ಮಂಗಳವಾರ, ಮಾರ್ಚ್ 8, 2011

ನೇತ್ರಾವತಿ ತಿರುವು ಯೋಜನೆ: ತಕ್ಷಣಕ್ಕೆ ಅನ್ನಿಸಿದ್ದು:


ನೇತ್ರಾವತಿ ತಿರುವು ಯೋಜನೆಗೆ ಮತ್ತೆ ಜೀವ ಬಂದಿದೆ. ಈ ಯೋಜನೆಯನ್ನು ಜಾರಿಗೆ ಕೊಡುವ ಮೊದಲು ನಮ್ಮ ಸರಕಾರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು:
ಈ ಯೋಜನೆ ತುಮಕೂರು, ಕೋಲಾರ, ಚಿತ್ರದುರ್ಗ, ರಾಮನಗರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ. ಹಾಗಿದ್ದರೆ,
೧. ಈ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ಯಾವಾಗಿನಿಂದ ಪ್ರಾರಂಭವಾಯಿತು?
೨, ಅಭಾವ ಉಂಟಾಗಲು ಕಾರಣಗಳೇನು?
೩. ಸಮಸ್ಯೆಯನ್ನು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳುವುದು ಸಾಧ್ಯವೇ?
೪. ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಮಾಡಿರುವ ಪ್ರಯತ್ನಗಳು ಯಾವುವು? ಅವುಗಳು ಫಲ ಕೊಟ್ಟಿಲ್ಲವೇ? ಯಾಕೆ?
೫. ಸಮಸ್ಯೆಯ ಪರಿಹಾರ ಹೇಗೆ?
ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಮೊದಲು ಕಂಡುಕೊಳ್ಳಬೇಕು. ಈ ಅಧ್ಯಯನದ ನಂತರವೂ ಹೊರಗಿನಿಂದ ನೀರು ತರುವುದು ಅನಿವಾರ್ಯ ಎಂದಾದರೆ ಮಾತ್ರ ಆ ಪ್ರಯತ್ನಕ್ಕೆ ಕೈ ಹಾಕಬಹುದು.
ಹಿಂದೊಬ್ಬಳು ಮುದುಕಿ ಇದ್ದಳಂತೆ. ಮನೆಯೊಳಗೆ ಸೂಜಿ ಕಳೆದುಕೊಂಡು, ಒಳಗೆ ಕತ್ತಲು, ಹೊರಗೆ ಬೆಳಕಿದೆ ಎಂದು, ಅಂಗಳಕ್ಕೆ ಬಂದು ಸೂಜಿ ಹುಡುಕಿದವಳು. ನಮ್ಮ ಕಥೆಯೂ ಹಂಗಾಗಬಾರದು. ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲಿ ಹುಡುಕೋಣ. ಸಿಗುವುದು ಸಾಧ್ಯ, ಸಿಗುತ್ತದೆ.
ಒಂದು ಉದಾಹರಣೆ: ಬೆಂಗಳೂರಿನಲ್ಲಿ ವೃಷಭಾವತಿ ಎಂಬ ನದಿ ಇತ್ತಂತೆ. ಅದೀಗ ದೊಡ್ಡ ಚರಂಡಿಯಾಗಿದೆ. ಒಂದು ಕಾಲಕ್ಕೆ (ಬಹಳ ಹಿಂದೇನೂ ಅಲ್ಲ. ಬಹುಶಃ ಐವತ್ತು ವರ್ಷಗಳ ಹಿಂದೆ) ಕುಡಿಯುವ ಸಿಹಿನೀರು ಕೊಡುತ್ತಿದ್ದ ನದಿ ಇಂದು ಕೊಳಚೆ ಹರಿಯುವ ಚರಂಡಿಯಾಗಿದ್ದರೆ, ಅದಕ್ಕೆ ನಾವೇ ಹೊಣೆ. ನಮ್ಮ ಮೊದಲ ಕರ್ತವ್ಯ ಆ ಚರಂಡಿಯನ್ನು ಹಿಂದೆ ಇದ್ದ ನದಿಯಾಗಿ ಪರಿವರ್ತಿಸುವುದು. ಬೆಂಗಳೂರಿನ ಕೆರೆಗಳ ನೀರನ್ನು ಕುಡಿಯಲಾಗದಂತೆ ಮಲಿನ ಮಾಡಿ, ಅಲ್ಲಿ ದೋಣಿಯಾಟವಾಡಿ ಮಜಾ ಮಾಡುವ, ಕೆರೆಯಂಗಳವನ್ನು ಕ್ರಿಕೆಟ್ ಮೈದಾನ ಮಾಡಿ ಹಗಲೂ ರಾತ್ರಿ ಕ್ರಿಕೆಟ್ ನಶೆಯಲ್ಲಿ ಮುಳುಗಿರುವ ಪಾಪಿಗಳು ನಾವು. ಅದಕ್ಕೆ ಪ್ರಾಯಶ್ಚಿತ್ತವನ್ನೂ ನಾವೇ ಮಾಡಿಕೊಳ್ಳಬೇಕು. ಈ ಮಾತು ಮೇಲೆ ಹೇಳಿದ ಎಲ್ಲ ಜಿಲ್ಲೆಗಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದುಕೊಂಡಿದ್ದೇನೆ.

ಶನಿವಾರ, ಫೆಬ್ರವರಿ 26, 2011

ಎಸ್ ಇ ಜಡ್ ಕಂಪೆನಿ ಹೈಕೋರ್ಟಿಗೆ ಹೋದದ್ದರ ಒಳಗುಟ್ಟೇನು?

"ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ" ಎಂದು ಕರ್ನಾಟಕ ಮಾಹಿತಿ ಆಯೋಗ ನೀಡಿದ ತೀರ್ಪನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟಿಗೆ ಹೋಗಿದೆಯಷ್ಟೆ? ಇದರ ಒಳಗುಟ್ಟೇನು?
ಕೆಲವು ಸಮಯದಿಂದಲೂ ವಿದ್ಯಾ ಮೇಡಂ (ವಿದ್ಯಾ ದಿನಕರ್) "ಏನೋ ಗುಟ್ಟು ಇರಬೇಕು" ಎಂದು ಅನುಮಾನಿಸುತ್ತಲೇ ಇದ್ದರು. ಕಂಪೆನಿ ಹೈಕೋರ್ಟಿಗೆ ಹೋದರೂ ಹೋಗಬಹುದು ಎಂಬ ಅನುಮಾನ, ಆಯೋಗ ನಿರ್ದೇಶಿಸಿದ ಅವಧಿದೊಳಗೆ ಮಾಹಿತಿ ಸಿಗದಿದ್ದಾಗ, ನನಗೂ ಬಂದಿತ್ತು.
ನಾನು ಕೇಳಿದ ಮಾಹಿತಿ ನೀರಿಗೆ ಸಂಬಂಧಿಸಿದ್ದು. ಬಂಟ್ವಾಳ ತಾ. ಶಂಬೂರಿನಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟಿ, ಆ ನೀರಿನಿಂದ ಎ ಎಂ ಆರ್ ಕಂಪೆನಿ ಜಲವಿದ್ಯುತ್ತನ್ನು ತಯಾರಿಸುತ್ತಿದೆ. ಇದೇ ಆಣೆಕಟ್ಟಿನಿಂದ ನೀರನ್ನು ಸಾಗಿಸಲು ತಾನು ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್ ಇ ಜಡ್ ಕಂಪೆನಿ ನನಗೆ ತಿಳಿಸಿತ್ತು. ಆ ಒಪ್ಪಂದದ ಪ್ರತಿಯನ್ನು ಕೊಡುವಂತೆ ನಾನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದೆ. ಕಂಪೆನಿ ನನಗೆ ಒಪ್ಪಂದದ ಪ್ರತಿ ಕೊಡಲಿಲ್ಲ. ಈಗ ಹೈಕೋರ್ಟ್ ಎದುರಿಗೆ ಇರುವುದು ಇದೇ ವಿವಾದ.
ನೋಡೋಣ ಎಂದು ಮೊನ್ನೆ ನಾನು ಮತ್ತೊಂದು ಕಡೆಯಿಂದ ಒಂದು ಪ್ರಯತ್ನ ಮಾಡಿದೆ. ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾ.ನಿ. ಎಂಜಿನಿಯರ್ ರವರ ಕಛೇರಿಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿ, ಮೂರು ಮಾಹಿತಿಗಳನ್ನು ಕೇಳಿದೆ:
೧. ಎಸ್ ಇ ಜಡ್ ಕಂಪೆನಿಗೆ ತನ್ನ ಆಣೆಕಟ್ಟಿನಿಂದ ನೀರು ಒದಗಿಸಲು ಎ ಎಂ ಆರ್ ಕಂಪೆನಿಗೆ ಅನುಮತಿ ನೀಡಲಾಗಿದೆಯೆ?
೨. ಎ ಎಂ ಆರ್ ಕಂಪೆನಿಯ ಆಣೆಕಟ್ಟಿನಿಂದ ನೀರು ಪಡೆಯಲು ಎಸ್ ಇ ಜಡ್ ಕಂಪೆನಿಗೆ ಅನುಮತಿ ನೀಡಲಾಗಿದೆಯೆ?
೩. ಒಂದು ವೇಳೆ ಅನುಮತಿ ನೀಡಿದ್ದರೆ, ಆ ಎರಡೂ ಕಂಪೆನಿಗಳ ನಡುವೆ ಈ ಬಗ್ಗೆ ಆಗಿರುವ ಒಪ್ಪಂದವನ್ನು ನೀವು ಅಂಗೀಕರಿಸಿದ್ದೀರಾ? ಆ ಒಪ್ಪಂದದ ಪ್ರತಿ.
25-02-2011ರಂದು ಅವರಿಂದ ಹೀಗೆ ಉತ್ತರ ಬಂದಿದೆ:
"..... ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿ ಎ.ಎಂ.ಆರ್. ಕಂಪೆನಿಗೆ ಅದರ ಆಣೆಕಟ್ಟಿನಿಂದ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು ಸರಬರಾಜು ಮಾಡಲು ಮತ್ತು ವಿಶೇಷ ಆರ್ಥಿಕ ವಲಯಕ್ಕೆ ಎ. ಎಂ. ಆರ್. ಕಂಪೆನಿಯ ಆಣೆಕಟ್ಟಿನಿಂದ ನೀರು ಪಡೆದುಕೊಳ್ಳಲು ಈ ವಿಭಾಗದಿಂದ ಅನುಮತಿ ನೀಡಿರುವುದಿಲ್ಲ. ಹಾಗೂ ಈ ಕುರಿತು ಯಾವುದೇ ಒಪ್ಪಂದವನ್ನು ಈ ವಿಭಾಗದಿಂದ ಮಾಡಿರುವುದಿಲ್ಲ"
ಎಂದರೆ ಎಸ್ ಇ ಜಡ್ ಕಂಪೆನಿ ನನಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾವಿಸಿರುವ ಒಪ್ಪಂದವು ನಿಜವಾಗಿ ಅಸ್ತಿತ್ವದಲ್ಲಿಯೇ ಇಲ್ಲವೆ? ( ಈ ನಡುವೆ ಎ. ಎಂ. ಆರ್. ಕಂಪೆನಿಯನ್ನು ಜರ್ಮನ್ ಮೂಲದ ಗ್ರೀನ್ ಕೇರ್ ಕಂಪೆನಿಗೆ ಮಾರಲಾಗಿದೆ ಎಂಬ ಸುದ್ದಿಯೂ ಇದೆ. ಆದರೆ ಆ ವಿಷಯ ನನಗೆ ಖಚಿತವಾಗಿ ಗೊತ್ತಿಲ್ಲ.) ಒಪ್ಪಂದವೇ ಇಲ್ಲದಿದ್ದರೆ ಯಾವ ಕೋರ್ಟು ಹೇಳಿದರೆ ತಾನೆ ಕಂಪೆನಿ ಅದನ್ನು ನನಗೆ ಕೊಡಲು ಸಾಧ್ಯ? ಮುಖ್ಯವಾಗಿ ಈ ಕಾರಣಕ್ಕಾಗಿಯೇ ಕಂಪೆನಿ ಕೋರ್ಟು ವ್ಯವಹಾರದಲ್ಲಿ ತೊಡಗಿರಬಹುದೆ? "ಹೇಗಾದರೂ ಒಮ್ಮೆ ಕೋರ್ಟಿನಲ್ಲಿ ಪ್ರವೇಶ ಗಿಟ್ಟಿಸಿಕೊಂಡರೆ ಮತ್ತೆ ವರ್ಷಗಟ್ಟಲೆ ಪ್ರಕರಣವನ್ನು ಎಳೆಯಬಹುದು, ಮುಂದೊಂದು ದಿನ ಸಮಸ್ಯೆಯನ್ನು ಹೇಗೋ ಬಗೆಹರಿಸಿಕೊಳ್ಳಬಹುದು" ಎಂಬ ಕುರುಡು ಧೈರ್ಯದಿಂದ ಕಂಪೆನಿ ಹೀಗೆ ಮಾಡಿರಬಹುದೆ? ಜೊತೆಗೆ, ಕೋರ್ಟಿನಲ್ಲಿ ತಾನೇ ಗೆದ್ದರೆ, ಆಗ ಡಬಲ್ ಲಾಭ ಸಿಕ್ಕಿದಂತಾಯಿತಲ್ಲ. ಮತ್ತು ಅಲ್ಲಿಯವರೆಗೆ, ಮಾಹಿತಿ ಕೇಳುವವರಿಗೆಲ್ಲ ಇದೇ ನೆಪವೊಡ್ಡಿ ಮಾಹಿತಿಯನ್ನು ನಿರಾಕರಿಸಬಹುದಲ್ಲ? ಈ ದಿಸೆಯಲ್ಲಿ ಯೋಚನೆ ಮಾಡಿದರೆ, ಪ್ರಕರಣವನ್ನು ಕಂಪೆನಿ ಸುಪ್ರೀಂ ಕೋರ್ಟಿಗೆ ಕೊಂಡು ಹೋಗಲು ಯತ್ನಿಸಿದರೂ ಆಶ್ಚರ್ಯವಿಲ್ಲ ಎಂದು ನನಗೆ ಕಾಣುತ್ತದೆ.
ಒಪ್ಪಂದ ಇದೆಯೋ ಇಲ್ಲವೋ?
ನೇತ್ರಾವತಿ ನದಿಯ ನೀರು ಸಾರ್ವಜನಿಕ ಸಂಪತ್ತು. ಅದರ ಮೇಲೆ ಅಧಿಕಾರ ಇರುವುದು ಸರಕಾರಕ್ಕೆ. ಆದ್ದರಿಂದಲೇ, ಸರಕಾರದ ಒಪ್ಪಿಗೆ ಇಲ್ಲದೆ ಎರಡು ಖಾಸಗಿ ಕಂಪೆನಿಗಳು ನದಿಯ ನೀರಿನ ವಿಷಯವಾಗಿ ಯಾವ ಒಪ್ಪಂದವನ್ನೂ ಮಾಡಿಕೊಳ್ಳಲು ಬರುವುದಿಲ್ಲ. ಇಲ್ಲಿ ಸರಕಾರದ ಪರವಾಗಿ ಒಪ್ಪಿಗೆ ನೀಡುವ, ಒಪ್ಪಂದವನ್ನು ಅಂಗೀಕರಿಸುವ ಅಧಿಕಾರ ಇರುವುದು, ನನಗೆ ತಿಳಿದ ಮಟ್ಟಿಗೆ, ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾ.ನಿ. ಎಂಜಿನಿಯರ್ ಅವರಿಗೆ. ("ಪೆರ್ಲ ಮಿನಿ ಹೈಡಲ್ ಪ್ರಾಜಕ್ಟ್"ನೊಂದಿಗೆ ಕರ್ನಾಟಕ ಸರಕಾರದ ಪರವಾಗಿ ಒಪ್ಪಂದ ಮಾಡಿಕೊಂಡಿರುವುದು ಅವರೇ).ಅವರಿಗೇ ಈ ಒಪ್ಪಂದದ ಬಗ್ಗೆ ಗೊತ್ತಿಲ್ಲ ಎಂದಾದ ಮೇಲೆ, "ಎ. ಎಂ. ಆರ್. ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ" ಎಂಬ ಎಸ್. ಇ. ಜಡ್. ಕಂಪೆನಿಯ ಮಾತನ್ನು ನಂಬುವುದು ಹೇಗೆ?
ಶಂಬೂರಿನ ಸಮೀಪ ಜಲವಿದ್ಯುತ್ ತಯಾರಿಸಲು ಮೂಲತಃ ಅನುಮತಿ ಮಂಜೂರಾದದ್ದು "ಪೆರ್ಲ ಮಿನಿ ಹೈಡಲ್ ಪ್ರಾಜಕ್ಟ್" ಎಂಬ ಸಂಸ್ಥೆಗೆ. ೨೦೦೬ರಲ್ಲಿ ಆ ಕಂಪೆನಿಗೆ ಅನುಮತಿ ನೀಡುವಾಗ ಸರಕಾರ ಹಾಕಿರುವ ಷರತ್ತುಗಳಲ್ಲಿ ಒಂದು ಹೀಗಿದೆ:
"2. ನೀರನ್ನು ಬಳಕೆಯೇತರ ಉಪಯೋಗಕ್ಕಾಗಿ (Non-consumptive) ಮಾತ್ರ ಬಳಸತಕ್ಕದ್ದು. ವಿದ್ಯುತ್ ಉತ್ಪಾದನೆಯ ನಂತರ ನೀರಾವರಿ, ನೀರು ಸರಬರಾಜು (consumptive) ಇಂತಹ ಬಳಕೆಯ ಉದ್ದೇಶಗಳಿಗೆ ನೀರನ್ನು ಬಳಸಬಾರದು"
ವಸ್ತುಸ್ಥಿತಿ ಹೀಗಿದ್ದರೂ, ಎಸ್ ಇ ಜಡ್ ಕಂಪೆನಿ ಈಗ್ಗೆ ಏಳು ತಿಂಗಳುಗಳ ಕೆಳಗೆ, ನೇತ್ರಾವತಿ ನದಿಯಿಂದ ಕಂಪೆನಿಗೆ ನೀರು ಸಾಗಿಸಲು ಪೈಪ್ ಅಳವಡಿಸುವ ಕೆಲಸಕ್ಕೆ ದೇಶೀ/ವಿದೇಶೀ ಕಂಪೆನಿಗಳಿಂದ ಟೆಂಡರ್ ಕರೆದಿದೆ! ಈ ಜಾಹೀರಾತಿನಲ್ಲಿ ನೇತ್ರಾವತಿಯ ಯಾವ ಭಾಗದಿಂದ ಪೈಪುಗಳನ್ನು ಅಳವಡಿಸಬೇಕಾಗುತ್ತದೆ ಎಂಬುದನ್ನೇನೂ ಸೂಚಿಸಿಲ್ಲ. "ನೇತ್ರಾವತಿ ನದಿಯಿಂದ" ಎಂದು ಮಾತ್ರ ಹೇಳಲಾಗಿದೆ. (ನೇತ್ರಾವತಿ ನದಿಗೆ ಈಗ ಬಂಟ್ವಾಳ ತಾಲೂಕಿನಲ್ಲಿ 3 ದೊಡ್ಡ ಅಣೆಕಟ್ಟುಗಳಿವೆ. 1. ಎಂ ಆರ್ ಪಿ ಎಲ್ ಕಂಪೆನಿಯದು, 2. ಎ.ಎಂ.ಆರ್. ಕಂಪೆನಿಯದು 3. ಮಂಗಳೂರು ಮಹಾನಗರ ಪಾಲಿಕೆಯದು).
ಉದಯವಾಣಿಯಲ್ಲಿ ಪ್ರಕಟವಾಗಿದ್ದ ಈ ಜಾಹೀರಾತಿನ ಪ್ರತಿಯನ್ನಿಟ್ಟು ನಾನು ಅರಣ್ಯ ಇಲಾಖೆಗೆ ಪತ್ರ ಬರೆದು, ಈ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ನೀಡಿದೆಯೇ ಎಂದು ಕೇಳಿದ್ದೆ. ತಾ. 4-10-2010ರಲ್ಲಿ ಇಲಾಖೆ ನನಗೆ ಹೀಗೆ ಉತ್ತರಿಸಿತ್ತು:
"ಎಮ್ ಎಸ್ ಇ ಝಡ್ ಕಂಪೆನಿಯು ಯೋಜನೆ ಪ್ರಾರಂಭಿಸುವ ಮುನ್ನ, ಮರಗಳನ್ನು ಕಡಿಯುವ ಕುರಿತು ಅರಣ್ಯ ಇಲಾಖೆಗೆ ತಮ್ಮ ಯೋಜನೆಯ ಪ್ರಸ್ತಾವನೆಯನ್ನು ಎಲ್ಲಾ ದಾಖಲೆಗಳೊಂದಿಗೆ ಈ ಕಛೇರಿಗೆ ಸಲ್ಲಿಸಿದ ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ವರದಿ ಸಲ್ಲಿಸಿದ ನಂತರವೇ ಅವಶ್ಯ ಮತ್ತು ಅನಿವಾರ್ಯತೆಗಳನ್ನು ಪರಾಂಬರಿಸಿ, ಮರಗಳನ್ನು ಕಡಿಯಲು ಅನುಮತಿ ನೀಡಲಾಗುತ್ತದೆ...". ಇದರ ಅರ್ಥ ಪತ್ರಿಕೆಗಳಲ್ಲಿ ಪೈಪ್ ಅಳವಡಿಸುವ ಕೆಲಸಕ್ಕೆ ಟೆಂಡರ್ ಕರೆಯುವಾಗ ಕಂಪೆನಿ ಅರಣ್ಯ ಇಲಾಖೆಯಿಂದ ಮರಗಳನ್ನು ಕಡಿಯಲು ಅನುಮತಿ ಪಡೆದಿರಲಿಲ್ಲ! ಈ ವಿಷಯದಲ್ಲಿ ಇತ್ತೀಚಿನ ಬೆಳವಣಿಗೆ ತಿಳಿಯಲು ಇನ್ನು ಪತ್ರ ಬರೆಯಬೇಕು.
ಅರಣ್ಯ ಇಲಾಖೆಗೆ ಬರೆದಂತೆಯೇ, ಲೋಕೋಪಯೋಗಿ ಇಲಾಖೆಗೂ ಪತ್ರ ಬರೆದಿದ್ದೆ. ಆ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿ, "ನೀರಿನ ಪೈಪುಗಳನ್ನು ಅಳವಡಿಸಲು ರಸ್ತೆ ಅಗೆತದ ಬಗ್ಗೆ" ದಿನಾಂಕ 22-5-10 ರಂದು ಕೆಳಕಂಡಂತೆ ಅನುಮತಿ ನೀಡಿದೆ:
೧. ಮಣಿಹಳ್ಳದಿಂದ ಬಂಟ್ವಾಳದವರೆಗೆ - 3.ಕಿ.ಮೀ.
೨. ಬಂಟ್ವಾಳದಿಂದ ಸೊರ್ನಾಡ್ ವರೆಗೆ - 5.7 ಕಿ.ಮೀ.
೩. ಸೊರ್ನಾಡಿನಿಂದ ಮೂಲರಪಟ್ನವರೆಗೆ - 5.8 ಕಿ.ಮೀ.
ಈ ಮಾಹಿತಿಯಿಂದಲೂ, ಎಸ್. ಇ. ಜಡ್. ಕಂಪೆನಿ ನೇತ್ರಾವತಿಯ ಯಾವ ಭಾಗದಿಂದ ನೀರೆತ್ತಲು ಹೊರಟಿದೆ ಎಂಬುದು ತಿಳಿಯುವುದಿಲ್ಲ. ಮಣಿಹಳ್ಳದಿಂದ ನೇತ್ರಾವತಿಯ ಕಡೆಗೆ ಹೋಗುವ ರಸ್ತೆ ಬಹುಶಃ ಜಿಲ್ಲಾ ಪಂಚಾಯತಿಗೆ ಸೇರಿದ್ದು. ಇನ್ನು ಅವರಿಂದ ಮಾಹಿತಿ ಪಡೆಯಬೇಕು. ನೋಡೋಣ.
ಹೈಕೋರ್ಟು ಮಾಹಿತಿ ಆಯೋಗದ ತೀರ್ಪಿಗೆ ಆರು ವಾರಗಳ ಅವಧಿಯ ಮಧ್ಯಂತರ ತಡೆಯಾಜ್ಞೆ ಕೊಟ್ಟಿತ್ತು. ಈ ಆರು ವಾರ ಮುಗಿದ ಮೇಲೆ ಕಂಪೆನಿಯ ಪರವಾಗಿ ಅದರ ಮುಖ್ಯಸ್ಥರು ಮಾಹಿತಿ ಆಯೋಗದೆದುರು ಹಾಜರಾಗಿ, ಹೈಕೋರ್ಟು ತಡೆಯಾಜ್ಞೆಯನ್ನು ಮತ್ತೂ ಎರಡು ವಾರಗಳಿಗೆ ವಿಸ್ತರಿಸಿರುವುದನ್ನು ತಿಳಿಸಿದ್ದರು. ಈಗ ಆ ಅವಧಿಯೂ ಮುಗಿದಿದೆ. ಇಂದು (25-02-2011) ಮಾಹಿತಿ ಆಯೋಗ ಪ್ರಕರಣವನ್ನು ಮತ್ತೆ ವಿಚಾರಣೆಗೆ ಎತ್ತಿಕೊಂಡಿದೆ. ವಿಚಾರಣೆಗೆ ನಾನು ಹೋಗಿರಲಿಲ್ಲ. ಹಾಗಾಗಿ ಫಲಿತಾಂಶ ಇನ್ನು ನನಗೆ ಗೊತ್ತಾಗಬೇಕಷ್ಟೆ.

ಭಾನುವಾರ, ಜನವರಿ 30, 2011

ಮಾಹಿತಿ ಆಯೋಗದ ತೀರ್ಪು ಪ್ರಶ್ನಿಸಿ ಮಂಗಳೂರು ಎಸ್ ಇ ಜಡ್ ಕಂಪೆನಿ ಹೈಕೋರ್ಟಿಗೆ!

"ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕು ವ್ಯಾಪ್ತಿಗೆ ಬರುತ್ತದೆ" ಎಂದು ಕರ್ನಾಟಕ ಮಾಹಿತಿ ಆಯೋಗ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಂಗಳೂರು ಎಸ್ ಇ ಜಡ್ ಕಂಪೆನಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿದೆ. ಈ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟು, ಮಾಹಿತಿ ಆಯೋಗದ ತೀರ್ಪಿಗೆ ಆರುವಾರಗಳ ತಡೆಯಾಜ್ನೆ ನೀಡಿದೆ. ಮಾಹಿತಿ ಆಯೋಗ ನೀಡಿದ ತೀರ್ಪನ್ನು ಈ ಹಿಂದೆಯೇ ಪ್ರಕಟಿಸಿದ್ದೇನೆ. ಈಗ ಈ ವಿಷಯದಲ್ಲಿ ಕಾನೂನು ಏನು ಹೇಳುತ್ತದೆ, ಮಂಗಳೂರು ಎಸ್ ಇ ಜಡ್ ಕಂಪೆನಿಯ ಪರ ವಕೀಲರು ಏನು ವಾದ ಮಂಡಿಸಿದ್ದಾರೆ ಮತ್ತು ಅದಕ್ಕೆ ನನ್ನ ಪ್ರತಿವಾದ ಏನು ಎಂದು ನೋಡೋಣ:
ಈ ಪ್ರಕರಣದಲ್ಲಿ ತೀರ್ಮಾನವಾಗಬೇಕಾದ ಮುಖ್ಯ ಅಂಶ ಮಂಗಳೂರು ಎಸ್ ಇ ಜಡ್ ಕಂಪೆನಿಯು ಒಂದು ಸಾರ್ವಜನಿಕ ಪ್ರಾಧಿಕಾರ ಹೌದೇ ಅಲ್ಲವೇ ಎನ್ನುವುದು. ಅದು ಸಾರ್ವಜನಿಕ ಪ್ರಾಧಿಕಾರ ಹೌದು ಎಂದಾದರೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ, ಅಲ್ಲ ಎಂದಾದರೆ ಬರುವುದಿಲ್ಲ. ಕರ್ನಾಟಕ ಮಾಹಿತಿ ಹಕ್ಕು ಆಯೋಗ ಸ್ಪಷ್ಟವಾಗಿ "Commission comes to the conclusion that M/s Mangalore SEZ Ltd., is a 'public authority' under section 2(h) of the Right to information Act, 2005" ಎಂದು ತೀರ್ಪು ನೀಡಿದೆ.
ಮಾಹಿತಿ ಹಕ್ಕು 2005ರ ಪ್ರಕಾರ ಸಾರ್ವಜನಿಕ ಪ್ರಾಧಿಕಾರ ಎಂದರೆ:
(h) "public authority" means any authority or body or institution of self- government established or constituted—
(a) by or under the Constitution;
(b) by any other law made by Parliament;
(c) by any other law made by State Legislature;
(d) by notification issued or order made by the appropriate Government,
and includes any—
(i) body owned, controlled or substantially financed;
(ii) non-Government organisation substantially financed,
directly or indirectly by funds provided by the appropriate Government;
ಈ ನಿಯಮಗಳ ವ್ಯಾಪ್ತಿಯೊಳಗೆ ಮಂಗಳೂರು ಎಸ್ ಇ ಜಡ್ ಕಂಪೆನಿ ಬರುವುದಿಲ್ಲ ಎನ್ನುವ ವಾದವನ್ನು ಮಂಡಿಸುತ್ತಾ ಹೈಕೋರ್ಟಿನ ವಕೀಲರು (ಶ್ರೀ ಪಿ.ಡಿ. ವಿಶ್ವನಾಥ್) ಹೀಗೆ ಹೇಳುತ್ತಾರೆ:
"The petitioner ( ಎಂದರೆ ಮಂಗಳೂರು ಎಸ್ ಇ ಜಡ್ ಕಂಪೆನಿ) is not established or constituted by or under the Constitution. The petitioner is not established or constituted either by any law made by the parliament or the state legislature or by any notification issued or order made by the Government. The petitioner is not a body owned or controlled or substantially financed by the Government. The Oil & Natural Gas Corporation Ltd (ONGC) is a Government Company and it is not the Central Government. The Karnataka Industrial Areas Development Board(KIADB) is a statutory corporation constituted under the Karnataka Industrial Areas Development Act and it is not a Government...."
ಮಂಗಳೂರು ಎಸ್ ಇ ಜಡ್ ಕಂಪೆನಿಯಲ್ಲಿ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಪಾಲು ಒಟ್ಟು ಶೇ. 49; ಉಳಿದ ಶೇ. 51 ಐಎಲ್ & ಎಫ್ ಎಸ್ ಕಂಪೆನಿಯದು ಎಂಬುದು ಈ ಮೊದಲೇ ಸಾಬೀತಾಗಿದೆ. ಕರ್ನಾಟಕ ಮಾಹಿತಿ ಆಯೋಗ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗಳ ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಾಲು ಎಂದು ಪರಿಗಣಿಸಿದೆ. ಈ ಎರಡೂ "ಸರಕಾರ" ಅಲ್ಲ; ಓಎನ್ ಜಿಸಿ ಒಂದು ಸರಕಾರಿ ಕಂಪೆನಿಯಾದರೆ, ಕಕೈಪ್ರಮಂ ಒಂದು ಸರಕಾರಿ ನಿಗಮ ಮಾತ್ರ, ಹಾಗಾಗಿ ಇವುಗಳ ಪಾಲನ್ನು ಸರಕಾರದ ಪಾಲು ಎಂದು ಪರಿಗಣಿಸುವಂತಿಲ್ಲ, ಹಾಗಾಗಿ ಮಂಗಳೂರು ಎಸ್ ಇ ಜಡ್ ಕಂಪೆನಿ ಒಂದು ಸಾರ್ವಜನಿಕ ಪ್ರಾಧಿಕಾರ ಅಲ್ಲ ಎನ್ನುವುದು ಹೈಕೋರ್ಟ್ ವಕೀಲರ ವಾದ.
"ಶೇ. 49ರ ಪಾಲು 'ಗಣನೀಯ'ವಾದ ಪಾಲು ಅಲ್ಲ" ಎಂಬ ವಾದವನ್ನೇನೂ ಅವರು ಮಂಡಿಸಿಲ್ಲ.
ವಾದಕ್ಕಾಗಿ ಒಂದು ಕ್ಷಣ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇವುಗಳ ಪಾಲು ನೇರವಾಗಿ ಸರಕಾರದ ಪಾಲು ಅಲ್ಲವೆಂದೇ ತಿಳಿಯೋಣ. ಆಗಲೂ ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕಿನ ಕುಣಿಕೆಯಿಂದ ಉಣುಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮಾಹಿತಿ ಹಕ್ಕು 2005ರ 2(h) ಹೀಗೆ ಹೇಳುತ್ತದೆ:
"public authority" means any authority or body or institution of self- government established or constituted—
.........
.........
and includes any— .......
(i) body ........substantially financed;
.........
directly or indirectly by funds provided by the appropriate Government;
ಎಂದರೆ ಸರಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣವನ್ನು ಪಡೆದಿದ್ದರೆ ಅಂತಹ ನಿಕಾಯವು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ.
ವಕೀಲರ ವಾದದ ಪ್ರಕಾರ ಮಂಗಳೂರು ಎಸ್ ಇ ಜಡ್ ಕಂಪೆನಿ ನೇರವಾಗಿ ಸರಕಾರದಿಂದ ಹಣವನ್ನು ಪಡೆದಿಲ್ಲ ಎಂಬುದನ್ನು ಒಪ್ಪಿದರೂ, ಪರೋಕ್ಷವಾಗಿ, ಕೇಂದ್ರ ಸರಕಾರದ ಕಂಪೆನಿಯಾದ ಓಎನ್ ಜಿಸಿಯಿಂದ ಮತ್ತು ಕರ್ನಾಟಕ ಸರಕಾರದ ನಿಗಮವಾದ ಕಕೈಪ್ರಮಂಡಳಿಯಿಂದ ಗಣನೀಯ ಪ್ರಮಾಣದ ಹಣ ಪಡೆದಿದೆ. ಹೀಗಾಗಿ ಮಂಗಳೂರು ಎಸ್ ಇ ಜಡ್ ಕಂಪೆನಿಯು ನಿಸ್ಸಂದೇಹವಾಗಿ ಒಂದು ಸಾರ್ವಜನಿಕ ಪ್ರಾಧಿಕಾರವೇ ಆಗುತ್ತದೆ.
*******************************
ಕಾನೂನಿನಲ್ಲಿರುವ "ಸರಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣವನ್ನು ಪಡೆದಿದ್ದರೆ ಅಂತಹ ನಿಕಾಯವು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ" ಎಂಬ ವಾಕ್ಯವನ್ನು ಕೊಂಚ ಹಿಂಜಿ ನೋಡಬೇಕಾದ ಅಗತ್ಯವಿದೆ. ಕಾನೂನು "Funds" ಎಂಬ ಪದವನ್ನು ಬಳಸಿರುವುದರಿಂದ "ಸರಕಾರವು ನೇರವಾಗಿ ಅಥವಾ ಪರೋಕ್ಷವಾಗಿ ಹಣ ಹೂಡಿದ್ದರೆ" ಎಂದೇ ಅರ್ಥ ಮಾಡುವುದು ಅನಿವಾರ್ಯವಾಗುತ್ತದೆ. ಆದರೆ ಸರಕಾರದ ಪಾಲು ಹಣದ ರೂಪದಲ್ಲಿರದೆ ವಸ್ತುರೂಪದಲ್ಲಿದ್ದರೂ ಸಹ ಅಂತಹ ನಿಕಾಯವು ಕಾನೂನಿನ ವ್ಯಾಪ್ತಿಗೆ ಏಕೆ ಬರಬಾರದು?
ಉದಾಹರಣೆಗೆ ಮಂಗಳೂರು ವಿ.ಆ.ವ. ಕಂಪೆನಿಗೆ ಕರ್ನಾಟಕ ಸರಕಾರವು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ದಿನಕ್ಕೆ ಒಟ್ಟು 6.75 ಕೋಟಿ ಲೀಟರ್ ನೀರೆತ್ತಲು ಅನುಮತಿ ನೀಡಿದೆ. (ಈ ನೀರಿಗೆ ಕಂಪೆನಿ ಹಣ ಕೊಡಬೇಕಾಗಿದೆಯಾದರೂ ಅದು ತೀರ ನಿಕೃಷ್ಟ ಮೊತ್ತ) ಆದರೆ ಸದ್ಯದ ಕಾನೂನಿನಲ್ಲಿ ಸರಕಾರದ ಈ ಪಾಲನ್ನು ಪರಿಗಣಿಸಲು ಅವಕಾಶವಿಲ್ಲ. ಇದರಿಂದಾಗಿ ಕಾನೂನಿನ ಮೂಲ ಉದ್ದೇಶವೇ ನಿಷ್ಫಲವಾದಂತಾಗುತ್ತದೆ. ಆದ್ದರಿಂದ ಸರಕಾರವು ವಸ್ತುರೂಪದಲ್ಲಿ ಏನನ್ನಾದರೂ ತೊಡಗಿಸಿದ ಸಂದರ್ಭದಲ್ಲಿಯೂ, ಅಂತಹ ನಿಕಾಯವನ್ನು ಸಾರ್ವಜನಿಕ ಪ್ರಾಧಿಕಾರ ಎಂದೇ ಪರಿಗಣಿಸಬೇಕಾದ ಅಗತ್ಯವಿದೆ. (ಈ ವಿಷಯದಲ್ಲಿ ಈಗಾಗಲೇ ಯಾವುದಾದರೂ ಕೋರ್ಟಿನ ತೀರ್ಪು ಆಗಿರುವುದು ಸಾಧ್ಯ. ಅಂತಹ ತೀರ್ಪು ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿರಿ).
ಮಂಗಳೂರು ವಿ.ಆ.ವ. ಕಂಪೆನಿಯಲ್ಲೇನೋ ಸರಕಾರದ ಪಾಲು ನೇರವಾಗಿಯೋ ಪರೋಕ್ಷವಾಗಿಯೋ ಇದೆ. ಆದ್ದರಿಂದ ಅದು ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರಬೇಕಾಗುತ್ತದೆ. ಆದರೆ ಇಂದು ಅಸ್ತಿತ್ವಕ್ಕೆ ಬರುತ್ತಿರುವ ಎಷ್ಟೋ ಖಾಸಗಿ ಎಸ್ ಇ ಜಡ್ ಕಂಪೆನಿಗಳು ಈ ಕಾನೂನಿನ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ವಾಸ್ತವವಾಗಿ ಸರಕಾರಗಳು ಭೂಮಿಯನ್ನು ಅದರ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು ಇವುಗಳಿಗೆ ಹಸ್ತಾಂತರಿಸದೆ ಹೋದರೆ, ಇವು ಅಸ್ತಿತ್ವಕ್ಕೆ ಬರುವುದು ಸಾಧ್ಯವೇ ಇಲ್ಲ. ಹಾಗಾಗಿ ಪರೋಕ್ಷವಾಗಿ ಸರಕಾರದಿಂದ ಭೂಮಿಯನ್ನು ಪಡೆದಿರುವ ಕಾರಣಕ್ಕಾಗಿ ಈ ಖಾಸಗಿ ಕಂಪೆನಿಗಳನ್ನೂ ಸಹ ಮಾಹಿತಿ ಹಕ್ಕಿನ ವ್ಯಾಪ್ತಿಗೆ ತರುವುದು ಅಗತ್ಯವಿದೆ.

