ಮಂಗಳವಾರ, ಮೇ 1, 2018

ಪಂಪಭಾರತಂ ಆಶ್ವಾಸ ೧ ಪದ್ಯಗಳು ೧-೧೪


ಶ್ರೀಃ
ಪಂಪಕವಿ ವಿರಚಿತಂ
ವಿಕ್ರಮಾರ್ಜುನ ವಿಜಯಂ
ಪ್ರಥಮಾಶ್ವಾಸಂ 

|| ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ |
     ಜೀಯೆನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ ||
     ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ದಿಯುಮಿಂತುದಾತ್ತ ನಾ |
     ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ ||||
(ಶ್ರೀಯನ್ ಅರಾತಿ ಸಾಧನ ಪಯೋನಿಧಿಯೊಳ್ ಪಡೆದುಂ, ಧರಿತ್ರಿಯಂ ಜೀ ಎನೆ ಬೇಡಿ ಕೊಳ್ಳದೆ ವಿರೋಧಿ ನರೇಂದ್ರರನ್ ಒತ್ತಿ ಕೊಂಡುಂ, ಆತ್ಮೀಯ ಸುಪುಷ್ಪಪಟ್ಟಮನ್ ಒಡಂಬಡೆ ತಾಳ್ದಿಯುಂ, ಇಂತು ಉದಾತ್ತ ನಾರಾಯಣನಾದ ದೇವನ್ ಎಮಗೆ ಈಗೆ  ಅರಿಕೇಸರಿ ಸೌಖ್ಯಕೋಟಿಯಂ.)
ಲಕ್ಷ್ಮಿಯನ್ನು ವೈರಿ ಸೈನ್ಯವೆಂಬ ಸಮುದ್ರದಲ್ಲಿ ಪಡೆದವನು; ಭೂಮಿಯನ್ನು ದೈನ್ಯದಿಂದ ಬೇಡಿ ಪಡೆಯದೆ  ಶತ್ರು ರಾಜರನ್ನು ಸೋಲಿಸಿ ಪಡೆದವನು; ಸುಪುಷ್ಪಪಟ್ಟವೆಂಬ ಕಿರೀಟವನ್ನು ಒಪ್ಪವಾಗಿ ಧರಿಸಿದವನು; ಹೀಗೆ ಉದಾತ್ತ ನಾರಾಯಣನೆಂಬ ಬಿರುದು ಪಡೆದ ಅರಿಕೇಸರಿಯು ನಮಗೆ ಧಾರಾಳ ಸುಖವನ್ನು ಕೊಡಲಿ.

ಚಂ|| ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತವರಪ್ರಸಾದಮು|
     ಜ್ಜಳಜಸಮಂಗಸಂಗತ ಲಸದ್ಭಸಿತಂ ಪ್ರಭುಶಕ್ತಿ ಶಕ್ತಿ ನಿ||
     ರ್ಮಳ ಮಣಿಭೂಷಣಂ ಫಣಿವಿಭೂಷಣಮಾಗೆ ನೆಗೞ್ತೆಯಂ ಪುದುಂ|
     ಗೊಳಿಸಿದನೀಶ್ವರಂ ನೆಗೞ್ದುದಾರ ಮಹೇಶ್ವರನೀಗೆ ಭೋಗಮಂ ||||
(ಮುಳಿಸು ಲಲಾಟ ನೇತ್ರ ಶಿಖಿ, ಮೆಚ್ಚೆ ವಿನೂತ ವರಪ್ರಸಾದಂ, ಉಜ್ಜಳ ಜಸಂ ಅಂಗ ಸಂಗತ ಲಸತ್ ಭಸಿತಂ, ಪ್ರಭುಶಕ್ತಿ ಶಕ್ತಿ, ನಿರ್ಮಳ ಮಣಿಭೂಷಣಂ ಫಣಿವಿಭೂಷಣಂ ಆಗೆ, ನೆಗೞ್ತೆಯಂ ಪುದುಂಗೊಳಿಸಿದನ್ ಈಶ್ವರಂ, ನೆಗೞ್ದುದಾರ ಮಹೇಶ್ವರನ್ ಈಗೆ ಭೋಗಮಂ.)
ಇಲ್ಲಿ ಕವಿ ಈಶ್ವರನನ್ನೂ ಅರಿಕೇಸರಿಯನ್ನೂ ಒಟ್ಟಿಗೆ ಸ್ತೋತ್ರ ಮಾಡಿ ಅರಿಕೇಸರಿ ಉದಾರ ಮಹೇಶ್ವರನೆಂಬುದನ್ನು ಪ್ರತಿಪಾದಿಸಿದ್ದಾನೆ.
ಇವನದು ಕೋಪ, ಅವನದು ಹಣೆಗಣ್ಣ ಬೆಂಕಿ; ಇವನದು ಮೆಚ್ಚುಗೆ, ಅವನದು ಪ್ರಸಾದ; ಇವನದು ಶೋಭಿಸುವ ಯಶಸ್ಸು, ಅವನದು ಮೈಗೆಲ್ಲ ಬಳಿದ ವಿಭೂತಿ; ಇವನದು ಪ್ರಭುಶಕ್ತಿ, ಅವನದು ಶಕ್ತಿದೇವತೆ; ಇವನದು ನಿರ್ಮಲ ಮಣಿಗಳ ಅಲಂಕಾರ, ಅವನದು ಸರ್ಪದ ಅಲಂಕಾರ. ಹೀಗೆ, ಹಲವು ಲಕ್ಷಣಗಳಿಂದ  ಕೂಡಿ ಖ್ಯಾತನಾದ ಈಶ್ವರನೂ, ಸಮಾಂತರ ಲಕ್ಷಣಗಳನ್ನು ಹೊಂದಿ ಖ್ಯಾತನಾದ ಉದಾರ ಮಹೇಶ್ವರನೆಂಬ ಬಿರುದು ಹೊತ್ತ ಅರಿಕೇಸರಿಯೂ ನಮಗೆ ಭೋಗವನ್ನು ಕೊಡಲಿ.

|| ಚಂಡವಿರೋಧಿಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀ |
     ಷಂಡಮರಲ್ದು ರಾಗದಿನೊಱಲ್ದಿರೆ ಯಾಚಕ ಭೃಂಗಕೋಟಿ ಕೈ ||
     ಕೊಂಡು ನಿರಂತರಂ ತಗುಳ್ದು ಕೀರ್ತಿಸೆ ಮಿಕ್ಕೆಸೆವ ಪ್ರಚಂಡ ಮಾ |
     ರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ ||||
(ಚಂಡ ವಿರೋಧಿ ಸಾಧನ ತಮಸ್ತಮಂ ಓಡೆ, ವಿಶಿಷ್ಟ ಪದ್ಮಿನೀ ಷಂಡಂ ಅರಲ್ದು ರಾಗದಿನ್ ಒಱಲ್ದು ಇರೆ, ಯಾಚಕ ಭೃಂಗಕೋಟಿ ಕೈಕೊಂಡು ನಿರಂತರಂ ತಗುಳ್ದು ಕೀರ್ತಿಸೆ, ಮಿಕ್ಕು ಎಸೆವ ಪ್ರಚಂಡ ಮಾರ್ತಾಂಡನ್ ಅಲರ್ಚುಗೆ ಎನ್ನ ಹೃದಯ ಅಂಬುಜಮಂ ನಿಜ ವಾಕ್ ಮರೀಚಿಯಿಂ.)
ಈ ಪದ್ಯವನ್ನು ಸೂರ್ಯ ಹಾಗೂ ಅರಿಕೇಸರಿ ಇಬ್ಬರಿಗೂ ಅನ್ವಯವಾಗುವಂತೆ ಕವಿ ರಚಿಸಿದ್ದಾನೆ.
ಸೂರ್ಯನ ಪರವಾಗಿ:
ಸೂರ್ಯೋದಯವಾದಾಗ ಕತ್ತಲೆಯು ಓಡಿಹೋಯಿತು. ಕೊಳದಲ್ಲಿ ತುಂಬಿದ ಕಮಲಗಳು ಅರಳಿ ಪ್ರೀತಿಯಿಂದ ನೋಡಿದವು. ದುಂಬಿಗಳು ಅವಿರತ ಝೇಂಕಾರ ಎಲ್ಲೆಡೆಯೂ ಕೇಳಿಸಿತು. ಇಂತಹ ಸೂರ್ಯನು ತನ್ನ ಕಿರಣಗಳಿಂದ ನನ್ನ ಹೃದಯಕಮಲವನ್ನು ಅರಳಿಸಲಿ.
ಅರಿಕೇಸರಿಯ ಪರವಾಗಿ:
ಶತ್ರುಗಳು ಓಡಿಹೋದರು. ಪದ್ಮಿನೀ ಸ್ತ್ರೀಯರು ಮುಖವರಳಿಸಿ ಪ್ರೀತಿಯಿಂದ ನೋಡಿದರು. ಭಿಕ್ಷುಕರು ನಿರಂತರವಾಗಿ, ಬೆಂಬಿಡದೆ ಹೊಗಳಿದರು. ಇಂತಹ ‘ಪ್ರಚಂಡ ಮಾರ್ತಾಂಡ’ನಾದ ಅರಿಕೇಸರಿಯು ತನ್ನ ಮಾತಿನ ಕಿರಣಗಳಿಂದ ನನ್ನ ಹೃದಯಕಮಲವನ್ನು ಅರಳಿಸಲಿ.

ಚಂ|| ಸಹಜದ ಚೆಲ್ವಿನೊಳ್ ರತಿಯ ಸೋಲದ ಕೇಳಿಕೆಯೊಳ್ ಪೊದೞ್ದು |
     ನ್ನಹಿತವೆನಿಪ್ಪಪೂರ್ವ ಶುಭ ಲಕ್ಷಣ ದೇಹದೊಳೊಳ್ಪನಾಳ್ದು ಸಂ ||
     ದಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ |
     ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳಂ ||||
(ಸಹಜದ ಚೆಲ್ವಿನೊಳ್, ರತಿಯ ಸೋಲದ ಕೇಳಿಕೆಯೊಳ್ ಪೊದೞ್ದುಸನ್ನಹಿತ ಎನಿಪ್ಪ ಅಪೂರ್ವ ಶುಭ ಲಕ್ಷಣ ದೇಹದೊಳ್ ಒಳ್ಪನ್ ಆಳ್ದು, ಸಂದ ಅಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನ್, ಆಗಳುಂ ಸಹಜ ಮನೋಜನ ಓಜನ್ ಎಮಗೀಗೆ ವಿಚಿತ್ರ ರತೋತ್ಸವಂಗಳಂ.)
ಅರಿಕೇಸರಿಯನ್ನೂ ಮನ್ಮಥನನ್ನೂ ಒಟ್ಟಿಗೆ ಹೊಗಳಿ ಅರಿಕೇಸರಿ ಕಾಮನನ್ನು ಮೀರಿಸಿದವನೆಂದು ಪದ್ಯದಲ್ಲಿ ವರ್ಣಿಸಲಾಗಿದೆ.
ಅರಿಕೇಸರಿಗೆ ಹುಟ್ಟಿನಿಂದಲೇ ಬಂದ ಸಹಜವಾದ ಚೆಲುವು ಇದೆ. ಮನ್ಮಥನು ಹುಟ್ಟಿನಿಂದಲೇ ಚೆಲುವನಾಗಿದ್ದಿರಬಹುದು, ಆದರೆ ನಂತರ ಅವನು ದೇಹವನ್ನು ಕಳೆದುಕೊಂಡಿದ್ದಾನೆ. ಅರಿಕೇಸರಿಯು ರತಿಕೇಳಿಯಲ್ಲಿ ಸೋಲುವವನಲ್ಲ. ಆದರೆ ಮನ್ಮಥನು ಹಾಗಲ್ಲ. ಏಕೆಂದರೆ ರತಿಯು ಅವನ ಹತ್ತಿರ ‘ಸೋಲ’ವನ್ನು ಕೇಳುತ್ತಾಳೆ. ಅರಿಕೇಸರಿಯು ತನ್ನ ಲಕ್ಷಣವಾದ ದೇಹವನ್ನು ಅಲಂಕರಿಸಿಕೊಂಡು ಸುಂದರವಾಗಿ ಕಾಣುತ್ತಾನೆ. ಮನ್ಮಥನಿಗೆ ದೇಹವಿಲ್ಲವಾದ್ದರಿಂದ ಅಲಂಕರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅರಿಕೇಸರಿಯು ಶಿವನ ಕರುಣೆಯನ್ನು ಪಡೆದಿದ್ದಾನೆ; ಮನ್ಮಥನು ಶಿವನ ಶಾಪಕ್ಕೆ ಪಾತ್ರನಾಗಿದ್ದಾನೆ. ಹೀಗೆ ಹಲವು ದೃಷ್ಟಿಗಳಿಂದ ಅರಿಕೇಸರಿಯು ಮನ್ಮಥನಿಗಿಂತಲೂ ಮಿಗಿಲಾದವನು, ಮನ್ಮಥನನ್ನು ಗೆದ್ದವನು. ಇಂಥ ‘ಸಹಜ ಮನೋಜ’ನೂ, (ಮನ್ಮಥನ) ಗುರುವೂ ಆದ ಅರಿಕೇಸರಿಯು ನಮಗೆ ವಿಚಿತ್ರವಾದ ರತೋತ್ಸವಗಳನ್ನು ಕೊಡಲಿ.

