ಮಂಗಳವಾರ, ಜೂನ್ 22, 2010

ಎಸ್ ಇ ಝಡ್ ನೇತ್ರಾವತಿಯನ್ನು ತಿರುಗಿಸಲು ಹೊರಟಿದೆಯೇ?

ಮಂಗಳೂರು ವಿಶೇಷ ಆರ್ಥಿಕ ವಲಯದ ವೆಬ್ ಸೈಟನ್ನು ನಾನು ನಿಯಮಿತವಾಗಿ ನೋಡುವುದಿಲ್ಲ. "ವಿಶೇಷ ಆರ್ಥಿಕ ವಲಯಕ್ಕೆ ನೀರೆಲ್ಲಿಂದ?" ಎಂಬ ಲೇಖನ ಬರೆದಾಗ ನೋಡಿದ್ದೆ. ಅಲ್ಲಿ ಕೊಟ್ಟಿದ್ದ ಕೆಲವು ಅಂಕಿಸಂಖ್ಯೆಗಳನ್ನು ಲೇಖನದಲ್ಲಿ ಬಳಸಿಕೊಂಡಿದ್ದೆ. ಅದೇ ನೆನಪಿನ ಮೇಲೆ ಮೊನ್ನೆ "ನಿಮ್ಮ ಕಾನೂನು ನಿಮಗಿರಲಿ......" ಲೇಖನದಲ್ಲಿ "ಕರ್ನಾಟಕ ಸರಕಾರ ದಿನಕ್ಕೆ ೬.೭೫ ಕೋಟಿ ಲೀಟರ್ ನೀರು ಕೊಡಲು ಒಪ್ಪಿಕೊಂಡಿದೆ" ಎಂದು ಬರೆದೆ. ನಿನ್ನೆ ಅಂದರೆ ೧೭-೦೬-೨೦೧೦ರಂದು ಯಾಕೋ ಕಂಪೆನಿಯ ವೆಬ್ ಸೈಟನ್ನು ಪುನಃ ನೋಡಬೇಕಾಯಿತು. ನೋಡಿದರೆ ನೀರಿನ ಕುರಿತಾದ ಕಂಪೆನಿಯ ಅಂಕಿಸಂಖ್ಯೆಗಳು ಬದಲಾಗಿಬಿಟ್ಟಿವೆ!
೧. ಒಟ್ಟು ಅಗತ್ಯ ೪೫ ಎಂಜಿಡಿ ನೀರು ಎಂಬುದೇನೋ ಮೊದಲಿನಂತೆಯೇ ಇದೆ. ಈ ಪೈಕಿ ೧೫ ಎಂಜಿಡಿ ನೀರನ್ನು ನೇತ್ರಾವತಿ ಮತ್ತು ಗುರುಪುರ ನದಿಗಳಿಂದ ಒದಗಿಸಿಕೊಳ್ಳುತ್ತೇವೆ ಎಂದು ಹಿಂದಿನ ವೆಬ್ ಸೈಟಿನಲ್ಲಿ ಇತ್ತು. ಈಗ ಅದು ೨೫ ಎಂಜಿಡಿ ಆಗಿದೆ! ಎಂದರೆ ಈಗಿನ ಲೆಕ್ಕದ ಪ್ರಕಾರ ಈ ನದಿಗಳಿಂದ ಅದು ಎತ್ತುವ ಒಟ್ಟು ನೀರಿನ ಪ್ರಮಾಣ ದಿನಕ್ಕೆ ೧೧.೨೫ ಕೋಟಿ ಲೀಟರುಗಳು!
೨೦೦೭ರ ಸರ್ಕಾರಿ ಆಜ್ಞೆಯಲ್ಲಿ "೧೫ ಎಂಜಿಡಿ ನೀರು ಎತ್ತಲು ಅನುಮತಿ ನೀಡಲಾಗಿದೆ" ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾದರೆ ಈಗ ಹತ್ತು ಎಂಜಿಡಿ ಜಾಸ್ತಿ ಆದದ್ದು ಹೇಗೆ? ಸರಕಾರ ೨೫ ಎಂಜಿಡಿ ನೀರೆತ್ತಲು ಕಂಪೆನಿಗೆ ಹೊಸದಾಗಿ ಅನುಮತಿ ನೀಡಿದೆಯೆ? ಈ ಬಗ್ಗೆ ಮಾಹಿತಿ ಕೇಳಿ ಸಣ್ಣ ನೀರಾವರಿ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದೇನೆ.
೨, ಇನ್ನೊಂದು ಬದಲಾವಣೆ ಎಂದರೆ ಮಳೆನೀರಿನ ಸಂಗ್ರಹದ ವಿಷಯ ಮಂಗಮಾಯ ಆಗಿರುವುದು! ಈ ಹಿಂದೆ, ೧೨ ಎಂಜಿಡಿ ನೀರನ್ನು ಮಳೆ ನೀರು ಸಂಗ್ರಹದ ಮೂಲಕ ಒದಗಿಸಿಕೊಳ್ಳುವುದಾಗಿ ಕಂಪೆನಿ ಹೇಳಿತ್ತು. "ಸ್ವಾಧೀನ ಪಡಿಸಿಕೊಂಡ ಜಮೀನಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸುವ" ಮಾತನ್ನು ಆಗ ಕಂಪೆನಿ ಆಡಿತ್ತು.ಇದರ ಸಾಧ್ಯತೆಯ ಬಗ್ಗೆ ನನ್ನ ಲೇಖನದಲ್ಲಿ ಅನುಮಾನ ವ್ಯಕ್ತಪಡಿಸಿದ್ದೆ. ಸ್ವಾಧೀನ ಪಡಿಸಿಕೊಂಡ ಎಲ್ಲ ಭೂಮಿಯನ್ನೂ ಈಗ ಒಂದೇ ಲೆಕ್ಕ ತಟ್ಟು ಮಾಡಿದ್ದಾರಂತೆ. ಹಾಗಾಗಿ "ತಗ್ಗು ಪ್ರದೇಶ"ದ ಜೊತೆಗೇ ಮಳೆನೀರು ಸಂಗ್ರಹದ ಯೋಜನೆಯೂ ಮಾಯವಾಗಿರಬೇಕು!
೩. ಈಗಿನ ಲೆಕ್ಕಾಚಾರದ ಪ್ರಕಾರ ನದಿಗಳಿಂದ ೨೫ ಎಂಜಿಡಿ, ಮಂಗಳೂರಿನ ಗಲೀಜು ನೀರು ಸಂಸ್ಕರಿಸಿ ೧೦ ಎಂಜಿಡಿ ಎಂದಿದೆ. ಇನ್ನೂ ಬೇಕಾಗುವ ೧೦ ಎಂಜಿಡಿ ಎಲ್ಲಿಂದ ಬರುತ್ತದೆ ಎನ್ನುವುದಕ್ಕೆ ಯಾವ ವಿವರಣೆಯೂ ಇಲ್ಲ.
ವೆಬ್ ಸೈಟಿನಲ್ಲಿ, ಪತ್ರಿಕೆಯಲ್ಲಿ, ಕಂಪೆನಿಯ ಹೆಸರು ಹಾಕಿ "ಮಳೆ ನೀರು ಸಂಗ್ರಹಿಸುತ್ತೇವೆ" ಎಂದು ಎಲ್ಲರೂ ಓದುವಂತೆ ಪ್ರಕಟಿಸಿದ ಮೇಲೆ, ಅದು ಸಾರ್ವಜನಿಕರಿಗೆ ಕೊಟ್ಟ ವಾಗ್ದಾನವೇ ಆಯಿತು. ಮಳೆನೀರು ಸಂಗ್ರಹ ಮಾಡುತ್ತೇವೆಂದು ಮೊದಲು ಹೇಳಿದವರು, ಈಗ ಆ ಯೋಜನೆಯನ್ನು ಕೈ ಬಿಡುವುದು ಹೇಗೆ ಸಾಧ್ಯ? ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಕಂಪೆನಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇ ಬೇಕಾಗುತ್ತದೆ.
ನೇರವಾಗಿ ಕೇಳುವುದೇ ಸರಿ ಎಂದುಕೊಂಡು ಎಸ್ ಇ ಝಡ್ ಕಂಪೆನಿಗೆ ಸಮಸ್ಯೆ ವಿವರಿಸಿ ಸ್ಪಷ್ಟೀಕರಣ ಕೇಳಿ ಒಂದು ಮಿಂಚಂಚೆ ಕಳಿಸಿದೆ. ೨೧ರ ಮಂಗಳವಾರ ಮಧ್ಯಾಹ್ನ ಒಂದು ಫೋನು: "ನಾನು ದಿವಾಕರ್ ಅಂತ ಎಸ್ ಇ ಝಡ್ನಿಂದ ಮಾತಾಡುವುದು. ಇದು ನಮ್ಮ ವೆಬ್ ಸೈಟಿನಲ್ಲಿ ಮೊದಲು ಏನಂತ ಇತ್ತು ಸಾರ್?"
ನಾನು: ಮೊದಲು ಇದ್ದದ್ದು ೧೫ ಎಂಜಿಡಿ ನೇತ್ರಾವತಿ ಮತ್ತು ಗುರುಪುರ ನದಿಗಳಿಂದ, ೧೮ ಎಂಜಿಡಿ ಮಂಗಳೂರು ಎಸ್ ಟಿ ಪಿ ಯಿಂದ ಮತ್ತು ೧೨ ಎಂಜಿಡಿ ಮಳೆ ನೀರು ಸಂಗ್ರಹದಿಂದ ಅಂತ"
ದಿವಾಕರ್: ಓ ಹಾಗಿತ್ತ?
ನಾನು: ನನ್ನ ಹತ್ತಿರ ಅದರ ಪ್ರಿಂಟ್ ಔಟ್ ಇದೆ. ಉದಯವಾಣಿ ಜಾಹೀರಾತಿನಲ್ಲೂ ಹಾಗೇ ಇತ್ತು.
ದಿವಾಕರ್: ಸರಿ, ಹಾಗಾದರೆ ನಾನು ಚೆಕ್ ಮಾಡಿ ನಿಮಗೆ ಪುನಃ ಫೋನ್ ಮಾಡುತ್ತೇನೆ. ಮತ್ತೆ ಇದು ಮೊನ್ನೆ ಮಡಿಕೇರಿಯಲ್ಲಿ ಮಾಹಿತಿ ಹಕ್ಕಿನದು ಇತ್ತಲ್ಲ. ನಾವು ಕಂಪೆನಿಯಿಂದ ಒಂದು ಕಾಗದ ಬರೆದಿದ್ದೆವು ಅಲ್ಲಿಗೆ.
ನಾನು: ನಾನು ಹೋಗಿದ್ದೆ. ನನಗೆ ನಿಮ್ಮ ಕಾಗದ, ವಕೀಲರ ಅಭಿಪ್ರಾಯ ಸಿಕ್ಕಿದೆ. ಅದರ ವಿಷಯ ನಾನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ನೋಡಿ
ದಿವಾಕರ್: ನಿಮ್ಮ ಬ್ಲಾಗ್ ಯಾವುದು"
ನಾನು: ಇವೊತ್ತಿನ ಉದಯವಾಣಿ ಆರನೇ ಪುಟದಲ್ಲಿ ಹಾಕಿದ್ದಾರೆ ನೋಡಿ ವಿಳಾಸ
ದಿವಾಕರ್: ಸರಿ ಸರಿ ನೋಡುತ್ತೇನೆ
ಸುಮಾರು ಒಂದೂವರೆ ಗಂಟೆ ಕಳೆದ ಮೇಲೆ ಪುನಃ ಫೋನ್ ಬಂತು: "ನೀವು ಹೇಳಿದ್ದು ಸರಿ. ಅದು ಹಾಗೆಯೇ ಇರಬೇಕು. ವೆಬ್ ಸೈಟಿನಲ್ಲಿ ಸರಿ ಮಾಡುತ್ತೇವೆ
ನಾನು: ಸರಿ ಸರಿ. ನನಗೊಂದು ಮೇಲ್ ಕಳಿಸಿಬಿಡಿ
ದಿವಾಕರ್: ಇಲ್ಲ ಅದು ಕಳಿಸುವುದಿಲ್ಲ....
ನಾನು: ಸರಿ ಹಾಗಾದರೆ.
ದಿವಾಕರ್: ನಿಮ್ಮ ಬ್ಲಾಗ್ ನೋಡಿದೆ. ಲೇಖನ ಚೆನ್ನಾಗಿದೆ.
ನಾನು : ಥ್ಯಾಂಕ್ಸ್!
ಇವೊತ್ತು ಅಂದರೆ ೨೨ರ ಬುಧವಾರ ರಾತ್ರಿ ವೆಬ್ ಸೈಟ್ ನೋಡಿದೆ. ನೀರಿನ ವಿಷಯ ನಾಪತ್ತೆ! ಜೊತೆಗೆ ಕಂಪೆನಿಗೆ ಬೇಕಾಗುವ ವಿದ್ಯುತ್ ಎಷ್ಟು, ಅದಕ್ಕೆ ಏನು ವ್ಯವಸ್ಥೆ ಎಂಬ ಮಾಹಿತಿ ಇತ್ತು, ಅದೂ ನಾಪತ್ತೆ! ಹೇಗಾದರೂ ನನ್ನ ಹತ್ತಿರ ಅದರ ಪ್ರಿಂಟೌಟ್ ಇದೆ.