ಬುಧವಾರ, ನವೆಂಬರ್ 3, 2010

ಮಂಗಳೂರು ಎಸ್ ಇ ಝಡ್ ಕಂಪೆನಿ ಆರ್ ಟಿ ಐ ವ್ಯಾಪ್ತಿಗೆ


ನೇತ್ರಾವತಿ ನದಿನೀರಿಗೆ ಸಂಬಂಧಪಟ್ಟಂತೆ ಮಂಗಳೂರು ಎಸ್ ಇ ಝಡ್ ಕಂಪೆನಿ ಎ ಎಂ ಆರ್ ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರತಿಯನ್ನು ಮಾಹಿತಿ ಹಕ್ಕಿನಡಿ ನಾನು ಕೇಳಿದಾಗ, ಕಂಪೆನಿ ನನಗೆ ಮಾಹಿತಿ ನೀಡಲು ತಿರಸ್ಕರಿಸಿತ್ತು. ಪ್ರಕರಣ ಮಾಹಿತಿ ಹಕ್ಕು ಆಯೋಗದ ಎದುರಿಗೆ ವಿಚಾರಣೆಗೆ ಬಂದಾಗ ಕಂಪೆನಿ ತನ್ನನ್ನು ಮಾಹಿತಿ ಹಕ್ಕಿನ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಮನವಿ ಸಲ್ಲಿಸಿತ್ತು. ಇದಕ್ಕೆ ಬೆಂಬಲವಾಗಿ ಅದು ಮಂಗಳೂರಿನ ಖ್ಯಾತ ವಕೀಲ ಶ್ರೀ ಎಂ. ಶಂಕರ ಭಟ್ಟರ ಕಾನೂನು ಅಭಿಪ್ರಾಯವನ್ನೂ ಲಗತ್ತಿಸಿತ್ತು.
ಮೊದಲು ಮಡಿಕೇರಿಯಲ್ಲಿ, ನಂತರ ಬೆಂಗಳೂರಿನಲ್ಲಿ ಹೀಗೆ ಎರಡು ಸಲ ವಿಚಾರಣೆ ನಡೆದು ಈಗ ಆಯೋಗದ ತೀರ್ಪು ಹೊರಬಿದ್ದಿದೆ. ಅದನ್ನು ಯಥಾವತ್ತಾಗಿ ಮುಂದೆ ಕೊಟ್ಟಿದ್ದೇನೆ.
14-10-2010
1. Petitioner is present.
2. Complaint was last heard on 05-06-2010, when the Commission directed the Respondent to file the copies of balance sheets of Mangalore SEZ for last 3 years to enable the Commission to decide whether the Company is substantially financed by the Government and whether it is a public authority under the provision of Right to Information Act 2005 or not.
3. In his letter dated 22nd July 2010 to Commission, Sri A.G.Pai, ED&COO, Mangalore SEZ Ltd., has furnished the copies of the balance sheets.
4. In his letter dated 12th October 2010 to the Commission, Sri Ramachandra Bhandarkar, PIO & PRO, Mangalore SEZ has requested the Commission to adjourn the case by two weeks and he also states that in the meanwhile he is seeking legal opinion.
5. Commission noted that request for information was received on 19-12-2009, case was posted for hearing on 05-06-2010, Respondent was allowed time to file copies of Balance Sheets, Respondent filed copies of Balance Sheets on 22nd July 2010. Since no information is provided till today i.e., till 14-12-2010 for nearly twelve months, Commission considers the delay is considerable and it didn't agree with the request of the Respondent to adjourn the case for another two weeks. Hence Commission decides to proceed with the case treating Respondent ex-parte.
6. In his letter dated 06-10-2010 to the Commission, Petitioner has produced documents such as Annual report of M/s ONGC for the year 2008-09 and 2009-10 wherein ONGC has recorded that it has got a share holding of Rs. 13 crores in M/s Mangalore SEZ Ltd. He has also produced documents to show that KIADB has got Rs. 11.27 crore share capital in M/s Mangalore SEZ Ltd.
7. Commission noted that ONGC had entered into a Memorandum of Understanding with the Governemt of Karnataka to jointly develop the Special Economic Zone (SEZ) near Mangalore through Special Purpose Vehicle(SPV) consequently with the appproval of the cabinet, the SPV known as M/s Mangalore SEZ Ltd. has been incorporated during February 2006 with a authoized share capital of Rs. One crore the equity pattern M/s Mangalore SEZ Ltd. is stated as follows
a) ONGC - 26%
b) KIADB - 23%
c) IL & FS - 51%
8. Government of Karnataka in his order number CI 400 SPI 2006 dated 3rd March 2007, has accorded permission to KIADB to subscribe to the additional equity share capital to the extent of Rs. 11.27 crores in M/s Mangalore SEZ Ltd. and permission was given to KIADB to sign the share holders agreement in connection with M/s Mangalore SEZ Ltd.
9. In the statement of accounts produced along with the Balance Sheet by M/s Mangalore SEZ Ltd., in Schedule 7 under the head "Significant Accounting Policies" under sub-heading at Sl. No. 6 it is mentioned as follows:-
"6. Advance against Share Capital as at 31/3/2008 represents, the amount received from the following parties in terms of clause 3.3 of share holder's agreement dated 29-03-2007"
Name of the Share holder As on 31-03-2008(in Rs.)
Oil and Natural Gas corporation Limited 127,412,000
Karnataka Industrial Area Development Board 112,700,000
Infrastructure leasing and Financial Services Limited 245,100,000
Total 485,212,000
The above documents produced by the Petitioner and Respondents clearly show that M/s Mangalore SEZ Ltd., has received substantial Financial Aid both from Central and State Governments. Hence there is no substance in the argument that M/s Mangalore SEZ Ltd., is not a Public Authority. Commission comes to the conclusion that M/s Mangalore SEZ Ltd., is a 'Public Authority' under section 2(h) of the Right to Information Act. 2005.
10. Commission therefore directs Sri A.G.Pai, ED & COO, Mangalore SEZ Ltd., 3rd Floor, MUDA Building, Ashokanagar, Urwa Stores, Mangalore-575006 to provide the information sought by the Petitioner within 30 days free of cost, through RPAD, under intimation to the Commission.
11. The complaint is adjourned to 18-01-2011at 3-30 p.m.
ದಿನಾಂಕ 6-10-2010 ರಂದು ನಾನು ಕಳಿಸಿಕೊಟ್ಟ ದಾಖಲೆಗಳನ್ನು ಆಯೋಗ ವಿವರವಾಗಿ ಪರಿಶೀಲಿಸಿ, ಹೆಚ್ಚು ಕಡಿಮೆ ಅದರ ಆಧಾರದ ಮೇಲೆಯೇ ತೀರ್ಪು ಕೊಟ್ಟಿರುವುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಕರ್ನಾಟಕ ಸರಕಾರವು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ದಿನಕ್ಕೆ 6.75 ಕೋಟಿ ಲೀ. ನೀರೆತ್ತಲು ಅನುಮತಿ ನೀಡಿರುವುದರ ದಾಖಲೆಯನ್ನೂ ನಾನು ಆಯೋಗಕ್ಕೆ ನೀಡಿದ್ದೆ. ಆದರೆ ಮಾನ್ಯ ಆಯೋಗ ಆ ದಾಖಲೆಯನ್ನು ಪರಿಗಣಿಸಿಲ್ಲ.
ಅನುಮಾನವೇ ಇಲ್ಲದಂತೆ "ಮಂಗಳೂರು ಎಸ್ ಇ ಝಡ್ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ " ಎಂದು ತೀರ್ಪು ನೀಡಿದ ಮೇಲೂ, ವಿಚಾರಣೆಯನ್ನು ಪುನಃ 18-01-2011ಕ್ಕೆ ಯಾಕೆ ಇಡಲಾಗಿದೆ ಎಂಬುದು ಮಾತ್ರ ನನಗೆ ಅರ್ಥವಾಗಿಲ್ಲ. ತಿಳಿದವರು ಯಾರಾದರೂ ಇದು ಹೀಗೆ ಯಾಕೆ ಎಂದು ತಿಳಿಸಿ ಹೇಳಿದರೆ ಕೃತಜ್ಞ.

ಕೆಂಪುಕಲ್ಲೆಂಬ ಮೈಸೂರುಪಾಕು!


ಕಂಚಿನಡ್ಕಪದವು ಇರುವುದು ಸಜಿಪನಡು ಸಜಿಪಪಡುಗಳ ನಡುವೆ. ಈ ಎರಡೂ ಸಣ್ಣ ಊರುಗಳಿರುವುದು ಬಂಟ್ವಾಳ ತಾಲೂಕಿನಲ್ಲಿ; ಬಿ.ಸಿ.ರೋಡಿನಿಂದ ಮೆಲ್ಕಾರಿಗಾಗಿ ಕೊಣಾಜೆಗೆ ಹೋಗುವ ದಾರಿಯಲ್ಲಿ. ಬಂಟ್ವಾಳ ಪುರಸಭೆಯ ತ್ಯಾಜ್ಯ ಘಟಕ ಕಂಚಿನಡ್ಕಪದವಿನಲ್ಲಿ ನಿರ್ಮಾಣವಾಗುತ್ತಿದೆ. ಗಲೀಜು ಅಲ್ಲಿ ಸಂಗ್ರಹವಾದಮೇಲೆ ಗಬ್ಬು ವಾಸನೆ ಹೊಡೆಯುವುದು ಇದ್ದೇ ಇದೆಯಷ್ಟೆ. ಆದರೆ ಈ ತ್ಯಾಜ್ಯಘಟಕದ ವ್ಯವಹಾರ ಕಸ ತಂದು ಇಲ್ಲಿ ಸುರಿಯುವ ಮೊದಲೇ, ಘಟಕದ ನಿರ್ಮಾಣ ಹಂತದಲ್ಲಿಯೇ, ಗಬ್ಬು ವಾಸನೆ ಹೊರಡಿಸುತ್ತಿದೆ ಎಂದು ನಮ್ಮ ಬಿ.ಸಿ.ರೋಡಿನ ವಂಶ ಪತ್ರಿಕೆ ವರದಿ ಮಾಡಿತ್ತು. ಹಾಗಾಗಿ ಈ ಪವಾಡವನ್ನು ಕಣ್ಣಾರೆ ಕಂಡುಬಿಡೋಣ ಎಂದು ಮೊನ್ನೆ ಭಾನುವಾರ (31-10-2010) ನಾನು ವಂಶದ ಪತ್ರಕರ್ತರೊಂದಿಗೆ ಅಲ್ಲಿಗೆ ಹೋದೆ. ಗೆಳೆಯ ಕೃಷ್ಣಗಟ್ಟಿಯವರೂ ಜೊತೆಗಿದ್ದರು.
ಬಂಟ್ವಾಳ ತಾಲೂಕಿನಲ್ಲಿ ಇಂತಹ ಹಲವು ಪದವುಗಳಿವೆ. ವಿಸ್ತಾರವಾದ ಖಾಲಿ ಬಯಲು ಪ್ರದೇಶ. ಸ್ವಲ್ಪಮಟ್ಟಿಗೆ ಹುಲ್ಲು, ಸಣ್ಣ ಸಣ್ಣ ಸಸ್ಯಗಳು ಮಾತ್ರ ಬೆಳೆಯುವ ಜಮ್ಮಿಟಿಗೆ ಅಥವಾ ಕೆಂಪುಕಲ್ಲಿನ ರಚನೆಗಳು. ಬೆಂಜನಪದವು ಇಂತಹದೇ ಇನ್ನೊಂದು ಪ್ರದೇಶ. ಸಜಿಪನಡುವಿನಲ್ಲಿ ಎಡಕ್ಕೆ ತಿರುಗಿ ಕೆಂಪುಕಲ್ಲು ಸಾಗಿಸುವ ಲಾರಿಗಳು ಓಡಿಯಾಡಿ ಎರಡು-ಮೂರು ಅಡಿ ಆಳದ ಗುಂಡಿಗಳಾಗಿರುವ ರಸ್ತೆಯಲ್ಲಿ ಅಂದಾಜು ಮೂರು ಕಿ.ಮೀ. ಹೋದರೆ ಕಂಚಿನಡ್ಕಪದವು. ಅಲ್ಲಲ್ಲಿ ಒನ್ನೊಂದು ಮನೆಗಳು. ಜನವಸತಿ ಕಡಿಮೆ. ಕೆಂಪುಕಲ್ಲಿನ ಹಲವು ಕೋರೆಗಳು. ನಾವು ಹೋದದ್ದು ಭಾನುವಾರವಾದ್ದರಿಂದ ಕೆಲಸ ನಡೆಯುತ್ತಿರಲಿಲ್ಲ. ಘಟಕದ ದಾರಿಯಲ್ಲಿ ಒಂದು ಜಲ್ಲಿ ಕ್ರಷರ್ ಸಹ ಇದೆ.ಅಡ್ಡಾದಿಡ್ಡಿಯಾಗಿ ಹರಡಿಕೊಂಡಿರುವ ಕೆಂಪುಮಣ್ಣಿನ ರಾಶಿ ತುಂಬಿದ ಕೋರೆಗಳನ್ನು ಬಿಟ್ಟರೆ ಉಳಿದಂತೆ ಧಾರಾಳ ಶುದ್ಧಗಾಳಿ ಬೀಸುವ, ಪೃಕೃತಿಸಹಜವಾಗಿ ನಿರ್ಮಲವಾಗಿರುವ, ಮನೋಹರ ಭೂಪ್ರದೇಶ.
ಜನ ಇಲ್ಲವೇ ಇಲ್ಲ ಎಂದಲ್ಲ. ನಾವು ಐದು ಜನ ಅಲ್ಲಿಗೆ ಹೋದಮೇಲೆ ಸಹಜ ಕುತೂಹಲದಿಂದ ಜನ ಸೇರಿದರು. ಪತ್ರಕರ್ತ ಮಿತ್ರರು ಅವರೊಂದಿಗೆ ಮಾತನಾಡಿ ವಿಷಯ ಸಂಗ್ರಹಿಸುತ್ತಿದ್ದರು. ಅಲ್ಲಿಗೆ ಬಂದ ಒಂದಿಬ್ಬರು ಸ್ಥಳೀಯ ಲೀಡರುಗಳು "ನೀವು ಯಾರನ್ನು ಕೇಳಿ ಇಲ್ಲಿ ಬಂದಿರಿ? ಯಾರನ್ನು ಕೇಳಿ ಫೋಟೋ ತೆಗೆದಿರಿ? ಅಬ್ಬಾಸರನ್ನು ಕರೆದುಕೊಂಡು ಬರಬೇಕಿತ್ತು. ರೈಗಳನ್ನು (ಎಂದರೆ ಬಂಟ್ವಾಳ ಶಾಸಕ ರಮಾನಾಥ ರೈ) ಕರೆದುಕೊಂಡು ಬರಬೇಕಿತ್ತು" ಎಂದೆಲ್ಲ ತಕರಾರು ತೆಗೆದರು. ಪತ್ರಕರ್ತರೂ ಬುದ್ಧಿವಂತರೇ. ಬ್ಯಾರಿ ಭಾಷೆ, ತುಳು ಎರಡನ್ನೂ ಸರಾಗ ಮಾತಾಡಬಲ್ಲವರು. ಕ್ರಮೇಣ ವಾತಾವರಣ ತಿಳಿಯಾಯಿತು.
ಘಟಕದ ಕೆಲಸ ಶುರುವಾಗಿದೆ. ಸುತ್ತ ಪಾಗಾರ ಹಾಕುವ ಕೆಲಸ ನಡೆಯುತ್ತಿದೆ. ಹಾಗಾಗಿ ಎಂಟೂವರೆ ಎಕ್ರೆ ವಿಸ್ತಾರದ ಘಟಕ ಕಣ್ಣಳತೆಗೆ ಸಿಗುತ್ತದೆ. ನಾನು ಹೋದ ಮೂಲ ಉದ್ದೇಶ ತ್ಯಾಜ್ಯ ತುಂಬುವ ಮೊದಲೇ ಗಬ್ಬುವಾಸನೆ ಹೊರಡುತ್ತಿರುವ ಆರೋಪ ನಿಜವೇ ಸುಳ್ಳೇ ಎಂದು ತಿಳಿಯಲು. ನಮ್ಮಲ್ಲಿ ಬಗೆಬಗೆಯದನ್ನು ತಿಂದು ಜೀರ್ಣಿಸಿಕೊಳ್ಳುವ ಜನ ಇದ್ದಾರಷ್ಟೆ. ಮೇವು ತಿನ್ನುವವರು, ಮಣ್ಣು(ಭೂಮಿ) ತಿನ್ನುವವರು, ಸಿಮೆಂಟ್, ಹೊಯ್ಗೆ, ಕಬ್ಬಿಣ ಇತ್ಯಾದಿ ತಿನ್ನುವವರು, ಮರ ತಿನ್ನುವವರು, ಪುಸ್ತಕ ತಿನ್ನುವವರು ಹೀಗೆ ವೈವಿಧ್ಯಮಯ ಆಹಾರಪದ್ಧತಿ ಇರುವ ಪುಣ್ಯಭೂಮಿ ನಮ್ಮದು. ನಾವೊಂದು ಕಡಿಮೆಯಾಗುವುದು ಯಾಕೆ ಅಂತ ನಮ್ಮೂರ ಕೆಲವರು ಕಲ್ಲು (ಕೆಂಪುಕಲ್ಲು) ತಿನ್ನುತ್ತಿದ್ದಾರೆ ಎಂಬುದು ನಮ್ಮಲ್ಲಿ ಕೆಲವರ ಅನುಮಾನ. ಅಂಥದನ್ನೆಲ್ಲ ತಿನ್ನುವವರಿಗೆ ಇಂದಲ್ಲ ನಾಳೆ ಹೊಟ್ಟೆ ನೋವು ಬರಲಾರದೆ? ಯಾಕೆ ಅನ್ನ ತಿನ್ನಬಾರದು? ಕಲ್ಲು, ಮಣ್ಣು ಯಾಕೆ ತಿನ್ನಬೇಕು? ನನಗೆ ಅರ್ಥವಾಗುವುದಿಲ್ಲ.
ನೋಡಿದರೆ ಪೂರ್ತಿ ಎಂಟೂವರೆ ಎಕ್ರೆ ಜಾಗ ಹರಪ್ಪ ಮೊಹೆಂಜೋದಾರೋದ ಹಾಗೆ ಕಾಣುತ್ತದೆ. ಎಲ್ಲ ಕಡೆ ಅಗೆದ ಕೆಂಪು ಮಣ್ಣಿನ ರಾಶಿ. ಕೆಂಪು ಕಲ್ಲು ಕಡಿದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ, ಉಳಿದಿರುವ ಭಾಗದಲ್ಲಿ ಕೆಂಪುಕಲ್ಲಿನ ಚೌಕಾಕಾರದ ಅಚ್ಚುಗಳು. ಎಡೆ ಎಡೆಯಲ್ಲಿ ವಾಹನಗಳು ಓಡಾಡಬಹುದಾದ ದಾರಿಗಳು. ಯಾರೋ ಈ ಜಾಗದಲ್ಲಿ ಕೆಂಪುಕಲ್ಲು ಕಡಿದಿದ್ದಾರೆ, ಸಾಗಿಸಿದ್ದಾರೆ ಎನ್ನುವುದು ಎಂಥ ದಡ್ಡನಿಗೂ ಸ್ಪಷ್ಟವಾಗುವ ಸನ್ನಿವೇಶ, ದೃಶ್ಯ. ಪತ್ರಕರ್ತ ಮಿತ್ರರು ಸುಮಾರು ಫೋಟೋ ತೆಗೆದರು. ಆ ಪೈಕಿ ಒಂದೆರಡನ್ನು ಇಲ್ಲಿಯೂ ಕೊಟ್ಟಿದ್ದೇನೆ.
ಈ ಘಟಕದ ನಿರ್ಮಾಣಕ್ಕೆ ಸರಕಾರ 62 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದೆಯಂತೆ. ಈ ಯೋಜನೆಯನ್ನು ಯಾರು ತಯಾರಿಸಿದರು, ಸ್ಥಳ ಪರಿಶೀಲನೆ ಯಾರು ಮಾಡಿದರು, ಹಾಗೆ ಪರಿಶೀಲನೆ ಮಾಡಿದವರು ಇಲ್ಲಿ ಕೆಂಪುಕಲ್ಲಿನ ನಿಕ್ಷೇಪವಿದೆ ಎಂದು ತಮ್ಮ ವರದಿಯಲ್ಲಿ ಕಾಣಿಸಿದ್ದಾರೆಯೆ? ಯಾರಾದರೂ ಈ ಕೆಂಪುಕಲ್ಲಿನ ಮೌಲ್ಯನಿರ್ಣಯ ಮಾಡಿದ್ದಾರೆಯೆ? ಇಲ್ಲಿ ಕೋರೆ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆಯೆ? ಕೆಂಪುಕಲ್ಲುಗಳನ್ನು ಈ ಜಾಗದಿಂದ ಈಗ ತೆಗೆದು ಸಾಗಿಸುತ್ತಿರುವವರು ಯಾರು? ಅದರ ಹಣ ಯಾರಿಗೆ ಹೋಗುತ್ತಿದೆ? ಈ ವಿದ್ಯಮಾನಗಳು ಬಂಟ್ವಾಳ ಪುರಸಭೆಯ ಗಮನಕ್ಕೆ ಬಂದಿದೆಯೆ? ಮುಂತಾದ ಅನೇಕ ಪ್ರಶ್ನೆಗಳು ಇಲ್ಲಿ ಹುಟ್ಟುತ್ತವೆ.ಅಲ್ಲಿ ಬೀಸುತ್ತಿರುವ ಶುದ್ಧ ಗಾಳಿಯನ್ನು ಮಲಿನಗೊಳಿಸುತ್ತಿವೆ.
ನನಗೆ ಇಲ್ಲಿ ಇದ್ದ, ಇರುವ, ಕೆಂಪುಕಲ್ಲಿನ ಮೌಲ್ಯ ನಿರ್ಣಯ ಮಾಡುವಷ್ಟು ಪರಿಣತಿ ಇಲ್ಲ. ಆದರೆ, ಅದು ಯೋಜನೆಯ ಮೊತ್ತವಾದ 62 ಲಕ್ಷವನ್ನು ಮೀರಿಸಬಹುದು ಎಂಬ ಅನುಮಾನವಿದೆ. ವಂಶ ಪತ್ರಿಕೆ ಪ್ರಕರಣವನ್ನು ಎರಡು ಸಂಚಿಕೆಗಳಲ್ಲಿ ವರದಿ ಮಾಡಿದೆ. ನೋಡೋಣ ಏನಾಗುತ್ತದೆಂದು.
[ಈ ಮೊದಲು ನೇತ್ರಾವತಿ ನದಿಯಲ್ಲಿ (ನದಿಯಲ್ಲಿ ಎಂದರೆ ನದಿಯ ದಂಡೆಯಲ್ಲಿ ಅಲ್ಲ. ನದಿಯ ಪಾತ್ರದಲ್ಲಿ, ನದಿ ಹರಿಯುವ ದಾರಿಯಲ್ಲಿ) ಜಲವಿದ್ಯುತ್ ಯೋಜನೆ ಕಾರ್ಯಗತಗೊಳಿಸುವಾಗಲೂ ಡೈನಮೈಟ್ ಬಳಸಿ ಒಡೆದು ತೆಗೆದ ಕಲ್ಲನ್ನು ಕಂಪೆನಿ ಮಾರಿ ಹಣ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅದು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ ಯೋಜನೆಗಳಿಗೆ ಅನುಮತಿ ನೀಡುವಾಗ ಅಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳ ಲೆಕ್ಕವನ್ನು ನಮ್ಮ ಅಧಿಕಾರಿಗಳೂ, ಎಂಜಿನಿಯರುಗಳೂ ಬುದ್ಧಿವಂತಿಕೆಯಿಂದ ಮರೆತುಬಿಡುತ್ತಿದ್ದಾರೆ ಎಂಬ ಅನುಮಾನ ನನಗಿದೆ. ಪಶ್ಚಿಮ ಘಟ್ಟಗಳ ಉದ್ದಕ್ಕೂ ಹತ್ತು ಮೂವತ್ತು ಕಿರು ಜಲವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರಕಾರ ಅನುಮತಿ ನೀಡಿದೆ. ಈ ಎಲ್ಲ ಕಡೆಯಲ್ಲೂ ಗ್ರಾನೈಟ್ ಶಿಲೆ ಸಾಕಷ್ಟು ಪ್ರಮಾಣದಲ್ಲಿ ದೊರೆಯಲೇಬೇಕು. ಅನುಮತಿ ನೀಡುವಾಗ ಅಧಿಕಾರಿಗಳು ಈ ಅಂಶವನ್ನು ಲೆಕ್ಕ ಹಿಡಿದಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಲು ನಿಶ್ಚಯಿಸಿದ್ದೇನೆ.]
********************
ತ್ಯಾಜ್ಯವಸ್ತುಗಳನ್ನು ಹೀಗೆ ಒಂದುಕಡೆ ತಂದು ಸುರಿಯುವುದರಿಂದ ಅಲ್ಲೊಂದು ನರಕ ಸೃಷ್ಟಿಯಾಗುತ್ತದೆ. ಸುತ್ತಮುತ್ತ ಮನುಷ್ಯರು ಬದುಕಲು ಸಾಧ್ಯವೇ ಇಲ್ಲದಂಥ ವಾತಾವರಣ ನಿರ್ಮಾಣವಾಗುತ್ತದೆ. ಈ ಜನರ ಕೂಗು ಕೇಳುವವರಾರು? ಹಾಗೆಂದು ಅಂಥವರ ಕೂಗನ್ನು ಮನ್ನಿಸಿದರೆ ಕಸ ಸುರಿಯುವುದೆಲ್ಲಿ? ಈ ಕಗ್ಗಂಟನ್ನು ಬಿಡಿಸಲು ನಾನು ಹೊರಡುವುದಿಲ್ಲ. ನನ್ನ ಬುದ್ಧಿಗೆ ಕಾಣುವ ಒಂದೇ ಪರಿಹಾರವೆಂದರೆ, ಅವರವರ ಮನೆಯ, ಅಂಗಡಿಯ, ಕಾರ್ಖಾನೆಯ ಕಸದ ವಿಲೇವಾರಿ ಅವರವರದೇ ಜವಾಬ್ದಾರಿಯಾಗಬೇಕು. ಯಾರೂ ತಾವು ಸೃಷ್ಟಿಸಿದ ಕಸವನ್ನು ಸಾರ್ವಜನಿಕ ಸ್ಥಳಕ್ಕೆ ತಂದು ಹಾಕಲು ಅವಕಾಶ ಇರಬಾರದು. ಕಸ ಸೃಷ್ಟಿಯಾಗದಂತೆ ಮಾಡುವುದೇ ಕಸ ವಿಲೇವಾರಿಯ ಅತ್ಯುತ್ತಮ ವಿಧಾನ. ಆದರೆ ಕಸ ಸೃಷ್ಟಿ ಮಾಡದಿದ್ದರೆ ಆಧುನಿಕ ನಾಗರಿಕತೆ ಉಸಿರು ಕಟ್ಟಿ ಸತ್ತೇ ಹೋಗುತ್ತದೆ. ಕಸ ಹೀಗೆ ಸೃಷ್ಟಿ ಮಾಡುತ್ತ ಹೋದರೂ ಮುಂದೊಂದು ದಿನ ಅದೇ ಪರಿಣಾಮ ಆದೀತು. ಆದರೆ ಅದು ಮುಂದೊಂದು ದಿನವಷ್ಟೆ? ಇವತ್ತಲ್ಲವಲ್ಲ? ಆಗ ನೋಡಿಕೊಂಡರಾಯಿತು!

ಅಂಗೈಯಲ್ಲಿ ಬೆಣ್ಣೆ ಇರಿಸಿಕೊಂಡು, ತುಪ್ಪಕ್ಕಾಗಿ ಅಲೆದಂತೆ!

(ಪುತ್ತೂರಿನ ಡಾ ನಿತ್ಯಾನಂದ ಪೈಯವರು ವೈದ್ಯವೃತ್ತಿಯ ಜೊತೆಗೆ ಬಳಕೆದಾರರ ಚಳುವಳಿಯಲ್ಲೂ ತೀವ್ರವಾಗಿ ತೊಡಗಿಕೊಂಡಿರುವವರು. ಅವರ ಲೇಖನಗಳು ಉದಯವಾಣಿಯಲ್ಲಿ ಆಗಾಗ ಪ್ರಕಟವಾಗುತ್ತಿವೆ. ಪೈಗಳು ಮಹಾ ಛಲವಾದಿ. ಒಂದು ಸಮಸ್ಯೆಯ ಬೆನ್ನು ಹಿಡಿದರೆ ಫಕ್ಕನೆ ಬಿಡುವ ಪೈಕಿ ಅಲ್ಲ. ಪುತ್ತೂರಿನ ಕುಡ್ಸೆಂಪ್ ಕಾಮಗಾರಿಗಳ ಅನರ್ಥಗಳ ಕುರಿತು ಮತ್ತೆ ಮತ್ತೆ ಲೇಖನಗಳನ್ನು ಬರೆದು, ವ್ಯವಸ್ಥೆಗೆ ಮೂಗುದಾರ ಹಾಕಿದವರು ಅವರು. ಇಂಥವರೇ ಪ್ರಜಾಪ್ರಭುತ್ವದ ನಿಜವಾದ ರಕ್ಷಕರು.
31-10-2010ರ ಉದಯವಾಣಿಯ ಪುರವಣಿಯಲ್ಲಿ ಈ ಲೇಖನ ಪ್ರಕಟವಾಗಿದೆ. ವಿದ್ಯುತ್ತಿನ ಸಮಸ್ಯೆ ಪರಿಹರಿಸಲೆಂದು ಪಶ್ಚಿಮ ಘಟ್ಟಗಳ ಅಮೂಲ್ಯ ಕಾಡುಗಳನ್ನು ನಾಶ ಮಾಡಲು ಕರ್ನಾಟಕ ಸರ್ಕಾರ ಹೊಂಚುಹಾಕುತ್ತಿದೆ. ಕಂಟ್ರಾಕ್ಟರುಗಳು ಜೆಸಿಬಿಗಳನ್ನು ತಯಾರಿಟ್ಟುಕೊಂಡು ತೆರೆಮರೆಯಲ್ಲಿ ಕಾಯುತ್ತಿದ್ದಾರೆ. ಅಧಿಕಾರಿಗಳಲ್ಲಿ ಕೆಲವರು ಲೋಕಾಯುಕ್ತರಿಗೆ ಸಿಕ್ಕದ ಹಾಗೆ ದುಡ್ಡು ಮುಚ್ಚಿಡಲು ಹೊಸ ಉಪಾಯಗಳನ್ನು ಹುಡುಕಿಟ್ಟುಕೊಂಡು ತಯಾರಾಗಿದ್ದಾರೆ. ಇಂಥ ಸನ್ನಿವೇಶದಲ್ಲಿ ಸಮಸ್ಯೆಗೆ ಬೇರೊಂದು ಪರಿಹಾರ ಇರುವುದನ್ನು ಎತ್ತಿ ತೋರಿಸಿರುವುದಕ್ಕಾಗಿ ಈ ಲೇಖನ ನನಗೆ ಮಹತ್ವದ್ದಾಗಿ ಕಂಡಿದೆ. ಹಾಗಾಗಿ ಅದನ್ನು ನನ್ನ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ. ಲೇಖನವನ್ನು ಈಗಿನ ಇಂಧನ ಮಂತ್ರಿ ಶೋಭಾ ಕರಂದ್ಲಾಜೆಯವರಿಗೂ ಕಳಿಸಿ, ಅವರ ಅಭಿಪ್ರಾಯ ಕೇಳಿದ್ದೇನೆ. ನಿಮ್ಮಲ್ಲೂ ಯಾರಿಗಾದರೂ ಹಾಗೆ ಮಾಡಬೇಕೆಂದು ಕಂಡರೆ, ಮಾಡಬಹುದು).
-ಎಚ್. ಸುಂದರ ರಾವ್)

ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಬೇಸಗೆಯ ದಿನಗಳಲ್ಲಿ ಮಾತ್ರ ತಲೆದೋರುತ್ತಿದ್ದ ವಿದ್ಯುತ್ ಕ್ಷಾಮವು ಇತ್ತೀಚೆಗೆ ಮಳೆಗಾಲದ ದಿನಗಳಲ್ಲೂ ಉದ್ಭವಿಸಲಾರಂಭಿಸಿದೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯದಲ್ಲಿನ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಅಲ್ಪ ಬೆಲೆಗೆ ಖರೀದಿಸದ ರಾಜ್ಯ ಸರಕಾರವು, ನೆರೆಯ ರಾಜ್ಯಗಳಿಂದ ದುಬಾರಿ ಬೆಲೆ ತೆತ್ತು ವಿದ್ಯುತ್ತನ್ನು ಖರೀದಿಸುತ್ತಿದೆ!
ಕಳೆದ ಕೆಲ ವರ್ಷಗಳಿಂದ ಕರ್ನಾಟಕ ರಾಜ್ಯವು ವಿದ್ಯುತ್ ಕ್ಷಾಮದ ಸಮಸ್ಯೆಯಿಂದ ತತ್ತರಿಸುತ್ತಿದೆ. ಏಕೆಂದರೆ ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಬೇಡಿಕೆಯ ಪ್ರಮಾಣವು ಉತ್ಪಾದನೆಯ ಪ್ರಮಾಣಕ್ಕಿಂತಲೂ ಸಾಕಷ್ಟು ಹೆಚ್ಚಾಗಿದೆ. ಇದಲ್ಲದೆ ರಾಜ್ಯದಲ್ಲಿರುವ ಹಳೆಯ ವಿದ್ಯುತ್ ಉತ್ಪಾದನಾ ಸ್ಥಾವರಗಳು ಪದೇ ಪದೇ ಕೆಟ್ಟು ಹೋಗುತ್ತಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣವು ಇನ್ನಷ್ಟು ಕಡಿಮೆಯಾಗುತ್ತಿದೆ. ಇಷ್ಟೆಲ್ಲಾ ಸಾಲದೆಂಬಂತೆ ವಿದ್ಯುತ್ತಿನ ಕೊರತೆ ಅತಿಯಾದ ಸಂದರ್ಭಗಳಲ್ಲಿ ಕೇಂದ್ರದ ವಿದ್ಯುತ್ ಗ್ರಿಡ್ ನಿಂದ ರಾಜ್ಯಕ್ಕೆ ನ್ಯಾಯಸಮ್ಮತವಾಗಿ ಲಭಿಸಬೇಕಿದ್ದ ವಿದ್ಯುಚ್ಛಕ್ತಿಯಲ್ಲಿ ಗಣನೀಯ ಪ್ರಮಾಣದ ವಿದ್ಯುತ್ತನ್ನು ನೆರೆಯ ರಾಜ್ಯಗಳು ಕಬಳಿಸುತ್ತಿರುವುದರಿಂದ ರಾಜ್ಯದ ವಿದ್ಯುತ್ ಕ್ಷಾಮದ ಸಮಸ್ಯೆಯು ಇನ್ನಷ್ಟು ಬಿಗಡಾಯಿಸುತ್ತಿದೆ.
ರಾಜ್ಯದ ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆಗಳ ನಡುವಿನ ಕೊರತೆಯನ್ನು ತುಂಬಿಸಲು ಸರಕಾರವು ನೆರೆಯ ರಾಜ್ಯಗಳಿಂದ ಆವಶ್ಯಕ ಪ್ರಮಾಣದ ವಿದ್ಯುಚ್ಛಕ್ತಿಯನ್ನು ಖರೀದಿಸುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿರುವ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಖರೀದಿಸಲು ಮೀನ ಮೇಷ ಎಣಿಸುತ್ತಿದೆ. ನಿಜ ಹೇಳಬೇಕಿದ್ದಲ್ಲಿ ರಾಜ್ಯ ಸರಕಾರವು ಇದೀಗ ಪ್ರತಿನಿತ್ಯ 1000 ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ನೆರೆಯ ರಾಜ್ಯಗಳಿಂದ ಖರೀದಿಸುತ್ತಿದೆ. ವಿಶೇಷವೆಂದರೆ ನೆರೆಯ ರಾಜ್ಯಗಳು ನಮ್ಮ ರಾಜ್ಯದ ಉಕ್ಕು ತಯಾರಿಕಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಅಲ್ಪಬೆಲೆಗೆ ಖರೀದಿಸುತ್ತಿವೆ!
ಇದೇ ವರ್ಷದ ಬೇಸಗೆಯ ದಿನಗಳಲ್ಲಿ ವಿದ್ಯುತ್ ಕ್ಷಾಮದ ಬಾಧೆ ಮಿತಿ ಮೀರಿದಾಗ ರಾಜ್ಯದಲ್ಲಿ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ಕಡ್ಡಾಯವಾಗಿ ತನಗೆ ನೀಡಬೇಕೆಂದು ಸರಕಾರ ಆದೇಶಿಸಿತ್ತು. ಸರಕಾರದ ಈ ನಿಲುವು ಖಾಸಗಿ ಘಟಕಗಳ ಅಸಮಾಧಾನಕ್ಕೆ ಕಾರಣವೆನಿಸಿತ್ತು. ಏಕೆಂದರೆ ಈ ಘಟಕಗಳು ಉತ್ಪಾದಿಸುತ್ತಿರುವ ಹೆಚ್ಚುವರಿ ವಿದ್ಯುತ್ತನ್ನು ವರ್ಷವಿಡೀ ಅಲ್ಪಬೆಲೆಗೆ ಪೂರೈಸುವ ಪ್ರಸ್ತಾವವನ್ನು ನಿರಾಕರಿಸಿರುವ ಸರಕಾರವು, ವಿದ್ಯುತ್ ಕ್ಷಾಮದ ದಿನಗಳಲ್ಲಿ ಮಾತ್ರ ತಮಗೆ ಬೇಕಾದಷ್ಟು ವಿದ್ಯುಚ್ಛಕ್ತಿಯನ್ನು ಪೂರೈಸಲೇ ಬೇಕು ಎನ್ನುವುದೇ ಅಸಮಾಧಾನಕ್ಕೆ ಕಾರಣವೆನಿಸಿದೆ. ಸರಕಾರವು ಈ ಘಟಕಗಳಿಂದ ನಿರಂತರವಾಗಿ ವಿದ್ಯುಚ್ಛಕ್ತಿಯನ್ನು ಖರೀದಿಸಿದಲ್ಲಿ "ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡುವುದು" ತಪ್ಪುತ್ತದೆ.
ಉದಾಹರಣೆಗೆ ಬಳ್ಳಾರಿಯ ತೋರಣಗಲ್ಲಿನಲ್ಲಿರುವ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯು ಪ್ರತಿನಿತ್ಯ 1100 ಮೆ.ವ್ಯಾ. ವಿದ್ಯುತ್ತನ್ನು ಉತ್ಪಾದಿಸುತ್ತಿದೆ. ಉಕ್ಕಿನ ಕಾರ್ಖಾನೆಗೆ ಬೇಕಾಗುವ 400 ಮೆ.ವ್ಯಾ. ವಿದ್ಯುತ್ತನ್ನು ಬಳಸಿದ ಬಳಿಕ ಉಳಿದ 700 ಮೆ.ವ್ಯಾ. ವಿದ್ಯುತ್ತನ್ನು ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳಿಗೆ ಕರ್ನಾಟಕದ ಗ್ರಿಡ್ ಮೂಲಕವೇ ಪೂರೈಕೆ ಮಾಡುತ್ತದೆ.
ಇದೀಗ ರಾಜ್ಯಸರಕಾರವು ನೆರೆಯ ರಾಜ್ಯಗಳಿಂದ ಪ್ರತಿ ಯೂನಿಟ್ ವಿದ್ಯುತ್ತಿಗೆ 10 ರೂ.ನಂತೆ ಪಾವತಿಸುತ್ತಿದ್ದು ನಮ್ಮದೇ ರಾಜ್ಯದಲ್ಲಿರುವ ಜಿಂದಾಲ್ ಉಕ್ಕು ತಯಾರಿಕಾ ಘಟಕದೊಂದಿಗೆ ದೀರ್ಘಕಾಲೀನ ಒಪ್ಪಂದವನ್ನು ಮಾಡಿಕೊಂಡಲ್ಲಿ ಈ ಸಂಸ್ಥೆಯು ಪ್ರತಿ ಯೂನಿಟ್ಟಿಗೆ ಕೇವಲ 4 ರೂ.ನಂತೆ ವಿದ್ಯುತ್ ಪೂರೈಸಲು ಸಿದ್ಧವಿದೆ. ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯ ನಿರ್ದೇಶಕರು ಹೇಳುವಂತೆ ರಾಜ್ಯ ಸರಕಾರವು ಬೇಸಗೆ ದಿನಗಳಲ್ಲಿ ಮಾತ್ರ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸದೇ, ವರ್ಷವಿಡೀ ವಿದ್ಯುತ್ತನ್ನು ಖರೀದಿಸಲು ಸಿದ್ಧವಿದ್ದಲ್ಲಿ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳು ಉಳಿತಾಯವಾಗಲಿದೆ. ಇಷ್ಟು ಮಾತ್ರವಲ್ಲ ಈ ಸಂಸ್ಥೆಯು ತನ್ನ ವಿದ್ಯುತ್ ಉತ್ಪಾದನೆಯನ್ನು ಇನ್ನೂ 600 ಮೆ.ವ್ಯಾ.ಗಳಷ್ಟು ಹೆಚ್ಚಿಸಲಿದ್ದು ಇದನ್ನು ರಾಜ್ಯ ಸರಕಾರಕ್ಕೆ ಪೂರೈಸಲು ಸಿದ್ಧವಿದೆ. ಪ್ರಸ್ತುತ ಈ ಸಂಸ್ಥೆಯು ನೆರೆಯ ರಾಜ್ಯಗಳಿಗೆ ಸಾಕಷ್ಟು ವಿದ್ಯುಚ್ಛಕ್ತಿಯನ್ನು ಪೂರೈಸುತ್ತಿದ್ದರೂ ವಿದ್ಯುತ್ ರವಾನೆಯ ಸಂದರ್ಭದಲ್ಲಿ ಸುಮಾರು 200 ಮೆ.ವ್ಯಾ.ನಷ್ಟು ವಿದ್ಯುಚ್ಛಕ್ತಿಯು ನಷ್ಟವಾಗುತ್ತಿದೆ. ಆದರೆ ಈ ಹೆಚ್ಚುವರಿ ವಿದ್ಯುತ್ತನ್ನು ರಾಜ್ಯ ಸರಕಾರವೇ ಖರೀದಿಸಲು ಸಿದ್ಧವಿದ್ದಲ್ಲಿ, ರಾಜ್ಯ ಸರಕಾರಕ್ಕೆ 10 ರೂ.ಗಳಿಗೆ 2.5 ಯೂನಿಟ್ ವಿದ್ಯುಚ್ಛಕ್ತಿ ಲಭಿಸುವುದರೊಂದಿಗೆ ಸಂಸ್ಥೆಗೆ ಸಂಭವಿಸುತ್ತಿರುವ ನಷ್ಟವನ್ನೂ ತಡೆಗಟ್ಟಬಹುದಾಗಿದೆ.
ಉಕ್ಕು ತಯಾರಿಸುವ ಸಂದರ್ಭದಲ್ಲಿ ಕಲ್ಲಿದ್ದಲನ್ನು ಉರಿಸುವ ಕಾರ್ಖಾನೆಗಳು ಇದರಿಂದ ಉತ್ಪನ್ನವಾಗುವ ಉಷ್ಣತೆಯನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸುತ್ತವೆ. ರಾಜ್ಯದಲ್ಲಿ ಇರುವ ಇತರ ಕಬ್ಬಿಣದ ಕಾರ್ಖಾನೆಗಳು ಮತ್ತು ಜಾಗತಿಕ ಹೂಡಿಕೆದಾರರ ಸಮಾವೇಶದ ಫಲವಾಗಿ ರಾಜ್ಯದಲ್ಲಿ ಹೊಸತಾಗಿ ನಿರ್ಮಿತವಾಗಲಿರುವ ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಮುಂದೆ ಉತ್ಪಾದಿಸಲಿರುವ ಹೆಚ್ಚುವರಿ ವಿದ್ಯುತ್ತನ್ನು ಸರಕಾರವು ನಿರಂತರವಾಗಿ ಖರೀದಿಸಿದಲ್ಲಿ, ರಾಜ್ಯದ ವಿದ್ಯುತ್ ಕ್ಷಾಮದ ಸಮಸ್ಯೆಯು ನಿಶ್ಚಿತವಾಗಿ ಅಂತ್ಯಗೊಳ್ಳಲಿದೆ. ಜೊತೆಗೆ ನೂತನ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕಾಗಿ ರಾಜ್ಯ ಸರಕಾರಗಳು ವ್ಯಯಿಸಲೇಬೇಕಾದ ಸಹಸ್ರಾರು ಕೋಟಿ ರೂ.ಗಳು ಉಳಿತಾಯವಾಗಲಿದೆ. ರಾಜ್ಯ ಸರಕಾರವು ಇದೀಗ ನೆರೆಯ ರಾಜ್ಯಗಳಿಂದ 1000 ಮೆ.ವ್ಯಾ. ವಿದ್ಯುತ್ತನ್ನು ಖರೀದಿಸಲು ಬಳಸುತ್ತಿರುವ 350 ಕೋಟಿ ರೂ.ಗಳಲ್ಲೇ ಇದರ ಎರಡೂವರೆ ಪಟ್ಟು ಅಧಿಕ ವಿದ್ಯುಚ್ಛಕ್ತಿಯನ್ನು ರಾಜ್ಯದ ಉಕ್ಕಿನ ಕಾರ್ಖಾನೆಗಳಿಂದಲೇ ಖರೀದಿಸಬಹುದಾಗಿದೆ.
-ಡಾ. ಸಿ. ನಿತ್ಯಾನಂದ ಪೈ

ಗುರುವಾರ, ಸೆಪ್ಟೆಂಬರ್ 9, 2010

ಎಸ್ ಇ ಝಡ್ ಪೈಪ್ ಲೈನ್: ಪರೋಕ್ಷ ಉದ್ಯೋಗ ಪರದೇಶಿಗಳಿಗೆ?