ಚಂ|| ಕ್ಷಯಮಣಮಿಲ್ಲ ಕೇಳ್ದು ಕಡೆಗಂಡವನಾವನುಮಿಲ್ಲೆನಲ್ ತದ |
     ಕ್ಷಯನಿಧಿ ತಾನೆ ತನ್ನನೊಸೆದೊಲಗಿಪಂಗರಿದಿಲ್ಲೆನಿಪ್ಪ ವಾ ||
     ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ |
     ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧಬುದ್ಧಿಯಂ || ||
(ಕ್ಷಯಮ್ ಅಣಮ್ ಇಲ್ಲ, ಕೇಳ್ದು ಕಡೆಗಂಡವನ್ ಆವನುಂ ಇಲ್ಲ ಎನಲ್, ತದಕ್ಷಯ ನಿಧಿ ತಾನೆ? ತನ್ನನ್ ಒಸೆದು ಓಲಗಿಪಂಗೆ ಅರಿದಿಲ್ಲ ಎನಿಪ್ಪ ವಾಙ್ಮಯಮ್ ಅನಿತರ್ಕಂ ಅಂಬಿಕೆ ಸರಸ್ವತಿ, ಮನ್ಮುಖ ಪದ್ಮರಂಗದ ಏೞ್ಗೆಯನ್ ಎಡೆಗೊಂಡು, ಕೊಂಡು ಕೊನೆದು, ಈಗೆ ಅರಿಗಂಗೆ ವಿಶುದ್ಧ ಬುದ್ಧಿಯಂ.)
ವಿದ್ಯೆಗೆ ನಾಶವಿಲ್ಲ; ಅದನ್ನು ಕೇಳಿ ಮುಗಿಸಿದವನು ಯಾರೂ ಇಲ್ಲ. ಹಾಗಾಗಿಯೇ ಅದು ‘ಅಕ್ಷಯ ನಿಧಿ’ ಎಂದು ಕರೆಸಿಕೊಂಡಿರುವುದು ತಾನೆ? ಯಾರು ಪ್ರೀತಿಯಿಂದ ಆ ವಿದ್ಯೆಯ ಸೇವೆ ಮಾಡುತ್ತಾರೋ ಅಂಥವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಅಂಥ ವಿದ್ಯೆಗೆ ತಾಯಿಯಾದ ಸರಸ್ವತಿ ನನ್ನ ಮುಖದಲ್ಲಿ ನೆಲೆಸಿ, ಸಂತೋಷದಿಂದ ಅರಿಕೇಸರಿಗೆ ಒಳ್ಳೆಯ ಬುದ್ಧಿಯನ್ನು ಕೊಡಲಿ.
(ಪದ್ಯದ ಮೊದಲ ಸಾಲಿನಲ್ಲಿ ‘ಕೇಳ್ದು ಕಡೆಗಂಡವನ್’ ಎಂಬ ಮಾತಿದೆ. ಬರೆಯುವ ಪದ್ಧತಿ ಜಾರಿಗೆ ಬರುವ ಮೊದಲು ಒಬ್ಬರಿಂದೊಬ್ಬರು ಕೇಳಿ ಕಲಿಯುವ ಪದ್ಧತಿ ಇತ್ತು. ಪಂಪನ ಕಾಲಕ್ಕಾಗಲೇ ಬರವಣಿಗೆ ಚಾಲ್ತಿಗೆ ಬಂದಿತ್ತಾದರೂ, ಕೇಳಿ ಕಲಿಯುವ ಪದ್ಧತಿ ಸಂಪೂರ್ಣ ನಾಶವಾಗಿದ್ದಿರಲಾರದು. ‘ಬಹುಶ್ರುತ’ ಎಂದರೆ ‘ತುಂಬಾ ಕೇಳಿದವನು’ – ದೊಡ್ಡ ವಿದ್ವಾಂಸ. ಆದ್ದರಿಂದ ಇಲ್ಲಿ ‘ಕೇಳಿ’ ಎಂದರೆ ‘ಓದಿ’ ಎಂದೇ ಅರ್ಥ.)