ಶುಕ್ರವಾರ, ಜೂನ್ 11, 2010

ನಿಮ್ಮ ಕಾನೂನು ನಿಮಗಿರಲಿ; ನೀರು, ಭೂಮಿ ನಮಗಿರಲಿ!


ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿಯನ್ನು ಅದರ ನೀರಿನ ವ್ಯವಸ್ಥೆ ಬಗ್ಗೆ ಮಾಹಿತಿ ಕೇಳಿದಾಗ "ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ತಿಳಿಸಿತ್ತು. ಒಪ್ಪಂದದ ಪ್ರತಿಯನ್ನು ಕೇಳಿ ನಾನು ಅರ್ಜಿ ಸಲ್ಲಿಸಿದೆ. ಕಂಪೆನಿ ಅದನ್ನು ಕೊಡಲು ನಿರಾಕರಿಸಿತು. ನಾನು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ. ಮೊನ್ನೆ ೫-೬-೨೦೧೦ರಂದು ಮಡಿಕೇರಿಯಲ್ಲಿ ಮಾಹಿತಿ ಹಕ್ಕು ಆಯೋಗ ಈ ಬಗ್ಗೆ ವಿಚಾರಣೆ ಇಟ್ಟುಕೊಂಡಿತ್ತು. ನಾನು ಹಾಜರಾದೆ. ಕಂಪೆನಿಯ ಪರವಾಗಿ ಯಾರೂ ಬಂದಿರಲಿಲ್ಲ. ಆದರೆ, ಬರಹ ರೂಪದಲ್ಲಿ ಆಯೋಗಕ್ಕೆ ಒಂದು ಅರ್ಜಿ ಸಲ್ಲಿಸಿ ಕಂಪೆನಿಯನ್ನು ಮಾಹಿತಿ ಹಕ್ಕು ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವಂತೆ ವಿನಂತಿಸಿಕೊಂಡಿದ್ದರು. ಆಯೋಗದ ಅಧ್ಯಕ್ಷರು, "ಕಂಪೆನಿ ಸಲ್ಲಿಸಿದ ಅರ್ಜಿ ಹಾಗೂ ವಕೀಲರ ಅಭಿಪ್ರಾಯಗಳ ಯಥಾಪ್ರತಿಗಳು ನಿಮಗೆ ಬೇಕೆ?" ಎಂದು ಕೇಳಿದಾಗ ನಾನು "ದಯವಿಟ್ಟು ಕೊಡಿ" ಎಂದೆ. ಕೂಡಲೇ ಯಥಾಪ್ರತಿ ಮಾಡಿಸಿಕೊಟ್ಟರು, ಉಚಿತವಾಗಿ. ಹೀಗೆ ನಾನು ಹಾಜರಾದದ್ದು ಸಾರ್ಥಕವಾಯಿತು.
ಮಾಹಿತಿ ಆಯೋಗದ ಅಧ್ಯಕ್ಷರು "ಈಗ ನಾನು ಏನು ಮಾಡಲಿ?" ಎಂದು ನನ್ನನ್ನು ಕೇಳಿದರು. ನನ್ನ ತಲೆ ಓಡುವುದು ನಿಧಾನ. (ಅದು ಓಡಿದ್ದನ್ನು ನಾನು ಕಂಡೇ ಇಲ್ಲ ಎನ್ನುವ ಟೀಕಾಚಾರ್ಯರೂ ಇದ್ದಾರು - ಅಂಥವರ ಸಂತತಿ ಬೆಳೆಯಲಿ!). ಏನು ಹೇಳಬೇಕೆಂದು ನನಗೆ ತಿಳಿಯಲಿಲ್ಲ. ಕಡೆಗೆ ಅವರೇ, "ನೋಡೋಣ. ಮೂರು ವರ್ಷದ ಬ್ಯಾಲೆನ್ಸ್ ಶೀಟ್ ಹಾಜರುಪಡಿಸಲು ಆಜ್ಞೆ ಮಾಡುತ್ತೇನೆ. ಅದರ ಆಧಾರದಲ್ಲಿ ತೀರ್ಮಾನಿಸೋಣ" ಎಂದರು. ನಾನು "ಆಗಲಿ" ಎಂದೆ. ಪ್ರಕರಣದ ವಿಚಾರಣೆ ನಡೆಯುವುದು ಇನ್ನು ನಾಲ್ಕು ತಿಂಗಳು ಬಿಟ್ಟು. ಅಲ್ಲಿಯವರೆಗೆ ನನ್ನ ತಲೆ ಓಡಿದಷ್ಟು ಓಡಿಸಲು ನನಗೆ ಪುರುಸೊತ್ತಿದೆ. ತಜ್ಞರ ಸಲಹೆ ಪಡೆಯಲೂ ಅವಕಾಶವಿದೆ.
ಓದುಗರ ಸಲಹೆಗಳಿಗೆ, ಮಾಹಿತಿಗೆ ಸ್ವಾಗತ. ಮಾಹಿತಿ ಹಕ್ಕು ಆಯೋಗಕ್ಕೆ ನಾನು ಸಲ್ಲಿಸಬೇಕೆಂದಿರುವ ಉತ್ತರ ವಕೀಲರ ಅಭಿಪ್ರಾಯಕ್ಕೆ ನಾನು ನೀಡಿರುವ ಪ್ರತಿಕ್ರಿಯೆಯಲ್ಲಿರುವ ಅಂಶಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಇನ್ನೂ ಸೇರಿಸಬಹುದಾದ್ದು ಇದ್ದರೆ, ತಿಳಿಸಿರಿ.
ಎಂ ಎಸ್ ಇ ಝಡ್ ಕಂಪೆನಿ ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆ:
ಕಂಪೆನಿಯ ಹೇಳಿಕೆ ೧: ಮಾಹಿತಿ ಹಕ್ಕು ಕಾಯಿದೆಯು ಪ್ರತಿವಾದಿ ಕಂಪೆನಿಗೆ ಲಗಾವು ಆಗುವುದಿಲ್ಲ. ಮೊದಲು ಇದ್ದ ಕರ್ನಾಟಕದ ಕಾಯಿದೆಯಲ್ಲಿ ಬಳಸಲಾದ ವ್ಯಾಪಕವಾದ ಪರಿಭಾಷೆಯು ಕೇಂದ್ರದ ಕಾಯಿದೆಯಲ್ಲಿ ಇಲ್ಲದಿರುವ ಕಾರಣ, ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತ ಎಂಬ ಕಂಪೆನಿಯು "ಸಾರ್ವಜನಿಕ ಪ್ರಾಧಿಕಾರ" ಆಗಲಾರದು. ಆದ ಕಾರಣ ಪಿರ್ಯಾದಿಯು ರದ್ದಾಗತಕ್ಕದ್ದು.
ನನ್ನ ವಿವರಣೆ: ಈ ಅಂಶವು ವಕೀಲರು ನೀಡಿರುವ ಅಭಿಪ್ರಾಯದಲ್ಲಿ ಇದೆ. ಹಾಗಾಗಿ ಅಲ್ಲಿ ಚರ್ಚಿಸಿದ್ದೇನೆ.
ಕಂಪೆನಿಯ ಹೇಳಿಕೆ ೨: ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತ ಇವರು ಆರಂಭದಿಂದಲೂ ಮಾಹಿತಿಯನ್ನು ಸಾಧ್ಯವಾದ ಮಟ್ಟಿಗೆ ಒದಗಿಸುತ್ತಾ ಬಂದುದು ಬಹುಶಃ ತಪ್ಪು ಕಲ್ಪನೆಗೆ ಅವಕಾಶ ಆಗಿರಬೇಕು. ಪಾರದರ್ಶಕತೆಯ ದೃಷ್ಟಿಯಿಂದ ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತದವರು ಈ ರೀತಿ ವರ್ತಿಸಿದ್ದೇ ಹೊರತು ಮಾಹಿತಿ ಹಕ್ಕು ಕಾಯಿದೆಯು ತಮಗೆ ಲಗಾವಾಗುವುದೆಂಬ ಕಾರಣದಿಂದಲ್ಲ. ನಮ್ಮ ಕಂಪೆನಿಯು ಈ ಕುರಿತಾಗಿ ನುರಿತ ವಕೀಲರಿಂದ ಕಾನೂನಿನ ಅಭಿಪ್ರಾಯವನ್ನು ಪಡೆದಿತ್ತು. ಅದರ ಒಂದು ಪ್ರತಿಯನ್ನು ತಮ್ಮ ಅವಗಾಹನೆಗೆ ಈ ಉದಾಹರಣೆಯ ಜೊತೆಗೆ ಲಗತ್ತಿಸಿದ್ದೇವೆ.
ನನ್ನ ವಿವರಣೆ: ಪಾರದರ್ಶಕತೆಯ ದೃಷ್ಟಿಯಿಂದ ಈ ಮೊದಲು ಮಾಹಿತಿಗಳನ್ನು ಒದಗಿಸಲಾಗಿತ್ತಷ್ಟೆ. ಅದೇ ಉದಾತ್ತ ಧ್ಯೇಯವನ್ನು ಮುಂದುವರಿಸಿಕೊಂಡು ಹೋಗಿದ್ದರೆ, ಕಂಪೆನಿಯ ಬಗ್ಗೆ ಜನಸಾಮಾನ್ಯರಿಗೆ ಗೌರವ-ವಿಶ್ವಾಸಗಳು ಹೆಚ್ಚುತ್ತಿದ್ದವು. ಪ್ರಾರಂಭಿಸಿದ್ದ ಒಂದು ಸತ್ಸಂಪ್ರದಾಯವನ್ನು ಮಧ್ಯದಲ್ಲಿಯೇ ನಿಲ್ಲಿಸಿಬಿಟ್ಟದ್ದರಿಂದ ಕಂಪೆನಿಯ ವ್ಯವಹಾರಗಳಲ್ಲಿ ಮುಚ್ಚಿಟ್ಟುಕೊಳ್ಳುವಂಥದ್ದು ಏನೋ ಇದೆ ಎಂಬ ಅನುಮಾನ ಜನಸಾಮಾನ್ಯರಿಗೆ ಬರುವಂತಾಯಿತು.
ವಕೀಲರು ನೀಡಿರುವ ಕಾನೂನು ಅಭಿಪ್ರಾಯದ ಕುರಿತು ಮುಂದೆ ಪ್ರತಿಕ್ರಿಯೆ ನೀಡಿದ್ದೇನೆ.
ಕಂಪೆನಿಯ ಹೇಳಿಕೆ ೩: ಮಾಹಿತಿಯನ್ನು ಕೋರುವವರು ಅದನ್ನು ಪಡೆಯಲು ಯಾವುದಾದರೂ ಸರಿಯಾದ ಕಾರಣ ಬೇಕು. ಈ ಪ್ರಕರಣವನ್ನು ದಯವಿಟ್ಟು ಗಮನಿಸಿರಿ. ೬-೧೦-೨೦೦೯ರ ಉದಯವಾಣಿ ಪತ್ರಿಕೆಯಲ್ಲಿ ಬಂದ ಜಾಹೀರಾತಿಗೆ ಮತ್ತು ಅರ್ಜಿದಾರರಿಗೆ ಯಾವ ಸಂಬಂಧವೂ ಇಲ್ಲ. ಆ ಜಾಹೀರಾತು ಆರ್ಥಿಕ ವಲಯದ ಪ್ರಗತಿಗೆ ಸಂಬಂಧಿಸಿತ್ತು. ಅದರ ಒಂದು ಜೆರೋಕ್ಸ್ ಪ್ರತಿಯನ್ನು ಲಗತ್ತಿಸಿದ್ದೇವೆ. ಆದರೂ ಅವರು ಬರೆದ ಪತ್ರಕ್ಕೆ ನಾವು ಮಾಹಿತಿಯನ್ನು ನಮ್ಮ ಪತ್ರ ದಿನಾಂಕ ೧೪-೧೨-೨೦೦೯ರ ಪ್ರಕಾರ ಒದಗಿಸಿದೆವು.
ನನ್ನ ವಿವರಣೆ: ಮಾಹಿತಿ ಹಕ್ಕು ಕಾಯಿದೆಯಲ್ಲಿ ಮಾಹಿತಿ ಕೇಳಲು ಯಾವುದೇ ಕಾರಣ ನೀಡಬೇಕಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಕಾರಣ ನೀಡುವುದು ಬೇರೆ, ಕಾರಣ ಇರುವುದು ಬೇರೆ ಎಂದೇ ತಿಳಿಯೋಣ. ಕಂಪೆನಿ ಪತ್ರಿಕೆಯಲ್ಲಿ ಜಾಹೀರಾತು ನೀಡಿರುವುದು ಅದನ್ನು ಸಾರ್ವಜನಿಕರು ಓದಬೇಕೆಂಬ ಉದ್ದೇಶದಿಂದ. ಪ್ರಜಾಪ್ರಭುತ್ವ ಇರುವ ದೇಶದ ಒಬ್ಬ ಪ್ರಜೆಯಾಗಿ, ದೇಶದ ಆರ್ಥಿಕ ವಲಯದ ಪ್ರಗತಿಯು ನನಗೆ ಖಂಡಿತವಾಗಿಯೂ ಸಂಬಂಧಪಡುತ್ತದೆ. ಅದೇ ಕಾರಣಕ್ಕೆ ಈ ಜಾಹೀರಾತು ಸಹ ನನಗೆ ಸಂಬಂಧಪಡುತ್ತದೆ.
ಈ ಜಾಹೀರಾತಿನ ಆಧಾರದಲ್ಲಿ ನಾನು ಕೇಳಿರುವ ಮಾಹಿತಿಯು ಬಂಟ್ವಾಳ ಮತ್ತು ಮಂಗಳೂರಿನ ಜನರ ಕುಡಿಯುವ ನೀರಿಗೆ ಸಂಬಂಧಪಟ್ಟಿದೆ. ಕಂಪೆನಿಯು ನೀಡಿದ ಮಾಹಿತಿಯನ್ನು ವಿಶ್ಲೇಷಿಸಿ, ನಾನು ನನ್ನ ಬ್ಲಾಗಿನಲ್ಲಿ ಲೇಖನವನ್ನೂ ಪ್ರಕಟಿಸಿದ್ದೇನೆ. ಈ ಕುರಿತು ಒಂದು ವಿಚಾರಸಂಕಿರಣ ನಡೆಸಲು ಕೋರಿ ಮಂಗಳೂರಿನ ಮೇಯರ್ ರವರಿಗೆ ಒಂದು ಪತ್ರವನ್ನೂ ಬರೆದಿದ್ದೇನೆ. ವಾಸ್ತವವಾಗಿ ಇದೊಂದು ಸಾರ್ವಜನಿಕ ಹಿತಾಸಕ್ತಿಯ ವಿಷಯ. ಬಂಟ್ವಾಳ ಹಾಗೂ ಮಂಗಳೂರಿನ, ನೇತ್ರಾವತಿ ನದಿ ನೀರನ್ನು ಕುಡಿಯುವ ಎಲ್ಲ ಜನರಿಗೂ ನೇರವಾಗಿ ಸಂಬಂಧಪಡುವ ವಿಷಯ. ಆ ಎಲ್ಲರೂ ಈ ವಿಷಯದಲ್ಲಿ ಆಸಕ್ತಿ ತಳೆಯಬೇಕಾದ ಅಗತ್ಯವಿದೆ. ಬಂಟ್ವಾಳದಲ್ಲಿ ವಾಸಿಸುವ ನನಗೆ ಇದು ಖಂಡಿತವಾಗಿಯೂ ನೇರವಾಗಿ ಸಂಬಂಧಪಡುತ್ತದೆ.
ಇನ್ನೊಂದು ವಿಷಯ: ಯಾವುದೇ ಜಾಹೀರಾತು ಜನರನ್ನು ತಪ್ಪುದಾರಿಗೆ ಎಳೆಯುವಂತಿರಬಾರದು, ಅವರಿಗೆ ತಪ್ಪು ಮಾಹಿತಿಗಳನ್ನು ನೀಡಬಾರದು. ಯಾವುದಾದರೂ ಜಾಹೀರಾತು ಹೀಗೆ ಮಾಡಿದರೆ, ಅಂಥ ಜಾಹೀರಾತುಗಳ ಕುರಿತು Advertising Standarads Council of India ಎಂಬ ಸಂಸ್ಥೆಗೆ ಯಾರು ಬೇಕಾದರೂ ದೂರು ನೀಡಬಹುದು. ಚರ್ಚಿತ ಜಾಹೀರಾತಿನಲ್ಲಿ ಮಳೆ ನೀರು ಸಂಗ್ರಹದ ಕುರಿತಾದ ಮಾತುಗಳು ಯಾವ ಅಧ್ಯಯನವನ್ನೂ ಆಧರಿಸಿದವಲ್ಲ ಎಂಬುದನ್ನು ಕಂಪೆನಿಯೇ ಒಪ್ಪಿಕೊಂಡಿದೆ. ಇವು ಮಳೆ ನೀರು ಸಂಗ್ರಹದ ಹೆಸರಿನಲ್ಲಿ, ಜನಸಾಮಾನ್ಯರಲ್ಲಿ ಕಂಪೆನಿಯ ಕುರಿತು ಸದ್ಬಾವನೆ ಮೂಡಿಸುವ ಬೇರೆಯೇ ಉದ್ದೇಶ ಹೊಂದಿದಂತೆ ಭಾಸವಾಗುತ್ತದೆ. ಇದು ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಲ್ಲವೆ?
ಈ ಮುಂದಿನ ಕಂಪೆನಿಯ ಹೇಳಿಕೆಗಳಿಗೆ ನನ್ನ ಪ್ರತಿಕ್ರಿಯೆ ಏನೂ ಇಲ್ಲ
೪. ಅರ್ಜಿದಾರರ ಪತ್ರದಲ್ಲಿ ೨ನೇ ಪ್ರಶ್ನೆ ಹೀಗಿತ್ತು: ಗುರುಪುರ ಮತ್ತು ನೇತ್ರಾವತಿಯಲ್ಲಿ ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದೆ? ಹೀಗೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ನೀಡಿರುವ ಅನುಮತಿಯ (ಲೈಸೆನ್ಸ್) ಯಥಾಪ್ರತಿ.