ಅಭಿವೃದ್ಧಿ:ಕಾಲ ಮೇಲೆ ಕಲ್ಲು
ಕಳೆದ ಜುಲೈ ತಿಂಗಳ 24ನೇ ತಾರೀಖಿನಂದು ಮಂಗಳೂರು ಎಸ್ ಇ ಝಡ್ ಕಂಪೆನಿ ಉದಯವಾಣಿಯಲ್ಲಿ "ನೇತ್ರಾವತಿ ನದಿಯಿಂದ ನೀರು ಸಾಗಿಸುವ ಕಾಮಗಾರಿ"ಗೆ ಒಂದು ಟೆಂಡರ್ ಕರೆದಿದೆ. ಈ ಟೆಂಡರಿನ ಒಂದು ಪ್ರಮುಖ ಲಕ್ಷಣ "Bidding is open to all contractors / firms, both Indian and foreign firms......". ಎಂದರೆ ಭಾರತದ ಅಥವಾ ವಿದೇಶದ ಯಾವುದೇ ಗುತ್ತಿಗೆದಾರರು ಈ ಕಾಮಗಾರಿಯನ್ನು ನಿರ್ವಹಿಸಲು ಅರ್ಜಿ ಸಲ್ಲಿಸಬಹುದು. ಅಭಿವೃದ್ಧಿಯ ದ್ಯೋತಕವಾಗಿರುವ ಈ ಮತ್ತು ಇಂತಹ ಕಂಪೆನಿಗಳ ಪರವಾಗಿ ಮಾತಾಡುವವರು ಪ್ರಮುಖವಾಗಿ ಮುಂದಿಡುವ ವಾದ "ಅವು ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿ ಮಾಡುತ್ತವೆ" ಎನ್ನುವುದು. ಈಗ ಪೈಪ್ ಲೈನ್ ಕೂರಿಸುವ "ಪರೋಕ್ಷ ಉದ್ಯೋಗಸೃಷ್ಟಿ" ಆಗಿದೆ. ಆದರೆ ಯಾರಿಗೆ? ತಾಂತ್ರಿಕವಾಗಿ ಭಾರತಕ್ಕಿಂತ ಎಷ್ಟೋ ಮುಂದಿರುವ ಚೀನಾ, ಜಪಾನ್, ಕೊರಿಯಾ ಮುಂತಾದ ದೇಶಗಳ ಯಾವುದೇ ಕಂಪೆನಿ ಭಾರತದ ಕಂಪೆನಿಗಳಿಗಿಂತ ಕಡಿಮೆ ದರದಲ್ಲಿ ಈ ಕಾಮಗಾರಿ ನಿರ್ವಹಿಸಲು ಮುಂದೆ ಬರುವ ಸಾಧ್ಯತೆ ಇಲ್ಲದೆ ಇಲ್ಲ. ಆಗ ಸಹಜವಾಗಿ ಕಾಮಗಾರಿ ಅಂತಹ ಕಂಪೆನಿಯ ಪಾಲಾಗುತ್ತದೆ. ಹಾಗಾದರೆ "ಉದ್ಯೋಗ ಸೃಷ್ಟಿ" ಆದದ್ದು ಯಾರಿಗೆ? ಕಾಲುವೆ ತೋಡಿ ಪೈಪು ಕೂರಿಸಿ ಕೊಡಬಲ್ಲ ತಾಂತ್ರಿಕತೆ, ಆರ್ಥಿಕ ಬಲ ಹೊಂದಿರುವ ಭಾರತೀಯ ಕಂಪೆನಿಗಳು ಇಲ್ಲವೆ? ಈ ಮೊದಲು ನೇತ್ರಾವತಿ ನದಿಯಿಂದ ಮಂಗಳೂರು ಮಹಾನಗರಪಾಲಿಕೆ ಹಾಗೂ ಎಂ ಆರ್ ಪಿ ಎಲ್ ಕಂಪೆನಿಗಳು ಪೈಪ್ ಲೈನ್ ಹಾಕಿಲ್ಲವೆ? ಆ ಪೈಪುಗಳಲ್ಲಿ ನೀರು ಹರಿಯುತ್ತಿಲ್ಲವೆ? ಟೆಂಡರಿಗೆ ಅರ್ಜಿ ಸಲ್ಲಿಸಲು ವಿದೇಶೀ ಕಂಪೆನಿಗಳಿಗೆ ಅವಕಾಶ ಕೊಟ್ಟರೆ, ಅಭಿವೃದ್ಧಿಯ ಫಲವನ್ನು ನಾವಾಗಿ ಪರದೇಶಿಗಳಿಗೆ ಬಿಟ್ಟುಕೊಟ್ಟಂತಾಗಲಿಲ್ಲವೆ? ಇಂತಹ ಉದ್ಯೋಗಸೃಷ್ಟಿಯಿಂದ ದ.ಕ. ಅಥವಾ ಕರ್ನಾಟಕದವರನ್ನು ಬಿಡಿ, ಭಾರತೀಯರಿಗೆ ಆಗುವ ಪ್ರಯೋಜನವಾದರೂ ಏನು? ಕಾಮಗಾರಿಯ ಹೆಸರಿನಲ್ಲಿ ಯಾವ್ಯಾವ ಪರದೇಶಿಗಳು ನಮ್ಮ ದೇಶದ ಮೂಲೆ ಮೂಲೆಗೆ ಪ್ರವೇಶಿಸಿ, ದೇಶದ ಆಯಕಟ್ಟಿನ ಪ್ರದೇಶಗಳ ನಿಕಟ ಪರಿಚಯ ಮಾಡಿಕೊಳ್ಳಲು ನಾವು ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೆ? ಇದು ದೇಶದ ಭದ್ರತೆಯ ದೃಷ್ಟಿಯಿಂದ ಸಾಧುವೆ? ಸೂಕ್ತವೆ? ಹಾಗಾದರೆ ಕಾಲ ಮೇಲೆ ಕಲ್ಲು ಹಾಕಿಕೊಳ್ಳುವ ಇಂತಹ ಕೆಲಸವನ್ನೇ ಅಭಿವೃದ್ಧಿ ಎಂದು ಕರೆಯಲಾಗುತ್ತಿದೆಯೆ?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ.
ಷರತ್ತುಗಳಿವೆ, ಪಾಲಿಸುವವರೆಲ್ಲಿ?
ನೇತ್ರಾವತಿ ನದಿಯಿಂದ ನೀರೆತ್ತಲು ಅನುಮತಿ ಕೊಡುವಾಗ ಜಲ ಸಂಪನ್ಮೂಲ ಇಲಾಖೆಯು ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಒಟ್ಟು 19 ಷರತ್ತುಗಳನ್ನು ವಿಧಿಸಿದೆ. ಈ ಪೈಕಿ 6ನೆಯ ಷರತ್ತು ಇದು: "ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು". ಕಂಪೆನಿ ಅನುಮತಿಯನ್ನೇನಾದರೂ ಪಡೆದಿದೆಯೇ ಎಂಬುದನ್ನು ತಿಳಿಯುವ ಕುತೂಹಲದಿಂದ ನಾನು ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ದ.ಕ. ಜಿಲ್ಲಾಧಿಕಾರಿಯವರಿಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿಗಳನ್ನು ಸಲ್ಲಿಸಿದೆ.
ಲೋಕೋಪಯೋಗಿ ಇಲಾಖೆ ಯಾವುದೇ ತಕರಾರಿಲ್ಲದೆ ಕೂಡಲೇ ಸಾಕಷ್ಟು ವಿವರವಾದ ಮಾಹಿತಿ ನೀಡಿತು. ( ಈ ಮಾಹಿತಿಯ ಮುಖ್ಯಭಾಗವನ್ನು "ವಂಶ" ಪತ್ರಿಕೆ ಕಳೆದ ಸಂಚಿಕೆಯಲ್ಲಿ ಪ್ರಕಟಿಸಿದೆ). ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳಲ್ಲಿ ಯಾವ ಯಾವ ರಸ್ತೆಗಳ ಬದಿಯಲ್ಲಿ ಪೈಪ್ ಲೈನ್ ಗಳನ್ನು ಅಳವಡಿಸಲಾಗುವುದು, ಈ ಬಗ್ಗೆ ಕಂಪೆನಿಗೆ ವಿಧಿಸಲಾಗಿರುವ ಷರತ್ತುಗಳೇನು ಮುಂತಾದ ಮಾಹಿತಿಯಲ್ಲದೆ, ಕಂಪೆನಿ ಇಲಾಖೆಗೆ ನೀಡಬೇಕಾದ ಹಣ ಎಷ್ಟು ಎಂಬ ಮಾಹಿತಿಯನ್ನೂ ಇಲಾಖೆ ನನಗೆ ನೀಡಿತು.

ಜಿಲ್ಲಾಧಿಕಾರಿಗಳ ಕಛೇರಿ ನನ್ನ ಅರ್ಜಿಯನ್ನು-ಮಾಹಿತಿ ನೀಡುವಂತೆ ಸೂಚಿಸಿ-ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಕಳಿಸಿಕೊಟ್ಟಿತು! ಮಂಗಳೂರು ಎಸ್ ಇ ಝಡ್ ಕಂಪೆನಿ "ನಾವು RTI ವ್ಯಾಪ್ತಿಯಲ್ಲಿ ಬರುವುದಿಲ್ಲ" ಎಂಬ ಒಂದು ಸಾಲಿನ ಉತ್ತರ ನೀಡಿ ಕೈ ತೊಳೆದುಕೊಂಡಿತು. ನಾನು ಜಿಲ್ಲಾಧಿಕಾರಿಯವರಿಗೆ ಪುನಃ ಪತ್ರ ಬರೆದು "ಮಾಹಿತಿ ನೇರವಾಗಿ ನಿಮ್ಮ ಕಛೇರಿಗೆ ಸಂಬಂಧಪಟ್ಟಿದೆ. ಆದ್ದರಿಂದ ನೀವೇ ಅದನ್ನು ಕೊಡಬೇಕು" ಎಂದು ಕೇಳಿದ್ದೇನೆ. ಅವರ ಉತ್ತರಕ್ಕೆ ಕಾಯುತ್ತಿದ್ದೇನೆ. ಉತ್ತರ ಬರುತ್ತದೆ ಎಂಬ ವಿಶ್ವಾಸವಿದೆ.
ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಹೀಗೆ ಉತ್ತರಿಸಿದ್ದೇನೆ: "ನಿಮಗೆ ಗೊತ್ತಿರುವಂತೆ ಪ್ರಕರಣ ಮಾಹಿತಿ ಹಕ್ಕು ಆಯೋಗದ ಎದುರಿಗೆ ತೀರ್ಪಿಗೆ ಬಾಕಿ ಇದೆ. ಆದ್ದರಿಂದ "ನಾವು RTI ವ್ಯಾಪ್ತಿಯಲ್ಲಿ ಬರುವುದಿಲ್ಲ" ಎಂದು ಹೇಳುವ ಅಧಿಕಾರ ನಿಮಗೆ ಇಲ್ಲ. ಆ ಅಧಿಕಾರ ಇರುವುದು ಮಾಹಿತಿ ಹಕ್ಕು ಆಯೋಗಕ್ಕೆ"