ಚಂ|| ತಿಸುಳದೊಳುಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ ಕಣ್ಗಗು |
     ರ್ವಿಸುವಿನಮೊಕ್ಕು ನೇಲ್ವ ಕರುಳೋಳಿಯೆ ಬಾಳ ಮೃಣಾಳಮಾಗೆ ಮಿ ||
     ಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯನಾಱಿಸುತಿಂತೆ ತನ್ನ ಕೂ |
     ರಸಿಯೊಳಡುರ್ತು ಕೊಂದಸಿಯಳಿರ್ಕಸಿಯೊಳ್ ಪಡೆ ಮೆಚ್ಚೆ ಗಂಡನಾ || ||
(ತಿಸುಳದೊಳ್ ಉಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ, ಕಣ್ಗೆ ಅಗುರ್ವಿಸುವಿನಂ ಒಕ್ಕು ನೇಲ್ವ ಕರುಳ ಓಳಿಯೆ ಬಾಳ ಮೃಣಾಳಮಾಗೆ, ಮಿಕ್ಕ ಅಸುರರ ಮೆಯ್ಯೊಳ್ ಆದ ವಿರಹಾಗ್ನಿಯನ್ ಆರಿಸುತೆ ಇಂತೆತನ್ನ ಕೂರಸಿಯೊಳ್ ಅಡುರ್ತು ಕೊಂದ ಅಸಿಯಳ್, ಇರ್ಕೆ ಅಸಿಯೊಳ್ ಪಡೆ ಮೆಚ್ಚೆ ಗಂಡನಾ.)
ಈ ಪದ್ಯದಲ್ಲಿ ಕವಿ ದುರ್ಗಾದೇವಿಯನ್ನು ಪ್ರಾರ್ಥಿಸಿದ್ದಾನೆ. ಆಕೆಯ ತ್ರಿಶೂಲದಿಂದ ಚಿಮ್ಮುವ ರಾಕ್ಷಸರ ತಾಜಾ ರಕ್ತವೇ ಕೆಂಬಣ್ಣದ ಚಿಗುರಾಯಿತು. ಭೀಕರವಾಗಿ ಕಾಣುವ ಅವರ ಕರುಳ ಮಾಲೆಯೇ ಎಳೆಯ ತಾವರೆಯ ದಂಟಾಯಿತು. ಹೀಗೆ ತನ್ನ ಹರಿತವಾದ ಕತ್ತಿಯನ್ನು ಹಿಡಿದು ಮುನ್ನುಗ್ಗಿ ದುರ್ಗೆಯು ರಾಕ್ಷಸರನ್ನು  ಕೊಂದು, ಹೆಚ್ಚಿಕೊಂಡ ಅವರ ವಿರಹಾಗ್ನಿಯನ್ನು ತಣಿಸಿದಳು. ಅಂಥ ದುರ್ಗೆಯು ‘ಪಡೆ ಮೆಚ್ಚೆ ಗಂಡ’ನಾದ ಅರಿಕೇಸರಿಯ ಕತ್ತಿಯಲ್ಲಿ ನೆಲೆಸಿರಲಿ.
(“ಕಾಮಸಂತಾಪವನ್ನು ಶಮನಗೊಳಿಸುವುದಕ್ಕಾಗಿ ಚಿಗುರನ್ನೂ ತಾವರೆಯ ದಂಟನ್ನೂ ವಿರಹಿಗಳು ಉಪಯೋಗಿಸುವುದು ಪದ್ಧತಿ. ಇಲ್ಲಿ ಆದಿಶಕ್ತಿ ಸ್ವರೂಪಳಾದ ಕಾಳಿಯನ್ನು, ತ್ರಿಪುರಸುಂದರಿಯನ್ನು ಮೋಹಿಸಿ ಬಂದ ಶುಂಭ ನಿಶುಂಭಾದಿ ಉದ್ಧತ ರಾಕ್ಷಸರ ವಿರಹಾಗ್ನಿಯನ್ನು ಆರಿಸಲು ಅವರ ಬಿಸಿನೆತ್ತರನ್ನೂ ಕರುಳಮಾಲೆಯನ್ನೂ ಬಳಸಿತೆಂದು ಹೇಳಿದೆ” – ಡಿ.ಎಲ್.ಎನ್.)
ಮಲ್ಲಿಕಾಮಾಲೆ|| ಎನ್ನ ದಾನಮಿದಾಗಳುಂ ಮಧುಪಾಶ್ರಯಂ ಧರೆಗವ್ಯವ |
     ಚ್ಛಿನ್ನ ದಾನಮಿದಾಗಳುಂ ವಿಬುಧಾಶ್ರಯಂ ಗೆಲೆವಂದನೆ ||
     ನ್ನನ್ನಿಜೋನ್ನತಿಯಿಂದಮೀ ಪತಿಯೆಂದು ಮೆಚ್ಚಿ ವಿನಾಯಕಂ |
     ತಾನ್ನಿಮಿರ್ಚುಗೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ || ||
(ಎನ್ನ ದಾನಂ ಇದು ಆಗಳುಂ ಮಧುಪಾಶ್ರಯಂ, ಧರೆಗೆ ಅವ್ಯವಚ್ಛಿನ್ನ ದಾನಂ ಇದು ಆಗಳುಂ ವಿಬುಧ ಆಶ್ರಯಂ ಗೆಲೆವಂದನ್ ಎನ್ನನ್ ನಿಜ ಉನ್ನತಿಯಿಂದಂ ಪತಿ ಎಂದು ಮೆಚ್ಚಿ ವಿನಾಯಕಂ ತಾನ್ ನಿಮಿರ್ಚುಗೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ.)
‘ದಾನ’ ಶಬ್ದವನ್ನು ಕವಿ ಇಲ್ಲಿ ಎರಡು ಅರ್ಥಗಳಲ್ಲಿ ಬಳಸಿದ್ದಾನೆ. ದಾನ ಎಂದರೆ ಪ್ರಸಿದ್ಧ ಅರ್ಥ ‘ದಾನ’. ಅಷ್ಟೇನೂ ಪ್ರಸಿದ್ಧವಲ್ಲದ ಮತ್ತೊಂದು ಅರ್ಥ ‘ಆನೆಯ ಮದದ ನೀರು’.
“ನನ್ನ ಮದದ ನೀರು ಬರಿಯ ದುಂಬಿಗಳಿಗೆ ಆಶ್ರಯ ಕೊಟ್ಟರೆ, ಅರಿಕೇಸರಿಯು ನೀಡುವ ದಾನ ಪಂಡಿತರಿಗೆ ಆಶ್ರಯ ಕೊಡುತ್ತದೆ. ಎಂದಮೇಲೆ ಈ ಅರಿಕೇಸರಿಯು  ನಿಜವಾದ ಯೋಗ್ಯತೆಯ ಮೂಲಕವೇ ನನ್ನನ್ನು ಮೀರಿಸುತ್ತಾನೆ” ಎಂದು ಮೆಚ್ಚಿ ವಿನಾಯಕನು ಅರಿಕೇಸರಿ ರಾಜನ ಕುರಿತಾದ ಈ ಕಾವ್ಯವನ್ನು ಪ್ರೀತಿಯಿಂದ ವಿಸ್ತರಿಸಲಿ.
ಚಂ|| ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದೊಂದಿ ದೇಸಿಯೊಳ್ |
     ಪುಗುವುದು ಪೊಕ್ಕು ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯಬಂಧಮೊ ||
     ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ಪೊಱೆಯಿಂ ಬೞಲ್ದು ತುಂ |
     ಬಿಗಳಿನೆ ತುಂಬಿ ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್  ||೮||
(ಬಗೆ ಪೊಸತು ಅಪ್ಪುದು, ಆಗಿ ಮೃದುಬಂಧದೊಳ್ ಒಂದುವುದು, ಒಂದಿ ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವುದು, ತಳ್ತೊಡೆ ಕಾವ್ಯಬಂಧಂ ಒಪ್ಪುಗುಂ ಎಳಮಾವು ಕೆಂದಳಿರ, ಪೂವಿನ, ಬಿಣ್ಪೊಱೆಯಿಂ ಬೞಲ್ದು, ತುಂಬಿಗಳಿನೆ ತುಂಬಿ, ಕೋಗಿಲೆಯೆ ಬಗ್ಗಿಸೆ ಸುಗ್ಗಿಯೊಳ್ ಒಪ್ಪುವಂತೆವೋಲ್)
ಕಾವ್ಯಬಂಧವು ಹೇಗಿರಬೇಕೆಂಬುದನ್ನು ಕವಿ ಇಲ್ಲಿ ಹೇಳುತ್ತಾನೆ.
ಆಲೋಚನೆ ಅಥವಾ ಕಲ್ಪನೆ ಹೊಸತಾಗಿರಬೇಕು. ಅದನ್ನು ಮೃದುವಾದ (ಯೋಗ್ಯವಾದ) ಶಬ್ದಗಳಲ್ಲಿ ಜೋಡಿಸಬೇಕು. ಹಾಗೆ ಜೋಡಿಸಿ ದೇಸಿಯಲ್ಲಿ ಹೊಗಿಸಬೇಕು. ನಂತರ ಅದನ್ನು ಮಾರ್ಗದಲ್ಲಿ ಸೇರಿಸಬೇಕು. ಹೀಗೆ ಸೇರಿಸಿದರೆ ಕಾವ್ಯಬಂಧವು ಸುಗ್ಗಿಯ ಕಾಲದಲ್ಲಿ ಎಳಮಾವು, ಕೆಂಪು ಚಿಗುರುಗಳ ಹಾಗೂ ಹೂವುಗಳ ಭಾರಕ್ಕೆ ಬಳಲಿ, ದುಂಬಿಗಳಿಂದ ತುಂಬಿ, ಹಾಡುವ ಕೋಗಿಲೆಗಳಿಗೆ ಆಶ್ರಯವಾಗಿ ಮನೋಹರವಾಗಿ ಒಪ್ಪುವಂತೆ, ಶೋಭಿಸುತ್ತದೆ.
ಉ|| ಆ ಸಕಳಾರ್ಥಸಂಯುತಮಳಂಕೃತಿಯುಕ್ತಮುದಾತ್ತ [ವೃತ್ತಿ] ವಿ |
     ನ್ಯಾಸಮನೇಕ ಲಕ್ಷಣ ಗುಣ ಪ್ರಭವಂ ಮೃದುಪಾದಮಾದ ವಾ ||
     ಕ್ಶ್ರೀ ಸುಭಗಂ ಕಳಾಕಳಿತಮೆಂಬ ನೆಗೞ್ತೆಯನಾಳ್ದ ಕಬ್ಬಮಂ |
     ಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೇ ||೯||
(ಆ ಸಕಳ ಅರ್ಥ ಸಂಯುತಂ, ಅಳಂಕೃತಿ ಯುಕ್ತಂ, ಉದಾತ್ತ ವೃತ್ತಿ ವಿನ್ಯಾಸಂ, ಅನೇಕ ಲಕ್ಷಣ ಗುಣ ಪ್ರಭವಂ, ಮೃದುಪಾದಂ ಆದ, ವಾಕ್ ಶ್ರೀ ಸುಭಗಂ ಕಳಾಕಳಿತಂ ಎಂಬ ನೆಗೞ್ತೆಯನ್ ಆಳ್ದ, ಕಬ್ಬಮಂ ಕೂಸುಮನ್ ಈವುದು, ಈವುದು ಅರಿಕೇಸರಿಗೆ ಅಲ್ಲದೆ ಅವಸ್ತುಗೆ ಈವುದೇ?)
೩ನೆಯ ಪದ್ಯದಂತೆ ಇಲ್ಲಿಯೂ ಕವಿ ಎರಡರ್ಥ ಬರುವಂತೆ ಪದಪುಂಜಗಳನ್ನು ಬಳಸಿದ್ದಾನೆ. ಕಾವ್ಯ ಹಾಗೂ ಕನ್ನಿಕೆಯ ವರ್ಣನೆಗಳು ಇಲ್ಲಿ ಇವೆ.
ಕಾವ್ಯದ ಪರವಾಗಿ:
ಎಲ್ಲ ಅರ್ಥಗಳನ್ನೂ ಒಳಗೊಂಡದ್ದು, ಕಾವ್ಯಾಲಂಕಾರಗಳಿಂದ ಕೂಡಿರುವುದು, ಉದಾತ್ತ ವೃತ್ತಿಗಳನ್ನು ಒಳಗೊಂಡದ್ದು, ಕಾವ್ಯ ಲಕ್ಷಣಗಳಿಗೆ ಜನ್ಮಸ್ಥಾನವಾದದ್ದು, ಮೃದುವಾದ ಪದ್ಯಪಾದಗಳಿರುವಂಥದು, ಮಾತಿನ ಸಿರಿಯಿಂದ ಸುಂದರವಾದದ್ದು, ಕಲೆಗಳಿಂದ ಕೂಡಿರುವುದು – ಎಂಬ ಖ್ಯಾತಿಯು ಕಾವ್ಯಕ್ಕಿದೆ. ಅಂತಹ ಕಾವ್ಯವನ್ನು ಅರಿಕೇಸರಿಯಂಥ ಮಹಾನುಭಾವನಿಗೆ ಅರ್ಪಿಸಬೇಕು, ಸುಮ್ಮನೆ ಯಾರಿಗೋ ಅರ್ಪಿಸುವುದಲ್ಲ.
ಕನ್ನಿಕೆಯ ಪರವಾಗಿ:
ಎಲ್ಲ ಸಂಪತ್ತುಗಳನ್ನೂ ಹೊಂದಿದವಳು, ಸುಂದರವಾಗಿ ಅಲಂಕರಿಸಿಕೊಂಡವಳು, ಉತ್ತಮ ನಡವಳಿಕೆಯುಳ್ಳವಳು, ಅನೇಕ ಲಕ್ಷಣಗಳನ್ನೂ ಗುಣಗಳನ್ನೂ ಹೊಂದಿದವಳು, ಕಲೆಗಳನ್ನು ಬಲ್ಲವಳು  ಎಂದು ಖ್ಯಾತಳಾದ ಕನ್ನಿಕೆಯನ್ನು  ಅರಿಕೇಸರಿಯಂಥ ಮಹಾನುಭಾವನಿಗೆ ಅರ್ಪಿಸಬೇಕು, ಸುಮ್ಮನೆ ಯಾರಿಗೋ ಅರ್ಪಿಸುವುದಲ್ಲ.
(ಕಾವ್ಯವನ್ನು ರಾಜನಿಗೆ ಅರ್ಪಿಸಬೇಕೆನ್ನುವುದು ಅರ್ಥವಾಗುವ ಮಾತು. ಕನ್ನಿಕೆಯನ್ನು ಅರ್ಪಿಸುವುದೆಂದರೆ? ಅಂಥದೊಂದು ಪದ್ಧತಿ ಪಂಪನ ಕಾಲದಲ್ಲಿ  ಇದ್ದಿರಬಹುದೆ?)