೫. ಇದಕ್ಕೆ ನಾವು ಕೊಟ್ಟ ಉತ್ತರ ಹೀಗಿತ್ತು. ಈಗಾಗಲೇ ನೇತ್ರಾವತಿ ನದಿಯಿಂದ ನೀರಿನ್ ಪೂರೈಕೆಗಾಗಿ ಎ.ಎಂ.ಆರ್. ಪವರ್ ಪ್ರೋಜೆಕ್ಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯ ಜಲ ಸಂಪನ್ಮೂಲ ವಿಭಾಗದಿಂದ ೨೦೦೭ರಲ್ಲಿ ಅನುಮತಿ ದೊರಕಿದ್ದು ಅದರ ಪ್ರತಿ ಲಗತ್ತಿಸಿದೆ
೬. ನಮ್ಮ ಬಳಿ ಇದ್ದು ಸರಕಾರದ ವತಿಯಿಂದ ದೊರಕಿದ ಅನುಮತಿಯನ್ನು ನಾವು ಅರ್ಜಿದಾರರಿಗೆ ಒದಗಿಸಿದ್ದೆವು. ಆದರೆ, ಎ ಎಂ ಆರ್ ಕಂಪೆನಿಯ ಜೊತೆ ಮಾಡಿದ ಒಪ್ಪಂದವು ಸಾರ್ವಜನಿಕರಿಗೆ ಅದರಲ್ಲೂ ಏನೂ ಸಂಬಂಧವಿಲ್ಲದ ಅರ್ಜಿದಾರರಿಗೆ ಒದಗಿಸುವ ಅಗತ್ಯ ಇಲ್ಲದ್ದರಿಂದ ಮತ್ತು ಆ ದಾಖಲೆಯು ಇನ್ನೊಬ್ಬ ವ್ಯಕ್ತಿಯು ನಮ್ಮ ಬಳಿ ಮಾಡಿದ ಒಪ್ಪಂದಕ್ಕೆ ಸಂಬಂಧಿಸಿದ್ದರಿಂದ ಅದರ ಪ್ರತಿಯನ್ನು ನಾವು ಕೊಡಲಿಲ್ಲ. ದಿನಾಂಕ ೧೮-೦೧-೨೦೧೦ರಂದು ಅರ್ಜಿದಾರರಿಗೆ ಉತ್ತರವನ್ನು ನೀಡಿದ್ದೇವೆ. ಇದು ನಮ್ಮ ಪ್ರಕಾರ ಸರಿಯಾದ ಕ್ರಮವೆಂದು ತಿಳಿಯುತ್ತೇವೆ.
೭. ಈಗಲೂ ಸಹ ಇದೇ ಮೇಲೆ ಬರೆದ ಕಾರಣಕ್ಕಾಗಿ ದಯವಿಟ್ಟು ಅರ್ಜಿಯನ್ನು ವಜಾ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ. ಮಾಹಿತಿ ಹಕ್ಕು ಕಾಯಿದೆಯ ಕಲಂ ೮(ಡಿ) ಮತ್ತು (ಇ) ಎಂಬ್ ಉಪಕಲಂಗಳ ಪ್ರಕಾರ ಸದ್ರಿ ದಾಖಲೆಯನ್ನು (ಮಾಹಿತಿಯನ್ನು) ನೀಡುವುದು ಕಡ್ಡಾಯವಲ್ಲ.
ಮೇಲೆ ಬರೆದ ವಿವರವಾದ ಉತ್ತರವನ್ನು ಪರಿಗಣಿಸಿ ಅರ್ಜಿಯನ್ನು ವಜಾ ಮಾಡಬೇಕಾಗಿ ಪ್ರಾರ್ಥಿಸುತ್ತೇವೆ.
***********************
ಈ ಮುಂದಿನದು ವಕೀಲರ ಅಭಿಪ್ರಾಯ:
M.V. Shanker Bhat, B.A.B.L.,
Advocate
H-3, II Floor, Ramabhavan Complex
Kodialbail, Mangalore.
ED& COO
Mangalore SEZ Ltd.
Muda Building
Urva Stores, Managalore-575006
Sir,
Sub: Opinion on query regarding applicability of Right to Information Act.
Ref: Your company's memorandum, Articles and certificate of incorportion dtd. 24-2-2006
1. The Memorandum dtd. 18-2-2006 as amended up to 18-7-08 relating to Mangalore SEZ Ltd shows that it is a public company limited by shares. It has authorised share capital of One Hundred Crores of Rs. 10/- value per share. Memorandum of Association of the company has been subscribed by ONGC representing MRPL, KIADB, Kanara Chamber of Commerce, and four individuals. In all 76200 shares were subscribed by them. KIADB has subscribed only 5000 shares. MRPL has subscribed 50000 shares. Chamber of Commerce has subscribed 20000 shares. Rest by the four individuals.
2. On the above facts the question is whether your company is Public Authority as defined in Sec.2(h) of the RTI Act. 2005.
3. Your company is not established by or under Constitution, or by law made by Parliament or State Legislature. Your company has not been notified as Public Authority by State or Central Government. Your company is not financed by State or Central Government either directly or indirectly. Even if participation of KIADB, which is an independent Board, is considered as indirect financing by State Government, its holding is very small compared to what has been subscribed as per Menorandum of Association. Therefore it would not be 'substantially financed by State Government'.
4. From the above analysis of facts with reference to the definition found in the Act, I am of the considered opinion that your company will not be covered by the RTI Act, 2005
Yours faithfully
(Sd)
ಕಂಪೆನಿಯು ನೀಡಿದ ಮಾಹಿತಿಯನ್ನು ಆಧರಿಸಿ ವಕೀಲರು ನೀಡಿರುವ ಮೇಲಿನ ಅಭಿಪ್ರಾಯ ಖಂಡಿತವಾಗಿಯೂ ಸರಿಯಾಗಿದೆ. ದುರದೃಷ್ಟವಶಾತ್ ಕಂಪೆನಿಯು ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ವಕೀಲರ ಗಮನಕ್ಕೆ ತಂದಿಲ್ಲ. ತನ್ನ ಕಕ್ಷಿದಾರನು ತನ್ನಿಂದ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಚ್ಚಿಡುತ್ತಿದ್ದಾನೆ ಎಂಬ ಅನುಮಾನ ಬಂದರೆ - ಅದರಲ್ಲೂ ಪ್ರಕರಣವು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದ್ದಾಗ - ಆ ಅನುಮಾನವನ್ನು ಪರಿಹರಿಸಿಕೊಳ್ಳುವುದು ವಕೀಲರ ಕರ್ತವ್ಯದ ಒಂದು ಭಾಗ ಎಂದು ನಾನು ಭಾವಿಸಿದ್ದೇನೆ. ಆ ಅಭಿಪ್ರಾಯ ತಪ್ಪೆ?
ಕಂಪೆನಿಯು ವಕೀಲರ ಗಮನಕ್ಕೆ ತಾರದ ಮಾಹಿತಿಗಳು ಈ ಕೆಳಗಿನಂತಿವೆ:
೧, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಬಗೆಯ ತೆರಿಗೆ ರಿಯಾಯತಿಗಳನ್ನು ವಿಶೇಷ ಆರ್ಥಿಕ ವಲಯಕ್ಕೆ ನೀಡಿವೆ. ಈ ರಿಯಾಯತಿಗಳು ಪ್ರಸ್ತುತ ಕಂಪೆನಿಗೂ ಅನ್ವಯವಾಗುತ್ತವೆ. ಈ ರಿಯಾಯತಿಗಳನ್ನು ನೀಡಲು ಬೇಕಾಗಿ ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಆದಾಯತೆರಿಗೆ ಮತ್ತಿತರ ಕೆಲವು ಕಾನೂನುಗಳಿಗೇ ತಿದ್ದುಪಡಿ ಮಾಡಲಾಗಿದೆ.
೨. ವಿಶೇಷ ಆರ್ಥಿಕ ವಲಯಕ್ಕೆ ಬೇಕಾದ ಒಟ್ಟು ಭೂಮಿ ಸುಮಾರು ೪೦೦೦ ಎಕರೆಗಳು. ಈ ಪೈಕಿ ಸುಮಾರು ೨೦೦೦ ಎಕ್ರೆಯಷ್ಟು ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ರೈತರ ತೀವ್ರ ವಿರೋಧದ ನಡುವೆಯೂ, ಜಮೀನನ್ನು ಸ್ವಾಧೀನಪಡಿಸಿಕೊಂಡು ಕಂಪೆನಿಗೆ ಹಸ್ತಾಂತರಿಸುವಲ್ಲಿ ಕರ್ನಾಟಕ ರಾಜ್ಯ ಸರಕಾರವು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
೩. ಕಂಪೆನಿಗೆ ಪ್ರತಿದಿನ ೬.೭೫ ಕೋಟಿ ಲೀಟರು ನೀರನ್ನು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಎತ್ತಲು ರಾಜ್ಯ ಸರಕಾರವು ಅನುಮತಿ ನೀಡಿದೆ. ಈ ನೀರಿನ ದರ ೪೫ ಲಕ್ಷ ಲೀಟರಿಗೆ ರೂ. ೨೮೮-೯೦. (ಸ್ಥಳೀಯಾಡಳಿತ ಸಂಸ್ಥೆಗಳು ಜನಸಾಮಾನ್ಯರಿಗೆ ಸರಬರಾಜು ಮಾಡುವ ಕುಡಿಯುವ ನೀರಿನ ದರ ೧೦೦೦ ಲೀಟರಿಗೆ ೨-೦೦ ರೂಪಾಯಿ.)
೪. ಕಂಪೆನಿಗೆ ಅಗತ್ಯವಿರುವಷ್ಟು ಪ್ರಮಾಣದ ವಿದ್ಯುತ್ತನ್ನು ಸರಬರಾಜು ಮಾಡಲು ಸಹ ಕರ್ನಾಟಕ ಸರಕಾರವು ಒಪ್ಪಿಕೊಂಡಿದೆ.
೫. ಮಂಗಳೂರು ಮಹಾನಗರ ಪಾಲಿಕೆಯು ಗಲೀಜು ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡುವ ಬಗ್ಗೆ ಎಂ ಎಸ್ ಇ. ಝಡ್ ಕಂಪೆನಿಯೊಂದಿಗೆ ಮೂವತ್ತು ವರ್ಷಗಳ ದೀರ್ಘಾವಧಿಗೆ ಅನ್ವಯಿಸುವ (೩೦:೭೦ ಅನುಪಾತ) ಒಂದು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಕರ್ನಾಟಕ ಸರ್ಕಾರವು ಕಂಪೆನಿಯ ಆಗುಹೋಗುಗಳಲ್ಲಿ ಗಣನೀಯ ಪಾತ್ರ ವಹಿಸಿರುವುದರ ದ್ಯೋತಕವಾಗಿದೆ.
ಈ ಮೇಲಿನ ಅಂಶಗಳನ್ನು ಪರಿಗಣಿಸಿದರೆ ಕಂಪೆನಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಪಾಲು "ಗಣನೀಯ"ವಾಗಿಯೇ ಇದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಮಂಗಳೂರು ಎಸ್ ಇ ಝಡ್ ಕಂಪೆನಿಯನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡುವುದು ನ್ಯಾಯವಲ್ಲ.