ಸ್ವಾರಸ್ಯ ಇರುವುದು ಅರಣ್ಯ ಇಲಾಖೆಗೆ ಸಲ್ಲಿಸಿದ ಅರ್ಜಿ ವಿಚಾರದಲ್ಲಿ. ನಾನು ಅರ್ಜಿ ಸಲ್ಲಿಸಿದ್ದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ. ಅವರು ಅದನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ವರ್ಗಾಯಿಸಿ, ಮಾಹಿತಿ ನೀಡುವಂತೆ ಸೂಚಿಸಿದರು. ಸ.ಅ.ಸಂ. ರವರು "ಈ ಬಗ್ಗೆ ಯಾವುದೇ ಮಾಹಿತಿಯು ಅರಣ್ಯ ಇಲಾಖೆಯಲ್ಲಿ ಲಭ್ಯವಿರುವುದಿಲ್ಲ" ಎಂಬ ಒಂದು ಸಾಲಿನ ಉತ್ತರ (ಮಾಹಿತಿ?) ನೀಡಿದರು! ನಾನು ಪಟ್ಟು ಬಿಡಲಿಲ್ಲ. "ನಾನು ಕೇಳಿರುವುದು ಅರಣ್ಯಕ್ಕೆ ಸಂಬಂಧಪಟ್ಟ ಮಾಹಿತಿ. ಅದನ್ನು ನಿಮ್ಮನ್ನಲ್ಲದೆ ಬೇರಾರನ್ನೂ ನಾನು ಕೇಳುವಂತಿಲ್ಲ. ಆದ್ದರಿಂದ ನೀವೇ ಅದನ್ನು ಕೊಡಬೇಕಾಗುತ್ತದೆ" ಎಂದು ಹೇಳಿ ಪೂರಕ ಮಾಹಿತಿಯಾಗಿ, ನನಗೆ ಈ ಬಗ್ಗೆ ಗೊತ್ತಿರುವ ಎಲ್ಲ ವಿಷಯವನ್ನೂ ತಿಳಿಸಿ, ಮಾಹಿತಿ ನೀಡುವಂತೆ ಪುನಃ ಪತ್ರ ಬರೆದೆ. ಸುಮಾರು ಒಂದು ತಿಂಗಳ ನಂತರ ಸ.ಅ.ಸಂ. ರವರ ಉತ್ತರ ಬಂತು: "ಮೇಲಿನ ವಿಷಯಕ್ಕೆ ಸಂಬಂಧಿಸಿ ದಿನಾಂಕ 7-8-2010ರಂದು ನೀಡಿದ ಉತ್ತರವು ಸಮಂಜಸವಾಗಿದೆ. ಹೆಚ್ಚಿನ ಮಾಹಿತಿಗಳಿಗೆ ಮಂಗಳೂರು ಎಸ್ ಇ ಝಡ್ ಕಂಪೆನಿಯನ್ನು ಸಂಪರ್ಕಿಸಬಹುದಾಗಿದೆ". ಮೊದಲ ಪತ್ರಕ್ಕೆ ಒಂದು ಸಾಲಿನ ಉತ್ತರವಾದರೆ, ಎರಡನೆಯದಕ್ಕೆ ಎರಡು ಸಾಲಿನ ಉತ್ತರ! ಹೇಗಾದರೂ ಮಾಡಿ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸುವ ವಿಶಿಷ್ಟ ಅಧಿಕಾರಶಾಹಿ ಮನೋಭಾವ! ನಾನು ಬೇರೆ ದಾರಿ ಇಲ್ಲದೆ, ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿ ಬೇಕಾದ ದಾಖಲೆಗಳನ್ನೂ, ಅರ್ಜಿಯನ್ನೂ ಸಿದ್ದಪಡಿಸಿದೆ. ಆದರೆ ಅದನ್ನು ಮಾಹಿತಿ ಹಕ್ಕು ಆಯೋಗಕ್ಕೆ ಕಳಿಸುವ ಮುಂಚೆಯೇ ಉ.ಅ.ಸಂ.ರವರಿಂದ ಒಂದು ಪತ್ರ ಬಂತು: ".....ತಾವು ತಿಳಿಸಿರುವ ಮಾಹಿತಿಗಳಿಗೆ ಧನ್ಯವಾದಗಳು. ಸದ್ರಿ ಮಾಹಿತಿಯನ್ನು ಆಧರಿಸಿ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ತಮ್ಮ ಪತ್ರವನ್ನು ವಲಯ ಅರಣ್ಯ ಅಧಿಕಾರಿ, ಮಂಗಳೂರು ಮತ್ತು ಬಂಟ್ವಾಳ ಇವರಿಗೆ ಕಳುಹಿಸಲಾಗಿದೆ. ಹೆಚ್ಚಿನ ಮಾಹಿತಿಗಳಿಗೆ ತಾವು ಅವರನ್ನು ನೇರವಾಗಿ ಸಂಪರ್ಕಿಸಬಹುದು". ಕೇವಲ ಕುತೂಹಲಕ್ಕಾಗಿ ಸ.ಅ.ಸಂ.ರವರ ಎರಡು ಸಾಲಿನ ಪತ್ರವನ್ನೂ, ಉ.ಅ.ಸಂ.ರವರ ಪತ್ರವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದೆ. ಎರಡು ಪತ್ರಗಳಿಗೂ ಸಹಿ ಇರುವುದು ಒಬ್ಬರದ್ದೇ: ಸ.ಅ.ಸಂ.ರವರದ್ದು. 31-8-2010ರ ಪತ್ರದಲ್ಲಿ ಉ.ಅ.ಸಂ.ರವರ ಪರವಾಗಿ ಅವರು ಸಹಿ ಹಾಕಿದ್ದರೆ, 1-9-2010ರ ಪತ್ರದಲ್ಲಿ ತಾನು ಬರೆದ ಪತ್ರಕ್ಕೆ ತಾನೇ ಸಹಿ ಹಾಕಿದ್ದಾರೆ!
ಈ ನಡುವೆ ಮಂಗಳೂರು ಮತ್ತು ಬಂಟ್ವಾಳದ ವಲಯ ಅಧಿಕಾರಿಗಳು ನಾನು ನೀಡಿದ ಮಾಹಿತಿಯ ಆಧಾರದಲ್ಲಿ ಸ್ಥಳ ತನಿಖೆ ನಡೆಸಬೇಕೆಂದು ಉ.ಅ.ಸಂ.ರವರು ಹೇಗೆ ನಿರೀಕ್ಷಿಸುತ್ತಾರೋ ನನಗೆ ಅರ್ಥವಾಗುವುದಿಲ್ಲ. ಇಲಾಖೆಗೆ ಮಾಹಿತಿ ನೀಡಲು ನಾನು ಯಾವ ಪೋತಪ್ಪ ನಾಯಕ? ನನಗೆ ತಿಳಿದ ಮಟ್ಟಿಗೆ ಉ.ಅ.ಸಂ. ಅಥವಾ ಸ.ಅ.ಸಂ.ರವರು ಮಂಗಳೂರು ಎಸ್ ಇ ಝಡ್ ಕಂಪೆನಿಗೆ ಬರೆದು, ಕಂಪೆನಿಯ ಪೈಪ್ ಲೈನ್ ಹೋಗುವ ದಾರಿಯ ನಕಾಶೆಯನ್ನು ಪಡೆದು, ಅದನ್ನು ವಲಯ ಅರಣ್ಯ ಅಧಿಕಾರಿಗಳಿಗೆ ಕೊಟ್ಟರೆ ಮಾತ್ರ ವಲಯ ಅರಣ್ಯ ಅಧಿಕಾರಿಗಳು ಸಮರ್ಪಕವಾಗಿ ಸ್ಥಳ ತನಿಖೆ ನಡೆಸಲು ಸಾಧ್ಯ. ಹಾಗಲ್ಲದೆ ನಾನು ಕೊಟ್ಟ ಅರೆಬರೆ ಮಾಹಿತಿಯಿಂದ ಎಂಥ ಸ್ಥಳ ತನಿಖೆ? ಎಂಥ ವರದಿ?
ಉ.ಅ.ಸಂ.ರವರಿಗೆ ಪತ್ರ ಬರೆಯುವಾಗ ನನ್ನಿಂದ ಒಂದು ಲೋಪವಾಗಿತ್ತು. ಜಲಸಂಪನ್ಮೂಲ ಇಲಾಖೆ ವಿಧಿಸಿರುವ ಷರತ್ತಿನ ಬಗ್ಗೆ ನಾನು ಅವರಿಗೆ ಮಾಹಿತಿ ನೀಡಿರಲಿಲ್ಲ. ಇದೀಗ ಆ ಮಾಹಿತಿಯನ್ನು ನೀಡಿ, ಸ್ಥಳ ತನಿಖೆಗೆ ವಲಯ ಅರಣ್ಯಾಧಿಕಾರಿಗಳಿಗೆ ನಕಾಶೆ ಅಗತ್ಯವಿರುವುದನ್ನು ತಿಳಿಸಿ ಮತ್ತೊಂದು ಪತ್ರ ಬರೆದಿದ್ದೇನೆ. ಏನಾಗುತ್ತದೋ ನೋಡೋಣ.
ಹಾದಿಗುಂಟ ಊರುಗಳಿಗೆ ಕುಡಿಯುವ ನೀರು?
ಜಲಸಂಪನ್ಮೂಲ ಇಲಾಖೆ ವಿಧಿಸಿರುವ 16ನೆಯ ಷರತ್ತು ಇದು: "ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೇಲೆ ಸಂಗ್ರಹಿಸಿ ಕೊಂಡೊಯ್ಯುವ ನೀರಿನಿಂದ ಸಂಸ್ಥೆಯು ಹಾದಿಗುಂಟ ಬರುವ ಪಟ್ಟಣಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ವ್ಯವಸ್ಥೆ ಮಾಡತಕ್ಕದ್ದು." (ಇಲ್ಲಿ "ಕುಮಾರಧಾರಾ" ಎಂದಿರುವುದು ತಪ್ಪು; "ಗುರುಪುರ ನದಿ" ಎಂದಿರಬೇಕಾಗಿತ್ತು. ಷರತ್ತುಗಳಿರಲಿ, ಲಕ್ಷಾಂತರ ರೂಪಾಯಿ ವ್ಯವಹಾರದ, ಸ್ಟಾಂಪ್ ಪೇಪರ್ ಮೇಲೆ ಬರೆಯುವ ಅಗ್ರಿಮೆಂಟುಗಳಲ್ಲೂ ಇಂತಹ ದೋಷಗಳು ಸರಕಾರಿ ಅಧಿಕಾರಿಗಳಿಗೆ ಲೆಕ್ಕದ್ದೇ ಅಲ್ಲ. ಈ ಮಾತಿಗೆ ನನ್ನಲ್ಲಿ ಆಧಾರವಿದೆ).
ಲೋಕೋಪಯೋಗಿ ಇಲಾಖೆ ನನಗೆ ನೀಡಿದ ಮಾಹಿತಿಯಲ್ಲಿ ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ ಯಾವ ಯಾವ ಭಾಗದಲ್ಲಿ ಪೈಪ್ ಲೈನ್ ಹಾದು ಹೋಗುತ್ತದೆ ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಈ ಮಾಹಿತಿಗಳನ್ನು ನೀಡಿ ನಾನು ಬಂಟ್ವಾಳದ ಶಾಸಕರಾದ ಶ್ರೀ ಬಿ. ರಮಾನಾಥ ರೈಯವರಿಗೂ, ಲೋಕಸಭಾ ಸದಸ್ಯ ಶ್ರೀ ನಳಿನ್ ಕುಮಾರ್ ಕಟೀಲು ಅವರಿಗೂ ಪತ್ರಗಳನ್ನು ಬರೆದೆ. ರೈಗಳನ್ನು ಭೇಟಿ ಮಾಡಿ, ವಿಷಯ ವಿವರಿಸಿ ಹೇಳಿದೆ. ಅವರು ಕೂಡಲೇ ಶ್ರೀ ಐ ಎಸ್ ಎನ್ ಪ್ರಸಾದರಿಗೆ ಫೋನ್ ಮಾಡಿದರು. ಪ್ರಸಾದ್ ಯಾವುದೋ ಮೀಟಿಂಗಿನಲ್ಲಿದ್ದರಂತೆ, ಸಿಕ್ಕಲಿಲ್ಲ. ರೈಗಳು ಜಿಲ್ಲಾಧಿಕಾರಿಗೆ ಫೋನ್ ಮಾಡಿ, ವಿಷಯ ತಿಳಿಸಿ, ಎಸ್ ಇ ಝಡ್ ಅಧಿಕಾರಿಗಳನ್ನು ಕರೆಸಿ ಒಂದು ಮೀಟಿಂಗ್ ಮಾಡುವಂತೆ ಸೂಚಿಸಿದರು. ಜೊತೆಗೇ, ಜಿಲ್ಲಾಧಿಕಾರಿಯವರಿಗೆ ಒಂದು ಪತ್ರವನ್ನೂ ಬರೆಯುವಂತೆ ತಮ್ಮ ಸಹಾಯಕರಿಗೆ ಸೂಚಿಸಿದರು. ಆ ಪತ್ರದ ಯಥಾಪ್ರತಿಯನ್ನು ನನಗೂ ಕಳಿಸಿದ್ದಾರೆ. ಅದನ್ನಿಟ್ಟು ನಾನು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಬೇಕಾಗಿದೆ. ಬರೆಯುತ್ತೇನೆ.
ಇತ್ತ ನಳಿನ್ ಕುಮಾರ್ ಕಟೀಲ್ ಅವರಿಂದ ಇನ್ನೂ ಉತ್ತರ ಬಂದಿಲ್ಲ. ಬಂದೀತೆಂಬ ನಿರೀಕ್ಷೆಯಲ್ಲಿದ್ದೇನೆ.
ದಿನಕ್ಕೆ ಆರೂಕಾಲು ಕೋಟಿ ಲೀಟರ್ ನೀರು ಎಸ್ ಇ ಝಡ್ ಕಡೆಗೆ ತಿರುಗಿದರೆ, ಬೆಳೆಯುತ್ತಿರುವ ಮಂಗಳೂರಿಗೆ ಏಪ್ರಿಲ್, ಮೇ ತಿಂಗಳುಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆಗಳು ಹೆಚ್ಚು. ಆದರೆ, ಕೊನೆಯ ಪಕ್ಷ ಎಸ್ ಇ ಝಡ್ ಪೈಪ್ ಲೈನ್ ಹಾದು ಹೋಗುವ ಊರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾದರೆ, ಅದನ್ನು ಒಂದು ಪ್ರಯೋಜನ ಎಂದು ಪರಿಗಣಿಸಬಹುದು. ಈ ಊರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲು ಅಲ್ಲಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳು ಪ್ರಯತ್ನ ಮಾಡಬೇಕು, ತಮ್ಮ ಹಕ್ಕಿನ ಪ್ರಯೋಜನ ಪಡೆದುಕೊಳ್ಳಬೇಕು ಅಷ್ಟೆ.