ಚಂ|| ಕವಿಗಳ ನಾಮಧಾರಕ ನರಾಧಿಪರೋಳಿಯೊಳೀತನೊಳ್ಳಿದಂ |
     ಕವಿ ನೃಪನೀತನೊಳ್ಳಿದನೆನಲ್ ದೊರೆಯಲ್ತು ನೆಗೞ್ತೆವೆತ್ತ ಸ ||
     ತ್ಕವಿಗಳ ಷೋಡಶಾವನಿಪರೋಳಿಯೊಳಂ ಕವಿತಾಗುಣಾರ್ಣವಂ |
     ಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯುಮೀ ಗುಣಾರ್ಣವಂ ||೧೦||
(ಕವಿಗಳ, ನಾಮಧಾರಕ ನರಾಧಿಪರ ಓಳಿಯೊಳ್, ಈತನ್ ಒಳ್ಳಿದಂ ಕವಿ, ನೃಪನೀತನ್ ಒಳ್ಳಿದನ್, ಎನಲ್ ದೊರೆಯಲ್ತು, ನೆಗೞ್ತೆವೆತ್ತ ಸತ್ಕವಿಗಳ, ಷೋಡಶ ಅವನಿಪರ ಓಳಿಯೊಳಂ, ಕವಿತಾ ಗುಣಾರ್ಣವಂ ಕವಿತೆಯೊಳ್ ಅಗ್ಗಳಂ, ಗುಣದೊಳ್ ಅಗ್ಗಳಂ ಎಲ್ಲಿಯುಂ ಈ ಗುಣಾರ್ಣವಂ.)
ಈ ಪದ್ಯದಲ್ಲಿ ಕವಿ ತನ್ನನ್ನು ತಾನೇ ಹೊಗಳಿಕೊಳ್ಳುತ್ತಾನೆ, ತನ್ನ ಆಶ್ರಯದಾತನಾದ ಅರಿಕೇಸರಿಯನ್ನೂ ಹೊಗಳುತ್ತಾನೆ.
ಕೇವಲ ಹೆಸರಿಗೆ ಮಾತ್ರ ಕವಿಗಳೆನಿಸಿಕೊಂಡವರ ಸಾಲಿನಲ್ಲಿ ‘ಇವನು ಒಳ್ಳೆಯ ಕವಿ’ ಎನಿಸಿಕೊಳ್ಳುವುದರಲ್ಲಿ ಆಗಲಿ, ಹೆಸರಿಗೆ ಮಾತ್ರ ರಾಜರೆನಿಸಿಕೊಂಡವರ ಸಾಲಿನಲ್ಲಿ ‘ಇವನು ಒಳ್ಳೆಯ ರಾಜ’ ಎನಿಸಿಕೊಳ್ಳುವುದರಲ್ಲಿ ಆಗಲಿ ಹೆಚ್ಚುಗಾರಿಕೆ ಏನಿದೆ? ಪ್ರಖ್ಯಾತವಾದ ಉತ್ತಮ ಕವಿಗಳ ಸಾಲಿನಲ್ಲಿ ಈ ‘ಕವಿತಾಗುಣಾರ್ಣವ’ನು ಶ್ರೇಷ್ಠ ಕವಿ; ಹಾಗೆಯೇ ಪ್ರಸಿದ್ಧರಾದ ಹದಿನಾರು ರಾಜರುಗಳ ಸಾಲಿನಲ್ಲಿ ‘ಗುಣಾರ್ಣವ’ ನೆಂಬ ಬಿರುದು ಪಡೆದ ಅರಿಕೇಸರಿಯು ಶ್ರೇಷ್ಠ ರಾಜ.
ಚಂ|| ಕತೆ ಪಿರಿದಾದೊದಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾ |
     ರತಮನಪೂರ್ವಮಾಗೆ ಸಲೆ ಪೇೞ್ದ [ಕವೀಶ್ವರರಿ]ಲ್ಲ ವರ್ಣಕಂ ||
     ಕತೆಯೊಳೊಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ಪಂ |
     ಡಿತರೆ ತಗುಳ್ದು ಬಿಚ್ಚೞಿಸೆ ಪೇೞಲೊಡರ್ಚಿದೆನೀ ಪ್ರಬಂಧಮಂ ||೧೧||
(ಕತೆ ಪಿರಿದು ಆದೊಡಂ, ಕತೆಯ ಮೆಯ್ ಕಿಡಲ್ ಈಯದೆ, ಮುಂ ಸಮಸ್ತ ಭಾರತಮನ್ ಅಪೂರ್ವಂ ಆಗೆ ಸಲೆ ಪೇೞ್ದ ಕವೀಶ್ವರರ್ ಇಲ್ಲ, ವರ್ಣಕಂ ಕತೆಯೊಳ್ ಒಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಂ ಎಂದು ಪಂಡಿತರೆ ತಗುಳ್ದು ಬಿಚ್ಚೞಿಸೆ, ಪೇೞಲ್ ಒಡರ್ಚಿದೆನ್ ಈ ಪ್ರಬಂಧಮಂ.)
“ಮಹಾಭಾರತದ ಕತೆಯು ವಿಸ್ತಾರವಾದುದು. ಈ ಮೊದಲು ಆ ಕತೆಯನ್ನು ‘ಇಂಥದ್ದು ಹಿಂದೆಂದೂ ಇರಲಿಲ್ಲ’ ಎನ್ನುವ ಹಾಗೆ ಹೇಳಿದ ಕವಿಗಳು ಯಾರೂ ಇಲ್ಲ. ಕತೆಯ ವಿವರಗಳಲ್ಲಿ ವರ್ಣನೆಗಳನ್ನು ಒಪ್ಪುವಂತೆ ಸೇರಿಸಿ ಹೇಳುವ ಶಕ್ತಿ ಇರುವುದು ಪಂಪನಿಗೇ ಸರಿ” ಎಂದು ಪಂಡಿತರುಗಳೇ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಹಾಗಾಗಿ ನಾನು ಈ ‘ಸಮಸ್ತ ಭಾರತ’ವನ್ನು ಹೇಳಲು ತೊಡಗಿದ್ದೇನೆ.
ಚಂ|| ಲಲಿತಪದಂ ಪ್ರಸನ್ನ ಕವಿತಾಗುಣಮಿಲ್ಲದೆ ಪೂಣ್ದು ಪೇೞ್ದ ಬೆ |
     ಳ್ಗಳ ಕೃತಿಬಂಧಮುಂ ಬರೆ[ಪ]ಕಾಱರ ಕೈಗಳ ಕೇಡು ನುಣ್ಣನ ||
     ಪ್ಪಳಕದ ಕೇಡು ಪೇೞಿಸಿದೊಡರ್ಥದ ಕೇಡೆನೆ ಪೇೞ್ದು ಬೀಗಿ ಪೊ |
     ಟ್ಟಳಿಸಿ ನೆಗೞ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ ||೧೨||
(ಲಲಿತಪದಂ ಪ್ರಸನ್ನ ಕವಿತಾ ಗುಣಂ ಇಲ್ಲದೆ, ಪೂಣ್ದು ಪೇೞ್ದ ಬೆಳ್ಗಳ ಕೃತಿಬಂಧಮುಂ ಬರೆಪಕಾಱರ ಕೈಗಳ ಕೇಡು, ನುಣ್ಣನ ಅಪ್ಪಳಕದ ಕೇಡು, ಪೇೞಿಸಿದೊಡರ್ಥದ ಕೇಡು ಎನೆ, ಪೇೞ್ದು, ಬೀಗಿ, ಪೊಟ್ಟಳಿಸಿ, ನೆಗೞ್ತೆಗೆ ಆಟಿಸುವ ದುಷ್ಕವಿಯುಂ ಕವಿ ಎಂಬ ಲೆಕ್ಕಮೇ?)
ಈ ಪದ್ಯದಲ್ಲಿ ಕವಿಯು ಸಂಪ್ರದಾಯದಂತೆ ಕೆಟ್ಟ ಕವಿಗಳನ್ನು ನಿಂದಿಸಿದ್ದಾನೆ.
ಕೆಲವು ದಡ್ಡರು ಸುಂದರವಾದ ಶಬ್ದಗಳಿಲ್ಲದ, ಮನಸ್ಸಿಗೆ ಮುದ ನೀಡುವ ಕಾವ್ಯಗುಣಗಳಿಲ್ಲದ ಕೃತಿಗಳನ್ನು ರಚಿಸುತ್ತಾರೆ. ಅಂತಹ ಕಾವ್ಯಗಳನ್ನು ಪ್ರತಿ ಮಾಡಿಸಿದರೆ ಅದು ಪ್ರತಿಕಾರರ ಶ್ರಮವನ್ನು ದಂಡ ಮಾಡಿದಂತೆ; ಬರೆಯಲು ಬಳಸುವ ನುಣ್ಣನೆಯ ಓಲೆಗಳನ್ನು ಹಾಳು ಮಾಡಿದಂತೆ; ತುಂಬಿದ ಸಭೆಯಲ್ಲಿ ಓದಿಸಿದರೆ ಕಾವ್ಯದ ಅರ್ಥವನ್ನೂ, ಓದಿಸಿದವರ ಹಣವನ್ನೂ ವ್ಯರ್ಥ ಮಾಡಿದಂತೆ. ಹೀಗಿದ್ದರೂ ಸಹ ಕೆಲವರು ಕಾವ್ಯವನ್ನು ರಚಿಸುತ್ತಾರೆ; ತಾನೇ ದೊಡ್ಡ ಕವಿ ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ; ತನಗೇ ಕೀರ್ತಿ ಸಿಗಬೇಕೆಂದು ಆಸೆಪಡುತ್ತಾರೆ! ಅಂಥ ಕೆಟ್ಟ ಕವಿಗಳನ್ನೂ ಕವಿಗಳ ಲೆಕ್ಕಕ್ಕೆ ಸೇರಿಸಲು ಸಾಧ್ಯವೆ?
ಉ|| ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆಂ ಕವಿ |
     ವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳ್ಪು ಮನ್ಮನೋ ||
     ವಾಸಮನೆಯ್ದೆ ಪೇೞ್ದಪೆನದಲ್ಲದೆ ಗರ್ವಮೆ ದೋಷಮ[ೞ್ತಿ]ಗಂ
     ದೋಷಮೆ ಕಾಣೆನೆನ್ನಱಿವ ಮಾೞ್ಕೆಯೆ ಪೇೞ್ವೆನಿದಾವ ದೋಷಮೋ ||೧೩||
(ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನ್ ಈಸುವೆಂ, ಕವಿ ವ್ಯಾಸನೆನ್ ಎಂಬ ಗರ್ವಂ ಎನಗಿಲ್ಲ, ಗುಣಾರ್ಣವನ ಒಳ್ಪು ಮನ್ಮನೋವಾಸಮನ್ ಎಯ್ದೆ ಪೇೞ್ದಪೆನ್, ಅದಲ್ಲದೆ ಗರ್ವಮೆ ದೋಷಂ, ಅೞ್ತಿಗಂ ದೋಷಮೆ? ಕಾಣೆನ್, ಎನ್ನ ಅಱಿವ ಮಾೞ್ಕೆಯೆ ಪೇೞ್ವೆನ್ ಇದಾವ ದೋಷಮೋ?)
‘ವ್ಯಾಸ ಮುನಿಯಿಂದ ರಚಿತವಾದ ಮಹಾಭಾರತವು ಮಾತಿನಮೃತದ ಒಂದು ಕಡಲು. ನಾನು ಆ ಕಡಲಿನಲ್ಲಿ ಈಜುತ್ತೇನೆ. ಆದರೆ ‘ನಾನೇ ವ್ಯಾಸ’ ಎಂಬ ಅಹಂಕಾರ ನನಗಿಲ್ಲ. ರಾಜನಾದ ಅರಿಕೇಸರಿಯ ಒಳ್ಳೆಯ ಗುಣಗಳನ್ನು ಕಂಡು ಮನಸೋತ ನಾನು ಈ ಕಾವ್ಯವನ್ನು ಹೇಳುತ್ತಿದ್ದೇನೆ. ಅದೂ ಅಲ್ಲದೆ ಅಹಂಕಾರವಾದರೆ ದೋಷ, ಪ್ರೀತಿಗೆ ದೋಷವುಂಟೆ? ಕಾಣೆನಲ್ಲ! ಹಾಗಾಗಿ, ನನಗೆ ತಿಳಿದ ಹಾಗೆ ಈ ಕಾವ್ಯವನ್ನು ಹೇಳುತ್ತೇನೆ.
ಚಂ|| ವಿಪುಳ ಯಶೋವಿತಾನ ಗುಣಮಿಲ್ಲದನಂ ಪ್ರಭು ಮಾಡಿ ಪೂರ್ವ ಭೂ|
     ಮಿಪರ ಪದಂಗಳಂ ಪುಗಿಸಿ ಪೋಲಿಪೊಡೀತನುದಾತ್ತ ಪೂರ್ವ ಭೂ ||
     ಮಿಪರುಮನೊಳ್ಪಿನೊಳ್ ತಗುಳೆವಂದೊಡೆಯೀ ಕಥೆಯೊಳ್ ತಗುಳ್ಚಿ ಪೋ |
     ಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್ ||೧೪||
(ವಿಪುಳ ಯಶೋವಿತಾನ ಗುಣಂ ಇಲ್ಲದನಂ ಪ್ರಭು ಮಾಡಿ, ಪೂರ್ವ ಭೂಮಿಪರ ಪದಂಗಳಂ ಪುಗಿಸಿ ಪೋಲಿಪೊಡೆ, ಈತನ್ ಉದಾತ್ತ ಪೂರ್ವ ಭೂಮಿಪರುಮನ್ ಒಳ್ಪಿನೊಳ್ ತಗುಳೆ ವಂದೊಡೆ, ಈ ಕಥೆಯೊಳ್ ತಗುಳ್ಚಿ ಪೋಲಿಪೊಡೆ ಎನಗೆ ಅೞ್ತಿಯಾದುದು, ಗುಣಾರ್ಣವ ಭೂಭುಜನಂ ಕಿರೀಟಿಯೊಳ್.)
ಯಾವುದೇ ಗುಣವಾಗಲಿ, ಕೀರ್ತಿಯಾಗಲಿ ಇಲ್ಲದವರನ್ನು ಸಹ ಕೆಲವರು ಹಿಂದೆ ಆಗಿಹೋದ ಮಹಾರಾಜರುಗಳಿಗೆ ಹೋಲಿಸಿಬಿಡುತ್ತಾರೆ! ಆದರೆ ಅರಿಕೇಸರಿಯು ಅಂಥವನಲ್ಲ. ಅವನು ಹಿಂದಿನ ಮಹಾರಾಜರುಗಳನ್ನು ಸಹ ಮೀರಿಸುವಷ್ಟು ಒಳ್ಳೆಯವನು, ಕೀರ್ತಿವಂತ. ಆದ್ದರಿಂದಲೇ ಈ ಕಥೆಯಲ್ಲಿ ಅವನನ್ನು ಅರ್ಜುನನೊಂದಿಗೆ ಹೋಲಿಸಲು ನನಗೆ ಇಷ್ಟವಾಯಿತು.