ಸೋಮವಾರ, ಮೇ 17, 2010

ಮರಗಳ ಸಂರಕ್ಷಣೆಯ ಕಾನೂನು ಜಾರಿಗೆ ಕೊಡುವ ಪರಿ.......


ಎಪ್ರಿಲ್ ೮ರಂದು "ಅರಣ್ಯ ಇಲಾಖೆ ಅಧಿಕಾರಿಗಳ ಉತ್ತರ ಬಂತು, ಆದರೆ....." ಎಂಬ ಲೇಖನ ಬರೆದಿದ್ದೆ. ಇದು ಪ್ರಕರಣ ಮುಂದುವರಿದ ಬಗೆ:
.
ನನ್ನ ಪತ್ರಕ್ಕೆ ಮಂಗಳೂರಿನ ಉ.ಅ.ಸಂ. ಯವರು ಉತ್ತರ ಬರೆಯಲಿಲ್ಲ. ನೆನಪೋಲೆ ಬರೆದೆ. ಪ್ರಯೋಜನವಾಗಲಿಲ್ಲ. "ಉತ್ತರ ಬರೆಯದಿದ್ದರೆ ನಿಮ್ಮ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವುದು ಅನಿವಾರ್ಯವಾಗುತ್ತದೆ" ಎಂಬ ಎಚ್ಚರಿಕೆ ರವಾನಿಸಿದೆ. ಆದರೂ ಉತ್ತರ ಬರಲಿಲ್ಲ. ಮಂಗಳೂರಿನ ಮಹಾನಗರಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿ ಕಛೇರಿ ಇರುವ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಎಲ್ಲಾ ದಾಖಲೆಗಳ ಸಮೇತ ಒಂದು ದೂರು ನೀಡಿ ಯಥಾಪ್ರತಿಯನ್ನು ಉ.ಅ.ಸಂ.ಯವರಿಗೆ ಕಳಿಸಿದೆ. ಇಷ್ಟು ಹಟ ಮಾಡಿದ ಮೇಲೆ ಮೊನ್ನೆ ೧೩-೫-೨೦೧೦ರಂದು ಉ.ಅ.ಸಂ. ಒಂದು ಉತ್ತರ ಬರೆದಿದ್ದಾರೆ. ನಾನು ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಬರೆದ ಪತ್ರದ ಪರಿಣಾಮ ಈ ಪತ್ರವೋ ಎಂದು ತಿಳಿಯುವಂತಿಲ್ಲ. ಹೇಗಾದರೂ ಇರಲಿ, ಅವರ ಉತ್ತರ ಓದಿ ನೋಡಿ:
"...... -ದ.ಕ.ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ- ಎಂಬ ಕುರಿತು ಮೊದಲನೆಯದಾಗಿ ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ತಾವು ಇಟ್ಟುಕೊಂಡಿರುವ ತಮ್ಮ ಕಾಳಜಿಗೆ ಅಭಿನಂದನೆಗಳು. ದ.ಕ.ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
೧. ಮರಗಳ ರಕ್ಷಣೆಯ ಬಗ್ಗೆ "ಕಾಡು ಉಳಿಸಿ ನಾಡು ಬೆಳೆಸಿ" ಎಂಬ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
೨. ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ.
೩. "ವೃಕ್ಷಲಕ್ಷ" ಕಾರ್ಯಕ್ರಮದಡಿಯಲ್ಲಿ ಹಲವು ಕಡೆಗಳಲ್ಲಿ ಕಾರ್ಯಾಗಾರ, ಗಿಡ ನೆಡುವ ಕಾರ್ಯಕ್ರಮ, ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
೪. ಮರಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಜನರನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಗ್ರಾಮ ಅರಣ್ಯ ಸಮಿತಿಗಳನ್ನು ರಚನೆ ಮಾಡಲಾಗಿದೆ.
೫. ಈ ವಿಭಾಗದಲ್ಲಿ ಕಾರ್ಯಕಾರಿ ಸಿಬ್ಬಂದಿ ಕೊರತೆ ಇದ್ದರೂ, ಅರಣ್ಯ ಅಪರಾಧಗಳನ್ನು ತಡೆಗಟ್ಟುವರೇ ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ.
ಈ ಮೇಲಿನಂತಹ ಹಲವಾರು "ಜಾಗೃತಿ" ಕ್ರಮಗಳನ್ನು ಜನರಲ್ಲಿ ಮೂಡಿಸಿದ್ದರೂ, ಆಗಾಗ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದು ಸಾಗಿಸುವುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಾಗೂ ತಮ್ಮ ಪತ್ರದಲ್ಲಿ ತಿಳಿಸಿದಂತೆ ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.
ಇನ್ನು ಮುಂದೆ ಮರಗಳ ರಕ್ಷಣೆಯ ಬಗ್ಗೆ ಇರುವ ಕಾಯ್ದೆ, ಕಾನೂನುಗಳನ್ನು ಸಾರ್ವಜನಿಕರಿಗೆ ತಿಳಿಸುವ ಬಗ್ಗೆ ಕಾರ್ಯಗಾರಗಳನ್ನು ಏರ್ಪಡಿಸಿದಾಗ ಸದ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವನ್ನು ತಮಗೂ ಕೂಡ ಮಾಡಲಾಗುವುದು ಎಂಬ ವಿಷಯವನ್ನು ತಮ್ಮ ಮಾಹಿತಿಗೆ ನೀಡಲಾಗಿದೆ"
ಪತ್ರಕ್ಕೆ ಕೂಡಲೇ ಹೀಗೆ ಉತ್ತರಿಸಿದ್ದೇನೆ:
ಮರಗಳ ರಕ್ಷಣೆಯ ಕಾನೂನನ್ನು ಜಾರಿಗೆ ಕೊಡುವ ಬಗ್ಗೆ ನೀವು ತೆಗೆದುಕೊಂಡಿರುವ ಹಾಗೂ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ತಿಳಿದು ತುಂಬಾ ಸಂತೋಷವಾಯಿತು. ಅರಣ್ಯ ಸಂರಕ್ಷಣೆಗೆ ನೀವು ನೀಡುತ್ತಿರುವ ಮಹತ್ವವು ಅಭಿನಂದನಾರ್ಹವಾಗಿದೆ.
೧. "ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ" ಎಂದು ನಿಮ್ಮ ಪತ್ರದಲ್ಲಿ ಹೇಳಿದ್ದೀರಿ. ೨೦೦೫-೨೦೦೬ರಲ್ಲಿ ಬಂಟ್ವಾಳ ಅರಣ್ಯವಲಯಕ್ಕೆ ಸಂಬಂಧಪಟ್ಟ ಬಿ. ಮೂಡ ಗ್ರಾಮದಲ್ಲಿ ನೀವು ಹೇಳುವ ಯಾವುದಾದರೂ ಕಾರ್ಯಕ್ರಮದಡಿಯಲ್ಲಿ ಸಸಿಗಳನ್ನು ನೆಡಲಾಗಿತ್ತೆ? ಎಲ್ಲಿ, ಎಷ್ಟು ಸಸಿಗಳನ್ನು ನೆಡಲಾಗಿತ್ತು, ಯಾವ ಜಾತಿಗೆ ಸೇರಿದ ಸಸಿಗಳು ಎಂಬುದರ ಪೂರ್ಣ ವಿವರವನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.
೨. ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ಅರಣ್ಯ ಸಮಿತಿಯು ಅಸ್ತಿತ್ವದಲ್ಲಿದೆಯೆ? ಇದ್ದರೆ ಅದರ ವಿಳಾಸ, ಸದಸ್ಯರ ಹೆಸರು ಇತ್ಯಾದಿ ವಿವರಗಳನ್ನೂ, ಒಂದು ವೇಳೆ ಇಲ್ಲದಿದ್ದರೆ, ಬಿ.ಮೂಡ ಗ್ರಾಮವು ಯಾವ ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನೂ ಅದರ ವಿಳಾಸ ಇತ್ಯಾದಿ ವಿವರಗಳನ್ನೂ ನನಗೆ ನೀಡಬೇಕಾಗಿ ಕೋರುತ್ತೇನೆ.
೩. " ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ." ಎಂದು ನೀವು ಹೇಳಿದ್ದೀರಿ. ದಿನಾಂಕ ೧೬-೩-೨೦೧೦ರ ನನ್ನ ಪತ್ರದಲ್ಲಿ ನಾನು ಪ್ರಸ್ತಾವಿಸಿರುವ ಮರಗಳ ನಾಶವನ್ನು ಕಂಡುಕೊಳ್ಳಲು ಹಗಲು ರಾತ್ರಿ ಗಸ್ತು ತಿರುಗುವ ಅವಶ್ಯಕತೆಯೇ ಇಲ್ಲ. ಈ ರೀತಿಯಲ್ಲಿ ಆಗುತ್ತಿರುವ ಮರಗಳ ನಾಶವು ಹಾಡುಹಗಲೇ, ಎಲ್ಲರ ಎದುರಿನಲ್ಲೇ, ಸಾಕಷ್ಟು ದೂರಕ್ಕೆ ಕೇಳುವಂತೆ ಶಬ್ದ ಮಾಡುವ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಆಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಿ ತಿರುಗಿದರೂ ನೀವು ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ಕಾಣಬಹುದು. ಜಿಲ್ಲೆಯ ನಗರ ಪ್ರದೇಶಗಳೂ ಸೇರಿದಂತೆ ಎಲ್ಲ ಕಡೆಯೂ ಸಹ, ಈ ರೀತಿಯಲ್ಲಿ ಮರಗಳನ್ನು ಬುಡಸಮೇತ ಉರುಳಿಸುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಎಷ್ಟೋ ಸಂದರ್ಭಗಳಲ್ಲಿ ಇದನ್ನು ಕಂಡುಕೊಳ್ಳಲು ನೀವು ನಿಮ್ಮ ವಾಹನದಿಂದ ಕೆಳಗೆ ಇಳಿಯಬೇಕಾಗಿಯೂ ಇಲ್ಲ. ನೀವು ಕುಳಿತಲ್ಲಿಗೇ ಕಾಣುವಷ್ಟು ಸ್ಪಷ್ಟವಾಗಿ ಈ ನಾಶಕ್ರಿಯೆ ನಡೆಯುತ್ತಿದೆ. ಯಾವುದಾದರೊಂದು ಗುಡ್ಡದ ನೆತ್ತಿಗೆ ಹೋಗಿ ನಿಂತು ನೋಡಿದರೆ, ಭೂಭಾಗವು ಅಲ್ಲಲ್ಲಿ ಕೆಂಪಾಗಿರುವುದನ್ನು ನೀವು ಕಾಣಬಹುದು. ಹತ್ತಿರ ಹೋಗಿ ನೋಡಿದರೆ, ಉರುಳಿಸಿದ ಮರಗಳು ಅಥವಾ ಅವುಗಳ ಅವಶೇಷಗಳು ಅಲ್ಲಿಯೇ ಬಿದ್ದಿರುವುದನ್ನೂ ಕಾಣುವ ಸಾಧ್ಯತೆ ಇದೆ.
ಆದ್ದರಿಂದ ಯಂತ್ರಗಳನ್ನು ಬಳಸಿ ಆಗುತ್ತಿರುವ ಮರಗಳ ನಾಶವನ್ನು ತಡೆಹಿಡಿಯುವ ನಿಟ್ಟಿನಲ್ಲಿ ನೀವು ಮರಗಳ ರಕ್ಷಣೆಯ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡಬೇಕಾಗಿ ನಿಮ್ಮನ್ನು ಮತ್ತೊಮ್ಮೆ ಕೋರುತ್ತೇನೆ.
"ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ" ಎಂದು ನೀವು ಹೇಳಿದ್ದೀರಿ. ಆ ಪತ್ರದ ಒಂದು ಪ್ರತಿಯನ್ನು ನನಗೂ ಕಳುಹಿಸಿಕೊಡಬೇಕಾಗಿ ಕೋರುತ್ತೇನೆ.
ಈ ಪತ್ರಕ್ಕೆ ಇನ್ನು ಹದಿನೈದು ದಿನಗಳಲ್ಲಿ ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ."
ಈ ಪ್ರಕರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. ಬ್ಲಾಗಿನಲ್ಲಿ ಪ್ರತಿಕ್ರಿಯೆ ಪ್ರಕಟಿಸುವುದು ಬೇಡ ಎಂದಿದ್ದರೆ, ಇ-ಮೇಲ್ ವಿಳಾಸಕ್ಕೆ ಪ್ರತಿಕ್ರಿಯೆ ಕಳಿಸಿ. (nesara.mudrana@gmail.com) ನನ್ನನ್ನು ಟೀಕಿಸಲು ಯಾವ ಮುಲಾಜೂ, ದಾಕ್ಷಿಣ್ಯವೂ ಬೇಡ.

