ಪ್ರೀತಿಯಿಂದ ಆರಿಸಿ, ಕೊಯ್ದು, ಬಕುಳ ವೃಕ್ಷಗಳ (ರಂಜ, ರೆಂಜೆ, ಬಾಗೆ) ತೋಪಿನಲ್ಲಿ ಆ ಮರಗಳ ನೆರಳಿನಲ್ಲಿ ಕುಳಿತುಕೊಂಡು, ವಿರಾಮವಾಗಿ, ತಾವರೆಯ ದಂಟಿನ ನಾರಿಗೆ ತಾನು ತಂದ ಹೂಗಳನ್ನು ಪೋಣಿಸಿ, ಅಷ್ಟೂ ಹೂಗಳಿಂದ ಮೊಗ್ಗಿನ ಸರಿಗೆ, ತೋಳ್ಬಳೆ, ಬಳೆ, ಹಾರ ಎಂದು ಬೇಕಾದಷ್ಟನ್ನು ಮಾಡಿ, ತೊಟ್ಟು ವಸಂತರಾಜನ ರಮಣಿಯಂತೆ ಶೋಭಿಸಿದಳು.
ವ|| ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆ-
(ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆ ಎಣೆಯಾಗಿರೆ)
ಹಾಗೆ ತೊಟ್ಟ ಹೂವಿನ ಆಭರಣಗಳು ಮನ್ಮಥನು ಹೂಡಿದ ಹೂಬಾಣದಂತೆ ಇರಲು-
ಚಂ|| ಮಿಳಿರ್ವ ಕುರುಳ್ಗಳೊಳ್ ತೊಡರ್ದು ದೇಸಿಯನಾವಗಮೀವ ಚೆನ್ನ ಪೂ|
     ಗಳನವನೊಯ್ಯನೋಸರಿಸುತುಂ ವದನಾಬ್ಜದ ಕಂಪನಾಳ್ದುಣಲ್||
     ಬಳಸುವ ತುಂಬಿಯಂ ಪಿಡಿದ ನೆಯ್ದಿಲೊಳೊಯ್ಯನೆ ಸೋವುತುಂ ಬೆಡಂ|
     ಗೊಳಕೊಳೆ ಸೊರ್ಕಿದಂಗಜ ಮತಂಗಜದಂತಿರೆ ಬರ್ಪ ಮಾದ್ರಿಯಂ||೧೭|| 
(ಮಿಳಿರ್ವ ಕುರುಳ್ಗಳೊಳ್ ತೊಡರ್ದು ದೇಸಿಯನ್ ಆವಗಂ ಈವ ಚೆನ್ನ ಪೂಗಳನ್ ಅವನ್ ಒಯ್ಯನೆ ಓಸರಿಸುತುಂ, ವದನ ಅಬ್ಜದ ಕಂಪನ್ ಆಳ್ದು ಉಣಲ್  ಬಳಸುವ ತುಂಬಿಯಂ ಪಿಡಿದ ನೆಯ್ದಿಲೊಳ್ ಒಯ್ಯನೆ ಸೋವುತುಂ, ಬೆಡಂಗು ಒಳಕೊಳೆ ಸೊರ್ಕಿದ ಅಂಗಜ ಮತಂಗಜದಂತೆ ಇರೆ ಬರ್ಪ ಮಾದ್ರಿಯಂ)
ಅಲುಗಾಡುವ ಗುಂಗುರುಕೂದಲುಗಳ ನಡುವೆ ಸಿಕ್ಕಿಕೊಂಡು ಚೆಲುವನ್ನೀವ ಚೆಂದದ ಹೂಗಳನ್ನು ಮೆಲ್ಲನೆ ಬದಿಗೆ ಸರಿಸುತ್ತಾ, ಮುಖಕಮಲದ ಪರಿಮಳಕ್ಕಾಗಿ ಮೇಲೆ ಬಿದ್ದು ಮುತ್ತುವ ದುಂಬಿಗಳನ್ನು ಕೈಯಲ್ಲಿ ಹಿಡಿದ ನೈದಿಲೆಯಿಂದ ಮೆಲ್ಲನೆ ಓಡಿಸುತ್ತಾ, ವೈಯಾರದಿಂದ, ಸೊಕ್ಕಿದ ಆನೆಯಂತೆ ನಡೆದು ಬರುತ್ತಿದ್ದ  ಮಾದ್ರಿಯನ್ನು-
|| ತಾಪಸಾಶ್ರಮದಿಂ ಪೊಱಮಟ್ಟಂತೆ ಬನಮಂ ತೊೞಲ್ವ ಪಾಂಡುರಾಜಂ ಕಂಡು-
ತಾಪಸಾಶ್ರಮದಿಂ ಪೊಱಮಟ್ಟು ಅಂತೆ ಬನಮಂ ತೊೞಲ್ವ ಪಾಂಡುರಾಜಂ ಕಂಡು)
ತಾಪಸಾಶ್ರಮದಿಂದ ಹೊರಬಿದ್ದು ಹಾಗೇ ಸುಮ್ಮನೆ (ಮಾದ್ರಿಯ ಹಾಗೆಯೇ!) ಕಾಡು ತಿರುಗುತ್ತಿದ್ದ ಪಾಂಡುರಾಜನು ಕಂಡಾಗ-