ಶನಿವಾರ, ಮಾರ್ಚ್ 5, 2016


ಎತ್ತಿನಹೊಳೆ ಕುರಿತ ಬೆಂಗಳೂರು ಸಭೆ: 
ಪಶ್ಚಿಮಘಟ್ಟ ಇನ್ನೂ ಅಪಾಯದತ್ತ?
ಮೊನ್ನೆ ಶನಿವಾರ (ತಾ. 19-02-2016) ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಒಂದು ಸಭೆ ಬೆಂಗಳೂರಿನಲ್ಲಿ ನಡೆಯಿತು. ಹಿಂದಿನ ದಿನ ಈ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ್ದೆ. ಭಾಗವಹಿಸುವ ತಜ್ಞರ ಹೆಸರುಗಳನ್ನು ಕಂಡು, ಅವರೆಲ್ಲ ಏನು ಹೇಳುತ್ತಾರೆನ್ನುವುದನ್ನು ಕೇಳಲೇಬೇಕು ಅನ್ನಿಸಿದ್ದರಿಂದ ಸಭೆಗೆ ನಾನೂ ಹೋದೆ.
ಡಾ. ಮಧುಸೀತಪ್ಪನವರ ಹೆಸರು ಬಯಲುಸೀಮೆಯ "ಶಾಶ್ವತ ನೀರಾವರಿ ಹೋರಾಟ"ಕ್ಕೆ ಬಲವಾಗಿ ತಳುಕು ಹಾಕಿಕೊಂಡಿದೆ. ದ.ಕ.ದ ಭಾಗದಲ್ಲೂ ಎತ್ತಿನಹೊಳೆ ಯೋಜನೆಯ ಕುರಿತ ಹೋರಾಟ, ಅಧ್ಯಯನಗಳಲ್ಲಿ ತೊಡಗಿಕೊಂಡವರಿಗೆ ಅವರ ಹೆಸರು ಪರಿಚಿತವಾದದ್ದು. (ಎತ್ತಿನಹೊಳೆ ಯೋಜನೆಯ ಕುರಿತಂತೆ ಅವರು "ಮತ್ತೆ ಬರ ಬೇಡ" ಹಾಗೂ "ಮತ್ತೆ ದೋಖಾ ಬೇಡ" ಎಂಬ ಎರಡು ಸಿಡಿಗಳನ್ನು ಹೊರತಂದಿದ್ದಾರೆ. ಇವು ಯೋಜನೆಯಲ್ಲಿ ಆಸಕ್ತಿ ಇರುವವರು ಅಗತ್ಯ ನೋಡಬೇಕಾದವು. ಯು ಟ್ಯೂಬಿನಲ್ಲಿ ಲಭ್ಯ). ಈ ಸಭೆ ನಡೆದದ್ದು ಅವರ ಆಸಕ್ತಿಯಿಂದಾಗಿ. ಎತ್ತಿನಹೊಳೆ ಯೋಜನೆಯ ವಿಷಯದಲ್ಲಿ "ಕರ್ನಾಟಕ ನೀರಾವರಿ ವೇದಿಕೆ"  ಹೈಕೋರ್ಟಿಗೆ ಹೋಗಿದೆ. ಅಲ್ಲಿ ಅದರ ಬೇಡಿಕೆಯ ಸಾರಾಂಶ ಇಷ್ಟು: "ಸರಕಾರವು ಬಯಲುಸೀಮೆಯ ಜನರಿಗೆ ಕುಡಿಯುವ ನೀರು ಒದಗಿಸಲೆಂದು ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಯೋಜನೆಯಲ್ಲಿ ಇಪ್ಪತ್ನಾಲ್ಕು ಟಿ ಎಂ ಸಿ ನೀರನ್ನು ಬಯಲುಸೀಮೆಗೆ ಒದಗಿಸುವ ಉದ್ದೇಶವಿದೆ. ಆದರೆ ಅನೇಕ ತಜ್ಞರು ಈ ಯೋಜನೆಯಿಂದ ಇಷ್ಟು ನೀರು ಸಿಗುವುದು ಸಾಧ್ಯವೇ ಇಲ್ಲ; ಹೆಚ್ಚೆಂದರೆ ಎಂಟರಿಂದ ಹತ್ತು ಟಿಎಂಸಿ ನೀರು ಸಿಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯ ಸ್ವರೂಪದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡರೆ ಮಾತ್ರ ಇಪ್ಪತ್ತನಾಲ್ಕು ಟಿ ಎಂ ಸಿ ನೀರನ್ನು ಬಯಲುಸೀಮೆಗೆ ಒದಗಿಸಲು ಸಾಧ್ಯ. ಯಾವ ರೀತಿಯ ಬದಲಾವಣೆಗಳು ಆಗಬೇಕಾಗಿವೆ ಎಂಬುದನ್ನು ನಮ್ಮ ಸಮಿತಿಯು ಅಧ್ಯಯನ ಮಾಡಿ ವರದಿ ತಯಾರಿಸಿದೆ. ನ್ಯಾಯಾಲಯವು ನಾವು ಹೇಳಿರುವ ಬದಲಾವಣೆಗಳನ್ನು ಯೋಜನೆಯಲ್ಲಿ ಅಳವಡಿಸಿಕೊಳ್ಲುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಬೇಕು".
ಅಂದಿನ ಸಭೆಯಲ್ಲಿ ಮುಖ್ಯವಾಗಿ ಈ ಅಂಶದ ಬಗ್ಗೆ ಚರ್ಚೆ ನಡೆದು, ತಮಗೆ ಅನುಕೂಲವಾದ ಅಭಿಪ್ರಾಯ ಮೂಡುವಂತೆ ನೋಡಿಕೊಳ್ಳುವುದು ಬಹುಶಃ ಡಾ. ಮಧುಸೀತಪ್ಪನವರ ಉದ್ದೇಶವಾಗಿತ್ತು. ಆದರೆ ಅವರ ಉದ್ದೇಶ ಭಾಗಶಃ ಸಫಲವಾಯಿತು ಮಾತ್ರ. ಸಭೆಯಲ್ಲಿ ಮುಖ್ಯವಾಗಿ ಚರ್ಚೆ ನಡೆದದ್ದು ಎತ್ತಿನಹೊಳೆ ಯೋಜನೆಯಿಂದ ಸಿಗುವ ನೀರಿನ ಪ್ರಮಾಣದ ಬಗ್ಗೆ ಮತ್ತು ಆ ನೀರನ್ನು ಎತ್ತುವುದರಲ್ಲಿ ಇರುವ ತಾಂತ್ರಿಕ ಸಮಸ್ಯೆಯ ಕುರಿತು. ಈ ಚರ್ಚೆಯಲ್ಲಿ ಹೆಚ್ಚು ಕಡಿಮೆ ಎಲ್ಲ ತಜ್ಞರೂ ಸಕ್ರಿಯವಾಗಿ ಪಾಲುಗೊಂಡರು. ಆದರೆ ಚರ್ಚೆ ಇನ್ನೊಂದಿಷ್ಟು ಗೊಂದಲಗಳನ್ನು ಹುಟ್ಟಿಹಾಕಿತು. ಲಭ್ಯನೀರಿನ ಪ್ರಮಾಣವನ್ನು ನಿರ್ಧರಿಸುವುದು ಅದಕ್ಕೆ ಸಾಧ್ಯವಾಗಲಿಲ್ಲ. ಅಂತಿಮವಾಗಿ, ಚರ್ಚೆಯನ್ನು ಆಸಕ್ತಿಯಿಂದ ಕೇಳುತ್ತ ಕುಳಿತ ನನ್ನಂಥ ಕುತೂಹಲಿಗೆ ಅನ್ನಿಸಿದ್ದಿಷ್ಟು: ಜಲವಿಜ್ಞಾನವೆಂದರೆ ಗಿಳಿಶಾಸ್ತ್ರದಷ್ಟೇ ನಿಖರವಾದ ಒಂದು ಜ್ಞಾನಶಾಖೆ!

ವಿಜೃಂಭಿಸಿದ ಚರ್ಚೆ: ಬಾರದ ಫಲಿತಾಂಶ

ಈ ಯೋಜನೆಯಲ್ಲಿ ಮಳೆಗಾಲದಲ್ಲಿ ಎತ್ತಿನಹೊಳೆ ಪ್ರದೇಶದ ಹಲವು ತೊರೆಗಳಲ್ಲಿ ಬರುವ ಪ್ರವಾಹದ ನೀರನ್ನು  ಬಯಲುಸೀಮೆಗೆ ಸಾಗಿಸುವ ಉದ್ದೇಶವಿದೆ. ಈ ಪ್ರವಾಹದ ನೀರನ್ನು ಹಿಡಿಯಲು ಈಗ ಮಾಡಿರುವ ವ್ಯವಸ್ಥೆ ತಜ್ಞರ ನಡುವೆ ಚರ್ಚೆಗೆ ಬಂತು. ಸರಳವಾಗಿ ಹೇಳಬೇಕೆಂದರೆ, ಮಳೆಗಾಲದಲ್ಲಿ ಈ ಭಾಗದ ಬೆಟ್ಟ ಗುಡ್ಡಗಳಲ್ಲಿ ಬಿದ್ದ ಮಳೆನೀರು ನದಿಗೆ ಹೇಗೆ ಸೇರುತ್ತದೆ ಎಂಬ ಪ್ರಶ್ನೆಗೆ  ಉತ್ತರ ಕಂಡುಕೊಳ್ಳಬೇಕಾಯಿತು. ಚರ್ಚೆ ಶುರುವಾಯಿತು:


ಒಂದನೇ ತಜ್ಞ: ಬೆಟ್ಟಪ್ರದೇಶದಲ್ಲಿ ಮಳೆ ಬಿದ್ದ ಕೂಡಲೇ ತೊರೆಗಳಲ್ಲಿ ನೀರು ಏರುತ್ತದೆ. ಮಳೆ ಇಂತಿಷ್ಟೇ ಹೊತ್ತಿಗೆ ಬರುತ್ತದೆ ಎಂದು ನಿಖರವಾಗಿ ಹೇಳುವಂತಿಲ್ಲ. ಹಾಗಾಗಿ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಬೇಕೇಬೇಕು.
ಎರಡನೇ ತಜ್ಞ(ಇವರು ಯೋಜನೆ ರೂಪಿಸಿದವರು): ಇಲ್ಲ ಇಲ್ಲ. ಹಾಗೇನಿಲ್ಲ. ಪಶ್ಚಿಮಘಟ್ಟದ ಬೆಟ್ಟಗಳಲ್ಲಿ  ಹುಳಗಳು ಕೊರೆದ ಚಿಕ್ಕ ಚಿಕ್ಕ ರಂಧ್ರಗಳೂ, ಮರಗಳು ಬಿದ್ದುಹೋಗಿ ಅವುಗಳ ಬೇರುಗಳು ಕುಂಬಾಗಿ ಉಂಟಾದ ದೋರುಗಳೂ (ಬಿಲಗಳು) ಇರುತ್ತವೆ. ಹಾಗಾಗಿ ಅಲ್ಲಿ ಬಿದ್ದ ಮಳೆ ನೀರು ನಿಧಾನವಾಗಿ ಮೊದಲು ಭೂಮಿಯೊಳಗೆ ಇಂಗುತ್ತದೆ. ಇಂಥ ಭೂಮಿಯ ಪದರದ ದಪ್ಪ ಕೆಲವು ಕಡೆ,(ಮೂರನೆಯ ತಜ್ಞರ ಕಡೆ ತಿರುಗಿ)  ಎಷ್ಟು, ಎಷ್ಟು, ನೀವು ಅಧ್ಯಯನ ಮಾಡಿದವರಲ್ಲವೆ, ಎಷ್ಟಿರಬಹುದು?
ಮೂರನೆಯ ತಜ್ಞ: ಕೆಲವು ಕಡೆ  ಎಪ್ಪತ್ತು ಅಡಿಗಳಷ್ಟು ದಪ್ಪದ ಪದರ  ಇರಬಹುದು. ನಾನು ಇದನ್ನು ಪಶ್ಚಿಮಘಟ್ಟಗಳಲ್ಲಿಯೇ ಇದ್ದು, ಎಷ್ಟೋ ಸಲ ಮಳೆಯಲ್ಲಿ ನೆನೆದುಕೊಂಡೇ,  ಅಧ್ಯಯನ ಮಾಡಿದ್ದೇನೆ
ಒಂದನೆಯ ತಜ್ಞ: ನೀವು ಕೆಲವು ದಿವಸ ಮಳೆಯಲ್ಲಿ ನೆಂದಿರಬಹುದು. ನಾನು ಕೆಪಿಸಿ ಎಂಜಿನಿಯರ್ ಆಗಿ ಗುಂಡ್ಯಪ್ರದೇಶದಲ್ಲಿಯೇ  ಕೆಲಸ ಮಾಡಿದವನು. ಪ್ರತಿದಿನವೂ ಮಳೆಯಲ್ಲಿ ನೆನೆದವನು. ನಾನು ಕಣ್ಣಾರೆ ಕಂಡು ಹೇಳುತ್ತಿದ್ದೇನೆ. ಬೆಟ್ಟದಲ್ಲಿ ಮಳೆ ಬಂದ ಕೂಡಲೇ ತೊರೆಯಲ್ಲಿ ನೆರೆ ಏರುತ್ತದೆ.
ನಾಲ್ಕನೆಯ ತಜ್ಞ: ನಾನು ಅರಣ್ಯಾಧಿಕಾರಿಯಾಗಿ ಪಶ್ಚಿಮಘಟ್ಟಗಳಲ್ಲಿ ಪ್ರತಿದಿನವೂ ಹೊಕ್ಕು ಹೊರಟವನು. ಅಲ್ಲಿನ ಮಣ್ಣಿನ ಸ್ವರೂಪವನ್ನು ಪರೀಕ್ಷೆ ಮಾಡಿಸಿದ್ದೇನೆ. ಅಲ್ಲಿ ಪ್ರತಿ ಅರ್ಧ ಕಿಲೋಮೀಟರಿಗೊಮ್ಮೆ ಮಣ್ಣಿನ ಸ್ವರೂಪ ಬದಲಾಗುತ್ತದೆ. ಇಡೀ ಪಶ್ಚಿಮ ಘಟ್ಟದ ಎಲ್ಲ ಕಡೆಯೂ ಮಣ್ಣಿನ ಸ್ವರೂಪ ಒಂದೇ ರೀತಿ ಇರುತ್ತದೆ, ಎಲ್ಲ ಕಡೆಯಲ್ಲೂ ಮಣ್ಣು ನೀರನ್ನು ಹಿಡಿದಿಡುತ್ತದೆ ಎಂದರೆ ಒಪ್ಪುವುದು ಸಾಧ್ಯವೇ ಇಲ್ಲ. ಇನ್ನು ಮಳೆಯ ವಿಷಯ. ನನ್ನ ಆನೆಗಳಿಗೆ ನಮಗಿಂತ ಈ ವಿಷಯ ಚೆನ್ನಾಗಿ ಗೊತ್ತಿದೆ.
ಎರಡನೇ ತಜ್ಞ (ಕೂಡಲೇ): ಹಾಗಿದ್ದರೆ ಮುಂದಿನ ಸಲ ಆನೆಯನ್ನು ಕೇಳಿ ಯೋಜನೆ ರೂಪಿಸೋಣ!
ನಾಲ್ಕನೆಯ ತಜ್ಞ: (ಗಂಭೀರವಾಗಿ) ಆಗಲಿ ಹಾಗೆಯೇ ಮಾಡೋಣ
(ಎಲ್ಲರೂ ನಕ್ಕರೆಂದು ನೀವು ಭಾವಿಸಬಹುದು. ಹಾಗಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅರಣ್ಯ ತಜ್ಞರು ಸಭೆಯಿಂದ  ಎದ್ದು ಹೋದರು.)
ಚರ್ಚೆ ಮುಂದುವರಿಯಿತು. ಆದರೆ ತೀರ್ಮಾನ ಬರಲಿಲ್ಲ. ಮುಂದೆ? ಮುಂದೇನಿಲ್ಲ! ಲೆಟ್ ಅಸ್ ಅಗ್ರೀ ಟು ಡಿಸ್ ಅಗ್ರೀ! ಒಪ್ಪದಿರಲು ಒಪ್ಪುತ್ತಾರಂತೆ ತಜ್ಞರು! ಹಾಗಿದ್ದರೆ, ಗಿಳಿಶಾಸ್ತ್ರಕ್ಕೂ ಜಲವಿಜ್ಞಾನಕ್ಕೂ ಏನು ವ್ಯತ್ಯಾಸ?
ನಮ್ಮ ತಜ್ಞರು ಮಳೆಗಾಲದಲ್ಲಿ ಯೋಜನಾಸ್ಥಳಕ್ಕೆ ಹೋಗಿ ನಿಂತರೆ, ಸಮಸ್ಯೆ ಪರಿಹಾರವಾಗುತ್ತಿತ್ತೋ ಏನೋ. ಆದರೆ ಅದೆಲ್ಲ ಯಾರಿಗೆ ಬೇಕು? ಪ್ಲಾನು ರೆಡಿ ಆಗಿಬಿಟ್ಟಿದೆ! ಯೋಜನಾ ಸ್ಥಳದಲ್ಲಿ ಪೈಪುಗಳನ್ನು ಹುಗಿದಾಗಿದೆ. ಒಂದೆರಡು ಡ್ಯಾಮು ಕಟ್ಟಿಯೂ ಆಗಿದೆ! ಇನ್ನು ಹಿಂದೆ ಹೋಗುವುದೆಲ್ಲಿಗೆ? ಗಿಳಿಶಾಸ್ತ್ರದ ಲೆಕ್ಕ ಆಧರಿಸಿ, ಕಣ್ಣು ಮುಚ್ಚಿ ಮುಂದುವರಿಯುವುದೇ ಸರಿ. ನೀರು ಬರದಿದ್ದರೆ? ಬರದಿದ್ದರೆ ಅದು ಜನರ ಸಮಸ್ಯೆ, ನಮ್ಮದಲ್ಲ. ನಮ್ಮ ದುಡ್ಡು ಹೇಗೂ ನಮಗೆ ಬಂದಾಗಿದೆ! (ಇಂಥ ಹಲವು ಲೆಕ್ಕಾಚಾರಗಳನ್ನು ಮಾಡಿಕೊಟ್ಟಿರುವುದಕ್ಕೆ, ಅದಕ್ಕೆ ಇದಕ್ಕೆ ಅಂತ ಇ ಐ ಟೆಕ್ನಾಲಜೀಸ್ ಸಂಸ್ಥೆಗೆ ಈವರೆಗೆ ಹತ್ತಿರ ಹತ್ತಿರ ಮೂರೂವರೆ ಕೋಟಿ ರೂ.ಗಳನ್ನು ಕನೀನಿನಿ  ಪಾವತಿಸಿ ಆಗಿದೆ.)