ಗುರುವಾರ, ಏಪ್ರಿಲ್ 22, 2010

ತನ್ನ ಶಕ್ತಿ ಗೊತ್ತಿರಲಿಲ್ಲವಂತೆ ಹನುಮಂತನಿಗೆ!

ಬಂಟ್ವಾಳ ತಾಲೂಕಿನ ಮಂಚಿ ಬಿ.ವಿ. ಕಾರಂತರ ಹುಟ್ಟೂರು. ಈ ತಿಂಗಳ ೯,೧೦,೧೧ರಂದು ಅಲ್ಲಿ ಅವರ ನೆನಪಿಗಾಗಿ ಅವರ ಅಭಿಮಾನಿಗಳೆಲ್ಲ ಸೇರಿ ಹಲವು ಕಾರ್ಯಕ್ರಮಗಳನ್ನು ನಡೆಸಿದರು. ನಾನು ಈ ಕಾರ್ಯಕ್ರಮದ ಬಗ್ಗೆ ಹೇಳಲು ಹೊರಟದ್ದಲ್ಲ. ಆ ದಿನ ಶ್ರೀಮತಿ ವೈದೇಹಿಯವರು ವ್ಯಕ್ತಪಡಿಸಿದ ಒಂದು ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಬೇಕೆನ್ನಿಸಿದ್ದರಿಂದ ಈ ಬರಹ.
ವೈದೇಹಿಯವರು ಆ ದಿನ ಸಂಜೆಯ ತಮ್ಮ ಭಾಷಣದಲ್ಲಿ ಪ್ರಾಸಂಗಿಕವಾಗಿ ಒಂದು ಮಾತು ಹೇಳಿದರು: "ಎಂಜಿನಿಯರ್ ಎಂದರೆ ಮರಗಳನ್ನು ಕಡಿದು ರಸ್ತೆ ನಿರ್ಮಿಸುವವನಲ್ಲ. ಆ ಕೆಲಸವನ್ನು ಯಾವ ಕಂಟ್ರಾಕ್ಟರ್ ಕೂಡ ಮಾಡಬಲ್ಲ. ಎಂಜಿನಿಯರ್ ಆದವನು ಮರಗಳನ್ನು ಉಳಿಸಿಕೊಂಡೇ ರಸ್ತೆ ಮಾಡುವ ಜಾಣ್ಮೆ ಹೊಂದಿರಬೇಕು. ಈಗ ಎಲ್ಲೆಂದರಲ್ಲಿ ರಸ್ತೆ ಮಾಡಲೆಂದು ಮರ ಕಡಿಯುತ್ತಾರೆ. ಯಾರು ಇದನ್ನು ತಡೆಯುವವರು? ನಾವು ಹೇಳಲು ಸಾಧ್ಯವೆ? ನಾವು ಹೇಳಿದರೆ ಕೇಳುತ್ತಾರೆಯೆ?". ಮೊನ್ನೆ ಮೊನ್ನೆ ಒಂದು ಊಟದ ಮನೆಯಲ್ಲಿ ಸಿಕ್ಕಿದ ಅಲ್ಲಿನವರೇ ಆದ ಕಂದೂರು ಐತಾಳರೂ ವೈದೇಹಿಯವರ ಈ ಮಾತುಗಳನ್ನು ತುಂಬ ಮೆಚ್ಚಿಕೊಳ್ಳುತ್ತಾ. "ನಾವು ಹೇಳಿದರೆ ಆದೀತ? ನಮಗೆ ಏನು ಶಕ್ತಿ ಇದೆ?" ಎಂದರು. ನಾನು ಸುಮ್ಮನಿದ್ದೆ.
**********
ಹನುಮಂತನಿಗೆ ತನ್ನ ಶಕ್ತಿ ಗೊತ್ತಿರಲಿಲ್ಲವಂತೆ. ಅದೇ ಅವನ ಸಮಸ್ಯೆ.
**********
ನಾನು ಮಂಗಳೂರಿಗೆ ಹೋಗುವುದು ಅಪರೂಪ. ಕಳೆದ ವರ್ಷದ ಪ್ರಾರಂಭದಲ್ಲಿ ಯಾತಕ್ಕೋ ಹೋಗಿದ್ದೆ. ಕಾರ್ನಾಡು ಸದಾಶಿವರಾವ್ ರಸ್ತೆಯಲ್ಲಿ ನಡೆದು ಹೋಗಬೇಕಾಯಿತು. ನೋಡಿದರೆ ಹಳತೆಲ್ಲ ಪೂರ್ತಿ ಹೋಗಿ, ಹೊಸ ವಿಶಾಲವಾದ ರಸ್ತೆ ಆಗಿದೆ. ಪೂರ್ತಿ ಕಾಂಕ್ರೀಟ್ ರಸ್ತೆ, ಬದಿಯ ಅಂಗಡಿಗಳ ಹೊಸ್ತಿಲವರೆಗೂ ಚಾಚಿಕೊಂಡಿದೆ. ಅರೆ! ಹಿಂದೆ ಹೀಗಿರಲಿಲ್ಲವಲ್ಲ ಎನಿಸಿತು. ನೆನಪು ಮಾಡಿಕೊಂಡೆ. ಹಿಂದೆ ಕಾಲ್ನಡಿಗೆಯಲ್ಲಿ ಹೋಗುವವರಿಗೆ ರಸ್ತೆಯ ಎರಡೂ ಬದಿಗಳಲ್ಲಿ ಅಂದಾಜು ಮೂರಡಿ ಅಗಲದ ಕಾಲುದಾರಿ ಇತ್ತು. ಕೆಲವು ಕಡೆ ಅದರ ಮೇಲೆ ವಾಹನಗಳು ನುಗ್ಗದಂತೆ ಪೈಪಿನ ಬೇಲಿ ಇತ್ತು. ಅದೀಗ ಕಾಣುತ್ತಿಲ್ಲ! ರಸ್ತೆಯ ತೀರ ಬದಿಯಲ್ಲಿ ವಾಹನಗಳು ಒಂದೋ ಪಾರ್ಕಿಂಗ್ ಮಾಡಿವೆ ಇಲ್ಲವೇ ಆಚೆ ಈಚೆ ಓಡುತ್ತಿವೆ. ನಡೆದು ಹೋಗುವವರ ಕತೆ ಕೈಲಾಸ! ಇದ್ದದ್ದರಲ್ಲೇ ದಾರಿ ಮಾಡಿಕೊಂಡು ಹೋಗಬೇಕು!
ಬಿ.ಸಿ.ರೋಡಿಗೆ ಹಿಂದೆ ಬಂದವನೇ ಅಶೋಕವರ್ಧನರಿಗೆ ಫೋನಾಯಿಸಿದೆ: "ಹ್ವಾಯ್! ಕೆ.ಎಸ್. ರಾವ್ ರೋಡಿನಲ್ಲಿ ಮುಂಚೆ ಫುಟ್ ಪಾತ್ ಇರಲಿಲ್ಲವ?" ಅಂತ. ನನ್ನ ನೆನಪನ್ನು ನನಗೆ ಖಚಿತ ಮಾಡಿಕೊಳ್ಳಬೇಕಾಗಿತ್ತು. "ಇತ್ತಲ್ಲ. ಈಗ ಎಲ್ಲ ಹೋಗಿದೆ. ಅದರಿಂದಾಗಿ ಕೆಲವು ಆಕ್ಸಿಡೆಂಟ್ ಗಳೂ ಆಗಿಯಾಯಿತು" ಎಂದರು ಅಶೋಕರು.
ಆಗಲಿ ನೋಡೋಣ ಎಂದುಕೊಂಡು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಒಂದು ಪತ್ರ ಬರೆದೆ: "ಮುಂಚೆ ಈ ರಸ್ತೆಯ ಬದಿಗೆ ಕಾಲುದಾರಿ ಇತ್ತು. ಹೊಸರಸ್ತೆ ಮಾಡುವಾಗ ಕಾಲುದಾರಿ ಇಲ್ಲವಾಗಿದೆ. ಇದು ಪಾದಚಾರಿಗಳಿಗೆ ಅನ್ಯಾಯ. ಕೂಡಲೇ ಕಾಲುದಾರಿ ಮಾಡಿಸಿಕೊಡಬೇಕಾಗಿ ಕೋರುತ್ತೇನೆ"
ನಿರೀಕ್ಷಿಸಿದಂತೆ ಉತ್ತರ ಬರಲಿಲ್ಲ. ಆದರೆ ನನಗೆ ಇದು ಹೊಸತಲ್ಲ. ಮುಂಚೆಯೂ ಪತ್ರಗಳನ್ನು ಬರೆದ ಅನುಭವ ನನಗಿತ್ತು. ಕೆಲವು ದಿನ ಕಾದೆ. ನೆನಪೋಲೆ ಬರೆದೆ. ಉತ್ತರವಿಲ್ಲ. ಮೂರನೆಯ ಪತ್ರ ಬರೆದು "ಈಗಲೂ ನೀವು ಉತ್ತರ ಬರೆಯದಿದ್ದರೆ/ಕ್ರಮ ಕೈಗೊಳ್ಳದಿದ್ದರೆ ಈ ಬಗ್ಗೆ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸುತ್ತೇನೆ" ಎಂದೆ. ಆಗಲೂ ಉತ್ತರವಿಲ್ಲ. ಉಸ್ತುವಾರಿ ಸಚಿವರಿಗೆ (ಶ್ರೀ ಕೃಷ್ಣ ಪಾಲೆಮಾರ್) ಆಯುಕ್ತರಿಗೆ ಬರೆದ ಎಲ್ಲಾ ಪತ್ರಗಳ ಪ್ರತಿಗಳನ್ನಿಟ್ಟು ಒಂದು ದೂರು ಕೊಟ್ಟೆ. ಆಗ ನನ್ನ ಹತ್ತಿರ ಅವರ ವಿಳಾಸ ಇರಲಿಲ್ಲ. ಅದಕ್ಕೇನು? "ಶ್ರೀ ಕೃಷ್ಣ ಪಾಲೆಮಾರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು, ಮಂಗಳೂರು" ಎಂದು ವಿಳಾಸ ಬರೆದು ಅಂಚೆಗೆ ಹಾಕಿದೆ. ಕೆಲವೇ ದಿನಗಳಲ್ಲಿ ಅವರ ಕಡೆಯಿಂದ ಒಂದು ಪತ್ರ ಬಂತು. ಆಯುಕ್ತರಿಗೆ ಒಂದು ಪತ್ರ ಬರೆದು ಅದರ ಪ್ರತಿ ನನಗೆ ಕಳಿಸಿದ್ದರು.".... ಸದ್ರಿಯವರ ಮನವಿಯನ್ನು ಪರಿಶೀಲಿಸಿ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಲು ಕೋರಲಾಗಿದೆ". ಸಚಿವರ ಪತ್ರದ ತಾರೀಕು ೧೩-೦೩-೦೯. ಅಂದಾಜು ೨೫-೦೩-೦೯ರ ಹೊತ್ತಿಗೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರು ಒಂದು "ಹಿಂಬರಹ"ವನ್ನು ನನಗೆ ಕಳಿಸಿಕೊಟ್ಟರು. ಈ ಹಿಂಬರಹದ ತಾರೀಕು ೧೨-೦೩-೦೯. ಎಂದರೆ ಸಚಿವರು ಸೂಚನೆ ಕೊಡುವ ಒಂದು ದಿನದ ಮೊದಲೇ ಹಿಂಬರಹ ತಯಾರಾಗಿತ್ತು! ಕೆಳಗಡೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸಹಿಯ ಕೆಳಗೆ ಮಾತ್ರ ೨೩-೩-೦೯ ಎಂದಿತ್ತು! ಇರಲಿ ಬಿಡಿ. ಅಂತೂ ಉತ್ತರ ಬಂದಿತ್ತು.
ಅವರ ಹಿಂಬರಹದ ಈ ವಾಕ್ಯಗಳನ್ನು ನೋಡಿ: "......ಹಂಪನಕಟ್ಟದಿಂದ ಪ್ರಾರಂಭವಾಗಿ ನವಭಾರತ ವೃತ್ತದವರೆಗಿನ ಕೆ.ಎಸ್.ರಾವ್ ರಸ್ತೆಗಳಿಗೆ ೫೦೦ ಮೀ. ಉದ್ದಕ್ಕೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚತುಷ್ಪಥ ಕಾಂಕ್ರೀಟೀಕರಣ ರಸ್ತೆಯಾಗಿ ೧೪.೫೦ ಮೀ. ಅಗಲದಲ್ಲಿ ನಿರ್ಮಿಸಲಾಗಿದೆ.
ಆದರೆ ಈ ರಸ್ತೆಯ ಅಕ್ಕಪಕ್ಕದಲ್ಲಿ ವಾಣಿಜ್ಯಸಂಸ್ಥೆಗಳ ವ್ಯಾಪಾರೋದ್ಯಮ ಮಳಿಗೆಗಳು ರಸ್ತೆ ಉದ್ದಕ್ಕೆ ಇರುತ್ತವೆ. ಈಗ ಮಾಡಿರುವ ರಸ್ತೆಯ ಎರಡು ಬದಿಗಳಲ್ಲಿ ೧.೦೦ಮೀಟರ್ ಅಗಲದಲ್ಲಿ ಚರಂಡಿ ಸಮೇತ ಫುಟ್ ಪಾತ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವು ಸ್ಥಳಗಳಲ್ಲಿ ಜಾಗದ ಅಡಚಣೆ ಇದ್ದು ಅದನ್ನು ಸರಿಪಡಿಸಿ ..........ಕೈಗೊಳ್ಳಲಾಗುವುದು. ಅಂದಾಜುಪಟ್ಟಿಯು ಅನುಮೋದನೆಗೊಂಡ ನಂತರ ಹಾಗೂ ಸ್ಥಳದ ಆ ಭಾಗ ಇತ್ಯರ್ಥಗೊಂಡ ನಂತರ ಎರಡು ಬದಿ ಫುಟ್ ಪಾತ್ ನಿರ್ಮಿಸಿ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಪ್ರತ್ಯೇಕ ಪಥ ನಿರ್ಮಿಸಲಾಗುವುದೆಂದು ತಿಳಿಸಿದೆ"
ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ವಿಷಯಗಳಿವೆ. ಒಂದು, ರಸ್ತೆ ನಿರ್ಮಿಸುವಾಗ ಖಾಸಗಿಯವರ ಸಹಭಾಗಿತ್ವ ಇದೆ. ಎಂದರೆ ಅಷ್ಟರಮಟ್ಟಿಗೆ ಪಾಲಿಕೆಯ ಬಾಯಿ ಕಟ್ಟಿದೆ.
ಎರಡು, ರಸ್ತೆ ಸಂಪೂರ್ಣ ರಚನೆ ಆದಮೇಲೆ, ಚರಂಡಿ ಮತ್ತು ಫುಟ್ ಪಾತ್ ರಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ! ಇದು ಎಂಜಿನಿಯರ್ ಆದವರು ಮಾಡುವ ಕೆಲಸವೆ? ಯಾವುದೇ ರಸ್ತೆ ರಚನೆಯಾಗುವುದಿದ್ದರೆ, ಬದಿಯಲ್ಲಿ ಚರಂಡಿ, ಕಾಲುದಾರಿ ಇದನ್ನೆಲ್ಲ ಸೇರಿಸದೆ ಯಾರಾದರೂ ಪ್ಲಾನ್ ತಯಾರಿಸುತ್ತಾರೆಯೆ? ಹಾಗಾದರೆ, ಫುಟ್ ಪಾತ್ ಹೋಗಲಿ ಚರಂಡಿ ಇಲ್ಲದ ರಸ್ತೆ ಇವರು ಮಾಡಿದ್ದು ಹೇಗೆ? ಇದು ಖಾಸಗಿ ಸಹಭಾಗಿತ್ವದ ಫಲ ಇರಬಹುದೆ?
ಇದೆಲ್ಲ ನಡೆದು ಸ್ವಲ್ಪ ದಿನದ ನಂತರ ನಾನು ಆ ಕಡೆ ಹೋದಾಗ ಚರಂಡಿ ಮಾಡಲು ರಸ್ತೆ ಬದಿ ಅಗೆಯುತ್ತಿದ್ದುದನ್ನು ನೋಡಿದ್ದೆ. ಈಗ ಹೋಗದೆ ಸುಮಾರು ಸಮಯ ಆಯಿತು. ಫುಟ್ ಪಾತಿನ ಕಥೆ ಏನಾಗಿದೆ ಎಂದು ಗೊತ್ತಿಲ್ಲ. ಯಾರಾದರೂ ಆ ಕಡೆಯವರು ತಿಳಿಸಿದರೆ ಕೃತಜ್ಞ. ಒಂದು ವೇಳೆ ಫುಟ್ ಪಾತ್ ಆಗದಿದ್ದರೆ, ಮೇಲಿನ ಪತ್ರದ ಆಧಾರದಲ್ಲಿ ಅದಕ್ಕಾಗಿ ಪುನಃ ಪ್ರಯತ್ನಿಸುವುದು ಸಾಧ್ಯ. ಅಂಥ ಪ್ರಯತ್ನವನ್ನು ಯಾರು ಬೇಕಾದರೂ ಮಾಡಬಹುದು.
ಇಲ್ಲಿ ಒಂದು ಮಾತು ನಾನು ಸೇರಿಸಬೇಕು. ನಾನು ಯಾವ ರಾಜಕೀಯ ಪಕ್ಷದ ಕಾರ್ಯಕರ್ತನೂ ಅಲ್ಲ. ಶ್ರೀ ಕೃಷ್ಣ ಪಾಲೆಮಾರ್ ಅವರು ನನ್ನ ಪರಿಚಯದವರೂ ಅಲ್ಲ. (ಇನ್ನೂ ಒಂದು ಪ್ರಕರಣದಲ್ಲಿ ಅವರು ನನ್ನ ಪತ್ರಕ್ಕೆ ಸ್ಪಂದಿಸಿದ್ದಾರೆ). ಪ್ರಕರಣವನ್ನು ನಾನು ಯಾವ ಮಾಧ್ಯಮಕ್ಕೂ ಕೊಂಡುಹೋಗಲಿಲ್ಲ. ಜನ ಸೇರಿಸಿ ಚಳುವಳಿ ಮಾಡುವ ಮಾತಂತೂ ದೂರವೇ ಉಳಿಯಿತಷ್ಟೆ. ಅಂಚೆಗಾಗಿ ಸ್ವಲ್ಪ ಹಣ ಖರ್ಚಾಗಿದೆ ಅಷ್ಟೆ.
ನಮ್ಮ ದೇಶದಲ್ಲಿ ಪ್ರಜೆಗಳ ಅಭಿಪ್ರಾಯಕ್ಕೆ ಖಂಡಿತ ಬೆಲೆ ಇದೆ. ನಾವು ಸರಿಯಾದ ರೀತಿಯಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸುವುದು ಅಗತ್ಯ.

ಶುಕ್ರವಾರ, ಏಪ್ರಿಲ್ 9, 2010

ಅರಣ್ಯ ಇಲಾಖೆಯ ಉತ್ತರ ಬಂತು, ಆದರೆ......