ಲಭ್ಯನೀರಿನ ಪ್ರಮಾಣ: ಲೆಕ್ಕಾಚಾರ ಗೊಂದಲದ ಗೂಡು

ಎತ್ತಿನಹೊಳೆ ಯೋಜನೆಯ ಲಭ್ಯ ನೀರಿನ ಲೆಕ್ಕಾಚಾರ ಮಾಡಿದವರು ಪ್ರೊ. ರಾಮಪ್ರಸಾದ್ ಎಂಬ ಹಿರಿಯರು. ಅವರು ಅಂದಿನ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ತಜ್ಞರಾದ ಪ್ರೊ. ಎಸ್. ಜಿ. ಮಯ್ಯ ಮತ್ತು ಪ್ರೊ. ಯದುಪತಿ ಪುಟ್ಟಿ ಇಬ್ಬರಿಗೂ ಪಿ.ಎಚ್ಡಿಗೆ ಮಾರ್ಗದರ್ಶಕರಾಗಿದ್ದರಂತೆ. ಈ ಗುರು-ಶಿಷ್ಯ ಸಂಬಂಧ ಏನಿದ್ದರೂ, ಇಬ್ಬರು ಶಿಷ್ಯರೂ ಗುರುಗಳು ಮಾಡಿದ ಲೆಕ್ಕಾಚಾರ ತಪ್ಪಾಗಿದೆ ಎಂದು ಹೇಳಲು ಹಿಂಜರಿಯಲಿಲ್ಲ. ಉಳಿದ ಮೂರು ನಾಲ್ಕು ತಜ್ಞರೂ ಪ್ರೊ. ರಾಮಪ್ರಸಾದರ ಲೆಕ್ಕಾಚಾರದ ಬಗ್ಗೆ ಅನುಮಾನವನ್ನೇ ವ್ಯಕ್ತಪಡಿಸಿದರು. ಕೊನೆಯಲ್ಲಿ ಎಲ್ಲರ ಸಂದೇಹಗಳಿಗೆ ಉತ್ತರಿಸಲು ನಿಂತ ಪ್ರೊ. ರಾಮಪ್ರಸಾದರು "ನೀವೆಲ್ಲರೂ ನನ್ನ ಲೆಕ್ಕಾಚಾರದಲ್ಲಿ ತಪ್ಪಿದೆ ಎನ್ನುತ್ತಿದ್ದೀರಿ. ಇದು ನನಗೆ ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಸಿಕ್ಕ ಮೊದಲ ಅವಕಾಶ. ಯೋಜನೆಯಿಂದ ಇಪ್ಪತ್ನಾಲ್ಕು ಟಿಎಂಸಿ ನೀರು ಸಿಗುತ್ತದೆ ಎಂದು ಬರೆದರೆ ಯಾವ ಪತ್ರಿಕೆಯವರೂ ಪ್ರಕಟಿಸುವುದಿಲ್ಲ. ಎಂಟು ಟಿಎಂಸಿ ಸಿಗುತ್ತದೆ ಎಂದು ಬರೆದರೆ ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸುತ್ತವೆ" ಎಂದು ತಮ್ಮ ಅಸಮಾಧಾನ  ತೋಡಿಕೊಂಡರು.
"ನೀವು ಪತ್ರಿಕೆಗಳಿಗೆ ಕಾದಿದ್ದೇಕೆ? ನಿಮ್ಮದೇ ಬ್ಲಾಗಿನಲ್ಲಿ ಲೇಖನಗಳನ್ನು ಬರೆದು ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳಬಹುದಿತ್ತಲ್ಲ?" ಎಂದು ನಾನು ಆಕ್ಷೇಪಿಸಿದೆ. ಆದರೆ ಹಿರಿಯರ ಹತ್ತಿರ ಹಾಗೆಲ್ಲ ಮಾತಾಡುವುದು ಮಹಾಪ್ರಮಾದ ಎಂಬಂತೆ ಉಳಿದ ತಜ್ಞರು ಪ್ರೊಫೆಸರರ ರಕ್ಷಣೆಗೆ ನಿಂತರು. ನಾನು ಸುಮ್ಮನಾದೆ.
ಎತ್ತಿನಹೊಳೆ ಯೋಜನೆಯಿಂದ ಲಭ್ಯವಾಗುವ ನೀರಿನ ಪ್ರಮಾಣದ ಕುರಿತಂತೆ,ಇನ್ನಿತರ ಹಲವು ಅಂಶಗಳಿಗೆ ಸಂಬಂಧಿಸಿದಂತೆ ಅನೇಕ ತಜ್ಞರು ವ್ಯಕ್ತಪಡಿಸಿದ ಅನುಮಾನಗಳಿಗೆ ಆಗಿಂದಾಗ ಉತ್ತರ ಕೊಡಬೇಕಾದ ನೇರ ಜವಾಬ್ದಾರಿ ಇರುವ  ಪ್ರೊ. ರಾಮಪ್ರಸಾದರು ಈವರೆಗೂ ಸಾರ್ವಜನಿಕವಾಗಿ ತುಟಿ ಪಿಟಕ್ ಅಂದದ್ದು ನಾನು ಕಂಡಿಲ್ಲ. ನಿಜವಾಗಿ, ಇ ಐ ಟೆಕ್ನಾಲಜೀಸ್ ಪರವಾಗಿ ಈ ಲೆಕ್ಕಾಚಾರವನ್ನು ಮಾಡಿದ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳಲು ಸಹ ನಾನು ಬಹಳ ಪ್ರಯತ್ನ ಮಾಡಬೇಕಾಯಿತು. ಡಾ. ಮಧು ಸೀತಪ್ಪನವರಲ್ಲದಿದ್ದರೆ, ಪ್ರೊ. ರಾಮಪ್ರಸಾದರು ಈಗಲಾದರೂ ಸಾರ್ವಜನಿಕ ವೇದಿಕೆಗೆ ಬರುತ್ತಿದ್ದರೇ ಎಂಬ ಅನುಮಾನ ನನಗೆ ಈಗಲೂ ಇದೆ. (ಈ ಸಭೆಗೂ ಇ ಐ ಟೆಕ್ನಾಲಜೀಸ್ ಸಂಸ್ಥೆಯಿಂದ ಅಧಿಕೃತವಾಗಿ ಯಾವ ಪ್ರತಿನಿಧಿಯೂ ಬಂದದ್ದು ನನ್ನ ಗಮನಕ್ಕೆ ಬರಲಿಲ್ಲ. ಆ ಕಂಪೆನಿ ಬಹು ಬುದ್ಧಿವಂತಿಕೆಯಿಂದ ತೆರೆಯ ಹಿಂದೆಯೇ ಉಳಿದುಕೊಳ್ಳುವಲ್ಲಿ ಈವರೆಗೂ ಯಶಸ್ವಿಯಾಗಿದೆ).
ಪ್ರೊ. ರಾಮಪ್ರಸಾದರು ತಮ್ಮ ಲೆಕ್ಕಾಚಾರಗಳನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದಾಗ ತಜ್ಞರಿಂದ ಮತ್ತೆ ಮತ್ತೆ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ತೀರ ಇಕ್ಕಟ್ಟಿಗೆ ಸಿಕ್ಕಿದಾಗ ಅವರು "ಅದು ನನ್ನ ಅಭಿಪ್ರಾಯ, ನಿಮ್ಮ ಅಭಿಪ್ರಾಯ ಬೇರೆ ಇರಬಹುದು" ಎಂಬ ಉತ್ತರ ನೀಡಿ ಜಾರಿಕೊಂಡರು. ಹಾಗಾದರೆ ಇದೇನು ವೈಜ್ಞಾನಿಕ ಲೆಕ್ಕಾಚಾರದ ಫಲಿತಾಂಶಗಳನ್ನು ಆಧರಿಸಿದ ಯೋಜನೆಯೆ  ಅಥವ ಆಚಾರ್ಯರ ಮಾಯಾವಾದವೆ ಎಂಬ ಪ್ರಶ್ನೆ ನನ್ನ ಮನಸ್ಸಿಗೆ ಬಂತು!

ಕೇಂದ್ರೀಯ ಜಲ ಆಯೋಗದ ನೀರಿನ ಅಳತೆಯ ಅಂಕಿಸಂಖ್ಯೆ: ಸಂಶಯಗಳು

















ಪ್ರೊ. ರಾಮಪ್ರಸಾದರು ಲಭ್ಯನೀರಿನ ಪ್ರಮಾಣವನ್ನು ಬಂಟ್ವಾಳದ ನೇತ್ರಾವತಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಆಧರಿಸಿ ಲೆಕ್ಕ ಮಾಡಿದ್ದೇನೆ ಎಂದರು. (ಹೀಗೆ ಲೆಕ್ಕಾಚಾರ ಮಾಡಿರುವುದು ಸರಿಯಲ್ಲ ಎಂದ ಕೇಂದ್ರೀಯ ಜಲ ಆಯೋಗ ಹೇಳಿದೆಯಂತೆ.) ಬೆಟ್ಟದ ಮೇಲೆ ಬೀಳುವ ಮಳೆ ತೊರೆಗಳಲ್ಲಿ  ಪ್ರವಾಹವಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯನ್ನೇ ಸರಿಯಾಗಿ ವಿವರಿಸಲು ಬಾರದವರು, ಹತ್ತಿರ ಹತ್ತಿರ ನೂರು ಕಿ.ಮೀ. ದೂರದಲ್ಲಿರುವ ಬಂಟ್ವಾಳದ ನೇತ್ರಾವತಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಆಧರಿಸಿ ಎತ್ತಿನಹೊಳೆಯ ಎಂಟು ಅಣೆಕಟ್ಟುಗಳಲ್ಲಿ ದೊರೆಯುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕುತ್ತಾರೆಂದರೆ ಆ ಲೆಕ್ಕಾಚಾರವನ್ನು ಯಾರಾದರೂ ನಂಬಲು ಸಾಧ್ಯವೆ?
ಇತ್ತ, ನೇತ್ರಾವತಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಲು ಸಹ ಅನೇಕ ವಿಧಾನಗಳೂ, ಸೂತ್ರಗಳೂ ಇರುವುದು ಸಾಧ್ಯ. ಮುಖ್ಯವಾಗಿ ಅಳೆಯುವ ಸಾಧನಗಳಲ್ಲಿ ಕಾಲಕ್ಕನುಗುಣವಾಗಿ ಗಣನೀಯ ಬದಲಾವಣೆಯಾಗಿರುವುದು ಖಚಿತ. ಈಗ ನೀರಳೆಯಲು ಡಿಜಿಟಲ್ ಮೀಟರುಗಳೂ, ವಿಧಾನಗಳೂ ಬಂದಿರಬಹುದು. ಬಂಟ್ವಾಳದಲ್ಲಿ ನೀರಳೆಯಲು ಇರುವುದು ಸರಕಾರಿ ವ್ಯವಸ್ಥೆ.  ಅಲ್ಲಿ ಯಾವ ಓಬೀರಾಯನ ಕಾಲದ ವಿಧಾನವನ್ನೂ, ಸಾಧನವನ್ನೂ ಬಳಸುತ್ತಿದ್ದಾರೋ ಯಾರಿಗೆ ಗೊತ್ತು? ಅದರ ನಿಖರತೆಯೇ ಪ್ರಶ್ನಾರ್ಹವಲ್ಲವೆ? ನಾನು ಅನಧಿಕೃತ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಇಲ್ಲಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ನಿಖರವಾಗಿ  ಲೆಕ್ಕ ಮಾಡಲು ಕನಿಷ್ಠ ಇಪ್ಪತ್ತೈದರಿಂದ ಮೂವತ್ತು ಜನ ಸಿಬ್ಬಂದಿ ಬೇಕಾಗುತ್ತದಂತೆ. ಈಗ ಅಲ್ಲಿ ಹೆಚ್ಚೆಂದರೆ ಐದು ಜನ ಇರಬಹುದು.
ಕರ್ನಾಟಕ ಸರಕಾರದ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಎತ್ತಿನಹೊಳೆ ಪ್ರದೇಶದಲ್ಲಿ ಹಲವು ವರ್ಷಗಳಿಂದ ನದಿ ಮಾಪನ ಮಾಡುತ್ತಿದೆಯಂತೆ. ಈ ಮಾಪನದ ಅಂಕಿಸಂಖ್ಯೆಗಳು ಸರಿ ಇಲ್ಲದಿರುವುದರಿಂದ  ಅದನ್ನು ಲೆಕ್ಕಾಚಾರಕ್ಕೆ ಪರಿಗಣಿಸಲಾಗಿಲ್ಲ ಎಂದು ಜಲ ಸಂಪನ್ಮೂಲ ಇಲಾಖೆಯ ಹೇಳಿಕೆ. ಈ ಅಂಕಿಸಂಖ್ಯೆಗಳು ಯಾಕೆ ಸರಿ ಇಲ್ಲ? ಮಾಪಕ ಯಂತ್ರದ ಸಮಸ್ಯೆಯೆ? ಮಾಪನ ಮಾಡುವವರ ಸಮಸ್ಯೆಯೆ? ಅಥವಾ ಆ ಅಂಕಿಸಂಖ್ಯೆಗಳು ತಮಗೆ ಬೇಕಾದ ಹಾಗಿಲ್ಲ ಎಂಬ ಸಮಸ್ಯೆಯೆ?
ಪ್ರೊ. ರಾಮಪ್ರಸಾದ್ ಅವರು ತಮ್ಮ  ಈ ಅಂಕಿ ಸಂಖ್ಯೆಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಬಂಟ್ವಾಳದಲ್ಲಿರುವ ಕೇಂದ್ರೀಯ ಜಲ ಆಯೋಗದ ಕಛೇರಿಗೆ ಭೇಟಿ ಕೊಟ್ಟಿದ್ದರೆ ಅಥವಾ ಅಂತರ್ಜಾಲದಲ್ಲೋ ಇನ್ನೆಲ್ಲೋ ಸಿಕ್ಕ ಆಯೋಗದ ಮಾಹಿತಿಗಳನ್ನು ನೇರವಾಗಿ ಬಳಸಿಕೊಂಡರೆ ಎಂಬ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಏಕೆಂದರೆ, ತಾನು ಮಾಡುವ ಕೆಲಸದ ಬಗ್ಗೆ ನಿಜವಾದ ಕಾಳಜಿ ಇರುವ ಯಾರೇ ಆದರೂ, ಅಂಕಿ ಸಂಖ್ಯೆಗಳನ್ನು ಬಳಸಿಕೊಳ್ಳುವ ಮೊದಲು  ನೀರನ್ನು ಅಳೆಯುವ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಯಾವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ, ವ್ಯವಸ್ಥೆ ಹೇಗಿದೆ, ಮಾಪಕ ಯಂತ್ರಗಳ ಸ್ಥಿತಿ ಹೇಗಿದೆ  ಎಂಬುದನ್ನು ಪರಿಶೀಲಿಸಿಯೇ ಮುಂದುವರಿಯಬೇಕಾಗುತ್ತದೆ.

ಪ್ರೊ. ಟಿ ವಿ ರಾಮಚಂದ್ರರಿಗೆ ಅನುಭವ ಕಡಿಮೆ!

ಪ್ರೊ. ಟಿ ವಿ. ರಾಮಚಂದ್ರರ ಲೆಕ್ಕಾಚಾರದ ಕುರಿತೂ ಸಭೆಯಲ್ಲಿ ಪ್ರಸ್ತಾವ ಬಂತು. ಆಗ ಪ್ರೊ. ರಾಮಪ್ರಸಾದರು "ಈ ಸಭೆಯಲ್ಲಿ ಪ್ರೊ. ಟಿ. ವಿ. ರಾಮಚಂದ್ರ ಅವರೂ ಭಾಗವಹಿಸಿದ್ದರೆ ಚೆನ್ನಾಗಿತ್ತು. ಅವರಿಲ್ಲದಿರುವಾಗ ನಾನು ಅವರ ಲೆಕ್ಕಾಚಾರವನ್ನು ಟೀಕಿಸುವುದು ಸರಿಯಲ್ಲ. ಆದರೂ ನಾನು ಹೇಳದೆ ಇರುವಂತಿಲ್ಲ. ಪ್ರೊ. ರಾಮಚಂದ್ರರಿಗೆ ಜಲವಿಜ್ಞಾನದ ವಿಷಯದಲ್ಲಿ ಅನುಭವ ಕಡಿಮೆ" ಎಂದು ಹೇಳಿ ಪ್ರೊ. ರಾಮಚಂದ್ರರ ಲೆಕ್ಕಾಚಾರದ ದಾಖಲೆಗಳಿಂದ ಯಾವುದೋ ಒಂದು ನಿರ್ದಿಷ್ಟ ಕಾಲಮ್ಮನ್ನು ಪವರ್ ಪಾಯಿಂಟಿನಲ್ಲಿ ತೋರಿಸಿ, ಈ ಸಂಖ್ಯೆಗಳನ್ನು ನೋಡಿ, ಇದು ಹೀಗೆ ಎಲ್ಲಾದರು ಇರುವುದು ಸಾಧ್ಯವೇ? ಎಂದು ಹೇಳಿ ಜೋರಾಗಿಯೇ ನಕ್ಕರು. ಈ ಅಂಕಿಸಂಖ್ಯೆಗಳು ನನಗೆ ಅರ್ಥವಾಗುವಂತಿರಲಿಲ್ಲ. ಆದರೆ ಅವು ನೀರಿನ ಆವಿಯಾಗುವ ಪ್ರಮಾಣಕ್ಕೆ ಸಂಬಂಧಿಸಿದವು ಎಂದು ಊಹಿಸುತ್ತೇನೆ. (ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಟಿ ವಿ  ರಾಮಚಂದ್ರ ಅವರು ಈ ಯೋಜನೆಯನ್ನು ಕಟುವಾಗಿ ಟೀಕಿಸಿದ್ದರು. ಹಾಗಾಗಿ ಕನೀನಿನಿ ಲಕ್ಷಾಂತರ ರೂಪಾಯಿಗಳನ್ನು ಪತ್ರಿಕೆಗಳಲ್ಲಿ ಅದರ ವಿರುದ್ಧದ ಜಾಹೀರಾತು ಕೊಡಲು ಖರ್ಚು ಮಾಡಬೇಕಾಯಿತು.)

ಎತ್ತಿನಹೊಳೆ: ಪ್ರೊ. ರಾಮಪ್ರಸಾದರ ಮಮಕಾರ

ಈ ಯೋಜನೆ ಯಾವ ಕಾರಣಕ್ಕೂ ನಿಲ್ಲಕೂಡದು ಎಂಬ ಬಗ್ಗೆ ಪ್ರೊ. ರಾಮಪ್ರಸಾದರಿಗೆ  ತೀವ್ರವಾದ ಕಾಳಜಿ ಇತ್ತೆಂಬುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತಿತ್ತು.  ಚರ್ಚೆಯ ನಡುವೆ ಅವರು "ದಿ ಪ್ರಾಜೆಕ್ಟ್ ಶುಡ್ ನಾಟ್ ಸ್ಟಾಲ್" ಎಂದು ತಮ್ಮ ಕಾಳಜಿಯನ್ನು ತೋರಿಸಿಕೊಂಡರು. ಶ್ರೀ ಎಸ್. ಜಿ. ಮಯ್ಯರು ನೇತ್ರಾವತಿ ನದಿ ಪ್ರಾಧಿಕಾರದ ಪ್ರಸ್ತಾವನೆ ಮುಂದಿಟ್ಟಾಗ, "ಅದಕ್ಕೆ ನನ್ನ ಆಕ್ಷೇಪಣೆ ಏನೂ ಇಲ್ಲ. ಆದರೆ, ಎತ್ತಿನಹೊಳೆ ಯೋಜನೆ ಆ ಪ್ರಾಧಿಕಾರದ ವ್ಯಾಪ್ತಿಗೆ ಬರಬಾರದು" ಎಂದರು. ನೇತ್ರಾವತಿ ನದಿ ಪ್ರಾಧಿಕಾರದ ವ್ಯಾಪ್ತಿಗೆ ಅದರ ಉಪನದಿಗಳೇ ಬರಬಾರದೆಂಬ ಅವರ ಕಾಳಜಿಯ ಹಿನ್ನೆಲೆ ಏನು?

ಶಶಿಧರ ಶೆಟ್ಟರ ಪ್ರಶ್ನೆ: ಉತ್ತರಿಸುವ ಜವಾಬ್ದಾರಿ ಯಾರಿಗೂ ಬೇಡ!

ಇಲ್ಲಿಯೇ ನಮ್ಮ ಶಶಿಧರ ಶೆಟ್ಟರ ಪ್ರಶ್ನೆಯ ಮಹತ್ವ ಇರುವುದು. ಅವರ ಪ್ರಶ್ನೆ ಇದು: "ಒಂದುವೇಳೆ ಈ ಯೋಜನೆ ವಿಫಲವಾದರೆ, ಅದಕ್ಕೆ ಖರ್ಚಾದ ಹಣವನ್ನು ಹಿಂದೆ ಕೊಡುತ್ತೇವೆ ಎಂದು ಒಂದು ಸಾವಿರ ರೂ. ಸ್ಟಾಂಪ್ ಪೇಪರ್ ಮೇಲೆ ಬರೆದುಕೊಡಲು ನೀವು ಯಾರಾದರೂ ಸಿದ್ಧರಿದ್ದೀರಾ?" ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ, ಯಾವುದೇ ಪೂರ್ವತಯಾರಿಯೂ ಇಲ್ಲದೆ,  ತುಂಬಾ ಗಡಿಬಿಡಿಯಲ್ಲಿ ನಡೆದ ಸಭೆಯಲ್ಲೂ ಅವರು ಈ ಪ್ರಶ್ನೆ ಕೇಳಿದ್ದರು. ಅಲ್ಲಿ ಅವರ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿರಲಿಲ್ಲ. ಇಲ್ಲಿಯೂ ಯಾರೂ ಉತ್ತರಿಸಲಿಲ್ಲ. ಕನೀನಿನಿಯ ಮುಖ್ಯ ಎಂಜಿನಿಯರ್ "ನಮ್ಮ ಯೋಜನೆಗಳು ವಿಫಲವಾದ ಉದಾಹರಣೆ ಇಲ್ಲ" ಎಂದರು. ಕೂಡಲೇ ಕೆ. ಎನ್. ಸೋಮಶೇಖರ್ ಕೈಯಲ್ಲಿದ್ದ ದಾಖಲೆಗಳನ್ನು ತೋರಿಸುತ್ತಾ "ನಿಮ್ಮ ಜಲಸಂಪನ್ಮೂಲ ಇಲಾಖೆಯ ವಾರ್ಷಿಕ ವರದಿಯಲ್ಲೇ ನೀವು ಕೈಗೊಂಡಿರುವ 175 ಯೋಜನೆಗಳು ವಿಫಲಗೊಂಡಿರುವುದಕ್ಕೆ ಆಧಾರವಿದೆಯಲ್ಲ?" ಎಂದು ಎದ್ದು ನಿಂತರು. ಮುಖ್ಯ ಎಂಜಿನಿಯರ್ ನಿರುತ್ತರರಾದರು.

ಉಪ್ಪಿನಂಗಡಿಯಲ್ಲಿ ಹೊಸತೊಂದು ಅಣೆಕಟ್ಟು ಕಟ್ಟಿ ಅದರಿಂದ ಅಥವಾ ತುಂಬೆ ಅಣೆಕಟ್ಟಿನಿಂದ ನೀರು ತೆಗೆದುಕೊಂಡು ಹೋಗಲು ತಮ್ಮದೇನೂ ಅಡ್ಡಿ ಇಲ್ಲವೆಂದು ದ.ಕ.ದವರ ಒಟ್ಟಭಿಪ್ರಾಯ ಬಂತು. ಆದರೆ ಈ ವಿಷಯದಲ್ಲಿ ನನಗೆ ಸಹಮತವಿಲ್ಲ. ಅಲ್ಲಲ್ಲಿನ ನೀರಿನ ಸಮಸ್ಯೆ ಅಲ್ಲಲ್ಲಿಯೇ ಪರಿಹಾರವಾಗಬೇಕು ಎಂಬುದು ನನ್ನ ಖಚಿತ ಅಭಿಪ್ರಾಯ.

ಸಭೆಯ ಕೊನೆಯಲ್ಲಿ ಡಾ. ಮಧು ಸೀತಪ್ಪನವರು ತಮ್ಮ ಯೋಜನೆಯನ್ನು ವಿವರಿಸಿ ಅದಕ್ಕೆ ತಜ್ಞರ ಅಭಿಪ್ರಾಯವನ್ನು ಕೋರಿದರು. ಎಸ್. ಜಿ. ಮಯ್ಯರು ಸ್ಪಷ್ಟವಾಗಿ "ನಾವು ಎತ್ತಿನಹೊಳೆ ಯೋಜನೆಯನ್ನೇ ವಿರೋಧಿಸುವವರು. ಇನ್ನು ಅದನ್ನು ವಿಸ್ತರಿಸುವ ಯೋಜನೆಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ" ಎಂದರು. ದ.ಕ.ದಿಂದ ಹೋದ ಎಲ್ಲರೂ ಅವರನ್ನು
 ಬೆಂಬಲಿಸಿದರು. ಉಳಿದ ತಜ್ಞರಲ್ಲಿ ಕೆಲವರು ಮಧು ಸೀತಪ್ಪನವರ ಹೊಸ ಯೋಜನೆಯನ್ನು ಬೆಂಬಲಿಸಿದರು. ಇಲ್ಲಿ ಏನು ನಡೆಯಿತೆಂಬುದರ ಪ್ರಾಮಾಣಿಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಡಾ. ಮಧು ಸೀತಪ್ಪನವರು ಸೇರಿದ ಎಲ್ಲರಿಗೂ ಮಾತು ಕೊಟ್ಟರು.
(ಈ ಇಡೀ ಕಾರ್ಯಕ್ರಮ ವೀಡಿಯೋ ಚಿತ್ರೀಕರಣವಾಗಿದೆ.)