ತಾ. ೧೬-೩-೧೦ರ ನನ್ನ ಪತ್ರಕ್ಕೆ ಮಂಗಳೂರು ಉ.ಅ.ಸಂ.ಯವರು ನನಗೆ ಉತ್ತರಿಸದಿದ್ದರೂ, ತಾ. ೨೦-೩-೧೦ರಂದೇ ಅದನ್ನು ಸುಬ್ರಹ್ಮಣ್ಯ ಉಪವಿಭಾಗದ ಸ.ಅ.ಸಂ.ಯವರಿಗೆ ಕಳಿಸಿಕೊಟ್ಟಿದ್ದಾರೆ. ಎಂದರೆ ನನ್ನ ಪತ್ರ ಅವರಿಗೆ ಮುಟ್ಟಿದ ಒಂದೆರಡು ದಿನಗಳಲ್ಲಿಯೇ ಅದರ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.
ನನ್ನ ನೆನಪೋಲೆ ಹೋದಮೇಲೆ ಅವರು ಸುಳ್ಯದ ಉ.ಸ.ಅ.ಸಂ.ಯವರಿಗೆ ಮತ್ತೊಂದು ಅರೆಸರಕಾರಿ ಪತ್ರ ಬರೆದು ನನಗೆ ಅದರ ಯಥಾಪ್ರತಿಯನ್ನು ಕಳಿಸಿಕೊಟ್ಟಿದ್ದಾರೆ. ಆ ಪತ್ರ ಹೀಗಿದೆ:
........."ಮೇಲಿನ ವಿಷಯಕ್ಕೆ ಸಂಬಂಧಿಸಿ ಉಲ್ಲೇಖ(೧)ರ ಈ ಕಾರ್ಯಾಲಯದ ಪತ್ರದ ಕಡೆಗೆ ನಿಮ್ಮ ಗಮನ ಸೆಳೆಯಲಾಗಿದೆ. ಸದ್ರಿ ಪತ್ರದಲ್ಲಿ ಉಲ್ಲೇಖ(೧)ರ ಅರ್ಜಿಯ ಕುರಿತು ಕೂಡಲೇ ತನಿಖೆ ನಡೆಸಿ ತನಿಖಾವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು.ಆದರೆ, ಸುಮಾರು ೧೫ ದಿನ ಕಳೆದರೂ, ನಿಮ್ಮಿಂದ ವರದಿ ಬಾರದೇ ಇರುವುದು ವಿಷಾದನೀಯ ಸಂಗತಿಯಾಗಿರುತ್ತದೆ. ಈ ಬಗ್ಗೆ ಅರ್ಜಿದಾರರು....ಉತ್ತರಕ್ಕೆ ಇನ್ನೂ ಹತ್ತು ದಿನ ಕಾಯಲು ಸಿದ್ಧನಿರುವುದಾಗಿ ತಿಳಿಸಿರುತ್ತಾರೆ.....ಪತ್ರದ ಕಡೆಗೆ ನಿಮ್ಮ ವೈಯಕ್ತಿಕ ಗಮನ ಹರಿಸಿ ತನಿಖಾವರದಿಯನ್ನು ಮರುಟಪ್ಪಾಲಿನಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಈ ಕುರಿತು ಇನ್ನು ಮುಂದೆ ಪತ್ರವ್ಯವಹಾರಕ್ಕೆ ಆಸ್ಪದ ಕೊಡಬಾರದಾಗಿ ತಿಳಿಸಲಾಗಿದೆ"
ಕ್ರಮದ ವಿಶ್ಲೇಷಣೆ:
ನನ್ನ ಪತ್ರವನ್ನು ಸುಬ್ರಹ್ಮಣ್ಯದ ಪ್ರಕರಣದ ಕುರಿತ ದೂರು ಎಂದು ಪರಿಗಣಿಸುವ ಮೂಲಕ ಮಂಗಳೂರಿನ ಉ.ಅ.ಸಂ.ಯವರು ಸಮಸ್ಯೆಯನ್ನು ತಮ್ಮ ಪಾಲಿಗೆ ಸುಲಭ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ವಿಶಿಷ್ಟವಾದ ರೀತಿಯಲ್ಲಿ ಹೊಣೆಯನ್ನು ಕೆಳ ಅಧಿಕಾರಿಗೆ ವರ್ಗಾಯಿಸಿದ್ದಾರೆ. ಆ ಅಧಿಕಾರಿಗಿಂತ ಕೆಳಗೆ ವಲಯ ಅರಣ್ಯಾಧಿಕಾರಿ ಮತ್ತು ವನಪಾಲಕರು ಇರುವುದರಿಂದ ಜವಾಬ್ದಾರಿ ಅವರಿಗೆ ವರ್ಗಾವಣೆಯಾದರೆ ಆಶ್ಚರ್ಯವಿಲ್ಲ!
ಇಷ್ಟು ನೇರವಾಗಿ, ಸ್ಪಷ್ಟವಾಗಿ ಬರೆದದ್ದು ಸಹ ಉ.ಅ.ಸಂ.ಯವರಿಗೆ ಅರ್ಥವಾಗಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಅನಿವಾರ್ಯವಾಗಿ ಇದನ್ನು ಪುನಃ ಸ್ಪಷ್ಟ ಪಡಿಸಿ ಅವರಿಗೆ ಹೀಗೆ ಪತ್ರ ಬರೆದಿದ್ದೇನೆ.
"..........ನಿಮ್ಮ ಪತ್ರದ ಯಥಾಪ್ರತಿಯನ್ನು ನನಗೆ ಕಳಿಸಿದ್ದೀರಿ. ಧನ್ಯವಾದಗಳು.
ನಿಮ್ಮ ಪತ್ರಕ್ಕೆ ಸಂಬಂಧಿಸಿ ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿ ಕೋರುತ್ತೇನೆ.
೧. ದಿ. ೧೮-೩-೨೦೧೦ರ ನನ್ನ ಪತ್ರದ ವಿಷಯ - ದ. ಕ. ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ - ಎಂಬುದಾಗಿತ್ತು. ಆದರೆ ನೀವು ಕೈಗೊಂಡ ಕ್ರಮ ಅದಕ್ಕೆ ಸಂಬಂಧಪಟ್ಟಿರುವುದಿಲ್ಲ.
೨. ಮರಗಳ ರಕ್ಷಣೆಯ ಕಾನೂನು ಉಲ್ಲಂಘನೆಯಾಗುತ್ತಿರುವುದಕ್ಕೆ ನಿದರ್ಶನವಾಗಿ ಮಾತ್ರ ನಾನು ಸುಬ್ರಹ್ಮಣ್ಯದ ಪ್ರಕರಣವನ್ನು ನಿಮ್ಮ ಗಮನಕ್ಕೆ ತಂದಿದ್ದೆ. ಮರಗಳು ಸಂಪೂರ್ಣ ನಾಶವಾದ ಮೇಲೆ ಅದರ ಬಗ್ಗೆ ತನಿಖೆ ಮಾಡುವುದು, ಕಾನೂನು ಕ್ರಮ ತೆಗೆದುಕೊಳ್ಳುವುದು ಇತ್ಯಾದಿಗಳಲ್ಲಿ ನನಗೆ ಆಸಕ್ತಿ ಇಲ್ಲ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದೂ, ಬಿಡುವುದೂ ಇಲಾಖೆಗೆ ಬಿಟ್ಟ ವಿಷಯ. ನನ್ನ ಆಸಕ್ತಿ ಇರುವುದು ಇನ್ನು ಮುಂದಾದರೂ, ಇರುವ ಮರಗಳನ್ನು ಉಳಿಸಿಕೊಳ್ಳುವ ಬಗ್ಗೆ ಮಾತ್ರ.
೩. ಸುಬ್ರಹ್ಮಣ್ಯದ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸುವುದು ನನ್ನ ಉದ್ದೇಶವಾಗಿದ್ದರೆ, ನಾನು ಅಲ್ಲಿನ ಸ.ಅ.ಸಂ.ಯವರಿಗೆ ಪತ್ರ ಬರೆಯುತ್ತಿದ್ದೆ. ಅವರು ಕ್ರಮ ಕೈಗೊಳ್ಳದಿದ್ದರೆ ಮಾತ್ರ ನಿಮಗೆ ದೂರು ಸಲ್ಲಿಸುತ್ತಿದ್ದೆ.
೪. ನೀವು ಜಿಲ್ಲಾಮಟ್ಟದ ಅಧಿಕಾರಿಯಾಗಿರುವುದರಿಂದ ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳುವಂತೆ ನನ್ನ ಪತ್ರದಲ್ಲಿ ನಿಮ್ಮನ್ನು ಕೋರಿದ್ದೆ.
೫. ಈ ನಿಟ್ಟಿನಲ್ಲಿ, ಮರಗಳ ಸಂರಕ್ಷಣೆಯ ಕಾನೂನು ಇದೆ ಎಂಬ ಅರಿವೇ ಇಲ್ಲದ ಹಾಗೆ, ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಗಳ ನಾಶವನ್ನು ತಡೆಗಟ್ಟಲು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕಾಗಿಯೂ, ಹಾಗೆ ತೆಗೆದುಕೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿಯೂ ಮತ್ತೊಮ್ಮೆ ನಿಮ್ಮನ್ನು ಕೋರುತ್ತೇನೆ."

ಶುಕ್ರವಾರ, ಏಪ್ರಿಲ್ 2, 2010

ತಾ. ೨-೪-೧೦
ಇವೊತ್ತಿನ ಉದಯವಾಣಿಯ ವಾರ್ತೆ:
ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಂಸ್ಕೃತಿ: ಸುಬ್ರಹ್ಮಣ್ಯ ಶ್ರೀ
ಪ್ರಕೃತಿಯಲ್ಲಿ ಭಗವಂತನ ಶಕ್ತಿ ಅಡಗಿದೆ. ಆದುದರಿಂದಾಗಿ ನಮ್ಮ ಹಿರಿಯರು ಪ್ರಕೃತಿಯನ್ನು ಆರಾಧನೆ ಮಾಡುವುದರೊಂದಿಗೆ ಪ್ರಕೃತಿಯ ಸೊಬಗಿನ ನಡುವೆ ಆರಾಧನಾಲಯಗಳನ್ನು ನಿರ್ಮಿಸಿದರು. ನಮ್ಮದು ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಂಸ್ಕೃತಿ ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. (ವಾರ್ತೆಯಲ್ಲಿ ಅವರ ಇನ್ನೂ ಕೆಲವು ಅಭಿಪ್ರಾಯಗಳಿವೆ)
ಇದೇ ವಾರ್ತೆ ಹೀಗೆ ಮುಂದುವರಿದಿದೆ:
.....ವಾಸ್ತು ತಜ್ಞ ಶ್ರೀಕೃಷ್ಣ ಮಹಾಲಿಂಗ ಪ್ರಸಾದ್ ಮುನಿಯಂಗಳ ಮಾತನಾಡಿ ನಮ್ಮ ಪ್ರದೇಶದಲ್ಲಿನ ಬಹುತೇಕ ಶ್ರದ್ಧಾಕೇಂದ್ರಗಳು ಅರಣ್ಯ ವ್ಯಾಪ್ತಿಯಲ್ಲಿರುವುದರಿಂದ ಜೀರ್ಣೋದ್ಧಾರದಂತಹ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗುತ್ತಿರುವುದು ಎಲ್ಲ ಕಡೆ ಕಂಡುಬರುತ್ತಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
*********
ನಾನು ಬರೆದ ಪತ್ರಕ್ಕೆ ಉತ್ತರಿಸಲು ದ.ಕ. ಜಿಲ್ಲಾ ಅರಣ್ಯಾಧಿಕಾರಿಯವರಿಗೆ ಇನ್ನೂ ಪುರುಸೊತ್ತು ಸಿಕ್ಕಿಲ್ಲ ಎಂಬುದು ವಿಷಾದದ ಸಂಗತಿ. ಮೊನ್ನೆ ಅಂದರೆ ೩೧-೩-೧೦ಕ್ಕೆ ಒಂದು ನೆನಪೋಲೆ ಅವರಿಗೆ ಬರೆದಿದ್ದೇನೆ.
*********
ಅನೇಕ ಸ್ನೇಹಿತರು ಬ್ಲಾಗನ್ನು ಓದಿರುವುದಾಗಿ ಹೇಳಿದ್ದಾರೆ. ಆದರೆ ಪ್ರತಿಕ್ರಿಯೆಗಳು ಇಲ್ಲವಾಗಿದೆ. ಅಶೋಕರ ಹತ್ತಿರ ಇದನ್ನು ಹೇಳಿದ್ದಕ್ಕೆ, "ಜನ ಜಡ. ಚುಚ್ತಾ ಇರಬೇಕು" ಎಂದರು. ಇದೊಂದು ಸಣ್ಣ ಮಟ್ಟದ ಚಳುವಳಿ: ಪ್ರಜಾಪ್ರಭುತ್ವದ ಅನುಸಂಧಾನದ ಒಂದು ಸಣ್ಣ ಪ್ರಯತ್ನ. ನೀವೂ ಇದರಲ್ಲಿ ಸೇರಿಕೊಳ್ಳಿ ಎಂದು ನಾನು ಬಾಯಿಬಿಟ್ಟು ಹೇಳುವುದು ಸಭ್ಯತೆಯಲ್ಲ. ಇದು ನಮ್ಮೆಲ್ಲರ ದೇಶ.
ನಾನು ಬರೆಯುತ್ತಿರುವುದು ಓದುಗರಿಗೆ ಮನರಂಜನೆ ನೀಡುವ ಉದ್ದೇಶದಿಂದ ಖಂಡಿತಾ ಅಲ್ಲ.
ಅಶೋಕವರ್ಧನರ ಪ್ರತಿಕ್ರಿಯೆ:
ಇಂದು ಆರಾಧನಾ ಸ್ಥಳಗಳ ವಿಪುಲತೆಯಲ್ಲಿ ಸ್ವಾಮಿಗಳು ಚರಿತ್ರೆಯನ್ನಷ್ಟೇ ಹೇಳಬಲ್ಲರು. ವರ್ತಮಾನದಲ್ಲಿ ಅದನ್ನು ರೂಢಿಸುವ ಧೈರ್ಯವಿದ್ದಿದ್ದರೆ, ತಳ ಇಲ್ಲದ ಮಾನದಲ್ಲಿ (ಸೇರಿನಲ್ಲಿ) ಭವಿಷ್ಯವನ್ನು ಅಳೆಯುವ ಶಾಸ್ತ್ರಕ್ಕೆ ಸುಮಾರು ಆರು ಎಕ್ರೆ ವ್ಯಾಪ್ತಿಯ ಪ್ರಾಕೃತಿಕ ಹಾನಿಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ.
ನನ್ನ ತಿಳುವಳಿಕೆಯಂತೆ ಇಂದು ಆರಾಧನೀಯವಾಗಿರುವ ‘ವಾಸ್ತು’ ಸಂದ ಕಾಲದ ವಿಜ್ಞಾನ, ಸಿವಿಲ್ ಇಂಜಿನಿಯರಿಂಗ್. ಆದರೆ ನಾಗರಿಕತೆಯ ಬೆಳೆವಣಿಗೆಯಲ್ಲಿ ನಮ್ಮ ಪ್ರಾಕೃತಿಕ ತಿಳುವಳಿಕೆಗಳು ಮತ್ತದಕ್ಕೆ ಸಂವಾದಿಯಾಗಿ ಉತ್ಪನ್ನಗಳು ಸಾಕಷ್ಟು ಮುಂದುವರಿದ ಕಾಲದಲ್ಲಿ ವಾಸ್ತುತಜ್ಞರ ಅನುಸರಣೆ ಗಡಿರಕ್ಷಣೆಗೆ ಬಿಲ್ಲು ಭಾಲೆಗಳನ್ನು ಹಿಡಿದು ಹೊರಟಷ್ಟೇ ಅದ್ಭುತ!

ಶನಿವಾರ, ಮಾರ್ಚ್ 20, 2010

ಜಾಗೆದು ಗುರ್ತೇ ಸಿಕ್ತಿಲ್ಲೆ - ಭಾಗ-೨



ಹಿಂದಿನ ಲೇಖನದಲ್ಲಿ ಮಾಹಿತಿ ಬಂದ ಕೂಡಲೇ ತಿಳಿಸುವುದಾಗಿ ಬರೆದಿದ್ದೆ. ದಿನಾಂಕ ೧೭-೩-೨೦೧೦ರಂದು ಸುಬ್ರಹ್ಮಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ನನಗೆ ಮಾಹಿತಿ ನೀಡಿದ್ದಾರೆ.
ನಾನು ಕೇಳಿದ ಮಾಹಿತಿ ೧: ಗುಡ್ಡವನ್ನು ಸಮತಟ್ಟು ಮಾಡುವಾಗ ಅಲ್ಲಿದ್ದ ಹಲವಾರು ಮರಗಳು ನಾಶವಾಗಿರುವ ಸಾಧ್ಯತೆ ಇದೆ. ಹೀಗೆ ಮರಗಳನ್ನು ನಾಶ ಮಾಡಲು ನಿಮ್ಮ ಇಲಾಖೆ ಅನುಮತಿ ನೀಡಿದೆಯೆ?
ಉತ್ತರ:ಸದ್ರಿ ಸ್ಥಳದಲ್ಲಿರುವ ಮರಮಟ್ಟುಗಳನ್ನು ಕಡಿಯಲು ಇಲಾಖಾವತಿಯಿಂದ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ.
ನಾನು ಕೇಳಿದ ಮಾಹಿತಿ ೨: ನೀಡಿದ್ದರೆ ಅನುಮತಿಯ ಯಥಾಪ್ರತಿಯನ್ನು ನನಗೆ ನೀಡಬೇಕಾಗಿ ಕೋರುತ್ತೇನೆ.
ಉತ್ತರ: ಅನುಮತಿ ನೀಡದೇ ಇರುವುದರಿಂದ ಯಥಾಪ್ರತಿ ಇರುವುದಿಲ್ಲ.
ಈ ಮಾಹಿತಿಯಲ್ಲದೆ ಸ.ಅ.ಸಂರಕ್ಷಣಾಧಿಕಾರಿಯವರು ಪ್ರಕರಣಕ್ಕೆ ಸಂಬಂಧಿಸಿ ಉಪಯುಕ್ತವಾದ ಇತರ ಕೆಲವು ಮಾಹಿತಿಗಳನ್ನೂ ನೀಡಿದ್ದಾರೆ:
೧. ಸದ್ರಿ ಸ್ಥಳದಲ್ಲಿರುವ ಅಕೇಶಿಯಾ ಜಾತಿಯ ಗಿಡಗಳನ್ನು ಕಡಿಯುವರೇ ಅವಕಾಶ ಕೋರಿ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇವರು ಸುಬ್ರಹ್ಮಣ್ಯ ವಲಯ ಕಛೇರಿಗೆ ತಾ. ೭-೨-೨೦೧೦ರಂದು ಲಿಖಿತ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿಯ ಯಥಾಪ್ರತಿ ಲಗತ್ತಿಸಿದೆ.
೨.ಸದ್ರಿ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳದ ಹಾಗೂ ಸ್ಥಳದಲ್ಲಿರುವ ಮರಮಟ್ಟುಗಳ ಒಡೆತನ ದೃಢಪತ್ರ ಹಾಗೂ ಸ್ಥಳದ ಮೋಜಣಿ ನಕಾಶೆಯನ್ನು ಸಲ್ಲಿಸಿದಲ್ಲಿ ಅರ್ಜಿಯ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅರ್ಜಿ ಬರಕೊಂಡ ಸ್ವಾಮೀಜಿಯವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರು ಪತ್ರ ಸಂ...........................ರಂತೆ ತಿಳಿಸಿರುತ್ತಾರೆ. ಹಾಗೂ ನಂತರ ಇಲಾಖಾ ಅನುಮತಿ ಪಡೆದು ಮರಗಳನ್ನು ಕಡಿಯುವರೇ ಪತ್ರದಲ್ಲಿ ತಿಳಿಸಲಾಗಿದೆ.ಪತ್ರದ ಪ್ರತಿ ಲಗತ್ತಿಸಲಾಗಿದೆ.ಆದರೆ ಸದ್ರಿಯವರು ಯಾವುದೇ ದಾಖಲಾತಿಗಳನ್ನು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರಿಗೆ ಸಲ್ಲಿಸಿರುವುದಿಲ್ಲ.
**************
ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇವರು ಸುಬ್ರಹ್ಮಣ್ಯ ವಲಯ ಕಛೇರಿಗೆ ತಾ. ೭-೨-೨೦೧೦ರಂದು ಸಲ್ಲಿಸಿರುವ ಲಿಖಿತ ಅರ್ಜಿ (ಅರ್ಜಿ ಶ್ರೀ ಮಠದ ಲೆಟರ್ ಹೆಡ್ ನಲ್ಲಿದೆ):
ನಮ್ಮ ಸಂಸ್ಥಾನದ ಮುಖ್ಯಾಭಿಮಾನಿಗಳಾದ ವಲಯ ಅರಣ್ಯಾಧಿಕಾರಿಗಳಿಗೆ ಸಪ್ರೇಮ ನಾರಾಯಣ ಸ್ಮರಣೆಗಳು.
ವಿಷಯ: ವನದುರ್ಗಾದ ಎದುರು ಗುಡ್ಡೆಯಲ್ಲಿರುವ ಅಕೇಶಿಯಾ ಗಿಡಗಳನ್ನು (ಅರ್ಜಿಯಲ್ಲಿ ಒಟ್ಟು ಮೂರು ಕಡೆ "ಮರ" ಎಂದು ಬರೆದಿರುವುದನ್ನು ಹೊಡೆದು "ಗಿಡ" ಎಂದು ತಿದ್ದಲಾಗಿದೆ - ಎಚ್. ಸುಂದರರಾವ್). ಕಡಿಯಲು ಅವಕಾಶ ನೀಡುವ ಕುರಿತು.
ಆತ್ಮೀಯರೇ, April 9-10-11 2010ರ ದಿನಗಳಲ್ಲಿ ವಿಶ್ವಜ್ಯೋತಿಷ್ಯ ಸಮ್ಮೇಳನ ವನದುರ್ಗಾದ ಎದುರಿರುವ ಗುಡ್ಡದಲ್ಲಿ ನಡೆಯಲಿದೆ. ರಾಷ್ಟ್ರದ ಗಣ್ಯಾತಿಗಣ್ಯ ವ್ಯಕ್ತಿಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಭದ್ರತೆಯ ದೃಷ್ಟಿಯಿಂದ ಗಿಡಗಳನ್ನು ತೆಗೆಯಬೇಕೆಂದು ಸರ್ಕಾರದ ಉನ್ನತಾಧಿಕಾರಿಗಳು ಸಲಹೆ ನೀಡಿದ್ದಾರೆ. ಅಲ್ಲದೆ ಅಕೇಶಿಯಾ ಗಿಡ ಪರಿಸರಕ್ಕೂ ಮಾರಕವಾಗಿದೆ. ಈ ಎಲ್ಲ ಕಾರಣಗಳಿಂದ ಆ ಅಕೇಶಿಯಾ ಗಿಡಗಳನ್ನು ತೆಗೆಯಲು ಅವಕಾಶ ಮಾಡಿಕೊಡಬೇಕಾಗಿ ಅಪೇಕ್ಷಿಸುತ್ತೇವೆ.
ನಿರಂತರ ಅಭಿಮಾನವಿರಲಿ
ಇತಿ ನಾರಾಯಣ ಸ್ಮರಣಪೂರ್ವಕ
(ಸಹಿ)
**************
ಇಲ್ಲಿ ಗಮನಿಸಬೇಕಾದ್ದು: ಸ್ವಾಮೀಜಿಯವರು ಅರ್ಜಿ ಸಲ್ಲಿಸಿರುವುದು ೭-೨-೨೦೧೦ರಂದು.
ಸುಬ್ರಮಣ್ಯದ ವಲಯ ಅರಣ್ಯಾಧಿಕಾರಿಯವರು ಉತ್ತರಿಸಿರುವುದು ತಾ. ೧೫-೨-೨೦೧೦ರಂದು
ಸುಬ್ರಮಣ್ಯದಲ್ಲಿ ಜ್ಯೋತಿಷ್ಯ ಸಮ್ಮೇಳನಕ್ಕಾಗಿ ಗುಡ್ದ ಅಗೆದು ಸಮತಟ್ಟು ಮಾಡುತ್ತಿರುವ ಫೋಟೋಸಹಿತ ವರದಿ ಉದಯವಾಣಿಯಲ್ಲಿ ಪ್ರಕಟವಾಗಿರುವುದು ೧೬-೨-೨೦೧೦ರಂದು.
**************
ಈ ದಾಖಲೆಗಳನ್ನು ನಾನು ದ,ಕ.ಜಿಲ್ಲಾ ಅರಣ್ಯಾಧಿಕಾರಿಯವರಿಗೆ ಕಳಿಸಿಕೊಟ್ಟು ಹೀಗೆ ಪತ್ರ ಬರೆದಿದ್ದೇನೆ:
"..... ಈ ಪ್ರಕರಣವನ್ನು ಗಮನಿಸಿದಾಗ ಮರಗಳ ಸಂರಕ್ಷಣೆಗಾಗಿ ಇರುವ ಕಾನೂನು ಉಲ್ಲಂಘನೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಒಂದು ಆತಂಕಕಾರಿ ಬೆಳವಣಿಗೆ.
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹೀಗೆ ಮರಗಳನ್ನು ನಾಶ ಮಾಡುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಪ್ರತಿದಿನವೂ ಸಾವಿರಾರು ಮರಗಳು ಬೇರು ಸಮೇತ ನೆಲಕ್ಕುರುಳುತ್ತಿವೆ. ಇದನ್ನು ತಡೆಗಟ್ಟಲು ಸಂಬಂಧಪಟ್ಟ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡುವುದು ಅಗತ್ಯ.
ಇನ್ನು ಮುಂದೆ ಮರಗಳ ಸಂರಕ್ಷಣೆಯ ಕಾನೂನನ್ನು ಯಾರೂ ಉಲ್ಲಂಘಿಸದಂತೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ನಿಮ್ಮನ್ನು ಕೋರುತ್ತೇನೆ.
ಇನ್ನು ಹತ್ತು ದಿನಗಳ ಒಳಗೆ ನೀವು ಕೈಗೊಂಡ ಕ್ರಮವನ್ನು ನನಗೆ ತಿಳಿಸಬೇಕಾಗಿ ಕೋರುತ್ತೇನೆ..."
ಪತ್ರ ಅವರಿಗೆ ತಲುಪಿದೆ. ಉತ್ತರ ಬಂದನಂತರ ಮತ್ತೆ ಬರೆಯುತ್ತೇನೆ........